ಸಾಮಾಜಿಕ ಜವಾಬ್ದಾರಿಯ ಪ್ರಶ್ನೆ

ಸಾಮಾಜಿಕ ಜವಾಬ್ದಾರಿಯ ಪ್ರಶ್ನೆ

ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ತೀವ್ರ ಚರ್ಚೆಗೆ ಒಳಗಾದದ್ದು, ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ಈ ಪ್ರಶ್ನೆ ಚರ್ಚಿತವಾಗಿದ್ದರೂ ವಾಗ್ವಾದದ ತೀವ್ರತೆಯನ್ನು ಪಡೆದದ್ದು ಬಂಡಾಯ ಸಾಹಿತ್ಯ ಚಳವಳಿಯ ಹುಟ್ಟಿನ ನಂತರವೆಂಬುದನ್ನು ಗಮನಿಸಬೇಕು. ಯಾಕೆ ಹೀಗಾಯಿತು? ಬಂಡಾಯ ಸಾಹಿತ್ಯ ಚಳವಳಿಯು ವ್ಯಕ್ತಿಪ್ರಜ್ಞೆಯ ಸ್ಥಾನದಲ್ಲಿ ಸಮೂಹ ಪ್ರಜ್ಞೆಯನ್ನು ಪ್ರತಿಪಾದಿಸಿದ್ದು ಒಂದು ಪ್ರಮುಖ ಕಾರಣವೆನ್ನಬಹುದಾಗಿದೆ. ನನ್ನ ದೃಷ್ಟಿಯಲ್ಲಿ ಸಮೂಹ ಪ್ರಜ್ಞೆಯೆನ್ನುವುದು ವ್ಯಕ್ತಿಪ್ರಜ್ಞೆಯ ನಿರಾಕರಣೆಯಲ್ಲ. ಸಮೂಹ ಪ್ರಜ್ಞೆಯ ಭಾಗವಾಗಿ ವ್ಯಕ್ತಿಪ್ರಜ್ಞೆಯನ್ನು ಪರಿಭಾವಿಸುವ ಪರಿಕಲ್ಪನೆ ಪ್ರಬಲವಾದಂತೆ ವ್ಯಕ್ತಿಪ್ರಜ್ಞೆಯನ್ನು ನಿರಾಕರಿಸಲಾಗುತ್ತದೆಯೆಂದು ಅನಗತ್ಯವಾಗಿ ಭಾವಿಸಲಾಯಿತು. ಸಮೂಹ ಪ್ರಜ್ಞೆಯನ್ನು ಒಳಗೊಳ್ಳದ ವ್ಯಕ್ತಿಪ್ರಜ್ಞೆಯು ವೈಪರೀತ್ಯವಾಗುತ್ತದೆಯೆಂಬುದು ನನ್ನಂಥವರ ಅಭಿಪ್ರಾಯ. ವ್ಯಕ್ತಿಪ್ರಜ್ಞೆಯೊಳಗೆ ಸಮೂಹ ಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಯೊಳಗೆ ವ್ಯಕ್ತಿಪ್ರಜ್ಞೆ- ಪೂರಕವಾಗಿ ಕೆಲಸ ಮಾಡುವುದು ಸಾಧ್ಯ. ಆಗ ಅತಿರೇಕಾತ್ಮಕ ವೈಪರೀತ್ಯಗಳು ವಿಜೃಂಭಿಸುವುದಿಲ್ಲ.

ಸಮಾಜ ಮತ್ತು ಸಾಹಿತ್ಯದ ಸಂಬಂಧವನ್ನು ಗಾಢಗೊಳಿಸುವ ಮತ್ತು ವ್ಯಕ್ತಿ ವೈಪರೀತ್ಯಗಳನ್ನು ಹೋಗಲಾಡಿಸುವ ಸಾಧನವಾಗಿಯೇ ಸಾಮಾಜಿಕ ಜವಾಬ್ದಾರಿಯ ಪರಿಕಲ್ಪನೆ ಮುಖ್ಯವಾಗುತ್ತದೆ. ಆದರೆ ಬಂಡಾಯ ಸಾಹಿತ್ಯ ಚಳವಳಿಯು ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯನ್ನು ಪ್ರತಿಪಾದಿಸತೊಡಗಿದ ಕೂಡಲೆ ವಿಮರ್ಶೆಯ ‘ಪ್ರತಿಷ್ಠಿತ ವಲಯ’ವು – ಇದು ಸಾಹಿತ್ಯದ ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆಯೆಂದು ಪ್ರತಿವಾದ ಮಂಡಿಸಿತು. ಅಷ್ಟೇ ಅಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಪಾದಿಸಿದ ಲೇಖಕರ ಸಾಹಿತ್ಯವನ್ನು ಕಳಪೆಯೆಂದು ಕರೆಯತೊಡಗಿತು.

ಸಾಮಾಜಿಕ ಜವಾಬ್ದಾರಿಯಿಂದ ಬರೆದದ್ದೆಲ್ಲ ಉತ್ತಮ ಸಾಹಿತ್ಯವಾಗುತ್ತದೆಯೆಂದು ತಿಳಿಯುವುದು ಎಷ್ಟು ತಪ್ಪೊ ಸಾಮಾಜಿಕ ಜವಾಬ್ದಾರಿಯನ್ನು ಮುಖ್ಯವೆಂದು ಭಾವಿಸಿ ಬರೆದದ್ದೆಲ್ಲ ಕಳಪೆಯೆಂದು ತಿಳಿಯುವುದೂ ಅಷ್ಟೇ ತಪ್ಪು. ಸಾಮಾಜಿಕ ಜವಾಬ್ದಾರಿ ಮತ್ತು ಸೃಜನಶೀಲ ಸ್ವಾತಂತ್ರ್ಯಗಳು ಪರಸ್ಪರ ವಿರೋಧಿಯೆಂದು ತಿಳಿಯುವುದೇ ಮೊದಲ ತಪ್ಪು. ಸಾಮಾಜಿಕ ಜವಾಬ್ದಾರಿಯ ಕಲ್ಪನೆಯಿಂದ ಕಲಾತ್ಮಕತೆಗೆ ತೊಡಕಾಗುವುದು ಅಥವಾ ಆಗದೆ ಇರುವುದು ಆಯಾ ಲೇಖಕರ ಸೃಜನಶೀಲ ಶಕ್ತಿ ಮತ್ತು ಸೋಪಜ್ಞತೆಯನ್ನು ಅವಲಂಬಿಸಿದೆ. ಆದರೂ ವ್ಯಕ್ತಿಪ್ರಜ್ಞೆಯೇ ಶ್ರೇಷ್ಠವೆಂದು ಭಾವಿಸಿದವರು ಸಾಹಿತ್ಯದ ಶ್ರೇಷ್ಠತೆಗೂ ಅದೇ ಮಾನದಂಡವನ್ನು ಅನ್ವಯಿಸಿ, ಸಾಮಾಜಿಕ ಜವಾಬ್ದಾರಿಯ ಕಲ್ಪನೆಯನ್ನೇ ನಿರಾಕರಿಸಹೊರಟದ್ದು ವಿಮರ್ಶೆಯ ಒಂದು ವಿಪರ್ಯಾಸ. ಸಾಮಾಜಿಕ ಜವಾಬ್ದಾರಿ ಮತ್ತು ಸೃಜನಶೀಲತೆಗಳ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸುವುದು ಬೇರೆ; ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿಪ್ರಜ್ಞೆಯ ಹೆಸರಿನಲ್ಲಿ ಸಮುದಾಯ ಸ್ವಾತಂತ್ರ್ಯ ಮತ್ತು ಸಮೂಹ ಪ್ರಜ್ಞೆಯನ್ನು ನಿರಾಕರಿಸುವುದು ಬೇರೆ. ಕೆಲವರು ಸಾಮಾಜಿಕ ಜವಾಬ್ದಾರಿಯನ್ನು ಘೋಷಿಸಿಕೊಂಡು ಬರೆಯುತ್ತಾರೆ; ಇನ್ನು ಕೆಲವರು ಘೋಷಿಸಿಕೊಳ್ಳದೆ ಸಾಮಾಜಿಕ ಜವಾಬ್ದಾರಿಯಿಂದ ಬರೆಯುತ್ತಾರೆ. ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯನ್ನು ಘೋಷಿಸಿಕೊಂಡರು ಅಥವಾ ಘೋಷಿಸಿಕೊಳ್ಳಲಿಲ್ಲ – ಎನ್ನುವುದನ್ನು ಗುಮಾನಿಯಿಂದ ನೋಡುವ ಬದಲು ‘ಮಾನಸಿಕ ದೂರ’ವನ್ನು ಕಾಪಾಡಿಕೊಂಡು ವಿಮರ್ಶಿಸುವ ಸ್ವಾಸ್ಥ್ಯ ಮುಖ್ಯವಾಗುತ್ತದೆ ಆದರೆ ಕೆಲವು ವಿಮರ್ಶಕರು ಸ್ವಾಸ್ಥ್ಯದಿಂದ ಮಾನಸಿಕ ದೂರವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು!

ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಗಳು ಸಾಹಿತಿಯ ಸೃಜನಶೀಲ ಸ್ವಾತಂತ್ರ್ಯಕ್ಕೆ ಮತ್ತು ಸಾಹಿತ್ಯದ ಕಲಾತ್ಮಕತೆಗೆ ಧಕ್ಕೆ ತರುತ್ತವೆಯೆಂಬುದು ನಿಜವಾದರೆ, ಪಂಪನ ಪ್ರತಿಭೆ, ವಚನ ಸಾಹಿತ್ಯದ ಸೋಪಜ್ಞತೆ, ಕುಮಾರವ್ಯಾಸನ ಕಲಾತ್ಮಕತೆಗಳೆಲ್ಲ ಸುಳ್ಳಾಗಬೇಕಾಗುತ್ತದೆ. ನನ್ನ ಅಭಿಪ್ರಾಯದಲ್ಲಿ ಕನ್ನಡದ ಪ್ರಮುಖ ಕವಿಗಳಿಗೆಲ್ಲ ಸಾಮಾಜಿಕ ಜವಾಬ್ದಾರಿಯಿತ್ತು; ಕಾಲದ ಒತ್ತಡಗಳಿದ್ದವು ಆದರೂ ಅವರು ಅತ್ಯುತ್ತಮವಾದದ್ದನ್ನು ಅಭಿವ್ಯಕ್ತಿಸಿದರು. ವಚನಸಾಹಿತ್ಯ ಮತ್ತು ದಾಸ ಸಾಹಿತ್ಯಗಳಂತೂ ವ್ಯಕ್ತಿಯನ್ನು ಮೀರಿದ ಸಾಮುದಾಯಿಕ ಮೌಲ್ಯಗಳನ್ನು ಒಳಗೊಂಡಿದ್ದವು; ತಾತ್ವಿಕ ಬದ್ಧತೆಯ ಪಂಥಗಳಾಗಿದ್ದವು. ಹೀಗಿದ್ದರೂ ವಚನ ಸಾಹಿತ್ಯವನ್ನು ಶ್ರೇಷ್ಠವೆಂದು ಗುರುತಿಸಿಲ್ಲವೆ? ದಾಸ ಸಾಹಿತ್ಯದ ಮೌಲ್ಯವನ್ನು ಗಮನಿಸಿಲ್ಲವೆ? ರಾಜನ ಆಸ್ಥಾನದಲ್ಲಿದ್ದು ಅದನ್ನು ಮೀರಿದ ಪಂಪ ನಮ್ಮ ಮಹಾಕವಿಯಲ್ಲವೆ? ಕೃಷ್ಣ ಕೇಂದ್ರಿತವಾಗಿದ್ದರೂ ಅಪೂರ್ವ ಸಾಮಾಜಿಕ-ರಾಜಕೀಯ ಸೂಕ್ಷ್ಮಗಳನ್ನು ಅನುಭವಕ್ಕೆ ತಂದ ಕುಮಾರವ್ಯಾಸ ಶ್ರೇಷ್ಠ ಕವಿಯಲ್ಲವೆ. ಸಾಮಾಜಿಕ ಜವಾಬ್ದಾರಿ, ಬದ್ಧತೆ ಮತ್ತು ತಾತ್ವಿಕ ಪಂಥಗಳ ಪ್ರತಿಪಾದನೆಯಿಂದ ಇಡೀ ಕನ್ನಡ ಸಾಹಿತ್ಯ ಕುಬ್ಜವಾಯಿತೆ? ಹಾಗಿದ್ದರೆ ಸಾವಿರ ವರ್ಷದ ಪ್ರಮುಖ ಕವಿ-ಕಾವ್ಯಗಳನ್ನು ಯಾಕೆ ಹಾಡಿ ಹೊಗಳಲಾಗುತ್ತದೆ?

ಇನ್ನೊಂದು ಮುಖ್ಯ ಸಂಗತಿಯನ್ನು ಇಲ್ಲಿ ಹೇಳಬಹುದು : ವಚನ ಸಾಹಿತ್ಯವನ್ನು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸಹ ‘ಶಾಸ್ತ್ರ’ವೆಂದು ಪರಿಗಣಿಸಲಾಗುತ್ತಿತ್ತು. ‘ಸಾಹಿತ್ಯ’ ಎಂದು ಕರೆದಿರಲಿಲ್ಲ. ‘ವಚನಧರ್ಮಸಾರ’ವೆಂದು ಪ್ರಸಿದ್ಧವಾದದ್ದು ಸಾಹಿತ್ಯಾಭ್ಯಾಸಿಗಳಿಗೆಲ್ಲ ಗೊತ್ತು. ಆದರೆ ಇದೇ ವಚನ ಸಾಹಿತ್ಯವು ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ‘ಶ್ರೇಷ್ಠ’ವೆಂದು ಪ್ರಸಿದ್ಧಿಪಡೆಯಿತು. ‘ವಚನ’ಕ್ಕೆ ವಿಮರ್ಶೆಯ ನ್ಯಾಯ ಸಿಕ್ಕಿತು. ಬಹುಶಃ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಯಿಂದ ಬರೆಯುವವರ ಸಾಹಿತ್ಯಕ್ಕೆ ಸರಿಯಾದ ವಿಮರ್ಶೆ ಬರಲು ಸಾಕಷ್ಟು ಕಾಯಬೇಕಾಗಬಹುದು, ಅಥವಾ ಅಂಥವರು ಕಾಲವಾಗಬೇಕಾಗಬಹುದು. ಯಾಕೆಂದರೆ ನಮ್ಮಲ್ಲಿ ‘ಕಾಲಾನಂತರ’ ಮತ್ತು ‘ಕಾಲವಾದ ನಂತರ’ ಪ್ರಶಂಸೆಗಳು ಬರುವುದು ಒಂದು ರೂಢಿ! ಅದೊಂದು ಸಂಪ್ರದಾಯ! ವಿಮರ್ಶೆಯಾದರೂ ಈ ಸಂಪ್ರದಾಯವನ್ನು ಯಾಕೆ ಮೀರಬೇಕು!

ಈ ಚರ್ಚೆಯ ಸಂದರ್ಭದಲ್ಲಿ ಮ್ಯಾಕ್ಸ್ ಅಡ್ಹೆರೆತ್ ಎಂಬ ವಿಮರ್ಶಕರ ವಿಶ್ಲೇಷಣೆಯೊಂದನ್ನು ಉದಾಹರಿಸುವುದು ಸೂಕ್ತ. ಸಾಮಾಜಿಕ ಜವಾಬ್ದಾರಿ, ಬದ್ಧತೆ ಮತ್ತು ಸೃಜನಶೀಲ ಸ್ವಾತಂತ್ರ್ಯದ ಸಂಬಂಧಾಂತರಗಳನ್ನು ಗಂಭೀರವಾಗಿ ಚರ್ಚಿಸುವ ಇವರು ‘ಆಧುನಿಕ ಪರಿಕಲ್ಪನೆಯಾದ ಬದ್ಧತೆಯ ಮಹತ್ವಪೂರ್ಣ ಮೂಲತತ್ವವೆಂದರೆ, ಅದು ಸಾಹಿತ್ಯದ ಅವಿಭಾಜ್ಯ ಅಂಗವಾಗಿರುವುದೇ ಆಗಿದೆ’ ಎಂದು ಪ್ರತಿಪಾದಿಸುತ್ತಾರೆ. ಅಲ್ಲದೆ ಚರ್ಚೆ – ಚಿಂತನೆಗಳ ನಂತರ ‘ಸಾಹಿತಿಯ ಸೃಜನಶೀಲ ಸ್ವಾತಂತ್ರ್ಯವು ಸಾಮಾಜಿಕ ಜವಾಬ್ದಾರಿಯ ವಿವೇಕದಿಂದ ಹೊರತಾದದ್ದಲ್ಲ ಎಂಬ ನಿಲುವಿಗೆ ಬರುತ್ತಾರೆ. ಸೃಜನಶೀಲ ಸ್ವಾತಂತ್ರ್ಯ ಮತ್ತು ಸಾಮಾಜಿಕ ಬದ್ಧತೆಗಳನ್ನು ಬೇರ್ಪಡಿಸಲಾಗದೆಂದು ತಿಳಿಸುತ್ತಾರೆ. ಈ ಎರಡು ನೆಲೆಗಳು – ಅಂದರೆ ಸೃಜನಶೀಲ ಸ್ವಾತಂತ್ರ್ಯ ಮತ್ತು ಬದ್ಧತೆಗಳು – ತನಗೆತಾನೆ ಒಂದಾಗಿರುವ ಪರಿಕಲ್ಪನೆಗಳೆಂದು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಚಿಂತಕ ಪ್ಲಖನೋವ್ ಅವರ ಅಭಿಪ್ರಾಯವೊಂದನ್ನು ಪ್ರಸ್ತಾಪಿಸಬಹುದು : ‘ಸಾಹಿತಿಗಳು, ಕಲಾಕಾರರು ಸಮಾಜದಿಂದ ಮನ್ನಣೆ ಮತ್ತು ಗೌರವವನ್ನು ನಿರೀಕ್ಷಿಸುತ್ತಾರೆ. ಸಮಾಜವು ಸಾಹಿತಿ-ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತದೆ’ – ಪ್ಲಖನೋವ್ ಮಾತುಗಳ ಸಾರವಿದು. ಈ ಮಾತುಗಳು ಸ್ವಯಂ ವ್ಯಾಖ್ಯಾನಿತವಾಗಿವೆ; ಅರ್ಥಪೂರ್ಣವಾಗಿವೆ. ನಮ್ಮ ವಿಮರ್ಶೆ ಇದನ್ನು ಅರ್ಥಮಾಡಿಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಕಲ್ಪನೆಯನ್ನು ಪೂರ್ವಾಗ್ರಹದಿಂದ ನೋಡುವ ಬದಲು ಸಾಹಿತ್ಯ ಸೃಷ್ಟಿಯ ವಿವಿಧ ಸಾಧ್ಯತೆ ಹಾಗೂ ಸಮಸ್ಯೆಗಳ ಹಿನ್ನೆಲೆಯಲ್ಲಿ ಚರ್ಚಿಸುವ ಆರೋಗ್ಯಕರ ದೃಷ್ಟಿಬೇಕು.

ನನ್ನ ನಿಲುವು ಸ್ಪಷ್ಟ : ಸೃಜನಶೀಲ ಸ್ವಾತಂತ್ರ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಗಳು ಒಟ್ಟಿಗೇ ಇರಲು ಸಾಧ್ಯ; ಒಟ್ಟಿಗೇ ಇರಬೇಕು. ಕನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳು ಈ ಮೂರು ಅಂಶಗಳನ್ನು ಒಳಗೊಂಡೇ ಬೆಳೆದಿವೆ; ಬೆಳೆಯುತ್ತಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧ ಬಂದ ದಾರಿಯಲ್ಲಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೫

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys