ಇಳಾ – ೧

ಇಳಾ – ೧

ಚಿತ್ರ: ರೂಬೆನ್ ಲಗಾಡಾನ್

ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ. ಪ್ರತಿಸಲ ಮಳೆ ಬಂದಾಗಲೂ ಮಳೆಯ ಮೊದಲ ಭುವಿಯ ಸ್ಪರ್ಶದ ಆ ಸುವಾಸನೆಯಿಂದ ಹನಿ ಹನಿ ಬೀಳುವ ಮಳೆಯಲ್ಲಿ ಕುಣಿದು ಕುಪ್ಪಳಿಸುವ ಸಿನಿಮಾ ನಾಯಕನ ಮನಸ್ಥಿತಿ ಇದ್ದರೂ, ಹಾಗೆ ಕುಣಿಯಲಾರದೆ ಮಳೆಯನ್ನೆ ದಿಟ್ಟಿಸುತ್ತ ಆ ಮಳೆಯಲ್ಲಿ ನೆನೆಯುತ್ತ ತೋಟ ಸುತ್ತುವ ಆನಂದ, ಬಿರುಮಳೆಯನ್ನು ಮನೆಯೊಳಗೆ ಕುಳಿತು ಬಿಸಿ ಬಿಸಿ ಕಾಫಿ ಹೀರುತ್ತ ಕಿಟಿಕಿಯಿಂದ ನೋಡುತ್ತ ಮೈಮರೆಯುವ ಪರಿ, ಗುಡುಗು-ಮಿಂಚು ಕರೆತರುವ ಆರ್ಭಟಿಸುವ ಮಳೆ, ಆ ರುದ್ರ ರಮಣೀಯ ನರ್ತನದ ಮಳೆ, ಮಳೆಯ ಪರಿ ಪರಿಯ ಅವತಾರಗಳೆಲ್ಲವನ್ನು ಆಸ್ವಾದಿಸುತ್ತಿದ್ದ ಮೋಹನನಿಗೆ ಈಗ ಈ ಮಳೆಯ ವೈಭೋಗ ಸವಿಯುವ ಮನಃ ಸ್ಥಿತಿಯಿಂದ ದೂರವೇ ಉಳಿದಿದ್ದಾನೆ. ಎದೆ ಮೇಲಿನ ಹೆಬ್ಬಂಡೆ ಕರಗುವ ದಾರಿಯೇ ಕಾಣದಂತಾಗಿ ಕ್ಷಣಕ್ಷಣಕ್ಕೂ ಮಂಕಾಗುತ್ತಲೇ ಇದ್ದಾನೆ. ಅದರ ಪರಿವೆ ಇಲ್ಲದೆ ನೀಲಾ, ಗಂಡನ ಈ ಮೌನಕ್ಕೆ ಅರ್ಥ ಹುಡುಕುವ ಯತ್ನ ಮಾಡದೆ ತನ್ನದೇ ಧಾಟಿಯಲ್ಲಿ ಗೊಣಗುಡುತ್ತಲೇ ಇದ್ದಾಳೆ.

ಪ್ರತಿಬಾರಿಯಂತೆ ಈ ಬಾರಿಯೂ ಮಳೆಯನ್ನು ನೋಡುತ್ತ ಮೈ ಮರೆತಿದ್ದಾನೆಂದೇ ಭಾವಿಸಿ – ಈ ಮಳೆ ಬಂದು ಬಿಟ್ರೆ ಸಾಕು ಎಂದೂ ಕಂಡಿಲ್ಲದಂತೆ ನೋಡುತ್ತ ಕುಳಿತುಬಿಟ್ರೆ ಆಯ್ತು, ಮುಂದಿನ ಕೆಲಸವೆಲ್ಲ ಬಾಕಿಯೇ, ಯಾಕಾದ್ರೂ ಹೀಗೆ ಮಳೆ ಸುರಿಯುತ್ತೋ – ಅನ್ನುವಷ್ಟು ಬೇಸರ ತರಿಸೋ ಈ ಮಳೆಯಲ್ಲಿ ಅಂಥ ಆನಂದ ಇರುವುದಾದರೂ ಏನು? ಆಚೀಚೆ ಕಾಣಿಸಲಾರದಷ್ಟು, ಒಂದೇ ಸಮ ಸುರಿಯುವ ಮಳೆಯಲ್ಲಿ ಅದೇನು ಸೌಂದರ್ಯ ಅಡಗಿದೆಯೋ… ಹೊರ ಹೋಗುವಂತಿಲ್ಲ, ಒಳ ಇರುವಂತಿಲ್ಲ. ಎಲ್ಲೆಲ್ಲೂ ಮಳೆ. ಮಳೆ ನಿಂತು ಆಕಾಶ ಶುಭ್ರವಾದರೆ ಸಾಕು ಎಂದು ನಾನು ಕಾಯುವಾಗ ಮಳೆ ಹೀಗೇ ಇರಬಾರದೆ ಎಂದು ಬೇಡುವ ಮೋಹನ, ಒಳ್ಳೆ ಜೋಡಿ ನಮ್ಮದು ಎಂದು ನಕ್ಕು ‘ಮಾರಾಯರೇ, ಎದ್ದೇಳಿ ನಿಮ್ಮ ಮಳೆ ಎಲ್ಲೂ ಹೋಗಲ್ಲ, ತಿಂಡಿ ತಿಂದು ತೋಟಕ್ಕೆ ಹೋಗಿ ಬನ್ನಿ, ಕೆಸುವಿನ ಸೊಪ್ಪು ಬೇಕು, ಮಳೇಲೇ ನೆನ್ಕೊಂಡು ಆನಂದ ಪಡ್ತ ಸೊಪ್ಪು ಕಿತ್ಕೊಂಡು ಬನ್ನಿ’ ಎಂದು ಎಚ್ಚರಿಸಿದಳು.

ಹೆಂಡತಿಯತ್ತ ಒಮ್ಮೆ ನೋಡಿ ಮತ್ತೇ ಕಿಟಿಕಿಯತ್ತಲೇ ದೃಷ್ಟಿ ನೆಟ್ಟ ಮೋಹನ ಮತ್ತೆ ಅಲ್ಲೇ ಕಳೆದುಹೋದ.

‘ಮೋಹನ ಏನಾಗಿದೆ ನಿಮ್ಗೆ? ಯಾವ ವಾರಾನೂ ಸಂತೆ ತಪ್ಪಿಸಿದವರಲ್ಲ. ಎಂತ ಮಳೆ ಸುರೀತಾ ಇದ್ರೂ ಕುಣಿಕ್ಕೊಂಡು ಹೋಗಿ ಸಾಮಾನು ತರ್ತಾ ಇದ್ರಿ- ಈಗ ನೋಡಿ ಮನೆಯಲ್ಲಿ ಏನೂ ತರಕಾರಿ ಇಲ್ಲ. ಇದ್ದ ತರಕಾರಿ ನೆನ್ನೇಗೆ ಮುಗೀತು – ಈಗ ಏನಡಿಗೆ ಮಾಡ್ಲಿ. ಮೋಹನ ಎದ್ದು ಹೋಗಿ ಮೊದ್ಲು’ ಸಣ್ಣಗೆ ರೇಗಿದಳು.

ಅಷ್ಟರಲ್ಲಿ ಮೊಬೈಲ್ ರಿಂಗಾಯಿತು. ಪಟಕ್ಕನೆ ಮೊಬೈಲ್ ಎತ್ತಿಕೊಂಡ ಮೋಹನ ‘ಹಲೋ’ ಎಂದ. ಯಾರದು ಫೋನ್ ಅಂತ ಕಿವಿಯನ್ನ ಅತ್ತಲೇ ಕೇಂದ್ರೀಕರಿಸಿದ ನೀಲಾಗೆ ಒಂದೂ ಮಾತನಾಡದೆ ಕೇಳಿಸಿಕೊಳ್ಳುತ್ತಿದ್ದ ಮೋಹನನ ರೀತಿ ಹೊಸದೆನಿಸಿತು. ಮುಖದ ಭಾವಗಳಷ್ಟೆ ಬದಲಾಗುತ್ತಿದೆ! ಒಂದು ಮಾತೂ ಹೊರಬಿದ್ದಿಲ್ಲ… ಸುಮಾರು ಹತ್ತು ನಿಮಿಷ ಹಾಗೆ ಫೋನ್ ಹಿಡಿದು ನಿಂತಿದ್ದ. ಅಲ್ಲಿಂದ ಕಟ್ ಮಾಡಿದರು ಅಂತ ಕಾಣುತ್ತೆ, ಮೊಬೈಲನ್ನು ಸೋಫದ ಮೇಲೆ ಎಸೆದು ಅಲ್ಲಿಯೇ ಕುಕ್ಕರಿಸಿ ತಲೆಯನ್ನು ಬಲವಾಗಿ ಹಿಡಿದುಕೊಂಡದ್ದನ್ನು ಕಂಡು ಗಾಬರಿಯಿಂದ ನೀಲಾ ‘ಮೋಹನ್ ಯಾರದು ಫೋನ್, ಏನಾಯ್ತು, ಯಾಕೆ ಹೀಗೆ ಕೂತ್ಕೊಂಡು ಬಿಟ್ರಿ’ ಎಂದು ಹತ್ತಿರ ಬಂದು ಕಳಕಳಿಯಿಂದ ಕೇಳಿದಳು. ತಲೆ ಎತ್ತಿದ ಮೋಹನ್ ಒಮ್ಮೆ ದೀರ್ಘವಾಗಿ ಅವಳತ್ತ ನೋಡಿದ. ‘ನನ್ನ ಫ್ರೆಂಡ್‌ದು ಫೋನ್, ಕಾಫಿ ರೇಟ್ ಮತ್ತೆ ಇಳಿದಿದೆಯಂತೆ’ ಎಂದ ಮೆಲ್ಲಗೆ. ‘ಅಷ್ಟೇನಾ ನಾನು ಏನೋ ಅಂತ ಗಾಬರಿ ಆಗಿಬಿಟ್ಟಿದ್ದೆ. ಹೋಗ್ಲಿ ಬಿಡಿ ಎಲ್ಲರಿಗೂ ಆಗಿದ್ದು ನಮಗೂ ಆಗುತ್ತೆ, ಮುಂದೆ ಜಾಸ್ತಿ ಆದ್ರೂ ಆಗಬಹುದು. ಅದನ್ನೆ ದೊಡ್ಡದು ಮಾಡಿಕೊಂಡು ಆಕಾಶವೇ ಕಳಚಿ ಬಿದ್ದೋರ ತರ ಆಡಬೇಡಿ. ನಾಳೆ ಅಗಲಟ್ಟಿ ಎಸ್ಟೇಟ್ ಮನೋಹರರ ಮಗಳ ಮದ್ವೆ, ಲಾಕರಿನಿಂದ ಒಡವೆ ತಗೊಂಡು ಬಂದುಬಿಡಿ, ನಾಲ್ಕು ಸೆಟ್ಟನ್ನೂ ತನ್ನಿ, ದೇವರಕಾರ್ಯ, ಮದ್ವೆ, ಆರತಕ್ಷತೆ, ಬೀಗರೂಟ ಅಂತ ಬೇಕಾಗುತ್ತೆ. ಕಾರನ್ನ ಈಗ್ಲೆ ರಿಪೇರಿಗೆ ಬಿಟ್ಟಿದ್ದೀರಿ, ಮದ್ವೆಗೆ ಹೇಗೆ ಹೋಗೋದು. ಇವತ್ತೆ ಕೊಡು ಅಂತ ಕೂತ್ಕೊಂಡು ರಿಪೇರಿ ಮಾಡಿಸಿಕೊಂಡು ಬನ್ನಿ. ಆಯ್ತಾ ಇಲ್ಲದೆ ಇದ್ರೆ ಅವನದೆ ಯಾವುದಾದರೂ ಕಾರು ಇದ್ರೆ ಇಸ್ಕೊಂಡು ಬನ್ನಿ, ಆಯ್ತಾ, ಹೇಳಿದ್ದಲ್ಲ ನೆನಪಿದೆ ಅಲ್ವಾ, ಏಳಿ’ ಬಲವಂತಿಸಿದಳು.

ಮೋಹನ ಯಾವತ್ತು ಈ ರೀತಿ ತಲೆ ಕೆಡಿಸಿಕೊಂಡವನಲ್ಲ- ಅವನು ಈ ರೀತಿ ಕುಳಿತಿರುವುದನ್ನು ನೋಡಲಾರದ ಬೇರೇನೂ ವಿಷಯ ತೆಗೆದು ಕಾಫಿ ರೇಟಿನ ವಿಷಯದಿಂದ ಹೊರಬರಲಿ ಎಂದಾಶಿಸಿದಳು. ಯಾಕೋ ಈ ಬಾರಿ ಏಟಿನ ಮೇಲೆ ಏಟು. ಶುಂಠಿ ಬೆಳೆದು ಎಲ್ಲರೂ ಲಕ್ಷ ಲಕ್ಷ ಬಾಚಿಕೊಳ್ತಾ ಇರುವಾಗ, ನಮ್ಮ ಗ್ರಹಚಾರಕ್ಕೆ ಶುಂಠಿನೂ ಕೈಕೊಡ್ತು. ಬೇಡ ಬೇಡ ಅಂತ ಎಷ್ಟು ಹೇಳಿದ್ರೂ ಕೇಳದೆ ಶುಂಠಿ ಹಾಕಿ ನಾಲ್ಕೈದು ಲಕ್ಷ ಸುರಿದ್ರು. ಆದ್ರೆ ಭೂಮಿಯಿಂದ ಒಂದು ಪೀಸು ಕೂಡ ಶುಂಠಿ ತೆಗೆಯಲಿಲ್ಲ. ಅದನ್ನು ಕೀಳಿಸಿದ ಖರ್ಚು ಕೂಡ ಹುಟ್ಟಿಲ್ಲ ಅಂತ ಕೈ ಚೆಲ್ಲಿಬಿಟ್ರು. ಮರ್ಯಾದೆಯಾಗಿ ಕಾಫಿ ಬೆಳ್ಕೊಂಡಿದ್ರೆ ಸಾಕಾಗಿತ್ತು. ಅದ್ಯಾಕೆ ದುಡ್ಡು ಮಾಡಬೇಕು ಅಂತ ಹೊರಟರೋ, ಕೈ ಹಾಕಿದ್ದು ಮಣ್ಣಿಗೆ ಅಂತ ಗೊತ್ತಾದಲಾಗಿನಿಂದ ಸ್ವಲ್ಪ ಮಂಕಾಗಿಯೇ ಇದ್ದಾರೆ. ಏನು ಮಾಡೋದು, ದುಡ್ಡು ಹೋದರೆ ಹೋಯ್ತು ಮುಂದೆ ಹೀದಾಗದಂತೆ ಎಚ್ಚರಿಕೆ ವಹಿಸಿದರಾಯಿತು. ಕಾಫಿ ರೇಟು ಬೇರೆ ಬಿದ್ದುಹೋಗಿದೆ. ಈ ವರ್ಷ ಸ್ವಲ್ಪ ಕಷ್ಟವೇ, ಮುಂದೆ ಯೋಚಿಸಲು ಆತಂಕವೆನಿಸಿ ಸುಮ್ಮನಾಗಿಬಿಟ್ಟಳು.

ಅಷ್ಟರೊಳಗೆ ಮೋಹನ ಡ್ರೆಸ್ ಬದಲಿಸಿಕೊಂಡು ಬಂದು ‘ಸಕಲೇಶಪುರಕ್ಕೆ ಹೋಗಿಬರ್ತೀನಿ, ಮಳೆ ಸ್ವಲ್ಪ ಕಡಿಮೆ ಆಗಿದೆ’ ಅಂತ ಹೇಳಿ ಹೊರಬಂದು ಬೈಕ್ ತೆಗೆದನು. ‘ನಾನು ಹೇಳಿದ್ದೆಲ್ಲ ನೆನಪಿದೆಯಾ, ಮೊದ್ಲು ಮೆಕಾನಿಕ್ ಹತ್ರ ಹೋಗಿ ಕಾರು ರೆಡಿ ಮಾಡಿಸಿ, ಆಮೇಲೆ ಬ್ಯಾಂಕಿಗೆ ಹೋಗಿ ಒಡ್ವೆ, ತಗೊಂಡು ಬನ್ನಿ. ಜೋಪಾನ, ಬೇಗನೆ ಬನ್ನಿ. ಕಾರು ರೆಡಿಯಾಗದೆ ಇದ್ರೆ ಸುಂದರೇಶ್ ಭಾವನಿಗೆ ಹೇಳಿ, ನಾವು ನಿಮ್ಮ ಜೊತೆಯಲ್ಲಿ ಮದ್ವೆಗೆ ಬರ್ತೀವಿ ಅಂತ. ಹೇಗೂ ಇದೇ ದಾರೀಲಿ ಹೋಗ್ತಾರಲ್ಲ’ ಎಂದು ಹೇಳಿ ಮರೆಯದಂತೆ ಪದೇ ಪದೇ ಹೇಳಿದಳು. ಅವಳ ಎಲ್ಲಾ ಮಾತಿಗೆ ಸರಿ ಎಂಬಂತೆ ತಲೆ ಅಲುಗಿಸುತ್ತ ಬೈಕ್ ಸ್ಟಾರ್ಟ್ ಮಾಡಿದ ಮೋಹನ.

ಅವನು ಅತ್ತ ಹೋತ್ತಿದ್ದಂತೆ, ಕೆಸುವಿನ ಸೊಪ್ಪು ಕಿತ್ತು ತರಲು ನೀಲಾ ತಾನೇ ತೋಟಕ್ಕೆ ಹೊರಟಳು. ಮಳೆ ನಿಂತಿತ್ತು. ಜೋರು ಮಳೆಯಲ್ಲಿ ಇಡೀ ತೋಟವೆಲ್ಲ ನೆಂದು ಮುದ್ದೆಯಾಗಿತ್ತು. ಕಾಫಿ ಗಿಡಗಳೆಲ್ಲ ಮಳೆಯಲ್ಲಿ ಮಿಂದು ಚೊಕ್ಕಟವಾಗಿ ಹಸುರಾಗಿ ಕಂಗೊಳಿಸುತ್ತಿದ್ದವು. ನೀಲಾಕಾಶ ಕಾಣದಂತೆ ಮೋಡ ಮುಚ್ಚಿಕೊಂಡು ತೋಟದೊಳಗೆ ಒಂದೇ ಒಂದು ಸೂರ್ಯನ ಕಿರಣವೂ ಒಳ ಪ್ರವೇಶಿಸದೆ ಸಂಜೆಯ ವಾತಾವರಣದಂತೆ ಭಾಸವಾಗುತ್ತಿತ್ತು. ಮರದ ಮೇಲಿನ ಹನಿಗಳು ತೊಟ್ಟಿಕ್ಕುತ್ತಿದ್ದುದರಿಂದ ನೀಲಿ ಜರ್ಕಿನ್ ತೊಟ್ಟು, ಜರ್ಕಿನ್ ಟೋಪಿಯನ್ನು ತಲೆಗೆ ಸಿಕ್ಕಿಸಿಕೊಂಡಿದ್ದಳು. ಕಾಲಿಟ್ಟಲ್ಲಿ ಜಾರುವಂತಿದ್ದ ಗಿಡಗಳ ಮಧ್ಯದ ಕಿರು ಹಾದಿಯಲ್ಲಿ ಬಹಳ ಎಚ್ಚರಿಕೆಯಿಂದ ಕಾಲಿಡುತ್ತ ಕೆಸುವಿನ ಸೊಪ್ಪು ಬೆಳೆದಿದ್ದ ಕಡೆಗೆ ಬಂದಳು. ಮದುವೆಗೆ ಮುಂಚೆ ಈ ಸೊಪ್ಪಿನ ಗಂಧವೇ ಗೊತ್ತಿರಲಿಲ್ಲ ನೀಲಾಗೆ. ಅತ್ತ ಇದ್ದಾಗ ಅದೆಷ್ಟು ರುಚಿಯಾಗಿ ಕೆಸುವಿನ ಪತ್ರೊಡೆ, ಕೆಸುವಿನ ಪಲ್ಯ, ಕೆಸುವಿನ ದಂಟು ಅಂತ ಐದಾರು ಬಗೆಯ ಅಡುಗೆ ಮಾಡಿ ಮತ್ತೆ ಮತ್ತೆ ಅದನ್ನು ತಿನ್ನಲು ಆಸೆ ಪಡುವಂತೆ ಮಾಡುತ್ತಿದ್ದರು. ಈ ದಿನ ಕೆಸುವಿನ ಗಂಟು ಮಾಡುತ್ತೇನೆ, ಮಳೆಗೆ ಬಿಸಿ ಬಿಸಿ ರೊಟ್ಟಿ ಜೊತೆ ಚೆನ್ನಾಗಿರುತ್ತದೆ ಅಂದುಕೊಂಡು ಸರಸರನೇ ಸೊಪ್ಪನ್ನು ಕಿತ್ತುಕೊಂಡಳು.

ಇಬ್ಬರಿಗೆ ಎಷ್ಟು ಬೇಕು, ಕಿತ್ತದ್ದು ಸಾಕು ಎನಿಸಿ ಮತ್ತೇ ಕಾಲು ಹಾದಿಯಲ್ಲಿ ಎಚ್ಚರಿಕೆಯಿಂದ ನಡೆದು ಮನೆ ಸೇರಿದಳು. ಸೊಪ್ಪಿನ ನಾರು ತೆಗೆದು ದಂಟನ್ನು ಮುರಿದು ಎಲೆಯನ್ನು ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಂಡು ಸುರುಳಿ ಸುತ್ತಿ ನಯವಾಗಿ ಗಂಟು ಕಟ್ಟಿದಳು. ಗಂಟು ಕಟ್ಟುವುದು ಒಂದು ಕಲೆ. ಮೊದ ಮೊದಲು ಕಟ್ಟಿದ್ದ ಗಂಟುಗಳು ಕೆಳಗಿಡುವಷ್ಟರಲ್ಲಿ ಬಿಚ್ಚಿಕೊಂಡು ಮೊದಲಿನ ಸ್ವರೂಪ ತಾಳಿದಾಗ ಅತ್ತೆ ನಕ್ಕು ಗಂಟು ಕಟ್ಟುವ ರೀತಿಯನ್ನು ತೋರಿಸಿಕೊಡುತ್ತಿದ್ದರು. ದಿನ ಕಳೆದಂತೆ ಅತ್ತೆಯ ಕೌಶಲ್ಯ ಕರಗತವಾಗಿತ್ತು. ಈಗ ಅತ್ತೆಯಂತೆಯೇ ಗಂಟು ಕಟ್ಟುತ್ತಿದ್ದಳು. ಅದೇ ರೀತಿಯ ಮಸಾಲೆ ಹಾಕಿ ರುಬ್ಬಿ ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟು ಆ ಮಸಾಲೆಯಲ್ಲಿ ಗಂಟುಗಳನ್ನು ಬೇಯಿಸಿದರೆ ಎರಡು ರೊಟ್ಟಿ ತಿನ್ನುವ ಮೋಹನ ನಾಲ್ಕು ರೊಟ್ಟಿ ತಿಂದು ‘ಅಮ್ಮನೇ ಮಾಡಿದಂತಿದೆ ನೀಲು’ ಅಂತ ತನ್ನ ಅಡುಗೆಯನ್ನು ಮೆಚ್ಚಿಕೊಳ್ಳುವುದನ್ನು ನೆನೆದು ಮುದಗೊಂಡಳು. ಇವತ್ತು ಅತ್ತೇನ ನೆನಸುವಂತೆ ಮಾಡಬೇಕು ಅಂತ ಮತ್ತಷ್ಟು ಶ್ರದ್ದಯಿಂದ ಗಂಟು ಕಟ್ಟಿದಳು. ತೆಂಗಿನಕಾಯಿ, ಹುಣಸೆಹಣ್ಣು, ಈರುಳ್ಳಿ, ಮಸಾಲೆಪುಡಿ, ಮೆಣಸಿನಪುಡಿ ಹಾಕಿ ರುಬ್ಬಿಕೊಂಡಳು. ಪಾತ್ರೆಗೆ ಎಣ್ಣೆ ಸುರಿದು ಸಾಸುವೆ, ಕರಿಬೇವು, ಬೆಳ್ಳುಳ್ಳಿ, ಹಾಕಿ ಹುರಿದು ಮಸಾಲೆ ಹಾಕಿ ಅದರ ಜೊತೆಗೆ ಕೆಸುವಿನ ಗಂಟು ಹಾಕಿ ಪಾತ್ರೆ ಮುಚ್ಚಿದಳು. ಅದು ಬೆಂದು ಗಂಟಿನ ಪರಿಮಳ ಇಡೀ ಮನೆಯೊಳಗೆ ಹರಡಿತು. ರೊಟ್ಟಿ ಹಿಟ್ಟು ಕಲಿಸಿಟ್ಟರೆ ಮೋಹನ ಬಂದ ಕೂಡಲೇ ಬಿಸಿ ಬಿಸಿಯಾಗಿ ರೊಟ್ಟಿ ಬೇಯಿಸಿ ಕೊಡಬಹುದು ಅಂದುಕೊಂಡು ಬಿಸಿಯಾಗಿಯೇ ಇದ್ದ ಅನ್ನವನ್ನು ಬೇಸನ್‌ಗೆ ಹಾಕಿ ಚೆನ್ನಾಗಿ ನಾದಿ ಅಕ್ಕಿಹಿಟ್ಟು ಸೇರಿಸಿ ಮತ್ತಷ್ಟು ನಾದಿ ಉಂಡೆ ಮಾಡಿ ಮುಚ್ಚಿಟ್ಟಳು. ಚಳಿ ಆಗ್ತಾ ಇದೆ ಎನಿಸಿ ಬೆಳಗಿನ ಕಾಫಿಗೆಂದೇ ಇಟ್ಟ ಗಟ್ಟಿ ಹಾಲನ್ನು ಫ್ರಿಡ್ಜಿನಿಂದ ಲೋಟಕ್ಕೆ ಬಗ್ಗಿಸಿಕೊಂಡು ಡಿಕಾಕ್ಷನ್ ಬೆರೆಸಿ ಬಿಸಿ ಮಾಡಿದಳು. ಡಬ್ಬಿಯಲ್ಲಿಟ್ಟಿದ್ದ ಚಕ್ಕುಲಿಯ ತುಂಡುಗಳನ್ನು ಪ್ಲೇಟಿಗೆ ಹಾಕಿಕೊಂಡು ಕಾಫಿ ಬಗ್ಗಿಸಿಕೊಂಡು ಹೊರ ಬಂದು ಕುಳಿತಳು. ಆಗ್ಲೆ ಎರಡು ಗಂಟೆ ಆಗ್ತಾ ಬಂತು. ಮೋಹನ ಬರಲೇ ಇಲ್ಲವಲ್ಲ. ಊಟದ ಹೊತ್ತು ಈಗ ಕಾಫಿ ಕುಡೀತಾ ಇದ್ದೀನಿ. ಮಲೆನಾಡಿನಲ್ಲಿ ಕಾಫಿ ಕುಡಿಯಲು ಹೊತ್ತಿಲ್ಲ… ಗೊತ್ತಿಲ್ಲ. ಯಾವಾಗ ಬೇಕಾದರೂ ಕುಡಿಯುತ್ತಿರುವುದೇ ಕೆಲಸ. ಆಚೀಚೆಗೆ ಹೋಗಿ ಬಂದಾಗಲೆಲ್ಲ ಕಾಫಿ ಸಿದ್ಧ ಮಾಡಿರಲೇಬೇಕು. ಬೆಳಿಗ್ಗೆ, ಸಂಜೆ ಮಾತ್ರ ಕುಡಿಯುವ ಅಭ್ಯಾಸವಿದ್ದ ತನಗೆ ಇಲ್ಲಿನವರೆಲ್ಲ ಕಾಫಿ ಕುಡಿಯುವುದನ್ನು ನೋಡಿ ಬೆರಗು ಆಗಿತ್ತು. ಒಬ್ಬೊಬ್ಬರೂ ಅದೆಷ್ಟು ಲೋಟ ಕಾಫಿ ಕುಡಿಯುತ್ತಿದ್ದರೋ, ಲೆಕ್ಕವೇ ಇಡುತ್ತಿರಲಿಲ್ಲ. ಆ ಲೋಟಗಳೋ ಪಾವಿನಷ್ಟು ಇರುತ್ತಿದ್ದವು. ಮೊದಲ ದಿನ ಇಲ್ಲಿಗೆ ಬಂದಾಗ ಆ ಲೋಟ ನೋಡಿಯೇ ಹೆದರಿಕೆ ಆಗಿತ್ತು ಆದರೆ ಬೇಡ ಎನ್ನಲಾರದೆ ಸಂಕೋಚದಿಂದ ಎಲ್ಲರಂತೆ ಲೋಟ ಹಿಡಿದು ಕುಡಿಯಲು ಪ್ರಾರಂಭಿಸಿದಾಗಲೇ ಗೊತ್ತಾಗಿದ್ದು, ಇದು ನಮ್ಮೂರಿನ ಕಾಫಿಯಂತಲ್ಲ. ಇದರ ರುಚಿಗೆ ಹೋಲಿಸುವ ವಸ್ತುವೇ ಇಲ್ಲ ಎನಿಸಿತ್ತು. ಚೂರು ಚೂರೇ ಗುಟುಕರಿಸುತ್ತ ಆ ರುಚಿಯನ್ನು ಆಸ್ವಾದಿಸುತ್ತ ಅವಳಿಗರಿವೇ ಇಲ್ಲದಂತೆ ಲೋಟ ಖಾಲಿ ಮಾಡಿದ್ದಳು. ಅವತ್ತಿನಿಂದಲೇ ಪಾವಿನ ಲೋಟದ ಕಾಫಿ ಅಭ್ಯಾಸವಾಗಿಬಿಟ್ಟಿತ್ತು. ಕಾಫಿಗೆಂದೇ ಕರೆದ ಹಾಲನ್ನು ಒಂದಿಷ್ಟು ತೆಗೆದಿರಿಸಿಬಿಡುತ್ತಿದ್ದರು. ತಣ್ಣೀರಿನ ಪಾತ್ರೆಯೊಳಗೆ ಹಾಲಿನ ಪಾತ್ರೆ ಇರಿಸಿದ್ದರೆ ಮಧ್ಯಾಹ್ನದವರೆಗೂ ಅದು ಕಾಫಿಗೆ ಬರುತ್ತಿತ್ತು. ನೊರೆಯಾದ ದಪ್ಪ ಹಾಲಿಗೆ ಕಾದ ಡಿಕಾಕ್ಷನ್ ಹಾಕಿಕೊಂಡು ಕುಡಿಯುತ್ತಿದ್ದರೆ ಸ್ಮ್ಗದ ಅಮೃತವೇ ಎನಿಸಿಬಿಡುತ್ತಿತ್ತು ಚಳಿಗೆ, ಅದರ ಮುಂದೆ ಮತ್ಯಾವಪೇಯವೇ ಇಲ್ಲ ಎನಿಸಿದ್ದು ಸುಳ್ಳಲ್ಲ. ಅದನ್ನೆಲ್ಲ ನೆನೆಸಿಕೊಂಡು ಕೈಯಲ್ಲಿದ್ದ ಕಾಫಿ ಮಗ್ ನೋಡಿಕೊಂಡಳು. ಇದೂ ಪಾವಿನ ಅಳತೆಯೇ, ಮಗಳು ಇಳಾ ಬೆಂಗಳೂರಿನಿಂದ ತಂದದ್ದು. ಟಿವಿಯಲ್ಲಿ ಬರುವ ಪಾತ್ರಗಳು ಮಗ್ಗಿನಂತದ್ದನ್ನು ಹಿಡಿದು ಕಾಫಿ ಕುಡಿಯುತ್ತಿರುವುದನ್ನು ನೋಡಿ ನನಗೂ ಬೇಕೆನ್ನಿಸಿತ್ತು. ಹಿಡಿ ಇರುವ ಮಗ್ಗು ಹಿಡಿದು ಕಾಫಿ ಕುಡಿಯುತ್ತ ಟಿ.ವಿ.ಯಲ್ಲಿನ ಪಾತ್ರದಂತೆ ಉಬ್ಬಿದ್ದಳು. ಅದನ್ನು ನೋಡಿ ಮೋಹನ್ ಇಳಾ ನಕ್ಕಿದ್ದೆ ನಕ್ಕಿದ್ದು. ನೆನಸಿಕೊಂಡು ಮೊಗದಲಿ ಕಿರುನಗೆ ಮೂಡಿತು.

ಇಳಾಳ ಪರೀಕ್ಷೆ ನಾಳೆಯಿಂದ ಪ್ರಾರಂಭ. ಇನ್ನು ಹದಿವೈದು ದಿನಗಳಲ್ಲಿ ಇಳಾ ಮನೆಗೆ ಬರುತ್ತಾಳೆ. ಈ ಪರೀಕ್ಷೆಯೊಂದು ಮುಗಿದುಬಿಟ್ಟರೆ ಸಾಕು. ನೂರಾಸೆ ಇಟ್ಟುಕೊಂಡು ಪರೀಕ್ಷೆಗೆ ಸಿದ್ದವಾಗಿದ್ದಾಳೆ. ಚೆನ್ನಾಗಿ ಓದಿದ್ದೇನೆಂದು ಬೆಳಿಗ್ಗೆಯೇ ಪೋನಿನಲ್ಲಿ ತಿಳಿಸಿದ್ದಾಳೆ. ಪಾಪ ತುಂಬಾ ಕಷ್ಟಪಡುತ್ತಿದ್ದಾಳೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಒಳ್ಳೆ ನಂಬರು ಬಂದರೆ ಸಾಕು. ಅವಳ ಕನಸು ನನಸಾದಂತೆ. ಮೆಡಿಕಲ್‌ಗೆ ಸೇರಿಸಿಬಿಟ್ಟರೆ ನನ್ನ ಕನಸು, ಅವಳ ಕನಸು ಎಲ್ಲವೂ ಈಡೇರಿದಂತೆ. ನಮ್ಮ ಇಡೀ ಕುಟುಂಬದಲ್ಲಿಯೇ ಅವಳಷ್ಟು ಬುದ್ಧಿವಂತರಿಲ್ಲ. ಭಾವನ ಮಕ್ಕಳು, ಅತ್ತಿಗೆಯರ ಮಕ್ಕಳು ಕಷ್ಟಪಟ್ಟು ಎಸ್‌ಎಸ್‌ಎಲ್‌ಸಿನೋ, ಪಿಯುಸಿನೋ, ಡಿಗ್ರಿನೋ ಮುಗಿಸಿದ ಶಾಸ್ತ್ರ ಮಾಡಿದ್ದರು. ಇವಳೊಬ್ಬಳೇ ಎಲ್ಲಾ ತರಗತಿಯಲ್ಲೂ ಡಿಸ್ಟಿಂಕ್ಷನ್, ಎಸ್‌ಎಸ್‌ಎಲ್ಸಿಯಲ್ಲಿ ರ್‍ಯಾಂಕು, ಪಿಯುಸಿಯಲ್ಲಿಯೂ ರ್‍ಯಾಂಕ್ ಬರ್ತಾಳೆ ಅನ್ನಿಸುತ್ತೆ. ಅವಳ ಶ್ರಮ ನೋಡಿದರೆ ಸಿ‌ಇಟಿಯಲ್ಲೂ ಒಳ್ಳೆ ರ್‍ಯಾಂಕಿಂಗ್ ಬರುತ್ತೆ, ಆಮೇಲೆ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಕ್ಕಿಬಿಟ್ರೆ ಇನ್ನೈದು ವರ್ಷದಲ್ಲಿ ಡಾಕ್ಟರಾಗಿ ಬಿಡುತ್ತಾಳೆ. ನಮ್ಮ ವಂಶದಲ್ಲಿಯೇ ಯಾರೂ ಡಾಕ್ಟರ್ ಆಗಿಲ್ಲ. ಚಿಕ್ಕ ವಯಸ್ಸಿನಿಂದಲೇ ಡಾಕ್ಟರಾಗಬೇಕು ಅನ್ನೋ ಕನಸಿನೊಂದಿಗೆ ಬೆಳೆದಳು. ಆ ಕನಸನ್ನು ನನಸಾಗಿಸಿಕೊಳ್ಳೋಕೆ ಓದನ್ನು ಬಿಟ್ಟು ಮಿಕ್ಕೆಲ್ಲವನ್ನು ಕಡೆಗಣಿಸಿದಳು. ತಿನ್ನಬೇಕಾದ ವಯಸ್ಸಿನಲ್ಲಿ ತಿನ್ನೋಕೆ ಆಸೆ ಪಡಲಿಲ್ಲ. ಊಟ ತಿಂಡಿಗೂ ಬಲವಂತಿಸಬೇಕಿತ್ತು. ತನ್ನ ವಯಸ್ಸಿನವರ ಜೊತೆ ಎಂಜಾಯ್ ಮಾಡಲಿಲ್ಲ. ಸಿನಿಮಾ, ಪಿಕ್‌ನಿಕ್, ಪಾರ್ಟಿಗಳಿಂದ ದೂರವೇ ಉಳಿದುಬಿಟ್ಟಳು. ಒಳ್ಳೆ ಬಟ್ಟೆ ಹಾಕೋ ಆಸಕ್ತಿನೂ ಇರಲಿಲ್ಲ. ನಾನೇ ಆರಿಸಿ ಒತ್ತಾಯವಾಗಿ ಹಾಕಿಸಬೇಕಿತ್ತು. ಬಂಧುಗಳ ಮದುವೆಗಾಗಲಿ, ಮನೆಗಳಿಗಾಗಲಿ, ಮುಂಜಿಗಳಿಗಾಗಲೀ ಅಪ್ಪಿ ತಪ್ಪಿಯೂ ಬಂದವಳಲ್ಲ. ಇವಳನ್ನ ನೋಡಬೇಕಾದರೆ ಅವಳು ರಜೆಗೆ ಬಂದಾಗ ಮನೆಗೆ ಬರಬೇಕಿತ್ತು. ಬಂದವರ ಜೊತೆಗೂ ಹೆಚ್ಚಾಗಿ ಬೆರೆಯದೆ ಓದುವ ನೆವ ಹೇಳಿ ಕೋಣೆ ಸೇರಿಬಿಡುತ್ತಿದ್ದಳು. ಬಂದವರ ಮುಂದೆ ನನಗೆ ಇರಿಸು ಮುರುಸಾಗುತ್ತಿದ್ದರೂ ಬಾಯ್ತುಂಬ ಉಪಚರಿಸಿ ಅವರಿಗೆ ಅಸಮಾಧಾನವಾಗದಂತೆ ಜಾಣ್ಮೆ ವಹಿಸುತ್ತಿದ್ದುದುಂಟು. ಎಲ್ಲದಕ್ಕಿಂತ ನನಗೆ ಅವಳ ಕನಸು, ಭವಿಷ್ಯವೇ ಮುಖ್ಯವಾಗಿತ್ತು. ಮೋಹನನಿಗೂ ಮಗಳ ಮೇಲೆ ಅದೆಷ್ಟು ಆಸೆ, ಮಗಳ ಒಂದು ಸಣ್ಣ ಆಸೆಯನ್ನೂ ತಲೆಮೇಲೆ ಹೊತ್ತುಕೊಂಡು ಪೂರೈಸುವಷ್ಟು ಹುಮ್ಮಸ್ಸು. ಮಗಳೆಂದರೆ ಜೀವ. ಮಗಳಿಗಾಗಿಯೇ ಬದುಕು ಎನ್ನುವಂತಿದ್ದಾರೆ- ಅವರ ಗುರಿ ಎಂದರೆ ಮಗಳನ್ನು ಡಾಕ್ಟರಾಗಿ ಮಾಡುವುದು, ಒಟ್ಟಿನಲ್ಲಿ ನಮ್ಮ ಮೂವರ ಆಸೆ ಸಧ್ಯದಲ್ಲಿಯೇ ನೆರವೇರಲಿದೆ. ಆ ಕನಸು ಆದಷ್ಟು ಬೇಗ ನನಸಾಗಲಿದೆ. ಅವಳು ಡಾಕ್ಟರಾದ ಕೂಡಲೇ ಒಳ್ಳೆ ಹುಡುಗನ್ನ ಅಳಿಯನನ್ನಾಗಿ ಮಾಡಿಕೊಳ್ಳುವುದು. ಆ ಮೇಲೆ ಮೊಮ್ಮಗು, ಅದನ್ನು ಸಾಕಿ ಬೆಳೆಸುವ ಜವಾಬ್ದಾರಿಯೆಲ್ಲ ನನ್ನದೇ’ ಮುಂದಿನದೆಲ್ಲ ನೆನೆಸಿಕೊಳ್ಳುತ್ತಲೇ ಹಿತವಾದ ಅನುಭವವಾಯಿತು.

ಗಂಟೆ ಢಣ್ ಢಣ್ ಅಂತ ಮೂರು ಹೊಡೆದಾಗ ಅರೆ ಮೂರು ಗಂಟೆ, ಮೋಹನ ಬರಲೇ ಇಲ್ಲವಲ್ಲ. ಕಾರು ರಿಪೇರಿ ಮಾಡಿಸುತ್ತ ಕೂತುಬಿಟ್ಟರೇನೋ, ಒಡ್ವೆ ಬೇರೆ ತಗೊಂಡಿರ್ತಾರೆ, ಬೇಗ ಬನ್ನಿ ಅಂತ ಹೇಳಿದ್ದೇನೆ, ಜವಾಬ್ಧಾರಿನೇ ಇಲ್ಲಾ. ರೇಗಿಕೊಳ್ಳುತ್ತ ಮೋಹನ್‌ಗೆ ಫೋನ್ ಮಾಡಿದಳು. ಸ್ವಿಚ್ ಆಫ್ ಆಗಿತ್ತು. ಏನಾಯ್ತು ಇವರಿಗೆ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮಳೆ ಕಡಿಮೆ ಆಗಿರುವಾಗಲೇ ಬಂದು ಮನೆ ಸೇರಿಕೊಳ್ಳಬಾರದೆ, ಬೆಳಿಗ್ಗೆ ೧೦ ಗಂಟೆಗೆ ಮನೆ ಬಿಟ್ಟೋರಿಗೆ ಮೂರು ಗಂಟೆ ಆದ್ರೂ ಬರಬಾರದೇ… ಸಕಲೇಶಪುರದಿಂದ ಅರ್ಧ ಗಂಟೆ ಸಾಕು ಬರೋಕೆ, ಮೋಹನ್ ಮೇಲೆ ಕೋಪ ಬರೋಕೆ ಶುರುವಾಯ್ತು. ಇವರಿಗೆ ಕಾಯ್ತಾ ಊಟಾನೂ ಮಾಡಲಿಲ್ಲ. ಹೊಟ್ಟೆ ಚುರುಗುಡ್ತ ಇದೆ. ಒಂಚೂರು ಅನ್ನಾನೇ ತಿಂದ್ರಾಯ್ತು ಅಂತ ಅಡುಗೆಮನೆಗೆ ಬಂದು ತಟ್ಟೆಗೆ ಅನ್ನ ಹಾಕಿ ಮೊಸರು ಹಾಕಿಕೊಂಡು ತಟ್ಟೆಯ ಬದಿಗೆ ಒಂದಿಷ್ಟು ಕೆಸುವಿನ ಗಂಟಿನ ಪಲ್ಯ ಹಾಕಿಕೊಂಡು ಹೊರಬಂದಳು. ಅಷ್ಟರೂಳಗೆ ಮುಂದುಗಡೆ ವಾಹನ ನಿಂತ ಶಬ್ದವಾಯಿತು. ಕಾರು ತಂದರು ಅಂತ ಕಾಣುತ್ತೆ. ಅದಕ್ಕೆ ಲೇಟಾಗಿದೆ ಅಂತ ಹೊರ ಬಂದರೆ ಸುಂದರೇಶಭಾವ, ಗಾಭರಿ ಆಗಿದ್ದಾರೆ. ‘ನೀಲೂ ಮನೆಗೆ ಬೀಗ ಹಾಕು, ಬೇಗ ಸಕಲೇಶಪುರಕ್ಕೆ ಹೋಗಬೇಕು- ತಡಮಾಡುವಂತಿಲ್ಲ’ ಅಂತ ಇದ್ದಕ್ಕಿದ್ದಂತೆ ಆವಸರಿಸಿದಾಗ ಅಶುಭದ ಮುನ್ಸೂಚನೆ ಹೊಡೆದುಕೊಳ್ಳಲಾರಂಭಿಸಿತು. ಮೋಹನ ಇನ್ನೂ ಮನೆಗೆ ಬಂದಿಲ್ಲ. ‘ಭಾವ ಯಾಕೆ, ಏನಾಯ್ತು, ಯಾಕೆ ಸಕಲೇಶಪುರಕ್ಕೆ ಹೋಗಬೇಕು…’ ನಡುಗುತ್ತಲೇ ಕೇಳಿದಳು. ‘ದಾರೀಲಿ ಹೇಳ್ತೀನಿ ಬಾ, ಹೊರಡು ಬೇಗ’ ಮುಖ ತಪ್ಪಿಸುತ್ತ ಹೇಳಿದಾಗ ‘ಭಾವ ನಿಜ ಹೇಳಿ. ಸುಳ್ಳು ಹೇಳಬೇಡಿ’ ಹೆಚ್ಚು ಕಡಿಮೆ ನೀಲಾ ಕಿರುಚಿದಳು. ಬೆಚ್ಚಿಬಿದ್ದ ಸುಂದರೇಶ ‘ಅದು…ಅದು.. ಮೋಹನ್‌ಗೆ ಆಕ್ಸಿಡೆಂಟ್‌ಯಾಗಿದೆ ಅಂತೆ, ಇನ್ನೇನು ಕೇಳಬೇಡ ನಡೆ’ ದ್ವನಿ ಜೋರು ಮಾಡುತ್ತ ಕಾರು ಬಾಗಿಲು ತೆರೆದರು. ‘ಅಯ್ಯೋ ಆಕ್ಕಿಡೆಂಟಾಯಿತಾ, ಯಾವಾಗ, ಈಗವರು ಹೇಗಿದ್ದಾರೆ’ ಕುಸಿದು ಜೋರಾಗಿ ಅತ್ತಳು.

‘ಈಗ ಅಳೋ ಸಮಯ ಅಲ್ಲ ನೀಲಾ, ಬೀಗ ಎಲ್ಲಿದೆ, ನಾನು ಹಾಕಿಕೊಂಡು ಬರ್ತ್ತೀನಿ. ಮೊದ್ಲು ನೀನು ಕಾರಿನಲ್ಲಿ ಕೂರು’ ಅಂತ ಹೇಳಿದವರೇ ಕೀ ಹುಡುಕಿ ಬೀಗ ಹಾಕಿಕೊಂಡು ಕಾರು ಹತ್ತಿದರು. ಅಷ್ಟರಲ್ಲಾಗಲೇ ನೀಲಾ ಕಾರಿನಲ್ಲಿ ಕುಳಿತಿದ್ದಳು. ದಾರಿಯುದ್ದಕ್ಕೂ ‘ದೇವರೆ ಮೋಹನನ ಜೀವಕ್ಕೆ ಏನೂ ಆಗದೆ ಇರಲಿ. ಏಟಾಗಿದ್ರೂ ಪರ್ವಾಗಿಲ್ಲ, ಕೈಕಾಲು ಹೋದ್ರೂ ಪರ್ವಾಗಿಲ್ಲ. ಮಗುಥರಾ ಅವರನ್ನು ನೋಡಿಕೊಳ್ತೀನಿ. ನನ್ನ ಕಣ್ಣು ಮುಂದೆ ಇದ್ರೆ ಸಾಕು ಅವರು’ ಅಂತ ಸಾವಿರ ದೇವರಿಗೆ ಮೊರೆ ಇಡುತ್ತಲೇ ಇದ್ದಳು. ಕಾರು ಆಸ್ಪತ್ರೆಯತ್ತ ಹೋಗದೆ ಹೋಟೆಲೊಂದರ ಮುಂದೆ ನಿಂತಾಗ ‘ಭಾವ ಮೊದ್ಲು ಆಸ್ಪತ್ರೆಗೆ ಹೋಗೋಣ ಇಲ್ಯಾಕೆ ನಿಲ್ಲಿಸಿದ್ರಿ, ನಡೀರಿ ಬೇಗ. ನಾನು ಮೊದ್ಲು ಮೋಹನನಾ ನೋಡಬೇಕು’ ಅಂತ ಹಲುಬಿದಳು. ಅವಳ ಮಾತಿಗೆ ಉತ್ತರಿಸದೆ ಕಾರು ಪಾರ್ಕ್ ಮಾಡಿ ಡೋರ್ ತೆಗೆದು ಕಾರಿನಿಂದಿಳಿದರು.

‘ನೀಲಾ ಧೈರ್ಯ ತಂದ್ಕೋ ಬೇಕು ನೀನು, ಮೋಹನ ನಿಂಗೆ ಮೋಸ ಮಾಡಿಬಿಟ್ಟಾ, ಹೇಡಿಯಂತೆ ಆತ್ಮಹತ್ಯೆ ಮಾಡ್ಕೊಂಡಿದಾನೆ…. ಈ ಲಾಡ್ಜಿಗೆ ಬಂದು, ಬೆಳಿಗ್ಗೆ ೧೧ ಗಂಟೆಗೆ ರೂಮ್ ಬಾಡಿಗೆ ಮಾಡಿಕೊಂಡು, ವಿಷ ತಗೊಂಡು ನಮ್ಮನ್ನೆಲ್ಲ ಬಿಟ್ಟುಹೋಗಿದ್ದಾನೆ. ನೀನು ಕಲ್ಲಾಗಬೇಕು. ನಿನ್ನ ಮಗಳಿಗಾಗಿ ನಿನ್ನ ಹೃದಯಾನ ಕಲ್ಲು ಮಾಡಿಕೊಳ್ಳಬೇಕು.’ ಗದ್ಗದಿತವಾಗಿ ಸುಂದರೇಶ ಹೇಳುತ್ತಿದ್ದರೆ “ಇಲ್ಲಾ ನನ್ನ ಮೋಹನ ಅಂತವರಲ್ಲ, ನನ್ನ ಬಿಟ್ಟು ಅವರು ಹೋಗುವವರೇ ಅಲ್ಲಾ. ನೀವು ಸುಳ್ಳು ಹೇಳ್ತಾ ಇದ್ದೀರಾ… ಸಾಯೋ ಅಂತದ್ದೇನು ಆಗಿಲ್ಲ ಅವರಿಗೆ, ಮಗಳನ್ನು ಡಾಕ್ಟರ್ ಮಾಡದೆ, ನನ್ನನ್ನು ಒಂಟಿ ಮಾಡಿ ಹೋಗಿಬಿಡ್ತಾರಾ, ನೀವು ಸುಳ್ಳು ಹೇಳ್ತಾ ಇದ್ದೀರಾ ಅಂತ ಜೋರಾಗಿ ಹೇಳಲಾರಂಭಿಸಿದಳು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ನೀಲಾ ಅಣ್ಣ ಗಿರೀಶ, ತಮ್ಮ ರಮೇಶ ಇಬ್ಬರೂ ಹತ್ತಿರ ಬಂದು ‘ನೀಲಾ- ಎಲ್ಲಾ ಮುಗಿದೇ ಹೋಯಿತಲ್ಲೇ, ಭಾವ ನಿನ್ನ ಕೈ ಬಿಟ್ಟುಬಿಟ್ಟರಲ್ಲ, ನೋಡು ಹೇಗೆ ತಣ್ಣಗೆ ಮಲಗಿದ್ದಾರೆ’ ಅವಳ ತಬ್ಬಿಕೊಂಡು ಬಿಕ್ಕಳಿಸಿದರು. ಮೆಲ್ಲಗೆ ಅವಳನ್ನು ಕರೆದುಕೊಂಡು ಬಂದು ಹೋಟೆಲಿನ ಕೋಣೆಗೆ ಬಂದರು. ಮಂಚದ ಮೇಲೆ ಅಡ್ಡಡ್ಡ ಮಲಗಿದ್ದಾನೆ ಮೋಹನ. ಸಾಯುವಾಗ ತುಂಬ ಸಂಕಟ ಅನುಭವಿಸುತ್ತ ಒದ್ದಾಡಿರಬೇಕು, ಹಾಸಿಗೆಯೆಲ್ಲ ಅಸ್ತವ್ಯಸ್ತವಾಗಿದೆ, ತಲೆ ಮಂಚದ ಕೆಳಗೆ ಬಾಗಿದೆ, ಕಾಲು ಮಂಚದಿಂದ ಹೊರ ಚಾಚಿದೆ.

‘ಅಯ್ಯೋ ಮೋಹನ ಇದೇನು ಮಾಡಿಕೊಂಡ್ರಿ. ನನ್ನ ಒಂದು ದಿನವೂ ಒಂಟಿಯಾಗಿ ಬಿಟ್ಟವರಲ್ಲ ನೀವು, ಎಲ್ಲಿಹೋದ್ರೂ ಒಬ್ಳೆ ಇದ್ದಾಳೆ ಅಂತ ಓಡಿ ಬರ್ತಾ ಇದ್ರಿ, ಈಗ ಇಡೀ ಬದುಕು ಒಂಟಿಯಾಗಿ ಇರಲಿ ಅಂತ ಬಿಟ್ಟುಹೋದ್ರ… ಸಾಯೋ ಅಂತಾದ್ದೇನಾಗಿತ್ತು. ಅಯ್ಯೋ ನನ್ನ ಕೈಲೂ ಹೇಳೋಕೆ ಆಗದೆ ಇರೋವಂತದೇನಾಗಿತ್ತು. ಅಯ್ಯೋ ಮೋಹನ, ನನ್ನ ಕೈಲಿ ತಡೆಯೋಕೆ ಆಗ್ತಾ ಇಲ್ಲಾ, ನಾನು ಬಂದುಬಿಡ್ತೀನಿ ನಿಮ್ಮ ಜೊತೆ, ನಿಮ್ಮನ್ನು ಬಿಟ್ಟು ಹೇಗಿರಲಿ’ ಅಂತ ಮೋಹನನ ಮೇಲೆ ಬಿದ್ದು ಅತ್ತ ನೀಲಾ ಅಲ್ಲಿಯೇ ಬಿದ್ದಿದ್ದ ಮೋಹನ ಕುಡಿದಿದ್ದ ಬಾಟಲಿಯ ಎತ್ತಿ ಉಳಿದಿದ್ದನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಬಾಯಿಗೆ ಸುರಿದುಕೊಂಡುಬಿಟ್ಟಳು. ಅಲ್ಲಿದ್ದವರೆಲ್ಲ ಈ ಅಚಾನಕ ಘಟನೆಯಿಂದ ದಿಗ್ಭ್ರಾಂತರಾಗಿಬಿಟ್ಟರು. ‘ಇದೇನು ನೀಲಾ ಮಾಡಿಬಿಟ್ಟೆ. ನೀನು ಮೋಹನ ಥರನೇ ಮೂರ್ಖಳಂತೆ ಮಾಡಿಬಿಟ್ಟೆಯಲ್ಲ, ಬೇಗ ಬನ್ನಿ ಎತ್ಕೊಳ್ಳಿ, ಇವಳನ್ನು ಮೊದ್ಲು ಆಸ್ಪತ್ರೆಗೆ ಕರ್ಕೊಂಡು ಹೋಗೋಣ’ ಅಂತ ಕಿರುಚಾಡಿದರು. ಗಿರೀಶ, ರಮೇಶ ಅನಾಮತ್ತಾಗಿ ಅವಳನ್ನು ಹಿಡಿದುಕೊಂಡವರೇ ಅವಳು ಪ್ರತಿಭಟಿಸುವುದನ್ನು ಲೆಕ್ಕಿಸದೆ ಗಟ್ಟಿಯಾಗಿ ಇಬ್ಬರೂ ಹಿಡಿದುಕೊಂಡು ಕಾರಿಗೆ ಹಾಕಿದರು. ಸುಂದರೇಶನಿಗೆ ಕೈಕಾಲುಗಳು ಆಡದಂತಾಗಿತ್ತು. ಈ ಘಟನೆಯಿಂದ, ತಮ್ಮ ಹೋದ ಸಂಕಟವನ್ನು ಅರಗಿಸಿಕೊಳ್ಳಲಾರದೆ ಕಷ್ಟಪಡುತ್ತಿರುವಾಗ ನೀಲಾ ಕೂಡ ಅವನ ಹಾದಿ ಹಿಡಿಯುವಂತೆ ಮಾಡಿದ್ದು ಆಘಾತ ಉಂಟು ಮಾಡಿತ್ತು. ಅವರು ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಅಲ್ಲಿದ್ದ ಒಬ್ಬಾತ ಕಾರೊಳಗೆ ಕುಳಿತು ಕಾರು ಸ್ಟಾರ್ಟ್‌ ಮಾಡಿದ. ಸೀದಾ ವೇಗವಾಗಿ ಆಸ್ಪತ್ರೆಗೆ ನುಗ್ಗಿತು ಕಾರು. ತಕ್ಷಣವೇ ಡಾಕ್ಟರ್ ನೀಲಾ ಕಡೆ ವಿಶೇಷ ಗಮನ ನೀಡಿ, ಸೂಕ್ತ ಚಿಕಿತ್ಸೆ ನೀಡಿದರು. ಹೊಟ್ಟೆಯಲ್ಲಿದ್ದ ವಿಷವನ್ನೆಲ್ಲ ವಾಂತಿ ಮಾಡಿಸಿ, ಅದರ ಪರಿಣಾಮ ದೇಹಕ್ಕಾಗದಂತೆ ಇಂಜಕ್ಷನ್ ಕೊಟ್ಟು, ಅವಳ ಜೀವವುಳಿಸುವ ಯತ್ನ ನಡೆಸಿದರು. ಅರ್ಧ ಗಂಟೆಯ ನಂತರವೇ ನೀಲಾ ಅಪಾಯದಿಂದ ಪಾರಾದಳೆಂದು ಹೇಳಿ ಎಲ್ಲರ ಬಿಗಿಹಿಡಿದ ಉಸಿರನ್ನು ಸಡಿಲಗೊಳಿಸಿದರು. ವಿಷ ಅಲ್ಪ ಪ್ರಮಾಣದಲ್ಲಿದ್ದು, ತಕ್ಷಣವೇ ಚಿಕಿತ್ಸೆ ಸಿಕ್ಕಿದ್ದರಿಂದ ನೀಲಾ ಉಳಿದುಕೊಂಡಳು.

ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಇಳಾಳನ್ನು ಕರೆತರಲು, ಬೆಂಗಳೂರಿನಲ್ಲಿಯೇ ಇದ್ದ ಮೋಹನನ ಅಕ್ಕನ ಮನೆಯವರಿಗೆ ವಹಿಸಿದ್ದು, ಇನ್ನೇನು ಅವರು ಸಕಲೇಶವುರ ತಲುಪಲಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಕಾನೂನು ಪ್ರಕಾರ ಮಹಜರು ನಡೆದು, ಬಾಡಿಯನ್ನು ಪೋಸ್ಟ್‌ಮಾರ್ಟಂಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಡಸರಲ್ಲಿ ಕೆಲವರು ಆಸ್ಪತ್ರೆಯಲ್ಲಿಯೇ ಉಳಿದರು. ಮಿಕ್ಕವರೆಲ್ಲ ಮುಂದಿನ ಕಾರ್ಯದ ಸಿದ್ಧತೆಗಾಗಿ ಮೋಹನನ ಮನೆಯತ್ತ ನಡೆದರು. ಗಿರೀಶ ನೀಲಾಳ ಬಳಿಯೇ ಉಳಿದರೆ, ಇಳಾಳಿಗಾಗಿ ರಮೇಶ ಮನೆಯತ್ತ ನಡೆದ. ಅಷ್ಟರಲ್ಲಾಗಲೇ ಮನೆಯ ತುಂಬ ಜನ ಸೇರಿದ್ದರು. ಮುಂದುಗಡೆ ಶಾಮಿಯಾನ ಹಾಕಲಾಗಿತ್ತು. ಪಕ್ಕದಲ್ಲಿಯೇ ಅಡುಗೆಯವರು, ಬಂದವರ ಹಸಿವು ತೀರಿಸಲು ಅಡುಗೆಯ ಸಿದ್ಧತೆಯಲ್ಲಿದ್ದರು. ಅಲ್ಲಿ ಯಾರಿಗೆ ಬೇಕಿತ್ತು ಊಟ…. ಆದರೂ ಮಕ್ಕಳು, ವಯಸ್ಸಾದವರು ಇರುತ್ತಾರೆ, ಸುತ್ತಮುತ್ತ ಮನೆಗಳೂ ಇಲ್ಲ. ಹೋಟೆಲ್ ಅಂತೂ ಇಲ್ಲವೇ ಇಲ್ಲ. ಹಾಗಾಗಿ ಸಾವು, ನೋವು ಸಂಭವಿಸಿದ ಮನೆಯಲ್ಲಿಯೇ ಬಂಧುಗಳಿಗಾಗಿ ಊಟ ತಯಾರಿಸುತ್ತಾರೆ. ಅದು ಅಲ್ಲಿ ಸಹಜವೂ ಆಗಿರುತ್ತದೆ. ಎಷ್ಟೇ ನೋವಿದ್ದರೂ, ದುಃಖವಿದ್ದರೂ ಅಲ್ಲಿದ್ದ ಒಂದಿಬ್ಬರು ಜವಾಬ್ದಾರಿ ತೆಗೆದುಕೊಂಡು ಬಂದಿದ್ದವರೆಲ್ಲರನ್ನು ಬಲವಂತ ಮಾಡಿ ಊಟ ಮಾಡಿಸುತ್ತಾರೆ. ಇಡೀ ರಾತ್ರಿ ಎಚ್ಚರವಿರಲು ಕೆಲವು ಗಂಡಸರು ಸಿದ್ದರಾಗಿ ಬಿಡುತ್ತಾರೆ. ಆ ಸಮಯದಲ್ಲಿ ಕಾಲ ತಳ್ಳಲು ಇಸ್ವೀಟ್ ಸಹಾಯ ಮಾಡುತ್ತದೆ.

ಹತ್ತಿರದ ಬಂಧುಗಳು ದುಃಖದ ಭಾರ ತಡೆಯಲಾರದೆ ಪರಿತಪಿಸುತ್ತಿದ್ದಾರೆ. ದೂರದ ಬಂಧುಗಳು ಅವರನ್ನು ಸಮಾಧಾನಿಸುತ್ತ ಮುಂದಿನ ಕಾರ್ಯದ ಸಿದ್ಧತೆ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಆದರೆ ಮಲೆನಾಡಿನ ಭಾಗದಲ್ಲಿ ಮೃತವಾದವರ ಮನೆಯಲ್ಲಿ ಮೃತ ಶರೀರ ಮನೆಯಲ್ಲಿ ಇದ್ದಾಗಲೇ ಶುಭಕಾರ್ಯಗಳಲ್ಲಿ ನಡೆಯುವಂತೆ ಊಟೋಪಚಾರ ನಡೆಯುತ್ತದೆ. ಕೋಸಂಬರಿ, ಪಲ್ಯ, ಪಾಯಸ, ಅನ್ನ ಸಾರು, ಮಜ್ಜಿಗೆ ಹೀಗೆ ಸಾಂಗವಾಗಿಯೇ ರೆಸಿಪಿ ಇರುತ್ತದೆ. ಬಂದವರಿಗಾಗಿ ಮನೆಯವರು ಅಡುಗೆಯವರನ್ನು ಕರೆಸಿ ಅಡುಗೆ ಮಾಡಿಸಿ ಎಲ್ಲರೂ ಕಡ್ಡಾಯವಾಗಿ ಪಾಯಸದೂಟವನ್ನು ಮಾಡಲು ವ್ಯವಸ್ಥೆ ಮಾಡುತ್ತಾರೆ, ಬಂದವರು ಕೂಡ ಯಾವ ಮುಜುಗರವಿಲ್ಲದೆ ಸಂತೃಪ್ತಿಯಿಂದ ಉಣ್ಣುತ್ತಾರೆ!

ಪೋಸ್ಟ್‌ಮಾರ್ಟಂ ಮಾಡಿ ಮೋಹನನ ಬಾಡಿ ಮನೆ ತಲುಪಲು ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯಾದರೂ ಆದೀತು, ಯಾರು ಯಾರಿಗೆ ಹೇಳಬೇಕು ಎಂದೆಲ್ಲ ಮೋಹನನ ಅಣ್ಣ ತಮ್ಮಂದಿರು, ನೀಲಾಳ ಸಹೋದರರು ಎಲ್ಲರೂ ತಮ್ಮ ತಮ್ಮವರಿಗೆ ಪೋನ್‌ನಲ್ಲಿಯೇ ಇಡೀ ರಾತ್ರಿ ಸುದ್ದೀ ಮುಟ್ಟಿಸುತ್ತಲೇ ಇದ್ದರು. ರಾತ್ರಿ ಸುಮಾರು ೧೦ ಗಂಟೆಗೆ ಇಳಾ ತನ್ನ ಅತ್ತೆಯೊಂದಿಗೆ ಮನೆಗೆ ಬಂದಾಗ ಮನೆ ಒಳಗೆ, ಹೊರಗೆ ಭರ್ತಿ ಜನ. ಬಂದವಳೇ ಇಳಾ ತನ್ನ ದೊಡ್ಡಪ್ಪನನ್ನು ತಬ್ಬಿಕೊಂಡು ‘ದೊಡ್ಡಪ್ಪ ಪಪ್ಪನಿಗೆ ಏನಾಗಿತ್ತು, ಯಾಕೆ ಹೀಗೆ ಮಾಡಿಕೊಂಡರು. ನಮ್ಮನ್ನ ಬಿಟ್ಟು ಹೋಗೋಕೆ ಹೇಗೆ ಅವರಿಗೆ ಮನಸ್ಸು ಬಂತು’ ಅಂತ ಗಟ್ಟಿಯಾಗಿ ಅತ್ತಳು, ‘ಮೂರ್ಖ ಕಣಮ್ಮ ಅವನು ಶತಮೂರ್ಖ, ನಾವೆಲ್ಲ ಇರಲಿಲ್ಲವಾ, ಇಷ್ಟಕ್ಕೂ ಅಂತ ಕಷ್ಟ ಏನಾಗಿತ್ತು ಸಾಯೋಕೆ, ನಿಮ್ಮಮ್ಮನಿಗೂ ಸುಳಿವು ನೀಡದೆ ಹೀಗೆ ಒಂದೇಸಲಕ್ಕೆ ಶಾಕ್ ಕೊಟ್ಟು ಬಿಟ್ಟ, ಸಾಯೋ ಮೊದಲು ನೀನು ನೆನಪಿಗೆ ಬರಲಿಲ್ಲವೇ, ಮಗಳನ್ನು ಡಾಕ್ಟರ್ ಮಾಡ್ತೀನಿ ಅಂತ ಕುಣೀತಿದ್ದವನಿಗೆ, ನಾಳೆ ನಿನ್ನ ಪರೀಕ್ಷೆ ಅಂತಲಾದರೂ ಗೊತ್ತಾಗಲಿಲ್ಲವೆ, ಏನೂ ಬಂತು ಅವನಿಗೆ ಕೇಡುಗಾಲ’ ತಾವು ಇಳಾಳೊಂದಿಗೆ ಅತ್ತರು.

ತಾಯಿಯ ಬಗ್ಗೆ ಎಲ್ಲಾ ಗೊತ್ತಾಗಿದ್ದರೂ ಅವಳ ಬಗ್ಗೆ ಒಂದೂ ಮಾತನಾಡದೆ ಮಾವ ರಮೇಶನನ್ನು ತಬ್ಬಿಕೊಂಡು ‘ಮಾಮ, ನಾನ್ಯಾಕೆ ಬದುಕಿರಲಿ ನಾನು ಸತ್ತುಹೋಗ್ತೀನಿ ಮಾಮ’ ಅಳುತ್ತಲೇ ಹೇಳಿದಳು.

’ಛೇ ಛೇ ನಿನ್ನಂಥ ಹುಡುಗಿಯಿಂದ ಈ ಮಾತು ಬರಬಾರದು. ನೀನು ಧೈರ್ಯಸ್ಥೆ. ಬದುಕಿ ಸಾಧಿಸಿ ತೋರಿಸಬೇಕು ಕಣೆ, ನಿಮ್ಮಪ್ಪನ ಥರಾ ಹೇಡಿಯಾಗಬೇಡ. ತಾನು ಸತ್ತು ನಮ್ಮನ್ನು ಕೊಂದುಬಿಟ್ರು ನಿಮ್ಮಪ್ಪ’ ನೋವಿನಿಂದ ನುಡಿದ ರಮೇಶ. ಎಲ್ಲರೂ ಅಲ್ಲಿ ದುಃಖಿಗಳೇ, ಅಪ್ಪನನ್ನು ಕಳೆದುಕೊಂಡ ದುಃಖ ಇಳಾದ್ದಾದರೆ, ತಮ್ಮನನ್ನು ಕಳೆದುಕೊಂಡ ನೋವು ಸುಂದರೇಶ ಮತ್ತು ಅವರಕ್ಕ ವಿಶಾಲುದು. ಭಾವನನ್ನು ಕಳೆದುಕೂಂಡು ತಂಗಿ ವಿಧವೆಯಾದಳಲ್ಲ ಅನ್ನೋ ಸಂಕಟ ರಮೇಶ ಮತ್ತು ಗಿರೀಶರದ್ದು. ಒಟ್ಟಿನಲ್ಲಿ ಮೋಹನ ದುಡುಕಿ ನಿರ್ಧಾರ ಕೈಗೊಂಡು ಎಲ್ಲರನ್ನು ದುಃಖದ ಮಡುವಿನಲ್ಲಿ ತಳ್ಳಿದ್ದ. ಇದ್ದುದರಲ್ಲಿ ಸಾವಿನ ನೋವಿಲ್ಲದೆ ಡಾಕ್ಟರ್ ಕೊಟ್ಟ ನಿದ್ರೆ ಇಂಜೆಕ್ಷನ್ ಪ್ರಭಾವದಿಂದ ಎಲ್ಲ ಮರೆತಿರುವವಳೆಂದರೆ ನೀಲಾ ಒಬ್ಬಳೇ. ಮೋಹನನ ಅಂತ್ಯ ಸಂಸ್ಕಾರದ ವೇಳೆಗಾದರೂ ಅವಳು ಕೊಂಚ ಚೇತರಿಸಿಕೊಳ್ಳಲೆಂದೇ ನಿದ್ರೆ ಔಷಧಿ ಕೊಡಲು ಗಿರೀಶ ಡಾಕ್ಟರಲ್ಲಿ ಬೇಡಿದ್ದ. ಇಡೀ ರಾತ್ರಿ ಅವಳನ್ನು ಕಾಯುತ್ತಲೇ ಕುಳಿತುಬಿಟ್ಟ. ಗ್ಲೂಕೊಸ್ ಹಾಕಿಯೇ ಇದ್ದರು. ಬಾಟಲಿಯಿಂದ ಹನಿ ಹನಿಯಾಗಿ ಜಾರುತ್ತಿದ್ದ ಗ್ಲೂಕೋಸನ್ನೇ ನೋಡುತ್ತ ಇಡೀ ರಾತ್ರಿ ಕಳೆದ. ಬೆಳಿಗ್ಗೆ ಹೊತ್ತಿಗಾದರೂ ನೀಲಾ ಚೇತರಿಸಿಕೊಂಡು ತನ್ನ ದುಃಖವನ್ನು ಭರಿಸಿದರೆ ಸಾಕೆಂದು ಗಿರೀಶ್ ಹಾರೈಸಿದ್ದ.

೧೧ ಗಂಟೆಗೆ ಆಸ್ಪತ್ರೆಯ ವಾಹನದಲ್ಲಿಯೇ ಮೋಹನನ ಪಾರ್ಥಿವ ಶರೀರವನ್ನು ತಂದರು. ವ್ಯಾನಿನೊಳಗೆ ಬಿಳಿಯ ಬಟ್ಟಿಯಿಂದ ಸುತ್ತಿ ಮುಖ ಮಾತ್ರ ಕಾಣುವಂತೆ ಮೋಹನನನ್ನು ಮಲಗಿಸಿದ್ದರು. ಮಲಗಿ ನಿದ್ರಿಸುವಂತಿದ್ದ ಅವನನ್ನು ಕಂಡು ಅಲ್ಲಿದ್ದವರೆಲ್ಲ ಮಮ್ಮಲ ಮರುಗಿದರು. ಬಂಧುಗಳ ರೋಧನ ತಾರಕಕ್ಕೇರಿತು. ಯಾರು ಯಾರನ್ನು ಸಂತೈಸುವವರಿಲ್ಲದೆ ಇಡೀ ಮನೆಯ ಜನವೆಲ್ಲ ಭೋರಾಡಿ ಅಳುತ್ತಲೇ ಇದ್ದರು. ಇಳಾಳಂತು ‘ಪಪ್ಪ, ನನ್ನ ಬಿಟ್ಟು ಹೋಗಿಬಿಟ್ಯಾ, ನಾನು ಇನ್ಯಾರನ್ನ ಪಪ್ಪ ಅನ್ನಲಿ, ಪಪ್ಪ, ಪಪ್ಪ’ ಅಂತ ಮೈ ಮೇಲೆ ಬಿದ್ದು ಗೋಳಾಡಿದಳು. ಸಾಕಾಗುವಷ್ಟು, ಅತ್ತುಬಿಡಲಿ ಎಂದು ಯಾರೂ ಅವಳನ್ನು ತಡೆಯಲು ಹೋಗಲಿಲ್ಲ. ಇದ್ದುದರಲ್ಲಿ ಸುಂದರೇಶ ದುಃಖವನ್ನು ಹತೋಟಿಗೆ ತಂದುಕೊಂಡು ‘ಅಗ್ಲೆ ಸಮಯ ಆಗ್ತಿದೆ. ಬೇಗ ಬೇಗ ಮುಂದಿನ ಕೆಲಸ ಮುಗಿಸಿ’ ಅಂತ ಅಲ್ಲಿದ್ದವರನ್ನು ಅವಸರಿಸಿದರು.

ತೋಟದಲ್ಲಿ ಆಗಲೇ ಗುಂಡಿ ತೋಡಿ ಬಾಳೆಕಂಬ ನೆಟ್ಟು ಗುಂಡಿಯ ಮೇಲೆ ಚಪ್ಪರದಂತೆ ಕಟ್ಟಿ ಹೂಗಳಿಂದ ಶೃಂಗರಿಸಿದ್ದರು. ಗುಂಡಿಯಲ್ಲಿ ಹೆಣವನ್ನು ಕೂರಿಸಲು ಅನುವಾಗುವಂತೆ ಗೋಡೆಯ ಒಂದು ಭಾಗವನ್ನು ಕೆತ್ತಿ ಜಾಗ ಮಾಡಿದ್ದರು. ಆರು ಅಡಿ ಗುಂಡಿ ತೊಂಡಿದ್ದರೂ ಹೆಣವನ್ನು ಮಲಗಿಸದೆ ಗೋಡೆಗೆ ಒರಗಿಸಿ, ಕೂರಿಸಿ ಮಣ್ಣು ಮುಚ್ಚುವ ಪದ್ಧತಿ ಅವರದಾಗಿತ್ತು. ಇತ್ತ ಮನೆಯ ಮುಂದೆ ಕುರ್ಚಿಯೊಂದರಲ್ಲಿ ಹೆಣವನ್ನು ಕೂರಿಸಿ ಹೊತ್ತೊಯ್ಯಲು ಎರಡು ಬಿದಿರು ಕಂಬವನ್ನು ಕಟ್ಟಿ ಸಿದ್ಧ ಮಾಡಿದ್ದರು. ಮೋಹನನ ಬಾಡಿಯನ್ನು ನಾಲ್ಕೈದು ಜನ ಹೊತ್ತುಕೊಂಡು ಬಂದು ಕುರ್ಚಿಯಲ್ಲಿ ಕಟ್ಟಿ ಕೂರಿಸಿದರು. ಸಂಪ್ರದಾಯದಂತೆ ಐನೋರು ಶವದ ಪೂಜೆ ಮಾಡಿದರು. ಬಂದವರೆಲ್ಲ ಹೂ, ತೆಂಗಿನಕಾಯಿ, ಊದುಗಡ್ಡಿ ತಂದಿದ್ದರು. ಎಲ್ಲರೂ ಪೂಜೆ ಮಾಡಿ ಕೈ ಮುಗಿದರು. ಸತ್ತ ಮೇಲೆ ಸತ್ತವರು ದೇವರಂತೆ ಎಂಬ ಪದ್ಧತಿ ಅಲ್ಲೀದು. ಹಾಗಾಗಿ ಎಲ್ಲರೂ ಪೂಜೆ ಮಾಡಿ ನಮಸ್ಕರಿಸಿದರು, ಇಳಾಳಿಂದಲೂ ಬಲವಂತವಾಗಿ ಪೂಜೆ ಮಾಡಿಸಿ ಹೆಣವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಗುಂಡಿಯತ್ತ ಬಂದರು. ಮೂರು ಸುತ್ತು ಸುತ್ತುತ್ತ ಸುತ್ತ ಬಂದು ಇಬ್ಬರು ಗುಂಡಿಯೊಳಗೆ ಇಳಿದು ಹೆಣವನ್ನು ಇಳಿಸಿಕೊಂಡು ಗೋಡೆಗೆ ಒರಗಿಸಿ ಕೂರಿಸಿದರು. ಅಲ್ಲಿ ಮತ್ತೊಮ್ಮೆ ಪೂಜೆಯಾಯಿತು. ಬಿಲ್ಪತ್ರೆ, ವಿಭೂತಿ ಎಲ್ಲರೂ ಹಿಡಿಯಲ್ಲಿ ಹಿಡಿದು ಗುಂಡಿಗೆ ಹಾಕಿದರು. ಅಷ್ಟರಲ್ಲಿ ಗಿರೀಶ ನೀಲಳನ್ನು ಕಾರಿನಲ್ಲಿಯೇ ಅಲ್ಲಿಗೆ ಕರೆತಂದ. ಮೆಲ್ಲನೆ ಅವಳನ್ನು ಇಳಿಸಿಕೊಂಡು ಗುಂಡಿಯತ್ತ ಕರೆತಂದರು. ಅಳಲೂ ಶಕ್ತಿ ಇಲ್ಲದೆ ನೀಲಾ ಮೈಮೇಲೆ ಪ್ರಜ್ಞೆ ಇಲ್ಲದಂತೆ ತೂರಾಡುತ್ತಿದ್ದಳು. ಅವಳ ಕೈಯಿಂದ ಬಲವಂತವಾಗಿ ಬಿಲ್ಪತ್ರೆ, ವಿಭೂತಿ ಹಾಕಿಸಿದರು. ಗುಂಡಿಯೊಳಗಿದ್ದ ಮೋಹನನನ್ನು ನೋಡಿ ‘ಮೋಹನ್’ ಅಂತ ಜೋರಾಗಿ ಚೀರಿ ಪ್ರಜ್ಞೆ ತಪ್ಪಿದಳು. ಅವಳನ್ನು ಎತ್ತಿಕೊಂಡು ಕಾರಿನಲ್ಲಿ ಮಲಗಿಸಿದರು. ಎಲ್ಲರೂ ಜೋರಾಗಿ ಅಳುತ್ತಲೇ ಗುಂಡಿಗೆ ಜೊತೆಯಲ್ಲಿ ಮಣ್ಣು ಹಾಕಿದರು. ಅಪ್ಪನ ಮೇಲೆ ಮಣ್ಣು ಬೀಳುತ್ತಿದ್ದಂತೆ ಇಳಾ ‘ಪಪ್ಪ, ಪಪ್ಪ’ ಅಂತ ಅಳುತ್ತಲೇ ಕುಸಿದಳು.

ಮೋಹನನ ಕಾರ್ಯವೆಲ್ಲವೂ ಸಾಂಗವಾಗಿ ನೆರವೇರಿತು. ಉಳಿದ ಹತ್ತಿರದ ಸಂಬಂಧಿಗಳೂ ಮನೆಯಿಂದ ಹೊರಟು ನಿಂತರು. ಈಗ ತಾಯಿ-ಮಗಳು ಇಬ್ಬರೇ ಮನೆಯಲ್ಲಿ ನೀಲಾ ಇನ್ನು ಚೇತರಿಸಿಕೊಂಡೇ ಇಲ್ಲಾ. ನೀಲಾಳ ದೊಡ್ಡಮ್ಮ ಅಂಬುಜಮ್ಮ ನೀಲಾಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಮಗನ ಮನೆಯಿಂದ ನೀಲಾಳ ಮನೆಗೆ ಬಂದಿಳಿದರು. ಮಗನ ಮನೆಯಲ್ಲಿ ಸಮಾಧಾನ ಇಲ್ಲದೇ ವೃದ್ಧಾಶ್ರಮ ಸೇರುವ ಬಯಕೆ ಹೊಂದಿದ್ದ ಅಂಬುಜಮ್ಮ ನೀಲಾಳ ಮನಃಸ್ಥಿತಿ ಕಂಡು ಮರುಗಿ, ಎರಡು ದುಃಖತಪ್ತ ಜೀವಿಗಳನ್ನು ನೋಡಿಕೊಳ್ಳುವ ಮನಸ್ಸಿನಿಂದ ಹಾಗೂ ನೆಲೆತಪ್ಪಿದ್ದ ತನ್ನ ಬದುಕು ಇಲ್ಲಿ ನೇರವಾದೀತೆಂದು ನೀಲಾಳ ಬೆಂಗಾವಲಾಗಿ ನಿಂತರು. ಇದೊಂದು ದೈವವೇ ನೀಡಿದ್ದ ಕೊಡುಗೆಯಾಗಿತ್ತು ನೀಲಾ ಹಾಗೂ ಇಳಾಳಿಗೆ. ಅಂಬುಜಮ್ಮನಿಗೂ ಒಂದು ನೆಮ್ಮದಿಯ ನೆಲೆ ಬೇಕಿತ್ತು. ಹಿರಿಯರು ದಿಕ್ಕಿಲ್ಲದ ಮನೆಗೆ ಒಂದು ಹಿರಿಯ ಜೀವ ಬೇಕಿತ್ತು. ಅಂತೂ ಒಬ್ಬರಿಗೊಬ್ಬರು ಆಸರೆ ಕಂಡುಕೊಂಡರು. ಅಂಬುಜಮ್ಮನು ಗಟ್ಟಿಮುಟ್ಟಾಗಿದ್ದರು. ಕುಳಿತು ಕಾಲ ತಳ್ಳುವ ಸೋಮಾರಿಯಲ್ಲ. ಎಲ್ಲಿದ್ದರೂ ತಾವೇ ಹುಡುಕಿ ಕೆಲಸ ಮಾಡುತ್ತಿದ್ದರು. ಮಗನ ಮನೆಯಲ್ಲಿ ಅಡುಗೆ ಮನೆಗೆ ಹೋಗುವುದನ್ನು ಸೊಸೆ ಸಹಿಸುತ್ತಿರಲಿಲ್ಲ. ತನ್ನ ಎಲ್ಲಾ ಕೆಲಸಗಳಿಗೂ ಸೊಸೆಯ ಆಕ್ಷೇಪ. ಮನೆಯಲ್ಲಿ ಸದಾ ಕುಳಿತಿರಬೇಕು. ಹಾಕಿದ್ದು ತಿಂದು ನಾಯಿಯಂತಿರಬೇಕು ಎಂಬ ಧೋರಣೆ ಸಹಿಸದೆ ಮನೆಬಿಡುವ ಮನಸ್ಸು ಮಾಡಿದ್ದರು. ಈ ವಯಸ್ಸಿನಲ್ಲಿ ವೃದ್ಧಾಶ್ರಮವೇ ಆಸರೆ ಎಂದುಕೊಂಡಿದ್ದವರಿಗೆ ಮೋಹನನ ಸಾವು ಅಂಬುಜಮ್ಮನ ದಿಕ್ಕನ್ನು ಇತ್ತ ತಿರುಗಿಸಿತ್ತು. ನೋಡೋಣ ಎಲ್ಲೋ ಇರುವ ಬದಲು ನೊಂದಿರುವ ಜೀವಗಳನ್ನು ಸಂತೈಸುತ್ತ, ಒಂದಿಷ್ಟು ದಿನ ಇಲ್ಲಿ ಇದ್ದುಬಿಡೋಣ ಎಂದು ರಮೇಶ, ಗಿರೀಶರ ಮಾತಿಗೆ ಸಮ್ಮತಿಸಿದ್ದರು. ‘ದೊಡ್ಡಮ್ಮ ನಾವ್ಯಾರೂ ಇಲ್ಲಿರುವಂತಿಲ್ಲ. ನಾವೆಲ್ಲ ಹೋದ ಮೇಲೆ ನೀಲಾ ಒಬ್ಬಳೇ ಆಗಿಬಿಡುತ್ತಾಳೆ. ನಮ್ಮ ಜೊತೆ ಅವಳು ಬರುವಂತಿಲ್ಲ. ರಾಜಣ್ಣನಿಗೆ, ಅತ್ತಿಗೆಗೆ ನಾವೂ ಹೇಳ್ತೀವಿ. ನೀವು ಇಲ್ಲೇ ಇದ್ದುಬಿಡಿ ದೊಡ್ಡಮ್ಮ, ಈ ದುಃಖದ ಸಮಯದಲ್ಲಿ ನಿಮ್ಮ ಅಗತ್ಯ ಈ ಮನೆಗೆ ಇದೆ. ದಯವಿಟ್ಟು ಇಲ್ಲಾ ಎನ್ನಬೇಡಿ’ ಎಂದು ತಂಗಿಯ ಮಕ್ಕಳಿಬ್ಬರು ಕೇಳಿಕೊಂಡಾಗ ಇಲ್ಲ ಎನ್ನಲು ಆಗಲೇ ಇಲ್ಲ. ಅನಾಥಳಂತೆ ಎಲ್ಲೋ ಇರುವ ಬದಲು ತನ್ನ ಅಗತ್ಯ ಇರುವ ಈ ಮನೆಯಲ್ಲಿಯೇ ಇರೋಣವೆಂದು ಆ ಗಳಿಗೆಯಲ್ಲಿಯೇ ಸಮ್ಮತಿಸಿಬಿಟ್ಟರು!

ತಾವು ಗಂಡನನ್ನು ಕಳೆದುಕೊಂಡಾಗ ರಾಜ ಇನ್ನೂ ಹತ್ತು ವರುಷದವ. ತನ್ನವರಾರೂ ತಮ್ಮೊಂದಿಗೆ ಇರಲಿಲ್ಲ. ತಾನೊಬ್ಬಳೇ ಅದೆಷ್ಟು ಕಷ್ಟಪಟ್ಟಿದ್ದೆ. ಆಸ್ತಿ ಉಳಿಸಿಕೊಳ್ಳಲು ಹೋರಾಟವನ್ನೇ ಮಾಡಬೇಕಿತ್ತು. ತುಂಡು ಆಸ್ತಿಯಲ್ಲಿ ಒಬ್ಬಂಟಿಯಾಗಿ ದುಡಿದು ಮಗನನ್ನು ಸಾಕಿ ದೊಡ್ಡವನನ್ನಾಗಿ ಮಾಡಿದ್ದೆ. ಯಾರೊಂದಿಗೂ ಕೈಚಾಚದೆ ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆಂದೇ ಗಂಡನ ಸಂಬಂಧಿಗಳಿಗೆ ಕೋಪ. ಬಿಟ್ಟಿ ಆಳಾಗಿ ಮಾಡಿಕೊಂಡು ಆಸ್ತಿಯನ್ನು ಕಬಳಿಸುವ ಹುನ್ನಾರ ತಿಳಿದೇ ದೂರಾಗಿದ್ದೆ. ಯೌವದನದಲ್ಲೂ ಹಾದಿ ತಪ್ಪದೆ ನಿಯತ್ತಾಗಿಯೇ ಬದುಕಿದ್ದೆ. ಮಗನಿಗಾಗಿ… ಅವನ ಒಳಿತಿಗಾಗಿ…. ಎಲ್ಲರೊಂದಿಗೂ ನಿಷ್ಠೂರಿಯಾಗಬೇಕಾದರೂ ಹಿಂಜರಿಯದೆ ದಿಟ್ಟ ಹೆಜ್ಜೆ ಇಟ್ಟು ಮಗನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿದ್ದೆ. ಈ ಕಷ್ಟದಲ್ಲಿ ನೀಲಾಳ ಅಮ್ಮ ಸಹಾಯ ಮಾಡಿದ್ದು ಸ್ವಲ್ಪವೇ… ಗಂಡನಿಗೆ ಕಾಣದಂತೆ ಸ್ವಲ್ಪವಾದರೆ, ಕಂಡಂತೆ ಸ್ವಲ್ಪ-ಹೀಗೇ ಮಗನ ಫೀಸು, ಬಟ್ಟೆ ಎಲ್ಲಾ ನೋಡಿಕೊಂಡಿದ್ದಳು. ಅವಳ ಋಣ ಈ ಜನ್ಮದಲ್ಲಿ ತೀರಿಸುವಂತಹುದ್ದೇ? ದಾಯಾದಿಗಳ ಮಧ್ಯೆ ಒಬ್ಬಂಟಿಯಾಗಿ ಬದುಕುತ್ತಿರುವಾಗ, ಅಣ್ಣಂದಿರೆಲ್ಲ ದೂರವಾದಾಗ, ಅಕ್ಕನ ಮೇಲೆ ಕರುಣೆಯಿಂದ ಬಂದು ಹೋಗಿ ಮಾಡುತ್ತಿದ್ದಳು. ಮಕ್ಕಳನ್ನು ಕಳುಹಿಸಿಕೊಡುತ್ತಿದ್ದಳು. ನೀನು ಒಂಟಿಯಲ್ಲ ಅಂತ ಸದಾ ಧೈರ್ಯ ತುಂಬುತ್ತಿದ್ದಳು. ಇಂತಹ ಕರುಣಾಮಯಿಯ ಏಕಮಾತ್ರ ಪುತ್ರಿಗೆ ಈಗ ನನ್ನದೇ ಗತಿ ಬಂತಲ್ಲ. ಸಧ್ಯ ಅವಳು ಹೋಗಿದ್ದೇ ಒಳ್ಳೆಯದಾಯಿತು. ಇದ್ದು ಇದನ್ನೆಲ್ಲ ನೋಡಿ ಸಹಿಸುವ ಶಕ್ತಿ ಅವಳಿಗಿರಲಿಲ್ಲ. ಪಾಪ ನೀಲಾ ಹೂವಿನಂತಹ ಹುಡುಗಿ. ದೊಡ್ಡಮ್ಮ, ದೊಡ್ಡಮ್ಮಾ ಅಂತ ಅದೆಷ್ಟು ಅಕ್ಕರೆ ತೋರಿಸುತ್ತಿದ್ದಳು. ಅಮ್ಮ ಸತ್ತ ಮೇಲೆ ನೀವೇ ನನಗೆ ಅಮ್ಮ ಅಂತ ಹೇಳಿ ನೊಂದುಕೊಳ್ಳುತ್ತಿದ್ದಳು. ಈ ಹುಡುಗಿಗೆ ಈ ವಯಸ್ಸಿನಲ್ಲಿಯೇ ವೈಧವ್ಯ ಕಾಡಬೇಕೇ? ಒಳ್ಳೆ ಹುಡುಗ ಅಂತ ಬೇಗನೇ ಮದುವೆ ಮಾಡಿಬಿಟ್ಟಿದ್ದರು. ಮಗಳೂ ಬೇಗ ಹುಟ್ಟಿದ್ದಳು. ಆದರೆ ನೀಲಾ ಒಂಟಿಯಾಗಿಬಿಟ್ಟಳು ಪರಿತಪಿಸಿದರು ಅಂಬುಜಮ್ಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುವು
Next post ಮಿಂಚುಳ್ಳಿ ಬೆಳಕಿಂಡಿ – ೩೮

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys