ಕದಳಿಯ ಸುಳಿಯೇ
ಕದಳಿಯ ಹೂವೇ
ಕದಳಿಯ ಫಲವೇ
ನಿಮ್ಮೆಲ್ಲರನೂ ಒಂದ ಬೇಡುವೆನು

ಹರನೇ ತನಗೆ ಗಂಡನಾಗಬೇಕೆಂದು
ಅನುದಿನವೂ ಹಂಬಲಿಸಿ
ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ
ಚೆಲುವನನು ಬೆಂಬತ್ತಿ ನಿಮ್ಮೀ
ಕದಳಿ ಬನವ ಪೊಕ್ಕ ನನ್ನಕ್ಕ
ಹೊಳೆವ ಕೆಂಜೆಡೆಗಳ ಸುಲಿಪಲ್ಲ
ಗೊರವನನು ಇದಿರಿಸಿದ
ಬಗೆಯ ಬಣ್ಣಿಸಿರೆ…

ಸರ್ವಭರಿತವಾಗಿ ಮುಖದೋರಿದವನ
ನಿರುಕಿಸಿ ನಿಬ್ಬೆರಗಾದಳೆ ನನ್ನಕ್ಕ?
ಆ ಬೆರಗಿನ ಸೊಬಗ ಬಣ್ಣಿಸಿರೆ…

ಭವಗೆದ್ದು ಬಂದ ಮಗಳೆ ಬಾರೆಂದು
ಕರುಣದಿ ಕೈವಿಡಿದು ಬಿಗಿದಪ್ಪಿದನಲ್ಲವೆ
ಆ ಗೊರವ….
ಆ ದಿವ್ಯ ನೋಟದ ಮಾಟವ ಬಣ್ಣಿಸಿದೆ…

ಕಳವಳಿಸಿ ಕಲ್ಪಿಸಿ, ಕಂದಿ, ಕುಂದಿದವಳ
ಕಾಡಿಸಿ ಕೊನೆಗೊಮ್ಮೆ
ಕಾಮನಬಿಲ್ಲಿನಂತೆ ಮುಖದೋರಿದ
ಚನ್ನನನು ಕಂಡು ಉರಿದಳೆ? ಜರಿದಳೆ?
ಹಿರಿಹಿರಿ ಹಿಗ್ಗಿದಳೆ?!

ಆ ಹಿಗ್ಗಿನ ಬುಗ್ಗೆಯಿಂದ ಒಂದಿಷ್ಟು
ಸಿಹಿನೀರ ಮೊಗದು ಎನಗುಣಿಸಿರೆ…

ನಾನಾಕೆಯ ಕೆಳದಿ
ಕುಸುಮದ ಹಂಗು ತೊರೆದು,
ಅಕ್ಕನನು ಅನುಸರಿಸಿ
ಬೆಟ್ಟಗುಡ್ಡ ಕಣಿವೆ ಕಾನನಗಳಲಿ
ಸುಳಿಸುಳಿದು ಬಂದ ಅಣುರೇಣು
ರುಂಡ ಮಾಲೆಯ ಕೊರಳವನ
ಹೃದಯ ಕಮಲದೊಳಡಗಿದವಳ
ಸಡಗರಕ್ಕೆ ಸಾಕ್ಷಿಯಂತಿರುವ
ದಿವ್ಯ ಚಕ್ಷುಗಳೇ…

ನೀವು ಬಣ್ಣಿಸದಿದ್ದರೆ
ನನ್ನಕ್ಕ ಒಲಿದು ಕೂಡಿದ
ಶ್ರೀಗಿರಿಯ ಗಾರುಡಿಗ
ಆ ಮಲ್ಲಿನಾಥನ ಮೇಲಾಣೆ!
*****