ತೆರೆದ ಬಾವಿ

ತೆರೆದ ಬಾವಿ

ಚಿತ್ರ: ಲಾಪ್ಪಿಂಗ್
ಚಿತ್ರ: ಲಾಪ್ಪಿಂಗ್

ಹೊದ್ದುಕೊಂಡ ಹರಿದ ಕಂಬಳಿಯನ್ನೇ ಮೈಗೆ ಸುತ್ತಿ ಕೊಂಡು ವಾಚರ್ ಮಾದ ಎದ್ದು ಬಾಗಿಲು ತೆರೆದು ಹೊರಗೆ ಬಂದ. ಏನೋ ನೆನಪಾಗಿ ಪಕ್ಕದ ಕೋಣೆಯ ಕಡೆ ಇಣುಕಿ ನೋಡಿದ. ಪಾರೆಸ್ಟರ್ ಕಂಬಳಿ ಹೊದ್ದುಕೊಂಡು ಗೊರಕೆ ಹೊಡೆಯುತ್ತಿದ್ದುದನ್ನು ನೋಡಿ ಸಮಾಧಾನ ಪಟ್ಟುಕೊಂಡ. ವಸತಿಗೃಹದ ಹೊರನಿಂತು ಒಮ್ಮೆ ಪ್ರಕೃತಿಯನ್ನು ದೃಷ್ಟಿಸಿದ. ಸುತ್ತಲೂ ಮಂಜು ಮುಸುಕಿದ ಬೆಟ್ಟಗಳ ಸಾಲು. ಹಚ್ಚ ಹಸುರಿನಿಂದ ಕಂಗೊಳಿಸುವ ಗಿರಿಧಾಮಗಳು. ಮುಗಿಲೆತ್ತರಕ್ಕೆ ಬೆಳೆದು ನಿಂತ ವೃಕ್ಷಗಳ ರಾಶಿ. ಹಕ್ಕಿಗಳ ಇಂಪಾದ ಇಂಚರ. ದೂರದಲ್ಲಿ ಕೂಗಿಡುವ ನವಿಲಿನ ಧ್ವನಿ. ಪಕ್ಕದಲ್ಲಿಯೇ ಹರಿಯುವ ತೊರೆಯ ಕಲರವ. ಇದಾವುದೂ ಮಾದನಿಗೆ ಹೊಸತಾಗಿರಲಿಲ್ಲ. ಬಚ್ಚಲು ಕೋಣೆಗೆ ಹೋಗಿ ಹಂಡೆಗೆ ನೀರು ತುಂಬಿಸಿ, ಒಲೆ ಹೊತ್ತಿಸಿದ. ಪಾರೆಸ್ಟರ್ ಏಳುವ ಹೊತ್ತಿಗೆ ಬಿಸಿ ನೀರು ರೆಡಿಯಾಗಬೇಕು. ಇಲ್ಲದಿದ್ದರೆ ಬೈಗಳ ಸುರಿಮಳೆ.

ಮಾದ ಕೊಡಪಾನ ತಗೆದುಕೊಂಡು ತೊರೆಯ ಕಡೆಗೆ ನಡೆದ. ಬೆಳಿಗ್ಗೆಯ ಪಲಹಾರ ರೆಡಿಯಾಗಬೇಕು. ತದನಂತರ ಪೇಟೆಗೆ ಹೋಗಬೇಕು. ಡಾಮರು ರಸ್ತೆ ಕಾಣಬೇಕಾದರೆ ಸುಮಾರು ೧೦ಕಿ. ಮೀ ಮಣ್ಣಿನ ರಸ್ತೆ ತುಳಿಯಬೇಕು. ಕಾದಿಟ್ಟ ಅರಣ್ಯದ ಮಧ್ಯದಿಂದ ಸೀಳಿ ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ೪೮  ಇಲ್ಲದಿರುತ್ತಿದ್ದರೆ, ಇಲ್ಲಿಯ ಜನರಿಗೆ ಪಟ್ಟಣದ ಸಂಪರ್ಕವೇ ಸಿಗುತ್ತಿರಲಿಲ್ಲ. ಇಂತಹ ಕುಗ್ರಾಮದ ಸೆಕ್ಷನಿಗೆ ಯಾವುದೇ ಪಾರೆಸ್ಟ್ರರ್ ಒಂದು ವರ್ಷಕ್ಕಿಂತ ಜಾಸ್ತಿ ನಿಲ್ಲುತ್ತಿರಲಿಲ್ಲ. ವಿದ್ಯುತ್ ಸಂಪರ್ಕವಾಗಲೀ, ದೂರವಾಣಿ ಸಂಪರ್ಕವಾಗಲೀ ಇಲ್ಲ. ಹೋಗಲಿ. ಜನ ಸಂಪರ್ಕ ಪಡೆಯಬೇಕಾದರೂ ಈ ರಾಷ್ಟ್ರೀಯ ಹೆದ್ದಾರಿಗೆ ಬಂದು ಬಸ್ಸು ಹತ್ತಿ ಹೋಗಬೇಕು. ಅದಕ್ಕಾಗಿಯೇ ಇಲ್ಲಿ ಬಂದ ಎಲ್ಲ ಪಾರೆಸ್ಚರ್‌ಗಳು ತಮ್ಮ ಕುಟುಂಬವನ್ನು ಈ ವಸತಿಗೃಹಕ್ಕೆ ತರಲು ಇಪ್ಟಪಡುತ್ತಿರಲಿಲ್ಲ. ಇಲ್ಲಿ ಯಾವುದೇ ಮನರಂಜನೆಗೆ ಅವಕಾಶ ಇಲ್ಲವಾದುದರಿಂದ, ಸಹಜವಾಗಿಯೇ ಕುಡಿತ ಹಾಡೂ ಇಸ್ಪೀಟು ಆಟ ಇಲ್ಲಿ ಮಾಮೂಲಿಯಾಗಿತ್ತು. ಮಾದ ಕೊಡಪಾನದಲ್ಲಿ ನೀರು ತುಂಬಿಸಿ ವಸತಿಗೃಹದ ಕಡೆಗೆ ನಡೆದ. ರಸ್ತೆಯ ಪಕ್ಕದಲ್ಲಿ ಕಾಡುಕೋಣಗಳು ತೊರೆಯನ್ನು ದಾಟಿ ಹೋದ ಹೆಜ್ಜೆಯ ಗುರುತುಗಳಿದ್ದವು.

ಅಂದು ರವಿವಾರ. ಬೆಳಗ್ಗಿನ ಸ್ನಾನ, ಪಲಹಾರ ಮುಗಿಯಿತು. ವರಾಂಡದಲ್ಲಿ ಶತಪಥ ತಿರುಗುತ್ತಿದ್ದ ಪಾರೆಸ್ಟರ್ ಏನೋ ನೆನಪಾಗಿ ಮಾದನನ್ನು ಕೂಗಿದರು. “ಏ ಮಾದ, ನಾನು ಚೀಟಿ ಕೊಡುತ್ತೇನೆ. ಒಂದು ಕೋಳಿ, ಸ್ವಲ್ಪ ಡ್ರಿಂಕ್ಸ್, ಸೋಡಾ ಹಾಗೂ ಸಿಗರೇಟು ತೆಗೆದುಕೊಂಡು ಬೇಗ ಬರಬೇಕು. ನನ್ನನ್ನು ಯಾರಾದರೂ ಕೇಳಿದರೆ ಪಾರೆಸ್ಟರ್ ಊರಿಗೆ ಹೊಗಿದ್ದಾರೆ ಎಂದು ಹೇಳು”. ಬೈಕ್ ಸಿಕ್ಕಿದ್ದೇ ತಡ ಮಾದ ಒಂದೇ ಉಸಿರಿಗೆ ಪೇಟೆ ತಿರುಗಿ ಎಲ್ಲಾ ಸಾಮಾನು ತಂದು ಅಡುಗೆ ತಯಾರಿಸಿದ. ಹೊರಗೆ ಇಸ್ಪೀಟು ಆಟ ಬರ್ಜರಿಯಿಂದ ಸಾಗುತ್ತಿತ್ತು. ಮರದ ವ್ಯಾಪಾರಿ ಇಸಾಕ್, ಪಂಚಾಯತ್ ಅಧ್ಯಕ್ಷರ ಮಗ ಗೋಪಾಲ ಗೌಡ ಹಾಗೂ ಶಿಕಾರಿ ಎಕ್ಸ್‌ಪರ್ಟ್‌ ಕೋಚಣ್ಣ ತಮ್ಮ ತಮ್ಮ ಬೈಕಿನೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಿದ್ದರು. ಪಾರೆಸ್ಬರ್ ಲಿಂಗರಾಜು ನೇತೃತ್ವದಲ್ಲಿ ಇಸ್ಪೀಟು ಆಟಕ್ಕೆ ಕಳೆ ಏರಿತ್ತು. ಮಾದ ಎಲ್ಲರ ಗ್ಲಾಸಿಗೂ ಸ್ವಲ್ಪ ಸ್ವಲ್ಪವೇ ಡ್ರಿಂಕ್ಸ್ ಹಾಕಿ, ಸೋಡಾ ಬೆರೆಸಿ ಕೊಡುತ್ತಿದ್ದ. ಅಡುಗೆ ಕೋಣೆ ಹೊಕ್ಕು ತಾನೂ ಸ್ವಲ್ಪ ಕದ್ದು ರುಚಿ ನೋಡುತ್ತಿದ್ದ. ಹದವಾಗಿ ಬೆಂದ ಕೋಳಿ ಪ್ರೈ, ನೀರುಳ್ಳಿ ತುಂಡುಗಳು, ಉಪ್ಪಿನಕಾಯಿ, ಮಿಕ್ಸರ್, ಸಿಗರೇಟು ಎಲ್ಲಾ ಸಮಯಕ್ಕೆ ಸರಿಯಾಗಿ ಮಾದನಿಂದ ಸಪ್ಲ್ಯಾ ಆಗುತ್ತಿತ್ತು. ಅಮಲು ಏರುತ್ತಿದ್ದಂತೆ ಆಟಕ್ಕೆ ರಂಗೇರುತಿತ್ತು. ಎಲ್ಲರೂ ಮಾದನ ‘ಸರ್ವೀಸ’ನ್ನು ಹೊಗಳುವವರೇ. ಮಧ್ಯಾಹ್ನವಾದರೂ ಯಾರೂ ಆಟ ಬಿಟ್ಟು ಏಳುತ್ತಿರಲಿಲ್ಲ. ಹುಚ್ಚೆ ಹೊಯ್ಯಲು ಒಬ್ಬರಿಗೂ ಪುರುಸೊತ್ತು ಇರಲಿಲ್ಲ. ವಸತಿಗೃಹದ ರೂಂ ತುಂಬೆಲ್ಲಾ ಸಿಗರೇಟಿನ ಹೊಗೆ ತುಂಬಿಕೊಂಡಿತ್ತು. ಆಗ ಅಲ್ಲಿಗೆ ದತ್ತೆಂದು ಪ್ರತ್ಯಕ್ಷವಾದವನು ರೇಂಜ್ ಆಫೀಸಿನ ಜವಾನ ಲೋಬೋ. ಲೋಬೋನ ಆಗಮನ ಆಯಿತು ಎಂದರೆ ಏನಾದರೂ ವಿಶೇಷ ಇದೆ ಎಂದರ್ಥ. ಒಂದು ಕ್ಷಣ ಆಟ ನಿಂತು ಹೋಯಿತು. ಪಾರೆಸ್ಚರ್ ಕೈಯಲ್ಲಿದ್ದ ಇಸ್ಪೀಟು ಎಲೆಗಳನ್ನು ಮಡಚಿ ಕೆಳಗಿಟ್ಟರು. ಸಿಗರೇಟಿನ ಕೊನೆಯ ದಂ ಎಳೆದು ಹೊರಗೆ ಬಿಸಾಕಿದರು. ಈ ಅನಿರೀಕ್ಷಿತ ಇಂಟರ್ವಲ್ ಸಿಕ್ಕಿದ್ದೇ ತಡ, ಇದುವರೆಗೆ ದಂ ಕಟ್ಟಿ ಕುಳಿತಿದ್ದ ಇತರ ಮೂವರೂ ಮಾಲುತ್ತಾ ಹುಚ್ಚೆ ಹೊಯ್ಯಲು ಹೊರಗೆ ಹೋದರು.

“ಏನು ಲೋಬೋ, ಏನು ವಿಶೇಷ”?

“ರೇಂಜರು ಅರ್ಜಂಟ್ ನಿಮ್ಮನ್ನು ಕರೆದಕೊಂಡು ಬರಲು ಹೇಳಿದರು.”

“ಏನು ವಿಷಯ”?

“ಏನೂಂತ ಗೊತ್ತಾಗಲಿಲ್ಲ. ತುಂಬಾ ಸೀರಿಯಸ್ ಇದ್ದಾರೆ. ಬಹಳ ಆರ್ಜಂಟ್. ಎಲ್ಲಿದ್ದರೂ ಹುಡುಕಿ ಕರೆದುಕೊಂಡು ಬಾ ಅಂದರು.”

“ಸರಿ ಮತ್ತೆ, ನೀನು ಊಟ ಮಾಡು. ನಾನು ರೆಡಿಯಾಗುತ್ತೇನೆ”.

ಬಂದ ಮಿತ್ರರು ಬೈಕ್ ಸ್ಟಾರ್ಟ್‌ ಮಾಡಿ ಹೊರಟು ಹೋದರು. ಪಾರೆಸ್ಟರ್ ಯುನಿಪಾರ್ಮ್ ಸಿಕ್ಕಿಸಿದರು. ಲೋಬೋನಿಗೆ ‘ಪರಮಾತ್ಮ’ನ ಸೇವನೆಯೊಂದಿಗೆ ಊಟ ಆಯಿತು. ಲೋಬೋನನ್ನು ಬೈಕಿನ ಹಿಂದೆ ಕುಳ್ಳಿರಿಸಿ ಪಾರೆಸ್ಟ್ರರ್ ರೇಂಜ್ ಆಫೀಸಿಗೆ ಹೊರಟರು. ರೇಂಜರು ಆಫೀಸಿನಲ್ಲಿರಲಿಲ್ಲ. “ಮನೆಯಲ್ಲಿರಬೇಕು. ಅಲ್ಲಿಗೇ ಹೋಗಿ ಸಾರ್” ಎಂದ ಲೋಬೋ. ನಾನು ಹೋದಾಗ ಪಾರೆಸ್ಟರ್ ಮನೆಯಲ್ಲಿರಲಿಲ್ಲ. ಫೀಲ್ಡ್‌ಗೆ ಹೋಗಿದ್ದರು. ಅವರು ಬರುವವರೆಗೂ ಕಾದು ಕರೆದುಕೊಂಡು ಬಂದೆ ಎಂದು ರೇಂಜರಿಗೆ ಹೇಳಲು ಲೋಬೋಗೆ ಕಿವಿಮಾತು ಹೇಳಿ ಒಂದಿಷ್ಟು ಬಕ್ಷೀಸು ಕೊಟ್ಟರು ಪಾರೆಸ್ಚರ್. ಪಾರೆಸ್ಟರ್ ಲಿಂಗರಾಜು ರೇಂಜರ ಮನೆ ಬಾಗಿಲಿನ ಬೆಲ್ ಒತ್ತಿದೊಡನೆ ರೇಂಜರು ಪ್ರತ್ಯಕ್ಷ ಆದರು. ಬಲವಾದ ಸೆಲ್ಯೂಟ್ ಹೊಡೆದು, ಆಜ್ಞೆಗಾಗಿ ಕಾದುಕುಳಿತರು ಪಾರೆಸ್ಬರ್.

“ಏನು ಪಾರೆಸ್ಟರೇ, ಊರಿಗೆ ಹೋಗಲಿಲ್ಲವಾ”?

“ಇಲ್ಲಾ ಸಾರ್. ಒಂದು ತಕ್ಷೀರಿನ ಬಗ್ಗೆ ಸ್ವಲ್ಪ ಗುಮಾನಿಯಿತ್ತು. ಅದಕ್ಕಾಗಿ ಬೆಳಿಗ್ಗೆನೇ ಒಂದು ರೌಂಡ್ ಫೀಲ್ಡ್ ಮುಗಿಸಿಬಂದೆ.”

“ಗುಡ್. ವಿಶೇಷವೇನೂ ಇಲ್ಲ. ಇವತ್ತು ರಾತ್ರಿ ಮಂಗಳೂರಿನಿಂದ ಸಾಹೇಬರು ಬರುತ್ತಾರೆ. ನಾಳೆ ನಿಮ್ಮ ಸೆಕ್ಸೆನ್ನ ಕೆಲಸಗಳನ್ನು ನೋಡುತ್ತಾರಂತೆ. ಎಲ್ಲಾ ನರ್ಸರಿ, ಪ್ಲಾಂಟೇಶನ್ ಕೆಲಸಗಳು ಮಾರ್ಚಿಗೆ ಮುಗಿದಿರುತ್ತದೆ. ಎಪ್ರಿಲ್, ಮೇಯಲ್ಲಿ ಒಮ್ಮೆ ಚೆಕ್ ಮಾಡಿದ್ದಾರೆ. ಪುನಃ ಈ ಜೂನ್ ತಿಂಗಳಲ್ಲಿ ಯಾಕೆ ಬರುತ್ತಾರೆ ಎಂದು ಆರ್ಥವಾಗುವುದಿಲ್ಲ.”

“ಮಳೆ ಬೇರೆ ಬರುತ್ತಾ ಇದೆ ಸಾರ್, ಇಂಬಳದ ಕಾಟ ಬೇರೆ.” ಮೆಲ್ಲನೆ ಉಸುರಿದರು ಪಾರೆಸ್ಚರ್ “ನನಗೂ ಸಾಹೇಬರು ಯಾಕೆ ಫೀಲ್ಡ್‌ಗೆ ಹೋಗುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ. ಇವತ್ತು ರಾತ್ರಿ ಇಲ್ಲಿಯ ವಿಶ್ರಾಂತಿ ಗೃಹದಲ್ಲಿ ಉಳಕೊಳ್ಳುತ್ತಾರೆ. ನಾಳೆ ರಾತ್ರಿ ಮಾತ್ರ ನಿಮ್ಮ ಸೆಕ್ಷನ್‌ನ್ನ ಗೆಸ್ಟ್ ಹೌಸ್‌ನಲ್ಲಿ ಉಳಕೊಳ್ಳುತ್ತಾರಂತೆ. ಗೆಸ್ಟ್‌ ಹೌಸ್ ಕ್ಲೀನ್ ಮಾಡಿಸಿ ಹೊಸ ಬೆಡ್‌ಶೀಟ್, ರಗ್ ತಂದು ಹಾಸಿ ಬಿಡಿ. ನೀರಿನ ವ್ಯವಸ್ಥೆ ನೋಡಿಕೊಳ್ಳಿ ಹಾಗೆಯೇ ಎರಡು ವಾಚರ್‌ಗಳು ಸಾಹೇಬರು ಹೋಗುವವರೆಗೂ ಕದಲದಂತೆ ಗೆಸ್ಟ್ ಹೌಸ್ನಲ್ಲಿರಲಿ. ರಾತ್ರಿ ಊಟ ಆ ಮಾದನ ಹತ್ತಿರ ಸ್ಪೆಶಲ್ ಆಗಿ ಮಾಡಿಸಿ. ಸ್ವಲ್ಪ ಸುಪೀರಿಯರ್ ಡ್ರಿಂಕ್ಸ್‌ನ್ನು ಈಗ ಹೋಗುವಾಗ ಪೇಟೆಯಿಂದ ತೆಗೆದುಕೊಂಡು ಹೋಗಿ. ಕೋಳಿ ಮಾತ್ರ ಊರಿದ್ದು ಇರಲಿ. ಹಾಗೆಯೇ  ಮೊಸ್ಕಿಟೋ ಕಾಯ್ಲ್‌, ಅಗರಬತ್ತಿ, ಸಿಗರೇಟು, ಕ್ಯಾಂಡಲ್, ಮ್ಯಾಚ್‌ಬಾಕ್ಸ್, ಟಾರ್ಚ್ ಎಲ್ಲಾ ರೆಡಿ ಇರಲಿ. ಯಾವುದೇ ರೀತಿಯ ತೊಂದರೆಯಾಗಬಾರದು. ನಾಳೆ ಬೆಳಿಗ್ಗೆ ನೀವು ರೆಡಿಯಾಗಿ ಇದ್ದು ಬಿಡಿ. ಸಾಹೇಬರು ಯಾವ ಟೈಮಿಗೆ ಹೊರಡುತ್ತಾರೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಮತ್ತೆ ಮೆಸೇಜ್ ಕೊಡಲು ಆಗುವುದಿಲ್ಲ. ಗಾರ್ಡ್‌ಗಳನ್ನು ಅವರವರ ಪ್ಲಾಂಟೇಶನ್‌ಗಳ ಹತ್ತಿರ ಯುನಿಫಾರ್ಮಾ ಹಾಕಿ ನಿಲ್ಲಲು ಹೇಳಿ ಬಿಡಿ.” ಒಂದೇ ಉಸಿರಿಗೆ ರೇಂಜರು ಹೇಳಿದಕ್ಕೆಲ್ಲಾ “ಹೂ ಸರ್….. ಹೂ ಸರ್” ಎಂದು ಮಾತ್ರ ಪಾರೆಸ್ಟರ್ ಉತ್ತರಿಸಿದರು. ಜಾಸ್ತಿ ಮಾತಾಡಿದರೆ ಗಬ್ಬುವಾಸನೆ ಎಲ್ಲಿ ಗೊತ್ತಾಗಿಬಿಡುತ್ತದೋ ಎಂಬ ಭಯ ಬೇರೆ. ಕೊನೆಯ ಸೆಲ್ಯೂಟ್ ಹೊಡೆದು ಪಾರೆಸ್ಟರ್ ತನ್ನ ವಸತಿಗೃಹಕ್ಕೆ ಪ್ರಯಾಣ ಬೆಳೆಸಿದರು. ಹೋಗುವಾಗ ರೇಂಜರು ಆರ್ಡ್‌ರ್‌ ಮಾಡಿದ ಐಟಂಗಳನ್ನು ತಗೆದುಕೊಂಡು ಹೋಗಲು ಮರೆಯಲಿಲ್ಲ.

ರೇಂಜರು ಸಾಹೇಬರ ಸ್ವಾಗತಕ್ಕೆ ತಯಾರಿ ನಡೆಸುತ್ತಿದ್ದರು. ಒಂದೂ ಅಲ್ಲದ ಈ ಸಮಯದಲ್ಲಿ ಕಾಮಗಾರಿ ನೋಡಲು ಯಾಕೆ ಬರುತ್ತಾರೆ? ಯಾವ ಕೆಲಸಗಳನ್ನು ನೋಡಬಹುದು. ನೆಡುತೋಪುಗಳ ನಿರ್ವಹಣೆ. ಪೋಷಣಾ ಕೆಲಸಗಳು ಮುಗಿದಿವೆ. ಇತರ ಸಿವಿಲ್ ಕೆಲಸಗಳು ಹೆಚ್ಚಿನವು ಮುಗಿದಿವೆ. ಎಷ್ಟು ತಲೆಕೆರೆದುಕೊಂಡರೂ ರೇಂಜರ್‌ಗೆ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ. ಕೊಡುವ ಪರ್ಸ್‌ಟೇಜನ್ನು ಕ್ಲಪ್ತ ಸಮಯಕ್ಕೆ, ಲಿಸ್ಟು ಮಾಡಿ, ಲೆಕ್ಕ ಹಾಕಿ ಚುಕ್ತಾ ಮಾಡಲಾಗಿದೆ. ಅದರಲ್ಲಿ ಅಸಮಾಧಾನವಾಗುವ ಸಾಧ್ಯತೆಯಿಲ್ಲ. ಯಾಕೆಂದರೆ ಎಲ್ಲಾ ರೇಂಜರುಗಳು ಕೊಡುವ ರೇಶಿಯೋಗಿಂತ ಸ್ವಲ್ಪ ಜಾಸ್ತಿಯೇ ಕೊಡಲಾಗಿದೆ. ಮತ್ತೇಕೆ ಈಗ ತನಿಖೆ. ತಲೆಕೆಟ್ಟು ಹೋಗಿ, ಮೇಟಿಯನ್ನು ಕರೆದು ವಿಶ್ರಾಂತಿ ಗೃಹ ಕ್ಲೀನು ಮಾಡಲು ಹೇಳಿದರು. ಹೊಸ ಬೆಡ್ ಶೀಟು, ರಗ್, ಮೊಸ್ಕಿಟೋ ಕಾಯ್ಲ್‌, ಅಗರಬತ್ತಿ, ಟಾರ್ಚ್, ಸಿಗರೇಟು, ಕ್ಯಾಂಡಲ್, ಎಲ್ಲಾ ರೆಡಿಯಾಯಿತು. ಟಾಯ್ಲೆಟ್. ಬಾತ್ರೂಂ ಎಲ್ಲಾ ಕ್ಲೀನಾಯಿತು. ಊರ ಕೋಳಿ, ಡ್ರಿಂಕ್ಸ್, ಸೋಡಾ ಎಲ್ಲಾ ಬಂತು. ಇನ್ನು ಸಾಹೇಬರ ನಿರೀಕ್ಷೆಯಲ್ಲಿ ರೇಂಜರು ಆಫೀಸಿನಲ್ಲಿ ಕುಳಿತರು. ಪಾರೆಸ್ಟರ್ ಲಿಂಗರಾಜು ಸೆಕ್ಷನ್‌ನ ಎಲ್ಲಾ ಮಂಜೂರಾದ ಎಸ್ಟಿಮೇಟುಗಳನ್ನು ರೆಡಿಮಾಡಿ, ಒಂದು ಫೈಲಿನಲ್ಲಿ ಕಟ್ಟಿಟ್ಟರು. ಅಲ್ಲಿಂದ ರೇಂಜರು ನೇರವಾಗಿ ವಿಶ್ರಾಂತಿ ಗೃಹಕ್ಕೆ ಬಂದರು. ಒಮ್ಮೆ ವರಾಂಡ, ಅಂಗಳ, ಬೆಡ್‌ರೂಂ, ಟಾಯ್ಲೆಟ್ ಪರಿಶೀಲಿಸಿದರು. ಅಡುಗೆ ಕೋಣೆಗೆ ತೆರಳಿ ಮೇಟಿಯ ಅಡುಗೆಯನ್ನು ನೋಡಿದರು. ಊಟದ ಬಟ್ಟಲು, ಗ್ಲಾಸ್‌ಗಳನ್ನು ಒಮ್ಮೆ ಮೂಸಿ ನೋಡಿ ತೃಪ್ತಿ ಪಟ್ಟುಕೊಂಡರು. ಕೊನೆಯದಾಗಿ ಸ್ಪೆಶಲ್ ಅಗಿ ಮಂಗಳೂರಿನಿಂದ ತರಿಸಿದ ‘ಡ್ರಿಂಕ್ಸ್’ ನ ಒರಿಜಿನಾಲಿಟಿ ಬಗ್ಗೆ ಪರಿಶೀಲಿಸಿಕೊಂಡರು. ಎಲ್ಲವೂ ಸರಿಯಿದೆ. ಆದರೆ ಮನಸ್ಸಿಗೆ ಏನೋ ಕಸಿವಿಸಿ.

ರಾತ್ರಿ ಗಂಟೆ ೭ ಆಯಿತು. ೮ ಆಯಿತು. ಸಾಹೇಬರ ಆಗಮನವಿಲ್ಲ. ಸುಮಾರು ೯ ಗಂಟೆಯ ಹೊತ್ತಿಗೆ ಸಾಹೇಬರ ಜೀಪು ವಸತಿಗೃಹಕ್ಕೆ ಬಂತು. ಸಾಹೇಬರನ್ನು ಎದುರುಗೊಳ್ಳಲು ರೇಂಜರು, ಸ್ಪೆಶಲ್ ಡ್ಯೂಟಿ ಪಾರೆಸ್ಟರುಗಳು, ವಾಚರುಗಳು, ಗಾರ್ಡ್‌ಗಳು ಸಾಲಾಗಿ ನಿಂತಿದ್ದರು. ಸೆಲ್ಯೂಟ್‌ಗಳ ಸುರಿಮಳೆಯನ್ನು ವೀಕ್ಷಿಸುತ್ತಾ ಸಾಹೇಬರು ವಸತಿಗೃಹ ಹೊಕ್ಕರು. ಹೊರಗೆ ಸಾಹೇಬರ ಆಪ್ತಚೇಲ ಡ್ರೈವರ್‌ದೇ ಕಾರುಬಾರು. ರಾತ್ರಿಯ ಊಟ ಮುಗಿಸಿದ ಸಾಹೇಬರು ಹೆಚ್ಚು ಮಾತನಾಡಲಿಲ್ಲ. ಜಾಸ್ತಿ ವಿಚಾರಿಸಲು ರೇಂಜರಿಗೂ ಧೈರ್ಯ ಇರಲಿಲ್ಲ. ಬೆಳಿಗ್ಗೆ ೬ ಗಂಟೆಗೆ ರೆಡಿಯಾಗಲು ಹೇಳಿ ಸಾಹೇಬರು ನಿದ್ದೆ ಹೋದರು. ರೇಂಜರು ಮನೆ ಸೇರಿದರು.

ಬೆಳಿಗ್ಗೆ ೬ ಗಂಟೆಗೆ ವಿಶ್ರಾಂತಿ ಗೃಹಕ್ಕೆ ಬಂದಾಗ ಸಾಹೇಬರು ರೆಡಿಯಾಗಿದ್ದರು. ಎಲ್ಲರೂ ಜೀಪು ಹತ್ತಿ ಫೀಲ್ಡ್‌ಗೆ ತರಳಿದರು. ಕೆಲವು ನೆಡುತೋಪುಗಳ ಪರಿಶೀಲನೆಯಾಯಿತು. ಹೊಸದಾಗಿ ಬೆಳೆಸಿದ ನೆಡುತೋಪು ಒಂದರಲ್ಲಿ ಜಾನುವಾರುಗಳು ಮೋಯುತ್ತಿದವು. ಸಾಹೇಬರಿಗೆ ಕೋಪ ತಡೆಯಲಾಗಲಿಲ್ಲ. “ಎಲ್ರೀ, ಪಾರೆಸ್ಟರನ್ನು ಕರೆಯಿರಿ”. ನಡುಗುತ್ತಾ ಪಾರೆಸ್ಟ್ರರ್ ಲಿಂಗರಾಜು ಎದುರು ನಿಂತರು.

“ಏನಯ್ಯಾ ನಿನ್ನ ಹೆಸರು?”

“ಲಿಂಗರಾಜು”

“ಯಾವೂರು?”

“ಸೊರಬ ಸಾರ್”

“ಸರಿಯಾಗಿ ಫೆನ್ನಿಂಗ್ ಮಾಡಿಸಿದ್ದರೆ ಜಾನುವಾರು ಹೇಗೆ ಒಳಗೆ ಬರುತ್ತಿತ್ತು. ನಾನು ನಿನ್ನನ್ನು ಸಸ್ಪೆಂಡ್ ಮಾಡುತ್ತೇನೆ ನೋಡು. ಕೆಲಸದ ಮೇಲೆ ಸರಿಯಾಗಿ ನಿಗಾ ವಹಿಸಲಿಲ್ಲ. ಬರೇ ಹೊಟ್ಟೆ ಬೆಳೆಸಿದ್ದೀ”.

“ಇಲ್ಲ ಸಾರ್. ಸರಿಮಾಡುತ್ತೇನೆ”. ಲಿಂಗರಾಜು ಗಾರ್ಡ್‌ನ್ನು ಕಳುಹಿಸಿ ಜಾನುವಾರು ಓಡಿಸಿದ. ರೇಂಜರು ವಿಷಯವನ್ನು ಬೇರೆ ಕಡೆ ತಿರುಗಿಸಿದ್ದರಿಂದ ಅನಾಹುತ ತಪ್ಪಿ ಹೋಯಿತು. ಸಂಜೆಯ ವರೆಗೂ ನೆಡುತೋಪು ವೀಕ್ಷಿಸಿ, ನಂತರ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಂಡರು. ವಸತಿಗೃಹಗಳ ರಿಪೇರಿ, ನಿರ್ವಹಣೆ, ರಸ್ತೆ ರಿಪೇರಿಗಳನ್ನು ವೀಕ್ಷಿಸಿದ ಸಾಹೇಬರು ಕೊನೆಯಲ್ಲಿ ಎಸೆದ ಪ್ರಶ್ನೆ ರೇಂಜರನ್ನು ತಬ್ಬಿಬ್ಬು ಮಾಡಿತು. “ನರ್ಸರಿ ಗಿಡಗಳ ನಿರ್ವಹಣೆ, ಪೋಷಣೆ ಕೆಲಸಗಳಿಗೆ ನೀರಿನ ಅವಶ್ಶಕತಯಿದೆಯಲ್ಲಾ? ಒಂದು ಬಾವಿ ತೋಡಲು ಅಂದಾಜು ಪಟ್ಟಿ ಮಂಜೂರಾಗಿದೆಯಲ್ಲಾ? ಆ ಕಾಮಗಾರಿಗಳನ್ನು ವೀಕ್ಷಿಸುವಾ” ರೇಂಜರು ಗಾಬರಿಗೊಂಡರು. ಮಾರ್ಚ್‌ ಅಂತ್ಯಕ್ಕೆ ಹಣ ಬಂದುದರಿಂದ ಆ ಕಾಮಗಾರಿಯನ್ನು ಕೈಗೊಳ್ಳಲಾಗಲಿಲ್ಲ.

“ಆ ಕೆಲಸ ಆಗಿಲ್ಲ ಸಾರ್. ಮಾರ್ಚ್‌ ಅಂತ್ಯಕ್ಕೆ ಹಣ ಬಂದಿದ್ದು, ಕೆಲಸಕ್ಕೆ ಜನ ಸಿಗದ ಬಾವಿ ತೋಡಲಾಗಲಿಲ್ಲ ಸಾರ್. ಕೊನೆಯದಾಗಿ, ಆ ಸ್ಥಳಕ್ಕೆ ವಾಹನ ಬರಲು ಸಾಧ್ಯವಿಲ್ಲ. ಸುಮಾರು ೨ ಕಿ. ಮೀ. ನಡೆದೇ ಬರಬೇಕು. ಮ್ಯನ್‌ಪವರ್‌ನಿಂದಲೇ ಕೆಲಸ ಮಾಡಿಸಬೇಕು ಸಾರ್”.

“ಚಾರ್ಜ್ ಆಗಿದೆಯಾ?”

“ಹೌದು ಸಾರ್”

“ಕೆಲಸ ತನಿಖೆಯಾಗಿದೆಯಾ”

“ಹೌದು ಸಾರ್”

ಸಾಹೇಬರ ಕಣ್ಣು ಕೆಂಪಗಾಯಿತು.

“ಅಲ್ರೀ, ಕೆಲಸ ಮಂಜೂರು ಮಾಡಿಸಿದಿರಿ. ಹಣವನ್ನು ಖರ್ಚು ಮಾಡಿಯಾಯಿತು. ಬಾವಿ ತೋಡಲಿಲ್ಲ. ಹೋಗಲೀ, ಎಪ್ರಿಲ್-ಮೇಯಲ್ಲಾದರೂ ತೋಡಬಹುದಿತ್ತು. ಅದನ್ನೂ ಮಾಡಲಿಲ್ಲ. ಕೆಲಸ ಆಗಿದೆ ಎಂದು ನನ್ನಿಂದಲೂ ಚೆಕ್ ಮಾಡಿಸಿದಿರಿ. ಈಗ ನಿಮ್ಮೂರಿನ ಕೆಲವು ರಾಜಕೀಯ ಪುಡಾರಿಗಳು ಬೆಂಗಳೂರಿನ ನಮ್ಮ ದೊಡ್ಡ ಸಾಹೇಬರ ಕಿವಿ ಹಿಂಡಿದ್ದಾರೆ. ಈ ಬಗ್ಗೆ ತಳ್ಳಿ ಅರ್ಜಿಯೂ ಬಂದಿದೆಯಂತೆ. ಕೆಲಸ ಮಾಡದೆ ಹಣ ತಿಂದಿದ್ದಾರೆ ಎಂದು. ಬಾವಿ ತೋಡದೆ ಹಣ ಗುಳುಂ ಎಂದು ನಾಳೆ ಪೇಪರಿನಲ್ಲೂ ಹಾಕುತ್ತಾರೆ. ಟಿ. ವಿ. ಯಲ್ಲೂ ಬಿತ್ತರಿಸುತ್ತಾರೆ. ದೊಡ್ಡ ಸಾಹೇಬರು ಬೆಂಗಳೂರಿನಿಂದ ನಿನ್ನೆ ಪೋನು ಮಾಡಿದರು. ಈ ಬಗ್ಗೆ ಅರ್ಜಂಟಾಗಿ ತನಿಖೆ ಮಾಡಿ ವಿವರವಾದ ವರದಿ ಒಪ್ಪಿಸಲು ತಿಳಿಸಿರುತ್ತಾರೆ. ನಿಮ್ಮಿಂದ ನನ್ನ ಮಾನ ಮರ್ಯಾದೆ ಹರಾಜು ಆಗುತ್ತದೆಯಲ್ಲಾ? ನೀವು ಕೆಲಸ ಮಾಡಿ ಮುಗಿಸುವ ವಿಶ್ವಾಸದಿಂದ ನಾನು ಕೆಲಸ ಆಗಿದೆ ಎಂದು ಮೆಜರ್ಮೆಂಟ್ ಪುಸ್ತಕದಲ್ಲಿ ಸಹಿ ಹಾಕಿ ಬಿಟ್ಟೆ. ಈಗ ಏನು ಮಾಡುವುದು?”

ರೇಂಜರು ನಡುಗತೊಡಗಿದರು. ಸಾಹೇಬರ ಬೈಗಳು ಜಾಸ್ತಿ ಯಾಗುತಿದ್ದಂತೆ ಅವರು ಹತ್ತಿರದ ವಿಶಾಲವಾದ ಬನ್ಪು ಮರದ ಮರೆಗೆ ಸರಿದರು. ಅವರ ಹಿಂದೆ ಲಿಂಗರಾಜು ತಲೆಮರೆಸಿಕೊಂಡರು. ಆದರೂ ಸಾಹೇಬರು ರೇಂಜರನ್ನು ಎದುರಿಗೆ ಕರೆ ಕರೆದು ಉಗಿಯುತ್ತಿದ್ದರು. ಸಾಹೇಬರ ಆರ್ಭಟ ಕಾಡಿನ ಮೌನವನ್ನು ಭೇದಿಸಿತು.

“ಸರಿ ಆ ಬಾವಿ ತೋಡಲು ನಿರ್ಧರಿಸಿದ ಸ್ಥಳ ತೋರಿಸಿ”

ಸಾಹೇಬರು ಜೀಪು ಹತ್ತಿದರು.

ಜೀಪು ಸುಮಾರು ಕಿಲೋ ಮೀಟರ್ ಮಣ್ಣಿನ ರಸ್ತೆಯಲ್ಲಿ ಓಡಿದ ಮೇಲೆ ಒಂದು ಕಡೆ ನಿಂತಿತು. ಮುಂದೆ ಬರೀ ಕಾಲ್ನಡಿಗೆ ದಾರಿ. ಸಾಹೇಬರು ನಡೆದುಕೊಂಡೇ ಹೋದರು. ಸುಮಾರು ೨ ಕಿ. ಮೀ. ನಡೆದ ಮೇಲೆ ಬಾವಿ ತೋಡುವ ಸ್ಥಳ ಸಿಕ್ಕಿತು. ಸಾಹೇಬರು ಸುತ್ತಲೂ ದೃಷ್ಟಿ ಹಾಯಿಸಿದರು. ಒಂದೆರಡು ಮುಳಿ ಹುಲ್ಲಿನ ಗುಡಿಸಲುಗಳು ಮಾತ್ರ ಅಲ್ಲಿದ್ದವು. ಮತ್ತೆ ಸ್ವಲ್ಪ ದೂರದಲ್ಲಿ ಒಂದು ಜರಿದು ಬಿದ್ದ ಕಟ್ಟಡ. ಸಾಹೇಬರು ಆ ಕಟ್ಟಡದತ್ತ ಕೈತೋರಿಸಿ ಕೇಳಿದರು. “ಏನದು?”

“ಅದು ಪ್ರೈಮರಿ ಶಾಲೆ ಸಾರ್. ಒಟ್ಟು ೧೦-೧೫ ಮಕ್ಕಳಿದ್ದಾರೆ. ಒಬ್ಬರೇ ಅಧ್ಯಾಪಕರು. ಮಕ್ಕಳ ಸಂಖ್ಯೆ ಕಡಿಮೆ. ಕುಡುಬಿ ಜನಾಂಗದವರ ಕೆಲವು ಮಕ್ಕಳು ಬರುತ್ತಾರೆ. ಅಷ್ಟೇ”

“ಮತ್ತೆ ಬಾವಿಯನ್ನು ಇಲ್ಲೇಕೆ ತೋಡಿಸುತ್ತೀರಿ” ಜನ ಸಂಚಾರ ಇಲ್ಲ. ವಾಹನ ಬರಲು ದಾರಿಯಿಲ್ಲ. ನರ್ಸರಿ ಇಲ್ಲಿ ಹೇಗೆ ಬೆಳೆಸಿದಿರಿ?”

“ಮೊದಲು ಒಂದು ಸಣ್ಣ ತೊರೆಯಿತ್ತು. ಈಗ ರೈತರು ಅಲ್ಲಲ್ಲಿ ಕಟ್ಟೆ ಕಟ್ಟಿದ ನೀರನ್ನು ಅವರ ವ್ಯವಸಾಯಕ್ಕೆ ಉಪಯೋಗಿಸುತ್ತಿದ್ದು, ನೀರು ತೊರೆಯಲ್ಲಿ ಹರಿದು ಬರುತ್ತಾ ಇಲ್ಲ. ನರ್ಸರಿ ಗಿಡಗಳು ಒಣಗಿ ಹೋಗುವ ಸಾಧ್ಯತೆಯಿದೆ ಸಾರ್. ಮೇಲಾಗಿ ಇಲ್ಲಿಯ ನರ್ಸರಿ ಗಿಡಗಳ ವೆಚ್ಚಕ್ಕೆ ಪಂಡ್ ಈ ಮೊದಲೇ ಎಲೋಟ್ ಆಗಿದೆ ಸಾರ್.”

“ಸರಿ ನರ್ಸರಿ ಗಿಡಗಳು ಎಲ್ಲಿವೆ?”

ಸ್ವಲ್ಪ ದೂರ ನಡೆದು ಸಾಹೇಬರು ಪೊಲಿತನ್ ಬ್ಯಾಗ್‌ನಲ್ಲಿದ್ದ ವಿವಿಧ ಜಾತಿಯ ಗಿಡಗಳನ್ನು ಪರಿಶೀಲಿಸಿದರು. ಗಿಡಗಳು ಚೆನ್ನಾಗಿ ಬೆಳೆದು ಬಂದಿದೆಯಾದರೂ ನೀರಿನ ಕೊರತಯಿಂದ ಸ್ವಲ್ಪ ಸೊರಗಿದೆ. ಸಾಹೇಬರು ಆಲೋಚನೆ ಮಾಡುತ್ತಿದ್ದರು. ರೇಂಜರು ಕಡತ ಹಿಡಿದುಕೊಂಡು ತಲೆತಗ್ಗಿಸಿಕೊಂಡು ಅಪರಾಧಿಯಂತೆ ನಿಂತಿದ್ದರು. ಪಾರೆಸ್ಟರ್ ಲಿಂಗರಾಜು ರೇಂಜರ ಬೆನ್ನ ಹಿಂದೆ ಸಾಹೇಬರಿಗೆ ಕಾಣದಂತೆ ನಿಂತಿದ್ದರು. ಸ್ವಲ್ಪ ಹೊತ್ತು ಮೌನ. ಸಾಹೇಬರು ನಡೆದುಕೊಂಡು ಜೀಪು ಕಡೆ ತೆರಳಿದರು. ಜೀಪು ತಲುಪುವವರೆಗೂ ಮೌನ. ಸಾಹೇಬರು ಜೀಪಿನಲ್ಲಿ ಕುಳಿತೊಡನೆ ಎಲ್ಲರೂ ದಢ ಬಢ ಅಂತ ಹಿಂದಿನಿಂದ ಜೀಪು ಹತ್ತಿದರು.

ಸಾಹೇಬರು ರೇಂಜಿನ ವಸತಿಗೃಹಕ್ಕೆ ಹಿರಿತಿರುಗಲಿಲ್ಲ. ಅಂದು ರಾತ್ರಿ ಸೆಕ್ಷನ್ ಫಾರೆಸ್ಟರರ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದರು. ರಾತ್ರಿ ‘ಬಾಟ್ಲಿ ಸಮಾರಾಧನೆ’ ಜೋರಾಗಿ ನಡೆಯುತ್ತಿತ್ತು. ಸಾಹೇಬರು ಬಾಟ್ಲಿ ಬಿಟ್ಟು ಕದಲಲಿಲ್ಲ. ರೇಂಜರು ಸಾಹೇಬರನ್ನು ಬಿಟ್ಟು ಮನೆಗೆ ಹೋಗಲಿಲ್ಲ. ರೇಂಜರು ಹೋಗದೆ ಪಾರೆಸ್ಟರ್ ಕದಲುವ ಹಾಗೇ ಇಲ್ಲ. ಪಾರೆಸ್ಟರ್ ಹೋಗದೆ ಗಾರ್ಡ್‌, ವಾಚರ್ ಹೋಗುವ ಹಾಗಿಲ್ಲ. ಸುಮಾರು ಮಧ್ಯರಾತ್ರಿ. ಸಾಹೇಬರಿಗೆ ಏನೋ ಆಲೋಚನೆ ಬಂತು. ರೇಂಜರನ್ನು ಕರೆದರು.

“ಅಂದಾಜು ಪಟ್ಟಿ ಎಷ್ಪಕ್ಕೆ ಮಂಜೂರಾಗಿದೆ?”

“ಸರ್, ಬಾವಿ ತೋಡಿ ಕಲ್ಲು ಕಟ್ಟೆ, ಸಂಪೂರ್ಣಗೊಳಿಸಲು ರೂ. ೬೫,೦೦೦ ಕ್ಕೆ ಅಂದಾಜು ಪಟ್ಟಿ ಮಂಜೂರಾಗಿದೆ.

“ಎಷ್ಟು, ಹಣ ಚಾರ್ಜು ಮಾಡಿದಿರಿ?”

“ಬಾವಿ ತೋಡಿದ ಕೆಲಸದ ವರೆಗೆ ರೂ. ೩೫,೦೦೦ ರವರೆಗೆ ಚಾರ್ಜು ಆಗಿದೆ ಸಾರ್”

ಸಾಹೇಬರು ರೇಂಜರನ್ನು ಹತ್ತಿರ ಕರೆದರು. ಅವರ ಕಿವಿಯಲ್ಲಿ ಏನೋ ಉಸುರಿದರು. ರೇಂಜರು ತಲೆಯಾಡಿಸಿದರು.

“ಈ ಕೆಲಸ ನಾಳೆ ಬೆಳಿಗ್ಗೆ ಮುಗಿಸಿ, ಮದ್ಯಾಹ್ನದ ಒಳಗೆ ನನ್ನನ್ನು ನನ್ನ ಕಛೇರಿಯಲ್ಲಿ ಕಾಣಬೇಕು”

“ಸರಿ ಸಾರ್”, ಸಾಹೇಬರ ಅನುಮತಿ ಪಡೆದು ರೇಂಜರು ಮಲಗಲು ಹೋದರು.

ರಾತ್ರಿಯಿಡೀ ರೇಂಜರು ಮಲಗಲಿಲ್ಲ . ಬೆಳಿಗ್ಗೆ ಎದ್ದವರೇ ಸಾಹೇಬರು ರಾತ್ರಿ ಹೇಳಿದ ಡ್ಯೂಟಿಯನ್ನು ಮುಗಿಸಿ, ಮಧ್ಯಾಹ್ನದ ಒಳಗಾಗಿ ಪ್ರಯಾಣ ಬೆಳೆಸಿ ಕಛೇರಿಯಲ್ಲಿ ಸಾಹೇಬರನ್ನು ಕಂಡರು. ರೇಂಜರು ತಂದ ವರದಿಯನ್ನು ನೋಡಿದ ಸಾಹೇಬರ ಮುಖದಲ್ಲಿ ನಗು ಅರಳಿತು. ಮ್ಯಾನೇಜರನ್ನು ಕರೆಯಿಸಿ. ರೂ. ೧೫,೦೦೦ ಕ್ಕೆ ಚೆಕ್ ಬರೆದು ರೇಂಜರಿಗೆ ಕೊಟ್ಟು ಅದನ್ನು ಕ್ಯಾಶ್ ಮಾಡಿ, ತಮ್ಮ ಮನೆಯಲ್ಲಿ ಕೊಡಲು ಹೇಳಿದರು. ರೂ. ೧೫,೦೦೦ ಕ್ಕೆ ರೇಂಜರಿಂದ ಒಂದು ಅಂದಾಜು ಪಟ್ಟಿ ತಯಾರಿಸಿ, ಮಂಜೂರು ಮಾಡಿಕೊಟ್ಟರು. ಮೆಚರ್‌ಮೆಂಟ್ ಬುಕ್‌ನಲ್ಲಿ ರೇಂಜರ ಕೈಯಿಂದ ದಾಖಲು ಮಾಡಿಸಿದರು. ಮತ್ತೆ ಕೆಲಸ ೧೦೦% ತೃಪ್ತಿದಾಯಕವಾಗಿ ಮುಗಿಸಿದ್ದಾರೆ ಎಂದು ಬರೆದು ಸಹಿ ಹಾಕಿ ರೇಂಜರಿಗೆ ಕೊಟ್ಟರು ಹಾಗೂ ರೇಂಜರನ್ನು ಮನೆಗೆ ಹೋಗಲು ಹೇಳಿದರು. ನಗುನಗುತ್ತಾ ಒಂದು ಸೆಲ್ಯೂಟ್ ಹೊಡೆದು ರೇಂಜರು ಮನೆಗೆ ತರಳಿದರು.

ಮರುದಿನ ಬೆಳಿಗ್ಗೆ ಸಾಹೇಬರು ಮ್ಯಾನೇಜರನ್ನು ಕರೆದು ಬೆಂಗಳೂರಿನ ದೊಡ್ಡ ಸಾಹೇಬರಿಗೆ ಒಪ್ಪಿಸಲು ಒಂದು ದೊಡ್ದ ವರದಿಯನ್ನು ತಯಾರು ಮಾಡಿದರು. ಅದರ ವಿವರ ಈ ರೀತಿ ಇದೆ.

ತಾವು ದೂರವಾಣಿಯಲ್ಲಿ ನಿರ್ದೇಶನ ನೀಡಿದಂತೆ ನಾನು ಖುದ್ಧಾಗಿ ಸ್ಥಳ ತನಿಖೆ ಮಾಡಿದ್ದೇನೆ. ನರ್ಸರಿಯ ಪಕ್ಕದಲ್ಲಿದ್ದ ತೊರೆಯ ನೀರು ಬೇಸಿಗೆ ಸಮಯದಲ್ಲಿ ಸಂಪೂರ್ಣ ಬತ್ತಿ ಹೋಗುತ್ತಿದ್ದು, ನರ್ಸರಿ ಗಿಡಗಳಿಗೆ ನೀರುಣಿಸಲು ಅತೀ ಅಗತ್ಯವಾಗಿ ಒಂದು ಬಾವಿಯ ಅವಶ್ಯಕತೆಯಿತ್ತು. ಅದೇ ರೀತಿ ತುರ್ತಾಗಿ ಬಾವಿ ತೋಡಲು ರೇಂಜರಿಗೆ ತಿಳಿಸಿ, ರೂ. ೬೫,೦೦೦ ಕ್ಕೆ ಅಂದಾಜು ಪಟ್ಟಿಯನ್ನು ಮಂಜೂರು ಮಾಡಿರುತ್ತೇನೆ. ರೇಂಜರು ಒಂದು ತೆರೆದ ಬಾವಿಯನ್ನು ತೋಡಿರುತ್ತಾರೆ. ಇದಕ್ಕೆ ತಗಲಿದ ವೆಚ್ಚ ಸುಮಾರು ರೂ. ೩೫,೦೦೦ ಆಗಿದ್ದು, ಅಷ್ಟಕ್ಕೆ ಚಾರ್ಜು ಮಾಡಲಾಗಿದೆ. ಆದರೆ ಬಾವಿಯಲ್ಲಿ ನೀರು ಸಿಗದೆ ಬಂಡೆಕಲ್ಲು ಅಡ್ಡ ಬಂದುದರಿಂದ ಬಾವಿಯ ಕೆಲಸ ಪೂರ್ತಿ ಮಾಡಲಿಲ್ಲ. ಆದುದರಿಂದ ಕಲ್ಲು ಕಟ್ಟುವ ಕೆಲಸ, ದಂಡೆ ನಿರ್ಮಾಣ ಬಾಕಿ ಉಳಿದಿತ್ತು. ತೆರೆದ ಬಾವಿಯ ಪಕ್ಕದಲ್ಲಿ ಪ್ರೈಮರಿ ಶಾಲೆಯಿದ್ದು, ಸಣ್ಣ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದು ಈ ತೆರೆದ ಬಾವಿಯು ಅವರ ಜೀವಕ್ಕೆ ಅಪಾಯ ಒಡ್ಡುತಿತ್ತು. ಮೇಲಾಗಿ ದಾರಿಹೋಕರು ರಾತ್ರಿ ಹೊತ್ತು ಇದರ ಪಕ್ಕದಲ್ಲಿಯೇ ಹಾದು ಹೋಗುತ್ತಿದ್ದು ರಸ್ತೆಗೆ ವಿದ್ಯುತ್ ವ್ಯವಸ್ಥೆ ಇಲ್ಲವಾದುದರಿಂದ ಅವರ ಜೀವಕ್ಕೂ ಸಂಚಕಾರವಾಗುತಿತ್ತು. ಈ ಕುರಿತು ಶಾಲೆಯ ಆಡಳಿತ ವರ್ಗವು ಈ ನೀರಿಲ್ಲದ ತೆರೆದ ಬಾವಿಯನ್ನು ಶೀಘ್ರ ಮುಚ್ಚಲು ಠರಾವು ಮಂಡಿಸಿರುತ್ತಾರೆ. ಅದರ ಪ್ರತಿ ಲಗತ್ತಿಸಿದೆ. ಸಾರ್ವಜನಿಕರಿಂದಲೂ ಆಕ್ಷೇಪಗಳು ಬರತೊಡಗಿದವು. ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ತೆರೆದ ಬಾವಿಯನ್ನು ಶೀಘ್ರ ಮುಚ್ಚಲು, ರೇಂಜರಿಗೆ ಆದೇಶ ನೀಡಿರುತ್ತೇನೆ. ಅದರಂತೆಯೇ ರೇಂಜರು ಈ ತೆರೆದ ಬಾವಿಯನ್ನು ಮುಚ್ಚಿಸಿರುತ್ತಾರೆ. ಇದಕ್ಕೆ ರೂ. ೧೫,೦೦೦ ವೆಚ್ಚ ತಗಲಿದ್ದು, ಅಂದಾಜು ಪಟ್ಟಿ ಮಂಜೂರು ಮಾಡಿರುತ್ತೇನೆ. ಅಲ್ಲದೆ ಕೆಲಸವನ್ನು ತನಿಖೆ ಮಾಡಿರುತ್ತೇನೆ. ಮತ್ತೆ ಕೆಲಸವು ಸಂಪೂರ್ಣ ತೃಪ್ತಿ ದಾಯಕವಾಗಿದೆ. ಬಾವಿಯನ್ನು ಸಂಪೂರ್ಣ ಮುಚ್ಚಲಾಗಿದ್ದು ಸಾರ್ವಜನಿಕರಿಗಾಗಲೀ, ಶಾಲಾಮಕ್ಕಳಿಗಾಗಲೀ ಯಾವುದೇ ತೊಂದರೆಯಾಗಿಲ್ಲ. ಅರ್ಜಿಯನ್ನು ‘ಸತ್ಯಕ್ಕೆ ದೂರ’ ಎಂಬ ನೆಲೆಯಲ್ಲಿ ತಳ್ಳಿ ಹಾಕಬಹುದು.

ವರದಿಯನ್ನು ಅಂದೇ ಸಂಜೆ ‘ವಿಶೇಷ ದೂತ’ ನ ಮುಖಾಂತರ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂತದಯೆ
Next post ಮಿಂಚುಳ್ಳಿ ಬೆಳಕಿಂಡಿ – ೩೭

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys