ರಾವಣಾಂತರಂಗ – ೧೭

ರಾವಣಾಂತರಂಗ – ೧೭

ಇಂದ್ರಜಿತುವಿನ ಇಂಗಿತ

“ರಾವಣಾಸುರ ಅಲ್ಲಿ ನೋಡಿ ಹತ್ತು ಲಕ್ಷ ಕಪಿಸೇನೆಯೊಂದಿಗೆ ಪೂರ್ವದಿಕ್ಕಿಗೆ ನಿಂತವನು ನೀಲನೆಂಬ ದಳಪತಿ, ಹದಿನೈದುಲಕ್ಷ ಕರಡಿಗಳ ಸೇನೆಯೊಂದಿಗೆ ದಕ್ಷಿಣದಿಕ್ಕಿಗೆ ನಿಂತವನು ಜಾಂಬವಂತನು ಒಂದು ಕೋಟಿ ಸಿಂಗಳೀಕಗಳೊಂದಿಗೆ ಪಶ್ಚಿಮದಿಕ್ಕನ್ನು ಕಾಯುತ್ತಿರುವವನು ನಳನು, ಎರಡು ಕೋಟಿ ಕಪಿಸೈನ್ಯದೊಡನೆ ಉತ್ತರ ದಿಕ್ಕಿನಲ್ಲಿ ನಿಂತಿರುವವನೇ ನಿನ್ನ ಮಿತ್ರ ವಾಲಿಯ ಮಗ ಅಂಗದನು. ಶ್ರೀರಾಮನ ಬಲಗಡೆ ಕುಳಿತವನೇ ಕಿಷ್ಕಿಂದೆಯ ರಾಜನಾದ ಸುಗ್ರೀವನು, ರಾಮಚಂದ್ರನ ಅಂಗರಕ್ಷಕನಾಗಿ ಹಿಂದೆ ನಿಂತವನೇ ಲಂಕಾ ನಗರವನ್ನು ಸುಟ್ಟ ಹನುಮಂತನು ಎಡಗಡೆ ನಿಂತಿರುವವನು ಲಕ್ಷ್ಮಣನು ರಾಮನ ಸಮೀಪದಲ್ಲಿ ನಿಂತಿರುವವನೇ ನಿಮ್ಮ ತಮ್ಮನಾದ ವಿಭೀಷಣನು” ಎಂದು ಶತ್ರುಗಳ ವರ್ಣನೆ ಮಾಡಿದನು.

ವೈರಿಗಳ ಯುದ್ಧ ಸಿದ್ಧತೆಯನ್ನು ಕಂಡು ಮೆಚ್ಚಿಗೆಯಾಯಿತು. “ಪ್ರಹಸ್ತನೇ ಲಂಕಾ ನಗರದ ನಾಲ್ಕು ಮಹಾದ್ವಾರಗಳನ್ನು ಮುಚ್ಚಿಸಿ, ಭದ್ರವಾದ ಕಾವಲು ಪಡೆಯನ್ನು ನೇಮಿಸು, ಕೋಟೆಯ ಮೇಲೆ ಧೂಮ್ರಾಕ್ಷನನ್ನು ದಕ್ಷಿಣದ್ವಾರದಲ್ಲಿ ನೀನು ಅಪಾರ ಸೈನ್ಯದೊಂದಿಗೆ ನಿಂತಿರು. ಪಶ್ಚಿಮ ದ್ವಾರದ ರಕ್ಷಣೆಗೆ ರುಧಿರಾಸುರನನ್ನು, ಉತ್ತರ ದ್ವಾರದ ರಕ್ಷಣೆಗೆ ಅತಿಕಾಯನನ್ನು ನೇಮಿಸು. ಎಲ್ಲರ ಮೇಲೆ ನಿರೀಕ್ಷಣೆ ಮಾಡುವುದಕ್ಕೆ ಇಂದ್ರಜಿತುವಿಗೆ ಹೇಳುತ್ತೇನೆ. ನಾನು ಸಕಲ ಕಾರ್ಯಗಳ ಮೇಲ್ವಿಚಾರಕನಾಗಿ ನಿಲ್ಲುತ್ತೇನೆ. ಶುಕಸಾರಣರೆಂಬ ಮಂತ್ರಿಗಳು ವೇಷಾಂತರದಿಂದ ಕಪಿಸೇನೆಯನ್ನು ಹೊಕ್ಕು ಶತ್ರುಗಳ ಬಲಾಬಲಗಳನ್ನು ತಿಳಿದು ಬಂದು ವರದಿ ಮಾಡುತ್ತಿರಲಿ, ಸೈನಿಕರು ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳಬಾರದು. ಅವರಿಗೆ ವಿಶೇಷ ಧನಕನಕಗಳನ್ನು ಕೊಡುವುದಾಗಿ ಪ್ರೋತ್ಸಾಹಿಸಿ” ಎಂದು ಅಪ್ಪಣೆ ಮಾಡಿದನು. ಅಂದು ಸಭೆಯಲ್ಲಿ ಯುದ್ಧದ ಬಗ್ಗೆ ವಿಶೇಷ ನಿರ್ಣಯ ಪಡೆಯಬೇಕಿತ್ತು. ಅಷ್ಟರೊಳಗೆ ಸೈನಿಕನು ಬಂದು “ಯಾರೋ ಅಂಗದನಂತೆ, ವಾನರ ವೀರ, ತಮ್ಮನ್ನು ಕಾಣಬೇಕಂತೆ ಒಳಗೆ ಬರಲು ಅಪ್ಪಣೆಯೇ ಕೇಳು ಎಂದರು. ನನಗೆ ಒಂದು ಕಡೆ ಆಶ್ಚರ್ಯ! ಇನ್ನೊಂದು ಕಡೆ ಆನಂದ. ಯುದ್ಧ ನಿಶ್ಚಯವಾಗಿರುವಾಗ ವೈರಿಗಳ ಕಡೆಯಿಂದ ಬಂದ ದೂತನ ವಿಷಯವೇನು? ವಾಲಿಯ ಮಗ ಅಂಗದನನ್ನು ನೋಡುತ್ತಿದ್ದೇನಲ್ಲಾ ಎಂಬ ಆನಂದ ಶ್ವೇತ ವಸ್ತ್ರಧಾರಿಯಾಗಿ ಒಳಗೆ ಬಂದ ಅಂಗದನನ್ನು ಆಶ್ಚರ್ಯದಿಂದ ನೋಡಿದೆ. ಅದೇ ರೂಪ! ಅದೇ ನಿಲುವು ವಾಲಿಯೇ ಕಣ್ಮುಂದೆ ನಿಂತಂತೆ. ಬಾಚಿ ತಬ್ಬಿಕೊಳ್ಳುವ ಆಸೆಯಾಯಿತು. ಸಭಾಮರ್ಯಾದೆಗೆ ಭಂಗ ಬಂದೀತೆಂದು ಗಂಭೀರವಾಗಿ ಕುಳಿತೆ. ಒಳಗೆ ಬಂದ ಅಂಗದನು ಸಭೆಯನ್ನು ಪ್ರವೇಶಿಸಿ ತನ್ನ ಬಾಲವನ್ನೇ ಸುರುಳಿ ಮಾಡಿಕೊಂಡು ಕುಳಿತು ಸಭಾಸದರನ್ನೆಲ್ಲಾ ವೀಕ್ಷಿಸಿದನು. ನನ್ನ ಅಪ್ಪಣೆಯಂತೆ ಪ್ರಹಸ್ತನು ಅಂಗದನನ್ನು “ರಾಯಭಾರಿಯೇ ! ನೀನ್ಯಾರು? ನಿನ್ನ ಹೆಸರೇನು? ನೀನು ಯಾರ ಕಡೆಯಿಂದ ಬಂದಿರುವೆ, ರಾಜಕೀಯ ವರ್ತಮಾನಗಳೇನು? ಎನ್ನಲು “ನಾನು ವಾಲಿಪತ್ರ ಅಂಗದ ಶ್ರೀರಾಮನ ರಾಯಭಾರಿಯು, ಶತ್ರುವಿಗೆ ಅವಕಾಶಗಳನ್ನು ಕೊಡದೆ ಕೊಲ್ಲಬಾರದೆಂದು ರಾಜನೀತಿಯಿರುವುದರಿಂದ ಇನ್ನೊಮ್ಮೆ ರಾವಣಾಸುರನಿಗೆ ಬುದ್ಧಿವಾದ ಹೇಳಬೇಕೆಂದು ನಿಶ್ಚಯಿಸಿ ನನ್ನನ್ನು ಕಳಿಸಿರುವರು. “ರಾವಣಾಸುರ ಶ್ರೀರಾಮಚಂದ್ರನಿಗೆ ಶರಣಾಗಿ ಸೀತಾದೇವಿಯನ್ನು ತಂದೊಪ್ಪಿಸಿ ವಿಭೀಷಣನಿಗೆ ಲಂಕಾ ರಾಜ್ಯವನ್ನೊಪ್ಪಿಸಿದರೆ ಕ್ಷೇಮ ಇಲ್ಲವಾದಲ್ಲಿ ಸಮರ ಸನ್ನದ್ಧರಾಗಬೇಕು? ಎನ್ನಲು, ನಾನು “ಅಂಗದನೇ ನೀನೊಮ್ಮೆ ಯೋಚಿಸು. ಯಾವ ರಾಮನು ನಿನ್ನ ತಂದೆಯನ್ನು ವಿನಾಕಾರಣ ಮೋಸದಲ್ಲಿ ಕೊಂದು ಕಿಷ್ಕಂದಾರಾಜ್ಯವನ್ನು ನಿನ್ನ ತಾಯಿಯನ್ನು ಸುಗ್ರೀವನಿಗೆ ಕೊಟ್ಟನೋ ಆ ರಾಮನ ರಾಯಭಾರಿಯಾಗಿರುವುದಕ್ಕೆ ನಿನಗೆ ಲಜ್ಜೆ ಯಾಗುವುದಿಲ್ಲವೇ?

“ಅದು ನನ್ನ ಸ್ವಂತ ವಿಷಯ. ನಮ್ಮ ಸ್ವಾತಂತ್ರ್ಯದ ಬಗ್ಗೆ ಕೇಳುವ ಅಧಿಕಾರ ನಿಮಗಿಲ್ಲ. ಇದು ರಾಜಕಾರ್ಯ. ಇದರ ಬಗ್ಗೆ ಸರಿಯಾದ ಉತ್ತರ ಕೊಡಿ ಇಲ್ಲದಿದ್ದರೆ ಬಿಡಿ, ಮುಂದಿನ ಪರಿಣಾಮ ರಣರಂಗದಲ್ಲಿ” “ಅಂಗದನೇ ನೀನು ನನ್ನ ಮಿತ್ರ ವಾಲಿಯ ಮಗ, ನ್ಯಾಯವಾಗಿ ಕಿಷ್ಕಿಂದೆ ರಾಜ್ಯ ನಿನಗೆ ಸೇರಬೇಕು. ನೀನು ರಾಜನಾಗಿ ಮೆರೆಯಬೇಕು, ನಿನ್ನ ಚಿಕ್ಕಪ್ಪ ಸುಗ್ರೀವನ ಪಕ್ಷವನ್ನು ಬಿಟ್ಟು ನಿನ್ನ ಬೆಂಬಲಿಗರೊಡನೆ ನನ್ನ ಪಕ್ಷವನ್ನು ಸೇರು, ಕ್ಷಣಾರ್ಧದಲ್ಲಿ ರಾಮನನ್ನು ಸುಗ್ರೀವರನ್ನು ನಾಶ ಮಾಡಿ, ಕಿಷ್ಕಿಂದಾ ಸಿಂಹಾಸನದ ಮೇಲೆ ನಿನ್ನನ್ನು ಕೂರಿಸುತ್ತೇನೆ. ನನ್ನ ಮಿತ್ರನ ಋಣವನ್ನು ತೀರಿಸುತ್ತೇನೆ.

“ರಾವಣಾಸುರ, ನಿನ್ನ ಶಕ್ತಿ ಶೌರ್ಯಗಳ ವಿಷಯ ನನಗೆ ಚೆನ್ನಾಗಿ ಗೊತ್ತು, ನಮ್ಮನ್ನೇನು ನಮ್ಮ ಬಾಲಗಳನ್ನು ಅಲ್ಲಾಡಿಸುವ ಶಕ್ತಿಯೂ ನಿನಗಿಲ್ಲ. ವಾಮಮಾರ್ಗದಲ್ಲಿ ನಡೆಯುವವರಿಗೆ ವಿಜಯಲಕ್ಷ್ಮಿ ಒಲಿಯುವುದಿಲ್ಲ. ನನ್ನ ತಂದೆಯ ಮಿತ್ರನು ನನಗೆ ತಂದೆ ಸಮಾನನೆಂದು ನಾಲ್ಕು ಮಾತು ಹೇಳುತ್ತೇನೆ. ಅಧಿಕ ಪ್ರಸಂಗಿಯೆನ್ನಬೇಡ. ನೀನು ನಿನ್ನ ಮಕ್ಕಳು ಲಂಕೆಯು ಉಳಿಯಬೇಕಾದರೆ ಶ್ರೀರಾಮನಿಗೆ ಶರಣಾಗಿ ಸೀತಾಮಾತೆಯನ್ನು ಗೌರವದಿಂದ ತಂದೊಪ್ಪಿಸು, ಇಲ್ಲವಾದಲ್ಲಿ ಮಾರುತಿಯಿಂದ ಮನೆಗಳೆಲ್ಲಾ ಸುಟ್ಟುಹೋದವು. ಮಾರುತಿಯ ಒಡೆಯ ಶ್ರೀರಾಮನು ಕೆರಳಿದರೆ ಲಂಕೆಯಲ್ಲಿ ಒಬ್ಬರೂ ಉಳಿಯುವುದಿಲ್ಲ. ಯೋಚನೆ ಮಾಡಿ ನಿರ್ಧಾರಕ್ಕೆ ಬಾ” ಎನ್ನಲು “ಈ ಮಂಗನ ಮುಖದವನಿಗೆಷ್ಟು ಕೊಬ್ಬು ಮಿತ್ರನ ಮಗನೆಂದು ಸಲಿಗೆ ತೋರಿದ್ದೆ ತಪ್ಪು. “ಯಾರಲ್ಲಿ ಇವನನ್ನು ಕಟ್ಟಿಹಾಕಿ ಶೃಂಖಲೆಗಳಿಂದ ಬಂಧಿಸಿ ಕಾರಾಗೃಹಕ್ಕೆ ತಳ್ಳಿ ಸಾಯುವವರೆಗೂ ಬಿದ್ದಿರಲಿ” ಎಂದು ಅಪ್ಪಣೆ ಮಾಡಿದೆ. “ಶರಣಾಗತಿ! ಶರಣಾಗತಿ” ಚಿಕ್ಕವರು, ದೊಡ್ಡವರು ಎಲ್ಲ ಬಾಯಲ್ಲಿ ಇದೇ ಮಾತು. ಉಪದೇಶ ನನ್ನನ್ನೇನು ಕೈಲಾಗದ ಹೇಡಿಯೆಂದು ಕೊಂಡಿರುವರು. ನಾನೇನು! ನನ್ನ ಪರಾಕ್ರಮೇನು? ಎಂಬುದು ನಾಳಿನ ಯುದ್ಧದಲ್ಲಿ ತಿಳಿಯುತ್ತದೆ. ಅಂಗದನು ಕಟ್ಟಲು ಬಂದ ಸೇವಕರನ್ನು ಒಂದೇ ಹೊಡೆತಕ್ಕೆ ಹೊಡೆದು ಕೆಡವಿ ಆಕಾಶಕ್ಕೆ ಹಾರಿ, ಅಲ್ಲಿಂದ ಗಗನ ಮಾರ್ಗದಲ್ಲಿ ಮಾಯವಾದನು. ಕೋಪೋದ್ರಿಕ್ತನಾಗಿ “ಮಂತ್ರಿಗಳೇ ಶತ್ರುಗಳು ಯಾವ ಕ್ಷಣದಲ್ಲಾದರೂ ಮೇಲೆ ಬೀಳಬಹುದು. ಎಚ್ಚರಿಕೆಯಿಂದಿರಿ” ಎಂದು ಆಜ್ಞೆ ಮಾಡಿ ವಿಶ್ರಾಂತಿ ಭವನದತ್ತ ಹೆಜ್ಜೆ ಹಾಕಿದೆ.

ಮರುದಿನ ಸೂರ್ಯೋದಯಕ್ಕೆ ಮುನ್ನವೇ ಶುಚಿರ್ಭೂತನಾಗಿ ಶಿವಪೂಜೆ ಮಾಡಿದೆ. ಹಲವು ತಾಸುಗಳ ತನಕ ಧ್ಯಾನದಲ್ಲಿದ್ದು ಏಕಾಗ್ರತೆ ಪಡೆಯಲು ಪ್ರಯತ್ನಿಸಿದೆ. ಇಂದು ಯುದ್ಧದ ಆರಂಭ ತಾಸಿಗೊಮ್ಮೆ ಯುದ್ಧದ ಸಂಪೂರ್ಣ ಮಾಹಿತಿ ಒದಗಿಸೆಂದು ಗುಪ್ತಗೂಡಾಚಾರರಿಗೆ ತಿಳಿಸಿದ್ದೆ. ಪರಮೇಶ್ವರಾ ನಾನೇನು ಕೇಳಲಿ, ಸಂಪೂರ್ಣ ಜಯ ನನಗೆ ಸಿಗಲೆಂದು ಬೇಡಲೇ, ಇದು ಸರಿಯೇ ! ಸತ್ಯ ಧರ್ಮದ ಹಾದಿಯಲ್ಲಿ ನಡೆವವರಿಗೆ ಸೋಲಾಗಲಿ ಎಂದು ಬಯಸುವುದೇ! ಪರಮಾತ್ಮ ಪರಿಸ್ಥಿತಿ ಕೈಮೀರಿ ಹೋಗಿದೆ. ಪಾಪಕ್ಕೆ ಪಶ್ಚಾತಾಪ ಪಡುವುದೊಂದೇ ನನಗಿರುವುದು. ಸಂಪೂರ್ಣ ಜಯ ಸಿಗಲೆಂದು ಬೇಡುವ ಸ್ವಾರ್ಥ ಮನಸ್ಸು ನನಗಿಲ್ಲ. ನಂಬಿಕೆಯೂ ಇಲ್ಲ. ಹಾಗೇ ಸೋತು ಶರಣಾಗಬೇಕೆಂಬ ಇರಾದೆಯೂ ಇಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಯುದ್ಧದಲ್ಲಿ ಹೋರಾಡುತ್ತೇನೆ. ಜಯವೋ ಅಪಜಯವೋ ನಿನಗೇ ಬಿಟ್ಟಿದ್ದೇನೆ. ಸಂಜೆಯಾಗುತ್ತಾ ಕಾತುರ! ಮನವನ್ನು ಅರಿತವರಂತೆ ಶುಕ ಸಾರಣರು ಬಂದು “ಮಹಾರಾಜ ಸೂರ್ಯೋದಯವಾದ ಕೂಡಲೇ ಲಕ್ಷಾಂತರ ಕಪಿಗಳು ಬೆಟ್ಟ ಗುಡ್ಡ, ಕಲ್ಲು ಮರಗಳಿಂದ ನಮ್ಮ ಕೋಟೆಯ ಮುಂದಿದ್ದ ವಿಸ್ತಾರವಾದ ಆಳವಾದ ಕಂದಕವನ್ನು ಮುಚ್ಚಿದರು. ಮಹಾದ್ವಾರಗಳು ಮುಚ್ಚಿದ್ದರೂ ಕಪಿಗಳು ಮೇಲೆ ಹಾರಿ ಕೋಟೆಯ ಮೇಲೆ ನಿಂತು ಕಲ್ಲು ಮರಗಳಿಂದ ಹೊಡೆಯತೊಡಗಿದವು. ನಳ – ನೀಲ – ಅಂಗದ – ಹನುಮಂತ ಮುಂತಾದ ಕಪಿಸೇನಾ ನಾಯಕರು ಮುಂದಾಳಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದರು. ನಮ್ಮವರು ಖಡ್ಗ – ಶೂಲ, ಮದ್ಗರ – ಗದೆ – ಬಂಡಿವಾಳ – ಪೆಟ್ಟರಗಳಿಂದ ಹೊಡೆದರೂ ಕಪಿವೀರರೂ ಹೆದರದೆ ಪ್ರತಿ ಹಲ್ಲೆಯನ್ನು ಮಾಡಲು ರಕ್ಕಸಸೇನೆ ಹಿಂಜರಿಯುತ್ತಿತ್ತು. ಅದನ್ನು ಕಂಡು ಉತ್ತೇಜಿತರಾದ ಕಪಿ ಭಲ್ಲೂಕಗಳು ಕೋಟೆಯ ಗೋಡೆಯನ್ನೇರಿ ಕಲ್ಲು ಗುಂಡುಗಳಿಂದ ಹಲ್ಲೆ ಮಾಡಲು ರಾಕ್ಷಸ ಸೈನ್ಯವು ಹೆದರಿ ಹಿಮ್ಮೆಟ್ಟಿತು. ಅದೇ ಸಮಯವನ್ನು ಕಾಯುತ್ತಿದ್ದ ಸುಗ್ರೀವ – ವಿಭೀಷಣರು ಶಸ್ತ್ರಾಸ್ತ್ರಧಾರಿಗಳಾಗಿ ರಣರಂಗಕ್ಕೆ ಬಂದರು. ಸಂಧ್ಯಾಕಾಲವಾಯಿತು. ಶ್ರೀರಾಮನು ಕಪಿಸೇನೆಗೆ ಯುದ್ಧವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅದರಂತೆಯೇ ಪ್ರಹಸ್ತನಿಂದ ಅನುಮತಿ ಸಿಕ್ಕಿದ ನಂತರ ರಕ್ಕಸ ಸೈನಿಕರೂ ಯುದ್ಧವನ್ನು ನಿಲ್ಲಿಸಿ ತಮ್ಮ ತಮ್ಮ ಶಿಬಿರಗಳಿಗೆ ಹೊರಟುಹೋದರು. ಪಹರೆಯವರು ಕಾವಲು ಕಾಯುತ್ತಿರುವರು. ಉಭಯಸೇನೆಗಳ ದಳಪತಿಗಳು ಅಂದಿನ ಯುದ್ಧದಲ್ಲಿ ಮಡಿದವರ ಗಾಯಗೊಂಡವರ ಪಟ್ಟಿಯನ್ನು ಮಾಡಿ, ಮುಂದಿನ ದಿನ ಯಾರೆಲ್ಲಾ ಯುದ್ಧ ಮಾಡಬೇಕು, ಅವರಿಗೆ ಶಸ್ತ್ರಾಸ್ತ್ರಗಳನ್ನು ಭೋಜನಾ ಸಾಮಗ್ರಿಯನ್ನು ಸಿದ್ಧಪಡಿಸುತ್ತಿದ್ದರು.

“ಸರಿ ನೀವಿನ್ನು ಹೋಗಿ ವಿಶ್ರಾಂತಿ ಪಡೆಯಿರಿ” ಎಂದು ವ್ಯಾಕುಲಚಿತ್ತನಾಗಿ ಮೇಘನಾದನಿಗೆ ಬರಲು ತಿಳಿಸಿದ್ದೆ. ಬರಲಿಲ್ಲವಲ್ಲ ಎಂದು ಕೊಳ್ಳುವಷ್ಟರಲ್ಲಿ ಹೆಜ್ಜೆಯ ಸಪ್ಪಳವಾಯಿತು. “ಅಪ್ಪಾಜಿಯವರಿಗೆ ನಮಸ್ಕಾರಗಳು” ಬಗ್ಗಿದ ಅವನನ್ನು ಮೇಲಕ್ಕೆತ್ತಿ ಭುಜದ ಮೇಲೆ ಕೈಯಿಟ್ಟು “ಹೊತ್ತಲ್ಲದ ಹೊತ್ತಿನಲ್ಲಿ ಹೇಳಿ ಕಳುಹಿಸಿದೆ. ನಿನ್ನ ವಿಶ್ರಾಂತಿಗೆ ಭಂಗವಾಯಿತೇನೋ” ಇಲ್ಲ ಅಪ್ಪಾಜಿ ನಿಮ್ಮ ಬಗ್ಗೆಯೇ ಯೋಜಿಸುತ್ತಿದ್ದ ಕೆಲವು ದಿನಗಳಿಂದ ನೀವು ವಿಪರೀತವಾಗಿ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಲಿರುವಿರಿ, ಈಗ ತಾನೇ ಅಮ್ಮನನ್ನು ಕಂಡು ಬಂದೆ. “ಹೌದೇನು? ಹೇಗಿದ್ದಾಳೆ? ನನ್ನನ್ನು ವಿಚಾರಿಸಿದಳೇನು? ತುಂಬಾ ದಿನಗಳಾದವು? ಅವಳನ್ನು ನೋಡಿ, ಮಹಾ ಸ್ವಾಭಿಮಾನಿ ಹೆಣ್ಣು. ಒಂದು ದಿನವಾದರೂ ನನ್ನನ್ನು ನೋಡಬೇಕು, ಬೇಕುಬೇಡಗನ್ನು ವಿಚಾರಿಸಬೇಕು ಎನಿಸಲಿಲ್ಲವೇ? ಒಂದು ಸಣ್ಣ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ! ಮಂಡೋದರಿ ಹೀಗೆ ಬದಲಾಗುತ್ತಾಳೆಂದು ನಾನಂದುಕೊಂಡಿರಲಿಲ್ಲ” “ಅಪ್ಪಾ, ಅಮ್ಮನಿಗೆ ನಿಮ್ಮದೇ ಯೋಚನೆ. ನಿಮ್ಮ ಒಳಿತಿಗಾಗಿ ನಿಮ್ಮ ಶ್ರೇಯಸ್ಸಿಗಾಗಿ ವ್ರತ, ನೇಮಗಳನ್ನು ನಡೆಸುತ್ತಿದ್ದಾಳೆ. ಈಗಲೂ ನಿಮ್ಮ ಬಗ್ಗೆಯೇ ಮಾತನಾಡಿದ್ದು. “ಕುಮಾರ ಇಂದ್ರಜಿತು, ನಿಮ್ಮ ತಂದೆ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ನನ್ನ ಮಾತನ್ನು ಧಿಕ್ಕರಿಸಿದರು. ತಾಯಿಯ ಮಾತನ್ನು ತಳ್ಳಿ ಹಾಕಿದರು. ವಿಭೀಷಣನನ್ನು ದೂರ ಅಟ್ಟಿದರು. ಈಗ ಉಳಿದಿರುವವನು ನೀನೊಬ್ಬನೇ ನಿನಗಿನ್ನ ಚಿಕ್ಕ ಪ್ರಾಯ, ಹೆಂಡತಿ, ಮಕ್ಕಳು ನಿನ್ನನ್ನು ನಂಬಿರುವರು, ತಂದೆಯವರ ಮಾತಿಗೆ ಸೊಪ್ಪುಹಾಕಬೇಡ, ನೀನಾದರೂ ನೀತಿ ಮಾರ್ಗದಲ್ಲಿ ನಡೆ, ನಿನ್ನ ಮಾತಿಗಾದರೂ ಬೆಲೆ ಕೊಡುತ್ತಾರಾ, ಇದರ ಮೇಲೆ ನಿನ್ನ ಇಷ್ಟ ಎಂದರು.” “ತಾಯಿಯವರು ತುಂಬಾ ಸೊರಗಿ ಹೋಗಿದ್ದಾರೆ. ಅನ್ನ ಆಹಾರಾದಿಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ. ದಿನವಿಡೀ ಜಪ, ತಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಯಾರನ್ನು ನೋಡುತ್ತಿಲ್ಲ. ಮಾತನಾಡಿಸುತ್ತಿಲ್ಲ. ಅವರ ಸ್ಥಿತಿ ಗಂಭೀರವಾಗಿದೆ.” “ಕುಮಾರ ನಿನಗೇನಿಸುತ್ತದೆ. ನಿಜ ಹೇಳು ನೀನೊಪ್ಪುವುದಾದರೆ ಯುದ್ಧವನ್ನು ನಿಲ್ಲಿಸುತ್ತೇನೆ. ಶ್ರೀರಾಮನಿಗೆ ಶರಣಾಗಿ ಸೀತೆಯನ್ನೊಪ್ಪಿಸಿ ನಂತರ ನನ್ನ ಶಿರಶ್ಚೇದವನ್ನು ನಾನೇ ಮಾಡಿಕೊಳ್ಳುತ್ತೇನೆ. ಇಲ್ಲವಾದಲ್ಲಿ ನೀನು ನಿನ್ನ ಚಿಕ್ಕಪ್ಪನನ್ನು ಅನುಸರಿಸಿ ಶ್ರೀರಾಮನ ಪಕ್ಷವನ್ನು ಸೇರಿಕೋ ನಾನೊಬ್ಬನೇ ಯುದ್ಧವನ್ನು ಎದುರಿಸುತ್ತೇನೆ. ನೋಡು ಇದರಲ್ಲಿ ನನ್ನ ಬಲವಂತವಿಲ್ಲ. ನೀನು ಸಣ್ಣ ಮಗುವಲ್ಲ. ನಿನ್ನ ಬದುಕು ನಿನ್ನದು “ತಂದೆಗಾಗಿ ನಿನ್ನ ಜೀವನವನ್ನು ಬಲಿಯಾಗಿಸಿಕೊಳ್ಳಬೇಡ ವಿಚಾರ ಮಾಡು.”

“ಅಪ್ಪಾ ಶ್ರೀರಾಮನು ತಂದೆಯವರ ಮಾತು ಉಳಿಸಲು, ವಚನ ಪರಿಪಾಲಿಸಲು ರಾಜ್ಯಧನ, ಸಂಪತ್ತನ್ನು ತ್ಯಾಗಮಾಡಿ ಜಟಧಾರಿಯಾಗಿ ಕಾಡಿನಲ್ಲಿ ಸಾಮಾನ್ಯ ಮಾನವನಂತೆ ಬದುಕಿದನಂತೆ. ಈ ದೇಹ ನಿಮ್ಮದು ಈ ಪ್ರಾಣವೂ ನಿಮ್ಮದೇ ನನ್ನ ಲಾಲಿಸಿ ಬೆಳೆಸಿದವರು ನೀವು. ಬೇಕು ಬೇಡಗಳನ್ನು ಅರಿತವರು ನೀವು. ಈ ದೇಹ ನಿಮ್ಮ ಹಿತಕ್ಕಾಗಿಯೇ. ಯುದ್ಧ ಆರಂಭವಾಗಿದೆ. ಪ್ರಾಣಕ್ಕಾಗಿ ಹೆದರಿ ಹಿಂದೆ ಸರಿಯುವುದು ವೀರರಲಕ್ಷಣವಲ್ಲ ಬದುಕಿ ಸತ್ತಂತೆ. ಈ ಜೀವನವೇನು ಶಾಶ್ವತವಲ್ಲ. ನಾವೇನೂ ಚಿರಂಜೀವಿಗಳಲ್ಲ ತಪ್ಪು ನಡೆದು ಹೋಗಿದೆ ಪಶ್ಚಾತ್ತಾಪದಲ್ಲಿ ಬೆಂದು ಸಾಯುವುದಕ್ಕಿಂತ ತಪ್ಪಿಗೆ ತಕ್ಕ ಶಿಕ್ಷೆಯನ್ನು ಅನುಭವಿಸೋಣ, ಯಾರ ಉದ್ಧಾರವೂ ನಮ್ಮ ಕೈಲಿಲ್ಲ. ತಂದೆಯವರೇ ನೀವೇನೂ ಯೋಚನೆ ಮಾಡಬೇಡಿ ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮ ಬೆಂಗಾವಲಾಗಿ ನಾನಿರುತ್ತೇನೆ. ಅಪ್ಪಣೆ ಕೊಡಿ, ನಾನೇನು ಮಾಡಬೇಕೆಂದು ದೈನ್ಯದಿಂದ ವಿನಂತಿಸಬೇಡಿ, ನಿಮ್ಮ ಶೌರ್ಯ ಪರಾಕ್ರಮಗಳಿಗಿದು ಭೂಷಣವಲ್ಲ”.

“ಕುಮಾರ ನೀರಿನ ಮೇಲೆ ಚಿತ್ತಾರ ಬರೆವ ವ್ಯರ್ಥ ಸಾಹಸಕ್ಕೆ ಇಳಿದಿದ್ದೇನೆ. ನೀರಿನಲ್ಲಿ ಮುಳುಗಿದವನಿಗೆ ಚಳಿಯೇನು? ಮಳೆಯೇನು? ಇಂದಿನ ಯುದ್ಧದಲ್ಲಿ ರಾಕ್ಷಸ ವೀರರೆಲ್ಲಾ ಹೆದರಿ ಹಿಮ್ಮೆಟ್ಟಿದರಂತೆ. ನಾಳಿನ ಯುದ್ಧವನ್ನು ನೀನು ಮಾಡು, ಮುಂದಾಳತ್ವವವನ್ನು ವಹಿಸು, ರಾಮಲಕ್ಷ್ಮಣರನ್ನು ಗೆದ್ದು ಬಾ ಎಂದು ಹರಸಿ ಕಳುಹಿಸಿದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಹಲ್ಯೆ
Next post ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys