ಆನುದೇವಾ ಹೊರಗಣವನು : ನನ್ನ ವರದಿ

ಆನುದೇವಾ ಹೊರಗಣವನು : ನನ್ನ ವರದಿ

(ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಕೃತಿಗೆ ಸಂಬಂಧಿಸಿದ ‘ಸತ್ಯ ಶೋಧನಾ ಸಮಿತಿ’ಯ ಸದಸ್ಯನಾಗಿ ನೀಡಿದ ಅಭಿಪ್ರಾಯ – ವರದಿ.)

ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಎಂಬ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೆಲವರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಒಂದು ಸತ್ಯ ಶೋಧನಾ ಸಮಿತಿಯನ್ನು ರಚಿಸಿದೆ. ನನ್ನನ್ನು ಈ ಸಮಿತಿಯ ಒಬ್ಬ ಸದಸ್ಯನಾಗಿ ನಾಮಕರಣ ಮಾಡಲಾಗಿದೆ. ಸತ್ಯ ಶೋಧನಾ ಸಮಿತಿಯ ಮೊದಲನೇ ಸಭೆಯು ದಿನಾಂಕ : ೧೬-೭-೨೦೦೭ರಂದು ನಡೆಯಿತು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕನುಗುಣವಾಗಿ ನನ್ನ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ.

೧. ‘ಆನದೇವಾ ಹೊರಗಣವನು’ ಕೃತಿಯ ಬಗ್ಗೆ ಸತ್ಯಶೋಧನಾ ಸಮಿತಿಯನ್ನು ರಚಿಸಿ ಸರ್ಕಾರವು ಹೊರಡಿಸಿರುವ ಆದೇಶ ಸಂಖ್ಯೆ: ಸ್ವಂತ ಇ೨೮೭ ಕರ‌ಅ ೨೦೦೭, ದಿನಾಂಕ ೬-೦೭-೨೦೦೭ – ಇದರ ಪ್ರಕಾರ “ಕೃತಿಯ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ಹತ್ತು ದಿನದೊಳಗೆ ಸರ್ಕಾರಕ್ಕೆ ಒಂದು ವರದಿಯನ್ನು ನೀಡಬೇಕೆಂದು ತಿಳಿಸಲಾಗಿದೆ. ಈ ಆದೇಶಕ್ಕೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಡೆಯುತ್ತಿರುವ ಪ್ರದರ್ಶನ, ಒತ್ತಾಯಗಳ ವಿಷಯವಿದೆ. ಮುಟ್ಟುಗೋಲಿನ ಪರ ಮತ್ತು ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂಗತಿಯನ್ನೂ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದ್ದರಿಂದ ಪ್ರಸ್ತಾವನೆಗೂ ಆದೇಶದ ಅಂಶಗಳಿಗೂ ಒಳಸಂಬಂಧವಿದೆಯೆಂಬುದು ನನ್ನ ಗ್ರಹಿಕೆಯಾಗಿದ್ದು, ಮುಟ್ಟುಗೋಲಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲೇ ಈ ಸತ್ಯಶೋಧನಾ ಸಮಿತಿಯು ರಚನೆಯಾಗಿದೆಯೆಂದು ನಾನು ಭಾವಿಸಿದ್ದೇನೆ. ಪ್ರಸ್ತಾವನೆ ಮತ್ತು ಆದೇಶದ ಅಂಶಗಳಿಗೆ ಸಂಬಂಧವಿರುವುದರಿಂದ ‘ಕೃತಿಯ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ’ ಕೊಡುವ ವರದಿಯಲ್ಲಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸಮಿತಿಯ ಜವಾಬ್ದಾರಿಗಳಲ್ಲೊಂದು ಎಂದು ತಿಳಿಯುತ್ತೇನೆ. ಅಥವಾ ಸದಸ್ಯರಿಗೆ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ದಾಖಲಿಸುವ ಅವಕಾಶವಂತೂ ಇರಲೇಬೇಕೆಂದು ಇಲ್ಲದಿದ್ದರೆ ಅದು ಪ್ರಜಾಸತ್ತಾತ್ಮಕ ಸಮಿತಿ ಆಗುವುದಿಲ್ಲವೆಂದೂ ನಾನು ಖಚಿತವಾಗಿ ಅಭಿಪ್ರಾಯ ಪಡುತ್ತೇನೆ. ಹೀಗಾಗಿ ಇತರೆ ವಿಷಯಗಳ ಜೊತೆಗೆ ನಾನು ಮುಟ್ಟುಗೋಲಿಗೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ದಾಖಲಿಸುವ ಅವಕಾಶವಂತೂ ಇರಲೇಬೇಕೆಂದು ಇಲ್ಲದಿದ್ದರೆ ಅದು ಪ್ರಜಾಸತ್ತಾತ್ಮಕ ಸಮಿತಿ ಆಗುವುದಿಲ್ಲವೆಂದೂ ನಾನು ಖಚಿತವಾಗಿ ಅಭಿಪ್ರಾಯಪಡುತ್ತೇನೆ. ಹೀಗಾಗಿ ಇತರೆ ವಿಷಯಗಳ ಜೊತೆಗೆ ನಾನು ಮುಟ್ಟುಗೋಲಿಗೆ ಸಂಬಂಧಿಸಿದ ಅಭಿಪ್ರಾಯವನ್ನೂ ದಾಖಲಿಸುತ್ತೇನೆ.

೨. ‘ಆನುದೇವಾ ಹೊರಗಣವನು’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸುವವರು ಮುಖ್ಯವಾಗಿ ಎರಡು ಕಾರಣಗಳನ್ನು ಮುಂದುಮಾಡುತ್ತಿದ್ದಾರೆಂಬುದು ನನ್ನ ತಿಳುವಳಿಕೆ. ಆ ಕಾರಣಗಳು ಹೀಗಿವೆ :
೧) ಬಸವಣ್ಣನವರು ಅಸ್ಪೃಶ್ಯ (ಮಾದಿಗ) ಜಾತಿಯಲ್ಲಿ ಹುಟ್ಟಿದರೆಂದು ಹೇಳಿರುವುದು
೨) ಕೃತಿಯ ಒಂದು ಹಂತದಲ್ಲಿ ಬಸವಣ್ಣನವರು ‘ಬಸವಿ’ ಪುತ್ರರಾಗಿರಬಹುದೆಂದು ನಿರೂಪಿಸುವುದು.
ಈ ಎರಡು ಅಂಶಗಳು ಬಸವಣ್ಣನವರ ಚಾರಿತ್ರ್ಯವಧೆಗೆ ಕಾರಣವಾಗಿದೆಯಂದೂ ಲಿಂಗಾಯತರ ಮನಸ್ಸಿಗೆ ನೋವುಂಟು ಮಾಡುವ ದುರುದ್ದೇಶ ಹೊಂದಿವೆಯೆಂದೂ ಆಕ್ಷೇಪಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ನನ್ನ ಈ ಗ್ರಹಿಕೆಗೆ ಆಧಾರವಾಗಿವೆ. ಈ ಗ್ರಹಿಕೆಯ ಬಗ್ಗೆ ಗೊಂದಲವಿಲ್ಲವೆಂಬುದು ಸ್ಪಷ್ಟವಾಗಿದೆ.

೩. ‘ಆನುದೇವಾ ಹೊರಗಣವನು’ ಕೃತಿಯ ಬಗ್ಗೆ ಬಂದಿರುವ ಈ ಎರಡು ಪ್ರಮುಖ ಆಕ್ಷೇಪಗಳ ಮತ್ತು ಈ ಹಿನ್ನೆಲೆಯಲ್ಲಿ ಕೃತಿಯಲ್ಲಿರುವ ಅಂಶಗಳ ಸತ್ಯಾಸತ್ಯತೆಯನ್ನು ಈಗ ಪರಿಶೀಲಿಸೋಣ. ಡಾ. ಬಂಜಗೆರೆ ಜಯಪ್ರಕಾಶ್ ಅವರು ತಮ್ಮ ಕೃತಿಗೆ ‘ಬಸವಣ್ಣನ ಜಾತಿಮೂಲದ ವಿಶ್ಲೇಷಣೆ’ ಎಂಬ ಉಪಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಕೃತಿಯು ಒಂದು ವಿಶ್ಲೇಷಣಾತ್ಮಕ ಕೃತಿಯೆಂದು ಕರೆದುಕೊಂಡಿದ್ದಾರೆ. ಆದರೆ ತಮ್ಮ ಕೃತಿಯಲ್ಲಿ ತಲುಪಿರುವ ತೀರ್ಮಾನ ಮತ್ತು ಅನುಮಾನಗಳ ಬಗ್ಗೆ ‘ಸಂಶೋಧನೆ’ ಮುಂದುವರಿಯಬೇಕೆಂದು ಅಪೇಕ್ಷಿಸುತ್ತಾರೆ. ಅವರ ‘ವಿಶ್ಲೇಷಣೆ’ಯ ಮುಂದುವರಿಕೆಯಾಗಿ ‘ಸಂಶೋಧನೆ’ಯ ಅಗತ್ಯವಿದೆಯೆಂಬುದು ಅವರ ಅಭಿಪ್ರಾಯವಾಗಿದೆ. ಹೀಗೆಂದು ಅವರು ಬಸವಣ್ಣನವರು ಹುಟ್ಟಿದ ಜಾತಿಯ ಬಗ್ಗೆ ಅಸ್ಪಷ್ಟ ನಿಲುವು ತಾಳಿಲ್ಲ. ಬಸವಣ್ಣನವರು ಹುಟ್ಟಿನಿಂದ ಬ್ರಾಹ್ಮಣರಲ್ಲ ಎಂದು ನಿರೂಪಿಸುವುದು ಅವರ ಕೃತಿಯ ಮೊದಲ ಆದ್ಯತೆಯಾಗಿದೆ. ಅವರು ತಮ್ಮ ಮಾತುಗಳಲ್ಲಿ ಇದನ್ನು ಸ್ಪಷ್ಟಪಡಿಸುತ್ತಾರೆ. ಸಮಗ್ರ ಸಂಶೋಧನೆಯನ್ನು ಹಲವು ಆಯಾಮಗಳಲ್ಲಿ ಕೈಗೊಳ್ಳಬೇಕೆಂದು ಹೇಳುತ್ತ “ಆಗ ಮಾತ್ರವೇ ಬಸವಣ್ಣ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನೆಂಬ ಹುಸಿಸತ್ಯವನ್ನು ಹೇಳುವ ಅಪದ್ಧಗಳನ್ನು ನಿವಾರಿಸಲಿಕ್ಕೆ ಸಾಧ್ಯವಾಗುತ್ತದೆ (ಪುಟ-೮೪)” ಎಂದು ಅಭಿಪ್ರಾಯಪಡುತ್ತಾರೆ. ಇದರ ಜೊತೆಗೆ ಬಸವಣ್ಣನವರನ್ನೂ ಒಳಗೊಂಡಂತೆ ಅನೇಕ ಶರಣರು ಅಸ್ಪೃಶ್ಯ ಜಾತಿಗಳಿಂದ ಬಂದವರೆಂಬ ಅಭಿಪ್ರಾಯ ಅವರದಾಗಿದ್ದು ಇದಕ್ಕೆ ಪ್ರಾಜ್ಞವಿದ್ವಾಂಸರು ತಮ್ಮ ವಿದ್ವತ್ತಿನ ನೆರವು ನೀಡಿ ಸಂಶೋಧನೆಯ ಮುಂದುವರಿಕೆಗೆ ಸಹಕರಿಸಬೇಕು” ಎಂದು “ವಿನಮ್ರವಾಗಿ” ವಿನಂತಿಸುತ್ತಾರೆ.

ಬಸವಣ್ಣನವರು ಬ್ರಾಹ್ಮಣರಲ್ಲವೆಂದೂ ಅಸ್ಪೃಶ್ಯ (ಮಾದಿಗ) ಜಾತಿಗೆ ಸೇರಿದವರೆಂದು ನಿರೂಪಿಸುವ ಲೇಖಕರು, ತಮ್ಮ ಬರವಣಿಗೆಗೆ ಸಾಂಪ್ರದಾಯಿಕ ಸಂಶೋಧನೆಯ ಮಾದರಿಗಳನ್ನು ಆದರ್ಶವಾಗಿ ಪರಿಭಾವಿಸಿಲ್ಲ. ಕೇವಲ ಲಿಖಿತ ಮಾಹಿತಿಗಳನ್ನು ಆಧರಿಸಿಲ್ಲ. ಅಡಿ ಟಿಪ್ಪಣಿಗಳನ್ನು ಕೊಡುವುದೇ ಮುಖ್ಯವೆಂದು ಭಾವಿಸಿಲ್ಲ. ಆದರೆ ಕೆಲವು ಲಿಖಿತ ಮಾಹಿತಿಗಳೊಂದಿಗೆ ಮೌಖಿಕ ಪರಂಪರೆಯ ಮಾಹಿತಿಗಳನ್ನು ಆಧರಿಸಿದ್ದಾರೆ. ಜನ ಸಮುದಾಯದ ಕೆಲವು ಪದ್ಧತಿ ಮತ್ತು ಆಚರಣೆಗಳನ್ನು ಆಧಾರವಾಗಿ ಬಳಸುತ್ತಾರೆ. ಬಸವಣ್ಣನವರು ಅಸ್ಪೃಶ್ಯರೆಂದು ಭಾವಿಸಲು ಕಾರಣವಾಗುವ ಕೆಲವು ವಚನಗಳನ್ನು ಅರ್ಥೈಸಿ, ತಮ್ಮ ವಾದಕ್ಕೆ ಸಮರ್ಥನೆ ನೀಡುತ್ತಾರೆ.

ಡಾ. ಬಂಜಗೆರೆಯವರ ಅಭಿಪ್ರಾಯಕ್ಕೆ ಕೆಲವು ಸಮರ್ಥನೀಯ ಆಧಾರಗಳಿವೆಯೆಂದು ನನಗನ್ನಿಸುತ್ತದೆಯಾದರೂ ಅವರು ತಮ್ಮ ವಾದಕ್ಕೆ ವಿರುದ್ಧವಾದ ವಚನಗಳನ್ನು ಮತ್ತು ವಿಚಾರಗಳನ್ನು ಮತ್ತಷ್ಟು ಸಾರ್ಥಕ ಮುಖಾಮುಖಿಗೆ ಒಳಪಡಿಸಬೇಕಾಗಿತ್ತೆಂದು ನಾನು ಭಾವಿಸುತ್ತೇನೆ. ಬಸವಣ್ಣನವರ ವಚನಗಳಲ್ಲಿ ಹುಟ್ಟಿಗೆ ಸಂಬಂಧಿಸಿದಂತೆ ಪರಸ್ಪರ ವೈರುಧ್ಯದ ಕೆಲವು ವಚನಗಳಿವೆ. ಅವುಗಳನ್ನು ಎದುರು ಬದುರಾಗಿಸಿ ನಡೆಸುವ ವಿಶ್ಲೇಷಣೆಯು ಹೆಚ್ಚು ಉಪಯುಕ್ತವಾಗುತ್ತಿತ್ತು. ಜೊತೆಗೆ ತಮ್ಮ ವಿಚಾರ ಮಂಡನೆಯನ್ನು ಮತ್ತಷ್ಟು ಕ್ರಮಬದ್ಧವಾಗಿ ಮಾಡಬೇಕಿತ್ತು. ಹೀಗೆಂದ ಕೂಡಲೆ ಬಂಜಗೆರೆಯವರ ಕೃತಿಯು ಅಸತ್ಯಗಳನ್ನು ಹೇಳುತ್ತದೆಯೆಂದು ಭಾವಿಸಬೇಕಿಲ್ಲ. ತಮಗೆ ಕಂಡ ಸತ್ಯವನ್ನು ಪ್ರಾಮಾಣಿಕವಾಗಿಯೇ ಅವರು ಹೇಳಿದ್ದಾರೆ; ಅವರು ಕಂಡ ಸತ್ಯಕ್ಕೆ ಸಮರ್ಥನೆಯಾಗಿ ಮತ್ತಷ್ಟು ಅಧ್ಯಯನದ ಅಗತ್ಯವಿದೆಯೆಂದು ನಾನು ಭಾವಿಸುತ್ತೇನೆಯೇ ಹೊರತು ಅವರು ಹೇಳಿದ್ದೆಲ್ಲ ಸುಳ್ಳು ಎಂದು ಹೇಳಲಾಗದು. ಯಾಕೆಂದರೆ, ಅವರು ಎತ್ತಿರುವ ಪ್ರಶ್ನೆಗಳನ್ನು ಸರಿಯಾಗಿ ಎದುರಿಸಿಯೇ ಉತ್ತರ ಹುಡುಕಬೇಕಾಗುತ್ತದೆ. ಸದ್ಯಕ್ಕೆ, ಅವರ ಗ್ರಹಿಕೆಗಳು ಬಸವಣ್ಣನವರು ಬ್ರಾಹ್ಮಣ ಮೂಲದವರಲ್ಲ ಮತ್ತು ಅಸ್ಪೃಶ್ಯರು ಎಂಬ ನೆಲೆಯಲ್ಲಿ ದೃಢವಾದ ಅನುಮಾನಗಳನ್ನು ಎತ್ತುವಷ್ಟು ಶಕ್ತವಾಗಿದೆ. ಈ ಶಕ್ತ ಅನುಮಾನಗಳಿಗೆ ಮತ್ತಷ್ಟು ಸೂಕ್ತ ಸಂಶೋಧನೆಯ ಅಗತ್ಯವಿದೆ. ಆದ್ದರಿಂದ ಬಂಜಗೆರೆಯವರದು ಪ್ರಾಮಾಣಿಕ ಅನುಮಾನವಾಗುತ್ತದೆ, ಅಂತಿಮ ತೀರ್ಮಾನವಾಗುವುದಿಲ್ಲ ಎಂದು ನಾನು ಕಂಡುಕೊಂಡ ಸತ್ಯ.

ಇನ್ನು ಬಸವಣ್ಣನವರು ಬಸವಿ (ದೇವದಾಸಿ) ಪುತ್ರರು ಎಂಬುದರ ಬಗ್ಗೆ ಕೃತಿಕಾರರಿಗೆ ಖಚಿತತೆಯಿಲ್ಲ. ತಮ್ಮ ವಾದಕ್ಕಾಗಿ ಈ ಮಾಹಿತಿಯನ್ನು ಅವರು ಪ್ರಾಮಾಣಿಕವಾಗಿಯೇ ಬಳಸಿಕೊಳ್ಳುತ್ತಾರೆ. ಅಷ್ಟೇ ಪ್ರಾಮಾಣಿಕವಾಗಿ “ಇದು ಹೀಗೇ ಇರಬೇಕೆಂದು ಸೂಚಿಸುವಷ್ಟು ನಾನು ಶಕ್ತನಲ್ಲ. (ಪುಟ-೪೧)” ಎಂದು ಹೇಳುತ್ತಾರೆ. ಹೀಗಾಗಿ ಈ ಬಗ್ಗೆ ವಿವಾದ ಎಬ್ಬಿಸುವ ಅಗತ್ಯ ಕಾಣುವುದಿಲ್ಲ.

ಮುಖ್ಯವಾದ ವಿಷಯವೆಂದರೆ – ಒಂದು ವೇಳೆ ಬಸವಣ್ಣನವರು ಅಸ್ಪೃಶ್ಯರೇ ಆಗಿದ್ದರೆ, ದೇವದಾಸಿ ಪುತ್ರರೇ ಆಗಿದ್ದರೆ ಅದನ್ನು ಅವಮಾನವೆಂದಾಗಲಿ, ಚಾರಿತ್ರ್ಯವಧೆಯೆಂದಾಗಲಿ ಭಾವಿಸುವ ಅಗತ್ಯವಿಲ್ಲ. ಬ್ರಾಹ್ಮಣರಾದರೆ ಮಾನ ಅಸ್ಪೃಶ್ಯರಾದರೆ ಅವಮಾನ ಎಂಬ ಭಾವನೆಯು ಬಸವಣ್ಣನವರ ಆಶಯಗಳಿಗೆ ಮಾಡುವ ಅವಮಾನವಾಗುತ್ತದೆ. ಆದ್ದರಿಂದ ನಮ್ಮ ಚರ್ಚೆಯು ಕೃತಿಕಾರರು ಹೇಳಿದ್ದು ಸತ್ಯವೆ ಅಲ್ಲವೆ ಎಂಬ ಸಂಶೋಧನಾ ಪ್ರಕ್ರಿಯೆಗೆ ಪರಿಮಿತವಾಗುವುದು ಮುಖ್ಯವೆಂದು ನಾನು ಭಾವಿಸುತ್ತೇನೆ.

‘ಆನುದೇವಾ ಹೊರಗಣವನು’ ಕೃತಿಯನ್ನು ಹೊಸ ಪ್ರಶ್ನೆ ಎತ್ತುವ ಕೃತಿಯೆಂದು ಭಾವಿಸುವ ನಾನು ಅಂತಿಮ ಸತ್ಯದ ಕೃತಿಯೆಂದು ತೀರ್ಮಾನಿಸುವುದಿಲ್ಲ. ಆದರೆ ಹೊಸ ಪ್ರಶ್ನೆಗಳಲ್ಲಿ ಪ್ರಾಮಾಣಿಕತೆಯಿದೆ; ಸದುದ್ದೇಶವಿದೆ. ಲೇಖಕರೇ ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ: “ಸಾಮಾಜಿಕ ಸತ್ಯಗಳನ್ನು ಇದ್ದುದಿರುವ ಹಾಗೆಯೇ ಮಂಡಿಸುವುದು ಎಂಬ ನನ್ನ ಅಧ್ಯಯನ ಕಾಯಕದಲ್ಲಿ ಬೇರೆಯಾವುದೇ ಬಗೆಯ ಮುಚ್ಚುಮರೆಯ ದುರುದ್ದೇಶಗಳೂ ಇಲ್ಲ”. ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿಯವರು ‘ಬಸವಪಥ’ ಪತ್ರಿಕೆಯ ಜುಲೈ ೨೦೦೭ರ ಸಂಚಿಕೆಯಲ್ಲಿ ಹೀಗೆ ಹೇಳುತ್ತಾರೆ: “ಕೃತಿಕಾರರು ಸ್ವತಃ ಬಸವಣ್ಣನವರ ಬಗ್ಗೆ ಗೌರವವನ್ನು ಹೊಂದಿರತಕ್ಕಂತಹ ವ್ಯಕ್ತಿಯಾಗಿದ್ದಾರೆ.”

ಅಂದರೆ, ಬಸವಣ್ಣನವರಿಗಾಗಲಿ, ವೀರಶೈವರಿಗಾಗಲಿ ಅಗೌರವವುಂಟುಮಾಡುವುದು ಕೃತಿಕಾರರ ಉದ್ದೇಶವಲ್ಲ ಎಂಬುದು ಸ್ಪಷ್ಟ.

೪. ‘ಆನುದೇವಾ ಹೊರಗಣವನು’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಹೇಳುವವರು ದಯವಿಟ್ಟು ಗಮನಿಸಬೇಕು: ಯಾವುದೇ ಕೃತಿಯ ವಿಚಾರಗಳು ತಮಗೆ ಒಪ್ಪಿಗೆಯಾಗದೆ ಇದ್ದಾಗ ಅದಕ್ಕೆ ವಿರುದ್ಧ ಸಾಕ್ಷಾಧಾರಗಳಿಂದ ಅಲ್ಲಗೆಳೆಯಬೇಕು; ಬರೆಯಬೇಕು; ಟೀಕಿಸಬೇಕು; ಇದಾವುದಕ್ಕೂ ಅರ್ಹವಲ್ಲವೆನ್ನಿಸಿದರೆ ನಿರ್ಲಕ್ಷಮಾಡಬೇಕು. ಇದು ಪ್ರಜಾಸತ್ತಾತ್ಮಕ ಕ್ರಿಯೆ. ಇದನ್ನು ಬಿಟ್ಟು ಬಸವಣ್ಣನವರಿಗಾಗಲಿ, ವೀರಶೈವರಿಗಾಗಲಿ ಅಗೌರವ, ಅವಮಾನಗಳಿಗೆ ಕಾರಣವಾಗದೆ ಇರುವ, ಕೆಲವು ಹೊಸ ಪ್ರಶ್ನೆಗಳಿಗೆ ಮಾತ್ರ ಕಾರಣವಾಗಿರುವ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸುವುದು ಸರಿಯಲ್ಲ.

ಸಂವಿಧಾನದ ೧೯.೧ನೇ ಪರಿಚ್ಛೇದವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಅಂತೆಯೇ ೧೯.೨ರಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದೆ. ಸ್ವಾತಂತ್ರ್ಯವು ಶ್ವೇಚ್ಛಾಚಾರವಾಗಬಾರದೆನ್ನುವುದೇ ಈ ನಿರ್ಬಂಧಗಳ ಆಶಯ. ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರ ಬೇರೆಯೆಂಬ ಅಂಶವನ್ನು ನಾನು ಒಪ್ಪುತ್ತೇನೆ. ಆದರೆ ಡಾ.ಬಂಜಗೆರೆ ಜಯಪ್ರಕಾಶ್ ಅವರ ಕೃತಿಯು ಸ್ವಾತಂತ್ರ್ಯದ ಮಿತಿಯಲ್ಲೇ ಇದೆಯೆಂದು ನನ್ನ ಖಚಿತವಾದ ತಿಳುವಳಿಕೆ. ಆದ್ದರಿಂದ ಅವರ ‘ಆನುದೇವಾ ಹೊರಗಣವನು’ ಕೃತಿಯನ್ನು ಯಾವುದೇ ಕಾರಣಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು. ಹಾಗೇನಾದರೂ ಮಾಡಿದರೆ ಅದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗುತ್ತದೆ.
ಡಾ. ಪಿ.ವಿ. ನಾರಾಯಣ ಅವರ ‘ಧರ್ಮಕಾರಣ’ವನ್ನು ಅಂದಿನ ಸರ್ಕಾರವು ಮುಟ್ಟುಗೋಲು ಹಾಕಿಕೊಂಡದ್ದನ್ನು ಈಗ ಸುಪ್ರೀಂ ಕೋರ್ಟು ಎತ್ತಿ ಹಿಡಿದಿದೆ ಎಂಬ ಉತ್ಸಾಹದಲ್ಲಿ ಸಲ್ಲದ ಕ್ರಮಕ್ಕೆ ಮುಂದಾಗಬಾರದು. ಈ ವಿಷಯವನ್ನು ಕೇವಲ ನ್ಯಾಯಾಂಗದ ‘ತಾಂತ್ರಿಕ’ ಸಂಗತಿಯಾಗಿ ಯೋಚಿಸದೆ ‘ತಾತ್ವಿಕ’ ಸಂಗತಿಯಾಗಿಯೂ ಚಿಂತನೆ ನಡೆಸಬೇಕು. ಡಾ. ಬಂಜಗೆರೆಯವರ ‘ಆನುದೇವಾ ಹೊರಗಣವನು’ ಕೃತಿಯನ್ನು ಮುಟ್ಟುಗೋಲು ಹಾಕುವುದು ಯಾವ ಕಾರಣಕ್ಕೂ ಸರಿಯಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.
*****
(೧೭.೦೭.೨೦೦೭)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡವೆ ಆತ್ಮ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೭

ಸಣ್ಣ ಕತೆ

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…