ಕಾಡುತಾವ ನೆನಪುಗಳು – ೧೪

ಕಾಡುತಾವ ನೆನಪುಗಳು – ೧೪

“ನೀವೇನೂ ಹೆದರೋದು ಬೇಡಾ. Stomach Wash ಕೊಟ್ಟಿದ್ದೇವೆ. ಎಲ್ಲಾ ಮಾತ್ರೆಗಳು ಹೊರಬಂದಿವೆ…”

“ನಮ್ಮ ಹುಡುಗ ಆಗ ಹೋಗಿರದಿದ್ದರೆ ಅಪಾಯವಾಗುತ್ತಿತ್ತು”.

“ಮುಂದಿನ ವಾರ Tubetemy Camp ಇತ್ತು. ಅದಕ್ಕೆ ಇವರ ಸಹಿ ಮಾಡಿಸಿಕೊಳ್ಳಲು ಹೋಗಿದ್ದ. ಹೀಗಾಗಿ ಈ ವಿಷಯ ತಿಳಿದಿತ್ತು. ಡ್ರಿಪ್ಸ್ ಮುಗಿದ ನಂತರ ಮನೆಗೆ ಕರೆದುಕೊಂಡು ಹೋಗಿ… ಒಂದೆರಡು ದಿನ ವಿಶ್ರಾಂತಿ ತೆಗೆದುಕೊಂಡರೆ ಸಾಕು…”

ಎನ್ನುತ್ತಾ ಹಣೆಯನ್ನು ತಟ್ಟಿ ನನ್ನನ್ನು ಮಾತನಾಡಿಸುವ ಪ್ರಯತ್ನ ನಡೆಸಿದ್ದರು. ನಾನು “ಆಂ…? ಹೂಂ…” ಎಂದು ಪ್ರತಿಕ್ರಿಯೆ ನೀಡುತ್ತಿದ್ದೆ. ನಂತರ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಮನೆ ತಲುಪಿಸಿದ್ದರು. ನಾನು ಸತ್ತಿರಲಿಲ್ಲವೆಂಬುದು ತಿಳಿದಿತ್ತು…!

ಅವ್ವನಿಗೆ ಹೇಳಿ ಕಳುಹಿಸಿದ್ದರೂಂತ ಕಾಣುತ್ತೆ. ಅವ್ವ ನನ್ನ ಆರೈಕೆಗೆ ಪಕ್ಕದಲ್ಲಿಯೇ ಇದ್ದಳು. ಅರ್ಧ ನಿದ್ದೆ ಅರ್ಧಮಂಪರು. ಗಂಜಿ ಕುಡಿಸುತ್ತಿದ್ದಳು, ಎಳೆನೀರು ಕುಡಿಸುತ್ತಿದ್ದಳು. ನನಗೆ ಪೂರ್ತಿ ಎಚ್ಚರವಾಗಿದ್ದು ರಾತ್ರಿಯೇ. ಅವ್ವ ಗಂಭೀರವಾಗಿ ನನ್ನ ಪಕ್ಕದಲ್ಲಿ ಕುಳಿತಿದ್ದಳು. ಊರಿಗೆ ಕರೆದುಕೊಂಡು ಹೋಗಿರಲಿಲ್ಲ. ಮರುದಿನ ಬೆಳಿಗ್ಗೆ ಸಂಪೂರ್ಣವಾಗಿ ಎಚ್ಚರವಾಗಿತ್ತು.

“ಯಾಕೆ ಹೀಗ್ ಮಾಡ್ಕೊಂಡೆ?” ಅವ್ವನ ಗಂಭೀರ ಪ್ರಶ್ನೆ.

“…..”

“ನಂಗೆ ನಿನ್ನಾಟ ಅರ್ಥವಾಗ್ತಿದೆ”.

“ಯಾರವನು? ಎರಡು ತಿಂಗಳಿಂದ ಓಡಾಟ, ಚೆಲ್ಲಾಟ ನಡೆಸಿದ್ದು ನನಗೆ ತಿಳಿದಿದೆ…”

“…..”

“ಹೀಗೆ ಮಾಡೋ ಬದ್ಲು ಮದ್ದೇನೇ ಮಾಡೋಬಹುದಿತ್ತು…

“…..”

“ನಿನ್ನನ್ನು ಗಂಡು ಹುಡುಗಾಂತ ಅಂದ್ಕೊಂಡ್ ತಪ್ಪು ಮಾಡಿಬಿಟ್ಟೆ, ಎಲ್ಲಾ ನನ್ನ ಕರ್ಮ. ಆಡ್ಕೊಳ್ಳರ ಮುಂದೆ ಹಡೆದ ಹಾಗಾಗಿದೆ ನಮ್ಮ ಪರಿಸ್ಥಿತಿ…”

ನನ್ನ ಕಣ್ಣುಗಳಿಂದ ನೀರು ಹರಿಯತೊಡಗಿತ್ತು.

“ಈ ಸ್ಥಿತೀನಾ ಮನೆ ಮಕ್ಕಳು ನೋಡ್ತಾರ್ದೂಂತ ಇಲ್ಲಿಗೇ ಕಕ್ಕೊಂಡು ಬಂದೆ. ನನ್ನ ಕನಸುಗಳನ್ನು ನೀರಿನಲ್ಲಿ ಕದಡಿ ರಾಡಿ ಮಾಡ್ಬಿಟ್ಟೆ. ನೀನಿದ್ದರೂ ಒಂದೇ ಸತ್ತರೂ ಒಂದೇ…” ಅವ್ವನ ಕಂಠ ಗದ್ಗದವಾಗಿತ್ತೆನಿಸಿತ್ತು. ಅವ್ವನತ್ತ ನೋಡಿದ್ದೆ.

“ನೀನು ಈಗ ಸತ್ತು ಹೋಗದೇ ಇರಬಹುದು. ನನ್ನ ಪಾಲಿಗೆ ಇವತ್ತಿನಿಂದ ನೀನು ಸತ್ತು ಹೋದೇಂತಾ ಅಂದ್ಕೋ…”

ಅಲ್ಲಿಗೆ ನನ್ನ ತವರು ಮನೆಯ, ಅವ್ವನ ಸಂಬಂಧ ಕಡಿದ ಹಾಗೇ ಆಗಿತ್ತು. ಅವ್ವ ಹಠಮಾರಿ ಹೆಣ್ಣಾಗಿದ್ದಳು. ಆಕೆಗೆ ‘Will Power’ ಜಾಸ್ತಿಯಿತ್ತು. ಆದರೆ Reasoning ಅಂದರೆ ‘ಅರ್ಥೈಸಿಕೊಳ್ಳುವ ಬಗ್ಗೆ’ ಅರಿವಿರಲಿಲ್ಲ. ತಿಳಿದವರು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ತನ್ನದೇ ಸರಿ ಎನ್ನುವ ಮೊಂಡುವಾದ, ಹಠಮಾರಿತನ. ಇದೆಲ್ಲವೂ ನನಗೆ ಗೊತ್ತಿತ್ತಾದುದರಿಂದ ಏನೂ ಮಾತನಾಡದೇನೇ ಮೌನವಹಿಸಿಬಿಟ್ಟಿದ್ದೆ.

ನೋಡು, ಸಾವಿಗೂ ನನ್ನಂತಹ ಅಪವಿತ್ರಳ ಬಳಿಗೆ ಬರಲು ಅಸಹ್ಯವಾಗಿತ್ತು ಎಂದುಕೊಂಡು ಅತ್ತಿದ್ದೆ. ಅಷ್ಟು ಹೆಚ್ಚು ಜನರಿಗೆ ನನ್ನ ಆತ್ಮಹತ್ಯೆಯ ಯತ್ನ ಮತ್ತು ಅದಕ್ಕೇ ಕಾರಣದ ಬಗ್ಗೆ ಗೊತ್ತಾಗಿರಲಿಲ್ಲವೆಂದು ಕೊಂಡಿದ್ದೆ. ಆದರೆ, ನಾನು ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿ ಕೆಲವು ದಿನಗಳು ‘ಗುಸು…’ ‘ಗುಸು…’ ಮಾತನಾಡಿ ಸುಮ್ಮನಾಗಿಬಿಟ್ಟಿದ್ದರು. ಅಲ್ಲಿ ನನಗಾಗುತ್ತಿದ್ದ ಅವಮಾನ, ನೋವುಗಳಿಗೆ ನೊಂದು ಆ ರೀತಿ ಮಾಡಿಕೊಂಡಿದ್ದೆ ಎಂದು ಭಾವಿಸಿದ್ದರು. ಆದರೂ ಕೆಲವರಿಗೆ ‘ಆ ವ್ಯಕ್ತಿ…’ಯೊಡನೆಯಿದ್ದ ಸಂಪರ್ಕ ತಿಳಿದಿತ್ತು. ಅವಮಾನಗಳಿಗೆಲ್ಲಾ ಹೀಗೆ ಮಾಡಿಕೊಳ್ಳುವ ಪ್ರಾಣಿ ಇದಲ್ಲವೆಂದು ಗೊತ್ತಿತ್ತು…!

ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಕ್ಯಾಂಪ್‌ಗಳಿಗೆ ಹೋಗಿ ಶಸ್ತ್ರ ಕ್ರಿಯೆಗಳನ್ನು ಮಾಡಿಬರುತ್ತಿದ್ದೆ. ಹೆಚ್ಚಿನ ಕೆಲಸಗಳನ್ನು ಮೈಗಚ್ಚಿಕೊಂಡಿದ್ದೆ. ಆದರೆ ಮನೆಗೆ ಬಂದ ನಂತರ, ಆ ರಾತ್ರಿಗಳು ನನ್ನ ಬದುಕನ್ನು ‘ಅಸಹ್ಯ…’ಗೊಳಿಸಿದ ದಿನಗಳಿಂದ ಮನ ನೋಯುವಂತೆ ಮಾಡುತ್ತಿದ್ದವು. ಹೀಗಿರಲೊಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ನನ್ನನ್ನು ಸುಮ್ಮನೆ ಬಿಡಬಾರದೆಂದು ‘ವಿಧಿ’ ಸಂಚು ಹೂಡಿತ್ತು. ನಾನು ಯಾರ ನೆನಪು ಬೇಡವೆಂದುಕೊಂಡು ಮರೆಯಲು ಪ್ರಯತ್ನಿಸುತ್ತಿದ್ದೆನೋ ಆ ವ್ಯಕ್ತಿಯ ಅಣ್ಣ ಅತ್ತಿಗೆ, ಜೊತೆಗೆ ಅವನ ತಮ್ಮನನ್ನು ನನ್ನ ಬಳಿಗೆ ಕಳುಹಿಸಿತ್ತು. ಆತನ ಅಣ್ಣ ಆಯುರ್ವೇದದಲ್ಲಿ ವೈದ್ಯಕೀಯ ಶಾಸ್ತ್ರ ಮುಗಿಸಿದ್ದ. ಆತನ ಊರಿನಲ್ಲಿ Practice ಮಾಡಲು, ಹಣ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲವಂತೆ, ದೂರದೂರಿನಲ್ಲಿ ‘ಕ್ಲಿನಿಕ್’ ತೆಗೆದು ಹಣ ಸಂಪಾದಿಸಲು ಬಂದಿದ್ದರು. ಅದಕ್ಕೆ ನನ್ನ ಸಹಾಯ ಕೋರಿದ್ದರು. ಹತ್ತಿರದ ಯಾವುದಾದರೊಂದು ಹಳ್ಳಿಯಲ್ಲಿ ‘ಕ್ಲಿನಿಕ್’ ತೆರೆಯಲು ಸಹಾಯ ಕೇಳಿದ್ದರು. ನನಗೆ ನಿರಾಕರಿಸಲಾಗಿರಲಿಲ್ಲ. ಪಕ್ಕದ ಹಳ್ಳಿಯೊಂದರ ಊರ ಗೌಡರ ಬಳಿ ಮಾತನಾಡಿ ಅಲ್ಲಿಯೇ ಕ್ಲಿನಿಕ್ ಮತ್ತು ವಾಸವಾಗಿರಲು ಮನೆಯೊಂದನ್ನು ಕೊಡುವಂತೆ ಕೇಳಿಕೊಂಡಿದ್ದೆ. ತಮ್ಮ ಹಳ್ಳಿಗೊಬ್ಬ ವೈದ್ಯ ಬರುತ್ತಾನೆಂದು ಅವರಿಗೂ ಸಂತೋಷವಾಗಿತ್ತು. ಆಗಾಗ್ಗೆ ನಾನೂ ಸಹ ‘Consultant’ ಆಗಿ ಬರುತ್ತೇನೆಂದು ಹೇಳಿದ ನಂತರ ಅವರಿಗೆ ಸಮಾಧಾನವಾಗಿತ್ತು. ಹಾಗೆಯೇ ಮೊದಲು ಹೋಗಿಬರುತ್ತಿದ್ದೆ ಕೂಡಾ. ನಂತರದ ದಿನಗಳಲ್ಲಿ ಸಾಧ್ಯವಾಗದೇ ಬಿಟ್ಟುಬಿಟ್ಟೆ. ಆಸ್ಪತ್ರೆಯ ಕೆಲಸಗಳು ಹೆಚ್ಚಾಗಿದ್ದವು ಮತ್ತು ಅವರಿಗೂ ಆ ಹಳ್ಳಿಯಲ್ಲಿ ‘Practice’ ಸುಗಮವಾಗಿ ಮುಂದುವರೆದಿತ್ತು. ಅತಿ ಹೆಚ್ಚಿನ ಕೆಲಸಗಳಿಂದ ನಾನು ಒಮ್ಮೊಮ್ಮೆ ಬಳಲುತ್ತಿದ್ದೆ. ಆದರೆ ಆ ಬಳಲಿಕೆಯಿಂದ ನನಗೆ ನಿದ್ದೆ ಬರುತ್ತಿತ್ತು ಎಂಬುದನ್ನು ಮನಗಂಡಿದ್ದೆ. ತಮಗೆ ತಿಳಿಯದ ರೋಗಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದರು… ಹೀಗಾಗಿ ಅವರಿಗೆ ಆ ಹಳ್ಳಿಯಲ್ಲಿ ಒಳ್ಳೆಯ ಹೆಸರೂ ಬಂದಿತ್ತು. ನಾನು ಹೆಚ್ಚಿನದೇನನ್ನು ಕೇಳುತ್ತಿರಲಿಲ್ಲ. ವೃತ್ತಿ ಬದುಕಿನಲ್ಲಿ ಎಷ್ಟು ಬೇಕೋ ಅಷ್ಟು ಎಂಬಂತಿದ್ದೆವು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣೇಶ ದರ್‍ಶನ
Next post ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…