೨.೨ ಸುವರ್ಣ ಪ್ರಮಿತಿ

೨.೨ ಸುವರ್ಣ ಪ್ರಮಿತಿ

ಸುವರ್ಣ ಪ್ರಮಿತಿಯು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸುಮಾರು ಒಂದೂವರೆ ಶತಮಾನ ಅಸ್ತಿತ್ವದಲ್ಲಿದ್ದ ಪ್ರಮುಖ ಏಕಲೋಹದ ಹಣವಾಗಿದೆ. ಸುವರ್ಣ ಪ್ರಮಿತಿಯನ್ನು ಮೊತ್ತ ಮೊದಲಿಗೆ ೧೮೧೬ ರಲ್ಲಿ ಇಂಗ್ಲೆಂಡು ಅನುಷ್ಠಾನಕ್ಕೆ ತಂದಿತು. ೧೮೨೦ ರಿಂದ ೧೮೭೦ ರ ವರೆಗಿನ ಅವಧಿಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಸುವರ್ಣ ಪ್ರಮಿತಿಯನ್ನು ಅನುಷ್ಠಾನಗೊಳಿಸಿದವು. ಪ್ರಥಮ ಮಹಾಯುದ್ಧದ (೧೯೧೪-೧೮) ಬಳಿಕ ಕಾಗದದ ಪ್ರಮಿತಿ ಜನಪ್ರಿಯವಾಯಿತು. ಮಹಾ ಆರ್ಥಿಕ ಬಿಕ್ಕಟ್ಟಿನಿಂದಾಗಿ (೧೯೨೯-೩೪) ಸುವರ್ಣ ಪ್ರಮಿತಿಯು ಸಂಪೂರ್ಣವಾಗಿ ಪತನ ಹೊಂದಿತು.

ಸುವರ್ಣ ಪ್ರಮಿತಿ ಎಂದರೇನು? ಸುವರ್ಣ ಪ್ರಮಿತಿಯು ಚಿನ್ನದಿಂದ ಮಾಡಿದ ಪೂರ್ಣ ಶರೀರಿಯಾದ, ಕಾನೂನುಬದ್ಧ, ಪ್ರಮಾಣಕ ಹಣವಾಗಿದೆ. ಪೂರ್ಣಶರೀರಿ ಹಣವೆಂದರೆ ಮುಖ ಬೆಲೆ ಮತ್ತು ಆಂತರಿಕ ಬೆಲೆ ಒಂದೇ ಆಗಿರುವ ಹಣ. ಹ್ಯಾಬರ್ಲರನ ಪ್ರಕಾರ “ಸುವರ್ಣ ಪ್ರಮಿತಿ ಎಂದರೆ ನೂರು ಶೇಕಡಾದಷ್ಟು ಚಿನ್ನದ ಖಾತರಿಯಿರುವ ಚಿನ್ನದ ನಾಣ್ಯಗಳು ಅಥವಾ ಪ್ರಮಾಣ ಪತ್ರಗಳು ವಿನಿಮಯ ಮಾಧ್ಯಮವಾಗಿ ಅಸ್ತಿತ್ವದಲ್ಲಿರುವುದು”.

ರಾಬರ್ಟ್‌ಸನ್‍ನ ಅಭಿಪ್ರಾಯದಂತೆ, “ದೇಶವೊಂದು ತನ್ನ ಹಣದ ಘಟಕಗಳ (units) ಮೌಲ್ಯವನ್ನು ಮತ್ತು ನಿಗದಿತ ತೂಕದ ಚಿನ್ನದ ಮೌಲ್ಯವನ್ನು ಸಮಾನವಾಗಿರಿಸಿಕೊಳ್ಳುವ ಒಂದು ವಿತ್ತೀಯ ಸ್ಥಿತಿಯಾಗಿದೆ”

ಕಲ್‍ಬಾರ್ನನ ಪ್ರಕಾರ, “ದೇಶವೊಂದರ ಪ್ರಧಾನ ಹಣವನ್ನು ನಿರ್ದಿಷ್ಟ ಗುಣಮಟ್ಟದ ಚಿನ್ನದ ಸ್ಥಿರ ಪ್ರಮಾಣದೊಡನೆ ವಿನಿಮಯ ಮಾಡಲು ಸಾಧ್ಯವಿರುವ ವ್ಯವಸ್ಥೆಯೇ ಸುವರ್ಣ ಪ್ರಮಿತಿ”.

ಹ್ಯಾಟ್ರೆಯ ಅಭಿಪ್ರಾಯದಂತೆ, “ಚಿನ್ನದ ಬೆಲೆಯನ್ನು ನಿಗದಿಗೊಳಿಸಿ ಚಿನ್ನದ ಮೌಲ್ಯದೊಡನೆ ಹಣದ ಘಟಕದ ಮೌಲ್ಯವನ್ನು ಸರಿಹೊಂದಿಸುವುದು ಸುವರ್ಣ ಪ್ರಮಿತಿಯ ಅಸ್ತಿವಾರವಾಗಿರುತ್ತದೆ”.

“ಸುವರ್ಣ ಪ್ರಮಿತಿಯನ್ನು ವಿನಿಮಯ ದರಗಳ ಸ್ಥಿರತೆ ಕಾಯ್ದುಕೊಳ್ಳುವ ಸಾಧನವೆಂದು ಪರಿಗಣಿಸಬಹುದು” ಎಂದು ಕೌಥರ್ ಅಭಿಪ್ರಾಯ ಪಟ್ಟಿದ್ದಾನೆ.

ಸುವರ್ಣ ಪ್ರಮಿತಿಯ ಲಕ್ಷಣಗಳು ಮತ್ತು ಕಾರ್ಯಗಳು

ಸುವರ್ಣ ಪ್ರಮಿತಿಯ ಮುಖ್ಯ ಲಕ್ಷಣಗಳು ಇವು :
೧. ಚಿನ್ನದ ನಾಣ್ಯಗಳು : ಸಾಮಾನ್ಯವಾಗಿ ಸುವರ್ಣ ಪ್ರಮಿತಿಯು ಚಿನ್ನದ ನಾಣ್ಯಗಳ ರೂಪ ತಾಳುತ್ತದೆ. ಚಿನ್ನದ ನಾಣ್ಯಗಳಲ್ಲಿ ನಿಶ್ಚಿತ ಪ್ರಮಾಣದ ಚಿನ್ನವಿರುತ್ತದೆ. ನಾಣ್ಯಗಳ ಭಾರವನ್ನು ಮತ್ತು ಚಿನ್ನದ ಶುದ್ಧತೆಯನ್ನು ಸರಕಾರ ನಿರ್ಣಯಿಸುತ್ತದೆ.

೨. ಅಮಿತ ಶಾಸನ ಬದ್ಧತೆ: ಚಿನ್ನದ ನಾಣ್ಯಗಳಿಗೆ ಅಮಿತ ಶಾಸನ ಬದ್ಧತೆ ಇರುತ್ತದೆ. ಅದು ಸಂಪೂರ್ಣ ಶಾಸನಬದ್ಧ ಹಣವಾಗಿದ್ದು ಯಾವುದೇ ವ್ಯವಹಾರದಲ್ಲಿ ಅದನ್ನು ಬಳಸಬಹುದಾಗಿದೆ.

೩. ಪರಿವರ್ತನೀಯತೆ: ಸುವರ್ಣ ಪ್ರಮಿತಿಯಲ್ಲಿ ಕಾಗದದ ಹಣ ಅಸ್ತಿತ್ವದಲ್ಲಿರಬಹುದು ಆದರೆ ಆ ಕಾಗದದ ಹಣವು ಸಂಪೂರ್ಣವಾಗಿ ಚಿನ್ನಕ್ಕೆ ಪರಿವರ್ತನೆಗೊಳ್ಳುವಂತಿರಬೇಕು. ಅಂದರೆ ಕಾಗದದ ಹಣಕ್ಕೆ ಪೂರ್ಣ ಪರಿವರ್ತನೀಯತೆ ಇರಬೇಕಾಗುತ್ತದೆ. ಸುವರ್ಣ ಪ್ರಮಿತಿಯಲ್ಲಿ ಯಾವುದೇ ರೂಪದ ಹಣವಿದ್ದರೂ ಅದಕ್ಕೆ ಪರಿವರ್ತನೀಯತೆ ಇರುತ್ತದೆ.

೪. ನಿರ್ಬಂಧರಾಹಿತ್ಯ: ಸುವರ್ಣ ಪ್ರಮಿತಿಯಲ್ಲಿ ಚಿನ್ನದ ಮುಕ್ತ ಆಯಾತ ಮತ್ತು ನಿರ್ಯಾತಕ್ಕೆ ಅವಕಾಶವಿರುತ್ತದೆ. ಚಿನ್ನದ ಆಮದು ಮತ್ತು ರಫ್ತುಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ.

೫. ಮೌಲ್ಯ ಸ್ಥಿರತ: ಸುವರ್ಣ ಪ್ರಮಿತಿಯಲ್ಲಿ ಹಣದ ಕೊಳ್ಳುವ ಶಕ್ತಿಯನ್ನು ನಿರ್ದಿಷ್ಟ ಪ್ರಮಾಣದ ಚಿನ್ನಕ್ಕೆ ಸಮಾನವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಆದುದರಿಂದ ಆಂತರಿಕವಾಗಿ ಬೆಲೆಗಳು ಸ್ಥಿರವಾಗಿರುತ್ತವೆ. ನಾಣ್ಯಗಳನ್ನು ಕರಗಿಸಿದಾಗ, ಅದರಲ್ಲಿನ ನಿಗದಿತ ಚಿನ್ನದ ಪ್ರಮಾಣವನ್ನು ನೀಡಲಾಗುತ್ತದೆ.

೬. ಸ್ವಯಂನಿರ್ವಹಣೆ: ಸುವರ್ಣ ಪ್ರಮಿತಿ ಸ್ವಯಂ ನಿರ್ವಹಣಾ ಸಾಮರ್ಥ್ಯ ಹೊಂದಿರುತ್ತದೆ. ಲೋಹವು ಯಥೇಚ್ಛವಾಗಿ ಲಭ್ಯವಿರುವಾಗ ಚಿನ್ನದ ನಾಣ್ಯಗಳ ಪ್ರಮಾಣ ಹೆಚ್ಚಾಗುತ್ತದೆ. ಲೋಹದ ಪೂರೈಕೆ ಕಡಿಮೆಯಾದಾಗ ಚಿನ್ನದ ನಾಣ್ಯಗಳ ಪ್ರಮಾಣ ಕಡಿಮೆಯಾಗುತ್ತದೆ.

ಸುವರ್ಣ ಪ್ರಮಿತಿಯ ಪ್ರಮುಖ ಕಾರ್ಯಗಳು ಮೂರು :

೧. ಅಂತಾರಾಷ್ಟ್ರೀಯ ಪಾವತಿ: ಸುವರ್ಣ ಪ್ರಮಿತಿಯಲ್ಲಿ ಅಂತಾರಾಷ್ಟ್ರೀಯ ಪಾವತಿಗಾಗಿ ಚಿನ್ನ ಅಥವಾ ಚಿನ್ನದ ನಾಣ್ಯಗಳನ್ನು ನಿರ್ಯಾತ ಮಾಡಲಾಗುತ್ತದೆ. ಚಿನ್ನವು ಸಾರ್ವತ್ರಿಕ ಒಪ್ಪಿಗೆಯುಳ್ಳ ಲೋಹವಾಗಿದೆ. ಚಿನ್ನದ ಬೆಲೆ ಆಗಾಗ ಬದಲಾಗದ ಕಾರಣ ಅದನ್ನು ಯಾವುದೇ ಸಂದೇಹವಿಲ್ಲದೆ ಜನ ಒಪ್ಪುತ್ತಾರೆ. ಅಂತಾರಾಷ್ಟ್ರೀಯ ಪಾವತಿಯು ಸುವರ್ಣ ಪ್ರಮಿತಿಯ ಬಹುಮುಖ್ಯ ಕಾರ್ಯವಾಗಿರುತ್ತದೆ.

೨. ಬೆಲೆ ಸ್ಥಿರತ: ಚಿನ್ನವು ಮಿತಪ್ರಮಾಣದಲ್ಲಿರುವುದರಿಂದ ಸುವರ್ಣ ಪ್ರಮಿತಿಯಲ್ಲಿ ಅಧಿಕ ಕರೆನ್ಸಿ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬೆಲೆಗಳು ಏರುವುದಿಲ್ಲ ಮತ್ತು ಆರ್ಥಿಕತೆಯಲ್ಲಿ ಸ್ಥಿರತೆಯಿರುತ್ತದೆ. ಸುವರ್ಣ ಪ್ರಮಿತಿಯಲ್ಲಿ ಕಾಗದದ ಹಣ ಅಸ್ತಿತ್ವದಲ್ಲಿದ್ದರೂ, ಅದಕ್ಕೆ ಚಿನ್ನದ ಬೆಂಬಲ ನೀಡಬೇಕಾಗಿರುವುದರಿಂದ, ಅದನ್ನು ಕೂಡಾ ಅಧಿಕ ಪ್ರಮಾಣದಲ್ಲಿ ಬಿಡುಗಡೆ ಮಾಡುವಂತಿಲ್ಲ. ಆದುದರಿಂದ ಬೆಲೆ ಸ್ಥಿರತೆ ಸಾಧನೆ ಸುವರ್ಣ ಪ್ರಮಿತಿಯ ಪ್ರಧಾನ ಕಾರ್ಯಗಳಲ್ಲೊಂದು ಎಂದು ಪರಿಗಣಿತವಾಗಿದೆ.

೩. ವಿನಿಮಯ ದರ ಸ್ಥಿರತೆ: ವಿನಿಮಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಸುವರ್ಣ ಪ್ರಮಿತಿಯ ಮತ್ತೊಂದು ಕಾರ್ಯವಾಗಿದೆ. ಸುವರ್ಣ ಪ್ರಮಿತಿಯಲ್ಲಿ ಚಿನ್ನದ ಆಯಾತ ಮತ್ತು ನಿರ್ಯಾತ ನಿರ್ಬಂಧ ರಹಿತವಾಗಿರುವುದರಿಂದ ವಿನಿಮಯ ದರ ಸ್ಥಿರವಾಗಿರುತ್ತದೆ.

ಸುವರ್ಣ ಪ್ರಮಿತಿಯ ಒಳಿತುಗಳು

ಸುವರ್ಣ ಪ್ರಮಿತಿಯ ಒಳಿತುಗಳು ಇವು:

೧. ಸ್ವಯಂ ನಿರ್ವಹಣೆ: ಸುವರ್ಣ ಪ್ರಮಿತಿಯು ಸ್ವಯಂ ನಿರ್ವಹಣಾ ವ್ಯವಸ್ಥೆಯನ್ನು (automatic operation) ಹೊಂದಿರುತ್ತದೆ. ಆದುದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆಯಲ್ಲಿ ಹೊಂದಾಣಿಕೆಗಳಾಗುತ್ತವೆ.

೨. ಬೆಲೆ ಸ್ಥಿರತೆ: ಸುವರ್ಣ ಪ್ರಮಿತಿಯ ಸ್ವಯಂ ನಿರ್ವಹಣಾ ವ್ಯವಸ್ಥೆಯಿಂದಾಗಿ ಹಣದ ಬೇಡಿಕೆ ಮತ್ತು ಪೂರೈಕೆ ಸಮವಾಗಿರುತ್ತದೆ. ಹಾಗಾಗಿ ಆಂತರಿಕ ಬೆಲೆಗಳು ಸ್ಥಿರವಾಗಿರುತ್ತವೆ.

೩. ಹಣದುಬ್ಬರ ನಿಯಂತ್ರಣ: ಸುವರ್ಣ ಪ್ರಮಿತಿಯಲ್ಲಿ ದೇಶದ ಕರೆನ್ಸಿಗಳನ್ನು ಚಿನ್ನಕ್ಕೆ ಪರಿವರ್ತಿಸಲು ಸಾಧ್ಯವಿದೆ. ಯಾವುದೇ ಕರೆನ್ಸಿಯು ಚಿನ್ನದ ಬೆಂಬಲ ಹೊಂದಿರುತ್ತದೆ. ಕರೆನ್ಸಿಯನ್ನು ಹೆಚ್ಚಿಸುವಾಗ ಚಿನ್ನದ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಆದುದರಿಂದ ಸುವರ್ಣ ಪ್ರಮಿತಿಯಲ್ಲಿ ಹಣದುಬ್ಬರವು (inflation) ನಿಯಂತ್ರಣದಲ್ಲಿರುತ್ತದೆ.

೪. ಸ್ಥಿರ ವಿನಿಯಮ ದರ: ಸುವರ್ಣ ಪ್ರಮಿತಿಯಲ್ಲಿ ವಿನಿಮಯ ದರಗಳು (exchange rates) ಸ್ಥಿರವಾಗಿರುತ್ತವೆ. ವಿನಿಮಯ ದರಗಳು ಕರೆನ್ಸಿಗಳ ಚಿನ್ನದ ಮೌಲ್ಯದ ಆಧಾರದಲ್ಲಿ ನಿರ್ಣಯಿಸಲ್ಪಡುತ್ತವೆ. ಚಿನ್ನದ ಆಯಾತ ಮತ್ತು ನಿರ್ಯಾತಗಳು ಸಾಗಾಣಿಕೆ ವೆಚ್ಚವನ್ನು (transport cost) ಗಮನದಲ್ಲಿರಿಸಿಕೊಳ್ಳುತ್ತವೆ. ಕರೆನ್ಸಿಗಳ ಚಿನ್ನದ ಮೌಲ್ಯವು ಸ್ಥಿರವಾಗಿರುವುದರಿಂದ ವಿನಿಮಯ ದರಗಳು ಸ್ಥಿರವಾಗಿರುತ್ತವೆ.

೫. ವ್ಯಾಪಾರ ವಿಸ್ತರಣೆ: ಸುವರ್ಣ ಪ್ರಮಿತಿಯು ಅಂತಾರಾಷ್ಟ್ರೀಯ ವ್ಯಾಪಾರ ವಿಸ್ತರಣೆಗೆ ನೆರವಾಗುತ್ತದೆ. ವಿನಿಮಯ ದರಗಳು ಸ್ಥಿರವಾಗಿರುವುದು ಇದಕ್ಕೆ ಕಾರಣ. ಸ್ಥಿರ ವಿನಿಮಯ ದರಗಳು ವ್ಯಾಪಾರ ಹೆಚ್ಚಳಕ್ಕೆ ಮತ್ತು ಬಂಡವಾಳ ವರ್ಗಾವಣೆಗೆ ಅನುಕೂಲ ಕಲ್ಪಿಸಿಕೊಡುತ್ತವೆ.

೬. ಬಾಹ್ಯ ಹಸ್ತಕ್ಷೇಪವಿಲ್ಲ : ಸುವರ್ಣ ಪ್ರಮಿತಿಯು ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಅದನ್ನು ಯಾವುದೇ ಸಂಘಟನೆ ಅಥವಾ ಪ್ರಾಧಿಕಾರ ನಿಯಂತ್ರಿಸುವುದಿಲ್ಲ.

೭. ವಿಶ್ವಾಸಾರ್ಹತೆ: ಸುವರ್ಣ ಪ್ರಮಿತಿಯು ಜನರ ವಿಶ್ವಾಸಕ್ಕೆ ಪಾತ್ರವಾಗುವ ಹಣದ ಒಂದು ಪ್ರಕಾರವಾಗಿದೆ. ಚಿನ್ನವು ಒಂದು ಅಂತಾರಾಷ್ಟ್ರೀಯ ಸ್ವೀಕಾರಾರ್ಹತೆಯ ಲೋಹವಾಗಿದ್ದು ಸುವರ್ಣ ಪ್ರಮಿತಿಯಲ್ಲಿ ಕರೆನ್ಸಿಗಳು ಚಿನ್ನದ ಬೆಂಬಲ ಪಡೆದಿರುವುದು ಸುವರ್ಣ ಪ್ರಮಿತಿಯ ವಿಶ್ವಾಸಾರ್ಹತೆಗೆ ಕಾರಣವಾಗಿದೆ.

ಸುವರ್ಣ ಪ್ರಮಿತಿಯ ದೋಷಗಳು
೧. ವಿಷಮ ಸ್ಥಿತಿಯಲ್ಲಿ ವಿಫಲ : ಸುವರ್ಣ ಪ್ರಮಿತಿಯು ಸಾಮಾನ್ಯ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಯುದ್ಧ, ಬರಗಾಲ, ಮುಗ್ಗಟ್ಟು ಮುಂತಾದ ವಿಷಮ ಸ್ಥಿತಿಗಳನ್ನು ಎದುರಿಸುವ ಶಕ್ತಿ ಅದಕ್ಕಿಲ್ಲ. ಪ್ರಥಮ ವಿಶ್ವ ಸಮರದ ಅವಧಿಯಲ್ಲಿ (೧೯೧೪-೧೮) ಅದನ್ನು ಅಮಾನತುಗೊಳಿಸಲಾಯಿತು. ಮಹಾ ಆರ್ಥಿಕ ಮುಗ್ಗಟ್ಟಿನ (೧೯೨೯-೩೪) ಬಳಿಕ ಅದನ್ನು ಪೂರ್ಣವಾಗಿ ತೊರೆಯಬೇಕಾಯಿತು.

೨. ಕೇಂದ್ರ ಬ್ಯಾಂಕಿನ ನಿಯಂತ್ರಣ : ಸುವರ್ಣ ಪ್ರಮಿತಿಯು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆಂದು ಹೇಳಲಾಗುತ್ತಿದೆಯಾದರೂ ವಾಸ್ತವ ಸ್ಥಿತಿ ಹಾಗಿಲ್ಲ. ಸುವರ್ಣ ಪ್ರಮಿತಿಯನ್ನು ಕೇಂದ್ರ ಬ್ಯಾಂಕುಗಳು ನಿಯಂತ್ರಿಸುತ್ತಿದ್ದವು. ಅದೆಂದೂ ಸ್ವಯಂ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರಲಿಲ್ಲ.

೩. ಬಡ್ಡಿಯ ಮೇಲೆ ಪ್ರತಿಕೂಲ ಪರಿಣಾಮ: ಚಿನ್ನದ ಚಲಾವಣೆಗಾಗಿ ಕೇಂದ್ರ ಬ್ಯಾಂಕು, ಬ್ಯಾಂಕು ದರದಲ್ಲಿ (bank rate) ಬದಲಾವಣೆ ಮಾಡಬೇಕಾಗಿರುವುದು ಸುವರ್ಣ ಪ್ರಮಿತಿಯ ಇನ್ನೊಂದು ದೋಷವೆನಿಸಿದೆ. ಹಿಂದೆ ಚಿನ್ನದ ನಿರ್ಯಾತ ಕಾಲದಲ್ಲಿ ಬಡ್ಡಿಯ ದರವನ್ನು ಹೆಚ್ಚಿಸುವುದು ಮತ್ತು ಆಯಾತ ಕಾಲದಲ್ಲಿ ಬಡ್ಡಿ ದರ ಕಡಿಮೆ ಮಾಡುವುದು ಕೇಂದ್ರ ಬ್ಯಾಂಕುಗಳ ನೀತಿಯಾಗಿತ್ತು. ಬಡ್ಡಿಯ ಬದಲಾವಣೆಗಳು ವ್ಯಾಪಾರದ ಮೇಲೆ ಪ್ರತಿಕೂಲಕರ ಪರಿಣಾಮ ಬೀರುತ್ತವೆ. ಆದುದರಿಂದ ಸುವರ್ಣ ಪ್ರಮಿತಿಯು ಆರ್ಥಿಕಾಭಿವೃದ್ಧಿಗೆ ತೊಂದರೆಯುಂಟು ಮಾಡುತ್ತದೆ.

೪. ಶರತ್ತು ಬದ್ಧತೆ: ಸುವರ್ಣ ಪ್ರಮಿತಿಯ ಯಶಸ್ವೀ ಕಾರ್ಯ ನಿರ್ವಹಣೆಗೆ ಅನೇಕ ಶರತ್ತುಗಳು (conditions) ಪೂರೈಸಲ್ಪಡಬೇಕು. ದೇಶವೊಂದು ಹೆಚ್ಚು ಹಣವನ್ನು ಟಂಕಿಸಬೇಕಾದರೆ ಹೆಚ್ಚು ಚಿನ್ನ ಸಂಗ್ರಹ ಹೊಂದಿರಬೇಕಾದ ಅನಿವಾರ್ಯತೆಯಿಂದಾಗಿ ಅನೇಕ ದೇಶಗಳು ತೊಂದರೆಗೊಳಗಾದವು. ಅಲ್ಲದೆ ನಿರ್ಯಾತ ಹೆಚ್ಚಳಕ್ಕೆ ಆಂತರಿಕ ಬೆಲೆಗಳನ್ನು ಇಳಿಸಬೇಕಾದ ಸಂಕಷ್ಟಕ್ಕೆ ದೇಶಗಳು ಸಿಲುಕಿದ್ದವು. ನಾನಾಶರತ್ತುಗಳಿಂದಾಗಿ ಸುವರ್ಣ ಪ್ರಮಿತಿ ಜನಪ್ರಿಯವಾಗಲಿಲ್ಲ.

೫. ದುಬಾರಿ ಪ್ರಮಿತಿ: ಚಿನ್ನದ ಪ್ರಮಿತಿಯು ತುಂಬಾ ದುಬಾರಿಯಾದುದು (costly). ಚಿನ್ನದ ಬೆಲೆ ಅಧಿಕವಿರುವುದು ಇದಕ್ಕೆ ಕಾರಣ. ಚಿನ್ನದ ಹಣವನ್ನು ಚಲಾವಣೆಗೆ ತರುವುದೆಂದರೆ ತುಂಬಾ ಚಿನ್ನದ ಸಂಗ್ರಹ ಹೊಂದಿರುವುದು ಎಂದರ್ಥ.

೬. ಅವಲಂಬನೆ : ಸುವರ್ಣ ಪ್ರಮಿತಿಯನ್ನು ಅನುಷ್ಠಾನಗೊಳಿಸುವ ರಾಷ್ಟ್ರವು ಸ್ವತಂತ್ರ ನೀತಿಯನ್ನು ಅನುಸರಿಸುವಂತಿಲ್ಲ. ಅದು ಇತರ ರಾಷ್ಟ್ರಗಳನ್ನು ಅವಲಂಬಿಸಿ ತಮ್ಮ ನೀತಿಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ತಪ್ಪಿದರೆ ರಾಷ್ಟ್ರವು ಸುವರ್ಣ ಪ್ರಮಿತಿಯನ್ನು ತೊಡೆದು ಬಿಡಬೇಕಾಗುತ್ತದೆ. ಆಗ ಇತರ ರಾಷ್ಟ್ರಗಳೊಡನೆ ವ್ಯಾಪಾರ ಸಂಬಂಧ ಹಾಳಾಗುತ್ತದೆ.

೭. ಹಣದಿಳಿತದ ಅಪಾಯ : ಸುವರ್ಣ ಪ್ರಮಿತಿಯಿಂದ ಹಣದಿಳಿತ (deflation) ಉಂಟಾಗುತ್ತದೆಂದು ಜ್ಯೋನ್ ರಾಬಿನ್‌ಸನ್ ಅಭಿಪ್ರಾಯಪಟ್ಟಿದ್ದಾಳೆ. ಸುವರ್ಣ ಪ್ರಮಿತಿಯಲ್ಲಿ ಚಿನ್ನ ಕಳಕೊಳ್ಳುವ ರಾಷ್ಟ್ರವು ಬೆಲೆಗಳನ್ನು ಇಳಿಸಬೇಕಾಗುತ್ತದೆ. ಆದರೆ ಒಮ್ಮೆ ಬೆಲೆಗಳನ್ನು ಇಳಿಸಿದರೆ ಆರ್ಥಿಕತೆಗೆ ಮರುಚೇತನ ನೀಡುವುದು ಸುಲಭದ ಮಾತಲ್ಲ. ಹಣದಿಳಿತವು, ಹಣದುಬ್ಬರಕ್ಕಿಂತ ಅಪಾಯಕಾರಿಯಾದುದು.

೮. ಆರ್ಥಿಕ ಸ್ಥಿರತೆ : ಸುವರ್ಣ ಪ್ರಮಿತಿಯಲ್ಲಿ ಸಾಧಿತವಾಗುವ ವಿನಿಮಯ ಸ್ಥಿರತೆಯು ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತದೆ. ವಿನಿಮಯ ಸ್ಥಿರತೆಗಾಗಿ ಚಿನ್ನವನ್ನು ವರ್ಗಾಯಿಸುವಾಗ ಆಂತರಿಕ ಬೆಲೆಗಳಲ್ಲಿ ಅಸ್ಥಿರತೆ ತಲೆದೋರುತ್ತದೆ. ಹಾಗಾಗಿ ರಾಷ್ಟ್ರಗಳು ವಿನಿಮಯ ದರ ಸ್ಥಿರತೆಗಿಂತ ಆರ್ಥಿಕ ಸ್ಥಿರತೆಯನ್ನೇ ಇಷ್ಟಪಡುತ್ತವೆ.

೯. ಅನಾಯಕತ್ವ : ಹ್ಯಾಟ್ರೆಯು ಸುವರ್ಣ ಪ್ರಮಿತಿಯು ವಿಶ್ವ ಉದರಿ ನಿಯಂತ್ರಣದಲ್ಲಿ (Credit control) ಅನಾಯಕತ್ವವನ್ನು (anarchy) ಉಂಟು ಮಾಡುತ್ತದೆಂದು ಹೇಳಿದ್ದಾನೆ. ಸುವರ್ಣ ಪ್ರಮಿತಿಯ ಯಶಸ್ವಿ ಕಾರ್ಯ ನಿರ್ವಹಣೆಗೆ ನಿರ್ಬಂಧ ರಹಿತ ಮುಕ್ತ ನೀತಿ (laissez faire policy) ಅಸ್ತಿತ್ವದಲ್ಲಿರಬೇಕಾಗುತ್ತದೆ. ಅದು ಅನಾಯಕತ್ವಕ್ಕೆ ಅಂದರೆ ನಿಯಂತ್ರಣ ರಾಹಿತ್ಯ ವ್ಯವಸ್ಥೆಗೆ ಕಾರಣವಾಗಿ ಅನೇಕ ಆರ್ಥಿಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.

ಸುವರ್ಣ ಪ್ರಮಿತಿಯ ಒಳಿತುಗಳಿಗಿಂತ ಅದರ ಕಡಕುಗಳೇ ಅಧಿಕ. ಹಾಗಾಗಿ ಸುವರ್ಣ ಪ್ರಮಿತಿಯ ವ್ಯವಸ್ಥೆ ಕುಸಿದು ಕಾಗದದ ಪ್ರಮಿತಿ ಜನಪ್ರಿಯತೆ ಗಳಿಸಿತು.

ಅಂತಾರಾಷ್ಟ್ರೀಯ ಸುವರ್ಣ ಪ್ರಮಿತಿಯ ನಿಯಮಾವಳಿಗಳು (ಶರತ್ತುಗಳು)

ಸುವರ್ಣ ಪ್ರಮಿತಿಯ ಸುಲಲಿತ ಕಾರ್ಯ ನಿರ್ವಹಣೆಗೆ ಕೆಲವು ಶರತ್ತುಗಳು ಪೂರೈಸಲ್ಪಡ ಬೇಕಾಗುತ್ತದೆ. ಅವನ್ನು ಸುವರ್ಣ ಪ್ರಮಿತಿಯ ನಿಯಮಾವಳಿಗಳೆಂದು ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಸುವರ್ಣ ಪ್ರಮಿತಿಯ (international gold standard) ಯಶಸ್ವೀ ಕಾರ್ಯ ನಿರ್ವಹಣೆಗೆ ಈ ಕೆಳಗಿನ ಮೂರು ಸಾರ್ವತ್ರಿಕ ತತ್ವಗಳನ್ನು ಮ್ಯಾಕ್ಮಿಲನ್ ಸಮಿತಿಯು ಸೂಚಿಸಿದೆ:

ಅ. ಸುವರ್ಣ ಪ್ರಮಿತಿಯ ಉದ್ದೇಶಗಳ ಬಗ್ಗೆ ರಾಷ್ಟ್ರಗಳ ನಡುವೆ ಸಾಮಾನ್ಯವಾದ
ಒಪ್ಪಂದವೊಂದಿರಬೇಕು.

ಆ. ಅದು ಬೆಲೆ ಮತ್ತು ವಿನಿಮಯ ದರಗಳ ಸ್ಥಿರತ ಸಾಧಿಸಬೇಕು.

ಇ. ಕೇಂದ್ರ ಬ್ಯಾಂಕುಗಳ ಬೆಲೆ ಸ್ಥಿರತೆಗೆ ತೊಂದರೆಯುಂಟು ಮಾಡುವ ನೀತಿಗಳನ್ನು
ಅನುಷ್ಠಾನಕ್ಕೆ ತರಕೂಡದು.

ಈ ತತ್ತ್ವಗಳ ಆಧಾರದಲ್ಲಿ ಸುವರ್ಣ ಪ್ರಮಿತಿಯ ಒಂಭತ್ತು ನಿಯಮಗಳು ರೂಪುಗೊಂಡಿವೆ:

೧. ರಾಷ್ಟ್ರಗಳ ನಡುವೆ ಚಿನ್ನದ ಅನಿರ್ಬಂಧಿತ ಆಯಾತ ಮತ್ತು ನಿರ್ಯಾತ ನಡೆಯಬೇಕು.

೨. ಚಿನ್ನ ಆಯಾತ ಮಾಡಿಕೊಳ್ಳುವ ರಾಷ್ಟ್ರವು ಉದರಿ ವಿಸ್ತರಣ (credit expansion) ನೀತಿಯನ್ನು ಮತ್ತು ಚಿನ್ನ ನಿರ್ಯಾತ ಮಾಡಿಕೊಳ್ಳುವ ರಾಷ್ಟ್ರವು ಉದರಿ ಸಂಕುಚನ (credit contraction) ನೀತಿಯನ್ನು ಅನುಷ್ಠಾನಕ್ಕೆ ತರಬೇಕು.

೩. ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆಗಳಿಗೆ ಸಾಕಷ್ಟು ಅವಕಾಶವಿರಬೇಕು. ಮುಖ್ಯವಾಗಿ ಬೆಲೆ, ಕೂಲಿ, ಆದಾಯ ಮತ್ತು ನಗದು ಹಣ ಅಗತ್ಯವಿರುವಾಗಲೆಲ್ಲಾ ಬದಲಾಗುತ್ತಿರಬೇಕು.

೪. ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಅಸ್ತಿತ್ವದಲ್ಲಿರಬೇಕು. ಸರಕಾರ ಆರ್ಥಿಕ ಹಸ್ತಕ್ಷೇಪ ನಡೆಸಕೂಡದು.

೫. ರಾಷ್ಟ್ರಗಳು ವಿನಿಮಯ ಸ್ಥಿರತೆ ಕಾಯ್ದುಕೊಳ್ಳಬೇಕು.

೬. ಬೃಹತ್ ಪ್ರಮಾಣದಲ್ಲಿ ಬಂಡವಾಳ ಚಲನೆಗೆ ಅವಕಾಶವಿರಕೂಡದು.

೭. ಆಂತರಿಕ ಕರೆನ್ಸಿಯು ಸ್ಥಿರವಾಗಿರಬೇಕು. ಅದರ ಮೌಲ್ಯೋನ್ನತಿ ಅಥವಾ
ಮೌಲ್ಯಚ್ಛೇದನ ಆಗಕೂಡದು.

೮. ಆರ್ಥಿಕತೆಯಲ್ಲಿ ಸಾಮಾನ್ಯ ಪರಿಸ್ಥಿತಿ ಇರಬೇಕು. ಯುದ್ಧ ಮತ್ತಿತರ ತುರ್ತು
ಸ್ಥಿತಿಗಳು ಇರಕೂಡದು.

೯. ರಾಷ್ಟ್ರಗಳ ನಡುವೆ ಸಂಪೂರ್ಣ ಸಹಕಾರ ಮತ್ತು ಸೌಹಾರ್ದತೆ ಇರಬೇಕು.

ಸುವರ್ಣ ಪ್ರಮಿತಿಯ ಪತನಕ್ಕೆ ಕಾರಣಗಳು

೧೮೧೬ರಲ್ಲಿ ಇಂಗ್ಲೆಂಡು ಮೊತ್ತ ಮೊದಲಿಗೆ ಸುವರ್ಣ ಪ್ರಮಿತಿಯನ್ನು ಜಾರಿಗೆ ತಂದಿತು. ಚಿನ್ನದ ಸಂಗ್ರಹ ಸಾಕಷ್ಟಿಲ್ಲದ ಬಡ ರಾಷ್ಟ್ರಗಳೂ ಕೂಡಾ ೧೯೦೦ ರ ವರೆಗೆ ಚಿನ್ನದ ವಿನಿಮಯ ಪ್ರಮಿತಿಯನ್ನು (gold exchange standard) ಅನುಸರಿಸಿದವು.

ವಿಶ್ವದ ಬಹುತೇಕ ರಾಷ್ಟ್ರಗಳು ಚಿನ್ನದ ಕರೆನ್ಸಿ ಪ್ರಮಿತಿಯನ್ನು ಒಪ್ಪಿಕೊಂಡಿದ್ದವು. ಅದು ವಿನಿಮಯ ಮಾಧ್ಯಮ ಮತ್ತು ಮೌಲ್ಯ ಮಾಪಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮೊದಲ ಮಹಾಯುದ್ಧವು ಚಿನ್ನದ ಮುಕ್ತ ಆಯಾತ ಮತ್ತು ನಿರ್ಯಾತಕ್ಕೆ ತಡೆಯೊಡ್ಡಿತು. ಯುದ್ಧವು ಸುವರ್ಣ ಪ್ರಮಿತಿಯ ಅವಸಾನಕ್ಕೆ ಕಾರಣವಾಯಿತು. ಆಗ ಕಾಗದದ ಪ್ರಮಿತಿಯ ಸುವರ್ಣ ಪ್ರಮಿತಿಯ ಸ್ಥಾನವನ್ನು ಅಲಂಕರಿಸಿತು.

ಪ್ರಥಮ ಮಹಾಯುದ್ಧದ ಬಳಿಕ ಸುವರ್ಣ ಪ್ರಮಿತಿಯನ್ನು ಪುನರುತ್ಥಾನಗೊಳಿಸುವ ಪ್ರಯತ್ನಗಳಾದವು. ಅಮೇರಿಕಾವು ೧೯೧೯ ರಲ್ಲಿ ಸುವರ್ಣ ಪ್ರಮಿತಿಯನ್ನು ಮರುಸ್ಥಾಪಿಸಿತು. ೩೦ ದೇಶಗಳು ಅಮೇರಿಕಾವನ್ನು ಅನುಸರಿಸಿದವು. ೧೯೨೮ರ ವರೆಗೆ ಸುವರ್ಣ ಪ್ರಮಿತಿ ಆಬಾಧಿತವಾಗಿ ಮುಂದುವರಿಯಿತು. ಆದರೆ ಮಹಾ ಆರ್ಥಿಕ ಬಿಕ್ಕಟ್ಟು (೧೯೨೯-೩೪) ಸುವರ್ಣ ಪ್ರಮಿತಿಯ ಪಾಲಿಗೆ ಪ್ರಾಣ ಕಂಟಕವಾಗಿ ಬಿಟ್ಟಿತು. ೧೯೩೧ ರಲ್ಲಿ ಇಂಗ್ಲೆಂಡು ಸುವರ್ಣ ಪ್ರಮಿತಿಯನ್ನು ತೊಡೆದು ಹಾಕುವುದರೊಂದಿಗೆ ಅದು ಇತಿಹಾಸದ ಪುಟಗಳಲ್ಲಿ ಮಾತ್ರ ವಿರಾಜಮಾನವಾಯಿತು.

ಸುವರ್ಣ ಪ್ರಮಿತಿಯ ಪತನಕ್ಕೆ ಕಾರಣವಾದ ಅಂಶಗಳು ಇವು :

೧. ನಿಯಮಾವಳಿಗಳ ಮುರಿಕೆ : ಪ್ರಥಮ ಮಹಾಯುದ್ಧಾರಂಭವಾದಾಗ ಸುವರ್ಣ ಪ್ರಮಿತಿಯ ನಿಯಮಗಳು ಮುರಿಯಲ್ಪಟ್ಟವು. ಅಮೇರಿಕಾವು ಸಾಕಷ್ಟು ಚನ್ನ ಸಂಗ್ರಹ ಹೊಂದಿತ್ತಾದರೂ ಇಂಗ್ಲೆಂಡು ಚಿನ್ನದ ಸಂಗ್ರಹ ಸಾಕಷ್ಟಿಲ್ಲದೆ ತೊಂದರೆಗೊಳಗಾಯಿತು. ಯುದ್ಧಾವಧಿಯಲ್ಲಿ ಚಿನ್ನದ ಮುಕ್ತ ಆಯಾತ ಮತ್ತು ನಿರ್ಯಾತ ಬಹಿಷ್ಕರಿಸಲ್ಪಟ್ಟಿತು. ಕೇಂದ್ರ ಬ್ಯಾಂಕುಗಳು “ಚಿನ್ನ ಬರುವಾಗ ಉದರಿ ವಿಕಸನವಾಗಬೇಕು; ಚಿನ್ನ ಹೋಗುವಾಗ ಉದರಿ ಸಂಕುಚನಗೊಳ್ಳಬೇಕು” ಎಂಬ ಸುವರ್ಣ ನಿಯಮವನ್ನು (golden rule) ಅನುಷ್ಟಾನಕ್ಕೆ ತರಲು ವಿಫಲವಾದವು. ಬೆಲೆ ಹೆಚ್ಚಾಗುವಾಗಲೂ ಜನರು ಮತ್ತು ಸರಕಾರಗಳು ಚಿನ್ನವನ್ನು ಬಚ್ಚಿಡತೊಡಗಿದವು. ಪರಿಣಾಮವಾಗಿ ಸುವರ್ಣ ಪ್ರಮಿತಿ ಪತನ ಹೊಂದಿತು.

೨. ಚಿನ್ನದ ಅಸಮಾನ ವಿತರಣೆ: ಪ್ರಥಮ ಮಹಾಯುದ್ಧವು ಚಿನ್ನದ ಅಸಮಾನ ವಿತರಣೆಗೆ ಕಾರಣೀಭೂತವಾಯಿತು. ಕೆಲವು ರಾಷ್ಟ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಚಿನ್ನ ಬರಲಾರಂಭಿಸಿದರೆ ಅನೇಕ ರಾಷ್ಟ್ರಗಳು ಚಿನ್ನದ ಸಂಗ್ರಹವಿಲ್ಲದೆ ಒದ್ದಾಡತೊಡಗಿದವು. ಹಾಗಾಗಿ ಸುವರ್ಣ ಪ್ರಮಿತಿಗೆ ಅಂಟಿಕೊಳ್ಳಲು ಹೆಚ್ಚಿನ ರಾಷ್ಟ್ರಗಳಿಗೆ ಸಾಧ್ಯವಾಗಲಿಲ್ಲ.

೩. ವ್ಯಾಪಾರ ನಿರ್ಬಂಧ : ಚಿನ್ನದ ಮುಕ್ತ ಆಯಾತ ಮತ್ತು ನಿರ್ಯಾತಗಳಿಗೆ ಪ್ರಥಮ ವಿಶ್ವ ಸಮರ ಕಾಲದಲ್ಲಿ ನಿರ್ಬಂಧ ವಿಧಿಸಲಾಯಿತು. ಮುಕ್ತ ವ್ಯಾಪಾರದ ಬದಲು ಅನೇಕ ರಾಷ್ಟ್ರಗಳು ಸಂರಕ್ಷಣಾ ನೀತಿಯನ್ನು ಅನುಸರಿಸತೊಡಗಿದವು. ನಿರ್ಯಾತಗಳಿಗೆ ಸಬ್ಸಿಡಿ ನೀಡಿಕೆ ಮತ್ತು ಆಯಾತಗಳ ಸುಂಕ ಹೇರಿಕೆ ತೀರಾ ಸಾಮಾನ್ಯವಾದ ವಿಷಯಗಳಾದವು. ಆಯಾತಗಳು ತುಟ್ಟಿಯಾಗಿ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ತೊಂದರೆಯುಂಟಾಯಿತು.

೪. ರಾಜಕೀಯ ಸಮಸ್ಯೆಗಳು: ಪ್ರಥಮ ಮಹಾಯುದ್ಧದ ಕಾಲದಲ್ಲಿ ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಕ್ಷೋಭೆ ಕಾಣಿಸಿಕೊಂಡಿತು. ಕಾರ್ಮಿಕ ಸಂಘಟನೆಗಳು ಅನೇಕ ಸಮಸ್ಯೆಗಳನ್ನು ಸೃಷ್ಟಿಸ ತೊಡಗಿದವು. ಕೆಲವು ಉತ್ಪನ್ನಗಳ ಏಕಸ್ವಾಮ್ಯ ಹೊಂದಿರುವ ರಾಷ್ಟ್ರಗಳು ಅವುಗಳ ಬೆಲೆ ಏರಿಸಿ ಅಂತಾರಾಷ್ಟ್ರೀಯ ಬೆಲೆ ಏರಿಕೆಗೆ ಕಾರಣವಾದವು. ಪರಿಣಾಮವಾಗಿ ಸುವರ್ಣ ಪ್ರಮಿತಿಯ ವ್ಯವಸ್ಥೆ ಕುಸಿಯತೊಡಗಿತು.

೫. ಸಾಲ ಹೆಚ್ಚಳ : ಪ್ರಥಮ ವಿಶ್ವ ಸಮರದ ಬಳಿಕ ಅನೇಕ ರಾಷ್ಟ್ರಗಳು ಸಾಲದ ಸುಳಿಯಲ್ಲಿ ಸಿಲುಕಿದವು. ಕೆಲವು ರಾಷ್ಟ್ರಗಳು ಯುದ್ಧ ಪರಿಹಾರ ರೂಪದಲ್ಲಿ ಬೃಹತ್ ಮೊತ್ತದ ಹಣವನ್ನು ನೀಡಬೇಕಾಗಿ ಬಂದುದರಿಂದ ಅವುಗಳ ಸಾಲ ಪರಿಸ್ಥಿತಿ ಬಿಗಡಾಯಿಸಿತು. ಅಂತಹ ರಾಷ್ಟ್ರಗಳಿಗೆ ಸುವರ್ಣ ಪ್ರಮಿತಿಯ ನಿಯಮಾವಳಿಗಳಿಗೆ ಬದ್ಧವಾಗಿರಲು ಸಾಧ್ಯವಾಗಲಿಲ್ಲ. ಕ್ರೌಥರ್ ಹೇಳಿದಂತೆ “ಸುವರ್ಣ ಪ್ರಮಿತಿಯು ಒಂದು ಮಾತ್ಸರ್ಯ ದೇವತೆಯಾಗಿದ್ದು ಅದು ಸಂಪೂರ್ಣ ಭಕ್ತಿಯನ್ನು ಬಯಸುತ್ತದೆ” ದೇಶಗಳು ಸುವರ್ಣ ಪ್ರಮಿತಿಗೆ ಪೂರ್ಣ ನಿಷ್ಠವಾಗಿರದ ಕಾರಣ ಸುವರ್ಣ ಪ್ರಮಿತಿ ಪತನ ಹೊಂದಿತು.

ಸುವರ್ಣ ಪ್ರಮಿತಿಯ ವಿಧಗಳು (Types of Gold Standard)

ಸುವರ್ಣ ಪ್ರಮಿತಿ ವಿವಿಧ ರೂಪಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಅಸ್ತಿತ್ವದಲ್ಲಿತ್ತು. ಸುವರ್ಣ ಪ್ರಮಿತಿಯ ಪ್ರಮುಖ ವಿಧಗಳು ಇವು :

೧. ಸುವರ್ಣ ಕರೆನ್ಸಿ ಪ್ರಮಿತಿ (Gold Currency Standard): ೧೯೧೪ಕ್ಕೆ ಮೊದಲು ಇದು ಬ್ರಿಟನ್ನು, ಅಮೇರಿಕಾ ಮತ್ತು ಇತರ ಕೆಲವು ದೇಶಗಳಲ್ಲಿ ಅಸ್ತಿತ್ವದಲ್ಲಿತ್ತು. ಇದನ್ನು ಚಿನ್ನದ ಹಣದ ಪ್ರಮಿತಿ ಎಂದು ಕೂಡಾ ಕರೆಯಲಾಗುತ್ತದೆ. ಅಲ್ಲದೆ ಇದಕ್ಕೆ ಸುವರ್ಣ ಚಲಾವಣಾ ಪ್ರಮಿತಿ (gold circulation standard) ಮತ್ತು ಪೂರ್ಣ (full) ಅಥವಾ ಪರಿಶುದ್ಧ ಚಿನ್ನದ ಪ್ರಮಿತಿ (pure gold standard) ಎಂಬಿತ್ಯಾದಿ ಹೆಸರುಗಳೂ ಇದ್ದವು.

ಸುವರ್ಣ ಕರೆನ್ಸಿ ಪ್ರಮಿತಿಯ ಮುಖ್ಯ ಲಕ್ಷಣಗಳು ಹೀಗಿದ್ದವು :

ಅ. ಒಂದು ನಿರ್ದಿಷ್ಟ ತೂಕದ ಮತ್ತು ಪರಿಶುದ್ಧತೆಯ ಚಿನ್ನದ ನಾಣ್ಯಗಳು ದೇಶದೊಳಗೆ
ಸಂಚರಿಸುತ್ತಿದ್ದವು.

ಆ. ಚಿನ್ನದ ನಾಣ್ಯಗಳು ಪೂರ್ಣ ಶರೀರಿಯಾಗಿದ್ದು ಅಮಿತ ಶಾಸನ ಬದ್ಧತೆಯನ್ನು ಹೊಂದಿದ್ದವು.

ಇ. ಇತರ ಲೋಹಗಳ ನಾಣ್ಯಗಳು ಮತ್ತು ಕಾಗದದ ಹಣ ಕೂಡಾ ಜತೆಯಲ್ಲೇ ಚಲಾವಣೆಯಲ್ಲಿದ್ದವು. ಅವನ್ನು ಚಿನ್ನದ ನಾಣ್ಯಗಳಿಗೆ ಪರಿವರ್ತಿಸಲು ಸಾಧ್ಯವಿತ್ತು.

ಈ. ಚಿನ್ನದ ನಾಣ್ಯಗಳನ್ನು ಟಂಕಿಸಲು ಮುಕ್ತವಾದ ಅನುಮತಿ ಇತ್ತು.

ಉ. ಇತರ ಉದ್ದೇಶಗಳಿಗಾಗಿಯೂ ಮುಕ್ತವಾಗಿ ಚಿನ್ನದ ನಾಣ್ಯಗಳನ್ನು ಮುದ್ರಿಸಬಹುದಿತ್ತು.

ಊ. ಚಿನ್ನದ ಆಯಾತಕ್ಕೆ ಮತ್ತು ನಿರ್ಯಾತಕ್ಕೆ ಮುಕ್ತ ಅವಕಾಶವಿದ್ದಿತ್ತು.

ಸುವರ್ಣ ಕರೆನ್ಸಿ ಪ್ರಮಿತಿಯು ತುಂಬಾ ವೆಚ್ಚದಾಯಕವೆನಿಸಿದುದರಿಂದ ಪ್ರಥಮ ವಿಶ್ವ ಸಮರದ ಬಳಿಕ ಅದನ್ನು ನಿಲುಗಡೆಗೊಳಿಸಿ ಸುವರ್ಣಗಟ್ಟಿಯ ಪ್ರಮಿತಿಯನ್ನು ಅನುಷ್ಠಾನಕ್ಕೆ ತರಲಾಯಿತು.

೨. ಸುವರ್ಣ ಗಟ್ಟಿಯ ಪ್ರಮಿತಿ (Gold Bullion Standard): ಸುವರ್ಣ ಗಟ್ಟಿಯ ಪ್ರಮಿತಿಯು ಇಂಗ್ಲೆಂಡಿನಲ್ಲಿ ೧೯೨೫ ರಿಂದ ೧೯೩೧ರ ವರೆಗೆ ಮತ್ತು ಭಾರತದಲ್ಲಿ ೧೯೨೭ ರಿಂದ ೧೯೩೧ ರವರೆಗೆ ಅಸ್ತಿತ್ವದಲ್ಲಿತ್ತು. ಅದಕ್ಕೆ ಐದು ಲಕ್ಷಣಗಳಿದ್ದವು:

ಅ. ಚಿನ್ನದ ನಾಣ್ಯಗಳು ದೇಶದೊಳಗೆ ಚಲಾವಣೆಯಾಗುತ್ತಿರಲಿಲ್ಲ. ಕಾಗದದ ಹಣ ಮತ್ತು
ಚಿನ್ನದ ಹೊರತಾದ ಇತರ ಲೋಹಗಳ ಸಾಂಕೇತಿಕ ಹಣ ಚಲಾವಣೆಯಾಗುತ್ತಿತ್ತು.

ಆ. ಚಲಾವಣೆಯಲ್ಲಿದ್ದ ಹಣವು ಸ್ಥಿರದರದಲ್ಲಿ ಚಿನ್ನದ ಗಟ್ಟಿಗಳಿಗೆ ಪರಿವರ್ತನೆಗೊಳ್ಳುತ್ತಿತ್ತು.

ಇ. ಹಣವನ್ನು ಚಿನ್ನವಾಗಿ ಪರಿವರ್ತಿಸಬೇಕಿದ್ದರೆ ಚಿನ್ನದ ಬಾರುಗಳನ್ನು ನ್ಯಾಸವಾಗಿ
ಇಡಬೇಕಾಗಿತ್ತು.

ಈ. ಸರಕಾರವು ಸಾರ್ವಜನಿಕರಿಂದ ಸ್ಥಿರ ಬೆಲೆಗಳಲ್ಲಿ ಚಿನ್ನವನ್ನು ಕೊಳ್ಳುತ್ತಿತ್ತು.

ಉ. ಚಿನ್ನದ ಆಯಾತ ಮತ್ತು ನಿರ್ಯಾತಗಳಿಗೆ ಮುಕ್ತವಾದ ಪರವಾನಿಗೆ ಇತ್ತು.

೩. ಸುವರ್ಣ ವಿನಿಮಯ ಪ್ರಮಿತಿ (Gold Exchange Standard) : ಸುವರ್ಣ ವಿನಿಮಯ ಪ್ರಮಿತಿಯು ಭಾರತ ಮತ್ತು ಕೆಲವು ಪೌರ್ವಾತ್ಯ ದೇಶಗಳಲ್ಲಿ ೧೮೯೮ ರಿಂದ ೧೯೧೩ರ ವರೆಗೆ ಅಸ್ತಿತ್ವದಲ್ಲಿತ್ತು. ಈ ರಾಷ್ಟ್ರಗಳು ವಸಾಹತುಗಳಾಗಿದ್ದು ತಮ್ಮ ಆಳುವ ದೇಶದ ಹಣದೊಡನೆ ತಮ್ಮ ದೇಶಗಳ ಹಣಗಳನ್ನು ಜೋಡಿಸಿದ್ದವು. ಸುವರ್ಣ ವಿನಿಮಯ ಪ್ರಮಿತಿಯ ಮುಖ್ಯ ಲಕ್ಷಣಗಳು ಇವು :

ಅ. ಚಿನ್ನದ ನಾಣ್ಯಗಳು ದೇಶದೊಳಗೆ ಸಂಚರಿಸುತ್ತಿರಲಿಲ್ಲ.
ಆ. ದೇಶದೊಳಗೆ ಕಾಗದದ ಹಣ ಮತ್ತು ಚಿನ್ನ ಹೊರತಾದ ಇತರ ಲೋಹಗಳ ಹಣ
ಚಲಾವಣೆಯಲ್ಲಿತ್ತು.
ಇ. ಅವನ್ನು ಚಿನ್ನದ ನಾಣ್ಯಗಳಿಗೆ ಅಥವಾ ಚಿನ್ನದ ಗಟ್ಟಿಗೆ ಪರಿವರ್ತಿಸಲು ಸಾಧ್ಯವಿರಲಿಲ್ಲ.
ಈ. ಸ್ಥಳೀಯ ಹಣವು ಸುವರ್ಣ ಕರೆನ್ಸಿ ಪ್ರಮಿತಿಯುಳ್ಳ ವಿದೇಶೀ ಹಣದೊಡನೆ ಸಂಪರ್ಕ
ಹೊಂದಿತ್ತು.
ಉ. ಅಂತಹ ವಿದೇಶೀ ಹಣದೊಡನೆ ಸ್ಥಳೀಯ ಹಣವನ್ನು ಪರಿವರ್ತಿಸಲು ಸಾಧ್ಯವಿತ್ತು.
ಊ. ಸ್ಥಳೀಯ ಹಣವು ಚಿನ್ನದೊಡನೆ ಪರೋಕ್ಷ ಸಂಪರ್ಕ ಹೊಂದಿದ್ದುದರಿಂದ ಸರಕು
ಮತ್ತು ಸೇವೆಗಳ ಬೆಲೆಗಳು ಚಿನ್ನದ ಬೆಲೆಯಿಂದ ನಿರ್ಧಾರವಾಗುತ್ತಿದ್ದವು.
ಋ. ಚಿನ್ನದ ಆಯಾತ ಮತ್ತು ನಿರ್ಯಾತಕ್ಕೆ ಮುಕ್ತ ಅವಕಾಶವಿರಲಿಲ್ಲ. ಸರಕಾರ ಮಾತ್ರ
ಚಿನ್ನವನ್ನು ಮುಕ್ತವಾಗಿ ಆಯಾತ ಮತ್ತು ನಿರ್ಯಾತ ಮಾಡಿಕೊಳ್ಳಬಹುದಾಗಿತ್ತು.

೪. ಸುವರ್ಣ ಮೀಸಲು ಪ್ರಮಿತಿ (Gold Reserve Standard) : ಸುವರ್ಣ ಪ್ರಮಿತಿ ಯನ್ನು ೧೯೩೦ರ ಬಳಿಕ ತೊಡೆದು ಹಾಕಿದ ದೇಶಗಳು ೧೯೩೬ರಲ್ಲಿ ಒಂದು ಒಪ್ಪಂದಕ್ಕೆ ಬಂದು ಸುವರ್ಣ ಮೀಸಲು ಪ್ರಮಿತಿಯನ್ನು ಜಾರಿಗೆ ತಂದವು ಅದು ೧೯೩೯ರ ವರೆಗೂ ಅಸ್ತಿತ್ವದಲ್ಲಿತ್ತು.

ಅದರ ಮುಖ್ಯ ಲಕ್ಷಣಗಳು ಹೀಗಿದ್ದವು :
ಅ. ದೇಶದೊಳಗೆ ಚಿನ್ನದ ನಾಣ್ಯಗಳಿರಲಿಲ್ಲ.
ಆ. ದೇಶದೊಳಗೆ ಕಾಗದದ ಹಣ ಮತ್ತು ಇತರ ಲೋಹದ ಹಣ ಚಲಾವಣೆಯಲ್ಲಿದ್ದವು.
ಇ. ಈ ಹಣವನ್ನು ಸುವರ್ಣ ಗಟ್ಟಿಗೆ ಪರಿವರ್ತಿಸಬಹುದಿತ್ತು.
ಈ. ಸರಕಾರವು ವಿನಿಮಯ ಸಮಾನತಾ ನಿಧಿಯೊಂದನ್ನು (exchange equalisation fund) ಸ್ಥಾಪಿಸಿ ಚಿನ್ನ, ಸ್ಥಳೀಯ ಹಣ ಮತ್ತು ವಿದೇಶೀ ಹಣದ ಮೀಸಲು ನಿಧಿ ನಿರ್ಮಿಸುತ್ತಿತ್ತು.
ಉ. ಸರಕಾರ ಮಾತ್ರ ಚಿನ್ನದ ಆಯಾತ ಮತ್ತು ನಿರ್ಯಾತ ಮಾಡಿಕೊಳ್ಳಬಹುದಿತ್ತು.
ಊ. ನಿಧಿಯಲ್ಲಿರುವ ಮೀಸಲು ಪ್ರಮಾಣದ ಬಗ್ಗೆ ರಹಸ್ಯ ಕಾಯ್ದುಕೊಳ್ಳಬಹುದಿತ್ತು.

೫. ಸುವರ್ಣ ಸಮತಾ ಪ್ರಮಿತಿ (Gold Purity Standard) : ಸುವರ್ಣ ಸಮತಾ ಪ್ರಮಿತಿಯನ್ನು ವಿಶ್ವ ವಿತ್ತ ನಿಧಿಯು ೧೯೪೪ ರಲ್ಲಿ ಜಾರಿಗೆ ತಂದಿತು. ಅದು ಯಾವುದೇ ರೀತಿಯ ಚಿನ್ನದ ಹಣ ಚಲಾವಣೆಯಲ್ಲಿ ಹೊಂದಿರುವುದಿಲ್ಲ. ಸದಸ್ಯ ರಾಷ್ಟ್ರಗಳು ತಮ್ಮ ಹಣದ ಸಮ ಮೌಲ್ಯವನ್ನು (par value) ನಿಶ್ಚಿತ ಪ್ರಮಾಣದ ಚಿನ್ನದ ರೂಪದಲ್ಲಿ ಪ್ರಸ್ತುತ ಪಡಿಸಬೇಕೆಂದು ಅದು ಹೇಳುತ್ತದೆ.

ಸುವರ್ಣ ಸಮತಾ ಪ್ರಮಿತಿಯ ಲಕ್ಷಣಗಳಿವು :
ಅ. ಸ್ಥಳೀಯ ಹಣವು ಚಿನ್ನದೊಡನೆ ಸಂಪರ್ಕ ಹೊಂದಿರುವುದಿಲ್ಲ.
ಆ. ಎಲ್ಲಾ ದೇಶಗಳು ತಮ್ಮ ಹಣದ ಸಮಮೌಲ್ಯವನ್ನು ಚಿನ್ನದ ರೂಪದಲ್ಲಿ ಪ್ರಸ್ತುತ
ಪಡಿಸಬೇಕು.
ಇ. ಪ್ರತಿಯೊಂದು ಸದಸ್ಯ ರಾಷ್ಟ್ರವು ಸ್ವತಂತ್ರ ವಿತ್ತ ನೀತಿಯನ್ನು ಅನುಸರಿಸುತ್ತವೆ.
ಉ. ಸದಸ್ಯ ರಾಷ್ಟ್ರಗಳು ವಿನಿಮಯ ದರದಲ್ಲಿ ಸ್ವಲ್ಪ ಬದಲಾವಣೆ ಮಾಡಬಹುದಾಗಿದೆ.
ಊ. ವಿದೇಶೀ ವಿನಿಮಯದಲ್ಲಿ ಸ್ಥಿರತೆ ಸಾಧಿಸುವ ಉದ್ದೇಶದಿಂದ ವಿಶ್ವ ವಿತ್ತ ನಿಧಿಯಿಂದ
ಸದಸ್ಯ ರಾಷ್ಟ್ರಗಳು ಸಾಲ ಪಡೆಯಬಹುದಾಗಿದೆ.

ನಿಜವಾದ ಅರ್ಥದಲ್ಲಿ ಸುವರ್ಣ ಸಮತಾ ಪ್ರಮಿತಿಯನ್ನು ಸುವರ್ಣ ಪ್ರಮಿತಿಯ ಒಂದು ರೂಪವೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ.

ಕ್ರೌಥರನು ದೇಶೀಯ ಮತ್ತು ಅಂತಾರಾಷ್ಟ್ರೀಯ ಸುವರ್ಣ ಪ್ರಮಿತಿಯ ನಡುವೆ ವ್ಯತ್ಯಾಸ ಕಲ್ಪಿಸಿದ್ದಾನೆ. ದೇಶೀಯ (domestic) ಸುವರ್ಣ ಪ್ರಮಿತಿಯು ಹಣದ ಪರಿಮಾಣ ಮತ್ತು ದೇಶೀಯ ಬೆಲೆಗಳ ಮೇಲೆ ಅದು ಬೀರುವ ಪರಿಣಾಮಗಳಿಗೆ ಸಂಬಂಧಿಸಿರುತ್ತದೆ. ಅಂತಾರಾಷ್ಟ್ರೀಯ (international) ಸುವರ್ಣ ಪ್ರಮಿತಿಯು ಹಣದ ಬಾಹ್ಯ ಮೌಲ್ಯ ಮತ್ತು ವಿದೇಶೀ ವಿನಿಮಯ ಸ್ಥಿರತೆಯ ಸಮಸ್ಯೆಗೆ ಸಂಬಂಧಿಸಿರುವುದಾಗಿರುತ್ತದೆ ಎಂದು ಕ್ರೌಥರ್‌ ಹೇಳಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ನಡೆದು ಹೋಯಿತು
Next post ಎಲ್ಲಿಗೆ ಹೋಗೋಣ

ಸಣ್ಣ ಕತೆ

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys