ಗಣೇಶ ದರ್‍ಶನ


ದೇವರನೆಯದೆ ಕಾವ್ಯದ ರಚನೆಯೆ
ನುತಿಯುರಿ ಇಲ್ಲದೆ ಭಾವದ ಪಚನೆಯೆ?
ತಪ್ಪಿದನಾದೊಡೆ ತಿದ್ದುವೆನೀಗ
ದೇವತೆಯೊಂದನು ನೆನೆ ಮನ ಬೇಗ-
ಎನಲೀ ನಗೆಬಗೆಗಿಂಬಾಗುತ್ತ
ಬಂದಿತು ಬೆನಕನ ಭಾವನೆಯಿತ್ತ.

ಬುದ್ಧಿಯ ನೀಡೈ ಗಣಾಧಿನಾಯಕ
ಸಿದ್ಧಿಯ ತೋರೈ ಗಣಾಧಿನಾಯಕ
ವಿಘ್ನನಿವಾರಕ ಗಣಾಧಿನಾಯಕ
ಹೆಗ್ಗಣವೇರುವ ಗಣಾಧಿನಾಯಕ ೧೦
ಆನೆಯ ಮೊಗವಾಡವ ಧರಿಸಿದನೇ
ಡೊಳ್ಳುಹೊಟ್ಟೆಗೆ ನಾಗರ ಬಿಗಿದವನೇ
ಶಶಿಪೋರನ ನಗೆಗಿಂಬಾದವನೇ
ದಯಮಾಡಯ್ಯಾ ದಂತಾಯುಧನೇ-

ಇಂತಾಚಾರ್ಯರ ಅನುಮತಿ ಇಲ್ಲದೆ
ಸಮ್ಮತ ವಿಷ್ವಕ್ಸೇನರನೊಲ್ಲದೆ
ಚೌತಿಯ ದಿನದೊಳು ಬೆನಕನ ಭಾವಿಸೆ
ನನ್ನ ಬಳಿಗೊಂದು ಮೂಷಕ ಧಾವಿಸೆ
ಗಜಮುಖನೈತಂದನೊ ಎನ್ನುತ ನಾ
ಸಂಭ್ರಮಿಸುತ ಕಂಡೆನು ಸನ್ನುತನ. ೨೦

“ಕಡುಬಿಲ್ಲವೊ ಕಡುಬಿಲ್ಲವೊ ಇಲ್ಲ
ನನಗೆ ಏಕೆ, ವಾಹನಕೂ ಇಲ್ಲ
ಪೂಜೆಗೈದು ಮೊರೆಯಿಡುತಿಹರೆಲ್ಲ
ಭಕುತರನೇ ಬೇಡಲು ಬಾಯಿಲ್ಲ.
ಎನ್ನಾರಾಧಿಪ ಮೋಹವ ಬಿಟ್ಟಿಹೆ
ಆದೊಡೆ ನನ್ನೊಳು ನೇಹವನಿಟ್ಟಿಹೆ
ಹಿರಿತನಕೂ ಕೆಳೆತನವೇ ಮಿಗಿಲು
ಇದರೊಳಿಲ್ಲ ಔಚಿತ್ಯದ ದಿಗಿಲು
ಅದಕೈತಂದೆನು ನಿನ್ನೆಡೆಗಿಂದು
ಕಡುಬಂ ತಣಿವಂದಂ ನೀಡೆಂದು”- ೩೦

ಎನ್ನುತ ಪಕ್ಕದ ಕುರ್ಚಿಯ ಪೀಠದಿ
ಸುಖದಾಸನಮಂ ಕೊಂಡಿಹ ಮಾಟದಿ
ದುಂಡನೆ ಕಾಲ್ಗಳ ಮೇಲೆತ್ತಿಟ್ಟು
ಹೊಟ್ಟೆಯ ಮೇಗಡೆ ಸೊಂಡಿಲನಿಟ್ಟು
ಶಿವನುರಿಗಣ್ಣಿನ ಬೆಳುದಿಂಗಳೊ ಎನೆ
ನೋಟದ ಮಂದಸ್ಮಿತರುಚಿ ತಣ್ಣನೆ
ತೇಜವ ಸೂಸುತಲೆಲ್ಲೆಡೆ ಬೆಳಗೆ
ಆತ್ಮದ ಹಾವಸೆ ಬೇಸರ ತೊಲಗೆ
ಕಂಗಳ ಢಾಳದೊಳೆನ್ನಂ ತಿವಿದು
ನಾ ಸಡಗರಗೊಳೆ ತಾನದ ಸವಿದು ೪೦
ಇಂತೆನೆ ಬಂಧುವಿನದದಿ ಬೆನಕಂ
ಋದ್ಧಿ ಬುದ್ಧಿ ಸಿದ್ಧಿ ಪ್ರದಾಯಕಂ,
ನಮ್ರನಾಗಿ ಗೈದೆನು ಶರಣಾರ್ತಿ:
“ಸ್ವಾಗತ ಮಂಗಳವಿನೋದಮೂರ್ತಿ
ಸಕಲಸುರಾಸುರ ಗಣಂಗಳರ್ತಿ
ದೇಶವಿದೇಶಸುವಾಸಿತ ಕೀರ್ತಿ
ವ್ಯಾಸಸ್ಪೂರ್ತಿಗೆ ನಡೆಕೋಲಾದನೆ
ಮರುಳ್ಗಳ ಹುರುಳೇ ಎಡರಾಳುವನೇ
ಏ ಬಿನದಕೆ ನನ್ನೆ ಡೆಗೈತಂದೆ
ಪ್ರಾತ್ಯನೆಡೆಗೆ ದೇಹಿ ಎಂದು ಬಂದೆ? ೫೦
ನನ್ನ ಗೃಹಿಣಿ ಭೋಜನದಧ್ಯಕ್ಷೆ
ಮನೆವಾಳ್ತನದೊಳು ಬಲುಬಲು ದಕ್ಷೆ
ಅವಳಾಳ್ತನದೊಳೆ ನನ್ನಯ ರಕ್ಷೆ
ಮೀರೆ ವಿಧಿಸುವಳು ಭಿಕ್ಷೆಯ ಶಿಕ್ಷೆ.
ಮೋದಕ ನೈವೇದ್ಯವನಣಿಗೈಯೆ
ನೆಪವೇನಂ ಪೇಳಲಿ ನಾನರಿಯೆ
ಎಲ್ಲರ ಕಾರ್ಯಕು ನೀನೆ ಉಪಾಯ
ಈ ಪೂಜೆಗು ನೀನಿಡು ತಳಪಾಯ”.

ಎನ್ನೆ ನಾನು ನಸು ಚಿಂತಿಸಿ ಬೆನಕಂ
ಕರ್ಣಾಸ್ಫಾಲಿತ ಲಲಾಟಫಲಕಂ ೬೦
ಮೊಗದಿಂ ಕಿವಿತೆಗೆದೆನಗಿಂತೆನುವಂ
“ಅತ್ತು ಕಾಡಿ ಅಮ್ಮನ ಗೋಗರೆವಂ
ನೆರೆಮನೆ ಮೂರ್ತಿಯ ನೋಡುತಲೆಳೆಯ
ಸಂತೈಸಲು ಪೋ ನಿನಗಿದೆ ಸಮಯ.”
ಎನೆ, ನಾನಾತನ ಭಾವವನರಿತು
ಹಸುಳೆಗೆ ಲೇಸೆಂದಾಳನು ಕುರಿತು
ಬಿಂಬವ ತರವೇಳ್ದಾಕೆಯನೆರೆದೆ
“ಮುದ್ದನ ಹರಸಲು ಗಣಪನ ಕರೆದೆ
ನಿರ್ವಿಧಿಯಾದರು ಕಡುಬನು ಮಾಡಿ
ಪೂಜಿಪುದೊಳ್ಳಿತು ಸುತನಂ ಕೂಡಿ.” ೭೦

ಇದನಾಲಿಸಿ ಕಂದನು ಕುಣಿದಾಡೆ
ತಂದ ಬಿಂಬವುಲ್ಲಸವನು ಹೂಡೆ
ಬಂದ ಬೆನಕನದರೊಳು ಸುಳಿದಾಡೆ
ಈ ಆಟದೊಳಾಕೆಯ ಬಗ್ಗೆ ಕೂಡೆ
ಅತಿಥಿಕಾರ್ಯವೆಡರಿಲ್ಲದೆ ನಡೆವ
ಕಡುಬಿನ ತುಷ್ಟಿಯ ಗಣಪಗೆ ಕೊಡುವ
ಯತ್ನದೊಳಾಶಂಕೆಯ ನಾ ನೀಗಿ
ಸ್ವಸ್ಥಾನಕೆ ಬರೆ ಬಗೆ ಲಘುವಾಗಿ;
ಕಿವಿಯಾಡಿಸಿ ಕಣ್ ಕೊಂಕಿಸಿ ನೋಡಿ
ಬೆನಕನೆಂದ “ಅಹ ಎಂತಹ ಜೋಡಿ ೮೦
ನಿಮ್ಮ ನೋಡುತಿರೆ ಕುದುರುವುದರಿವು
ಗಂಡಸಿನೊಡತನಮದು ಇದುವು
ಶ್ರುತಿಯೊಳಗಾಡುವ ಹಾಡಿನ ತೆರದಿ
ಸ್ವತಂತ್ರ ನೀನೀ ಪಾರತಂತ್ರ್ಯದಿ
ಶಕ್ತಿಸಮಾರೋಪಣವೇ ಮದುವೆ
ಒಂದೆರಡಾಗುವ ತರವೇ ಮದುವೆ
ಭರಸಮರ್ಪಣದ ಮುಹೂರ್ತವೊದವೆ
ತಿರುಳನ್ನು ನೆರಳಪ್ಪುದೆ ಮದುವೆ
ಹೆಣ್ಣಿಗೆ ಹುರುಳು ಗಂಡಿಗೆ ಮರುಳು
ಗಂಡಿಂತೊಡೆವುದೆ ಮದುವೆಯ ತಿರುಳು ೯೦
ಈ ಒಡೆತನವೇ ದಿಟದೊಡೆತನವು
ನಿಮಗೆನ್ನಾಶೀರ್ವಾದದ ನೆರವು”
ಎನೆ, ಇದು ಭೂಷಣವೋ ದೂಷಣವೋ
ಈ ಬಿನದಿಗೆ ಕುಹಕವೆ ತೋಷಣವೋ
ಎಂದಿರೆ ನಾನಿದ ಗಣೇಶ ತಿಳಿದು
ಮಗುಳಿಂತಂದಂ ಬಿನದವ ತಳೆದು
“ಶಿವನೋ ಶಕ್ತಿಯೊ ಪರಮೇಶನೊಳು
ಹುರುಳಾರೈ-ಶಕ್ತಿಯಲಾ ಹುರುಳು
ಸಿರಿಹರಿಯೊಳಗೋ ಸಿರಿಯೇ ಅಲ್ಲವೆ
ವಾಗರ್ಥದೊಳೂ ವಾಚವೆ ಅಲ್ಲವೆ ೧೦೦
ಕೇಳ್ವೆ ಕಬ್ಬದೊಳು ಕೇಳ್ವೆಯೆ ಅಲ್ಲವೆ
ಋಣಋದ್ಧಿಯೊಳೂ, ಋದ್ಧಿಯೆ ಅಲ್ಲವೆ
ಮರುಳೂ ಹುರುಳೂ ಬೆರತಿರರೊಳ್ಳಿತೊ
ಕವಲೊಡೆಯುತ ನೆರವಾಗುವದೊಳ್ಳಿತೊ?
ಹುರುಳಿನೊಳಗೆ ಮರುಳಾಟವೆ ಲೇಸು
ಮಾಯೆಯೊಳಗೆ ಶಿವಲೀಲೆಯೆ ಲೇಸು
ಇರವಿನೊಳರಿವಿನ ಮರುಳೇ ನಲವು
ಸಚ್ಚಿದಾನಂದವೆಂಬುದೆ ಇದುವು
ನಿಮ್ಮೀ ದಾಂಪತ್ಯದೂಳಿದ ಕಾಂಬೆ
ಅಸ್ತು ಅಸ್ತು ಸ್ವಸ್ತಿ ಸ್ವಸ್ತಿ ಎಂಬೆ.” ೧೧೦

ಇಂತೆನೆ ವಿಘ್ನೇಶಂ ನಗೆಗೂಡಿ
ಮರುಕೊಂಕಾಡಲು ನನ್ನನು ದೂಡಿ
“ಒಂದೆರಡಪ್ಪುದೆ ಲೇಸೆಂದೆನ್ನುವೆ
ಒಂಟಿಯಾಗಿ ನೀನುಳಿದಿರೆ ಚೆನ್ನವೆ
ಗಜಮುಖನೇ ನಿನಗೆಂದಿಗೆ ಮದುವೆ
ನಿನ್ನಿಂದಾವಪ್ಸರಸಿಯು ಸಧವೆ?”
ಎನೆ, “ಎಲ ದಿಟ್ಟ, ನಗುವೆಯ ನನ್ನ
ಎನಗೇತಕೆಯೋ ಮದುವೆಯ ಬನ್ನ!
ನನಗೀ ಗಣದೊಡೆತನವೇ ಸಾಕು
ನನ್ನೊ ಡೆತನ ಯಾವಬಲೆಗೆ ಬೇಕು ೧೨೦
ಲಂಬೋದರಗೇತಕೆ ತರಳೋದರೆ
ಕುಂಭಶಿರಂಗೇತಕೆ ಬಿಂಬಾಧರೆ
ವಕ್ರತುಂಡಗಕ್ಕರಿಸುವರಿಹರೇ
ಮರುಳ್ಗಳೊಡೆಯಗೆ ಮರುಳಹರಿಹರೇ?
ನನ್ನನು ನೆನೆಯುತ ನಾನೇ ನಗುವೆ
ಹೆಣ್ಣೊಲ್ಲದ ರೂಪಕೆ ಗೆಲ್ ಎನುವೆ
ಈ ನಿಡುಮೂಗನು ನಾನೇ ಬಯಸಿದೆ
ಈ ಹಿರಿಕಿವಿಯನು ನಾನೇ ಬಯಸಿದೆ
ಈ ಕಿರುಕಂಗಳ ನಾನೇ ಬಗೆದೆ
ಗುಜ್ಜು ಕಾಲು ಪೇರುದರಕ್ಕೊಲಿದೆ ೧೩೦
ವಾಹನಕಿಲಿಯನೆ ನಾನಾರಿಸಿದೆ
ಎಡರೊಡೆತನವನು ನಾನೇ ವರಿಸಿದೆ
ಎನ್ನ ಕಜ್ಜಕೀ ಪರಿಕರ ಹವಣು”
ಎನಲವನಂ ತಡೆದಾನಿಂತೆಂದೆನು
“ಕ್ಷಮಿಸು ಗಣಪ ನಾನರಿತುದೆ ಬೇರೆ
ನಿನ್ನ ಕುರಿತು ನೀನೊರೆವುದೆ ಬೇರೆ.
ಶಿವನರಿವಿಲ್ಲದೆ ನಿನ್ನ೦ ಕಡೆದು
ಕಾವಲಿಡಲು ಶಿವೆ, ಶಿವನಂ ತಡೆದು
ಶಿರವನಳಿಯೆ, ಹರಿ ಗಜವಂ ತರಿದು
ತಲೆಯಂಟಿಸೆ ನೀನಾದೆ,-ಕತೆಯಿದು. ೧೪೦
ನಿನ್ನಿಚ್ಛೆಗೆ ನೀನಾದುದು ನನ್ನಿಯೊ
ನಿನ್ನ ಕುರಿತಿಂಥ ಕತೆಗಳೆ ನನ್ನಿ ಯೊ”
ಎನೆ, “ಎಲ, ಎನಗಿಡುತಿಹೆ ದುರ್ಬೀನ
ಎನ್ನ ನುಡಿಸೆ ನಿನಗಿಲ್ಲ ಸಮಾನ.
ಯಕ್ಷನೊ ರಕ್ಷನೊ ಚೌಕದ ಭೂತವೊ
ಮುಗ್ಧರ ಭೀತಿನಿವಾರಣಹೇತುವೊ
ಹಾದಿಯೊಳಿದ್ದೆನೊ ಬೀದಿಯೊಳಿದ್ದೆನೊ
ಬಾನಿಂ ಬಿದ್ದೆನೊ ಗಂಗೆಯೊಳೆದ್ದೆನೊ
ಭವನೇ ಬಗೆದನೊ ಭವೆಯೋ ಅರಿಯೆ
ಆರುಮರಿಯರೀ ಸಂದೆಗ ಹರಿಯೆ ೧೫೦
ಋಷಿ ಕವಿ ಯಾರೂ ಬಣ್ಣಿಸಲಿಲ್ಲ
ಕಾಳಿದಾಸಗೂ ನನ್ನರಿವಿಲ್ಲ
ಇರಲಾದೊಡೆ ನಾನಿದ್ದೇ ಇದ್ದೆ
ಎಡರಾಳುವ ಕಲೆಯೊಳು ನುರಿತಿದ್ದೆ
ಮರುಳರ ಮೊರೆಯಾಲಿಸೆ ಕಲಿತಿದ್ದೆ
ಇದರಿಂದೆಲ್ಲರ ಚಿತ್ತದೊಳೆದ್ದೆ.
ಬಯಕೆಸಲಿಕೆಯಂತರವೇ ವಿಘ್ನ
ಎಲ್ಲಾ ಸೆಗು ಭವವಿದು ಗಳದಘ್ನ
ತೇಲಿಸ ಕಲಿತರೆ ಅದೆ ವಿಜ್ಞಾನ
ಇದರೊಳಿಲ್ಲ ನನಗಿಂತಲು ಜಾಣ ೧೬೦
ವಿಜ್ಞಾನದ ಅಧಿದೇವತೆ ನಾನು
ಔಚಿತ್ಯವನೆನ್ನಂಗದಿ ಕಾಣು:

ಹಿರಿದೆನ್ನ ಮತಿ ಮೇಣಿದು ನಿಶಿತ
ತಿಳಿ ಮತಿವಂತಗೆ ನಿಡುಮೂಗೆನುತ
ಈ ಸೊಂಡಿಲ ಚಲುವೆನ್ನಗ್ಗಳಿಕೆ
ಹೊಳಪಿನ ತಿಣ್ಣರಿವಿನ ಬತ್ತಳಿಕೆ.
ಆಲಿಸ ಬಲ್ಲವನಾಳಲು ಬಲ್ಲ
ನೋಡೀ ಹಿರಿಕಿವಿ ಇದಕೆಣೆಯಿಲ್ಲ
ಎಲ್ಲವನಾಲಿಪೆ ಸೊಂಡಿಲೋಳಿಡುವೆ
ಎಲ್ಲಕು ಒಂದುತ್ತರ ಓಂ ಎನುವೆ ೧೭೦
ಹಲವರನಾಲಿಸು ಒಂದನೆ ಹೇಳು
ಇದ ಕಲಿತಗೆ ನೆಮ್ಮದಿ ಸಿರಿಬಾಳು.
ಕಾರ್ಯೈಕಾಗ್ರತೆಗೀ ಕಣ್ಣೆ ಸರಿ,
ಸರ್ವೊಪಶಮನಕೀ ಉದರ ಸರಿ
ಉಂಡಿರುವವನೇ ಶಾಂತಿಯ ಬಲ್ಲ
ಉಣ್ಣಲು ಬಲ್ಲವ ತುಷ್ಟಿಯ ಬಲ್ಲ
ಇವನುಳ್ಳಗೆ ಪುಷ್ಟಿಯು ಹೊರತಲ್ಲ
ಇಂಥವಗೊಲಿವುದು ಈ ಜಗವೆಲ್ಲ
ಈ ಲಂಬೋದರವೆನ್ನಯ ಪೆರ್ಮೆ
ಇದರಿಂ ದೊರೆಯಿತು ಎಲ್ಲರ ಕೂರ್ಮೆ ೧೮೦
ಇದೆ ಕುರುಹಲ್ಲವೆ ಕೃತಕೃತ್ಯತೆಗೆ
ಎಡರೆಲ್ಲವ ಗೆದ್ದಿಹ ಸತ್ಯತೆಗೆ
ಇದರಿಂದಲೆ ಬಗೆಯಪ್ಪುದು ಸ್ತಿಮಿತ
ಮಂದಿಯ ನಂಬುಗೆ ಇಂಥನೊಳಮಿತ.
ಅರಿವಿನ ಕಣಜಕೆ ಕನ್ನವನಿಡಲು
ಸೃಷ್ಟಿ ರಹಸ್ಯವ ಭೇದಿಸಿ ಬಿಡಲು
ಇಲಿಗೂ ಮಿಕ್ಕಿಹ ದಕ್ಷರದಾರು
ವಿಜ್ಞಾನಕೆ ಇಲಿಯೊಲ್ಲದರಾರು
ಈ ಮರ್ಮವನರಿದಕಾನೊಲಿದೆ
ಇದರಿಂ ವಿಘ್ಞೇಶಂ ನಾನಾದೆ. ೧೯೦

ಎನ್ನಯ ಸಾಮುದ್ರಿಕವಿಂತಿರಲು
ನಂಬಿದರೆಂಬೆನೆ ಜನ ಮೆಚ್ಚಿರಲು
ಶಿವಗಾಯಿತು ಮರುಳ್ಗಳ ಬಲುಕಾಟ
ಶಿವಗೇಕಾಂತವೆ ಇಲ್ಲದ ಮಾಟ
ಇಬ್ಬರು ಒಟ್ಟಿಗೆ ಬಯಸಿದರೆನ್ನ
ತಪ್ಪಲು ತಮಗಿವನಾಳುವ ಬನ್ನ
ಇಂಥವನಿಹನೇ ಎಂದರಸಿದರು
ಎನ್ನ ಕಂಡು ಮುದದಿಂ ಹರಸಿದರು
ಇವ ಮತಿವಂತ ಅಂತೆಯೆ ಶಾಂತ
ಮರುಳ್ಗಳ ಪಡೆಗಳಿಗಿವನೇ ಕಾಂತ ೨೦೦
ಎಂದನ್ನನು ಕೈಲಾಸಕೆ ತಂದು
ಕಂದಾ ನೀನೆಮ್ಮೌರಸನೆಂದು
ಭಾವಿಸಿ ತೋರಿದರೆನ್ನನು ಜಗಕೆ
ಅಂದಿಂ ಸಂದೆನು ನಾನೀ ಜಸಕೆ.
ಕಷ್ಟ ಕಷ್ಟವೀ ಗಣವಾಳ್ವಾಟ
ಏ ಬಣ್ಣಿಸಲೀ ಬಳಗದ ಕೂಟ!
ಒಬ್ಬೊಬ್ಬನಿಗೊಂದೊಂದೇ ಬೆರಗು
ಶಿವನವನಲ್ಲದೆ ಮಿಕ್ಕುದು ಹೊರಗು
ಮೈ ಮಾಟದೊಳೂ ಹೂಟವೆ ಇಲ್ಲ
ಸಮರಸವಿಲ್ಲದೆ ಓಸರವೆಲ್ಲ- ೨೧೦
ಈ ಓಸರಗಳ ನಾ ಜೋಡಿಪೆನು
ಭವ್ಯದ ಕರುಮಾಡವನಾಗಿಪೆನು
ಅಲ್ಲಪ್ಪುದು ಪರಮೇಶ್ವರನೋಲಗ
ಸಭೆಗುಲ್ಲಸ ತರುವುದೆ ನನ್ನೂಳಿಗ
ಭಾವುಕರೆಲ್ಲರು ಅಹ ಅಹ ಎನ್ನೆ
ಹರಿಬೊಮ್ಮರೆ ಸೈ ಸೈ ಲೇಸೆನ್ನೆ
ಗೌರಿಯ ಮಿದುನಗುವೆನ್ನನು ಚೋದಿಸೆ
ರುದ್ರನ ಭದ್ರಸ್ಮಿತವನುವಾದಿಸೆ
ನಿಂತೆಡೆ ನಿಂತೆಯೆ ಗಣಗಳನಾಳ್ವೆ
ಎಲ್ಲರ ನಗಿಸುತ ಮೋದದಿ ಬಾಳ್ವೆ.” ೨೨೦

ಇಂತೆನೆ ಗಣಪಂ ತನ್ನ ತೆರವನು
ಕೈಲಾಸಕೆ ತಾ ಬಂದ ಪರಿಯನು
ಇವನ ರಹಸ್ಯವನಿನ್ನು ಮರಿಯಲು
ಎನ್ನೋದುವರಿಗೆ ಮುಂದೆ ಬರೆಯಲು
ಇಂತೆಂದೆನು ನಾನವನಂ ಕುರಿತು
ಮೋದಕಗಳು ತಡವಪ್ಪುದನರಿತು
“ಕ್ಷಮಿಸು ಗಣಪ ನಿನ್ನಾಳಿಕೆಯೆಂತು
ಏನ ಗೈವೆ ಗಣ ವಶವಪ್ಪಂತು?
ಶಿವನ್ನಲ್ಲದೆ ಬೇರೊಂದನೊಪ್ಪರು
ಅವನೋಳು ನಿಷ್ಠಯನೆಂದಿಗು ತಪ್ಪರು ೨೩೦
ಅವರ ಭಕುತಿ ಕೈಲಾಸದ ತೇಜ
ಇಂಥ ಸ್ವತಂತ್ರರನಾಳುವ ರಾಜ
ನೀನಾಗಿಹೆ, ಎಂತಾಳುವೆ ಇವರ?
ಉಚಿತವಿದಾದೊಡೆ ಕೇಳಾ ವಿವರ”
ಎನಲವನಿಂತೆಂದನು ನಸುನಕ್ಕು
ಎನ್ನ ತೊಯ್ಯೆ ನಯನಸ್ಮಿತದುಕ್ಕು:
“ಒಪ್ಪೊಪ್ಪುವೆ ಈ ಕಜ್ಜವು ಕಷ್ಟ
ವಿಘ್ನರಾಜನಿಗೊ ಕಷ್ಟವೆ ಇಷ್ಟ
ನಿಯಮವಿಡಲು ಪಾಲಿಪರಿವರಲ್ಲ
ಇವರನಾಳ್ವ ಶಾಸನ ಶಿವ ಬಲ್ಲ ೨೪೦
ಒಂದೆನ್ನುತ ಒಂದೊಪ್ಪುವರಿವರು
ಈ ಮಿತದೃಷ್ಟಿಯ ನಿಷ್ಟುರರಿವರು
ಒಂದಾದರು ಒಹುವೆನ್ನುವೆ ನಾನು
ಒಂದೇ ಎಂಬಗೆ ನಗುವದೆ ಜಾಣು
ಎಲ್ಲ ಮರುಳಿಗೂ ಅಂಕುಶ ಹಾಸ್ಯ
ಮನಕದರಿಂ ಪರಿವದು ಮತದಾಸ್ಯ
ಕರಣಕೆಂತೊ ಸೃಷ್ಟಿಯ ವೈವಿಧ್ಯ
ಅಂತೆಯೆ ಮನಕೂ ಮತಮತ ಹೃದ್ಯ
ಒಂದೆನ್ನುವ ಬಗೆ ಮರಳಿನ ಕಾಡು
ಬಹುವೆನ್ನುವ ಮತಿ ಋದ್ಧಿಯ ಬೀಡು ೨೫೦
ರಸಸಮೃದ್ಧಿಯೇ ಬುದ್ದಿಯ ಸಿದ್ದಿ
ಸ್ವರ್ವರಸನಲಾ ವ್ಯೋಮಕಪರ್ದಿ.
ಗಣಗಣಕೂ ಭವನನುಭವ ಬೇರೆ
ಅನುಭವದಂತನುರಾಗವು ಬೇರೆ
ಒಬ್ಬನ ಬಣ್ಣನೆಯೊಬ್ಬನು ಆರಿಯ
ತನ್ನ ದಿಟ ದಿಟವೆಂಬುದ ಮರೆಯ
ಶಿವನೇಕಾಂಶುವ ತೋರ್ವನು ಭಕ್ತ
ಪೂರ್ಣಾಂಶುವ ಬಿಂಬಿಸುವನು ಯುಕ್ತ
ಭಕ್ತರ ರಸಸಂಯುಕ್ತರ ಮಾಡಿ
ನಲಿಸುವುದೆನ್ನಯ ಸರಸದ ಮೋಡಿ ೨೬೦
ನಾ ಗಣದುದ್ಯಾನದ ಮಂದಾನಿಲ
ಎನ್ನಿಂದೆಲ್ಲರ ಮನ ಮುದಚಂಚಲ.
ಭೃಂಗಿಯ ನಾಟ್ಯಕೆ ನಂದಿಯ ನಗಿಸುವೆ
ನಂದಿಮೃದಂಗಕೆ ಭೃಂಗಿಯ ನಗಿಸುವೆ
ಒಬ್ಬನ ಮುಂಗಡೆಯೊಬ್ಬನು ಕುಣಿವನು
ಹಾಸ್ಯದೊಳೊಬ್ಬನಿಗೊಬ್ಬನು ಮಣಿವನು
ಇಬ್ಬರಿಗೂ ಚಪ್ಪಾಳೆಯನಿಡುವೆ
ಅವರೊಡನವರಿಗೆ ನಾನೂ ಮಣಿವೆ.
ತುಂಬುರು, ತಂಡುವು ಡಿಂಡಿಮ ಬಾರಿಸೆ,
ಕೈಯೊಳು ಕಿಂಕುರ್ವಾಣವ ತೋರಿಸೆ ೨೭೦
ಮೌನದೊಳಿಬ್ಬರಿಗೂ ತಲೆದೂಗುವೆ
ಕೊಂಕಿನ ಕೇಕರದೊಳು ಸಭೆ ನೋಡುವೆ.
ನಾರದ ವ್ಯಾಖ್ಯಾನವ ಮಾಡುತಿರೆ
ಅಗಸ್ತ್ಯನದಕ್ಕೆ ತೂಕಡಿಸುತಿರೆ
‘ಈತನ ತಪವಿನ್ನೂ ತೀರದಿರೆ
ವಿಘ್ನಕೆ ನಿಮ್ಮಯ ವಾಣಿಯ ತಂದಿರೆ’
ಎನ್ನುವೆ ನಾ ಮುಂದೋತರವೆಳೆದು
ಈ ಋಷಿಯೆಚ್ಚರೆ ಸಭೆನಗೆ ಹೊಳೆದು.
ಕನ್ನಡಿ ಮುಂಗಡೆ ಅಣಕವನಾಡಿ
ನಗುವೊಲು ಮಕ್ಕಳು ತಮ್ಮನೆ ನೋಡಿ ೨೮೦
ಗಣಗಳಿಗಂದಿನ ನೆನಪನು ತರುವ
ತಕ್ಕ ರೋಳಾಡಿಪೆ ದಕ್ಷಾಧ್ವರವ.
ಹರನನೆ ನಗುವೆವು ಭಸ್ಮಾಸುರದಿ
ನಾನೇ ಮೋಹಿನಿಯಂದಿನ ವೇಷದಿ.
ಇಂಥ ವಿನೋದದಿ ಶಿವ ಶಿವ ಎನುವೆವು
ಮೋದದ ಭಾರಕೆ ವವ ಎನುವೆವು
ಹಿರಿಕಿರಿದೆನ್ನದೆ ಶಿವ ಶಿವ ನಗುವೆವು
ಎಲ್ಲರ ಮರುಳಿಗು ಶಿವಶಿವ ನಗುವೆವು
ಈ ಮೋದದಿ ಹೊಳೆವದು ಶಿವನ ಕಳೆ
ಹೊಳಹಿಂ ಮುಡಿಯೆಳವೆರೆ ತೇಜಗೊಳೆ ೨೯೦
ಎಲ್ಲೆಡೆ ಉಜ್ಜ್ವಲಿಪುದು ಶಿವನಿರವು
ಗಣಕಪ್ಪುದು ಬಗೆ ಬಣ್ಣದ ಮರವು
ಎನ್ನಿ೦ ಯುಕ್ತಸ್ವರಸಂಕಲನ
ಭವನಾಡಿಪ ಹಾಡಿನ ಸಂಚಲನ
ನಾ ಗಣಗಳನಾಳುವ ಗುಟ್ಟಿದುವು
ಒಂದಕೆ ಬಹುವೊಂದಿಪ ಹವಣಿದುವು
ಎನ್ನ೦ ನೋಡುತಲೊಲಿಯದರಿಲ್ಲ
ಒಲುಮೆಗು ಮಿಕ್ಕಿಹ ಲೇನಿನ್ನಿಲ್ಲ.”

ಇಂತೆನೆ, ನಾನೀ ಹಾಸಶಕ್ತಿಯಂ
ಹೊಗಳಲು ಮೊದಲಿಡೆ- “ಸಾಕು ಭುಕ್ತಿಯಂ ೩೦೦
ನೀಡು, ಹಸಿದಿಹನ ಕಾಯಿಸುವರೆ ಪೇಳ್‌
ಕಡುಬಾಯಿತೊ ಇಲ್ಲವೊ ಪೋ ಪೋ ಕೇಳ್”
ಎನ್ನುತ ಸಂಬೋಧಿಸಿ ಗಜವದನಂ
ಅಪಚರಿಸಿದನೋ ಅತಿಥಿದೇವನಂ
ಎಂದು ಬೆಚ್ಚರುತ ನಾನೊಳಪೋಗಿ
ನೋಡುವೊಡೆಲ್ಲವೂ ಸಜ್ಜಿತವಾಗಿ
ಹಬ್ಬದೊಲಿರೆ ನಾನಚ್ಚರಿಗೊಳುವೊಲು
ಅಷ್ಟಮಿ ಕೃಷ್ಣನ ಹಸೆಮಂಟಪದೊಲು
ಮಂಟಪವಾಗಿರೆ ಕಂದನ ಕಾರಣ,
ಬಾಳೆಯ ಕಂದಿನ ಕಂಬದ ತೋರಣ ೩೧೦
ಓರಣವಾಗಿರೆ ಪೂಜಾದ್ರವ್ಯಕೆ
ಎಳಯರೆ ತಂದಿರೆ ಹಸುರೆಲೆಗರಿಕೆ
ಗಂಧಾಕ್ಷತೆ ಫಲಪತ್ರಗಳ್‌
ಚಿತ್ರಾಲಂಕೃತದಾರತಿ ತಟ್ಟೆಗಳ್‌
ಚಂದದಿ ರಂಜಿಸೆ ಬಿಂಬದ ಮುಂದೆ
ಬೆನಕನ ಬಳಿಗೋಡುತ ಬೆರಗಿಂದೆ
“ದಯೆಗೈ ಪೂಜೆಗೆ ದಯೆಗೈ ಮನ್ನಿಸು
ಆತಿಥ್ಯವ ಕೊಳು ಕೃತಕೃತಿಯೆನ್ನಿಸು”
ಎಂಬೆನಗಾತಂ ನಗುತ್ತ ತಂದಂ
ನಮ್ಮ ಸೈಪೆ ನಡೆತರುವೊಲು ಬಂದಂ ೩೨೦
ಉತ್ಸವೋತ್ಸಾಹವಿಸ್ಮಿತನಾದಂ
ಪ್ರಸನ್ನವದನಂ ಸಸ್ಮಿತನಾದಂ
ಆರ್ಘಪಾದ್ಯವಾಚಮನೀಯಂಗಳ
ದಧಿಮಧುರಾಭಿಷೇಕಂಗಳ
ದೂರ್ವಾಂಕುರ ಪತ್ರಾರ್ಚನೆಗಳನು
ಸುಮಮಾಲಾಲಂಕಾರಂಗಳನು
ತಾಳ್ಮೆಯಿಂದ ವಿಘ್ನೇಶಂ ಕೊಳ್ಳುತ
ಕಡುಬಿನ್ನೂ ಬರಲಿಲ್ಲವೆ ಎನ್ನುತ
ಪ್ರಶ್ನೆಯ ದಿಟ್ಟಿಯನೆನ್ನೆಡೆಗಿಡುತ,
ತುಸುತಡವಾದರು ಹಬೆಯಾಡಿಸುತ ೩೩೦
ಶುಭಾಭ್ರಚ್ಛವಿ ಮೋದಕ ಒರಲು
ಮುದವಾಂತಟ್ಟವಳಂ ಹರಸುವೊಲು
ಆ ನೈವೇದ್ಯವ ಭಂಜಿಸುತಿರಲು
ಈ ತೃಪ್ತಿಯ ಸೊಗವೆಮಗಾಗಿರಲು,
ಸೂಕ್ತಿಗಳಿಂ ಸರಸೋಕ್ತಿಗಳಿಂದಂ
ಮರೆತ ಷಣ್ಮುಖನ ಮಾತುಗಳಿಂದಂ
ಭೋಜನದಾಯಾಸವ ತೀರಿಸುತ
ಷಡ್ರಸಂಗಳಿಗೆ ರಸವೇರಿಸುತ,
ದಳಪತಿಯಾಗುವ ಪೌರುಷ ಮಿಗಿಲೋ
ಗೃಹಪತಿಯಾಗುವ ಜಾಣ್ಮೆಯೆ ಮಿಗಿಲೋ ೩೪೦
ಎನ್ನುವ ತರ್ಕದಿ ತಾನೇ ಗೆಲ್ಲುತ
ಈ ನಡುಮಾತೊಳು ಕಡುಬಂ ಮೆಲ್ಲುತ
ಬೆತಮನ್ಯುಗೆ ಪಗೆವರೆ ಇಲ್ಲೆನುತ
ಶಾಂತನೊಡನೆ ಸೆಣಸುವರಾರೆನುತ,
ನಕ್ಕ ಶಶಿಗಂದು ಮುಳಿದೆಯೇಕೆನೆ
ಆ ವಿಷಗಳಿಗೆಯ ನೆರೆ ಬಿನದವನೆ
ನೆನೆದು ನಕ್ಕು, ಮುಳಿದುದು ದಿಟವೆನುತ
ಕಿತ್ತ ದಂತವಂ ನನಗೆ ತೋರುತ,
ಎಸೆವ ವೇಳಗಾ ಮುಳಿಸು ತೀರಲು
ಕೈಯೊಳೆ ನಿಂತಿತು ನೋಡಿದು ಎನಲು- ೩೫೦
ಈ ತೆರ ಬಿನದದ ಮಾತುಗಳಿಂದಂ
ಆರೋಗಣೆ ಗೈಯುತ ಬಿಡುವಿಂದಂ
ತೃಪ್ತಿಯ ಸೂಚಿಸೆ, ಆರತಿಯೆತ್ತಿ
ನಮಿಸಲು ತಲೆಯಂ ಪಾದಕೆ ಒತ್ತಿ
ಹರಸುತೆಮ್ಮ ನಲವಿಂದೊಪ್ಪಿರ್ದಂ
ಗಿರಿಜಾತನುಜಂ ವಿಶ್ರಮಿಸಿರ್ದಂ.

ಇಂತಿರೆ ವಿಘ್ನೇಶಂ ತುಷ್ಟಿಯೊಳು
ನೆನೆಸುತೆಮ್ಮ ಕರುಣಾವೃಷ್ಟಿಯೊಳು
ಎಡರಿಲ್ಲದೆ ಪೂಜೆಯು ನೆರವೇರಿ
ಗೃಹಿಣೀಕುಮಾರರಿಗೆ ನೆಲವೇರಿ ೩೬೦
ದೇವಪ್ರಸಾದ ಭೋಜನವಾಗಿ
ಸಂಜೆಪೂಜೆಯಾರತಿ ಗೆಲವಾಗಿ
ನಡೆದಿರೆ-ನಾ ಪ್ರಶ್ರಿತವನು ಮರೆತು
ಶಿವನಾಟ್ಯವನೀ ಗಣಪನ ಹೊರತು
ಬಣ್ಣಿಪರಿನ್ನಾರೆಂಬ ಕುತೂಹಲ
ಬಗೆ ಮಿಗೆ, ಆ ಮೇಳದ ಕೋಲಾಹಲ-
ದಾನಂದದ ಶ್ರೀಕಂದಾಪ್ಲವವಂ
ಬೆನಕನ ಬಣ್ಣನೆಯೊಳು ಬೇಡವಲಂ
ಎನ್ನ೦ ಕಕುಸುತಲಿಂತೆಂದಂ-
“ಎಂತದ ಬಣ್ಣಿಪೆ ನೀನರಿವಂದಂ ೩೭೦
ಭಾವಿಪ ಮನದಂತಿದಾನಂದಂ
ಮುಕ್ತಿಯೊಳಪ್ಪೀ ಮೋದದ ಬಂಧಂ.
ಮನವರಳಿ ಕಂಪಿಡಲವನೆಡೆಗೆ
ಸೇತುವೆಯೆನೆ ಈ ಎಡೆ ಆ ಎಡೆಗೆ
ಭವವಂ ಮರೆತವನಂ ಮುಟ್ಟಲೆದೆ
ನಿದ್ದೆಯೊಳದು ಪದ ಪಿಡಿಯುವ ತೆರದೆ
ಏರಲಿ ಬಗೆ ಹಿಮಗಿಯುನ್ನತಿಗೆ
ಗೌರೀಧವ ಗೌರಾಂಗನ ನುತಿಗೆ.

ನಿರ್ಮಲಜಲಕಲನಾದಾಹ್ಲಾದಿನಿ
ನವಶಶಿನರ್ಮದ್ಯುತಿಸಂವಾದಿನಿ ೩೮೦
ಗಂಗೆತರಂಗಿಣಿ ಮಂಗಳವೆರೆಯೆ
ಹರ ಹರ ಪೊರೆಯೊಂದಮರರು ಮೊರೆಯೆ
ಶಿವ ಶಿವ ಶಿವದಿಡುತಿರೆ ಶರಣಗಣ
ರಚಿಸಿರೆ ನಾಲ್ಮೊಗ ಮಂತ್ರಾವರಣ
ಭವದ ನೆರಳು ಭಿತ್ತಿಯೊಳಾಡುತಿರೆ
ತುಂಬುರು ಮಾಧವರದ ನೋಡುತಿರೆ
ವಾಣಿಯಿರಲು ವೀಣೆಯ ಶ್ರುತಿಮಾಡಿ
ಚೆಲುವಿನೊಡತಿ ಲಕ್ಷ್ಮಿಯನೊಡಗೂಡಿ
ಒಂದೆಡೆ ಸಾಜ್ಜಾಗಿರೆ ಅಪ್ಸರೆಯರು
ಮತ್ತೊಂದೆಡೆ ಮೇಳದ ಗಂಧರ್ವರು ೩೯೦
ಡಮರುಗವಾಡಿ ಸುವಂದನುವಾದಿಸೆ
ಮೃದಂಗ ಡಿಂಡಿಮ ಡಕ್ಕೆಯ ಬಾರಿಸೆ
ಮರುಳ್ಗಳಣಿಯಾಗಿರೆ ಭಂಗಿಯೆಡೆ
ನಾಟ್ಯದ ನಾಯಕ ನಾನಿರೆ ಪದದೆಡೆ
ಇರಲು ನಂದಿ ಭವಾನಂದಿ ವಂದಿ
ಶಿವನೆಚ್ಚರವರಿವೆಚ್ಚರವೊಂದಿ;
ತನ್ನಿರವಿಂದೆಲ್ಲರ ತುಂಬಿರುವಂ
ಪರಮಂ ಗೌರೀಯೋಗದೊಳಿರುವಂ.
ಪುರುಷನೊಳಂತರ್ಹಿತೆಯನೆ ಪ್ರಕೃತಿ
ಎನೆ ಈ ಯೋಗವಿಯೋಗವೆ ವಿಕೃತಿ ೪೦೦
ಮೇಣೀ ಪುನರ್ಮಿಳನವೆ ಪರನಿರ್ವೃತಿ
ಎನಲೀ ಸಂಲೀನತೆಯೇ ಭವವೃತಿ-
ಅಣುವೊಳು ಗ್ರಹತಾರಾವಲಯದೊಳು
ಇಹ ಸಂಯಮವಂ ಫಾಲಾಕ್ಷದೊಳು
ತನ್ಮೀಲನದಿಂ ತೋರುತಲಿಹನು
ಈ ತಮದಿಂ ವಿಶ್ವಭಂಭರನಿವನು
ಸ್ಮರಹರನಸುರವರದ ಗರಧರನು
ಭಯಕರನಭಯಂಕರ ಶಂಕರನು
ಅರಿತರ ಗುರು ಮರುಳರೊಡೆಯ ಪರನು
ಶರಣರ ಮತಿ ಎಲ್ಲರ ಗತಿ ವರನು. ೪೧೦

ಇ೦ತಿರೆ ಪರಮೇಶ್ವರನಾನಂದದಿ
ನಾವೀ ಕಡಲಿನ ಮೆಲ್ತೆರೆಯಂದದಿ,
ಇ೦ಗಡಲಿಂ ಸೊದೆಮೂಡುವ ತೆರದಿ
ಹರಿಯುರದಿಂ ಸಿರಿಯೇಳುವ ತೆರದಿ
ಇರುಳಾಗಸದಿಂ ತಾರಾಪಥದೊಲು
ಸುಷುಪ್ತಿಯಿಂದಂ ಸ್ವಪ್ನ೦ ಬರುವೊಲು
ಬ್ರಹ್ಮೋದ್ಗೀಥದ ಸರಸತಿಯಂತೆ
ನಿರ್ಗುಣದಿಂ ಗುಣಮಯಿಯೊಗೆವಂತೆ
ಮುಂಮೌನದಿನೋ೦ಕಾರದ ರೀತಿ
ಪರಾಶಕ್ತಿ ಹುಂಕಾರದ ರೀತಿ ೪೨೦
ಹೊರಬರುವಳು ಶಿವನೆಡದಿಂ ಜಾರಿ
ಜಗನ್ಮಾತೆ ರುದ್ರಜಾಯೆ ಗೌರಿ.

ಬರುವಳು ಹೊಸ ತೇಜವ ಬೀರುವಳು
ಜಯಘೋಷಕೆ ಸ್ಮಿತವಂ ತೋರುವಳು
ವಾಣೀಸಿರಿಯರನಾದರಿಸುವಳು
ವಿಧಿಹರಿಗಳ ಕುಶಲವ ಕೇಳುವಳು
ನೇಹದೊಳೆನ್ನನು ನೇವರಿಸುವಳು
ಆನತಶರಣಗಣವ ಹರಸುವಳು
ಕೈಜೋಡಿಪ ಮರುಳ್ಗಳಿಗೊಲೆಯವಳು
ನೋಟವೆರೆದು ನರವಿಯ ನಲಿಸುವಳು. ೪೩೦
ಈ ಸಾನ್ನಿಧ್ಯದಿ ನಮಗತಿಹರ್ಷಂ
ನವಚೈತನ್ಯದ ವಿದ್ಯುತ್ ಸ್ಪರ್ಶಂ
ಬಗೆಗಪ್ಪುದು ಸದ್ಭಾವೋತ್ಸಾಹಂ
ಆ ಭಾವಕು ಉಚ್ಚಾರೋತ್ಸಾಹಂ.
ವಾಣಿಯ ಕೈ ಪರಿವದು ವೀಣೆಯಡೆ
ಮಾಧವ ಕೊಳಲೆತ್ತುವನಧರದೆಡೆ
ವಸಂತನುದಯದಿ ತಳಿರೊಡೆವಂದ
ಸ್ವರ ಮೂಡುವುವೀ ವಾದ್ಯಗಳಿಂದ.
ಕಟಿಯ ಮೇಲೆ ಭಂಗಿಯು ಕೈ ತಹನು
ಭೃಂಗಿರಿಟಿಯು ತಾಳವ ದನಿಸುವನು ೪೪೦
ನನ್ನ ಮೃದಂಗದ ಮಾರ್ಬನೆಯನೆ ಥೋಂ
ತುಂಬುರು ವಿಧಿಯೊಡನೆನುವನು ಹರ ಓಂ
ಹರ ಓಮೆನುವುದು ಮಾತೆಯ ಕೊರಲು
ಬಹು ವಾದ್ಯಸ್ವರ ಗುಂಫನಗೊಳಲು
ಹರ ಓಂ ಹರ ಓಂ ಹರಹರ ಓಂ
ಶಂಕರ ಓಂ ಶುಭಕರ ಓಂ ಶಿವ ಓಂ
ತ್ರಿಪುರಹರ ಓಂ ವ್ಯೋಮಕೇಶೋಂ
ಚಂದ್ರಚೂಡೋಂ ಚೇತನೇಡ್ಯೋಂ
ಸ್ಮರಾಂತಕ ಅಂತಕಾಂತಕ ವಿಭೋ
ತಮೋಹಂತ ವಿಶ್ವಯಂತ ಶಂಭೋ! ೪೫೦

ಇಂತಾ ಕೈಲಾಸದಿ ಕದಿರಿಡುತಿರೆ
ಸಂಸ್ತುತಿ, ಭರ್ಗನ ಬಗೆ ಬಾಹ್ಯಕೆ ಬರೆ-
ವಿಚಲಿತನಾಗುತಲಾ ನುತಿಯಾಲಿಸಿ
ತನ್ನೊಳತೇಜವ ಹೊರಮೊಗವಾಗಿಸಿ
ಕಂದೆರೆವನಾಗ ಯೋಗಿನಾಂಪತಿ
ಅಪ್ಪುದಾತನಿಗೆ ಸಂಸ್ಕೃತಿಸ್ಕೃತಿ.
ಎಡದ ಗಿರಿಜೆ ಹೊರನಿಂತುದನರಿವಂ
ಅದು ತಾನೆನ್ನುವ ಭೇದವನರಿವಂ
ನುತಿಯಾಹುತಿಯಿಂದುಜ್ಜ್ವಜಲಿಸುವನು
ಜಾಯಾಸ್ಮಿತದಿಂ ಪ್ರಜ್ಜ್ವಲಿಸುವನು ೪೬೦
ಹರಿಯ ಮುರಳಿ ಸರಸತಿಯ ವಿಪಂಚಿ
ಮೃದಂಗ ಝಲ್ಲರಿ ತಾಳ ಪಳಂಚಿ
ಅರಿವಿನ ತುದಿಯೊಳಗಾಡುವ ಭವದ
ರಸವಂ ತರುತಿರಲೆದೆಗೆ ವಿಧ ವಿಧ
ಬಹುನದಿ ನೆರೆಯುವ ಕಡಲಂತಿರುವಂ
ನಾಟ್ಯೋನ್ಮಾದಕೆ ಎಡೆಗೊಡುತಿರುವಂ
ಮಹಾಮಾಯೆ ನರ್ತಿಸುತಿರೆ ಮುಂದೆ
ನಿಟ್ಟಿಸುತ್ತಿರುವಂ ಬಲುಬೆರಗಿಂದೆ.
ಹಿನ್ನೆಲೆಯಾಗಿರೆ ವಾದ್ಯೋದ್ಗೀಥಂ
ಮನಮಂ ಬಾಜಿಸೆ ಗೌರೀನೃತ್ತಂ ೪೭೦
ಸುಭ್ರೂಭಂಗದಿನಗಚಲನದಿಂ
ಮೃಷಾರೋಷದಿಂ ಮಂದಹಾಸದಿಂ
ಬಾ ಬಾ ಒಡನಾಡೆನ್ನುವ ಸನ್ನೆಗೆ
ಅಸ್ತು ಎನ್ನುತಾ ಹಿಮಾದ್ರಿ ಕನ್ನೆಗೆ
ಮಾನಟರಾಜಂ ಪೀಠವನುಳಿವಂ
ನಾಗಾಜಿನ ನೇಪಥ್ಯವ ಕೊಳುವಂ
ತನುಕಟಿಕಂಕಣಕಪರ್ದಾಹಿಗಳ್‌
ಹೆಡೆಯಿಡುವೊಲು ನಡೆವನು ಮೃಡನೀಗಳ್
ಬರುವನು ಭೀಮಂ ರಂಗಸ್ಥಲಕೆ
ಧ್ಯಾನಸ್ಥಲದಿಂ ವಿಷಯಸ್ಥಲಕೆ ೪೮೦
ಕರಣಾತೀತಂ ಗೋಚರನಾಗಿ
ಸ್ಥಾಣು ಸುಸ್ಥಿರಂ ಸಂಚಲನಾಗಿ
ಭವಪ್ರಸ್ಪಂದಕಿದಂತಃಸ್ಪಂದಂ
ಇದು ನಡೆವಂತದು ಇದು ಸ್ವಚ್ಛಂದಂ
ಎನಲೀ ಗತಿಛಂದವನನುಸರಿಸಿ
ಮೇಳಂ ಮೊಳಗಿಡೆ, ಅಮರರ್‌ ವೆರಸಿ
ಬೆಳೆವುದು ಶಂಕರಲಲಿತಾಲಾಸ್ಯಂ
ಸೌಂದರಾಗಮಂ ಸಕಲೋಪಾಸ್ಯಂ
ಹರಿವಾಣೀ ಬಾಜನೆಗನುಕೂಲಂ
ದಾಂಗುಡಿಯಿಡುವೊಲು ಮಾಯಾಜಾಲಂ ೪೯೦
ಕರಿಮುಗಿಲೊಳು ಸೆಳೆಮಿಂಚುಗಳಂತೆ
ಋತುಋತು ಸಂಧ್ಯಾರಾಗಗಳಂತೆ
ಸಂಯಮಿಗಳ ಸಂಮೆಓದಗಂತೆ
ಶಕ್ತರ ಕರುಣಾರೀತಿಗಳಂತೆ
ನಲ್ಲರು ತೋರುವ ಪ್ರೀತಿಗಳಂತೆ
ಭಾವುಕ ಜನಗಳ ಭಾವಗಳಂತೆ
ಜವ್ವನದುಲ್ಲಸದಾಟಗಳಂತೆ
ಹೊಮ್ಮಿನ ಬಾಳ್ವೆಯ ಬಿನದಗಳಂತೆ
ಬಳೆವುದು ಮಾತಾಪಿತರೀಲಾಸ್ಯಂ
ನಲವಿಂ ಪೊರೆಯೇರಲು ಚತುರಾಸ್ಯಂ ೫೦೦
ಋಷಿ ಎನಿಪನಾತನಿದಂ ಕಂಡವಂ.
ಬಳಿಕ ಬಳೆವುದಾ ರುದ್ರತಾಂಡವಂ.

ಎಲ್ಲರ ಬಗೆಯನು ಮೀರುವ ಬಗೆಗೆ
ಶಿವನಿರವೇರುವುದೊಮ್ಮೆಗೊಮ್ಮೆಗೆ
ಡಮರುಗವಾಡಿಸುವಂ ನಟರಾಜಂ
ಮನಮೆಂಬೀ ತಿಮಿರಕೆ ರವಿತೇಜಂ
ಸೃಷ್ಟಿಸ್ಥಿತಿಸಂಹಾರಗಳೋಜಂ
ದೂರದ ಗುಡುಗೆನೆ ನಿಮಗಿದು ಸಾಜಂ
ಇದೆ ಭವನಾಟ್ಯೋನ್ಮಾದದ ತಾನಂ
ಡಮ ಡಮ ಡಮ ಡಮ ಶಬ್ದವಿತಾನಂ. ೫೧೦
ಸರಸತಿ ವೀಣಾಝಂಕೃತಿ ಮರಸಿ
ಬ್ರಹ್ಮನ ಶ್ರುತಿಘೋಷವ ಸಂವರಿಸಿ
ಹರಿಮುರಲೀನಾದವನಾವರಿಸಿ
ಸಂತರ ಸಂಸ್ತುತಿಗಳನೊತ್ತರಿಸಿ
ಹಬ್ಬುವುದೀ ದನಿ ಡಮರುವಿನಿಂದ
ಶಬ್ದ ಪ್ರಲಯದ ಶಬ್ದದ ಚೆಂದ.
ವಾಗರ್ಥಂ ನಿರ್ದ್ವಂದ್ವಮೀಯೆಡೆ
ಋತುವಂತರ್ಹಿತಮಪ್ಪುದೀಯೆಡೆ.
ಪಸರಿಸಲಿಂತೀ ಡಮುರುಗನಾದಂ
ಹರನಾಟ್ಯಪದಾಹತಿ ಸಂವಾದಂ ೫೨೦
ಗಣ ಬಾಜಿಸೆ ಡಿಂಡಿಮದನುವಾದಂ
ಭರ್ಗನಿಗಪ್ಪುದು ತಾಂಡವಮೋದಂ.
ಮರುಳ್ಗಳ ಪಡೆ ಹರೆ ಡವುಡೆಗಳೆತ್ತಿ
ಮುಂದೆ ಬಹವು ಶಿವಶಿವೆಯರ ಸ್ತುತಿ
ಢಮಕು ಢಮಂ ಢಮಕುಡಮಂ ಟ್ರೊಳಢಂ
ಬಿರಿವುದು ಬಿರುದನಿಗಾ ಬ್ರಹ್ಮಾಂಡಂ
ಬಣ್ಣಿಪೆನೆಂತಾ ಭವ್ಯನಾಟ್ಯವಂ
ಭದ್ರಕಾಳಿ ಶಿವರುದ್ರನಾಟ್ಯವಂ!
ಅಂಗವೊಂದೆ ಛಂದವೊಂದೆ ಎನಲು
ತಿರ್ರನೆ ತಿರುಗುವರುನ್ಮಾದದೊಳು. ೫೩೦
ಕರಣವಿಷಯಸಂಘರ್ಷಣವಿದುವೋ
ಈ ಘರ್ಷಣ ತಹ ಉನ್ಮದವಿದುವೋ
ಈ ಸಂಭ್ರಮ ಸಚ್ಚಿದಾನಂದವೋ
ಈ ರೀತಿ ಪರಂಜ್ಯೋತಿಯಂದವೋ
ಪರಂಜ್ಯೋತಿಯಿಂ ತಿಮಿರಂ ಬಂದುದೊ
ಇದರೊಳು ತೂರುತ ತೇಜಂ ಕಂಡುದೊ
ಈ ತೇಜಂ ಕೆಡೆ ಜಡಂ ತೋರಿತೋ
ಈ ಜಡವೊಡೆಯುತ ಪ್ರಾಣಂ ತೂರಿತೊ
ಪ್ರಾಣವ ತುಳಿಯುತ ಮನಂ ಮೂಡಿತೋ
ಮನವಂ ಹಿಂಚಿಸಿ ಜ್ಞಾನಂ ಕೂಡಿತೊ ೫೪೦
ಜ್ಞಾನವನೇ ವಂಚಿಸಿ ಮರಳಿ ಜಡಂ
ಮೇಲ್ವರಿಯುತ ಬಂದಿತೊ ದಢಂ ದಢಂ!

ಇಂತಾ ಮಾಕಾಳಿಯು ಕುಣಿಯುತ್ತಿರೆ
ಅಡಿಗಡಿಗೂ ಭದ್ರನ ಸೆಣಸುತ್ತಿರೆ.
ಇರ್ವರು ಗೆಲ್ಲದೆ ಸೋಲದವೋಲು
ಒಬ್ಬರನೊಬ್ಬರು ಸ್ಪರ್ಧಿಸುತಿರಲು
ವರ್ಧಿಸುವುದು ಹರನಾಟ್ಯೋನ್ಮಾದಂ
ವರ್ಧಿಸುವುದು ಡಮರುಗ ಸನ್ನಾದಂ
ನಾಮರೂಪದಿಕ್ಕಾಲವಳಿವೊಲು
ಮಹಾನಾಟ್ಯವಂ ಕುಣಿವುದು ಕಾಲು ೫೫೦
ಮುಡಿ ಬಿಡುವುದು ಗಂಗಾಪ್ರಲಯಜಲಂ
ಜಡೆ ಹರಡಲು ಕೆಡುವುದು ವ್ಯೋಮತಲಂ
ಎತ್ತಲೆತ್ತಲೋ ಕಿತ್ತೆಸಳಂತೆ
ತೇಲಿಪೋಹನಹ ಚಂದ್ರಮನಿಂತೆ
ಈಗಳಿಲ್ಲ ಇಲ್ಲ ರವಿಹೊಳಹು
ಈಗಳೊಂದೆ ಒಂದೆ ನಗೆಹೊಳಹು
ಶಿವನಟ್ಟಹಾಸಧವಳಪ್ರಕಾಶ
ವಿಷಮಲೋಚನದ ವಿಲಯಪ್ರಕಾಶ.
ಈ ಬೆಳಕಿಗೆ ಈಗಳೊಂದೆ ತಿಮಿರ
ಹುಂಕಾರದಿ ತುಳುಕುವ ಗಳದ ಗರ ೫೬೦
ಈ ಗರತಮದೊಳೆ ನಿರ್ಲಯವೆಲ್ಲ
ಸಕಲಚರಾಚರ ಸಂಸ್ಕೃತಿಯೆಲ್ಲ
ನಿಟಿಲನಯನದಸಮತೇಜದೊಳಗೆ
ಹರಿವಿರಂಚಿಸುರಸಂತರು ಕರಗೆ
ಒಂದನೊಂದು ಸಮತೂಗಿಸುವಂದಂ
ನಿರುಕಿಸಿ ಕುಣಿವಂ ಜ್ಞಾನಾನಂದಂ
ಸುಂದರವದನದಿ ಮಹದಾನಂದಂ
ತೋರುತಲಿಹುದೈ ಪರಮಾನಂದಂ
ಇದೆ ಆ ತಮತೇಜಗಳಾಧಾರಂ
ರುದ್ರನ ಭದ್ರಸ್ಮಿತರುಚಿಪೂರಂ ೫೭೦
ಕಾಳಿ ಬೆರೆವಳೀ ಮೂರು ತೆರದೊಳೂ
ಗರಳ ತಿಮಿರದೊಳು ನೊಸಲ ತೇಜದೊಳು
ಇವನಾಧರಿಸುವ ದಿವ್ಯಸ್ಮಿತದೊಳು
ತ್ರಿಗುಣಾತ್ಮಕೆ ತ್ರಿಗುಣಸ್ಥಾಯಿಯೊಳು
ಇದುವೇ ಶಿವಮದ್ವೈತಂ ಶಾಂತಂ
ಇದನರಿವರಿವಪ್ಪುದು ಸಂಭ್ರಾಂತಂ!

ನಮಶ್ಶಂಕರ ತಾಂಡವೇಶ್ವರ ಭೋ
ನಮಶ್ಶಿವ ಶಿವ ಸುಂದರೇಶ್ವರ ಭೋ
ಅಷ್ಟಮೂರ್ತಿಗಳೆತ್ತಿ ಕುಣಿವನೆ ಭೋ
ಸಕಲಸೃಷ್ಟಿಯನೊತ್ತಿ ಕುಣಿವನೆ ಭೋ ೫೮೦
ನಮೋ ವಿಷಧರ ವಿಷಮನಯನ ವಿಭೋ
ನಮಶ್ಚಿನ್ಮಯ ಸದಾನಂದ ಪ್ರಭೋ
ಎಲ್ಲ ಕರಗುವ ಪರಮಸಮ್ಮುದವೇ
ಎಲ್ಲ ರುಚಿಗಳ ಕೊಳ್ವ ರಸಪದವೇ
ಭಾನುಬುದ್ಬುದ ತೇಜದಾಗರವೇ
ಶ್ರುತಿಯೆ ದೆಸೆಗೆಡೆ ಜ್ಞಾನಸಾಗರವೇ
ಎಲ್ಲರಹಮನು ಹೀರುವನೆ ಹರನೇ
ಎಲ್ಲರಿರವನು ಮೀರುವನೆ ಪರನೇ
ಭೋ ಮಹಾನಾಟ್ಯಾಟ್ಟಹಾಸನೆ ಓಂ
ಲೀನಜಾಯಾಮಂದಹಾಸನೆ ಓಂ ೫೯೦
ಏಕಮೇವಾದ್ವಿತೀಯಾ ವಂದೇ
ಶರಣು ಕರುಣಿಸು ಕರುಣಿಸೈ ತಂದೆ.”

ಇಂತಾ ತಾಂಡವವಂ ಪರಿಭಾವಿಸಿ
ತಾದಾತ್ಮದೊಳಾ ನಟನಂ ಜಾನಿಸಿ
ಹರಕುಮಾರನಾನಂದದ ಯೋಗದಿ
ಕಣ್ಮುಚ್ಚಿರಲಾ ಧ್ಯಾನದ ಭೋಗದಿ,
ಆ ಮಹೋತ್ಸವದ ಮಹದನುಭೂತಿಯ
ಪಡೆಯಲು ನಾನೀ ದಿವ್ಯವಿಭೂತಿಯ
ನಿರುಕಿಸುತಿರೆ ನೆರೆಯರ್ತಿ ಭಕ್ತಿಯಿಂ
ಜಾನಿಸುತ್ತಲಾ ಪರಮಶಕ್ತಿಯಂ ೬೦೦
ಆ ಮಹಾನಾಟ್ಯದೇರಂ ತೀರಂ
ಆ ನಲ್ಮೆಯ ಮುನ್ನೀರಿನ ಮೀರಂ
ಭಾವಿಸಿ ಬಾಹ್ಯ ಸ್ಪರ್ಶವಿಮುಕ್ತಂ
ದಿವ್ಯಾದ್ಭುತ ಸದ್ದರ್ಶನಯುಕ್ತಂ
ನಾನಾಗಿರೆ, ಬಗೆ ಕೊಚ್ಚಿ ಹೋಗಿರೆ
ದುಸ್ತರವಾಗಿರೆ ಈ ದಡಕೆ ಬರೆ,
ಗಣೇಶದೇವನ ತಾರಕಸ್ಮಿತವ
ನೆಮ್ಮಲು ಬಯಸುತಲಾತ್ಮದ ಹಿತವ
ಕಂದೆರೆಯಲು, ಕಣ್‌ಮರೆಯಾಗಿರ್ದಂ
ಬಂದಂತೆಯೆ ಮಾಯೆಗೆ ಸಂದಿರ್ದಂ ೬೧೦
ಎನಗೀ ಕಣಸಿನ ನಲ್ವರವಿತ್ತು
ವೆಗ್ಗಳಿಸಿರೆ ಭಾವದ ಸಂಪತ್ತು,
ಓಂ ಶಿವಮಸ್ಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವು ಮನೆಯ ಮಕ್ಕಳು
Next post ಕಾಡುತಾವ ನೆನಪುಗಳು – ೧೪

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…