ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ ಹೇಳಬೇಕು. ದೂರ ಮಾಡಬೇಕು ಎಂದು ಎಷ್ಟು ತೀರ್‍ಮಾನಿಸಿದರೂ ಅವು ದೂರವಾಗಲೊಲ್ಲವು. ಅವರಿದ್ದಾಗಲೂ ಅವರನ್ನು ಕಳಕೊಂಡಾಗಲೂ ನನ್ನ ಆಲೋಚನೆಗಳು ಕಡಿಮೆಯಾಗಲಿಲ್ಲ. ನನ್ನ ಅಭಿಪ್ರಾಯದಲ್ಲಿ ಜೀವನ ಎಂದರೆ ಅದೊಂದು ನಂಬಿಕೆ, ಪ್ರೀತಿ, ವಿಶ್ವಾಸ. ಅದು ನಶಿಸಿದರೆ ಬಾಳಿಗೆ ಅರ್‍ಥ ಇಲ್ಲ. ಬಹುಶಃ ನನ್ನ ಬಾಳಿನಲ್ಲೂ ಅದೇ ನಡೆಯಿತು. ಈಗ ಪ್ರೀತಿಯ ಕೊರತೆಯಿಂದಾಗಿ ಭೀತಿ ಶುರುವಾಗಿದೆ. ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಭೀತಿ ಇಲ್ಲ. ಎಲ್ಲಿ ಭೀತಿಯಿದೆಯೋ ಅಲ್ಲಿ ಯಾತನೆ ಇದೆ. ನಗಲು ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಈ ಲೋಕದ ವ್ಯವಸ್ಥೆಯೇ ಹೀಗೆ, ನಾವು ನಗುವಾಗ ಜಗತ್ತು ನಮ್ಮೊಟ್ಟಿಗೆ ನಗುತ್ತದೆ. ಆದರೆ ನಾವು ಅಳುವಾಗ ಜಗತ್ತು ನಮ್ಮನ್ನು ನೋಡಿ ನಗುತ್ತದೆ.
“ಏನಮ್ಮಾ, ನೀನು ಏನು ಆಲೋಚಿಸುತ್ತಿಯಾ?” ಮಗಳು ಭುಜ ಹಿಡಿದು ಅಲುಗಾಡಿಸಿದಾಗಲೇ ನಾನು ವಾಸ್ತವ ಪ್ರಪಂಚಕ್ಕೆ ಬಂದೆ. ಒಂದು ಶುಷ್ಕ ನಗೆ ನಕ್ಕು ಬೋಗಿಯೊಳಗೆ ಕಣ್ಣಾಡಿಸಿದೆ. ನನ್ನ ಇಡೀ ಸಂಸಾರವೇ ನನ್ನ ಕಣ್ಣೆದುರು ಇದೆ. ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು ಎಲ್ಲರೂ ನನ್ನ ಸುತ್ತ ಮುತ್ತ ಕುಳಿತಿದ್ದಾರೆ. ಅಳಿಯ ಯಾವುದೋ ದಿನಪತ್ರಿಕೆ ಓದುತ್ತಿದ್ದು, ಒಮ್ಮೊಮ್ಮೆ ತನ್ನ ಮಗುವಿನ ಚಲನವಲನದತ್ತ ಗಮನ ಹರಿಸುತ್ತಿದ್ದ. ಮಗ ಹಾಗೂ ಸೊಸೆ ತಮ್ಮೊಳಗೆ ಏನೋ ಮಾತಾಡಿಕೊಳ್ಳುತ್ತಿದ್ದರು. ಮಕ್ಕಳು ಬೋಗಿಯೊಳಗೆ ಆಚೀಚೆ ಓಡಾಡುತ್ತಿದ್ದರು. ರೈಲು ಸಿಳ್ಳೆ ಹೊಡೆದು ಹೊರಟಿತು. ಅದರೊಂದಿಗೆ ನಾವು ಕೂಡಾ. ಜೀವನ ಎಂದರೆ ಒಂದು ಪಯಣ ತಾನೇ? ನಮ್ಮ ನಮ್ಮ ನಿಲ್ದಾಣ ಬಂದಾಗ ಇಳಿದು ಬಿಡುತ್ತೇವೆ ಇಷ್ಟೆ. ಅಲ್ಲಿಯವರೆಗೆ ಸಂಬಂಧಗಳ ಕುಣಿಕೆಯಲ್ಲಿ ಬಿದ್ದು ತೊಳಲಾಡುತ್ತೇವೆ. ಹಾಗಾದರೆ ಈ ಸಂಬಂಧವೆಂದರೇನು? ಮನುಷ್ಯ ಮರ್‍ಯಾದೆಯಲ್ಲಿ ಬದುಕಲು ಮಾಡಿಕೊಂಡ ವ್ಯವಸ್ಥೆ ಅಲ್ಲವೇ? ಅಲ್ಲದಿದ್ದರೆ ಆವ್ವಾ ಯಾರೋ? ಅಪ್ಪಾ ಯಾರೋ?
ನಾನು ಮತ್ತೊಮ್ಮೆ ನನ್ನ ಪರಿವಾರದ ಕಡೆ ನೋಡಿದೆ. ಮಗಳು ಎಡಕ್ಕೆ ಕತ್ತು ತಿರುಗಿಸಿ ನನಗೆ ಕಾಣದಂತೆ ಕೈ ಬೆರಳಿನಿಂದ ಕಣ್ಣೀರು ಒರಸುತ್ತಿದ್ದಳು. ಅವಳು ತಂದೆಯನ್ನು ನಾನು ಗಂಡನನ್ನು ಕಳೆದುಕೊಂಡು ಇವತ್ತಿಗೆ ತಿಂಗಳು ಸಂದುವು. ಅವಳು ಅಳುವುದು ಸಹಜವೇ. ನಲ್ವತ್ತೊಂಭತ್ತು ವರ್ಷದ ನನ್ನ ದಾಂಪತ್ಯ ಜೀವನದಲ್ಲಿ ಅವರು ಮಾಡಿದ್ದು ಒಂದು ಸ್ವಂತ ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮದುವೆಗಾಗಿ ಖರ್‍ಚು, ಮನೆ ಖರ್‍ಚಿಗೆ ಒಂದು ಸಣ್ಣ ತೋಟ, ಉಳಿಸಿದ್ದು ಸೊನ್ನೆ, ಮಗಳಿಗೆ ಇಂಜಿನಿಯರಿಂಗ್ ಕಲಿಸಿ, ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ಮಾಡಿಸಿಕೊಟ್ಟು, ಇಂಜಿನಿಯರಿಂಗ್ ಗಂಡನನ್ನು ಹುಡುಕಿ ಕೇಳಿದಷ್ಟು ದಕ್ಷಿಣೆ ನೀಡಿ, ಮದುವೆ ಮಾಡಿಸಿ ಈಗ ಅವರು ನೆಮ್ಮದಿಯಲ್ಲಿದ್ದಾರೆ. ಸಂತೋಷವೇ. ಮಕ್ಕಳಿಗಾಗಿ ತನ್ನ ಸರ್‍ವಸ್ವವನ್ನೂ ಧಾರೆಯೆರದ ತಂದೆಗಾಗಿ ಅವಳು ಒಂದಿಷ್ಟು ಕಣ್ಣೀರು ಹಾಕುವುದು ಸಹಜ ತಾನೇ? ಅಳಲಿ ಬಿಡಿ.
ನಮ್ಮ ಬೋಗಿಯೊಳಗೆ ಅನಿವಾರ್‍ಯ ಮೌನ ಆವರಿಸಿದರೂ ಒಬ್ಬೊಬ್ಬರು ಒಂದೊಂದು ಆಲೋಚನೆಯಲ್ಲಿ ಬಿದ್ದಿರುವುದು ಅವರ ಮುಖಭಾವದಿಂದ ನನಗೆ ವ್ಯಕ್ತವಾಗುತ್ತಿತ್ತು. ಮಗಳು ಹೆತ್ತ ತಾಯಿಯ ಕರುಳು ಸಂಬಂಧದಿಂದ ಹೊರ ಬರಲಾರದೆ ಚಡಪಡಿಸುತ್ತಿದ್ದಳು. ಹೆತ್ತ ತಾಯಿಗೆ ಕಿಂಚಿತ್ ಆಶಯ ನೀಡುವ ಎಂದು ಅವಳ ಮನಸ್ಸು ತಳಮಳಿಸುತ್ತಿದ್ದರೂ ಸ್ವಂತ ನಿರ್‍ಧಾರ ಕೈಗೊಳ್ಳುವ ಅಧಿಕಾರ ಅವಳಿಗಿರಲಿಲ್ಲ. ಅಲ್ಲದೆ ಸ್ವತಂತ್ರವಾಗಿ ಯಾವುದೇ ನಿರ್‍ಧಾರ ತೆಗೆದುಕೊಳ್ಳಲು ಅವಳಿಂದ ಆಗುತ್ತಿರಲಿಲ್ಲ. ಅದು ಸಾಧ್ಯವೂ ಇಲ್ಲ. ಆದರೂ ವಾಡಿಕೆಯಂತೆ “ಅಮ್ಮಾ, ನೀನು ನನ್ನೊಂದಿಗೆ ಕೆಲವು ತಿಂಗಳು ಇದ್ದು ಹೋಗು. ಅಣ್ಣನಿಗೆ ನಾನು ಹೇಳುತ್ತೇನೆ” ಎಂದು ಅಳುತ್ತಾ ಅಂದಿದ್ದಳು. ನಾನು ಉಕ್ಕಿ ಹರಿಯುವ ಕಣ್ಣೀರಿನೊಂದಿಗೆ ತಲೆ ಅಲ್ಲಾಡಿಸಿದ್ದೆ ಅಷ್ಟೇ.
ಮಗ ತಂದೆಯದೇ ಪಡಿಯಚ್ಚು, ಅವರದೇ ಗುಣ, ಹೆಂಡತಿ ಮಕ್ಕಳು ಅಂದರೆ ಅವರಂತೆಯೇ ಜೀವ ತೇಯುವ ಸ್ವಭಾವ. ಮುಂದೆ ಏನಾಗಬಹುದು? ಎಂಬ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸದೆ ಅವಸರದ ತೀರ್‍ಮಾನ ಕೈಗೊಳ್ಳುವ ತವಕ ಅವನದು. ಆದರೆ ಅವನ ಎಲ್ಲಾ ಸಜ್ಜನಿಕೆಗೆ, ಗುಣಕ್ಕೆ ಕೆಲವೊಮ್ಮೆ ತಡೆಯಾಗುವುದು ಸೊಸೆಯ ತೀರ್‍ಮಾನಗಳು. ಇಲ್ಲಿ ಸೊಸೆಯ ತಪ್ಪಿದೆ ಎಂದು ನನಗೆ ಕಾಣುವುದಿಲ್ಲ. ಎಷ್ಟೆಂದರೂ ಅವಳು ಹೊರಗಿನಿಂದ ಬಂದ ಹುಡುಗಿಯೇ, ನಮ್ಮ ಸಂಸಾರದ ನೀತಿ ನಿಯಮಗಳಿಗೆ ಹೊಂದಲು ಸಮಯಾವಕಾಶ ಬೇಕು. ಅಲ್ಲಿಯವರೆಗೆ ನನ್ನ ಅಸ್ತಿತ್ವ ಉಳಿಯುವುದು ಸಂಶಯಾಸ್ಪದವೇ ಸರಿ.
“ಅಮ್ಮಾ, ನೀನೆಲ್ಲೂ ಹೋಗಬೇಡ, ನನ್ನೊಂದಿಗಿರು” ನನ್ನನ್ನು ಅಪ್ಪಿ ಹಿಡಿದು ಕಣ್ಣೀರು ಸುರಿಸಿದ್ದ. ಸಂಸಾರದ ಈ ಎಲ್ಲಾ ಜಂಜಾಟದಿಂದ ಬಚ್ಚಿಟ್ಟುಕೊಳ್ಳಲು ಯತ್ನಿಸಿದಾಗಲೆಲ್ಲಾ ಕಾಲ ನನ್ನನ್ನು ಮತ್ತೆ ಮತ್ತೆ ತೆರದ ಬೆಳಕಿನಲ್ಲಿ ತಂದು ನಿಲ್ಲಿಸುತ್ತದೆ. ಕಾಲನ ಅವತಾರವೇ ಹೀಗೆ, ಕಾಲಕ್ಷಮಿಸಿದಷ್ಟು ಕ್ಷಮೆ, ಕಾಲ ಶಿಕ್ಷಿಸಿದಷ್ಟು ಶಿಕ್ಷೆ, ಮನುಷ್ಯ ನಿರ್‍ಮಿಸಿದ ಕಾನೂನಿನಿಂದಲೂ ಕೊಡಲಾಗುವುದಿಲ್ಲ. ಕಾಲ ಯಾವತ್ತೂ ಕೆಡುವುದಿಲ್ಲ. ಅದೇ ಆಕಾಶ, ಅದೇ ಸೂರ್‍ಯ, ಅದೇ ಚಂದ್ರ, ಅದೇ ಭೂಮಿ. ಕೆಡುವುದು ಮನುಷ್ಯನ ಆಚಾರ ವಿಚಾರ, ನಡೆನುಡಿ ಮಾತ್ರ.
ಯಾವುದೋ ನಿಲ್ದಾಣದಲ್ಲಿ ರೈಲು ನಿಂತಾಗಲೇ ನಾನು ವಾಸ್ತವಕ್ಕೆ ಇಳಿದಿದ್ದೆ. ಕುಟುಂಬದತ್ತ ಕಣ್ಣು ಹೊರಳಿಸಿದೆ. ಅಳಿಯ ಮೇಲಿನ ಬರ್‍ತ್‌ನಲ್ಲಿ ನಿದ್ರೆ ಹೋಗಿದ್ದ. ಸೊಸೆ ಕೂಡಾ ಕೆಳಗಿನ ಬರ್‍ತ್‌ನಲ್ಲಿ ನಿದ್ದೆ ಹೋಗಿದ್ದಳು. ಉಳಿದದ್ದು ಮಗ ಮತ್ತು ಮಗಳು. ಮಗಳು ನನ್ನ ಹೆಗಲಿಗೆ ವಾಲಿಕೊಂಡು ತೂಕಡಿಸುತ್ತಿದ್ದರೆ, ಮಗ ಮಕ್ಕಳೊಂದಿಗೆ ಅರೆ ನಿದ್ರಾವಸ್ಥೆಯಲ್ಲಿದ್ದ. ನನಗೆ ಮಾತ್ರ ನಿದ್ರೆ ದೂರವಾಗಿತ್ತು. ರಾತ್ರಿ ಸಂಪೂರ್‍ಣ ಆವರಿಸಿತ್ತು. ಹೊಸ ನಿಲ್ದಾಣಗಳು ಬಂದಾಗ ಮಾತ್ರ ಹೊರಗೆ ಬೆಳಕು ಕಾಣುತ್ತಿತ್ತೇ ಹೊರತು ಬಾಕಿ ಸಮಯದಲ್ಲಿ ಕತ್ತಲು. ಪೂರ್‍ತಿ ಕತ್ತಲು. ರೈಲಿನ ಢವ ಢವ ಶಬ್ದ, ಫ್ಯಾನಿನ ಗಾಳಿ ಹೊರತುಪಡಿಸಿದರೆ ನಿರ್‍ಜನ ಪ್ರದೇಶದಲ್ಲಿ ರೈಲು ಓಡುವ ಶಬ್ದ ಮಾತ್ರ ಕೇಳಿ ಬರುತ್ತಿತ್ತು. ಎಪ್ಪತ್ತು ವರ್‍ಷದ ನನ್ನ ಆಯುಷ್ಯದಲ್ಲಿ ನಾನು ಪಡೆದದ್ದೇನು? ಕಳೆದದ್ದು ಏನು? ಎಂದು ಯೋಚಿಸುವಾಗ ಸಿಗುವ ಉತ್ತರ ಶೂನ್ಯ. ನಾನು ಏನನ್ನೂ ಪಡೆದಿಲ್ಲವೆಂದು ಅನಿಸುವಾಗ ಏನನ್ನೂ ಕಳೆದುಕೊಂಡಿಲ್ಲ ಎಂದು ಕೂಡಾ ಭಾವನೆ ಬರುತ್ತದೆ. ಇಷ್ಟು ವರ್‍ಷ ನಾನು ಬದುಕಿದ್ದು ಮುಖ್ಯವಲ್ಲ. ಬದುಕಿದ್ದ ರೀತಿ ಮುಖ್ಯವಾಗಬೇಕು. ನಾನೀಗ ಏಕಾಂಗಿಯೇ ಎಂದು ಅನಿಸಿದಾಗ ಭಯವಾಗುತ್ತದೆ. ಆದರೆ ನಾನು ಖಂಡಿತವಾಗಿಯೂ ಏಕಾಂಗಿಯೇ. ಈಗಲೂ, ಹಿಂದೆಯೂ ಹಾಗೂ ಇನ್ನು ಮುಂದೆಯೂ, ಮನುಷ್ಯ ಹುಟ್ಟುವಾಗ ಏಕಾಂಗಿ, ಬೆಳೆದಾಗಲೂ ಏಕಾಂಗಿ, ಸುಖಿಸುವಾಗ ಏಕಾಂಗಿ ನಿದ್ರಿಸುವಾಗಲೂ ಏಕಾಂಗಿ, ಹಾಗೆಯೇ ಸಾಯುವಾಗಲೂ ಏಕಾಂಗಿ. ಹಾಗಿದ್ದರೆ ಏಕಾಂಗಿ ಎಂಬ ಭಯ ಏಕೆ? ಇದು ಅನಗತ್ಯ ಭಯ. ಮನುಷ್ಯ ಸೃಷ್ಟಿಸಿಕೊಂಡ ಭಯ. ಒಂದು ಲೆಕ್ಕದಲ್ಲಿ ನಾವು ಏಕಾಂಗಿ ಅಲ್ಲವೇ ಅಲ್ಲ. ಎಲ್ಲಿಯವರೆಗೆ ಈ ಭೂಮಿ ಆಕಾಶದಲ್ಲಿ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ನದಿ, ತೊರೆ, ನಕ್ಷತ್ರ, ಸೂರ್‍ಯ, ಚಂದ್ರ ಇರುತ್ತದೆಯೋ ಅಲ್ಲಿಯವರೆಗೆ ನಾವೆಂದೂ ಒಂಟಿಯಾಗುವುದಿಲ್ಲ. ಖಂಡಿತ ಅಲ್ಲ. ಮನಸ್ಸು ಹಗುರವಾಗಿ ಕಣ್ಣು ನಿದ್ರೆಗೆ ಜಾರಿತು.
ಎಚ್ಚರವಾದಾಗ ಬೆಳಗಾಗಿತ್ತು. ಮಗ ಇಳಿಯಲು ಬ್ಯಾಗ್ ಸರಿಪಡಿಸುತ್ತಿದ್ದ. ಬಹುಶಃ ನಮ್ಮ ನಿಲ್ದಾಣ ಬಂತು ಅಂತ ಕಾಣುತ್ತದೆ. ಮಗಳು ನನ್ನ ತೊಡೆಯಲ್ಲಿಯೇ ನಿದ್ರೆ ಹೋಗಿದ್ದಳು. ಇಪ್ಪತ್ತೈದು ವರ್‍ಷ ಸಾಕಿ ಸಲುಹಿದ ನನ್ನ ಕೈ ನಿಧಾನವಾಗಿ ಅವಳ ಮುಖ, ಹಣೆಯನ್ನು ಸವರತೊಡಗಿತು. ಅರಿಯದೆ ಜಾರಿದ ಕಣ್ಣೀರೊಂದು ಅವಳ ಗಲ್ಲಕ್ಕೆ ಬಿದ್ದಾಗ ಅವಳು ಕಣ್ಣು ತೆರೆದಳು. ಹೌದು, ಅಮ್ಮ ಯಾವಾಗಲೂ ಸತ್ಯವೇ. ಆದರೆ ಅಪ್ಪ ಬರೇ ನಂಬಿಕೆ ಮಾತ್ರ.
ಅಳಿಯ, ಮಗಳು ಹಾಗೂ ಮೊಮ್ಮಗನನ್ನು ರೈಲು ನಿಲ್ದಾಣದಲ್ಲಿಯೇ ಬೀಳ್ಕೊಟ್ಟು ನಾನು ಮಗ, ಸೊಸೆ ಹಾಗೂ ಮೊಮ್ಮಗಳೊಂದಿಗೆ ಮಗನ ಮನೆಗೆ ಬಂದಾಗ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಆ ಮುಗ್ಧ ಮಕ್ಕಳಿಗೇನು ಗೊತ್ತು ನೋವು ನಲಿವುಗಳ ಕಥೆ. ಮಗಳು ದಿನಕ್ಕೊಮ್ಮೆ ಫೋನು ಮಾಡಿ ನನ್ನ ಸುಖ ದುಃಖ ವಿಚಾರಿಸುತ್ತಿದ್ದಳು. ಆಹಾರದಲ್ಲಿ ಜಾಗ್ರತೆ ವಹಿಸಲು ಹೇಳುತ್ತಿದ್ದಳು. ಆದರೆ ತುಂಬಲಾರದ ನನ್ನ ನೋವಿಗೆ ಅವಳು ಜೀವ ತುಂಬಲು ಸಾಧ್ಯವೇ? ಆದರೆ ನಾನು ಜೀವನವನ್ನು ಗಹನವಾಗಿ ತೆಗೆದುಕೊಳ್ಳುವುದಿಲ್ಲವೆಂದು ನಿರ್‍ಣಯಿಸಿದೆ. ಯಾಕೆಂದರೆ ಹಾಗೇನಾದರೂ ನಾನು ಮಾಡಿದರೆ ಜೀವಂತವಾಗಿ ಉಳಿಯುವುದು ಕಷ್ಟವಾದೀತು. ಸತ್ಯದ ಸಾಕ್ಷಾತ್ಕಾರವಾಗಬೇಕಾದರೆ ನೋವು ಅನುಭವಿಸಲೇ ಬೇಕು. ನನ್ನ ಮನಸ್ಸಿನ ಗೊಂದಲಕ್ಕೆ ನನ್ನ ಹೃದಯದಲ್ಲಿ ಉತ್ತರವಿದೆ. ನನ್ನ ಹೃದಯದಷ್ಟು ನನ್ನನ್ನು ಬಲ್ಲವರು ಬೇರೆ ಯಾರಿದ್ದಾರೆ?
ಅವರು ತೀರಿ ಹೋಗುವ ಕೆಲವು ತಿಂಗಳ ಮೊದಲು ನನ್ನನ್ನು ಕೂತುಕೊಳ್ಳಿಸಿ ಹೇಳಿದ್ದರು. “ನೋಡು, ನಿನ್ನ ತಲೆಗೆ ನಿನ್ನ ಕೈಯೇ ಆಧಾರ. ಮನುಷ್ಯರನ್ನು, ಸಂಬಂಧಿಕರನ್ನು, ಮಕ್ಕಳು ಮರಿಗಳನ್ನು ಪೂರ್‍ತಿ ನಂಬುವವನು ಹತಾಷೆಯಿಂದ ಪರಿತಪಿಸಬೇಕಾಗುತ್ತದೆ. ನಿನಗೆ ಉಳಕೊಳ್ಳಲು ಸೂರಿದೆ. ತುತ್ತು ಅನ್ನ ತಿನ್ನಲಿಕ್ಕೆ ನನ್ನ ಪಿಂಚಣಿಯಿದೆ. ಸಾಕು, ನಿನ್ನ ಕಾಲಲ್ಲೇ ಕೊನೆತನಕ ನಿಲ್ಲು, ಮಕ್ಕಳ ನೆನಪಾದಾಗ ಹೋಗಿ ನೋಡಿಕೊಂಡು ಬಾ. ಅವರಿಗೆ ನಿನ್ನ ನೆನಪಾದರೆ ಅವರು ಬಂದು ನಿನ್ನನ್ನು ನೋಡಲಿ. ಯಾರಿಗೂ ಅವಲಂಬಿತವಾಗಬೇಡ, ಜನ ಏನೇ ಹೇಳಲಿ, ಅದಕ್ಕೆ ಜಗ್ಗಬೇಡ, ಜನರು ನಿನ್ನ ವಿಷಯವಾಗಿ ಆಡಿದ ಕೆಡುಕು ನಿಜವಾದರೆ ತಿದ್ದಿಕೋ, ಇಲ್ಲದಿದ್ದರೆ ನಕ್ಕು ಬಿಡು. ಎಲ್ಲರೊಡನೆಯೂ ನೀನು ನಿನ್ನ ದುಃಖವನ್ನು ಹೇಳಿಕೊಳ್ಳಬೇಡ. ಅದರಿಂದ ವಾತಾವರಣದಲ್ಲಿ ದುಃಖ ಹೆಚ್ಚಾಗುತ್ತದೆ. ದುಃಖ ಹಂಚುವುದರಿಂದ ಖಂಡಿತ ಕಡಿಮೆಯಾಗುವುದಿಲ್ಲ. ನಾನು ನಗುತ್ತಾ ತಲೆಯಲ್ಲಾಡಿಸಿದೆ. ಆದರೆ ಅವರ ಉಪದೇಶ ಜಾಸ್ತಿಯಾಗುತ್ತಿದ್ದಂತೆ ನಾನಂದಿದ್ದೆ. “ಸ್ವಲ್ಪ ಸುಮ್ಮನಿರಿ. ಈಗೀಗ ನೀವು ತುಂಬಾ ಮಾತಾಡುತ್ತೀರಿ. ಆದರೆ ಕೊನೆಗೆ ಅವರ ಮಾತಿನಂತೆ ಎಲ್ಲವೂ ನಡೆಯಿತು. ಯಾರಿಗೂ ಭಾರವಾಗದೆ ಹೊರಟು ಹೋದರು. ಈಗ ಉಳಿದದ್ದು ಅವರ ಮಾತುಗಳು ಮಾತ್ರ.
ಒಂದು ರೀತಿಯಲ್ಲಿ ಅವರು ನನ್ನ ಕಣ್ಣೆದುರು ತೀರಿ ಹೋದದ್ದು ನಿಜವಾಗಿಯೂ ಸಂತೋಷವೇ. ನನ್ನ ಮನಸ್ಸಿನಲ್ಲಿಯೂ ಹಾಗೆಯೇ ಆಗಬೇಕೆಂದು ಬಯಸಿದ್ದೆ. ಯಾಕೆಂದರೆ ಅವರಿಲ್ಲದೆ ನಾನು ಜೀವಿಸಬಲ್ಲೆ. ಆ ಎದೆಗಾರಿಕೆ ನನಗಿದೆ. ಆದರೆ ನಾನಿಲ್ಲದೆ ಅವರು ಒಂದು ದಿನವೂ ಬದುಕಲಾರರು. ನಲ್ವತ್ತೊಂಭತ್ತು ವರ್ಷದ ದಾಂಪತ್ಯ ಜೀವನದಲ್ಲಿ ಇದು ನಾನು ಕಂಡುಕೊಂಡ ಸತ್ಯ. ತುಂಬಾ ಮೃದು ಜೀವಿ, ಶಾಂತ ಸ್ವಭಾವದವರು. ಸಹನೆ, ತಾಳ್ಮೆ ಅವರ ಜೀವನದ ಅಂಗ. ಎಲ್ಲವನ್ನೂ ಸತ್ಯವೆಂದು ನಂಬುವವರು. ಇಂತವರಿಂದ ಒಂಟಿ ಜೀವನ ಖಂಡಿತ ಸಾಧ್ಯವಿಲ್ಲವೆಂದು ನನಗೆ ತಿಳಿದಿತ್ತು. ಅದಕ್ಕಾಗಿ ದೇವರಲ್ಲಿ ಪ್ರಾರ್‍ಥಿಸುತ್ತಿದ್ದೆ. “ನನ್ನ ಕಣ್ಣೆದುರೇ ಅವರ ಅಂತ್ಯವಾಗಲಿ. ಸುಖವಾಗಿ ಅವರನ್ನು ನಿನ್ನ ಪಾದದಡಿ ಕಳುಹಿಸಿ ಕೊಡುತ್ತೇನೆ” ಎಂದಿದ್ದೆ. ಹಾಗೆಯೇ ಆಯಿತು. ಇನ್ನು ನನ್ನ ಬದುಕೋ! ಮುಂದೆ ನೋಡುವಾ.
ಸೊಸೆ ನನಗಾಗಿ ರೂಮು ತಯಾರು ಮಾಡಿದಳು. ಹೊಸ ಬೆಡ್‌ಶೀಟು, ರಗ್ಗು ಹಾಸಿದಳು, ಬಿಸಿ ನೀರು ತುಂಬಿಸಿದ ಪ್ಲಾಸ್ಕ್ ಮತ್ತು ನನ್ನ ಮಾತ್ರೆಯ ಕಟ್ಟುಗಳನ್ನು ಮೇಜಿನ ಮೇಲಿಟ್ಟಳು. ಟಾಯ್ಲೆಟ್ ಇರುವ ರೂಮನ್ನೇ ಕೊಟ್ಟಳು. ಓದಲು ಒಂದಿಷ್ಟು ಪುಸ್ತಕಗಳು. “ಅಮ್ಮಾ ನೋಡಿ ನಿಮ್ಮ ರೂಮು. ಇನ್ನೇನಾದರೂ ಬೇಕಾದರೆ ಸಂಕೋಚವಿಲ್ಲದೆ ಕೇಳಿ” ಅಂದಳು. ಏನು ಬೇಕಾಗಿದೆ ನನಗೆ? ನನಗೆ ನನ್ನ ಗಂಡನನ್ನು ಪುನಃ ಕೊಡಲು ಇವಳಿಂದ ಸಾಧ್ಯವೇ? ನನ್ನ ಕಳೆದು ಹೋದ ಹೃದಯದ ತುಂಡನ್ನು ನಾನು ಪುನಃ ಗಳಿಸಲಾರೆ. ಆ ದಿನಗಳು ಉರುಳಿದವು. ಮಗ ಬೆಳಿಗ್ಗೆ ಏಳು ಗಂಟೆಗೆ ಕಚೇರಿಗೆ ಹೊರಟು ಹೋದರೆ ಬರುವುದು ರಾತ್ರಿ ಎಂಟು ಗಂಟೆಗೆ ಸೊಸೆ ಬೆಳಿಗ್ಗೆ ಒಂಭತ್ತು ಗಂಟೆಗೆ ಆಫೀಸಿಗೆ ಹೋದರೆ ಬರುವುದು ಸಂಜೆ ಆರು ಗಂಟೆಗೆ ಮೊಮ್ಮಗ ಶಾಲೆಗೆ. ಈ ಅವಧಿಯಲ್ಲಿ ನಾನು ಏಕಾಂಗಿ ಈ ಏಕಾಂಗಿತನವನ್ನು ಹೋಗಲಾಡಿಸುವವರು ಯಾರು? ಹೆಸರಾಂತ ಅಪಾರ್‍ಟ್‌ಮೆಂಟಿನ ಆ ಮಳಿಗೆಯ ಪ್ಲಾಟಿನಲ್ಲಿ ನನ್ನ ಜೀವ ತುಡಿಯುವುದನ್ನು ಯಾರು ಬಲ್ಲರು? ನಾಲ್ಕು ಗೋಡೆಯ ಹೊರಗೆ ಬಂದು ನಿಂತಾಗ, ಪುನಃ ಅಷ್ಟೇ ವಿಸ್ತಾರವಾದ ಗೋಡೆ ಕಿಟಕಿಗಳು. ಮನುಷ್ಯರ ಒಡನಾಟ ಇಲ್ಲ. ಅಲ್ಲೊಂದು ಇಲ್ಲೊಂದು ಪ್ಲಾಟ್ ವಾಸಿಗಳು ಕಂಡರೆ ಒಂದು ಶುಷ್ಕ ನಗೆ, ಆ ನಗೆಯಲ್ಲಿ ಏನಾದರೂ ಪ್ರೀತಿ ಇದೆಯಾ? ಕರುಣೆ ಇದೆಯಾ? ಮಾನವೀಯತೆ ಇದೆಯಾ? ಏನೂ ಇಲ್ಲ. ಎಲ್ಲವೂ ಯಾಂತ್ರಿಕ, ಬರೇ ಯಾಂತ್ರಿಕ. ಮಗ ಹಾಗೂ ಸೊಸೆಯ ವಾರದ ಒಂದು ರಜೆಗಾಗಿ ಜಾತಕ ಪಕ್ಷಿಯಂತೆ ಕಾಯಬೇಕು. ಆಗ ಎಲ್ಲರೂ ಒಂದಾದರೂ ಮನೆಯಲ್ಲಿ ಒಂದು ಕ್ಷಣ ಕುಳಿತು ಆ ಸುಖವನ್ನು ಸವಿಯುವ ಅವಕಾಶ ಇಲ್ಲ. ಮಾಲ್, ಪಾರ್‍ಕ್ ಎಂದು ತಿರುಗಾಟ. ಏನಿದು ಸಂಬಂಧ! ಅವರ ಒಂದು ಮಾತು ಈಗಲೂ ನೆನಪಾಗುತ್ತದೆ. “ನೋಡು, ನನ್ನ ನಿನ್ನ ಸಂಬಂಧ ಎಲ್ಲಿಗೆ ಅಂತ್ಯವಾಗುತ್ತದೋ ಅಲ್ಲಿಗೆ ನಮ್ಮ ಜೀವನ ಮುಗಿಯಿತು. ನಂತರದ್ದು ಬರೇ ಸೆಣಸಾಟ.” ಆ ನೋವನ್ನು ನಾನು ಪಡಕೊಂಡೆ. ಅವರು ಭಾಗ್ಯವಂತರು. ಒಂದು ಹನಿ ಕಣ್ಣೀರು ಗಲ್ಲವನ್ನು ತೋಯಿಸಿತು. “ಅಮ್ಮಾ ನಿನಗೆ ಬೇಸರವಾದಾಗಲೆಲ್ಲಾ ಸಂಜೆ ವಾಕಿಂಗು ಹೋಗು” ಮಗ ಆಗಾಗ್ಗೆ ಹೇಳುತ್ತಿದ್ದ. ಈ ವಾಕಿಂಗ್‌ನಲ್ಲಿ ಏನಿದೆ? ಊರಲ್ಲಾದರೆ ನೆರೆಕರೆಯವರನ್ನು ಹತ್ತಿರ ಕರೆದು ಮಾತಾಡಿಸಿದರೆ ಘಂಟೆಗಟ್ಟಲೆ ಹರಟೆ ಹೊಡೆಯಬಹುದಿತ್ತು. ಆಗ ಮನಸ್ಸಿಗೆ ಉಂಟಾಗುವ ಸಂತೋಷವೇನು? ಮತ್ತೂ ಬೋರಾದರೆ ತೋಟದಲ್ಲಿ ಒಂದು ಸುತ್ತು ತಿರುಗಾಡಿದರೆ ಸಾಕು. ನೆಮ್ಮದಿಯಾಗುತ್ತಿತ್ತು. ಪ್ಲಾಟುಗಳ ಈ ಕಾಂಕ್ರಿಟ್ ಊರಲ್ಲಿ ‘ನೆರೆಕರೆ’ಯ ಅರ್‍ಥ ಶಬ್ದಕೋಶದಿಂದಲೇ ಮಾಯವಾಗಿ ಬಿಟ್ಟಿದೆ. ಯಾರಿಗೂ ಒಂದೈದು ನಿಮಿಷ ನಿಂತು ಮಾತಾಡಲು ಪುರುಸೊತ್ತಿಲ್ಲ. ಅಷ್ಟು ಕಾರ್‍ಯನಿರತರು. ಹಾಗಾದರೆ ಇವರು ವಿಶ್ರಾಂತಿ ಹೊಂದುವುದು ಯಾವಾಗ?
ಈ ಒಂದು ಮಾನಸಿಕ ತೊಳಲಾಟ ತಪ್ಪಿಸಲು ನಾನು ಪ್ಲಾಟಿನಿಂದ ಕೆಳಗೆ ಬರುತ್ತಿದ್ದೆ. ಈ ಬಂಗಾರದ ಪಂಜರದ ಹೊರಗೆ ಬಂದು ರಸ್ತೆ ಬದಿಯಲ್ಲಿ ನಿಂತು ಎದುರಿನ ಒಂಟಿ ಮನೆಗಳನ್ನು ನೋಡುತ್ತಿದ್ದೆ. ಅಲ್ಲಲ್ಲಿ ಐದಾರು ಚಂದ ಚಂದದ ಒಂಟಿ ಮನೆಗಳಿದ್ದವು. ಆ ಮನೆಗಳಿಗೆ ಸುಂದರ ಕಲ್ಲಿನ ಕಾಂಪೌಂಡುಗಳಿದ್ದುವು. ಕಾಂಪೌಂಡಿನ ಒಳಗೆ ಹೂದೋಟಗಳಿದ್ದವು. ಆದರೆ ಜನರ ಓಡಾಟ ಮಾತ್ರ ಇಲ್ಲ. ಬೆಳಗ್ಗಿನ ಮತ್ತು ಸಂಜೆ ಹೊತ್ತು ಕೆಲವೊಂದು ವಯಸ್ಸಾದ ಹೆಂಗಸರು ಮನೆಯ ಒಳಗೆ ಹಾಗೂ ಹೊರಗೆ ಓಡಾಡುತ್ತಿದ್ದುದು ಕಂಡು ಬರುತ್ತಿತ್ತು. ಸ್ವಲ್ಪ ಸಮಯ ಆ ಮನೆಗಳನ್ನೇ ನೋಡುತ್ತಾ ನಾನು ಮತ್ತೆ ನನ್ನ ಗೂಡು ಸೇರುತ್ತಿದ್ದೆ. ದಿನಗಳೆದಂತೆ ಇಲ್ಲಿ ನಾನೊಂದು ವಿಶೇಷವನ್ನು ಕಂಡೆ. ಸಂಜೆ ಸುಮಾರು ನಾಲ್ಕು ಗಂಟೆಯ ಸಮಯಕ್ಕೆ ಸರಿಯಾಗಿ ನಾಲ್ಕೈದು ವಯಸ್ಸಾದ ಮಹಿಳೆಯರು ಒಂದು ಮನೆಯ ಎದುರು ಜಮಾಯಿಸುತ್ತಿದ್ದರು. ನಂತರ ಒಂದೆಡೆ ಕುಳಿತು ಏನೋ ಆಡುತ್ತಾ, ನಗಾಡುತ್ತಾ, ಮಾತಾಡುತ್ತಾ, ಫಲಾಹಾರ ಮಾಡುತ್ತಾ, ಸುಮಾರು ಎರಡು ಗಂಟೆ ಒಟ್ಟಿಗಿದ್ದು ಮತ್ತೆ ಅವರವರ ಮನೆಗೆ ಹೋಗುತ್ತಿದ್ದರು. ನೋಡುವಾಗ ತೀರಾ ವಯಸ್ಸಾಗಿದ್ದು, ನನ್ನ ಹಾಗೇ ಗಂಡನನ್ನು ಕಳೆದುಕೊಂಡ ಮುದಿ ಮಹಿಳೆಯರು. ಭಾನುವಾರ ಮಾತ್ರ ಈ ಕಾರ್‍ಯಕ್ರಮ ಇಲ್ಲ. ಬಾಕಿ ದಿನಗಳಲ್ಲಿ ನಿತ್ಯವೂ ಸಂಜೆ ಹೊತ್ತು ಈ ಗೆಟ್ ಟುಗೆದರ್ ನಡೆಯುತ್ತಿತ್ತು. ಅವರು ಸೇರಿಕೊಂಡು ಏನು ಮಾಡುತ್ತಿದ್ದಾರೆ ಎಂದು ಮಾತ್ರ ಗೊತ್ತಾಗಲಿಲ್ಲ. ಒಂದು ದಿನ ಸೊಸೆಯೊಂದಿಗೆ ಮಾರ್‍ಕೆಟಿಗೆ ಹೋಗುವಾಗ ಆ ಮನೆಗಳ ಕಡೆಗೆ ಕೈತೋರಿಸಿ, ವಿಷಯವನ್ನು ಹೇಳಿದೆ. ಅವಳು ನಕ್ಕು ಅಂದಳು. “ಅಮ್ಮಾ ಅವರೆಲ್ಲ ವಯಸ್ಸಾದ ಮಹಿಳೆಯರು, ಸಂಜೆ ಹೊತ್ತು ಒಂದು ಮನೆಯಲ್ಲಿ ಎಲ್ಲರೂ ಸೇರುತ್ತಾರೆ. ಅಲ್ಲಿ ಕೇರಂ, ಲೂಡ, ಚೆಸ್, ಚೆನ್ನಮಣೆ ಆಟ ಆಡುತ್ತಾರೆ. ಆಟದಲ್ಲಿ ಸೋತ ತಂಡದವರು ಫಲಹಾರ ವೆಚ್ಚ ಭರಿಸಬೇಕು. ಹಾಗೆಯೇ ಒಂದೆರಡು ಗಂಟೆ ಹರಟೆ ಹೊಡೆಯುತ್ತಾ, ಟೀ, ಕಾಫಿ ಕುಡಿಯುತ್ತಾ ಸಮಯ ಕಳೆಯುತ್ತಾರೆ. ಹಗಲಲ್ಲಿ ಬೇರೆ ಯಾರೂ ಇರುವುದಿಲ್ಲ ನೋಡಿ. ಅದಕ್ಕಾಗಿ ಈ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.” ನನಗೆ ತುಂಬಾ ಸಂತೋಷವಾಯಿತು. ನಾನು ಏಕಾಂಗಿತನದ ನೋವು ಅನುಭವಿಸುತ್ತಾ, ಗುಹೆಯೊಳಗೆ ಬಿದ್ದು ಕೊಂಡರೆ ಅವರು ಬದುಕನ್ನು ಸವಾಲಾಗಿ ಸ್ವೀಕರಿಸಿ ಹೇಗೆ ನೆಮ್ಮದಿ ಪಟ್ಟುಕೊಳ್ಳುತ್ತಾರೆ? ಜೀವನ ಎಂದರೆ ಇದೇ ತಾನೇ?
ಮಗಳು ಫೋನು ಮಾಡಿದ್ದಳು. “ಅಮ್ಮಾ…. ನಿಮ್ಮ ಅಳಿಯಂದಿರನ್ನು ಕಳುಹಿಸುತ್ತೇನೆ. ಒಂದು ತಿಂಗಳು ನಮ್ಮ ಮನೆಯಲ್ಲಿ ಇದ್ದು ಹೋಗಮ್ಮಾ” ಹೌದು. ಅವಳಿಗೂ ಬೇಸರವಾಗಬಾರದು ತಾನೆ. ಅಲ್ಲಿಯೂ ಒಂದು ತಿಂಗಳು ಪಂಜರದೊಳಗಿದ್ದು ಬಂದೆ. ಇಬ್ಬರು ಮಕ್ಕಳೂ ಕೆಲವೇ ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಾರೆ. ಮಗನ ಮನೆಯ ಜೀವನ ವಿಧಾನಕ್ಕೂ ಮಗಳ ಮನೆಯ ಜೀವನ ವಿಧಾನಕ್ಕೂ ಏನೂ ವ್ಯತ್ಯಾಸವಿಲ್ಲ. ಜೈಲಿನಲ್ಲಿರುವ ಖೈದಿಗಳು. ಸಂಜೆ ಹೊತ್ತು ಹೊರಬಂದು ಕಾಂಪೌಂಡಿನ ಒಳಗಿನ ಹೂದೋಟದಲ್ಲಿ ಕೆಲಸ ಮಾಡುತ್ತಾ ಪ್ರಕೃತಿಯೊಂದಿಗೆ ಬೆರೆಯುತ್ತಾರೆ. ಆದರೆ ಪ್ಲಾಟಿನ ಒಳಗಿದ್ದ ನಮ್ಮಂತಹ ಪ್ರಾಣಿಗಳಿಗೆ ಸಿಗುವುದು ಮಾತ್ರ ಸುತ್ತಲಿನ ನಾಲ್ಕು ಗೋಡೆಗಳು ಹಾಗೂ ಗುಹೆಯೊಳಗಿನ ಬಂಧನ.
ಮನಸ್ಸು ಏಕೋ ಸ್ಥಿಮಿತ ಕಳಕೊಳ್ಳತೊಡಗಿತು. ಏಕಾಂಗಿತನದಿಂದ ಅವರ ನೆನಪು ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಊರ ಹಳ್ಳಿಯ ಮನೆಯಲ್ಲಿ ಅವರೊಂದಿಗೆ ಕಳೆದ ನಲ್ವತೊಂಭತ್ತು ವರ್‍ಷದ ನೆನಪು ಒಂದೊಂದಾಗಿ ಮನಸ್ಸನ್ನು ತಿವಿಯ ತೊಡಗಿತು. ಆ ಮನೆಯಲ್ಲಿ, ಆ ತೋಟದಲ್ಲಿ ಅವರು ಈಗಲೂ ಓಡಿಯಾಡಿದ ಹಾಗೇ ಆಗ ತೊಡಗಿತು. ಅವರ ಹಾಸ್ಯ, ಅವರ ನಗು, ಅವರ ಕೋಪ ಎಲ್ಲವೂ ಕಣ್ಣಿಗೆ ಕಟ್ಟುತ್ತಿತ್ತು. ಅವರು ದೈಹಿಕವಾಗಿ ಮಣ್ಣಾಗಿದ್ದರೂ ಆ ನೆಲದಲ್ಲಿ ಆ ಮಣ್ಣಲ್ಲಿ, ಆ ಮನೆಯಲ್ಲಿ ಇನ್ನೂ ಜೀವಂತವಾಗಿದ್ದಾರೆ.
ಮಕ್ಕಳೊಂದಿಗಿದ್ದಾಗ ನನಗೇನೂ ಕಡಿಮೆಯಾಗಲಿಲ್ಲ. ಎಲ್ಲವೂ ಇತ್ತು. ಇಬ್ಬರು ಮಕ್ಕಳೂ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಆರ್‍ಥಿಕವಾಗಿಯೂ ಸಬಲರಾಗಿದ್ದಾರೆ. ಆದರೆ, ಅದೇಕೋ ನನ್ನ ಮನಸ್ಸು ನನ್ನ ಮನೆಯ ಕಡೆಗೆ ವಾಲುತ್ತಿತ್ತು. ನನಗೆ ನನ್ನ ನೆರೆಕರೆಯವರ ಜ್ಞಾಪನ ಬಂತು. ಊರಲ್ಲಿ ಏನೊಂದು ಸೊಗಸು. ದಿವಸಾಗಲೂ ಮನೆಯ ಕಾಂಪೌಂಡಿನ ಬಳಿಗೆ ಬಂದು ಕರೆದು ಮಾತಾಡಿಸುವ, ಕ್ಯಾನ್ಸರ್‌ನಲ್ಲಿ ಗಂಡನನ್ನು ಕಳಕೊಂಡ ವಿಧವೆ ಲೀಲಕ್ಕ, ಅಪಘಾತದಲ್ಲಿ ತೀರಿಹೋದ ಉಸ್ಮಾನ್ ಬ್ಯಾರಿಯವರ ಹೆಂಡತಿ ಸೆಲಿಕಾ, ಲಿಂಗು ಪೂಜಾರಿಯ ಹೆಂಡತಿ ವಿಧವೆ ಲಕ್ಷ್ಮೀ, ಗಂಡ ಬಿಟ್ಟು ಹೋದ ಐದು ಮಕ್ಕಳ ತಾಯಿ ಖತೀಜಾ, ಇವರೆಲ್ಲಾ ತೀರಾ ಬಡವರಾದರೂ ಎಷ್ಟು ಸುಖವಾಗಿದ್ದರು? ಇವರ ಮಧ್ಯೆ ಮಾತಾಡುತ್ತಾ, ಹರಟೆಕೊಚ್ಚುತ್ತಾ, ಊರಿನ ಸುದ್ದಿಗಳನ್ನು ಮಾತಾಡುತ್ತಾ, ತಿಂಡಿ ತಿನಿಸುಗಳನ್ನು ವಿನಿಮಯ ಮಾಡುತ್ತಾ ಹಬ್ಬ ಹರಿದಿನಗಳಲ್ಲಿ ಮಾಡಿದ ವಿಶೇಷ ಆಹಾರಗಳನ್ನು ಹಂಚುತ್ತಾ ಕಳೆದ ದಿನಗಳನ್ನು ನೆನೆದಾಗ ನನಗೆ ದುಃಖ ಉಕ್ಕಿ ಬರತೊಡಗಿತು. ತಮ್ಮ ನೋವನ್ನೇ ಒಂದು ಸವಾಲಾಗಿ ಸ್ವೀಕರಿಸಿ ಅದರಲ್ಲೇ ಸುಖ ಕಾಣಲು ಇವರೆಲ್ಲಾ ಹೆಣಗಾಡುದಿಲ್ಲವೇ? ಮತ್ತೆ ನಾನೇಕೆ ನನ್ನ ಕಾಲ ಮೇಲೆ ನಿಲ್ಲಬಾರದು? ನನಗೇನು ಕಮ್ಮಿಯಿದೆ? ಉಳಕೊಳ್ಳಲು ಮನೆಯಿದೆ. ತೋಟ ಇದೆ. ಗಂಡನ ಪಿಂಚಣಿಯಿದೆ. ಪ್ರೀತಿಯ ಧಾರೆಯೆರೆಯುವ ನೆರೆಕರೆಯವರಿದ್ದಾರೆ. ಸುಖ ಜೀವನದ ರಹಸ್ಯ ತೃಪ್ತಿಯಲ್ಲಿ ಅಡಗಿದೆ. ಊರಲ್ಲಿನ ಆ ಒಂದು ಸಂತೋಷ ಇಲ್ಲಿ ಕೋಟಿ ರೂಪಾಯಿ ಕೊಟ್ಟರೂ ಸಿಗಲಾರದು.
ಎಂದಿನಂತೆ ಭಾನುವಾರ ಬಂತು. ಮಗನ ಸಂಸಾರದೊಂದಿಗೆ ಮಾಲ್‌ಗೆ ಹೋದೆವು. ಎಂದಿಗಿಂತಲೂ ನಾನಂದು ತುಂಬಾ ಹುರುಪಿನಲ್ಲಿದೆ. ನಾನು ಮಾಲ್‌ನಲ್ಲಿ ತಿರುಗಾಡುತ್ತಾ, ಕೇರಂ ಬೋರ್ಡ್, ಲೂಡಾ, ಚೆಸ್, ಚೆನ್ನಮಣೆ ಹಾಗೂ ಕೆಲವೊಂದು ಸಿನಿಮಾ ಹಾಡುಗಳ, ಭಜನೆ, ಕೀರ್‍ತನೆಗಳ ಪುಸ್ತಕ ಹಾಗೂ ಸೀಡಿಗಳನ್ನು ಖರೀದಿಸಿದೆ. ಮಗನಿಗೆ ಆಶ್ಚರ್‍ಯವಾಯಿತು. ಪ್ರಶ್ನಾರ್‍ಥಕವಾಗಿ ನನ್ನನ್ನು ನೋಡಿದ. ನಾನು ನಕ್ಕು ಬಿಲ್ಲು ಪಾವತಿಸಿದೆ.
ಮರುದಿನ ಮಗ ಹಾಗೂ ಸೊಸೆ ಕೆಲಸಕ್ಕೆ ಹೊರಟು ನಿಂತಾಗ ನಾನಂದೆ “ಮಗಾ, ನಾನು ಊರಿಗೆ ಹೋಗುತ್ತೇನೆ. ನೀನು ಬಸ್ಸಿನ ಟಿಕೆಟ್ ವ್ಯವಸ್ಥೆ ಮಾಡು.” ಅವನಿಗೆ ದಿಗಿಲಾಯಿತು. “ಏನಮ್ಮಾ ಇದು. ನಿನಗಲ್ಲಿ ಯಾರಿದ್ದಾರೆ? ಇಲ್ಲಿ ನಾವೆಲ್ಲಾ ಇದ್ದೇವೆ. ನಿನಗೇನು ಕಮ್ಮಿಯಾಗಿದೆ. ನೀನು ಒಬ್ಬಳೇ ಊರಿಗೆ ಹೋಗಿ ಕುಳಿತರೆ ಜನ ಏನನ್ನುತ್ತಾರೆ? ಹೇಳಮ್ಮಾ, ನಮ್ಮ ನಡೆನುಡಿಯಿಂದ ನಿನಗೇನಾದರೂ ಬೇಜಾರೂ ಆಗಿದೆಯಾ? ಹಾಗಿದ್ದರೆ ತಿದ್ದಿಕೊಳ್ಳುತ್ತೇವೆ. ಹೇಳು?” ನಾನು ಒಂದು ಕ್ಷಣ ಮೌನ ಆದೆ.
“ಏನೂ ಇಲ್ಲ ಮಗಾ. ತಪ್ಪು ತಿಳಿದುಕೊಳ್ಳಬೇಡ. ನಿಮ್ಮಿಂದ ನನಗೇನೂ ತೊಂದರೆಯಾಗಿಲ್ಲ. ಆದರೆ ನಲ್ವತ್ತೊಂಭತ್ತು ವರ್ಷ ದಾಂಪತ್ಯ ಜೀವನ ನಡೆಸಿದ ಆ ಮನೆಯಿಂದ ದೂರವಿರಲು ನನ್ನಿಂದ ಸಾಧ್ಯವಿಲ್ಲ. ಆ ನೆರೆಕರೆ, ಆ ತೋಟ, ಮೇಲಾಗಿ ನಿನ್ನ ತಂದೆಯ ನೆನಪುಗಳಿಂದ ದೂರವಿರಲು ಬಹಳ ಕಷ್ಟವಾಗುತ್ತದೆ. ತೋಟದ ಮನೆಯ ಮೂಲೆ ಮೂಲೆಯಲ್ಲೂ ಅವರಿದ್ದಾರೆ. ಆ ಸುಂದರ ನೆನಪುಗಳನ್ನು ತೊರೆದು ಇಲ್ಲಿರಲು
ನಾನು ಇಷ್ಟಪಡುವುದಿಲ್ಲ.”
“ನಮ್ಮನ್ನು ಬಿಟ್ಟು ಹೋಗಲು ನಿನಗೆ ದುಃಖವಾಗುವುದಿಲ್ಲವೇನಮ್ಮಾ?”
“ದುಃಖ, ನೋವೆಂಬುದು ಕಾಡುವುದೇ ನಾವು ಇತರರಿಂದ ಒಂದಿಷ್ಟನ್ನು ನಿರೀಕ್ಷಿಸಿದಾಗ ಮಾತ್ರ. ಈ ಜಗತ್ತಿನ ಪರಿಯೇ ಹೀಗೆ. ಯಾರನ್ನೂ ನಿರಂತರ ನಮ್ಮ ಜೊತೆ ಇರಬಹುದೆಂಬ ನಿರೀಕ್ಷೆಯನ್ನು ನಾವು ಹೊಂದಿರಬಾರದು. ಯಾಕೆಂದರೆ ಕತ್ತಲೆ ಆವರಿಸಿದಂತೆಲ್ಲಾ ನಮ್ಮ ನರಳೇ ನಮ್ಮನ್ನು ಬಿಟ್ಟು ಬಿಡುವುದಿಲ್ಲವೇ?”
ಅವನು ನಿರುತ್ತರನಾದ ಮೆಲುದನಿಯಲ್ಲಿ ನನ್ನ ಹೆಗಲಿಗೆ ಜೋತು ಬಿದ್ದು ಹೇಳಿದ.
“ನಿನ್ನ ಸಂತೋಷವಮ್ಮಾ”
ನಾನಂದೆ.
“ನನ್ನಂತಹ ಅನೇಕ ವಿಧವೆಯರು ಆ ಹಳ್ಳಿಯ ಸುತ್ತಮುತ್ತ ಇದ್ದಾರೆ. ಅವರನ್ನೆಲ್ಲಾ ಸಂಜೆ ಹೊತ್ತು ನನ್ನ ಮನೆಯಲ್ಲಿ ಎರಡು ಗಂಟೆ ಒಟ್ಟು ಮಾಡಿಸಿ, “ಗೆಟ್ ಟುಗೆದರ್” ಮಾಡಿಸುತ್ತೇನೆ. ದಿನಕ್ಕೆ ಬರೀ ಎರಡು ಗಂಟೆ… ಅವರು ನಗುತ್ತಾ, ಆಟವಾಡುತ್ತಾ ಇರಬೇಕು… ಬರೀ ಎರಡು ಗಂಟೆ… ನಗುತ್ತಾ… ಅವರೊಂದಿಗೆ ನಾನು ಕೂಡಾ…”
*****
Very nice 👍
Ancestral place is the best place.