ಕಾಡುತಾವ ನೆನಪುಗಳು – ೧೮

ಕಾಡುತಾವ ನೆನಪುಗಳು – ೧೮

“ಒಳಗೆ ಬರಲಾ? ಅವ್ವಾ…”

“ಬೇಡಾ… ಎಲ್ರೂ ಮಲಗವ್ರೆ… ನಾನೇ ಹೊರಗ್ ಬರ್ತೀನಿ…” ಎನ್ನುತ್ತಾ ಅವ್ವ ಹೊರಗೆ ಬಂದಿದ್ದಳು.

“ನಾನೀಗ ಬೆಂಗಳೂರಿನಿಂದ ಬಂದಿದ್ದೀನಿ…”

“ಊರು ಬದಲಾವಣೆಯಾದ್ರೆ ಚಾಳಿ ಬದಲಾಗುತ್ತಾ? ನಿನ್ನ ಮೇಲಿನ ನಂಬಿಕೆ ಸತ್ತು ಹೋಗ್ಬಿಟ್ಟಿದೆ…”

“ಅಂಥಾ ತಪ್ಪಾ ನಾನು ಮಾಡಿದ್ದೀನಾವ್ವ?”

“…..”

“ಸಂಬಳ ಬಂದಿತ್ತು… ದುಡ್ಡು ಕೊಟ್ಟು ನಿನ್ನನ್ನು ನೋಡ್ಕೊಂಡು ಹೋಗೋಣಾಂತ ಬಂದೆ…”

“ಸರಿ…” ಅವ್ವ ನನ್ನ ಕೈಯ್ಯಲ್ಲಿದ್ದ ಹಣದ ಕಟ್ಟನ್ನು ತೆಗೆದುಕೊಂಡಳು.

“ಅವ್ವಾ… ಕುಡಿಯೋಕೆ ಸ್ವಲ್ಪ ನೀರು ಕೋಡ್ತೀಯಾ?”- ಕೇಳಿದೆ. ಒಳಗೆ ಹೋಗಿ ನೀರು ತಂದು ಕೊಟ್ಟಳು. ಬಾಯಿ ಒಣಗಿ ಹೋಗಿದ್ದುದರಿಂದ ನೀರನ್ನು ತೆಗೆದುಕೊಂಡು ಕುಡಿದು ಚೊಂಬನ್ನು ಅವ್ವನ ಕೈಗಿತ್ತಿದ್ದೆ.

“ನಾಳೆ ಹಬ್ಬವಿದೇಂತ ನಿನ್ನ ತಂಗಿ, ಗಂಡ ಮಕ್ಕಳೂ ಬಂದಿದ್ದಾರೆ. ಸರಿ… ನೀನಿನ್ನೂ ಹೋಗು…” ಎಂದಿದ್ದಳು ಗಂಭೀರವಾಗಿ.

ನನಗೆ ಮುಂದೆ ಅಲ್ಲಿ ನಿಲ್ಲಲಾಗಲಿಲ್ಲ. ಹಬ್ಬಕ್ಕೆಂದು ದೂರದಿಂದ ಎಲ್ಲರೂ ಬಂದಿದ್ದಾರೆ… ನಾನೂ ಬಂದಿರಲಿಲ್ಲವಾ? ನಾನೂ ನನ್ನದೆಲ್ಲವೂ ಬೇಕು… ನಾನು ಬೇಡವಾದೆನಾ?

ಬಸ್‌ಸ್ಟ್ಯಾಂಡಿಗೆ ಬಂದು ಹೇಗೆ ಬಸ್ಸು ಹತ್ತಿ ಕುಳಿತ್ತಿದ್ದೇನೋ… ನನಗೆ ಗೊತ್ತಾಗಿರಲಿಲ್ಲ, ಸೀಟಿಗೆ ಬಂದು ಕುಳಿತ ಮೇಲೆ ಟವಲ್‌ನಿಂದ ಮುಖ ಮುಚ್ಚಿಕೊಂಡು ನಿಶ್ಯಬ್ಧವಾಗಿ ಬಹಳ ಹೊತ್ತು ಅತ್ತಿದ್ದೆ.

ನನ್ನ ಮನಸ್ಸಿಗೆ ಸಮಾಧಾನ ತಂದಿರುವ ಹೊತ್ತಿನಲ್ಲೂ ನಾನು ಹಳೆಯ ವಿಷಯಗಳ ಬಗ್ಗೆ ಯೋಚಿಸಿ ಖಿನ್ನಳಾಗಬಾರದೂಂತ ಎಷ್ಟೋ ಬಾರಿ ಅಂದುಕೊಳ್ಳುತ್ತಿದೆ. ಆದರೆ ಆ ಕಹಿ ನೆನಪುಗಳು ಬೇಡಾಂದರೂ ಕಾಡುತ್ತವೆ ಮಗಳೇ. ಏನು ಮಾಡಲಿ?

ಇನ್ನೊಂದು ವಿಷಯ ಬರೆಯಲು, ನಿನಗೆ ತಿಳಿಯಲು ಮರೆತಿದ್ದೆ. ಆ ಆಯುರ್ವೇದ ಡಾಕ್ಟರನ ತಮ್ಮ ನನ್ನ ಬಳಿಯೇ ಕರೆದೊಯ್ಯಲು ಬಂದಿದ್ದರು. ಇವನು ಹೋಗಲು ನಿರಾಕರಿಸಿದ್ದ. ಕಾರಣ ಕೇಳಿದ್ದಕ್ಕೆ ಇಲ್ಲೇ ಏನಾದರೂ ಕೆಲಸ ಹುಡುಕಿಕೊಳ್ಳುತ್ತೇವೆಂದು ಹೇಳಿ ಅವರನ್ನು ವಾಪಸ್ಸು ಕಳುಹಿಸಿದ್ದ. ನಾನೂ ಹೇಳಿದ್ದೆ. ಇನ್ನು ಸ್ವಲ್ಪ ದಿನಗಳಲ್ಲಿ ಕೆಲಸ ಸಿಗದಿದ್ದರೆ ಹೋಗುತ್ತೇನೆಂದು ಹೇಳಿದ್ದ ಅವನು “ನಾನು ನಿಮಗೆ ಭಾರವಾಗಿದ್ದೇನಾ?” ಎಂದು ಕೇಳಿದ್ದ. ಆಗ ನನಗೆ ಏನು ಹೇಳಬೇಕೆಂದು ತಿಳಿದಿರಲಿಲ್ಲ. ನಾನವರ ಉಪಕಾರವನ್ನು ಮರೆಯುವ ಹಾಗಿರಲಿಲ್ಲ. ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದ. ನನಗಿಂತ ಚಿಕ್ಕವನಾಗಿದ್ದರೂ ಅಣ್ಣನಂತೆ ನನಗೆ ಸಹಾಯದಲ್ಲಿ ನನ್ನ ಜೊತೆಗಿದ್ದ. ಅವನಿಗೆ ಬೇಸರಪಡಿಸಲು ನನಗಿಷ್ಟವಾಗಿರಲಿಲ್ಲ. ಆದರೂ ವರ್ಷವಾದರೂ ಅವನು ಕೆಲಸ ಹುಡುಕಲಿಲ್ಲ. ಆಸಕ್ತಿಯನ್ನು ತೋರಿಸಿರಲಿಲ್ಲ. ಹಾಯಾಗಿದ್ದ. ಇಂತಹ ಸಮಯದಲ್ಲಿಯೇ ಅವನ ಇರುವಿಕೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.

“ಅವನು ಯಾರಿರಬಹುದು?”

“ತಮ್ಮನಂತೂ ಅಲ್ಲ. ಸ್ವಲ್ಪವೂ ಹೋಲಿಕೆಯಿಲ್ಲ…”

“ಮಗನಂತೂ ಆಗಿರಲಾರ?”

“ಗಂಡನಾಗಿರಬಹುದೆ? ಊಹೂಂ ಆಕೆಯನ್ನು ಮದುವೆ ಆಗಿಲ್ಲ. ಕುತ್ತಿಗೆಯಲ್ಲಿ ತಾಳಿಯಿಲ್ಲ…”

ಸಮಾಜದ ನ್ಯಾಯ ನಿನಗೆ ಗೊತ್ತಿಲ್ಲ ಮಗಳೇ. ನಾನು ಸುಮ್ಮನಿರುತ್ತೇವೆಂದರೂ ಇರಲು ಬಿಡಲಾರದು. ಮೂರು ವರ್ಷದ ಹುಡುಗನ ಜೊತೆ ಓಡಾಡಿದರೂ ಕೆಟ್ಟ ಕುತೂಹಲದಿಂದ ನೋಡುವ ಕಣ್ಣುಗಳಿಗೆ ಬಾಯಿಗಳಿಗೆ ನಾನು ಏನೆಂದು ಉತ್ತರ ಕೊಡಬೇಕಿತ್ತು? ಉತ್ತರ ತಿಳಿಯುವವರೆಗೂ ಅವರೆಂದಿಗೂ ಸುಮ್ಮನಿರಲಾರರು. ಇದು ಸಾಮಾಜಿಕ ನ್ಯಾಯ.

ನಿನಗೊಂದು ವಿಷಯ ಗೊತ್ತಾ? ಈ ಪ್ರಪಂಚದಲ್ಲಿ ಮೂರು ನ್ಯಾಯಗಳಿವೆ. ಒಂದು ಬೆಕ್ಕು ತನ್ನ ಮರಿಗಳ ಸುರಕ್ಷತೆಗಾಗಿ ತಾನೇ ಬಾಯಿಯಿಂದ ನೋವಾಗದಂತೆ ಕಚ್ಚಿಕೊಂಡು ಹೋಗಿ ಅತ್ಯಂತ ಸುರಕ್ಷಿತ ಜಾಗದಲ್ಲಿಡುತ್ತವೆ. ಮಂಗಗಳು ಮರಿಗಳಿಗೇ ತನ್ನನ್ನು ಬಿಗಿಯಾಗಿ ಅಪ್ಪಿ ಹಿಡಿದುಕೋ ನಾನು ಹಾರಾಡುತ್ತಾ ಓಡುವಾಗ ನೀನು ಬಿದ್ದು ಸತ್ತರೆ ಅದಕ್ಕೇ ನಾನು ಜವಾಬ್ದಾರಿಯಲ್ಲವೆಂದು ಹೇಳಿದರೆ, ಇನ್ನು ಹಸಿದ ತೋಳ, ಪುಟ್ಟ ಮುಗ್ಧ ಕುರಿಮರಿಯ ಕತೆಯು ನಿನಗೆ ಗೊತ್ತಿರಬೇಕಲ್ಲವಾ? ಗೊತ್ತಿರದಿದ್ದರೆ ಕೇಳು. ನೀರು ಧುಮುಕಿ ಕೆಳಗೆ ಹರಿಯುವ ಜಾಗದಲ್ಲಿ ಕುರಿಮರಿ ನೀರು ಕುಡಿಯುತ್ತಿದ್ದಾಗ, ಮೇಲೆ ನಿಂತ ತೋಳ ಕುರಿಮರಿಯನ್ನು ತಿನ್ನಲು ಹವಣಿಸಿ ಕಾಲುಕೆರೆದು ಜಗಳ ತೆಗೆಯುತ್ತದೆ. ನಾನು ಕುಡಿಯುತ್ತಿರುವ ನೀರನ್ನು ಕುಡಿಯುತ್ತಿರುವ ಕುರಿಮರಿ “ಇಲ್ಲಾ… ನೀವು ಕುಡಿದು ಬಿಟ್ಟ ನೀರೇ ಕೆಳಗೆ ಹರಿದು ಬರುತ್ತಿರುವುದು. ಅದು ಎಂಜಲು. ನಾನ್ಹೇಗೆ ಎಂಜಲು ಮಾಡಿದೆ?” ಎಂದು ಕೇಳಿದಾಗ “ನನಗೇ ಪ್ರತ್ಯುತ್ತರ ಕೊಡುತ್ತೀಯಾ?” ಎಂದ ತೋಳವು ಕೆಳಗೆ ಹಾರಿ ಆ ಕುರಿಮರಿಯನ್ನು ಕೊಂದು ತಿಂದು ಬಿಡುತ್ತದೆ. ಇದಕ್ಕೆ ಸಾಮಾಜಿಕ ನ್ಯಾಯವೆನ್ನುತ್ತಾರೆ. ನಮ್ಮ ಪಾಡಿಗೆ ನಾವಿದ್ದರೂ ಬದುಕಲು ಬಿಡಲಾರರು ಈ ಸಮಾಜದ ಜನ!

ನಾನೇನು ಮಾಡಬೇಕಿತ್ತು?

ನನ್ನ ಆಪ್ತ ಸ್ನೇಹಿತೆ ಉಷಾಳೊಂದಿಗೆ ಹೇಳಿಕೊಂಡಿದ್ದೆ. ಬೆಂಗಳೂರಿಗೆ ಬಂದು ಎರಡು ವರ್ಷಗಳ ನಂತರವೂ ಡಾಕ್ಟರ್ ತಮ್ಮ ಹೋಗುವ ಸೂಚನೆ ತೋರಿರಲಿಲ್ಲ. ಆ ಡಾಕ್ಟರಿಗೆ ಕಾಗದ ಬರೆದು ತಿಳಿಸಿದ್ದೆ. ಸಂಬಳದ ಹಣದ ಮೊತ್ತ ಹೆಚ್ಚಾಗಿಯೇ ಸಿಕ್ಕಿದುದರಿಂದ, ಆಟೋ ರಿಕ್ಷಾ, ಬಸ್ಸಿನಲ್ಲಿ ಓಡಾಡುವುದನ್ನು ತಪ್ಪಿಸಿಕೊಳ್ಳಲು ನಾನೊಂದು ಕಾರೊಂದನ್ನು ಖರೀದಿ ಮಾಡಿದ್ದೆ ಉಳಿದ ಹಣವನ್ನು ಕಂತಿನ ಪ್ರಕಾರ ಕಟ್ಟುತ್ತಿದ್ದೆ. ಅವರ ಹಿಂದಿನ ಗ್ಲಾಸಿನ ಮೇಲೆ “ಅವ್ವ” ಎಂದು ಬರೆಯಿಸಿ ತೃಪ್ತಿ ಪಟ್ಟುಕೊಂಡಿದ್ದೆ. ಹಣ ಕೊಡಲು ಹೋದಾಗ ಅವ್ವನಿಗೆ ಆ ಕಾರನ್ನು ತೋರಿಸಿದ್ದೆ. ಅವ್ವ ಹೇಳಿದ ಮೊದಲ ಪ್ರಶ್ನೆ,

“ಅವನಿನ್ನೂ ನಿಂಜೊತೇನೇ ಇದ್ದಾನಾ?”

“ನಂಗೆ ಡ್ರೈವಿಂಗ್ ಬರೋಲ್ಲ ಅವ್ವಾ…” ಎಂದಿದ್ದೆ.

“ಮೊದಲು ಡೈವಿಂಗ್ ಕಲಿತುಕೋ. ಅವನನ್ನು ಅಲ್ಲಿಂದ ಕಳುಹಿಸಿಬಿಡು. ಮೀಸೆ ಬಂದಿರೋರ ಜೊತೆ ಜಾಸ್ತಿ ಓಡಾಡಬೇಡಾ… ನಿನಗೇ ಒಳ್ಳೆಯದಲ್ಲ…” ಎಂದಿದ್ದಳು.

ಅವ್ವಳ ಹೇಳಿಕೆ ಸುಳ್ಳಾಗಿರಲಿಲ್ಲ. “ನಿನಗೆ ಸಹಾಯವಾಗುತ್ತೆ, ಡ್ರೈವಿಂಗ್ ನಾನೇ ಮಾಡ್ತೀನಿ. ಅದನ್ನೇ ಕೆಲಸ ಅಂದ್ಕೋತೀನಿ” ಎಂದಿದ್ದ ಅವನು. ನನಗೆ ದೊಡ್ಡ ತಲೆ ನೋವಾಗಿ ಕಾಡತೊಡಗಿದ್ದ. ಒಂದು ದಿನ ಅವನನ್ನೇ ನೋಡುತ್ತಾ ಗಂಭೀರವಾಗಿ ಕೇಳಿದ್ದೆ.

“ನನ್ನನ್ನು ಮದುವೆ ಮಾಡ್ಕೊತೀಯಾ?”

“ಆಂ…? ಹೂಂ… ನಿಮಗೆ ಒಳ್ಳೆಯದಾಗುವುದಾದರೆ ನಾನು ತಯಾರು…”

“ನಿಮ್ಮ ತಂದೆ-ತಾಯಿ ಒಪ್ಪದಿದ್ದರೆ?”

“ನಾನು ಒಪ್ಪಿಸುತ್ತೇನೆ…”

“ನಿನ್ನ ಅಣ್ಣನೊಂದಿಗೆ ನನ್ನ ಸಂಬಂಧವಿತ್ತು…”

“ಅಂದರೆ?”

“ನಿನಗೆ ಅತ್ತಿಗೆಯಾಗೋದಿಲ್ವಾ?”

“ಹೇಗೆ…? ಅವನೇನು ನಿಮ್ಮನ್ನು ಮದುವೆ ಮಾಡಿಕೊಂಡಿಲ್ಲವಲ್ಲ? ಅವನು ಆಟವಾಡಿಬಿಟ್ಟು ಬಿಡುವ ಎಲ್ಲಾ ಹೆಂಗಸರು ನನಗೆ ಅತ್ತಿಗೆ ಹೇಗಾಗುತ್ತಾರೆ?”

ತರ್ಕಬದ್ಧವಾಗಿಯೇ ಕೇಳಿದ್ದ. ನನಗೆ ಆಘಾತವಾಗಿತ್ತು…! ಎಲ್ಲಾ ವಿಷಯ ಗೊತ್ತಿದ್ದ ಉಷಾ,

“ನೋಡು ಅವನಿಗೆಲ್ಲಾ ಗೊತ್ತಿದೆ. ನೀನು ಬೇಡವೆಂದರೂ ಈ ಕಾರ್ಯ ಮಾಡಲೇಬೇಕು. ತಾಳಿ ಅನ್ನೋ ಬೇಲಿಯು ಹೆಣ್ಣಿಗೆ ಎಷ್ಟೇ ಶತಮಾನಗಳಾದರೂ ಭದ್ರತೆಗೆ ಬೇಕು. ನನಗೆ ನಿನ್ನ ಮನಃಸ್ಥಿತಿ ಗೊತ್ತು. ಬೆಂಗಳೂರಿನಂತಹ ಮಹಾ ನಗರದಲ್ಲಿ ನೀನು ಒಂಟಿಯಾಗಿ ಬದುಕಬಲ್ಲೆ ಎಂಬ ಮೊಂಡುತನ ಒಳ್ಳೆಯದಲ್ಲ… ಕುತ್ತಿಗೆಯಲ್ಲಿ ತಾಳಿಯಿದ್ದರೆ ಹೊಲಸು ಬಾಯಿಗಳು ಮುಚ್ಚಿಕೊಳ್ಳುತ್ತದೆ…”

“ನನಗಿಂತಲೂ ಚಿಕ್ಕವನು, ಜವಾಬ್ದಾರೀ ಏನೆಂದೇ ಗೊತ್ತಿಲ್ಲ…”

“ಚಿಕ್ಕವನೋ ದೊಡ್ಡವನೋ ಅದು ಯಾರಿಗೂ ಬೇಕಾಗಿರೋಲ್ಲ. ಕೆಲವು ದಿನಗಳು ಆಡಿಕೊಳ್ತಾರೆ. ಸೋತು ಸುಮ್ಮನಾಗುತ್ತಾರೆ. ಇನ್ನು ಜವಾಬ್ದಾರಿಯ ವಿಷಯ ಬಂದರೆ, ಅವನೇನು ನಿನ್ನನ್ನು ದುಡಿದು ಸಾಕಬೇಕೆಂದಿಲ್ಲ. ಅವನ ಮೇಲೆ ಅವಲಂಬಿಕೆಯಾಗಿಯೂ ಇಲ್ಲ… ನೀನಿನ್ನು ಬಹಳ ದೂರ ಬದುಕಿನಲ್ಲಿ ನಡೆಯಬೇಕಿದೆ. ಅಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ. ಎಲ್ಲರೊಡನೆ ಸಂಬಂಧ ಕಲ್ಪಿಸುತ್ತಾರೆ. ನಮ್ಮ ವೃತ್ತಿಯೇ ಅಂತಹುದು. ನೀನೇ ಯೋಚಿಸು…”

ತಿಂಗಳುಗಟ್ಟಲೇ ಒಬ್ಬಳೇ ಕುಳಿತು ಯೋಚಿಸಿದ್ದೆ. ಮದುವೆ, ಗಂಡ-ಮಕ್ಕಳು ಎಂದು ಸಂಸಾರದ ಬಗ್ಗೆ ಎಂದೂ ನಾನು ಯೋಚಿಸಿಯೇ ಇರಲಿಲ್ಲ. ನನಗದು ಬೇಕೆಂದು, ಅರ್ಹಳೆಂದು ಎಂದೂ ಅನ್ನಿಸಿರಲಿಲ್ಲ. ಪೋಲಿ ದನಗಳು ನುಗ್ಗಬಾರದೆಂದರೆ ಆ ಹೊಲಕ್ಕೆ ಬೇಲಿ ಹಾಕಲೇ ಬೇಕಿತ್ತು. ಅದಕ್ಕೆ ವಿಶ್ವ ಸುಂದರಿಯೇ ಆಗಬೇಕೆಂದೇನಿರಲಿಲ್ಲ. ಹೆಣ್ಣಾಗಿದ್ದರೆ ಸಾಕಾಗಿತ್ತು. ಯೋಚಿಸಿ ಯೋಚಿಸಿ ದಣಿದು ಹೋಗಿದ್ದೆ. ಯಾವ ಕೋಮಲ ಭಾವನೆಗಳೂ ಬಂದಿರಲಿಲ್ಲ. ಬದುಕಿನ ಉದ್ದನೆಯ ದಾರಿಯನ್ನು ಕ್ರಮಿಸಲು ನನಗೆ ಸಹ ಪ್ರಯಾಣಿಕ ಬೇಕಾಗಿತ್ತು.

ಅವನ ತಂದೆ-ತಾಯಿ ಒಪ್ಪಿಗೆ ಕೊಟ್ಟಿದ್ದರು. ನಾನು ಮತ್ತೊಂದು ದುರಂತದ ಅಧ್ಯಾಯಕ್ಕೆ ನಾಂದಿ ಹಾಡಿದ್ದೆ! ಯಾಕೆಂದರೆ ನನಗೆ ಗೊತ್ತಿತ್ತು ಮತ್ತದೇ ಕೆಸರಿನ ಗುಂಡಿಗೆ ಬೀಳುತ್ತಿದ್ದೇನೆಂದು. ಹಲವು ತಿಂಗಳುಗಳ ಹಿಂದೆ ನನ್ನನ್ನು ಪಾಪದ ಪ್ರಜ್ಞೆ ದೂಡಿದ್ದ. ನನ್ನನ್ನು ನಿರಾಕರಿಸಿದ್ದ. ತಿರಸ್ಕರಿಸಿದ ಆ “ವ್ಯಕ್ತಿ” ತಾನೀಗ ಮದುವೆಯಾಗಲು ತಯಾರಿದ್ದೇನೆ. ಅಣ್ಣನಿಗೂ ಗೊತ್ತಿದೆ”, ಎಂದು ಕೇಳಿದ್ದ. ನಾನು ಮಾತನಾಡದೆ ಅವನ ಮುಖ ನೋಡಿದ್ದೆ, ಮತ್ತು “ನನ್ನ ಈ ಮಗಳನ್ನು ನಿನ್ನಲಿಯೇ ಇಟ್ಟುಕೊಂಡು ಸಾಕಬೇಕು…” ಎಂದಿದ್ದ. ಆ ಮಗುವಿನ್ನೂ ಎರಡೂವರೆ ಮೂರು ವರ್ಷಗಳಿರಬೇಕು ಎಂದುಕೊಂಡಿದ್ದ ನಾನು ಅವನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ,

“ನೀನು ಏನು ಮಾಡ್ತೀಯಾ?” ಕೇಳಿದ್ದೆ.

“ಆಂ…?”

“ನಾನು ದುಡಿದು ಹಣ ಕೊಟ್ಟು ನಿನ್ನ ಮಗಳನ್ನು ಸಾಕಬೇಕು ಅಂತೀಯಾ? ನೀನೇನೂಂತ ಈ ಮಾತು ಹೇಳ್ತಿಯಾ? ನಾಚಿಕೇಂತ ಏನಾದ್ರೂ ಇದ್ರೆ ಮುಂದೇನು ಮಾತನಾಡದೇ ಇಲ್ಲಿಂದ ಜಾಗ ಖಾಲಿ ಮಾಡು. ಮತ್ತೆ ಬಂದು ಮಾತನಾಡೋದಿರಲಿ, ನನ್ನನ್ನು ನೋಡೋಕೂ, ಮುಖ ತೋರಿಸೋಕೋ ನಿನಗೆ ಧೈರ್ಯ ಎಲ್ಲಿಂದ ಬಂತು?…”

“ನೀನೀಗ ವರ್ಷಗಳಿಂದಲೂ ನನ್ನ ತಮ್ಮನನ್ನು ಇಟ್ಟುಕೊಂಡಿಲ್ವಾ? ಅದಕ್ಕಿಂತ ನನ್ನನ್ನು ಮದ್ದೆಯಾಗೋದೆ ವಾಸಿಯಲ್ವಾ?” ನಿರ್ವಿಣ್ಣಳಾಗಿ ಬಿಟ್ಟಿದ್ದೆ!

ಕೆಲವು ಕ್ಷಣಗಳು ಅವನು ಏನಂದ? ಅದರರ್ಥವೇನಿತ್ತು? ಎಂದು ತಿಳಿಯಲೇ ಇಲ್ಲ. ಈಗವನು ಪೂರ್ತಿಯಾಗಿ ಅರ್ಥವಾಗತೊಡಗಿದ್ದ. ಅವಮಾನದಿಂದ ಕಂಪಿಸತೊಡಗಿದ್ದೆ. ನಿಂತಿದ್ದ ಜಾಗದಲ್ಲಿಯೇ ಬೀಳುವಂತಾದಾಗ ಗೋಡೆಯನ್ನಾಧರಿಸಿ ನಿಂತುಕೊಂಡಿದ್ದೆ. ನಾನು ವಾಸ್ತವ ಸ್ಥಿತಿಗೆ ಬರುವಷ್ಟರಲ್ಲಿ ಅವನು ಹೊರಟುಹೋಗಿದ್ದ.

ಈ ಘಟನೆ ನನ್ನ ಬದುಕಿನ ಬಗ್ಗೆ ನನಗಿದ್ದ ಅಲ್ಪ-ಸ್ವಲ್ಪ ನಂಬಿಕೆಯ ಬುಡವನ್ನೇ ಅಲ್ಲಾಡಿಸಿತ್ತು. ಬೇರೆಯವರೇನಾದರೂ ಹೇಳಿದ್ದರೆ ನಿರ್ಲಕ್ಷ್ಯ ಮಾಡಬಹುದಿತ್ತು. ಆದರೆ ಅವನು ಮತ್ಸರದಿಂದ ಕುಹಕ ನುಡಿಗಳನ್ನಾಡಿದ್ದ. ತನ್ನ ರಕ್ತವನ್ನು ತಾನೇ ನಂಬಿರಲಿಲ್ಲ. ಇಲ್ಲಾ… ನಾನು ನಂಬಿದ್ದು ತಪ್ಪಾ? ಕೆಲವರು ತಮ್ಮ ಮಕ್ಕಳು ಎಲ್ಲಿಯಾದರೂ ಬದುಕಲಿ, ಏನಾದರೂ ಮಾಡಿಕೊಂಡಿರಲಿ, ಸುಖವಾಗಿ ಜೀವಂತವಾಗಿದ್ದರೆ ಸಾಕೆಂದು ಬಯಸುವವರು ಇದ್ದಾರೆಂದಂತಾಯಿತು. ನಾನು ‘ಮೊದಲ ಪಾಪ’ವನ್ನು ಮಾಡುವಂತೆ ಪ್ರೇರೇಪಿಸಿದ ಊಹೂಂ… ಹಾಗೆನ್ನಲಾಗದು ನನ್ನದೂ ಸಮಪಾಲಿದ್ದಿತ್ತು, ಅವನ ಮನೆಗೇ ಸೊಸೆಯಾಗಿ ಹೋಗಬೇಕು ಎಂದು ಹಠಮಾರಿ ನನ್ನ ಮನಸ್ಸು ಕೆಟ್ಟದ್ದನ್ನು ಮಾಡಲು ಸೇಡು ತೀರಿಸಿಕೊಳ್ಳಬೇಕೆನ್ನುವ ಹುಂಬತನವನ್ನೂ ಮೂಡಿಸಿತ್ತು. ಸರ್ವನಾಶ ಮಾಡಬೇಕು… ಎಂದುಕೊಂಡಿದ್ದ ನಾನೇ ನಾಶವಾಗಿ ಹೋಗುತ್ತೇನೆಂಬ ಅರಿವೂ ನನಗಿರಲಿಲ್ಲ. ಮನಸ್ಸಿನ ಈ ತೊಳಲಾಟ, ಕೋಲಾಹಲವನ್ನು ‘ಗಾಜಿನ ಮನೆ’ ಎಂಬ ಕಾದಂಬರಿಯನ್ನು ಬರೆಯಿಸಿ ಅಷ್ಟರಲ್ಲಿ ತಣ್ಣಗಾಗಿಸಿತ್ತು. ನಾವಂದುಕೊಂಡಂತೆ ನಡೆಯಲು ಅದೇನು ಸಿನಿಮಾವೆ? ಒಂದು ಮನೆತನದಲ್ಲಿ ಒಬ್ಬನೇ ಕೆಟ್ಟಿದ್ದರೆ ಕೆಟ್ಟದ್ದು ಮಾಡಿದರೆ ಇಡೀ ಮನೆತನವನ್ನೇ ಕೆಟ್ಟದ್ದೆಂದು ಹೇಳಬಹುದೆ? ನನ್ನ ಪರಿಚಯ ಮೊದಲೇ ತಿಳಿದಿದ್ದ ಆಯುರ್ವೇದ ವೈದ್ಯನಾಗಿದ್ದ ಅಣ್ಣನಿಗೆ ಈ ಸೂಕ್ಷ್ಮತೆ ತಿಳಿದಿರಲಿಲ್ಲವೇ? ತಿಳಿದಿದೆ ಎಂದಾದರೆ ಅವನ ಮತ್ತೊಬ್ಬ ತಮ್ಮನನ್ನು ಯಾವ ವಿಶ್ವಾಸದಿಂದ ನನ್ನ ಸಹಾಯಕ್ಕೇ ನೇಮಿಸಿದ್ದ? ಒಂಟಿ ಹೆಣ್ಣು… ಮನೆಯವರು ಕೈಬಿಟ್ಟಿದ್ದಾರೆ. ಒಳ್ಳೆಯ ಹುದ್ದೆ ಪೋಷಣೆ ಮಾಡಬಹುದೆಂದು ಯೋಚಿಸಿದ್ದರಾ?

ಹಲವಾರು ತಿಂಗಳು ತೊಳಲಾಡಿದ್ದೆ. ಕೊನೆಗೆ ನನ್ನ ಬಳಿಯೇ ಬಂದಿತ್ತು ಚೆಂಡು!

ಅಂತೂ ಇಂತು ಅವನೊಂದಿಗೆ ಆರ್ಯ ಸಮಾಜದಲ್ಲಿ ನನ್ನ ಮದುವೆಯಾಗಿತ್ತು. ಡಾಕ್ಟರ್ ಉಷಾ ತನ್ನ ಸಹೋದ್ಯೋಗಗಳ ಜೊತೆ ಬಂದು ಸಾಕ್ಷಿ ಹಾಕಿದ್ದಳು. ಅವನು ಈಗ ನನ್ನ ಗಂಡನಪಟ್ಟ ಪಡೆದುಕೊಂಡಿದ್ದ. ನಾನು ಮೊದಲು ಕರೀಮಣಿಯ ಹಾಕಿಕೊಂಡಿದ್ದು. ಆದರೂ ಹಿಂದೆ ಕುಹಕ ನುಡಿಗಳನ್ನಾಡುವವರು ಇದ್ದರು. ನಾನೀಗ ತಲೆಕೆಡಿಸಿಕೊಳ್ಳಬಾರದು. ನನ್ನ ಬದುಕು ನನ್ನದು ಎಂದು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದೆ. ಆದರೆ ಮಗಳೇ… ನನ್ನ ಆಯ್ಕೆ ಎಳ್ಳಷ್ಟು ಸರಿಯಾಗಿರಲಿಲ್ಲ!

ನನ್ನ ಬದುಕು ನನ್ನದು ಎಷ್ಟು ಮೊಂಡುತನದಿಂದ ಹೇಳಿಕೊಂಡಿದ್ದೆ? ಬದುಕು ಮೂರಾಬಟ್ಟೆಯಾಗಿದೆಯೆಂದು ತಿಳಿದರೂ ಮತ್ತೆ-ಮತ್ತೆ ತೇಪೆ ಹಚ್ಚಿ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನಾನು ಸೋಲೊಪ್ಪದೆ ಹೊಲಿಯುತ್ತಿದ್ದೆ. ಆದರೆ ಪಿಸುದುಕೊಳ್ಳುತ್ತಿತ್ತು. ಏನೂ ಅರ್ಥವಾಗದ ನಿನ್ನ ವಯಸ್ಸಿನ ಹುಡುಗಿಗೆ ಭಯ ತುಂಬಿಸುತ್ತಿದ್ದೇನೆಂದು ಕೊಳ್ಳಬೇಡಾ. ನೀನು ನಿನ್ನ ಮೆಡಿಕಲ್ ಕೋರ್ಸ್ ಮುಗಿಸಿ ನಿನ್ನ ಅಪ್ಪ-ಅಮ್ಮ ನಿಂತು ಮದುವೆ ಮಾಡಿಸುವಾಗ ಇದು ನಿನ್ನ ಮದುವೆಗೆ ‘ಗಿಫ್ಟ್…’ ಆಗಿ ಸಿಗಬಹುದು. ಆಗ ನಿನಗೆ ಬದುಕೆಂದರೆ ಸ್ವಲ್ಪವಾದರೂ ಅರ್ಥವಾಗಿರುತ್ತದೆ. ನಾನು ಮಾಡಿದ ತಪ್ಪುಗಳನ್ನೆಂದಿಗೂ ಮಾಡಲೇಬಾರದು.

ಅಷ್ಟಕ್ಕೂ ನಿನ್ನ ಆಯ್ಕೆ, ಮಾರ್ಗದರ್ಶನ, ಮನೆಯವರ ಜೊತೆಗಿನ ಒಳ್ಳೆಯ ಬಾಂಧವ್ಯ ಸ್ನೇಹ, ಪ್ರೀತಿ ನಿನಗಿದ್ದೇ ಇದೆ. ನಿನ್ನ ದಾರಿ, ಅದರ ಆಯ್ಕೆ ಚೆನ್ನಾಗಿಯೇ ಇರುತ್ತದೆ. ತಪ್ಪೆಂದು ತಿದ್ದಿ ಹೇಳಲು ಬಂಧುಗಳಿರುತ್ತಾರೆ. ನನ್ನ ಹಾಗೆ ಚಂಚಲತೆ, ದ್ವಂದ್ವ, ನಿರಾಶೆ, ಹತಾಶೆ ನಿನಗಿರೋದಿಲ್ಲ ಬಿಡು. ಅದು ಬರುವುದೂ ಬೇಡಾ.

ಮುಂದೆ ಓದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಟ್ಟುಗುರುಡ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…