ಒಂದು ದಿನ ಇದ್ದಕ್ಕಿದ್ದ ಹಾಗೆ ನಮ್ಮ ಆಸ್ಪತ್ರೆಯ ಮುಖ್ಯಾಧಿಕಾರಿಗಳು ನನ್ನನ್ನು ತಮ್ಮ ರೂಮಿಗೆ ಕರೆಯಿಸಿಕೊಂಡರು. ನನ್ನ ಕೈಗೊಂದು ಆರ್ಡರ್ ಕಾಪಿಯೊಂದನ್ನು ಕೊಟ್ಟು,

“ನಿಮಗೀಗ ವರ್ಗವಾಗಿದೆ. ಇಂದೆಯೇ ನಿಮ್ಮನ್ನು ಈ ಆಸ್ಪತ್ರೆಯ ಕೆಲಸಗಳಿಂದ ಬಿಡುಗಡೆ ಮಾಡಬೇಕು ಎಂದು ನನಗೆ ಆರ್ಡರ್ ಬಂದಿದೆ. ಈ ವರ್ಗಾವಣೆಯ ಪತ್ರವನ್ನು ತೆಗೆದುಕೊಳ್ಳಿ. ಈ ಫಾರಂಗಳಿಗೆ ಸಹಿ ಮಾಡಿಕೊಡಿ…” ಎಂದಿದ್ದರು.

ನನಗೆ ಆಘಾತವಾಗಿತ್ತು…!

“ನಾನಿನ್ನು ಊರಿಗೆ ಬಂದು ಮೂರು ವರ್ಷಗಳೂ ಆಗಿಲ್ಲ. ಅದೂ ಅಲ್ಲದೆ, ನನ್ನ `Probationary Period’ ಕೂಡಾ ಮುಗಿದಿಲ್ಲ. ಹೇಗೆ ವರ್ಗಾವಣೆ ಸಾಧ್ಯ” ಎಂದು ಕೆಳಿದ್ದಕ್ಕೆ.

“ನೋಡಮ್ಮ… ನನಗ್ಯಾವುದೂ ಗೊತ್ತಿಲ್ಲ. ಈ ಊರಿನ… ಎಂ.ಎಲ್.ಎ. ಯೊಬ್ಬರ ಆದೇಶದಂತೆ, ಕೋರಿಕೆಯಂತೆ ವರ್ಗಾವಣೆಯಾಗಿದೆಯೆಂದು ತಿಳಿಯಿತು. ಯಾರೂ ಏನೂ ಮಾಡಲು ಈಗ ಸಾಧ್ಯವಿಲ್ಲ. ನೀವು ಈ ಊರನ್ನು ಬಿಡಬೇಕಾಗಿದೆ…”-ಎಂದು ಅಸಾಹಯಕತೆಯಿಂದ ಕೈಚೆಲ್ಲಿದ್ದರು.

“ಅಂತೂ… ಈ ಊರಿನಿಂದ ನನ್ನನ್ನು ಓಡಿಸುವ ನಿಮ್ಮಗಳ ತಂತ್ರ ಯಶಸ್ವಿಯಾಯಿತು ಅನ್ನಿ…” – ನುಗ್ಗಿ ಬರುತ್ತಿದ್ದ ಕೋಪವನ್ನು ತಡೆದು ಹಿಡಿಯುತ್ತಾ ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಾ ಕೇಳಿದ್ದೆ.

“ಇದರಲ್ಲಿ ನನ್ನ ಕೈವಾಡ ಏನೂ ಇಲ್ಲ. ನಾನೂ ಕೂಡಾ ನಿಮ್ಮ ಹಾಗೆ ಬೇರೆ ಊರಿನವನು. ವರ್ಗವಾದರೆ ನಾನೂ ಸಹಾ ಹೋಗಬೇಕಾಗುತ್ತದೆ…” ಎಂದಿದ್ದರು.

“ನನ್ನನ್ನು ಈ ಆಸ್ಪತ್ರೆಯಿಂದ ವರ್ಗಾವಣೆ ಮಾಡಿದ್ದಾರೆ. ಆದರೆ ಈ ಊರಿನಿಂದ ಅಲ್ಲಾ ತಾನೆ? ಊರು ಯಾರ ಅಪ್ಪನ ಸ್ವತ್ತೂ ಅಲ್ಲ… ಅಲ್ಲವಾ…?” ನನ್ನ ಕೋಪ, ಆಕ್ರೋಶದ ಕಟ್ಟೆಯೊಡೆದಿತ್ತು, ರೊಚ್ಚಿನಿಂದ ಹೇಳಿದ್ದೆ.

“ಅದೆಲ್ಲಾ ನಂಗೊತ್ತಿಲ್ಲ. ನಾನು ಹೇಳಿದಷ್ಟು ನೀವು ಮಾಡಿ. ಆ ಮೇಲೆ ನನ್ನ ಮೇಲೆ ಆಪಾದನೆ ಬರುವಂತೆ ದಯವಿಟ್ಟು ಮಾಡ್ಬೇಡಿ…” ಎಂದಿದ್ದ ಅವರ ಮುಖದಲ್ಲಿ ಯಾವುದೋ ಆತಂಕ, ಭಯವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಅದೊಂದು ‘ಪುಕ್ಕಲು ಪ್ರಾಣಿ’ಯೆಂದು ತಿಳಿದಿದ್ದ, ನಾನು.

“ಇದೇ ಊರಿನಲ್ಲಿದ್ದು ನನ್ನದೇ ಆಸ್ಪತ್ರೆ ಪ್ರಾರಂಭಿಸಿ ಇಲ್ಲೇ ಇರುತ್ತೇನೆ. ನೋಡ್ತಾಯಿರಿ. “ಆಗ ನನ್ನ ತಂಟೆಗೆ ಯಾರು ಬಾರ್ತಾರೇಂತ ನಾನೂ ನೋಡ್ತೀನಿ…” ಎಂದು ಕೆಚ್ಚು ರೊಚ್ಚಿನಿಂದ ಹೇಳಿ, ವರ್ಗಾವಣೆಯ ಆದೇಶದ ಆ ಪತ್ರವನ್ನು ಅವರ ಕೈಯಿಂದ ಕಿತ್ತುಕೊಂಡು ಕೆರಳಿದ ಸಿಂಹಿಣಿಯಂತೆ ಹೊರಗೆ ಬಂದಿದ್ದೆ.

ಅದು ಹೇಗೆ ನನ್ನ ಮನೆ ತಲುಪಿದೆನೋ ಗೊತ್ತಿಲ್ಲ. ರೂಮಿನೊಳಗೆ ಬಂದವಳೇ ಜಗ್ ಪೂರ್ತಿ ನೀರನ್ನು ಗಟಗಟನೆ ಕುಡಿದೆ… ಏದುಸಿರು ಕಡಿಮೆಯಾಗಲೆಂದು, ಬಾಯಿಯೂ ಒಣಗಿತ್ತು. ನಂತರ ದೊಪ್ಪನೆ ಕುಸಿದು ಕುಳಿತಿದ್ದೆ.

ಏನಾಗಿ ಹೋಯಿತು? ಈ ಊರಿನವರಿಗೆ ನಾನು ಅಷ್ಟು ಬೇಡವಾಗಿದ್ದೆನೆ? ನನ್ನ ವೃತ್ತಿಯ ಕೆಲಸಗಳಲ್ಲಿ ಅವರಿಗಳಿಗೇನಾದರೂ ಅತೃಪ್ತಿಯಿತ್ತೆ? ಊಹೂಂ… ಹಾಗೆನ್ನಿಸಿರಲಿಲ್ಲ. ಒಂದು ಗುಂಪಿನ ಒಡೆಯನ ‘ಕುಕೃತ್ಯವಿದ್ದಿರಬೇಕು…’ ನಾನು ಅವನನ್ನು ನಿರ್ಲಕ್ಷ್ಯ ಮಾಡಿದ್ದು ತಪ್ಪಾಗಿತ್ತೆ? ನಾನೂ ಅವರಂತೆಯೇ ಅಸಹಾಯಕ ರೋಗಿಗಳ ಬಳಿ ಹಣ ಲೂಟಿ ಮಾಡಬೇಕಿತ್ತೆ? ಅವರ ಸ್ನೇಹ ಕಡಿಮೆ ಮಾಡಿಕೊಂಡಿದ್ದಕ್ಕೇನಾ? ಹಾಗಾಗಿದ್ದರೆ ನಾನು ಪಶ್ಚಾತ್ತಾಪ ಪಡುವ ಅಗತ್ಯವಿರಲಿಲ್ಲ. ಅಂತಹ ಭ್ರಷ್ಟಾಚಾರಿಗಳ ಸ್ನೇಹವಿರಲಿ, ಒಡನಾಟವಿರಲಿ ನನಗೆ ಬೇಕಾಗಿರಲಿಲ್ಲ ವೆಂದೆನ್ನಿಸಿತ್ತು. ಆ ಊರಿನ ಎಂ.ಎಲ್.ಎ. ಸಹಾಯದಿಂದ ಇನ್ನೂ ಅವಧಿ ಮುಗಿಯದ ನನ್ನನ್ನು ಎತ್ತಂಗಡಿ ಮಾಡಲಾಗಿತ್ತು. ಇದು ನ್ಯಾಯವಾ? ಅನ್ಯಾಯವಾ? ಎಂದು ಯಾರಿಗೂ ಕೇಳುವ ಹಾಗಿರಲಿಲ್ಲ. ಎಲ್ಲಿ ಜನರು ಹೋಗಿ ನನ್ನ ವರ್ಗಾವಣೆಯನ್ನು ರದ್ದುಪಡಿಸಬಹುದೆಂಬ ಆತಂಕದಿಂದ ಅಂದೇ ಬಿಡುಗಡೆ ಮಾಡಿದ್ದರು. ಎಷ್ಟು ಅಸಹ್ಯ!

ರೊಚ್ಚಿಗೆದ್ದು ಏನೇನೋ ಹೇಳಿ ಬಂದಿದ್ದೆ. ಈ ಊರೇನು ‘ನಿಮ್ಮಪ್ಪನ ಸ್ವತ್ತಲ್ಲಾಂತ’ ಖಡಕ್ಕಾಗಿ ಹೇಳಿದ್ದೆ. ಮುಂದೇನು? ಯಾವ ಮುಖ ಹೊತ್ತು ಊರಿಗೆ ಹೋಗಲಿ? ಅವ್ವನನ್ನು ಹೇಗೆ ಎದುರಿಸಲಿ? “ಮನೆಗೇ ಬರ್ಬೇಡಾ. ನೀನು ನನ್ನ ಪಾಲಿಗೆ ಸತ್ತಂತೆ…” ಎಂದಿದ್ದ ಅವ್ವ ಹಾಗೆಯೇ ನಡೆದುಕೊಂಡಿದ್ದಳು. ಮುಖಕೊಟ್ಟು ಮಾತನಾಡುತ್ತಿರಲಿಲ್ಲ. ಅಂತಹ ಹಠಮಾರಿ ಹೆಣ್ಣು! ಯಾರಿಗೆ ಹೇಳಲಿ? ಬಹಳ ಹೊತ್ತು ಯೋಚಿಸುತ್ತಾ ಕುಳಿತಿದ್ದೆ. ಏನು ಮಾಡಲಿ? ಯಾರ ಸಹಾಯ ಸಲಹೆ ಕೇಳಲಿ?

ತಟ್ಟನೆ ನೆನಪಾದದ್ದು ಬುದ್ದಿಜೀವಿ ಗೆಳೆಯರ ಗುಂಪು, ಸ್ವಲ್ಪ ಸಮಾಧಾನವಾದಂತಾಯಿತು. ಮರುದಿನವೇ ಹೋಗಿ ಅವರನ್ನು ಭೇಟಿಯಾದೆ. ಕ್ಯಾಂಟೀನ್‌ಲ್ಲಿ ಕಾಫಿ ಕುಡಿಯುತ್ತಾ ಆಲಿಸಿದ ಅವರು,

“ಬೇರೆಲ್ಲಿಗೆ ಹೋಗ್ತಿರಿ ಡಾಕ್ಟ್ರೇ? ಅಲ್ಲಿಯೂ ಇಂತಹವರು ಇರೋದಿಲ್ಲ ಅಂತ ಏನು ಗ್ಯಾರಂಟಿ. ಲೇಡಿ ಡಾಕ್ಟ್ರುಗಳು ಬಂದ್ರೆ ಇಂತಹ ಸಣ್ಣ ಊರುಗಳಲ್ಲಿ ಅನುಕೂಲಕ್ಕಿಂತ ಇಂತಹ ತೊಂದರೆಗಳೇ ಜಾಸ್ತಿ. ಹೇಗೂ ಈ ಊರು ನಿಮಗೆ ಪರಿಚಿತವಾಗಿದೆ. ಜನರಿಗೂ ನಿಮ್ಮ ಮೇಲೆ ಪ್ರೀತಿ ನಂಬಿಕೆಯಿದೆ. ನಿಮ್ಮ ಊರಿಗೂ ಹತ್ತಿರವೂ ಇದೆ. ನಿಮ್ಮದೇ ಒಂದು ಆಸ್ಪತ್ರೆ ತೆರೆದುಬಿಡಿ. ಊರೂರು ಅಲೆಯುವ ಕಾಟ ತಪ್ಪುತ್ತದೆ” ಎಂದು ಸಲಹೆ ನೀಡಿದ್ದರು.

ಕೆಟ್ಟ ಸಲಹೆ ಏನಾಗಿರಲಿಲ್ಲ. ಆದರೆ ಅಷ್ಟು ಹಣ ಎಲ್ಲಿದೆ. ಎಲ್ಲಿಂದ ತರಲಿ? ಹೇಗೆ ಆರಂಭಿಸಲಿ? ಮನೆಯಿಂದಂತೂ ಸಾಧ್ಯವೇ ಇರಲಿಲ್ಲ. ನಾನೇ ಪ್ರತಿ ತಿಂಗಳು ನನ್ನ ಖರ್ಚಿಗಿಷ್ಟು ಅಂತ ಇಟ್ಟುಕೊಂಡು ಉಳಿದ ಹಣವನ್ನು ಅವ್ವನಿಗೆ ಕೊಟ್ಟು ಬರಬೇಕಾಗಿತ್ತು. ನಾನು ಯೋಚಿಸುತ್ತಾ ಕುಳಿತದ್ದನ್ನು ಕಂಡ ಅವರು,

“ನಿಮಗೇನು ಬೇಕೋ ಅದರ ಲಿಸ್ಟ್ ಕೊಡಿ. ನಾವು ಹೊಂದಿಸಿಕೊಡುತ್ತೀವಿ. ನಂತರ ಸಾಲದ ರೂಪದಲ್ಲಿ ನೀವು ತೀರಿಸಬಹುದು…” ಎಂದು ಸಲಹೆ ಕೊಟ್ಟರು. ನಾನು ಅನುಮಾನದಿಂದ ಅವರತ್ತ ನೋಡಿದ್ದೆ.

“ನಿಮಗೇ ನಿಮ್ಮ ಬೆಲೆ ಗೊತ್ತಿಲ್ಲ. ನೀವು ‘ಹೂಂ…’ ಅನ್ನಿ. ನಿರ್ಧಾರ ತೆಗೆದುಕೊಳ್ಳಿ. ಮುಂದಿನದನ್ನು ನಮಗೆ ಬಿಡಿ…” ಎಂದಿದ್ದರು. ಅವರಿಗದು ಅರ್ಥವಾಗಿರಬೇಕು.

“ನಾವ್ಯಾರೂ ಸಾಲ ಕೊಡೋಲ್ಲಾ… ಉಪಕರಣಗಳು ಏನೇನೋ ಬೇಕೋ ಬರೆದುಕೊಡಿ. ಸಾಕು… ನೀವೇ ಮುಂದಿನ ದಿನಗಳಲ್ಲಿ ಹಣ ಕೊಟ್ಟುಬಿಡಿ…” ಎಂದಿದ್ದರು.
*****
ಮುಂದುವರೆಯುವುದು