ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು
ನನಗೆ ನಾನೆ ಕೇಳಿಕೊಂಡೆ
ನಿನಗೆ ಯಾವ ಬಣ್ಣ ಇಷ್ಟ?

ಗೊರಟೆ, ಗುಲಾಬಿ, ಸೇವಂತಿಗೆ
ದಾಸವಾಳ, ಕನಕಾಂಬರ, ಮಲ್ಲಿಗೆ
ಹೆಣೆದು ನಿಂತವು
ಅನ್ನಿಸಿತು:
ಆಯ್ಕೆ ಬಹಳ ಕಷ್ಟ.


ಹುಲಿ, ಕರಡಿ, ಆನೆ, ಅಳಿಲು?
ಜಿಂಕೆ, ಕೊಕ್ಕರೆ, ಕಾಜಾಣ, ನವಿಲು?
ನನಗೆ ನಾನೆ ಕೇಳಿಕೊಂಡೆ
ನಿನಗೆ ಯಾವುದು ಇಷ್ಟ?

ರೆಕ್ಕೆ, ಪುಕ್ಕ, ಕಿವಿ, ಕೊರಳು
ನಡಿಗೆ, ಉಡಿಗೆ, ಕೆನೆತ, ಕುಣಿತ
ಕಣ್ಣು ತುಂಬಿದವು
ಅನ್ನಿಸಿತು:
ಆಯ್ಕೆ ಬಹಳ ಕಷ್ಟ.


ವ್ಯಂಗ್ಯ, ಕಟಕಿ, ಕೋಪ, ತಾಪ
ಮದ ಮತ್ಸರ, ದಾಹ, ದುಃಖ
ಕವಣೆ ಬೀಸಿದವು
ನನಗೆ ನಾನೇ ಕೇಳಿಕೊಂಡೆ
ನೀನು ಯಾವುದರಿಂದ ಮುಕ್ತ?

ಮದ್ದು ಗುಂಡು, ಫಿರಂಗಿ, ಕತ್ತಿಗಳು
ಪರಸ್ಪರ ಸೆಣೆಸಾಡಿದವು
ಅನ್ನಿಸಿತು ಆಯ್ಕೆ ಬಹಳ ಕಷ್ಟ.


ಮುಗಿಲು ಮುಟ್ಟತ್ತಾ ಇತ್ತು ಒಂದು ಮರ
ಅದರಲ್ಲೊಂದು ಹಕ್ಕಿ-ಹಾಡು
ನೆಲಕ್ಕಂಟಿಕೊಂಡಿತ್ತು ಒಂದು ಪೊದೆ
ಅದರಲ್ಲೊಂದು ಇರವೆ-ಗೂಡು.

ಹುಲ್ಲುಕಡ್ಡಿಯನ್ನೂ ನೋಯಿಸಲಾರೆ
ಹಾಗಂದಿದ್ದನಲ್ಲವೆ ಬುದ್ಧ?

ಆ ಹುಲ್ಲು ಕಡ್ಡಿಗೆ
ತಲೆಬಾಗಿ ವಂದಿಸಿದೆ
ಮೆಲ್ಲಗೆ ತುಟಿ ಸೋಕಿಸಿ ಮುತ್ತು ಕೊಟ್ಟೆ.
*****