ಹೃದಯ ವೀಣೆ ಮಿಡಿಯೆ….

ಹೃದಯ ವೀಣೆ ಮಿಡಿಯೆ….

ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ ಮಾಡಿಕೊಂಡು ಹೊಡೆಯಲು ಹೋಗುತ್ತಿದ್ದಳು. ಅವನು ಅಲ್ಲಿಂದ ಓಡುತ್ತಿದ್ದ. ದೂರದಲ್ಲಿ ನಿಂತು ಅಮ್ಮ ಅಕ್ಕರೆಯಿಂದ ಗದರಿದರೆ, ಅಪ್ಪ ಮೀಸೆ ಯಲ್ಲಿ ನಗುತ್ತಿದ್ದರು. ಅವಳು ಕಂಡೂ ಕಾಣದವಳಂತೆ ರೂಮು ಸೇರುತ್ತಿದ್ದಳು. ದಣಿದ ದೇಹದ ವಿಶ್ರಾಂತಿಗಾಗಿ ತೋಳು ತೆರೆದು ನಿಂತಿದ್ದ ಮಂಚವನ್ನು ಸೇರುತ್ತಿತ್ತು.

ಯಾವದೋ ಹುಡುಗ ಎಲ್ಲೋ ಮನೆ ಏನೋ ಸಂಬಂಧ. ಆದರೂ ಅವನ ಹೆಸರಿನಲ್ಲಿ ಏನಿದೆ? ಅಷ್ಟಕ್ಕೇಕೆ ರತ್ನ ನಾಚಬೇಕು? ಅಪ್ಪ ನಗಬೇಕು? ಎಲ್ಲವೂ ಒಗಟು ಯಾರ ಮೇಲೋ ದಿಡೀರ್ ಪ್ರೀತಿ ಬೆಳೆಸಿ ಕೊಂಡು ಎಲ್ಲರನ್ನು ಬಿಟ್ಟು ಹೋಗಬೇಕು? ನಾಳೆ ಮದುವೆ ಆಗುವ ಆ ಗಂಡು ಅಷ್ಟೇ ಪ್ರೀತಿ ವಿಶ್ವಾಸ ತೋರಿಸದಿದ್ದರೆ? ಏಕೋ ಅವಳಿಗೆ ಮೀಸೆಯ ವರನ ಬಗ್ಗೆ ಪ್ರೀತಿಯ ಮಾತಿರಲಿ ವಿಶ್ವಾಸವೇ ಮೂಡುತ್ತಿರಲಿಲ್ಲ. ಅಂತಹುದರಲ್ಲಿ ಪ್ರೀತಿ, ಪ್ರೇಮಗಳ ಬಗ್ಗೆ ಮಧುರ ಕನಸುಗಳನ್ನು ಕಾಣುವುದು ದೂರವೇ ಉಳಿಯಿತು. ತನಗೂ ಆ ಭಾವನೆಗಳು ಬಂದಾಗ ನೋಡಿಕೊಂಡರಾಯಿತು. ತನ್ನಿಂದಾಗಿ ಕನಸುಗಣ್ಣಿನ ರತ್ನಳಿಗೇಕೆ ಹಾನಿಯಾಗಬೇಕು? ಮದುವೆಯ ಬಗ್ಗೆ ತನ್ನ ನಿರಾಕರಣೆಯನ್ನು ಖಂಡಿತವಾಗಿ ತಿಳಿಸಿದ್ದಳು. ಅವಳ ಮೊಂಡು ಬುದ್ಧಿಯ ಪರಿಚಯವಿದ್ದ ಅವರು ಸೋತು ಸುಮ್ಮನಾಗಬೇಕಾಯಿತು.

“ರತ್ನಳಿಗೇನು ಕಣ್ಣು ಮುಚ್ಚಿಕೊಂಡು ಒಪ್ಕೋತಾರ ಅದಕ್ಕಾಗಿ ವನವಾಸ ಪಡಬೇಕಾಗಿಲ್ಲ. ನಾವು….” ಅಪ್ಪನ ಆತ್ಮವಿಶ್ವಾಸದ ನುಡಿಗಳನ್ನು ನಿಜವಾಗಿಸುವಂತೆ ಅವಳಿಗಾಗಿ ಸಾಲು ವರಗಳು ಬರತೊಡಗಿದ್ದವು. ಲೆಕ್ಚರರಂತೆ, ಹೈಸ್ಕೂಲ ಮಾಸ್ಟರಂತೆ ಇಂಜಿನಿಯರ್ ಯಾರಾರೋ ಬಂದರು, ಹೋದರು. ಕೆಲವನ್ನು ಇವರು ಒಪ್ಪಲಿಲ್ಲ. ಕೆಲವರು ಇವಳನ್ನು ಮೆಚ್ಚಿದರೂ ಏನೇನೋ ಬೇಡಿಕೆಗಳನ್ನು ಮುಂದಿಟ್ಟು ಹೋದರು. ಎಂದೂ ನೋಡದವರು ಬರುವುದು, ಅವರಿಗಾಗಿ ಮನೆಯಲ್ಲಿ ಸಂಭ್ರಮ, ಸತ್ಕಾರ. ಅವರೊಂದಿಗೆ ಮಾತು, ನಗು, ಸಿಂಗರಿಸಿಕೊಂಡು ಚಂದನದ ಗೊಂಬೆಯಂತೆ ಬಂದು ಅವರುಗಳ ಮುಂದೆ ಮಿಂಚಿ ಹೋಗುತ್ತಿದ್ದ ರತ್ನ. ಅನೇಕ ಬಾರಿ ಈ ನಾಟಕ ನಡೆಯಿತು. ಎಲ್ಲದಕ್ಕೂ ಮೌನವಾಗಿ ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದ ರತ್ನಳಿಗೆ ತನ್ನದೇ ಅದ ಭಾವನೆಗಳಿಲ್ಲವೇ? ಎನಿಸುತ್ತಿತ್ತು.

“ಲೇ, ರತ್ನ, ನಿಂಗೆ ನಿನ್ನತನ ಅಂತ ಇಲ್ಲವೇನು? ಅದೇನು ಅಷ್ಟು ಜನರ ಮುಂದೆ ಪ್ರದರ್ಶನ? ಧೈರ್ಯವಾಗಿ ಹೇಳಿಬಿಡು ಎಂದಾಗ “ನಿನ್ನ ತರಹಾ ನಾನು ದುಡ್ಕೊಂಡು ತಿನ್ತಾ ಇದ್ದೀನಾ ಅಕ್ಕಾ?” ಎಂದು ಪ್ರಶ್ನೆಯಲ್ಲಿಯೇ ಉತ್ತರ ಕೊಟ್ಟಾಗ ತಬ್ಬಿಬ್ಬಾಗಿದ್ದಳು. ಒಂದು ಕ್ಷಣ ಏನೂ ಹೇಳಲು ತೋರದೆ.

“ಏನೋಮ್ಮ ನಿನ್ನಿಷ್ಟ” ಎಂದು ಪೆಚ್ಚಾಗಿ ಹೇಳಿದಳು.

“ಬೇಜಾರು ಮಾಡಿಕೊಳ್ಳಬೇಡ. ನಿನಗೆ ನಿನ್ನನ್ನು ಸಾಕಿಕೊಳ್ಳುವ ದೈರ್ಯವಿದೆ. ಆದರೆ ನನ್ನನ್ನು ನೋಡು. ಹೆಳವನಂತೆ ನನ್ನ ಭಾರವನ್ನು ಜೀವನವಿಡೀ ಹೊರುವ ಒಬ್ಬರು ಬೇಕಲ್ಲ. ಅದೆಷ್ಟು ದಿನ ಅಪ್ಪನಿಗೆ ಹೊರೆ ಯಾಗಿರಬೇಕು?”

“ನಾನಿದೀನಲ್ಲ ರತ್ನ” ಸರಳವಾಗಿ ಹೇಳಿದ್ದಳು.

“ನಿಂಗೆ ಅರ್ಥವಾಗೋಲ್ಲ…” ಎಂದು ರತ್ನ ಹೋಗಿದ್ದಳು?

ಈಗ ಬರುವ ವರನ ತಂದೆ ಅಪ್ಪನ ಜೊತೆ ಓದಿದವರಂತೆ. ಅಪ್ಪನನ್ನು ಒಂದು ವರ್ಷದಿಂದಲೂ ಕಾಡುತ್ತಿದ್ದಾರಂತೆ. ಹುಡುಗ ಇಂಜಿನಿಯರ್. ಸುಂದರ, ಮೇಲಾಗಿ ಒಳ್ಳೆಯವನಂತೆ, ಏನೇನೋ ಸುದಿಗಳು, ಆ ಹುಡುಗ ರತ್ನಳನ್ನು ನೋಡಿ ಒಪ್ಪಿದರೆ ಎಲ್ಲಾ ಆದ ಹಾಗೆ, ಬರುವ ಆ ವರನಿಗಾಗಿ ಸಡಗರದಿಂದ ಸಿದ್ಧತೆ ನಡೆದಿತ್ತು.

ಅವಳ ದಣಿದ ದೇಹ ಒಮ್ಮೆ ಹೊರಳಿತು. ಕಣ್ಣು ಬಿಟ್ಟುಕೊಂಡು ಮಲಗಿದ್ದಳು. ಆಯಾಸವಾಗಿದ್ದರೂ ನಿದ್ದೆ ಹತ್ತಿರ ಬಂದಿರಲಿಲ್ಲ. ಹೊರಗೆ ಅಮ್ಮನ ದನಿ ಕೇಳಿತು.

“ಅವಳದ್ದೂ ಒಂದು ಮದುವೇಂತ ಆಗಿದ್ದರೆ ನಾವು ನಿಶ್ಚಿಂತೆಯಿಂದ ಕಣ್ಣು ಮುಚ್ಚಬಹುದಿತ್ತು. ಅಮ್ಮ ನಿಟ್ಟುಸಿರಿನೊಂದಿಗೆ ಹೇಳಿದರು. ಅದೆಷ್ಟು ದಿನ ಅಂತ ಒಂಟಿಯಾಗಿರ್‍ತಾಳೆ. ನೋಡೋಣ, ನಾಳೆ ಮುದುಕಿ ಯಾದಾಗ ನೋಡಿಕೊಳ್ಳಲು ಯಾರೂ ಇಲ್ಲದಾಗ ತಿಳಿಯುತ್ತೆ. ತನಗೂ ಮದುವೆ, ಮಕ್ಕಳೂಂತ ಇದ್ದಿದ್ದರೆ ಚೆನ್ನಾಗಿತ್ತಂತ ಮರುಗದೆ ಅಪ್ಪನ ದಿನನಿತ್ಯದ ಹಾಡು ಕೇಳಿ ಏಕೋ ಅವಳಿಗೆ ಕುಚೋದ್ಯ ಮಾಡಬೇಕೆನಿಸಿತು.

“ಮಕ್ಕಳಾಗೋಕೆ ಮದ್ವೇನೇ ಆಗ್ಬೇಕೇನಪ್ಪಾ?” ಮಲಗಿದ್ದಲ್ಲಿಂದಲೇ ಕೇಳಿದಳು. ಅಪ್ಪ ರಪ್ಪನೆ ಪೇಪರನ್ನೆಸದ ಶಬ್ದದ ಜೊತೆಗೆ

“ಮೆಡಿಕಲ್ ಗೆ ಸೇರಿಸಿ ಕೆಟ್ಟ ಕೆಲಸ ಮಾಡಿದೆವು.”-ಸಂತಾಪದ ನುಡಿಗಳು. ಕುತೂಹಲದಿಂದ ಬಗ್ಗಿ ನೋಡಿದಳು. ಅಪ್ಪ ಇರಲಿಲ್ಲ. ಅಮ್ಮ ಸೆರಗನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದರು. ತಾನು ದುಃಖಿಸುವಂತೆ ಅಂಥಾದ್ದು ಅಂದಿದ್ದಾದರೂ ಏನು? ಏನಂದರೂ ಹಾಳು ಮೆಡಿಕಲ್ ಅಂತಾ ದೂರುತ್ತಾರೆ. ವಾಚು ನೋಡಿಕೊಂಡಳು. ಆಗಲೇ ಮೂರಾಗಿ ಅರ್ಧಗಂಟೆಯಾಗಿತ್ತು. ಆಸ್ಪತ್ರೆಗೆ ಹೋಗಬೇಕು. ಯಾಂತ್ರಿಕವಾಗಿ ಹೊರಗೆ ಬಂದಳು. ಬಚ್ಚಲು ಕೋಣೆಗೆ ಹೋಗಿ ಮುಖ ತೊಳೆದು ಬಟ್ಟೆ ಬದಲಿಸಿದಳು. ಕುಳಿತಿದ್ದ ಅಮ್ಮ ಕಾಣಿಸಲಿಲ್ಲ. ಅಡಿಗೆ ಮನೆಯಿಂದ ಪಾತ್ರೆಗಳ ಸದ್ದು ಕೇಳಿಸಿತು. ಎಂದಿನಂತೆ ರೂಮಿನಲ್ಲೇ ಕಾಫಿಗೆ ಕಾಯುತ್ತ ಕುಳಿತುಕೊಳ್ಳುವ ಬದಲು ಅಡಿಗೆ ಕೋಣೆಗೆ ಕಾಲಿಟ್ಟಳು. ಉರಿಯುತ್ತಿದ್ದ ಒಲೆಯ ಮುಂದೆ ಅಮ್ಮ ಕುಳಿತಿದ್ದಳು.

“ಅಮ್ಮ ಕಾಫಿ ಕೊಡ್ತೀಯಾ?”

“ಫ್ಲಾಸ್ಕಿನಲ್ಲಿದೆ ಕೊಡಲಾ?” ಎಂದು ಕೇಳಿದಳು.

“ಊಹೂಂ, ಬೇರೆ ಬಿಸಿಯಾಗಿ ಮಾಡಿಕೊಡು, ಆ ಫ್ಲಾಸಿನಲ್ಲಿರೋದು ಒಂಥರಾ ವಾಸನೆ” ಎಂದಳು.

“ಒಂದ್ನಿಮಿಷ ತಾಳು, ರೂಮಿಗೆ ಹೋಗು. ತರ್‍ತೇನೆ…” ಎನ್ನುತ್ತಾ ಚಿಕ್ಕ ಪಾತ್ರೆಯೊಂದರಲ್ಲಿ ಒಂದು ಲೋಟ ನೀರು ಹಾಕಿ ಒಲೆಯಮೇಲಿಟ್ಟರು. ಅವಳು ಮಣೆ ಹಾಕಿಕೊಂಡು ಅಲ್ಲಿ ಕುಳಿತಳು. ಹೋಗದೆ ಕುಳಿತ ಅವಳ ತಿರುಗಿ ನೋಡಿದ ಅಮ್ಮ,

“ಯಾಕೆ, ಇವತ್ತು ಆಸ್ಪತ್ರೆಗೆ ಹೋಗಲ್ವಾ?” ಎಂದು ಕೇಳಿದರು. ತುದಿಗಾಲಿನಲ್ಲಿ ನಿಂತು ಅವಸರದಲ್ಲಿ ಕುಡಿಯುವ ದಿನಚರಿ ಬದಲಾಗಿದ್ದು ಅವರಿಗೆ ಅಚ್ಚರಿ!

“ಇವತ್ತು ನಿಧಾನವಾಗಿ ಹೋಗ್ತಿನಿ…. ದಿನಾ ಇದ್ದದೇ….” ಎಂದಳು.

ಚಮಚದಿಂದ ನೀರಿಗೆ ಸಕ್ಕರೆ ಹಾಕಿದರು.

“ರತ್ನಂಗೆ ಇದೇ ವರ್ಷ ಮದುವೆ ಮುಗಿಸಿಬಿಡ್ತೀರಾ?” – ಅವಳು ಮಾತು ತೆಗೆದಳು.

“ಹೂಂ ಎಷ್ಟು ಖರ್ಚಾಗುತ್ತೋ!” ಮಾಡ್ಕೊಳ್ಳೋ ಒಬ್ಬ ಮಗಳಿಗಾದರೂ ಅದ್ದೂರಿಯಿಂದ ಮದ್ವೆ ಮಾಡ್ಬೇಕೂಂತ ಅವರ ಯೋಚನೆ

ಅವಳಿಗೆ ರೇಗಿತು.

“ಅದ್ದೂರಿಯಂದ್ರೆ? ಸಾವಿರಾರು ರೂಪಾಯಿ ಸುರೀತೀರೇನು ಆ ಗಂಡು ಹೆಣ್ಣು ಸೇರಿಸೋ ನಾಟಕಕ್ಕೆ? ದುಡ್ಡೇನು ಕಲ್ಲಿನ ಚೂರುಗಳಾ!”

“ಅದಕ್ಕೇಂತೆ ಹಣ ಬ್ಯಾಂಕಿನಲ್ಲಿಟ್ಟಿದ್ದಾರಲ್ಲ” ಅವಳ ಕೋಪ ಕಾರಣವಿಲ್ಲದ್ದೆನಿಸಿತು. ಅಚ್ಚರಿಯೂ ಆಯಿತು.

“ಮದುವೆ ಯಾಕಮ್ಮಾ? ಗಂಡ ಹೆಂಡತಿ ಪ್ರೀತಿಯಿಂದಿರೇಕೂಂತ ತಾನೆ?”

“ಹೌದು.”

“ದುಡ್ಡು ಸುರಿದರೆ ಯಾರದೋ ಮೇಲೆ ದಿಢೀರ್ ಪ್ರೀತಿ ಬರುತ್ತೇನು? ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಿಟ್ಟು ಮದುವೇನ ಸರಳವಾಗಿ ಮುಗಿಸಿದರೆ ಆಯಿತು. ಅದಕ್ಕೆ ಅವಕಾಶ ಕೊಡದೆ ತಗ್ಗಿಸಿದ ತಲೆಗಳ ಮೇಲೆ ಜೀರಿಗೆ ಬೆಲ್ಲ ಸುರಿಯುವ ನಿಮಗೆ… “-ಅವಳ ವಾಗ್ಝರಿಯನ್ನು ತಟಕ್ಕನೆ ಕಡಿದು ನುಡಿದರು ಅಮ್ಮ.

“ನಾವೇನು ಇಂಗ್ಲೆಂಡ್ ಅಮೇರಿಕಾದೋರು ಅಡ್ಕೊಂಡಿದ್ದೀಯೇನೆ? ಅರ್ಥ ಮಾಡಿಕೊಳ್ಳಲು ಬಿಟ್ಟರೆ ಅರ್ಥ ಮಾಡಿಕೊಂಡುಬಿಡ್ತಾನೆ. ನಾವು ಎಷ್ಟು ಓದಿದರೂ ನಮ್ಮ ರೀತಿ ನಿಯಮಗಳನ್ನು ಬಿಟ್ಟುಕೊಡಬಾರದು. ನೀನು ಹಾಳು ಡಾಕ್ಟರಾಗಿ ಎಲ್ಲದಕ್ಕೂ ಎಳ್ಳು ನೀರು ಬಿಟ್ಟಿದ್ದೀಯಾ”

ಒಲೆಯ ಬೆಂಕಿಯ ಬೆಳಕಿನಲ್ಲಿ ಅವರ ಮುಖದ ಕೆಂಪು ಕಾಣಿಸಿತು. ಹುಬ್ಬುಗಳು ಗಂಟಿಕ್ಕಿದ್ದವು. ಎಲ್ಲದಕ್ಕೂ ಡಾಕ್ಟರಿಕೆಯನ್ನು ತಂದು ದೂಷಿಸುವ, ಮುಖ ಸಿಂಡರಿಸುವ ಇವರಿಗೆ ತಾನು ಹೇಗೆ ಹೇಳಲಿ? ಅವಳಿಗೆ ತಲೆ ಘಟಿಸಿಕೊಳ್ಳುವಂತಾಯಿತು.

ನೀರು ಒಲೆಯ ಮೇಲೆ ಕಾದು ಮರಳತೊಡಗಿತ್ತು. “ನಾನಾಗಿದ್ದಿದ್ದರೆ ಏನು ಮಾಡ್ತಾ ಇದ್ದೆ ಗೊತ್ತಾ?” ಅವಳು ಅಮ್ಮನ ನೋಡುತ್ತಾ ಕೇಳಿದಳು.

ಕುದಿಯುತ್ತಿದ್ದ ನೀರಿನ ಪಾತ್ರೆಯನ್ನು ಕೆಳಗಿಳಿಸಿ ಕಾಫಿ ಪುಡಿಯನ್ನು ಸುರಿಸುತ್ತಿದ್ದ ಅಮ್ಮ “ಏನು?” ಎನ್ನುವಂತೆ ನೋಡಿದರು.

“ನಂಗಿಷ್ಟವಾಗದಿದ್ದರೆ ಧರ್ಮಸ್ಥಳದಲ್ಲಿ ಅದೇನೋ ಕೂಟದ ಮದುವೆ ಅಂತ ಮಾಡ್ತಾರಲ್ಲ ಹಾಗೆ ಮಾಡಿಕೊಳ್ತಾ ಇದ್ದೆ”

ಕಾಫಿಪುಡಿಯ ಡಬ್ಬಿಯನ್ನು ಕೆಳಕ್ಕೆ ಕುಕ್ಕಿ, “ನಾವು ಅನಾಥರೂಂತ ಅಂಡ್ಕೊಂಡಿದ್ದೀಯೇನೇ? ನಮಗೆ ಮನೆ ಮಠ ಬಂಧು ಬಳಗ ಅನ್ನೋರು ಇದ್ದಾರೆ” ಎಂದರು ಕೋಪದಿಂದ,

“ಸಧ್ಯ ನೀನು ಮದ್ವೆ ಮಾಡ್ಕೊಳ್ಳಲ್ಲಾಂತ ತೀರ್ಮಾನ ಮಾಡಿದ್ದೀಯಲ್ಲ ಅದೇ ಒಳ್ಳೆಯದು” ಎಂದು ಮಾತು ಅಲ್ಲಿಗೆ ಮುಗಿಸುವಂತೆ ಡಿಕಾಕ್ಷನನ್ನು ಸೋಸಿ ಹಾಲು ಬೆರೆಸಿ ಲೋಟ ಅವಳ ಮುಂದಿಟ್ಟು ಪಾತ್ರೆಗಳನೆತ್ತಿಕೊಂಡು ಹೊರಗೆ ಹೋದರು. ನಿಧಾನವಾಗಿ ಹೊಗೆಯಾಡುತ್ತಿದ ಕಾಫಿಯ ಲೋಟಾವನ್ನು ಕೈಗೆತ್ತಿಕೊಂಡಳು.

“ಅದೇನು ಹೆಣ್ಣೋ, ಹೆಣ್ಣು ವೇಷದ ಗಂಡೋ ತಿಳಿಯೋಲ್ಲ. ಕಲ್ಲುಬಂಡೆ ಇವಳಿಗಿಂತ ವಾಸಿ.” ಹೊರಗೆ ಅಮ್ಮನ ಗೊಣಗಾಟ ನಡೆದೇ ಇತ್ತು.

ಲೋಟದ ಬಿಸಿ ಕೈ ಸುಟ್ಟಿತು. ತಟ್ಟನೆ ಕಾಫಿಯ ಲೋಟವನ್ನು ಕೆಳಗಿಟ್ಟಳು. ತಾನು ಕಲ್ಲುಬಂಡೆ!

ಹೌದು. ಇನ್ನಾರೋ ಇದೇ ಮಾತುಗಳನ್ನು ಹೇಳಿದ್ದರಲ್ಲ? ಅವಳ ಮನಸ್ಸು ಕೆದರಿ ಕೆದರಿ ಹಳೆಯ ನೆನಪುಗಳನ್ನು ಹುಡುಕಿತು.

ಓದಿನ ದಿನಗಳಲ್ಲಿ ಯಾರೋ ಬರೆದ ಪ್ರೇಮ ತುಂಬಿದ ಉದ್ದ ಪತ್ರ ನೋಡಿ ಮನಸಾರೆ ನಕ್ಕಿದ್ದಳು. ಆಗ ರಾಣಿ ಗಂಟಿಕ್ಕಿ,

“ನೀನೊಂದು ಗೋಡೆ ಕಲ್ಲುಬಂಡೆ ಕಣೆ, ಅಷ್ಟು ದಿನಗಳಿಂದ ಗೊಳಾಡ್ತಾ ಇದ್ದಾನೆ….. ಒಂದು ಸ್ವಲ್ಪಾನೂ ಕರುಣೆ ಬೇಡವಾ?” ಎಂದಿದ್ದಳು.

“ಪ್ರೀತಿ ನಾಟ್ಕ ಆಡೋರಿಗೆಲ್ಲಾ ನಾನು ಪ್ರೀತಿ ಹಂಚೋಕಲ್ಲ ಕಾಲೇಜಿಗೆ ಬಂದಿರೋದು, ಯಾವನೋ ಹೊಗಳಿದಾಂತ ಕರಗಿ ಹೃದಯ ತೆರೆಯಲು ನನ್ನ ಹೃದಯ ಬಿದಿರು ಗೋಡೆಯೂ ಅಲ್ಲ” ಒರಟಾಗಿ ಉತ್ತರ ಕೊಟ್ಟಿದ್ದಳು.

“ನೀನು ಅಬ್‌ನಾರ್ಮಲ್ ಕಣೆ” ಎಂದು ನಕ್ಕು ಮುಗಿಸಿದ್ದರೂ ರಾಣಿಯ ನುಡಿಗಳು ಮನಸ್ಸಿಗೆ ಅಲಗಿನಂತೆ ನಾಟಿದ್ದವು. ಹಾಗೇನಾದ್ರೂ ತಾನು ಅಬ್ ನಾರ್ಮಲ್ಲೇ? ಭಾವನೆಗಳಿಲ್ಲದ ಗೋಡೆಯ?

“ಕಾಫಿ ತಣ್ಣಗಾಗಿದೆಯಲ್ಲೇ… ಕುಡಿಯೆ ಮಹರಾಯಿತಿ” ಅಮ್ಮನ ಸ್ವರ ಕೇಳಿ ನೆನಪಿನ ಗೂಡಿನಿಂದ ಹೊರಗೆ ಬಂದಳು.

ಕಾಫಿ ಆರಿಹೋಗಿತ್ತು.

“ಬಿಸಿ ಮಾಡಿಕೊಡಲಾ?” ಅಮ್ಮ ಕೇಳಿದರು.

“ಬೇಡ…” ಎಂದಿಷ್ಟೇ ನುಡಿದು ಕಾಫಿಯ ಲೋಟವನ್ನು ಕೈಗೆತ್ತಿ ಕೊಂಡಳು. ತಣ್ಣಗಾಗಿದ್ದ ಕಾಫಿ ಗಂಟಲಲ್ಲಿಳಿಯಲಿಲ್ಲ. ಕಣ್ಣು ಮುಚ್ಚಿ ಗಟ ಗಟನೆ ಕುಡಿದು, ಲೋಟ ಕೆಳಗಿಟ್ಟು ರೂಮಿಗೆ ಬಂದಳು. ರೂಮಿನಲ್ಲೂ ಒಂಥರಾ ಮಂಕು ವಾತಾವರಣ ಉತ್ಸಾಹವೆಲ್ಲಾ ನಿಧಾನವಾಗಿ ಕಮರಿಹೋಗುತ್ತಿರುವಂತೆ ಅಸ್ತವ್ಯಸ್ತ. ಹೃದಯ ಮೆಲ್ಲನೆ ಮಿಸುಕಾಡಿತು. ತಂತಿಗಳು ಒಂದಕ್ಕೊಂದು ಮೆಲ್ಲನೆ ತಾಗಿದವು

ಎಲ್ಲರೂ ಏಕೇ ತನ್ನನ್ನು ಭಿನ್ನ ಎಂದು ಪರಿಗಣಿಸುವುದು? ರತ್ನಳ ತರಹ ಮೂಕ ಬಸವನಂತಿರಬೇಕಿತ್ತೇ? ಇಲ್ಲ ರಾಣಿ ಹೇಳಿದ ತರಹ ಪ್ರೇಮ ಪತ್ರ ಬರೆಯುವವರಿಗೆಲ್ಲಾ ಉತ್ತೇಜಿಸುತ್ತಾ ಹೋಗಬೇಕಿತ್ತೆ? ತೆರೆದ ಕಿಟಕಿಯ ಬಳಿ ಬಂದಳು. ರಸ್ತೆಯಲ್ಲಿ ಓಡುತ್ತಿದ್ದ ಟ್ಯಾಕ್ಸಿ ರಿಕ್ಷಾಗಳನ್ನು ಗಮನಿಸುತ್ತಾ ನಿಂತಳು ಪುನಃ ಮನಸ್ಸು ಹಿಂದಕ್ಕೆ ಮೈಲಿಗಟ್ಟಲೆ ಓಡಿತು.
-*-

ದಿನನಿತ್ಯ ರಾಣಿಯೊಡನೆ ವಾದ ವಿಷಯವೊಂದೇ ಹುಡಗರೇನು, ಅಂಕು ಡೊಂಕಾಗಿದ್ದರೆ ಸಾಕು ಊರ್ವಸಿ ರಂಭೆ ಅಂತಾರೆ, ಕೆಲವುದಿನಗಳು ಮಾತ್ರ. ನಂತರ ಇಲ್ಲದ ಕುರೂಪಗಳು ಗೋಚರಿಸುತ್ತವೆ

“ಬಹಳ ಅನುಭವಸ್ಥಳಂತೆ ಆಡ್ತೀಯಲ್ಲ! ನುಡಿದಳು. ರಾಣಿಯ ವ್ಯಂಗ್ಯ “ಇಂಥಾ ಸಿಲ್ಲಿ ವಿಷಯಗಳಿಗೆಲ್ಲಾ ಅನುಭವ ಬೇಕೇನೆ? ದಿನಾ ಬೆಳಗಾದರೆ ನಡೆಯುವ ಈ ನಾಟಕಗಳು ಕಾಣೋಲ್ವೆ? ನಾನು ಅಷ್ಟು ಕುರುಡು ಅಂಡ್ಕೊಂಡಿದ್ದೀಯಾ? ಒಂದೊಂದು ಸಾರಿ ಆಶ್ಚರ್ಯ, ಅದ್ಹೇಗೆ ಜನ ಈ ಹುಚ್ಚು ಬಲೇಲಿ ಬೀಳ್ತಾರೇಂತ. ಆಷ್ಟು ವೀಕಾಗಿರ್‍ತಾರೇನು? ನನ್ನ
ಹೃದಯ ಅಷ್ಟು ದುರ್ಬಲವಲ್ಲ” ಆತ್ಮವಿಶ್ವಾಸದಿಂದ ಹೇಳಿದ್ದಳು.

“ಪ್ರೀತಿ ಪ್ರೇಮ ಅನ್ನೋದು ದೌರ್ಬಲ್ಯಾಂತ ಅನ್ತೀಯಾ? ಬಿದಿರು ಗೋಡೆಯಾಗಿದ್ದಿದ್ದರೆ ಪ್ರೀತಿಯ ಕಿರಣಗಳು ತರುತ್ತಿದ್ದವು, ಕಲ್ಲುಗೋಡೆ ಯನ್ನು ಹಾದುಹೋಗುವಷ್ಟು ಶಕ್ತಿಯಿಲ್ಲ. ಪ್ರೀತಿಗೆ ಅದು ಮನುಷ್ಯ ಜೀವಿಗಳು ಅನ್ನೋರಿಗೆ ಮಾತ್ರ ಬರೋ ಮಧುರ ಭಾವನೆಗಳು. ಅದರ ಸಿಹಿ ಕಹಿ ನೋಡದ ನಿನಗೇನು ಗೊತ್ತು? ಕಾಣದ ವಸ್ತುವಿನ ಬಗ್ಗೆ ತಾತ್ಸಾರ ಪಡುವುದು ಸರಿಯಲ್ಲ” ಎಷ್ಟು ವಿಶ್ವಾಸದಿಂದ ನುಡಿದಳು ರಾಣಿ,

ಅವಳು ನಕ್ಕುಬಿಟ್ಟಳು.

“ಬೇಡ ತಾಯಿ, ಆ ನಿನ್ನ ಸಿಹೀನೂ ಬೇಡ, ಕಹೀನೂ ಬೇಡ. ನನಗೆ ಜೀವನದಲ್ಲಿ ಏರಿಳಿತ, ಬದಲಾವಣೆ ಅಂದರೆ ಆಗೋಲ್ಲ ಅಪಸ್ವರವಿಲ್ಲದಂತೆ ಒಂದೇ ರಾಗವಾದರೂ ಪರವಾಗಿಲ್ಲ ಮಧುರವಾಗಿ ಮಿಡಿದರೆ ಸಾಕು”

ಇಷ್ಟು ಮಾತನಾಡುವ ಅವಳು ಅಬ್‌ನಾರ್ಮಲ್ಲೇ? ಕಲ್ಲುಬಂಡೆಯೆ? ರಾಣಿ ಒಂದು ಘಳಿಗೆ ಅವಳನ್ನು ನೋಡಿದಳು.

“ನಿಂಗೆ ಎಮೋಷನ್ನೇ ಇಲ್ವಾ?” ಬೆರಗಿನಿಂದ ಕೇಳಿದಳು. ಅವಳು ಮೃದುವಾಗಿ ನಕ್ಕಳು.

“ನಾನು ಹೆಣ್ಣಲ್ಲವಾ? ಎಮೋಷನ್ಸ ಬರತ್ತವೆಂತ ಲಂಗುಲಗಾಮಿಲ್ಲದೆ ಕುದುರೆಯ ಹಾಗೆ ಕುಣಿಯುತ್ತಾರೇನು? ಸಕ್ಕರೆ ಸುರುವಿಕೊಂಡ ಹಾಗೆ ಒಂದೇ ಗುಟುಕಿಗೆ ಕುಡಿಯುವಾಸೆ ನನಗಿಲ್ಲ. ಉಪ್ಪಿನಂತೆ ಹಿತವಾಗಿ ಮಿತವಾಗಿರಲಿ, ಇದು ನನ್ನ ಸಿದ್ಧಾಂತ…..”

“ನಿನಗೆ ಸ್ವಾತಂತ್ರದ ಸವಿ ಗೊತ್ತಿಲ್ಲ….” ರಾಣಿಯ ಮಾತುಗಳನ್ನು ಅರ್ಧದಲ್ಲಿಯೇ ಕಡಿದು ಹೇಳಿದಳು.

“ಸ್ವಾತಂತ್ರ್ಯ! ಈ ಸ್ವಚ್ಛಂದಕ್ಕೆ ನೀನು ಸ್ವಾತಂತ್ರ ಅನ್ನುತ್ತೀಯಾದರೆ ಖಂಡಿತ ನನಗೆ ಈ ತರಹದ ಸ್ವಾತಂತ್ರ ಬೇಡ ರಾಣಿ… ನನ್ನ ಕಟ್ಟು ಪಾಡಿನ ಮನೆಯೇ ನನಗಿಷ್ಟ. ನಾನೇ ಹಾಕಿಕೊಂಡಿರುವ ಬೇಲಿ ನನಗೆ ಪ್ರಿಯ. ಎಲ್ಲಾ ದನಗಳು ಬಂದು ಮೇಯ್ದು ಹೋಗುವ ಬಯಲಿನಂತಿಲ್ಲ. ಬೇಲಿ ಹಾಕಿದ ತೋಟದ ಹಾಗೆ ಸುರಕ್ಷಿತವಾಗಿದ್ದೇನೆ. ಹೆಣ್ಣಿಗೆ ಅದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು”

ಮೃದು ಮಧುರ ರಾಗಭಾವಗಳನ್ನೂ ನುಡಿಸುವ ಹೃದಯ ವೀಣೆ ಇವಳಲ್ಲಿದೆಯೆ…. ? ಮಲಗಿದೆಯೇ?

“ನೀನು ಎಲ್ಲರಂತಲ್ಲ…”-ಎಂದಳು ರಾಣಿ ನಿಧಾನವಾಗಿ ಮಾತು ಮುಗಿಸುವಂತೆ.

ಅವಳು ಮುಂದೆ ಮಾತನಾಡಲಿಲ್ಲ.
-*-

“ಆಸ್ಪತ್ರೆಗೆ ಹೋಗಲ್ವಾ?” ಅಮ್ಮ ಬಾಗಿಲಲ್ಲಿ ನಿಂತು ಕೇಳುತ್ತಿದ್ದರು. ಓಡುತ್ತಿದ್ದ ಅವಳ ಮನಸ್ಸು ಗಕ್ಕನೆ ನಿಂತಿತು, ಗಲಿಬಿಲಿಯಿಂದ ಅಮ್ಮನ ನೋಡಿದಳು. ಪ್ರಶ್ನೆ ಅವಳ ಕಪ್ಪು ಕಣ್ಣುಗಳಲ್ಲಿ ಕುಣಿಯಿತು.

“ಆಸ್ಪತ್ರೆಗೆ ಹೋಗಲ್ವಾ?”

“ಹೂಂ…” ಎಂದು ಗಡಿಯಾರ ನೋಡಿಕೊಂಡಳು. ಗಂಟೆ ನಾಲ್ಕೂವರೆಯಾಗಿತ್ತು. ಕುಸಿಯುತ್ತಿದ್ದ ಮನಕ್ಕೆ ಅವಸರ ತುಂಬಿದಳು. ಕಿಟಕಿಯಿಂದ ಕಾಲುಗಳನ್ನು ಕಿತ್ತು ಚಪ್ಪಲಿ ಮೆಟ್ಟಿ ಸ್ಟೆತಾಸ್ಕೋಪನ್ನು ಹಿಡಿದು ಹೊರಬಿದ್ದಳು.

ಅನ್ಯಮನಸ್ಕಳಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಅವಳನ್ನು ಅಮ್ಮ ಬಾಗಿಲಲ್ಲಿ ನಿಂತು ನೋಡಿದರು. “ಯಾಕೋ ಮಂಕಾಗಿದ್ದಾಳೆ ಏನಾದ್ರೂ ಕಟುವಾಗಿ ಹೇಳಿದೆನೆ?” ಎಂದು ಕೊಳ್ಳುತ್ತಾ ಒಳಬಂದರು.
-*-

ಅವಳು ಲೇಬರ್ ವಾರ್ಡಿನ ಬಳಿ ಬರುತ್ತಿದ್ದಂತೆಯೇ ಹೆಂಗಸೊಬ್ಬಳ ಆರ್ತನಾದ ಕೇಳಿಬರುತ್ತಿತ್ತು. ಹೊರಗಡೆ ಶತಪತ ಸುತ್ತುತ್ತಿದ್ದವ ಅವಳ ಗಂಡನಿರಬೇಕೆಂದು ತರ್ಕಿಸುತ್ತಿರುವಾಗಲೇ ಆತ ಅವಳ ಬಳಿ ನೇರವಾಗಿ ಬಂದ. ಆತಂಕ, ಗಾಬರಿಯಿಂದ ಕಂಗಾಲಾಗಿದ್ದ. ಕೆದರಿದ ಕ್ರಾಪು, ಷೇವ್ ಮಾಡದ ಮುಖ, ಅಸ್ತವ್ಯಸ್ತ ಉಡುಪು.

“ಡಾಕ್ಟರ್, ಡೆಲವರಿ ನಾರ್ಮಲ್ ಆಗಿ ಆಗೋಲ್ವಾ? ರಾತ್ರಿಯಿಂದ ತುಂಬಾ ನರಳ್ತಾ ಇದ್ದಾಳೆ”. ಆತನ ಗಾಬರಿ ತುಂಬಿದ ಕಣ್ಣುಗಳಲ್ಲಿ ನೀರು ಹರಡಿತ್ತು.

“ಈಗ ತಾಗೇ ಹೋಗ್ತಾ ಇದ್ದೀನಿ…” ಎಂದಳು.

“ಡಾಕ್ಟರ್, ಇದು ಮೊದಲನೆಯದು, ತುಂಬಾ ವರ್ಷಗಳ ನಂತರ, ಮೇಲಾಗಿ ಹೆದರಿದ್ದಾಳೆ” ಆತ ಹೇಳುತ್ತಿದ್ದ. ಅವಳು ಬಾಗಿಲು ತಳ್ಳಿ ಒಳಗೆ ಹೆಜ್ಜೆ ಹಾಕಿದಳು.

ಒಳಗೆ ಟೇಬಲಿನ ಮೇಲೆ ಮಲಗಿದ್ದ ಯುವತಿ ಕಂಗಾಲಾಗಿದ್ದಳು. ಸುತ್ತಲೂ ನಿಂತಿದ್ದ ಡಾಕ್ಟರುಗಳ ಪ್ರಯತ್ನ ನಡೆದಿತ್ತು. ಜೋರಾಗಿ ನರಳುವ ಶಕ್ತಿಯನ್ನು ಕಳೆದು ಕೊಳ್ಳುತ್ತಿದ್ದ ಅವಳು ತುಟಿಯಂಚನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಸೀಳಿ ಬರುತ್ತಿದ್ದ ನೋವನ್ನು ತಡೆಯಲು ಯೋಚಿಸುತ್ತಿದ್ದಳು.

“ಪ್ರೀತಿಸಬೇಕು ಪ್ರೀತಿಸಿಕೊಳ್ಳಬೇಕು… ತಾಯಿಯಾಗ್ಬೇಕು ನೋವು ನುಂಗಬೇಕು… ಆಗಲೇ ಸಾರ್ಥಕ, ನೋವಿನಲ್ಲಿ ಸುಖ” ರಾಣಿಯ ನುಡಿಗಳು ಗುಯ್ ಗುಟ್ಟಿದವು.

“ಟ್ರಯಲ್ ಲೇಬರ್ ಮಾಡಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ. ಹೆಡ್ ತುಂಬಾ ದೊಡ್ಡದಿದೆ ಸಿಸೇರಿಯನ್ ಮಾಡೋಣ. ಮಗುವಾದರೂ ಉಳಿಯಬಹುದು ಬೇಗ… ಮೇಡಂ” ಎಂದು ಹೇಳುತ್ತಾ ಗ್ಲೌಸ್‌ಗಳನ್ನು ತೆಗೆದು ಕೆಳಗೆ ಬಿಸಾಡಿ ಕೈಗಳನ್ನು ತೊಳೆಯ ತೊಡಗಿದರು,

ಏಕೋ ಅವಳ ಎದೆಯಲ್ಲಿ ಉಸಿರು ಕಟ್ಟಿದಂತಾಯಿತು.

“ತಾಯಿಯಾಗ್ಬೇಕು ನೋವು ನುಂಗಬೇಕು”

ರಾಣಿಯ ತಲೆ ಹಿಡಿದು ಚಚ್ಚಬೇಕಿನಿಸಿತು ಅವಳಿಗೆ.

“ಕನ್ಸೆಂಟ್ ಫಾರಂಗೆ ಅವಳ ಗಂಡನ ಸೈನ್ ಹಾಕಿಸಿಕೊಂಡು ಬಾ” ಎನ್ನುತ್ತಾ ಮೇಡಂ ಅವಳನ್ನು ದಾಟಿ ಓ. ಟಿ.ಯತ್ತ ಹೊರಟರು. ಫಾರಂ ಹಿಡಿದು ಅವಳು ಹೊರಗೆ ಬಂದಾಗ ಅ ಯುವತಿಯ ಪರಿವಾರವೆಲ್ಲಾ ಬಂದಿತು. ಎಲ್ಲರಿಗೂ ಗಾಬರಿ ಆತಂಕ ಹಣೆಯ ಮೇಲಿನ ಬೆವರನ್ನೊರಸಿಕೊಳ್ಳುತ್ತಾ ನಿಂತಿದ್ದ ಅವಳ ಗಂಡನತ್ತ ತಿರುಗಿದ ಅವಳು.

“ಆಪರೇಷನ್ ಮಾಡಿ ಮಗು ತೆಗಿಯಬೇಕು ಅದಕ್ಕೆ ನಿಮ್ಮ ಸೈನ್ ಆಗ್ಬೇಕು”.

ಎಲ್ಲರೂ ಒಮ್ಮೆ ಮೆಟ್ಟಿ ಬಿದ್ದರು.

“ಡಾಕ್ಟರ್, ಅವಳಿಗೇನಾದ್ರೂ ಅಪಾಯವಿದೆಯೇ?” ಆತನ ಗಂಟಲು ಕಟ್ಟಿ ಬಂದಿತ್ತು.

“ಅವಳಿಗೆ ಮದ್ವೆ ಇಷ್ಟವಿಲ್ಲಾಂದ್ರೂ ಮದ್ವೆ ಮಾಡಿ ಬಿಟ್ಟೆ. ಈಗ ಅವಳಿಗೆ ಅದ್ರಲ್ಲೇ ಸಾ” ಮುಂದೆ ಹೇಳಲು ಇಷ್ಟವಿಲ್ಲದೆ ಅವಳ ತಾಯಿ ಸೆರಗು ಬಾಯಿಗಿಟ್ಟುಕೊಂಡು ಬಿಕ್ಕಳಿಸಿದರೆ,

ಅವಳ ತಾಯಿಯ ಕುತ್ತಿಗೆ ಹಿಸುಕಿ ಬಿಡಬೇಕೆನಿಸಿತು ಅವಳಿಗೆ. ಆಗುವದೆಲ್ಲಾ ಆದಮೇಲೆ ಬಣ್ಣ ಕಟ್ಟಿ ಆಡುವುದೇನು?

“ಡಾಕ್ಟರ್ ನನ್ನ ಹೆಂಡತಿ” ಆತ ಮಗುವಿನಂತೆ ಅಳುವುದೊಂದು ಬಾಕಿಯಿತ್ತು. ಅಪರಾಧಿಯ ಕಟ್ಟೆಯಲ್ಲಿ ನಿಂತವನಂತೆ ತಲೆತಗಿಸಿದ್ದ… ತಪ್ಪು ಯಾರದು? ಈತನದೊ? ಅವಳದೊ! ಇಲ್ಲ ಈ ಮನೆಯವರದೊ? ಯೋಚಿಸಲು ಸಮಯವಿರಲಿಲ್ಲ.

“ಬೇಗ ಇದಕ್ಕೊಂದು ಸೈನ್ ಹಾಕಿ ಬಿಡೀಪ್ಪ”, ಫಾರಂ ಮುಂದೆ ನೀಡಿದಳು.

ಯೋಚಿಸಲು ಸಮಯವಿರಲಿಲ್ಲ. ಅವಳ ಹೃದಯ ಮರುಗಿತು. ಕರುಣೆಯ ನುಡಿಗಳನ್ನಾಡಲು ಹೃದಯ ಮಿಡಿಯಿತು…..

“ಏನೂ ಆಗಲ್ಲ ಅಂಥಾ ಅಪಾಯವಾಗೋದಿದ್ರೆ ಆಪರೇಷನ್ ಯಾಕೆ ಮಾಡ್ತಾ ಇದ್ವಿ? ದೈರ್ಯವಾಗಿರಿ ಎಂದು ಹೇಳುತ್ತಾ ಫಾರಂ ಮಡಿಚಿ ಹಿಡಿದು ಓ.ಟಿ ಯತ್ತ ಹೆಜ್ಜೆ ಹಾಕಿದಳು. ಇದುವರೆಗೂ ಗಂಡಿಗೆ ಕರುಣೆಯ ನುಡಿಗಳನ್ನಾಡಿ ಸಮಾಧಾನ ಪಡಿಸಿದ್ದು ನೆನಪಿಗೆ ಬರಲಿಲ್ಲ. ಇದ್ದಕ್ಕಿದ್ದ ಹಾಗೆ ಕರುಣೆ ಏಕೆ ಮೂಡಿ ಬಂದಿತು? ಅಸಹಾಯ ಮಗುವಿನಂತೆ ಕಂಗೆಟ್ಟು ನಿಂತಿದ್ದಕ್ಕೆ? ಹೌದು ಎಂದುಕೊಂಡರೂ ಉತ್ತರ ಸಮರ್ಪಕವೆನಿಸಲಿಲ್ಲ. ಎಷ್ಟೋ ಜನ ಇವನಿಗಿಂತ ಕಂಗೆಟ್ಟು ಕಣ್ಣೀರು ಹರಿಸುವವರನ್ನು ನೋಡಿರಲಿಲ್ಲವೆ? ಬಾಯಿ ಸಮಾಧಾನ ಪಡಿಸುತ್ತಿದ್ದರೂ ಹೃದಯ ಮಿಡಿದಿರಲಿಲ್ಲ. ಈಗ ಯಾಕೆ? ಯಾಕೆ?

ಓ.ಟಿ. ಹತ್ತಿರ ಬಂದಿದ್ದರಿಂದ ಯೋಚನೆಗಳನ್ನು ಕೊಡವಿ ಒಳಗೆ ಕಾಲಿಟ್ಟಳು. ನರಳುತ್ತಿದ್ದ ಯುವತಿಯನ್ನು ಆಪರೇಷನ್ ಟೇಬಲ್ಲಿನ ಮೇಲೆ ಮಲಗಿಸಿದ್ದರು. ಕ್ಷೀಣವಾಗಿ ಮುಲುಗುತ್ತಿದ್ದ ಅವಳ ತಲೆಯ ಬಳಿ ಬಂದು ನಿಂತಳು. ಅಸಿಸ್ಟ ಮಾಡಲು ಬೇರೆ ಡಾಕ್ಟರುಗಳಿದ್ದುದರಿಂದ ಅವಳು ಬ್ಲಡ್ ಪ್ರೆಶರ್ ನೋಡಲು ನಿಂತಳು.

ಅನಸ್ತೀಸಿಯಾ ಕೊಟ್ಟ ನಂತರ ಆಪರೇಷನ್ ಪ್ರಾರಂಭಿಸಿದರು. ಅವಳ ಉಬ್ಬಿದ ಹೊಟ್ಟೆಯ ಮೇಲೆ ಚಕಚಕನೆ ಓಡಾಡುತ್ತಿದ್ದ ಚಾಕು ಕತ್ತರಿಗಳನ್ನೇ ನೋಡುತ್ತಿದ್ದಳು. ಮಧ್ಯ ಮಧ್ಯ ನಾಡಿ ಬಡಿತವನ್ನು ಪರೀಕ್ಷಿಸುತ್ತಿದ್ದಳು. ಹೊಟ್ಟೆ ಸೀಳಿದ ನಂತರ ಪ್ರಯಾಸಪಟ್ಟು ಮಗುವನ್ನು ಹೊರ ತೆಗೆದರು. ನಿರೀಕ್ಷೆಗೂ ಮೀರಿ ದಪ್ಪವಾಗಿ ಬೆಳೆದಿದ್ದ ಮಗು ನೀಲಿಗಟ್ಟಿತ್ತು. ಗಡಿಬಿಡಿ ಯಿಂದ ಆಕ್ಸಿಜನ್ ಕೊಟ್ಟು ಎಲ್ಲಾ ವಿಧದಲ್ಲೂ ಪ್ರಯತ್ನಿಸಿದರೂ ಮಗು ಕೆಲವೇ ಗಂಟೆಗಳಲ್ಲಿ ಸತ್ತು ಹೋಯಿತು. ತಾಯಿ ವಿಪರೀತ ರಕ್ತಸ್ರಾವದಿಂದ ಬಟ್ಟೆಯಂತೆ ಬಿಳಿಚಿಕೊಂಡಿದ್ದಳು.

ಸ್ಪೆಷಲ್ ವಾರ್ಡಿಗೆ ಸಾಗಿಸುವ ಮೊದಲು ಸ್ಟ್ರೆಚರ್ ಮೇಲೆ ಮಲಗಿಸಿದ್ದ ಅವಳ ಬಳಿ ಹೋದ ಮೇಡಂ.

“ಜಾನಕಿ, ಎಲ್ಲಿ, ಕಣ್ಣು ಬಿಡು” ಹಣೆಯ ಮೇಲೆ ಮೆಲ್ಲನೆ ತಟ್ಟಿ ಹೇಳಿದರು. “ಆಂ ಊಂ” ಎಂದು ನರಳಿದ ಅವಳು ನಿಧಾನವಾಗಿ ರೆಪ್ಪೆ ಬಿಡಿಸಿದಳು.

“ನಾಲಿಗೆ ಸ್ವಲ್ಪ ತೋರಿಸು….. ಆ ಹಾಗೆ ಆಯಾ, ವಾರ್ಡಿಗೆ ಕರೆದುಕೊಂಡು ಹೋಗಿ ಮಲಗಿಸಿ ಡ್ರಿಪ್ ಸ್ಟಾರ್ಟ್ ಮಾಡಿಸು” ಎಂದು ಆಯಾಳಿಗೆ ಹೇಳುತ್ತಿರುವಾಗ ಜಾನಕಿ.

“ಮಗು…. ನನ್ನದು ಎಂಥಾ ಮಗು? ಎಲ್ಲಿ?” ಕ್ಷೀಣವಾಗಿ ನಿಧಾನವಾಗಿ ಕೇಳಿದಳು.

“ಮೊದ್ಲು ವಾರ್ಡಿಗೆ ಹೋಗಮ್ಮ…. ಈಗ ಬರ್‍ತೀವಿ….” ಎಂದವರು ನಿಲ್ಲದೆ ರೂಮಿಗೆ ಹೋದರು.

ಕಣ್ಣರಳಿಸಿ ನೋಡುತ್ತಾ ನಿಂತಿದ್ದ ಅವಳ ಹೃದಯ ಒಮ್ಮೆ ನರಳಿತು. ಒಳಗಡೆಯಿಂದ ಮೇಡಂ ಕರೆದರು. ಅವರ ಬಳಿ ಬಂದು ನಿಂತಳು.

“ತುಂಬಾ ಬ್ಲೀಡ್ ಆಗಿದೆ. ಏನಿಲ್ಲಾಂದ್ರೂ ಆ ಹುಡುಗಿಗೆ ಎರಡು ಬಾಟಲ್ಸ್ ಬ್ಲಡ್‌ನ ಈ ವಾರದೊಳಗೆ ಕೊಡಬೇಕು. ಪುನಃ ಬೀಡಿಂಗ್ ಸ್ಟಾರ್ಟ್ ಆದ್ರೆ ಕಷ್ಟ, ನೀನು ಹೋಗಿ ಈಗಲೇ ಒಂದು ಬಾಟಲ್ ಬ್ಲಡ್‌ಗೆ ಆರೇಂಜ್ ಮಾಡು ಎಂದರು ಮೇಡಂ.

“ಮೇಡಂ ಅವಳು ಮಗೂಂತ ಕೇಳಿದ್ರೆ?” ಅವಳು ಮೆಲ್ಲನೆ ಕೇಳಿದಳು, ಗಕ್ಕನೆ ಅವಳ ಚಕಿತರಾಗಿ ನೋಡಿದ ಅವರು,

“ಹೊಸದಾಗಿ ಕೇಳ್ತಾ ಇದ್ದೀಯಲ್ಲ? ನಿಧಾನವಾಗಿ ಬಿಡಿಸಿ ಹೇಳಿ ಬಿಡು. ಅವಳ ಗಂಡನ ಕೈಗೆ ಮಗೂನ ಕೊಟ್ಟಾಗಿದೆ….” ಎನ್ನುತ್ತಾ ಬರೆಯಲು ಪೆನ್ನನ್ನು ಕೈಗೆತ್ತಿಕೊಂಡರು.

“ಹೂಂ” ಎಂದು ಹೊರಟ ಆವಳು ಸ್ಪೆಷಲ್ ವಾರ್ಡಿನತ್ತ ನಡೆದಳು.

ಇಂಥ ಸ್ಥಿತಿಯಲ್ಲಿ ಮಗೂಂತ ಕನವರಿಸುವ ಅವಳಿಗೆ ಏನೆಂದು ಹೇಳಬೇಕು? ನಿನ್ನ ಮಗು ಸತ್ತು ಹೋಯಿತು, ಅಂತ ಹೇಳಬೇಕೆ? ಎಷ್ಟೋ ಜನರಿಗೆ ತಾನು ಸತ್ತ ಸುದ್ದಿಗಳನ್ನು ನಿರ್ವಿಕಾರವಾಗಿ ಹೇಳಿರಲಿಲ್ಲವೆ? ಆದರೆ ಇಂದೇಕೆ ಹೊಸ ತರಹಾ? ರಕ್ತ ದೇಹದ ತುಂಬಾ ಹರಿದಾಡಿದಂತೆ, ಕಲ್ಲಿನ ಕೋಟೆ ಕುಸಿಯುತ್ತಿರುವ ಸೂಚನೆ? ಓಹ್!

ವಾರ್ಡಿನ ಹತ್ತಿರ ಬಂದಿದ್ದಳು. ರೂಮಿನೊಳಗೆ ಕಾಲಿಡುತ್ತಿದ್ದವಳು ಏನನ್ನೋ ಜ್ಞಾಪಿಸಿಕೊಂಡು ಹಿಂದಕ್ಕೆ ಬಂದು ಬ್ಲಡ್ ಬ್ಯಾಂಕಿಗೆ ಫೋನು ಮಾಡಿದಳು.

“ಹಲೋ, ಬ್ಲಡ್ ಬ್ಯಾಂಕ್…..” ಆ ಕಡೆಯಿಂದ ಉತ್ತರ ಬಂದಿತು.

“ಸರ್ ‘ಎ’ ಗ್ರೂಪ್ ಬ್ಲಡ್ ಸಿಗುವುದಾ?”

“ಎಷ್ಟು ಬೇಕಿತ್ತು?”

“ಎರಡು ಬಾಟಲ್ಸ್”

“ಒಂದು ಬಾಟಲ್ ಮಾತ್ರ ಇದೆ ಅಷ್ಟೆ.”

“ಹಾಗಾದ್ರೆ ಕ್ರಾಸ್ ಮ್ಯಾಚಿಂಗ್ ಗೆ ಬ್ಲಡ್ ತರಲಾ?”

“ಓ ಬನ್ನಿ ಕೊಡೋಣ.”

ಒಂದು ಬಾಟಲ್ ರಕ್ತವೇನೋ ಸಿಕ್ಕಂತಾಯಿತು. ಇನ್ನೊಂದು ಬಾಟಲ್‌ಗೆ ಹೊರಗಡೆ ಯಾವುದಾದರೂ ಪ್ರೈವೇಟ್ ಕ್ಲಿನಿಕ್ ನಿಂದ ತರಲು ಹೇಳಿದರಾಯಿತು ಎಂದುಕೊಳ್ಳುತ್ತಾ ಸ್ಪೆಷಲ್ ವಾರ್ಡಿಗೆ ಕಾಲಿಟ್ಟಳು. ಅರ್ಧ ತೆರೆದ ರೂಮಿನ ಬಾಗಿಲ ಬಳಿ ಬಂದೊಡನೆ ತಟ್ಟನೆ ನಿಂತುಬಿಟ್ಟಳು.

ಜಾನಕಿ ಎಚ್ಚರಗೊಂಡಿದ್ದಳು. ಕೆಂಪು ರಗ್ಗು ಹೊದೆದು ನೀಳವಾಗಿ ಮಲಗಿದ ಅವಳ ತಲೆಯ ಬಳಿ ಗಂಡ ಕುರ್ಚಿಯೊಂದರ ಮೇಲೆ ಕುಳಿತಿದ್ದ. ನಿಧಾನವಾಗಿ ಅವನ ಬೆರಳುಗಳು ಜಾನಕಿಯ ಕೂದಲಿನೊಳಗೆ ಆಡುತ್ತಿದ್ದವು. ಇನ್ನೊಂದು ಕೈ ಅವಳ ಬಲ ಹಸ್ತವನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಜಾನಕಿ ನಿಧಾನವಾಗಿ ಮಾತನಾಡುತ್ತಿದ್ದಳು. ಅವನ ಕಣ್ಣುಗಳಲ್ಲಿ ನೀರು!

“ಅಳಬೇಡೀಂದ್ರೆ ಅದೇ ನಂಗೇನೂ ಆಗಿಲ್ಲ. ನಮ್ಮ ಪ್ರೀತಿಯ ತುಣುಕನ್ನು ಉಳಿಸಿಕೊಳ್ಳಲಾರದೆ ಹೋದನಲ್ಲ ಅದೊಂದೇ ನನಗೆ….” ಬಿಕ್ಕಳಿಕೆ ಅಡ್ಡ ಬಂದಿತು.

ಅವನು ಅವಳ ಹಣೆಯ ಮೇಲೆ ತನ್ನ ಮುಖವನ್ನಿಟ್ಟ, ಜಾನಕಿ ಮಾತನಾಡುತ್ತಲೇ ಇದ್ದಳು. ದುಃಖ ಉದ್ವೇಗದಿಂದ ಅವಳ ಸ್ವರ ಒಮ್ಮೆ ಏರು ಒಮ್ಮೆ ನಡುಗುತ್ತಿತ್ತು.

“ನನಗೇನೂ ಆಗೋಲ್ಲಾಂತ ನನಗೆ ಗೊತ್ತಿತ್ತು. ಪ್ರೀತಿಸೋ ನಿಮ್ಮನ್ನು ಬಿಟ್ಟು ದೂರ ಹೋಗೋಕೆ ಈ ದೇಹಕ್ಕೆ ಶಕ್ತಿಯಿಲ್ಲ…. ಊ ಹೂಂ, ಸಾಧ್ಯವೂ ಇಲ್ಲ. ನಿಮಗೆ ಏನನ್ನೂ ಕೊಡದಾದೆ.

“ಜಾನಕಿ, ಸುಮ್ಮನಿರು…. ಇನ್ನೊಂದು ಮಗು ಹುಟ್ಟಬಹುದು. ಆದ್ರೆ ನೀನು ಬೇಕು ನನಗೆ, ನಿನಗೆ ಏನಾದ್ರೂ ಆಗಿದ್ದಿದ್ರೆ! ಅಬ್ಬಾ! ಯೋಚಿಸಲೂ ಸಾಧ್ಯವಿಲ್ಲ.”

“ಮಕ್ಕಳೂಂತ ನೀವೇ ತಾನೆ ಪ್ರಾಣ ಬಿಡ್ತಾ ಇದ್ದದ್ದು…. ಈಗ ನೋಡಿ” ಆಳಲು ಪ್ರಾರಂಭಿಸಿಬಿಟ್ಟಳು ಜಾನಕಿ.

“ಜಾನಕಿ ನಿನ್ನ ದಮ್ಮಯ್ಯ ಸುಮ್ಮನಾಗು ಸುಸ್ತಾಗುತ್ತೆ. ನಿಜಕ್ಕೂ ನಂಗೆ ಮಕ್ಕಳು ಬೇಡ, ನೀನು ಬೇಕು. ನೀನು ಬದುಕಬೇಕು ಅವಳ ಕಣ್ಣೀರನ್ನು ತನ್ನ ಬೆರಳುಗಳಿಂದ ಒರಸಿದ.

“ಅವಳ ಹೃದಯ ಬಡಿತವನ್ನು ತಪ್ಪಿಸಿಕೊಂಡಿತು. ಬಾಗಿಲಲ್ಲಿ ನಿಂತ ಅವಳು ಮೆಲುವಾಗಿ ಕೆಮ್ಮಿದಳು. ಗಡಿಬಿಡಿಯಿಂದ ಎದ್ದು ನಿಂತ ಆತ. ಒಳಗೆ ಬಂದಳು.

“ಎಚ್ಚರವಾಗಿದೆಯಾ?…..”- ಕೇಳುತ್ತಾ ಜಾನಕಿಯ ಬಳಿ ಬಂದಳು.

“ಹೂಂ. ಅಂದರೆ ತುಂಬಾ ಏನೇನೋ ಮಾತಾಡ್ತಾ ಇದ್ದಾಳೆ ಡಾಕ್ಟರ್” ಆತಂಕದಿಂದ ನುಡಿದ.

“ಅನಸ್ತೀಸಿಯಾ ಎಫೆಕ್ಟ್, ಇನ್ನು ಸ್ವಲ್ಪು ಹೊತ್ತಿಗೆ ಸರಿಯಾಗುತ್ತಾರೆ. ನಿಮ್ಮ ಮಿಸಸ್‌ಗೆ ರಕ್ತ ಕೊಡಬೇಕಾಗುತ್ತೆ…..” ಅವಳು ಹೇಳಿ ಮುಗಿಸುವ ಮುನ್ನವೇ ಅವನು.

“ಡಾಕ್ಟರ್ ನನ್ನ ರಕ್ತ ಸರಿಯಾಗುತ್ತಾ ನೋಡಿ. ಒಂದು ಬಾಟಲೇಕೆ, ಇಡೀ ದೇಹದ ಎಲ್ಲಾ ರಕ್ತಾನೂ ಬೇಕಾದ್ರೆ ಅವಳ ದೇಹಕ್ಕೆ ಹರಿಸಿ ಬಿಡಿ” ಉದ್ವೇಗದಿಂದ ಹೇಳಿದ.

“ಡಾಕ್ಟರ್ ಅವರ ರಕ್ತ ಖಂಡಿತ ಬೇಡ. ಮೊದಲೇ ಸೊರಗಿದ್ದಾರೆ” ಜಾನಕಿ ಹಾಸಿಗೆಯ ಮೇಲಿನಿಂದಲೇ ಕ್ಷೀಣವಾಗಿ ಹೇಳುತ್ತಾ ಮೇಲೇಳಲು ಸಾಧ್ಯವಾಗದೇ ಮಲಗಿದಳು.

ಆತನತ್ತ ನೋಡಿದಳು. ಸಣ್ಣಗೆ ನೀಳವಾಗಿ ಇರುವ ಈತನಲ್ಲಿ ಜಾನಕಿ ಕಂಡುದಾದರೂ ಏನು? ಪುನಃ ನೋಡಿದಳು ರಕ್ತವಿರಲಿ, ಜೀವವನ್ನೇ ಕೊಡಲು ಮುಂದೆ ಬಂದಿದ್ದಾನೆ. ಆತ ಪ್ರೀತಿಯ ಕೊಳವಾಗಿದ್ದ. ಅದರಲ್ಲಿ ಮಿಂದ ಜಾನಕಿ ತೃಪ್ತಳು ತನ್ನ ಜೀವನದಲ್ಲಿ ಇದನ್ನು ನೋಡುತ್ತಿರುವುದು ಮೊದಲೇ ಅಥವಾ ಗುರುತಿಸಿರುವುದು ಮೊದಲೋ?

ತುಂಬಿದ ಕೊಳದಲ್ಲಿ ನಿಧಾನವಾಗಿ ತೇಲಿ ಬಂದ ಪ್ರೀತಿಯ ಅಲೆಗಳು ಅವಳ ಹೃದಯ ವೀಣೆಯನ್ನು ಮೆಲ್ಲನೆ ತಬ್ಬಿದವು ದಾಟಿ ತಂತಿಗಳನ್ನು ಮುಟ್ಟಿದವು.

ಹೃದಯವನ್ನು ಮೊದಲ ಬಾರಿಗೆ ಒತ್ತಿಕೊಂಡಳು.

“ಡಾಕ್ಟರ್ ರಕ್ತ” ಜಾನಕಿ ಪುನಃ ಹೇಳಲು ಪ್ರಾರಂಭಿಸಿದಳು. ಮೃದುವಾಗಿ ನಕ್ಕ ಅವಳು.

“ಆಸ್ಪತ್ರೆಯಲ್ಲಿ ಸಿಗುತ್ತೆ. ಅಲ್ಲಿಗೆ ಹಣ ಕೊಟ್ಟರೆ ಸಾಕು. ಎರಡನೇ ಬಾಟಲ್ ಗೆ ಬೇಕಾದ್ರೆ ಹೊರಗಡೆಯಿಂದ ತಂದರಾಯಿತು ಹೇಳಿದಳು. ಜಾನಕಿ ಉಸಿರು ಬಂದವಳಂತೆ ಹಿಂದಕ್ಕೊರಗಿದಳು.

ಬ್ಲಡ್ ಬ್ಯಾಂಕಿನಿಂದ ರಕ್ತ ತಂದು ಡ್ರಿಪ್ ನೊಂದಿಗೆ ಹಾಕಿಸಿ ಜಾನಕಿ ಚೆನ್ನಾಗಿದ್ದಾಳೆ ಎಂದು ಭರವಸೆ ಬಂದು ಅವಳು ಮನೆಗೆ ಬರುವಷ್ಟರಲ್ಲಿ ರಾತ್ರಿ ಒಂಬತ್ತು ಘಂಟೆಯಾಗಿತ್ತು.
-*-

ಮನೆಯ ಮುಂದೆ ನಿಂತಿದ್ದ ನೀಲಿ ಬಣ್ಣದ ಕಾರನ್ನು ನೋಡುತ್ತಾ ಆಶ್ಚರ್ಯದಿಂದ ಗೇಟಿನ ಬಾಗಿಲನ್ನು ತೆರೆದಳು, ಅವಳ ಆಶ್ಚರ್ಯ ಇನ್ನೂ ಹೆಚ್ಚಾಗುವಂತೆ ಮನೆಯ ಎಲ್ಲಾ ದೀಪಗಳೂ ಉರಿಯುತ್ತಿದ್ದವು. ಹೊಸ ಜನಗಳ ಓಡಾಟ, ಮಕ್ಕಳ ಗಲಾಟೆ, ಕೇಕೆ, ದೊಡ್ಡವರ ನಗು

ಗೇಟಿನ ಸದ್ದು ಕೇಳುತ್ತಲೇ ಒಳಗಿನಿಂದ ಅಮ್ಮ ಧಾವಿಸಿ ಬಂದಳು.

“ಬೀಗರು ಬಂದಿದ್ದಾರೆ ನಿನಗಾಗಿ ಕಾದೆವು. ಫೋನು ಮಾಡಿಸಿದೆವು. ನೀನು ಬರಲಿಲ್ಲ. ಒಳ್ಳೆಯ ಘಳಿಗೆ ಮೀರಿ ಹೋಗುತ್ತೇಂತ ನಿಶ್ಚಯ ಶಾಸ್ತ್ರ ಕೂಡಾ ಮುಗಿಸಿಬಿಟ್ಟೆವು. ಹುಡುಗ ತುಂಬಾ ಲಕ್ಷಣವಾಗಿದ್ದಾನೆ. ನೀನು ಸ್ವಲ್ಪ ಚೆನ್ನಾಗಿ ಮಾತಾಡು, ನನ್ನ ಮಗಳು ಡಾಕ್ಟರೂಂತ ತುಂಬಾ ಹೊಗಳಿ ಕೊಂಡಿದ್ದಾರೆ.”

-ಒಂದೇ ಉಸಿರಿನಲ್ಲಿ ಅಮ್ಮ ಪಿಸುಗುಟ್ಟಿ ಅವಳ ಕೈ ಹಿಡಿದು ವರಾಂಡಕ್ಕೆ ಕರೆದೊಯ್ದರು. ಸೋಫಾದ ಮೇಲೆ ಕುಳಿತಿದ್ದ ಮಧ್ಯವಯಸ್ಸಿನ ಪಂಚೆಯುಟ್ಟ ಇಬ್ಬರು ಗಂಡಸರು ಕೆಳಗೆ ಕುಳಿತಿದ್ದ ನಾಲ್ಕೈದು ಜನ ಹೆಂಗಸರು ಆಡುತ್ತಿದ್ದ ಮಕ್ಕಳು. ಅವಳು ಏನನ್ನೂ ಕೇಳುವ ಮೊದಲೇ ಅಲ್ಲಿಯೇ ಕುಳಿತಿದ್ದ ಅಪ್ಪ,

“ಇವಳೇ ನನ್ನ ದೊಡ್ಡ ಮಗಳು” ಎಂದರು. ಎಲ್ಲರತ್ತ ತಿರುಗಿ ನೋಡಿ ಕೈ ಜೋಡಿಸಿದಳು.

“ದಿನಾ ಇಷ್ಟು ಹೊತ್ತೇನಮ್ಮಾ ನೀನು ಬರೋದು?….” ಹೆಂಗಸೊಬ್ಬರು ಕೇಳಿದರು.

“ಈ ದಿನ ಎಮರ್ಜನ್ಸಿ ಆಪರೇಷನ್ ಇತ್ತು. ಅದಕ್ಕೆ ಲೇಟಾಯಿತು.”-ಎಂದು ತಡವಾದುದಕ್ಕೆ ವಿವರಣೆ ಕೊಟ್ಟ ಅವಳು.

“ಮುಖ ತೊಳೆದು ಬರ್‍ತೀನಿ…” ಎಂದು ಅಲ್ಲಿಂದ ಹೊರಟು ಬಂದಳು. ನಿಧಾನವಾಗಿ ನಮ್ರಳಾಗಿ ಬಂದವರ ಎದುರಿಗೆ ಮಾತನಾಡಿ ಹೋದ ಮಗಳನ್ನು ಕಂಡು ಅಪ್ಪನಿಗೆ ಅಚ್ಚರಿ! ಅಮ್ಮನಿಗೆ ಸಮಾಧಾನ, ರೂಮಿಗೆ ಕಾಲಿಟ್ಟ ಅವಳು ಗರಬಡಿದವಳಂತೆ ನಿಂತುಬಿಟ್ಟಳು. ಅವಳ ಟೇಬಲ್ಲು ಬಟ್ಟೆಗಳು, ಪುಸ್ತಕ, ಪೆನ್ನುಗಳನ್ನು ಎಳೆದು ಹಾಕಿದಂತೆ ಅಸ್ತವ್ಯಸ್ತವಾಗಿದ್ದವು. ಅವಳ ಹಾಸಿಗೆಯ ಮೇಲೆ ಕುಳಿತು ಎರಡು ಪುಟ್ಟ ಹುಡುಗಿಯರು ಆಟವಾಡಿಕೊಳ್ಳುತಿದ್ದರು. ಔಷಧಿಗಳ ಟ್ಯೂಬುಗಳನ್ನು ಒಬ್ಬಳು ಕುಟ್ಟಿ ಕುಟ್ಟಿ ಎಸೆದರೆ ಇನ್ನೊಬ್ಬಳು ಕಿಲಕಿಲನೆ ನಗುತ್ತಿದ್ದಳು. ಅವಳಿಗೆ ಆ ದೃಶ್ಯ ಕಂಡು ಕೋಪ ಉಕ್ಕಿ ಬಂದಿತು ಹತ್ತಿರ ಹೋದಳು.

“ಆಂಟೀ” ಎನ್ನುತ್ತಾ ಎರಡೂ ಕೈಚಾಚಿ ಎತ್ತಿಕೋ ಎನ್ನುವಂತೆ ಬಾಗಿದ ಕೆಂಪು ಫ್ರಾಕಿನ ಒಡತಿಯನ್ನು ಮುಂದೆ ಬಾಗಿ ಹಿಡಿದುಕೊಂಡಳು ಅಕ್ಕರೆಯಿಂದ ಹೃದಯ ತುಂಬಿ ಬಂದಿತು. ಮಗುವನ್ನು ಹೃದಯಕ್ಕೆ ಒತ್ತಿ ಕೊಂಡಳು. ಅದರ ದುಂಡು ಕೆನ್ನೆಗಳಿಗೆ ಮುದ್ದಿಟ್ಟಳು.

“ನಿನ್ನ ಹೆಸರೇನು ಮರಿ?” ಮೃದುವಾಗಿ ಕೇಳಿದಳು.

“ಚುಮ್ಮಿ” ಎಂದಿತು ಮುದ್ದಾಗಿ.

“ನನ್ನ ಹತ್ತಿರಾನೇ ಇರ್‍ತೀಯಾ…?”

“ಪಪ್ಪಿ ಕೊಡು ಮತ್ತೆ”

“ಓಹ್! ಚಿನ್ನ ಮರಿ” ಎನ್ನುತ್ತಾ ಮುದ್ದಿನ ಮಳೆಗರೆದಳು. ಕಲ್ಲುಗೋಡೆ ಕರಗಿ ನೀರಾಗಿ ಪ್ರೀತಿಯಾಗಿ ಹರಿಯತೊಡಗಿತ್ತು.

“ಇಲ್ಲೆ ಆತ್ವಾಡ್ತಾ ಇರಿ. ಈಗ್ ಮುಖ ತೊಳೆದು ಬರ್‍ತೀನಿ…” ಎಂದು ಮಗುವನ್ನು ಕೆಳಗಿಳಿಸಿ ಟವಲನ್ನೆತ್ತಿಕೊಂಡು ಹಿತ್ತಲಿಗೆ ಓಡಿದಳು. ಅವಳ ನಿರಾಸಕ್ತಿ ದೇಹಕ್ಕೆ ಚೇತನದ ರಕ್ತ ತುಂಬಿ ಹರಿಯತೊಡಗಿತ್ತು. ನಡಿಗೆಗೆ ಚುರುಕು ಬಂದಿತ್ತು. ನೀಳ ಜಡೆ ತೂಗಾಡಿತು.

ಹಿತ್ತಲಿಗೆ ಬಂದ ಅವಳು ಗಾಬರಿಯಿಂದ ನಿಂತುಬಿಟ್ಟಳು. ನಲ್ಲಿಯ ಪಕ್ಕದ ಗಿಡದ ಮರೆಯಲ್ಲಿ ಗೋಚರಿಸಿದ ಎರಡು ಆಕೃತಿಗಳನ್ನು ಕಂಡು ಎದೆ ಝಲ್ಲೆಂದಿತು! ಗಂಟಲಾರಿ ಹೋಗಿತ್ತು. ಸಾವರಿಸಿಕೊಂಡು ಲೈಟುಹಾಕಿದಳು. ಬೆಳಗಿದ ದೀಪದಲ್ಲಿ ಕಣ್ಣರಳಿಸಿ ನೋಡಿದಳು,

ರಘು ಹೂಹಿಡಿದಂತೆ ರತ್ನಳ ಮುಖವನ್ನು ಹಿಡಿದು ತನ್ನ ಮುಖದ ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದ ಕಣ್ಣು ಮುಚ್ಚಿ ನವಿರಾಗಿ ಕಂಪಿಸುತ್ತಿದ್ದ ರತ್ನಳನು ಪ್ರೇಮ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದ ರಘು.

ಅವಳ ಹೃದಯ ಮೀಟಿತು.

ಬೆಳಕು ಬಿದ್ದ ತಕ್ಷಣ ಇಬ್ಬರೂ ಬೆಚ್ಚಿ ದೂರಸರಿದರು. ಅಕ್ಕನನ್ನು ಕಂದು ನಾಚಿದ ರತ್ನ ಏನೂ ತೋರದಂತಾಗಿ ರಘುವಿನ ಕೈಗಳಿಂದಲೇ ಮುಖ ಮುಚ್ಚಿಕೊಂಡು ಬಿಟ್ಟಳು. ರಘು ಗಲಿಬಿಲಿಗೊಂಡಿದ್ದ…..

ಅವಳ ಹೃದಯ ವೀಣೆ ಮೃದುವಾಗಿ ಮಧುರವಾಗಿ ಮೆಲ್ಲಮೆಲ್ಲನೆ ಝೇಂಕರಿಸಿತು. ಒಮ್ಮೆ ಅವರು ನೋಡಿ ಮಧುರವಾಗಿ ನಕ್ಕ ಅವಳು ಅಲ್ಲಿಂದ ಮರೆಯಾದಳು.

ಮಧುರವಾಗಿ ತನ್ಮಯಳಾಗುವಂತೆ ಹೃದಯ ವೀಣೆಯನ್ನು ನುಡಿಸಿದವರಾರು? ಆ ಶಕ್ತಿ ಎಲ್ಲಿ? ಅಸ್ಪಷ್ಟ ಅವ್ಯಕ್ತ.

ಅವಳ ಹೃದಯ ಮಧುರ ನೋವಿನಿಂದ ಕಂಪಿಸಿತು.

“ಅಮ್ಮನಿಗೆ ಹೇಳಬೇಕು. ನನಗೂ ಒಬ್ಬ ವೈಣಿಕ ಬೇಕು. ಅಮ್ಮನಿಗೆ ಹೇಳಬೇಕು” ತನ್ನಲ್ಲಿ ಪಿಸುಗುಟ್ಟಿಕೊಂಡಳು. ನಿಧಾನವಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣ
Next post ಚೆಲುವಿನ ನಾಡು ಕರುನಾಡು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…