ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟೆಯ ಸಮೀಪಕ್ಕೆ ಅವರು ಬಂದರು. ಅಲ್ಲಿ ಕರೆಕಟ್ಟೆಯ ಮೇಲೆ ಅವರು ಇರುತ್ತಿರಲು, ವೀರಶೈವ ಕುಲದ ಕೆಲವು ಹೆಂಗಸರು ನೀರಿಗಾಗಿ ಅಲ್ಲಿಗೆ ಬಂದಿದ್ದು ಮಾತನಾಡಿಕೊಳ್ಳುತ್ತಿತ್ತುದನ್ನು ಕಿವಿಗೊಟ್ಟು ಕೇಳಿದರು. ಅವರ ಮಾತುಗಳಿಂದ ಅವರ ಕುಲದಲ್ಲಿ ಹುಟ್ಟಿ, ಶ್ರೇಷ್ಠವೆನಿಸಿದ್ದ ಕನ್ನಿಕೆಯೊಬ್ಬಳು ನೀಚಕುಲದವನೊಬ್ಬನನ್ನು ಮದುವೆ ಮಾಡಿಕೊಳ್ಳುವ ಸಂದರ್ಭವೊದಗಿತ್ತೆಂದು ತಿಳಿಯ ಬಂತು. ಸೋದರರು ಕುತೂಹಲದಿಂದ ಏನೆಂದು ವಿವರವನ್ನು ಕೇಳಿದರು; ಆ ಹೆಂಗಸರನ್ನು ಸಮಾಧಾನ ಮಾಡಿ ತಾವು ಸಹಾಯ ಮಾಡುವುದಾಗಿ ಮಾತು ಕೊಟ್ಟರು. ಮಾಡಿದ ವಿಚಾರದಲ್ಲಿ ಈ ವಿವರವು ತಿಳಿಬಂದಿತು.
ಆ ಪ್ರದೇಶದ ಒಡೆಯನಿಗೆ ಚಿತ್ತಸ್ವಾಸ್ಥ್ಯ ತಪ್ಪಿತ್ತು; ಆತನಿಗೆ ಒಬ್ಬಳೇ ಮಗಳಿದ್ದಳು. ಈ ಸ್ಥಿತಿಯನ್ನು ಕಂಡು ನರೆಯಲ್ಲಿದ್ದ ಕಾರುಗಹಳ್ಳಿಯ ಪಾಳಯಗಾರನಾಗಿದ್ದ ಮಾರನಾಯಕನೆಂಬ ದೂತನು “ಆ ಕುಮಾರಿಯನ್ನು ನನಗೆ ವಿವಾಹಮಾಡಿಕೊಟ್ಟು ಹದನಾರನ್ನು ಬಿಟ್ಟು ಕೊಡಲಿ; ಇಲ್ಲವಾದರೆ ಯುದ್ಧಕ್ಕೆ ಸಿದ್ಧನಾಗಲಿ” ಎಂದು ಹೇಳಿಕಳುಹಿಸಿದ್ದನು. ಬೇರೆ ಗತಿಯಿಲ್ಲದ ಹದನಾರಿನವರು ವಿವಾಹಕ್ಕೆ ಸಮ್ಮತಿ ಕೊಟ್ಟಿದ್ದರು. ಹೀಗಿರಲು ವಿಜಯ ಕೃಷ್ಣರ ಉತ್ಸುಕತೆಯ ಮಾತು ತಿಳಿಯಿತು. ಆಗ ಅರಮನೆಯವರು ಅವಮಾನವನ್ನು ತಪ್ಪಿಸಿಕೊಳ್ಳುವ ಆಸೆಯಿಂದ ಆ ರಾಜಕುವರರನ್ನು ಕರೆಸಿ ಎಲ್ಲವನ್ನೂ ತಿಳಿಸಿದರು. ಸೋದರರಿಬ್ಬರು ಎಲ್ಲವನ್ನೂ ಅರಿತು ಕೋಟೆಯನ್ನು ರಕ್ಷಿಸಲು ಇದ್ದ ಅನುಕೂಲಗಳನ್ನೆಲ್ಲ ಪರೀಕ್ಷಿಸಿದರು ಕಡೆಗೆ ಹೊರಗಡೆ ಏನನ್ನೂ ತೋರ್ಪಡಿಸದೆ ವಿವಾಹದ ಕೆಲಸವನ್ನು ಎಂದಿನಂತೆ ನಡೆಸುವ ಹಾಗೆ ನಟಿಸುತ್ತಿರಬೇಕೆಂದು ಹೇಳಿಕೊಟ್ಟರು.
ವಿವಾಹದ ದಿನವು ಸಮೀಪವಾಯಿತು. ಮಾರನಾಯಕನ ಅಟ್ಟಹಾಸದಿಂದಲೂ ಗರ್ವದಿಂದ ಒಂದು ಅರಮನೆಯನ್ನು ಹೊಕ್ಕು, ಮದುವೆಯ ಔತಣಕ್ಕೆ ಸಿದ್ಧನಾದನು. ಮಾರನಾಯಕನೂ ಆತನ ಮುಖ್ಯಾಧಿಕಾರಿಗಳೂ ಒಂದು ತೊಟ್ಟಿಯಲ್ಲಿ ಊಟಕ್ಕೆ ಕುಳಿತರು. ಆತನ ಅನುಚರರಿಗೆ ಬೇರೊಂದು ತೊಟ್ಟಿಯಲ್ಲಿ ಅಣಿ ಮಾಡಿತ್ತು. ಅದೇ ವೇಳೆಯಲ್ಲಿ ಹದನಾರಿನ ಶೂರರನ್ನಾರಿಸಿಕೊಂಡು ಗೋಪ್ಯವಾಗಿ ಹೊಂಚುಹಾಕುತ್ತಿದ್ದ ವಿಜಯ ಕೃಷ್ಣರಿಬ್ಬರೂ ಒಳ್ಳೆ ಸಮಯ ಬಂದಕೂಡಲೆ ಅಕಸ್ಮಾತ್ತಾಗಿ ನುಗ್ಗಿ, ಮಾರನಾಯಕನ ಮೇಲೂ ಆತನ ಮುಖ್ಯಾಧಿಕಾರಿಗಳ ಮೇಲೂ ಹಾರಿಬಿದ್ದು ಇರಿದು ಕೊಂದುಬಿಟ್ಟರು. ಮಾರನಾಯಕನ ಇತರ ಅನುಚರರು ತಮ್ಮ ಧಣಿಯು ಹತನಾದುದನ್ನು ತಿಳಿದು ದಿಕ್ಕು ತೋಚದವರಾಗಿ ನಿರ್ಬಂಧಕ್ಕೆ ಸಿಕ್ಕಿದರು.
ಕೂಡಲೆ ವಿಜಯ ಕೃಷ್ಣರಿಬ್ಬರು ಹದನಾರಿನ ಸೈನ್ಯವನ್ನು ಸಿದ್ದಮಾಡಿಕೊಂಡು ಕಾರುಗಹಳ್ಳಿಯ ಕಡೆಗೆ ಹೊರಟು ಸುಲಭವಾಗಿ ಆ ಕೋಟೆಯನ್ನು ಹಿಡಿದುಕೊಂಡರು. ಏಕೆಂದರೆ ಅಲ್ಲಿದ್ದವರು ಹಟಾತ್ತಾಗಿ ಬಂದೊದಗಿದ ಈ ವಿಪತ್ತನ್ನು ಎದುರಿಸಲಾರದಿದ್ದುದಲ್ಲದೆ ಮಾರನಾಯಕನು ಮೃತನಾದನೆಂದು ತಿಳಿದು ಖಿನ್ನರಾಗಿದ್ದರು. ಕಾರುಗಹಳ್ಳಿಯನ್ನು ವಶಪಡಿಸಿಕೊಂಡ ಕೂಡಲೆ ರಾಜಕುವರರಿಬ್ಬರೂ ಹದನಾರಿಗೆ ಹಿಂತಿರುಗಿದರು. ಅಲ್ಲಿಯ ರಾಜಕುಮಾರಿಯು ಸಂತೋಷದಿಂದ ವಿಜಯನ ಕೊರಳಿಗೆ ಹೂಮಾಲೆಯನ್ನು ಹಾಕಿ ವರಿಸಿ ಮದುವೆಯಾದಳು. ಈ ವಿಜಯನೇ ಒಡೆಯರ ವಂಶದ ಮೂಲಪುರುಷನಾದ ಯದುಒಡೆಯರು.
*****
[ಮಿಲ್ಕ್ಸ್ ಸಾಹೇಬಕ ಗ್ರಂಥದಾಧಾರ; ಈ ವೃತ್ತಾಂತದಲ್ಲಿ ವಂಶರತ್ನಾಕರ, ವಂಶಾವಳಿಗಳಿಗಿಂತಲೂ ವಿಲ್ಕ್ಸ್ ರವರ ಲೇಖನದಲ್ಲಿಯೇ ಹೆಚ್ಚು ಸತ್ಯಾಂಶವಿರಬಹುದನ್ನುವುದಕ್ಕೆ ಕಾರಣವುಂಟು. ಇದರ ವಿಮರ್ಶೆಗೆ ಹೊಸ ಗೆಜೆಟಿಯರ್ ೨ನೇ ಸಂಪುಟದ ಕಡೆಯ ಭಾಗವು ಉಪಯುಕ್ತವಾದುದು.]