ಜ್ಞಾನ ಮತ್ತು ಕೌಶಲ್ಯ

ಜ್ಞಾನ ಮತ್ತು ಕೌಶಲ್ಯ

ಜ್ಞಾನವು ದೊರೆತರೆ ನಾವು ಬದಲಾಗುತ್ತೇವೆ, ಶಿಕ್ಷಣದ ವ್ಯವಸ್ಥೆಯು ನಮಗೆ ಜ್ಞಾನವನ್ನು ಒದಗಿಸುತ್ತದೆ ಎಂದು ನಂಬುವುದು ಎಸ್ ಸರಿ?

ಜ್ಞಾನವೆಂದರೆ ಏನು ಎಂಬ ವಿವರಣೆ ಎಲ್ಲ ಕಾಲದಲ್ಲೂ, ಎಲ್ಲ ಸಮಾಜಗಳಲ್ಲೂ ಒಂದೇ ರೀತಿಯಾಗಿ ಇರಲಿಲ್ಲ. ಈ ಮಾತನ್ನು ಒಂದು ಸಿದ್ಧಾಂತವೆಂಬಂತೆ ಪ್ರತಿಪಾದಿಸಿದಾತ ಫ್ರೆಂಚ್ ಭಾಷೆಯ ಚಿಂತಕ ಫೂಕೋ ಎಂಬಾತ. ಅವನವರಗೊ ಹೋಗುವುದು ಬೇಡ. ಕಳೆದ ಹತ್ತು ಇಪ್ಪತ್ತು ವರ್ಷಗಳಲ್ಲಿ ಇತಿಹಾಸ, ತತ್ವಶಾಸ್ತ್ರ, ಭೂಗೋಳ, ಅರ್ಥಶಾಸ್ತ್ರ, ಇಂಥ ವಿಷಯಗಳನ್ನು ಕುರಿತು ಪಡೆಯುವ್ರದು ಜ್ಞಾನವೇ ಅಲ್ಲ, ಬದಲಾಗಿ ವೈದ್ಯಕೀಯ, ಕಂಪ್ಯೂಟರ್ ಇಂಥ ತಾಂತ್ರಿಕ ವಿಷಯಗಳ ನೈಪುಣ್ಯವನ್ನು ಪಡೆಯುವುದೇ ಜ್ಞಾನವೆಂಬ ನಂಬಿಕೆ ನಮ್ಮಲ್ಲಿ ಮೂಡಿರುವುದನ್ನು ಕಾಣಬಹುದಲ್ಲವೇ? ಜ್ಞಾನೋದ್ಯಮ (ನಾಲೆಜ್ ಇಂಡಸ್ಟ್ರಿ) ಕೂಡ ಈಗ ಬೆಳದಿದೆ. ಹಣಕಾಸಿನ ಲಾಭಕ್ಕೆ ದಾರಿ ತೋರದ ಯಾವುದೂ ಜ್ಞಾನವಲ್ಲ ಎಂಬ ನಂಬಿಕೆ, ಜ್ಞಾನವೂ ಒಂದು ಉದ್ದಿಮೆ ಎಂಬ ಧೋರಣೆ ಬಲಗೊಂಡಿದೆ. ಶಾಲೆ ಕಾಲೇಜುಗಳಲ್ಲಿ ಕಲಿಸಲಾಗುವ ಮಾನವಿಕ ವಿಷಯಗಳ ಜ್ಞಾನ ಅನುಪಯುಕ್ತ ಎಂಬ ಭಾವನೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾತ್ರವಲ್ಲ ಅಧ್ಯಾಪಕರಲ್ಲೂ ಪ್ರಖರವಾಗಿ ಕಾಡುತ್ತಿದೆ. ಇನ್ನು ವೇದ, ಉಪನಿಷತ್ತು ಕೇವಲ ಕೆಲವರ ಬುದ್ಧಿಯ ಕಸರತ್ತಿಗೆ ಸಂಬಂಧಿಸಿದ್ದಾಗಿದೆಯೇ ಹೊರತು, ಸಾಂಸ್ಕೃತಿಕ ಅಧಿಕಾರದ ಉಪಕರಣಗಳಾಗಿವೆಯೇ ಹೊರತು, ಇಡೀ ಸಮುದಾಯವೇ ಇಂಥ ತಿಳಿವಳಿಕೆಯನ್ನು ಜ್ಞಾನವೆಂದು ಈಗ ಪರಿಗಣಿಸಿಲ್ಲ. ಹಾಗೆಯೇ ಇಂಗ್ಲಿಶ್ ಜ್ಞಾನ ಕನ್ನಡದ ಅಥವ ಇಂಥ ಪ್ರಾದೇಶಿಕ ಭಾಷೆಯ ಜ್ಞಾನಕ್ಕಿಂತ ಉತ್ತಮ ಎಂಬ ಧೋರಣೆಯೂ ಇದೆಯಲ್ಲವೇ? ಜ್ಞಾನವಂದರೆ ಏನು ಎಂಬುದು ಆಯಾ ಕಾಲದ ಸಮಾಜದಲ್ಲಿ ಅಧಿಕಾರವಿರುವ ವರ್ಗದ ಧೋರಣ, ನಂಬಿಕೆ ಅನುಕೂಲಗಳನ್ನು ಆಧರಿಸಿ ನಿರ್‍ಧಾರವಾಗುತ್ತದೆಯಲ್ಲವೇ? ಫುಕೋ ಪ್ರತಿಪಾದಿಸಿದ್ದು ಇದನ್ನೆ.

ಇದು ಒಂದೆಡೆಗೆ ಇರಲಿ, ಸಂಸ್ಕೃತದ ಚಿಂತನೆಯ ಒಂದು ಧಾರೆ ಜ್ಞಾನದ ಬಗ್ಗೆ ತಾಳಿರುವ ನಿಲುವನ್ನು ಗಮನಿಸಿ. ಕಾಶ್ಮೀರ ಶೈವದ ಪರಂಪರೆಯಲ್ಲಿ ಶಿವಸೂತ್ರಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲಿ ಮೊದಲಿಗೇ ಬರುವ ಒಂದು ಸೂತ್ರವು ‘ಜ್ಞಾನವೇ ಬಂಧನ’ ಎನ್ನುತ್ತದೆ. ಬಸವಣ್ಣನ ಸಮಕಾಲೀನನಾಗಿದ್ದ ವೇದಮೂರ್ತಿ ಸಂಗಣ್ಣ ಎಂಬಾತ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಸುಮಾರು ಇಪ್ತತ್ತೆಂಟು ಜ್ಞಾನಶಾಖೆಗಳನ್ನು ಪಟ್ಟಿ ಮಾಡಿ ಇವು ಯಾವುವೂ ಜ್ಞಾನವಲ್ಲ ಎನ್ನುತ್ತಾನೆ. ಹಾಗೆ ನೋಡಿದರೆ ಭಕ್ತಿ ಪಂಥ ಎಂದು ಗುರುತಿಸುವ ಎಲ್ಲ ಪಂಥಗಳೂ ನೇರವಾದ ಅನುಭವಕ್ಕೆ, ಅನುಭವದಿಂದ ಮೂಡುವ ವಿವೇಕಕ್ಕೆ ಮನ್ನಣೆ ನೀಡಿವೆಯೇ ಹೊರತು ಜ್ಞಾನಕ್ಕೆ ಅಲ್ಲ. ಟಾಗೂರರ ಪಂಜರಶಾಲೆ ನಾಟಕದಲ್ಲಿ ಗಿಳಿಗೆ ಜ್ಞಾನವನ್ನು ನೀಡುವ ಪ್ರಯತ್ನಗಳ ವಿಡಂಬನೆ ಇದೆ. ಕೈಲಾಸಂ ಅವರ ಟೊಳ್ಳುಗಟ್ಟಿಯಲ್ಲೂ ಶಾಲೆಯ ಓದನ್ನು ಕಲಿತು ಟೊಳ್ಳಾದವರ ಬಗ್ಗೆ ತಿರಸ್ಕಾರ ಮಿಶ್ರಿತ ಕುಹಕ ಇದೆ. ಇನ್ನೂ ನೋಡಿದರೆ ಜ್ಞಾನ, ಪಾಂಡಿತ್ಯಗಳನ್ನು ಲೇವಡಿ ಮಾಡುವ ಅಸಂಖ್ಯ ಗಾದೆಗಳೂ ನಿಮ್ಮ ನನಪಿಗೆ ಬಂದಾವು. ನಾವು ಸಾಮಾನ್ಯವಾಗಿ ಯಾವುದನ್ನು ಜ್ಞಾನವೆಂದುಕೊಂಡಿದ್ದೇವೆಯೋ ಅದನ್ನು ನಿರಾಕರಿಸುವ, ನಿರೋಧಿಸುವ, ಜ್ಞಾನವೆಂದರೆ ಇದಲ್ಲ ಎಂಬ ದೊಡ್ಡ ಪರಂಪರೆಯೇ ಎಲ್ಲ ಸಮಾಜಗಳಲ್ಲಿಯೂ ಇದೆ.

ಹೀಗೆ ಜ್ಞಾನ ವಿರೋಧ, ಜ್ಞಾನವನ್ನು ಕುರಿತ ಅಪನಂಬಿಕೆ ಬೆಳೆದದ್ದು ಯಾಕೆ? ಅಥವ ನಾವು ಜ್ಞಾನವೆಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡೇ ಇಲ್ಲವೋ? ಜ್ಞಾನವು ಸದಾ ಗತಕಾಲಕ್ಕೆ ಸೇರಿದ್ದು, ಆಗಲೇ ಆಗಿ ಹೋದ ಅನುಭವಗಳ ಅರ್ಥವನ್ನು ಆಧರಿಸಿದ್ದು. ಆದ್ದರಿಂದಲೇ ನಮಗೆ ಆಗುವ ಎಲ್ಲ ಹೊಸ ಅನುಭವಗಳನ್ನೂ ಹಳೆಯದರ ನುಡಿಗಟ್ಟಿಗೆ ಅನುವಾದಮಾಡಿಕೊಳ್ಳುವಂತೆ, ಒಮ್ಮೆ ಆದ ಅನುಭವದ ಪುನರುಕ್ತಿಯೇ ಪರಂಪರೆ ಎಂದು ತಿಳಿಯುವಂತೆ ಒತ್ತಾಯಿಸುವಂಥದ್ದು, ಆದ್ದರಿಂದಲೇ ಅಧಿಕಾರದ ಮೂಲವಾಗುವಂಥದ್ದು. ನಾನು ಹೊಸಬನಾಗಬೇಕಾದರೆ, ನಾನು ಬದುಕಿರುವ ಸಮಾಜ ಹೊಸತಾಗಬೇಕಾಗಿದ್ದರೆ ಜ್ಞಾನವೆಂದು ಕರೆಯಲಾಗುವ ಎಲ್ಲವನ್ನೂ ನಿರಾಕರಿಸುವುದು ಅತ್ಯಂತ ಅಗತ್ಯವಾಗುತ್ತದೆ. ಹೀಗೆ ಯೋಚಿಸುವ ಭಕ್ತಿ ಪಂಥಗಳು, ಅನುಭಾವಿಗಳು ಜ್ಞಾನವನ್ನು ನಿರಾಕರಿಸುತ್ತಾರೆ. ಜ್ಞಾನವೆಂಬುದು ಆಗಲೇ ಆಗಿಹೋದ ಕಾಲಕ್ಕೆ ಅನುಭವಕ್ಕೆ ನಮ್ಮನ್ನು ಬಲವಾಗಿ ಬಿಗಿದು ಕಟ್ತುತ್ತದೆ ಎಂದು ತಿಳಿಯುತ್ತಾರೆ. ಆದರೆ ನಮ್ಮ ದಿನನಿತ್ಯದ ಬದುಕಿನ ಕೌಶಲಗಳನ್ನು ಕುರಿತು ಕಲಿಯುವುದೂ ಅಗತ್ಯ. ಆದರೆ ಕಾರು ಬಸ್ಸುಗಳ ಡ್ರೈವಿಂಗ್, ಯಂತ್ರಗಳನ್ನು ಬಳಸಿ ಅಗತ್ಯ ವಸ್ತುಗಳನ್ನು ನಿರ್‍ಮಿಸುವ ಕೌಶಲ, ಹಲವರ ಹತ್ತು ಭಾಷೆಗಳ ತಿಳಿವಳಿಕೆ ಇತ್ಯಾದಿಗಳ ಕಲಿಕೆಯನ್ನು ಜ್ಞಾನವೆನ್ನಬಹುದೇ? ಬಹುಶಃ ಕೌಶಲ ಮತ್ತು ಜ್ಞಾನಗಳ ನಡುವೆ ನಮಲ್ಲಿ ಗೊಂದಲವಿದೆ ಎಂದು ತೋರುತದೆ.

ಜ್ಞಾನಸಂಗ್ರಹವೆನ್ನುವುದು ಗತಕಾಲಕ್ಕೆ ಸಂಬಂಧಿಸಿದ್ದು. ಬದುಕಿನ ಕೌಶಲವೆನ್ನುವುದು ವರ್ತಮಾನದ ತುರ್‍ತುಗಳಿಗೆ ಸಂಬಂಧಿಸಿದ್ದು, ಜ್ಞಾನವನ್ನು ಮುಂದಿನ ತಲೆಮಾರಿಗೆ ದಾಟಿಸುವುದಕ್ಕೆಂದು ಶಿಕ್ಷಣವೆಂಬ ವ್ಯವಸ್ಥೆ, ಕ್ರಮ ಹುಟ್ಟಿಕೊಳ್ಳುತ್ತದೆ. ಅಂದರೆ ಹಳೆಯ ಕಾಲದ ನಂಬಿಕೆ, ಮೌಲ್ಯ, ಧೋರಣೆ ಇತ್ಯಾದಿಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ, ಹಾಗೆಯೇ ಇಂದಿನ ಬದುಕಿಗೆ ಅಗತ್ಯವಾದ ಯೊನೊನ್ಯ್ ಕೌಶಲಗಳ ಕಲಿಕೆಗೆ ಮಹತ್ವ ನೀಡುತ್ತದೆ. ನಂಬಿಕೆ ಮತ್ತು ಧೋರಣೆಗಳು ಗತಕಾಲದವು, ಕೌಶಲ ಇಂದಿನದು. ಇದು ಒಂದು ವೃರುಧ್ಯವಲ್ಲವೇ?

ಕೊಂಚ ವಿಚಾರಮಾಡಿದರೆ ಶಿಕ್ಷಣದ ವ್ಯವಸ್ಥೆಯೆನ್ನುವುದು ನಮ್ಮೆಲ್ಲರನ್ನೂ ಈಗ ಇರುವ ಸ್ಥಿತಿಯನ್ನು ಮುಂದುವರೆಸುವಂತೆ ಒತ್ತಾಯಿಸುವುದಕ್ಕಾಗಿಯೇ ಇರುತ್ತದೆ ಅಲ್ಲವೇ? ಶಿಕ್ಷಣದ ‘ವ್ಯವಸ್ಥೆ’ ಪರಂಪರೆಯನ್ನು ಆರಾಧಿಸುತ್ತದೆಯೇ ಹೊರತು ಅದನ್ನು ಮುರಿಯುವುದಕ್ಕೆ ಬೇಕಾದ ಧೈರ್ಯವನ್ನು ಕೊಡುವುದಿಲ್ಲ. ಇಲ್ಲದಿದರೆ ವಯಸ್ಸಾದ ಶಿಕ್ಷಕರು ಅದೇಕೆ ಸದಾ ಕಾಲವೂ ತಮ್ಮ ಕಾಲದ ಶಿಕ್ಷಣ ಹೇಗಿತ್ತು ಈಗ ಎಲ್ಲ ಎಷ್ಟು ಹಾಳಾಗಿದೆ ಎಂದು ಕೊರಗುತ್ತಾರೆ? ಅಪ್ಪ ಅಮ್ಮಂದಿರು ತಮ್ಮ ಕಾಲ ಎಷ್ಟು ಚೆನ್ನಾಗಿತ್ತು ಈಗಿನ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಅದೇಕೆ ಗೊಣಗುತ್ತಾರೆ? ಶಿಕ್ಷಿತರು ಗತಕಾಲದ ಸುವರ್ಣಯುಗದ ಮರುಸ್ಥಾಪನೆಯಲ್ಲಿ ಅದೇಕೆ ಅಷ್ಟು ಉದ್ರೇಕದಿಂದ ತೊಡಗಿಕೊಳ್ಳುತ್ತಾರೆ? ಯಾವುದೇ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡು ಯಶಸ್ವಿಯಾಗಿ ಶಿಕ್ಷಿತರಾದ ಜನ ಹಳತನ್ನು, ಪರಂಪರೆಯನ್ನು ಮುಂದುವರೆಸುವ ಅನುಕರಣಶೀಲರಾಗುತ್ತಾರೆಯೇ ಹೊರತು ಬೇರೇನೂ ಆಗಲಾರರು ಎಂದೇಕೆ ಅನಿಸುತ್ತದೆ. ಶಿಕ್ಷಣ ವ್ಯವಸ್ಥೆಯ ಲಾಭಪಡೆದ ನನ್ನಂಥ ನಿಮ್ಮಂಥ ಅಸಂಖ್ಯಾತ ಜನ ಏನಾಗಿದ್ದೇವೆ? ನಾವು ಪಡೆದ ಜ್ಞಾನಕ್ಕೂ ನಮ ದಿನ ನಿತ್ಯದ ಬದುಕಿಗೂ, ಹಾಗೆ ಬದುಕಿನಲ್ಲಿ ತೊಡಗಿರುವ ನಮ್ಮ ಮನಸ್ಸಿಗೂ ಸಂಬಂಧವೇ ಇಲ್ಲ ಎಂಬಂತೆ ದಿನ ದೂಡುತ್ತಿಲ್ಲವೇ? ನಮ್ಮ ಅಪ್ಪ, ಅಜ್ಜ, ನಮ್ಮ ಕುಲದ ಹಿರಿಯರು ಹೇಳಿದ್ದು, ನಮ್ಮ ಭಾಷೆಯ ಜನ ಹೇಳಿದ್ದು, ನಮ್ಮ ದೇಶದ ನಾಯಕರು ಹೇಳಿದ್ದು, ನಮ್ಮ ಸಂಸ್ಕೃತಿ ವಿಧಿಸಿದ್ದು ಎಂದು ನಮ್ಮ ವರ್ತನೆಗೆ ಸಮರ್ಥನೆಗಳನ್ನು ಹುಡುಕಿಕೊಂಡು ಇರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗುತ್ತಾ, ಇದೆಲ್ಲ ಏಕೋ ಅವ್ಯವಸ್ಥೆ ಎಂದು ಗೊಣಗುತ್ತಾ, ಬಿಡಿ. ನಾವು ಹೇಗಿದ್ದೇವೆ ಎಂಬುದನ್ನು ನಾನೇಕೆ ವಿವರಿಸಬೇಕು. ಅದು ನಿಮಗೇ ಗೊತ್ತಿದೆಯಲ್ಲವೇ? ಶಿಕ್ಷಣದಿಂದ, ಕೌಶಲ್ಯಗಳ ಜ್ಞಾನದಿಂದ ಬದಲಾವಣೆ ಆಗುವುದಿದ್ದರೆ ನಮ್ಮ ಬದುಕು ಈಗ ಇರುವಂತೆ ಏಕೆ ಇರುತ್ತಿತ್ತು ಹೇಳಿ?

ಅದಕ್ಕೆಂದೇ ಮೊದಲಲ್ಲಿ ಹೇಳಿದ್ದು. ನಾವು ಜ್ಞಾನ ಎಂದು ಯಾವುದನ್ನು ತಿಳಿದಿದ್ದೇವೆಯೋ ಅದು ನಿಜವಾಗಲೂ ಅಷ್ಟು ಮುಖ್ಯವೇ? ಅದನ್ನು ಇತರರಿಗೆ ತಿಳಿಸಲು ಎಷ್ಟೆಲ್ಲ ಗೋಜಲು ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವಲ್ಲ ಅದು ಅಷ್ಟು ಅನಿವಾರ್ಯವೇ? ಈ ಪ್ರಶ್ನೆಗಳನ್ನು ಯಾರೋ ಕೆಲವರು ಮಾತ್ರವಲ್ಲ, ಎಲ್ಲರೂ ಗಂಬೀರವಾಗಿ ಪರಿಶೀಲಿಸಬೇಕೆಂದು ತೋರುತ್ತದೆ. ಜ್ಞಾನವು ಭಾರವಾಗದಂತೆ, ಶಿಕ್ಷಣವು ನಮ್ನನ್ನು ಮಾನಸಿಕ ಯಾಚಕಸ್ಥಿತಿಗೆ ದಬ್ಬದಂತೆ, ಆದರೂ ಅವ್ಯವಸ್ಥೆ ಹುಟ್ಟಿಕೂಳ್ಳದಂತೆ ನಮ್ಮ ಬದುಕಿನ ಕ್ರಮವನ್ನು ರೂಪಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಮುಖ್ಯವಲ್ಲವೇ? ಅಥವ ಪ್ರಶ್ನೆಗಳೇ ಇಲ್ಲದೆ, ಎಲ್ಲ ಉತ್ತರ ಗೊತ್ತಿರುವವರಂತೆ ಸುಮ್ಮನೆ ಬದುಕಿರುವುದರಲ್ಲೇ ನಾವೆಲ್ಲ ಆಸಕ್ತರೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನೆ
Next post ಸೂರ್‍ಯನಿಗೆ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…