ಸಂಕೇತ

ಸಂಕೇತ

ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆವರೆಗೂ ಎಡಬಿಡದೆ ಸ್ಟಾಂಡ್‌ಗೆ ಮೊಳೆಯಿಂದ ಬಂಧಿಸಲ್ಪಟ್ಟಿದ್ದ ಕ್ಯಾನ್ವಾಸಿನ ಮೇಲೆ, ಬಣ್ಣದ ಡಬ್ಬಿಯಲ್ಲಿ ಕುಂಚವನ್ನು ಅದ್ದಿ ಅದ್ದಿ ಒಂದೇ ರೀತಿಯಲ್ಲಿ ಕೈ ಹಿಡಿದಿದ್ದರಿಂದ ಯಕ್ಷಿರದಲ್ಲಿ ಹೊಡೆತ ಬಂದಿತ್ತು. ನೋಡಿ ನೋಡಿ ಕಣ್ಣಿನ ರೆಪ್ಪೆ, ಆಯಾಸದಿಂದ ಅದಾಗಿಯೇ ಮುಚ್ಚಿಕೊಳ್ಳುವಂತಾದಾಗ, ಕಾಲೂ ಸಹ ನೋಯ ಲಾರಂಭಿಸಿದ್ದರಿಂದ ಅರೆ ಮನಸ್ಸಿನಿಂದ ಡ್ರಾಯಿಂಗ್ ಶೀಟನ್ನು ಕಳಚಿಟ್ಟಿದ್ದ ತಾರಾನಾಥ್. ಬ್ರಷ್‌ನ್ನು ತೊಳೆದಿಡಲೂ ಸೋಮಾರಿತನ ಮಾಡಿಕೊಂಡು ಹಾಗೆಯೇ ಮಲಗಿದ್ದ. ಒಂದು ಗಂಟೆಯ ನಂತರ ಮಂಪರು ದಾಟಿಸಿಕೊಂಡು ಹೆಂಡತಿ ಕೊಟ್ಟ ಟೀಯನ್ನು ಕುಡಿದು, ನಿಮ್ನ ಮಸೂರದ ಕನ್ನಡಕವನ್ನು ಬನಿಯನ್ ಅಂಚಿನಿಂದ ಸೀಟಿ, ಹಾಕಿಕೊಂಡು ಮೇಲೆದ್ದ, ಮತ್ತೆ ಕುಂಚವನ್ನು ಮುಟ್ಟಲು ಮನಸ್ಸಾಗಲಿಲ್ಲ. ಆಲಸ್ಯ. ಆದರೆ ತನ್ನ ಸುಂದರ ಪ್ರಕೃತಿ ಚಿತ್ರಣಕ್ಕೆ ತಾನೇ ತಲೆದೂಗಿದ್ದ. ಅದನ್ನು ಪೂರ್ತಿಗೊಳಿಸುವ ಸ್ಫೂರ್ತಿ ಬಂದರೂ ‘ನಾಳೆ ಮಾಡಿದರಾಯಿತು’ ಎಂದು ಕೈ ಕೊಡವಿ ಅರ್ಧಗಂಟೆ ತಂಗಾಳಿಯಲ್ಲಿ ಬೋಳು ರಸ್ತೆಯಲ್ಲಿ ನಡೆದು, ಆಗ ತಾನೇ ಹುಟ್ಟುತ್ತಿದ್ದ ನಕ್ಷತ್ರಗಳನ್ನು ಎಣಿಸುತ್ತ ಮನೆಗೆ ಬಂದಿದ್ದ.

ಚಳಿಯಿಂದಾಗಿ ಭದ್ರವಾಗಿ ರಗ್ಗನ್ನು ಹೊದ್ದುಕೊಂಡು ಮಲಗಿದವನಿಗೆ ಏನೇನೋ ಕನಸುಗಳು; ಬಹುಶಃ ಅವೆಲ್ಲಾ ಅವನ ಚಿತ್ರಣಕ್ಕೆ ಸಂಬಂಧಿಸಿದಂತಿದ್ದವು.

ಬೆಳಿಗ್ಗೆ ಎದ್ದರೆ ಆಕಾಶವಾಣಿಯತ್ತ ಓಡಬೇಕು. ಆತನಲ್ಲಿರುವ ಲೇಖಕನನ್ನು ಪುರಸ್ಕರಿಸಲೋಸುಗ ಪರಿಚಯವಿದ್ದ ಪ್ರೋಗ್ರಾಂ ಎಕ್ಸಿಕ್ಯೂಟಿವ್ ಒಬ್ಬ, ಬರಗಾಲದಿಂದ ತತ್ತರಿಸುತ್ತಿರುವ ಊರೊಂದಕ್ಕೆ ಹೋಗಿ ಜನರ ಅಳಲು-ಅಭಿಪ್ರಾಯಗಳನ್ನು ಧ್ವನಿಮುದ್ರಿಸಿ ಕೊಂಡು ರೂಪಕವೊಂದನ್ನು ರಚಿಸಲು ಕರೆ ನೀಡಿದ್ದ. ಅದಕ್ಕೆ ಯಾವ ಹೆಸರಿಡಲಿ ಎಂದು ಯೋಚಿಸಲಾರಂಭಿಸಿದ. ‘ಬಿರಿದ ನೆಲದಲ್ಲಿ ಬತ್ತಿದ ಜಲ…’ ಇದೇ ಸರಿಯಾದ ಟೈಟಲ್ ಎಂದುಕೊಂಡ.

ತಾರಾನಾಥ್ ರೈಲು ಹತ್ತಲು ಕಾಯುತ್ತಿದ್ದಾನೆ. ಜೊತೆಯಲ್ಲಿ ಆಕಾಶವಾಣಿಯ ತಾಂತ್ರಿಕ ಸಹಾಯಕನೊಬ್ಬ ಮೈಕ್, ರೆಕಾರ್ಡರ್ ಎಲ್ಲವನ್ನೂ ಎತ್ತಿಕೊಂಡು ಬಂದಿದ್ದಾನೆ. ಕಾರ್ಯಕ್ರಮ ನಿರ್ವಾಹಕ ಕೃಷ್ಣರಾವ್ ಈತನನ್ನು ಪರಿಚಯಿಸುತ್ತ ‘ನಾಗಭೂಷಣ’ ಎಂದಿದ್ದ.

ಪ್ಲಾಟ್‌ಫಾರಂನಲ್ಲಿ ಕಾಲಿಡಲೂ ಸಹ ಸ್ಥಳ ಸಿಗದೇ ಬೇರೊಬ್ಬನ ಕಾಲ ಮೇಲೆ ಕಾಲಿಟ್ಟು ನಿಲ್ಲಲು ಜೀವನಾಂಶಕ್ಕೆ ಬೇಕಾಗುವಷ್ಟು ಆಧಾರ ಮಾಡಿಕೊಂಡು, ಜೋತಾಡುತ್ತ ಹೆಗಲಲ್ಲಿದ್ದ ಚೀಲವನ್ನು ನೇತಾಡಿಸುತ್ತ, ಅದು ಬಿದ್ದಿತೆಂದು ಕುತ್ತಿಗೆಗೆ ಸುತ್ತಿಹಾಕಿಕೊಂಡು ನಿಂತಿದ್ದ.

ರೈಲು ಹೊರಟಿತು. ಜನರ ಗದ್ದಲವೇನೂ ಕಡಿಮೆಯಿರಲಿಲ್ಲ. ನೋಡಿದರೆ ತಿಳಿಯುತ್ಎತ ಅವರೆಲ್ಲಾ ದುರ್ಬಲ ವರ್ಗದವರೆಂದು. ಯಾವದೋ ಹಳ್ಳಿಯವರಿದ್ದಿರಬೇಕು….

ನಾಗಭೂಷಣ ಸ್ವಲ್ಪ ಒಳಗೆ ತೂರಿಕೊಂಡ. ಇದರಿಂದಾಗಿ ಕೈಗೆ ಹಿಡಿತ ಬೇಕಿರದಿದ್ದರೂ ಉಸಿರಾಟಕ್ಕಂತೂ ಖಂಡಿತ ತೊಂದರೆಯಿತ್ತು. ಮೈ ಕೈ ನುಜ್ಜುಗುಜ್ಜಾಗುತ್ತಿತ್ತು. ಉಪಕರಣಗಳಿಗೆ ತೊಂದರೆಯಾಗದಂತೆ ಒತ್ತುತ್ತಿದ್ದ ಜನರನ್ನು ಒತ್ತುತ್ತಾ ಅದನ್ನು ಹೊಂದಿದ್ದ ಚೀಲಕ್ಕೆ ರಕ್ಷಣೆ ಒದಗಿಸಲು ಹೆಣಗುತ್ತಿದ್ದ.

ಬಸ್ಸು ಹೋಗದ, ಯಾವುದೇ ರೀತಿಯ ವಾಹನ ಸಂಪರ್ಕ, ವಿದ್ಯುತ್ ವಾಹಕಗಳಿಲ್ಲದ ಊರು ತಾರಾನಾಥನ ಕಲ್ಪನೆಯಾಗಿತ್ತು. ಇಂಥದೇ ಊರಿಗೆ ಎಂದು ಗುರಿಯಿರದಿದ್ದುದರಿಂದ ‘ಯಾವದಾದರೂ ಸ್ಟೇಷನ್‌ನಲ್ಲಿ ಇಳಿದರಾಯಿತು. ಒಟ್ಟಿನಲ್ಲಿ ಬರ ಬಂದ ಊರಾಗಿದ್ದರೆ ಸರಿ’ ಎಂದು ಕೊನೆ ಸ್ಟೇಷನ್‌ಗೆ ಟಿಕೆಟ್ ಕೊಂಡಿದ್ದರು.

ದೊಡ್ಡ ದೊಡ್ಡ ಹಳ್ಳ ದಿಣ್ಣೆಗಳು ಹಿಂದೆ ಇಲ್ಲಿದ್ದ ಭಯಂಕರ ಕಾಡಿಗೆ ಸಾಕ್ಷಿಯಾಗಿ ನಿಂತಿದ್ದವು. ಪ್ರಸ್ತುತ ಮರದ ಕಾಂಡ ಹಸಿರೆಲೆಗಳಿರಲಿ, ಭೂಮಿಯೊಳಗಿನ ಬೇರಿನ ಸೂಚನೆಗಳೂ ಕಾಣುವಂತಿರಲಿಲ್ಲ. ಬೇರನ್ನು ಆಳುದ್ದದವರೆಗೂ ಗುಂಡಿ ತೆಗೆದು ಕಡಿದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಅರ್ಧ ಮೈಲು ದೂರದಲ್ಲಿದ್ದ ಊರು ಅವರು ಅಪೇಕ್ಷಿಸಿದ ಕೆಲಸಕ್ಕೆ ಯೋಗ್ಯವಾಗಿದ್ದಂತಿತ್ತು. ಕನಿಷ್ಟ ಇಪ್ಪತ್ತು ಮನೆಗಳಿರಬಹುದೆಂದು ಹತ್ತಿರ ಹೋದವರಿಗೆ ಆಶ್ಚರ್ಯವಾಯಿತು. ಏನಿಲ್ಲೆಂದರೂ ಇನ್ನೂರು ಮನೆಗಳಿವೆಯಂತೆ, ಒಂದಕ್ಕೊಂದು ಒತ್ತಿ-ರೈಲಿನಲ್ಲಿನ ಪ್ರಯಾಣಿಕರಂತೆ – ನಿಂತಿವೆ. ಇದಿಷ್ಟು ಪ್ರದೇಶ ಬಿಟ್ಟರೆ ಬೇರೆಲ್ಲೂ ಸತ್ತವರನ್ನು ಮಲಗಿಸಲೂ
ಅಂಗೈಯಗಲದ ನೆರಳಿಲ್ಲದಿರುವುದು ವಿಪರ್ಯಾಸ. ಆದರೆ ಅಲ್ಲಲ್ಲಿ ನಾಯಿ ಕೊಡೆಗಳಂತೆ ಇದ್ದ ಕರೇ ಬಣ್ಣದ ಅರೆಗಳು ಅಷ್ಟು ಇಷ್ಟು ನೆರಳನ್ನು ನೀಡುವಂತಿದ್ದವು ಅಷ್ಟೆ.

ಊರು ಪ್ರಾರಂಭವಾಗುವ ಮೊದಲ ಮನೆಯಲ್ಲಿ ಕುಡಿಯಲು ನೀರು ಕೇಳಿದ. ಚೋಟುದ್ದವಷ್ಟೇ ಲಂಗೋಟಿ ಕಟ್ಟಿದ್ದ, ಬತ್ತಿದ ಎದೆ ಮುಚ್ಚಲು ಅರಿವೆಯ ಅವಶ್ಯಕತೆಯ ಇಲ್ಲದ ಇಪ್ಪತ್ತರ ಸುತ್ತಮುತ್ತಲಿನ ಯುವತಿ ಬಾಗಿಲಿಗೆ ಬಂದಿದ್ದವಳು ಇವರನ್ನು ಕಂಡು ಗೋಡೆಗೆ ಮರೆಯಾದಳು. “ನೀರಿಲ್ಲ” ಎಂದಳು ನಿರ್ದಾಕ್ಷಿಣ್ಯವಾಗಿ. ಆದರೆ ಅವರ ಸಂಸ್ಕೃತಿಯನ್ನು ಕಂಡು ತಮ್ಮನ್ನು ಉದ್ಧರಿಸಲು ಬಂದಿರುವ ಯಾವದೋ ಸರ್ಕಾರಿ ಅಧಿಕಾರಿ ಇರಬೇಕೆಂದು ಭಾವಿಸಿ, ಅವರು “ಏನಮ್ಮ ಕುಡಿಯಾಕ್ ನೀರಿಲ್ಲ ಅಂತಾರಾ?” ಎಂದದ್ದಕ್ಕೆ ಮರುಗಿಯೋ ಏನೋ, ಒಳ ಹೋಗಿ ಮಣ್ಣಿನ ಕುಡಿಕೆಯಲ್ಲಿದ್ದ ನೀರನ್ನು ತಂದುಕೊಟ್ಟಳು. ಅದರ ತಳದಲ್ಲಿ ಮಣ್ಣಿನ ಅಂಶ ಕುಳಿತಿತ್ತು. ಲೋಟದ ತಿಳಿ ನೀರನ್ನು ಕುಡಿಯಲು ಮನಸ್ಸು ಬಾರದಿದ್ದರೂ ಬಾಯಾರಿಕೆ ತಾಳಲಾರದೇ ಒಂದೊಂದೇ ಗುಟುಕು ಕುಡಿದು ಕೆಳಗಿನ ಬಗ್ಗಡವನ್ನು ಚಲ್ಲಿದ ನಾಗಭೂಷಣ, ಬಾಗಿಲ ಮರೆಯಲ್ಲಿ ನಾಚಿಕೆ ಸಂಕೋಚದಿಂದ ನಿಂತಿದ್ದ ನೀರು ಕೊಟ್ಟಿದ್ದ ಯುವತಿ, ‘ಅಯ್ಯಯ್ಯೋ’ ಎನ್ನುತ್ತ ಈಚೆಗೆ ಬಂದು (ಇಲ್ಲಿ ಬರೆಯಲಾಗದ ಭಾಷೆಯಲ್ಲಿ ಬೈದು) ಸಿಕ್ಕಷ್ಟು ನೀರನ್ನೇ ಬೊಗಸೆ ಮಾಡಿ ಕುಡಿಕೆಗೆ ತುಂಬಿದಳು. ಇವರು ಅನಿರೀಕ್ಷಿತ ಬೆಳವಣಿಗೆಗೆ ಹೆದರಿ ಓಡಿ ಹೋದಾಗ, ಉಟ್ಟಿದ್ದ ಪುಟಕೋಸಿಯನ್ನೇ ಬಿಚ್ಚಿ ಅದರಿಂದ ನೀರನ್ನು ನನಸಿ ನೆನಸಿ ಹಿಂಡಿ ಕುಡಿಕೆಗೆ ಬಿಡುತ್ತಿದ್ದಳು. ಹಿಂದಿರುಗಿ ಅದನ್ನು ಕಂಡ ತಾರಾನಾಥ್ ನಾಗಭೂಷಣನಿಗೆ ತೋರಿಸಿದ. ತಾರಾನಾಥ್ ಮನಸ್ಸಿನಲ್ಲೇ ಒಂದು ಪಾಯಿಂಟ್ ನೋಟ್ ಮಾಡಿಕೊಂಡ- ‘ತಮ್ಮ ಮಾನಕ್ಕಿಂತಲೂ ನೀರೇ ಮುಖ್ಯ’.

ದಾರಿಯಲ್ಲಿ ಎಮ್ಮೆಯೊಂದು ಕಾಲು ಚಾಚಿ ಬಿದ್ದಿತ್ತು. ಕಾಗೆ ಕಣ್ಣು ಕುಕ್ಕುತ್ತಿತ್ತು. ರಕ್ತ ಬಂದಿರಲಿಲ್ಲ. ಆದರೆ ಎಮ್ಮೆ ಬದುಕಿದ್ದುದಕ್ಕೆ ಸಾಕ್ಷಿಯಾಗಿ ಕಿವಿ ಅಲ್ಲಾಡಿಸುತ್ತಿತ್ತು.

ತಾವು ಬಂದ ಕಾರ್ಯಕ್ಕೆ ಅನುಕೂಲವಾಗಲಿ ಎಂದು ಗೌಡನ ಮನೆಯನ್ನು ವಿಚಾರಿಸಿ ನಡೆದರು. ಗೌಡನ ಹೆಸರು ಧರ್ಮಯ್ಯನಂತೆ “ನಾನ್ ಈ ಊರೀಗ ಮದ್ಲು ಕುಳ. ಅಂತ್ಲೇನೇ ಗೌಡ್ನೂ ಆದೆ. ಅದೇನ್ ಕಾಡು ಅಂತೀರಾ, ಏನ್ ಕಥೆ, ಅಬ್ಬಬ್ಬಬ್ಬಬ್ಬ. ಇವತ್ತು ನೋಡಾನಾ ಅಂದ್ರೂ ಒಂದ್ ಹಸ್ರೆಲೆ ಸಿಕ್ಕಾಕಿಲ್” ಎಂದು ಏನೇನೋ ಗತವೈಭವವನ್ನು ಹೇಳುತ್ತಾ ತನ್ನ ತೋಟದತ್ತ ಕರೆದೊಯ್ದ.

“ನೋಡಿ ಸ್ವಾಮಿ, ಈಟೆತ್ರ ಮರ ಮಾಡ್‌ಬೇಕ್ ಅಂದ್ರೆ ನಾನ್ ಅದೇಟ್ ಬೆವರು ಸುರಿಸಿರ್‌ಬೇಕು, ರಕ್ತ ಬಸ್ತಿರ್‌ಬೇಕು, ಲೆಕ್ಕ ಹಾಕಳಿ, ಈ ವರ್ಸ ಪಲುಕ್ಕೆ ಬರ್‌ಬೇಕಾಗಿತ್ತು. ಇದುನ್ನ ನೆಟ್ಟು ಎಂಟ್ ವರ್ಸ ಆತು. ಅಂತಾ ತೆಂಗಿನ್ ಗಿಡ್ಗುಳು…. ನೋಡೀ… ಎಂಗ್ ಸೊರ್‌ಗೀ…. ಅದ್ರು ರಸಾನ ಅದೇ ಕುಡ್ದು ಕುಡ್ದು ನಲಕ್ಕೆ ಬಂದದೆ.” ಅವನ ಅಳಲಿಗೆ ತಾರಾನಾಥ್ ಸಂಪೂರ್ಣ ಭಾವುಕನಾಗಿದ್ದ. ನಾಗಭೂಷಣ ತಪ್ಪದೇ ಧ್ವನಿ ಮುದ್ರಿಸಿಕೊಳ್ಳುತ್ತಿದ್ದ.

“ಬಾವಿಗೀವಿ ಏನೂ ತೋಡಿಸಿಲ್ವಾ?” ತಾರಾನಾಥ್‌ ಪ್ರಶ್ನಿಸಿದ.

ಬಾವಿಯ ಬಳಿಗೆ ಹೋಗುವವರೆಗೂ ಒಂದೂ ಮಾತನಾಡಲಿಲ್ಲ ಗೌಡ. ಬದಲಾಗಿ ಅಳುತ್ತಿದ್ದ. “ನೋಡಿ, ವರ್ಸೂದ್ ಮುನ್ನೂರರ್ವತ್ತೈದು ದಿನಾನೂ ತುಂಬಿರ್ತಿದ್ದ ಬಾವಿ ಇದು. ಬಾಳ ದಿನ ಏನ್ ಆಗ್ಲಿಲ್ಲ. ನಾಕ್ ವರ್ಸ ಆತ್ ಅಷ್ಟೆ. ಅಲ್ಲಿಂದಿತ್ತಾಗ ಇಳೀತಾ ಇಳೀತಾ ಬಂದು ಇಳದೇ ಹೋಯ್ತು… ಹೇಳ್ತೀನಲ್ಲ…” ಜೋರಾಗಿ ಅಳುತ್ತಿದ್ದ ಗೌಡ.

“ಇವಾಗ ಊರ್‌ಗೊಂದೇ ಬಾವಿ ಇರಾದು. ದಿನಕ್ಕೆ ಎಲ್ಡ್ ಬಿಂದ್ಗೆ ನೀರ್ ಬತ್ತೈತೆ. ಅದ್ರಗೇ ಇನ್ನೂರ್ ಮನೇರೂ ಹಂಚ್ಕಂತೀವಿ. ಗೌಡ ನೋಡಿ ಕೊಡದಿದ್ರೆ ನಿಷ್ಠುರ. ಈ ಹಸೀ ಮಣ್ಣೆ ಬಟ್ಟೆಗೆ ಹಾಕಿ ಹಿಂಡಿ ಹಿಂಡಿ ನೀರಿಳುಸ್ಕಂತಾರೆ ಜನ. ಏನ್ ಮಾಡಾದ್ ಏಳಿ, ನಮ್ದೂ ಒಂದ್ ಜಲ್ಮ….” ಎಂದವನೇ ಗಡುಸಾಗಿ, “ಉಯ್ಯಕ್ಕೆ ಉಚ್ಚೆ ಇಲ್ರೀ ಮಯ್ಯಾಗೆ, ಭಗ ಭಗ ಉರಿ ಬಿಟ್ಟರೆ ಇನ್ನೇನೂ ಬರಾಕಿಲ್ಲ….. ಹೇಳೀನಲ್ಲ…” ಎಂದ.

“ನೋಡಿ ಒಂದ್ ಕಾಲ್ದಲ್ಲಿ ನಾನು ಶಿಕಾರಿಗಂತ ಇಲ್ಲಿಗ್ ಬಂದಿದ್ದೆ. ಈ ಜಾಗ ನನ್ ಮನ್ಸಿಗೆ ಇಡೀತು. ಒಂದೇ ವರ್ಷದಲ್ಲಿ ಹಳೇ ಊರಿನ ಎಲ್ಲ ಆಸ್ತಿನೂ ಮಾರಿ ಬಂದು ಇಲ್ಲಿ ನೆಲೆಗೊಂಡೆ. ಆಗೇನೂ ಜಾಗಕ್ಕೆ ದುಡ್ ಕೊಡಂಗಿರ್ಲಿಲ್ಲ. ಬೇರು ಕಿತ್ತು ಬೇಸಾಯಕ್ಕೆ
ಯೋಗ್ಯವಾದ ಭೂಮಿಯನ್ನು ಮಾಡೋಕೆ ಯಾರೂ ಮುಂದೆ ಬರ್ತಿರಲಿಲ್ಲ ಆವಾಗ. ಅಂತದ್ರಲ್ಲಿ ತಮಿಳ್ ಜನುಕ್ಕೆ ಕೂಲಿಕೊಟ್ಟು ಕರ್ಕಂಬಂದು ಮರ ಕಡಿಸಿ ಬೇರು ಕೀಳಿಸಿದೆ. ನಾಕೈದು ಲಾರಿ ಲೋಡಷ್ಟು ಸೌದೇನ ಕೂಡಾಕಿ ನಾನೇ… ಹೇಳ್ತೀನಲ್ಲ… ಕೈಯಾರ ಬೆಂಕಿ ಇಟ್ಟು ಸುಟ್ಟೆ. ಆದ್ರೆ ಈವತ್ತು ಒಲೇಗುರ್‌ಸಕ್ಕೆ ಒಂದ್ ಕಡ್ಡಿ ಪುಳ್ಳೇನೂ ಸಿಗಲ್ಲ…. ಹೇಳ್ತೀನಲ್ಲ….

“ಆ ಕಾಲಕ್ಕೇ ನಾನು ನಾಕೈದ್ನೇ ಕ್ಲಾಸಿನ್ ತನಕ ಓದಿದ್ದೋನು. ಈ ಊರಿಗೆ ಹೇಮಾವತಿಪುರ ಅಂತ ಹೆಸರಿಟ್ಟೆ….ಯಾವಾಗಲೂ ಬಂಗಾರದ ಕಣಜ ಆಗಿರ್ಲಿ ಅಂತ… ಹೂಂ! ಅಂತೂ ಅ ಹೆಸರಿಗೆ ನಿಜವಾದ ಅರ್ಥ ಇವತ್ತು ಬಂದೈತೆ ಅಂತ ಕಾಣ್ತೈತೆ…. ಹೇಳ್ತೀನಲ್ಲ…. ನೋಡಿ ಈ ಭೂಮಿ ಮಣ್ಣು, ಈ ಮರಗುಳ ಎಲೆ, ಗರಿ ಎಲ್ಲಾನೂ ಆ ಬಣ್ಣಕ್ಕೇ ತಿರ್ಗೈತಿ… ಹೇಳ್ತೀನಲ್ಲ…. ಅದೇ ನಾನ್ ಮಾಡಿದ್ ಸಾದ್ನೆ.” ಮಾತು ರೆಕಾರ್ಡ್ ಆಗುತ್ತಿತ್ತು. ತಾರಾನಾಥ್ ಕೇವಲ ನಿಟ್ಟುಸಿರು ಬಿಡುತ್ತಿದ್ದ.

ಬಿಸಿಲು ಇಳಿಯಲು ಮೊದಲಾಗುತ್ತಿತ್ತು. ಆದರೆ ಅದು ತನ್ನ ಪ್ರಖರತೆಯನ್ನು ಕಳಕೊಂಡಿರಲಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ತಾರಾನಾಥ್ ನಾಗಭೂಷಣರ ಕರ್ಚಿಪ್‌ಗಳು ಸಂಪೂರ್ಣ ಒದ್ದೆಯಾಗಿದ್ದವು. ಮುಖ ಕೈ ಭಾಗ ಅವರ ಅರಿವಿಗೆ ಬರುವಷ್ಟು ಕಪ್ಪಗಾಗುತ್ತಿತ್ತು. ಗೌಡ ಇದರ ಹತ್ರಷ್ಟು ಬಿಸಿಲಲ್ಲಿ ಕೆಲ್ಸ ಮಾಡಿದ್ರು ನಿಮ್ಮಂಗೆ ನಮ್ಮ ಮೈಯಾಗಿಂದ ಬೆವರು ಸುರಿಯಾಕಿಲ್ಲ…… ಹೇಳ್ತೀನಲ್ಲ….. ಯಾಕಂದ್ರೆ ನಮ್ಮ ಮೈಯಾಗೆ ನೀರಿನ ಕಸ್ವೇ ಇಲ್ಲ’ ಎಂದು ನಕ್ಕ. ಆತ ನಕ್ಕಿದ್ದರಲ್ಲಿ ವಿಷಾದವನ್ನು ತಾರಾನಾಥ್ ಗುರುತಿಸಿದ.

ಜೋರಾಗಿ ಒಮ್ಮೆ ಗಾಳಿ ಬೀಸಿತು. ಅಲ್ಲಿ ಗಾಳಿ ಇದೆ, ತಾವು ಉಸಿರಾಡುತ್ತಿದ್ದೇವೆ ಎಂಬುದನ್ನೇ ಅವರು ಮರೆತಿದ್ದರು. ತಾರಾನಾಥ್ ರೈಲು ರಸ್ತೆಯತ್ತ ಕಣ್ಣು ಹಾಯಿಸಿದಾಗ ಬಿಸಿಲಿನ ಝಳಕ್ಕೆ ಗಾಳಿಯ ಅಲೆಗಳು ಆವಿಯಾಗುತ್ತಿರುವಂತೆ ಕಾಣುತ್ತಿದ್ದವು.

ಗಾಳಿಯ ಜೊತೆಗೆ ಒಂದು ರೀತಿಯ ಕೆಟ್ಟ ವಾಸನೆಯೂ, ನಾಯಿಗಳ ಬೊಗಳಾಟವೂ ತೇಲಿಬಂತು. ಗೌಡ ಹೇಳಿದ, “ಊರ್ ದನ-ಕರಗಳು ದಿನಕ್ಕೆ ಏನಿಲ್ಲ ಅಂದರೂ ಒಂದ್ ಐದ್‌ಆರು ಸಾಯ್ತಾವೆ. ಅವುನ್ನೆಲ್ಲ ತಂದು ಅಲ್ಲಿಗೆ ಹಾಕ್ತಾರೆ. ಆದ್ರದ್ ವಾಸ್ನೆ.” ಹತ್ತು ಸೆಕೆಂಡಿನ ನಂತರ “ನಿಜ ಹೇಳ್ಬೇಕು ಅಂದ್ರೆ ಈ ಊರಿನ ತಳವಾರನೇ ಊರಿಗೆಲ್ಲಾ ಶ್ರೀಮಂತ ಆಗೌನೆ. ಯಾಕಂತೀರಾ… ಸತ್ತೋದ್ ಜಾನುವಾರಿನ ಚರ್ಮ, ಮಾಂಸ, ಮೂಳೆ ಎಲ್ಲಾನೂ ಅವ್ನು ಪ್ಯಾಟೇಗೆ ಮಾರ್ತಾನೆ. ಅದರಿಂದ ಕನಿಷ್ಟ ಅಂದ್ರೆ ಒಂದು ರಾಸಿಗೆ ನೂರಿನ್ನೂರು ರೂಪಾಯ್ ಉತ್ಪಾದ್ನೆ ಆಗ್ತೈತೆ, ಮ್ಯಾಲಾಗಿ ದನದ್ ಮಾಂಸಾನ ಅವ್ರು ತಿನ್ನದ್ರಿಂದ ಹೊಟ್ಟೆ ಸಂಕ್ಟಾನೂ ಪರಿಹಾರ ಆಗ್ತೈತ ಅನ್ನಿ” ಅಂದು; ಇನ್ನು ಸ್ವಲ್ಪ ದಿನ ಅಷ್ಟೇ. ಹೊಟ್ಟೆಗೆ ಏನೂ ಸಿಗದಂಗಾದಾಗ…. ಹೇಳ್ತೀನಲ್ಲ… ದನಾನ ಕೊಂದು ಹಸಿ ಮಾಂಸಾನೇ ತಿಂತಾರೆ. ಇನ್ನೂ ಎಲ್ಡ್ ದಿನ ಹೋಯ್ತು ಅಂದ್ರೆ ಈ ನಾಯಿ ನರಿ ಏನವೆ, ಅವನ್ನೂ ಬಿಡಲ್ಲ…. ಹೇಳ್ತೀನಲ್ಲ…. ಅಂಗೂ ಇನ್ನೂ ಎಲ್ಡ್ ದಿನ ಮೂರ್ ದಿನ ಏನೂ ಸಿಗಂಗಾದ್ರೆ ಮನ್ಸ ಮನ್ಸುನ್ನೇ ತಿನ್ನಾಕತ್ತಾನೇ…. ಹೇಳ್ತೀನಲ್ಲ…” ಗೌಡ ಇನ್ನು ಏನೋ ಹೇಳಬೇಕೆಂದು ಹೊರಟಂತೆಯೂ, ಹೇಳಿದ್ದೆಲ್ಲಾ ಆಯ್ತು ಎನ್ನುವಂತೆಯೂ ಮಾತು ನಿಲ್ಲಿಸಿದ.

ತಾರಾನಾಥ್ ಒಂದು ಕ್ಷಣ ಅಂತರ್ಧಾನನಾದ, ಹಸಿವು ಎಂಬುದು ಯಾವದೇ ಮೂರ್ತ ಘನ ಅಸ್ತ್ರಕ್ಕಿಂತಲೂ ಶಕ್ತಿಯುತವಾದದ್ದು ಎಂಬುದು ನಿಜ. ಆ ಹಸಿವಿನಲ್ಲಿ ಅತಿಕೆಟ್ಟ ಧೈರ್ಯ ಅಮಾನವೀಯತೆ ಮೇಲಾಗಿ ಅಮೂರ್ತ ಶಕ್ತಿ ದೇಹದಲ್ಲಿ ಸಂಚರಿತವಾಗುತ್ತದೆ. ಮುಂದೊಂದು ದಿನ ದೇಶಕ್ಕೆ ದೇಶವೇ ಈ ಹೇಮಾವತಿಪುರದಂತೆ ಆಗುತ್ತದೆ. ಈ ‘ಹೇಮ’ ಎಂಬ ಪದ ಬಂದಾಗೆಲ್ಲಾ ಎಲ್ಲರಂತೆ ತಾರಾನಾಥನಿಗೂ ವಿಜಯನಗರದ ಭವ್ಯ ಸಂಸ್ಕೃತಿಯನ್ನು ಪಠ್ಯದಲ್ಲಿ ಓದಿದ್ದು ನೆನಪಾಗುತ್ತದೆ. ಬೆಳ್ಳಿ, ಬಂಗಾರ, ಮುತ್ತು-ರತ್ನಾನ ಬೀದೀಲಿ, ಸಂತೇಲಿ ಬಹಿರಂಗವಾಗಿ ಮಾರ್ತಾ ಇದ್ರಂತೆ-ಈಗ ಜಪಾನಿನ ಉಪಕರಣಗಳು ಪುಟ್‌ಪಾತ್ ಮೇಲೆ ಸಿಗುವುದಿಲ್ಲವೇ ಹಾಗೆ; ಅತಿ ಅಗ್ಗದ ಬೆಲೆಗೆ.

ಹಸಿವಿನ ಮುಂದೆ ತಾನು ಬಿಟ್ಟು ಉಳಿದವರೆಲ್ಲ ಶೂನ್ಯ, ನಿರ್ಜಿವ ಅಥವಾ ಭಕ್ಷ್ಯ ವಸ್ತುಗಳು. ಈ ವಿಚಿತ್ರ ರೀತಿಯ ನರಭಕ್ಷಣೆ ಇಲ್ಲಿಯೂ ಕಾಣಿಸಿಕೊಳ್ಳಬಹುದೆ? ಇತ್ಯಾದಿಯಾಗಿ ತಾರಾನಾಥ್ ಚಿಂತಿಸುತ್ತಿದ್ದ.

ಗೌಡ ಮಾತು ಶುರು ಮಾಡುತ್ತ ಎದ್ದು ನಿಂತ, ಮನೆಯತ್ತ ಹೋಗುವವನಂತೆ. ಉಳಿದವರೂ ಎದ್ದರು. “ನನ್ಗೆ ಇಷ್ಟೆಲ್ಲ ಹೊಟ್ಟೆಗೆ ಖಾರದ ಕೂಳು ಗತಿಯಿಲ್‌ದಿದ್ರೂ ಸಕ್ಕರೆ ಕಾಯ್ಲೆ ಬಂದೈತೆ, ಡಾಕ್ಟ್ರು ಅದೆಂತದೋ ಇಂಜೆಕ್ಷನ್ ಬರ್ ಕೊಟ್ಟಿದ್ರು ಎಲ್ಡ್ ವರ್ಸದ್ ಹಿಂದೆ. ತಕ್ಕಳ್‌ಲೇ ಇಲ್ಲ. ಈಗ ವಸಿ ಜಾಸ್ತಿ ಆದಂಗೈತೆ. ಆಗ್ಲೆಲ್ಲಾ ಒಂದ ಮಾಡಂಗಾಯ್ತದೇ. ಆದ್ರೆ ಮೈಯ ಕಸುವು ಇಲ್ದೇ ಒಂದ್ ಹನೀನೂ ಬರಾಕಿಲ್ಲ…. ಹೇಳ್ತಿನಲ್ಲ’ ಎಂದು ಅತ್ತ ಹೋಗಿ ಕುಳಿತು ಎದ್ದು ಬಂದ. ಅವನೇ ಹೇಳಿದಂತೆ ಹಿಂದೆ ಆಲೇಮನೆ ಮಾಡುವಾಗ ಚಾಲೆಂಜ್ ಮೇಲೆ ಬೆಲ್ಲ ತಿನ್ನುತ್ತಿದ್ದನಂತೆ.

ದಾರಿಯಲ್ಲಿ ಗೌಡ ಹೇಳಿದ ಈ ಊರಿನ ಸುಮಾರು ಜನ್ರಿಗೆ ಮೈ ತೊಳೆದು ಬಹಳ ದಿನವಾದ್ದರಿಂದ ಕಜ್ಜಿ ಎದ್ದೈತಂತೆ. ಅದೆಷ್ಟೋ ಮಕ್ಳು ಸತ್ತು ಹೋದವಂತೆ. ಕೆಲ ದೊಡ್ಡವರೂ ಈಗ್ಲೋ ಆಗ್ಲೋ ಅಂತೆ. ಕಾಲರಾನೂ ಬಂದೈತಂತೆ.

ಯಾವನೋ ಕಡ್ಡಿ ಕಾಲಿನ ಹುಡುಗ ಬಂದು ಗೌಡನಿಗೆ `ಊರಿನ ಮುಂದಕ್ಕೆ ಕರೆಯಕ್ಕೆ ಹೇಳಿದಾರೆ’ ಎಂದು ಹೇಳಿಹೋದ.

ದಾರಿಯಲ್ಲಿ ನಾಲ್ಕೈದು ಜನರು ಒಂದು ಹೆಣದ ಸುತ್ತ ಸುತ್ತಿ ಅಳುತ್ತಿದ್ದರು. ಅವರ ಕಣ್ಣಲ್ಲಿ ನೀರಿರಲಿಲ್ಲ, ಹೆಣದ ಮೇಲೆ ಬಟ್ಟೆ ಇರಲಿಲ್ಲ. ಗುಂಡಿ ತೋಡಲು ತಾಕತ್ತಿಲ್ಲದೆ ಕಾಗೆಗೆ ನಾಯಿಗೆ ಆ ಒಣ ಕೆರೆಯಲ್ಲಿ ಇಟ್ಟು ಹೋಗುತ್ತಾರಂತೆ. ಸಾಮಾನ್ಯವೆಂಬಂತೆ ಗೌಡ ನಡೆದ, ಇವರೂ ಹಿಂಬಾಲಿಸಿದರು. ಬರುತ್ತಾ ದನ ತಿಂದ ಕೆಂಪು ಬಾಯಿಯ ನಾಯಿಗಳನ್ನೂ ಕಂಡರು. ಅವೂ ಬಡಕಲಾಗಿ ತಟ್ಟಾಡುವಂತಿದ್ದವು. ಸುಮಾರು ಹತ್ತು ಹನ್ನೆರಡು ಅಸ್ತಿ ಪಂಜರಗಳನ್ನು ನಾಗಭೂಷಣ ಎಣಿಸಿದ. ಅಲ್ಲೇ ಹತ್ತಿರ ಒಬ್ಬ ನರಪೇತಲ ಮೂಳೆಗಳನ್ನು ಕಾಯುತ್ತ ಕುಳಿತಿದ್ದ. ರಣರಂಗದ ಹೆಣ ತಿನ್ನಲು ಎರಗುತ್ತಿದ್ದಂತಹ ರಣಹದ್ದುಗಳು ಕೆಟ್ಟದಾಗಿ ಸೀಟಿ ಹಾಕುತ್ತ ವೃತ್ತಾಕಾರವಾಗಿ ಸುತ್ತುತ್ತಿದ್ದವು ಸೆಕೆಂಡಿನಲ್ಲೇ ಬೆಟ್ಟ ಕಣಿವೆಗಳಿಗೆ ಪರಸ್ಪರ ಹಾರಬಲ್ಲೆನೆಂಬ ಜಂಭದಲ್ಲಿ, ಮತ್ತೆ ಕೆಲವು ಉದ್ದ ಬೋಳು ಕತ್ತನ್ನು ಚಾಚಿ ಮೂಳೆಗಳಿಗೆ ಅಂಟಿದ್ದ ಅಲ್ಪ ಸ್ವಲ್ಪ ಮಾಂಸವನ್ನೇ ಕಿತ್ತು ತಿನ್ನುತ್ತಿದ್ದವು. ತನಗೆ ಸಾಲುವುದಿಲ್ಲವೆಂದು ಪರಸ್ಪರ ಕಿತ್ತಾಡುತ್ತಿದ್ದವು. ಒಂದು ಕ್ಷಣ ಹದ್ದಿಗೂ ನಾಯಿಗೂ ಜಗಳ ಶುರುವಾಯಿತು. ಹದ್ದು ನಾಯಿಯ ಕತ್ತ ಚರ್ಮವನ್ನು ಹಿಡಿದು ಮೇಲಕ್ಕೆ ಹಾರಿ ನಾಯಿಯನ್ನು ಕೆಳಗೆ ಬಿಟ್ಟಿತು. ಕುಯ್ಯಗುಟ್ಟುತ್ತಿದ್ದ ನಾಯಿ ನೆಲಕ್ಕೆ ಬಿದ್ದು ಸುಮ್ಮನಾಯಿತು. ಅವರೆಲ್ಲ ನೋಡುತ್ತಿದ್ದಂತೆಯೇ ಏಳೆಂಟು ಹದ್ದುಗಳು ನಾಯಿಯನ್ನು ಸುತ್ತುವರಿದವು. ಒಂದು ಹದ್ದು ಅದರ ಕರುಳನ್ನೇ ಕಿತ್ತು ಎಳೆಯಿತು.

ಮೂವರೂ ಮುಂದೆ ನಡೆದರು ಮೌನವಾಗಿ ಸ್ವಲ್ಪ ದೂರ ನಡೆದ ನಂತರ ಬಂಡೆಯೊಂದರ ಮೇಲೆ ನಿಂತು, ‘ಇಲ್ಲಿ ಬಾವಿ ತಗುದ್ರೆ ಸಮೃದ್ಧ ನೀರು ಸಿಗುತ್ತೆ’ ಎಂದ. ಅವರಿಬ್ಬರೂ ನಕ್ಕರು. ಹಿಂದೆ ‘Y’ ಆಕಾರದ ಹಸಿರು ಕಡ್ಡಿ ಹಿಡಿದು ಪರೀಕ್ಷಿಸಿದ್ದನಂತೆ. ಬಹಳ ಜೋರಾಗಿ ತಿರುಗುತ್ತಿತ್ತಂತೆ. ಸದ್ಯ ಹಸಿರು ಕಡ್ಡಿ ಅಲ್ಲೆಲ್ಲೂ ಸಿಗುವುದಿಲ್ಲವೆಂದು ಇವರಿಗೂ ತೋರಿಸುವ ಪ್ರಯತ್ನ ಬಿಟ್ಟ. ‘ಈ ಬಂಡೆ ಹೊಡೆಯಕ್ಕಾಗುದ್ಕೆ ಸುಮ್ನಾಗಿದೀವಿ’ ಎಂದ. ಇಲ್ಲಾದರೂ ಒಂದು ಬೋರ್‌ವೆಲ್ ಹಾಕಿಸುವಂತೆ ಒತ್ತಾಯ ಮಾಡಬೇಕೆಂದುಕೊಂಡ ತಾರಾನಾಥ.

ಊರ ಮುಂದೆ ಬಂದಾಗ ಕೆಲವು ಅಧಿಕಾರಿಗಳು ಪೊಲೀಸರೂ ನಿಂತಿದ್ದರು. ‘ಸಾಲ ವಸೂಲಿಗೆ’ ಎಂದ ಗೌಡ, ಕೆಲವರು ಲೋನಿನಲ್ಲಿ ಎಮ್ಮೆ ಎತ್ತು ತಂದು ಯಾವ್ದೋ ಸತ್ತಾಗ ‘ಅದೇ ಇದು’ ಎಂದು ಡಾಕ್ಟರಿಗೆ ಸುಳ್ಳು ಹೇಳಿ ಇನ್ಸೂರೆನ್ಸ್ ಹಣ ತಿಂದದ್ದನ್ನು ಇವರಿಬ್ಬರ ಬಳಿ ಹೇಳಿದ. ನಾಲ್ಕು ಜನ ಸತ್ತ ಎಮ್ಮೆಯೊಂದನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಿದ್ದರು.

ಜಪ್ತಿ ಮಾಡಲು ಅವರ ಬಳಿ ಯಾವುದೇ ವಸ್ತುಗಳಿರಲಿಲ್ಲದಿದ್ದುದರಿಂದ ಹರಾಜು ಮಾಡುವ ಯೋಜನೆ ಬಿಟ್ಟು ಅವರನ್ನೆಲ್ಲ ಅರೆಸ್ಟ್ ಮಾಡಿಸಲು ಬ್ಯಾಂಕ್ ಮ್ಯಾನೇಜರ್‌ ಯೋಚಿಸಿದ್ದ. ಜನ ಪ್ರತಿಭಟಿಸುತ್ತಿದ್ದರು. ಅದಕ್ಕೇ ಗೌಡನನ್ನು ಕರೆಕಳಿಸಿದ್ದು. “ಏನೋ ದೊಡ್ಡಮನುಷ್ಯ ಗೌಡ. ನಾಚ್ಕೆ ಆಗಲ್ವ ನಿನ್ನ ಗೌಡಿಕೆಗೆ” ಎಂದ ಮ್ಯಾನೇಜರ್, ಗೌಡನದೂ ಸಾಲ ಇತ್ತಂತೆ; ಬೇರೆಯವರಿಗೂ ಜಾಮೀನು ಆಗಿದ್ದನಂತೆ.

ಗೌಡನಿಗೆ ಬಿಸಿಲಲ್ಲಿ ನಡೆದು ಆಯಾಸವಾಗಿದ್ದರಿಂದ ದಾವರ ಬಂದಂತಾಗಿ ಹಸಿವೆಯಾಗಿ ಅಲ್ಲೆ ಕುಳಿತ ಸುಧಾರಿಸಿಕೊಳ್ಳಲು. ಸ್ವಲ್ಪ ಹೊತ್ತಿನ ನಂತರ ಮಲಗಿದ. ಮೈ ಪೂರಾ ಬೆವರಲಾರಂಭಿಸಿತು- ಕಸುವಿರದ ಮೈಯಿಂದಲೇ, ಮೈ ತಣ್ಣನೆ ಕೊರೆಯುವಂತಾಯಿತು. ಸುತ್ತಲ ಪ್ರಜ್ಞೆ ಇರಲಿಲ್ಲ. ‘ನಾಟಕ ಆಡ್ತಿಯಾ ನನ್ಮಗನೆ’ ಅಂತ ಒಬ್ಬ ಪೊಲೀಸ್ ಬೂಟ್ ಕಾಲಲ್ಲಿ ಒದ್ದ. ತಾರಾನಾಥ್‌ಗೆ ತಕ್ಷಣ ಅದು ಸಕ್ಕರೆ ಕಾಯಿಲೆಯ ಲಕ್ಷಣವೆಂದು ತಿಳಿದು ಸಕ್ಕರೆ ತರಲು ಅತ್ತ ಓಡಿದ. ಅಷ್ಟರಲ್ಲಿ ನಾಲ್ಕೈದು ಜನ ಪೊಲೀಸರಿಗೂ ನೂರಾರು ಜನರಿಗೂ ಘರ್ಷಣೆ ನಡೆದು ಗೋಲೀಬಾರ್ ಆಗಿತ್ತು. ತಾರಾನಾಥ್‌ಗೆ ಗುಂಡಿನ ಶಬ್ದ ಕೇಳಿಸಿ ಓಡಿ ಬಂದ. ಅಲ್ಲಿ ಯಾರೂ ಇರಲಿಲ್ಲ ಕೆಲ ಜನ ಪೊಲೀಸರಲ್ಲದೆ. ಜನರೆಲ್ಲ ಸತ್ತಂತೆ ಬಿದ್ದಿದ್ದರು. ನಾಗಭೂಷಣ ಸಹ ಕಾಣಲಿಲ್ಲ. ತಾರಾನಾಥ್ ಪೊಲೀಸರಿಗೆ ಕಂಡಾಕ್ಷಣ ಗುಂಡು ಹಾರಿತು. ಎದೆಗೇ ತಗುಲಿತು.
…..
*****
ಮೇ ೧೯೮೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬೦
Next post ಗಾಲಿಗಳು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…