ಇಬ್ಬರು ಗಂಡ ಹೆಂಡತಿ ಇದ್ದರು. ಅವರಿಗೆ ಒಬ್ಬಾಕೆ ಮಗಳು ಮಾತ್ರ ಇದ್ದಳು. ಅಪ್ಪ ಹೊಲಕ್ಕೆ ಹೋಗಿದ್ದಾನೆ; ತಾಯಿ ಹೊರಕ್ಕೆ ಹೋಗಿದ್ದಾಳೆ;  ಮಗಳು ಹೊರಕಡಿಗೆ ಹೊರಟಳು. ಹಾದಿಯಲ್ಲೊಂದು ಮನೆ.  ಮನೆಯಲ್ಲಿ ಗಂಡನಾದವನು ಹೆಂಡತಿಗೆ ಹೊಡೆಯುತ್ತಿದ್ದನು. ಮೂರುದಿನಕ್ಕೊಮ್ಮೆ ಗಂಡ ಯಾಕೆ ಹೊಡೆಯುತ್ತಾನೆ? “ಯಾರು ತಿಂತಾರವ್ವ ಹೀಂಗ ದಿನಾಲು ಏಟು.  ಏನು ತಪ್ಪಮಾಡ್ಯಾಳೋ ಯಾನೋ” ಎನ್ನುತ್ತಾಳೆ ಆ ಮಗಳು. ಅಷ್ಟರಲ್ಲಿ-

ರಾಜ ಮತ್ತು ಪ್ರಧಾನಿ ಇಬ್ಬರೂ ವಾಯುಸೇವನೆಗೆ ಹೊರಟಿದ್ದರು.  ಪ್ರಧಾನಿಯು, ರಾಜನಿಗೆ ಸಲಹೆ ಕೊಡುತ್ತಾನೆ . “ಈ ಹೆಣ್ಣುಮಗಳು ಚಪಲ ಕಾಣಿಸುತ್ತಾಳೆ. ಇವಳನ್ನು ಮಾತಾಡಿಸಿ ನೋಡೋಣ.”

ಆ ಹೆಣ್ಣು ಮಗಳಿಗೆ ರಾಜನು ಕೇಳುತ್ತಾನೆ – “ಮಗಾ  ನಿಮ್ಮಪ್ಪ ನಿಮ್ಮವ್ವ ಎಲ್ಲಿ ಹೋಗಿದ್ದಾರೆ?,’

ಆಕೆ ಮರು ನುಡಿಯುತ್ತಾಳೆ . “ಅಪ್ಪ ಮುಳ್ಳಿನ ಗಿಡಕ್ಕೆ ಮುಳ್ಳುಹಚ್ಚಲು ಹೋಗಿದ್ದಾನೆ.  ಖಂಡದೊಳಗಿನ ಖಂಡ ತೆಗೆಯಲು ಅವ್ವ ಹೋಗಿದ್ದಾಳೆ.”

“ಯಾವಾಗ ಬರುತ್ತಾರೆ?”

“ಹೊತ್ತು ಮುಳಗಿದ ಬಳಿಕ ಬರುತ್ತಾರೆ.”

ವಿಷಯ ಗೊತ್ತಾಯಿತು. ಅವರು ಬಂದ ಬಳಿಕ ಕೇಳೋಣ ಎಂದು ರಾಜ ಹಾಗೂ ಪ್ರಧಾನಿ ಮಾತಾಡಿಕೊಂಡರು.

ತಾನು ಬದನೀಗಿಡಕ್ಕೆ ಮುಳ್ಳು ಹಚ್ಚಲು ಹೋಗಿದ್ದೇನೆಂದು ತಂದೆ ಹೇಳಿದನು.  ಹಡೆಯಲಾರದೆ ನಿಂತ ಹೆಂಗುಸಿಗೆ ಹಡೆಯುವಂತೆ ಮಾಡಲು ಹೋಗಿದ್ದೆನೆಂದು ತಾಯಿ ಹೇಳಿದಳು.

ಆ ಹುಡಿಗೆಯ ಮಾತಿನ ಕುಶಲತೆಯನ್ನು ರಾಜನು ಮೆಚ್ಚುವನು.  ಅವಳನ್ನು ಮದುವೆಯಾಗಬೇಕೆಂದು ನಿರ್ಧರಿಸುತ್ತಾನೆ. ಮಗಳು ಸುಖದಲ್ಲಿ ಬೀಳುವಳೆಂದು ಅಪ್ಪನು ಮಗಳನ್ನು ರಾಜನಿಗೆ ಕೊಟ್ಟು ಲಗ್ನ ಮಾಡುತ್ತಾನೆ.

ರಾಜನು ಹೊಸ ಹೆಂಡತಿಯನ್ನು ಕರಕೊಂಡು ತನ್ನ ಮನೆಗೆ ಹೋಗುತ್ತಾನೆ.  ಆ ಬಳಿಕ ಹೆಂಡತಿಗೆ ಹೇಳುತ್ತಾನೆ. . “ನಾವು ಬೇಟೆಯಾಡಲು ಎಕ್ಕೀಹಳ್ಳಿಗೆ ಹೋಗುವೆವು.  ನಾವು ಬರುವಷ್ಟರಲ್ಲಿ ಹನ್ನೆರಡು ಮೊಟ್ಟೆ ನಡೆಯುವ ಭಾರಂಗ ಭಾವಿನ್ನು ಅಗಿಸಬೇಕು. ಜವೆ, ಮೆಂತಿ ಬೆಳೆಯುವ ತೋಟ ತಯಾರಮಾಡಬೇಕು. ಈಗ ಮಲ್ಲಿಗೆ ಹೂವಿನ ಸರವನ್ನು ನಿನ್ನ ಕೊರಳಲ್ಲಿ ಹಾಕುತ್ತೇನೆ.  ಅದು ಬಾಡಲಾರದಂತೆ ನೋಡಿಕೊಳ್ಳಬೇಕು.  ಅಲ್ಲಿಗೆ ನಾ ಬರುವಷ್ಟರಲ್ಲಿ ಒಂದು ಮಗಾ ತಯಾರು ಮಾಡಬೇಕು.”

ರಾಜನು ಬೇಟಿಯಾಡುವುದಕ್ಕೆ ಹೊರಟುಹೋದನು.

ಹೆಂಡತಿ ಕೈಯೊಳಗಿನ ದುಡ್ಡು ಖರ್ಚುಮಾಡಿ ಭಾರಂಗ ಭಾವಿ ಅಗಿಸಿದಳು.  ಮೊಟ್ಟೆ ಹೊಡಿಸಿ ತೋಟ ತಯಾರಿಸಿದಳು.

ಗಂಡಸಿನ ವೇಷತೊಟ್ಟು ಹೊರಬಿದ್ದಳು. ಒಂದೂರು ದಾಟಿ ಸಾಗಿದಾಗ ಅಲ್ಲಿಯ ರಾಜನ ಮಗಳು ಮಾಡಿದ ಶಪಥವನ್ನು ಕೇಳಿದಳು. ಏನೆಂದರೆ ಹರಿಯುವ ನೀರ ಮೇಲಿಂದ ಕುದುರೆ ಹಾರಿಸಬೇಕು. ಕುದುರೆಗೆ ನೀರು ತಟ್ಟಬಾರದು.  ಅಂಥವರನ್ನು ತಾನು ಲಗ್ನವಾಗುತ್ತೇನೆ. ಗಂಡು ವೇಷದಲ್ಲಿದ್ದ ಆ ಹೆಣ್ಣು ಮಗಳು
ನದಿಯ ಮೇಲಿಂದ ಕುದುರೆಯನ್ನು ಹಾರಿಸಿದಳು, ಚಬಕಿಯಿಂದ ಹೊಡೆದು, ಅದನ್ನು ಕಂಡು ರಾಜನ ಮಗಳು ಲಗ್ನ ಮಾಡಿಕೊಳ್ಳಲು ಮುಂದೆ ಬಂದಳು.

ಪಂಥ ಗೆದ್ದಿದ್ದಕ್ಕಾಗಿ ಪಂಥದ ವೀಳೆ ಎತ್ತಲಾಯಿತು.  ಆದರೆ ಸದ್ಯಕ್ಕೆ ತನ್ನದೊಂದು ವ್ರತವಿದೆಯೆಂದೂ ಈಗ ಲಗ್ನವಾಗಲಾರೆನೆಂದೂ ಪುರುಷ ವೇಷದಲ್ಲಿರುವ ಹೆಣ್ಣು ಮಗಳು ಹೇಳಿದಳು. ಆದ್ದರಿಂದ ತಲವಾರದೊಂದಿಗೆ ಲಗ್ನ ಮಾಡಿಕೊಳ್ಳುವುದು ನಿರ್ಧಾರವಾಯಿತು. ಹಾದಿಗೆ ಹಂದರ ಹಾಕಿ, ಬೀದಿಗೆ ಛಳಿ ಕೊಟ್ಟು ಲಗ್ನವನ್ನು ಸಡಗರದಿಂದ ಮಾಡಿದರು. ರಾಜನ ಮಗಳನ್ನು ಕರಕೊಂಡು ಮುಂದೆ ಹೊರಟಳು.

ಎಕ್ಕೆಹಳ್ಳಿಯನ್ನು ತಲುಪಿದಳು. ಅಲ್ಲಿ ಪಾತರನಾಚು ನಡೆದಿದೆಯೆಂದು ಕೇಳಿ, ನೆಟ್ಟಗೆ ಪಾತರದವರ ಮನೆಗೆ ಹೋದಳು. ದಾಸಿಯರಿಗೆ ಹೇಳಿ ಸೀರೆ ಸಜ್ಜುಮಾಡಿಕೊಂಡಳು. ಬೇಟೆಯಾಡಲು ಹೋದ ರಾಜನ ಎದುರಿಗೆ ನಾಚು ಮಾಡಿದಳು. ರಾಜನು ಹೆಂಡತಿಯನ್ನು ಗುರುತಿಸಲಿಲ್ಲ. ರಾಜನ ಮನಸ್ಸು ಮಾತ್ರ ಅವಳ ಮೇಲೆ ಕುಳಿತಿತು.  ರಾಜನ ಸಂಗಡ ಅಂದಿನ ರಾತ್ರಿ ಕಳೆದಳು.  ಬೆಳಗಾಗುತ್ತಲೆ ರಾಜನ ಕೈಯೊಳಗಿನ ಉಂಗುರ ಮತ್ತು ಶಾಲು ಇಸಗೊಂಡಳು. ಅಲ್ಲದೆ ಒಂದು ಚೀಟಿಯನ್ನೂ ಬರೆಯಿಸಿಕೊಂಡಳು. ಎರಡು ರಾತ್ರಿ ಕಳೆದು ಆಕೆ ಹೋಗಿಬಿಟ್ಟಳು.

ರಾಜಧಾನಿಗೆ ಬಂದಳು. ಅಷ್ಟರಲ್ಲಿ ಭಾರಂಗ ಭಾವಿ ತಯಾರಾಗಿದೆ. ರಾಜನ ಮಗಳನ್ನು ಒಳಗೆ ಕರೆದು ಸೀರೆಯುಟ್ಟು ನುಡಿಯುತ್ತಾಳೆ . “ತಂಗೀ, ಇದೆಲ್ಲ ನಮ್ಮದೇ. ಹಿಂದಿನಿಂದ ನಿನ್ನ ಗಂಡ ಹೊರಟಿದ್ದಾನೆ. ನೀ ಏನೂ ಕಾಳಜಿ ಮಾಡಬೇಡ.”

ಮುಂದೆ ಬಯಕೆ ಕಾಡಹತ್ತಿ ಒಂಬತ್ತು ತಿಂಗಳು ಒಂಬತ್ತು ದಿನಕ್ಕೆ ಗಂಡು ಮಗುವಿಗೆ ಜನ್ಮವಿತ್ತಳು.

ರಾಜ ಬರುತ್ತಾನೆ. ಹೆಂಡತಿಯನ್ನು ಯಾವಾಗ ಹೊಡೆಯಲಿ ಎಂದು ವಿಚಾರಿಸುತ್ತಾನೆ.  ತಾನು ಬರುವಷ್ಟರಲ್ಲಿ ಭಾರಂಗ ಭಾವಿ ತಯಾರಾಗಿದೆ.  ಅರಮನೆಗೆ ಬರುತ್ತಾನೆ. “ನೀರು ಕುಡಿಯಿರಿ” ಎಂದು ಹೆಂಡತಿ  ಸ್ವಾಗತಿಸುತ್ತಾಳೆ.  ಬಗಲಲ್ಲಿ ಕೂಸು ಇದೆ.  ಕೊರಳೊಳಗಿನ ಹೂವಿನ ಸರ ಬಾಡಿಲ್ಲ.

“ಮಗಾ ಎಲ್ಲಿಯದು”, ಎಂದು ಹೆಂಡತಿಗೆ ಕೇಳಿದರೆ ಆಕೆ ಉಂಗುರ, ಶಾಲು ಮತ್ತು ಚೀಟಿ ತೋರಿಸುತ್ತಾಳೆ.  ರಾಜನ ಸಿಟ್ಟೆಲ್ಲ ಇಳಿಯುತ್ತದೆ.  ತಾನು ಕೇಳಿದಂತೆ ಮೊಟ್ಟೆಯಿದೆ;  ತೋಟವಿದೆ. ಮೇಲೆ ಮಗನೂ ಹುಟ್ಟಿದ್ದಾನೆ. ಇಷ್ಟಾದ ಬಳಿಕ ಹೊಸ ರಾಜಕುಮಾರಿಯೂ ಬಂದಿದ್ದಾಳೆ.

ಈ ಎಲ್ಲ ಐಶ್ವರ್ಯವನ್ನು ನೋಡಿ ರಾಜನಿಗೆ ಸುಖವೆನಿಸಿತು. ಹೆಂಡತಿಯನ್ನು ಹೊಡೆಯುವ ವಿಚಾರವನ್ನು ಬಿಟ್ಟುಕೊಟ್ಟನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)