ಪತ್ರ – ೯

ಪತ್ರ – ೯

ಪ್ರೀತಿಯ ಗೆಳೆಯಾ,

ಕತ್ತಲೆಯ ಈ ಸಂಜೆಯಲ್ಲಿ ಚಿಕ್ಕಿಗಳು ಬಹಳ ಮೂಡಿಲ್ಲ. ನಿರ್ಮಲ ಪ್ರೇಮವನ್ನು ಒಂದಲ್ಲ ಒಂದು ದಿನ ಈ ಜಗತ್ತು ಪರಿಗಣಿಸಲಿದೆ. ಎಷ್ಟೊಂದು ಬಾನಾಡಿಗಳು ಉಲ್ಲಾಸದಿಂದ ಹಾರಾಡುತ್ತವೆ. ಗೂಡಿಗೆ ಮರಳಲು. ಲಯದ ಗುಂಟ ಸಾಗಿವೆ. ಜಗತ್ತು ಅಚ್ಚರಿಗೆ ಪ್ರೀತಿ ಕಾರಣ. ಅದಕ್ಕೆ ಎಷ್ಟೊಂದು ಪಲಕಗಳು, ಸೆಳೆತಗಳು, ನೋಟಗಳು, ಈ ಜಗದ ನಿಯಮಕ್ಕೆ ಮೂಲ ಪ್ರೀತಿ, ಪ್ರತಿಗಾಳಿಯ ಸ್ಪರ್ಶಕ್ಕೂ ಮರಗಳು ಅಲ್ಲಾಡುತ್ತವೆ ಖುಷಿಯಿಂದ, ಪ್ರತಿ ಸಂಜೆಗೂ ನೀಲಬಾನತುಂಬ ನಕ್ಷತ್ರಗಳು ಮಿನುಗುತ್ತವೆ. ಪ್ರತಿ ಗುಟುಕಿಗೂ ಹಕ್ಕಿಗಳು ಮೈದವಡುತ್ತವೆ. ನದಿ ತೀರದಲ್ಲಿ ಶಬರಿ ಹಣ್ಣಾದರೂ ಕಾಯುತ್ತಿದ್ದಳು ರಾಮನಿಗಾಗಿ. ನಗುವಿನ ಕಲರವದಿಂದ ಗೋಪಿಕೆಯರು ಕೃಷ್ಣನನ್ನು ಕಾಡಿಸುತ್ತಿದ್ದರು. ಎಲ್ಲವೂ ನಿರಾಳ ಪ್ರೀತಿಗಾಗಿ, ಪರ್ವತ ಶ್ರೇಣಿಗಳಿಗೆ ಒತ್ತಾಗಿ ಹರಿಯುತ್ತದೆ ನದಿ, ಮಿಣುಕು ಹುಳುಗಳ ಮಿನುಗುತ್ತವೆ ಕತ್ತಲ ರಾತ್ರಿಯಲ್ಲಿ. ಧ್ಯಾನದ ಮೌನದ ಪ್ರೀತಿ ಪ್ರಕೃತಿಯಲ್ಲಿದೆ. ನಮ್ಮಲ್ಲೂ ಕೂಡಾ. ಅದು ಬದುಕಿನ ಚೇತನದ ಸ್ವರಗಳು, ಬಹಳ ವಿಚಾರಮಾಡಿದರೆ, ತರ್ಕಕ್ಕೆ ಮನಸ್ಸನ್ನು ಒರೆಗಲ್ಲು ಹೆಚ್ಚಿದರೆ ಮನಸ್ಸಿನ ಸೂಕ್ಷ್ಮತೆ ಪ್ರೀತಿ ಹಾಳಾಗುತ್ತದೆ. ಒಳಗಿದ್ದ ಶಾಂತಿ ಕದಡುತ್ತದೆ. ಹೊರಗಿನ ಬಿಸಿಲು ಬೇಗೆ ಮನಸ್ಸನ್ನು ದಣಿಸಬಾರದು. ಪ್ರೀತಿ ತಣ್ಣಗಿನ ಒರತೆ. ಅದನ್ನು ಮೊಗೆ ಮೊಗೆದು ಕೊಡಬೇಕು. ಮತ್ತೆ ತುಂಬಿಕೊಳ್ಳುತ್ತದೆ ಯಾವ ಶಂಕೆಯಿಲ್ಲದೇ ಪ್ರೀತಿಸಿ” ಕಾತಿ ಹೇಳಿದ ಮಾತಿದು.

ಮನಸ್ಸನ್ನು ಸದಾ ಕಾಲವೂ ಅತ್ಯಂತ ಜೋಪಾನವಾಗಿ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ನಾವು ರೂಢಿಸಿಕೊಂಡ ಸಂಸ್ಕಾರದಿಂದ ಅಂತ ನನಗೆ ಅನಿಸುತ್ತದೆ. ಭೂತಕಾಲವು ಮನಸ್ಸಿನ ನೆಮ್ಮದಿಯನ್ನು ಕೆಡೆಸುತ್ತದೆ. ಒಮ್ಮೊಮ್ಮೆ ಹತಾಶೆ ನಮಗೆ ತಿಳಿಯದ ಹಾಗೆ ಬೇರೂರಿ ಬಿಟ್ಟಿರುತ್ತದೆ. ಜೀವನ ಹರಿಯುವ ನದಿಯಂತೆ ಹರಿಯುತ್ತಾ ಹೋಗಬೇಕು. ಪ್ರಕೃತಿ ಶಕ್ತಿಯನ್ನು ಒಳಗೂಡಿಸಿಕೊಂಡರೆ ನಮ್ಮ ಇಚ್ಛಾಶಕ್ತಿ ಬೆಳೆದು ನಾವು ಸಂಪನ್ನರಾಗುತ್ತೇವೆ. ಬದುಕು ಇದುದರಲ್ಲಿಯೇ ಹಸನಾಗುತ್ತದೆ, ಅಂತ ಊರಮ್ಮ ನಿಸರ್ಗದ ಒತ್ತು ಎತ್ತರ ಆಳ ಅಗಲ ನಿಗೂಢತೆಯ ಬಗ್ಗೆ ಎಷ್ಟೊಂದು ಶಕ್ತಿಯುತವಾಗಿ ಮಾತನಾಡುತ್ತಾಳೆ. ಎಲ್ಲಾ ರಾಗಗಳು ರೋಗಗಳು ಹುಟ್ಟುವ ಕಂಪನಗಳನ್ನು ಅವಳು ನಿಖರವಾಗಿ ಪ್ರತಿಪಾದಿಸುತ್ತಾಳೆ. ಬಾಲ್ಯದಲ್ಲಿ ಅವಳು ನಮಗೆ ಹೊಗಳ ಗಿಡಗಳ ಸ್ಪರ್ಶದಿಂದ ಮೈಯಲ್ಲಿ ಹರುಷ ಶಕ್ತಿ, ಉಲ್ಲಾಸ ಹೇಗೆ ಹುಟ್ಟುತ್ತದೆ ಅಂತ ಹೇಳಿಕೊಡುತ್ತಿದ್ದಳು. ದಿನಾಲೂ ಶಾಲೆಯಿಂದ ಬರುವಾಗ ಒಂದು ಹೂವಿನ ಗಿಡ ಸ್ಪರ್ಶಿಸಿ ಬರಲು ತಿಳಿಸಿದ್ದಳು. ಅಕ್ಕ ಸಂಪಿಗೆಮರ, ನಾನು ಪಾರಿಜಾತದ ಗಿಡ, ತಂಗಿ ಸಂಜೆಮಲ್ಲಿಗೆ ಗಿಡಗಳನ್ನು ಸ್ಪರ್ಶಿಸಿ ಬರುತ್ತಿದ್ದೆವು. ರಾತ್ರಿ ಹಾಸಿಗೆಯ ಮೇಲೆ ಕುಳಿತು ಚಿಕ್ಕದಾಗಿ ಕಂತುತ್ತಿರುವ ಕಂದೀಲಿನ ಬೆಳಕಿನಲ್ಲಿ ಖಡ್ಡಾಯವಾಗಿ ಒಂದುನೂರಾ ಎಂಟು ಸಲ ಕಣ್ಣು ಮುಚ್ಚಿ ಓಂ ನಮಃ ಶಿವಾಯ ಹೇಳಿಸುತ್ತಿದ್ದಳು. ಐವತ್ತು ಅರವತ್ತು ಹೇಳುವುದರಲ್ಲಿ ಡುಬು ಡುಬು ಅಂತ ಕಣ್ಣ ತುಂಬಿ ಆಳವಾದ ನಿದ್ದೆಯಲ್ಲಿ ಹಾಸಿಗೆ ಮೇಲೆ ಉರುಳಿಕೊಳ್ಳುತ್ತಿದ್ದೆವು. ಈಗ ಬಯ್ಯುವ ಅಪ್ಪ ಅಮ್ಮನಿಲ್ಲ. ನಮ್ಮದೇ ದರ್ಬಾರು. ಹುಚ್ಚು ಹುಚ್ಚು ವಿಚಾರಗಳು ನಿದ್ದೆಗೆ ಮಾತ್ರೆ ನುಂಗಿದರೂ ಕಣ್ಣು ತಣಿಯುವ ನಿದ್ದೆ ಇಲ್ಲ. ಬಹುಶಃ ನಾವು ಮನಸ್ಸಿನ ಸೂಕ್ಷ್ಮತೆಯನ್ನು ಆಧುನಿಕ ವಿಚಾರಗಳಿಂದ ಸುಟ್ಟು ಹಾಕಿದ್ದೇವೆ ಅಲ್ಲವಾ?

ನಿರ್ಮಲ ಪ್ರೇಮವನ್ನು ನಿವೇದಿಸುವ ಒಂದು ತುಂಬಾ ಹಳೆಯ ಸಿನೇಮಾ, Dancing on Lughnasa ಈ ದಿನ ನೋಡಿದೆ, ಯಾವ ಆಧುನಿಕತೆಯೂ ಸೋಂಕದ ಇಂಗ್ಲೆಂಡಿನ ಒಂದು ಹಳ್ಳಿ. ಸುತ್ತಲೂ ಕಣ್ಣ ಕಕ್ಷೆ ಮೀರುವ ಹಸಿರು ಮೈದಾನ, ನದಿ, ಗುಡ್ಡ, ಹಾಡಿ ಹಣ್ಣುಗಳ ರಾಶಿಗಳ ಮಧ್ಯೆ ಎರಡನೇಯ ಯುದ್ಧದಲ್ಲಿ ಪಾಲ್ಗೊಂಡ ಮೇಜರ ಜಾಕ್‍ನ ಕುಟುಂಬ. ನಾಲ್ಕು ಹೆಣ್ಣು ಮಕ್ಕಳ ತಂದೆ ಜಾಕ್, ಸದಾ ಯುದ್ಧದ ಗುಂಗಿನಲ್ಲಿ ಬದುಕಿನ Eternity ಹುಡುಕುವ ಆಧ್ಯಾತ್ಮಿಕ ಮುದುಕ! ರೋಜಿ ಬುದ್ಧಿ ಸ್ವಲ್ಪ ಮಂಕಾದ ಮಗಳು. ಆದರೆ ಹಕ್ಕಿಗಳ ಸ್ವರ, ಹಾಡು, ಹಣ್ಣು ಹೆಕ್ಕಿ ತರುವದರಲ್ಲಿ ಆಸಕ್ತಿ ಉಳ್ಳವಳು. ಮ್ಯಾಗಿ ಗಂಡನನ್ನು ಕಳೆದುಕೊಂಡು ಪುಟ್ಟ ಮಗನೊಂದಿಗೆ ತಂದೆಯ ಮನೆಯಲ್ಲಿ ಇದ್ದಾಕೆ. ಮತ್ತೊಬ್ಬ ಮಗಳು ಭಗ್ನ ಪ್ರೇಮ. ತೀರ ಚಿಕ್ಕವಳು ಪ್ರೇಮದ ಹುಡುಕಾಟದಲ್ಲಿ ಇದ್ದವಳು. ಆ ಕಾಡಿನ ನಡುವಿನ ಹಳ್ಳಿಗೆ, ದೂರದೂರ ಇರುವ ನೆಂಟರು ಬರುವುದು ಅಪರೂಪ. ಇನ್ನು ಪ್ರೇಮಿಸಲು ಹುಡುಗರೆಲ್ಲಿ ಸಿಗಬೇಕು. ಸದಾ ಸಿಡುಕುವ ಬೈಬಲ್ ಕೈಯಲ್ಲಿ ಹಿಡಿದು ಪಠಣ ಮಾಡುವ ಅಮ್ಮಮೇರಿ. ವಿಶಣ್ಣತೆಯ ತಣ್ಣಗಿನ ಬದುಕಿನೊಳಗೆ ಕುದಿಯುವ ಮನಸ್ಸುಗಳು.

ಇಂತಹ ತುಡಿತುಳ್ಳ ಕುಟುಂಬಕ್ಕೆ ಜಾಕ್‍ಸೇವೆ ಮಾಡಿದ ಸೇನೆಯ ತುಕಡಿಯ ಯುವಕನೊಬ್ಬ ಗಡಿಯಿಂದ ವಿಶ್ರಾಂತಿಗಾಗಿ ಆ ಹಳ್ಳಿಗೆ ಬಂದಾಗ, ಇಡೀ ಮನೆಯ ವಾತಾವರಣವೇ ಬದಲಗುತ್ತದೆ. ಸದಾ ರಾಗಗಳನ್ನು ಭಾರಿಸುವ ಜಾನ್ ದುಗುಡ ತುಂಬಿದ, ಅಶಾಂತಿತುಂಬಿದ, ವಿಶ್ವಾಸ ತುಂಬಿದ Lughnasa ನ ಆ ಗುಡ್ಡದ ಮನೆಯಲ್ಲಿ, ಸಂತಸದ ಅಲೆಗಳನ್ನು ತೇಲಿಸುತ್ತಾನೆ. ಹೂವು ಹಣ್ಣು, ತರಕಾರಿ ಮೀನು ಅರಸಿತರುವ ಕೆಲಸಗಳು ಮಂಕಾದ ಹೆಣ್ಣುಮಕ್ಕಳಲ್ಲಿ ಉಲ್ಲಾಸ ಚರುಕುತನವನ್ನು ಹುಟ್ಟುಹಾಕುತ್ತದೆ. ಹರಿಯುವ ನದಿಯ ಫಳಫಳದಂತೆ ಆ ಹೆಣ್ಣು ಮಕ್ಕಳ ಕಣ್ಣುಗಳು ಮಿನುಗುತ್ತವೆ, ಝುಳುಝುಳು ಸಪ್ಪಳದಂತೆ ಅವರ ಧಾರ್ಮಿಕ ಹಾಡುಗಳು ರಾಗಗಳಾಗಿ ಹೊರಹೊಮ್ಮುತ್ತವೆ.

ವಿಶ್ರಾಂತಿ ದಿನಗಳು ಮುಗಿದು ಆತ ವಾಪಸ್ಸು ಬೇಸಕ್ಯಾಂಪಿಗೆ ತೆರಳುವ ಹಿಂದಿನ ರಾತ್ರಿ, ತುಂಬು ಬೆಳದಿಂಗಳು, ಆಕಾಶದ ನಕ್ಷತ್ರಗಳಂತೆ, ರೋಜಿ, ಮ್ಯಾಗಿ, ಮೇರಿ, ಲಿಲ್ಲಿ, ಜಾಕ್ ಅವನ ಮೊಮ್ಮಗ ಎಲ್ಲರೂ ಜಾನ ನುಡಿಸಿದ ವಿಶಿಷ್ಟ ಸಂಗೀತದ ಹಾಡುಗಳಿಗೆ, ಅಂಗಳದಲ್ಲಿ ಕುಣಿದ, ಕೇಕೆಹಾಕಿದ, ಎಲ್ಲಾ ದುಗುಡಗಳನ್ನು ಹೊರ ಹಾಕಿ ಚಪ್ಪಾಳೆ ತಟ್ಟಿ, ಮನದಣಿಯೇ ಹಾರಾಡಿದ ಕ್ಷಣಗಳಿವೆಯಲ್ಲ, ನಿಜಕ್ಕೂ ರೋಚಕ ಅದ್ಭುತ! ಇಂತಹ ಚೈತ್ಯಗಳಿಗೆ ಎದೆತುಂಬಿದ ಪ್ರೀತಿ, ಬಡಿಗೆಬ್ಬಿಸುವ ಸಂಗೀತ ಎರಡರ ಸಾಂಗತ್ಯವೂ ಬೇಕು. ನೀನು ಸೀದಾ ಯಾವ ಹಮ್ಮು ಬಿಮ್ಮುಗಳಿಲ್ಲದೇ ಪುಟ್ಟ ಓಣಿಯಲ್ಲಿ ನಡೆದು ಬಂದೆಯಲ್ಲ, ಆದಿನದ ಉಲ್ಲಾಸ, ಉಮೇದು, ಸ್ನೇಹದ ತಂಪು ನೆರಳಲ್ಲಿ ನನ್ನ ಬರವಣಿಗೆ ಮುಂದುವರಿದಿದೆ.

ಮತ್ತೊಂದು ಜೀವಜಲ Spring in the winter ಚಿತ್ರಪಟದ್ದು. ಅವರಿಬ್ಬರೂ ಬಾಲ್ಯ ಸ್ನೇಹಿತರು. ಒಬ್ಬರ ಕಲ್ಪನೆಯನ್ನು ಕನಸನ್ನು ಕದಿಯುತ್ತ ಬೆಳೆದವರು. ದೊಡ್ಡವರಾದಾಗ ತೀರ ಪ್ರೇಮಿಸಿದವರು. ಬದುಕಿನದಾರಿ ಕವಲೊಡೆದಾಗ, ಇಬ್ಬರೂ ಬೇರೆ ಬೇರೆ ದಾರಿಯಲ್ಲಿ ನಡೆದು ಹೋದವರು. ಅವಳು ಮದುವೆಯಾಗಿ, ಒಂದು ಮಗುವನ್ನು ಹೊಂದಿ, ಗಂಡನಿಂದ ವಿಚ್ಚೇದನೆ ಹೊಂದಿ ರೋಗಿತಾಯಿಯೊಂದಿಗೆ ವಾಸಿಸುತ್ತಿದ್ದಳು. ಅವನು ದೇಶದ ಶ್ರೇಷ್ಠ ನ್ಯಾಯಾಲಯದಲ್ಲಿ ನ್ಯಾಯಾಧೀಶ, ಅವನ ಭೇಟಿ ಅವಳಿಗೆ ಜೀವ ಹನಿಗಳಾಗುತ್ತಿದ್ದವು. ಪುಟ್ಟಮಗು, ರೋಗಿತಾಯಿ, ಅವಳ ಆತ್ಮದ ಕಲೆ ಪೇಟಿಂಗ್ ಉದ್ಯೋಗ, ಎಲ್ಲವೂ ಅವನ ಪ್ರತಿ ಪತ್ರವೂ, ಪ್ರತಿ ಪೇಟಿಂಗಿಗೂ ಆತ ವಿಮರ್ಶಕವಾಗಿ ಬದುಕಿನ ಬಣ್ಣಗಳ ಜೀವಂತಿಕೆ ತುಂಬುತ್ತಿದ್ದ. ರೋಗಿ ತಾಯಿ ತೀರಿ ಹೋಗಿ, ಅವಳು ತೀರ ಒಂಟಿಯಾದಾಗ, ಪ್ರತಿ ರಜೆಗೂ ಆತ ತಪ್ಪದೇ ಅವಳಿದ್ದ ಹಳ್ಳಿಗೆ ಆಗಮಿಸುತ್ತಿದ್ದ. ಅವಳ ಮನೆಯ ಮುಂದಿನ ತೋಟದಲ್ಲಿ ಹೂ ಗಿಡಗಳನ್ನು ಬೆಳೆಸುತ್ತಿದ್ದ. ಅವಳ ಮಗನಿಗಾಗಿ ಪೇಟೆಯಿಂದ ಬಣ್ಣಗಳ ಆಟದ ಸಾಮಾನು, ತರುತ್ತಿದ್ದ. ಮನೆಯ ಮುಂದೆ ಜೋಕಾಲಿ ಕಟ್ಟುತ್ತಿದ್ದ. ಅವಳಿಗಾಗಿ ಉನ್ನತ ನ್ಯಾಯಾಲಯದ ಉನ್ನತ ನ್ಯಾಯಾಧೀಶ ಎಂಬುದನ್ನೇ ಮರೆಯುತ್ತಿದ್ದ. ಆತನ ಸ್ನೇಹದಿಂದ ಅವಳು ಚಂಗನೆ ಚಿಗುರಿದಳು. ತನ್ನ ಕ್ಯಾನವಾಸಿನಲ್ಲಿ ವಿಶಿಷ್ಟ ಬಣ್ಣಗಳನ್ನು ತುಂಬಿದಳು. ನೋಡು ನೋಡುತ್ತಿದ್ದಂತೆ ವಿಶ್ವ ವಿಖ್ಯಾತ ಪೇಂಟರ ಆದಳು. “ಅದು ನನ್ನ ಡಿಸೆಂಬರ್ ೨೫, ೧೯೯೭” ಎಲ್ಲವೂ ದೊಡ್ಡ ಆಪರೇಶನ್ಸ್‍ಗಳಾಗಿ ಮಾರ್ಪಟ್ಟಿದ್ದವು. ಗಳಗಂಡ ಮಾರಿ ಗಂಟಲನ್ನು ಉಬ್ಬಿಸಿ ಜೀವ ಹಿಂಡುತ್ತಿತ್ತು. ಎರಡೂ ಅಂಡಾಶಗಳ ಮೇಲೆ ಗಡ್ಡೆಗಳಾಗಿದ್ದವು. ಎಲ್ಲವೂ ಎರಡನೇ ಸ್ಟೇಜದಾಟಿದೆ, ಆಪರೇಶನ್ಸ್ ಕಷ್ಟ ಡಾಕ್ಟರರ ಹೇಳಿಕೆ. ಬಯಲು ಸೀಮೆ ದಾಟಿ ಬಂದವಳಿಗೆ ಸಾವು ತನ್ನ ಶರೀರದಲ್ಲಿ ಹೊಂಚುಹಾಕಿದೆ ಅಂತ ಗೊತ್ತೇ ಇರಲಿಲ್ಲ. ಆ ದಿನ ಆ ದೊಡ್ಡ ಆಸ್ಪತ್ರೆಯಲ್ಲಿ ನಿಂತ ಅವಳಿಗೆ ಈ ಬದುಕೇ ಮುಗಿದೇ ಹೋಗುತ್ತದೆ ಎಂಬ ದಿಗಿಲು ಅಚಾನಕ್ಕಾಗಿ ಆಕಸ್ಮಿಕವಾಗಿ ಇಪ್ಪತ್ತೆರಡು ವರ್ಷಗಳ ನಂತರ ಸರಳ ಸುಂದರ ಆತ್ಮದ ಕನಸುಗಳ ಹೊತ್ತ ಗೆಳೆಯ ಭೆಟ್ಟಿಯಾದ. ಆತ ತುಂಬ ಕಳವಳಗೊಂಡ. ಇಬ್ಬರೂ ತೊದಲಿದರು. ಅವಳು ಮೈಯಲ್ಲಿ ತುಂಬಿದ ಜಡ್ಡನ್ನು ಮುಂದು ಇರಿಸಿಕೊಂಡು ಬಿಕ್ಕಿದಳು. ನಾನೀಗ ಸಂಪೂರ್ಣ ಕುಸಿದಿದ್ದೇನೆ ಗೆಳೆಯಾ, ಮೆಲ್ಲಗೆ ಕೈ ಹಿಡಿದು ನಡೆಸು ಎಂದಳು. ಆತ ಬಣ್ಣದ ಗಾಳಿಪಟ ತೋರಿಸಿದ. ಆಸ್ಪತ್ರೆಯಲ್ಲಿ ಹಡೆಯುವ ಹೆಣ್ಣು ಮಕ್ಕಳ ಆರ್ತನಾದ ಕೇಳು ಎಂದ. ಸಾವಿನ ಅಂಚಿನಲ್ಲಿ ಮಲಗಿದವರ ಪಾಡು ತೋರಿಸಿದ. ನೀಲಭಾನು ತೋರಿಸಿ ಕಟ್ಲೆಟ್ ತಿನ್ನಿಸಿದ. ಮೆಲ್ಲಗೆ ತಲೆ ನೇವರಿಸಿ ಎಲ್ಲಾ ಸರಿಹೋಗುತ್ತೆ ನಲುಗಬೇಡ ಅಂದ. ಅವಳು ಮತ್ತೆ ಆತನ ಕನಸುಗಣ್ಣುಗಳಲ್ಲಿ ಈಜೀ ಚೇರಹಾಕಿ ಹಾಯಾಗಿ ಮಲಗಿದಳು. ಸಾವಿನ ಮನೆಯ ಅಂಗಳದಲ್ಲಿ ಒಂದು ಪುಟ್ಟ ಪಾರಿಜಾತ ಗಿಡ ಹುಟ್ಟಿತು. ಅವಳು ಆಸೆ, ನಿರಾಶೆ, ಒಡಲು ಬಿರಿಯುವ ಬರದ ನಡುಗೆ ಎಲ್ಲವನ್ನೂ ಆತನ ಎದೆ ಅಂಗಳಕ್ಕೆ ಗುಡುಸಿ ಚೆಲ್ಲಿದಳು, ಹಾಯಾಗಿ ಆತನ ಭರವಸೆಯ ಸ್ಪರ್ಶಕೆ ಕಣ್ಣ ತುಂಬ ನಿದ್ದೆ ತೆಗೆದಳು. ಅಡಿಗರು ಹಾಡಿದರು, ಕಣವಿ ಅವರು ಸೀತಾರ ನುಡಿಸಿದರು, ಬೇಂದ್ರೆ ಶಬ್ದಗಳ ಮೃದಂಗ ಭಾರಿಸಿದರು.

ಹಾಯಾದಗೆಳೆಯನ ಸಾಂಗತ್ಯದಲ್ಲಿ ಅವಳು ಮೂರು ದೊಡ್ಡ ಆಪರೇಶನ್ಸ್ ಮಾಡಿಸಿಕೊಂಡು ಸಾವಿನ ಮನೆಯಿಂದ ತಪ್ಪಿಸಿಕೊಂಡು ಬಿಟ್ಟಳು. ಆತ ಬಡಿದೆಬ್ಬಿಸಿದ ಅವಳ ಮುರುಟು ಕನಸುಗಳನ್ನು ಜೋರಾಗಿ ಹಾಡು ಜನಗಣಮನ ಅಂದ, ಎಲಿಜಬೆತ್ ರಾಣಿಯ ಹಾಗೆ ತಿರುಗು ಅಂದ. ಮುಟ್ಟಿದ ಅವಳ ಮನವ, ಎಲ್ಲ ಕಿಟಕಿಯ ಬಾಗಿಲುಗಳನ್ನು ತೆರೆದ. ಸಾಧ್ಯವಾದರೆ ನಕ್ಷತ್ರಗಳನ್ನು ಎಣಿಸು ಅಂದ. ಅನುಕೂಲವಿದ್ದರೆ ರಾಷ್ಟ್ರಪತಿಯವರನ್ನು ಮದುವೆ ಆಗು ಅಂದ. ಅವಳು ಮನಸ್ಸಿನಿಂದ ನಕ್ಕಳು.

ಹೀಗೆ ಒಳ್ಳೆಯ ಸಾಂಗತ್ಯ ಬದುಕು ಚಿಗುರಿಸುತ್ತದೆ ಗೆಳೆಯಾ. ಬದುಕಿನ ಖಿನ್ನತೆಗಳು ಒಬ್ಬರಿಗೊಬ್ಬರು ಕೊಡುವ ಬೆಚ್ಚಗಿನ ಭರವಸೆಗಳಿಂದ ಚಿಗುರುತ್ತದೆ. ಕೊಸರುತ್ತದೆ, ಚಿಲ್ಲೆನ್ನುತ್ತದೆ.

“ನಿನಗೆಂದೇ ನೆಲಬಾನು ಕೂಗಿ ಕರೆದೇ
ಗಿಡಕಾನು ಬನವೆಲ್ಲಾ ತಿರುಗಿ ನವೆದೇ
ಓಡಿ ಬಂದೆನೋ ಇಗೋ ಪರಿವೆ ಇರದೇ
ಓಡಿ ಬರುವಂತೆ ನದಿ ಕಡಲಕರಗೇ”

ನಿನ್ನ,
ಕಸ್ತೂರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ
Next post ನಾಸಿಯಾ

ಸಣ್ಣ ಕತೆ

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys