ಕಾಡುತಾವ ನೆನಪುಗಳು – ೧೭

ಕಾಡುತಾವ ನೆನಪುಗಳು – ೧೭

ಚಿನ್ನೂ,

ಬದುಕಿನಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಿತ್ತು. ಹುಟ್ಟು ಸಾವು ಖಚಿತ ಇದರ ನಡುವಿನ ಬದುಕು ನಮ್ಮದು. ಅದನ್ನು ನಾವೇ ರೂಪಿಸಿಕೊಳ್ಳಬೇಕೆಂದು ಬಲ್ಲವರು ಹೇಳುತ್ತಿರುತ್ತಾರೆ. ಅಂತಹ ಕೆಟ್ಟ ಬದುಕನ್ನು ಎಂಥಾ ದಡ್ಡನೂ ಆಯ್ಕೆ ಮಾಡಿಕೊಳ್ಳಲಾರ. ಅಂತಹ ಬದುಕು ನನ್ನದಾಗಿತ್ತು. ಎಂದೂ ಆ ವಿಧದ, ಅಪಮಾನ, ನಿರಾಶೆ ಸೋಲು ತುಂಬಿದ ಬದುಕನ್ನು ಯಾರೂ ಯೋಚಿಸಲಾರರು, ಅಂತಹುದರಲ್ಲಿ ನಾನೇ ಆಯ್ಕೆ ಮಾಡಿ ಬದುಕನ್ನು ಹೇಗೆ ರೂಪಿಸಿಕೊಳ್ಳಲು ಸಾಧ್ಯ? ಎಲ್ಲವೂ ನಮ್ಮ ಪೂರ್ವಜನ್ಮದ ಪಾಪಗಳ ಫಲ. ಅನುಭವಿಸಲೇಬೇಕು ಎಂದೂ ಹೇಳುತ್ತಾರೆ. ಪೂರ್ವ ಜನ್ಮ, ಜನ್ಮ ಜನ್ಮಾಂತರಗಳ ಬಗ್ಗೆ ಒಂದಿಷ್ಟೂ ನಂಬಿಕೆಯೇ ಇಲ್ಲ. ಇನ್ನು ಮತ್ತೆ ಕೆಲವರು ಅಪ್ಪ-ಅಮ್ಮ ಮಾಡಿದ ಪಾಪವನ್ನು ಮಕ್ಕಳು ಅನುಭವಿಸಲೇಬೇಕು ಎಂದು ಹೇಳುತ್ತಾರೆ. ಇದನ್ನು ನಂಬಬೇಕಾ ಚಿನ್ನಾ? ನಮ್ಮನ್ನು ಹುಟ್ಟಿಸಿ. ಕಷ್ಟಪಟ್ಟು ಬೆಳೆಸಿ ಸಾಕಿದ ಅಪ್ಪ-ಅಮ್ಮ ಏನು ಪಾಪ ಮಾಡಿಯಾರು? ಅವರವರು ಮಾಡಿದ್ದು ಕರ್ಮಫಲ ಅವರಿಗೇ ಎಂಬುದರಲ್ಲಿ ಅರ್ಥವಿದೆ ಅಲ್ವಾ?

ನನಗೂ ನನ್ನ ಬದುಕನ್ನು ಉತ್ತಮ ರೀತಿಯಲ್ಲಿ ಸುಂದರವಾಗಿ ಕಟ್ಟಿಕೊಳ್ಳುವ ಆಸೆ ಕನಸುಗಳಿದ್ದವು. ನಾನೂ ಎಂದು ಬಯಸದು ಕನಸೂ ಕಾಣಲು ಹೆದರುವಂತಹ ಘಟನೆಗಳು ನಡೆದು ಹೋಗಿದ್ದವು. ಸ್ನಾತಕೋತ್ತರ ಪದವಿಗೆ ಓದುತ್ತಿರುವಾಗ ಅನುಭವಿಸಿದ ನೋವು, ದುಃಖ ಅಪಮಾನ ಆಗ ತುಂಬಾ ಕೆಟ್ಟದಾಗಿತ್ತು ಅಂದುಕೊಂಡಿದ್ದೆ. ಆದರೆ ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ಅಸಹ್ಯಕರವಾದ ದಿನಗಳು ಬರಬಹುದೆಂದು ಊಹಿಸಿದ್ದೇನಾ? ಊಹೂಂ… ಖಂಡಿತಾ ಇಲ್ಲ… ಆದರೆ ಮುಂದಿನ ಈ ಘಟನೆಗಳಿಗೆ ಭದ್ರ ಬುನಾದಿಯಾಗಿತ್ತು ವಿದ್ಯಾರ್ಥಿಯಲ್ಲಿನ ಆ ನೋವು… ಅಪಮಾನ…!

ವಿನಾಕಾರಣವಾಗಿ ಒಬ್ಬ ಮನುಷ್ಯ ಮತ್ತೊಬ್ಬರನ್ನು ಹೇಗೆಲ್ಲಾ ದ್ವೇಷಿಸಬಹುದು? ಆ ದ್ವೇಷವನ್ನು ಸಾಧಿಸಬಹುದೆಂಬುದು ಗೊತ್ತಾಗಿತ್ತು. ವಿನಾಕಾರಣದ ದ್ವೇಷ ಇರುತ್ತದೆಯೇ? ಭ್ರಷ್ಟಾಚಾರ ವಿರೋಧಿಸಿದ್ದಕ್ಕೇ ಇಷ್ಟೆಲ್ಲಾ ಆಗಿತ್ತಾ? ಎಷ್ಟೆಲ್ಲಾ ಕಷ್ಟ, ನೋವು ಅನುಭವಿಸಿದ್ದೆ. ಅಸಹ್ಯಕರ ಮರೆಯಲು ಸಾಧ್ಯವಿತ್ತಾ? ಇಲ್ಲ… ಚಿನ್ನೂ, ಅದನ್ನು ಎಂದಿಗೂ ಮರೆಯಲಾರೆ. ಅದು ನನ್ನ ಮೇಲೆ ವಿಶ್ವಾಸವನ್ನು ಬಲಿ ಹಾಕಿತ್ತು… ನನ್ನ ಆತ್ಮಹತ್ಯೆಯ ಪ್ರಕರಣ ನನ್ನ ಮನೆಯವರನ್ನು ದೂರ ಮಾಡಿತ್ತು. ಅದನ್ನೆಲ್ಲಾ ಮರೆಯಲು ಹಗಲು-ರಾತ್ರಿಯೆನ್ನದೇ ಆಸ್ಪತ್ರೆಯ ಕೆಲಸಗಳಲ್ಲಿ ತೊಡಗಿದ್ದ ನನ್ನನ್ನು ವರ್ಗಾವಣೆ ಮಾಡಿಸಲಾಗಿತ್ತು. ದಿನದಿನಕ್ಕೆ ನಾನು ಹಠಮಾರಿಯಾಗತೊಡಗಿದ್ದೆ. ಅದರ ಫಲ ನನ್ನ ನರ್ಸಿಂಗ್ ಹೋಮ್ ಹುಟ್ಟಿತ್ತು. ಅದಕ್ಕೂ ಅಡಚಣೆಯಾಗಿತ್ತು. ಕಷ್ಟಗಳು ನನ್ನನ್ನು ಗಟ್ಟಿ ಮಾಡತೊಡಗಿದ್ದವು.

ನನ್ನಿಂದ ಯಾವುದೇ Complications ಆಗಿರಲಿಲ್ಲ. ನಾನು ಅಶ್ವಿನಿ ದೇವತೆ ಎನ್ನಲಾರೆ. ಚೊಚ್ಚಲು ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದ ಪಕ್ಕದ ಗ್ರಾಮದ ಹಿರಿಯರೊಬ್ಬರ ಮಗಳು ಪ್ರಸವದ ನಂತರದಲ್ಲಿ ಅತಿ ಹೆಚ್ಚು ರಕ್ತಸ್ರಾವದಿಂದ ಮೃತಪಟ್ಟಿದ್ದಳು. ಸುಖ ಪ್ರವಸವಾಗಿತ್ತು… ಎಲ್ಲವೂ ಸಹಜವಾಗಿದೆಯೆಂದು ತಿಳಿದ ನಂತರ ಆಕೆಯನ್ನು ವಾರ್ಡಿಗೆ ಶಿಫ್ಟ್ ಮಾಡಿಸಿದ್ದೆ. ಮನೆಯವರು ತಂದಿತ್ತ ಕಾಫಿ, ಬ್ರೆಡ್ಡನ್ನೂ ಸೇವಿಸಿದ್ದಳು. ನಂತರದಲ್ಲಿ ಇದ್ದಕ್ಕಿದ್ದ ಹಾಗೆ ಬಿಳಿಚಿಕೊಂಡು ಹಿಂದಕ್ಕೊರಗಿದ್ದಳು. ಗಾಬರಿಯಿಂದ ಓಡಿ ಬಂದಿದ್ದ ನಾನು ಹೃದಯ ಸ್ತಂಭನದ ಬಗ್ಗೆ ಯೋಚಿಸುವಷ್ಟರಲ್ಲಿ ಆಕೆಗೆ ತೀವ್ರತೆರನಾದ ರಕ್ತಸ್ರಾವವಾಗಿತ್ತು. ಆಕೆ ಚಿಕ್ಕ
ವಯಸ್ಸಿನವಳಾಗಿದ್ದುದರಿಂದ ಗರ್ಭಾಶಯವು ಪ್ರಸವದ ನಂತರ ಸಂಕುಚನವಾಗುವ ಶಕ್ತಿಯನ್ನು ಕಳೆದುಕೊಂಡಿತ್ತು…! ರಕ್ತ ನೀಡಬೇಕಾಗಿತ್ತು. ಆದರೆ ಐದು ನಿಮಿಷಗಳಲ್ಲಿ ಐದು ಬಾಟಲಿಗಳಷ್ಟೂ ರಕ್ತ ಪೂರಣ ಮಾಡಲು ಅಲ್ಲಿ ಸಾಧ್ಯವಿರಲಿಲ್ಲ. ದುಃಖದಿಂದ ಕೈಚೆಲ್ಲಿ ಕುಳಿತಿದ್ದೆ…!

“ಡಾಕ್ಟ್ರೇ… ನಿಮ್ಮ ಕೈಲಾದುದನ್ನು ನೀವು ಮಾಡಿದ್ದೀರಿ. ನಮ್ಮ ಹಣೆಬರಹ ನಮ್ಮ ಮಗಳನ್ನು ಕಳೆದುಕೊಂಡೆವು. ವೈದ್ಯರು ಹತ್ತು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ, ಈ ಒಂದು ತಪ್ಪನ್ನು ನಾವು ಕ್ಷಮಿಸಬೇಕು. ಅದೇ ವೈದ್ಯರು ಹತ್ತು ತಪ್ಪುಗಳನ್ನು ಮಾಡಿ, ಒಂದು ಒಳ್ಳೆಯ ಕೆಲಸ ಮಾಡಿದರೂ ಕ್ಷಮೆಗೆ ಅರ್ಹರಾಗುವುದಿಲ್ಲ… ನಾನು ವಿಚಾರಿಸಿಕೊಂಡೇ ಬಂದಿದ್ದೇನೆ. ನೀವು ದುಃಖ ಪಡುವುದು ಬೇಡಾ…” ಎಂದು ಆ ಹಿರಿಯರು ನನಗೇ ಸಾಂತ್ವಾನ ನೀಡಿದಾಗ ನಿಜಕ್ಕೂ ಅವರ ಕೈಗಳನ್ನು ಹಿಡಿದು ಅತ್ತುಬಿಟ್ಟಿದ್ದೆ. ಯಾವುದನ್ನೇ ಆಗಲಿ ನಾನು ನಿರ್ಲಕ್ಷ್ಯ ಮಾಡುವವಳಲ್ಲ ಎಂಬ ನಂಬಿಕೆ ಎಲ್ಲರಲ್ಲಿತ್ತು.

ಆದರೂ ನಾನು ಷಡ್ಯಂತರಕ್ಕೆ ಬಲಿಯಾಗಿದ್ದೆ…! ಬೆಂಗಳೂರಿಗೆ ಬಂದ ನಂತರ ನನ್ನ ಹಿತೈಷಿಯೊಬ್ಬರು ನನಗೆ ಫೋನು ಮಾಡಿ,

“ನೀವು ಬೆಂಗಳೂರಿಗೆ ಹೋಗಿದ್ದೇ ಒಳ್ಳೆಯದಾಯಿತು. ಅದಕ್ಕೇ ಹೇಳೋದು. ಆಗೋದೆಲ್ಲಾ ಒಳ್ಳೆಯದಕ್ಕೇ ಎಂದು ನೀವೇನಾದರೂ ನರ್ಸಿಂಗ್ ಹೋಮನಲ್ಲೇ ಕೆಲಸ ಮುಂದುವರೆಸಿದ್ದರೆ. ನಿಮ್ಮನ್ನು ದರೋಡೆ ಪ್ರಕರಣವೆಂಬಂತೆ ದರೋಡೆಯಲ್ಲಿ ನಿಮ್ಮನ್ನು ಕೊಲ್ಲುವ ಸಂಚೂ ನಡೆದಿತ್ತು. ಹುಷಾರಾಗಿರಿ… ನಿಮ್ಮಂತಹ ಒಳ್ಳೆಯ ವೈದ್ಯೆಯನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲಿನವರಿಗಿಲ್ಲ. ಅವರುಗಳು ಯಾರೆಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ” ಹೇಳಿದ್ದರು.

ನಾನು ಹಿಮದಲ್ಲಿ ತೋಯ್ದವಳಂತೆ ಕುಳಿತುಬಿಟ್ಟಿದ್ದೆ…! ನೀನೇ ಹೇಳು ಚಿನ್ನು… ಪ್ರಾಮಾಣಿಕತೆಗೆ ಕಟ್ಟುವ ಬೆಲೆ ಇದೇನಾ? ಕಡಿಮೆ ಅವಧಿಯಲ್ಲಿ ಒಳ್ಳೆಯ ವೈದ್ಯೆಯೆಂದು, ಜನಪ್ರಿಯತೆ ಪಡೆದದ್ದು ನನ್ನ ತಪ್ಪಾಗಿತ್ತಾ? ಜನಪ್ರಿಯತೆ. ಅಷ್ಟು ನಂಜಾ? ಊಹೂಂ… ಸಣ್ಣ ಊರುಗಳಲ್ಲಿ ಸೇವಾ ಮನೋಭಾವದಿಂದ ಯಾರೇ ಆಗಲೀ, ಯಾವುದೇ ಕೆಲಸವನ್ನಾಗಲೀ ಸಮಾಜದ ಪರವಾಗಿ ಒಳ್ಳೆಯದನ್ನು ಮಾಡಲು ಹೊರಟರೆ ಹೀಗೆಯೇ ಆಗುತ್ತದೆ. ನಾನದಕ್ಕೆ ಹೊರತಾಗಿರಲಿಲ್ಲ. ಅಂದಿನಿಂದ ‘ಜನಪ್ರಿಯತೆ’ಯೆಂದರೆ ನನಗೆ ಮೈ ನಡುಕವುಂಟಾಗುತ್ತದೆ. ಭಯದಿಂದಲ್ಲ. ಅಸಹ್ಯದಿಂದ… ಇನ್ನು ಬೆಂಗಳೂರಿನಲ್ಲಿ ಏನಾಗುತ್ತದೋ? ಯಾವ ಕಷ್ಟ, ದುರಂತಗಳು ಎದುರಾಗುತ್ತವೋ? ಯೋಚಿಸುತ್ತಾ ರಾತ್ರಿಯೆಲ್ಲಾ ಕುಳಿತಿದ್ದೆ.
* * *

ಅಂತೂ ಇಂತೂ ಮಹಾನಗರಕ್ಕೆ ವಿಧಿ ನನ್ನನ್ನು ಕರೆದು ತಂದುಬಿಟ್ಟಿತ್ತು. ಇಲ್ಲಾದರೂ ಬದುಕಿನ ಬವಣೆ ಇಲ್ಲವಾಗುವುದೇ? ಇಲ್ಲಾ ಇನ್ನೂ ಹೆಚ್ಚಾಗಬಹುದೇ? ಹೀಗೆಲ್ಲಾ ಯೋಚಿಸುತ್ತಿದ್ದೆ ಅಂದೊಂಡಿದ್ದೆಯಾ? ಊಹೂಂ… ಇಲ್ಲಾ ಕಣೆ. ಭಂಡ ಜನ್ಮ ನನ್ನದು. ಬದುಕನ್ನಂತೂ ಯಾವ ರೀತಿಯೂ ನಾನು ಬರೆದುಕೊಳ್ಳಲಾರೆ ಬರೆದದ್ದನ್ನು ಧೈರ್ಯವಾಗಿ ಎದುರಿಸುವ ಕೆಟ್ಟ ಭಂಡಧೈರ್ಯ ನನ್ನದು. ನಾನು ಇರುವುದೇ ಹಾಗೇನಾ ಅಥವಾ ಇಷ್ಟರತನಕ ಕೆಟ್ಟ ಅನುಭವಗಳನ್ನು ಅನುಭವಿಸಿದ ನನ್ನನ್ನು ಹಾಗೆ ಮಾಡಿದೆಯೇ ನನಗಿನ್ನು ಅರ್ಥವಾಗುತ್ತಿಲ್ಲ.

ಬೌರಿಂಗ್ ಆಸ್ಪತ್ರೆಯಂತಹ ಆಸ್ಪತ್ರೆ ಡ್ಯೂಟಿಗೆ ಹಾಜರಾದ ನನಗೆ ಒಂಥರಾ ಉದ್ವೇಗ! ಅಲ್ಲಿ ೨೦ ಜನರ ಮೇಲ್ಪಟ್ಟು ನಮ್ಮ ವಿಭಾಗ ಅಂದರೆ ಸ್ತ್ರೀರೋಗ ತಪಾಸಣಾ ವಿಭಾಗದಲ್ಲಿ ಮಹಿಳಾ ವೈದ್ಯರಿದ್ದರು. ಜೊತೆಗೆ ಹತ್ತಾರು ಸ್ನಾತಕೋತ್ತರ ಪದವಿಗಾಗಿ ಬಂದವರು ಮತ್ತು ಹತ್ತಾರು ಹೌಸ್‌ಸರ್ಜನ್ನಿಗಾಗಿ ಅಂದರೆ ಜ್ಯೂನಿಯರು ವೈದರಿದ್ದರು. ಹೀಗಾಗಿ ಅಲ್ಲಿ ಕೆಲಸ ಹಂಚಿ ಹೋಗುತ್ತಿತ್ತು. ಕಣ್ಣಿಗೆ ಎಣ್ಣೆ ಹಾಕಿಕೊಂಡು ದುಡಿದು ಬಂದಿದ್ದ ನನಗೆ ಇಲ್ಲಿ ಹೆಚ್ಚಿನ ಕೆಲಸವೇ ಇರಲಿಲ್ಲ. ವಾರಕ್ಕೊಂದು ಬಾರಿ ಸರತಿಯಂತೆ ಬರುತ್ತಿದ್ದ ಇಪ್ಪತ್ತು ನಾಲ್ಕು ಗಂಟೆಗಳ ಕಾಲದ ಡ್ಯೂಟಿ ದಿನ ಬಿಟ್ಟರೆ ಕೆಲಸವೇ ಹೆಚ್ಚಿರುತ್ತಿರಲಿಲ್ಲ. ನನಗೆ ಕೆಲಸ ಮಾಡಿದ ಆಯಾಸವೇ ಇರುತ್ತಿರಲಿಲ್ಲ. ಈ ಸಮಯದಲ್ಲಿಯೇ ನಾನು ನಮ್ಮ Departmental Exams ಬರೆದೆ. ಪಾಸಾಯಿತು ಅಂದುಕೊಂಡರೆ ಮತ್ತೊಂದು ಸಂಕಷ್ಟ ಎದುರಾಗಿತ್ತು. ನನಗೆ ಸಂಬಳ ಬಾರದೆ ಆರು ತಿಂಗಳುಗಳಾಗಿದ್ದವು. ಅದಕ್ಕೆ ನಾನು ಕನ್ನಡ ಪರೀಕ್ಷೆ ಬರೆಯಬೇಕಿತ್ತು. ಯಾಕೆಂದರೆ ನಾನು ಹೈಸ್ಕೂಲು ಓದುವಾಗ ಇಂಗ್ಲೀಷ್ ತೆಗೆದುಕೊಂಡು ಎಸ್.ಎಸ್.ಎಲ್.ಸಿ. ಪಾಸಾಗಿದ್ದುದರಿಂದ ನನ್ನ Second Language ಸಂಸ್ಕೃತವಾಗಿತ್ತು. ನಾನು ಕತೆ- ಕಾದಂಬರಿ ಬರೆಯುತ್ತೇನೆ ಎಂದು ಸಾಕ್ಷಿ ತೋರಿಸಿದರೂ ಆರೋಗ್ಯ ಇಲಾಖೆಯ ನಿರ್ದೇಶಕರು ಒಪ್ಪಿರಲಿಲ್ಲ. ಹೀಗಾಗಿ ಕನ್ನಡ ಪ್ರೈಮರಿ ಪರೀಕ್ಷೆಯನ್ನು ಬರೆಯಬೇಕಿತ್ತು. ಹಾಗೆ ಮಾಡಿದ್ದರೆ ನಾನು ಫೇಲಾಗಿಬಿಡಬಹುದೆಂಬ ಆತಂಕ ಜೊತೆಗೆ ‘ಅಹಂ’ ಬೇರೆ. ಮಾನಸ ಗಂಗೋತ್ರಿ ಮೈಸೂರಿನಲ್ಲಿರುವ ದೂರ ಸಂಪರ್ಕ ಶಿಕ್ಷಣದ ಕಾಲೇಜಿಗೆ ಅರ್ಜಿ ಹಾಕಿದೆ. ಎರಡು ವರ್ಷಗಳಲ್ಲಿ ನನಗೆ ಕನ್ನಡ ಎಂ.ಎ. ಪದವಿ ಸಿಕ್ಕಿತ್ತು. ಅಷ್ಟರಲ್ಲಿ ಸಂಬಳವೂ ಬರುತ್ತಿತ್ತು. Interimenty Promotion ಈ ನನ್ನ ಎಂ.ಎ. ಡಿಗ್ರಿ ಅನುಕೂಲವಾಗಿತ್ತು. ಓದಿನಲ್ಲಿ ಆಸಕ್ತಿಯೂ ಹೆಚ್ಚಾಗಿತ್ತು, ಸಮಯವೂ ನನ್ನಲ್ಲಿತ್ತು. ಹಾಗಾದುದರಿಂದ ಇಂಗ್ಲೀಷ್‌ನಲ್ಲಿ ಡಿಪ್ಲೋಮಾ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ ಡಿಗ್ರಿಗಳಲ್ಲಿ ಓದಿದೆ. ಪಾಸೂ ಆದೆ. ಸುಮ್ಮನೇ ಓದಿ ತೆಗೆದು ಇಡುತ್ತಿದ್ದ ಕಾದಂಬರಿಗಳನ್ನು ಓದಲು ಒಂದು ಚೌಕಟ್ಟಿರಬೇಕೆಂದು ಈ ಡಿಗ್ರಿಗಳು ನನಗೆ ಸ್ಪಷ್ಟಪಡಿಸಿದ್ದವು. ನನಗೆ ಬರೆಯಲು ಅನುಕೂಲವಾಗಿತ್ತು. ಓದಲೂ ಆಸಕ್ತಿ ಮೂಡಿಸಿತ್ತು. ಅಂದರೆ ನಾನು ಖ್ಯಾತ ಸಾಹಿತಿಯಲ್ಲ. ನಾನು ಕಂಡ, ನನ್ನ ಸ್ವಂತ ಅನುಭವಗಳಿಗೆ ರಂಗು ತುಂಬಿ, ನನ್ನದೇ ಆದ ಸರಳ ಶೈಲಿಯನ್ನು ರೂಢಿಸಿಕೊಂಡಿದ್ದೆ. ಅದರಿಂದ ನಾನು ಮಹತ್ವವಾದುದೇನನ್ನು ನಿರೀಕ್ಷಿಸಿರಲಿಲ್ಲ. ನಾನೊಬ್ಬ ಲೇಖಕಿಯಾಗಿದ್ದೆ ಊಹೂಂ… ಆಗತೊಡಗಿದ್ದೆ.

ನನಗಿಲ್ಲಿ ಅನೇಕ ಪತ್ರಕರ್ತ ಮಿತ್ರರು ಅಂದರೆ ಒಳ್ಳೆಯ ಗೆಳೆಯ ಗೆಳತಿಯರು ಸಿಕ್ಕಿದ್ದರು. ಅಂದಿನ ದಿನಗಳೇ ಬೇರೆ ಚಿನ್ನೂ… ಅಲ್ಲಿ ಸ್ನೇಹ, ಪ್ರೇಮ, ಪ್ರಾಮಾಣಿಕತೆ, ನಿಷ್ಠೆಯ ಸಂಬಂಧಗಳು ಎಲ್ಲವೂ ಸುಂದರವಾಗಿದ್ದವು, ಸಹಜವಾಗಿದ್ದವು. ‘ಅಹಂ…’ ಯಾರಿಗೂ ಇರಲಿಲ್ಲ. ಎಲ್ಲವೂ ತೆರೆದ ಪುಸ್ತಕಗಳಂತೆ. ಕಷ್ಟ-ಸುಖ ನೋವು- ನಲಿವುಗಳನ್ನು ಹಂಚಿಕೊಳ್ಳುವಂತಹ ಸ್ನೇಹ ಸೇತು. ‘ಸುಧಾ’ದಲ್ಲಿದ್ದ ಶ್ರೀ ಎಂ.ಬಿ. ಸಿಂಗ್ ಮಯೂರ ಮಾಸ ಪತ್ರಿಕೆಯಲ್ಲಿದ್ದ ಸದಾಶಿವ, ಶರತ್ ಕಲ್ನೋಡ್, ವಿಜಯಶ್ರೀ, ಮಂಗಳಾ… ತರಂಗದ ಸಂಪಾದಕರಾಗಿದ್ದ ಶ್ರೀ ಚಿರಂಜೀವಿಯವರು ಗಳನ್ನು ಈಗಲೂ ನೆನೆಸಿಕೊಳ್ಳುತ್ತೇನೆ. ಅದೆಷ್ಟು ಪ್ರೋತ್ಸಾಹ ನೀಡುತ್ತಿದ್ದರು! ಅಂಕಣ, ಕತೆಗಳು, ನೀಳ್ಗತೆಗಳು, ವೈದ್ಯಕೀಯ ಲೇಖನಗಳು ಹೀಗೆ ಬರೆಯುತ್ತಾ ಹೋಗಿದ್ದೆ. ನನ್ನ ಪುಸ್ತಕಗಳನ್ನು ಪ್ರಕಟಿಸಲು ಮುಂದಾದ ನವಕರ್ನಾಟಕ, ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು, ದಿವ್ಯಚಂದ್ರ, ಸ್ವಪ್ನ ಪುಸ್ತಕದ ಮಾಲೀಕರನ್ನು ಮರೆಯಲಾದೀತೆ?

ಹಾಗೆಯೇ ನನ್ನ ವೈದ್ಯಕೀಯ ವೃತ್ತಿಯಲ್ಲೂ ಅಷ್ಟೇ ಹೊಸತನ್ನು, ಶಸ್ತ್ರಕ್ರಿಯೆಗಳನ್ನು ಕಲಿಯತೊಡಗಿದ್ದೆ. ಬೆಂಗಳೂರು ನನಗೆ ಬಯಸಿದ್ದನ್ನು ನೀಡತೊಡಗಿತ್ತು. ಹತ್ತು ತಿಂಗಳ ಸಂಬಳವನ್ನು ಒಮ್ಮೆಲೇ ಕೊಟ್ಟಿದ್ದರು. ಆಗ ನನಗೆ ಮಾಡಲು ನೆನಪಾಗಿದ್ದು ನನ್ನ ಅವ್ವ ಹಣ ತೆಗೆದುಕೊಂಡು ಅವ್ವನ ಬಳಿಗೆ ಧಾವಿಸಿದ್ದೆ. ರಾತ್ರಿ ಹನ್ನೆರಡು ಗಂಟೆಯಾಗಿತ್ತು ನಾನು ಮನೆಯ ಬಳಿಗೆ ಬಂದಾಗ, ಅವ್ವನ ರೂಮಿನ ಕಿಟಕಿಯ ಬಳಿ ಬಂದು ಮೆಲುವಾಗಿ ‘ಅವ್ವಾ…’ ಎಂದು ಕರೆದಿದ್ದೆ, ಅವ್ವ ಧಡಕ್ಕನೆ ಎದ್ದು ಬಂದು ಬಾಗಿಲು ತೆರೆದಿದ್ದಳು. ಲೈಟ್ ಹಾಕಿರಲಿಲ್ಲ. ನಾನು ಹೊರಗೇ ನಿಂತಿದ್ದೆ. ಅವ್ವನ ಮುಖ ನಿಲುವು ಬೀದಿ ದೀಪದ ಬೆಳಕಿನಲ್ಲಿ ಕಾಣಿಸಿತ್ತು. ಭಾವುಕಳಾಗಿಬಿಟ್ಟಿದ್ದೆ ಕಣೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…