ಪತ್ರ – ೧೧

ಪತ್ರ – ೧೧

ಪ್ರೀತಿಯ ಗೆಳೆಯಾ,

ನವರಾತ್ರಿಯ ಸಂಭ್ರಮ ಎಲ್ಲ ಕಡೆ ಪಸರಿಸಿದೆ. ಭೂಮಿ ಹಾಗೂ ಭೂಮಿಯ ಮೇಲೆ ವಾಸಿಸುವ ಜನರು ಯಾವುದೋ ಸಂಪತ್ತು ಹೊಂದುವ ಸಂಭ್ರಮದಲ್ಲಿದ್ದಾರೆ. ನಾವು ಬದುಕುವ ಪರಿ ಈ ನಿಸರ್ಗಕ್ಕೆ ಎಷ್ಟೊಂದು ಹತ್ತಿರವಾಗಿದೆ. ಎಲ್ಲಾ ಇಷ್ಟಾರ್ಥ ಸಿದ್ದಿಯ ಸಾಧನಕ್ಕೆ ಹಬ್ಬಗಳು ಮೂಲ ಪ್ರೇರಣ, ಅದು ಜಗತ್ತಿನ ವ್ಯವಹಾರಗಳಿಗೆಲ್ಲಾ ಮೂಲಾಧರ. ಒಬ್ಬರ ಚೈತನ್ಯ ವ್ಯವಹಾರ ಇನ್ನೊಬ್ಬರ ಬದುಕಿಗೆ ಆಧಾರ. ಈ ಜಗತ್ತು ಮೃಣ್ಮಯ, ಪ್ರಾಣಮಯವಾಗಿ ಒಳಗೂ ಹೊರಗೂ ಸರ್ವಶಕ್ತಿ ಸಂಚರಿಸುತ್ತದೆ. ಜೀವ ಭಾವ ದ್ರವ್ಯಗಳು. ವಿಶ್ವ ಲೀಲೆಯ ಶಾಶ್ವತ ಶಕ್ತಿಯ ಅಂಶಗಳು ಇದು ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳ ಮೂಲಕ ಎಲ್ಲದಕ್ಕೂ ಕಾರಣ ಆಗಿರುವದಿಂದಲೇ ಭೂಮಿ ಸ್ತ್ರೀರೂಪದಲ್ಲಿ ಆರಾಧಿಸಲ್ಪಡುತ್ತಾಳೆ.

ಗೆಳೆಯಾ ನಿನಗೆ ಅಮ್ಮ ಅಂದ್ರೆ ಇಷ್ಟ ಅಲ್ಲವಾ? ಭಾರತೀಯರು ಸ್ತ್ರೀಯನ್ನು ತಾಯಿ, ಅಂಬಾ, ಭವಾನಿ, ದುರ್ಗ ರೂಪದಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಆದಿಶಕ್ತಿಯು ಬ್ರಹ್ಮ ವಿಷ್ಣು, ಮಹೇಶ್ವರರನ್ನು ಮಾತೆಯ ಸ್ವರೂಪದಲ್ಲಿ ಸಲಹುತ್ತಾಳೆ. ಶಕ್ತಿಯ ಆರಾಧನೆ ನಮ್ಮಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ಭೂಮಿ ಒಡಲಲ್ಲಿ ಅರಳಿದ ಹಾಲು ಸೂಸುವ ಭತ್ತವನ್ನು ಕುಟ್ಟಿ, ಹಾಲಿನಲ್ಲಿ ಕುದಿಸಿ ಹೊಸದು ಅಂತ ಈ ನವರಾತ್ರಿಯಲ್ಲಿಯೇ, ದೇವಿಗೆ ಭೂಮಿಗೆ ಅರ್ಪಿಸಿ ನೇವೇದ್ಯ ಮಾಡುತ್ತಾರೆ. ನೀನು ಒಮ್ಮೆಯಾದರೂ ಆ ಹೊಸ ಅಕ್ಕಿಯನ್ನು ಹಾಲಿನಲ್ಲಿ ಕುದಿಸಿ ತುಪ್ಪ ಸೇರಿಸಿಕೊಂಡು ಬಾಳೆ ಎಲೆಯ ಮೇಲೆ ಹಾಕಿಕೊಂಡು ಊಟ ಮಾಡಿದ್ದೆದೆಯಾ? ಆಚರಣೆಗೆ ಎಷ್ಟೊಂದು ಪಲಕಗಳಿವೆ ಗೊತ್ತಾ, ನನ್ನ ಅಮ್ಮ ಅತ್ಯಂತ ಪ್ರೀತಿಯಿಂದ ಹೊಸದು ಮಾಡಿ ಆ ಶಕ್ತಿಗೆ ಪ್ರತಿ ವರ್ಷ ಪಾರಾಯಣ ಮಾಡುತ್ತಾಳೆ. ಅಮ್ಮನ ಕೈಯ ಆ ಹಾಲು ಪಾಯಸ ಇಡೀ ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟವಾದ ಮೆನ್ಯು. ಒಮ್ಮೆ ನವರಾತ್ರಿಯಲ್ಲಿ ಊರಿಗೆ ಬಾ, ಖಂಡಿತ ನಿನಗೆ ಹೊಸದು ಊಟ ಮಾಡಿಸುತ್ತೇನೆ. ಭೂಮಿಯ ಆಂತರಿಕ ಶಕ್ತಿಯ ಹಾಲು ತುಂಬಿದ ಹಸಿರು ಬತ್ತದಕ್ಕಿ ಎಷ್ಟೊಂದು ಸಿಹಿ. ಹೀಗಾಗಿ ನವರಾತ್ರಿಯ ಸಂಭ್ರಮ. ಶಾರದಾ ಪೂಜೆ ಗೊಂಬೆಕೂಡಿಸುವುದು, ಶಕ್ತಾರಾಧನೆ, ಸ್ತ್ರೀ ಭೂಮಿ ಗೌರವಿಸಲ್ಪಡುವುದು ಎಲ್ಲವೂ ಹಿತ, ಬಹಳ ಹಿತಗೆಳೆಯಾ. ದಸರೆಯ ಸಂಭ್ರಮದಲ್ಲಿ ನಮ್ಮ ನೆರೆಮಾನೆಯವಳು, ಮಗಳೊಂದಿಗೆ ಒಂದು ಚಿಕ್ಕ ವಿರಸದೊಂದಿಗೆ ಸೀಮೆ ಎಣ್ಣೆ ಸುರಿದು ಸುಟ್ಟು ಕರಕಾಗಿದ್ದು, ಏನೂ ಸಹಾಯ ಮಾಡದೇ ನಾನು ಧಗಧಗ ಉರಿಯುವವಳನ್ನು ನೋಡುತ್ತ ದಿಗ್ಮೂಢಳಾಗಿ ನಿಂತದ್ದು. ಎಷ್ಟೊಂದು ಶಕ್ತಿ ಇದ್ದರೂ ಒಮ್ಮೊಮ್ಮೆ ಸ್ತ್ರೀ ಅಸಹಾಯಕಳಾಗಿ ಕೊರಗಿ ಮರುಟಿ ಹೋಗುವುದು. ಯಾವುದಕ್ಕೂ ಹೇಳಿಕೊಳ್ಳದ ಕಾರಣಗಳು ಸಿಗುವದಿಲ್ಲ ಗೆಳೆಯಾ.

ಸಾವಿರಾರು ಕೋಟಿಗಟ್ಟಲೆ ದುಡ್ಡು ಖರ್ಚುಮಾಡಿ ಜನಪರ ಕೆಲಸಮಾಡುತ್ತೇವೆ. ಕನ್ನಡ ಉಳಿಸುತ್ತೇವೆ ಅಂತೆಲ್ಲಾ ಭೂಟಾಟಿಕೆಯ ಮಾತುಗಳನ್ನು ಹೇಳಿ ಸಮಸ್ತ ಕನ್ನಡಿಗರನ್ನು ಒಂಥರಾ ಮಂಪರಿನಲ್ಲಿ ಒಯ್ದು, ಈಗ ಬೆಳಗಾವಿಯಲ್ಲಿ ವಿಧಾನ ಸಭೆಯ ಕಲಾಪ ಶುರುಮಾಡಿದ್ದಾರಲ್ಲಾ ನಮ್ಮೆಲ್ಲಾ ನಾಯಕರು, ಮತ್ತೆ ಕಲಾಪದಲ್ಲಿ ನಾಯಿ ಕಚ್ಚಾಡಿದಂತೆ ಕಚ್ಚಾಡುತ್ತಿದ್ದಾರಲ್ಲ. ನಾವೆಲ್ಲಾ ಲಬೋ ಲಬೋ ಅಂತ ಹೊಯ್ಯಕೊಳ್ಳಬೇಕು. ನಮ್ಮ ಗುರುಗಳು ಸುಮ್ಮ ಸುಮ್ಮನೆ ಅವರ ಹೆಗಲು ತಟ್ಟುತ್ತಿದ್ದಾರೆ. ನಾವು ಕನ್ನಡಿಗರು, ನಮ್ಮ ನಾಡು ಕನ್ನಡ ನಮ್ಮ ಭಾಷೆ ಕನ್ನಡ ಮತ್ತೆ ಏಕೆ ಇವರು ಕನ್ನಡಪರ ಹೋರಾಡುವುದು. ಸದ್ದು ಗದ್ದಲವಿಲ್ಲದೇ ಸಂವಿದಾನದ ಕಾಯ್ದೆಗಳನ್ನು ಜಾರಿಗೆ ತಂದರೆ ಆಯ್ತು. ಸ್ವಲ್ಪ ತಿಳುವಳಿಕೆ ಬುದ್ದಿ ಇದ್ದ ಕರ್ನಾಟಕ ಜನರೆಲ್ಲಾ ರಾಜಕಾರಣಿಗಳ ಖುರ್ಚಿ ಜಿಗಿಯುವ ಮಂಗನಾಟದಿಂದ ರೋಸಿ ಹೋಗಿದ್ದಾರೆ. ನೀನು ವಾದಿಸಬೇಡ ಮಂಗನಿಂದ ಮಾನವ ಎಂದು. ನನಗೆ ನಿಜವಾಗಿ ಬೇಸರವಾಗಿದೆ. ಸಿಡಿ ಪ್ರಕರಣವಂತೂ, ನಾವೆಲ್ಲಾ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಬೇಕು.

ಒಳ್ಳೆಯ ಜೀವನವನ್ನು ಬಯಸಬೇಕು. ಬಯಸಿದ್ದನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸಬೇಕು. ಮನುಷ್ಯ ಮನಸ್ಸು ಮಾಡಿದರೆ ಏನನ್ನೆಲ್ಲಾ ಸಾಧಿಸಬಹುದು. ನಾವು ನಮ್ಮದ್ದಲ್ಲದ ಕನಸುಗಳನ್ನು ಕಾಣಬಾರದು. ಬೆಟ್ಟದಷ್ಟು ಪ್ರೀತಿ ನಿಶ್ಚಯ ನಮ್ಮ ಹೃದಯದಲಿ ಇದ್ದರೆ ಸಂಸ್ಕೃತಿ, ಸಮಾಜ, ರಾಜಕೀಯ, ಜನಪದ ಎಲ್ಲವೂ ಒಂದು ಸೂತ್ರದ ಒಳಗೆ ಬರುತ್ತದೆ. ಒಮ್ಮೊಮ್ಮೆ ನಮ್ಮ ನಿರೀಕ್ಷೆಗಳು ಸುಳ್ಳಾಗುತ್ತವೆ. ಅಂದ ಮಾತ್ರಕ್ಕೆ ನಾವು ನಂಬಿಕೆ ಕಳೆದುಕೊಳ್ಳಬಾರದಲ್ಲ. ಕುತೂಹಲ ಬದುಕಿನ ಸೂತ್ರವಾಗಬೇಕು ಅಂತ ನೀನು ಆಗಾಗ ಪತ್ರಬರೆಯುತ್ತೀ. ಕುತೂಹಲದಿಂದ ಸಂಶೋಧನೆ ಪ್ರಾರಂಭವಾಗುತ್ತದೆ ಎಂದು ನಮ್ಮಿಬ್ಬರ ಗುರುಗಳು ಹೇಳುತ್ತಾರೆ. ನಮ್ಮ ಆದರ್ಶಗಳನ್ನು ಕನಸುಗಳನ್ನು ಬಲಗೊಡದೇ ನಾವು ಬೆಳೆಯಬೇಕಲ್ಲ. ಅದು ನಿಜವಾದ ಬೆಳವಣಿಗೆ, ನಮ್ಮ ಸಂಸ್ಕೃತಿಯ ಒರತೆ ನಮ್ಮಿಂದಲೇ ಜಿನುಗಬೇಕು. ಈ ನವರಾತ್ರಿಯ ಪರ್ವದಲ್ಲಿ ಅಂತಹ ಒರತೆ ನಮ್ಮಿಬ್ಬರ ಬರವಣಿಗೆಯಲ್ಲಿ ಹುಟ್ಟಲಿ. ನೀನೆಂತಿಯಾ? ನಿಸರ್ಗದಲ್ಲಿ ಅರಳಿನಿಂತ ಹಸಿರು, ಹಸಿರಿನಿಂದ ಹುಟ್ಟಿದ ಕಾಳು, ಕಾಳನ್ನು ಪಸರಿಸುವ ಹಕ್ಕಿಗಳು, ಬೀಸುವ ತಂಗಾಳಿ, ದಟ್ಟಕಾಡು ಗುಡ್ಡ, ಬೆಟ್ಟ, ನದಿಗಳು ಎಲ್ಲವೂ ಸಂಭ್ರಮದಲ್ಲಿ ತೇಲಿವೆ ಈ ನವರಾತ್ರಿಯಲ್ಲಿ. ಇಡೀ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಮಕ್ಕಳು ಸ್ತ್ರೀಯರು ಎಂತೆಂತಹ ಹಾಡುಗಳು ನೃತ್ಯಗಳು, ಬಣ್ಣ ಬಣ್ಣದ ಓಕುಳಿಯಾಟ, ದಾಂಡಿಯಾ, ಕೋಲಾಟ ಎಲ್ಲೆಲ್ಲೂ ಉಲ್ಲಾಸದ ಊಟೆಗಳು. ಗುಡಿಸಿಲಿನಿಂದ ಆರಂಭವಾದ ಬೆಳಕು, ಮೈಸೂರು ಅರಮನೆಯ ಆವರಣವನ್ನೆಲ್ಲಾ ಪಸರಿಸಿದೆ. ಗಡಿಗೆಯಲ್ಲಿ ಕುದಿದ ಬೆಲ್ಲ ಬೇಳೆಯ ವಾಸನೆಗೆ ಕಲ್ಕತ್ತೆಯ ಕಾಳಿ ಮೂಗರಳಿಸಿದ್ದಾಳೆ. ಓಡಾಡಿದ ನೆರಳುಗಳನ್ನು ಅಪೂರ್ವ ಕ್ಷಣಗಳನ್ನು ಆರತಿಯ ತಟ್ಟೆಗಳನ್ನು ವಿಡಿಯೋ ಕ್ಯಾಮರಾ ತನ್ನ ಕಣ್ಣೊಳಗೆ ದಾಖಲಿಸುತ್ತಲಿದೆ. ಅಚ್ಚು ಕಟ್ಟಾದ ಭಾರತದ ಜನಪದರೆಲ್ಲಾ ತುಂಬ ಸುಂದರವಾಗಿ ದಸರೆ ಹಬ್ಬ ಆಚರಿಸುತ್ತಿದ್ದಾರೆ. ಬೆಳಗಾವಿಯ ಅಧಿವೇಶನ ಮಾಡುವ ಬದಲು ಬೆಲ್ಲ ಬೇಳೆಯ ರೇಟು ಇಳಿಸಿದರೆ, ಮುಂದಿನ ಇಲೆಕ್ಷನ್ಗೆ ಬಡವರು ಓಟು ನೀಡುತ್ತಾರೆ. ಅಂತ ನಿನ್ನ ಗುರುಗಳಿಗೆ ನಿನೇಕೆ ಹೇಳುತ್ತಿಲ್ಲ?

ಮಳೆಬಿದ್ದ ಕಡೆಗೆಲ್ಲಾ ಹಸಿರು ಹುಟ್ಟಿಕೊಂಡಿದೆ. ಸೂರ್ಯ ಕೆಲವೆಡೆ ಮುನಿಸಿ ಕೊಂಡಿದ್ದಾನೆ. ಅಡಿಕೆ ತೋಟದಲ್ಲಿ ಪಾಚಿ ಹೆಚ್ಚಾಗಿದೆ. ನಮ್ಮ ಮನೆಯ ಮುಂದಿನ ಬಯಲಲ್ಲಿ ಇರುವ ಅರಳೀ ಗಿಡದ ಬುಡಕ್ಕೆ ಪಕ್ಕದ ಹಳ್ಳಿಯಿಂದ ಬಂದ ಮಹಿಳೆ ರಕ್ತಬಣ್ಣದ ಹುಣಸೀಕಾಕಿಯಿ ಬುಟ್ಟಿ ಇಳಿಸಿದ್ದಾಳೆ. ದಸರಾ ರಜೆಗೆ ಸೇರಿದ ಮಕ್ಕಳೆಲ್ಲಾ ಬಯಲಲ್ಲಿ ಬ್ಯಾಟ್ ಒಗೆದು ಆ ಹೆಣ್ಣು ಮಗಳನ್ನು ಸುತ್ತುವರಿದಿದ್ದಾರೆ. ರಕ್ತ ಹುಣಸಿಕಾಯಿ ಕೊಡದಿದ್ದಕ್ಕೆ ನೀನು ನನ್ನ ಬೆನ್ನಿಗೆ ಡಾಂಬರ ಅಂಟಸಿದ್ದಿಯಲ್ಲ. ಅದನ್ನು ಅಜ್ಜಯ್ಯ ಚಿಮಣಿ ಎಣ್ಣೆ ಸವರಿ ಸವರಿ ತೆಗೆದಿದ್ದರು. ನನಗೆ ರಕ್ತದ ಹುಣಸಿಕಾಯಿ ನೋಡಿದಾಗಲೆಲ್ಲಾ ನಿನ್ನ ನೆನಪು ಬಹಳ ಕಾಡುತ್ತದೆ. ಮೇಲಾಗಿ ಎಂತಹ ಮಬ್ಬು ಹುಡುಗಿ ನಾನಿದ್ದೆ ಅಂತ ಜೋರಾಗಿ ನಗು ಬರುತ್ತದೆ. ಈಗ ಹಾಕಿ ನೋಡು ಡಾಂಬರ ಬೆನ್ನಿಗೆ, ನಿನ್ನ ಮಕ್ಕಳ ಕೈಯಿಂದ ಬೆನ್ನಿಗೆ ಗುದ್ದುಸ್ತೀನಿ. ಈಗ ನಾವಿರುವ ತಾನುಗಳು ಬೇರೆ ಬೇರೆ ಆದರೂ ನಮ್ಮಿಬ್ಬರ ಭಾವ ಒಂದೇ ಇತ್ತಲ್ಲ! ಗೆಳೆತನಕ್ಕೆ ಮಾತ್ರ ಕಾಡುವ ಪ್ರೀತಿ ಹಂಬಲ, ತುಂಟಾಟ, ಕಾಳಜಿಗಳು, ಕನಸುಗಳು ಜೋತು ಬೀಳುತ್ತವೆ. ನಿನ್ನೊಂದು ಮೊದ್ದು ಮಣಿ ಅಂತ ನಾನು ಹಂಗಿಸುತ್ತಿದ್ದೆ. ಆದರೆ ನೀನು ಎಲ್ಲರಕ್ಕಿಂತ ವೇಗವಾಗಿ ಓಡಿ ಗುರಿ ಮುಟ್ಟಿರುವೆ. ಒಮ್ಮೆ ನಾನು ಮೈಸೂರಿನ ದಸರಾಕ್ಕೆ ಹೋಗಿದ್ದೆ. ಅಲ್ಲಿ ನನಗೆ ಬಹಳ ಹಿಡಿಸಿದ್ದು ಭಕ್ತಿ ಎಂಬ ಹೆಸರಿನಲ್ಲಿ ಎಲ್ಲಾ ಮರೆತು ಒಂದಾಗುವ ವಿಭಿನ್ನವರ್ಗದ ಜನರು. ಉತ್ತರ ಕರ್ನಾಟಕದ ಎಲ್ಲಾ ಜಾತ್ರೆಗಳಲ್ಲೂ ಒಂದಾಗುವ ಭಾರಿ ಜನಸ್ತೋಮ. ಇವತ್ತಿಗೂ ನನ್ನಲ್ಲಿ ಅಚ್ಚರಿ ಹುಟ್ಟಿಸುತ್ತದೆ. ಶಿವರಾಮ ಕಾರಂತರು ಒಮ್ಮೆ ಹೇಳಿದ್ದರು ಮನುಷ್ಯ ತನ್ನೆಲ್ಲಾ ಜಂಜಡದ ಬದುಕಿನ ಏಕತಾನತೆ ಮರೆಯಲು ಇಂತಹ ಜಾತ್ರೆ ಹಬ್ಬಗಳು ಬೇಕೇ ಬೇಕು. ಅಲ್ಲಿ ಮನಸ್ಸು ಅರಳುತ್ತಿದೆ ಸಂಸ್ಕೃತಿ ಜಿನುಗುತ್ತದೆ ಅದಕ್ಕೆ ಭಾರತ ದೇಶದಲ್ಲಿ ಎಂತಹ ಕಠಿಣ ಬದುಕು ಇದ್ದರೂ ಜನರು ಇಂತಹ ಹಬ್ಬ ಹರಿದಿನಗಳಲ್ಲಿ ಈ ಬದುಕನ್ನು ಸರಳೀಕರಿಸಿಕೊಳ್ಳುತ್ತಾರೆ ಮತ್ತೆ ಚಿಗುರಿಸುತ್ತಾರೆ.

ಯಾಕೋ ಈ ದಸರೆಯ ಹಬ್ಬದಲ್ಲಿ ನಾನು ಬೊಂಬೆಗಳನ್ನು ಕೂಡಿಸಿಲ್ಲ. ಈ ಗೊಂಬೆಗಳನ್ನು ಕೂಡಿಸಿ ಅಲ್ಲಿ ಒಂದು ನೋಟ ಒಂದು ಕೂಟ ಸೃಷ್ಟಿಸುವುದು, ಮತ್ತು ಬಣ್ಣ ಬಣ್ಣದ ಗೊಂಬೆಗಳ ಸಾಂಗತ್ಯ, ಬಾಲ್ಯದ ಕನಸುಗಳನ್ನು ಗರಿಗೆದರಿಸುತ್ತದು, ಮತ್ತೆ ಮುದ್ದಾದ ಗೊಂಬೆಗಳು, ಚೆಂದ ಅಂದವಾಗಿ ಮನಸೆಳೆಯುವುದು ಎಲ್ಲವೂ ನನಗೆ ಬಹಳ ಪ್ರೀತಿಯ ಕೆಲಸ.

ನೀನು ನಿನ್ನ ಮಗಳಿಗೆ ಗೊಂಬೆಗಳನ್ನು ಕೂಡಿಸುವದನ್ನು ಹೇಳಿಕೊಟ್ಟಿರುವೆಯೋ ಹೇಗೆ? ಇಲ್ಲಾ ಎಲ್ಲವನ್ನು ಹೆಂಡತಿಯ ಸುಪರ್ದಿಗೆ ಬಿಟ್ಟಿರುವೆಯೋ? ನೀವು ಮದುವೆ ಆದ ಸ್ನೇಹಿತರೆಲ್ಲಾ ಬರೀ ಹೆಂಡತಿ ಗಂಡ ಮಕ್ಕಳ ಸುದ್ದಿಯನ್ನೇ ಮಾತನಾಡುತ್ತೀರಿ. ಆವಾಗ ನನ್ನೆದೆಯಲ್ಲಿ ಒಂದು ಸಣ್ಣ ಸೆಳಕು ಹುಟ್ಟಿಕೊಳ್ಳುತ್ತದೆ. ಖಾಲಿತನ, ನನ್ನದಲ್ಲದ್ದು, ಏಕಾಂಗಿತನ ತಿಳಿಯದಂತೆ ಸುಳಿಸುಳಿದು ಹೈರಾಣ ಮಾಡುತ್ತದೆ. ಹಬ್ಬದ ಹೊಸತನ ಹಮ್ಮಸ್ಸು ತಾನೇ ಕಳೆದು ಹೋಗುತ್ತದೆ.

ಆದರೂ ನಿನ್ನ ನನ್ನ ಆತ್ಮದ ಗೆಳೆಯ ದಸರೆ ಹಬ್ಬ ನಿನ್ನ ಕುಟುಂಬಕ್ಕೆ ಹಿತ ನೆಮ್ಮದಿ ತರಲಿ.

ನನಗೂ ಕೂಡಾ

ನಿನ್ನ
ಕಸ್ತೂರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯಾಕುಲತೆ
Next post ಹೊಸ ವರುಷ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys