Home / ಲೇಖನ / ಪತ್ರ / ಪತ್ರ – ೧೩

ಪತ್ರ – ೧೩

ಪ್ರೀತಿಯ ಗೆಳೆಯಾ,

ಕಾರ್‍ತೀಕದ ಕಪ್ಪು ಸಂಜೆಯಲ್ಲಿ ನಮ್ಮೂರ ಎಲ್ಲಾ ಪುರಾತನ ದೇವಾಲಯಗಳಲ್ಲಿ ಹಣತೆ ಹಚ್ಚಿದ್ದಾರೆ. ನಮ್ಮೂರ ಕೋಟೆ ಕೊತ್ತಲಗಳ ಮೇಲೂ ದೀಪಗಳ ಪಣತಿಗಳನ್ನು ಹಚ್ಚಿಡುತ್ತಾರೆ. ಹೊಲದ ತುಂಬೆಲ್ಲಾ ಹಳದಿ ಸೂಸುವ ಸೇವಂತಿಗೆ, ಸೂರ್‍ಯಕಾಂತಿ, ಗುರೆಳ್ಳು ಹೂಗಳು. ಎಲ್ಲಾ ಕರಿ ಹೊಲದಲ್ಲಿ ಮೊಗ್ಗೆ ಒಡೆದ ಹತ್ತಿ ಹೂಗಳು. ಚಳಿಯ ಮಬ್ಬು ಸಂಜೆಗಳಿಗೆ ಸಾವಿರ ಅರ್‍ಥಗಳುಂಟು. ಇತ್ತ ಶ್ರಾವಣದ ಸೆರಗಿನ ಗುಬ್ಬೀ ಮಳೆ. ಆಗಾಗ ಮುಟ್ಟಾದ ಹುಡುಗಿಯ ಮೈ ತೊಳೆಯುವ ನಿಧಾನವಾಗಿ ಸುರಿದ ತುಂತುರು ಹನಿಗಳು. ಹುಡುಗಿಯರ ಕೈ ತುಂಬ ಹಸಿರು ಬೆಳೆಗಳು. ಎಲ್ಲೆಲ್ಲೂ ಒಡಲು ಚಿಗುರಿಸಿಕೊಂಡು ಹಸಿರು ಸೀರೆಯನ್ನುಟ್ಟ ಪೃಥಾ. ದೀಪಾವಳಿಯ ದೀಪದಾರತಿಯಲ್ಲಿ ಮೊಗ್ಗೆಡೆದ ಕೆಂಪು ತೆಳುಮೋಡಗಳು. ಎದೆಯಲ್ಲಿ ಭೂಮಿಯಲ್ಲಿ ಸ್ಪರ್‍ಶಕ್ಕೆ ಲಘು ಕಂಪನ. ಈಗ ಕಾರ್‍ತೀಕದಲ್ಲಿ ಹೆಣ್ಣು ಭೂಮಿ ಸೂಸುತ್ತವೆ. ಒಡಲತುಂಬಿ ಸಿರಿ ಮಣ್ಣಿನ ವಾಸನೆ. ಎಲ್ಲಾ ಬಿಗಿದ ಮೋಡಗಳು ಸುರಿದು ಸಡಿಲಾದ ಭಾವ. ಕಿಟಿಕಿಯ ಸರಳುಗಳಲ್ಲಿ ಗುಬ್ಬಿಯ ಕುಪ್ಪಳಿಕೆ. ಯಾರ ಪ್ರಶ್ನೆಗೆ ಯಾರು ಕೊಟ್ಟ ಉತ್ತರವಿದು.

ಸಮಶೃತಿಗೊಂಡ ಭೂಮಿ ಹೊಸ ಅನುಭವಕೆ ಎದೆ ತೆರೆದುಕೊಂಡು ಅನುಭವ ಮಂಟಪ ಕಟ್ಟಿಕೊಂಡಿದ್ದಾಳೆ. ಕಾರ್‍ತೀಕದಲ್ಲಿ. ಬೆಳಕು ಸೂಸುವ ಸಂಜೆ. ಎಂತಹ ಘನಹದ, ಎಂತಹನಾದ, ಎಂತಹ ರೀತಿ ರಿವಾಜುಗಳು. ಮನಸ್ಸು ಬೆಚ್ಚಗೆ ಇಡುವ ಪರಿ ಹಬ್ಬ ಹರಿದಿನಗಳು. ಮತ್ತೆ ಎಂತಹ ಬದ್ಧತೆ ನಡೆವ ಹಸಿರು ದಾರಿಗಳಿಗೆ, ಎಂತಹ ದೀಪಗಳು. ರಾತ್ರಿಯ ಪಹರೆಗೆ, ಗಂಗಾಳತುಂಬ ಉಂಡ ಸವಿ ಕನಸುಗಳಿಗೆ ಬಾಗೀನ ತುಂಬಿದ ಬಂಡೀ ಯಾತ್ರೆ, ಬೆವರು ಹಸುರಿಗೆ ಕೊಟ್ಟದ್ದು ಪಡೆದದ್ದು ಎರಡೂ ದಿವ್ಯ ಮೌನದಲಿ. ಈ ಗುಬ್ಬೀ ಸಂಸಾರ. ನಾವಿಬ್ಬರೂ ಸಂಸಾರ ಇಲ್ಲದ ಗೆಳೆಯರು. ಗೆಳೆಯಾ ಕಾದ ಹಂಚಿನಿಂದ ಹದವಾಗಿ ಬೇಯಿಸಿ ತೆಗೆದ ರೊಟ್ಟಿಗಳು, ಯಾರ ಹೊಲದ ಕಾಳುಗಳು. ಯಾವ ಸೀಮೆದಾಟಿ ಹರಿದು ಬಂತು ಮಣ್ಣು- ಕಸು- ಕಾಳು- ಮಳೆ ಮೋಡ ಗಾಳಿ ಎಲ್ಲೆಲ್ಲಿ ಹರಿದು ಹಾಯ್ದುಹೋದವು. ಸಂಬಂಧಗಳು, ಅಲ್ಲಿಯ ತುಂತುರುಹನಿ ಇಲ್ಲಿ ಇಲ್ಲಿಯ ಹನಿಗಳು ಮತ್ತೆಲ್ಲಿಗೋ. ಈ ಕಾರ್‍ತೀಕದಲ್ಲಿ ಅರಳುವ ಹಳದೀ ಹೂಗಳು ದೇಶಿ ಒರತೆಗಳು, ಎಲ್ಲೆಲ್ಲೂ ಹರಿಯುವ ತಿಳಿನೀರ ಊಟೆಗಳು. ಗೆಳೆಯಾ ಕಣ್ಣುಗಳು ಸಾಲಲಾರವು ಕಾಮನ ಬಿಲ್ಲಿನ ಬಣ್ಣ ಕಾಣಲು. ನಡೆಯಬೇಕು. ದಾರಿ ಹಿಡಿದು, ಅನುಭವ ಮಂಟಪ ಸೇರಲು ಕೈಕ್ಕೆ ಹಿಡಿದು. ಕೈಯಲ್ಲಿ ಜಿನುಗುಬೆವರು, ಎದೆ ಯೊಳಗೆ ಶ್ರಾವಣ ಮಳೆ. ಕಣ್ಣ ತುಂಬೆಲ್ಲಾ ದೀಪಾವಳಿಯ ನೀಲಾಂಜನಗಳು. ಹಿಂದೆ ನಾವು ನೋಡುವುದೇ ಬೇಡ. ಬರೀ ಬಯಲಭೂಮಿಯ ಋತು ಸಂಹಾರ ವೀಕ್ಷಿಸೋಣ ನಿನೇನ್ನುತ್ತೀ?

ನನಗೆ ಮೊಗ್ಗಿನ ಜಡೆಯಂದರೆ ತುಂಬಾ ಇಷ್ಟ ಗೆಳೆಯಾ. ಅಂಗಳದ ತುಂಬೆಲ್ಲಾ ಬರೀ ದುಂಡುಮಲ್ಲಿಗೆ ಮೊಗ್ಗುಗಳು. ಮೊಗ್ಗಿನ ಜಡೆ ಹಾಕಲು ಸಂಭ್ರಮಿಸಲು ಕಂಪು ಸೂಸಲು ಅಮ್ಮನೇ ಇರಲಿಲ್ಲ. ಅಮ್ಮನ ನಡುನೆತ್ತಿಯಲ್ಲಿ ಗದ್ದೇ ಅಂಚುಗಳು. ಕಸ್ತೂರಿ ತಿಲಕಂ ಲಲಾಟ ಫಲಕೆ. ಕುಂಕುಮ ಪರಿಮಳ ಹೊತ್ತು ಸಂಜೆ ಐದರ ಕತ್ತಲಿಗೆ ಚವಾಡಿಯಲ್ಲಿ ಅಮ್ಮ ಕುಳಿತಿರುತ್ತಿದ್ದಳು. ಕಾರ್‍ತೀಕದ ಬೆಳಕಿಗೆ ಹೈಗ್ರೀವದ ಮಣ್ಣಿನ ವಾಸನೆ ಗೆಳೆಯಾ. ಬೇಕು ಕನಸುಗಳು ಬೆಲ್ಲಹಾಕಿ ಹದ ಪಾಕ್‌ ಮಾಡಲು ಹೊಸ ಅಕ್ಕಿಯ ಪಾಯಸ, ಮಿಂಚುವ ಸೀರೆಯ ನೆರಿಗೆಗಳು, ಒಡಲು ತುಂಬಿದ ಉಡಿ ಅಮ್ಮ. ಅಮೂರ್ತದಿಂದ ಮೂರ್ತವಾಗುವ ಚಿಗುರು ಬಸಿರು ಗೂಡು ಎಲ್ಲವೂ ನಮಗೆ ದಕ್ಕದೇ ಹೋಯುತ್ತಲ್ಲ!

ಎಲ್ಲಿ ಜಾರಿತೋ ಮನವು. ಹಕ್ಕಿಗಳು ಗಗನದಗಲ ಹಾರಬೇಕು ರೆಕ್ಕೆಗಳ ಬೀಸುತ. ಕಂಡ ಜನರು ಏನು ಚೆಂದ ಅನ್ನಬೇಕು. ಬೆರಗು ಬೆರಗು ಗೊಂಡು ಉಘೆ ಉಘೆ ಅಂತ ಕೂಗಬೇಕು. ಮೋಡಗಳು ಚಿಕ್ಕಿಗಳು ತೇಲಬೇಕು ನೀಲಬಾನತುಂಬ. ಕಾರ್ತೀಕದ ದೀಪಗಳ ಬೆಳಕಿನಲ್ಲಿ ಸಿರಿಸಿರಿ ಒಡಲು ತುಂಬಿಕೊಂಡು, ಗೌರಿ ಮುಡಿಗೇರಿಸಿ ಕೊಳ್ಳಬೇಕು ಮಲ್ಲಿಗೆಯ ಕಂಪ, ಮೊದಲು ರಾತ್ರಿ ನೆನಪಿಸಿಕೊಳ್ಳುತ್ತ. ಅದೆಷ್ಟು ಸಾಮಾನುಗಳು ಬಂಡಿಯಲ್ಲಿ, ಭೂಮಿಯಲ್ಲಿ, ತುಂಬಿ ಆಚೀಚೆ ಚೆಲ್ಲುತ್ತವೆ ಸಾಗುವಾಗ ಕಮಾನು ಕಟ್ಟಿದ ಗಾಡಿಯಲ್ಲಿ. ಗುಬ್ಬಿಗಳು ಆರಿಸಿತಂದಿವೆ ಪುಟ್ಟ ಎಲೆಗರಿಗಳು ಗೂಡು ಕಟ್ಟಲು. ಕಾವು ಕಟ್ಟಲಿಲ್ಲ ಕನಸುಗಳು. ಆದರೆ ಕವಿಯ ಎದೆಯ ಹಳ್ಳದ ತುಂಬೆಲ್ಲಾ ಬರೀ ಶಬ್ದಗುಳ್ಳೆಗಳು. ನೀನೇಕೆ ಆಕಾಶ ಬುಟ್ಟಿ ಕಟ್ಟಲಿಲ್ಲ ನನ್ನ ಮನೆಯಂಗಳದಲ್ಲಿ ಗೆಳೆಯಾ?

ದೀಪಾವಳಿಗೆ ಗದ್ದೇ ಬಯಲಿನ ಹಸರಿಗೆ ನಾಲ್ಕು ಮೂಲೆಯಲ್ಲಿ ಅಜ್ಜಯ್ಯ ಹಚ್ಚಿಟ್ಟ ಹಣತೆ ದೀಪಗಳ ಬೆಳಕು ಇನ್ನೂ ನನ್ನ ಕಣ್ಣಲ್ಲಿವೆ. ಒಮ್ಮೆ ನೋಡು ಚೆಲ್ಲಿದ ಪಂಚಗಜ್ಜಾಯ, ಹೊಸ ಅಕ್ಕಿಯ ಘಮ ಘಮಿಸುವ ಮೊದಲ ಪಾಯಸ, ಚಾವಡಿಯ ಮಧ್ಯೆ ಕೂರಿಸಿದ ಶೃಂಗಾರದ ಗೌರಿ ಮುಂದೆ ಪುಟ್ಟ ಪುಟ್ಟ ಮಕ್ಕಳು ಸಾಲಾಗಿ ಕುಳಿತ ಅಂಗಳದ ದೀಪಗಳು. ನನ್ನ ಕೈಯಲ್ಲಿನ ಚಿಕ್ಕೀ ಬಳೆಗಳು. ಎದೆಯಲ್ಲಿ ಬಯಲಲ್ಲಿ ಮನೆಯಲ್ಲಿ ಸಡಗರದ ಚಿಗುರು. ಹಬ್ಬ ಘನೀಕರಿಸಿದ ಲೆಕ್ಕಗಳೆಲ್ಲಾ ಕೂಡಿಸಿ ಕಳೆಯುವುದರಲ್ಲಿ. ನೀನು ಮರೆತು ಹೋಗಿದ್ದೀಯ ಹಸಿರು ಬಾಳೇ ಎಲೆಯ ಸವಿ ಹಾಯಿಗಳು, ಬಳಿತಾವರೆಯ ಇಡ್ಲಿಗಳು. ಉಯಾಲೆಯಲ್ಲಿ ಕುಳಿತು ಜೀಕಿದ ಜೀಕುಗಳು. ಗೆಳೆಯಾ ಈ ಸಂಜೆ ಹಾಯಕೋಣಿ ತೇಲಿದೆ ನೇತ್ರಾವತಿಯ ಅಲೆಗಳಗುಂಟ. ಹೀಗೆ ನೆನಪುಗಳು ಕಾರ್ತೀಕ ಸಂಜೆ ಕೌನೆರಳಿನಲ್ಲಿ ಬೆಳಕಿನ ಕಿರಣಗಳಂತೆ ಸರಿಗಮ ಪದನಿಸ ಹಾಡಿವೆ. ರಾಗಕ್ಕೆ ಉಪ್ಪರಿಗೆ ಕೋಣೆಯಲ್ಲಿ ಬಳೆಗಳು ಕಿಣಿ ಕಿಣಿಸುತ್ತಿವೆ. ನನ್ನ ನಿನ್ನ ನಡುವಿನ ನಂಟು ಎಲ್ಲಿಯದೋ. ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ ಎದೆಯಲ್ಲಿ. ಈ ಬಯಲು ಸೀಮೆಯ ಹುಡಿಮಣ್ಣು ದಾಟಿ ಬಂದು ಎಲ್ಲೆಲ್ಲೂ ಬದುಕ ಹಸನಾಗುವ ಶಾಸ್ತ್ರ. ಒಳಗೂ ಹೊರಗೂ, ಬಯಲಿಗೂ, ನದಿಗೂ, ಸಮುದ್ರಕ್ಕೂ, ಕವಿ ಬೇಂದ್ರೆಯ ಆಳದಲ್ಲೂ, ಇಳಿದು ಬಂತು ಇಳಿದು ಬಂತು ಮೇಲಿನಿಂದ ಜೀವತಂತು. ಇದು ಸ್ನೇಹ ಪ್ರೀತಿ ಸಂಬಂಧಗಳ ಬೆಸುಗೆ. ಈ ಸ್ವಾತಿ ಮಳೆಗೆ ಎಷ್ಟೊಂದು ಮುತ್ತುಗಳು ಹುಟ್ಟಿಕೊಂಡವು ಸಮುದ್ರದಲಿ. ಈ ಬಯಲಿನ ನಾಡಿನಲ್ಲೂ ನಾನು ಸಮುದ್ರ ಶಬ್ದಗಳಿಗೆ ಭಾವ ಬಸಿರಾಗುತ್ತೇನೆ.

ನನ್ನ ಮನೆಯ ಒಲೆಯ ಸುತ್ತ ಸ್ವಾದ ಪರಿಮಳ ಹರಡಿಕೊಂಡಿದೆ. ಬಯಲು ಹಸಿರಾಗಿದೆ. ಒಣಧೂಳು ಮರೆತು ಬೀಜಗಳು ಸೂಸಿವೆ ಕಸ್ತೂರಿಯ ಕಂಪು. ಎಳೆ ಚಿಗುರುಗಳ, ಮತ್ತೆ ಮಕ್ಕಳು ಬಯಲಲ್ಲಿ ಹಾರಿಸುತ್ತವೆ ಬಣ್ಣ ಬಣ್ಣದ ಗಾಳಿಪಟಗಳನ್ನು, ಪುಟ್ಟ ಪುಟ್ಟ ಪಾದಗಳು ದೊಡ್ಡ ದೊಡ್ಡ ಹೆಜ್ಜೆ ಹಾಕುತ್ತವೆ ಶಾಲೆಯ ಅಂಗಳ ಸೇರಲು. ಆದರೆ ಅಜ್ಜನ ಭಾಗವತ, ಅಜ್ಜಿಯ ರಾಮಾಯಣಗಳು ಸ್ಥಗಿತಗೊಂಡಿವೆ. ನಿನ್ನ ನೆನಪು ಹನಿಹನಿ ಇಬ್ಬನಿಯಾ ಇಡೀ ರಾತ್ರಿ ನನ್ನ ಮನೆಯ ಛತ್ತು ತೋಯುಸುತ್ತಲಿವೆ. ಕತ್ತಲಿನ ನಿದ್ರೆಯಲ್ಲಿ ಹೊದ್ದು ಕೊಂಡ ಚಾದರ ವಿಚಿತ್ರ ವಾಸನೆ ಸೂಸುತ್ತಿದೆ.

ನಿನಗೆ ಕಂಪನಗಳಿಲ್ಲದ ಓಡುವ ಬದುಕಿದೆ. ನನ್ನ ಭಾವಗಳು unpractical ಅಂತ ಅನಿಸಿದರೆ ತಪ್ಪೇನಿಲ್ಲ. ನಿನಗೆ ಹೊರೆ ಇಲ್ಲದ ಸಿರಿ ಬದುಕುದಕ್ಕಿದೆ. ನನ್ನ ಪೊದೆಯ ಚಿಗುರು ನೀನು ಹಾರಿದ ವಿಮಾನದ ಕಿಟುಕಿಗಳಿಂದ ಕಾಣುವದಿಲ್ಲ. ನನ್ನ ಸುತ್ತಾಟದಲ್ಲಿ ನಾನು ಬರೀ ಒಂದು ಕಡಲನ್ನು ಮಾತ್ರ ಕಂಡೆ. ಆದರೆ ನೀನು ಇಡೀ ವಿಶ್ವದ ಮಹಾಸಾಗರ ಗಳನ್ನೆಲ್ಲಾ ಸುತ್ತಿ ಹಾರಿ ಬಂದಿರುವೆ.

ಆದರೆ ರಾತ್ರಿಯ ಪಹರೆಯಲ್ಲಿ ಕನವರಿಕೆಗಳೆಲ್ಲಾ ಕೆಂಪಾಗಿ, ನಾವಿಬ್ಬರೂ ಭೂಮಿಯಲ್ಲಿ ಶಾಂತಿಯಿಂದ ಬಾಳಲಿ ಅಂತ ಸೂರ್‍ಯ ಅತ್ಮಂತ ಪ್ರಖರವಾಗಿ ದಿನಾ ಬೆಳಿಗ್ಗೆ ಉದಯಿಸುತ್ತಾನೆ. ಈ ಕಾರ್ತೀಕದ ಸಂಜೆಯ ನೆನಪಿಗೆ ನಿನಗಾಗಿ ಒಂದು ಪುಟ್ಟ ಪದ್ಯವನ್ನು ಕಳುಹಿಸುತ್ತಿದ್ದೇನೆ ಒಪ್ಪಿಸಿಕೋ.

ದೀಪಾವಳಿ

ನಿನ್ನ ನೆನಪಿನ ಬತ್ತಿ ಹೊಸೆದು
ಹೊಸೆದು, ಎದೆಯ ಹಾಲೆರೆದು
ಪಣತಿಯ ಹಚ್ಚಿಟ್ಟ ಕಾರ್ತೀಕದ
ಇರುಳ ಸಂಜೆಯ ಮರುಳ ಭಾವಕೆ

ಬಾ ನೀನು ಬೆಳಕಿನ ಗೆರಗುಂಟ
ಮಾಡಿನ ಕದವ ತೆರೆದು ತೇಜ
ತುಂಬಿದ ಹಾಸುಬೀಸು ಜೀವ
ಜೀವದ ಬೆಸುಗೆ ಪ್ರೇಮ ರಾಗಕೆ

ಮಣ್ಣ ಕಡೆದ ಸಣ್ಣ ಮೊಳಕೆ
ಇರುಳ ತುಂಬಿ ನರಳಿ ಕಂಪ ಬೀರುವ
ಹೂವು ಅರಳಿಲಿ ಮೈಯ ಉಸಿರು
ಚಿಗುರಲಿ ತೋಯುವ ಇಬ್ಬನಿಗಳ ಬದುಕು

ತೆರೆತೆರೆದ ಅಗಲ ಬಾಗಿಲ ತಳಿರು
ತೋರಣ ಚಿನಕುರುಳಿ ಹೂಬಾಣ
ಕೈ ಹಿಡಿದು ಹಾಸಿದ ಬೆಳಕು ಕಳೆ
ಬೆಳಗು ಲಹರಿ ತಟ್ಟಿ ತಟ್ಟಿ ಜೋಗುಳ ಸುಖದ ಕ್ಷಣ.

ತೀರದಂಚಿದಲಿ ಹೂಗಳು ರಾಶಿ ಸುರಿದು
ಕನಸಿನ ಗೊನೆಗೊನೆಗು ಮಿಂಚಿನ ತೆನೆ
ಮಿನುಗಿ ದಿವ್ಯ ನುಡಿಗಳ ಬಣ್ಣದ ಕಿಡಿ
ನಕ್ಕ ಕಂದನ ಹಾಲುಗಲ್ಲದ ಬೆಳಕು ತಾಯ ಕಣ್ಣ ಬಿಂಬ

ನಿನ್ನ,
ಕಸ್ತೂರಿ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...