ರಂಗಣ್ಣನ ಕನಸಿನ ದಿನಗಳು – ೬

ರಂಗಣ್ಣನ ಕನಸಿನ ದಿನಗಳು – ೬

ಬೋರ್ಡು ಒರಸುವ ಬಟ್ಟೆ

ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ ವಿಷಯಗಳನ್ನೆಲ್ಲ ಕ್ರೋಢೀಕರಿಸಿ ಉಪಾಧ್ಯಾಯರ ತಿಳಿವಳಿಕೆ ಬಗ್ಗೆ ಸರ್ಕ್ಯುಲರುಗಳನ್ನು ರಂಗಣ್ಣ ಕಳುಹಿಸಿದನು. ಉಪಾಧ್ಯಾಯರೊಡನೆ ಏಗುವುದರಲ್ಲಿ, ಅವರಿಗೆ ತಿಳಿವಳಿಕೆ ಕೊಡುವುದು ದೊಡ್ಡ ತೊಂದರೆಯಾಗಿರಲಿಲ್ಲ. ಕೊಟ್ಟ ತಿಳಿವಳಿಕೆಯನ್ನು ಆಚರಣೆಗೆ ತರುವಂತೆ ಮಾಡುವುದೇ ಕಷ್ಟವಾಗಿದ್ದ ಕೆಲಸ. ಹಲವರು ಉಪಾಧ್ಯಾಯರು ಆ ಸರ್ಕ್ಯುಲರ್‌ಗಳನ್ನು ಓದುತ್ತಲೇ ಇರಲಿಲ್ಲ. ಕೆಲವರು ಓದಿದರೂ ಅವುಗಳನ್ನು ಎಲ್ಲಿಯೋ ಪೆಟ್ಟಿಗೆಯಲ್ಲಿ ತುರುಕಿಬಿಡುತ್ತಿದ್ದರು. ದೊಡ್ಡ ದೊಡ್ಡ ಪಾಠಶಾಲೆಗಳಲ್ಲಿ ಮಾತ್ರ ಸರ್ಕ್ಯುಲರ್‌ಗಳನ್ನು ಸರಿಯಾಗಿ ಜೋಡಿ ಸಿಟ್ಟು ಅವುಗಳಲ್ಲಿ ಕೊಟ್ಟಿರುವ ತಿಳಿವಳಿಕೆಯಂತೆ ನಡೆಯಲು ಪ್ರಯತ್ನ ಪಡುತ್ತಿದ್ದರು. ಉಳಿದ ಕಡೆಗಳಲ್ಲಿ ಅವುಗಳ ಕಡೆಗೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ.

ಒಂದು ದಿನ ಬೆಳಗ್ಗೆ ರಂಗಣ್ಣ ಬೈಸ್ಕಲ್ ಮೇಲೆ ಪಾಠ ಶಾಲೆಗಳ ಭೇಟಿಗೆಂದು ಹೊರಟನು. ಏಳೆಂಟು ಮೈಲಿಗಳ ದೂರ ಹೊರಟು ಎರಡು ಮೂರು ಪಾಠಶಾಲೆಗಳನ್ನು ನೋಡಿಕೊಂಡು ಒಳಭಾಗದ ಹಳ್ಳಿಗಳಿಗೆ ಹೋಗುವ ಕಾಡರಸ್ತೆಯಲ್ಲಿ ತಿರುಗಿದನು. ಎರಡು ಮೈಲಿ ಹೋದಮೇಲೆ ಸುದ್ದೇನಹಳ್ಳಿ ಸಿಕ್ಕಿತು. ಪಾಠಶಾಲೆಯ ಹತ್ತಿರ ಹೋಗಿ ಇಳಿದಾಗ ಬಾಗಿಲು ತೆರೆದಿತ್ತು. ಒಳಗೆ ಉಪಾಧ್ಯಾಯನೂ ಹುಡುಗರೂ ಇದ್ದರು. ಬಾಗಿಲ ಪಕ್ಕದಲ್ಲಿ ರಟ್ಟು ಕಾಗದದ ಮೇಲೆ ‘ಪಾಠ ಕಾಲದಲ್ಲಿ ಗ್ರಾಮಸ್ಥರು ಯಾರೂ ಅಪ್ಪಣೆಯಿಲ್ಲದೆ ಒಳಕ್ಕೆ ಬರಕೂಡದು’ ಎಂದು ನೋಟೀಸ್ ಹಾಕಿತ್ತು. ತನ್ನ ಸರ್ಕ್ಯುಲರ್ ಪ್ರಕಾರ ಮೇಷ್ಟ್ರು ಆ ನೋಟೀಸ್ ಹಾಕಿದ್ದುದರ ಬಗ್ಗೆ ರಂಗಣ್ಣನಿಗೆ ಸಂತೋಷವಾಯಿತು. ಬಾಗಿಲ ಬಳಿ ನಿಂತುಕೊಂಡು ನಗುತ್ತಾ, ‘ಮೇಷ್ಟ್ರೇ, ನಾನು ಒಳಕ್ಕೆ ಬರಬಹುದೋ?’ ಎಂದು ಕೇಳಿದನು. ಮೇಷ್ಟ್ರು ಸ್ವಲ್ಪ ಗಾಬರಿಯಾಗಿ, ‘ಬರಬಹುದು ಸ್ವಾಮಿ ! ತಮ್ಮ ಅಪ್ಪಣೆ ಪ್ರಕಾರ ಗ್ರಾಮಸ್ಥರ ತಿಳಿವಳಿಕೆ ಬಗ್ಗೆ ಆ ಬೋರ್ಡನ್ನು ತಗಲು ಹಾಕಿದ್ದೇನೆ, ಅಷ್ಟೇ’ ಎಂದನು. ಒಳಕ್ಕೆ ಪ್ರವೇಶಿಸಿದಾಗ ಮಕ್ಕಳು ಎದ್ದು ನಿಂತುಕೊಂಡು ಕೈ ಮುಗಿದರು. ಹಿಂದೆ ಕಿರಿಚುತ್ತಿದ್ದಂತೆ ‘ನಮಸ್ಕಾರಾ ಸಾರ್’ ಎಂದು ಕಿರಿಚಲಿಲ್ಲ. ಅದನ್ನು ನೋಡಿ ರಂಗಣ್ಣನಿಗೆ ಸಂತೋಷವಾಯಿತು. ಮಕ್ಕಳಿಗೆ ಕೂತು ಕೊಳ್ಳುವಂತೆ ಹೇಳಿದನು.

ಉಪಾಧ್ಯಾಯನಿಗೆ ಸುಮಾರು ನಲವತ್ತೈದು ವರ್ಷ, ಆದರೆ ಕೂದಲು ಆಗಲೇ ನೆರೆತಿತ್ತು. ಗಡ್ಡ ಉದ್ದವಾಗಿ ಬೆಳೆದಿರಲಿಲ್ಲ ; ಆದರೆ ಕ್ಷೌರ ಮಾಡಿಸಿಕೊಂಡು ಮೂರು ತಿಂಗಳು ಆಗಿದ್ದಿರಬಹುದು ಎಂದು ತೋರುತ್ತಿತ್ತು. ಎಣ್ಣೆಗೆಂಪಿನ ಬಣ್ಣ ; ಮಧ್ಯಸ್ಥವಾದ ಎತ್ತರ. ಅಂಗಿ ಎರಡು ಮೂರು ಕಡೆ ಹರಿದಿತ್ತು ; ತಲೆಗೆ ಮಾಸಿದ್ದೊಂದು ರುಮಾಲು. ಮೇಷ್ಟರ ಹೆಸರು ಕೆಂಚಪ್ಪ, ಆತ ಒಕ್ಕಲಿಗ, ರಂಗಣ್ಣನು ಮೇಷ್ಟರನ್ನು ನೋಡಿ, ‘ಮೂರನೆಯ ತರಗತಿಗೆ ಒಂದು ಲೆಕ್ಕ ಹಾಕಿ ಮೇಷ್ಟ್ರೆ ? ಎಂದು ಹೇಳಿದನು. ಆ ಮೇಷ್ಟ್ರು ಕಪ್ಪು ಹಲಗೆಯ ಮೇಲೆ ಹತ್ತಿ ಹತ್ತದಂಥ ಸುಣ್ಣದಿಂದ, 378547896 x 5458945 ಎಂಬುದೊಂದು ಗುಣಾಕಾರದ ಲೆಕ್ಕವನ್ನು ಹಾಕಿದನು. ‘ಮೇಷ್ಟ್ರೆ, ಅಷ್ಟು ದೊಡ್ಡ ಲೆಕ್ಕ ಬೇಡ, ಚಿಕ್ಕದೊಂದು ಲೆಕ್ಕ ಹಾಕಿ. ಮೂರು ಅಂಕಿಗಳಿಗಿಂತ ದೊಡ್ಡದು ಬೇಡ.’

‘ಮಾಡ್ತಾರೆ ಸ್ವಾಮಿ ! ಕಷ್ಟ ಪಟ್ಟು ಹೇಳಿ ಕೊಟ್ಟಿದ್ದೇನೆ. ಸ್ವಾಮಿ ಯವರು ನನ್ನ ಕಷ್ಟ ನೋಡಬೇಕು !?’

‘ಕಷ್ಟಪಟ್ಟು ಹೇಳಿಕೊಟ್ಟಿದ್ದೀರಿ ಮೇಷ್ಟ್ರೇ. ಅಡ್ಡಿಯಿಲ್ಲ. ಆದರೆ ಅವರ ದರ್‍ಜೆಗೆ ಮೀರಿ ಲೆಕ್ಕ ಹಾಕಬಾರದು. ಪಾಠಗಳ ಪಟ್ಟಿಯಲ್ಲಿ ತಿಳಿಸಿರುವಂತೆ ಹೇಳಿಕೊಡಬೇಕು. ಪಾಠಗಳ ಪಟ್ಟಿ ಎಲ್ಲಿ ? ತೆಗೆದು ಕೊಡಿ.’

ಮೇಷ್ಟ್ರು ಪೆಟ್ಟಿಗೆಯಲ್ಲಿ ಹುಡುಕಿ ಹಳೆಯದೊಂದು ಪಟ್ಟಿಯನ್ನು ತೆಗೆದು ಕೊಟ್ಟನು. ಅದರಲ್ಲಿ ಮುದ್ರಿಸಿರುವುದನ್ನು ತೋರಿಸಿ, ಇದನ್ನು ನೀವು ನೋಡಿಲ್ಲವೇ ಮೇಷ್ಟೆ?’ ಎಂದು ರಂಗಣ್ಣ ಕೇಳಿದನು.

‘ಇಲ್ಲ ಸ್ವಾಮಿ ! ನಾನು ಬಡವ, ಆದರೆ ಸುಳ್ಳು ಹೇಳೋ ಮನುಷ್ಯನಲ್ಲ.’

‘ಒಳ್ಳೆಯದು. ಮುಂದೆ ಇದರಲ್ಲಿರುವುದನ್ನೆಲ್ಲ ನೋಡಿ ಕೊಂಡು ಸರಿಯಾಗಿ ಪಾಠಮಾಡಿ ಮೇಷ್ಟ್ರೇ.’

‘ಅಪ್ಪಣೆ ಸ್ವಾಮಿ.’

ರಂಗಣ್ಣನು ಓದುವ ಪಾಠ, ಪದ್ಯಪಾರ ಮೊದಲಾದುವನ್ನು ಸ್ವಲ್ಪ ಪರೀಕ್ಷೆ ಮಾಡಿದನಂತರ ‘ಮೇಷ್ಟ್ರ್‍ಏ! ಉಕ್ತಲೇಖನ ಪಾಠವನ್ನು ಮೂರನೆಯ ತರಗತಿಗೆ ಸ್ವಲ್ಪ ಮಾಡಿ ನೋಡೋಣ’ ಎಂದನು. ಆ ಮೇಷ್ಟ್ರು ಓದುವ ಪುಸ್ತಕದಿಂದ ಒಂದು ಭಾಗವನ್ನು ತೆಗೆದು, ‘ಹೇಳುವುದನ್ನು ಬರೆಯಿರಿ’ ಎಂದು ತಿಳಿವಳಿಕೆ ಕೊಟ್ಟು, ‘ಒಂದು ಆಲದ ಮರದಲ್ಲಿ ಒಂದು ಆಲದ ಮರದಲ್ಲಿ, ಆಯಿತೇ, ಒಂದು ಆಲದ ಮರದಲ್ಲಿ, ಒಂದು ಕಾಗೆ, ಒಂದು ಕಾಗೆ, ಒಂದು ಕಾಗೆ, ಗೂಡು ಕಟ್ಟಿ ಕೊಂಡು, ಗೂಡು ಕಟ್ಟಿ ಕೊಂಡು, ಗೂಡು ಕಟ್ಟಿ ಕೊಂಡು’ ಎಂದು ಮುಂತಾಗಿ ಹೇಳುತ್ತಾ ಹುಡುಗರಿಂದ ಬರೆಯಿಸುತ್ತಿದ್ದನು. ರಂಗಣ್ಣ, ‘ಮೇಷ್ಟ್ರೆ, ಸ್ವಲ್ಪ ನಿಲ್ಲಿಸಿ’ ಎಂದು ಅವನನ್ನು ತಡೆದು ಬೋರ್ಡಿನ ಹತ್ತಿರ ತಾನೇ ಹೋಗಿ ನಿಂತುಕೊಂಡನು. ‘ಬೋರ್ಡ್ ಒರಸುವ ಬಟ್ಟೆ ಕೊಡಿ ಮೇಷ್ಟ್ರೇ?

‘ಸ್ವಾಮಿ!’
‘ಬಟ್ಟೆ ಎಲ್ಲಿ ಮೇಷ್ಟ್ರೆ?’
‘ಸ್ವಾಮಿ ! ಸ್ವಾಮಿ !’ ಎಂದು ನಡುಗುತ್ತ ಆ ಮೇಷ್ಟ್ರು ತಲೆಗಿದ್ದ ರುಮಾಲನ್ನು ತೆಗೆದು ಬೋರ್ಡನ್ನು ಒರಸಿ ಆ ರುಮಾಲನ್ನು ಮೇಜಿನ ಮೇಲಿಟ್ಟು ಬಿಟ್ಟನು! ರಂಗಣ್ಣನಿಗೆ, ‘ನಾನೆಂಥ ಪಾಪ ಮಾಡಿದೆ ದೇವರೇ! ಬಡವನಾದ ಆ ಮೇಷ್ಟರ ರುಮಾಲು ಹಾಳಾಯಿತಲ್ಲ’ ಎಂದು ಬಹಳವಾಗಿ ಮನಸ್ಸು ಕರಗಿಹೋಯಿತು.

‘ಅದೇಕೆ ಹಾಗೆ ಮಾಡಿದಿರಿ ಮೇಷ್ಟ್ರೆ? ಬೋರ್ಡು ಒರಸುವುದಕ್ಕೆ ಅಂಗೈಯಗಲ ಬಟ್ಟೆ ಇಟ್ಟು ಕೊಳ್ಳಬಾರದೇ ? ಸಾದಿಲ್ವಾರು ನಾಲ್ಕಾಣೆ ಇರುತ್ತದೆಯಲ್ಲ.’

‘ಸಾದಿಲ್ವಾರು ಮೊಬಲಗು ಸಾಕಾಗುವುದಿಲ್ಲ ಸ್ವಾಮಿ!’

ರಂಗಣ್ಣನಿಗೂ ಅದೇ ಅಭಿಪ್ರಾಯವಾಗಿತ್ತು. ಒಂಟಿ ಉಪಾಧ್ಯಾಯರಿರುವ ಪಾಠಶಾಲೆಗಳಿಗೆ ತಿಂಗಳಿಗೆ ಎಂಟಾಣೆಯನ್ನಾದರೂ ಸಾದಿಲ್ವಾರಿಗೆ ಕೊಡಬೇಕು. ಅದರಂತೆ ಲೆಕ್ಕ ಮಾಡಿ ಹೆಚ್ಚು ಜನ ಉಪಾಧ್ಯಾಯರಿರುವ ಪಾಠಶಾಲೆಗಳಿಗೂ ಸಾದಿಲ್ವಾರು ಮೊಬಲಗನ್ನು ಹೆಚ್ಚಿಸಬೇಕು ಎಂಬುದು ಅವನ ತೀರ್ಮಾನವಾಗಿತ್ತು. ಆದ್ದರಿಂದ ಆ ವಿಚಾರದಲ್ಲಿ ಮೇಲಕ್ಕೆ ಪುನಃ ಸಿಫಾರಸುಮಾಡಿ, ಒತ್ತಾಯಮಾಡಿ, ಅನುಕೂಲ ಪಡಿಸಬೇಕೆಂದು ನಿರ್ಧರಿಸಿದನು. ಬಳಿಕ ಬೋರ್ಡಿನ ಮೇಲೆ ‘ಕೃಷ್ಣ ಸರ್ಪ,’ ’ಹುತ್ತ’ ಎಂದು ಮಾತುಗಳನ್ನು ಬರೆಯತೊಡಗಿದಾಗ ಹಾಳು ಸೀಮೆಯ ಸುಣ್ಣ ಸರಿಯಾಗಿ ಬರೆಯದೇ ಹೋಯಿತು. ‘ಒಳ್ಳೆಯ ಸೀಮೆಸುಣ್ಣ ಕೊಂಡುಕೊಳ್ಳಬೇಕು ಮೇಷ್ಟ್ರೆ, ಇದೆಲ್ಲೋ ನಾಡು ಸುಣ್ಣ’ ಎಂದು ಹೇಳಿದನು.

‘ಅಪ್ಪಣೆ ಸ್ವಾಮಿ.’

ರಂಗಣ್ಣನು ಕಪ್ಪುಹಲಗೆಯ ಮೇಲೆ ಕ್ಲಿಷ್ಟ ಪದಗಳನ್ನು ಬರೆದು ಮಕ್ಕಳಿಂದ ಅವುಗಳನ್ನು ಓದಿಸಿದನು. ಆಮೇಲೆ ಅವುಗಳನ್ನು ತಮ್ಮ ಕಪ್ಪು ಹಲಗೆಗಳಲ್ಲಿ ಮಕ್ಕಳು ಬರೆಯುವಂತೆ ಹೇಳಿದನು. ಹಾಗೆ ಬರೆದುದನ್ನು ನೋಡಿ ತಪ್ಪಿದ ಮಾತುಗಳನ್ನು ಬೋರ್ಡಿನ ಮೇಲಿರುವ ಮಾತುಗಳ ಸಹಾಯದಿಂದ ನೋಡಿ ಸರಿಪಡಿಸಿಕೊಳ್ಳುವಂತೆ ಹೇಳಿದನು. ಇದಾದ ಮೇಲೆ ಕಪ್ಪು ಹಲಗೆಗಳಲ್ಲಿ ಬರೆದಿರುವುದನ್ನೆಲ್ಲ ಅಳಸಿಬಿಡುವಂತೆ ಹೇಳಿ ತಾನು ಬೋರ್ಡನ್ನು ಒರಸಲು ತನ್ನ ಕರವಸ್ತ್ರಕ್ಕೆ ಕೈ ಹಾಕತೊಡಗಿದಾಗ ಮೇಷ್ಟ್ರು ಒಂದೇ ಬಾರಿಗೆ ಹಾರಿ ಮೇಜಿನ ಮೇಲಿದ್ದ ರುಮಾಲಿಂದ ಆ ಬೋರ್ಡನ್ನು ಒರಸಿಬಿಟ್ಟನು. ‘ಅಯ್ಯೋ ಮೇಷ್ಟ್ರೆ ! ಪುನಃ ರುಮಾಲನ್ನು ಹಾಳುಮಾಡಿಕೊಂಡಿರಲ್ಲಾ ! ಈ ಕೈವಸ್ತ್ರದಿಂದ ನಾನು ಒರಸುತ್ತಿದ್ದೆನೇ. ಇದನ್ನೆ ನಿಮಗೆ ಕೊಟ್ಟು ಬಿಟ್ಟು ಹೋಗುತ್ತೇನೆ. ಬೋರ್ಡು ಒರಸುವುದಕ್ಕೆ ಇಟ್ಟು ಕೊಳ್ಳಿ.’

‘ಸ್ವಾಮಿಯವರ ಸೇವಕ ! ತಾಪೇದಾರ ! ಬಡವ ! ಆದರೆ ಸುಳ್ಳು ಹೇಳೋ ಮನುಷ್ಯ ಅಲ್ಲ. ಕಷ್ಟ ಪಟ್ಟು ಕೆಲಸ ಮಾಡಿದ್ದೇನೆ ಸ್ವಾಮಿ.’

ರಂಗಣ್ಣನು ಉಕ್ತಲೇಖನ ಪಾಠದ ಕ್ರಮವನ್ನು ಆ ಮೇಷ್ಟರಿಗೆ ಚೆನ್ನಾಗಿ ತಿಳಿಸಿಕೊಟ್ಟು, ‘ಇನ್ನು ಮುಂದೆ ನಾನು ಹೇಳಿ ಕೊಟ್ಟ ಕ್ರಮದಲ್ಲಿ ಪಾಠಮಾಡಿ ಮೇಷ್ಟ್ರೇ! ತಪ್ಪುಗಳನ್ನು ಬರೆಯದಂತೆ ನಾವು ಮಕ್ಕಳಿಗೆ ಸಹಾಯಮಾಡಬೇಕು. ಸುಮ್ಮನೆ ಪರೀಕ್ಷೆಯಲ್ಲಿ ಹೇಳಿದಂತೆ ಉಕ್ತಲೇಖನ ಮಾಡಬಾರದು. ಈಗ ಮಕ್ಕಳನ್ನು ಆಟಕ್ಕೆ ಬಿಡಿ ಮೇಷ್ಟ್ರೇ ಎಂದು ಹೇಳಿದನು, ಮಕ್ಕಳೆಲ್ಲ ಆಟಕ್ಕೆ ಹೊರಕ್ಕೆ ಹೋದರು. ರಂಗಣ್ಣನು ಸ್ಕೂಲಿನ ದಾಖಲೆಗಳನ್ನು ನೋಡಬೇಕೆಂದು ಬಯಸಿದಾಗ ಮೇಷ್ಟ್ರು ಎಲ್ಲ ರಿಜಿಸ್ಟರುಗಳನ್ನೂ ತೆಗೆದು ಮೇಜಿನ ಮೇಲಿಟ್ಟನು. ಅಡ್ಮಿಷನ್ ರಿಜಿಸ್ಟರು ಮತ್ತು ಹಾಜರಿ ರಿಜಿಸ್ಟರುಗಳನ್ನು ರಂಗಣ್ಣನು ನೋಡುತ್ತಿದ್ದಾಗ ಮೇಷ್ಟ್ರು ಒಂದು ದೊಡ್ಡ ಲೋಟದಲ್ಲಿ ಕಾಸಿದ ಹಾಲು ಒಂದಿಷ್ಟು ಸಕ್ಕರೆ ಆರೇಳು ಬಾಳೆಯ ಹಣ್ಣುಗಳು, ಹತ್ತು ಹನ್ನೆರಡು ಹಲಸಿನ ಹಣ್ಣಿನ ತೊಳೆಗಳು- ಇವುಗಳನ್ನು ಸರಬರಾಜು ಮಾಡಿಕೊಂಡು ಬಂದು ಮೇಜಿನ ಮೇಲೆ ತಂದಿಟ್ಟನು.

‘ಸ್ವಾಮಿಯವರು ತೆಗೋಬೇಕು. ಬಹಳ ದಣಿದು ಬಂದಿದ್ದೀರಿ. ತಮ್ಮ ಕಾಲದಲ್ಲಿ ಮೇಷ್ಟರಿಗೆಲ್ಲ ಒಳ್ಳೆಯ ತಿಳಿವಳಿಕೆ ಕೊಡುತ್ತಿದ್ದೀರಿ ಸ್ವಾಮಿ ! ನಮ್ಮನ್ನೆಲ್ಲ ಕಾಪಾಡಿಕೊಂಡು ಬರಬೇಕು ಸ್ವಾಮಿ ! ನಾನು ಭಯಸ್ಥ ; ಕಷ್ಟ ಪಟ್ಟು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಸ್ವಾಮಿ!’ ಎಂದು ಉಪಾಧ್ಯಾಯನು ಹೇಳಿದನು. ರಂಗಣ್ಣನಿಗೆ ಈ ಹಾಲು ಹಣ್ಣುಗಳ ನಿವೇದನೆ ಅಭ್ಯಾಸವಾಗಿ ಹೋಗಿತ್ತು. ಯಥಾಶಕ್ತಿ ಅವುಗಳನ್ನು ಸ್ವೀಕರಿಸಿ ಮುಂದೆ ದಾಖಲೆಗಳನ್ನು ನೋಡುತ್ತಾ ಹೋದನು. ಮೇಷ್ಟರು ಬರೆದಿದ್ದ ಟಿಪ್ಪಣಿ, ಡೈರಿ, ಸಂಬಳದ ಬಟವಾಡೆ ರಿಜಿಸ್ಟರು, ಸ್ಟಾಕ್ ರಿಜಿಸ್ಟರು – ಎಲ್ಲವನ್ನೂ ನೋಡಿ ಆಯಿತು. ಸಾದಿಲ್ವಾರ್ ರಿಜಿಸ್ಟರು ಕಣ್ಣಿಗೆ ಬೀಳಲಿಲ್ಲ.

ಮೇಷ್ಟ್ರೇ, ಸಾದಿಲ್ವಾರ್ ರಿಜಿಸ್ಟರ್ ಎಲ್ಲಿ ? ಎಂದು ಕೇಳಿದನು.

ಅಲ್ಲೇ ಇದೆ ಸ್ವಾಮಿ, ಮೊದಲಿನ ರಿಜಿಸ್ಟರ್ ಹಿಂದೆಯೇ ಮುಗಿದೋಯ್ತು. ಆಫೀಸಿಗೆ ಯಾದಿ ಬರೆದೆ. ಸಪ್ಲೈ ಬರಲಿಲ್ಲ. ಒಂದು ನೋಟ್ ಪುಸ್ತಕ ಕೊಂಡುಕೊಂಡು ಅದರಲ್ಲಿ ಬರೆದಿಟ್ಟಿದ್ದೇನೆ ಸ್ವಾಮಿ.

ರಂಗಣ್ಣ ಕೆಳಗಿನ ದಾಖಲೆಗಳಲ್ಲಿ ಹುಡುಕಿದಾಗ ನಲವತ್ತು ಪುಟಗಳ ಒಂದು ನೋಟ್ ಪುಸ್ತಕ ಸಿಕ್ಕಿತು. ಮೇಲೆ ’ಸಾದಿಲ್ವಾರ್ ಖರ್ಚಿನ ಪುಸ್ತಕ’ ಎಂದು ಬರೆದಿತ್ತು. ಮೊದಲನೆಯ ಹಾಳೆಯಲ್ಲಿ,

ಮೇ ತಿಂಗಳ ಸಾದಿಲ್ವಾರ್
ಜಮಾ ೦-೪-೦
ಖರ್ಚು
ನೋಟ್ ಬುಕ್ ೦-೧-೦
ಕಾಗದ ೦-೨-೦
ಮಸಿ, ಮುಳ್ಳು ೦-೧-೦
ಒಟ್ಟು ೦-೪-೦

ಬಾಕಿ ಇಲ್ಲ.

ಎಂದು ಬರೆದಿತ್ತು. ಮುಂದೆ ಜೂನ್ ತಿಂಗಳಿಗೆ ಸಾದಿಲ್ವಾರ್ ಜಮಾ : ೦-೪-೦ ಖರ್ಚು : ಇಲ್ಲಾ, ಎಂದು ಬರೆದಿತ್ತು. ಹಾಗೆಯೇ ಮುಂದಿನ ಪ್ರತಿ ತಿಂಗಳಿಗೂ ಬರೆದು ಯಾವುದೋ ತಿಂಗಳಲ್ಲಿ ‘ಸಾದಿ ಲ್ವಾರ್ ಒಟ್ಟು ಜಮಾ : ೨-೦-೦ ಖರ್ಚು : ಬೋರ್ಡ್ ಒರಸುವ ಬಟ್ಟೆ = ೨-೦-೦

ಬಾಕಿ ಏನೂ ಇಲ್ಲ.
ಎಂದು ಬರೆದಿತ್ತು ; ಮೇಷ್ಟ್ರ ರುಜುವಿತ್ತು. ರಂಗಣ್ಣ ಕಣ್ಣು ಕಣ್ಣು ಬಿಡುತ್ತಾ ಕುಳಿತುಕೊಂಡನು!

‘ಮೇಷ್ಟ್ರೇ ! ಇದೇನು? ಎಂಟು ತಿಂಗಳ ಸಾದಿಲ್ವಾರ್ ಮೊಬಲಿಗೆ ಗೆಲ್ಲ ಬೋರ್ಡ್ ಒರಸುವ ಬಟ್ಟೆಯ ಖರ್ಚು ತೋರಿಸಿದ್ದೀರಿ. ನಿಮ್ಮ ಬೋರ್ಡ್ ಒರಸುವುದಕ್ಕೆ ಅಂಗೈಯಗಲ ಬಟ್ಟೆ ಕೂಡ ಇರಲಿಲ್ಲವಲ್ಲ ?’ ಎಂದು ಕೇಳಿದನು.

‘ಇಗೋ ಸ್ವಾಮಿ ಬೋರ್ಡ ಒರಸುವ ಬಟ್ಟೆ! ಮೇಜಿನ ಮೇಲೆ ಆಗಿನಿಂದ ಇಟ್ಟಿದ್ದೇನೆ! ತಮ್ಮೆದುರಿಗೇನೇ ಬೋರ್ಡು ಒರಸಿದ್ದೇನೆ. ನಾನು ಬಡವ ಸ್ವಾಮಿ ! ಆದರೆ ಸುಳ್ಳು ಲೆಕ್ಕ ಬರೆದಿಲ್ಲ ; ಸುಳ್ಳು ಪಳ್ಳು ಹೇಳೊ ಮನುಷ್ಯ ಅಲ್ಲ.’

‘ಮೇಷ್ಟೆ! ಇದು ನಿಮ್ಮ ರುಮಾಲಲ್ಲವೆ ?’

‘ಸ್ವಾಮಿ ! ನಾನು ಬಡವ, ಭಯಸ್ಥ ! ನೋಡಿ ಸ್ವಾಮಿ ! ಅಂಗಿ ಎರಡು ಮೂರು ಕಡೆ ಹರಿದು ಹೋಗಿದೆ ; ಈ ಪಂಚೆ ಜೂಲು ಜೂಲಾಗಿದೆ ಸಂಬಳ ಹದಿನೈದೇ ರೂಪಾಯಿ. ಮನೆಯಲ್ಲಿ ನಾಲ್ಕು ಜನ ಮಕ್ಕಳು, ನನ್ನ ಹೆಂಡತಿ ಮತ್ತು ಅತ್ತೆ. ನಾನು ಸುಳ್ಳು ಹೇಳೋದಿಲ್ಲ ಸ್ವಾಮಿ ! ಮೇಜಿನ ಮೇಲಿರುವುದೇ ಬೋಡ್೯ ಒರಸುವ ಬಟ್ಟೆ, ದುಡ್ಡು ತಿಂದಿಲ್ಲ, ರಸೀತಿ ಮಡಗಿದ್ದೇನೆ! ತಲೆಗೆ ರುಮಾಲಿಲ್ಲದಿದ್ದರೆ ಜುಲ್ಮಾನೆ ಹಾಕುತ್ತಿರಿ. ಅದಕ್ಕೆನೆ ಅದನ್ನು ರುಮಾಲಾಗಿ ಹಾಕಿಕೊಂಡಿದ್ದೆ ಸ್ವಾಮಿ!

‘ಮತ್ತೆ ರುಮಾಲಿಲ್ಲದೆ ಈಗ ನಿಂತಿದ್ದೀರಲ್ಲ ನೀವು ?’

‘ಇಗೋ ಸ್ವಾಮಿ ಮಡಕ್ಕೊತೀನಿ ! ಕಾಪಾಡಿಕೊಂಡು ಬರಬೇಕು!’

ಮೇಷ್ಟ್ರು ಭಯದಿಂದ ಆ ಧೂಳು ತುಂಬಿದ ರುಮಾಲನ್ನೆ ಸೊಟ್ಟ ಸೊಟ್ಟಾಗಿಟ್ಟು ಕೊಂಡು ಕೈ ಮುಗಿದು ಕೊಂಡು ನಿಂತನು. ರುಮಾಲಿನ ಒಂದು ಕೊನೆ ಸಡಲಿ ಹೋಗಿ ಭುಜದ ಮೇಲೆ ಇಳಿ ಬಿದ್ದದ್ದು ಕೂಡ ಆ ಮೇಷ್ಟ್ರಿಗೆ ಅರಿವಾಗಲಿಲ್ಲ. ಮೇಷ್ಟ್ರು ರುಮಾಲಿಂದ ಬೋರ್ಡನ್ನು ಒರಸಿದ್ದರೆ ಅರ್ಥ ಆಗ ರಂಗಣ್ಣನಿಗೆ ಸ್ಪುರಿಸಿತು! ಅವನಿಗೆ ಕೋಪ ಬರಲಿಲ್ಲ. ಕಣ್ಣುಗಳು ಹನಿಗೂಡಿ ಮಂಜು ಮಂಜಾದುವು. ಮುಖವನ್ನು ಎತ್ತದೆ, ಮೇಷ್ಟ್ರ ಬಡತನ ಯಾವಾಗ ಹೋದಿತೋ ? ಯಾವಾಗ ಅವರಿಗೆ ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ಸಂಬಳ ದೊರೆತಿತೋ ? ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವ ಸೆಂಚುರಿ ಕ್ಲಬ್ಬಿನ ಲೋಲರಿಗೆ ದೇವರು ಯಾವಾಗ ಕರುಣೆ ತುಂಬುವನೋ? ದೇವರೇ ಈ ಬಡವರ ರಕ್ಷಣೆಗೆ ಬರಬೇಕು ! ಎಂದು ನೊಂದುಕೊಂಡು ಎರಡು ನಿಮಿಷ ಮೌನವಾಗಿದ್ದನು. ಬಳಿಕ,

‘ಮೇಷ್ಟೆ ! ಸಾದಿಲ್ವಾರ್ ಮೊಬಲಗೆಲ್ಲ ಬೋರ್ಡು ಒರಸುವ ಬಟ್ಟೆಗೇ ಆಗಿ ಹೋಯಿತಲ್ಲಾ ! ಬೋರ್ಡು ಮೇಲೆ ಬರೆಯೋ ಸೀಮೆ ಸುಣ್ಣದ ಖರ್ಚಿಗೆ ಏನು ಮಾಡುತ್ತೀರಿ ? ಎಂದು ಕೇಳಿದನು.

‘ಅದನ್ನು ಕೊಂಡು ಕೊಂಡಿಲ್ಲ ಸ್ವಾಮಿ. ಆದ್ದರಿಂದ ಲೆಕ್ಕದಲ್ಲಿ ಬರೆದಿಲ್ಲ. ನಾನು ಸುಳ್ಳು ಲೆಕ್ಕ ಬರೆಯೋ ಮನುಷ್ಯ ಅಲ್ಲ ಸ್ವಾಮಿ!’

‘ಮತ್ತೆ ಸೀಮೆಸುಣ್ಣ ನಿಮಗೆ ಹೇಗೆ ದೊರೆಯುತ್ತೆ ?’

‘ಈ ಹಳ್ಳಿಲಿ ದಾಸಯ್ಯಗಳು ಬಹಳ ಮಂದಿ ಇದ್ದಾರೆ ಸ್ವಾಮಿ ! ದಪ್ಪ ದಪ್ಪ ನಾಮ ಹಾಕ್ತಾರೆ. ಸ್ಕೂಲಿಗೆ ಬರೋ ಮಕ್ಕಳು ಮನೆಯಿಂದ ನಾಮದ ತುಂಡುಗಳನ್ನು ತಂದು ಕೊಡ್ತಾರೆ ಸ್ವಾಮಿ ! ಅದನ್ನೆ ಉಪಯೋಗಿಸುತ್ತ ಕಷ್ಟ ಪಟ್ಟು ಮಕ್ಕಳಿಗೆ ವಿದ್ಯೆ ಹೇಳಿ ಕೊಟ್ಟಿದ್ದೇನೆ. ನಾನು ಸುಳ್ಳು ಸಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ !’

‘ಕಾಗದ, ಬರೆಯುವ ಮುಳ್ಳು, ಮಸಿ ಈಗ ನಿಮಗೆ ಬೇಕಾಗಿಲ್ಲವೋ?’

‘ಬೇಕು ಸ್ವಾಮಿ ! ಹಿಂದೆ ಕೊಂಡುಕೊಂಡು ನಾಜೂಕಾಗಿ ಉಪಯೋಗಿಸಿದೆ. ನಾಳೆ ತಿಂಗಳಿನ ಸಾದಿಲ್ವಾರ್ ಮೊಬಲಗಿನಲ್ಲಿ ಮತ್ತೆ ಕೊಂಡುಕೊಳ್ಳುತ್ತೇನೆ ಸ್ವಾಮಿ ! ಕಾಪಾಡಿಕೊಂಡು ಬರಬೇಕು.’

‘ಒಳ್ಳೆಯದು ಮೇಷ್ಟ್ರೆ! ಈ ಪುಸ್ತಕ ನನ್ನ ಹತ್ತಿರ ಇರಲಿ. ಮಧ್ಯಾಹ್ನಕ್ಕೆ ಆಫೀಸಿನ ಹತ್ತಿರ ಬನ್ನಿ’ ಎಂದು ಹೇಳಿ ಭೇಟಿಯನ್ನು ಮುಗಿಸಿಕೊಂಡು ಆ ಸಾದಿಲ್ವಾರ್ ಪುಸ್ತಕವನ್ನು ಜೇಬಿನಲ್ಲಿಟ್ಟು ಕೊಂಡು ರಂಗಣ್ಣ ಪಾಠಶಾಲೆಯಿಂದ ಹೊರಬಿದ್ದನು. ಮೇಷ್ಟ್ರು ಅಷ್ಟು ದೂರ ಹಿಂಬಾಲಿಸಿಕೊಂಡು ಬರುತ್ತ, ‘ಪ್ರಮೋಷನ್ ಕೊಟ್ಟು ಕಾಪಾಡಿಕೊಂಡು ಬರಬೇಕು ಸ್ವಾಮಿ ! ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿ ಕೊಟ್ಟಿದ್ದೇನೆ’ ಎಂದನು.

‘ಎಲ್ಲರನ್ನೂ ಕಾಪಾಡುವ ಭಗವಂತ ಮೇಲಿದ್ದಾನೆ ಮೇಷ್ಟ್ರೇ ! ನೀವು ನಿಲ್ಲಿ’ ಎಂದು ಹೇಳಿ ರಂಗಣ್ಣನು ಬೈಸ್ಕಲ್ ಹತ್ತಿದನು. ಆ ಬೆಳಗ್ಗೆ ನಡೆದ ಪ್ರಕರಣವನ್ನು ಆಲೋಚನೆ ಮಾಡುತ್ತ ಮಾಡುತ್ತ ಪ್ರಯಾಣದಲ್ಲಿ ಏನು ಆಯಾಸವೂ ತೋರದೆ ಮನೆಗೆ ಬಂದು ಸೇರಿದನು. ಮಧ್ಯಾಹ್ನ ಹನ್ನೆರಡು ಗಂಟೆ ಆಗಿದ್ದಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವರ್‍ಗ-ನರಕ
Next post ನಿಯಮ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys