ಎಲ್ಲಿ ಹೋಗಲೆ, ಹೇಗೆ ಕಾಣಲೆ ನನ್ನ ಗಿರಿಧರನ?
ನನ್ನ ಬೀಡಿಗೆ ತಾನೆ ಬಂದು ಕಾದು ನಿಂತವನ
ಹೇಗೆ ಕಾಣದೆ ಹೋದೆನೇ, ಹೇಗೆ ತರಲವನ?
ಈಗ ದಿನವೂ ದಾರಿಬದಿಗೇ ನಿಂತು ಕಾಯುವೆನೇ,
ಮತ್ತೆ ಬಾರನೆ ಸ್ವಾಮಿ ಎಂದು ಹಲುವೆ ನೋಯುವೆನೇ
ತಾನೆ ಒಪ್ಪಿ ಬಂದ ಗಳಿಗೆ ಹೇಗೆ ತಪ್ಪಿದೆನೇ?
ಯಾವ ಮಾಯೆಗೆ ಬಿದ್ದು ನಾನು ನಿದ್ದೆ ಹೋದೆನೇ?
ಬಾರೊ ನನ್ನ ಗಿರಿಧರ ಓ ಬಾರೊ ಇನ್ನೊಮ್ಮೆ
ಬಂದರೀ ಸಲ ಪ್ರೇಮದಲ್ಲಿ ಬಿಗಿವೆ ನಿನ್ನನ್ನೇ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.