ಬಸವ
ನಿನ್ನ ಕಾಲಕ್ಕೂ
ನನ್ನ ಕಾಲಕ್ಕೂ
ವ್ಯತ್ಯಾಸವೇನಿಲ್ಲ!
ಆದರೆ
ನಿನಗೂ
ನನಗೂ
ವ್ಯತ್ಯಾಸ ಬಹಳ!

ಬಸವ
ನಿನ್ನ ವಿಭೂತಿಗೂ
ನನ್ನ ವಿಭೂತಿಗೂ
ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ
ವ್ಯತ್ಯಾಸವಿಲ್ಲ
ಆದರೆ
ಅದರೊಳಗಿನ ತತ್ವದ ಮಾತು
ಇಲ್ಲಿ ಬೇಡ, ಅಷ್ಟೇ!

ಬಸವ
ನಾನು ನಿನ್ನ ಪಂಥದವ
ಇದಕೆ ಗುರುತು
ತಹಸಿಲ್ದಾರ್ ಕೊಟ್ಟ ಪ್ರಮಾಣಪತ್ರ.
ಇದನು ನಂಬಿದರೆಷ್ಟು, ನೀನು
ಬಿಟ್ಟರೆ ಎಷ್ಟು!

ಬಸವ
ನೀನು ಭಕ್ತಿ ಭಂಡಾರಿಯಾಗಬೇಡ.
ನೀನು ಹಾಗೆ ಆದರೆ
ನಮಗೆ ಕಿಮ್ಮತ್ತಿಲ್ಲ.
ಹಾಗಾಗಿ
ಕಿರೀಟ ಧರಿಸು, ಕುದುರೆಯೇರು
ಹೊರಡು ವಿಧಾನಸೌಧದ ಕಡೆಗೆ.
ಕೇಸರಿ ಮಾರ್ಗವಾದರೂ ಸರಿಯೇ
ಮುನ್ನುಗ್ಗು ಪಾರ್ಲಿಮೆಂಟಿನೆಡೆಗೆ.
ಆಗ ಸಾಕ್ಷಾತ್ಕಾರ ನಿನ್ನ ಶಕ್ತಿ
ಆ ನಿನ್ನ ನೋಡಲು ನಮಗೆ ಕಾತುರ!

ಬಸವ
ನೀನು ಹೀಗೆ ಬಂದದ್ದಾಗಿದೆ
ಬಂದವನು ಇಲ್ಲೇ ಇರು
ಆ ನಿನ್ನ ಹಳೆ ವರಸೆ ತೋರಿದರೆ
ಹಿಂದೆ ಆದಂತೆ ಮರ್‍ಡರ್
ಈಗಲೂ ಆಗುವೆ ಹುಷಾರ್!
*****