ಈಗೀಗ ನಿಸರ್ಗಕ್ಕಿಂತಲೂ ಹೆಚ್ಚಾಗಿ
ಪತ್ರಿಕೆಗಳು, ಕ್ಯಾಲೆಂಡರ್‌ಗಳು
ರೇಡಿಯೋ, ಟಿ.ವಿ. ಅಡ್ವರ್ಟೈಸ್ಮೆಂಟ್ ಗಳು
ಎಬ್ಬಿಸುತ್ತವೆ ನೆನಪಿಸುತ್ತವೆ
ಯುಗಾದಿ ಯುಗಾದಿ ಎಂದು
ವೇಷ ಭೂಷಣ ತೊಟ್ಟು
ಸಡಗರಿಸಿರೆಂದು.


ಒಮ್ಮೊಮ್ಮೆ
ನೀನು ಸಿಹಿ – ನಾನು ಕಹಿ
ಮತ್ತೊಮ್ಮೆ ಕಹಿ – ನೀನು ಸಿಹಿ
ಇದು ಹೀಗೆಯೇ
ಬೇವು ಬೆಲ್ಲದಂತೆ
ನಮ್ಮ ನಿರಂತರ ಯುಗಾದಿ.


ಚಾಕ್ಲೆಟ್ ವಿಸ್ಕಿ ಸಿಹಿಕಹಿಗಳು
ಸೆಟಲೈಟ್ ಸೈಬರದ ಅನಂತಾಳಲಿ
ಮುಗಿ ಬೀಳುವ ಯುವಜನರೇ
ನಿಸರ್ಗವನ್ನೊಮ್ಮೆ ನೋಡಿ,
ಎಂದೇ-
ಬಡಿದೆಬ್ಬಿಸಲು ವಿಸ್ಮಯದ ಯುಗಾದಿ
ಮತ್ತೆ ಮತ್ತೆ ಬಂದೇ ಬರುತ್ತದೆ
ಬಿತ್ತಿದ ಬೀಜ ಬಿರಿದಂತೆ
ಶುಭ ಕಾಮನೆಗಳು ಹೇಳಿಯೇ
ಹೇಳುತ್ತೇವೆ ಎಲ್ಲರೊಂದಿಗೆ….
*****