ಒಲವೆ ನಮ್ಮ ಬದುಕು

ಒಲವೆ ನಮ್ಮ ಬದುಕು

“The best of you is he who behaves best towards the members of his family” (The Holy Prophet) ವಾರದ ಸಂತೆ. ಬೆಳಿಗ್ಗೆ ೯ ಗಂಟೆ ಅಗುವುದರೊಳಗೆ ಪೇಟೆ ಇಡೀ ಜನಜಂಗುಳಿಯಿಂದ ತುಂಬ ತೊಡಗಿತು. ಜನರ ನೂಕು ನುಗ್ಗಲಿನಿಂದಾಗಿ ರಸ್ತೆ ಮೇಲೆ ವಾಹನಗಳು ಚಲಿಸಲು ಪರದಾಡುತ್ತಿದ್ದವು. ಹಳ್ಳಿಗಳಿಂದ ಬಂದ ರೈತರು ತಮ್ಮ ಸರಕು ಸಾಮಾನುಗಳನ್ನು ಮಾರ್ಕೆಟಿಗೆ ತಂದು ರಾಶಿ ಹಾಕಲು ಹೆಣಗಾಡುತ್ತಿದ್ದರೆ, ವಾರದಲ್ಲಿ ಒಮ್ಮೆ ಸಿಗುವ ಕೃಷಿ ಸಾಮಾಗ್ರಿ, ಫ್ರೆಶ್ ಮೀನು, ತರಕಾರಿಗಳಿಗಾಗಿ ಮಾರ್ಕೆಟ್‌ನಲ್ಲಿ ಜನ ನೂಕುನುಗ್ಗಲು ಮಾಡುತ್ತಿದ್ದರು. ಎಲ್ಲೆಂದರಲ್ಲಿ ನುಗ್ಗುವ ರಿಕ್ಷಾಗಳು, ದ್ವಿಚಕ್ರವಾಹನಗಳು ಜನರ ನಡಿಗೆಗೆ ಬ್ರೇಕ್ ಹಾಕುತ್ತಿದ್ದರೆ, ಉಂಡಾಡಿ ದನ, ನಾಯಿಗಳು ಕೂಡಾ ಜನರ ನೇರ ನಡಿಗೆಗೆ ತೊಂದರೆ ಕೊಡುತ್ತಿದ್ದವು. ಈ ಎಲ್ಲಾ ಸನ್ನಿವೇಶಗಳ ನಡುವೆಯೂ ತನಗೆ ಬೇಕಾದ ಕಡಿಮೆ ಕ್ರಯದ ಫ್ರೆಶ್ ಮೀನು ಖರೀದಿಸಿ, ಮಾರ್ಕೆಟ್‌ನಿಂದ ಹೊರಬಂದು ರಸ್ತೆಗೆ ಮುಟ್ಟಿದಾಗ ಮುದುಕಿ ರಾಬಿಯಮ್ಮಳಿಗೆ ಸಾಕು ಸಾಕಾಯಿತು.

ಜಗತ್ತಿನಲ್ಲಿ ಯಾರು ಏನನ್ನೂ ಕಳೆದುಕೊಂಡಿಲ್ಲವೋ ಅವರು ಏನನ್ನೂ ಪಡೆದಿಲ್ಲ. ರಾಬಿಯಮ್ಮ ಇದಕ್ಕೆ ಹೊರತಾಗಿರಲಿಲ್ಲ. ಒಲವಿನ ಮಹಾಪೂರವನ್ನೇ ಹರಿಸುವ ಬಡವ ಗಂಡ, ನೀತಿ ನಿಯತ್ತಿನಲ್ಲಿ ಬೆಳೆದು, ಧರ್ಮದ ಚೌಕಟ್ಟಿನಲ್ಲಿ ದುಡಿದು ತಿನ್ನುವ ಶ್ರಮಜೀವಿ ಮಗ, ಮನೆಕೆಲಸದಲ್ಲಿ ಹೆಗಲಿಗೆ ಹೆಗಲು ಕೊಡುವ ನಿರಾಂಡಬರ ಸುಂದರಿ ಸೊಸೆ, ಶಾಲೆ-ಕಾಲೇಜು ಕಲಿಯುತ್ತಿರುವ ಮೂರು ಸುಸಂಸ್ಕೃತ ಮಕ್ಕಳು, ಮನೆಗೆ ಮಾರ್ಗದರ್ಶಿಯಾಗಿ, ತಪ್ಪು‌ಒಪ್ಪುಗಳನ್ನು ತೋರಿಸಿಕೊಡುತ್ತಾ ಸದಾ ಧರ್ಮದ ಹಿರಿಮೆಯನ್ನೇ ಉಪದೇಶಿಸುವ ಅತ್ತೆ. ರಾಬಿಯಮ್ಮಳ ಮನೆಯಲ್ಲಿ ಪ್ರೀತಿ ಮಡುವುಗಟ್ಟಿತ್ತು. ಎಲ್ಲಿ ತೃಪ್ತಿ ಇದೆಯೋ ಅಲ್ಲಿ ಸುಖ ಇದೆ. ಎಲ್ಲಿ ಸುಖ ಇದೆಯೋ ಅಲ್ಲಿ ಜೀವನ ಇದೆ.

ಮೀನು ಮತ್ತು ತರಕಾರಿ ತುಂಬಿದ ಚೀಲವನ್ನು ಬಲಗೈಯಲ್ಲಿ ಹಿಡಿದುಕೊಂಡು ನೇರವಾಗಿ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದ ರಾಬಿಯಮ್ಮಳಿಗೆ ಹೇಳಿಕೊಳ್ಳುವ ಮಹಾಸಮಸ್ಯೆ ಏನೂ ಇಲ್ಲ. ಮನೆಯ ಸಂಪೂರ್ಣ ಉಸ್ತುವಾರಿಯನ್ನು ಸೊಸೆ ನೋಡಿಕೊಳ್ಳುತ್ತಿದ್ದಳು. ಮಗ ಸ್ವಂತ ಟೆಂಪೋ ಓಡಿಸುತ್ತಿದ್ದಾನೆ. ಗಂಡ ಮನೆ ಪಕ್ಕದಲ್ಲೇ ಒಂದು ಸಣ್ಣ ಅಂಗಡಿ ನಡೆಸುತ್ತಿದ್ದು ಜೀವನ ಹೇಗೋ ಸಾಗುತ್ತಿತ್ತು. ಕಾಲೇಜಿಗೆ ಹೋಗುವ ಇಬ್ಬರು ಹೆಣ್ಮಕ್ಮಳ ಮದುವೆ ನಡೆದುಬಿಟ್ಟರೆ ರಾಬಿಯಮ್ಮ ನಿರಾಳ. ಇನ್ನೊಬ್ಬ ಮಗ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾನೆ. ರಾಬಿಯಮ್ಮ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಸೃಷ್ಠಿಸಿದ ದೇವರಿಗೆ ಸಲಹುವ ಹೊಣೆಗಾರಿಕೆಯು ಇದೆ. ನಾವು ನಿಮಿತ್ತ ಮಾತ್ರ. ಈ ಒಂದು ದೃಢ ನಿಶ್ಚಯ ಇರುವುದರಿಂದಲೇ ರಾಬಿಯಮ್ಮ ಬದುಕನ್ನು ಗಹನವಾಗಿ ತೆಗೆದುಕೊಂಡಿಲ್ಲ. ಜೀವನವನ್ನು ಗಹನವಾಗಿ ತೆಗೆದುಕೊಂಡರೆ ಜೀವಂತವಾಗಿ ಉಳಿಯುವುದು ಕಷ್ಟ. ಸುಖವನ್ನು ಹುಡುಕುತ್ತಾ ಹೋಗುವುದೇ ದುಃಖಕ್ಕೆ ಮೂಲ ಕಾರಣ. ಸುಖ ಜೀವನದ ರಹಸ್ಯ ತೃಪ್ತಿಯಲ್ಲಿ ಅಡಗಿದೆ. ರಾಬಿಯಮ್ಮಳ ಮನೆಯಲ್ಲಿ ತೃಪ್ತಿ ಇತ್ತು. ಆದುದರಿಂದ ಅಲ್ಲಿ ಸುಖ ಇತ್ತು.

ಪೇಟೆಯ ಜನಜಂಗುಳಿಯ ರಸ್ತೆ ದಾಟಿ ರಾಬಿಯಮ್ಮ ಮನೆಯ ಮಣ್ಣುರಸ್ತೆ ಯಲ್ಲಿ ನಡೆಯುತ್ತಿದ್ದಳು. ಇನ್ನೊಂದು ಐದು ನಿಮಿಷದ ನಡಿಗೆ. ವಯಸ್ಸಾದುದರಿಂದ ಕೈ ಚೀಲದ ಭಾರವನ್ನು ತಡೆಯಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಆಗಾಗ್ಗೆ ಕೈ ಬದಲಾಯಿಸುತ್ತಿದ್ದಳು. ತೀರಾ ಸುಸ್ತಾಗಿ ಕೈ ನೋವು ಶುರುವಾದಾಗ ಅನಿವಾರ್ಯವಾಗಿ ಕೈ ಚೀಲವನ್ನು ಕೆಳಗಿಟ್ಟು ನಿಂತು ಕೊಳ್ಳುತ್ತಿದ್ದಳು. ಆಗ ಅವಳಿಗೆ ಅನತಿದೂರದ ರಸ್ತೆ ಬದಿಯ ಸಾಲ್ಮರದ ಕೆಳಗೆ ಮೂರು ಮುದುಕರು ಕುಳಿತದ್ದು ಕಂಡು ಬಂತು. ಅವಳು ನಡೆಯುತ್ತಾ ಅವರ ಬಳಿ ಬಂದಳು. ರಾಬಿಯಮ್ಮ ಅವರನ್ನು ನೋಡಿದಳು. ತೀರಾ ಹಣ್ಣು ಹಣ್ಣು ಮುದುಕರು. ಬದುಕಿನ ಕೊನೆಯ ಘಟ್ಟದಲ್ಲಿದ್ದಂತೆ ಕಂಡು ಬರುತ್ತಿತ್ತು. ತೀರಾ ಸರಳ ಉಡುಗೆ ತೊಟ್ಟಿದ್ದರೂ ಅವರ ಮುಖದಲ್ಲಿ ಒಂದು ರೀತಿಯ ಧಾರ್ಮಿಕ ಕಳೆ ಇತ್ತು. ಆದರೆ ಅವರು ತುಂಬಾ ಹಸಿದವರಂತೆ ಮತ್ತು ಸುಸ್ತಾದವರಂತೆ ರಾಬಿಯಮ್ಮಳಿಗೆ ತೋರಿತು. ಅವಳ ಮೃದು ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ಮನೆಯಲ್ಲಿ ಮೃಷ್ಟಾನ್ನ ಇಲ್ಲದಿದ್ದರೂ ಮಡಕೆ ತುಂಬಾ ಗಂಜಿ ಇದೆ. ಬಿಸಿ ಮಾಡಿಟ್ಟ ರಾತ್ರಿಯ ಮೀನು ಸಾರು ಇದೆ. ಹಸಿದವರಿಗೆ ಆನ್ನವಿಕ್ಕುವುದು ಧರ್ಮವಲ್ಲವೇ? ರಾಬಿಯಮ್ಮ ಅವರ ಬಳಿ ಬಂದು ನಿಂತು ಕೊಂಡಳು. ಆ ಮುದುಕರ ಗಮನ ಅವಳತ್ತ ಹರಿದಾಗ ರಾಬಿಯಮ್ಮ ಮೆಲುಸ್ವರದಲ್ಲಿ ಅಂದಳು. ನೀವು ತುಂಬಾ ಹಸಿದಿದ್ದೀರಿ ಅಂತ ಕಾಣುತ್ತದೆ. ತಪ್ಪು ತಿಳಿದುಕೊಳ್ಳುವುದಿಲ್ಲವಾದರೆ ನನ್ನೊಂದಿಗೆ ಬನ್ನಿ. ಹೊಟ್ಟೆ ತುಂಬಾ ಉಂಡು ಹೋಗುವಿರಂತೆ.”

ಆ ಮುದುಕರು ಒಬ್ಬರನ್ನೊಬ್ಬರು ನೋಡಿಕೊಂಡರು. ಅವರಲ್ಲಿ ಒಬ್ಬರು ಬಹಳ ವಿನಮ್ರದಿಂದ ಅಂದರು.

“ತಾಯೀ, ನಿನ್ನ ಮನೆಯಲ್ಲಿ ಗಂಡಸರಿದ್ದಾರೆಯೇ?”

“ಇಲ್ಲ.”

“ಹಾಗಾದರೆ ನಾವು ಬರಲಾರೆವು.”

ರಾಬಿಯಮ್ಮ ತೀರಾ ನಿರಾಶೆಯಿಂದ ಮನೆಗೆ ಹೋದಳು. ಅವಳಿಗೆ ಒಂದು ಪುಣ್ಯಕಾರ್ಯ ಕೈ ತಪ್ಪಿದ ನೋವಿತ್ತು.

ಮಧ್ಯಾಹ್ನವಾಯಿತು. ಬಹಳ ತಡವಾಗಿ ಗಂಡ ಮಧ್ಯಾಹ್ನದ ಊಟಕ್ಕೆ ಬಂದಾಗ ರಾಬಿಯಮ್ಮ ನಡೆದ ಘಟನೆ ವಿವರಿಸಿದಳು. ಗಂಡ ಉತ್ತರಿಸಿದರು,

“ನೀನೀಗ ಆ ಹಿರಿಯರ ಬಳಿ ಪುನಃ ಹೋಗು. ಮತ್ತು ಮನೆಗೆ ಗಂಡ ಬಂದಿದ್ದಾರೆ. ನೀವೆಲ್ಲಾ ಊಟಕ್ಕೆ ಬನ್ನಿ ಅಂತ ಹೇಳು. ಅವರನ್ನ ಕರೆದುಕೊಂಡೇ ಬಾ.”

ಗಂಡನ ಆದೇಶದಂತೆ ರಾಬಿಯಮ್ಮ ಸಂತೋಷದಿಂದ ಹೊರಟಳು. ಆ ಮುದುಕರು ಅದೇ ಸಾಲ್ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ರಾಬಿಯಮ್ಮ ತಲುಪಿದೊಡನೆ ಅವರು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು.

“ನನ್ನ ಗಂಡ ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದಿದ್ದಾರೆ. ದಯವಿಟ್ಟು ನೀವು ಮೂವರೂ ನನ್ನ ಗುಡಿಸಲಿಗೆ ಬಂದು ಈ ಬಡವಳ ಆತಿಥ್ಯವನ್ನು ಸ್ವೀಕರಿಸಬೇಕು.” ಬಹಳ ವಿನಮ್ರಳಾಗಿ ರಾಬಿಯಮ್ಮ ಮುದುಕರನ್ನು ಬೇಡಿಕೊಂಡಳು. ಸ್ವಲ್ಪ ಹೊತ್ತಿನ ಮೌನದ ನಂತರ ಆ ಮುದುಕರಲ್ಲಿ ಒಬ್ಬರು ಈ ರೀತಿ ಉತ್ತರಿಸಿದರು.

“ತಾಯೀ, ನಿನ್ನ ಅತಿಥಿ ಸತ್ಕಾರಕ್ಕೆ ಧನ್ಯವಾದಗಳು. ಆದರೆ ನಮ್ಮದೊಂದು ಶರ್ತಿದೆ. ನನ್ನ ಹೆಸರು ಪ್ರೀತಿ. ಇವನು ಯಶಸ್ಸು ಹಾಗೂ ಅವನು ಸಂಪತ್ತು. ನಾವು ಮೂವರೂ ಒಟ್ಟಾಗಿ ನಿನ್ನ ಅತಿಥಿಯಾಗಿ ಬರಲಾರೆವು. ಈ ಮೂವರಲ್ಲಿ ಯಾರಾದರೂ ಒಬ್ಬರನ್ನು ನೀನು ಆಯ್ಕೆ ಮಾಡಿ ಕರಕೊಂಡು ಹೋಗು”

ರಾಬಿಯಮ್ಮಳಿಗೆ ಆ ಕ್ಷಣದಲ್ಲಿ ಏನೂ ಉತ್ತರಿಸಲು ಆಗಲಿಲ್ಲ. “ಈಗ ಬರುತ್ತೇನೆ” ಎಂದವಳೇ ಮನೆಗೆ ಹಿಂತಿರುಗಿ ಗಂಡನಲ್ಲಿ ವಿಷಯ ತಿಳಿಸಿದಳು. ಅದೇ ಸಮಯಕ್ಕೆ ಹಿರಿಮಗನೂ, ಶಾಲೆಗೆ ಹೋದ ಮಕ್ಕಳೂ ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದರು. ಎಲ್ಲರೂ ಸೇರಿ ಯಾರನ್ನು ಅಮಂತ್ರಿಸುವುದು ಎಂದು ಚರ್ಚಿಸಲಾರಂಭಿಸಿದರು. ಮಕ್ಕಳು ಸಂಪತ್ತನ್ನು ಆಮಂತ್ರಿಸುವ ಅಂದರು. ರಾಬಿಯಮ್ಮಳ ಗಂಡ ಹಾಗೂ ಸೊಸೆ ಯಶಸ್ಸನ್ನು ಆಮಂತ್ರಿಸುವ ಅಂದರು. ರಾಬಿಯಮ್ಮ ಕೂಡಾ ಗಂಡನ ಅಭಿಪ್ರಾಯಕ್ಕೆ ಸಮ್ಮತಿ ನೀಡಿದಳು. ಆದರೆ ಅಭಿಪ್ರಾಯದಲ್ಲಿ ಯಾವುದೇ ಹೊಂದಾಣಿಕೆ ಬಂದಿಲ್ಲವಾದ್ದರಿಂದ ಎಲ್ಲರೂ ಮನೆಯಲ್ಲಿ ಹಿರಿಯರಾದ ಅಜ್ಜಿಯನ್ನೇ ಕೇಳುವ ಅಂತ ತೀರ್ಮಾನಕ್ಕೆ ಬಂದರು. ಎಲ್ಲರೂ ಒಳಕೋಣೆಯಲ್ಲಿದ್ದ ಅಜ್ಜಿಯ ಬಳಿಗೆ ಹೋಗಿ ವಿಷಯವನ್ನು ತಿಳಿಸಿ, ತೀರ್ಮಾನವನ್ನು ಅಜ್ಜಿಗೆ ಬಿಟ್ಟು ಬಿಟ್ಟರು. “ಅನುಭವವಿರುವಲ್ಲಿ ಅಮೃತ ಇರುತ್ತದೆ.” ಅಜ್ಜಿ ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡು ಆಲೋಚಿಸಿದಳು. ಮತ್ತೆ ಕಣ್ಣು ತೆರೆದು ಮುಗುಳ್ಳಕ್ಕು ಅಂದಳು.

“ಮಗಳೇ, ಈ ಮನೆಯಲ್ಲಿ ಒಲವಿದೆ, ತೃಪ್ತಿಯಿದೆ, ಸ್ನೇಹವಿದೆ, ಸಂಸ್ಕಾರ ಇದೆ. ನೀನು ಪ್ರೀತಿಯನ್ನು ಮನೆಗೆ ಕರೆದುಕೊಂಡು ಬಾ. ಅವರನ್ನು ಸತ್ಕರಿಸಿ ಕಳುಹಿಸಿಕೊಡು.” ಈ ಮನೆ ಪ್ರೀತಿಯಿಂದ ತುಂಬಿ ತುಳುಕಲಿ. ಎಲ್ಲಿ ಪ್ರೀತಿಯಿದೆಯೋ ಅಲ್ಲಿ ದೇವನಿದ್ದಾನೆ.”

ಹಿರಿಯರ ಮಾತಿಗೆ ಬೆಲೆ ಕೊಡುವವರೇ ಆ ಮನೆಯಲ್ಲಿ ತುಂಬಿ ಬಿಟ್ಟಿದ್ದಾರೆ. ಮತ್ತೆ ಎರಡು ಮಾತಿಲ್ಲ. ರಾಬಿಯಮ್ಮ ಸಂತೋಷದಿಂದ ಆ ಮುದುಕರಿರುವ ಕಡೆ ನಡೆದಳು. ಅವಳಲ್ಲಿ ತಾನು ಯಾರಿಗಾದರೊಬ್ಬರಿಗಾದರೂ ಅನ್ನ ನೀಡಿ ಫುಣ್ಯಕಟ್ಟಿಕೊಳ್ಳುವ ತವಕ ಇತ್ತು. ಅವಳು ಮುದುಕರ ಹತ್ತಿರ ಒಂದು, ತನ್ನೊಂದಿಗೆ ಪ್ರೀತಿಯನ್ನು ಕಳುಹಿಸಿಕೊಡಲು ಬಿನ್ನವಿಸಿಕೊಂಡಳು. ಪ್ರೀತಿಯೊಂದಿಗೆ ರಾಬಿಯಮ್ಮ ಮನೆಯ ಕಡೆ ನಡೆದಳು. ಇನ್ನೇನು! ಮನೆ ತಲುಪಿತು ಎನ್ನುವಾಗ ರಾಬಿಯಮ್ಮ ತಿರುಗಿ ನೋಡಿದಳು. ಪ್ರೀತಿಯೊಂದಿಗೆ ಯಶಸ್ಸು ಮತ್ತು ಸಂಪತ್ತು ಕೂಡಾ ಅವಳ ಮನೆ ಬಾಗಿಲಲ್ಲೇ ನಿಂತಿದ್ದಾರೆ. ರಾಬಿಯ್ಮಳಿಗೆ ಅಶ್ಚರ್ಯವಾಗಿ ವಿನಮ್ರತೆಯಿಂದ ಕೇಳಿದಳು.

“ಹಿರಿಯರೇ, ನಿಮ್ಮ ಮಾತಿನಂತೆ ನಾನು ಪ್ರೀತಿಯನ್ನು ಮಾತ್ರ ಮನೆಗೆ ಕರೆದುಕೊಂಡು ಬಂದೆ. ಆದರೆ ಉಳಿದ ನೀವಿಬ್ಬರೂ ಅವರೊಂದಿಗೆ ಬರಲು ಕಾರಣವೇನು?” ಮುದುಕರು ಮನೆಯ ಒಳಗೆ ಬಂದು ಕುಳಿತರು ಮತ್ತು ಮುಗುಳ್ನಗುತ್ತಾ ಅಂದರು.

“ತಾಯೀ, ನೀನು ಐಶ್ವರ್ಯ ಅಥವಾ ಯಶಸ್ಸನ್ನು ಮನೆಗೆ ಆಮಂತ್ರಿಸುತ್ತಿದ್ದರೆ ಉಳಿದ ನಾವಿಬ್ಬರೂ ಖಂಡಿತ ಬರುತ್ತಿರಲಿಲ್ಲ. ಆದರೆ ನೀನು ಪ್ರೀತಿಯನ್ನು ಆರಿಸಿದೆ. ತಿಳಿದುಕೋ ಎಲ್ಲಿ ‘ಪ್ರೀತಿ’ ಇದೆಯೋ ಅಲ್ಲಿ ‘ಯಶಸ್ಸು’ ಇದೆ. ಎಲ್ಲಿ ‘ಯಶಸ್ಸು’ ಇದೆಯೋ ಅಲ್ಲಿ ‘ಸಂಪತ್ತು’ ಇದೆ.

ರಾಬಿಯಮ್ಮ ಎಚ್ಚರಗೊಂಡು ಚಾಪೆಯ ಮೇಲೆ ಕುಳಿತುಕೊಂಡಳು. ಪಕ್ಕದಲ್ಲಿ ಮಲಗಿದ್ದ ಗಂಡನನ್ನು ನೋಡಿದಳು. ಹರಿದ ಚಾಪೆ, ತುಂಡು ಬೆಡ್‌ಶೀಟು. ಕಾಲುಗಳು ಮಣ್ಣಿನ ನೆಲಕ್ಕೆ ತಾಗುತ್ತಿತ್ತು. ಹಾಕಿದ ಬನಿಯನು ಅಲ್ಲಲ್ಲಿ ಹರಿದಿತ್ತು. ಉಟ್ಟ ಧೋತಿಯಲ್ಲಿ ಹಲವಾರು ತೇಪಗಳು. ಆದರೂ ನಿಶ್ಚಿಂತೆಯಿಂದ ಮಲಗಿದ ಗಂಡನನ್ನು ಹೆಮ್ಮೆಯಿಂದ ಮತ್ತೊಮ್ಮೆ ನೋಡಿದಳು. ಇದೇ ಸರಳ ಬದುಕನ್ನಲ್ಲವೇ ಪ್ರವಾದಿಯವರು ನಮಗೆ ಆದೇಶಿಸಿದದು? ಹೌದು, ಬಡತನ ಶಾಶ್ವತ, ಸಿರಿತನ ಚಂಚಲ. ಸುಖ ನಮ್ಮ ಕಾಲ ಬುಡದಲ್ಲಿದೆ. ಹುಡುಕಿಕೊಂಡು ಹೋದರೆ ಸಿಗದು. ಹಣದಿಂದ ಎಲ್ಲವನ್ನೂ ಪಡೆಯಬಹುದು. ಆದರೆ ಸ್ನೇಹ, ವಿಶ್ವಾಸ, ಮಮತೆ, ಪ್ರೀತಿಯನ್ನು ಪಡೆಯಲಾಗದು. ಅದನ್ನು ಒಲವಿನಿಂದ ಮಾತ್ರ ಪಡೆಯಬಹುದು. ಯಾರಿಗೆ ಆಶೆ ಹೆಚ್ಚುವುದು ಅವರು ಸದಾ ಬಡವರಾಗಿರುತ್ತಾರೆ. ಮನಸ್ಸಿನಲ್ಲಿ ತೃಪ್ತಿ ಇರುವವರು ಯಾವಾಗಲೂ ಧನವಂತರು. ಉಣ್ಣಲು ಗಂಜಿ ಕೊಟ್ಟು ಪ್ರೀತಿಯ ಅಮೃತವನ್ನೇ ತನ್ನ ಮನೆಗೆ ಸುರಿದ ಆ ಸೃಷ್ಟಿಕರ್ತನಿಗೆ ರಾಬಿಯಮ್ಮ ಕೈ ಎತ್ತಿ ಕೃತಜ್ಞತೆ ಅರ್ಪಿಸಿದಳು.

ಬೆಳಗಿನ ನಮಾಜಿಗಾಗಿ ಮಸೀದಿಯಿಂದ ಬಾಂಗಿನ ಧ್ವನಿ ಮೊಳಗಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಷಯ
Next post ವಿಪರ್ಯಾಸ

ಸಣ್ಣ ಕತೆ

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys