ಸಾಂಪ್ರದಾಯಿಕ ಮೂಲದಿಂದ ದೊರೆಯುವ ವಿದ್ಯುತ್ ಇಂದಿನ ಜನಸಂಖ್ಯೆಗೆ ಏನೂ ಸಾಕಾಗುವದಿಲ್ಲ ಅಸಂಪ್ರಾದಾಯಿಕವಾಗಿ ವಿದ್ಯುತ್ತು ಉತ್ಪಾದಿಸಿ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಲು ಇತ್ತೀಚೆಗೆ ಅನೇಕ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಯಿಸಿ ಸಫಲರಾಗಿದ್ದಾರೆ. ಬದಲಿ ಇಂಧನದ ಅಗತ್ಯತೆಗೆ ನಿಧಾನವಾಗಿ ಉತ್ತರಗಳು ದೊರೆಯುತ್ತಲಿವೆ. 1998ರಲ್ಲಿ ಕರ್ನಾಟಕ ರಾಜ್ಯದ ತುಮಕೂರಿನ 4 ಹಳ್ಳಿಗಳು ಹೊಂಗೆ ಎಣ್ಣೆಯಿಂದ ವಿದ್ಯುತ್ ಉತ್ಪಾದಿಸಿಕೊಂಡು ಬೆಳಗುತ್ತಿವೆ. ಎಂದರೆ ಆಶ್ಚರ್ಯವಾಗದಿರದು. ಈಗಾಗಲೇ ಆಸ್ಟ್ರೇಲಿಯಾ, ಪಿಜಿ ಮೊದಲಾದ ದೇಶಗಳಲ್ಲಿ ಡಿಸೆಲ್‌ಗೆ ಬದಲಾಗಿ ಹೊಂಗೆ ಎಣ್ಣೆಯನ್ನು ಬಳಸಲಾಗುತ್ತದೆ. ಸ ಸ್ಟೆನೇಬಲ್ ಟ್ರಾನ್ಸ್ ಫಾರ್ಮೇಶನ್ ಆಫ್ ರೂರಲ್ ಏರಿಯಾಸ್ ಎಂಬ ಸಂಸ್ಥೆಯ ನೇತೃತ್ವದಲ್ಲಿ ತುಮಕೂರಿನ ಪ್ರದೇಶದ ಹಳ್ಳಿಗಳಲ್ಲಿ ವಿದ್ಯುತ್‌ನ್ನು ಉತ್ಪಾದಿಸಿ ಉಪಯೋಗಿಸಿಲಾಗುತ್ತದೆ. ಮೇಲ್ಕಂಡ ಕಂಪನಿಯು ಹಳ್ಳಿಗಳಲ್ಲಿ ವಿಫಲವಾಗಿ ಹೊಂಗೆ ಮರಗಳನ್ನು ಬೆಳೆಸುವ ಯೋಜನೆ ಹಾಕಿದೆ. ಒಂದು ಮರದಿಂದ ಕನಿಷ್ಟ 90 ಕೆ.ಜಿ.ಗಳಷ್ಟು ತೈಲ ಬೀಜ ದೊರೆಯುತ್ತಿದ್ದು ಈ ಬೀಜದಿಂದ ಎಣ್ಣೆ ತಯಾರಿಸಿ ವಿದ್ಯುತ್‌ನ್ನು ಪಡೆಯಲಾಗುತ್ತದೆ. ಪ್ರತಿಯೊಂದು ಕುಟುಂಬವೂ 20 ರಿಂದ 30 ಹೊಂಗೆ ಮರಗಳನ್ನು ಹೊಂದಿದ್ದರೆ ಇಡೀ ವರ್ಷ ಆ ಮನೆಗೆ ಬೆಳಕಿನ ಭಾಗ್ಯ ಕಲ್ಪಿಸಿದಂತೆ ಈ ಎಲ್ಲ ಮರಗಳಿಂದ ತಿಂಗಳಿಗೆ 120 ಯುನಿಟ್‌ಗಳಷ್ಟು ವಿದ್ಯುತ್‌ನ್ನು ಸಂಪಾದಿಸಬಹುದು.

ಇದರಂತೆ ನಮ್ಮ ದೇಶದ ಪ್ರಮುಖ ಆಹಾರವಾದ ಭತ್ತವು ಆಕ್ಕಿಯಾಗಿ ಪರಿವರ್ತನೆಗೊಂಡು, ಉಳಿದ ಸಿಪ್ಪೆಯು ಉಪ ಉತ್ಪನ್ನವಾಗಿ ಬಳಕೆಗೆ ಬರುತ್ತದೆ. ವಿಶಾಖ ಪಟ್ಟಣದಲ್ಲಿರುವ ”ಘನ ವ್ಯರ್ಥ ವಸ್ತು ಸಂಶೋಧನೆ ಮತ್ತು ಪರಿಸರ ಸಂರಕ್ಷಣೆ ಸಂಸ್ಥೆಯ ನಿರ್ದೇಶಕರಾದ ಕಾಳಿದಾಸರ ಪ್ರಕಾರ ಭತ್ತದ ಸಿಪ್ಪೆಯನ್ನು ವಿದ್ಯುತ್ ಶಕ್ತಿ ಉತ್ಪಾದನೆಯಾಗಿ ಬಳಸಿಕೊಂಡಲ್ಲಿ ದೇಶದ ಸಮಗ್ರ ಚಿತ್ರವೇ ಬದಲಾಗುತ್ತದೆಂದು ಹೇಳುತ್ತಾರೆ. ಒಂದು ಮೆಗಾವಾಟ್ ಸಾಮರ್ಥ್ಯದ ಭತ್ತದ ಸಿಪ್ಪೆ ಆಧಾರಿತ ವಿದ್ಯುತ್ ಉತ್ಪಾದನಾ ಘಟಕವು 70 ಲಕ್ಷ ಯುನಿಟ್‌ಗಳ ವಿದ್ಯುತ್‌ನ್ನು ಪಡೆಯಬಹುದೆಂದು ಪ್ರಯೋಗಗಳಿಂದ ದೃಢಪಟ್ಟಿದೆ. ಭತ್ತದ ಸಿಪ್ಪೆಯನ್ನು ಸುಟ್ಟು ಅದರ ಉಷ್ಪತೆಯನ್ನು ಬಳಸಿಕೊಂಡು ವಿದ್ಯುತ್ ತಯಾರಿಸಬಹುದು. ಈ ಕಾರ್ಯದಲ್ಲಿ ಸಿಗುವ ಬೂದಿ ರಾಸಾಯನಿಕ ದೃಷ್ಟಿಯಿಂದ ಅತ್ಯಂತ ಅಮುಲ್ಯವಾದುದಾಗಿದೆ. ಈ ವಿದ್ಯುತ್ ಉತ್ಪಾದನೆಯನ್ನು ಸುಟ್ಟ ಭತ್ತದ ಹೊಟ್ಟಿನ ರಫ್ತಿನಿಂದ ಪಡೆಯಬಹುದೆಂಬ ಸಲಹೆಗಳಿವೆ. ಎಲ್ಲೆಲ್ಲಿ ಭತ್ತದ ಗಿರಣಿಗಳಿವೆಯೋ ಅಂಥಹ ಸ್ವಳಗಳಲ್ಲಿ ರೈತರೆ ಸಹಕಾರಿ ತತ್ವದ ಮೇಲೆ ಸೇರಿಕೊಂಡು ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಊರಿಗೆ ವಿದ್ಯುತ್‌ನ್ನು ಪಡೆಯಬಹುದಾಗಿದೆ.

ಈ ಭತ್ತದ ಹೊಟ್ಟಿನಿಂದ (ಒಂದು ಮೆಗಾವ್ಯಾಟ್‌ನಿಂದ) ತಯಾರಾದ ವಿದ್ಯುತ್ ಉತ್ಪಾದನೆಯು 87,000ರಷ್ಟು, ಜನರಿಗೆ ಸಾಕಾಗುತ್ತದೆ. ಸರಾಸರಿ ಒಂದು ಹಳ್ಳಿಯಲ್ಲಿ ಎರಡು ಸಾವಿರ ಜನರಿದ್ದರೆ ಒಂದು ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಬೆಳಕು ನೀಡಬಹುದು. ಇಂಥಹ ಒಂದು ಕಿರು ಘಟಕಕ್ಕೆ ನಾಲ್ಕುವರೆ ಸಾವಿರ ಟನ್‌ಗಳಷ್ಟು ಸಿಪ್ಪೆಯ ಅಗತ್ಯವಾದರೆ ಇದರಿಂದ 900 ಟನ್‌ಗಳಿಗೂ ಹೆಚ್ಚು ಬೂದಿಯನ್ನು ಪಡೆಯಬಹುದು. ಇದರ ರಫ್ತಿನಿಂದ 20 ಲಕ್ಷ ರೂಪಾಯಿಗಳ ಆದಾಯವಿದೆ. ಈ ಆದಾಯದಿಂದ ಈ ಘಟಕಕ್ಕೆ ಸಂಬಂಧಿಸಿದ ಖರ್ಚನ್ನು ಸರಿದೂಗಿಸಬಹುದು. ಈ ತಂತ್ರ ವ್ಯಾಪಕ ಪ್ರಚಾರ ಪಡೆಯಬೇಕಿದೆ.