ಶ್ರಾವಣದ ಶನಿವಾರ ನಮ್ಮ ತಂದೆಯು ನಾವು
ಅಣ್ಣತಮ್ಮಂದಿರೆಲ್ಲ ಹಣೆಗೆ ನಾಮವ ತಿದ್ದಿ,
ತಾಳ ತಂಬೂರಿ ಮದ್ದಲೆ ವಾದ್ಯಗಳ ಜೊತೆಗೆ
ಎಲ್ಲ ದೇವರ ನಾಮಗಳ ಬಲ್ಲ ರೀತಿಯಲಿ
ಹಾಡುತ್ತ, ‘ಸಂಚಾರ’ ಹೊರಟು, ಮನೆ ಮನೆಗೂ
ಹೋಗಿ ಬಿಕ್ಕೆಯ ಬೇಡಿ ತಂದ ಬೀಯವನೆಲ್ಲ
ಕಡೆಯ ಶನಿವಾರ ಬ್ರಾಹ್ಮಣ ಸುಮಂಗಲಿಯರಿಗೆ
ಸಂತರ್ಪಣೆಯ ಗೈದು, ಮೆನತನದ ಪದ್ಧತಿಯ
ಪರಿಪಾಲಿಸುವ ಕಾಲವೊಂದಿತ್ತು. ಆಗೊಮ್ಮೆ
ನಡೆದ ಅತ್ಯಲ್ಪ ಸಂಗತಿಯು ಈ ಶನಿವಾರ
ನೆನಪಾಯ್ತು, ‘ಚೆಲ್ಲಿದಾ ಹಾಲನ್ನು ತುಳಿಯದಿರಿ’
ಎಂದೆನ್ನ ಮನೆಯಾಕೆ ಮಕ್ಕಳಿಗೆ ನುಡಿದಂದು.
ಕಿರಿದು ಸಂಗತಿ, ಆದರದರ ತತ್ವವು ಹಿರಿದು
ಎಂದೆನೆಗೆ ತೋರುವುದು: ಅದಕಾಗಿ ಈ ಲೇಖ.

ತಿರುಮಲಾಚಾರ್‍ಯರೆಂಬವರು ಶ್ರೀವೈಷ್ಣವರು;
ನಮ್ಮ ಮೆನಯೆದುರಿನೊಳೆ ಅವರ ಮನೆ; ಎಪ್ಪತ್ತು
ವರ್ಷಗಳ ಮುಪ್ಪಿನಲ್ಲಿಯು ಮುಖದಿ ತೇಜಸ್ಸು
ನೆಲೆಸಿತ್ತು; ಕುಗ್ಗಿದ್ದೊಡೇನೊಡಲು, ಅಂತೆಯೇ
ಬಗ್ಗಿದ್ದೋಡೇಂ ಬೆನ್ನು? ಕುಗ್ಗಿದ್ದುದಿಲ್ಲ ಬಲ,
ಬಾಗಿದ್ದುದಿಲ್ಲ ಛಲ: ತಮ್ಮ ಮಹಡಿಯ ಮನೆಯ
ಬಾಡಿಗೆಗೆ ಕೊಟ್ಟು, ತಾವೊಂದು ಕೋಣೆಯಲ್ಲಿದ್ದು
ಒಂಟಿ ಬಾಳನು ಬಾಳುತಿದ್ದರವರನುದಿನವು;
ಹೋದ ಹೆಂಡತಿಗಾಗಿ ಕೊರಗುವರು ಒಮ್ಮೊಮ್ಮೆ;
ಎಲ್ಲೊ ಕಣ್ಮರೆಯಾದ ದತ್ತಪುತ್ರನ ನೆನೆದು
ಮರುಗುವರು ಮತ್ತೊಮ್ಮೆ. ‘ಬಹು ಧನಿಕ, ಬಹು ಜಿಪುಣ;
ಯಾರಿಗಾಗನಿತು ಧನವನು ಕೂಡಿ ಕಾಪಿಡುವ,
ಏತಕಾಗೊಂಟಿಯಲಿ ದೇಹವನು ತೇಯುವನು?
ಬುದ್ಧಿಯಿಲ್ಲದ ಮುದುಕ’ – ಎನ್ನುವರು ಬೀದಿಜನ.
ಆದರಾತನ ದೈವಭಕ್ತಿ, ಮಡಿ, ಆಚಾರ,
ನಿತ್ಯನೇಮಗಳು-ಇವು ಎಲ್ಲರಿಗೆ ಬಹು ಮೆಚ್ಚು.
ಜಿಪುಣನೆನಿಸಿದ್ದರೂ ತಿರುಕರಿಗೆ ಕೊಡುವ ಕೈ.

ಈ ಹಿರಿಯರಿಗೆ ನಮ್ಮ ತಂದೆಯಲಿ ವಿಶ್ವಾಸ,
ಬಹಳ ಗೌರವ; ನಾವು ಸಂಚಾರ ಹೊರಟಂದು,
ನಮಗಾಗಿ ನೇಮದಲಿ ಭಕ್ತಿಯಲಿ ಕಾದಿದ್ದು,
ಹಿರಿಯರಾದರು ತಾವು, ನಮ್ಮ ಹೋದೊಡನೆಯೇ
ನಮ್ಮ ತಂದೆಯ ಕಾಲಿಗೆರಗುವರು-ಹರಿದಾಸ
ಎಲ್ಲರಿಗು ಹಿರಿಯನೆಂದವರೆಣಿಕೆ; ಅಂತೆರಗಿ,
ಸೇರಿನಳತೆಯ ಬಿದಿರಿನಂಡೆ ಗೋಪುರ ತುಂಬೆ
ತುಂಬಿ ಸಣ್ಣಕ್ಕಿಯನು ತಂದೆಮ್ಮ ಜೋಳಿಗೆಗೆ
ಬಲು ಎಚ್ಚರಿಕೆಯಿಂದ ಸುರಿಯುವುರು; ಆದೊಡೇಂ,
ನಾಲ್ಕು ಅಕ್ಕಿಯ ಕಾಳು ನೆಲದಮೇಲುದುರುವುದು;
ಅದನವರು ಇಮ್ಮಡಿಯ ಎಚ್ಚರಿಕೆಯಿಂದಾಯ್ದು
ನಮ್ಮ ಜೋಳಿಗೆಗೋ ತಮ್ಮ ಬಿದಿರಂಡೆಗೋ
ಹಾಕುವರು: ಇದ ನೋಡನೋಡುತ್ತ ನಮ್ಮಲ್ಲಿ
ಅವರು ಜಿಪುಣರೆ ಅಹುದು ಎಂಬೆಣಿಕೆ ಬಲವಾಯ್ತು.

ಸಂಚಾರಕೆಮ್ಮೊಡನೆ ಸುಬ್ಬಣ್ಣನವರೆಂಬ
ನಮ್ಮ ತಂದೆಯ ಗೆಳೆಯರೊಮ್ಮೆಯೂ ತಪ್ಪದೆಯೆ
ಬರುತಲಿದ್ದರು; ಅವರ ಪ್ರಕೃತಿ ಹಾಸ್ಯದ ಪ್ರಕೃತಿ;
ಹೋದ ಮನೆಯಲ್ಲೆಲ್ಲ ಹಾಡುವರು, ಇಲ್ಲದಿರೆ
ಏನಾದರೂ ಹಾಸ್ಯ ಮಾಡುವರು. ಅವರೊಮ್ಮೆ,
ತಿರುಮಲಾಚಾರ್‍ಯರಾ ಅಕ್ಕಿ ಆಯುವ ಕೆಲಸ
ಕಂಡು-‘ಸ್ವಾಮೀ, ತಿರುಮಲಾಚಾರ್‍ಯರೇ, ನೀವು
ದಾನದಲಿ ಧಾರಾಳ ತೋರುವಿರಿ; ಅದು ಸರಿಯೆ;
ನಮಗೆ ಸೇರಕ್ಕಿಯನು ನೀಡುವಿರಿ: ಸಂತೋಷ;
ಇರುವೆಗಳ ವಿಷಯದಲಿ ಭೂತದಯೆಯನು ತೊರೆದು,
ಅವಕ್ಕಿಲ್ಲದಂತೇಕೆ ಬಿದ್ದ ಅಕ್ಕಿಯನಾಯ್ದು
ನಮಗಿಕ್ಕುವಿರಿ? ನಮಗೆ ಸಾಕು ಮೂರೇ ಪಾವು.
ಮೂರು ಕಾಳವಕಿರಲಿ.’

ಈ ಕೊಂಕುನುಡಿಗೇಳಿ
ಮುದುಕ ಕೋಪಿಸಲಿಲ್ಲ; ಇಂತು ನುಡಿದರು ನಗುತ:
‘ಭೂತದಯೆ ತೋರುವುದು ಬಹು ಕಷ್ಟ, ಸುಬ್ಬಣ್ಣ.
ನಾವು ಹಾಕಲಿ ಬಿಡಲಿ, ಅಡಿಗೆಮನೆಯುಗ್ರಾಣ
ಮೊದಲಾಗಿ ಎಲ್ಲೆಲ್ಲೂ ಇರುವೆಗಳೆ ತುಂಬಿಹವು,
ತಮ್ಮ ಪಾಲಿನ ತಿನಿಸ ಕೇಳದೆಯೆ ಕೊಳ್ಳುವುವು.
ಹುಟ್ಟಿಸಿದ ಹರಿ ಇರುವೆಗಾಹಾರ ತೋರದೆಯೆ
ಹೋಗುವನೆ? ನಮ್ಮಿಂದ ಇರುವೆಗಳು ಬದುಕುವುವು
ಎಂಬೆಣಿಕೆ ಬರಿ ಹಮ್ಮು. ಅಂತವಕೆ ಆಹಾರ
ನೀಡಬೇಕೆಂಬೆಯೋ? ಇರುವೆಗೂಡಿನ ಬಳಿಗೆ
ಹೋಗಿ, ಹಿಡಿ ನುಚ್ಚೊ ಸಕ್ಕರೆಯೊ ಏನಾದರೂ
ಚೆಲ್ಲಿ ಬಾ. ನಡೆವ ಕಡೆ ನಾಲ್ಕಕ್ಕಿ ಕಾಳುಳಿಸಿ,
ಅದಕಾಗಿ ಹರಿದು ಬಹ ಹತ್ತಿರುವೆಗಳ ನಾವು
ಕಂಡೊ ಕಾಣದೆಯೋ ತುಳಿದವನು ಕೊಂದೂ ಕೂಡ
ಅರಿಯದಿರುವುದೆ ಭೂತದಯೆಯೇನು, ಸುಬ್ಬಣ್ಣ?’

ಸುಬ್ಬಣ್ಣನವರಿದಕೆ ಉತ್ತರವ ಕೊಡಲಿಲ್ಲ:
ಅಂದಿನಿಂದ, ಶನಿವಾರ ಸಂಚಾರ ಕಾರ್ಯದಲಿ
ಉದುರಿದಕ್ಕಿಯ ಕಾಳನಾಯ್ವ ಹೊಸ ಕೆಲಸವನು
ಕೈಕೊಂಡು ನಡಸುತ್ತ ಬರತೊಡಗೆ, ‘ಸುಬ್ಬಣ್ಣ
ಬಲು ಜಿಪುಣ’ ಎಂಬ ಹೊಸ ಬಿರುದವರಿಗಾಯ್ತು. ಆ
ಬಿರುದನುಡಿ ಕೇಳಿ ನಸುನಗುತಿದ್ದರವರು.
*****