ಪರಿವರ್ತನೆ

ಪರಿವರ್ತನೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಖಾದಿ ಪಂಚೆ, ಖಾದಿ ಜುಬ್ಬಾ ತಪ್ಪದೆ ತೊಟ್ಟುಕೊಂಡಿರುವವನೇ ದರ್ಜಿ ದಾಸಣ್ಣ, ದಾಸಣ್ಣನ ಮೈಕೈ ಮೇಲೆಲ್ಲ ಬಿಳಿಯ ಕಲೆಗಳಿವೆ. ನೋಡಿದವರು ತೊನ್ನೆಂದು ಭ್ರಮಿಸಬಹುದು. ಆದರೆ ಇವು ಬೆಂಕಿಯ ಆಕಸ್ಮಿಕದಿಂದ ಉಂಟಾದ ಕಲೆಗಳು. ತನಗೆ ಬೇಕೆನಿಸುವಾಗ ಯಾರನ್ನಾದರೂ ನಾಲ್ಕಾಣಿಯ ಪುಡಿಗಾಸಿಗೋಸ್ಕರ ಯಾಚಿಸುವ ಈತ ನಮ್ಮೂರ ಮೊತ್ತಮೊದಲ ದರ್ಜಿ. ಈಗ ಅವನಿಗೆ ಆ ಹೆಸರು ಮಾತ್ರ ಉಳಿದಿದೆ.

ದಾಸಣ್ಣ ಜಾತಿಯಿಂದ ಜಾಗಟೆ ಬಾರಿಸುವವನು. ವೃತ್ತಿಯಿಂದ ದರ್ಜಿಯಾದದ್ದು ಒಂದು ಕಥೆ. ಅವು ಸ್ವಾತಂತ್ರ್ಯ ಪೂರ್ವದ ದಿನಗಳು. ಸ್ವಾತಂತ್ರ್ಯ ಸಂಗ್ರಾಮದ ಬಿಸಿ ರಾಷ್ಟ್ರವಿಡೀ ವ್ಯಾಪಿಸಿದ್ದ ಕಾಲ. ಅದು ದಾಸಣ್ಣನನ್ನೂ ತಲಪದಿರಲಿಲ್ಲ. ಮಾಡುವುದಕ್ಕೇನೂ ಕೆಲಸವಿರಲಿಲ್ಲ ಅವನಿಗೆ. ಶಂಖ ಜಾಗಟೆ ತೆಗೆದುಕೊಂಡು ಊರೂರು ಅಲೆಯುವುದು ಕುಲಕಸಬು. ಅದೀಗ ತನ್ನ ಮರ್ಯಾದೆಯನ್ನು ತೀವ್ರವಾಗಿ ಕಳೆದುಕೊಳ್ಳುತ್ತಿತ್ತು. ದಾಸಣ್ಣ ಒಂದಷ್ಟು ಶಾಲೆ ಬೇರೆ ಓದಿದ್ದ. ಪತ್ರಿಕೆಗಳ ದೊಡ್ಡಕ್ಷರಗಳನ್ನು ತ್ರಾಸದಿಂದ ಓದಬಲ್ಲವನಾಗಿದ್ದ. ತನ್ನ ಡ್ರೆಸ್ಸನ್ನು ಖಾದಿಗೆ ಬದಲಿಸಿಕೊಂಡು ಚಳವಳಿ ಯಲ್ಲಿ ಧುಮುಕಿದ.

ಒಂದು ವರ್ಷ ಕಠಿಣ ಸಜೆಯಾಯಿತು ಅವನಿಗೆ, ಜೈಲಿನಲ್ಲಿ ಅವನನ್ನು ರಾಜಕೀಯ ಖೈದಿಯೆಂದು ಯಾರೂ ಒಪ್ಪಲಿಲ್ಲ. ಅಷ್ಟು ತಾರತಮ್ಯ ಜ್ಞಾನ ಅವನಿಗೂ ಇರಲಿಲ್ಲ. ಸಜೆ ಅನುಭವಿಸುತ್ತಿರಬೇಕಾದರೆ ಇನ್ನು ಮುಂದೆ ಇಂಥ ಕೆಲಸಕ್ಕೆ ಇಳಿಯಬಾರದು ಎನಿಸಿಹೋಯಿತು, ಹಿಂದೆ ಬಿಟ್ಟು ಬಂದಿದ್ದ ಹೆಂಡತಿಯ ನೆನಪೂ ಪದೇ ಪದೇ ಮರು ಕಳುಸಿತ್ತಿತ್ತು.

ಆದರೂ ಜೈಲಿನಿಂದ ಹೊರಬಿದ್ದಾಗ ತಾನು ಮಾಡಿದ ಕೆಲಸಕ್ಕೆ ಹೆಮ್ಮೆಯೆನಿಸದೆ ಇರಲಿಲ್ಲ. ಗಾಂಧಿಯನ್ನು ಕೂಡ ಜೈಲಿಗೆ ಹಾಕಿದ್ದರಲ್ಲ?

ಅಷ್ಟರಲ್ಲಿ ಸೀತೆ ಹೆಣ್ಣು ಮಗುವೊಂದನ್ನು ಪಡೆದು ಅದಕ್ಕೆ ಹೆಸರಿಡಲು ದಾಸಣ್ಣನನ್ನು ಕಾಯುತ್ತಿದ್ದಳು. ಇದು ಅವನನ್ನು ಆಗಾಗ್ಗೆ ಆತಂಕಕ್ಕೆ ಒಳಗು ಮಾಡತೊಡಗಿತು. ಮನಸ್ಸಿನೊಳಗೆ ಎಷ್ಟು ಲೆಕ್ಕ ಹಾಕಿದರೂ ಮಗು ತನ್ನದಲ್ಲ ಎನಿಸುತ್ತಿತ್ತು. ಕೊನೆಗೆ ಆ ವಿಷಯವನ್ನು ಅಷ್ಟಕ್ಕೆ ಬಿಟ್ಟ. ಅದಕ್ಕೊಂದು ಹೆಸರು ಹಾಕಿ, ಮುಂದಿನ ಬದುಕಿನ ಬಗ್ಗೆ ವಿಚಾರಿಸುವುದು ಎಂದುಕೊಂಡ.

ಈ ಮಧ್ಯೆ ಸುಂದರ ಕಾಮತರು ಬಟ್ಟೆಯ ಮಳಿಗೆಯೊಂದನ್ನು ತೆರೆದಿದ್ದರು. ಈ ತನಕ ತಂತಮ್ಮ ವಸ್ತ್ರದ ಆಗನ್ಮಗಳಿಗೆ ಜನರು ಕಾಸರಗೋಡು, ಕುಂಬಳೆಗೆ ಹೋಗಬೇಕಾಗಿತ್ತು. ಇಲ್ಲವೇ ಜಾತ್ರೆಗೆ ಬರುವ ಸಂತೆಗಳನ್ನೂ, ತಲೆಹೊರೆ ವ್ಯಾಪಾರಿಗಳನ್ನೋ ಅವಲಂಬಿಸಬೇಕಿತ್ತು. ಇತ್ತೀಚಿಗೆ ನಮ್ಮ ಮಿಡಲ್ ಸ್ಕೂಲ್ ಹೈಸ್ಕೂಲಾಗಿ ಪರಿವರ್ತಿತ ವಾದ ಮೇಲೆ ಪೇಟೆ ಬೆಳೆಯುವ ಲಕ್ಷಣಗಳಿದ್ದವು. ಇದನ್ನೆಲ್ಲ ಗಮನಿಸಿದ ಕಾಮತರು ತಮ್ಮ ಜೀನಸಿ ಅಂಗಡಿಯ ಪಕ್ಕದಲ್ಲೇ ವಸ್ತ್ರದ ಅಂಗಡಿಯನ್ನು ಹೊಂದಿಸಿಕೊಂಡು ಅದರೆ ಉಸ್ತುವಾರಿಯನ್ನು ತಾವೇ ಖುದ್ದಾಗಿ ನೋಡಿಕೊಳ್ಳಲು ಸುರುಮಾಡಿದರು.

ದಾಸಣ್ಣನಿಗೆ ಜೈಲಿನಲ್ಲಿ ಏನೇನು ಅನಾನುಕೂಲಗಳಾಗಿದ್ದರೂ ಒಂದು ವಿಷಯದಲ್ಲಿ ಅನುಕೂಲವೇ ಆಗಿತ್ತು. ಅಲ್ಲಿ ಅವನು ಬಟ್ಟೆ ಹೊಲಿಯುವ ಕೆಲಸವನ್ನು  ಕಲಿತು ಕೊಂಡಿದ್ದ! ಕಾಮತರು ದಾಸಣ್ಣನನ್ನು ಬರಮಾಡಿಕೊಂಡು ಹೊಲಿಗೆ ಯಂತ್ರವೊಂದನ್ನು ಕಂತಿನಲ್ಲಿ ಕೊಡಿಸಿ ಅಂಗಡಿಯೆದುರು ನೆಲೆಮಾಡಿಕೊಟ್ಟರು.

ಪೇಟೆ ಮೆಲ್ಲಮೆಲ್ಲನೆ ಬೆಳೆಯುತ್ತಿತ್ತು. ದಾಸಣ್ಣ ಹಗಲಿರುಳು ಕೆಲಸಮಾಡಿ ತನ್ನ ಕೈಲಾದಷ್ಟು ಮಟ್ಟಿಗೆ ಜನರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದ. ಶಾಲೆ ಹುಡುಗರಿಗೆ ಡ್ರೆಸ್ಸುಗಳು. ಮದುವಣಿಗರಿಗೆ ಉದ್ದ ಕೈ ಅಂಗಿಗಳು, ಹೆಂಗಸರಿಗೆ ರವಿಕೆಗಳು. ಇನ್ನಾರದೋ ಹರಿದ ಧೋತರಕ್ಕೆ ಹೊಲಿಗೆ ಹಾಕುವುದು – ಹೀಗೆ ಸದಾ ಕೈ ತುಂಬ ಕೆಲಸ. ಅಕ್ಕಿಮಿಲ್ಲಿನಂತೆ ರಟರಟ ಬಡಿಯುತ್ತಿದ್ದ ದಾಸಣ್ಣನ ಮೇಶಿನಿನ ಸದ್ದನ್ನು ಬಹಳ ರಾತ್ರಿಯತನಕ ಕೇಳಬಹುದಾಗಿತ್ತು.

ಅವನ ಕೆಲಸದ ಬಗ್ಗೆ ಎಲ್ಲರೂ ತೃಪ್ತರಾಗಿದ್ದರೆಂದಲ್ಲ. ಹಲವು ಟೀಕೆ ಟಿಪ್ಪಣಿಗಳಿದ್ದವು ’ದಾಸಣ್ಣ ಚೆಡ್ಡಿ ಹೊಲಿದರೆ ಒಂದು ಕಾಲು ಪ್ಯಾಂಟಿನಷ್ಟು ಉದ್ದ, ಇನ್ನೊಂದು ಕಾಚದಷ್ಟು ಗಿಡ್ಡ’ಎಂದು ತಮಾಷೆ ಮಾಡುತ್ತಿದ್ದರು. ರವಿಕೆಯ ಎದೆಗೆ ಹೊಲಿಗೆ ಹಾಕುವ ವಿದ್ಯೆ ಅವನಿಗೆ ಇನ್ನೂ ಕರಗತವಾಗಿದ್ದಿಲ್ಲ. ಆದ್ದರಿಂದ ಅವನು ತಯಾರಿಸಿದ ರವಿಕೆಗಳಲ್ಲಿ ಮೊಲೆಗಳು ಸರಿಯಾಗಿ ಕುಳಿತುಕೊಳ್ಳದೆ ಕಿರಿಕಿರಿ ಪಡುವ ಹೆಂಗಸರಿದ್ದರು. ಆಧುನಿಕತೆಯೆ ಗಾಳಿ ಬೀಸಿದವರು ತಮ್ಮ ಅಂಗಿ ಬಟ್ಟೆಗಳನ್ನು ನಗರದಲ್ಲಿ ಹೊಲಿಸಿಕೊಳ್ಳುತ್ತಿದ್ದರು. ಆದರೆ ಅಂಥವರು ವಿರಳ, ಹೇಗಿದ್ದರೂ ಹೆಚ್ಚಿನವರ ಮಟ್ಟಿಗೆ, ಹೇಳುವುದಾದರೆ ಸುಮಾರು ಒಂದೂವರೆ ದಶಕಗಳ ಕಾಲ ದಾಸಣ್ಣ ಅವರ ಫ಼್ಯಾಶನನ್ನು ರೂಪಿಸಿದ ಎನ್ನಬಹುದು.

ಹೀಗಿರುತ್ತ ಸಂಕದ ಇಬ್ರಾಹಿಮ್ ಸಾಬಿ ಅರಬ್ಬಿಗೆ ಹೋಗಿ ಧಾರಾಳ ಹಣ ಸಂಪಾದಿಸಿಕೊಂಡು ಬಂದ. ಊರಿನಲ್ಲಿ ಸಾಕಷ್ಟು ವ್ಯಾಪಾರದ ಸಾಧ್ಯತೆಗಳಿರುವುದನ್ನು ಮನಗಂಡು ರಸ್ತೆಯಾಚೆ, ಕಾಮತರ ಅಂಗಡಿಗಳ ಎದುರಿಗೇನೇ ದೊಡ್ಡ ಕಟ್ಟಡ ವೊಂದನ್ನು ಹಾಕಲು ಯೋಚಿಸಿದ. ಇದರ ಬಗ್ಗೆ ಗಾಳಿಸುದ್ದಿ ಕೇಳಿದಂದಿನಿಂದಲೇ ಇದು ತನಕ ನಿಂತ ನೀರಿನಂತಿದ್ದ ದಾಸಣ್ಣನ ಜೀವನದಲ್ಲಿ ಆತಂಕದ ಅಲೆಗಳು ಏಳಲಾರಂಭಿಸಿದುವು. ದೇವರೆ, ಇಲ್ಲಿ ಇನ್ನೊಂದು ವಸ್ತ್ರದ ಮಳಿಗೆ ಬರದಿರಲಿ! ಎಂದು ತನ್ನ ಇಷ್ಟ ದೈವವನ್ನು ಪ್ರಾರ್ಥಿಸಿಕೊಂಡ.

ನೋಡುನೋಡುತ್ತಿರುವಂತೆ ತಲೆ ಎತ್ತಿ ಬಂದ ಸಾಬಿಯ ಕಾಂಕ್ರೀಟ್ ಕಟ್ಟಡ ಇಡಿಯ ಪೇಟೆಯ ಸ್ವರೂಪವನ್ನೇ ತಿದ್ದಿ ಬಿಡುವಂತೆ ತೋರಿತು. ಜೀನಸು, ಕಟ್ಳೇರಿ, ರೆಸ್ಟೋರೆಂಟು, ದವಾಖಾನೆ, ವಸ್ತ್ರ ಮಳಿಗೆ-ಹೀಗೆ ಅದು ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ಹಿಡಿದು ನಿಂತಿತು. ದಾಸಣ್ಣನ ಇಂಗಿತಕ್ಕೆ ಎದುರಾಗಿ ಅಲ್ಲಿ ವಸ್ತ್ರದ ಮಳಿಗೆ ಬಂದುದು ಮಾತ್ರವಲ್ಲ. ಭರ್ಜರಿಯಾಗಿ ಬಂತು. ಆಳೆತ್ತರ ಕನ್ನಡಿ ಹಾಕಿದ ಶೋಕೇಸು ಗಳಲ್ಲಿ ಒಪ್ಪವಾಗಿರಿಸಿದ ಸೀರೆಗಳೇನು! ರವಿಕೆ ಕಣಗಳೇನು! ಅಂಗಿ ಚೀಟುಗಳೇನು! ಹೊಸ ವಸ್ತ್ರಗಳ ಸುವಾಸನೆ ಗಮ್ಮನೆ ಬರುತ್ತಿತ್ತು. ಅಷ್ಟು ದೂರಕ್ಕೆ ಎಲ್ಲರಿಗೂ ಕಾಣಿಸುವಂತೆ ಬಾಗಿಲಿಗೆ ಗರಿ ಗರಿಯಾಗಿ ತೂಗು ಹಾಕಿದ ಬಣ್ಣಬಣ್ಣದ ಸೀರೆ, ಪತ್ತಲ ಗಳು ಎಂಥವರ ಗಮನವನ್ನೂ ಸೆಳೆಯುವ ಹಾಗಿದ್ದವು. ದೇವರೆ, ಅಲ್ಲಿಗೆ ಯಾವ ದರ್ಜಿಯೂ ಬಾರದೆ ಹೋಗಲಿ-ಎಂದು ದಾಸಣ್ಣ ಇನೊಮ್ಮೆ ಪ್ರಾರ್ಥಿಸಿದ.

ಆದರೆ ಒಂದು ಬೆಳಿಗ್ಗೆ ಸಾಬಿಯ ಮಳಿಗೆಯಲ್ಲಿ ವಾರ್ನಿಶ್ ನಿಂದ ಥಳಥಳಿಸುವ ಹೊಚ್ಚ ಹೊಸ ಹೊಲಿಗೆ  ಮೆಶೀನಿನೊಂದಿಗೆ ದರ್ಜಿಯೊಬ್ಬ ಒಕ್ಕರಿಸಿಯೇ ಬಿಟ್ಟ. ಅದನ್ನು ಕಂಡು ದಾಸಣ್ನನ ಎದೆ ಝಲ್ಲೆಂದಿತು.

ಹೊಸ ದರ್ಜಿಯ ಹೆಸರು ರಮೇಶ ಎಂದು ಗೊತ್ತಾಯಿತು. ಎಲ್ಲರೂ ಅವನನ್ನು ಟೈಲರ್ ರಮೇಶ ಎಂದು ಕರೆಯಲಾರಂಭಿಸಿದರು. ಯುವಕನಿದ್ದ, ಪ್ಯಾಂಟು, ಶರ್ಟು ಧರಿಸಿ  ನಗರದ ತರುಣರಂತೆ ಕಾಣಿಸುತ್ತಿದ್ದ. ಒಂದು ಹಿಡಿ ತಲೆಗೊದಲು ಹಣೆಯ ಮೇಲೆ ಬೀಳುವಂತೆ ಕ್ರಾಫು ತೀಡುತ್ತಿದ್ದ. ಅವನ ಮಶೀನು ದಾಸಣ್ಣನ ಮೆಶೀನಿನಂತೆ ಕರ್ಕಶವಾಗಿ ಆರ್ಭಟಿಸದೆ, ಸರ್ರೆಂದು ಹಿತವಾದ ಸದ್ದು ಮಾಡುತ್ತಿತ್ತು.

ಈ ಟೈಲರ್ ಬಂದದ್ದೇ ದಾಸಣ್ಣ ಯಾರಲ್ಲೂ ಹೇಳದೆ ತನ್ನ ಮನಸ್ಸಿನೊಳಗೆ ಹಲವು ದಿನಗಳಿಂದ ಅನುಭವಿಸುತ್ತಿದ್ದ ಭಯ ಒಮ್ಮೆಲೆ ನಿಜವಾಗಹತ್ತಿತ್ತು. ದಾಸಣ್ಣನ ಗಿರಾಕಿಗಳೆಲ್ಲ ಹೊಸಬನ ಠೀವಿಗೆ ಮರುಳಾಗಿ ಒಬೊಬ್ಬರಾಗಿ ಅವನ ಬುಟ್ಟಿಗೆ ಬೀಳಲಾರಂಭಿಸಿದರು. ತನ್ನ ಕಣ್ಣೆದುರಿಗೇನೇ ಅವರು ರಸ್ತೆದಾಟಿ ಆಚೆ ದರ್ಜಿಯ ಕಡೆಗೆ ಹೋಗುವುದನ್ನು ಕಂಡು ದಾಸಣ್ಣ ಮೊದಮೊದಲು ತಪ್ತನಾದ. ಹೊಸ ಮಾವಿನ ಕಾಯಿಗಿಂತ ಹಳೆ ನೆಲ್ಲಿಕಾಯಿ ಮಿಗಿಲು’ ಎಂದು ನಾಲ್ಕು ಜನರಿಗೆ ಗೊತ್ತಾಗುವ ಹಾಗೆ ಹೇಳಿದ, ಜನರು ತಾವಾಗಿ ತಮ್ಮ ತಪ್ಪನ್ನರಿತು ಮತ್ತೆ ನನ್ನಲ್ಲಿಗೆ ಬಂದೇ ಬರುತ್ತಾರೆ ಎಂದು ಕಾಯತೊಡಗಿದ. ಆದರೆ ದಿನಗಳಿದಂತೆ ಜನರು ತನ್ನನ್ನು ಮೂಸಿ ಕೂಡ ನೋಡದಿರುವುದನ್ನು ಕಂಡು ನಿಜಕ್ಕೂ ಆತಂಕಕ್ಕೆ ಒಳಗಾದ.

ಆಚೆ ರಮೇಶನಾದರೆ ದಾಸಣ್ಣನ ಗಿರಾಕಿಗಳನ್ನು ಕಬಳಿಸುದುದು ಮಾತ್ರವಲ್ಲ, ನಗರದ ಟೈಲರುಗಳಿಗೆ ಮರೆಹೋಗುತ್ತಿದ್ದ ಕೆಲವು ಜನರನ್ನೂ ತನ್ನ ಕಡೆಗೆ ಆಕರ್ಷಿಸಿದ. ನಿರಿ ಬೀಳದಂತೆ ಹೊಸ ನಮೂನೆಯ ಕಾಲರು ಹೊಲಿಯಲು ಅವನಿಗೆ ಬರುತ್ತಿತ್ತು. ಹೆಂಗಸರ ರವಿಕೆಗಳನ್ನು ತುಂಬಾ ನಿಗಾ ಇಟ್ಟು ಮಾಡುತ್ತಿದ್ದ. ಸೈಜುಗಳನ್ನು ಬರೇ ಕಣ್ಣಿನಲ್ಲಿ ಅಳೆಯುವುದಕ್ಕೆ ಬರುತ್ತಿತ್ತು ಅವನಿಗೆ. ಅಲ್ಲದೆ  ಹೇಳಿದ ಸಮಯಕ್ಕೆ ಸರಿಯಾಗಿ ಡ್ರೆಸ್ಸುಗಳನ್ನು ಕೊಟ್ಟುಬಿಡುತ್ತಿದ್ದನಂತೆ. ಅವನಲ್ಲಿ ರಾಕ್ಷಸಶಕ್ತಿ ಇದ್ದಂತೆ ತೋರುತ್ತಿತ್ತು. ಬಟ್ಟೆಗಳನ್ನು ಕಚಕಚನೆ ಕತ್ತರಿಸಿ ಹಾಕಿ ಟರ್ರನೆ ಹೊಲಿದುಬಿಡುತ್ತಿದ್ದ. ಈಚೆ ಮಾಸಿ ಹಳತಾದ ಟೇಪನ್ನು ಹೆಗಲಲ್ಲಿ ಇಳಿಬಿಟ್ಟು, ಕಿವಿಗೆ ಪೆನ್ಸಿಲ್ ತುಂಡನ್ನು ಸಿಕ್ಕಿಸಿ ಗಿರಾಕಿಗಳಿಗಾಗಿ ಕಾಯುವ ದಾಸಣ್ಣ ಎಲ್ಲರಿಗೂ ಸಾಮಾನ್ಯ ದೃಶ್ಯವಾಗಿ ಹೋದ.

ಬಂದೊದಗಿದ ಈ ಕುತ್ತನ್ನು ಎದುರಿಸುವುದು ಹೇಗೆಂದು ದಾಸಣ್ಣ ಗಾಢವಾಗಿ ಯೋಚಿಸತೊಡಗಿದ. ಸೀತೆಯಾದರೆ ಕಿರಿಮಗಳು ಕುಸುಮಳ ನಂತರ ಇನ್ನೆರಡು ಹೆಣ್ಣುಗಳನ್ನು ಹಡೆದು ಕೊಟ್ಟಿದ್ದಳು. ಅವಳ ಆರೋಗ್ಯವೂ ಈಚಿಗೆ ಕೆಟ್ಟುಹೋಗಿತ್ತು. ಮದುವೆಯ ವಯಸ್ಸಿಗೆ ಬಂದ ಕುಸುಮ ಮಾಡಲು ಕೆಲಸವಿಲ್ಲದೆ ಏನೇನೋ ಕೆಟ್ಟ ವಿಚಾರಗಳನ್ನು ತಲೆಯೊಳಗೆ ತುಂಬಿ ಕುಳಿತಿದ್ದಳು. ದಿನೇ ದಿನೇ ಇವರೆಲ್ಲರ ಅಗತ್ಯಗಳು ಹೆಚ್ಚಾಗುತ್ತ ಹೋಗುತ್ತಿದ್ದವು. ಶಾಲೆಯ ಖರ್ಚನ್ನು ವಹಿಸಲಾರದೆ ಕುಸುಮಳ ತಂಗಿಯರ ಶಾಲೆ ನಿಲ್ಲಿಸಿದ.

ದಾಸಣ್ಣ ಮೊದಲು ಟೈಲರ್ ರಮೇಶನ ಕುರಿತು ಕೆಲವು ಕತೆಗಳನ್ನು ಕಟ್ಟಿ ಗಾಳಿಯಲ್ಲಿ ಹರಡಿಸಿ ನೋಡಿದ. ಇದರಿಂದ ಕೇಳುವವರ ಮನರಂಜನೆಯಾಯಿತೇ ವಿನಾ ಅವರ ನಿಷ್ಠೆಯೇನೂ ಬದಲಾಗಿಲಿಲ್ಲ.

ಹೊಲಿಗೆಯ ಛಾರ್ಜನ್ನು ಬಹಳವಾಗಿ ಇಳಿಸಿ ನೋಡಿದ. ಮೂರು ರೂಪಾಯಿಗೆ ಹೊಲಿದು ಕೊಡುತ್ತಿದ್ದ ಶರ್ಟನ್ನು ಎರಡು ರೂಪಾಯಿಗೆ, ಒಂದೂವರೆಗೆ, ಒಂದೇ ರೂಪಾಯಿಗೆ ಮಾಡಿಕೊಡುತ್ತೇನೆ ಎಂದು ಜಾಹೀರು ಮಾಡಿದ. ಆದರೂ ಜನರು ನಾಲ್ಕು ರೂಪಾಯಿ ಛಾರ್ಜು ಮಾಡುತ್ತಿದ್ದ ರಮೇಶನ ಕಡೆಯೇ ಹೋದಾಗ ದಾಸಣ್ಣನಿಗೆ ದಿಕ್ಕು ತೋಚಲಿಲ್ಲ.

ಮಳೆಗಾಲದ ದಿನಗಳು ಬಂದುವು. ಹೊಲಿಗೆ ಕೆಲಸದ ಮಟ್ಟಿಗೆ ಮಳೆಗಾಲ ಯಾವಾಗಲೂ ಶೂನ್ಯಕಾಲ. ಮೊದಲಾದರೆ ಬೇಸಿಗೆಯಲ್ಲಿ ಗಳಿಸಿದ ಸಂಪಾದನೆಯಿಂದ ಮಳೆಯ ದಿನಗಳಲ್ಲಿ ಕೊತು ತಿನ್ನ ಬಹುದಾಗಿತ್ತು. ಈ ಬಾರಿ ದಾಸಣ್ಣನ ಬೇಸಿಗೆ ಸಂಪಾದನೆಗೂ ಖೋತಾ. ಕೊನೆಗೆ ಪರಿಸ್ಥಿತಿಯ ಒತ್ತಡ ತಾಳಲಾರದೆ ಒಂದು ಬೋರ್ಡು ಬರೆದು ಹಾಕಿದ- “ಇಲ್ಲಿ ಕೊಡೆ ರಿಪೇರಿ ಮಾಡಲಾಗುತ್ತೆ .”- ಎಂದು, ಒಂದಷ್ಟು ಕಾಲು, ಕುದುರೆ ಕಂಬಿಗಳನ್ನು ತಂದಿರಿಸಿಕೊಂಡ. ಆದರೆ ಕೇವಲ ಕೊಡೆ ರಿಪೇರಿಯಿಂದ ಐದು ಮಂದಿಯ ಸಂಸಾರ ತೂಗುತ್ತದೆಂದು ಯಾರಾದರೂ ನಂಬಿದರೆ ಅದು ತಮಾಷೆಯ ಸಂಗತಿಯೇ ಸರಿ!

ಇತ್ತೀಚೆಗೆ ಕುಸುಮ ಬಹಳ ಸಡಗರದಲ್ಲಿರುತ್ತಿದ್ದಳು, ಪೇಟಿಯಲ್ಲಿ ಆಕೆಯ ಓಡಾ‌ಅಟ ಜಾಸ್ತಿಯಾಗ ತೊಡಗಿತು. ಒಂದು ದಿನ ಆಕೆ ಹೊಚ್ಚಹೊಸ ರವಿಕೆಯೊಂದನ್ನು ತೊಟ್ಟುಕೊಂಡು ಮೆರೆದಾಡುವುದು ದಾಸಣ್ಣನ ಕಣ್ಣಿಗೆ ಬಿತ್ತು. ಇದಕ್ಕೆ ಇವಳಿಗೆ ದುಡ್ಡೆಲ್ಲಿಂದ ಬಂತು ಎಂದು ಆಶ್ಚರ್ಯವಾಯಿತು. ಆದರೆ ಅದಕ್ಕಿಂತಲೂ ಹೆಚ್ಚು ಅವನನ್ನು ಕಾಡಿದ ಪ್ರಶ್ನೆ – ಇದನ್ನು ಯಾರು ಹೊಲಿದು ಕೊಟ್ಟರು ಎಂಬುದು, ನೇರವಾಗಿ ಕೇಳಿದಾಗ ಅವಳು ಮೊದಲು ತುಟಿ ಎರಡು ಮಾಡಲಿಲ್ಲ. ಕೆನ್ನೆಗೆ ಪಠಾರನೆ ಎರಡು ಬಿಗಿದಾಗ, “ರಮೇಶಣ್ಣ ಹಾಕ್ಕೊ ಅಂತ  ಹೊಲಿದು ಕೊಟ್ಟ” ಎಂದು ಅಳುತ್ತ ಬಾಯಿಬಿಟ್ಟಳು. ಓಹೋ! ಆತ ಇವಳಿಗೆ ’ರಮೇಶಣ್ಣ’ ಆಗಿಬಿಟ್ಟನೋ! ಎಂದು ದಾಸಣ್ಣ ಕನಲಿದ. ಎರಡು ಬಯ್ದು ಸುಮ್ಮನಾದ. ರಮೇಶ ಮತ್ತು ಕುಸುಮ ಬಾವಿ ಕಟ್ಟೆಯಲ್ಲಿ ಅರಳಿಮರದ ಮರೆಗೆ ಮಾತಾಡಿಕೊಂಡಿರುವುದನ್ನು ಆತ ಒಂದೆರಡು ಬಾರಿ ಪತ್ತೆಹಚ್ಚಿದ್ದರೂ ಅದನ್ನಷ್ಟು ತಲೆಗೆ ಹಾಕಿಕೊಂಡಿರಲಿಲ್ಲ.

ಈಗ ತಟ್ಟನೆ ಅವನ ತಲೆಯೊಳಗೆ ವಿಚಾರರಶ್ಮಿಯೊಂದು ಮಿಂಚಿತು. ರಮೇಶನನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡರೆ ಹೇಗೆ? ಕಾಣುವುದಕ್ಕೆ ಅವನು ಆಕರ್ಷಕವಾಗಿದ್ದ. ಯಾವ ಕಲಿತ ಹುಡುಗನಿಗೂ ಕಡಮೆಯಿಲ್ಲದ ಠಾಕುಠೀಕು ವರ್ತನೆ, ಕೈತುಂಬಾ ಸಂಪಾದನೆ. ಕುಸುಮಳಲ್ಲಿ ಅವನಿಗೆ ಮನಸ್ಸಿದ್ದಂತಿದೆ ಇಲ್ಲದಿದ್ದರೆ ಅವಳಿಗೆ ರವಿಕೆ ಹೊಲಿದು ಕೊಡುತ್ತಿರಲಿಲ್ಲ. ದಾಸಣ್ಣ ಈಗ ಉದಾರವಾಗಿ ರಸ್ತೆಯಾಚೆ ನೋಡ ತೊಡಗಿದ.

ಟೈಲರ್ ರಮೇಶ ಬಂದು ಹಲವಾರು ತಿಂಗಳುಗಳೇ ಸರಿದಿದ್ದರೂ ದಾಸಣ್ಣ ಅವನನ್ನು ಮಾತಾಡಿಸುವ ಗೊಡವೆಗೆ ಹೋಗಿರಲಿಲ್ಲ. ಆ ಬಗ್ಗೆ ಪಶ್ಚಾತ್ತಾಪವಾಯಿತು, ಕೆಂಪು ನೂಲಿನ ಉಂಡೆಬೇಕಿತ್ತು ಎಂಬ ಸುಳ್ಳು ನೆಪಮಾಡಿ ರಮೇಶನ ಬಳಿಹೋದ. ಅದು ಇದು ಮಾತಾಡಿಸಿ, ಅಗತ್ಯವಿರದೇ ಇದ್ದರೂ ಅವನು ಕೊಟ್ಟ ನೂಲಿನ ಉಂಡೆ ಯನ್ನು ತೆಗೆದುಕೊಂಡು ಬಂದ. ಹಲವು ಕಾಲದಿಂದ ತಾನು ರಸ್ತೆ ದಾಟಿದ್ದು ಇದೇ ಮೊದಲು ಎಂದು ನೆನಪಾಯಿತು. ರಮೇಶನನ್ನು ಒಮ್ಮೆ ಮನೆಗೆ ಕರೆಯಬೇಕು ಎಂದುಕೊಂಡ.

ಇದಾದ ಒಂದು ದಿನ ಪೋಸ್ಟ್ ಮ್ಯಾನ್ ಶೀನ ಅರ್ಜೆಂಟಾಗಿ ಒಂದು ಅಂಗಿ ಯಾಗಬೇಕೆಂದುಕೊಂಡು ದಾಸಣ್ಣನಲ್ಲಿಗೆ ಬಂದ. ಕೆಲಸ ಸಿಕ್ಕಿದುದಕ್ಕಿಂತಲೂ ಇನ್ನೊಂದು ಕಾರಣಕ್ಕಾಗಿ ದಾಸಣ್ಣನಿಗೆ ಸಂತಸವಾಯಿತು. ಶೀನನೆಂದರೆ ಬರೇ ಅಂಚೆಯನ್ನು ಹುಂಚುವವನಾಗಿರಲಿಲ್ಲ. ಅವನೊಬ್ಬ ಸುದ್ದಿಯ ಭಂಡಾರ. ಅವನನ್ನು ಹೋಗಗೊಡದ ರಮೇಶನ ಸಂಗತಿಗಳನ್ನು ಒಂದೊಂದಾಗಿ ಕೇಳತೊಡಗಿದ. ರಮೇಶ ಜಾತಿಕೆಟ್ಟ ಹುಡುಗ ಎಂದ ಶೀನ. ಕೊಂಕಣಿ ತಂದೆಗೆ ಮುಕಾರಿ ಹೆಣ್ಣಿನಲ್ಲಿ ಹುಟ್ಟಿದವನು, ಒಳ್ಳೆಯದೇ ಆಯಿತು ಎಂದುಕೊಂಡ ದಾಸಣ್ಣ.

“ಮನೆ ಮಠ?”
“ಒಂದೂ ಇಲ್ಲ.”
“ಮದುವೆ ? ಅವನಿಗೆ ಮದುವೆಯ ವಿಚಾರವೇನಾದರೂ ಇದೆಯೆ?” ದಾಸಣ್ಣ ಆತಂಕದಿಂದ ಕೇಳಿದ.

ಅದಕ್ಕೆ ಶೀನ, “ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಅವನಿಗೆ. ಅವನು ದಿನವೂ ರಾತ್ರಿ ಬಸ್ಸಿನಲ್ಲಿ ಹೋಗುತ್ತಿರುವುದಾದರೂ ಎಲ್ಲಿಗೆ ಎನ್ನುತ್ತೀರಿ?” ಎಂದು ಗೊಳ್ಳನೆ ನಕ್ಕ.

ಸಾಬಿಯ ಮಳಿಗೆ ಬಂದ ಮೇಲೆ ತಮ್ಮ ಮಳಿಗೆಯಲ್ಲಿ ವ್ಯಾಪಾರ ತೀವ್ರವಾಗಿ ಕುಸಿದುದನ್ನು ಗಮನಿಸಿದ ಕಾಮತರು ಇದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದರು. ಪಳಗಿದ ಬಡಗಿಯರನ್ನು ಕರೆಸಿ ಹೊಸ ಶೋಕಸುಗಳನ್ನು ಇಡಿಸಿದ್ದಲ್ಲದೆ ಎರಡೆರಡು ಪೆಟ್ರೋಮ್ಯಾಕ್ಸ್ ಗಳನ್ನು ಹಾಕಿ ಅಂಗಡಿ ಜಗಜಗಿಸುವಂತೆ ಮಾಡಿದರು. ಬೊಂಬಾಯಿಗೆ ತಾವೇ ಹೋಗಿ ಹೊಸ ಸೀರೆ, ರವಿಕೆ ಕಣ, ಅಂಗಿ ಚೀಟುಗಳನ್ನು ತರಿಸಿದರು. ಬಟ್ಟೆಯ ವಿಕ್ರಯ ಅಂಗಡಿಯ ಮುಂದೆ ಕುಳಿತಿರುವ ದರ್ಜಿಯ ಕೈಗುಣವನ್ನು ಕೂಡ ಹೊಂದಿಕೊಂಡಿದೆಯೆಂದು ಅರಿತ ಚಾಣಾಕ್ಷರಾದ ಕಾಮತರು ಹೊಸ ಟೈಲರನೊಬ್ಬನನ್ನೂ ಕರೆಸಿದರು.

ಎಂದಿನಂತೆ ಒಂದು ದಿನ ಅಂಗಡಿಗೆ ಹೋದ ದಾಸಣ್ಣ ತನ್ನ ಮೆಶೀನನ್ನು ಯಾರೋ ಒಂದು ಮೂಲೆಗೆ ಒತ್ತರಿಸಿಟ್ಟುದನ್ನು ಕಂಡು ಕಿಡಿಕಿಡಿಯಾದ. ಕಾಮತರು ಹೊಸದರ್ಜಿಯಾದ ಜನಾರ್ದೆನನಿಗೆ ಸ್ಥಳ ಒದಗಿಸುವುದರಲ್ಲಿ ನಿರತರಾಗಿದ್ದವರು ಸ್ವಲ್ಪ ಹೊತ್ತು ದಾಸಣ್ಣನ ರೇಗಾಟಕ್ಕೆ ಕಿವಿಗೊಡಲಿಲ್ಲ.

“ನನ್ನ ಮೆಶೀನು ಮುಟ್ಟಿದ್ದೇಕೆ?” ದಾಸಣ್ಣ ಅಬ್ಬರಿಸಿದ.

“ನಿನ್ನ ಮೆಶೀನನ್ನು ಯಾರೂ ಏನೂ ಮಾಡಿಲ್ಲ. ನೀ ಇಲ್ಲಿ ತಪಸ್ಸು ಮಾಡ್ತ ಕೂತರೆ ಗಿರಾಕಿಗಳು ಸುಳಿಯೋದಿಲ್ಲ ಈ ಕಡೆ. ಆದ್ದರಿಂದ ಜನಾರ್ದನನನ್ನು ಕರೆಸಬೇಕಾಯಿತು. ಇನ್ನು ಮುಂದೆ ಅವ ಇಲ್ಲಿ ಕುಳಿತುಕೊಳ್ಳುತ್ತಾನೆ. ಬೇಕಿದ್ದರೆ ಆ ಮೂಲೆಯಲ್ಲಿ ನೀನೂ ಇರು. ಇಲ್ಲದಿದ್ದರೆ ಹೊರಟುಹೋಗು” ಎಂದು ಕಾಮತರು ಅಂತಿಮವಾಗಿ ನುಡಿದರು.

ವೃತ್ತಿಯಲ್ಲಿ ಹಿರಿಯನೂ ಹಳಬನೂ ಆದ ದಾಸಣ್ನನನ್ನು ಎದುರು ಹಾಕಿಕೊಳ್ಳಲು ಜನಾರ್ದನನಿಗೆ ಇಷ್ಟವಿರಲಿಲ್ಲ. ಅವನೂ ಮಕ್ಕಳೊಂದಿಗನಾಗಿದ್ದು ಕಷ್ತದಲ್ಲೇ ಮೇಲೆ ಬಂದವನು, ದಾಸಣ್ಣನ ಸ್ಥಿತಿಯನ್ನು ನೆನೆದು ಅವನಿಗೆ ಒಮ್ಮೆಲೆ ಮರುಕವೂ ಭಯವೂ ಉಂಟಾದ್ದರಲ್ಲಿ ಆಶ್ಚರ್ಯವಿಲ್ಲ. ಅದೇ ಸ್ಥಿತಿ ನಾಳೆ ಇನ್ನೊಬ್ಬನಿಗೂ ಬರಬಹುದು. ಜನಾರ್ದನ ದಾಸಣ್ಣನೊಂದಿಗೆ ಸ್ನೇಹದಿಂದ ಇರಲು ಯತ್ನಿಸಿದ್ದಲ್ಲದೆ ಸಾಧ್ಯವಿದ್ದರೆ ತನಗೆ ಮಿಕ್ಕ ಕೆಲಸವನ್ನು ಅವನಿಗೆ ಕೊಡಿಸಬೇಕೆಂದುಕೊಂಡ. ಆದರೆ ದಾಸಣ್ಣ ಮಾತ್ರ ಯಾವಾಗಲೂ ಗುಮ್ಮನೆ ಬಿಗುವಾಗಿ ಕುಳಿತಿರುತ್ತಿದ್ದ.

ವ್ಯಾಪಾರದ ಮಟ್ಟಿಗಾದರೆ ಈಗ ಸಾಬಿ ಮತ್ತು ಕಾಮತರ ನಡುವೆ ಒಂದು ರೀತಿಯ ಸಮತೋಲ ಏರ್ಪಟ್ಟಿತ್ತು. ಹೊಲಿಗೆಯಲ್ಲಿ ಮಾತ್ರ ರಮೇಶನೇ ಮುಂದಿದ್ದ. ಆದರೆ ಕೆಲವೇ ಸಮಯದಲ್ಲಿ ಜನಾರ್ದನ ಕೂಡ ಸಾಕಷ್ಟು ಗಿರಾಕಿಗಳನ್ನು ತನ್ನೆಡೆಗೆ ಸೆಳೆಯಲು ಸಮರ್ಥನಾದ.

ದಾಸಣ್ಣನಿಗೆ ಮಾತ್ರ ಏನೂ ಕೆಲಸವಿರಲಿಲ್ಲ. ಜನಾರ್ದನ ಇನ್ನೂ ಬಂದಿಲ್ಲವೆ? ಇಷ್ಟು ಬೇಗ ಹೊರಟುಹೋದನೆ? ಆರು ಗಂಟಿಗೆ ಕೊಡುತ್ತೇನೆ ಎಂದಿದ್ದನಲ್ಲ? ನನಗೆ ಉದ್ದ ಕೈ ಅಂಗಿಗೆ ಎಷ್ಟು ಬಟ್ಟೆ ಬೇಕು? ಇವೇ ಮುಂತಾದ ಪ್ರಶ್ನೆಗಳಿಗೆ ಸಬೂಬು ಹೇಳುವುದೊಂದೇ ಅವನ ಕೆಲಸವಾಯಿತು. ಬಟ್ಟೆಯ ಅಳತೆ ಅವನಲ್ಲಿ ಕೇಳಿದವರು ಹೊಲಿಯುವುದಕ್ಕೆ ಜನಾರ್ದನನಿಗೋ ರಮೇಶನಿಗೋ ಕೊಡುವುದನ್ನು ನೋಡಿದರೆ ಮನುಷ್ಯ ಜನಾಂಗದ ಬಗ್ಗೆ ತಿರಸ್ಕಾರ ಹುಟ್ಟುತ್ತಿತ್ತು.

ಯಾಕೆ ಹೀಗಾಯಿತು? ಎಂದು ದಾಸಣ್ಣ ತನ್ನನ್ನೇ ಹಲವು ಬಾರಿ ಕೇಳಿಕೊಂಡು ಯಾರು ಛಂದವಾಗಿ ಮಾತಾಡ್ತಾರೆ. ಥಳಕಾಗಿ ಕಾಣಿಸ್ತಾರೆ. ಯಾರು ಛಂದವಾಗಿ ಹಣ ಸುಲಿಯುತ್ತಾರೆ ಎಂಬುದನ್ನು ಈ ಕಸುಬು ಹೊಂದಿಕೊಂಡಿರಬೇಕಾದರೆ ಇದಕ್ಕೂ ಸೂಳೆಗಾರಿಕೆಗೂ ಏನು ವ್ಯತ್ಯಾಸ?- ಎಂದು ಪ್ರಶ್ನಿಸಿದ.

ಧೋ ಎಂದು ಮಳೆ ಸುರಿಯುತ್ತಿತ್ತು. ಅಕಾಲ ವರ್ಷ ಅಂದು ಮಳೆಗಾಲ ಮುಗಿದು ಬೇಸಗೆ ಬಂದಿತ್ತು. ಆದರೂ ಮಧ್ಯಾಹ್ನದ ಮೇಲೆ ಮೋಡಗಳು ಫ಼ಕ್ಕನೆ ಕಾಣಿಸಿಕೊಂಡು ಸುರಿಯತೊಡಗಿದ ಮಳೆ ಸಂಜೆಯಾದರೂ ನಿಂತಿರಲಿಲ್ಲ.

ಜನಾರ್ದನನಿಗೆ ಶಾಲೆ ಹುಡುಗರ ಕೆಲಸ ಕೈ ತುಂಬ ಇತ್ತು. ಸರಸರನೆ ಹೊಲಿಗೆ ಹಾಕುತ್ತ ದಾಸಣ್ಣನ ಕಡೆಗೆ ನೋಡಿದ. ದಾಸಣ್ಣ ತದೇಕಚಿತ್ತದಿಂದ ಮಳೆಯನ್ನು ನೋಡುತ್ತ ಕುಳಿತಿದ್ದ. ಆತ ಹೀಗೆ ಕುಳಿತಿದ್ದರೆ ಅವನಿಗೆ ಮಾತ್ರವಿಲ್ಲ. ತನಗೂ ಹುಚ್ಚು ಹಿಡಿದುಬಿಡುತ್ತದೆ ಎನಿಸಿತು ಜನಾರ್ದನನಿಗೆ. ದಾಸಣ್ಣ ಒಂದು ದಿನವೂ ತಪ್ಪದೆ ಕೆಲಸಕ್ಕೆ ಬರುತ್ತಿದ್ದ. ಬಂದು ಮೆಶೀನಿಗೆ ಎಣ್ಣೆಹಾಕಿ ಬಹಳ ಹೊತ್ತು ಅದನ್ನು ಚಿಂದಿ ಬಟ್ಟಿ ಯಿಂದ ಒರಸುತ್ತ ಕುಳಿತುಕೊಳ್ಳುತ್ತಿದ್ದ. ಸುಮಾರು ಹನ್ನೊಂದು ಗಂಟಿಗೆ ಹೋಗಿ ಒಂದು ಕಪ್ಪು ಚಹಾ ಕುಡಿದು ಬರುತ್ತಿದ್ದ. ಒಂದು ಗಂಟೆಗೆ ಮನೆಗೆ, ನಂತರ ಬಂದರೆ ಯಾವಾಗ ಹೊರಟುಹೋಗುತ್ತಿದ್ದನೂ ಜನಾರ್ದನನಿಗೇ ಗೊತ್ತಿರಲಿಲ್ಲ.

“ದಾಸಣ್ಣ!” ಜನಾರ್ದನ ಮೆಲ್ಲಗೆ ಕರೆದ.

ದಾಸಣ್ಣನಿಗೆ ಕೇಳಿಸಲಿಲ್ಲ. ಜನಾರ್ದನ ಇನ್ನೊಮ್ಮೆ ಕರೆದ.

ಈಗ ದಾಸಣ್ಣ ತಿರುಗಿ ನೋಡಿದ.

“ನೋಡಿ, ಒಂದಷ್ಟು ಚಡ್ಡಿಗಳಿವೆ. ಸ್ವಲ್ಪ ಗುಂಡಿ ಇಟ್ಟುಕೊಡುತ್ತೀರ? ಸುಮ್ಮನೆ ಅಲ್ಲ.  ದುಡ್ಡು ಕೊಡುತ್ತೇನೆ” ಹೇಗೆ ಹೇಳಬೇಕೆಂದು ತಿಳಿಯದೆ ತಡವರಿಸಿ ಕೇಳಿದ್ದ ಜನಾರ್ದನ, ಹೇಳಿದ ಮೇಲೆ ಕೇಳಬಾರದೇನೋ ಎಂದೆನಿಸಿತು. ದಾಸಣ್ಣ ಕೇಳಿಸದವನಂತೆ ಮತ್ತೆ ಮಳೆಯನ್ನು ಅಭ್ಯಸಿಸುವುದರಲ್ಲಿ ತೊಡಗಿದ್ದ.

ಮಳೆ ಬಂದುದರಿಂದ ಪೇಟೆ ಆ ಸಂಜೆ ಬೇಗನೆ ಬಂದಾಯಿತು. ಅಂಗಡಿ ಬಾಗಿಲು ಹಾಕಿ ಜನರು ಅವರವರ ಮನೆಗೆ ತೆರಳಿದರು.

ದಾಸಣ್ಣನೂ ಪದ್ಧತಿಯಂತೆ ಎಂಟು ಗಂಟೆ ಸುಮಾರಿಗೆ ಮನೆಗೆ ಬಂದು ಸ್ವಲ್ಪ ನೀರು ಮೈ ಮೇಲೆ ಹಾಕಿಕೊಂಡು ಊಟಕ್ಕೆ ಕುಳಿತ. ಊಟ ತಯಾರಿಸಿದ್ದಳು ಸೀತೆ. ಆಕೆಯ ಗೊರಲು ಸದ್ದಿನಲ್ಲಿ ಊಟ ಎಳ್ಳಷ್ಟೂ ಸೇರದೆ ತಾಟನ್ನು ಅರ್ಧದಲ್ಲೇ ಬಿಟ್ಟೆದ್ದು ಲ್ಯಾಂಪು ತೆಗೆದುಕೊಂಡು ಅಂಗಡಿಯ ಕಡೆ ಬಂದ. ಹಾಗೆ ಬರುವುದು ಬಹುಳ ಹಿಂದಿನಿಂದಿಲೂ ನಡೆದುಕೊಂಡು ಬಂದ ಪದ್ಧತಿ. ಅವು ಕೈ ತುಂಬ ಕೆಲಸವಿರುತ್ತಿದ್ದ ದಿನಗಳಾಗಿದ್ದುವು. ಕಾಮತರು ಬಾಗಿಲು ಹಾಕಿ ಹೋದ ಮೇಲೆಯೂ ಬಹಳ ಹೊತ್ತಿನ ತನಕ ದಾಸಣ್ಣ ಕೆಲಸ ಮಾಡುವುದು ಪದ್ಧತಿ.

ಮಳೆನಿಂತು ಆಕಾಶ ಶುಭ್ರವಾಗಿ ನಕ್ಷತ್ರಗಳು ಕಾಣಿಸಿಕೊಳ್ಳಲು ತೊಡಗಿದ್ದುವು. ದಾಸಣ್ಣ ಲ್ಯಾಂಪನ್ನು ಒಂದು ಕಡೆ ಇರಿಸಿ, ಮೆಶೀನಿನೆದುರು ಕುಳಿತುಕೊಂಡ. ಚಿಂದಿ ಯಿಂದ ಅದರ ಅಂಗಾಂಗಗಳನ್ನು ಜೋಪಾನವಾಗಿ ಉಜ್ಜಿದ. ಹೊರಗೆ ದಟ್ಟವಾದ ಕತ್ತಲು ರಸ್ತೆಯೆಲ್ಲ ಬರಿದಾಗಿತ್ತು. ಮಾಡುವುದಕ್ಕೆ ಕೆಲಸವಿಲ್ಲ. ಚಿಂತಿಸುವುದಕ್ಕೆ ವಿಚಾರಗಳಿಲ್ಲ. ಆದರೂ ಮನಸ್ಸು ನೆನಪುಗಳು ಬಂದುವು. ಗಾಂಧೀಜಿಯ ಭಾಷಣವನ್ನು ಕೇಳಲು ತಾನು ಮಂಗಳೂರಿಗೆ ಹೋದದ್ದು. ಕಾಲ್ನಡೆ ಜಾಥಾದಲ್ಲಿ ಭಾಗವಹಿಸಿದ್ದು. ಖಾದಿ ತೊಡುತ್ತೇನೆಂದು ಪ್ರತಿಜ್ಞೆ ಮಾಡಿದ್ದು, ಆಗತಾನೆ ಮದುವೆಯಾಗಿದ್ದ ಹೊಸ ಹೆಂಡತಿಯ ಮಾತನ್ನು ಕೂಡ ಕೇಳದೆ ಕೋರ್ಟು ಕಛೇರಿಗಳನ್ನು ಪಿಕೇಟು ಮಾಡಿದ್ದು.
ಘೋಷಣೆಗಳನ್ನು ಅರಚಿದ್ದು.
ಭಾರತ್ ಮಾತಾ ಕೀ ಜೈ!
ಮಹಾತ್ಮಾ ಗಾಂಧೀ ಕೀ ಜೈ !
ಅಳಿಯುವುದಾದರೇ…..
ಭಾರತದಲ್ಲಿ !
ಉಳಿಯುವುದಾದರೇ…..
ಭಾರತದಲ್ಲಿ!
ಬ್ರಿಟಿಷರೇ ತೊಲಗಿರಿ!
ಭಾರತ್ ಮಾತಾ ಕೀ ಜೈ !!
ಲಾಠೀಚಾರ್ಜು, ಗೋಲೀಬಾರು, ಜೈಲು ದರ್ಜಿಯಾಗಿ ಬಂದುದು. ನಂತರ ….ನಂತರ ಏನಾಯಿತು? ನೆನಪುಗಳು ಹತ್ತಿರ ಹತ್ತಿರ ಬರುತ್ತಿದ್ದಂತೆ ದಾಸಣ್ಣನ ಮೈ ಕುದಿಯತೊಡಗಿತು. ನಿನ್ನೆ ಮೊನ್ನೆ ಹುಟ್ಟಿದ ಅಣಬೆಯಂಥ ಜನಾರ್ದನ ತನಗೆ ಗುಬ್ಬಿ ಹೊಲಿಯಲು ಹೇಳಿದ್ದ! ಸಹನೆಗೂ ಒಂದು ಮಿತಿಯದೆ.

ಜನಾರ್ದನ ಕುಳಿತುಕೊಳ್ಳುವಲ್ಲಿ ಕತ್ತರಿಸಿ ಹಾಕಿದ ಉಪಯೋಗವಿಲ್ಲದ ಬಟ್ಟಿ ಚೂರುಗಳು ರಾಶಿ ಬಿದ್ದಿದ್ದವು. ದಾಸಣ್ಣ ಒಂದು ಹಿಡಿ ಚಿಂದಿಚೂರು ಎತ್ತಿಕೊಂಡು ಅದನ್ನು ಲ್ಯಾಂಪಿನ ಎಣ್ಣೆಯಲ್ಲಿ ಅದ್ದಿ ಒದ್ದೆಮಾಡಿದ. ರಸ್ತೆ ದಾಟಿ ನೇರವಾಗಿ ಸಾಬಿಯ ಮಳಿಗೆಗೆ ಹೋದ. ಮಳಿಗೆಯ ಹಲಗೆ ಬಾಗಿಲಿನಲ್ಲಿ ಒಂದಿಂಚು ಸ್ಥಳ ಇತ್ತು. ದಾಸಣ್ಣ ಎಣ್ಣೆಯಲ್ಲಿ ಅದ್ದಿದ್ದ ಚಿಂದಿ ಬಟ್ಟೆಯನ್ನು ಅದರೊಳಕ್ಕೆ ಇಳಿಸಿ ಕಡ್ಡಿಗೀರಿ ಬೆಂಕಿ ಹಚ್ಚಿದ.

ಕಾಮತರ ಮಳಿಗೆ ಬಾಗಿಲಿಗೆ ಸಂದಿ ಇರಲಿಲ್ಲ. ಬುದ್ಧಿವಂತ! ದಾಸಣ್ಣ ತನ್ನ ಬಲವೆಲ್ಲ ಉಪಯೋಗಿಸಿ ಇದ್ದುದರಲ್ಲಿ ಸಪೂರವಾದ ಹಲಗೆಯ ಮೇಲೆ ಎರಗಿದ. ಹಲಗೆ ಧಡ್ಡೆಂದು ಮುರಿದುಬಿತ್ತು. ಇಡಿಯ ಲ್ಯಾಂಪನ್ನೇ ಒಳಕ್ಕೆಸೆದು ಅದರ ಮೇಲೆ ಬಟ್ಟಿ ಚಿಂದಿಯನ್ನು ಒಡ್ಡಿದ. ಒಡನೆಯೇ ಭುಗ್ಗೆಂದು ಉರಿಹತ್ತಿಕೊಂಡಿತು.

ಈ ಮಧ್ಯೆ ತನ್ನ ಜುಬ್ಬಾದ ಕೈಗಳಿಗೆ ಬೆಂಕಿ ಹತ್ತಿದ್ದನ್ನು ಅವನು ಗಮನಿಸಿರಲಿಲ್ಲ. ಗಮನಿಸಿದಾಗ ತಡಾವಾಗಿ ಹೋಗಿತ್ತು. ದಾಸಣ್ಣ ಬೆಂಕಿಯ ಉರಿ ತಾಳಲಾರದೆ ರಸ್ತೆಬದಿಯಲ್ಲಿ ಚರಂಡಿಯಲ್ಲಿ ತುಂಬಿದ್ದ ಮಳಿನೀರಿನಲ್ಲಿ ಬಿದ್ದು ಹೊರಳಿದ. ಅವನ ಆಚೀಚಿಗೆ ಬಟ್ಟೆಯ ಅಂಗಡಿಗಳನ್ನು ಬೆಂಕಿಯ ಜ್ವಾಲೆಗಳು ಕಬಳಿಸತೊಡಗಿದುವು.

ಭಯಂಕರವಾಗಿ ಎದ್ದ ಬೆಂಕಿಯನ್ನು ಕಂಡು ಜನ ಓಡಿಬಂದರು. ನೀರಿಗೆ ಹುಡುಕುತ್ತಿದ್ದವರು ರಸ್ತೆಬದಿಯಲ್ಲಿ ಬಿದ್ದು ನರಳುತ್ತಿದ್ದ ದಾಸಣ್ಣನನ್ನು ಕಂಡು ಚಕಿತರಾದರು.

ಸಾಬಿ ಮತ್ತು ಕಾಮತರು ಮತ್ತೆ ಹೊಸ ಅಂಗಡಿಗಳನ್ನು ಕಟ್ಟಿಸಿ ಮಳಿಗೆಗಳನ್ನು ಹಾಕಿದುದರಿಂದ  ಹೊರವರಿಗೆ ತಾತ್ಕಾಲಿಕವಾಗಿ ಉಂಟಾಗಿದ್ದ ಅಡಚಣೆ ನಿವಾರಣೆಯಾಯಿತು. ಸಾಬಿಯ ಅಂಗಡಿಯಲ್ಲಿ ರಮೇಶನೂ, ಕಾಮತರ ಅಂಗಡಿಯಲ್ಲಿ ಜನಾರ್ದನನೂ ತಂತಮ್ಮ ಕೆಲಸಗಳನ್ನು ಮುಂದರಿಸಿದರು.

ದಾಸಣ್ಣನನ್ನು ಮೊದಲು ಪೊಲೀಸ್ ಸ್ಟೇಷನ್ನಿಗೆ, ನಂತರ ಆಸ್ಪತ್ರೆಗೆ, ನಂತರ ಕೋರ್ಟಿಗೆ ಎಳೆದುಕೊಂಡು ಹೋದರು. ಅವನು ಕೆಲವು ವರ್ಷಗಳನ್ನು ಜೈಲಿನಲ್ಲೂ ಕೆಲವು ವರ್ಷಗಳಾನ್ನು ಹುಚ್ಚಾಸ್ಪತ್ರೆಯಲ್ಲೂ ಕಳೆದು ಮತ್ತೆ ಊರಿಗೆ ಮರಳಿದಾಗ ಇಲ್ಲಿ ಅನೇಕ ಬದಲಾವಣೆಗಳಾಗಿ ಹೋಗಿದ್ದುವು. ಪೇಟಿ ದೊಡ್ಡದಾಗಿತ್ತು. ಹತ್ತಾರು ವಸ್ತ್ರದ ಮಳಿಗೆಗಳು ಬಂದಿದ್ದುವು. ಒಂದೊಂದು ಮಳಿಗೆಗೂ ಒಬ್ಬೊಬ್ಬ ಟೈಲರ್, ಇವರೆಲ್ಲ ಸೇರಿ ಊರಿನ ಫ಼್ಯಾಶನನ್ನು ಬದಲಾಯಿಸಿದ್ದರು.

ದಾಸಣ್ಣನ ಗೈರುಹಾಜರಿಯಲ್ಲಿ ಅವನ ಕುಟುಂಬದ ಯೋಗಕ್ಷೇಮವನ್ನು ಹಲವರು ನೋಡಿಕೊಳ್ಳಬೇಕಾಯಿತು. ರಮೇಶ, ಅವನಂಥ ಯುವಕರು ಆ ಕಡೆ ಆಗಾಗ ಹೋಗಿ ಬಂದು ಮಾಡುತ್ತಿದ್ದರು. ಇದು ನಮ್ಮ ಪೇಟೆಯ ಜನಜೀವನಕ್ಕೆ ಹೊಸತೊಂದು ಆಯಾಮವನ್ನು ತಂದುಕೊಟ್ಟಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗಾದಿ
Next post ಮಿಂಚುಳ್ಳಿ ಬೆಳಕಿಂಡಿ – ೩೦

ಸಣ್ಣ ಕತೆ

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys