ಜೈಲ್ ಸಿಂಗ್ ನೆನಪಿನಲ್ಲಿ….

ಜೈಲ್ ಸಿಂಗ್ ನೆನಪಿನಲ್ಲಿ….

ದಿನಾಂಕ ೨೫-೧೨-೧೯೯೪ ರಂದು ನಿಧನರಾದ ಜೈಲ್ ಸಿಂಗ್ ಅವರು ನಮ್ಮ ದೇಶ ಕಂಡ ಅಪರೂಪದ ಅಧ್ಯಕ್ಷರಲ್ಲಿ ಒಬ್ಬರು. ಆದರೆ ಸಕ್ರಿಯ ರಾಜಕೀಯ ದಿಂದ ಮೇಲೇರುತ್ತ ಇಂದಿರಾ ಗಾಂಧಿಯವರ ಕೃಪೆಯಿಂದ ರಾಷ್ಟ್ರಾಧ್ಯಕ್ಷರಾದರೆಂಬ ಕಾರಣಕ್ಕೆ ಅವರ ವ್ಯಕ್ತಿತ್ವದ ಕೆಲವು ಮುಖ್ಯ ಸಂಗತಿಗಳಿಗೆ ‘ಮಾಧ್ಯಮಗಳ ಮಹತ್ವ’ ಲಭ್ಯವಾಗಲಿಲ್ಲ. ಕೃತಜ್ಞತೆಯ ಭಾರದಲ್ಲಿ ಬೌದ್ಧಿಕ ವಿವೇಚನೆಯನ್ನು ಒತ್ತಟ್ಟಿಗಿಟ್ಟು ಭಾವೋನ್ಮಾದಕ್ಕೆ ತುತ್ತಾದ ಜೈಲ್‌ಸಿಂಗ್ ‘ಇಂದಿರಾ ಅವರು ಕಸ ಗುಡಿಸಲು ಹೇಳಿದರೂ ನಾನು ಸಿದ್ಧ’ ಎಂದಿದ್ದು ಅದ್ಭುತ ಪ್ರಚಾರ ಪಡೆಯಿತು. ಇದೇ ರೀತಿ ಬರೂವ ಎಂಬ ಕವಿ-ರಾಜಕಾರಣಿ ‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ’ ಎಂದು ಪೂಸಿ ಹೊಡೆದದ್ದು ಪ್ರಸಿದ್ಧವಾಯಿತು. ಬರೂವ ಮಾಡಿದ ಬಾಯಿಗೆ ಅವರಲ್ಲಿದ್ದ ‘ಕವಿ’ ಬಲಿ ಆಗಿಬಿಟ್ಟ. ಮಾಧ್ಯಮಗಳು, ವಿಜೃಂಭಿಸಿದ ವಿಷಯಗಳೇ ಜನಾಭಿಪ್ರಾಯದ ರೂಪ ಪಡೆದು ಇವರ ವ್ಯಕ್ತಿತ್ವವನ್ನು ವಿರೂಪಗೊಳಿಸಿದವು. ಜೈಲ್‌ಸಿಂಗ್ ಅವರ ವಿಷಯದಲ್ಲೂ ಅಷ್ಟೆ, ಕಸ ಗುಡಿಸುವ ಜೈಲ್‌ಸಿಂಗ್ ಪ್ರಸಿದ್ಧನಾದಷ್ಟು ‘ಗ್ಯಾನಿ’ಯಾದ ಜೈಲ್ ಸಿಂಗ್ ಪ್ರಸಿದ್ಧವಾಗಲಿಲ್ಲ. ಇದೆಲ್ಲ ಸ್ವಯಂಕೃತಾಪರಾಧವೆಂಬುದು ನಿಜವಾದರೂ, ಅದರಾಚೆಗಿನ ಸತ್ಯವನ್ನು ಶೋಧಿಸುವುದು ವ್ಯಕ್ತಿತ್ವದ ಇತರೆ ಮುಖಗಳನ್ನು ಪರಿಚಯಿಸುವುದು ಅಕ್ಷರ ಸಂಸ್ಕೃತಿ ಸೌಜನ್ಯವಾಗಬೇಕಿತ್ತು. ಈ ಇಬ್ಬರು ರಾಜಕಾರಣಿಗಳ ಹೊಣೆಗೇಡಿ ಹೇಳಿಕೆಗಳ ‘ಸದ್ಗುಣ’ ಅಕ್ಷರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬಿಟ್ಟರೆ, ಅವರಿಗಿಂತ ಇದು ಹೇಗೆ ಭಿನ್ನವಾದೀತು? ಶಕ್ತಿ ರಾಜಕೀಯದ ನಡುವೆ ನೀರು ಪಾಲಾಗುವ ಸಂವೇದನಾಶೀಲ ಗುಣಕ್ಕೆ ಈ ಇಬ್ಬರ ಹೇಳಿಕೆಗಳು ಒಂದು ಉದಾಹರಣೆ ಆಗಬಹುದೆಂದು ಯೋಚಿಸಲು ಸಾಧ್ಯ, ಅಲಭ್ಯ ಅವಕಾಶಗಳು ಹತ್ತಿರಕ್ಕೆ, ತೀರ ಹತ್ತಿರಕ್ಕೆ ಬಂದು ಅಪ್ಪಿಕೊಂಡಾಗ ನಮ್ಮ ಹಳ್ಳಿ ಮೂಲ ರಾಜಕಾರಣಿಗಳಿಗೆ ಆಗುವ ದಿಗ್ಭ್ರಮೆ ಮತ್ತು ಮೂಡುವ ವಿಧೇಯತೆಗಳಿಗೆ ಈ ಇಬ್ಬರ ಹೇಳಿಕೆಗಳು ಪುರಾವೆಯೆಂಬ ಸಾಮಾಜಿಕ-ಆರ್ಥಿಕ ವಿಶ್ಲೇಷಣೆಯೂ ಸಾಧ್ಯ. ಆದರೆ ಈ ಸಾಧ್ಯತೆಗಳು ರಿಯಾಯಿತಿಗಳಾಗಬಾರದು. ಅದರಂತೆ ಮಾಧ್ಯಮಗಳ ಅರೆಬೆಂದ ತೀರ್ಮಾನಗಳಿಗೂ ರಿಯಾಯಿತಿಯಿರಬಾರದು.

ಇಷ್ಟೆಲ್ಲ ಬರೆಯಲು ಕಾರಣವಿದೆ. ಗ್ಯಾನಿ ಜೈಲ್‌ಸಿಂಗ್ ಅವರ ದೌರ್ಬಲ್ಯಗಳು ಏನೇ ಇರಲಿ; ಅವರ ದುರ್ಬಲ ದೇಶಾಧ್ಯಕ್ಷರಂತೂ ಆಗಿರಲಿಲ್ಲ. ಸಕ್ರಿಯ ರಾಜಕಾರಣಿಯ ಏರಿಳಿತಗಳು, ವ್ಯಕ್ತಿ ಸಂಬಂಧಗಳು ಮತ್ತು ಸಿಖ್ ಧರ್ಮ ನಿಷ್ಠೆಗಳು ಇವರ ಅವಿಭಾಜ್ಯ ಭಾಗವಾಗಿದ್ದಾಗಲೂ ದೇಶಾಧ್ಯಕ್ಷನ ದೃಷ್ಟಿ, ಸಾಮಾಜಿಕ ಸಂಬಂಧ ಮತ್ತು ಸರ್ವಧರ್ಮ ಪ್ರೀತಿಗಳಿಗೆ ಚ್ಯುತಿ ಇರಲಿಲ್ಲ. ‘ಮಣ್ಣಿನ ಮನೆಯಿಂದ ರಾಷ್ಟ್ರಪತಿ ಭವನಕ್ಕೆ’ ಬಂದ ಈ ರಾಜಕಾರಣ ತನ್ನ ಮಿತಿಗಳನ್ನು ಮೀರಿದ್ದೂ ಘನಗಂಭೀರ ಮುಖವಾಡದ ಮೂಲಕವಲ್ಲ; ಸ್ವಾಭಾವಿಕವಾದ ಸಹಜ ನಡವಳಿಕೆ ಮೂಲಕ, ತನ್ನ ಮಿತಿಗಳ ಮಧ್ಯೆಯೂ ಈ ವ್ಯಕ್ತಿ (ರಾಷ್ಟ್ರಾಧ್ಯಕ್ಷನಾಗಿ) ನನ್ನಂಥವರಿಗೆ ಇಷ್ಟವಾಗಲು ಕಾರಣವಾಗಿರುವುದಕ್ಕೆ ಸಹಜ ನಡವಳಿಕೆ ನೆಲೆಗಳು ಮುಖ್ಯ ಕಾರಣವಾಗಿದೆ. ‘ಮಣ್ಣಿನ ಮನೆ’ಯಿಂದ ಮೇಲೆದ್ದ ಸಾಮಾಜಿಕ ಸಂಭವವೂ ಕಾರಣವಾಗಿದೆ. ಮೆಟ್ರಿಕ್ಯುಲೇಷನ್ ಹಂತದವರೆಗೆ ಓದಿದ, ಸರಿಯಾಗಿ ಇಂಗ್ಲೀಷ್‌ಬಾರದ ವ್ಯಕ್ತಿಯೊಬ್ಬ ಈ ದೇಶದ ಅಧ್ಯಕ್ಷನಾಗಿ ಸ್ಥಾನಗೌರವವನ್ನು ಗಾಳಿಗೆ ತೂರಲಿಲ್ಲವೆಂಬ ಸಮಾಧಾನ ನಿಜಕ್ಕೂ ಸಾಮಾಜಿಕವಾದದ್ದು. ಆ ಕಾರಣಕ್ಕಾಗಿಯೇ ಮಹತ್ವದ್ದು, ಮತ್ತೊಂದು ಮುಖ್ಯ ಸಂಗತಿಯೆಂದರೆ ಜೈಲ್‌ಸಿಂಗ್ ಅವರ ಕಾಲದಲ್ಲಿ ಜನಸಾಮಾನ್ಯರಿಗೆ ರಾಷ್ಟ್ರಪತಿ ಭವನದ ಬಾಗಿಲು ತೆರೆದಷ್ಟು ಬೇರೆ ಯಾರ ಕಾಲದಲ್ಲಿ ತೆರೆದಿರಲಿಲ್ಲ. ಜನಸಮುದಾಯದ ಸಂಪರ್ಕವಿಲ್ಲದೆ ಚಿನ್ನದ ಪಂಜರದಲ್ಲಿ ಪಕ್ಷಿಯಾಗಿರಲು ಸಾಧ್ಯವಾಗದೆ ಸಾಕಷ್ಟು ಜನರನ್ನು ಭೇಟಿಯಾಗುತ್ತ ಸ್ವಲ್ಪವಾದರೂ ಸಹಜ ಸ್ವಭಾವದಲ್ಲಿರಲು ಪ್ರಯತ್ನಿಸಿದ ಜೈಲ್‌ಸಿಂಗರನ್ನು ಅವರು ಅಧ್ಯಕ್ಷರಾಗಿದ್ದಾಗಲೇ ಇಂಗ್ಲಿಷ್ ಪಾಕ್ಷಿಕ ಪತ್ರಿಕೆಯೊಂದು ‘ಜನತೆಯ ಅಧ್ಯಕ್ಷ’ (ಪೀಪಲ್ ಪ್ರೆಸಿಡೆಂಟ್) ಎಂದು ಕರೆಯಿತು. ಹೀಗೆ ಕರೆದದ್ದು ಒಂದು ಅಪರೂಪದ ಘಟನೆಯೆಂದು ಹೇಳಬೇಕು.

ನಾನು ಓದಿದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದರೆ ಜೈಲ್ ಸಿಂಗರ ಮತ್ತೊಂದು ಮುಖ್ಯ ಮುಖದ ಅರಿವಾಗುತ್ತದೆ. ಒಮ್ಮೆ ಜೈಲ್ ಸಿಂಗರ್ ದೇವಸ್ಥಾನ ವೊಂದಕ್ಕೆ ಭೇಟಿ ಕೊಡಬೇಕಾಯಿತು. ಇದಕ್ಕೆ ಒಪ್ಪಿದ ಜೈಲ್‌ಸಿಂಗರಿಗೆ ಆನಂತರ ಗೊತ್ತಾಯಿತು -ಈ ದೇವಸ್ಥಾನಕ್ಕೆ ಆಸ್ಪೃಶ್ಯರಾದಿ ಯಾಗಿ ಕೆಳವರ್ಗದ ಜನಾಂಗಗಳಿಗೆ ಪ್ರವೇಶಾವಕಾಶವಿಲ್ಲ ಎಂದು. ಆಗ ಅವರು ತಮ್ಮ ದೃಢ ನಿರ್ಧಾರವನ್ನು ಪ್ರಕಟಿಸಿದರು. ‘ಜನಸಾಮಾನ್ಯರ ಕೆಳಜಾತಿ ವರ್ಗದವರಿಗೆ ಪ್ರವೇಶಾವಕಾಶ ವಿಲ್ಲದ ದೇವಸ್ಥಾನಕ್ಕೆ ನಾನು ಬರುವುದಿಲ್ಲ.’

ಜೈಲ್‌ಸಿಂಗರು ರಾಷ್ಟ್ರಾಧ್ಯಕ್ಷರಾಗಿ ಈ ಮಾತನ್ನು ಹೇಳಿದ್ದರೆಂಬುದನ್ನು ಗಮನಿಸಬೇಕು. ಇದು ನನಗೆ ನೆನಪಿರುವಂತೆ ತೀರ ಸಣ್ಣ ಸುದ್ದಿಯಾಗಿ ಪ್ರಕಟವಾಯಿತು. ಅದೆಷ್ಟು ಸಣ್ಣ ಸುದ್ದಿಯೆಂದರೆ ಹುಡುಕದೆ ಅದನ್ನು ಓದಲು ಸಾಧ್ಯವಿಲ್ಲ. ಮಾಧ್ಯಮಗಳು ಜೈಲ್‌ಸಿಂಗರ ಸಾಮಾಜಿಕ ಮುಖಗಳನ್ನು ಮುಖ್ಯವಾಗಿಸಿಕೊಂಡು ನೋಡಿದ್ದರೆ ಬೇರೊಂದು ದೃಷ್ಟಿಕೋನ ಸಾಧ್ಯವಾಗುತ್ತಿತ್ತು. ಮಾಧ್ಯಮದ ಮತ್ತು ಹತ್ತಿರದ ಎಲ್ಲ ಜಾತಿ-ವರ್ಗ ಜನಗಳು ಸಾಮಾಜಿಕ ದೃಷ್ಟಿಕೋನಕ್ಕೆ ಬದಲಾಗಿ ದೃಷ್ಟಿಕೋನಕ್ಕೆ ಉದಾಹರಣೆ ಯಾಗುತ್ತಿರುವುದು ವಿಷಾದದ ಸಂಗತಿ. ಇಂಥ ಸನ್ನಿವೇಶದಿಂದ ನಮ್ಮ ನಡುವೆ ಅನೇಕ ವ್ಯಕ್ತಿತ್ವಗಳ ಬಗ್ಗೆ ಬರೀ ವಿಕೃತ ಚಿತ್ರಗಳು ಸಿಕ್ಕುತ್ತವೆ. ನನ್ನ ಈ ಮಾತು ಸಾರ್ವಕಾಲಿಕವಲ್ಲ; ಸರ್ವಮಾನ್ಯವೂ ಅಲ್ಲ. ಆದರೆ ಸತ್ಯದೂರವಂತೂ ಅಲ್ಲ.

ಅಸ್ಪೃಶ್ಯರಾದಿಯಾಗಿ ಕೆಳ ಜಾತಿ-ವರ್ಗಗಳಿಗೆ ಪ್ರವೇಶವಿಲ್ಲದ ದೇವಾಲಯಕ್ಕೆ ಹೋಗದೆ ಧೀಮಂತ ನಿಲುವು ತಳೆದ ಜೈಲ್ ಸಿಂಗ್ ಮೂಲತಃ ಸಂಪ್ರದಾಯಗಳ ವಿರೋಧಿಯಲ್ಲ. ಹೆಚ್ಚೆಂದರೆ ಸುಧಾರಣೆಗಳನ್ನು ಸಂವೇದನೆಯಾಗಿಸಿಕೊಳ್ಳಬಲ್ಲ ಅಂತಃಶಕ್ತಿಯುಳ್ಳವರು. ಇವರ ಒಂದು ದಿಟ್ಟ ನಿಲುವು ಅತಿ ಮಹತ್ವವೆಂದು ನನ್ನಂಥವರಿಗೆ ಅನ್ನಿಸುವುದು ನಮ್ಮ ಸಾಮಾಜಿಕ ಸುಧಾರಣೆಗಳ ಮಿತಿಗೆ ಒಡ್ಡಿದ ವ್ಯಾಖ್ಯಾನ ಹೌದು. ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಸಂಬಂಧಿಸಿದ ಒಂದು ಘಟನೆ ನೆನಪಿಗೆ ಬರುತ್ತದೆ. ಪುರಿ ಜಗನ್ನಾಥನ ದೇವಸ್ಥಾನಕ್ಕೆ ಇಂದಿರಾ ಗಾಂಧಿಯವರನ್ನು ಬಿಡುವುದಿಲ್ಲವೆಂದು ಪುರಿಯ ಜಗದ್ಗುರುಗಳು ಅಪ್ಪಣೆ ಕೊಡಿಸಿದ್ದರು. ಇಂದಿರಾ ಗಾಂಧಿಯವರು ಅನ್ಯಧರ್ಮಿಯನನ್ನು ವಿವಾಹವಾಗಿದ್ದರಿಂದ ಅಪ್ಪಟ ಹಿಂದೂವಲ್ಲವೆಂದೂ ಆ ಕಾರಣಕ್ಕೆ ಜಗನ್ನಾಥ ದೇವಾಲಯಕ್ಕೆ ಪ್ರವೇಶವಿಲ್ಲವೆಂದೂ ತಿಳಿಸಲಾಗಿತ್ತು. ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ಅದನ್ನು ಪ್ರತಿಭಟಿಸಲಿಲ್ಲ. ಮೌನ ವಹಿಸಿದ್ದರು. ಈ ‘ಮೌನ’ದ ಇತಿಹಾಸ ಎಷ್ಟು ಕ್ರೂರವಾದುದು! ರೂಪಾ ಕನ್ವರ್ ಎಂಬ ಮಹಿಳೆ ಸಹಗಮನ ಮಾಡಿಕೊಂಡಾಗ ರಾಜೀವ್ ಗಾಂಧಿಯವರು ಒಂದು ತಿಂಗಳು ಮೌನ ವಹಿಸಿದರು. ವಿ.ಪಿ. ಸಿಂಗರಾದಿಯಾಗಿ ಪ್ರಮುಖ ರಾಜಕಾರಣಿಗಳು ಈ ವಿಷಯ ತಮ್ಮದಲ್ಲ ವೆಂಬಂತೆ ಕೆಲಕಾಲ ವರ್ತಿಸಿ ಮೌನ ತಳೆದರು. ಹೀಗೆ ಮನದಲ್ಲಿ ಮಣ್ಣಾಗುವ ಮಾನವೀಯತೆಯ ದುರಂತವನ್ನು ನಮ್ಮ ಚರಿತ್ರೆ ದಾಖಲಿಸುತ್ತ ಬಂದಿದೆ. ಆದ್ದರಿಂದ ‘ಮೌನ’ವನ್ನು ಮುರಿಯುವ ಒಂದು ಮಾನವೀಯ ಮಾತು ಸಹ ಇಲ್ಲಿ ಚಾರಿತ್ರಿಕ ಸಂಭವವಾಗಿ ಬಿಡುತ್ತದೆ.

ಬಾಬು ಜಗಜೀವನರಾಂ ಅವರಿಗೆ ಸಂಬಂಧಿಸಿದ ಒಂದು ಘಟನೆ ಇಲ್ಲಿ ನೆನಪಾಗುತ್ತದೆ. ಜಗಜೀವನರಾಂ ಅವರನ್ನು ಕಾಶಿಯಲ್ಲಿ ಸಂಪೂರ್ಣ ನಂದಿ ವಿಗ್ರಹದ ಅನಾವರಣಕ್ಕೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮವನ್ನು ಮುಗಿಸಿ ಜಗಜೀವನರಾಂ ಅವರು ದೆಹಲಿಯತ್ತ ಹೊರಟದ್ದೇ ತಡ, ವಿಗ್ರಹವನ್ನು ತೊಳೆದು ‘ಶುದ್ಧ’ ಮಾಡಲಾಯಿತು. ಅಧಿಕಾರ ಬಲಕ್ಕೆ ಗೌರವ ತೋರಿಸುವುದಕ್ಕೆ ಮತ್ತು ದಲಿತ ಪ್ರೀತಿಯ ತೋರಿಕೆಗೆ ಜಗಜೀವನರಾಮ ರನ್ನು ಆಹ್ವಾನಿಸಿದ ನಂತರ ಹೀಗೆ ಅವಮಾನಿಸಿದಾಗ ದೇಶದ ಮತಿವಂತರು ಮೌನ ಬಡಿದಿತ್ತು. ಜೈಲ್‌ಸಿಂಗರು ಮುಖ್ಯ ಸಂದರ್ಭದಲ್ಲಿ ಮೌನ ಮುರಿದು ಮಾತನಾಡಿದ್ದು ಮುಖ್ಯವಾಗುವುದು, ಸಾಮಾಜಿಕವಾಗುವುದು ಮತ್ತು ಚಾರಿತ್ರಿಕವಾಗುವುದು ಮಾತಿನ ಪರಂಪರೆಗಾಗಿ ಅಲ್ಲ; ಮೌನ ಸಂಪ್ರದಾಯಕ್ಕಾಗಿ.

ಇಷ್ಟೆಲ್ಲ ನೆನಪುಗಳನ್ನು ಕೆದಕುತ್ತಿರುವಾಗ ಜೈಲ್‌ಸಿಂಗ್ ನಿಧನದ ಮೂಲಕ ಒಂದು ನೆನಪು ಮಾತ್ರವಾಗಿದ್ದಾರೆ; ಮೌನವಾಗಿದ್ದಾರೆ!
*****
೧೫-೧-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿನಂತಿ
Next post ನವೋದಯದ ನಲವು : ಜಿ ಎಸ್ ಎಸ್

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…