ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ
ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ,
ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ,
ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು-

ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು
ಬೆಳಗು ಸಂಜೆಗಳ ನಿರಂತರ ಪರ್ಯಾಯದಲ್ಲಿ
ಹುಟ್ಟಿ ಸತ್ತರೆ ಅಕ್ಷಯ ಪುನರ್ಜನ್ಮ ನಿನಗೆ. ನಿನ್ನ
ಅಹರ್ನಿಶೆಯ ಬಂಧ ನಮ್ಮ ಮೋಕ್ಷದ ಕಬಂಧ

ಜ್ವಲಿಸುವಗ್ನಿಗೆ ಆಜ್ಯ ಮೇದಸ್ಸು ಹೋಮಹವನ
ಯಾವ ಪೂರ್ವಜರ ರೇತಸ್ಸು ಸಂಯಮನ
ನಿನಗದೆಲ್ಲವು ಆಪೋಶನ-ಮನೆಯೊಳಗೆ ಹೊರಗೆ
ಬೀದಿಯಲಿ ಮಣ್ಣಿನಲಿ ಕಡಲ ತೀರದಲಿ

ಸೆರೆಹಿಡಿದು ಹಿಡಿದ ಬೆಂಕಿ ಪ್ರಕೃತಿಪೌರುಷ
ಕಾಮದಲಿ ಹರಿದು ಸೇರಿದ ಅಂಥ ತೇಜಸ್ಸು
ಇಲ್ಲಿ ಮೊದಲು ಏನೂ ಇರದಲ್ಲಿ ನೀನುಂಟಾದೆ
ನಿನ್ನ ಪ್ರಭಾವಲಯದಲ್ಲಿ ಅದೆಷ್ಟೋ ಜೀವಿಗಳು

ದೀಪದಿಂದ ದೀಪಗಳು-ಬೆಳಕಿನ ಹಿಂದು ಮುಂದು
ಕಂಡವರು ನಾವಲ್ಲ. ಸಾಲು ದೀಪಗಳಲ್ಲಿ ಒಂದು
ಎಂದು ಅರಿತೊ ಏನೊ. ಬೆಳಕಿನಿಂದ ಬೆಳಕಿನೆಡೆಗೆ
ಸಾಗುವುದು ದೀಪಾವಳಿ ಮರಳಿ ಮರಳಿ

ಕಣ್ಣುಗಳು ಕಣ್ಣುಗಳ ನೋಡುವಾಗ ಮಾತು
ಬೆರಳುಗಳು ಬೆರಳುಗಳ ಮಿಳಿಸಿದಾಗ ಶಾಖ
ಮಾತು ಮಂತ್ರವಾದಾಗ ಪ್ರಾರ್ಥನೆ ಅಂತೆಯೇ
ಶಾಖ ದೀಪವಾದಾಗ ಪೂಜೆ. ಮೌನದಲಿ ಧ್ಯಾನ

ನಮ್ಮ ಕರ್ಮಗಳ ಹೊರ ಪರಿಧಿ ಹರಿದು
ನಿನ್ನ ವಿಸ್ತಾರಕ್ಕೆ ಎಳೆದುಕೊಂಡರೆ
ನಮ್ಮ ಭಾಷೆಗಳ ಒಳ ಅರ್ಥ ಅರಳಿ
ನಿನ್ನ ಚೈತನ್ಯಕ್ಕೆ ಸೆಳದುಕೊಂಡರೆ

ಹಗಲಿರುಳ ವರ್ಣಮಯ ಬೆಳಕು ಪಸರಿಸಿ
ಮಣ್ಣುಮರಗಿಡ ಜೀವರಾಶಿಗಳೊಂದಿಗೆ ನಾವು
ಗುರುತು ಪಡೆದಾಗ ನಿನ್ನ ಅಖಂಡ ಕಾಲದಲಿ
ಸದಾ ವರ್ತಮಾನವಾಗುವಂತೆ ಭೂತ ಭವಿಷ್ಯ

ನಿನ್ನ ಮುಖದಿಂದ ಶಕ್ತಿ ಹರಿಯಲಿ ನಮ್ಮ ಕಡೆಗೆ
ನಿನ್ನ ಮುಖದಿಂದ ಜ್ಞಾನ ಹರಿಯಲಿ ನಮ್ಮ ಕಡೆಗೆ
ನಿನ್ನ ಓಜಸ್ಸು ಬರಲಿ ನಮಗೆ
ನಿನ್ನ ಆಯಸ್ಸು ಬರಲಿ ನಮಗೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)