ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತಿಸುತ್ತ ಆ ಅರಸನು ಕಡೆಗೆ ರಹಸ್ಯವಾಗಿ ಒಡೆಯರನ್ನು ಕೊಲ್ಲಿಸುವುದೇ ಸರಿಯೆಂದು ನಿಶ್ಚಯಮಾಡಿ, ೨೫ ಮಂದಿ ಕಳ್ಳರಿಗೆ ಹಣವನ್ನು ಕೊಟ್ಟು ಕಂಠೀರವ ಒಡೆಯರ ತಲೆಯನ್ನು ತೆಗೆದುಕೊಂಡು ಬರುವುದೆಂದು ಅಪ್ಪಣೆ ಮಾಡಿದನು. ಆ ಕಳ್ಳರು ಬೇರೆ ಬೇರೆ ವೇಷಗಳನ್ನು ಧರಿಸಿ ಶ್ರೀರಂಗಪಟ್ಟಣಕ್ಕೆ ಬಂದು, ಅಲ್ಲಿನ ಮರ್ಮಗಳನ್ನು ತಿಳಿದುಕೊಳ್ಳುತ್ತಾ ಸಮಯವನ್ನು ನಿರೀಕ್ಷಿಸುತ್ತಲಿದ್ದರು. ಕಡೆಗೊಂದು ದಿನ ಈ ಕಳ್ಳರು ಕನ್ನ ತೆಗೆದುಕೊಂಡೇ ಅರಮನೆಯನ್ನು ಪ್ರವೇಶಮಾಡಿ ಅವಿತುಕೊಂಡಿದ್ದರು. ಅಂತಃಪುರದಲ್ಲಿ ದೊರೆಗಳು ಒಬ್ಬರೇ ಮಂಚದ ಮೇಲೆ ಕುಳಿತು ತಾಂಬೂಲವನ್ನು ಸವಿಯುತ್ತಿದ್ದ ಸಮಯದಲ್ಲಿ ನಿದ್ರೆಯ ಮಾಳಿಗೆಯು ಮುಂದಣ ಹಜಾರದ ಕಂಬಗಳ ಮನೆಯಲ್ಲಿ ಬೇರೆ ಬೇರೆಯಾಗಿ ನಿಂತಿದ್ದ ಈ ೨೫ ಜನರ ನೆರಳುಗಳನ್ನು ನೋಡಿ “ಯಾರೋ ವಂಚನೆಯಿಂದ ನಮ್ಮ ಪ್ರಾಣವನ್ನಪಹರಿಸುವುದಕ್ಕೆ ಬಂದಿರುತ್ತಾರೆ” ಎಂದು ತಿಳಿದು ಹಾಗೆಯೇ ಸಮೀಪದಲ್ಲಿದ್ದ ವಿಜಯ ನಾರಸಿಂಹವೆಂಬ ತಮ್ಮ ಕತ್ತಿಯನ್ನು ಕೈಗೆ ತೆಗೆದುಕೊಂಡರು. ಹೊಂಚು ಹಾಕುತ್ತಲಿದ್ದ ಆ ಕಳ್ಳರು ಅದನ್ನು ಕಂಡು, ಎಲ್ಲರೂ ಗುಂಪುಗೂಡಿ ದೊರೆಗಳನ್ನು ಸುತ್ತಿಕೊಂಡರು. ಆಗ ದೊರೆಗಳು ತಮ್ಮ ಸಾಧಕದ ಚಾತುರ್ಯದಿಂದ ಪಟ್ಟವನ್ನು ತಿರುಹಿ, ತಲೆಗಳನ್ನು ಹೊಡೆದು, ಈ ಪೆಟ್ಟನ್ನು ತಪ್ಪಿಸಿಕೊಂಡು ಸಮೀಪಕ್ಕೆ ನುಸುಳಿಕೊಂಡು ಬಂದ ಕೆಲವರು ತಮ್ಮ ಭುಜಬಲದಿಂದ ಎರಡು ಕಂಕಳುಗಳಲ್ಲಿಯೂ ಇರುಕಿಸಿಕೊಂಡು ಕತ್ತುಗಳನ್ನು ಮುರಿದು, ಮತ್ತೆ ಕೆಲವರನ್ನು ಕಾಲಿನಿಂದ ಒದ್ದು ನಿರ್ಜಿವವಾಗುವಂತೆ ಕೆಡಹಿದರು. ಉಳಿದ ಹಲಕೆಲವು ಓಡಿಹೋಗುವುದಕ್ಕೆ ಅವಕಾಶವಿಲ್ಲದೆ ಆಯುಧಗಳನ್ನು ಕೆಳಕ್ಕೆ ಹಾಕಿ ವಾದಾಕ್ರಾಂತರಾದರು. ಒಡೆಯರು ಅವರನ್ನು ಜೀವಂತ ಬಿಟ್ಟು, ಬಾಗಿಲನ್ನು ಮುದ್ರೆ ಮಾಡಿ ಹೊರಗೆ ಕಾದಿದ್ದ ಗೊಲ್ಲರು ಮುಂತಾದವರನ್ನು ಕೂಗಿ ಕರೆದು, ಸತ್ತವರ ಹೆಣಗಳನ್ನು ಹೊರಕ್ಕೆ ಸಾಗಿಸಿ, ಉಳಿದವರನ್ನು ಮರುದಿನ ಸಭೆಗೆ ಕರತರುವಂತೆ ಆಜ್ಞಾಪಿಸಿದರು.
ಮಾರನೆ ದಿನ ಸಭೆಯಲ್ಲಿ ವಿಚಾರಿಸಿದಾಗ, ಅವರು ತಿರುಚನಾಪಳ್ಳಿಯ ಅರಸನಿಂದ ಪ್ರೇರೇಪಿತರಾಗಿ ಬಂದರೆಂದು ತಿಳಿಯಿತು. ಆಗ ದೊರೆಗಳು “ನೀವು ತಿರುಚನಾಪಳ್ಳಿಗೆ ಹೋಗಿ ಇಲ್ಲಿ ನಡೆದದ್ದನ್ನು ನಿಮ್ಮ ದೊರೆಗೆ ತಿಳಿಸಿ, ಹೋಗಿ” ಎಂದು ಕಳುಹಿಸಿಬಿಟ್ಟರು.
*****
[ವಂಶರತ್ನಾಕರ ಪುಟ ೮೧; ವಂಶಾವಳಿ ಪುಟ ೭೭-೭೮]


















