ಮರ್ಯಾದಸ್ಥ ಮನುಷ್ಯರಾಗೋಣ

ಮರ್ಯಾದಸ್ಥ ಮನುಷ್ಯರಾಗೋಣ

ದಿನಾಂಕ ೧೬-೧೦-೨೦೦೮ ರಂದು ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದ ಡಾ. ಎಸ್.ಎಲ್. ಭೈರಪ್ಪನವರ ಲೇಖನಕ್ಕೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಹೀಗಾಗಿ ನಾನು ತೀರಾ ಹೊಸ ವಿಚಾರವನ್ನು ಹೇಳುತ್ತೇನೆಂಬ ಭ್ರಮೆಯಿಂದ ಬರೆಯುತ್ತಿಲ್ಲ. ಪ್ರತಿಕ್ರಿಯಿಸುವುದು ಒಂದು ಜವಾಬ್ದಾರಿ ಎಂದು ಭಾವಿಸಿ ನನ್ನ ಕೆಲ ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ. ಕರ್ನಾಟಕದಲ್ಲಿ ಚರ್ಚುಗಳ ಮೇಲೆ ದಾಳಿ ನಡೆದಾಗ ನಾನು ಪತ್ರಿಕೆಗಳಲ್ಲಿ ನೀಡಿದ ಪತಿಕ್ರಿಯೆಯ ಸಾರವನ್ನು ಇಲ್ಲಿ ಉಲ್ಲೇಖಿಸಿದರೆ ನನ್ನ ದೃಷ್ಟಿಕೋನದ ಆದ್ಯ ನೆಲೆ ಅರ್ಥವಾದೀತೆಂದು ಭಾವಿಸುತ್ತೇನೆ:

“ವಿವಿಧ ಧರ್ಮಗಳ ಮೂಲಭೂತವಾದಿಗಳು ಎಗ್ಗಿಲ್ಲದೆ ನಡೆಸುತ್ತಿರುವ ಹಿಂಸಾಚಾರದಿಂದ ಮಾನವ ಕುಲಕ್ಕೆ ಅಪಚಾರವಾಗುತ್ತಿದೆ. ಮುಸ್ಲಿಂ ಮೂಲಭೂತವಾದಿಗಳು ಅಮಾಯಕರ ಹತ್ಯೆಯಲ್ಲಿ ವಿಘ್ನ ಸಂತೋಷ ಕಾಣುತ್ತಿದ್ದರೆ, ಹಿಂದೂ ಮೂಲಭೂತವಾದಿಗಳು ಮಸೀದಿ, ಚರ್ಚುಗಳ ಕಡೆ ವಕ್ರದೃಷ್ಷಿ ಬೀರುತ್ತಿದ್ದಾರೆ. ಒರಿಸ್ಸಾದಲ್ಲಿ ಮಾವೋವಾದಿಗಳು ಹಿಂದೂ ಸ್ವಾಮೀಜಿಯೊಬ್ಬರ ಹತ್ಯೆ ಮಾಡಿದರೆ, ಹಿಂದೂ ಮೂಲಭೂತವಾದಿಗಳು ಕ್ರೈಸ್ತರನ್ನು ಸುಟ್ಟಿದ್ದಾರೆ. ಅಸ್ಪೃಶ್ಯತೆ ಅಸಮಾನತೆಯ ವಿರುದ್ಧ ಹೋರಾಡುವ ಬದಲು ಮತಾಂತರವನ್ನು ನೆಪವಾಗಿಸಿ ಕೊಂಡು ಹಿಂಸೆಗೆ ಇಳಿದಿದ್ದಾರೆ. ಧಾರ್ಮಿಕ ಹಿಂಸಾಚಾರ ಮತ್ತು ಸಾಮಾಜಿಕ – ಆರ್ಥಿಕ ಹಿಂಸೆಯನ್ನು ಒಟ್ಟಿಗೇ ವಿರೋಧಿಸುವ ತಾತ್ವಿಕ ತಿಳುವಳಿಕೆಯನ್ನು ನಾವು ಬೆಳೆಸಬೇಕು. ರಾಜ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಖಂಡಿಸಿದಂತೆಯೇ ಚರ್ಚ್‌ಗಳ ಮೇಲಿನ ದಾಳಿಯನ್ನೂ ಖಂಡಿಸಬೇಕು. ಕರ್ನಾಟಕವು ಮೂಲಭೂತವಾದಿಗಳ ಮನೆಯಾಗಬಾರದು.” (೧೮-೯-೨೦೦೮) – ಇದು ನನ್ನ ನಿಲುವು.

ಆದ್ದರಿಂದ, ಧಾರ್ಮಿಕ ಹಿಂಸಾಚಾರವು ಯಾವ ಧರ್ಮ ಮೂಲದವರಿಂದ ನಡೆದರೂ ಅದು ಖಂಡನೀಯವೆಂದು ನಂಬಿರುವ ನನಗೆ ಭೈರಪ್ಪನವರ ವಾದಸರಣಿಯು ಕಳವಳ ಹುಟ್ಟಿಸುತ್ತದೆ. ಭೃರಪ್ಪನವರು ಹೆಸರಾಂತ ಲೇಖಕರಲ್ಲದಿದ್ದರೆ ಈ ಕಳವಳಕ್ಕೆ ಕಾರಣವಿರಲಿಲ್ಲ. ಸೃಜನಶೀಲ ಕ್ರಿಯೆಯಲ್ಲಿ ತೊಡಗಿದ, ಅಪಾರ ಓದುಗರಿಗೆ ಜವಾಬಾರರಾಗಬೇಕಾದ ಹಿರಿಯ ಲೇಖಕರೊಬ್ಬರು ಅಂತಿಮ ಸತ್ಯದ ಹರಿಕಾರರಂತೆ ವಾದಕ್ಕೆ ಇಳಿದಿರುವ ರೀತಿ ಮುಜುಗರವುಂಟು ಮಾಡುತ್ತದೆ. ಪರ-ವಿರೋಧಗಳನ್ನು ಪರಿಶೀಲಿಸಿ ನಂತರ ತಮ್ಮ ನಿಲುವಿಗೆ ತಲುಪುವ ಕ್ರಮದ ಕೊರತೆಯು ಭೈರಪ್ಪನವರ ಲೇಖನದಲ್ಲಿ ಅಂತರ್ಗತವಾಗಿರುವುದರಿಂದ ಮತಾಂತರದ ಬಗ್ಗೆ ಹಲವು ವರ್ಷಗಳ ಆಳ ಹಾಗೂ ಸಮಗ್ರ ಅಧ್ಯಯನ ನಡೆಸಿರುವ ಖ್ಯಾತ ಕಾದಂಬರಿಕಾರ, ಚಿಂತಕ ಡಾ. ಎಸ್.ಎಲ್. ಭೈರಪ್ಪ ಎಂದು ‘ವಿಜಯಕರ್ನಾಟಕ’ ಪತ್ರಿಕೆಯು ಪರಿಚಯಿಸಿರುವುದು ಹುಬ್ಬೇರಿಸುವಂತೆ ಮಾಡುತ್ತದೆ. ಭೈರಪ್ಪನವರು ತಮಗೆ ಸರಿ ಕಂಡ ಕೃತಿಗಳನ್ನು ಆಳವಾಗಿಯೇ ಅಧ್ಯಯನ ಮಾಡಿರುತ್ತಾರೆ. ಆ ಬಗ್ಗೆ ಆಕ್ಷೇಪಿಸುವಷ್ಟು ದೊಡ್ದವನಲ್ಲ ನಾನು. ಆದರೆ ಮತಾಂತರ ಕುರಿತಂತೆ ‘ಸಮಗ್ರ’ ಅಧ್ಯಯನ ಮಾಡಿದ್ದಾರೆಂಬುದಕ್ಕೆ ಅವರ ಲೇಖನವಂತೂ ಸಾಕ್ಷಿಯಾಗುವುದಿಲ್ಲ. “ಸಾಕ್ಷಿಪ್ರಜ್ಞೆಯೂ ಅದರಲ್ಲಿ ಕಾಣುವುದಿಲ್ಲ. ಅವರು ನೀಡಿರುವ ಪರಾಮರ್ಶನ ಕೃತಿಗಳ ಪಟ್ಟಿಯಲ್ಲಿ ತಮ್ಮ ನಿಲುವಿಗೆ ಪೂರಕವಾದವುಗಳು ಮಾತ್ರ ಇರುವುದನ್ನು ಗಮನಿಸಿದರೆ ‘ಸಮಗ್ರ’ ಎಂಬ ಪರಿಕಲ್ಪನೆಯ ಬಗ್ಗೆ ಪುನರಾಲೋಚಿಸಬೇಕಾಗುತ್ತದೆ. (ಭೈರಪ್ಪನವರು ತಮ್ಮ ‘ಆವರಣ’ ಕಾದಂಬರಿಗೆ ಆಧಾರವಾಗಿ ಬಳಸಿದ ಗ್ರಂಥಸೂಚಿಯೂ ಇದೇ ರೀತಿಯಿತ್ತು.) ಸಮಗ್ರ ಅಧ್ಯಯನವು ಪರ ಮತ್ತು ವಿರೋಧದ ಅಥವಾ ಎರಡೂ ಅಲ್ಲದ ಕೃತಿ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಪರಿಶೀಲನೆಯ ನಂತರ ಅಧ್ಯಯನಕಾರನು ತಾನು ಕಂಡುಕೊಂಡ ನಿಲುವನ್ನು ಪ್ರಶಿಪಾದಿಸಬಹುದು. ಆಗ, ತಾನು ಒಪ್ಪದ ವಿಚಾರಗಳನ್ನು ಉಲ್ಲೇಖ ಮಾಡಿ ಸಾಧಾರವಾಗಿ ನಿರಾಕರಿಸ ಬೇಕಾಗುತ್ತದೆ. ಇದು ಸಮಗ್ರ ಅಧ್ಯಯನದ ಪ್ರಾಥಮಿಕ ಸತ್ಯ.

ಆದರೆ, ಭೈರಪ್ಪನವರ ಲೇಖನವು ಆ ಕೆಲಸವನ್ನು ಮಾಡುವುದಿಲ್ಲ. ಆ ಕೆಲಸವನ್ನು ಮಾಡದೆಯೂ ತನ್ನ ನಿಲುವಿನ ಪ್ರತಿಪಾದನೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯ. ಅದರಲ್ಲೂ ಜಾತಿ ಜಗಳ ಮತ್ತು ಧರ್ಮ ಸಂಘರ್ಷಗಳ ಸಂದರ್ಭದಲ್ಲಿ ಸಮತೋಲನ ದೃಷ್ಟಿಕೋನದ ಅಗತ್ಯ ಹೆಚ್ಚಾಗಿರುತ್ತದೆ. ಸಹನೆ ಮತ್ತು ಸಂಯಮಗಳು ಮುಂಚೂಣಿಗೆ ಬರಬೇಕಾಗುತ್ತದೆ. ಇದು ಎಲ್ಲ ಜಾತಿ ಮತ್ತು ಧರ್ಮದವರಿಗೂ ಅನ್ವಯಿಸುತ್ತದೆ. ಜವಾಬ್ಧಾರಿಯುತ ಸ್ಥಾನ-ಮಾನ ಗಳಿಸಿದವರಿಗೆ ಹೆಚ್ಚು ಅನ್ವಯಿಸುತ್ತದೆ. ಯಾಕೆಂದರೆ ಈ ಜವಾಬ್ಧಾರಿಯುತರು ಸಮಾಜಕ್ಕೆ ತಿಳಿಹೇಳುವ ತಿಳಿಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇದು ಸಜ್ಜನ ಸಮಾಜದ ನಿರೀಕ್ಷೆ. ಭೈರಪ್ಪನವರು ಬಳಸುವ ಭಾಷೆ ಮತ್ತು ಭಾವನೆಗಳ ನೆಲೆ ಈ ನಿರೀಕ್ಷೆಗೆ ವಿರುದ್ಧವಾಗಿರುವುದು ಲೇಖನದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ‘ಬಾಯಿ ಬಡಿದುಕೊಂಡಿದ್ದ ಮಾಧ್ಯಮದವರು ಮತ್ತು ಪ್ರಗತಿಶೀಲ ವೇಷಧಾರಿಗಳು’ ಎಂದು ಸಾರಾಸಗಟಾಗಿ ಮಾತನಾಡುವ ಭೈರಪ್ಪನವರಿಗೆ ಮಾಧ್ಯಮಗಳಲ್ಲಿ ಹಿಂದೂ ಮೂಲಭೂತವಾದಿಗಳೇ ಹೆಚ್ಚಾಗಿದಾರೆಂಬ ಆಕ್ಷೇಪವೂ ದಟ್ಟವಾಗಿದೆಯೆಂದು ಯಾಕೆ ತಿಳಿಯಲಿಲ್ಲ? ಪ್ರಗತಿಪರರಲ್ಲಿ ಕೆಲವರು ‘ವೇಷಧಾರಿಗಳು’ ಇರಬಹುದಾದರೂ ಎಲ್ಲ ಪ್ರಗತಿಪರರನ್ನೂ ಹೀಗೆ ಹೀಗಳೆಯುವುದು ಸರಿಯಲ್ಲವೆಂದು ಇವರೇಕೆ ಭಾವಿಸಲಿಲ್ಲ? ಮೂಲಭೂತವಾದಿ ಮನೋಧರ್ಮಕ್ಕೆ ಎದುರಿಗಿರುವ ಎಲ್ಲವೂ ಒಂದೇ ರೀತಿ ಕಾಣಿಸುವುದು ಸ್ವಾಭಾವಿಕ ಎನ್ನಬಹುದೆ? ತಮ್ಮ ಲೇಖನದ ಮೊದಲ ಪ್ಯಾರಾದಲ್ಲೇ ಕ್ರೈಸ್ತರ ಮೇಲಿನ ಹಲ್ಲೆ ಮತ್ತು ಹಿಂಸಾಚಾರವನ್ನು ಖಂಡಿಸಿದ ಎಲ್ಲ ಮಾಧ್ಯಮದವರ ವಿರುದ್ಧ ವಾಗ್ದಾಳಿ ನಡೆಸುತ್ತಾರೆ; ‘ಜಾತ್ಯಾತೀತ ಪತ್ರಿಕೆಗಳು, ಎಡಪಂಥದ ಮಾಧ್ಯಮಗಳು’ ಭಾರತದ ವಿನಾಶವೇ ಸಂಭವಿಸಿತೆಂಬಂತೆ ಹುಯಿಲೆಬ್ಬಿಸಿದವು ಎಂದು ಹಳಿಯುತ್ತಾರೆ. ಇದನ್ನೇ ‘ಸೋನಿಯಾಗಾಂಧಿ ಅನುಯಾಯಿಗಳು, ಬುದ್ಧಿಜೀವಿಗಳು, ಜಾತ್ಯತೀತರು ತಾರಕಕ್ಕೇರಿಸಿ’ ಹಿಂದೂ ಪರ ಸಂಘಟನೆಗಳು, ಮಠಾಧೀಶರು ಮತ್ತು ಬಿ.ಜೆ.ಪಿ. ಸರಕಾರಗಳಿಗೆ ಮಸಿ ಬಳಿದವೆಂದು ಟೀಕಿಸಿದ್ದಾರೆ. ಒಂದು ಮಾತನ್ನು ಭೈರಪ್ಪನವರು ಅರ್ಥಮಾಡಿಕೊಳ್ಳಬೇಕಾಗಿದೆ. ಕ್ರೈಸ್ತರ ಮೇಲಿನ ಹಿಂಸಾಚಾರ ಮತ್ತು ಚರ್ಚ್ ದಾಳಿಯನ್ನು ಖಂಡಿಸಿದವರೆಲ್ಲ ಸೋನಿಯಾಗಾಂಧಿಯವರ ಸಂಪೂರ್ಣ ಸಮರ್ಥಕರಲ್ಲ. ಎಲ್ಲ ಹಿಂದೂಗಳ ವಿರೋಧಿಗಳಲ್ಲ. ಭೈರಪ್ಪನವರಿಗೆ ಮತ್ತು ಹಿಂದೂ ಮೂಲಭೂತವಾದಿಗಳಿಗೆ ಸೋನಿಯಾಗಾಂಧಿಯವರನ್ನು ಟೀಕಿಸಲು ಅವರು ಕ್ರೈಸ್ತ ಜನ್ಮೀಯರೆಂಬ ಒಂದೇ ಕಾರಣವಿದೆ. ಆದರೆ ಪ್ರಗತಿಪರರು ಮತ್ತು ಜಾತ್ಯತೀತರಿಗೆ ಜನ್ಮ ಮೂಲವನ್ನು ಹೊರತುಪಡಿಸಿ, ಸೋನಿಯಾರನ್ನು ಟೀಕಿಸಲು ಬೇರೆ ಸೈದ್ಧಾಂತಿಕ ಕಾರಣಗಳಿರುತ್ತವೆ; ಆ ಕೆಲಸವನ್ನು ಅಗತ್ಯ ಕಂಡಾಗ ಮಾಡುತ್ತಲೂ ಬಂದಿದ್ದಾರೆ. ಆದರೆ ಹುಟ್ಟಿನ ಮೂಲವನ್ನು ಮಾನದಂಡ ಮಾಡಿಕೊಂಡು ಅಸಹನೆ ತೋರಿಸುವ ಅಸಹ್ಯಕರ ಕೆಲಸಕ್ಕೆ ಪ್ರಗತಿಪರರು, ಜಾತ್ಯತೀತರು ಯಾವತ್ತು ಕೈಹಾಕುವುದಿಲ್ಲ. ಹಾಗೆ ಮಾಡಿದರೆ ಅವರು ಪ್ರಗತಿಪರರೂ ಅಲ್ಲ ಜಾತ್ಯತೀತರೂ ಅಲ್ಲ; ಅಷ್ಟೇಕೆ ಮಾನವೀಯರೂ ಅಲ್ಲ. ಯಾಕೆಂದರೆ ಎಲ್ಲದಕ್ಕೂ ಹುಟ್ಟಿನ ಮೂಲವೇ ಮಾನದಂಡವಾದರೆ ಅದು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ಸಮರ್ಥನೆಯಾಗುವ ತಾರ್ಕಿಕ ಕೊನೆಯನ್ನು ಮುಟ್ಟುತ್ತದೆ. ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಆಚರಣೆಗೆ ಹುಟ್ಟಿನ ಮೂಲವೇ ಮಾನದಂಡವಲ್ಲವೆ?

ಮಾಧ್ಯಮಗಳು, ಎಡಪಂಥೀಯರು, ಸೋನಿಯಾ ಅನುಯಾಯಿಗಳು, ಪ್ರಗತಿಪರರು, ಜಾತ್ಯತೀತರು – ಭೈರಪ್ಪನವರಿಂದ ಟೀಕೆಗೆ ಒಳಗಾಗುವ ಇವರೆಲ್ಲ ಅನೇಕ ವಿಷಯಗಳಲ್ಲಿ ಭಿನ್ನ ನೆಲೆ – ನಿಲುವನ್ನು ಉಳ್ಳವರು. ಕ್ರೈಸ್ತರ ಮೇಲಿನ ಹಿಂಸಾಚಾರಕ್ಕೆ ವಿರುದ್ಧವಾಗಿದ್ದರಿಂದ ಭೈರಪ್ಪನವರಿಗೆ ಒಂದೇ ಬಣ್ಣದವರಾಗಿ ಕಾಣಿಸಿದರೆ ಅದಕ್ಕೆ ನಾವೇನೂ ಮಾಡಲಾಗದು!

ಭೈರಪ್ಪನವರು ತಮ್ಮ ಅಧ್ಯಯನದ ಫಲವಾಗಿ ನೀಡಿರುವ ಕ್ರೈಸ್ತ ಧರ್ಮದ ಏಕಪಕ್ಷೀಯ ಧೋರಣೆ ಮತ್ತು ದಬ್ಬಾಳಿಕೆಯ ವಿವರಗಳು ನಿಜವೇ ಇರಬಹುದು. ಆದರೆ ಸೋನಿಯಾ ಟೀಕೆಗೆ ಫ್ರೆಂಜ್ ಪತ್ರಕರ್ತ ಪ್ರಾಂಕ್ವಾ ಗೋತಿಯೆ ಅವರ ಮೊರೆ ಹೋಗಬೇಕಾಗಿರಲಿಲ್ಲ. ಅವರು ನೀಡಿರುವ ವಿವರ ಮತ್ತು ಟೀಕೆಗಳು ನಮ್ಮಲ್ಲೂ ಕೇಳಿಬರುತ್ತಿವೆ. ಅವುಗಳು ಎಷ್ಟು ಸರಿ ಅಥವಾ ತಪ್ಪು ಎಂಬುದು ವಿಮರ್ಶೆಯ ವಿಷಯ. ಆದರೆ ಸೋನಿಯಾ ‘ಪಟ್ಟಾಭಿಷೇಕ’ಕ್ಕೆ ಮುಂಚೆಯೂ ಕಾಂಗ್ರೆಸ್ ಪಾಳೆಯದಲ್ಲಿ ಕ್ರಿಶ್ಚಿಯನ್ನರು ಇದ್ದರು; ಸ್ಥಾನಮಾನ ಗಳಿಸಿದ್ದರು ಎಂಬುದನ್ನು ಮರೆಯಬಾರದು. ಇನ್ನು ಸೋನಿಯಾ ಪಟ್ಟಾಭಿಷೇಕದ ನಂತರ ನಮ್ಮ ದೇಶದಲ್ಲಿ ಕ್ರಿಸ್ತೀಕರಣ ಹೆಚ್ಚಾಗಿದೆಯೆಂಬ ಭೈರಪ್ಪನವರ ಸಂಶೋಧನೆಯೂ ಒಂದು ವೇಳ ಸತ್ಯವೇ ಅಗಿದಲ್ಲಿ ಅದಕ್ಕೆ ಸೋನಿಯಾ ಮಾತ್ರ ಕಾರಣವೆ ಅಥವಾ ಬೇರೆ ಸಾಮಾಜಿಕ-ಆರ್ಥಿಕ ಕಾರಣಗಳಿವೆಯೆ ಎಂಬ ಅಂಶವನ್ನು ಶೋಧಿಸದೆ ಹೋದರೆ ತಪ್ಪಾಗುತ್ತದೆ. ಸೋನಿಯಾ ಪ್ರಭಾವದಿಂದಲೇ ದೀನ ದಲಿತರು, ಬಡವರು, ಕ್ರಿಸ್ತೀಕರಣಕ್ಕೆ ಒಳಗಾಗಿದ್ದರೆ ಆಕೆ ಪ್ರವಾದಿಪಟ್ಟ ಏರಿಬಿಡುತ್ತಾರೆ! ನಾನಂತೂ ಅವರನ್ನು ಪ್ರವಾದಿಪಟ್ಟಕ್ಕೆ ಏರಿಸಲಾರೆ. ನಾವು ವಿಮರ್ಶೆ ಮಾಡಲು ಸಾಧ್ಯವಾದ ಸ್ಥಾನದಲ್ಲೇ ಸೋನಿಯಾ ಗಾಂಧಿಯವರು ಇರಬೇಕೆಂದು ಬಯಸುತ್ತೇನೆ.

ಒಬ್ಬ ವ್ಯಕ್ತಿ, ಒಂದು ಧರ್ಮ, ಒಂದು ದೈವವೇ ಎಲ್ಲದಕ್ಕೂ ಕಾರಣ ಎಂದು ಭಾವಿಸುವುದು, ಈ ಮೂಲಕ ಆರಾಧಿಸುವುದು ಅಥವಾ ವಿರೋಧಿಸುವುದು ವಾಸ್ತವ ವಿರೋಧಿ ಗ್ರಹಿಕೆಯೆಂದು ನಾನು ಭಾವಿಸುತ್ತೇನೆ. ಬಹು ಸಂಸ್ಕೃತಿ, ಬಹುದೈವ, ಬಹುಧರ್ಮಗಳ ಈ ದೇಶದಲ್ಲಿ ಸಂಭವಿಸುವ ಕ್ರಿಯೆಗಳಿಗೆ, ರೂಪುಗೊಳ್ಳುವ ಸನ್ನಿವೇಶಗಳಿಗೆ, ಎಲ್ಲ ಸಂದರ್ಭದಲ್ಲೂ ಒಂದೇ ಕಾರಣವಿರುವುದಿಲ್ಲ. ಅನೇಕ ಕಾರಣಗಳಿರುತ್ತವೆ. ಮತಾಂತರದ ವಿಷಯದಲ್ಲೂ ಇದು ನಿಜ. ಜಾತಿಪದ್ಧತಿ ಬೇರು ಬಿಟ್ಟರುವ ನಮ್ಮ ಸಮಾಜದಲ್ಲಿ ಯಾವ ಧರ್ಮದವರು ಎಲ್ಲ ಜಾತಿಯವರನ್ನೂ, ಸಮಾನರೆಂದು ಭಾವಿಸುತ್ತಾರೆಂಬ ಅಂಶವೂ ಮುಖ್ಯವಾಗುತ್ತದೆ. ಜಾತಿಯ ಕಾರಣಕ್ಕೆ, ಮನೆಯೊಳಗೆ, ದೇವಾಲಯಗಳ ಒಳಗೆ ಪ್ರವೇಶ ನೀಡದಿದ್ದಾಗ ಅನುಭವಿಸುವ ಅವಮಾನಕ್ಕೆ ಒಂದು ದೊಡ್ಡ ಚರಿತ್ರೆಯೇ ಇದೆ. ಅಸ್ಪೃಶ್ಯರೆಂದು ದೂರ ಇಡುವುದು; ಕೆಳಜಾತಿಯೆಂದು ಮೂಗು ಮುರಿಯುವುದು; ಹೆಣ್ಣೆಂದು ಹೀಗಳೆಯುವುದು; ಬಡವರನ್ನು ಬಗ್ಗು ಬಡಿಯುವುದು; ಇವುಗಳನ್ನು ಜೀವನ ವಿಧಾನವೆಂಬಂತೆ ಅನುಸರಿಸುವ ಸಾಮಾಜಿಕ-ಆರ್ಥಿಕ ವಲಯದಲ್ಲಿ ಹಿಂದೂ ಧರ್ಮಕ್ಕೆ ಮಾತ್ರವೇ ಬದ್ಧವಾಗಿರಬೇಕೆಂದು ಅಧಿಕಾರ ಚಲಾಯಿಸುವುದು ಮಾನವೀಯವಾಗಬಲ್ಲದೆ? ಮೊದಲು ಈ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಹತ್ತಿಕ್ಕದೆ, ಕಡೇಪಕ್ಷ ಹತ್ತಿಕ್ಕಬೇಕೆಂದು ಹೇಳದೆ, ಮತಾಂತರವನ್ನು ಹತ್ತಿಕ್ಕಿ, ಮತಾಂತರ ಮಾಡುವವರನ್ನು ಹತ್ತಿಕ್ಕಿ – ಎಂದು ಅಬ್ಬರ ಮಾಡುವುದರಲ್ಲಿ ಏನರ್ಥವಿದೆ? ಅಸ್ಪೃಶ್ಯಯತೆ, ಜಾತಿ ಮೂಲ ಅವಮಾನ, ಬಡತನ, ಲಿಂಗ ತಾರತಮ್ಯಗಳನ್ನು ತಡೆಯದೆ ಮತಾಂತರವನ್ನು ಮಾತ್ರ ತಡೆಯಬೇಕೆಂದು ಹೇಳುವವರಿಗೆ ಸಮಸ್ಯೆಯ ಮೂಲವನ್ನು ನೋಡುವ ಮನಸ್ಸಿಲ್ಲ. ಅವರಿಗದು ಬೇಕೂ ಇಲ್ಲ. ಸ್ವತಃ ಭೈರಪ್ಪನವರು ತಮ್ಮ ಲೇಖನದಲ್ಲಿ ಅಸ್ಪೃಶ್ಯತೆ, ಜಾತಿಪದ್ಧತಿ ಮುಂತಾದ ಪಿಡುಗುಗಳನ್ನು ವಿರೋಧಿಸುವ ಪ್ರಸ್ತಾಪವನ್ನು ಮಾಡುವುದಿಲ್ಲ. ಅವರ ವಿರೋಧವೇನಿದ್ದರೂ ಕ್ರೈಸ್ತರ ವಿರುದ್ಧ; ಮತಾಂತರದ ವಿರುದ್ಧ.

ಆದರೆ ಹಿಂದೂ ಧರ್ಮದಲ್ಲಿ ಪರಿಶುದ್ಧನಂಬಿಕೆ ತಾಳಿದ್ದ ವಿವೇಕಾನಂದ ಮತ್ತು ಮಹಾತ್ಮ ಗಾಂಧಿಯವರು ಯಾವತ್ತೂ ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯನ್ನು ಸಮರ್ಥಿಸಲಿಲ್ಲ; ಅನ್ಯ ಧರ್ಮದ್ವೇಷವನ್ನು ಪ್ರತಿಪಾದಿಸಲಿಲ್ಲ. ವಿವೇಕಾನಂದರು ಚಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ದಿನಾಂಕ : ೧೧-೯-೧೮೯೩ ರಂದು ಮಾತನಾಡುತ್ತ ಹಿಂದೂ ಧರ್ಮದ ಮಹತ್ವವನ್ನು ಹೇಳಿದದಲ್ಲದೆ “ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರಿಯುತ್ತಿತ್ತು” ಎಂದು ಅಭಿಪ್ರಾಯಪಟ್ಟರು. ಈ ಮಾತನ್ನು ಹಿಂದೂ ಧರ್ಮದವರನ್ನು ಒಳ ಗೊಂಡಂತೆ ಎಲ್ಲ ಧರ್ಮದವರೂ ಮನನ ಮಾಡಿಕೊಳ್ಳಬೇಕು. ಇನ್ನೊಮ್ಮೆ ವಿವೇಕಾನಂದರು ಹೇಳಿದರು : “ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದರ್ದಿನ ಪ್ರಪಂಚಕ್ಕೆ ಬಾರದಿರಲಿ. ಆಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು. ವೃವಿಧ್ಯವೇ ಜೀವನದ ರಹಸ್ಯ… ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು… ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮೆದುಳು, ಇಸ್ಲಾಮಿನ ದೇಹ – ಇದೇ ನಮ್ಮ ಪುರೋಭಿವೃದ್ಧಿಗೆ ಹಾದಿ”. ವಿವೇಕಾನಂದರ ಈ ಸಮತೂಕದ ದೃಷ್ಟಿಕೋನ ಹಿಂದೂ ಧರ್ಮೀಯರಿಗೆ ಮಾದರಿಯಾಗಬೇಕು. ಅವರು “ಬಡವರಿಗೆ ಮೊದಲು ತಿನ್ನಲು ರೊಟ್ಟಿ ಕೊಡಿ; ಹಸಿವು ಹಿಂಗಿಸಿ; ಆಮೇಲೆ ಧರ್ಮದ ಮಾತಾಡಿ” ಎಂದು ಪ್ರತಿಪಾದಿಸಿದ್ದು ಮನನವಾಗಬೇಕು. ಈ ಕೆಲಸವನ್ನು ಹಿಂದೂ ಧರ್ಮ ಧುರೀಣರು ಮಾಡದೆ, ಕ್ರೈಸ್ತ ಧರ್ಮ ಧುರೀಣರು ಮಾಡಿದರೆ ಆಗ ತಪ್ಪು ಯಾರದು?

ಹಿಂದೂ ಧರ್ಮದೊಳಗಿಂದಲೇ ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸುವ ಗಾಂಧಿ, ಹಿಂದೂ ಧರ್ಮದಾಚೆಗೆ ನಿಂತು ನೋಡಿದ ಡಾ. ಅಂಬೇಡ್ಕರ್ ಅವರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಅಸ್ಪೃಶ್ಯತೆಯ ವಿರೋಧದಲ್ಲಿ ಒಂದಾಗಿದ್ದರು. ಗಾಂಧೀಜಿಯವರು ೧೯೩೨ರಲ್ಲಿ ಹೇಳಿದರು : “ಹಿಂದೂ ಧರ್ಮವು ಬದುಕಬೇಕಾದರೆ ಅಸ್ಪೃಶ್ಯತೆ ಸಾಯಬೇಕು. ಅಸ್ಪೃಶ್ಯ್ತೆಯು ಬದುಕಿದರೆ ಹಿಂದೂಧರ್ಮವು ಸಾಯುತದೆ.” ಹೀಗೆ ಹೇಳಿದ್ದಲದೆ – ‘ಅಸ್ಪೃಶ್ಯತೆಯು ಹಿಂದೂಧರ್ಮಕ್ಕೆ ಶಾಪ’ ಎಂದು ಗಾಂಧೀಜಿ ನಂಬಿದ್ದರು. ಸಂವಿಧಾನ ರಚನಾಸಭೆಯ ಚರ್ಚೆ ಗಳಲ್ಲಿ ಡಾ. ಅಂಬೇಡ್ಕರ್ “ಯಾವುದೇ ಒಂದು ಧರ್ಮವು ಈ ದೇಶದ ಅಧಿಕೃತ ಧರ್ಮವಲ್ಲ. ಧಾರ್ಮಿಕವಾಗಿ ಮೇಲು-ಕೀಳುಗಳಿಗೆ ಅವಕಾಶವಿಲ್ಲ. ಸಂವಿಧಾನವು ಧರ್ಮ-ಧರ್ಮಗಳ ನಡುವಿನ ಅಸಹನೆಯನ್ನು ಒಪ್ಪುವುದಿಲ್ಲ” ಎಂದು ಪ್ರತಿಪಾದಿಸಿದರು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆಯಿದ್ದ ಡಾ. ಎಸ್. ರಾಧಾಕೃಷ್ಣನ್ ಸಹ ಇದೇ ಆಶಯವನ್ನು ಬಲವಾಗಿ ಮಂಡಿಸಿದರು. ಈಗ ಈ ಆಶಯವು ಸಂವಿಧಾನದ ಭಾಗವಾಗಿದೆ.

ಭೈರಪ್ಪನವರು ಪರಾಮರ್ಶನೆಗಾಗಿ ನೀಡಿರುವ ಗ್ರಂಥಸೂಚಿಯಲ್ಲಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ರಾದಾಕೃಷ್ಣನ್ – ಇವರ ಯಾವ ಗ್ರಂಥದ ಹೆಸರೂ ಇಲ್ಲವೆಂಬುದನ್ನು ಗಮನಿಸಬೇಕು. ವಿವೇಕಾನಂದ, ಗಾಂಧೀಜಿ ಮತ್ತು ರಾಧಾಕೃಷ್ಣನ್ ಅವರು ಹಿಂದೂ ಧರ್ಮದಲ್ಲಿ ನಂಬಿಕೆಯಿದ್ದ ನೇತಾರರು. ಅಂಬೇಡ್ಕರ್ ಅವರು ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿದವರು. ಮತಾಂತರದ ಪ್ರಸ್ತಾಪ ಮಾಡುವಾಗ ಇವರ ವಿಚಾರಗಳ ಜೊತೆ ಅನುಸಂಧಾನ ನಡೆಸದಿದ್ದರೆ, ಅದು ಅಸಮಗ್ರ ಚಿಂತನೆಯಾಗುತ್ತದೆ. ಹಿಂದೂ ಧರ್ಮನಿಷ್ಠರೂ ಮತಾಂತರ ವಿರೋಧಿಗಳೂ ಆದ ಭೈರಪ್ಪನವರಿಗೆ ಈ ನಾಲ್ವರು ಮಹನೀಯರ ವಿಚಾರಗಳು ಮುಖ್ಯವಾಗದೆ ಹೋದದ್ದು ವಿಪರ್ಯಾಸವೇ ಸರಿ. ಸರ್ವಧರ್ಮ ಸಹಿಷ್ಣುಗಳಾದ ಓದುಗರು ‘ಆ ನಾಲ್ವರು ಮಹನೀಯರ ಜೊತೆ ಭೈರಪ್ಪನವರ ಹೆಸರು ಪ್ರಸ್ತಾಪಿಸಿದ್ದೇ ವಿಪರ್ಯಾಸ’ ಎಂದು ನನ್ನತ್ತ ಬೊಟ್ಟು ಮಾಡಿದರೆ ನಾಚಿ ನಮಿಸುತ್ತೇನೆ!

ಭೈರಪ್ಪನವರ ಕ್ರೈಸ್ತ ವಿರೋಧಿ ವಾದಸರಣಿ ಎಲ್ಲಿಯವರೆಗೆ ಹೋಗುತ್ತದೆಯೆಂದರೆ ಮದರ್ ತೆರೇಸಾ ಅವರನ್ನೂ ಅದು ಬಿಡುವುದಿಲ್ಲ. ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮಿಗಳಿಗೆ ಸಿಗದ ಪ್ರಚಾರವು ತೆರೆಸಾ ಅವರಿಗೆ ಸಿಕ್ಕಿದ ಬಗ್ಗೆ ಅಸಹನೆ ತೋರುವ ಭೈರಪ್ಪ ನವರು ತೆರೇಸಾ ಅವರಿಗೂ ಏಕಾ‌ಏಕಿ ಪ್ರಚಾರ ಸಿಗಲಿಲ್ಲವೆಂಬುದನ್ನು ಗಮನಿಸಿಲ್ಲವೆಂದು ಕಾಣುತ್ತದೆ. ಜೊತೆಗೆ, ಅನೇಕ ಮಠಗಳು ಇಂದಿಗೂ ಸಹಪಂಕ್ತಿ ಭೋಜನ ವ್ಯವಸ್ಥೆಗೆ ವಿರೋಧವಾಗಿರುವುದನ್ನು ಮರೆತಂತೆ ಕಾಣುತ್ತದೆ. ಅಥವಾ ಇಂತಹ ಮಾನವೀಯ ಅಂಶಗಳು ಮುಖ್ಯವೆನಿಸಿಲ್ಲ. ಎಷ್ಟೋ ಮಠಗಳು ಊಟ ಹಾಕುವುದಕ್ಕೆ ಮತ್ತು ದೇವಾಲಯ ಪ್ರವೇಶಕ್ಕೆ ಹಾಕುವ ನಿರ್ಬಂಧಗಳು ಅಸಮಾನತೆಯ ಸಮಾಜದಿಂದ ಹುಟ್ಟಿ ಬಂದಿವೆ. ಬಸವಣ್ಣನವರ ಧರ್ಮವನ್ನು ನಂಬಿರುವ ಡಾ. ಶಿವಕುಮಾರ ಸ್ವಾಮಿಗಳ ಹೆಸರನ್ನು ತೆರೇಸಾ ಅವರ ತೆಗಳಿಕೆಗಾಗಿ ಬಳಸುವ ಭೈರಪ್ಪನವರು ಬಸವಣ್ಣನವರು ಪ್ರತಿಪಾದಿಸಿದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಬೆಳಸಿದ ಚಳವಳಿಯ ಸ್ವರೂಪವನ್ನು ದಯವಿಟ್ಟು ಗಮನಿಸಬೇಕು. ವರ್ಣಾಶ್ರಮ ಧರ್ಮದ ತುಳಿತದಲ್ಲಿ ಸಾಮಾಜಿಕ ಸಂಕಟದಲ್ಲಿ ಬೇಯುತ್ತ, ಧಾರ್ಮಿಕ ನಿಷೇಧಗಳಿಗೆ ಒಳಗಾಗಿದ್ದ ಅಸಂಖ್ಯಾತ ಜಾತಿ ಜನಾಂಗಗಳು ಬಸವಣ್ಣನವರ ವೀರಶೈವ ಧರ್ಮಕ್ಕೆ ಸೇರಿದರಲ್ಲವೆ? ನೊಣಬರು, ಸಾದರು, ಬಣಜಿಗರು, ಹೀಗೆ ಅದೆಷ್ಟು ಜನ ಈಗಲೂ ಅದೇ ಮೂಲ ಹೆಸರಿನ ಲಿಂಗಾಯತರಾಗಿಲ್ಲವೆ? ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದವರೆಲ್ಲ ಯಾಕೆ ‘ಶಿವಧರ್ಮ’ಕ್ಕೆ ಸೇರಿದರು? ಒಂದು ಧರ್ಮವು ತಮ್ಮನ್ನು ಕಡೆಗಣಿಸಿ ದೂರ ತಳ್ಳಿದಾಗ, ಅಥವಾ ಧರ್ಮದೊಳಗೆ ಸೇರಿಸಿಕೊಳ್ಳದೆ ಇದ್ದಾಗ, ಸಾಮಾಜಿಕ ಗೌರವ ತೋರುವ ಇನ್ನೊಂದು ಧರ್ಮಕ್ಕೆ ಸೇರುವುದು ಸರಿಯೆಂಬುದನ್ನು ವಚನಕಾರರ ಚಳವಳಿ ಮತ್ತು ಶಿವಕುಮಾರಸ್ವಾಮಿಗಳನ್ನು ಗೌರವಿಸುವವರು ಒಪ್ಪಬೇಕಾಗುತ್ತದೆ. ಇಲ್ಲದಿದ್ದರೆ ವಿನಾಕಾರಣ ಕ್ರೈಸ್ತರ ಟೀಕೆಗೆ ಹಿರಿಯ ಶರಣರನ್ನು ‘ಅಸ್ತ್ರ’ವಾಗಿ ಬಳಸಿದ್ದು ತಪ್ಪಾಗುತ್ತದೆ.

ಇನ್ನು, ಭೈರಪ್ಪನವರ ಚಾರಿತ್ರಿಕ ತಿಳುವಳಿಕೆಯನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕು. ಅವರು ಪ್ರವಾದಿಗಳ ಬಗೆಗೆ ವಿಶ್ಲೇಷಿಸಿದ್ದು ಹಿಂದೆ ಕ್ರೈಸ್ತ ಧರ್ಮ ನಡೆಸಿದ ದಬ್ಬಾಳಿಕೆಯನ್ನು ವಿವರಿಸಿದ್ದು – ಇಂತಹ ಸಂಗತಿಗಳು ಸುಳ್ಳೆಂದು ನಾನು ಹೇಳುವುದಿಲ್ಲ. ಆದರೆ, ವಿನಮ್ರ ಪ್ರಶ್ನೆಗಳು ಮಾತ್ರ ನನ್ನಲ್ಲಿವೆ. ಭೈರಪ್ಪನವರು ಹೇಳಿದ್ದಲ್ಲ ನಿಜವಾಗಿದ್ದರೂ ಆ ಕಾರಣಕ್ಕೆ ಇಂದಿನ ಸಂದರ್ಭದಲ್ಲಿ ಕ್ರೈಸ್ತರನ್ನು ವಿರೋಧಿಸಬೇಕೆ? ಒಂದು ವೇಳ ಕುರಾನ್, ಬೈಬಲ್‌ಗಳಲ್ಲಿ ಒಪ್ಪಿತವಾಗದ ವಿಚಾರಗಳಿದ್ದರೂ ಆ ಕಾರಣಕ್ಕೆ ಆಯಾ ಧರ್ಮದವರನ್ನು ಅಸಹನೆಯಿಂದ ಕಾಣಬೇಕೆ? ‘ಮನುಸ್ಕೃತಿ’ಯಲ್ಲಿರುವ ಸಾಮಾಜಿಕ ಅಸಮಾನತೆಯ ಕಾರಣಕ್ಕಾಗಿ ಬ್ರಾಹ್ಮಣರೆಲ್ಲರೂ ಕೆಟ್ಟವರೆಂದು ಹೇಳಬೇಕೆ? ಇಷಕ್ಕೂ ಇಂದಿನ ಎಲ್ಲಾ ಮುಸ್ಲಿಮರು, ಕ್ರೈಸ್ತರು, ಹಿಂದೂಗಳು ತಂತಮ್ಮ ‘ಧರ್ಮಗ್ರಂಥ’ಗಳಲ್ಲಿರುವ ಪ್ರತಿ ಸಾಲನ್ನು ಅದು ಇದ್ದ ಹಾಗೆಯೇ ಅನುಸರಿಸುತ್ತಿದ್ದಾರೆಯೆ? ಎಲ್ಲ ಧರ್ಮಗಳಲ್ಲೂ ಕೆಲ ಕಿಡಿಗೇಡಿಗಳು ಇರುತ್ತಾರೆ. ನಿಜ, ಆದರೆ ಅವರ ಮೂಲಕ ಇಡೀ ಧರ್ಮವನ್ನು ಅಳೆಯುವುದು ಎಷ್ಟರ ಮಟ್ಟಿಗೆ ಸರಿ? ಯಾವುದಾದರೂ ಧರ್ಮದಲ್ಲಿ ಅಥವಾ ಗ್ರಂಥದಲ್ಲಿ ಜೀವ ವಿರೋಧಿ ಅಂಶಗಳಿದ್ದರೆ ಅದನ್ನು ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ. ಹಾಗೆಂದು ಆಯಾ ಧರ್ಮೀಯರನ್ನೆಲ್ಲ ಸಾರಾಸಗಟಾಗಿ ಒಂದೇ ತಕ್ಕಡಿಯಲ್ಲಿ ತೂಗಲಾದೀತೆ? ಇತಿಹಾಸದಲ್ಲಿ ಕ್ರೈಸ್ಥಧರ್‍ಮವಷ್ಟೇ ಅಲ್ಲ, ಹಿಂದೂ ಧರ್ಮವನ್ನೂ ಒಳಗೊಂಡಂತೆ ಅನೇಕ ಧರ್ಮಗಳು ಶಕ್ತ್ಯಾನುಸಾರ ಶೋಷಣೆ ಮಾಡಿವೆ; ಶಕ್ತಿ ಪ್ರದರ್ಶನ ಮಾಡಿವೆ. ಆ ಕಾರಣಕ್ಕೆ ತೋಳ-ಕುರಿಮರಿ ಕತೆಯಲ್ಲಿರುವಂತೆ ‘ನೀನಲ್ಲದಿದ್ದರೆ ನಿನ್ನ ತಾತ ತಪ್ಪು ಮಾಡಿರಬೇಕು’ ಎಂದು ಬಲಿತೆಗೆದುಕೊಳ್ಳಬೇಕೆ? ವರ್ತಮಾನದಲ್ಲಿ ಹೇಗೆ ಬದುಕುತ್ತಿದ್ದಾರೆ ಎಂಬುದೇ ಮುಖ್ಯ ಮಾನದಂಡವಾಗಬೇಕಲ್ಲವೆ? ಒಂದು ವೇಳೆ ಕೆಲ ಮುಸ್ಲಿಮರು ಮತ್ತು ಕೆಲ ಕ್ರೈಸ್ತರು ತಪ್ಪು ಮಾಡಿದ್ದಾರೆ ಎಂದಿಟ್ಟುಕೊಂಡರೂ ಹಿಂದೂಗಳೂ ಅವರಂತೆಯೇ ತಪ್ಪು ಮಾಡುವುದು ಆದರ್ಶವಾದೀತೆ? ಇಂತಹ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಇದ್ದರೆ ಭೂತಕಾಲವನ್ನೇ ವರ್ತಮಾನಕಾಲವೆಂದು ಭ್ರಮಿಸುವಂತೆ ಉದ್ರೇಕಿಸುವ ಉಲ್ಲೇಖಗಳು ವಿಜೃಂಭಿಸುತ್ತವೆ!

ಭೈರಪ್ಪನವರ ಗ್ರಹಿಕೆಯ ವಿಧಾನಕ್ಕೆ ಅವರ ಲೇಖನದಲ್ಲಿ ಮತ್ತಷ್ಟು ಪುರಾವೆಗಳು ಸಿಗುತ್ತವೆ. ತಮ್ಮ ಲೇಖನದ ಆರಂಭ ಭಾಗದಲ್ಲಿ – ಗಲಭೆಗಳಿಗೆ ಭಜರಂಗದಳದ ಪಾತ್ರವೆಷ್ಟು, ಮತಾಂತರ ಗೊಂಡವರ ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಗಲಭೆ ಮಾಡಿರುವವರೆಷ್ಟು ಎಂದು ಯೋಚಿಸುವುದು ಇವರಾರಿಗೂ ಬೇಕಿಲ್ಲವೆಂದು ಕೇಂದ್ರದ ಆಡಳಿತ ಪಕ್ಷ, ಎಡಪಂಥೀಯರು ಮತ್ತು ಇಂಗ್ಲಿಷ್ ಸುದ್ದಿ ಮಾಧ್ಯಮದವರ ಬಗ್ಗೆ ಟೀಕಿಸುತ್ತಾರೆ. ಸ್ವತಃ ಭಜರಂಗದಳದ ಮುಖ್ಯಸ್ಥರು ತಾವೇ ಗಲಭೆಗಳಿಗೆ ಕಾರಣವೆಂದು ಘೋಷಿಸಿಕೊಂಡ ಮೇಲೆ ಅವರನ್ನು ಸುಳ್ಳುಗಾರರನ್ನಾಗಿ ಮಾಡುವುದು ಧರ್ಮವಾದೀತೆ?

ಲೇಖನದ ಕೊನೆಯ ಭಾಗಕ್ಕೆ ಬರುತ್ತ ಭೈರಪ್ಪನವರು “ಕಾಂಗ್ರೆಸ್ಸಿಗೆ ನೆಹರೂ ಕಾಲದಿಂದಲೂ ಹಿಂದೂಗಳನ್ನು ಬಲಿಕೊಟ್ಟು ಅದನ್ನು ಸಮರ್ಥಿಸುವ ಪರಿಪಾಠವಿದೆ. ಕಾಂಗ್ರೆಸ್ ಮೇಲೆ ಮಹಾತ್ಮಗಾಂಧಿಯ ಹಿಡಿತವು ಸ್ವಾತಂತ್ರ್ಯ ಪ್ರಾಪ್ತಿಯ ಮೊದಲೇ ಸಡಿಲವಾಗಿತ್ತು. ನೆಹರೂರ ರೀತಿ ನೀತಿಗಳು ಎಂದೂ ಗಾಂಧಿತತ್ವಕ್ಕೆ ವಿರೋಧವಾಗಿಯೇ ಇದ್ದವು” ಎಂದು ವ್ಯಾಖ್ಯಾನಿಸುತ್ತಾರೆ. ಕಾಂಗ್ರೆಸ್ ಪಕ್ಷದ ಕೆಡಕುಗಳನ್ನು ನಾನು ಸಮರ್ಥಿಸಿಕೊಳ್ಳಬೇಕಾಗಿಲ್ಲ. ಆದರೆ ನೆಹರೂ ಕಾಲದ ಬಹುಮುಖ್ಯ ಸಾಧನೆಗಳಲ್ಲಿ ಅವರ ಜಾತ್ಯತೀತ ನೀತಿಯೂ ಸೇರಿದೆಯೆಂಬುದು ಈಗ ಚರಿತ್ರೆಯ ಭಾಗ. ನೆಹರೂ ಅವರಿಗೂ ಗಾಂಧೀಜಿಯವರಿಗೂ ಯಂತ್ರ ನಾಗರೀಕತೆಯ ಕೆಲ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಜಾತ್ಯತೀತ ತತ್ವದ ಬಗ್ಗೆ ಕಿ೦ಚಿತ್ತೂ ಭಿನ್ನಾಭಿಪ್ರಾಯವಿರಲಿಲ್ಲ. ಈ ಕಾರಣಕ್ಕಾಗಿಯೇ ನೆಹರೂ ಅವರು ಪ್ರಧಾನಿ ಸ್ಥಾನಕ್ಕೆ ಗಾಂಧೀಜಿಯವರ ಆಯ್ಕೆಯಾಗಿದ್ದರು. ದೇಶ ವಿಭಜನೆಯ ನಂತರ ಕೋಮು ಸಾಮರಸ್ಯ ಸಾಧನೆಗೆ, ಮತ್ತು ಅನ್ಯಧರ್ಮದ್ವೇಷದ ಶಮನಕ್ಕೆ ನೆಹರೂ ಪ್ರಧಾನಿಯಾಗುವುದು ಅಗತ್ಯವೆಂದು ಗಾಂಧೀಜಿ ಭಾವಿಸಿದ್ದರೆಂದು ಅವರ ಸಮೀಪವರ್ತಿಗಳು ಬರೆದ ಕೃತಿಗಳಲ್ಲಿ ಮಾಹಿತಿಯಿದೆ. ಈ ವಿಷಯದಲ್ಲಿ ನೆಹರೂ ಅವರು ಗಾಂಧೀಜಿಯವರ ನಂಬಿಕೆಯನ್ನು ಸುಳ್ಳು ಮಾಡಲಿಲ್ಲ. ಇದು ಚರಿತ್ರೆ, ವಿವಿಧ ಅಭಿಪ್ರಾಯಗಳನ್ನು ತುಲನೆ ಮಾಡಿ ನೋಡಿದಾಗ ಕಂಡುಬರುವ ಸತ್ಯಸಾರ.

ಮುಂದುವರೆದು, ಫ್ರಾನ್ಸ್‌ನಲ್ಲಿ “ಶಾಲಾ ಮಕ್ಕಳು ಯಾವ ಮತ ಲಾಂಛನಗಳನ್ನೂ ಧರಿಸಬಾರದು” ಎಂಬ ಕಾನೂನು ಇರುವುದನ್ನು ಮೆಚ್ಚುಗೆಯಿಂದ ಪ್ರಸ್ತಾಪಿಸಲಾಗಿದೆ. ಇದರಿಂದ ಮುಸ್ಲಿಂ ಮತ್ತು ಸಿಖ್‌ಜನಾಂಗದವರಿಗೆ ತೊಂದರೆಯಾಗಿದೆ. ನಮ್ಮ ಪಧಾನಿಗಳು ಫ್ರಾನ್ಸ್‌ನ ಕಾನೂನನ್ನು ಸಡಿಲಿಸಲು ಕೇಳಿಕೊಂಡಿದ್ದಾರೆಂದು ತಿಳಿಸಲಾಗಿದೆ. ಇದು ನಿಜ. ಆದರೆ ಫ್ರಾನ್ಸ್ ಕಾನೂನು ನಮಗೆ ಆದರ್ಶವಾದೀತೆಂದು ಭೈರಪ್ಪನವರು ಭಾವಿಸಿದ್ದಾರೆಯೆ? ಹಾಗೆ ಭಾವಿಸಿದ್ದರೆ ಅದು ಭಾರತದ ಮಟ್ಟಿಗೆ ಅನುಷ್ಠಾನಕ್ಕೆ ಅರ್ಹವಲ್ಲವೆಂದು ಹೇಳಬೇಕಾಗಿದೆ. ಬಹುಸಂಸ್ಕೃತಿ, ಬಹುಧರ್ಮಗಳ ದೇಶದಲ್ಲಿ (ವಿವೇಕಾನಂದರು ತಿಳಿಸಿದಂತೆ) ವೈವಿಧ್ಯತೆಯನ್ನು ಉಳಿಸಬೇಕಾಗುತ್ತದೆ. ನಮ್ಮ ಸಂವಿಧಾನವೂ ಅದಕ್ಕೆ ಅವಕಾಶ ನೀಡಿದೆ. ಜಾತಿಯನ್ನು ಜಾತಿವಾದವನ್ನಾಗಿಸುವುದು ಧರ್ಮವನ್ನು ಕೋಮುವಾದವನ್ನಾಗಿಸುವುದು ಮಾತ್ರ ಖಂಡಿತ ತಪ್ಪಾಗುತ್ತದೆ.

ಭೈರಪ್ಪನವರ ಚಾರಿತ್ರಿಕ ಗ್ರಹಿಕೆಯ ವಿಧಾನಕ್ಕೆ ಉತ್ತಮ ಉದಾಹರಣೆಯು ಲೇಖನದ ಕಟ್ಟಕಡೆಯ ಭಾಗದಲ್ಲಿ ಬರುತ್ತದೆ. “ಸತತ ಭಯೋತ್ಪಾದನೆಯಿಂದ ದೇಶದ ಧೃತಿಯನ್ನು ಉಡುಗಿಸಿ ಆನಂತರ ಎಲ್ಲ ಕಡೆಗಳಲ್ಲೂ ಏಕಕಾಲದಲ್ಲಿ ಬೆಂಕಿ ಹಚ್ಚಿ ಅಧಿಕಾರ ಹಿಡಿಯುವ ತಂತ್ರ ಭಯೋತ್ಪಾದಕರದು. ಲೆನಿನ್ ಮಾಡಿದ್ದೂ ಇದೇ ತಂತ್ರವನ್ನು. ಮಾವೋ ಮಾಡಿದ್ದೂ ಇದೇ ತಂತ್ರವನ್ನು – ನೇಪಾಳದ ಪ್ರಚಂಡನದೂ ನಮ್ಮ ನಕ್ಸಲೀಯರದೂ ಇದೇ ತಂತ್ರ. ಇದೇ ವಿಧಾನ. ಈ ಹತಾಶೆ ಹಿಂದೂಗಳಲ್ಲಿಲ್ಲವೆ? ಅವರಲ್ಲಿ ಕೆಲವರಾದರೂ ಹತಾಶೆಯ ದಾರಿ ಹಿಡಿದರೆ ಸಮೂಹ ಖಂಡನೆಯಿಂದ ಅದನ್ನು ತಡೆಯಲು ಸಾಧ್ಯವೇ?” – ಇದು ಭೈರಪ್ಪನವರ ಗ್ರಹಿಕೆ ಮತ್ತು ಪ್ರಶ್ನೆ.

ಭೈರಪ್ಪನವರ ಅಭಿಪ್ರಾಯದಲ್ಲಿ ಲೆನಿನ್, ಮಾವೊ, ಪ್ರಚಂಡ – ಇವರೆಲ್ಲ ತಂತ್ರ ವಿಧಾನದಲ್ಲಿ ಭಯೋತ್ಪಾದಕರು. ಬ್ರಿಟಿಷರು ಸ್ರಾತಂತ್ರ್ಯ ಹೋರಾಟಗಾರರನ್ನು ನೋಡುತ್ತಿದ್ದ ದೃಷ್ಟಿಯೂ ಇದೇ ರೀತಿಯಿತ್ತು. ಲೆನಿನ್, ಮಾವೊ ಮುಂತಾದವರು ‘ಜನತೆಯ ಸೈನ್ಯ’ವನ್ನು ಕಟ್ಟಿದರು. ಸಶಸ್ತ್ರ ಹೋರಾಟದಿಂದಲೇ ಸ್ಥಾತಂತ್ರ್ಯ- ಸಮಾನತೆಯ ಸಮಾಜ ಸ್ಥಾಪನೆ ಸಾಧ್ಯ ಎಂದು ನಂಬಿದರು. ನಮ್ಮಲ್ಲಿ ಸುಭಾಷ್ ಚಂದ್ರಬೋಸರು ರಾಷ್ಟ್ರೀಯ ಸೈನ್ಯವನ್ನು ಕಟ್ಟಿದರು. ಹಾಗೆಂದು ಅವರನ್ನು ಭಯೋತ್ಪಾದಕರೆಂದು ಕರೆಯಲಾದೀತೆ? ಬಂದೂಕ ಹಿಡಿದರೆಂದು ಭಗತ್‌ಸಿಂಗ್ ಮತ್ತು ಗೆಳೆಯರನ್ನು ನಾವು ಭಯೋತ್ಪಾದಕರೆನ್ನಲಾದೀತೆ? ನಮ್ಮ ನಕ್ಸಲೀಯರೂ ಸಶಸ್ತ್ರ ಹೋರಾಟದ ಮೂಲಕವೇ ಸಮಾನತೆಯ ಸಮಾಜ ಸ್ಥಾಪನೆ ಸಾಧ್ಯವೆಂದು ನಂಬಿದ್ದಾರೆ. ಸಶಸ್ತ್ರ ಹೋರಾಟ ಮತ್ತು ಹಿಂಸಾಚಾರವನ್ನು ನಾವು ವಿರೋಧಿಸುವುದು ಸರಿಯಾಗಬಹುದೇ ಹೊರತು ಧರ್ಮದ ಹೆಸರಲ್ಲಿ ಹುಟ್ಟಿಕೊಂಡ ಭಯೋತ್ಪಾದಕರ ಸಾಲಿನಲ್ಲಿ ಇವರನ್ನು ನಿಲ್ಲಿಸಲಾಗದು. ಭೈರಪ್ಪನವರ ದೃಷ್ಟಿಯಲ್ಲಿ ಲೆನಿನ್, ಮಾವೊ ಮುಂತಾದವರೆಲ್ಲ ಭಯೋತ್ಪಾದಕರಾದರೆ, ಅವರವರ ದೇಶದಲ್ಲಿ ಅವರು ಕ್ರಾಂತಿಕಾರಿ ನಾಯಕರು. ನಾವು ಎಲ್ಲಿ ನಿಂತು ನೋಡುತ್ತೇವೆ, ಎಂಥ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆ ಎಂಬ ಅಂಶಗಳು ಕ್ರಾಂತಿಕಾರಿಗಳನ್ನು ಭಯೋತ್ಪಾದಕರನ್ನಾಗಿ ಮಾಡಬಲ್ಲವು, ಭಯೋತ್ಪಾದಕರನ್ನು ಕ್ರಾಂತಿಕಾರಿಗಳನ್ನಾಗಿ ಮಾಡಬಲ್ಲವು. ಅಮೇರಿಕವು ಇತ್ತೀಚೆನವರೆಗೆ ನೆಲ್ಸನ್ ಮಂಡೆಲಾ ಅವರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಇಟ್ಟಿತ್ತೆಂಬುದನ್ನು ಇಲ್ಲಿ ನೆನೆಯಬಹುದು. ಅವರ ವಿಚಾರಧಾರೆಯನ್ನು ಒಪ್ಪುವುದು ಬಿಡುವುದು ಬೇರೆ ವಿಷಯ; ಆಯಾ ದೇಶದ ಜನರಿಗಾಗಿ ಸಮಾನತೆಗಾಗಿ ಹೋರಾಟ ಕಟ್ಟಿದವರು ಭಯೋತ್ಪಾದಕರಂತೂ ಅಲ್ಲ.

ಲೆನಿನ್, ಮಾವೊ ಮುಂತಾದವರ ಹೋರಾಟಗಳ ವಿಧಾನಕ್ಕೆ ಹತಾಶೆ ಕಾರಣವೆಂದು ಭೈರಪ್ಪನವರು ನಂಬಿದಂತೆ ಕಾಣುತ್ತದೆ. ಆದ್ದರಿಂದ ‘ಈ ಹತಾಶೆ ಹಿಂದೂಗಳಲ್ಲಿಲ್ಲವೆ?’ ಎಂದು ಪ್ರಶ್ನಿಸುತ್ತಾರೆ. ಭೈರಪ್ಪನವರು ಪ್ರಸ್ತಾಪಿಸುವವರ್ಯಾರೂ ಹತಾಶೆಗೆ ಒಳಗಾಗಿ ಶಸ್ತ್ರ ಹಿಡಿಯಲಿಲ್ಲ. ಅಧಿಕಾರಶಾಹಿಗೆ ಸೈನ್ಯ ಮತ್ತು ಪೋಲಿಸಿನ ಶಸ್ತ್ರಬಲವಿರುವುದರಿಂದ ಅದನ್ನು ಅದೇ ವಿಧಾನದಿಂದ ಎದುರಿಸಬೇಕು ಎನ್ನವುದು ಅವರ ಸಿದ್ಧಾಂತ. ಈ ಸಿದ್ಧಾಂತದ ಸರಿ-ತಪ್ಪುಗಳದು ಬೇರೆ ಚರ್ಚೆ, ಅವರಲ್ಲಿದದ್ದು ಹತಾಶೆ ಅಲ್ಲ ಎಂದಷ್ಪೇ ನನ್ನ ಪ್ರತಿಪಾದನೆ. ಆದರೆ ಧಾರ್ಮಿಕ ಹಿಂಸಾಚಾರಕ್ಕಿಳಿಯುವ ಭಯೋತ್ಪಾದಕರಲ್ಲಿ ದ್ವೇಷ, ಅಸಹನೆ, ಹತಾಶೆ ಇರುತ್ತದೆ. ಇದು ಹಿಂದೂಗಳಿಗೆ ಖಂಡಿತ ಮಾದರಿಯಾಗಬೇಕಾಗಿಲ್ಲವೆಂದು ನಿಜವಾದ ಹಿಂದೂಗಳು ನಂಬುತ್ತಾರೆ. ಹಿಂದೂ ಧರ್ಮದಲ್ಲಿರುವ ಬಹುಸಂಖ್ಯಾತರು ಅನ್ಯಮತಧರ್ಮ ದ್ವೇಷಕ್ಕೆ ಬದ್ದವಾಗಿಲ್ಲ. ಅಂತೆಯೇ ಮುಸ್ಲಿಮರಲ್ಲಿ ಬಹುಸಂಖ್ಯಾತರು ಭಯೋತ್ಪಾದನೆಯ ಬೆಂಬಲಿಗರಲ್ಲ. ಮುಸ್ಲಿಮರ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಮತ್ತು ಬಹುಸಂಖ್ಯಾತರ ಕೋಮುವಾದಗಳು ಅವರಲ್ಲಿ ಅಭದ್ರತೆ ಮತ್ತು ಅಸಹನೆಯನ್ನು ಬಿತ್ತುವ ಒಂದೆರಡು ಕಾರಣಗಳಾಗಿವೆ. ಇನ್ನು ಕ್ರೈಸ್ತರ ವಿಷಯಕ್ಕೆ ಬಂದರೆ, ಅವರೆಲ್ಲರನ್ನೂ ಮತಾಂತರದ ಆರೋಪದ ಮೇಲೆ ಕಟಕಟೆಗೆ ನಿಲ್ಲಿಸುವಂತಿಲ್ಲ. ಸಂವಿಧಾನದ ೨೫ನೇ ವಿಧಿಯನ್ವಯ ಎಲ್ಲ ಧರ್ಮದವರೂ ತಂತಮ್ಮ ಪರವಾದ ಪ್ರಚಾರ ಮಾಡಲು ಅವಕಾಶವಿರುವುದನ್ನು ಕ್ರೈಸ್ತರು ಚನ್ನಾಗಿ ಬಳಸಿಕೊಂಡಿರಬಹುದು; ಅದನ್ನು ಬಲತ್ಕಾರದ ಮತಾಂತರ ಎನ್ನುವಂತಿಲ್ಲ. ಯಾವುದೇ ಮತಧರ್ಮದ ಸೋಂಕಿಲ್ಲದೆ ಕಿಟ್ಟೆಲ್ ಅವರು ಕನ್ನಡ ನಿಘಂಟು ರಚಿಸಿದ್ದನ್ನು, ಫ್ಲೀಟ್ ಮತ್ತು ರೈಸ್ ಅವರು ಅಸಂಖ್ಯಾತ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದನ್ನು – ಕ್ರೈಸ್ತರೆಂಬ ಕಾರಣಕ್ಕೆ ಮರೆಯುವಂತಿಲ್ಲ.

ಭೈರಪ್ಪನವರು ತಮ್ಮ ಲೇಖನದಲ್ಲಿ ತಿಳಿಸಿರುವ ಭೂತಕಾಲದ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿವರಗಳು ಚಾರಿತ್ರಿಕವಾಗಿ ಸತ್ಯವಾಗಿದ್ದರೂ ಆರೋಪ ಮತ್ತು ಅಸಹನೆಯ ನೆಲೆಯಲ್ಲಿ ನಿರೂಪಿತವಾಗಿರುವುದರಿಂದ ಮತ್ತು ಇವತ್ತಿವನ ಕ್ರೈಸ್ತ ಧರ್ಮದಲ್ಲಿ ಅವಕ್ಕೆ ಆದ್ಯತೆಯಿಲ್ಲದಿರುವುದರಿಂದ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇನ್ನು ಕೆಲವು ಸಂಗತಿಗಳು ಸೂಕ್ತ ಗ್ರಹಿಕೆ ಮತ್ತು ವ್ಯಾಖ್ಯಾನದ ಅಭಾವದಲ್ಲಿ ಕುದಿಯುತ್ತವೆ. ಹಿಂದೂ ಧರ್ಮದ ‘ಶ್ರೇಷ್ಠತೆ’ಯು ಅನ್ಯಧರ್ಮಗಳ ಅವಹೇಳನದಲ್ಲಿ ಇಲ್ಲ ಎಂಬ ಸಾಮಾನ್ಯ ಸಂಗತಿಯನ್ನು ಮನನ ಮಾಡಿಕೊಳ್ಳದಿದ್ದರೆ ಅಪಚಾರ ಮಾಡಿದಂತಾಗುತ್ತದೆ. ನಮ್ಮ ದೇಶದಲ್ಲಿ ದಟ್ಟವಾಗಿ ಬೆಳದುಬಂದ ಸೂಫಿಸಂತರ ಸಂಸ್ಕೃತಿಯನ್ನು ಅಣಕಿಸಿದಂತಾಗುತ್ತದೆ. ಇದು ಹಿಂದೂ ಮೂಲಭೂತವಾದಿಗಳಿಗೆ ಮಾತ್ರ ಹೇಳುವ ಮಾತಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಮುಂತಾದ ಎಲ್ಲ ಧರ್ಮೀಯರೂ ಮನಗಾಣ ಬೇಕಾದ ಅಂಶವೆಂದು ನಾನು ಭಾವಿಸುತ್ತೇನೆ. ಧಾರ್ಮಿಕ ಮೂಲಭೂತವಾದಕ್ಕೆ ಏನೇ ಕಾರಣ ಗಳಿರಬಹುದು; ಆ ವಿಶ್ಲೇಷಣೆಯನ್ನು ಹೊರತುಪಡಿಸಿ, ಯಾವುದೇ ಧರ್ಮದವರಿಂದ ನಡೆಯುವ ಹಿಂಸಾಚಾರವನ್ನು ಎಲ್ಲರೂ ವಿರೋಧಿಸಬೇಕು. ಧರ್ಮದೊಳಗಿದ್ದು ಧರ್ಮವನ್ನು ಮೀರುವ ಮನೋಧರ್ಮದಿಂದ ಇದು ಸಾಧ್ಯ ಅಥವಾ ಸಂಪೂರ್ಣ ಧರ್ಮ ನಿರಪೇಕ್ಷತೆಯಿಂದ ಸಾಧ್ಯ.

ಧಾರ್ಮಿಕ ಮೂಲಭೂತವಾದವು ಅನಗತ್ಯ ಸ್ಫೋಟ ಗುಣದತ್ತ ಸಾಗಿದೆ. ಇಷ್ಟು ದಿನಗಳ ಕಾಲ – ಯಾವುದಾದರೂ ಬಾಂಬ್‌ಸ್ಫೋಟವಾದರೆ ಅದು ಮುಸ್ಲಿಮ್ ಮೂಲದ ಮೂಲಭೂತವಾದಿ ಉಗ್ರ ಕೆಲಸವೆಂದು ಸಲೀಸಾಗಿ ಹೇಳಬಹುದಿತ್ತು. ಈಗ ಈ ಚಿತ್ರ ಬದಲಾಗತೊಡಗಿದೆ. ಕೆಲ ಹಿಂದೂ ಮೂಲಭೂತವಾದಿ ಸಂಘಟನೆಗಳು ಬಾಂಬ್ ಸ್ಫೋಟಕ್ಕೆ ಮುಂದಾಗಿರುವ ವರದಿಗಳು ಬರುತ್ತಿವೆ; ಅವು ನಿಜವಾಗುತ್ತಿವೆ. ಆಗಸ್ಟ್ ೨೦೦೮ರಲ್ಲಿ ಕಾನ್ಪುರದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಯೊಂದರ ಇಬ್ಬರು ಸತ್ತದ್ದು ಪತ್ತೆಯಾಯಿತು. ಮಹಾರಾಷ್ಠ್ರದ ಮಲೆಗಾಂವ್ ಸ್ಫೋಟಕ್ಕೆ ಕಾರಣರೆನ್ನಲಾದ ಹಿಂದೂ ಮೂಲಭೂತವಾದಿಗಳನ್ನು ಪೋಲಿಸರು ಈಗ ಬಂಧಿಸಿದ್ದಾರೆ. ಭೈರಪ್ಪನವರು ಭಾವಿಸಿದಂತೆ ಇದು ಹಿಂದೂಗಳ ಹತಾಶೆಯೊ ಅಥವಾ ಆಕ್ರಮಣಶೀಲತೆಯೊ ಎಂಬುದು ವಿವರವಾಗಿ ಚರ್ಚಿಸಬೇಕಾದ ವಿಷಯ. ಒಟ್ಟಿನಲ್ಲಿ ಬಂದೂಕ ಭಯೋತ್ಪಾದನೆಯು ಮುಸ್ಲಿಂ ಮೂಲಭೂತವಾದಿ ಉಗ್ರರಿಗೆ ಮಾತ್ರ ಈಗ ಸೀಮಿತವಾಗಿಲ್ಲವೆಂಬ ಚಿತ್ರ ಮೂಡಿಬರುತ್ತಿದೆ. ಅನಾರೋಗ್ಯಕರ ಧಾರ್ಮಿಕ ಸಂಘರ್ಷ ಮತ್ತು ಹಿಂಸಾಚಾರಗಳು ಹೆಚ್ಚು ತೊಡಗುತ್ತಿವೆ. ಇದು ಆಂತಕಕಾರಿಯಾದುದು.

ಆದ್ದರಿಂದ, ನಮ್ಮ ಸಂದರ್ಭದ ಧಾರ್ಮಿಕ ಸಂಘರ್ಷಗಳನ್ನು ಶಮನಗೊಳಿಸುವ ಬದಲು, ಹೆಚ್ಚಿಸುವುದಕ್ಕಾಗಿ ತಂತಮ್ಮ ಸಂಶೋಧನೆ ಮತ್ತು ಸೃಜನಶೀಲ ಶಕ್ತಿಯನ್ನು ಧಾರೆಯೆರೆಯುವವರು ಮರುಚಿಂತನೆ ಮಾಡಬೇಕಾದ ಕಾಲವಿದು.

ಪ್ರಸಿದ್ಧ ಭಾಷಾವಿಜ್ಞಾನಿ ನೋಮ್ ಚಾಮ್‌ಸ್ಕಿಯವರು ಸಾಹಿತಿಗಳು ಹಾಗೂ ಬುದ್ಧಿ ಜೀವಿಗಳ ಸಾಮಾಜಿಕ ಜವಾಬ್ದಾರಿಯನ್ನು ವಿವರಿಸುತ್ತ ಜನರಿಗೆ ಸತ್ಯದ ಸರಿದಾರಿ ತೋರುವ ಒತ್ತಾಸೆಯ ಬಗ್ಗೆ ಹೇಳಿದ್ದಾರೆ. ಸಾಹಿತಿಗಳು ‘ಸತ್ಯದ ಮಧೃವರ್ತಿ’ಗಳಾಗಬೇಕೆಂದು ಪ್ರತಿಪಾದಿಸಿದ್ದಾರೆ. ಕಡೆಗೆ ಇದು ಕೇವಲ ಸಾಹಿತಿ ಮತ್ತು ಬುದ್ಧಿಜೀವಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ ‘ಎಲ್ಲ ಮರ್ಯಾದಸ್ಥ ಮನುಷ್ಯರ ಕೆಲಸ’ – ಎನ್ನುತ್ತಾರೆ. ನಾವೆಲ್ಲ ಮರ್ಯಾದಸ್ಥ ಮನುಷ್ಯರಾಗೋಣ. ಇಷ್ಟು ಹೇಳಿದರೆ ಸಾಕಲ್ಲವೆ ?
*****
(ಅಕ್ಟೋಬರ್ ೨೦೦೮)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಬೆಟ್ಟ ಬಯಲುಗಳೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೩

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…