ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ,
ಮುರುಟಿರಲು ಗಾಸಿಗೊಂಡು
ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ
ತಾಂಡವವ ನಾಡಿತಂದು
ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು
ಹಳೆತು ಕೊಳೆ ಕಹಿಯಾದವು
ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು
ಇರಿವ ಕೂರಲಗಾದವು.
ನನ್ನ ತಾಯ್ನೆಲೆಯಾದ ನೆಲವು ಕಲ್ಲಾಗಿತ್ತು
ಕಸವೆ ನನಗಾಯಿತನ್ನ
ಕೂಸು ಬಾಯ್ದೆರೆದಾಗ ತಾಯ ಮೊಲೆ ಮುಚ್ಚಿತ್ತು
ಅದಕಿಹುದೆ ಮಿಗಿಲು ಬನ್ನ
ಬೇರಿಳಿಸಿ ಆರಸಿದರು ನೀರ ಸುಳಿವೇ ಇಲ್ಲ.
ಕಂಬನಿಯೊಳಾಂತೆ ತಣಿವು
ನಭಕೆತ್ತಿ ಕೈಚಾಚಿ ಕರುಣೆ ಕೇಳಿದರಿಲ್ಲ
ಇನಿಸಾದರಲ್ಲಿ ಒಲವು.
ಎಲೆಯೆಲ್ಲ ಉದುರಿದವು ನಲಿವೆಲ್ಲ ಚದರಿದವು
ನಿಂತೆ ನಾ ಕೊರಡಿನಂತೆ
ಸ್ಮೃತಿಯ ವಿಕೃತ ಛಾಯೆಗಳು ಸುತ್ತಿಕೊಂಡವು
ನನ್ನನ್ನು ಗೋರಿಯಂತೆ
ಇರುಳ ಕರಿಯೆದೆ ಯರಳಿ ಇನಬಿಂಬ ಬೆಳಗಿದೊಲು
ನನ್ನ ಬಾಳ್ ಬಾನಿನಲ್ಲಿ
ಇನಿಯಳೇ ನಿನ್ನೊಲವು ಮೂಡೆ ತೊಳಗಿತು ಮನವು
ಹೂಬಿಸಿಲ ಜೇನಿನಲ್ಲಿ
ನನ್ನೆದೆಯ ಹೊದರಲ್ಲಿ ಹರುಷ ಹಕ್ಕಿಯ ಹಿಂಡು
ಹೊಮ್ಮಿಸಿತು ಹಾಡು ಹೊಳೆಯ
ಮಧುಮಾಸ ಮುದಮಾಸ ಬಂದಿರುವ ತೆರದಲ್ಲಿ
ಚಿಮ್ಮಿಸಿತು ಹಸಿರ ಬೆಳೆಯ
ಪುಣ್ಯಪಾವನ ಗಂಗೆ ಶುದ್ಧ ಪ್ರೀತಿ ತರಂಗೆ
ಹರಿದೆ ನೀ ಮಸಣದಲ್ಲಿ
ಕಸವ ರಸವಾಗಿಸಿದೆ ವಿಷವ ಸೊದೆಯಾಗಿಸಿದೆ
ಸೇರಿ ಈ ಹೃದಯದಲ್ಲಿ
ಪತಿತಪಾವನ ಮೂರ್ತಿ ನನ್ನ ಜೀವನ ಸ್ಫೂರ್ತಿ
ಪ್ರೀತಿಯೇ ಸತ್ಯ ನಿಜವು.
ಪ್ರೀತಿಯೊಂದೇ ತಥ್ಯ ಉಳಿದುದೆಲ್ಲಾ ಮಿಥ್ಯ
ಅದರ ರೀತಿಯೆ ನೀತಿಯು
ಎಂದು ಕಲಿಸಿದ ಗುರುವೆ ನನ್ನ ಬಾಳಿನ ಗುರಿಯೆ
ನಮಿಸುವೆನು ನಾನು ನಿನಗೆ
ಪರದ ಪರತತ್ವವನು ಇಹದ ಸುಖ ಸತ್ತವನು
ನೀಡಿರಲು ನೀನು ನನಗೆ!
*****



















