ಶಬರಿ – ೧೨

ಶಬರಿ – ೧೨

ನೆನಪುಗಳು ನುಂಗಿ ನೊಣೆಯುತ್ತಿರುವಾಗ ಬೆಚ್ಚಿ ಎಚ್ಚೆತ್ತಳು ಶಬರಿ. ಹುಚ್ಚೀರ ಕಣ್ಣಲ್ಲಿ ಎಣ್ಣೆ ಹೊಯ್ದುಕೊಂಡಂತೆ ನೋಡುತ್ತ ಕೂತಿದ್ದಾನೆ.

ಅಂದು-ಒಂದಾದ ರಾತ್ರಿಯ ಕತ್ತಲು; ಒಳಗೆಲ್ಲ ಬೆತ್ತಲು.
ಇಂದು- ಅದೇರೀತಿಯ ಕತ್ತಲು; ಬಿರುಗಾಳಿ ಸುತ್ತಲು
ಆದರೆ ಓಂಟೆ ಜೀವದ ಬೆವರು.
ಮಣ್ಣಲ್ಲಿ ಸೇರಿಹೋದ ತಿಮ್ಮರಾಯಿ.
ಸಾವು ಸಹಜವೆಂಬಂತೆ ಸಮಾಧಾನ ಸ್ಥಿತಿಗೆ ಬಂದ ಹಟ್ಟಿಜನ.
ಕಳವಳದ ಕಾರ್ಗತ್ತಲು ಕಾಡಿಸುತ್ತಿದೆ ಈ ಮೂವರಿಗೆ.
ಹದ್ದಾಗಿ ನಿದ್ದೆ ಬಡಿದಿದೆ ಉಳಿದವರಿಗೆ.
ಕಳವಳ ಕಣ್ಣು ಮುಚ್ಚಿದೆ.
ಇಂಥದೇ ಆ ರಾತ್ರಿಯಲ್ಲಿ ಎಂಥ ಸುಖವಿತ್ತು; ಎಂಥ ಕನಸಿತ್ತು.
ಆದರೆ ಇಂದು-ಮದುವೆಯಾಗದೆ ಮಗುವಿನ ಜೀವ ಹೊಟ್ಟೆಯ ಒಳಗೆ;
ಸೂರ್ಯನ ಬರುವಿಗಾಗಿ ಕಾದ ಬಯಕೆಯ ಬುತ್ತಿ ಹಟ್ಟಿಯ ಹೊರಗೆ.
ಆ ಘಟನೆಗಳು ಹೇಗೆ ಜರುಗಿದವು! ಗೌರಿ-ನವಾಬ, ತಾನು-ಸೂರ್ಯ! ಈ ಸಂಬಂಧವೂ ಒಂದು ಬದಲಾವಣೆ.
ಆದರೆ… ಆದರೆ… ಬದಲಾವಣೆಯ ಬೆನ್ನ ಹಿಂದೆ ಏಳೆಡೆಯ ಸರ್ಪ!
ಹಿಂದೆ ಹಿಂದೆ ಬಂದ ಸೀಳು ನಾಲಗೆಯ ನೆರಳುಗಳು.
ಬಿಟ್ಟರೂ ಬಿಡದೆ ಕಾಡಿಸುವ ನೆನಪುಗಳು…
* * *

ಒ‍ಓಂದಾದ ಸುಖ, ಬಿರುಗಾಳಿಯ ತರಗಲೆಯಾಗಿ ನೆಲ ಮುಗಿಲ ನಡುವೆ ಹಾರಾಡಿತ್ತು. ನೆಲೆ ಕಂಡುಕೊಳ್ಳುವ ನಿರ್ಧಾರದಲ್ಲರುವಾಗಲೇ ಗೌರಿ ಮತ್ತು ನವಾಬರ ಪ್ರಸಂಗ ಎದುರಾಗಿತ್ತು.

ಗೌರಿ ಸಮಯ ಕಾದು ಶಬರಿಯ ಬಳಿ ನವಾಬ ಮತ್ತು ತನ್ನ ಪ್ರೇಮದ ವಿಷಯವನ್ನು ಪ್ರಸ್ಥಾಪಿಸಿದಳು.

“ನಂಗೆ ಅವ್ರ್‌ನ್ ಕಂಡ್ರೆ ಇಷ್ಟ. ಅವ್ರ್‌ಗೂ ಆಟೇಯ. ಇಬ್ರೂ ಮದ್ವೆ ಆಗಾದು ಅಂದ್ಕಂಡಿದ್ದೀವಿ. ಅಪ್ಪಯ್ಯ ಏನಾರ ಅಡ್ಡ ಬಂದ್ರ ‘ಕೂಡಿಕೆ’ ಮಾಡ್ಕಂಡ್ ಬಿಡ್ತೀವಿ” ಎಂದಳು ಗೌರಿ.

ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇಷ್ಟಪಟ್ಟವರ ಜೊತೆ ಸಂಸಾರ ಮಾಡುವ ‘ಕೂಡಿಕೆ’ ಪದ್ಧತಿ ಇದ್ದಂತೆ ಇವರಲ್ಲೂ ಇತ್ತು. ಎಷ್ಟೋ ಸಾರಿ ವಿಧವೆಯರೂ ‘ಕೂಡಿಕೆ’ ಮಾಡಿಕೊಳ್ಳುತ್ತಿದ್ದರು. ಆದರೆ ಕೂಡಿಕೆಗೂ ಹಿರಿಯರ ಅನುಮತಿ ಕೇಳಬೇಕಾಗಿತ್ತು. ಒಂದು ವೇಳೆ ಅವರು ಒಪ್ಪದಿದ್ದರೂ ಕೂಡಿಕೆ ನಿಷಿದ್ಧವಾಗಿರಲಿಲ್ಲ. ಇದೆಲ್ಲ ಶಬರಿಗೂ ಗೊತ್ತು; ಗೌರಿಗೂ ಗೊತ್ತು.

ಗೌರಿ ಮತ್ತು ನವಾಬನ ಸಂಬಂಧ ಗಾಢವಾಗುತ್ತಿರುವ ಸೂಚನೆ ಶಬರಿ ಮತ್ತು ಸೂರ್ಯನಿಗೆ ತಿಳಿದಿತ್ತು. ಈಗ ಗೌರಿ ತಾನಾಗಿಯೇ ಪ್ರಸ್ತಾಪಿಸಿದ್ದರಿಂದ ತೀವ್ರ ಗಮನ ಕೂಡಲು ನಿರ್ಧರಿಸಿದರು. ಸೂರ್ಯನೇ ಸೂಕ್ತ ಕಾಲದಲ್ಲಿ ಪೂಜಾರಪ್ಪನ ಜೊತೆ ಮಾತನಾಡಬೇಕೆಂದು ನಿರ್ಧರಿಸಲಾಯಿತು.

ಆದರೆ ನಡೆದ ಘಟನೆಯೊಂದರಿಂದ ಸೂಕ್ತ ಸಮಯಕ್ಕೆ ಕಾಯಬೇಕಾದ ಅನಿವಾರ್ಯತೆ ಉಂಟಾಗಲಿಲ್ಲ.

ಅಂದು ರಾತ್ರಿ ಗಡಂಗಿನಿಂದ ಪೂಜಾರಪ್ಪ ಬಂದ. ಕಂಠಪೂರ್ತಿ ಕುಡಿದಿದ್ದ. ತನ್ನ ಗುಡಿಸಿಲನ ಬಳಿ ಬಂದು ಒಳಗೆ ಬೆಳಕು ಇರುವುದನ್ನು ಕಂಡು “ಇನ್ನೂ ಬಿದ್ಕಂಡಿಲ್ದೇನೆ” ಎಂದು ಗೊಣಗುತ್ತ ಬಾಗಿಲು ಬಡಿದ. ತಕ್ಷಣ ಬಾಗಿಲು ತೆಗೆಯಲಿಲ್ಲ. ಸಿಟ್ಟು ನೆತ್ತಿಗೇರಿತು. ದಬದಬನೆ ಬಡಿದ. “ಏನ್‍ ದಬ್ಬಾಕ್ಕಂಡಿದ್ದೀಯೇನ ಒಳ್ಗೆ. ಏಯ್ ಗೌರಿ. ನಿನಗೇನ್‍ ಗಂಡಾನೊ ಮಿಂಡಾನೊ ಈಟೋತ್‍ ಬಾಗ್ಲು ಬಡ್ಕಮಾಕೆ. ತೆಗಿ ಮದ್ಲು” ಎಂದು ಕಿರುಚಿದ.

ವಿಧಿಯಿಲ್ಲವೆಂಬಂತೆ ಬಾಗಿಲು ತೆಗೆದುಕೊಂಡಿತು!
ನೋಡಿದರೆ-ಒಳಗೆ ಗೌರಿಯೊಬ್ಬಳೇ ಇಲ್ಲ. ಜೊತೆಗೆ ನವಾಬ!
ಪೂಜಾರಪ್ಪನ ಮೈ ಕೈ ರೋಮಗಳೆಲ್ಲ ನಿಗುರಿಕೊಂಡವು.
“ನಿಂಗೇನ್ಲ ಕೆಲ್ಸ ಇಲ್ಲಿ? ಏನ್‍ ಮಾಡ್ತಿದ್ರಿ ಇಬ್ರೂನು” ಎಂದು ಒಳನುಗ್ಗಿದ.

ನವಾಬ “ಸಮಾಧಾನ ಪೂಜಾರಪ್ಪ, ನಾನ್‍ ಯಾವ್‍ ಕೆಟ್‍ ಕೆಲ್ಸಾನೂ ಮಾಡಿಲ್ಲ. ಸ್ವಲ್ಪ ನನ್‍ ಮಾತ್‍ ಕೇಳು” ಎಂದು ಎಷ್ಟು ಹೇಳಿದರೂ ಆತ ಕೇಳುವ ಸ್ಥಿತಿಯಲ್ಲರಲಿಲ್ಲ.

“ಸರ್‍ವೂತ್ನಾಗ್‍ ಒಳುಗ್‍ ಸೇರ್‍ಕಂಡು ನಂಗೇ ಸಮಾಧಾನ ಯೇಳ್ತಿಯೇನ್ಲ? ಇಲ್ಲೇನ್‍ ಎಲ್ರೂದು ಜಾತಿ ಕೆಡ್ಸಾಕ್ ಬಂದಿದ್ದೀಯೇನ್ಲ” ಎಂದು ಗದರಿಸಿದ. ಆಗ ಗೌರಿ “ಅಂಗೆಲ್ಲ ಅನ್‍ಬ್ಯಾಡ. ವಿಸ್ಯ ಏನು ಅಂಬ್ತ ನಾನ್‍ ಯೇಳ್ತೀನಿ” ಎಂದಲು.

ಪೂಜಾರಪ್ಪನಿಗೆ ಮತ್ತಷ್ಟು ರೇಗಿತು.

“ನೀನೇನೇ ನನ್ಗ್ ಯೇಳಾದು ವಿಸ್ಯಾನ. ಒಳಿಗ್‍ ಸೇರ್‍ಕಂಡ್‍ ಏನ್‍ ಮಾಡ್ತಿದ್ರಿ ಅಂಬ್ತ ಉಟ್ಸಿದಪ್ಪನ್‍ ಮುಂದೆ ಎಲ್ಲಾ ಬಿಚ್ಚಿಡ್ತೀಯೇನೆ ಬೋಸುಡಿ” ಎಂದು ಗೌರಿಯ ಮುಂದಲೆಯ ಕೂದಲು ಹಿಡಿದು ದರದರನೆ ಹೂರಗೆ ಎಳತಂದ ಪೂಜಾರಪ್ಪ “ಒಳ್ಗೇನಾರ ಕಾಲಿಟ್ರೆ ಮಾರಮ್ಮಂಗ್‍ ಬಲಿ ಕೊಟ್‍ಬಿಡ್ತೀನಿ” ಎಂದು ನೂಕಿದ.

ಗೌರಿ ಕಿರಚಿಕೊಂಡಳು. “ಕುಡ್ದ್ ಬಂದ್‍ ವೂಡೀತಾ ಅವ್ನೆ…. ಶಬರಿ…. ಶಬರಿ….”

ಈ ವೇಳಗೆ ಗದ್ದಲದಿಂದ ಎದ್ದಿದ್ದವರು ಹೂರಬರತೂಡಗಿದ್ದರು. ಶಬರಿ, ತಿಮ್ಮರಾಯಿ, ಸೂರ್ಯ-ಎಲ್ಲರೂ ಬಂದರು. ಇವರಿಗೆ ಪರಿಸ್ಥಿತಿ ಅರ್ಥವಾಯಿತು. ಆಗ ಪೂಜಾರಪ್ಪ ಅಬ್ಬರಿಸುತ್ತಿದ್ದ: “ಕುಡ್ದೋನು ಅಂದ್ರೆ ಕಡ್ಬಾಕ್‍ ಬಿಡ್ತೀನಿ. ಈ ಬೋಳಿಮಗನ್ ಮಗ್ಗಲಾಗ ಬಿದ್ಕೊಂಡು ಇವಾಗ್‍ ನಂಗೇ ಎದ್ರಾಡ್ತೀಯೇನೆ”- ಮತ್ತೆ ಗೌರಿಯನ್ನು ಹೊಡೆಯಲು ಹೋದ.

ಸೂರ್ಯ ಮಾತನಾಡಲಿಲ್ಲ. ಶಬರಿಯ ಕಡೆ ನೋಡಿದ. ಶಬರಿ ಮುಂದೆ ಬಂದಳು. ಅಡ್ಡ ನಿಂತಳು.

“ಕುಡುದ್ ಬಂದು ಕಂಡಾಪಟ್ಟೆ ಕಿರಚಾಡ್‍ ಬ್ಯಾಡ. ಏನಿದ್ರೂ ವೊತ್ತಾರೆ ಮಾತಾಡಾನ” ಎಂದು ಗಟ್ಟಿಯಾಗಿ ಹೇಳಿದಳು.

“ನೀನೂಬ್ಳು ಆಸ್‍ಗೆಟ್ಟೋಳು”- ಪೂಜಾರಪ್ಪ ಶಬರಿಯನ್ನೇ ಬಯ್ಯಲು ಶುರುಮಾಡಿದ- “ವೂತ್ತಾರೆ ಮಾತಾಡ್ಬೇಕಂತೆ ವೊತ್ತಾರೆ. ಮಾಡಾ ಕೆಲ್ಸ ಎಲ್ಲಾ ವೊತ್‍ ಮುಳುಗಿದ್‍ ಮ್ಯಾಲ್‍ ಮಾಡಿ, ಮಾತಾಡಾಕ್‍ ಮಾತ್ರ ವೊತ್ತಾರಿಕೆ ಅಂದ್ರೆ ಅದ್ಯಾವ್ ಸೀಮೆ ನ್ಯಾಯ ಅಂಬ್ತೀನಿ. ಈ ನನ್‍ ಮಗ್ಳು ಬತಗೆಟ್ಟಾಳ್‍ ತರ ಏನ್ ಮಾಡಿದ್ಲು ಅದನ್‍ ಕೇಳು ಮದ್ಲು. ಇವ್ಳನಾ… ಇವ್ಳನಾ…. ಪಚಪಚ ತುಳ್ದು ವೂತಾಕ್‍ ಬಿಡ್ತೀನಿ” ಎಂದು ಶಬರಿಯನ್ನು ನೂಕಿ, ಗೌರಿಯನ್ನು ಬಡಿಯತೂಡಗಿದ.

ಆಗ ಸೂರ್ಯ ನುಗ್ಗಿಬಂದು ಪೂಜಾರಪ್ಪನನ್ನು ಹಿಡಿದುಕೂಂಡ.

“ಏನ್‍ ಮಾಡ್ತಿದ್ದೀಯ ಪೂಜಾರಪ್ಪ ಹೆಣ್‍ಮಕ್ಕಳ ಮೇಲೆ ಕೈಮಾಡಾಕ್ ನಾಚ್ಗೆ ಆಗಲ್ವ ನಿಂಗೆ” ಎಂದು ಗದರಿದ.

“ಇವ್ರ್‌ಗೆಲ್ಲ ನಾಚ್ಗೆ ಯಾಕಾಗ್‍ತೈತೆ. ಕುಡ್ದು ಬತ್ತಾರೆ. ಯೆಂಗುಸ್ತ್ರು ಸಿಕ್ಕಿದ್ರು ಅಂಬ್ತ ಬಾರುಸ್ತಾರೆ. ಇನ್‍ಮ್ಯಾಕ್‍ ಯಾರಾನಾ ಕುಡ್ದು ಅಟ್ಟೀನಾಗ್ ಕಾಲಿಟ್ರೆ ನಾವ್ ಯಂಗುಸ್ರ್ ಯಾರು ಸುಮ್ಕಿರಾಕಿಲ್ಲ” ಎಂದು ಶಬರಿ ದೊಡ್ಡ ದನಿಯಲ್ಲಿ ರೇಗಿದಳು. ಆಗ ಒಬ್ಬ ಹೆಂಗಸು “ಅಂಗೇ ಮಾಡ್‍ಬೇಕು. ಕುಡ್ದು ಕುಡ್ದೂ ಕಿಲುಬ್‍ಕಾಸೂ ಉಳ್ಸಾಕಿಲ್ಲ; ನಮ್ಮನ್‍ ಬಡ್ಯಾದು ಬಿಡಾಕಿಲ್ಲ. ಇನ್‍ಮ್ಯಾಕ್‍ ನಾವಿಂಗೇ ಸುಮ್ಕಿರಾದ್‍ ಸರ್‍ಯಾಗಾಕಿಲ್ಲ” ಎಂದು ಹೇಳಿದಳು. ವಾತಾವರಣವೇ ಬದಲಾಗ ತೊಡಗಿತು.

ಗಂರಿ- ನವಾಬನ ವಿಷಯ ಕುಡಿತಕ್ಕೆ ವರ್ಗಾಯಿಸಲ್ಪಟ್ಟಿತು. ಒಬ್ಬೊಬ್ಬ ಹೆಂಗಸೂ ಒಂದೊಂದು ಮಾತಾಡಿದರು. ಕಡೆಗೆ ಶಬರಿ ಹೇಳಿದಳು. “ಎಲ್ಲಾ ಯೆಂಗುಸ್ರು ಹೇಳಿದ್‍ ಕೇಳಿದ್ರಲ್ಲ. ಇನ್‍ಮಾಕ್‍ ನೀವ್ಯಾರಾನಾ ಕುಡ್ಕಂಡ್ ಬರ್ರಿ, ಯೆಂಗುಸ್ರೆಲ್ಲ ಸೇರಿ ಪೂಜೆ ಮಾಡ್ತೀವಿ.”

ಮಾತಿಲ್ಲ. ಕತೆಯಿಲ್ಲ- ಎಲ್ಲಾ ಹುಚ್ಚೀರನ ಮನಸ್ಸು.

ಪೂಜಾರಪ್ಪ ಬುಸುಗುಡುತ್ತಾ ಕೂತ. ತಿಮ್ಮರಾಯಿ “ಇವಾಗ ವೋಗ್ ಮಲೀಕಳ್ರಿ, ವೊತ್ತಾರೆ ಮಾತಾಡಾನ” ಎಂದ. ಪೂಜಾರಪ್ಪನಿಗೆ ಮತ್ತೆ ಇದು ಸಹ್ಯವಾಗಲಿಲ್ಲ. “ಅದಂಗಾಯ್ತದೆ. ಈ ಜಾತಿ ಕೆಡ್ಸಾಕ್ ಬಂದಿರಾನ್ನ ಮದ್ಲು ಒದ್ ವೊರೀಕಾಕ್ರಿ. ಆಮ್ಯಾಕ್ ಉಳುದ್ ವಿಸ್ಯ” ಎಂದು ಹೆಡೆಯೆತ್ತಿದ.

“ನವಾಬಣ್ಣ ಇಲ್ಲಿಗ್ ಜಾತಿ ಕೆಡ್ಸಾಕ್ ಬಂದಿಲ್ಲ ಅಂಬ್ತ ಏಟ್‍ಸಾರಿಯೇಳಾದು. ಈವಾಗ ಗೌರಿವಿಸ್ಯ ಮಾತಾಡಾನ. ಗೌರೀಗೆ ನವಾಬ್‍ನ ಮದ್ವೆ ಆಗಾಕೆ ಆಸೆ ಐತೆ. ನವಾಬಣ್ಣಂಗೂ ಇಷ್ಟ ಐತೆ. ನಾವೆಲ್ಲ ಸೇರ್‍ಕಂಡು ಅವ್ರಿಬ್ರಿಗೂ ಮದ್ವೆ ಮಾಡ್ಬೇಕು”- ಎಂದು ಶಬರಿ ಆವೇಶದಿಂದ ಹೇಳಿದಾಗ ಎಲ್ಲರೂ ಸ್ತಬ್ಬರಾಗಿ ನಿಂತಿದ್ದರು- ಪೂಜಾರಪ್ಪನನ್ನು ಬಿಟ್ಟು. ಪೂಜಾರಪ್ಪ ಭಗ್ಗೆಂದು ಉರಿಯತೊಡಗಿದ್ದ.

“ಇದುನ್ನೇ ಇದುನ್ನೇ ನಾನ್‍ ಜಾತಿ ಕೆಡ್ಸಾದು ಅಂದಿದ್ದು. ಆ ಜೋಯಿಸ್ರು ಅವತ್ತೇ ಅಂದಿದ್ರು. ಈ ಬಡ್ಡೆತ್ತು ನನ್‍ಮನೇಗೇ ಒಕ್ರುಸ್ತಾನೆ ಅಂಬ್ತ ನಂಗೊತ್ತಿದ್ದಿಲ್ಲ. ನನ್ ಮಗ್ಳು ನೆಗೆದ್ ಬಿದ್ದೋದ್ರೂ ಸರೀನೆ, ನಾನ್‍ ಇದ್ಕೆಲ್ಲ ಒಪ್ಪಾಕಿಲ್ಲ”- ಪೂಜಾರಪ್ಪನದು ಗಿಡುಗ ನುಡಿ,

ಆದರೆ ಗುಬ್ಬಚ್ಚಿ, ಗಿಡುಗರ ಗುಮ್ಮಕ್ಕೆ ಹದರಲಿಲ್ಲ.
ಗೌರಿ ನೇರವಾಗಿ ಹೇಳಿದಳು- “ನವಾಬು ಜಾತಿ ಕೆಡ್ಸಾಕ್‍ ಬಂದಿಲ್ಲ. ಮದ್ದೆ ಆಗ್ತೀಯ ಅಂಬ್ತ ನಾನೇ ಕೇಳಿದ್ದು.”

“ವೂಟೇಗೇನ್‍ ತಿಂತಿಯೇ ಲೌಡಿ. ನಿಂದೇನ್‍ ನಾಲ್ಗೇನೊ ಮೆಟ್ಟಿನ್ ಅಟೇನೊ”- ಗಿಡುಗನ ಗುಡುಗು.

ಆಗ ನವಾಬ ಸುಮ್ಮನಿರಲಿಲ್ಲ. “ಯಾರೋ ಹೇಳಿದ್ರು ಅಂತ ಸುಳ್ಳು ಸುದ್ದಿ ನಂಬ್‍ಬೇಡಿ ಪೂಜಾರಪ್ಪ. ನಿಮ್ಮ ಮಗಳನ್ನ ನಾನು ಚನ್ನಾಗ್ ನೋಡ್ಕೋತೀನಿ” ಎಂದು ವಿನಯದಿಂದಲೇ ಹೇಳಿದ. ಸೂರ್ಯನೂ ತನ್ನ ಮಾತು ಸೇರಿಸಿದ- “ಪೂಜಾರಪ್ಪ, ನಾಳೆ ಸಮಾಧಾನ್ವಾಗಿ ಕೂತು ಮಾತಾಡೋಣ. ಈಗ್ ಸುಮ್ನೆ ರಂಪ ಮಾಡೋದ್‍ ಬೇಡ.” “ತಿರ್‍ಗಾ ಅದನ್ನೇ ಬೊಗುಳ್ತೀರಲ್ಲ; ನಾನು ಕುಡ್ದು ಇಂಗೆಲ್ಲ ಮಾತಾಡ್ತಿವ್ನಿ ಅಂಬ್ತಾನಾ ನೀವಿಂಗಂಬಾದು. ನಾನ್ ಕುಡೀದೇ ಇದ್ರೂನು ಇಂಗೇ ಕಣಯ್ಯ ಮಾತಾಡಾದು. ಅದೇನಿದ್ರೂ ಇವಾಗ್ಲೇ ಆಗ್ಲಿ. ಎರಡ್ರಾಗೊಂದು”- ಪೂಜಾರಪ್ಪ ಹಿಡಿದ ಪಟ್ಟು ಬಿಡಲಿಲ್ಲ.

“ಅಂಗಾರ್‍ ನಾನೇ ಯೇಳ್ತೀನಿ” ಎಂದು ಶಬರಿ ಸಿದ್ಧವಾದಳು. ತಿಮ್ಮರಾಯಿ “ನೀನ್ಯಾಕಮ್ಮ ಎಲ್ಲಾ ತಲೆಮ್ಯಾಲಾಕ್ಕಂಬ್ತೀಯ. ಅವ್ರವ್ರ್‍ ಸಂಸಾರದ್‍ ವಿಸ್ಯ ಸುಮ್ಕಿರು” ಎಂದು ಎಲ್ಲೋ ನೋಡುತ್ತಾ ಹೇಳಿದ.

“ಈ ಅಟ್ಟೀರೆಲ್ಲ ಒಂದೇ ಸಂಸಾರ ಕಣಪ್ಪ. ಅದ್ಕೇ ಎಲ್ರೆದ್ರಿಗೇ ಏನಾರ ಒಂದಾಗ್ಬೇಕು. ಈಗೇನಾರ ಮದ್ವೇಗ್ ಒಪ್‍ದಿದ್ರೆ ಗೌರಿ ನವಾಬನ್ನ ಕೂಡಿಕ ಮಾಡ್ಕಂಬ್ತಾಳೆ. ಅವಾಗೇನ್‍ ಮಾಡ್ತೀರ? ಎಂದು ಶಬರಿ ಕೇಳಿದಳು.

ಪೂಜಾರಪ್ಪ ಒಲೆಗೆ ಬಿದ್ದ ಹುಂಜನಂತಾದ.

“ಕೂಡಿಕೆ ಮಾಡ್ಕಮಾಕೆ ಇವ್ನೇನ್‍ ಊರಿಗೊಡ್ಯಾನ? ನೂರ್‍ ಎಕ್ರೆ ಯಜಮಾನಾನ? ಪಿಠಾರಿ ತುಂಬ್ಕಂಡಿರಾ ಸಾವ್ಕಾರಾನ?”- ಕೆಂಡದಲ್ಲಿ ಸುಟ್ಟು ಸಿಟ್ಟಾದ ಮಾತುಗಳು. ಪೂಜಾರಪ್ಪನ ಪ್ರಶ್ನೆಗಳು.

ನಿಜ; ಹಿಂದೆಲ್ಲ ಕೂಡಿಕೆಯ ಸಂದರ್ಭ ಒದಗಿದ್ದು-ಶ್ರೀಮಂತರು ಬುಡಕಟ್ಟಿನ ಸುಂದರ ಹುಡುಗಿ/ಹೆಂಗಸು ಬೇಕೆಂದಾಗ. ಆಗ ಮರುಮಾತಿಲ್ಲದೆ ಕೂಡಿಕೆಯ ಶಾಸ್ತ್ರ. ಹಟ್ಟಿ ಹಿರಿಯರ ಗಟ್ಟಿಮೌನದ ಒಪ್ಪಿಗೆ.

ಪೂಜಾರಪ್ಪನ ಮಂತ್ರವೇ ಮಾತು.

ಈಗ ಪೂಜಾರಪ್ಪನ ಅಂಗಳಕ್ಕೇ ಬಂದಿದೆ ಕೂಡಿಕೆಯ ಕುಣಿಕೆ. ಆತ ತಬ್ಬಿಬ್ಬಾದ. ತಿಮ್ಮರಾಯಿಗೆ ಸುಮ್ಮನಿರಲಾಗಲಿಲ್ಲ. “ಅಗೇವ್‍ನಾಗೆ ಅಳೇದೆಲ್ಲ ಬಿದ್ದೋಗೈತೆ. ಅದನ್ ಯಾಕವ್ವ ಇವಾಗ ಸುಮ್ ಸುಮ್ಕೆ ಅಗ್ದೂ ಅಗ್ದೂ ತಗೀತೀಯ? ಇವಾಗ್ಲೆ ಎಲ್ಲಾ ಆಕೈರಾಗ್ಬೇಕು ಅಂಬ್ತ ಅಟ ಮಾಡಾದೂ ಸರ್‍ಯಾಗಾಕಿಲ್ಲ. ನಾಳೀಕೆಲ್ಲ ಕುಂತ್ಕಂಡು ಮಾತಾಡವ. ಇವಾಗೆಲ್ರು ಸುಮ್ಕೆ ವೋಗ್ರಿ” ಎಂದು ಹಿರಿತನದ ಕಂಠದಲ್ಲಿ ಹೇಳಿದಾಗ ಸಣ್ಣೀರ ಮತ್ತಿತರರು “ಅದೇ ಸರಿ ಕಣಜ್ಜ” ಎಂದರು. ಹುಚ್ಚೀರ ತಲೆಯಾಡಿಸಿದ. ಸೂರ್ಯ “ಏನೇ ತೀರ್ಮಾನ ಆದ್ರೂ ಎಲ್ರೂ ಒಟ್ಟಿಗೇ ತಗೋಬೇಕು. ಅದು ಹಟ್ಟಿ ತೀರ್ಮಾನ ಆಗ್ಬೇಕು” ಎಂದ. ಪೂಜಾರಪ್ಪ “ನೀವೆಲ್ಲ ಏನ್‍ ಮಾಡ್ತೀರ ಅಂಬ್ತ ನಂಗೊತ್ತು. ಹಾಳಾಗೋಗ್ತೀನಿ ಅಂಬ್ತ ಹಟ ಹಿಡುದ್ರೆ ಹಾಳ್‍ಬಾವಿ ತೋರ್‍ಸಿ ತೆಪ್ಪಗಾಗ್ತೀನಿ. ಆಟೇಯ” ಎಂದು ಸಿಡಿಮಿಡಿಯಿಂದ ಒಳಗೆ ಹೋಗಿ ಈಚಲು ಚಾಪೆ ತಂದು ಹಾಸಿ ಅದರ ಮೇಲೆ ಮಲಗಲು ಸಿದ್ಧನಾದ.

ಎಲ್ಲರೂ ಚದುರಿದರು.
ಗೌರಿ ಕಣ್ಣೀರು ಒರೆಸಿಕೊಳ್ಳುತ್ತ ಒಳಗೆ ಹೋದಳು.
* * *

ಬೆಳಗು ಬಿಗುವಾಗಿತ್ತು.

ಕೆಲವರು ಕೆಲಸಗಳಿಗೆ ಹೋದರು. ಕೆಲವರು ಹೋಗಲಿಲ್ಲ. ಗೌರಿ ಹೊರಗೆ ಬಾರದ್ದನ್ನು ನೋಡಿ ಶಬರಿಯೂ ಕೆಲಸಕ್ಕೆ ಹೋಗಲಿಲ್ಲ. ಇತರೆ ಹಂಗಸರು ಹೊರಟು ನಿಂತಿದ್ದಾಗ ಶಬರಿ “ನಾನಿವತ್‍ ಬರಾಕಿಲ್ಲ. ಅಂಗೇ ಒಸಿ ಯೇಳ್‍ಬಿಡ್ರಕ್ಕ” ಎಂದಳು. “ಯಾಕಕ್ಕ? ಎಂದು ಕೇಳಿದಳು ಒಬ್ಬಳು. ಇನ್ನೊಬ್ಬಾಕೆ “ಪಾಪ ನಮ್ ಗೌರೀಗೆ ಏಟಂದ್‍ ಸಂಕಟ ಆಗಿರ್‍ತೈತೊ ಏನೋ. ಆಮ್ಯಾಕೇನಾರ ಮಾಡ್ಕಂಡ್ ಬಿಟ್ರೆ?” ಎಂದಳು. “ಹ್ಞೂಮತ್ತೆ. ಅರೇದುಡ್ಗಿ, ಏನಾರ ಆಗ್‍ಬಿಟ್ಟಾಳು. ನೀನಿಲ್ಲೆ ಇರು. ಬೇಕಾರ್‍ ನಮ್‍ ಕೂಲಿನಾಗೇ ನಿಂಗೂ ಒಸಿ ಕೊಡ್ತೀನಿ” ಎಂದು ಮತ್ತೊಬ್ಬಾಕೆ ಹೇಳಿದಳು. ಶಬರಿಗೆ ಕಣ್ತುಂಬಿ ಬಂತು. “ಏನಾರ ಆಗ್ಲಿ, ನಾವು ಗೌರೀನ್‍ ಬಿಟ್‍ಕೂಡಬಾರ್‍ದು ಕಣ್ರವ್. ಇದ್ದೆಬುದ್ದಿ ಇರ್‍ಆರ್‍ನ ಕಟ್ಕಂಡು ಅವ್ಳ್ ಚಂದಾಗಿರ್‍ಲಿ. ಅಲ್ವಾ” ಎಂದು ಶಬರಿ ಹೇಳಿದಾಗ ಹಂಗಸರಲ್ಲಿ ಹಿರಿಯಾಕೆ ಅತ್ತಿತ್ತ ನೋಡಿ “ನಮ್ ಯೆಣ್ ಮಗ್ಳು ಸುಕ ಕಂಡ್ರೆ ನಮ್ಗೇನ್ ವೊಟ್ಟೆಕಿಚ್ಚಾ? ನೀನ್‍ ಒಸಿ ನಿಗಾ ಇಟ್ಕಂಡು ಇಲ್ಲೇ ಇರು. ಆಮ್ಯಾಕ್ ಸೂರ್ಯಪ್ಪನ್‍ ಮಕ ನೋಡ್ಕಂಡ್ ಮರ್‍ತ್ ಬಿಟ್ಟೀಯ!” ಎಂದು ತುಂಟ ನಗೆ ಚೆಲ್ಲಿ “ಬರ್ ಬರ್ರವ್ವ ವೊತ್ತಾಯ್ತದೆ” ಎಂದು ಉಳಿದವರನ್ನು ಕರೆದುಕೂಂಡು ಹೊರಟಳು. ಎಲ್ಲರ ಮುಖದಲ್ಲಿ ತುಂಟ ನಗೆ ಅಲೆಯಾಗಿ ಹರಿಯುತ್ತಿತ್ತು.

ಶಬರಿಗೆ ಚುರುಕು ಮುಟ್ಟಿಸಿದ ಸುಖ; ಆಕಾರವಿಲ್ಲದ ಆನಂದ.
ತನ್ನ ಮನೆಯ ಹೊರಗೇ ನಿಂತಿದ್ದಳು ಶಬರಿ.
ನೋಟವೆಲ್ಲ ಗೌರಿಯ ಮನೆಯ ಮೇಲೆ.
ಮರದ ಮೇಲೆ ಕೂತು ಕೂಗುವ ಕಾಗೆಗಳು.
ಹಟ್ಟಿಯಲ್ಲಿ ಮೂಸುತ್ತ ಓಡಾಡುವ ನಾಯಿಗಳು.
ಗೂಡೆಯಿಂದ ಹೊರಬರಲು ಹವಣಿಸುವ ಕೋಳಿಮರಿಗಳು.
ಅಂಗಳದಲ್ಲಿ ಹರಿದಾಡುವ ಹುಳಗಳನ್ನು ಕುಕ್ಕಿ ಹಿಡಿಯುವ ಹುಂಜಗಳು.
ಕಟ್ಟೆಯ ಮೇಲೆ-ಮಾರಮ್ಮನ ಮೂರ್‍ತಿ. ಅದರ ಮೇಲೆ ಬಿದ್ದ ಎಲೆಗಳು.
ಬೀಸುವ ಗಾಳಿಗೆ ಹೂಯ್ದಾಡುವ ರೆಂಬೆಗಳು.
ಅಲುಗಾಡುವ ಗುಡಿಸಲ ಗರಿಗಳು.
ಕಿಚಕಿಚ ಕೂಗುತ್ತಿದ್ದವು ಕೋಳಿಮರಿಗಳು-ಹಟ್ಟಿ ಮನಸುಗಳು.

ಶಬರಿ ಗೌರಿಯ ಗುಡಿಸಲಿನ ಬಳಿಗೆ ಬಂದಳು. ಒಳಗೆ ಅಪ್ಪ-ಮಗಳ ನಡುವೆ ಮಾತುಕತೆ ನಡೆಯುತ್ತಿತ್ತು. ಪೂಜಾರಪ್ಪ “ನೀನ್ ಏನೇ ಯೇಳಿರೂ ನಂಗ್ ಸರ್‍ಬರಾಕಿಲ್ಲ. ಕೂಡಿಕೆ ಮಾಡ್ಕಂಡು ಅವ್ನ್ ಜತ್ಯಾಗೇ ಆಳಾಗೋಗು.” ಎಂದು ಸಿಡಿಮಿಡಿಗುಡುತ್ತಿದ್ದ.

“ಅಂಗಲ್ಲಪ್ಪ, ನಾನು ನಿಂಗ್ ಯಾವತ್ತೂ ಅನ್ನೇಯ ಮಾಡಾಕಿಲ್ಲ. ನಾವಿಬ್ರೂ ನಿನ್ ಚಂದಾಗ್ ನೋಡ್ಕಂಬ್ತೀವಿ. ಅತ್ಲ್ ಕಡ್ಡಿ ಎತ್ತಿ ಇತ್ಲಾಗ್ ಇಡಬ್ಯಾಡ ನೀನು. ಅಂಗ್ ಸುಕವಾಗಿಟ್ಟಿರ್‍ತೀವಿ. ನೀನೇ ಮುಂದ್‍ ನಿಂತು ಮದ್ವೆ ಮಾಡಪ್ಪ. ನಿನ್ ಮಗಳು ಓದು ಬರಾ ತಿಳ್ಳಂಡಿರೊ ದೊಡ್ಡ ಮನ್ಸನ್ ಮದ್ವೆ ಆಗಾದು ನಿಂಗೂ ಕೋಡ್ ಮೂಡ್ದಂಗಲ್ಲೇನಪ್ಪ” ಎಂದು ಗೌರಿ ವಿಧವಿಧವಾಗಿ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಳು.

“ದೊಡ್ ಮನಸ್ರು ಊರಾಗವ್ರೆ-ಒಡೇರು, ಜೋಯಿಸ್ರು, ಇವ್ನೇನ್ ದೊಡ್ಡ ಮನ್ಸ ಅಲ್ಲ ನಂಗೆ”- ಎಂದ ಪೂಜಾರಪ್ಪ.

“ಆ ದೊಡ್ ಮನುಸ್ರು ಎಂದಾನ ನಮ್‍ ಕಷ್ಟ ಸುಕ ವಿಚಾರಿಸ್ಕಂಡವ್ರ? ಗುಡಿಸ್ಲಾಕ್ ಬಂದು ಹರಕ್‍ಚಾಪೆ ಮ್ಯಾಲ್‍ ಕುಂತ್ಕಂಡವ್ರ? ಈ ನವಾಬು ನಮ್ಮೊನೆ ಆಗಿಲ್ಲ?”-ಗೌರಿ ಕೇಳಿದಳು.

ಪೂಜಾರಪ್ಪ ಗಂಟಿಕ್ಕಿದ ಮುಖದಲ್ಲಿ ಮೇಲೆದ್ದ. “ಒಡೇರ್‍ತಾವ ವೋಗ್ ಬತ್ತೀನಿ” ಎಂದ.

“ನೀನೇನಾರ ಅವ್ರ್‍ ಯೇಳ್ದಂಗ್‍ ಕೇಳಿರೆ ನೀನ್‍ ಬರಾದ್ರಾಗೆ ನಾನ್ ಯೆಣ ಆಗಿರ್‍ತೀನಿ. ಬರ್‍ವಾಗ ಅಂಗೇ ಗುಂಡಿ ತೋಡಿ, ಅವ್ರ್‌ತಾವೆ ಚಟ್ಟ ಕಟ್ಟಿಸ್ಕಂಡ್ ಬಾ” ಎಂದು ಹೇಳಿದ ಗೌರಿ ಗದ್ಗದಿತಳಾದಳು.

ಪೂಜಾರಪ್ಪ ರೊಯ್ಯನೆ ಹೊರಟ.

ಹೊರಗೆ ಬಂದಾಗ ಅಲ್ಲಿ ನಿಂತಿದ್ದ ಶಬರಿಯನ್ನು ಹುರಿದುಮುಕ್ಕುವಂತೆ ನೋಡಿದ. “ಅದೇನೂ ಯೆಣ ಆಗ್ತಾಳಂತೆ ಯೆಣ; ನೋಡು” ಎಂದು ಸಿಟಿನಲ್ಲಿ ಹೇಳಿ ಹೊರಡುವಾಗ ಸಂಕಟ ಕಾಡತೂಡಗಿತು.

ಶಬರಿ “ಆಗ್‍ಬಾರದ್ದೇನೂ ಆಗಿಲ್ಲ. ಸುಮ್ಕೆ ಇಬ್ರೂ ಸಂಕಟ ಪಟ್ಕಂಡು ಒಳೂಳ್ಗೇ ಯಾಕ್‍ ಸುಟ್ಟೋಗ್ತೀರ” ಎಂದು ನೋವಿನಿಂದ ಹೇಳಿದಳು.

ಪೂಜಾರಪ್ಪ ಮಾತಾಡಲಿಲ್ಲ. ಒತ್ತಿ ಬರುವ ಕಣ್ಣೀರನ್ನು ಒರೆಸಿಕೂಂಡು ಹೊರಟ.

ಊರ ಒಡೆಯರು ಮತ್ತು ಜೋಯಿಸರ ಬಳಿಗೆ ಹೋಗಿ ಎಲ್ಲವನ್ನೂ ಹೇಳಬೇಕೆಂದುಕೊಂಡಿದ್ದ ಪೂಜಾರಪ್ಪನ ಕಾಲುಗಳು ಮರಗಿಡಗಳ ನಡುವಿನ ಹಾದಿಯಲ್ಲಿ ಸಾಗಿದವು. ತೋಪು ಬಂದು ತಲುಪಿದವು. ಹೂಂಗೆ-ಹುಣಸೆಗಳು ಬೆಳದ ತೋಪು.

ಬಿಸುವ ಗಾಳಿಯನ್ನು ತಂಪಾಗಿಸುವ ಹಸಿರೆಲೆಗಳು.
ಪೂಜಾರಪ್ಪನ ತುಂಬ ಬಿರುಸುಗೊಂಡ ಬಿಸಿಯಲೆಗಳು.
ಮರವೊಂದರ ಬುಡದಲ್ಲೆ, ಮಣ್ಣು ಮುರಿದು ಮೇಲೆದ್ದ ಬೇರುಗಳು.
ಹೋಗಿ ಕೂತು ಉಸ್ಸೆಂದು ಬಿಸಿಯನ್ನು ಹೊರಹಾಕಿದ.
ತಂಪು ವಾತಾವರಣಕ್ಕೆ ಹೂಂದಿಕೊಳ್ಳತೂಡಗಿದ.
ರೆಂಬ ಕೊಂಬಿಗಳಲ್ಲಿ ತೂರಿ ಬರುವ ತಂಗಾಳಿ
ಬುಡಕ್ಕೆ ಒರಗಿದವನಿಗೆ ಬೇರಿನ ಆಸರೆ.
ಬೇರಿನಿಂದ ಹಿಡಿದು ಕಾಂಡ ಕೊಂಬೆಗಳವರೆಗೆ ಒಂದೇ ಆಕಾರ; ಓಂದೇ ಮರ.
ಒಡೆದ ಮನಸ್ಸನ್ನು ಒಂದುಮಾಡಿಕೊಳ್ಳಲು ಪ್ರಯತ್ನಿಸಿದ.
ಮರಗಳ ನೆರಳಲ್ಲಿ, ನಡುವೆ ನುಗ್ಗಿರುವ ಬಿಸಿಲಲ್ಲಿ ಓಡಾಡಿದ.
ಮಣ್ಣಿಗೆ ಮೆತ್ತಿಕೊಂಡು ಬಿದ್ದಿದ್ದ ಬಂಡೆಯೊಂದರ ಮೇಲೆ ಮಲಗಿದ.
ಅದೇನು ನಿದ್ದೆ ಹತ್ತಿತೂ ಸಾಯಂಕಾಲದವರೆಗೆ ಏಳಲಿಲ್ಲ.
ಎದ್ದು ನೋಡಿದರೆ- ಬದಿಯಲ್ಲಿ ಹುಚ್ಚೀರ ಕೂತಿದ್ದ.
ತಾನು ತುಂಬಾ ಹೊತ್ತಿನಿಂದ ಕಾಯುತ್ತ ಕೂತಿರುವುದಾಗಿ ಸನ್ನೆ ಮೂಲಕ ತಿಳಿಸಿದ.

ಪೂಜಾರಪ್ಪನಿಗೆ ಮನಸ್ಸು ತುಂಬಿಕೊಂಡಿತು. ಹುಚ್ಚೀರನ ಬೆನ್ನುತಟ್ಟಿದ. “ನೀನು ವೋಗು ನಾನ್‍ ಆಮೇಲ್‍ ಬತ್ತೀನಿ” ಎಂದು ಪೂಜಾರಪ್ಪ ಹೇಳಿದರೂ ಹುಚ್ಚೀರ ಒಪ್ಪಲಿಲ್ಲ. “ನೀನ್‍ ಹೂರಡೋವರೆಗೂ ಇಲ್ಲೇ ಇರ್‍ತೀನಿ” ಎಂದು ಆಂಗಿಕ ಭಾಷಯಲ್ಲಿ ಹೇಳಿದ. ಪೂಜಾರಪ್ಪ “ಸರಿ ನಡಿ” ಎಂದು ಹೂರಟು ನಿಂತ.

ಮನೆಗೆ ಬಂದ ಪೂಜಾರಪ್ಪನನ್ನು ಗೌರಿ ಕೇಳಿದಳು- “ಒಡೇರ್‍ ಏನಂದ್ರು?”
“ಅವ್ರ್‌ನ್ಯಾರ್‍ ಕೇಳಿದ್ರು ಏನಾರ ಅಂಬಾಕೆ” ಎಂದ ಪೂಜಾರಪ್ಪ.
“ಯಾಕೆ ಊರಾಕೋಗಿರ್‍ಲಿಲ್ವ?”- ಗೌರಿಯ ಪ್ರಶ್ನೆ.
“ಊರಾಗೇನೈತೆ ವೋಗಾಕೆ?”-ಪೂಜಾರಪ್ಪನ ಪ್ರಶ್ನಾರ್ಥಕ ಉತ್ತರ. ಗೌರಿ ಆಶ್ಚರ್ಯದಿಂದ ನೋಡಿದಳು.
“ಏನಾರ ಇಟ್‍ಗಿಟ್‍ ಮಾಡಿದ್ರೆ ಉಂಬಾಕಿಕ್ಕಮ್ಮಣ್ಣಿ ವೊಟ್ಟೆ ಚುರ್‍ಗುಟ್‍ತೈತೆ” ಎಂದು ಪೂಜಾರಪ್ಪ ಕೂತುಕೊಂಡ.

ಗೌರಿಗೆ ಹೇಳಿಕೊಳ್ಳಲಾಗದ ಭಾವನೆ. ಬೆಳಗ್ಗೆ ಸಿಟ್ಟಾಗಿ ಹೋದ ಅಪ್ಪ ಸಂಕಟವಾಗಿ ಬಂದಿದ್ದಾನೆ. ಬೆಳಗ್ಗೆ ವೈರಿಯಂತೆ ಉರಿಯುತ್ತಿದ್ದವನು ಈಗ ವೈರ ಮುರಿದ ಮನಸ್ಸಾಗಿದ್ದಾನೆ.

ಗೌರಿ ಅಪ್ಪನ ಹತ್ತಿರ ಬಂದಳು. “ನೀನಂಗ್‍ ಸಿಟ್‍ ಮಾಡ್ಕಂಡ್‍ ವೋದ್ರೆ ನಾನ್ ಯಾವ ಮಕ ವೊತ್ಕಂಡ್‍ ಅಡಿಗೆ ಮಾಡಾನ? ನೀನೇ ಯೇಳಪ್ಪ. ಇವಾಗ್‍ ಮಾಡ್ತೀನಿ. ಇಟ್‍ ಯಾಕಪ್ಪ? ಒಂದು ಪಾವು ಅಕ್ಕಿ ಐತೆ. ಅನ್ನಾನೇ ಮಾಡ್ತೀನಿ” ಎಂದು ಹೇಳುತ್ತ ಉಕ್ಕಿ ಬರುತ್ತಿರುವ ಕಣ್ಣೀರು ಒರೆಸಿಕೊಂಡು ಅಪ್ಪನನ್ನು ದಿಟ್ಟಿಸಿ ಒಲೆಯ ಬಳಿಗೆ ಬಂದಳು. ಕಟ್ಟಿಗೆಗಳನ್ನು ಇಟ್ಟು, ಮಡಿಕೆಯಲ್ಲಿ ಅಕ್ಕಿಹಾಕಿ, ನೀರು ಬೆರಸಿ, ಕೈಯ್ಯಾಡಿಸಿ, ಬಸಿದು ಮತ್ತೆ ನೀರು ಹಾಕಿ ಒಲೆಯ ಮೇಲಿಟ್ಟಳು.

ಉರಿಯುತ್ತಿರುವ ಒಲೆಯ ಮೇಲೆ ಕುದಿಯುವ ನೀರು.
ಮುಂದೆ ಕೂತ ಗೌರಿ; ಒಲೆಯನ್ನೊಮ್ಮೆ ಗೌರಿಯನ್ನೊಮ್ಮೆ ನೋಡುವ ಅಪ್ಪ.
ಕುದಿವ ನೀರಲ್ಲಿ ಅರಳಿದ ಅಕ್ಕಿ ಅನ್ನವಾಯಿತು.
ಕುದಿಯುತ್ತಿದ್ದ ಮೌನ ಮಾತಾಯಿತು.
“ಅನ್ನ ಆತು ಕಣಪ್ಪ. ಕೈ ತೊಳ್ಕ. ಉಂಬೀವಿಂತೆ”- ಗೌರಿ ಪ್ರೀತಿಯಿಂದ ಕರೆದಳು.
“ನೀನೂ ಕುಂತ್ಕ ಇಬ್ರೂ ಉಂಬಾನ” ಎಂದು ಪೂಜಾರಪ್ಪ ಮೇಲೆದ್ದ.
ಗೌರಿ ಅಪ್ಪನ ಮುಖ ನೋಡಿದಳು. “ಯಾಕಂಗ್‍ ನೋಡ್ತೀಯ? ಒಟ್ಗೆ ಉಂಬಾನ ಅಂದೆ. ಕೇಳುಸ್ಲಿಲ್ವ?” ಎಂದು ಗಡುಸಾಗಿ ಹೇಳಿದ.
“ನಿಂಗ್ ಉಂಬಾಕಿಕ್ಕಿ ಆಮ್ಯಾಕ್ ನಾನುಂಬ್ತೀನಿ ಕಣಪ್ಪ” ಎಂದಳು ಗೌರಿ.
“ಮುಂದೆ ಜತ್ಯಾಗ್ ಉಂಬಾಕೆ ಆಗ್ತೈತೊ ಇಲ್ವೊ ಅದಕ್‍ ಅಂಗಂದೆ ಕಣವ್ವ” ಎಂದು ಹೇಳುವಾಗ ಪೂಜಾರಪ್ಪನ ಗಂಟಲು ಉಬ್ಬಿಕೊಂಡಿತ್ತು.
“ಅದ್ಯಾಕಪ್ಪ ಅಂಗಂಬ್ತೀಯ”- ಗೌರಿಯದೂ ಅದೇ ಧ್ವನಿಸ್ಥಿತಿ.
“ಯಾಕೂ ಇಲ್ಲ ಕಣವ್ವ ಸುಮ್ಕೆ ಅಂಗಂದೆ” ಎಂದು ಕೈತೊಳೆದುಕೊಂಡು ಬಂದು ಊಟಕ್ಕೆ ಕೂತ.

ಮನಸಾರೆ ಊಟ ಮಾಡಿದ. ಹೂರಬಂದು ಕಟ್ಟೆಯ ಮೇಲೆ ಕೂತ. ಊಟ ಮಾಡಿದ ಮೇಲೆ ಕಲವರು ಗುಡಿಸಲುಗಳಿಂದ ಹೊರಬಂದು ಪೂಜಾರಪ್ಪನನ್ನು ನೋಡಿ ಒಳಹೋದರು. ಇನ್ನು ಕೆಲವರು ಎದುರಿಗೇ ಓಡಾಡಿದರು. ಮಾತನಾಡಿಸಲಿಲ್ಲ. ತಿಮ್ಮರಾಯಿ ಹೂರಬಂದು ಬಾಗಿಲಲ್ಲಿ ಕೂತುಕೊಂಡ. ಆದರೆ ಪೂಜಾರಪ್ಪನನ್ನು ಮಾತನಾಡಿಸುವ ಗೊಡವೆಗೆ ಹೋಗಲಿಲ್ಲ. ಹುಚ್ಚೀರ ಹತ್ತಿರಕ್ಕೆ ಹೋಗಲೊ ಬೇಡವೋ ಎಂದು ಅತ್ತಿತ್ತ ನೋಡುತ್ತಿದ್ದ.

ಪೂಜಾರಪ್ಪನಿಗೆ ತಾನು ಇಷ್ಟು ಒಂಟಿಯೆ ಎನ್ನಿಸಿತು. ಯಾಕೆ ಯಾರೂ ಹತ್ತಿರ ಬರುತ್ತಿಲ್ಲ? ಮಾತನಾಡಿಸುತ್ತಿಲ್ಲ? ಇವರೆಲ್ಲರೊಂದಿಗೆ ಮಾತನಾಡಬೇಕೆಂದೇ ಇಲ್ಲಿ ಬಂದು ಕೂತಿದ್ದೇನೆ; ಮನಸ್ಸಿನಲ್ಲಿರುವುದನ್ನ ಹೇಳಿ ಹಗುರವಾಗಬೇಕೆಂದು ಕೊಂಡಿದ್ದೇನೆ. ಆದರೆ… ಹಟಿಯಲ್ಲಿ ಒಂಟಿ… ಎಂಥ ಯಾತನೆ!

“ಸೂರ್ಯಪ್ಪ”- ಪೂಜಾರಪ್ಪ ಗಟ್ಟಿಯಾಗಿ ಕೂಗಿದ.

ಸೂರ್ಯ ಗುಡಿಸಲಿನಿಂದ ಹೊರಗೆ ಬಂದ; ನೋಡಿದ. ಆದರೆ ‘ಯಾಕೆ ಕರದದ್ದು?’ ಎಂದು ಕೇಳಲಿಲ್ಲ.

ಪೂಜಾರಪ್ಪನೇ ಮಾತಿಗೆ ಮುಂದಾದ “ನಾನ್‍ ಒಸಿ ಮಾತಾಡದೈತೆ”

ಆಗ ಶಬರಿ ಹೊರಬಂದು ಕೇಳಿದಳು- “ಮಾತಾಡಾದೈತೊ ಜಗಳಾಡಾದೈತೊ?”

“ನಾನೂ ನಿಮ್ಮಂಗೇ ಒಬ್‍ ಮನ್ಸ ಮಾತು ಅಂದ್ರೆ ಮಾತು; ಜಗಳ ಅಂದ್ರೆ ಜಗಳ” ಎಂದು ಪೂಜಾರಪ್ಪ ಬೇಸರದಿಂದಲೇ ಹೇಳಿದ.

“ಜಗಳ ಆಡಿ ಉಂಡಿರಾದೆಲ್ಲ ಕರಗಿಸ್ಕಂಬೇಕು ಅಂಬ್ತ ಇದ್ದೀಯೇನೊ” ಎಂದು ಶಬರಿ ಕುಟುಕಿದಳು.

ಆಗ ಹೂರಬಂದ ಗೌರಿ “ಅಂಗೆಲ್ಲ ಅನ್‍ಬ್ಯಾಡ. ಅಪ್ಪಯ್ಯಂಗೆ ಏನೋ ಯೇಳಾದೈತೆ. ಆಗ್ನಿಂದ ಒದಾಡ್ತ ಇರಾದ್ ನೋಡ್ತಾ ಇವ್ನಿ ನಾನು” ಎಂದಳು.

ಸೂರ್ಯನಿಗೆ ಶಬರಿ ಒರಟಾಗಿ ಮಾತಾಡುವುದು ಸರಿಕಾಣಲಿಲ್ಲ. “ಇಂಥ ವಿಷ್ಯದಲ್ಲಿ ಒರಟಾಗಿರ್‌ಬಾರ್‍ದು ಶಬರಿ. ಪೂಜಾರಪ್ಪ ನಮ್ಗೇನ್ ವೈರೀನ? ಇದೇ ಹಟ್ಟಿ ಮನುಷ್ಯ.” ಎಂದು ಸಮಾಧಾನದಿಂದ ಹೇಳಿದ.

ಈ ಮಾತಿನಿಂದ ಪೂಜಾರಪ್ಪ ಉತ್ತೇಜಿತನಾದ. “ಉಂಡಿದ್‍ ಮುಗ್ದಿದ್ರೆ ಎಲ್ರೂ ಬರ್ರಿ. ಯೆಂಗುಸ್ರು, ಗಂಡುಸ್ರು ಎಲ್ಲಾರು” ಎಂದು ಕರೆದ.

ಒಬ್ಬೊಬ್ಬರೇ ಬಂದರು. ಕೆಲವರು ಕೂತರು; ಕೆಲವರು ನಿಂತರು. ಸೂರ್ಯ ಹತ್ತಿರ ಬಂದ; ಪೂಜಾರಪ್ಪ ಗೌರಿಯ ಕಡೆ ನೋಡಿದ. ದೂರದಲ್ಲಿ ನಿಂತಿದ್ದ ನವಾಬನನ್ನು ದಿಟ್ಟಿಸಿದ. ನಿಧಾನವಾಗಿ ಮಾತಿಗೆ ಶುರುಮಾಡಿದ.

“ಎಲ್ಲಾ ಯೋಚ್ನೆ ಮಾಡಿವ್ನಿ. ನಾನ್‍ ಯೆಚ್ಗೆ ಏನೂ ಯೀಳಾಕಿಲ್ಲ. ನನ್ ಮಗಳಿಗೆ ಅಮ್ಮ ಇಲ್ಲ. ಅದೂ ನಿಮ್ಗೂ ಗೊತ್ತೈತೆ. ಇವಾಗ್‍ ಹಟ್ಟಿನಾರೆಲ್ಲ ಅಮ್ಮ ಆಗ್‍ಬೇಕು. ನಮ್ ಗೌರಿ ಮದ್ವೆ ಮಾಡ್‍ಬೇಕು.”

ಯಾರಿಗೂ ಮಾತು ಹೊರಡಲಿಲ್ಲ. ಬೀಸುತ್ತಿದ್ದ ಗಾಳಿಗೆ ಗರ ಬಡಿದಂತೆ ಸದ್ದಿಲ್ಲದೆ ಇದ್ದರು. ಕಡಗೆ ಸೂರ್ಯ ಕೇಳಿದ- “ಮದ್ವೆ ಯಾರ್ ಜೊತೆ?”

“ಇನ್‍ಯಾರ್‍ ಜತ ಮಾಡಾಕಾಯ್ತದೆ? ನನ್‍ ಮಗ್ಳು ಯಾರ್‌ಜತೆ ಅಂಬ್ತಾಳೊ ಅವ್ರ್‌ಜತೆ.”

ಹಟ್ಟಿ ಆನಂದವಾಯಿತು.
ಗುಜುಗುಜು ಆರಂಭವಾಯಿತು.

ಇದು ನಿಜವೆ? ಪೂಜಾರಪ್ಪ ಮತ್ತೇನೊ ಮರೆಮಾಚಿ ಹೀಗೆಲ್ಲ ಮಾತಾಡುತ್ತಿದ್ದಾನೆಯೆ? ಇದರಲ್ಲಿ ಸಂಚೇನಾದರೂ ಇದೆಯೆ?

ಸಣ್ಣೀರ ಕೇಳಿಯೇ ಬಿಟ್ಟ- “ಇದೆಂಗಣ್ಣ ನಂಬಾದು? ಇದೇನ್ ನನ್ ಕಿವೀನೊ ಅಲ್ವೊ ಅಂಬ್ತಾ ಅನ್ಮಾನ ಆಗ್ತಾ ಐತೆ?”

ಪೂಜಾರಪ್ಪ ನೋವಿನಿಂದ ಚಡಪಡಿಸಿದ – “ನೀವೆಲ್ಲ ನಂಬ್‍ ಬೇಕಾರೆ ಏನ್ ಮಾಡ್ಬೇಕು ಯೇಳ್ರಿ. ನನ್‍ ಮಗಳಾಣೆಗೂ ನಾನೇಳಾದ್‍ ದಿಟ. ಈ ಮಾರಮ್ ದ್ಯಾವ್ರಾಣೇಗೂ ದಿಟ” ಎಂದು ಒತ್ತಾಯಪೂರ್ವಕವಾಗಿ ಹೇಳಿದ.

“ಆಮ್ಯಾಕ್‍ ಒಡೇರ್‍ ಬ್ಯಾಡ ಅಂದ್ರು ಅಂಬ್ತ…” ಒಬ್ಬ ರಾಗ ಎಳೆದ.

ಪೂಜಾರಪ್ಪ ಕೂಡಲೇ- “ಗೌರಿ ನನಿಗುಟ್‍ದೋಳು ಕಣೋ, ಒಡೇರ್‍ಗ್ ಉಟ್‍ದೋಳಲ್ಲ.” ಎಂದು ಗಟ್ಟಿಯಾಗಿ ಹೇಳಿದಾಗ ನಂಬಿಕೆಯ ಕಟ್ಟೆ ತುಂಬಿ ಹಟ್ಟಿಯಲ್ಲಿ ರೋಮಾಂಚನ.
* * *

ಹಟ್ಟಿಯಲ್ಲಿ ಹೇಳಿದಷ್ಟೇ ಗಟ್ಟಿಯಾಗಿ ಒಡೆಯರು ಮತ್ತು ಜೋಯಿಸರ ಎದುರು ಹೇಳಲಾಗಲಿಲ್ಲ. “ಇರಾ ಒಬ್‍ ಮಗ್ಳನ್ನ ಎಂಗ್‍ ಕಳ್ನಂಬ್ಲಿ ದಣೇರ” ಎಂದು ವಿವರಿಸಿದ. ನರಸಿಂಹರಾಯಪ್ಪ ಮೊದಲು ರೇಗಿದರೂ ಆನಂತರ – “ಆಳಾಗಿ ವೋಗ್ಲಿ ಬಿಡು. ನಾನೇನ್‍ ಮದ್ವೆ ಆಗಬೇಕಾ ನಿನ್‍ಮಗ್ಳನ್ನ” ಎಂದ. ಆದರೆ ಜೋಯಿಸರು- “ನಮ್‍ ಸಂಪ್ರದಾಯದ್‍ ಗತಿಯೇನಯ್ಯ? ಅವ್ನು ನಿಖಾಗಿಖಾ ಅಂದು ನಮ್ಮನ್ನೆಲ್ಲ ಮಿಕಾ ಮಾಡ್‍ಬಿಟ್ಟಾನು. ಲಾಗಾಯ್ತಿನಿಂದ ಹೇಗ್‍ ನಡೀತಾ ಇತ್ತೊ ಹಾಗೆ ಆಗ್ಬೇಕು. ನಿಮ್‍ ಸಂಪ್ರದಾಯ ನೀವ್‍ ಬಿಡ್‍ಬಾರ್‍ಬು. ಅದ್ರಲ್ಲೂ ಮೊದಲನೆ ರಾತ್ರೀನ ನಿನ್‍ ಮಗ್ಳು ದೇವಸ್ಥಾನದಲ್ಲಿ ದೇವರ ಜೊತೆ ಕಳೀಬೇಕು.. ಏನಂತೀರ ನರಸಿಂಹರಾಯಪ್ಪ?” ಎಂದು ಕೇಳಿದಾಗ ಅವರು “ಅಂಬಾದೇನೈತೆ? ನೀವಂದಂಗೇ ನಾನಂಬಾದು” ಎಂದರು. ಜೋಯಿಸರು “ಗೊತ್ತಾಯ್ತೇನೊ ಪೂಜಾರಪ್ಪ?” ಎಂದು ಆತನ ಮುಖ ನೋಡಿದರು. ಪೂಜಾರಪ್ಪ “ನೀವೇಳಿದ್ದೆಲ್ಲ ಅವ್ರ್‌ಗೇಳ್ತೀನಿ” ಎಂದ. ನರಸಿಂಹರಾಯಪ್ಪ ರೇಗಿದ- “ಯೇಳ್ತೀನಿ ಅಂಬ್ತೀಯಲ್ಲೊ ಮಾಡ್ತೀನಿ ಅನ್ಲೇಕು.”

ಪೂಜಾರಪ್ಪ “ಯೇಳ್ತೀನಿ ದಣೇರ. ಅವ್ರೆಲ್ಲ ಒಟ್ಗೆ ಆಗಿ ನನ್ನೇ ಒಂಟಿ ಮಾಡಿರೆ-, ಮಾಡೇ ಮಾಡ್ತೀನಿ ಅಂಬ್ತ ಯೆಂಗ್ ನಿಮ್ಗೇಳಾದು” ಎನ್ನುತ್ತ ಚಿಂತೆಯಿಂದಲೇ ಹೊರಟುನಿಂತ.

ನರಸಿಂಹರಾಯಪ್ಪ ಗದರಿದ- “ನಾವೇಳ್ದಂಗ್ ಕೇಳ್ದಿದ್ರೆ ಊರಾಗ್ ಕಾಲಿಡ್ಸಾಕಿಲ್ಲ. ಕೂಲಿಕೆಲ್ಸಕ್ಕೆ ನಿಮ್ಮಟ್ಟಿನಾಗಿರಾ ಒಂದ್‍ ನರಪಿಳ್ಳೇನೂ ಕರ್‍ಯಾಕಿಲ್ಲ.”

ಕೇಳಿಸಿದರೂ ಕೇಳಿಸದಂತೆ ಪೂಜಾರಪ್ಪ ನಿಧಾನವಾಗಿ ನಡೆದ. ಕಾಲು ಕರೆದೊಯ್ದ ಕಡೆ ಹೊರಟ. ಸೀದಾ ಅದೇ ತೋಪಿಗೆ ಬಂದಿದ್ದ. ಅದೇ ಮರಗಳು, ಅದೇ ಬುಡಗಳು; ಅದೇ ಬೇರುಗಳು; ಅದೇ ಹಸಿರೆಲೆಗಳು.

ಕಾದ ಕರುಳಿಗೆ ಮರಗಳ ನೆರಳು.
ಭಾವಕೋಶದಲ್ಲಿ ಬಿಗಿಯಾದ ಬೇರುಗಳು.

ಪೂಜಾರಪ್ಪ ತೋಪಿನ ತುಂಬಾ ಓಡಾಡಿದ. ಸಾಕಾದಾಗ ಕೂತ. ಒಂಟಿ ಯಾತನೆಯ ಸುಳಿಯಿಂದ ಹೂರಬರುವ ಒತ್ತಾಸೆಯಿಂದ ಎದ್ದುನಿಂತ. ಹಟಿಯಲ್ಲಿ ಒಂಟಿಯಾಗುವುದು, ಊರಿನಿಂದ ಉಚ್ಚಾಟನೆಗೊಳ್ಳುವುದು- ಎಂಥ ಇಕ್ಕಟ್ಟು!

ಹಟ್ಟಿಗೆ ಬಂದವನು ಊರ ಒಡೆಯರ ಆದೇಶವನ್ನು ವಿವರಿಸಿದ. ನಿಜ ಹೇಳಬೇಕೆಂದರೆ ಹಿಂದಿನ ಕಟ್ಟುಪಾಡುಗಳನ್ನು ಮೀರಲು ತನಗೂ ಇಷ್ಟವಿಲ್ಲವೆಂದು ಪ್ರಾಮಾಣಿಕವಾಗಿ ಹೇಳಿದ. ಮದುವೆಗೆ ಹೇಗಿದ್ದರೂ ಒಪ್ಪಿರುವುದರಿಂದ ಎಲ್ಲವೂ ಹಿಂದಿನಂತೆ- ಸಂಪ್ರದಾಯಬದ್ಧವಾಗಿ ನಡೆಯಲಿ, ತನ್ನ ಮಗಳು ಮೊದಲರಾತ್ರಿಯನ್ನು ದೇವಸ್ಥಾನದಲ್ಲಿ ಕಳೆಯಲಿ ಎಂದು ವಾದಿಸಿಯೂ ಬಿಟ್ಟ.

ಸೂರ್ಯ “ಅದೊಂದ್‍ ಮಾತ್ರ ಸಾಧ್ಯವಿಲ್ಲ” ಎಂದ.

ಹಟ್ಟಿಯ ಜನರು ಪ್ರತಿಕ್ರಿಯಿಸಲಿಲ್ಲ. ಅವರ ಮೌನ, ಸೂರ್ಯನಿಗೆ ಅರ್ಥವಾಯಿತು. “ಯಾಕೆ ನಿಮ್ಗೆಲ್ಲ ಭಯಾನ? ಹೇಳಿ ಬಾಯ್‍ಬಿಟ್‍ ಹೇಳಿ. ಯಾವ್ದನ್ನೂ ನಿಮ್ ಒಪ್ಪಿಗೆ ಇಲ್ದೆ ನಾವ್‍ ಮಾಡೊಲ್ಲ” ಎಂದು ಒತ್ತಾಯಿಸಿದ. ಆಗ ಒಬ್ಬರಿಗೊಬ್ಬರು ಮುಖನೋಡಿಕೊಂಡರು. ಸಣ್ಣೀರ ಮೊದಲು ಬಾಯಿಬಿಟ್ಟ.

“ನೋಡು ಸೂರ್ಯಪ್ಪ, ಗೌರಿ-ನವಾಬಣ್ಣ ಮದ್ವೆ ಆಗಾಕೆ ನಾವೆಲ್ಲ ಒಪ್ಕಂಡ್ವಿ. ಆದ್ರೆ ಹಳೇದೆಲ್ಲ ಬಿಡಾದು ಅಂದ್ರೆ ಎಂಗೆ? ನಮ್ ಯೆಂಡ್ರೆಲ್ಲ ಮದಲ್ನೇ ರಾತ್ರಿ ದ್ಯಾವ್ರ ಗುಡ್ಯಾಗ್ ಇದ್‍ ಬಂದಿಲ್ವ?”

ಮತ್ತೊಬ್ಬ ಮಾತು ಮುಂದುವರೆಸಿದ. “ಊಂಕಣಪ್ಪ, ಆಮ್ಯಾಕ್ ಒಂದ್ ವೋಗಿ ಇನ್ನೊಂದಾದಾತು. ದ್ಯಾವ್ರಿಗ್‍ ಸಿಟ್‍ಬಂದು ಹಟ್ಟೀಗೆಲ್ಲ ಕೆಟ್ಟುದ್ ಆಗ್ ಬಿಟ್ಟಾತು.”

“ಆ ಚಂದ್ರ, ರಕ್ತ ಸಾಯ್ಲಿಲ್ವ? ನವಾಬಣ್ಣನೂ ಅಂಗೇ ಆಗ್ಬೇಕ?”- ಮತ್ತೊಬ್ಬನ ಪ್ರಶ್ನೆ.

ಆಗ ಹೆಂಗಸೊಬ್ಬಳು “ನಮ್‍ ಗೌರೀಗೆ ಅಂತಾ ಗತಿ ಬರಾದ್‍ ಬ್ಯಾಡ ಕಣಪ್ಪ. ಇವಾಗ್‍ ಸ್ಯಬರಿ ಬಾಳ್‍ ನೋಡ್ತಿರಾದೆ ಸಾಕು” ಎಂದು ಹೇಳಿದಳು.

ಸೂರ್ಯ-“ನವಾಬಂಗೂ ಏನು ಆಗಲ್ಲ. ಹಟ್ಟಿಗೂ ಏನೂ ಆಗಲ್ಲ” ಎಂದು ಧೈರ್‍ಯ ಹೇಳಿದ.

ನವಾಬ “ನನಿಗ್ ಧೈರ್ಯ ಇದೆ. ನಂಗೇನೂ ಆಗಲ್ಲ. ನಾವೆಲ್ಲ ಸುಖವಾಗಿರ್‍ತೀವಿ. ನೀವ್‍ ಚಿಂತೆ ಮಾಡ್‍ಬೇಡಿ” ಎಂದ.

“ನಮ್‍ನಮ್‍ ವಿಸ್ಯ ಆದ್ರೆ ಗುಂಡಿಗೆ ಗಟ್ಟಿಮಾಡ್ಕಬವ್ದು. ಇದು ದ್ಯಾವರ್ ವಿಸ್ಯ ಕಣಪ್ಪ” ಎಂದು ಪೂಜಾರಪ್ಪ ಹೇಳಿದಾಗ ಅನೇಕರು ಮೌನವಾಗಿ ಸಮ್ಮತಿಸಿದರು.

ಸೂರ್ಯ ಸುಮನಾಗಲಿಲ್ಲ. ತನ್ನ ವಿಚಾರವನ್ನು ಕೈಬಿಡಲಿಲ್ಲ. ಸತ್ಯದ ಸ್ಫೋಟಕ್ಕೆ ಇದು ಸರಿಯದ ಸಂದರ್ಭ ಎಂದು ಆತನಿಗೆ ಗೊತ್ತಿತ್ತು.

“ನೋಡಿ, ಅವತ್ನಿಂದ ನಾನ್‍ ಹೇಳ್ತಿದ್ದೀನಿ. ಅದ್ರಲ್ಲೇನೊ ಮೋಸ ಇದೆ. ಆವತ್ತು ನಡದದ್ದೇನು? ಚಂದ್ರ ಅಲ್ಲಿಗೆ ಹೋದ. ಯಾಕ್‍ ಹೇಳಿ? ಮೊದಲು ಶಬರಿ ಹೋಗಿದ್ಲು. ಅದಕ್ಕೆ ಅಂತ ಹೋದ. ಈಗ ಹೆಣ್ಣು ಹೋಗೋದ್‍ ಬೇಡ. ಗಂಡೂ ಹೋಗೋದ್‍ ಬೇಡ. ಆದ್ರಿಂದ ಯಾರೂ ಸಾಯೋ ಪ್ರಶ್ನೇನೇ ಬರೊಲ್ಲ. ಇಷ್ಟಕ್ಕೂ ದೇವರಿಗೆ ನೀವೆಲ್ಲ ಮಕ್ಕಳಿದ್ದಂತೆ. ಹೆಂಗಸ್ರಿಗೆಲ್ಲ ದೇವರು ತಂದೆ ಇದ್ದಂತೆ. ತಂದೇನೇ ಮಗಳ ಜೊತೆ ಮಲಗ್ಬೇಕು ಅಂತ ಬಯ್ಸೋದೆಲ್ಲಾದ್ರೂ ಉಂಟಾ? ನೀವೇ ಯೋಚ್ನೆ ಮಾಡಿ. ಪೂಜಾರಪ್ಪ ಮೊದ್ಲು ರೇಗಾಡಿದ್ರೂ ಕಡಗೆ ಈ ಮದ್ವೇಗೆ ಯಾಕ್ ಒಪ್ಕೂಂಡಿದ್ದು ಹೇಳಿ. ಮಗಳು ಸುಖವಾಗಿರ್‍ಲಿ ಅಂತ ಅಲ್ದಾ? ದೇವರಾದ್ರೂ ಅಷ್ಟೆ, ಮಗಳು ಸುಖವಾಗಿರ್‍ಲಿ ಅಂತ ಬಯಸ್ತಾನೆಯೇ ಹೊರ್‍ತು ಸೂಳೆ ಆಗ್ಲಿ ಅಂತ ಬಯ್ಸಲ್ಲ. ಏನಂತೀರ?” ಸೂರ್ಯ ಭಾವತುಂಬಿದ ಮಾತುಗಳನ್ನು ಆಡಿದಾಗ ಅವರೆಲ್ಲ ಮೂಕರಾಗಿ ಕೂತಿದ್ದರು. ಹೆಂಗಸರ ಮನಸ್ಸುಗಳಲ್ಲಿ ಪ್ರಶ್ನೆಗಳು ಏಳುತ್ತಿದ್ದವು. ದೇವರು ತಮ್ಮನ್ನೇಕೆ ‘ಸೂಳೆ’ ಮಾಡಬಯಸುತ್ತಾನೆ ಎಂದು ಯೋಚಿಸುತ್ತಿದ್ದರು. ಸೂರ್ಯ ಮಾತು ಮುಂದುವರೆಸಿದ-

“ನನಗನ್ಸುತ್ತೆ ಹಿಂದೆ ಯಾರೊ ಕತೆ ಕಟ್ಟಿ ಈ ಹೆಂಗಸರನ್ನ ದುರುಪಯೋಗ ಮಾಡ್ಕೊಂಡಿದಾರೆ. ಮತ್ತೆ ಯಾರೋ ಈಗ್ಲೂ ಅದನ್ನ ಮುಂದುವರ್‍ಸಿದಾರೆ. ಹೆಣ್ಣು ಗುಡೀಗ್‍ ಹೋಗೋಕ್‍ ಮುಂಚೇನೇ ಯಾರೋ ಸೇರ್‍ಕೊಂಡಿರ್‍ತಾರೆ. ಕತ್ಲಲ್ಲಿ ಗರ್ಭಗುಡಿಯಿಂದ ಹೂರಬರ್ತಾರೆ…. ಯೋಚ್ನೆ ಮಾಡಿ. ಇದ್ರಲ್ಲಿ ಏನೋ ಮೋಸ ಇದೆ. ದೇವರು ಯಾವತ್ತೂ ಮಗಳ ಜೊತೆ ಮಲಗ್‍ಬೇಕು ಅಂತ ಕೇಳೊಲ್ಲ.”

ಸೂರ್ಯನ ಮಾತುಗಳನ್ನು ಎಲ್ಲರೂ ಕೇಳುತ್ತಿದ್ದಾಗ ಹುಚ್ಚೀರ ಚಡಪಡಿಸಿದ; ನೋವು ತಿನ್ನುತ್ತಿದ್ದ. ಶಬರಿ ಆತನನ್ನು ಗಮನಿಸುತ್ತಿದ್ದಳು. ಇದ್ದಕ್ಕಿದ್ದಂತೆ ಏನೋ ಹೊಳೆದಂತೆ ಶಬರಿಯ ಗುಡಿಸಲಿಗೆ ನುಗ್ಗಿದ. ಶಬರಿಯೂ ಹಿಂದೆ ಹೋದಳು. ಪುಸ್ತಕ ಎಲ್ಲಿದೆ ಎಂಬಂತೆ ಕೇಳಿದ. ಈಕೆ ಮತ್ತೆ ಏನೆಂದು ಕೇಳಿದಾಗ ನೋಟ್ ಪುಸ್ತಕ ಮತ್ತು ಪೆನ್ಸಿಲ್ಲನ್ನು ಶಬರಿಯ ಬ್ಯಾಗಿನಿಂದ ತೆಗೆದುಕೂಂಡು ಹೊರಗೆ ಬಂದ. ಸೂರ್ಯನ ಕೈಹಿಡಿದು ತನ್ನ ಕಡೆ ನೋಡಲು ಹೇಳಿದ. ಒಂದು ಹಾಳೆಯಲ್ಲಿ ಏನನ್ನೋ ಬರೆದ. ಎಲ್ಲರೂ ನೋಡುತ್ತಿದ್ದರು. ಹುಚ್ಚೀರ ಆವೇಶದಿಂದ ಬರೆಯುತ್ತಿದ್ದ ಬರೆದು ಮುಗಿಸುವವರೆಗೆ ಎಲ್ಲರೂ ಸುಮ್ಮನೆ ನೋಡುತ್ತಿದ್ದರು.

ಕಣ್ಣುಗಳಲ್ಲಿ ಕುತೂಹಲ;
ಮನಸ್ಸಿನಲ್ಲಿ ಕೋಲಾಹಲ.

ಹುಚ್ಚಿರ ತನ್ನದೇ ರೀತಿಯಲ್ಲಿ ಬರೆದು ಸೂರ್ಯನಿಗೆ ಕೊಟ್ಟ. ಅದನ್ನು ಓದಿದ ಸೂರ್ಯ ಸಂಭ್ರಮಿಸಿದ.

“ನೋಡಿ ಇಲ್ನೋಡಿ. ಓದೋದು ಬರೆಯೋದು ಕಲುತ್ರೆ ಏನ್‍ ಅನ್ಕೂಲ ಅನ್ನೋದಕ್ಕೆ ಈ ಹುಚ್ಚೀರಾನೇ ಸಾಕ್ಷಿ. ಈಗ ಸತ್ಯ ಹೊರ್‍ಗಡೆ ಬಂದಿದೆ” ಎಂದು ಸೂರ್ಯ ಕೂಗಿ ಹೇಳಿದ.

ಎಲ್ಲರೂ ಮತ್ತಷ್ಟು ಕುತೂಹಲಿಗಳಾದರು. ಕೆಲವರಂತು “ಏನದು? ಏನ್ ಬರ್‍ದವ್ನೆ ನಮ್‍ ಉಚ್ಚೀರ?” ಎಂದು ಕೇಳಿದರು.

ಹುಚ್ಚೀರ, ಅಕ್ಷರಗಳ ಕಾಗುಣಿತದಲ್ಲಿ ಅಲ್ಲಲ್ಲೆ ತಪ್ಪು ಮಾಡಿದರೂ ವಿಷಯವನ್ನು ಸರಿಯಾಗಿ ಬರೆದಿದ್ದ. ಕಾಗುಣಿತ ತಪ್ಪಾಗಿತ್ತೇ ಹೊರತು ಸತ್ಯ ತಪ್ಪಾಗಿರಲಿಲ್ಲ. “ಆವತು ಚಂದ್ರ ನಾನು ಗುಡಿಗೆ ಹೋದೆವು. ಬೀಗ ಒಡೆದು ಒಳಗೆ ಹೋದೆವು. ಒಳಗೆ ಕತಲು ಇದ್ದಾಗ ದೇವರು ಬಂದನು. ಚಂದ್ರ ನೋಡಿದ. ಏ ಒಡೆಯ ಎಂದು ನುಗ್ಗಿದ. ಹಿಡಿದ. ಕಿರೀಟ ಕಿತ್ತುಬಿಟ್ಟ. ನೋಡಿದೆ ನಾನು. ಊರ ಒಡೇರು ನರಸಿಂಹರಾಯಪ್ಪ ಇದ್ದರು. ಜಗಳ ಆಯಿತು. ಶಬರಿ ಓಡಿದಳು. ನಾನು ಅಲ್ಲೇ ನಿಂತಿದೇ. ಜಗಳ. ಒಡೆಯ ಹೊಡೆದ. ಚಂದ್ರ ಕೆಳಗೆ ಬಿದ. ಒಡೆಯ ಹೊಡೆದ. ಜೊಯಿಸರ ಜತೆ ಬಂದ. ಬಾಗಿಲಿಗೆ ಚಂದ್ರನ ಹೆಣ ಹಾಕಿದರು.”- ಹೀಗೆ ಹುಚ್ಚೀರ ಬರೆದಿದ್ದ.

ಸೂರ್ಯ ಗಟ್ಟಿಯಾಗಿ ಹೇಳಿದ- “ನೋಡಿ ಸತ್ಯ ಇಲ್ಲಿದೆ. ಇಷ್ಟುದಿನ ಹುಚ್ಚೀರನಲ್ಲಿ ಸತ್ಯ ಮೂಕವಾಗಿತ್ತು. ಈಗ ಅಕ್ಷರದಲ್ಲಿ ಹೊರ್‍ಗಡೆ ಬಂದಿದೆ. ಇದು ನರಸಿಂಹರಾಯಪ್ಪ ಮತ್ತು ಜೋಯಿಸರ ಕರಾಮತ್ತು. ಇಷ್ಟುದಿನ ಹಾದಿ ತಪ್ಪಿಸಿ ನಿಮ್ ಮಾನ ಹಾಳ್‍ ಮಾಡ್ದೋರು ಅವ್ರೇ” ಎಂದು ತನ್ನ ವಿಚಾರವನ್ನು ಪ್ರತಿಪಾದಿಸುತ್ತ “ನಿಮ್ಗು ಓದೋಕ್‍ ಬರುತ್ತಲ್ಲ. ನೀವೇ ಓದಿ” ಎಂದು ಹುಚ್ಚೀರ ಬರೆದದ್ದನ್ನು ತೋರಿಸಿದ. ಎಲ್ಲರೂ ಮುಗಿಬಿದ್ದು ಓದಿದರು. ಪುಸ್ತಕ ಕಿತ್ತುಕೊಂಡು ಒಬ್ಬೊಬ್ಬರೆ ಓದಲು ಪ್ರಯತ್ನಿಸಿದರು. ಗುಂಪಾಗಿಯೂ ಓದಿದರು. ಆಮೇಲೆ ತಬ್ಬಿಬ್ಬಾಗಿ ಕೂತರು.

ಇದ್ದಕ್ಕಿದ್ದಂತೆಯೇ ಮೂರ್‍ನಾಲ್ಕು ಜನ ಅಳತೊಡಗಿದರು. ಸೂರ್ಯ ಮೃದುವಾಗಿ ಕೇಳಿದ- “ಯಾಕ್ರ್‍ಅಮ್ಮ? ಯಾಕಳ್ತಿದ್ದೀರ?”. ಶಬರಿ ಅಳುವವರ ಹತ್ತಿರ ಬಂದು ಕೇಳಿದಳು- “ಏನಾತ್ರವ್ವ? ಯಾಕಿಂಗ್‍ ಅಳ್ತೀರ ಯೇಳ್ರವ್ವ? ಏನಾರ ತಪ್ಪಾಗಿದ್ರೆ ಸರ್‌ಪಡ್ಸಾನ.”

ಒಬ್ಬ ಹೆಂಗಸು ಹೇಳಿದಳು.- “ನಾನ್ ಮಾನ ಕಳ್ಕಂಡ್‍ ಮ್ಯಾಲೆ ಎಂಗವ್ವ ಸರ್‍ಪಡುಸ್ತೀಯ? ನೀನಾದ್ರೂ ಗುಡೀನಾಗಿಂದ ಓಡ್ ಬಂದೆ. ನಾವ್ ಅಂಗ್ ಮಾಡಾಕಾಗ್ಲಿಲ್ವಲ್ಲ” ಎಂದು ಕಣ್ಣೀರು ಒರೆಸಿಕೂಂಡಳು. ಇನ್ನೂಬ್ಬಾಕೆ “ವೊದ್ ಮಾನ ತಿರ್‍ಗಾ ಎಂಗ್ ಬತ್ತೈತವ್ವ” ಎಂದು ದುಃಖಿಸಿದಳು. ಆಗ ಒಬ್ಬಾತ ರೇಗಿದ- “ಯಾಕಂಗ್ ಬಡ್ಕಂತೀರ? ನಿಮ್ಗೇನ್ ಗೊತ್ತಿತ್ತ ಆ ಕಳನನ್ ಮಕ್ಳು ಗುಡೀನಾಗ್ ಲಾಡಿ ಬಿಚ್ತಾರೆ ಅಂಬ್ತ. ಈಟಕ್ಕೂ ಅದ್ ನಿಜಾನೊ ಇದು ನಿಜಾನೊ ನಾವೇನ್ ಕಂಡಿದ್ದೀವ? ಅವಾಗ ಗುಡಿಗೋಗಿ ಅಂಗಾತು ಅಂಬಂಗಿದ್ರೆ ಇವಾಗ್ ವೋಗ್ದೆ ಇದ್ರೆ ಏನಾಗ್ತೈತೆ ನೋಡಾನ ಬಿಡ್ರಿ” ಎಂದು ಹೇಳಿದಾಗ ಉಳಿದವರೂ ಇದಕ್ಕೆ ಒಪ್ಪಿದರು. ಸಣ್ಣಿರ “ಇದನ್ನು ನೋಡೇ ಬಿಡಾನ. ಇದೂ ಒಂದ್ ಪರೀಕ್ಸೆ ಆಗೇಬಿಡ್ಲಿ” ಎಂದು ಘೋಷಿಸಿ ಟವಲ್ ಕೊಡವಿ ಎದ್ದುಬಿಟ್ಟ. ಇತರರೂ ಏಳತೂಡಗಿದರು. ಆಗ ಸೂರ್ಯ “ಕೂತ್ಕಳ್ಳಿ ಇನ್ನೂ ಮುಗ್ದಿಲ್ಲ” ಎಂದು ಕೂಡಿಸಿ “ಈಗ ಗೌರಿ ಅಭಿಪ್ರಾಯ ಕೇಳ್ಬೇಕು. ಆಕೇನೂ ಇದಕ್ಕೆ ಒಪ್‍ಬೇಕು” ಎಂದು ಆಕೆಯ ಕಡೆ ನೋಡಿದ.

ಗೌರಿ “ನಾನ್ಯಾಕ್ ವೋಗ್ಲಿ ಗುಡೀಗೆ. ಮದ್ವೆ ಆದ್‍ಮ್ಯಾಗೆ ಗಂಡನ್ ಜತೆ ಮಲಗ್ತೀನಿ. ಇಲ್ದಿದ್ರೆ ಯೆಂಡ್ತಿ ಎಂಗಾಗ್ತೀನಿ?” ಅಂದಳು.

ನವಾಬ್‍ ಮೆಚ್ಚುಗೆಯಿಂದ ನೋಡಿದ.

ಆಗ ತಿಮ್ಮರಾಯಿ “ನೀನೇನಂಬ್ತಿಯ ಪೂಜಾರಪ್ಪ?” ಎಂದು ಕೇಳಿದ.

“ಎಲ್ಲಾರು ಎಂಗಬ್ತೀರೊ ನಾನು ಅಂಗೇ ಅಂಬ್ತೀನಿ. ಮಗಳ ಮಾನ ಗುಡೀನಾಗ್ ವೋಗಾದಾದ್ರೆ ನನ್‍ ಪ್ರಾಣ ಇಟ್ಕಂಡೇನ್ ಬಂತು? ಅದೇನಾಗ್ತೈತೊ ಆಗೇಬಿಡ್ಲಿ” ಎಂದು ಪೂಜಾರಪ್ಪ ಮಾರಮ್ಮನ ಮೂರ್ತಿ ಕಡೆ ನೋಡಿ ಕೈ ಮುಗಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೇಮುಲನಿಗೊಂದು ಪ್ರಶ್ನೆ
Next post ಯಾವುದು ಇಷ್ಟ?

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys