ರಂಗಣ್ಣನ ಕನಸಿನ ದಿನಗಳು – ೧೦

ರಂಗಣ್ಣನ ಕನಸಿನ ದಿನಗಳು – ೧೦

ರಾಜಕೀಯ ಮುಖಂಡರು

ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ತಕ್ಕ ರೀತಿ ಪರಿಹಾರಮಾಡುತ್ತಿದ್ದುದು ; ಗ್ರಾಮಸ್ಥರ ಸಹಕಾರ, ಪಾರ ಶಾಲೆಗೆ ಸ್ಲೇಟುಗಳು, ಪುಸ್ತಕಗಳು ಮೊದಲಾದುವು ದಾನವಾಗಿ ಬಂದದ್ದು – ಇವುಗಳೆಲ್ಲ ಸ್ವಲ್ಪ ಉತ್ಪ್ರ್‍ಏಕ್ಷೆಯಿಂದಲೇ ಪ್ರಚಾರವಾದುವು. ಆ ದಿನದ ಸಭೆಗೆ ಬಂದಿದ್ದ ಉಪಾಧ್ಯಾಯರಿಗೆ ತಮ್ಮ ಗ್ರಾಮಗಳಲ್ಲಿ ಸಹ ಹೀಗೆಯೇ ಸಭೆಗಳನ್ನು ಏರ್ಪಡಿಸಿ ಹೆಸರು ಪಡೆಯಬೇಕೆಂಬ ಆಕಾಂಕ್ಷೆ ಹುಟ್ಟಿ ಕೊಂಡಿತು. ಅಲ್ಲಲ್ಲಿ ಗ್ರಾಮಪಂಚಾಯತಿ ಚೇರ್ಮನ್ನರುಗಳಿಗೆ ಈ ವಿಚಾರದಲ್ಲಿ ಸ್ವಲ್ಪ ಸ್ಪರ್ಧೆ ಸಹ ಏರ್ಪಟ್ಟಿತು.

ಆವಲಹಳ್ಳಿಯ ಸಭೆ ನಡೆದು ಎರಡು ವಾರ ಆಗಿರಬಹುದು, ರಂಗಣ್ಣ ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದಾಗ ಬೈರಮಂಗಲದ ಶಾನುಭೋಗರು ಮತ್ತು ಇತರ ಮೂವರು ಕಮಿಟಿ ಮೆಂಬರುಗಳು ಬಂದು ಕಾಣಿಸಿಕೊಂಡರು. ಮುಂದಿನ ತಿಂಗಳಿನಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಬೈರಮಂಗಲದಲ್ಲಿ ಸೇರಿಸಬೇಕೆಂದೂ ಇನ್ಸ್ಪೆಕ್ಟರ್ ಸಾಹೇಬರು ಖಂಡಿತವಾಗಿ ದಯಮಾಡಿಸಬೇಕೆಂದೂ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ರಂಗಣ್ಣ ಮೊದಲು ಆ ಗುಡಿಸಿಲಿನ ಮಾತೆತ್ತಿ ತನ್ನ ಮಾತನ್ನು ತಪ್ಪದೆ ನಡೆಸಿಕೊಟ್ಟುದಕ್ಕಾಗಿ ಅವರಿಗೆಲ್ಲ ಕೃತಜ್ಞತೆಯನ್ನು ತಿಳಿಸಿದನು. ಬಳಿಕ ಶಂಕರಪ್ಪನನ್ನು ಕರೆದು ಅವನ ಕೈಗೆ ಒಂದು ಚೀಟಿಯನ್ನು ಕೊಟ್ಟನು. ಆ ಚೀಟಿಯನ್ನು ನೋಡಿ ಕೊಂಡು ಶಂಕರಪ್ಪ ಹೊರಕ್ಕೆ ಬಂದನು. ರಂಗಣ್ಣನು ಉಪಾಧ್ಯಾಯರ ಸಂಘದ ವಿಚಾರ ಮಾತನಾಡುತ್ತ, ‘ಸಭೆಯನ್ನೇನೋ ಬೈರಮಂಗಲದಲ್ಲಿ ಸೇರಿಸಬಹುದು. ಆದರೆ ಗ್ರಾಮ ಪಂಚಾಯತಿಯವರು ಸಂಘವನ್ನು ಆಹ್ವಾನಿಸುವ ಬಗ್ಗೆ ನಿರ್ಣಯವನ್ನು ಮಾಡಿ ಕಚೇರಿಗೆ ಕಳಿಸಿ ಕೊಡಬೇಕು ಮತ್ತು ಊಟದ ವ್ಯವಸ್ಥೆಗೆ ಏರ್‍ಪಾಡು ಏನು ಎಂಬುದನ್ನು ತಿಳಿಸಬೇಕು’ ಎಂದು ಹೇಳಿದನು.

ಶ್ಯಾನುಭೋಗರು, ‘ಇವರೆಲ್ಲ ಪಂಚಾಯತಿಯ ಮೆಂಬರುಗಳು ಸ್ವಾಮಿ! ನಾನೇ ಅದರ ಚೇರಮನ್ನು, ನಾಳೆಯೇ ನಿರ್ಣಯಮಾಡಿ ಕಳಿಸುತ್ತೇವೆ, ಊಟದ ಏರ್‍ಪಾಟನ್ನು ತಾವು ಆಲೋಚಿಸಬೇಕಾದ್ದಿಲ್ಲ. ನಾವು ವ್ಯವಸ್ಥೆ ಮಾಡುತ್ತೇವೆ’ ಎಂದರು.

ಶ್ಯಾನುಭೋಗರೇ ! ನಾನು ಆವಲಹಳ್ಳಿಯಲ್ಲಿ ಪಟ್ಟ ಫಜೀತಿ ನಿಮಗೆ ತಿಳಿಯದು, ಎಷ್ಟು ಪಂಗಡಗಳು ! ಎಷ್ಟು ಅಂಕಣಗಳು ! ಅದರ ಸಹವಾಸ ಸಾಕಪ್ಪ ಎನ್ನಿಸಿತು. ಆ ಊಟದ ಏರ್ಪಾಟನ್ನು ಬಿಟ್ಟು ಬಿಡುವುದಕ್ಕೆ ಮನಸ್ಸಿಲ್ಲ. ಒಂದು ದಿನವಾದರೂ ಮೇಷ್ಟ್ರುಗಳು ಸಂತೋಷದಿಂದಿರಲಿ ಎಂದು ನನಗೆ ಆಶೆ. ಎರಡನೆಯದಾಗಿ, ಇ೦ಥಾ ಕೂಟಗಳಲ್ಲಿ ವಿನೋದ ಮತ್ತು ಸಲಿಗೆ ಇರುತ್ತವೆ. ಆಯಾ ಮೇಷ್ಟ್ರುಗಳ ನಿಜಸ್ವರೂಪ ಪ್ರಕಾಶಕ್ಕೆ ಬರುತ್ತದೆ. ನಾವು ಬರಿಯ ಇನ್ಸ್ಪೆಕ್ಟರು ಮತ್ತು ಉಪಾಧ್ಯಾಯರು ಎಂಬ ನೌಕರಿಯ ಸಂಬಂಧ ತಪ್ಪಿ ನಾವು ಮನುಷ್ಯರು, ಸ್ನೇಹಪರರು ಎಂಬ ಭಾವನೆ ಬೆಳೆಯುತ್ತದೆ. ಪ್ರೇಮ ಗೌರವಗಳು ವೃದ್ಧಿಯಾಗುತ್ತವೆ. ಇವುಗಳ ಪರಿಣಾಮ: ನಮ್ಮಿಂದ ಹೇಳಿಸಿಕೊಳ್ಳದೆಯೆ ಮೇಸ್ಟ್ರುಗಳು ತಂತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿಕೊಂಡು ಹೋಗುತ್ತಾರೆ. ಆದ್ದರಿ೦ದ ಈ ಏರ್ಪಾಟನ್ನು ಕೈ ಬಿಡಲು ಇಷ್ಟವಿಲ್ಲ.’

‘ಒಳ್ಳೆಯದು ಸ್ವಾಮಿ ! ತಮ್ಮಿಷ್ಟದಂತೆಯೇ ನಡೆಸುತ್ತೇವೆ. ತಾವು ಖಂಡಿತವಾಗಿಯೂ ನಮ್ಮಲ್ಲಿ ಸಭೆ ಸೇರಿಸಬೇಕು.’

ಈ ಮಾತುಕತೆಗಳಾಗುತ್ತಿದ್ದಾಗ ಹೋಟಲು ಮಾಣಿ ಐದು ತಟ್ಟೆ ಗಳಲ್ಲಿ ತಿಂಡಿಯನ್ನೂ ಐದು ಲೋಟಗಳಲ್ಲಿ ಕಾಫಿಯನ್ನೂ ತಂದು ಮೇಜಿನ ಮೇಲಿಟ್ಟನು. ಆಗ ಶ್ಯಾನುಭೋಗರ ಜೊತೆಯಲ್ಲಿ ಬಂದಿದ್ದ ಮೆಂಬರುಗಳು, ಇವೇನು ಸ್ವಾಮಿ ! ನಂಗೆಲ್ಲ ಕಾಫಿ ತಿಂಡಿ ! ಚೆನ್ನಾಯಿತು!’ ಎಂದರು. ರಂಗಣ್ಣನು, ‘ನಿಮ್ಮ ಹಳ್ಳಿಗೆ ನಾನು ಬಂದರೆ ಬಾಳೆಯ ಹಣ್ಣು ಎಳನೀರು ಮೊದಲಾದುವುನ್ನು ತಂದುಕೊಡುತ್ತೀರಲ್ಲ! ನಿಮಗೆ ಇಲ್ಲಿ ಕಾಫಿಯನ್ನಾದರೂ ನಾನು ಕೊಡ ಬೇಡವೇ ? ಎಂದು ಹೇಳಿದನು. ಗೌಡರು, ‘ಸ್ವಾಮಿ ! ನಾವು ಬೆಳೆಯೋ ಪದಾರ್ಥ ತಮಗೆ ಕೊಡುತ್ತೇವೆ, ತಾವು ಹೋಟೇಲಿನಿಂದ ದುಡ್ಡು ಕೊಟ್ಟು ತರಿಸುತ್ತೀರಿ. ಅಷ್ಟೇ ನೋಡಿ ವೆತ್ಯಾಸ’ ಎಂದರು. ಅವರ ಜಾಣತನವನ್ನು ನೋಡಿ ರಂಗಣ್ಣನಿಗೆ ಆಶ್ಚರ್ಯವಾಯಿತು. ಉಪಾಹಾರವಾಯಿತು. ಬೈರಮಂಗಲದಲ್ಲಿ ಮುಂದಿನ ಸಭೆ ಎಂದು ತಾತ್ಕಾಲಿಕವಾಗಿ ಗೊತ್ತಾಯಿತು. ಪಂಚಾಯತಿಯ ನಿರ್ಣಯ ಬಂದಮೇಲೆ ತಾರೀಕನ್ನು ಖಚಿತವಾಗಿ ತಿಳಿಸುವುದಾಗಿ ರಂಗಣ್ಣನು ಹೇಳಿ ಅವರನ್ನು ಬೀಳ್ಕೊಟ್ಟನು.

ಅರ್ಧ ಗಂಟೆ ಕಳೆದಮೇಲೆ ಬೇರೆ ಕೇಂದ್ರದ ಉಪಾಧ್ಯಾಯ ಸಂಘದ ಕಾರ್ಯದರ್ಶಿ ಇಬ್ಬರು ಗೌಡರುಗಳನ್ನು ಜೊತೆಮಾಡಿಕೊಂಡು ಬಂದು ಇನ್ಸ್ಪೆಕ್ಟರಿಗೆ ನಮಸ್ಕಾರ ಮಾಡಿದನು. ಅವರು ಬಂದ ಉದ್ದೇಶ ಬೈರಮಂಗಲದವರ ಉದ್ದೇಶದಂತೆಯೇ ಇತ್ತು. ಅವರಿಗೂ
ಸಮಯೋಚಿತವಾಗಿ ಉತ್ತರ ಹೇಳಿ, ‘ಪಂಚಾಯತಿಯಿಂದ ನಿರ್ಣಯ ಮಾಡಿ ಕಳಿಸಿಕೊಡಿ. ಮುಂದೆ ಒಂದು ತಿಂಗಳಲ್ಲಿ ನಿಮ್ಮ ಹಳ್ಳಿಯಲ್ಲಿ ಸಭೆ ಸೇರಿಸುತ್ತೇವೆ’ ಎಂದು ಕಳುಹಿಸಿ ಕೊಟ್ಟದ್ದಾಯಿತು. ಆ ವೇಳೆಗೆ ಶಂಕರಪ್ಪ ಬಂದು, ‘ಸ್ವಾಮಿಯವರಿಗೆ ನಾಳೆ ಮೀಟಂಗಿದೆ. ಬೆಂಗಳೂರಿಗೆ ಹೋಗಬೇಕೆಂದು ಹೇಳಿದ್ದಿರಿ’ ಎಂದು ಜ್ಞಾಪಿಸಿದನು.

ರಂಗಣ್ಣನು ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ರೈಲು ಹತ್ತಿ ಹೊರಟನು. ಒಂದೆರಡು ಸ್ಟೇಷನ್ನುಗಳನ್ನು ರೈಲು ದಾಟಿದಮೇಲೆ ಮುಂದಿನ ಸ್ಟೇಷನ್ನಿನಲ್ಲಿ ಕಲ್ಲೇಗೌಡರು ರೈಲು ಹತ್ತಿದರು. ಅವರು ದೊಡ್ಡ ಜಮೀನ್ದಾರರು, ಒಕ್ಕಲಿಗರ ಮುಖಂಡರಲ್ಲೊಬ್ಬರು ; ಮತ್ತು ನ್ಯಾಯವಿಧಾಯಕ ಸಭೆಯ ಸದಸ್ಯರು. ದಿವಾನರು ಮತ್ತು ಕೌನ್ಸಿಲರುಗಳ ಹತ್ತಿರ ಅವರ ಓಡಾಟ ಹೆಚ್ಚು, ಸರ್ಕಾರದ ನೌಕರರು – ಭಾರಿ ಸಂಬಳ ತಗೆಯುವ ಅಧಿಕಾರಿಗಳು ಸಹ ಅವರನ್ನು ಕಂಡರೆ ಹೆದರುತಿದ್ದರು. ರಂಗಣ್ಣ ಕುಳಿತಿದ್ದ ಗಾಡಿಯನ್ನೇ ಅವರು ಅವ್ಯಾಜವಾಗಿ ಹತ್ತಿದರು. ಒಬ್ಬರೊಬ್ಬಗೆ ನಮಸ್ಕಾರಗಳು ಕುಶಲ ಪ್ರಶ್ನೆಗಳು ಆದುವು. ಕಲ್ಲೇಗೌಡರ ಬಾಯಿ ಸುಮ್ಮನಿರಲಿಲ್ಲ.
“ಏನು! ಇನ್‍ಸ್ಪೆಕ್ಟರವರ ಕಾರುಬಾರು ದರ್ಬಾರು ರೇಂಜಿನಲ್ಲೆಲ್ಲ ಬಹಳ ಕೋಲಾಹಲಕರವಾಗಿದೆ!’

‘ದರ್ಬಾರು ನಡೆಸುವುದಕ್ಕೆ ನಾವೇನು ದಿವಾನರೇ ? ಮಹಾ ರಾಜರೇ ? ಸ್ಕೂಲ್ ಇನ್ಸ್‍ಪೆಕ್ಟರ್ ಏನು ದರ್ಬಾರು ನಡೆಸಬಹುದು?’

‘ಮೊನ್ನೆ ಆವಲಹಳ್ಳಿಯಲ್ಲಿ ಭಾರಿ ದರ್ಬಾರು ನಡೆಯಿತಂತೆ ! ಔತಣ ಸಮಾರಾಧನೆಗಳು ಇತ್ಯಾದಿ. ಬಡ ರೈತರನ್ನು ಸುಲಿಗೆ ಮಾಡುವುದಕ್ಕೆ ನಿಮ್ಮ ಇಲಾಖೆಯೂ ಕೈ ಹಾಕಿದ ಹಾಗಿದೆ.’

‘ದೊಡ್ಡ ಬೋರೇಗೌಡರ ಆತಿಥ್ಯ ಉಪಾಧ್ಯಾಯರಿಗೆ ನಡೆಯಿತು. ಅವರೇನೂ ಬಡವರಲ್ಲ. ಅವರು ಕೊಟ್ಟ ಆಹ್ವಾನದ ಮೇಲೆ ಅಲ್ಲಿ ಸಭೆ ಸೇರಿತ್ತು.’

‘ಆಹಾ! ಆ ಬೋರೇಗೌಡನ್ನ ನಮ್ಮ ಮೇಲೆ ಎತ್ತಿ ಕಟ್ಟೋ ಹಂಚಿಕೆ ತೆಗೆದಿದ್ದೀರೇನೋ ? ನಿಮ್ಮ ಬೇಳೆ ಕಾಳು ನಮ್ಮ ಹತ್ತಿರ ಬೇಯೋದಿಲ್ಲ.’

‘ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. – ನೀವು ಆಹ್ವಾನ ಕೊಟ್ಟರೆ ನಿಮ್ಮ ಹಳ್ಳಿಯಲ್ಲಿ ಸಭೆ ಸೇರಿಸುತ್ತೇನೆ. ಅದಕ್ಕೇನು!’

‘ಮೆಲ್ಲನೆ ನನಗೂ ಬಲೆ ಬೀಸುತ್ತಿರೋ ? ನಿಮ್ಮ ಮಾತಿಗೆ ಮರುಳಾಗುವುದಕ್ಕೆ ನಾನೇನೂ ದೊಡ್ಡ ಬೋರೇಗೌಡ ಅಲ್ಲ.’

‘ಕಲ್ಲೇಗೌಡರೇ ! ನಾನೇತಕ್ಕೆ ಬಲೆ ಬೀಸಲಿ, ನೀವು ದೊಡ್ಡ ಮುಖಂಡರು, ನಮ್ಮ ಸಂಸ್ಥಾನ ಮುಂದಕ್ಕೆ ಬರಬೇಕೆಂದು ಹಾರೈಸುತಿರುವವರು. ನ್ಯಾಯವಿಧಾಯಕ ಸಭೆಯ ಸದಸ್ಯರಾಗಿದ್ದೀರಿ, ವಿದ್ಯಾಭಿವೃದ್ದಿ ಬಹಳ ಮುಖ್ಯವಾದ ವಿಚಾರ. ತಮ್ಮಂಥವರು ಮುಂದೆ ಬಂದು ನಮಗೆ ಸಹಾಯ ಮಾಡಬೇಕು. ನಾವು ದುಡಿಯುವುದಾದರೂ ಏತಕ್ಕೆ ? ನನಗೇನು ? ಎರಡು ದಿನ ಈ ರೇ೦ಜು, ನಾಳೆ ವರ್ಗವಾದರೆ ಬೇರೆ ರೇಂಜು, ಅಸಿಸ್ಟೆಂಟ್ ಇನ್‍ಸ್ಪೆಕ್ಟರ್‌ಗಿರಿ ತಪ್ಪಿದರೆ ಮೇಷ್ಟರ ಕೆಲಸ ಸಿದ್ದವಾಗಿದೆ. ನಮ್ಮ ಸ್ಕೂಲುಗಳು ಬಹಳ ಹೀನಸ್ಥಿತಿಯಲ್ಲಿವೆಯಲ್ಲ. ನಮ್ಮ ಉಪಾಧ್ಯಾಯರಲ್ಲಿ ತಿಳಿವಳಿಕೆ ಮತ್ತು ಶಿಸ್ತು ಇಲ್ಲವಲ್ಲ. ಅವುಗಳನ್ನು ಏರ್ಪಡಿಸಿ ಯತ್ಕಿಂಚಿತ್ ಸೇವೆ ಸಲ್ಲಿಸೋಣವೆಂದು ಇದ್ದೇನೆ. ಈಗ ತಿಪ್ಪೂರು ದೊಡ್ಡ ರಸ್ತೆಯ ಪಕ್ಕದಲ್ಲಿರುವ ವಿಷಯ ನಿಮಗೆ ತಿಳಿದಿದೆ. ಅಲ್ಲಿಯ ಸ್ಕೂಲು ಕಟ್ಟಡ ನಿಮಗೆ ಸೇರಿದ್ದು. ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ ಬೇರೆ ತೆಗೆದುಕೊಳ್ಳುತ್ತಾ ಇದ್ದೀರಿ. ಆ ಕಟ್ಟಡಕ್ಕೆ ರಿಪೇರಿ ಆಗಿ ಎಷ್ಟೋ ವರ್ಷಗಳಾಗಿವೆ. ನೆಲ ಕಿತ್ತು ಹೋಗಿದೆ, ಗೋಡೆಗಳು ಬಿರುಕು ಬಿಟ್ಟಿವೆ, ಮೇಲ್ಚಾವಣೆ ಕುಗ್ಗಿ ಹೋಗಿ ಯಾವಾಗಲೋ ಮಕ್ಕಳ ಮೇಲೆ ಬೀಳುತ್ತದೆ. ನಮ್ಮ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಅದನ್ನು ಆಕ್ಷೇಪಿಸಿದ್ದಾರೆ. ತಮಗೂ ಸಮಾಚಾರ ತಿಳಿದಿದೆ. ಆದರೂ ರಿಪೇರಿ ಮಾಡಿ ಕೊಟ್ಟಿಲ್ಲ. ತಮ್ಮಂಥವರು ನಮ್ಮೊಡನೆ ಸಹಕರಿಸದಿದ್ದರೆ ಹೇಗೆ?’

‘ಏನಾಗಿದೆ ಆ ಕಟ್ಟಡಕ್ಕೆ ? ದಿವಾನರಿಗೆ ಅಲ್ಲಿ ಅಟ್ ಹೋಮ್ (At-home) ಕೊಟ್ಟರೆ ಕುಣಿಯುತ್ತಾ ಬಂದು ಕೂತು ಕೋತಾರೆ!’

ಆ ಮಾತುಗಳನ್ನು ಕೇಳಿ ರಂಗಣ್ಣನಿಗೆ ಬಹಳ ವ್ಯಸನವಾಯಿತು. ದಿನವೂ ಬೆಳಗಾದರೆ ದಿವಾನರ ಮನೆಯ ಬಾಗಿಲು ಕಾಯುತ್ತಾ ಚಿಲ್ಲರೆ ಪಲ್ಲರೆ ಸಹಾಯಕ್ಕಾಗಿ ಅನುಸರಿಸಿಕೊಂಡು ಹೋಗುವ ಈ ಮುಖಂಡರು ಅವರ ಬೆನ್ನ ಹಿಂದೆ ಎಷ್ಟು ಲಾಘವದಿಂದ ಅವರನ್ನು ಕಾಣುತ್ತಾರೆ ! ಆಡುತ್ತಾರೆ ! ಇಂಥವರೆಲ್ಲ ಮುಖಂಡರೆಂದು ಪ್ರತಿಷ್ಠೆ ಗಳಿಸಿರುವುದರಿಂದ ದೇಶ ಹೀನಸ್ಥಿತಿಗೆ ಬರುತ್ತಿದೆ. ನಿಜವಾದ ಮುಖಂಡರು ತಲೆಯೆತ್ತಿ ಕೊಂಡಾಗ ಇವರೆಲ್ಲ ಬಾಲ ಮುದುರಿಕೊಂಡು ಕುಂಯ್‌ಗುಟ್ಟುತ್ತ ಓಡುವ ನಾಯಿಗಳಂತೆ ಪಲಾಯನ ಮಾಡುತ್ತಾರೆ. ಎರಡು ದಿನ ಇವರ ಪ್ರಾಬಲ್ಯ; ನಡೆಯಲಿ. ಇದೂ ಒಂದು ನಾಟಕ ಎಂದು ಮನಸ್ಸಿನಲ್ಲಿ ಹೇಳಿ ಕೊಳ್ಳುತ್ತಾ ಸುಮ್ಮನಾದನು. ಕಲ್ಲೇಗೌಡರಿಗೆ ಬಹಳ ಸಂತೋಷವಾದಂತೆ ಕಂಡಿತು.

‘ಇನ್‌ಸ್ಪೆಕ್ಟರು ಬೆಂಗಳೂರಿಗೋ?’

‘ಹೌದು. ಅಲ್ಲಿ ಕೆಲಸವಿದೆ.’

‘ನೀವೆಲ್ಲ ತರ್ಡ್ ಕ್ಲಾಸಿನಲ್ಲಿ ಪ್ರಯಾಣ ಮಾಡದೆ ಸೆಕೆಂಡ್ ಕ್ಲಾಸ್ ಜಂಬ ಏಕೆ ಮಾಡುತ್ತೀರಿ?’

ರಂಗಣ್ಣನಿಗೆ ಸ್ವಲ್ಪ ಕೋಪ ಬಂತು. ಯಾವ ಕ್ಲಾಸಿನಲ್ಲಿ ಪ್ರಯಾಣ ಮಾಡಿದರೆ ಇವರಿಗೇನು ? ಎನ್ನಿಸಿತು.

‘ಕಲ್ಲೇಗೌಡರೇ ! ನಮ್ಮ ಗೌರವ ಉಳಿಸಿಕೊಳ್ಳುವುದಕ್ಕಾಗಿಯೂ ಸೌಕರ್ಯಕ್ಕಾಗಿಯೂ ಸೆಕೆಂಡ್ ಕ್ಲಾಸಿನಲ್ಲಿ ಪ್ರಯಾಣ ಮಾಡುತ್ತೇವೆ. ಜೊತೆಗೆ ನಾನು ಸರ್ಕಾರದ ಕೆಲಸಕ್ಕಾಗಿ ಹೋಗುತ್ತಿದ್ದೇನೆ. ನನಗೆ ಸೆಕೆಂಡ್ ಕ್ಲಾಸಿನ ರೈಲು ಚಾರ್ಜನ್ನು ಸರಕಾರದವರು ನಿಗದಿ ಮಾಡಿದ್ದಾರೆ. ಅವರು ಕೊಡುವ ಖರ್ಚನ್ನು ಮಿಗಿಸಿಕೊಳ್ಳದೆ ಈ ಪ್ರಯಾಣ ಮಾಡುತ್ತಿದ್ದೇನೆ. ಸರ್ಕಾರದವರು ಫಸ್ಟ್ ಕ್ಲಾಸ್ ಪ್ರಯಾಣದ ಖರ್ಚು ಕೊಟ್ಟರೂ ಸಹ ನಿಮ್ಮ ಸ್ನೇಹಿತರುಗಳಂತೆ ತಲೆಗೆ ಮುಸುಕು ಹಾಕಿಕೊಂಡು ತರ್ಡ್ ಕ್ಲಾಸಿನ ಸೀಟಿನ ಕೆಳಗೆ ಮಲಗಿಕೊಂಡು ಕಳ್ಳ ಪ್ರಯಾಣವನ್ನು ನಾನು ಮಾಡುವುದಿಲ್ಲ.’

‘ಯಾರು ನನ್ನ ಸ್ನೇಹಿತರು ? ಹಾಗೆ ಕಳ್ಳ ಪ್ರಯಾಣ ಮಾಡಿದ್ದನ್ನು ನೀವೇನು ಕಂಡಿದ್ದೀರಾ?’ ಎಂದು ಜಬರ್ದಸ್ತಿನಿಂದ ಕಲ್ಲೇಗೌಡರು ಗರ್ಜಿಸಿದರು.

‘ಹೆಸರನ್ನು ಏಕೆ ಹೇಳಲಿ? ನಿಮಗೆಲ್ಲ ತಿಳಿದ ವಿಷಯ. ಕಣ್ಣಿನಿಂದ ನೋಡಿ, ಬಾಯಿಂದ ಮಾತಾಡಿಸಿ ಎಲ್ಲ ಆಗಿದೆ.’

‘ಏನು ಬಹಳ ಜೋರ್ ಮೇಲಿದ್ದೀರಿ?’

‘ನಿಮ್ಮೊಡನೆ ನನಗೇಕೆ ಮಾತು ? ಈಗ ನಡೆದಿರುವುದೇ ಸಾಕು. ಕಾಲು ಕೆರೆದುಕೊಂಡು ಜಗಳಕ್ಕೆ ನಾನು ಬಂದಿಲ್ಲ. ಇರುವ ವಿಷಯ ತಿಳಿಸಿದೆ. ಅಷ್ಟೇ.’

ಮುಂದಕ್ಕೆ ರಂಗಣ್ಣ ಮಾತನಾಡಲಿಲ್ಲ. ಬೆಂಗಳೂರು ಬರುವವರೆಗೂ ಇಬ್ಬರೂ ಮೌನವಾಗಿದ್ದರು. ರೈಲು ಬಂಡಿ ಇಳಿಯುತ್ತ? ನಮಸ್ಕಾರ ಕಲ್ಲೇಗೌಡರಿಗೆ ! ಮುಂದಾದರೂ ಸ್ನೇಹ ಬೆಳೆಯಲಿ, ಎಂದು ರಂಗಣ್ಣ ಹೇಳಿ ಹೊರಟು ಬಂದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣಕಾಂತ
Next post ಎದೆಯುಂಡ ಭಾವ

ಸಣ್ಣ ಕತೆ

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys