ಸರ್‍ಕಸ್ ಕಂಪೆನಿ ಮುಚ್ಚಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕವನಕ್ಕೆ ವಸ್ತು ಸಿಗಲಿಲ್ಲ, ವ್ಯರ್‍ಥ ಪ್ರಯತ್ನಿಸಿದ್ದೆಲ್ಲ
ಪ್ರತಿದಿನ ಪರದಾಟ, ಆರುವಾರ ಕಳೆದರೂ ಇಲ್ಲ,
ಶಾಂತನಾಗುವುದೆ ಉತ್ತಮ ಮುದುಕ ಅಲ್ಲಿಗೆ;
ವಯಸ್ಸಾಗುವ ಮುಂಚೆ ಪ್ರತಿ ಚಳಿಗಾಲ ಬೇಸಿಗೆ
ಆಟಕ್ಕಿದ್ದವು ನನ್ನ ಸರ್‍ಕಸ್ ಪ್ರಾಣಿಗಳೆಲ್ಲ
ಮೆಟ್ಟುಗಾಲನ್ನು ಕಟ್ಟಿಕೊಂಡ ಆ ಹುಡುಗರು,
ಕಣ್ಣು ಕುಕ್ಕುವ ಹಾಗೆ ಥಳಥಳಿಸುತ್ತಿದ್ದ ರಥ,
ಸಿಂಹಗಳು ಹೆಣ್ಣುಗಳು ಏನೆಲ್ಲ, ಎಲ್ಲ ಆ ದೇವರೇ ಬಲ್ಲ.

ಇನ್ನೇನಿದೆ ಹೊರಡುವುದೆ ಹಳೆವಸ್ತುಗಳ ಸ್ಮರಣೆಗೆ:
ಮೂಗುದಾರಕ್ಕೆ ಸಿಕ್ಕು ಮೂರುಮೋಹಕ ದ್ವೀಪಗಳಲ್ಲಿ
ವ್ಯರ್‍ಥ ಹರ್‍ಷ, ವ್ಯರ್‍ಥಯುದ್ಧ ವ್ಯರ್‍ಥ ಶಾಂತಿಗಳ
ರೂಪಕ ಸ್ವಪ್ನಗಳಲ್ಲಿ ನಡೆದ ಕಡಲ ಸವಾರ
ಉಷೀನ್ ಬರುತ್ತಾನೆ ಎಲ್ಲಕ್ಕೂ ಮೊದಲಲ್ಲಿ
ಕಹಿಯುಂಡ ಹೃದಯ ಆಯ್ದಂಥ ವಸ್ತುಗಳು,
ಗತಯುಗದ ಗೀತಕ್ಕೆ, ಆಸ್ಥಾನದಬ್ಬರಕ್ಕೆ ಹೇಳಿಸಿದ ವಿಷಯಗಳು.
ಅವನನ್ನಲೆಸಿದ ನಾನೇ ಎಷ್ಟು ಬೆಲೆ ಕೊಟ್ಟಿದ್ದೆ ಅವನ ಕಷ್ಟಕ್ಕೆ?
ಅವನ ಕನಸಿನ ಕನ್ನೆಯನ್ನು ನಾನೇ ಬಯಸಿ ಕಂಗಾಲಾಗಿದ್ದೆ.

ಮುಂದೆ ಆಟಕ್ಕಿಳಿದದ್ದು ಅದರ ವಿರೋಧೀ ಸತ್ಯ:
ನಾ ಕೊಟ್ಟ ಹೆಸರು ಕ್ಯಾಥಲೀನಿನ ರಾಣಿ, ಆ ಹೆಣ್ಣ ಚಿತ್ತ
ಮರುಕಕ್ಕೆ ತುತ್ತಾಗಿ, ತೆತ್ತುಕೊಂಡರೆ ತನ್ನಾತ್ಮವನ್ನೇ ಹುಚ್ಚಿಗೆ,
ಇಳಿದು ಬಂದಿತು ಸ್ವರ್‍ಗ ಅವಳನ್ನು ರಕ್ಷಿಸಲು ಪ್ರದರ್‍ಶಿಸುತ ಮೆಚ್ಚಿಗೆ.
ಆತ್ಮನಾಶದ ಕಡೆಗೆ ಸಾಗಿದ್ದಾಳೆ ಪ್ರಿಯ ಎಂದೇ ಅನಿಸಿತ್ತು.
ಮತ ಭ್ರಾಂತಿ ದ್ವೇಷಕ್ಕೆ ಸಿಕ್ಕು ಅವಳಾತ್ಮ ತುತ್ತಾಗಿ ಹೋಗಿತ್ತು.
ಮುಂದೆ ಹೊಸ ಕನಸೊಂದಕ್ಕೆ ಇದೇ ಎಡೆಮಾಡಿತು.
ನನ್ನ ಚಿಂತನೆ ಒಲವು ಅದಕ್ಕೇ ಮುಡಿಪಾಯಿತು.

ಆ ಮೂರ್‍ಖ ಕುರುಡರು ರೊಟ್ಟಿ ಕದ್ದಾಗ
ಅದಮ್ಯ ಸಾಗರದ ಜೊತೆ ಕುಹುಲೇನ್ ಹೋರಾಡಿದ.
ಹೃದಯ ರಹಸ್ಯಗಳೇ ಅಲ್ಲಿ ಎಲ್ಲೆಡೆಗೂ, ಆದರೂ
ಮರುಳುಮಾಡಿದ್ದು ಕನಸೇ ನನ್ನನ್ನು ಕಡೆಗೂ:
ಕೃತಿಯಿಂದ ಮುಕ್ತವಾದಂಥ ಪಾತ್ರಗಳೇ
ಪ್ರಸ್ತುತವನ್ನು ತುಂಬ ಸ್ಮೃತಿಯನ್ನು ಆಳಿದ್ದು.
ಬಣ್ಣದ ವೇದಿಕೆ, ನಟರೇ ನನ್ನೊಲವ ಗಳಿಸಿದ್ದು,
ಆಟ ಸಂಕೇತಿಸಿದ ವಿಷಯವಲ್ಲ.

ಸರ್‍ವ ಸ್ವತಂತ್ರ ಆ ಪರಿಪೂರ್‍ಣ ಪ್ರತಿಮೆಗಳು
ಪರಿಶುದ್ಧ ಮನದಲ್ಲಿ ಬೆಳೆದರೂ ಮೊದಲಲ್ಲಿ ಎಲ್ಲಿಂದ ಮೊಳೆತವು?
ಎಸೆದ ‘ಬಿಸಾಕು’ಗಳ ತಿಪ್ಪೆ, ರಸ್ತೆಯ ಕಸದ ಗುಪ್ಪೆ,
ಹಳೆಸೀಸ, ಹಳೆಕೆಟಲು, ಸುಲಿದ ಬಾಳೆಯ ಸಿಪ್ಪೆ,
ಹಳೆಜಂಕು, ಮೂಳೆ ಕೊಳೆಚಿಂದಿ, ಮುರುಕಲು ಗೊಂಬೆ,
ಅಂಗಡಿಗಲ್ಲಕ್ಕೆ ಕೂತು ಕೂಗುವ ಗಲ್ಲಿಯ ರಂಭೆ,
ಈಗ ಏಣಿಯೆ ಇಲ್ಲ, ಕೆಳಗೆ ಮಲಗುವುದಷ್ಟೆ ಎಲ್ಲ ಏಣಿಗಳು ಶುರುವಾಗುವಲ್ಲಿ
ಚಿಂದಿ, ಮೂಳೆಗಳು ತುಂಬಿರುವ ಹೃದಯದ ಕೊಳೆ ಕಿರಾಣಿಯಂಗಡಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾರನಾಯಕನ ವಧೆ
Next post ಜಯತು ವಿಶ್ವರೂಪಿಣಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…