ಶರಣಾಗತಿಯ ಶತಮಾನ

ಶರಣಾಗತಿಯ ಶತಮಾನ

ನಾವಿಂದು ಹೊಸ ಶತಮಾನದ ಹೊಸ್ತಿಲಲ್ಲಿ ನಿಂತಿದ್ದೇವೆ. ಕೆಲವರಿಗೆ ಹೊಸ್ತಿಲಲ್ಲಿ ತಳಿರು ತೋರಣಗಳ ಸಂಭ್ರಮದ ಸ್ವಾಗತ ಕಾಣಿಸುತ್ತಿದ್ದರೆ, ಅಸಂಖ್ಯಾತ ಜನಸಮುದಾಯಕ್ಕೆ ನವವಸಾಹತುಶಾಹಿ ಬುಸುಗುಡುತ್ತಿದೆ. ಹೂವು ಅರಳುತ್ತದೆಯೆಂದು ಹೇಳುತ್ತಿರುವಲ್ಲಿ ಹಾವು ಹೆಡೆಯೆತ್ತುತ್ತಿದೆ. ಮುತ್ತೈದೆ ಸ್ವಾಗತ ನೀಡಬೇಕಾದ ಹೊಸ್ತಿಲು, ಹುತ್ತವಾಗಿ ಬೆಳೆದು ಬಡವರನ್ನು ಬೆದರಿಸುತ್ತಿದೆ; ಬೆವರಿನ ಬೇರುಗಳಿಗೆ ಬೆಂಕಿಬಿದ್ದು ಬಂಡವಾಳದ ಬಿಂಕಕ್ಕೆ ಹೊಸ ವಯ್ಯಾರ ಒದಗಿಬಂದಿದೆ.

ಹೊಸ್ತಿಲು ದಾಟಿ ಹೊಸ ಶತಮಾನಕ್ಕೆ ಕಾಲಿಡಲು ಬಂದ ಕೋಟ್ಯಾಂತರ ಬೆವರಿನ ಜನ, ತವರಿನ ನೆನಪಲ್ಲಿ ತಿರುಗಿ ನೋಡುವಂತಾಗಿದೆ.

ತೊಟ್ಟಿಲ ಹೊತ್ಕಂಡು ತವರ್‍ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕಂಡು
ತೌರೂರ ತಿಟ್ಟತ್ತಿ ತಿರುಗಿ ನೋಡ್ಯಾಳೊ!

ಎಂಬ ಜನಪದ ಗೀತೆ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಇಪ್ಪತ್ತನೇ ಶತಮಾನದ ತವರಿನ ಹೆಣ್ಣು ಹೊಸ ಶತಮಾನದ ಮುಂದೆ ನಿಂತಾಗ ಉಕ್ಕಿಬರುವ ನೆನಪುಗಳು ಒಂದಲ್ಲ ಎರಡಲ್ಲ, ನೂರಾರು. ಹಾಗಾದರೆ ಇಪ್ಪತ್ತನೆಯ ಶತಮಾನ ‘ತವರಿನ ಮನೆ’ಯೆ? ಇಪ್ಪತ್ತೊಂದನೆಯ ಶತಮಾನ ‘ಗಂಡನ ಮನೆ’ಯೆ? ಹೊಸ ಕನಸುಗಳನ್ನು ಹುಟ್ಟಿಸಿರುವ ಇಪ್ಪತ್ತೊಂದನೆಯ ಶತಮಾನ ಒಂದರ್‍ಥದಲ್ಲಿ ಬಡಹೆಣ್ಣಿನ ‘ಗಂಡನ ಮನೆ’. ಹೊಸ ಕನಸುಗಳು ಭ್ರಮೆಗಳಾಗಿ ಗಂಡನ ಷಂಡತನ ಬಯಲಾಗುವ ಎಲ್ಲ ಲಕ್ಷಣಗಳಿರುವಾಗ – ನಿಜ – ಹೊಸ ಶತಮಾನ, ಬಡವರ ಪಾಲಿಗೆ ಬಂಜೆಭೂಮಿಯಾಗಿ ಕಾಣಿಸತೊಡಗಿದೆ.

ಒಂದು ಮಾತಿನಲ್ಲಿ ಹೇಳಬೇಕೆಂದರೆ, ಇಪ್ಪತ್ತೊಂದನೆಯ ಶತಮಾನ ತವರಿನ ತಿಟ್ಟನ್ನು- ಅಂದರೆ ಗುಡ್ಡವನ್ನು – ಹತ್ತುವ ಶತಮಾನ; ಇಪ್ಪತ್ತೊಂದನೆಯ ಶತಮಾನ ತಿಟ್ಟನ್ನು ಇಳಿಯುವ ಶತಮಾನ. ಇಳಿಯುವ ಶತಮಾನವನ್ನೇ ಹತ್ತುವ ಶತಮಾನವೆನ್ನುತ್ತಿರುವುದು ಇಂದಿನ ವಿಪರ್‍ಯಾಸ!

ಹಾಗೆ ನೋಡಿದರೆ, ಇಪ್ಪತ್ತನೆಯ ಶತಮಾನವ ಹೊಸ ಆಶೋತ್ತರ ಹಾಗೂ ಹೋರಾಟಗಳ ಪರಿಸರವನ್ನು ರೂಪಿಸಿತ್ತು. ಬ್ರಿಟಿಷ್ ವಸಾಹತುಶಾಹಿ ವಿರೋಧದ ಹೋರಾಟ, ಅಸ್ಪೃಶ್ಯತೆಯ ವಿರುದ್ಧದ ಸಂಘರ್‍ಷ, ಸಮಾನತೆಯ ಆಂದೋಲನ, ಸ್ತ್ರೀಪರ ಸುಧಾರಣಾವಾದಿ ಕ್ರಿಯೆ – ಹೀಗೆ, ಚಲನಶೀಲತೆಗೆ ಒತ್ತಾಸೆಯಾದ ನೆಲೆಗಳು ಜಾಗೃತಗೊಂಡಿದ್ದವು; ಸಾಂಪ್ರದಾಯಿಕ ಜಡನೆಲೆಗಳು ಬೆದರಿ ಬಸವಳಿಯತೊಡಗಿದ್ದವು. ಬ್ರಿಟಿಷರ ವಿರುದ್ಧದ ಹೋರಾಟ ನಡೆಯ ತೊಡಗಿದಾಗ ರಾಷ್ಟ್ರೀಯತೆಯ ಜೊತೆಗೆ ಉಪರಾಷ್ಟ್ರೀಯತೆಯ ಪರಿಕಲ್ಪನೆಯೂ ಪ್ರಬಲವಾಗಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳು ರಾಷ್ಟ್ರೀಯತೆಯ ಉತ್ಕರ್‍ಷದಲ್ಲಿ ಬತ್ತಿಹೋಗದಂತೆ ಎಚ್ಚರ ವಹಿಸಲಾಗಿತ್ತು. ಸ್ವಾತಂತ್ರ್ಯಪೂರ್ವದ ಸಂದರ್ಭದಲ್ಲಿ ರಾಜಕೀಯ ಸರ್ವಾಧಿಕಾರವನ್ನು ಗಾಂಧೀಜಿಯವರ ನೇತೃತ್ವದಲ್ಲಿ ವಿರೋಧಿಸಿದರೆ, ಸಾಮಾಜಿಕ ಸರ್‍ವಾಧಿಕಾರವನ್ನು ಅಂಬೇಡ್ಕರ್‌ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ದೇಶದೊಳಗಿನ ಆರ್ಥಿಕ ಸರ್ವಾಧಿಕಾರವನ್ನು ಸಮತಾ ವಾದಿಗಳು ವಿರೋಧಿಸಿದರು. ಹೀಗೆ ಸ್ವಾತಂತ್ರ್ಯಪೂರ್ವ ಸನ್ನಿವೇಶದಲ್ಲಿ ಮೂರು ಆಯಾಮಗಳಲ್ಲಿ ವ್ಯಕ್ತವಾದ ‘ವಿರೋಧ’ ಕೇವಲ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವರೂಪವನ್ನಷ್ಟೇ ಪಡೆಯದೆ ಸಾಂಸ್ಕೃತಿಕ ಪರಿಣಾಮವನ್ನೂ ಬೀರಿದ್ದರಿಂದ ಹೊಸ ಪರಿಭಾಷೆ ರೂಪುಗೊಂಡಿತು. ಹೊಸ ಹೊಸ ಅಭಿವ್ಯಕ್ತಿಗಳು ಕಾಣಿಸಿಕೊಂಡವು. ಅಷ್ಟೇ ಅಲ್ಲ, ಕೈಗಾರಿಕೀಕರಣದ ಫಲವಾಗಿ ಕುಲಮೂಲ ಉತ್ಪಾದನೆಯ ಸಂಪ್ರದಾಯವನ್ನು ಮುರಿಯಲಾಯಿತು. ಸಾಮೂಹಿಕ ಉತ್ಪಾದನಾ ವ್ಯವಸ್ಥೆ ರೂಪುಗೊಂಡಿದ್ದರ ಫಲವಾಗಿ, ಸಾಮಾಜಿಕ ಅಂತರ ಕಡಿಮೆಯಾಗತೊಡಗಿತು. ಯಾರು ಅಸ್ಪೃಶ್ಯ, ಯಾರು ಹಿಂದುಳಿದ ವರ್‍ಗ ಎಂದೆಲ್ಲ ನೋಡದೆ ಒಟ್ಟಿಗೆ ಒಂದು ಸೂರಿನಡಿ, ಉತ್ಪಾದನಾ ಕ್ರಿಯೆಯಲ್ಲಿ ಭಾಗವಹಿಸಬೇಕಾಗಿ ಬಂದದ್ದು ಒಂದು ಹೊಸ ಅಧ್ಯಾಯವೇ ಸರಿ. ಆದರೆ ಇಲ್ಲಿ ಬಲವಾಗುತ್ತ ಬಂದ ಬಂಡವಾಳಶಾಹಿಯು ಊಳಿಗಮಾನ್ಯ ಪ್ರಭುಗಳ ಪ್ರವೃತ್ತಿಯನ್ನು ಮುಂದುವರೆಸುತ್ತ ಬಂದು ಅಸಮಾನತೆಯ ಹಾಸಿಗೆಯಲ್ಲಿ ಭೋಗ ಭರತ ಚಕ್ರಿಯಾಗಿ, ಬಿಡುವಿನಲ್ಲಿ ಯೋಗಪಠಣ ಮಾಡಿದ್ದು ಈಗ ಇತಿಹಾಸ, ಸ್ವಾತಂತ್ರ್ಯಾನಂತರವೂ ಇದೇ ಪ್ರವೃತ್ತಿ ಮುಂದುವರೆದು ಅಭಿವೃದ್ಧಿಯ ತೀವ್ರತೆಗೆ ಧಕ್ಕೆ ತಂದದ್ದಲ್ಲದೆ ಪ್ರಜಾಪ್ರಭುತ್ವವನ್ನು ಓಟಿನ ರಾಜಕೀಯಕ್ಕೆ ಸೀಮಿತಗೊಳಿಸಿದ್ದು ಶತಮಾನದ ಸಂಕಟವೇ ಸರಿ. ಈ ಸಂಕಟದ ನಡುವೆಯೂ ಸಂಘರ್ಷ, ಸಾಮರಸ್ಯ, ಸಂಭ್ರಮಗಳನ್ನು ಸಮತೋಲಗೊಳಿಸುವ ವಿವೇಕ ವೊಂದು ಇಪ್ಪತ್ತನೆಯ ಶತಮಾನದ ಅಂತರಂಗದಲ್ಲಿ ಅರಳುತ್ತಲೇ ಇತ್ತು. ಹೀಗಾಗಿ ಇಪ್ಪತ್ತನೆಯ ಶತಮಾನದಲ್ಲಿ ಭೂ ಸುಧಾರಣೆ, ಲಿಂಗ ಸಮಾನತೆ, ಮೀಸಲಾತಿ, ಬ್ಯಾಂಕ್ ರಾಷ್ಟ್ರೀಕರಣ, – ಮುಂತಾದ ಪ್ರಗತಿಪರ ಕ್ರಿಯೆಗಳು ಕೇವಲ ಹೋರಾಟದ ಅಂಶಗಳಾಗದೆ ಆಡಳಿತದ ನೀತಿಯಾಗಿ ರೂಪಾಂತರಗೊಂಡದ್ದು ಒಂದು ವಿಶೇಷ. ಇದು ಸಾಮಾಜಿಕ – ಆರ್ಥಿಕ ಜಡ ಸಾಂಪ್ರದಾಯಿಕ ನೆಲೆಗಳ ನಿರಾಕರಣೆಯಿಂದ ಸಾಧ್ಯವಾಗತೊಡಗಿತ್ತು.

ಸಾಂಸ್ಕೃತಿಕ ಕ್ಷೇತವೂ ಇದಕ್ಕೆ ಹೊರತಾಗಿರಲಿಲ್ಲ. ಹೊಸ ವಸ್ತು – ವಿನ್ಯಾಸಗಳ ಮೂಲಕ ಸಮಕಾಲೀನತೆಯನ್ನೇ ಸಂವೇದನೆಯಾಗಿಸಿಕೊಂಡ ಸೃಜನಶೀಲ ಸಂಭವಗಳು ಇಪ್ಪತ್ತನೆಯ ಶತಮಾನದ ಬಹುಮುಖ್ಯ ಭಾಗವಾಗಿವೆ. ಹಿಂದಿನ ಹತ್ತಾರು ಶತಮಾನಗಳನ್ನು ಹೊಸ ಅರ್ಥ ಪರಂಪರೆಯಲ್ಲಿ ಕಾಣುವ ವಿಶಿಷ್ಟ ನೋಟಗಳು, ನಿರಂತರ ಹುಡುಕಾಟಗಳು, ಸಾಹಿತ್ಯಾದಿ ಕಲೆಗಳ ಕ್ಷೇತ್ರದಲ್ಲಿ ಚಿಂತನಶೀಲ ವಾಗ್ವಾದಗಳನ್ನು ಹುಟ್ಟುಹಾಕಿದವು; ಜನಪರತೆಗೆ ಮೌಲ್ಯದ ಮಹತ್ವ ದೊರಕಿಸಿಕೊಟ್ಟವು. ದಂತಗೋಪುರಕ್ಕೆ ಲಗ್ಗೆ ಹಾಕಿದ ಸ್ಫೋಟಗುಣದ ಚಿಂತನೆಗಳು ಗುಡಿ ಗೋಪುರಗಳಾಚೆಯ ಅಪ್ಪಟ ಮನುಷ್ಯನಿಗಾಗಿ ಅನ್ವೇಷಣೆ ನಡೆಸಿದವು. ಸ್ಫೋಟಗುಣದ ಜೊತೆಗೆ ಸಂತಗುಣವೂ ಸೇರಿ ಎಲ್ಲ ರೀತಿಯ ವೈಪರೀತ್ಯಗಳನ್ನು ಹದಕ್ಕೆ ತರುವ ಒಳಹೋರಾಟವು ರೂಪುಗೊಂಡು ಸಮತೋಲನವನ್ನು ಸಾಧಿಸುವ ಒತ್ತಡವಾದದ್ದು ಇಡೀ ಶತಮಾನದ ಒಂದು ವಿಶಿಷ್ಟತೆ. ಆದರೆ ಇಪ್ಪತ್ತನೆಯ ಶತಮಾನದ ಕೊನೆಯ ದಶಕ ಇಪ್ಪತ್ತೊಂದನೆಯ ಶತಮಾನಕ್ಕೆ ಪೀಠಿಕೆ ಹಾಕತೊಡಗಿದಾಗ ಮುಂದಿನ ಪಠ್ಯರಚನೆಯೇ ಬದಲಾಗತೊಡಗಿತು.

ಸ್ವಾಂತ್ರೋತ್ತರ ಭಾರತದಲ್ಲಿ ತೊಂಬತ್ತರ ದಶಕ ಅಮಾನವೀಯತೆಗೆ ಅಟ್ಟ ಹಾಸದ ಕಿರೀಟ ತೊಡಿಸಿತು; ಸಾಮರಸ್ಯವನ್ನು ಸೆರೆಮನೆಗೆ ತಳ್ಳಿತು; ಮಂದಿರ-ಮಸೀದಿಗಳ ನಡುವೆ ವಿಷಬಾಣಗಳನ್ನು ಬಿಡುತ್ತಾ ಅವನ್ನೇ ರಾಮಬಾಣಗಳೆಂದು ಕರೆಯಿತು. ವಾಲ್ಮೀಕಿ ರಾಮಾಯಣದ ಜಾಗದಲ್ಲಿ ‘ಇಟ್ಟಿಗೆ ರಾಮಾಯಣ’ವನ್ನು ಪ್ರತಿಷ್ಠಾಪಿಸಲಾಯಿತು. ನಮಗೆ ಆದರ್ಶವಾಗಬೇಕಾದ ಕನಕದಾಸರ ‘ರಾಮಧಾನ್ಯಚರಿತೆ’ಯ ‘ರಾಗಿರಾಮ’ನಿಗೆ ಬದಲಾಗಿ ‘ಕೋಮುರಾಮ’ನನ್ನು ಆದರ್ಶವಾಗಿಸುವ ಪ್ರಯತ್ನಕ್ಕೆ ರಾಜಕೀಯ ಬಣ್ಣವೂ ಲಭ್ಯವಾಗಿ ವಿಜೃಂಭಿಸಿದ್ದು ವಿಷಾದಕರ ಬೆಳವಣಿಗೆ. ಜೊತೆಗೆ ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳು ದನಿಮಾಡತೊಡಗಿದ್ದು ದುರಂತದಾಯಕ.

ಇನ್ನು ಆರ್‍ಥಿಕ ಉದಾರೀಕರಣದ ಹೆಸರಿನಲ್ಲಿ ‘ಉಳ್ಳವರ ಉದರೀಕರಣ’ಕ್ಕೆ ನಾಂದಿ ಹಾಡಿದ್ದು ಈ ಶತಮಾನದ ಹಿನ್ನಡೆ ಎನ್ನಬೇಕಾಗಿದೆ. ಅಲ್ಲೀವರೆಗಿನ ಸಮಾನತೆಯ ಚಿಂತನೆಗಳು, ಸಮತೋಲನ ಪ್ರಕ್ರಿಯೆಗಳು, ತಮ್ಮ ಶಕ್ತಿ ಕಳೆದುಕೊಳ್ಳತೊಡಗಿದ್ದು ಶತಮಾನದ ಮೊದಲ ಮೌನಭೂಕಂಪ. ಸೋವಿಯತ್ ರಷ್ಯಾದ ವಿಘಟನೆಯ ನಿಜ ಕಾರಣಗಳನ್ನು ಹುಡುಕದೆ, ಸಮಾಜವಾದಿ ಆಶಯಗಳ ವಿರೋಧಕ್ಕೆ ಅದನ್ನೊಂದು ಕುಂಟು ನೆಪವಾಗಿಸಿಕೊಂಡು, ‘ಸುಧಾರಣೆ’ ಎಂಬ ಪರಿಕಲ್ಪನೆಗೆ ‘ಬಡವರ ಪರ’ ಎನ್ನುವ ಬದಲು ‘ಬಂಡವಾಳಿಗರ ಪರ’ ಎಂಬ ಅರ್‍ಥವನ್ನು ಹುಟ್ಟು ಹಾಕಿದ್ದು ಒಂದು ಬೌದ್ಧಿಕ ದೀವಾಳಿತನ.

ಹೊಸ ಶತಮಾನದ ಹೊಸ್ತಿಲಲ್ಲಿರುವ ನಾವು ಹಳೆಯ ಶತಮಾನದ ಕೊನೆಯ ದಶಕದ ಬುತ್ತಿಯನ್ನು ನೆತ್ತಿಮೇಲಿಟ್ಟುಕೊಂಡು ನಿಂತಿದ್ದೇವೆ. ಈ ಬುತ್ತಿಯಲ್ಲಿ ಹಸಿವನ್ನು ಹೋಗಲಾಡಿಸುವ ಅನ್ನವಿಲ್ಲ; ಸುಟ್ಟು ಬೂದಿಮಾಡುವ ಬಾಂಬುಗಳಿವೆ. ಇವು, ಮನುಷ್ಯರ ಭಾವ-ಬಾಂಧವ್ಯಗಳನ್ನು, ಬಡವರ ಬದುಕನ್ನು, ಸಮಾನತೆ-ಸಾಮರಸ್ಯಗಳ ಬೆಳಕನ್ನು, ಪುಡಿಪುಡಿ ಮಾಡಲು ಹೊಂಚು ಹಾಕುತ್ತ ಕೂತಿವೆ. ಬುತ್ತಿ ಬಿಚ್ಚಿದರೂ ಅಪಾಯ; ಬಿಚ್ಚದಿದ್ದರೂ ಅಪಾಯ. ಯಾವಾಗ ಸಿಡಿಯುವುದೊ ಗೊತ್ತಿಲ್ಲದ ಗುರಿಯಿಲ್ಲದ ಪ್ರಯಾಣ.

ಈಗ ನೋಡಿ – ನಮ್ಮೆದುರು ಗಟ್ಟಿಯಾಗಿ ಕೇಳಿಬರುತ್ತಿರುವ ಮಂತ್ರ ‘ಜಾಗತೀಕರಣ’. ಬಹುರಾಷ್ಟ್ರೀಯ ಕಂಪನಿಗಳ ಆಗಮನಕ್ಕಾಗಿ ಭಾರತದ ಬಾಗಿಲಲ್ಲಿ ಪೋಣಿಸಿದ ಪ್ರಜಾಪ್ರಭುತ್ವದ ಆತ್ಮಗಳ ತೋರಣ! ಉದಾರೀಕರಣದ ಮೂಲಕ ಜಾಗತೀಕರಣಕ್ಕೆ ಪ್ರಾರ್ಥನಾಗೀತೆ ಬರೆದ ತೊಂಬತ್ತರ ದಶಕದ ಕಾಂಗ್ರೆಸ್ ಸರ್ಕಾರದ ಕೆಲಸವನ್ನು ಸ್ವದೇಶಿ ಶ್ಲೋಕ ಪಠಣಕಾರರಾದ ಬಿ.ಜೆ.ಪಿ.ಯವರು ಉಗ್ರವಾಗಿ ಮುಂದುವರೆಸುತ್ತಿರುವುದು ಈಗ ಕಣ್ಣೆದುರಿಗಿನ ಸತ್ಯ. ಜಾಗತೀಕರಣವು ಕೈಗಾರಿಕೀಕರಣವಲ್ಲ ಎಂಬ ಅಂಶವನ್ನು ನಾವು ಮೊದಲೇ ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಕಳೆದ ಶತಮಾನದಲ್ಲಿ ಕಾಲಿಟ್ಟ ಕೈಗಾರಿಕೀಕರಣ, ಗುಡಿಕೈಗಾರಿಕೆಗಳಿಗೆ ಧಕ್ಕೆ ತಂದಿರಬಹುದಾದರೂ ಮೊದಲೇ ಹೇಳಿದಂತೆ ಕುಲಮೂಲ ಉತ್ಪಾದನಾ ವಿಧಾನವನ್ನು ಉಲ್ಲಂಘಿಸಿತು, ಮಾತ್ರವಲ್ಲ, ಮಿಶ್ರ ಆರ್ಥಿಕ ಪದ್ಧತಿಯ ಚೌಕಟ್ಟಿನೊಳಗೆ ದೇಶದ ಆರ್ಥಿಕ ಹಕ್ಕನ್ನು ಉಳಿಸಿಕೊಂಡಿತ್ತು. ಆದರೆ ಈಗ ಬಂದಿರುವ ಜಾಗತೀಕರಣವು ಕೈಗಾರಿಕೀಕರಣದ ಅನೈತಿಕ ವಿದೇಶಿ ವಸಾಹತುವಾಗಿದ್ದು, ಮೂಲಕೈಗಾರಿಕೀಕರಣದ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಮುರಿಯುತ್ತಿದೆ. ಕೈಗಾರಿಕೀಕರಣವು ಈ ನೆಲದ ಕಾನೂನಿನ ಇತಿಮಿತಿಯಲ್ಲಿ ಅನುಷ್ಠಾನಕ್ಕೆ ಬಂದರೆ, ಜಾಗತೀಕರಣವು ಈ ನೆಲದ ಕಾನೂನಿನ ಇತಿಮಿತಿಗಳನ್ನು ಮೀರಿ, ತನಗೆ ಹೊಂದುವ ಕಾನೂನುಗಳನ್ನು ರೂಪಿಸುವಂತೆ ಮಾಡುತ್ತಿರುವುದು ತೀರಾ ಆತಂಕಕಾರಿ ಸಂಗತಿ. ಜಾಗತೀಕರಣವು ಕೈಗಾರಿಕೀಕರಣದ ಸಂದರ್ಭ ದಲ್ಲಿ ಹುಟ್ಟಿದ ‘ಸಾರ್ವಜನಿಕ ವಲಯ’ಗಳನ್ನು ಸಂಪೂರ್ಣ ವ್ಯರ್ಥವೆಂದು ಘೋಷಿಸುವ ಸ್ಥಿತಿ ಯನ್ನು ಉತ್ತೇಜಿಸುತ್ತಿದೆಯಲ್ಲದೆ, ಸ್ಥಳೀಯ ಬಂಡವಾಳಕ್ಕೆ ಎದುರಾಗಿ ನಿಂತಿದೆ. ಮೀಸಲಾತಿ, ಸ್ಥಳೀಯರಿಗೆ ಉದ್ಯೋಗ, ಸರ್ಕಾರದ ಪ್ರಜಾಸತ್ತಾತ್ಮಕ ನಿಯಂತ್ರಣ – ಮುಂತಾದ ಹಕ್ಕುಗಳು ಮೂಲೆಗುಂಪಾಗುತ್ತಿವೆ. ಸಂವಿಧಾನಾತ್ಮಕ ಆಶಯಗಳಿಗೆ ಈ ದೇಶದಲ್ಲಿ ಬೆಲೆಯಿಲ್ಲವೆ ಎಂದು ಕೇಳುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಯಾಕೆಂದರೆ ಸಂವಿಧಾನವು ಅಡಕಗೊಳಿಸಿಕೊಂಡ ನೀತಿಗಳನ್ನು, ಮಾರ್ಗದರ್ಶಿ ಸೂತ್ರಗಳನ್ನು ಜಾಗತೀಕರಣ ಮಣ್ಣುಪಾಲಾಗಿಸುತ್ತಿದೆ. ಸಾಮಾಜಿಕ – ಆರ್ಥಿಕ ಪರಿಣಾಮಗಳ ಜೊತೆಗೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಇಂದಿನ ಸನ್ನಿವೇಶದಲ್ಲಿ ಇಂಗ್ಲಿಷ್ ಇಲ್ಲದೆ ಉದ್ಯೋಗವಿಲ್ಲ ಎಂಬ ವಾದವನ್ನು ಉದ್ಯಮಪತಿಗಳು ಮಂಡಿಸುತ್ತ ದಿಕ್ಕು ತಪ್ಪಿಸುತ್ತಿದ್ದಾರೆ. ಭಾಷೆ, ಶಿಕ್ಷಣ, ಸಂಸ್ಕೃತಿ ಎಲ್ಲಾ ವಿಷಯಗಳಿಗೂ ಉದ್ಯಮದ ವಿಷಗಾಳಿ ಬೀಸಿ ಉಸಿರುಕಟ್ಟುತ್ತಿದೆ. ಸ್ಥಳೀಯ ಭಾಷೆ-ಸಂಸ್ಕೃತಿಯ ಜೀವ ಚೈತನ್ಯವನ್ನು ಬಿಟ್ಟುಕೊಡದೆ ಅನ್ಯ ಭಾಷೆ – ಸಂಸ್ಕೃತಿಗಳ ಅಗತ್ಯ ಹಾಗೂ ಔಚಿತ್ಯಪೂರ್ಣ ಆಸಕ್ತಿ ಬೆಳೆಸಿಕೊಳ್ಳುವುದನ್ನು ವಿವೇಕಿಗಳಾರೂ ವಿರೋಧಿಸುವುದಿಲ್ಲ. ಆದರೆ ಇದಕ್ಕೆ ಹೊರತಾದ ಭ್ರಮೆಗಳನ್ನು ಬಿತ್ತಲಾಗುತ್ತಿದ್ದು ಪ್ರಜಾಪ್ರಭುತ್ವವನ್ನು ಉದ್ಯಮಪತಿಗಳು ಅಪಹರಣ ಮಾಡುತ್ತಿದ್ದಾರೆ.

ಜಾಗತೀಕರಣವೊಂದೇ ಹೊಸಶತಮಾನದ ಆತಂಕವಲ್ಲ: ಸ್ವದೇಶೀಕರಣದ ಕಲ್ಪನೆಯೂ ಆತಂಕ ಹುಟ್ಟಿಸುವಷ್ಟು ಭಯಾನಕವಾಗಿ ಬೆಳೆಯುತ್ತಿದೆ. ಸ್ವದೇಶೀಕರಣದ ಹೆಸರಿನಲ್ಲಿ ಈ ದೇಶದಲ್ಲಿರುವ ಬಹುಸಂಸ್ಕೃತಿ ಪರಂಪರೆಗೆ ಕಿಚ್ಚು ಹಚ್ಚಲಾಗುತ್ತಿದೆಯೇ ಹೊರತು ಅನ್ಯದೇಶೀಯ ಆರ್ಥಿಕ ದಾಳಿಯನ್ನು ತಡೆಯುತ್ತಿಲ್ಲ; ಆರ್ಥಿಕ ದಾಳಿಯೊಂದಿಗೆ ಬೀಸುವ ಸಾಂಸ್ಕೃತಿಕ ಗಾಳಿಯ ಬಗ್ಗೆ ಸರಿಯಾದ ಕಲ್ಪನೆಯೇ ಇಲ್ಲ. ಧರ್ಮಗಳ ಹೆಸರಿನಲ್ಲಿ ಮನುಷ್ಯರನ್ನು ಒಡೆದು ವಿಷ ಗೋಡೆಗಳನ್ನು ಕಟ್ಟುವ ಹುನ್ನಾರ ಕಡಿಮೆಯಾಗುವ ಬದಲು ಬಲಗೊಳ್ಳುತ್ತಿದೆ. ಸನಾತನ ಸಂಪ್ರದಾಯಗಳನ್ನೇ ಧರ್ಮವೆಂದು ಕರೆದು, ಅವುಗಳನ್ನೇ ಅಂತಿಮ ನೀತಿಯನ್ನಾಗಿ ಹೇರುವ ಪ್ರವೃತ್ತಿ ಢಾಳಾಗಿ ಕಾಣುತ್ತಿದೆ. ಕೈಗಾರಿಕೀಕರಣವು ಹೇಗೆ ಜಾಗತೀಕರಣವಾಗಬಾರದೊ ಹಾಗೆಯೇ ಸ್ವದೇಶೀಕರಣವು ಕೇಸರೀಕರಣವಾಗಬಾರದು. ಆದರೆ ಕೇಸರೀಕರಣವನ್ನೇ ಸ್ವದೇಶೀಕರಣ ಎಂದು ನಂಬಿಸಲಾಗುತ್ತಿದೆ.

ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸ್ವದೇಶೀಕರಣಕ್ಕೆ ರಾಷ್ಟ್ರೀಯತೆ ಉಪರಾಷ್ಟ್ರೀಯತೆಗಳ ಗಟ್ಟಿ ನೆಲೆಯಿತ್ತು. ಆದರೆ ಈಗ ನವ ವಸಾಹತುಶಾಹಿಯ ಇಂದಿನ ಸಂದರ್ಭದಲ್ಲಿ ಪ್ರತಿ ಪಾದಿಸುತ್ತಿರುವ ಸ್ವದೇಶೀಕರಣಕ್ಕೆ ಸಂಸ್ಕೃತಿ-ಉಪಸಂಸ್ಕೃತಿಗಳ ನಿಜದ ನೆಲೆಯಿಲ್ಲ. ಇಂದು ಹುಸಿ ಸಂಸ್ಕೃತಿಯ ಹುನ್ನಾರದಲ್ಲಿ ಸ್ವದೇಶೀಕರಣದ ಕಲ್ಪನೆ ಹುಟ್ಟಿ, ಬೆಳೆಯುತ್ತಿದೆ. ನವ ವಸಾಹತುಶಾಹಿ ಜಾಗತೀಕರಣಕ್ಕಿಂತ ಹೆಚ್ಚಾಗಿ ಸ್ವದೇಶದಲ್ಲಿರುವ ಬೇರೆ ಧರ್ಮಿಯರನ್ನು, ಸಂಸ್ಕೃತಿಯ ಬಹುಮುಖತೆಯನ್ನು ವಿರೋಧಿಸುವುದರಲ್ಲಿ ವಿಕೃತಾನಂದ ಪಡುತ್ತಿದೆ. ಪರಸ್ಪರ ವಿರುದ್ಧವಾಗಿರಬೇಕಾಗಿದ್ದ ಜಾಗತೀಕರಣ ಮತ್ತು ಸ್ವದೇಶೀಕರಣಗಳು ತಂತಮ್ಮ ನೆಲೆಗಳ ಏಕಮುಖತೆಯನ್ನು ಹೇರುತ್ತಾ ಸ್ವಭಾವದಲ್ಲಿ ಒಂದಾಗಿರುವುದು ಒಂದು ವೈರುದ್ಧ್ಯವಾಗಿದೆ; ಇಂದು ಶರಣಾಗತಿಯ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಈ ಮಾತನ್ನು ಹೀಗೆ ಸ್ಪಷ್ಟ ಪಡಿಸುತ್ತೇನೆ:

ಜಾಗತಿಕ ಗ್ರಾಮದ ಕಲ್ಪನೆಯಲ್ಲಿ ನಮ್ಮ ಗ್ರಾಮಗಳು ಸೊರಗಿ ಶರಣಾಗುತ್ತಿವೆ. ಬಹು ರಾಷ್ಟ್ರೀಯ ಕಂಪನಿಗಳ ಎದುರು ನಮ್ಮ ಬೃಹತ್ ಕೈಗಾರಿಕೆಗಳೂ ಸಣ್ಣ ಕೈಗಾರಿಕೆಗಳಂತಾಗಿ ಶರಣಾಗುತ್ತಿವೆ. ಏಕಸಂಸ್ಕೃತಿಯ ಸ್ವದೇಶಿ ಕಲ್ಪನೆಯ ಎದುರು ಬಹು ಸಂಸ್ಕೃತಿಯ ಸ್ಥಳೀಯ ಸತ್ವ ಶರಣಾಗುವ ಆತಂಕ ಕಾಣಿಸುತ್ತಿದೆ; ಭೂ ಸುಧಾರಣೆ, ರಾಷ್ಟ್ರೀಕರಣ, ಮೀಸಲಾತಿ, ಸಮಾನತೆ ಮುಂತಾದ ನೀತಿ ನಿಯಮಗಳು ಹಿನ್ನೆಲೆಗೆ ತಳ್ಳಲ್ಪಡುತ್ತಿವೆ. ಧಾರ್ಮಿಕ ಮೂಲಭೂತವಾದಕ್ಕೆ ಧಾರ್ಮಿಕ ಸಾಮರಸ್ಯ ಮತ್ತು ನಿಜಭಕ್ತಿಯ ನೆಲೆಗಳು ಶರಣಾಗುತ್ತಿವೆ. ಹುಸಿ ಆಧುನಿಕತೆ ಮತ್ತು ಹುಸಿ ಸಂಸ್ಕೃತಿಗಳು ನಿಜ ಆಧುನಿಕತೆ ಮತ್ತು ಜನಸಂಸ್ಕೃತಿಗಳ ಮೇಲೆ ಸವಾರಿ ಮಾಡುತ್ತಿವೆ.

ಹೀಗೆ ಇಪ್ಪತ್ತೊಂದನೆಯ ಶತಮಾನ ಶರಣಾಗತಿಯ ಶತಮಾನವಾಗಿ ಮಾರ್ಪಡುತ್ತಿದೆ. ಇಪ್ಪತ್ತನೆಯ ಶತಮಾನದಲ್ಲಿ ಸ್ಥಿತ್ಯಂತರಗಳಿದ್ದವು; ಏಕಕಾಲಕ್ಕೆ ಸಂಘರ್ಷ ಮತ್ತು ಸಾಮರಸ್ಯಗಳಿದ್ದವು. ಸಂಘರ್ಷ ಮತ್ತು ಸಾಮರಸ್ಯಗಳ ನಡುವಿನ ಸೂಕ್ಷ್ಮ ನೆಲೆಗಳನ್ನು ಶೋಧಿಸುವ ಸಂವೇದನೆಗಳಿದ್ದವು. ಎಲ್ಲ ಏರು-ಪೇರು ಮತ್ತು ವೈಪರೀತ್ಯಗಳ ನಡುವೆಯೂ ಇಪ್ಪತ್ತನೆಯ ಶತಮಾನವು ಅರ್ಥಪೂರ್ಣ ದಿಕ್ಕುಗಳನ್ನು ತೆರೆಯುತ್ತ ಬಂದಿತ್ತು. ಕೊನೆಯ ದಶಕದಲ್ಲಿ ಕಾಣಿಸಿ ಕೊಂಡ ಜಾಗತೀಕರಣ ಮತ್ತು ಸ್ವದೇಶೀಕರಣದ ಕ್ರೂರ ಹಾಗೂ ಕುರೂಪಿ ಚಿಂತೆಗಳು ಕಡೇಪಕ್ಷ ಸಮತೋಲನವನ್ನೂ ನಿರೀಕ್ಷಿಸುತ್ತಿಲ್ಲ: ಶರಣಾಗತಿಯನ್ನು ಬಯಸುತ್ತಿವೆ. ಈ ಸವಾಲನ್ನು ನಾವು ಗಟ್ಟಿ ಸಿದ್ಧಾಂತ ಮತ್ತು ಸೂಕ್ಷ್ಮ ಸಂವೇದನೆಯಿಂದ ಎದುರಿಸಬೇಕಾಗಿದೆ. ಸಮಾನತೆಯ ಆಶಯಗಳಿಗೆ ಜೀವ ಚೈತನ್ಯವನ್ನು ಕೊಡುತ್ತ, ಎಲ್ಲ ಧರ್ಮಗಳ ಮೂಲಭೂತವಾದವನ್ನು ವಿರೋಧಿಸುತ್ತ, ನಾವು ಬದುಕುತ್ತಿರುವ ಭೂಮಿಯ ಭಾಷೆ – ಸಂಸ್ಕೃತಿಗಳ ಮೂಲಕ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಸಮಾಜ ಮತ್ತು ಸಂಸ್ಕೃತಿಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಪ್ರಕ್ರಿಯೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿದೆ. ಆಗ ಹಾದಿ ತೆರೆದುಕೊಳ್ಳುತ್ತದೆ. ಇಟ್ಟ ಹೆಜ್ಜೆ ನಮ್ಮದಾಗುತ್ತದೆ.
*****
(ಜುಲೈ ೨೦೦೧)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೂಗುವೆ ತೊಟ್ಟಿಲ
Next post ಕಲಾಕೃತಿಯೊಂದು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys