“ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-” ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು ದಾಟಿದ ಪ್ರೊಫೆಸರ್ ರಾವ್ ಅವರನ್ನು ಅಭಿಮಾನದಿಂದ ನೋಡಿದಳು ಮಾನಸ ಸರೋವರದಲ್ಲಿ ಎದ್ದ ಅಲೆಗಳನ್ನು ಬಹು ಸುಲಭದಲ್ಲಿ ತಡೆದು ಹಿಡಿದು ತುಮುಲ, ತಳಮಳ ನಿಲ್ಲಿಸುವ ರಾವ್ ಅವರನ್ನು ಮೊದಲ ಬಾರಿಗೆ ಎಂಬಂತೆ ನೋಡಿದಳು.
ಅವಳ ಕಣ್ಣುಗಳಲ್ಲಿ ಮೂಡಿದ ಮೆಚ್ಚುಗೆಯನ್ನು ಗಮನಿಸಿದ ರಾವ್, “ಏನ್ ಸ್ವೀಟಿ-ಯಾವುದೇ, ಯಾರದ್ದೋ ಲೋಕದಲ್ಲಿ ಮುಳುಗಿದ ಹಾಗಿದೆ-” ವಿಜಯಾಳ ಮುಖ ಕೆಂಪೇರಿತು.
“ಯಾರದ್ದೂ ಕನಸಲ್ಲ ನನ್ನ ಪ್ರೀತಿಯ ತಾತ-ನಿಮ್ಮನ್ನೇ ಕುರಿತು ಯೋಚಿಸುತ್ತಿದ್ದೆ-” ಎಂದಳು ಕೊಂಕು ತುಟಿ ಮಾಡಿ.
“ಅಬ್ಬಾ! ಎಷ್ಟು ಸೊಕ್ಕು ನಿಂಗೆ! ನಿನ್ನನ್ನೇ ಆಗ್ಬೇಕೂಂತ ನಿಮ್ಮಪ್ಪನ್ನ ದಿನಾ ಕೇಳ್ತಾ ಇದ್ದೀನಿ – ನಂಗೆ ತಾತ ಅಂತೀಯ? ಆಂ?” ಮಾತನಾಡುತ್ತಾ ವಿಜಯಾಳೊಂದಿಗೆ ವಾರ್‍ಡಿನತ್ತ ಹೆಜ್ಜೆ ಹಾಕಿದರು.
“ನೀವ್ಯಾಕೆ ಸ್ವೀಟಿ ಅನ್ಬೇಕು? – ನಿಮ್ಮನ್ನ ನಾನು ಮದ್ವಯಾಗೋದಾ? ಅಬ್ಬಬ್ಬಾ! ಈ ವಿಚಿತ್ರ “ಐಡಿಯಾ” ಬಂದದ್ದಾದರೂ ಹೇಗೆ? ಏನೇ ಇರಲಿ ಇರೋದು ಹುಚ್ಚಾಸತ್ರೇಲಿ ತಾನೇ?”
ರಾವ್ ಮನ ತುಂಬಿ ನಕ್ಕರು.
“ನಿನ್ನ ಮೊಂಡ ಮೂಗುಸಿಟ್ಟಿನಿಂದ ಕೆಂಪಾಗಿರುವುದನ್ನು ಬೆಳಿಗ್ಗೇನೆ ನೋಡಲು ಇಷ್ಟ-”
“ಸರ್ ಒಂದು ವಾರದಿಂದ ದಿವಾಕರ್ ತನ್ನ ಹೆಂಡ್ತಿನಾ ಕರ್‍ಕೊಂಡು ಬರ್‍ತ ಇಲ್ಲ? ಸ್ವಲ್ಪಾನೂ ಇಂಪ್ಯೂವ್‌ಮೆಂಟಿಲ್ಲಾಂತಾನೆ. ಅದು ಕೂಡಾ ಹೌದು ಅವಳು ಬಾಯಿಬಿಡುವುದಕ್ಕೆ ಇಲ್ಲ. ಎಷ್ಟು ಮಾತನಾಡಿಸಿದರೂ ಕಲ್ಲುಬೊಂಬೆಯಂತೆ ಎತ್ತಲೋ ನೋಡುತ್ತಾ ಕುಳಿತು ಬಿಡುತ್ತಾಳೆ-”
“ಏನು ಕಂಪ್ಲೇಂಟ್ಸ್”
“ಈಗ ಮದುವೆಯಾಗಿ ಹೆಚ್ಚು ಕಡಿಮೆ ಆರು ವರ್‍ಷಗಳಾಗಿರಬಹುದು ಸರ್. ಒಳ್ಳೆಯ ಸುಂದರ ಜೋಡಿ, ಒಳ್ಳೆಯ ದಂಪತಿಗಳೂ ಕೂಡ. ಇತ್ತೀಚೆಗೆ ಅಂದರೆ ಆರೇಳು ತಿಂಗಳಿಂದ ಇದ್ದಕ್ಕಿದ್ದ ಹಾಗೆ ಬದಲಾಗಿದ್ದಾಳಂತೆ. ಆಡ್ತಾ ಇದ್ದ ಮಗು ರಚ್ಚೆ ಹಿಡಿದರೆ ತಮಾಷೆಗೆ “ಕಿಟಕಿಯಿಂದ ಹೊರಗೆ ಹಾಕ್ತಿವಿ ನೋಡೂಂತ” ನಾವು ಅನೋಲ್ವಾ – ಅವಳು ನಿಜಕ್ಕೂ ಎತ್ತಿ ಬಿಸಾಕಿ ಬಿಡ್ತಾಳಂತೆ. ಗಂಡನ ಪಕ್ಕದಿಂದ ತಟಕ್ಕನೆ ಎದ್ದು ಹೊರಗೆ ಹೋಗಿ ಒಬ್ಬಳೇ ಕುಳಿತು ಚಿಕ್ಕ ಮಗುವಿನಂತೆ ಅಳಲು ಪ್ರಾರಂಭಿಸ್ತಾಳಂತೆ. ಬೆಳಿಗ್ಗೆ ಕೇಳಿದರೆ “ಎಲ್ಲಾ ಸುಳ್ಳು” ಅಂತಾಳಂತೆ”
“ಗಂಡ ಏನು ಹೇಳ್ತಾನೆ?”
“ದೇವರಂಥ ಮನುಷ್ಯ ಸಹ. ಅವಳು ಜಾಸ್ತಿ ಮಾತಿನವಳಲ್ಲ. ಒಳಗೆ ಏನನ್ನೂ ಇಟ್ಟುಕೊಂಡು ಕೊರಗ್ತಾ ಇದ್ದಾಳೆ. ದಯವಿಟ್ಟು ಪತ್ತೆ ಮಾಡಿಕೊಡಿ, ಅವಳಿಲ್ಲದೇ ಖಂಡಿತಾ ನಾನಿರೋಲ ಆಮೇಲೆ ಈ ಮಗು ಗತಿಯೇನು. ಡಾಕ್ಟರ್ ಸರಿಯಾಗ್ತಾಳೆಯೇ? ಹೇಳಿ ಪ್ಲೀಸ್ -” ಅಂತ ಒಂದೇ ಸಮನೆ ಹಿಂದೆ ಹಿಂದೆ ತಿರುಗಿ ಕೇಳಿದ್ದಾನೆ.
“ರೌಂಡ್‌ಸ್ಗೆ ಬರೋಲ್ವಾ?”- ಹೊರಗಡೆಯೇ ನಿಂತು ಕರೆದರು.
“ಊಹೂಂ ಇವತ್ತೊಂದು ಕೇಸಿಗೆ ನಾರ್‍ಕೊ ಅನಾಲಿಸಿಸ್ ಮಾಡ್ತೀನೀಂತ – ಅಪಾಯಿಂಟ್ಮೆಂಟ್ ಕೊಟ್ಟಿದ್ದೀರಿ. ಅವರಿಲ್ಲಿ ಕಾಯ್ತಾ ಇದ್ದಾರೆ. ನೀವು ಬೇಗ ಬಂದುಬಿಡಿ”
ವಿಜಯಾ ಬಾಗಿಲವರೆಗೂ ಹೋಗಿ ಹೇಳಿ ಬಂದು, ಮೇಜಿನ ಮೇಲಿದ್ದ ಕೇಸ್ ಪೇಪರುಗಳನ್ನು ಕೈಗೆತ್ತಿಕೊಂಡಳು.
ಹೊರಗಿನ ಬೆಂಚಿನ ಮೇಲೆ ಕುಳಿತಿದ್ದ ಅನೇಕ ರೋಗಿಗಳ ಸಾಲಿನ ಮಧ್ಯದಲ್ಲೂ ಆ ದಂಪತಿಗಳನ್ನು ಗುರುತಿಸಿ ಒಳಗೆ ಕರೆದು, “ಈ ಪೇಪರ್‍ಗೆ ಸೈನ್ ಮಾಡಿ” – ಎನ್ನುತ್ತಾ ಕನ್ಸೆಂಟ್ ಫಾರಂನ್ನು ನೀಡಿದಳು.
“ಏನು ಅಪಾಯವಿಲ್ಲ ತಾನೇ ಡಾಕ್ಟರ್-” ಆಕೆಯ ಗಂಡ ಆತಂಕದಿಂದ ಕೇಳಿದ.
ಮೃದುವಾಗಿ ನಕ್ಕ ವಿಜಯಾ “ಇದೇನು ದೊಡ್ಡ ಆಪರೇಷನ್ ಅಲ್ಲಾ ಸರ್ – ಒಂದು ವಾರದಿಂದ ಓಡಾಡ್ತಾ ಇದ್ದೀರಾ- ಏನೂ ಪ್ರಯೋಜನವಾಗ್ತಾಯಿಲ್ಲ- ಔಷಧಿಗಳು ದಂಡ. ಕೂತ್ಕೊಳ್ಳಿ – ನಿಮಗೆ ವಿವರವಾಗಿ ಹೇಳ್ತೀನಿ ಹೆದರೋ ಕಾರಣವಿಲ್ಲ’ ಎನ್ನುತ್ತ ಎದುರಿಗಿದ್ದ ಕುರ್‍ಚಿಗಳನ್ನು ತೋರಿಸಿದಳು. ದಂಪತಿಗಳಿಬ್ಬರೂ ಕುಳಿತರು.
ನೀಳವಾದ ಜಡೆ, ಕಂದು ಬಣ್ಣದ ಆಕರ್‍ಷಕ ಮುಖ ಕಾಂತಿಹೀನವಾಗಿತ್ತು. ಕಣ್ಣುಗಳಲ್ಲಿ ಯಾವುದೋ ಖಿನ್ನತೆ, ದಟ್ಟವಾದ ನಿರಾಶೆ ನೋವು – ಒಣಗಿ ನಿಧಾನವಾಗಿ ಕಂಪಿಸುತ್ತಿದ್ದ ತುಟಿಗಳು –
ವಿಜಯಾ ಆ ಗಂಡನತ್ತ ತಿರುಗಿ, “ಈ ಫಾರಂನ್ನು ಓದಿ ನೋಡಿ. ನಾರ್‍ಕೊ ಅನಾಲಿಸಿಸ್ ಅಂದರೆ, ಔಷಧಿಗಳು ರೋಗಿಯ ಮೇಲೆ ಯಾವ ಪರಿಣಾಮವನ್ನು ಬೀರದಿದ್ದಾಗ ನೀವು ಒಂದು ಮನೋದೈಹಿಕ ಚಿಕಿತ್ಸೆ. ಇಂತಹ ರೋಗಿಗಳಿಗೆ, ಕ್ಷಮಿಸಿ ನಿಮ್ಮ ಹೆಂಡತಿಗೆ ರೋಗಿಯೆಂದು ಬಿಟ್ಟೆ – ಮಧ್ಯೆ ತಡೆದು ಕ್ಷಮೆ ಕೇಳುವವಳಂತೆ ಹೇಳಿದಳು.
“ತಪ್ಪೇನಿದೆ ಡಾಕ್ಟ್ರೆ? ಆಸ್ಪತ್ರೆಗೆ ಬಂದ ಮೇಲೆ ರೋಗೀನೇ ತಾನೇ? ನಿಮ್ಮಷ್ಟು ತಾಳ್ಮೆಯಿಂದ ಯಾರು ಹೇಳ್ತಾರೆ?” ಎಂದ ಅವನು ವಿಷಾಧದಿಂದ.
“ನೀವು ನಿರಾಶರಾಗಬೇಕಾದುದಿಲ್ಲ. ನಿಮ್ಮ ಹೆಂಡತಿ ರೋಗಿಯೂ ಅಲ್ಲ. ಕೆಲವು ಕ್ಷಣಗಳ ಚಿತ್ತ ಚಾಂಚಲ್ಯ ಅಷ್ಟೇ, ಖಂಡಿತಾ ಸರಿಯಾಗ್ತಾರೆ. ಹುಚ್ಚು ಹಿಡಿದವರಲ್ಲ ತಿಳಿಯಿತಾ? ಆ, ನಾನ್ ಏನ್ ಹೇಳ್ತಾಯಿದ್ದೇಂದ್ರೆ ಅದೆ. ರೋಗಿಯನ್ನು ಸುಪ್ತ ಮನಸ್ಸಿನ ಪ್ರಪಂಚಕ್ಕೆ ಇಂಜೆಕ್ಷನ್ ಕೊಟ್ಟು ನಿಧಾನವಾಗಿ ಕರೆದೊಯ್ಯುತ್ತೇವೆ – ಹಂತ – ಹಂತವಾಗಿ ಔಷಧಿ ರಕ್ತನಾಳಗಳಲ್ಲಿ ಹೋಗುತ್ತಿದ್ದಂತೆಯೇ ಅವಳ ಸುಪ್ತ ಮನಸ್ಸು ಜಾಗೃತವಾಗುತ್ತದೆ… ನಾವು ಕೇಳುತ್ತಾ ಹೋದ ಪ್ರಶ್ನೆಗಳಿಗೆಲ್ಲಾ ಯಥಾ ರೀತಿಯಲ್ಲಿ ನೈಜವಾಗಿ ಹೇಳುತ್ತಾ ಹೋಗುತ್ತಾರೆ. ಇದೇ ಸ್ಥಿತಿಯಲ್ಲಿರುವಾಗಲೇ ಸಂಭಾಷಣೆಯ ಮೂಲಕ ಟ್ರೀಟ್ಮೆಂಟ್ ನೀಡುತ್ತೇವೆ….?
“ಅಲ್ಲಿಗೆ ಸರಿಯಾಗ್ತಾಳಲ್ವಾ?” ಆತುರದಿಂದ ಕೇಳಿದ. “ಓಹೋ…. ಖಂಡಿತವಾಗಿ… ಏನೇ ಆಗಿದ್ದರೂ ನಿಮ್ಮ ಹೆಂಡತಿಯನ್ನು ಮೊದಲಿನಂತೆ ಕಳುಹಿಸುವುದು ನಮ್ಮ ಜವಾಬ್ದಾರಿ… ಸರೀನಾ?….. ಎಲ್ಲಿ ಈ ಜಾಗದಲ್ಲಿ ಸೈನ್ ಮಾಡೀಮ್ಮ…”
ನಡುಗುತ್ತಿದ್ದ ಕೈಗಳಿಂದ ಗೀತಾ ತನ್ನ ಹೆಸರನ್ನು ಬರೆದಳು. ಗುಂಡಾಗಿ ಮುದ್ದಾಗಿ ಬರೆಯುತ್ತಿದ್ದ ತನ್ನ ಹೆಂಡತಿಯ ಅಕ್ಷರಗಳು ಗೀಚಿದಂತೆ ಕಾಣುತ್ತಿದ್ದುದನ್ನು ದಿವಾಕರ ಗಮನಿಸಿದ.
“ಸಿಸ್ಟರ್… ಇವರನ್ನು ಒಳಗಿನ ರೂಮಿಗೆ ಕರ್‍ಕೊಂಡು ಹೋಗಿ ಮಲಗಿಸಿ, ಪೆಂಟಾಥಾಲ್ ಸೋಡಿಯಂ ಅನ್ನು ಲೋಡ್ ಮಾಡಿ, ಇನ್ನೇನು ಪ್ರೊಫೆಸರ್ ಬಂದಿದ್ದಾರೆ” ಎನ್ನುತ್ತಾ ಪರೀಕ್ಷಾ ಕೊಠಡಿಗೆ ಕಳುಹಿಸಿಕೊಟ್ಟರು. ದಿವಾಕರ್ ನಿಂತೇ ಇದ್ದ ನೋವಿನಿಂದ ಅವನ ಮುಖ ಮುದುಡಿತ್ತು. ಆತಂಕದಿಂದ ಹಣೆಯ ಮೇಲೆ ಮೂಡಿದ ಬೆವರ ಹನಿಗಳನ್ನು ಕರ್‍ಚಿಫಿನಿಂದ ನಿಧಾನವಾಗಿ ಒರೆಸಿಕೊಂಡ.
“ನಿಮ್ಮ ಪತ್ನಿ ಇಷ್ಟು ದಿನಗಳು ಕಳೆದರೂ ಏನನ್ನೂ ಮನ ಬಿಚ್ಚಿ ಮಾತನಾಡಲು ತಯಾರಿಲ್ಲ….. ನಂಗೇನು ಆಗಿಲ್ಲ….. ಅಂತಾರೆ, ಒಮ್ಮೆಮ್ಮೆ ಯಾಕೋ ಹೆದರಿಕೆಯಾಗ್ತಾಯಿರುತ್ತೆ ಅಂತಾ ಇದ್ದಾರೆ… ಇಷ್ಟರಿಂದ ಏನನ್ನು ಪತ್ತೆ ಹಚ್ಚಕಾಗಲ್ಲ…. ನಿಮ್ಮನ್ನು ಕೇಳಬಹುದಲ್ವಾ?….. ವಿಜಯಾ ಪೆನ್ನನ್ನು ಮುಚ್ಚಿ ಕೆಳಗಿಡುತ್ತಾ ಕೇಳಿದಳು.
ನನ್ನ ಅಭ್ಯಂತರವೇನೂ ಇಲ್ಲ ಮೇಡಂ ಪ್ರೊಫೆಸರ್ ಆಗಲೇ ಒಬ್ಬನನ್ನೇ ಕರೆದು ಕೇಳಿದ್ದಾರೆ.
ಅರ್‍ಧದಲ್ಲಿಯೇ ತಡೆದ ವಿಜಯಾ,
“ನಾನು ನೀವು ಹೇಳಿದ ಹಿಸ್ಟರಿಯನ್ನು ಸಂಕ್ಷಿಪ್ತವಾಗಿ ಹೇಳ್ತಿನಿ….. ತಪ್ಪಿದ್ದರೆ, ಮತ್ತೊಮ್ಮೆ ನೆನಪಿಸಿ….. ಹೇಳ್ತೀರಾ….. ಎನ್ನುತ್ತಾ ಕೇಸ್ ಷೀಟನ್ನು ಬಿಡಿಸಿದಳು.
ದಿವಾಕರ ಕುಳಿತುಕೊಂಡ. ಒಣಗಿದ ತುಟಿಗಳನ್ನು ನಾಲಿಗೆಯಿಂದ ಸವರಿಕೊಂಡ. ಮೈಯಲ್ಲಾ ಕಣ್ಣಾಗಿ ವಿಜಯಳತ್ತ ನೋಡುತ್ತಾ ಕಿವಿ ತೆರೆದು ಕುಳಿತ.
ವಿಜಯಾ ಒಮ್ಮೆ ಕನ್ನಡಕ ಸರಿಪಡಿಸಿಕೊಂಡು ಮಧ್ಯೆ ಓದುತ್ತಾ ಹೇಳತೊಡಗಿದಳು. “ಗೀತಾ ನಿಮ್ಮ ಪ್ರೀತಿಯ ಪತ್ನಿ, ಅವಳಿಂದ ನಿಮಗೆ ಯಾವ ಕೊರತೆಯೂ ಆಗಿಲ್ಲ.
“ಊಹೂಂ….. ಪರಿಪೂರ್‍ಣ ಹೆಣ್ಣೆಂದರೆ ಅವಳೇ….. ಮದುವೆಯಾಗಿ ಆರು ವರ್‍ಷಗಳಾದರೂ ನನಗೆ ಎಂದೂ ಬೇಸರ ತಂದವಳಲ್ಲ. ಪ್ರತಿ ದಿನ… ಪ್ರತಿ ಕ್ಷಣ ಹೊಸಬಳಂತೆ….. ಆಸಕ್ತಿ ಕೆರಳಿಸುತ್ತಿದ್ದಳು….. ಅವನ ಧ್ವನಿಯಲ್ಲಿ ಅವನಿಗರಿಯದೇ ಉದ್ವೇಗ ತುಂಬಿತ್ತು.
ವಿಜಯಾ ನಕ್ಕಳು.
“ನೀವು ಬಹಳ ರೊಮ್ಯಾಂಟಿಕ್ ಇದ್ದೀರಿ….”
“ಅದಿಲ್ಲದಿದ್ದರೆ ಜೀವ ಸಪ್ಪೆ ಅನ್ನಿಸೋಲ್ವಾ?”
“ಸರಿ….. ನಿಮ್ಮದು ಆದರ್‍ಶ, ಅನುರೂಪ ದಾಂಪತ್ಯ ಒಬ್ಬ ಪುಟ್ಟ ಹೆಣ್ಣು ಮಗಳೂ ಇದ್ದಾಳೆ….”
“ಹೌದು…”
ಎಂದಾದರೂ, ನೀವು ನಿಮಗರಿಯದೇ ಅವರಿಗೆ ಏನಾದರೂ ಷಾಕ್ ಆಗುವಂತಹ….”
“ಖಂಡಿತಾ ಇಲ್ಲ ಮೇಡಂ….. ಎಲ್ಲಿ ಬೇಕಾದರೂ ನಿಂತು ಆಣೆ ಮಾಡಿ ಹೇಳ್ತಿನಿ…. ಎಂದೂ ನಾನು ನನ್ನ ತಾಳ್ಮೆಯನ್ನು ಕಳೆದುಕೊಂಡದ್ದೇ ಇಲ್ಲ…” ಮಧ್ಯೆ ತಡೆದು ತಟ್ಟನೆ ಹೇಳಿದ.
“ಇತ್ತೀಚೆಗೆ ಅಂದರೆ ಒಂದೆರೆಡು ತಿಂಗಳುಗಳಿಂದ ಇದ್ದಕ್ಕಿದ್ದ ಹಾಗೆ ರಾತ್ರಿಯಲ್ಲಿ ದಿಢೀರನೆ ಎದ್ದು ಕುಳಿತು ಗಾಬರಿಯಿಂದ ನನ್ನನ್ನು ತಟ್ಟಿ ತಟ್ಟಿ ಏಳಿಸುತ್ತಾಳೆ. “ನೋಡ್ರ್‍ಈ ನನ್ನ ಮಗೂನ ನಾನು ನೀರಿನಲ್ಲಿ ಮುಳುಗಿಸಿ ಕೊಂದುಬಿಟ್ಟೆ… ಕ್ಷಮಿಸಿ….” ಎಂದು ಅಳಲು ಪ್ರಾರಂಭಿಸಿಬಿಡುತ್ತಾಳೆ…. ನಾನು ಸಮಾಧಾನಪಡಿಸಿ, ದೀಪ ಹಾಕಿ, ಯಾವ ಆತಂಕವೂ ಇಲ್ಲದೇ ಮಲಗುತ್ತಿದ್ದ ಪುಟ್ಟ ಸವಿತಾಳನ್ನು ತೋರಿಸಿದಾಗ ನಂಬದವಳಂತೆ ಎದ್ದು ಹೋಗಿ ಮಗುವನ್ನು ಪುನಃ ಪುನಃ ಮುಟ್ಟಿ ಮುಟ್ಟಿ ನೋಡಿ ಎಷ್ಟೋ ಹೊತ್ತಿನ ನಂತರ ಬಂದು ಮಲಗುತ್ತಿದ್ದಳು…..”
“ಇದು ಒಂದು ಸಾರಿನೋ ಎರಡು ಸಾರಿನೋ ಅಂತಾ ನಾನು ನಿರ್‍ಲಕ್ಷಿಸಿದ್ದೆ…. ವಿನಾಕಾರಣ ಭಯಪಡ್ತಾಳೆ. ಮಗಳೂಂದ್ರೆ ಅವಳಿಗೆ ಪಂಚಪ್ರಾಣ ಅದಕ್ಕೆ ಹಾಗಾಡ್ತಾಳೇಂತ ಅಂಡ್ಕೊಂಡಿದ್ದೆ….. ಒಮ್ಮೆ ಮಗು ಯಾವುದಕ್ಕೋ ಹಠ ಮಾಡಿದಾಗ, ನಿಜಕ್ಕೂ ಮಗುವನ್ನು ಎತ್ತಿ ಎಸೆಯಲು ಸಿದ್ಧಳಾಗಿದ್ದಳು. ಒಂದೇ ಒಂದು ಕ್ಷಣ ತಡೆಯುವುದು ತಡವಾಗಿದ್ದರೆ, ನನ್ನ ಮಗಳನ್ನು ಕಳೆದುಕೊಳ್ತಾ ಇದ್ದೆ…..” ನೆನಪಿನಿಂದಲೇ ಅವನ ಮುಖದಲ್ಲಿ ಬೆವರು ಮೂಡಿತ್ತು. ಕಣ್ಣುಗಳಲ್ಲಿ ಗಾಬರಿ ಕಾಣಿಸಿಕೊಂಡಿತು.
“ರೀ ನಂಗೇನೋ ಆಗ್ತಾಯಿದೆ. ಏನೂಂತ ಹೇಳೋಕ್ಕಾಗೋಲ್ಲಾರಿ…” ಎಂದು ಮಧ್ಯರಾತ್ರಿಯಲ್ಲಿ ನನ್ನ ಪಕ್ಕದಿಂದ ಎದ್ದು ಅಂಗಳದಲ್ಲಿ ಕುಳಿತು ಅಳಲು ಪ್ರಾರಂಭಿಸಿಬಿಡುತ್ತಾಳೆ – ಒಮ್ಮೆಮ್ಮೆ ವಿನಾಕಾರಣ ಯಾವುದಕ್ಕೂ ಹೆದರಿದವಳಂತೆ, ಮಂಕಾಗಿ ಕುಳಿತುಬಿಡುತ್ತಾಳೆ ಗಂಟೆಗಳ ದಿನಗಳ ಪರಿವೇ ಇಲ್ಲದೆ ಕುಳಿತೇ ಇರುತ್ತಾಳೆ…
“ಯಾಕ ಹೆದರಿಕೇಂತಾ ಹೇಳ್ತಾಳೆಯೆ?”
“ಊಹೂಂ….. ಕನಸುಗಳು ಜಾಸ್ತಿಂತ ಯಾವಾಗಲೋ ಒಂದು ಬಾರಿ ಹೇಳಿದ್ದಳು…. ಅಮಾವಾಸ್ಯೆ ದಿನ ಬಂದರಂತೂ ಅವಳು….. ನನಗೆ ನನ್ನ ಹೆಂಡತಿ ಗೀತಾಂತ ಅನ್ನಿಸೋದೇ ಇಲ್ಲ….. ಒಂದು ಬಗೆಯ ವಿಚಿತ್ರ ವರ್‍ತನೆಯಿಂದ ವಿಕೃತವಾಗಿ ವರ್‍ತಿಸುತ್ತಾಳೆ…. ಭೂತ ಚೇಷ್ಟೆಂತ ಯಾರೋ ಹೇಳಿದರು. ಅದೂ ಮುಗಿಯಿತು. ಏನೂ ಪ್ರಯೋಜನವಾಗಿಲ್ಲ. ಮೈತುಂಬಾ ಬೂದಿ ಹಚ್ಚಿಸಿ, ಕುತ್ತಿಗೆ ತುಂಬಾ ಯಂತ್ರಗಳನ್ನು ಕಟ್ಟಿದ್ದಷ್ಟೇ ಲಾಭ. ನಂತರ ಯಾರೋ ಈ ಜಾಗಕ್ಕೆ ಕಾಗದ ಬರೆದು ಕಳುಹಿಸಿದರು…..”
ಭಾವೋದ್ವೇಗದಿಂದ ಹೇಳುತ್ತಿದ್ದ ದಿವಾಕರನ ಮುಖ ಕೆಂಪಾಗಿತ್ತು. ಆ ವ್ಯಕ್ತಿ ನೋವಿನಿಂದ ಅವನ ಕಣ್ಣುಗಳಲ್ಲಿ ಕಂಡೂ ಕಾಣದಂತೆ ನೀರಿನ ಪಸೆ ಕಾಣಿಸಿಕೊಂಡಿತ್ತು.
ಎಲ್ಲವನ್ನೂ ಕೇಳಿ, ಗುರುತು ಹಾಕಿಕೊಂಡು, ಕೇಸ್ ಪೇಪರಿನಲ್ಲಿದ್ದುದಕ್ಕೆ ಹೋಲಿಸಿ ನೋಡಿದ ವಿಜಯಾ. “ನೀವು ಧೈರ್‍ಯವಾಗಿರಿ – ಯಾವುದೋ ಅವ್ಯಕ್ತ ಭೀತಿ ಅವರಿಗೆ ಆವರಿಸಿಕೊಂಡಿದೆ – ಅದನ್ನು ಜಾಗೃತ ಮನಸ್ಸಿನಲ್ಲಿದ್ದಾಗ ಅವರು ಹೇಳಲು ತಯಾರಿಲ್ಲ. ಅದಕ್ಕಾಗಿಯೇ ಈ ಚಿಕಿತ್ಸೆ. ಈ ದಿನ ಮಾಡ್ತ ಇದ್ದೇವೆ ನೀವು ಗಾಬರಿಯಾಗುವ ಅವಶ್ಯಕತೆಯೇ ಇಲ್ಲ….. ನೀವು ಹೊರಗಡೆ ಕುಳಿತಿರಿ, ನಾನೇ ನಿಮ್ಮನ್ನು ಕರೆಯುತ್ತೇನೆ” ಎಂದ ವಿಜಯಾ ದಿವಾಕರನನ್ನು ರೂಮಿನಿಂದ ಹೊರಗೆ ಕಳುಹಿಸಿ, ಗೀತಾಳನ್ನು ಮಲಗಿಸಿದ್ದ ಒಳಗಿನ ಕೊಠಡಿಗೆ ಕೇಸ್ ಪೇಪರುಗಳೊಂದಿಗೆ ಹೋದಳು.
ಸಾಲಾಗಿ ಬೆಂಚಿನ ಮೇಲೆ ಆಗಲೇ ಬಂದು ಕುಳಿತುಕೊಳ್ಳತೊಡಗಿದ್ದ ರೋಗಿಗಳು ಒಮ್ಮೆ ನೋಡಿದ ವಿಜಯಾ “ಸಿಸ್ಟರ್-ಡಾಕ್ಟರ್ ವಾಸುಗೆ ಹಿಸ್ಟರಿ ತೆಗೆದುಕೊಳ್ಳಲು ಹೇಳಿ – ನಾರ್‍ಕೋ ಮುಗಿಸಿ ಪ್ರೊಫೆಸರ್ ಬಾರ್‍ತಾರೆ ಎನ್ನುತ್ತಾ ರೂಮಿನ ಬಾಗಿಲು ಹಾಕಿಕೊಂಡಳು.
ಅವಳಿಗಿಂತ ಮೊದಲೇ ಪ್ರೊಫೆಸರ್ ರಾವ್ ಬಂದಿದ್ದರು. ಮಲಗಿದ್ದ ಗೀತಾಳ ರಕ್ತನಾಳಕ್ಕೆ ಪೆಂಟಥಾಲ್ ಸೋಡಿಯಂ ಇಂಜೆಕ್ಷನ್ನನ್ನು ನಿಧಾನವಾಗಿ ನೀಡತೊಡಗಿದ್ದರು. ರೂಮಿನಲ್ಲಿ ಪ್ರೊಫೆಸರ್ ರಾವ್ ಮತ್ತು ವಿಜಯಾ ಮಾತ್ರ ಇದ್ದರು.
ಗೀತಾ ಹೆದರಿಕೆಯಿಂದ ಕಣ್ಣುಗಳನ್ನು ಅರಳಿಸಿ ನೋಡಿದಳು. ಹಿಂಜರಿಕೆ, ಭಯದಿಂದ ಇಡೀ ಮೈಯನ್ನು ಬಿಗಿಯಾಗಿಸಿ ಮುದುಡಿಕೊಂಡಳು.
“ಹಾಗೆ ಮಾಡ್ಬೇಡಿ – ಆರಾಮಾಗಿ ಮಲಗಿಕೊಳ್ಳಿ – ನಿಮಗೆ ಏನೂ ಮಾಡೋಲ್ಲ. ನೀವೀಗ ಕಣ್ಣು ಮುಚ್ಚಿ ಆರಾಮವಾಗಿ ಮಲಗಿಬಿಡಿ – ತಿಳಿಯಿತಾ”
“ಹೂಂ”
“ಎಲ್ಲಿ ಒಂದು, ಎರಡು, ಮೂರೂಂತ ಮಗ್ಗಿ ಹೇಳ್ತಾ ಹೋಗಿ-”
ರಾವ್ ಔಷಧಿಯನ್ನು ನಿಧಾನವಾಗಿ ತಳ್ಳುತ್ತಾ ಹೇಳಿದರು. ಔಷಧಿ ಹಂತಹಂತವಾಗಿ ದೇಹದೊಳಗೆ ಹೋದಂತೆಲ್ಲಾ ಗೀತಾಳ ಚಡಪಡಿಕೆ ನಿಂತಿತು.
“ನಿಧಾನವಾಗಿ ಜೋರಾಗಿ ಉಸಿರು ತೆಗೆದುಕೊಳ್ಳಿ”
ಗೀತಾಳಿಗೆ ಮೂರು-ನಾಲ್ಕರವರೆಗೆ ಮಾತ್ರ ಹೇಳಲು ಸಾಧ್ಯವಾಯಿತು. ಮಂಪರಿನ ಮಾಯಾಲೋಕಕ್ಕಿಳಿಯತೊಡಗಿದ್ದಳು.
“ತುಂಬಾ ನಿದ್ದೆ ಬರ್‍ತಾ ಇದೆ ಅಲ್ವೇನಮ್ಮ?”
“ಹೂಂ-”
“ಕಣ್ಣುಬಿಟ್ಟು, ನನ್ನತ್ತ ನೋಡಿ – ಎಲ್ಲಿ – ಕಣ್ಣು ತೆಗೆಯಿರಿ -” ಗೀತಾಳ ಪ್ರಯತ್ನ ಸಫಲವಾಗಲಿಲ್ಲ.
“ರೆಪ್ಪೆ-ಅಂಟಿಕೊಂಡುಬಿಟ್ಟಿದ್ದೆ-ಸರ್” ಅಮಲಿನಲ್ಲಿದ್ದವಳಂತೆ ತೊದಲುತ್ತಾ ಹೇಳಿದಳು.
“ಗೀತಾ-ನಿನ್ನ ಗಂಡ ಹೆದರಿಸ್ತಾನೇನಮ್ಮಾ?” – ರಾವ್ ನಿಧಾನವಾಗಿ ವಿಷಯಕ್ಕೆ ಬಂದರು.
“ಯಾವ ಗಂಡ?
“ನಿನ್ನ ಗಂಡ-ದಿವಾಕರ್ ಕಣಮ್ಮ-”
ಗೀತಾ ಕೆಲವು ಕ್ಷಣ ಮಾತೇ ಆಡಲಿಲ್ಲ. ಏನನ್ನೋ ಹೇಳಲು ತುಟಿಯನ್ನು ತೆರೆದವಳು ಪುನಃ ಮುಚ್ಚಿಕೊಂಡಳು.
“ಗೀತಾ….. ನೀನು ಮೊದಲಿನಂತೆ ಆರೋಗ್ಯವಾಗಿ….. ನಿನ್ನ ಮಗು… ದಿವಾಕರನೊಂದಿಗೆ ಇರ್‍ಬೇಕೂಂತ ಆಸೆ ಇದೆಯೋ ಇಲ್ವೊ?…
“………”
“ದಿವಾಕರ್ ಹುಚ್ಚನಂತಾಗಿಬಿಟ್ಟಿದ್ದಾನೆ… ನನ್ನ ಮಾತು ಕೇಳ್ತೀಯೋ ಇಲ್ವೋ?…”
“ಹೂ….” ಆಳದಿಂದ ಬಂದಿತು ಸ್ವರ.
“ಮಗೂನ ಯಾಕೆ ಕೊಲ್ಲೋಕೆ ಹೋಗ್ತಿಯಾ?… ಮಧ್ಯರಾತ್ರಿ ದಿವಾಕರನಿಂದ ತಟ್ಟನೆ ದೂರ ಎದ್ದು ಯಾಕೆ ಹೊರಗೆ ಓಡ್ತೀಯಾ?
“ಹೊರಗೆ ಹೋಗದಿದ್ದರೆ ಅವರನ್ನು ಎಲ್ಲಿ ನಾನು ಕೊಂದುಬಿಡ್ತೇನೆಯೊ ಹೆದರಿಕೆ….”
“ಅಂಥಾದ್ದೇನು ಮಾಡಿದ್ದಾನೆ ನಿನಗವನು? ನಿನಗೆ ಮೋಸ ಮಾಡಿದ್ದಾನೇನು?….
ಗೀತಾ ತಲೆಯಲುಗಿಸಿದಳು. ಕಣ್ಣಂಚಿನಿಂದ ಕಂಬನಿ ಕಾಣಿಸಿತು. “ಅವರು. ಅವರು ತುಂಬಾ ಒಳ್ಳೆಯವರು….. ಈ ಕೆಟ್ಟ ಪ್ರಪಂಚದಲ್ಲಿ ಅದೂ ನನ್ನಂತಹ ಪತಿತೆಯ ಜೊತೆ ಇರಕೂಡದು….”
“ಪತಿತೆ!”- ಆಶ್ಚರ್‍ಯದಿಂದ ನುಡಿದರು ರಾವ್.
“ಹೌದು….. ಅಯ್ಯೋ… ನಾನ್ಹೇಗೆ ಹೇಳಲಿ….” ಗೀತಾ ವೇದನೆಯಿಂದ ನರಳಿದಳು.
“ನೀನು ಹೇಳಲೇಬೇಕು….. ನಿನ್ನ ಮನಸ್ಸಿನಲ್ಲಿದ್ದುದನ್ನು ಹೊರಗೆ ಹಾಕಲೇಬೇಕು ಗೀತಾ…. ಹೇಳು ನಿಲ್ಲಿಸಬೇಡಾ…..”
ಗೀತಾ….. ಮಂಪರಿನಲ್ಲಿ… ಬಡಬಡಿಸುವವಳಂತೆ ಪ್ರಾರಂಭಿಸಿದಳು.
“ನನ್ನ ಡಿಗ್ರಿ ಪದವಿ ಮುಗಿಸಿಕೊಂಡು ಬಂದರೂ ಯಾವ ಪ್ರೇಮ… ಪ್ರಣಯ ಪ್ರಸಂಗಗಳಿಗೂ ಸಿಕ್ಕಿಹಾಕಿಕೊಂಡಿರಲಿಲ್ಲ. ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು, ಮನೆಯಿಂದ ದೂರಾಂತ ಕಾಲೇಜಿಗೆ ಹತ್ತಿರದಲ್ಲೇ ವಠಾರವೊಂದರಲ್ಲಿ ಸಣ್ಣ ರೂಮು ಮಾಡಿದೆ. ಇದಕ್ಕೆ ನನ್ನ ಮನೆಯವರ ಒಪ್ಪಿಗೆಯಿತ್ತು. ಭಾನುವಾರವಾದರೆ ಮನೆಗೆ ಹೋಗುತ್ತಿದ್ದ. ಇಲ್ಲವಾದರೆ ಮನೆಯವರೇ ಬರುತ್ತಿದ್ದರು. ಹೀಗೊಮ್ಮೆ ಬಸ್ಸಿನಲ್ಲಿ ಓಡಾಡ್ತಾ ಇರೋವಾಗ ನಾಗರಾಜನ ಪರಿಚಯವಾಯ್ತು. ತುಂಬಾ ಆಕರ್‍ಷಕವಾಗಿ ಮಾತನಾಡುತ್ತಿದ್ದ, ನಗಿಸುತ್ತಿದ್ದ, ಅನೇಕ ಕತೆಗಳನ್ನು ಹೇಳುತ್ತಿದ್ದ. ಪರಿಚಯ ಜಾಸ್ತಿಯಾದಂತೆಲ್ಲಾ ಸಲಿಗೆ ಹೆಚ್ಚಾಯಿತು. ನನ್ನ ರೂಮಿಗೆ ಅವನನ್ನು ಊಟಕ್ಕೆ ಆಹ್ವಾನಿಸಿದೆ. ಯಾವ ಸಂಕೋಚವೂ ಇಲ್ಲದೆ ಬಂದ ನಂತರ ಬರುವುದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟ. ವಠಾರದವರ, ಮನೆಯವರ ನವಿರಾದ ಎಚ್ಚರಿಕೆಯ ನುಡಿಗಳನ್ನು ಅವನ ಮಾದಕ ನಗು ಕಿತ್ತು ಹಾಕುತ್ತಿತ್ತು. ಒಂದೇ ರೂಮು, ಒಂಟಿ ಹೆಣ್ಣು. ಒಂಟಿತನದ ಉಪಯೋಗವನ್ನು ನಾಗರಾಜ ಬಹು ಸುಲಭವಾಗಿ ಪಡೆದುಕೊಂಡ.”
“ಇಷ್ಟು ವರ್‍ಷಗಳಾದ್ರೂ ನೀನಿನ್ನೂ ಪ್ರೇಮಾಂದ್ರೆ ತಿಳಿಯದೇ ಇದ್ದೀಯಲ್ಲ? ಅಬ್ನಾರ್‍ಮಲ್ ನೀನು?” – ಎಂದು ಛೇಡಿಸುತ್ತಿದ್ದ. ಆಗೆಲ್ಲಾ ನಂಗೆ ಒಂಥರಾ ಆಗ್ತಾಯಿತ್ತು. ಯಾವುದೋ ಒಂದು ದಿನ ನಾನೂ ನಾರ್‍ಮಲ್ ಹೆಣ್ಣು ಎಂದು ತೋರಿಸಿಕೊಡಲು ನನ್ನ ಕನ್ಯತ್ವವನ್ನು ಲೂಟಿ ಮಾಡಿಬಿಟ್ಟ – ನಂತರದ ದಿನಗಳಲ್ಲಿ ನಾನೇ ಬಾಗಿಲು ತೆರೆದು ಅವನ ಬರವಿಗಾಗಿ, ಅವನ ಸ್ಪರ್‍ಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವಂತಾಗಿಬಿಟ್ಟಿತ್ತು. ಅಷ್ಟರಲ್ಲಿ ಮನೆಯರಿಗೆ ಗೊತ್ತಾಗಿ, ವಠಾರದವರಿಂದ ಛೀಮಾರಿಗೆ ಗುರಿಯಾಗಿ ರೂಮು ಖಾಲಿ ಮಾಡಿ ಹಾಸ್ಟೆಲಿಗೆ ಸೇರಿದೆ. ಮನೆಯಲ್ಲಿ ನನಗೆ ಪುನಃ ಜಾಗ ಸಿಗಲಿಲ್ಲ. ನಾಗರಾಜನ ಬಳಿ ಹೇಳ್ಕೊಂಡು ಅತ್ತೆ, ಮದೆವೆಯಾಗ್ತೇನೆ ಹೆದರಬೇಡಾಂತ ಭರವಸೆ ಕೊಟ್ಟ, ಕೈತುಂಬಾ ಹಣ ಸಂಪಾದನೆ ಮಾಡ್ತಾ ಇದ್ದ ನನ್ನನ್ನು ಬಿಟ್ಟುಕೊಡಲಾರದೆಯೋ ಏನೋ ಒಂದು ಅಮಾವಾಸ್ಯೆಯ ರಾತ್ರಿ ದೇವರ ಫೋಟೋದ ಮುಂದೆ ಕರೀಮಣಿಯಲ್ಲಿ ಪೋಣಿಸಿದ ಒಂದು ಹವಳವನ್ನು ಕುತ್ತಿಗೆಗೆ ಕಟ್ಟಿದ.
“ಹವಳ ನಮ್ಮ ಕಡೆ ಚಿನ್ನಕ್ಕಿಂತಾ ಶ್ರೇಷ್ಠ. ಈ ದಿನದಿಂದ ನೀನು ನನ್ನ ಹೆಂಡತಿ” ಎಂದ.
ನಾನು ನಂಬಿ ಉಬ್ಬಿಹೋದೆ. ಯಾವುದೇ ನೌಕರಿಯಿಲ್ಲದೆ ಓಡಾಡುತ್ತಿದ್ದ ಅವನಿಗೆ ತಿಂಗಳ ಸಂಬಳದ ಹಣವನ್ನೆಲ್ಲಾ ನಿರ್‍ವಂಚನೆಯಿಂದ ಸುರಿಯುತ್ತಿದ್ದೆ. ಕೇವಲ ಒಂದು ತಿಂಗಳಷ್ಟೇ ನಮ್ಮ ದಾಂಪತ್ಯ ನಡೆದದ್ದು. ಒಂದು ದಿನ ಇದ್ದಕ್ಕಿದ್ದ ಹಾಗೆ ಮಾಯವಾದವನು ಲಗ್ನಪತ್ರಿಕೆಯೊಂದಿಗೆ ಪ್ರತ್ಯಕ್ಷನಾದ.
“ನಮ್ಮದು ಸಂಪ್ರದಾಯದ ಕುಟುಂಬ. ನಾವು ಮಾಡಿಕೊಂಡದ್ದು ಮದ್ವೇನೇ ಅಲ್ಲ. ಮನೇಲಿ ಈಗ ನನ್ನ ಮದ್ವೆ ಗೊತ್ತು ಮಾಡಿದ್ದಾರೆ. ಅವರು ಕೊಡೋ ವರದಕ್ಷಿಣೆಯ ಹಣದಿಂದ ಬಿಸಿನೆಸ್ ಪ್ರಾರಂಭಿಸ್ತೇನೆ. ನಿಂಗೂ ಹೇಗೂ ನೌಕರಿಯಿದೆ ಹಾಯಾಗಿದ್ದುಬಿಡು. ಆದದ್ದನ್ನೆಲ್ಲಾ ಮರೆತುಬಿಡು” ಎಂದು ನುಡಿದವನು, ಜೊತೆಯಲ್ಲಿ ಕರೆದುಕೊಂಡು ಬಂದಿದ್ದ ಅವನ ತಮ್ಮನೊಂದಿಗೆ, ಮದ್ವೆ ಜವಳಿ ತಗೊಂಡು ಹೋಗ್ತಿನಿ. ಇವಳ ಮನೆಯವರಿಗೆ ಹೇಳಿ, ನೀನು ಬಂದುಬಿಡು” ಎಂದು ಹೋಗಿಬಿಟ್ಟ.
ಗೀತಾ ಈಗ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿಬಿಟ್ಟಳು. ಪ್ರೊಫೆಸರ್ ತಡೆಯಲು ಹೋಗಲಿಲ್ಲ. ಹೆಪ್ಪುಗಟ್ಟಿದ ಭಾವನೆಗಳೆಲ್ಲಾ ನೀರಾಗಿ ಹೊರಗೆ ಬರಲೀಂತಾ ನೋಡುತ್ತಾ ಕುಳಿತಿದ್ದರು.
ಸ್ವಲ್ಪ ಸಮಯದ ನಂತರ, ಸಮಾಧಾನ ಹೊಂದಿದವಳಂತೆ ಗೀತಾ,
“ಅದೇ ರಾತ್ರಿ ಒಂದು ಬೊಗಸೆ ನಿದ್ದೆ ಗುಳಿಗೆಗಳನ್ನು ನುಂಗಿಬಿಟ್ಟೆ, ಅವರ ತಮ್ಮ ದಿವಾಕರ್ ಆದ್ಹೇಗ ನನ್ನನ್ನು ಹೊತ್ತುಕೊಂಡು ಆಸ್ಪತ್ರೆಗೆ ಹೋದರೋ ನಂಗೆ ಈಗಲೂ ಆಶ್ಚರ್‍ಯ. ಒಂದು ವಾರ ಸತತವಾಗಿ ಹೋರಾಡಿ ನನ್ನನ್ನು ಉಳಿಸಿಕೊಂಡರು. ನನ್ನನ್ನು ಉಳಿಸಿದ್ದು ಯಾಕೇಂತ ಹುಚ್ಚಿಯಂತೆ ಅವರ ಮೇಲೆ ಹಾರಾಡಿದೆ ಮನದಣಿಯ ಬೈದೆ. ಎಲ್ಲದಕ್ಕೂ ಅವರು ಮೌನವಾಗಿದ್ದರು.
ನೆನಪಿನಿಂದ ಬಳಲಿದವಳಂತೆ ಒಂದು ಕ್ಷಣ ನಿಲ್ಲಿಸಿದಳು.
“ಹೂಂ, ಹೇಳಿ.”
ಆಮೇಲೆ ಎಲ್ಲಾ ನಾಟಕದ ತರಹಾ ನಡೆದುಹೋಯ್ತು. ಇವರು ನಾಗರಾಜನ ಮದುವೆಗೆ ಹೋಗಲಿಲ್ಲ. ನನ್ನ ಅಣ್ಣ ಇಂಥ ನೀಚ ಕೆಲಸ ಮಾಡಿ ಅಲ್ಲಿ ಸಭ್ಯನಂತೆ ಸೋಗು ಹಾಕಿ ಮತ್ತೊಂದು ಹೆಣ್ಣಿನ ಕೊಲೆ ಮಾಡ್ತಾ ಇದ್ದಾನಂತ ಅಸಹ್ಯಪಟ್ಟುಕೊಂಡರು. ನಾನು ಆಸ್ಪತ್ರೆಯಲ್ಲಿರುವವರೆಗೂ ನನ್ನ ಮನೆಯವರಾರೂ ಬರಲಿಲ್ಲ. ಮುಂದೆಯೂ ಬರಲಿಲ್ಲ.
“ಆಮೇಲೆ?”
“ಚೇತರಿಸಿಕೊಳ್ಳುತ್ತಿದ್ದಂತೆಯೇ ನನಗೆ ಮತ್ತೊಂದು ಷಾಕ್ ಕಾದಿತ್ತು. ದಿವಾಕರ್ ಅವರ ತಂದೆ ಮತ್ತು ಮನೆಯವರ ಬಳಿ ವಿಷಯದ ವಿವರ ತಿಳಿಸಿ, ನನ್ನನ್ನು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದರು. ನಾನು ಖಡಾಖಂಡಿತವಾಗಿ ನಿರಾಕರಿಸಿದೆ. ಆದರೆ ಅವರ ದೃಢನಿರ್‍ಧಾರ, ನನ್ನ ಒಂಟಿತನದ ನೋವು, ಹತಾಶೆ, ನನ್ನನ್ನು ಸೋಲುವಂತೆ ಮಾಡಿತು.”
“ನನ್ನನ್ನು ನಂಬು ಗೀತಾ, ನನ್ನಣ್ಣನ ಹಾಗೆ ನಿನ್ನನ್ನು ನಡುಬೀದಿಯಲ್ಲಿ ಕೈಬಿಡೋಲ್ಲ. ನಿನಗಾಗಿ ಮನೆಯವರ ವಿರೋಧ ಕಟ್ಟಿಕೊಂಡು ಬಂದಿದ್ದೀನಿ, ಅತ್ತಿಗೆಯ ತರಹಾ ಇದ್ದೋಳನ್ನ ಮದುವೆಯಾಗ್ತಿಯಾ?” ಎಂದು “ಥೂ” ಎಂದ ಅಣ್ಣ. ನಂಗೂ ರೇಗಿತು. “ನೀನು ಒಮ್ಮೆಯಾದರೂ ಅವಳನ್ನು ಹೆಂಡತೀಂತ ಅಂದುಕೊಂಡಿದ್ದರೆ ನಾನು ಅತ್ತಿಗೆಂತ ಕಾಲು ಹೀಡೀತಿದ್ದೆ. ನನಗೂ ನೈತಿಕತೆ ಅರಿವು ಇದೆ. ವಿದ್ಯಾವಂತ ಒಂಟಿ ಹೆಣ್ಣನ್ನು ಬೀದಿಪಾಲು ಮಾಡಿ ಬಂದು ಇಲ್ಲಿ ಗೃಹಸ್ಥನಂತೆ ಬೀಗುತ್ತಿದ್ದಿಯಲ್ಲ ನಿಂಗೆ ನಾಚಿಕೆಯಾಗಬೇಕು” ಎಂದೆ. ಹೀಗೆ ಮಾತಿಗೆ ಮಾತು ಬೆಳೆಯಿತು. ಕೊನೆಗೆ ನಾನು ನಿರ್‍ಧಾರ ತೆಗೆದುಕೊಂಡು ನಿನ್ನ ಬಳಿಗೆ ಬಂದೆ. “ಅವನು ಕೊಂದು ಹೋದ, ನಿನ್ನನ್ನು ನಾನು ಬದುಕಿಸಿಕೊಂಡಿದ್ದೀನಿ” ಸಂಬಂಧಗಳು ನಾನು ಮಾಡಿಕೊಂಡ ಹಾಗೆ, ನೀನು ನನಗಾಗಿ ಬದುಕಲೇಬೇಕು. ಕೆಲವೇ ದಿನಗಳ ನಿನ್ನ ಒಡನಾಟದಲ್ಲಿ ನನಗೆ ನೀನು ತುಂಬಾ ಬೇಕು ಎನ್ನಿಸಿಬಿಟ್ಟಿದೆ. ನಿರಾಕರಿಸಬೇಡಾ ಗೀತಾ” ಎಂದರು.
“ಅವರ ಪ್ರೀತಿ, ದೃಢತೆ ನನ್ನನ್ನು ಬದುಕಿಸಿತು. ಸಮಾಜದ ಕಣ್ಣಲ್ಲಿ ಗೃಹಿಣಿಯನ್ನಾಗಿ ಮಾಡಿತು. ಮುದ್ದಾದ ಮಗುವನ್ನು ನೀಡಿತು…… ಮತ್ತೆಂದೂ ನನಗೆ ಅಭದ್ರತೆಯ ನೋವಾಗಲಿ, ಒಂಟಿತನದ ನೆನಪಾಗಲಿ ಆಗಲೇಯಿಲ್ಲ, ನಾನು ತುಂಬಾ ಸುಖವಾಗಿದ್ದೇನೆ ಡಾಕ್ಟ್ರೇ…..”
“ಮತ್ತೆ….. ಮಗೂನ ಕೊಲ್ಲೋಕೆ ಯಾಕೆ ಹೋಗ್ತಿಯಾ? ನಿನ್ನ ಗಂಡನ ಪಕ್ಕದಿಂದ ಎದ್ದು ಹೊರಗೆ ಯಾಕೆ ಹೋಗ್ತಿಯಾ?” ಇದ್ದಕ್ಕಿದ್ದ ಹಾಗೆ ಗೀತಾ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿಬಿಟ್ಟಳು.
“ಯಾರ ಮೇಲಿನ ದ್ವೇಷಕ್ಕೂ ಹಾಗೆ ಮಾಡ್ತಾ ಇಲ್ಲ. ದೇವರಂಥ ಗಂಡನಿಗೆ ನನ್ನಂತಹವಳು ಅರ್‍ಹಳೆ?….. ಇಂಥ ಮುದ್ದಾದ ಮಗುವಿನ ಪತಿತೆಯಾದ ತಾನು ತಾಯಿಯೇ….. ಅನ್ನಿಸಿ ನನ್ನ ಬಗ್ಗೆ ನನಗೆ ಜಿಗುಪ್ಸೆ ಬರತೊಡಗಿಬಿಟ್ಟಿದೆ…… ನನ್ನನ್ನು ಕೊಂಡುಕೊಳ್ಳಲು ಇಷ್ಟವಿಲ್ಲ….. ಡಾಕ್ಟರ್ ನಂಗೆ ಬದುಕೋಕೆ ತುಂಬಾ ಆಶೆಯಿದೆ. ಇವರೇ ಜನ್ಮ ಜನ್ಮಾಂತರಕ್ಕೂ ನನ್ನವರಾಗಿ ಇರ್‍ಬೇಕೂಂತ ಅನೇಕ ಪೂಜೆಗಳನ್ನು ಮಾಡ್ತಾ ಇದ್ದೀನಿ”
“ಈಗ ನಾನೊಂದು ಮಾತು ಹೇಳ್ತೀನಿ ಕೇಳ್ತೀಯಾ?”….
“ಹೂ-ಹೇಳಿ…..”
“ಪತಿತೆ-ಶೀಲಗೆಟ್ಟವಳೂಂತ ನೀನು ತಿಳ್ಕೊಳ್ಳೋಕೆ ನೀನು ನೀನಾ ನಾಟಕ ಮಾಡಿದ್ದು ನಂಬಿದೆ. ಈಗ ಎಷ್ಟು ಜನ ಮರು ಮದುವೆಯಾಗಿಲ್ಲ? ಇನ್ನು ಸಂಬಂಧಕ್ಕೆ ಬಂದರೆ, ಅವನು ಒಂದೆರಡು ದಿನಗಳು ನಿನ್ನೊಡನೆ ಲೈಂಗಿಕ ಸಂಪರ್‍ಕ ಇಟ್ಟುಕೊಂಡ ಮಾತ್ರಕ್ಕೆ ಗಂಡನಾಗಿಬಿಟ್ಟನೆ? ಅವನೇ ಹೇಳಿ ಹೋಗಿಲ್ವಾ?” ಇದು ಮದ್ವೇನೇ ಅಲ್ಲಾ ಎಂದು. ಇನ್ನಾವುದರ ಭಯ ನಿನಗೆ”
“……..”
“ನಿನ್ನದೆಲ್ಲವನ್ನೂ ತಿಳಿದಿರುವ, ಪ್ರೀತಿಸುವ, ಗಂಡ ಮಗು-ನಿನ್ನದಾಗಿರುವಾಗ ನೀನು ವಿನಾಕಾರಣವಾದ ಪಾಪ ಭೀತಿಯಿಂದ ಎಲ್ಲರ ಸಂತೋಷವನ್ನು ಹಾಳು ಮಾಡ್ತಿದ್ದೀಯಾ?”
“ನಾನೇನ್ಮಾಡ್ಲಿ ಹೇಳಿ ಡಾಕ್ಟ್ರೇ?”
“ಯಾರಿಗೂ ಆಗದಂತಹದೇನೂ ನಿನಗೆ ಆಗಿಲ್ಲ. ಸಂತೃಪ್ತಿಯಿಂದ ಜೀವನ ನಡೆಸಿಕೊಂಡು ಹೋಗು – ನೀನು ಯಾವುದಕ್ಕೂ ಅಂಜಬೇಕಾಗಿಲ್ಲ – ಕೀಳರಿಮೆ ಪಡಬೇಕಾಗಿಯೂ ಇಲ್ಲ ತಿಳಿಯಿತಾ? ಮಹಾಭಾರತದಲ್ಲೇನೇ ದ್ರೌಪದಿ ಐದು ಜನರೊಂದಿಗೆ ಇರಲಿಲ್ಲವೆ? ಎಲ್ಲಾ ಕಾಲದಲ್ಲೂ ಎಲ್ಲವೂ ನಡೆಯುತ್ತದೆ – ನಾವು ತೆಗೆದುಕೊಳ್ಳುವ ಎದುರಿಸುವ ರೀತಿಯಲ್ಲಿದೆ -”
“…..”
“ನೀನು ಯಾವ ಪಾಪವನ್ನೂ ಮಾಡಿಲ್ಲ – ಯಾರಿಗೂ ಮೋಸ ಮಾಡಿಲ್ಲ – ನಿನಗೆ ಪ್ರೀತಿಸುವ, ನಿನ್ನನ್ನೇ ನಂಬಿರುವ ಗಂಡು ಮಕ್ಕಳಿದ್ದಾರೆ ಯಾರಿಗೂ ಹೆದರಕೂಡದು -” ತಿಳಿಯಿತಾ?
“ಹೂಂ-”
“ಎಲ್ಲಾ ಮರೆತು ನಗ್ತಾ ಇರ್‍ಬೇಕು – ನಿನ್ನ ಗಂಡನೇ ನಿನಗೆ ಎಲ್ಲಾ ಸರ್‍ವಸ್ವ – ಅಲ್ವಾ-”
“ಹೌದು ಡಾಕ್ಟರ್-”
“ಹಾಗೆ ಸ್ವಲ್ಪ ಹೊತ್ತು ನಿದ್ದೆ ಮಾಡು ದಣಿದಿದ್ದೀಯಾ-”
ಇದುವರೆಗೂ ಮೌನವಾಗಿ ನಿಂತು ಕೇಳಿಸಿಕೊಳ್ಳುತ್ತಾ ಬರೆಯುತ್ತಿದ್ದ ವಿಜಯಾಳತ್ತ ತಿರುಗಿದ ಪ್ರೊಫೆಸರ್ ರಾವ್.
“ಇನ್ನೊಂದರ್‍ಧ ಗಂಟೆ ಇಲ್ಲೇ ಇರಲಿ – ಅವಳು ಪೂರ್‍ತಿಯಾಗಿ ಎಚ್ಚರವಾದ ಮೇಲೆ ಕಂಡು ಬರಲು ಹೇಳು- ಎಲ್ಲಾ ಬರ್‍ಕೊಂಡೆಯಾ?” ಎನ್ನುತ್ತಾ ಮೇಲೆದ್ದರು.
“ಹೂಂ-” – ಎಂದ ವಿಜಯಾ ರೂಮಿನ ಬಾಗಿಲು ತೆರೆದಳು. ಕನ್ಸಲ್ಟೇಶನ್ ರೂಮಿಗೆ ಹೊರಟ ಪ್ರೊಫೆಸರ್ ಹಿಂದೆ ವಿಜಯಾ ನಡೆದಳು.
ದಿವಾಕರ ಆಕಾಶ ಕಳಚಿ ಬಿದ್ದವನಂತೆ, ಶೂನ್ಯದತ್ತ ನೋಡುತ್ತಾ ಗೋಡೆಗೊರಗಿಕೊಂಡು ನಿಂತಿದ್ದ ವಿಜಯಾಳನ್ನು ನೋಡುತ್ತಲೇ ಕಾತುರದಿಂದ ಬಂದ. ರಾವ್ ಬಳಿಗೆ ಹೋಗಲು ಕೈಸನ್ನೆಯಿಂದಲೇ ಸೂಚಿಸಿದ ವಿಜಯಾ ತನ್ನ ರೂಮಿಗೆ ಹೋದಳು.
ದಿವಾಕರ್ ಪ್ರೊಫೆಸರ್ ರೂಮಿನೊಳಗೆ ಹೋದ.
“ಕೂತ್ಕೊಳ್ಳಿ ಮಿಸ್ಟರ್ ದಿವಾಕರ್… ಗಾಬರಿಯಾಗ್ಬೇಡಿ ಏನೂ ಆಗಿಲ್ಲ. ಎಲ್ಲಾ ಸರಿಯಾಯಿತು. ಸರಿಯಾಗುತ್ತೆ ಮೊದಲಿಗಿಂತ ಚೆನ್ನಾಗಿದ್ದಾರೆ ಧೈರ್‍ಯವಾಗಿರಿ. ಅವನ ಆತಂಕವನ್ನು ಗಮನಿಸಿ ಹೇಳಿದರು.
“ಅವಳಿಗೆ ಆಗಿದ್ದಾದರೂ ಏನು ಡಾಕ್ಟರ್?”
“ಪಾಪ ಭೀತಿಯಿಂದ ಯಾರಿಗೂ ಹೇಳಲಾರದೆ, ಹೇಳದೆ ಇರಲಾರದೆ ಒಳಗೊಳಗೆ ಚಡಪಡಿಸುತ್ತಿದ್ದಳು. ಹತ್ತಿಕ್ಕಿ ಹತ್ತಿಕ್ಕಿ ಕೊನೆಗೊಮ್ಮೆ ಈ ರೂಪದಲ್ಲಿ ಸ್ಫೋಟವಾಯಿತು. ನನ್ನ ಗಂಡ ದೇವರು, ಅವರಿಗೆ ನಾನು ಅರ್‍ಹ ಹೆಂಡತಿಯಲ್ಲ ಎಂಬುದೇ ಅವಳ ಅಂತರಂಗದ ಕೊರಗು”
“ನಾನೆಷ್ಟು ಸಲ ಹೇಳಿದ್ದೀನಿ ಸರ್ – ಜನಗಳ ಮಾತಿಗೆ ಕಿವಿಗೊಡಬೇಡಾ ಎಲ್ಲದಕ್ಕೂ ನಾನಿದ್ದೀನೀಂತ ಎಷ್ಟು ಬಾರಿ ಹೇಳಿದರೂ “ಹೂ” ಅಂತ ತಲೆಯಾಡಿಸುತ್ತಿದ್ದಳು. ಇಷ್ಟು ಚಿಕ್ಕ ವಿಷಯವನ್ನು ಅದೆಷ್ಟು ಗಾಢವಾಗಿ ತೆಗೆದುಕೊಂಡು ಬಿಟ್ಟಿದ್ದಾಳೆ ನೋಡಿ-” ಮುಖ ಚಿಕ್ಕದು ಮಾಡಿ ಹೇಳುತ್ತಿದ್ದ.
“ಯೂ ಆರ್ ಗ್ರೇಟ್ ಮಿಸ್ಟರ್ ದಿವಾಕರ್, ನಿಮ್ಮ ತರಹದ ವಿಶಾಲ ಹೃದಯ ಯಾರಿಗಿದೆ ಹೇಳಿ-ಜಾತಿ, ಸಂಬಂಧ-ಸಂಪ್ರದಾಯಗಳು ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡಿದ್ದೇವೆಯೇನೋ ಅನ್ನಿಸುತ್ತೆ – ಅಲ್ವಾ?” ಪ್ರೊಫೆಸರರು ದಿವಾಕರನನ್ನು ಮೆಚ್ಚುಗೆಯಿಂದ ನೋಡಿದರು.
“ನಾನಲ್ಲ ಸರ್, ನೀವು ನಮ್ಮಂತಹವರ ನೋವುಗಳನ್ನು ಸದ್ದಿಲ್ಲದೆ ನಿವಾರಿಸಿ ಕಳುಹಿಸುವ ನೀವು ಸರ್ ದೊಡ್ಡವರು. ಪುನಃ ಬರ್‍ಬೇಕಾ?”
“ಊಹೂಂ-ಪದೇ ಪದೇ ಬರೋದು ಬೇಡ. ಒಂದು ತಿಂಗಳು ನಾನು ಕೊಟ್ಟಿರುವ ಮಾತ್ರೆ ಕೊಡಿ ಸಾಕು ಫೋನು ಮಾಡಿ ತಿಳಿಸಿ-ಅವಶ್ಯಕತೆಯಿದ್ದರೆ ಬರುವಿರಂತೆ”
ದಿವಾಕರ ಕೃತಜ್ಞತೆಯಿಂದ ಮತ್ತೊಮ್ಮೆ ನಮಸ್ಕರಿಸಿ ಹೊರಟ ಅವನ ನಡಿಗೆಯಲ್ಲೀಗ ಉತ್ಸಾಹ-ಲವಲವಿಕೆ ತುಂಬಿತ್ತು.
ಹಿಂದೆಯೇ ವಿಜಯಾ ನುಗ್ಗಿ ಬಂದಳು.
“ನೀವು ಹೇಳಿದ್ದು ತಪ್ಪು – ಮೈದುನನ್ನೇ ಮದ್ದೆಯಾಗಿದ್ದಾಳೆ ಸರೀಂತಾ ಹೇಳ್ತೀರಲ್ಲ-” ಕೇಸ್ ಪೇಪರುಗಳನ್ನು ಮೇಜಿನ ಮೇಲೆ ಟಪ್ಪೆಂದು ಇಡುತ್ತಾ ಹೇಳಿದಳು.
ತಿಳಿಯಾಗಿ ನಕ್ಕ ಪ್ರೊಫೆಸರ್ ರಾವ್. “ನೀನಿನ್ನೂ ಚಿಕ್ಕವಳು, ಸಂಬಂಧಗಳ ಬಗ್ಗೆ ನಿಂಗೇನು ಗೊತ್ತು? ಆಂ?
“……..”
“ನಾವಿರೋದು ಜಡ್ಜ್ಮೆಂಟ್ ಕೊಡೋಕಲ್ಲ. ಅಷ್ಟಕ್ಕೂ ಅವರದು ತಪ್ಪು ಸರೀಂತಾ ಹೇಳಲು ನಾವ್ಯಾರು? ನಾವು ಪರಿಪೂರ್‍ಣರೆ?”
“ಸರ್…..”
ಬದುಕಿನ ದಂದ್ವದಲ್ಲಿ ಬಳಲಿ ನೊಂದು, ನಿವಾರಣೆ ಕಾಣದೆ ತೊಳಲುತ್ತಾ ನಮ್ಮ ಬಳಿ ಬಾರ್‍ತರೆ. ಬದುಕುವ ಆದಮ್ಯ ಆಸೆಯಿಟ್ಟುಕೊಂಡು, ಇತ್ತ ಅತ್ತ ಸಾಯಲಾರದೆ, ಮಾನಸಿಕವಾಗಿ ಬಳಲಿ, ಉನ್ಮಾದರಾಗಿ ಬರುವವರಿಗೆ “ನೀನು ಪಾಪಿ…. ಮಾಡಿದ್ದು ತಪ್ಪು…. ನೀನು ಬದುಕಲು ಅರ್‍ಹನಲ್ಲ….. ನಿನಗೆ ಹಕ್ಕಿಲ್ಲ ಎಂದು ಹೇಳಬೇಕೆ?….”
“…..”
ಅಷ್ಟಕ್ಕೂ ಗೀತಾಳದ್ದೂ ಏನು ತಪ್ಪಿದೆ? ಮನೆ ಸಮಾಜ ಜಾತಿ ಎಲ್ಲವನ್ನೂ ಧಿಕ್ಕರಿಸಿ, ನಾಗರಾಜ ಹೇಳಿದ ಹಾಗೆ, ಸೂತ್ರ ಬೊಂಬೆಯಂತೆ ಕುಣಿದು, ಅವನಿಂದ ತಿರಸ್ಕೃತಳಾಗಿ, ಹೆದರಿ ಹತಾಶಳಾಗಿ ಸಾಯಲು ಹೊರಟವಳನ್ನು ದಿವಾಕರ ಬದುಕಿಸಿದ್ದು ತಪ್ಪೆ? ಹೆಣ್ಣನ್ನು ಒಂದು ವಸ್ತುವಂತೆ ಭೋಗಿಸಿ ತಿಪ್ಪೆಗೆ ಬಿಸಾಡಿ ಹೋದ, ಅವನ ಮುಖಕ್ಕೆ ರಾಚುವಂತೆ ಎಲ್ಲಿಂದಲೋ ಬಂದ ದಿವಾಕರ ಅವಳಿಗೆ ಮಾನದಾನ, ಪ್ರಾಣದಾನ ಮಾಡಿದ್ದು ಅಪರಾಧವೆ?
“ಸಂಬಂಧ! ಹಾಗೆಂದರೇನು? ಅದು ನಾವು ಮಾಡಿಕೊಳ್ಳುವುದು, ಬೇಡವಾದಾಗ ಬಿಡೋದು ಅದೇ ಅಲ್ವಾ? ಅಮಾವಾಸ್ಯೆಯ ಕತ್ತಲಲ್ಲಿ ನಂಬಿಸಲು ಕರಿಮಣಿ ಕಟ್ಟಿ ಒಂದೆರಡು ಬಾರಿ ಹಾಸಿಗೆಯಲ್ಲಿ ಮಲಗಿ, ಜೀವನದಲ್ಲಿ ಯಾವ ಭದ್ರತೆಯನ್ನು ಕೊಡದೆ ನಡೆದದ್ದು ಮದ್ವೇನೇ ಅಲ್ಲಾಂತ ಮತ್ತೊಂದು ಮದುವೆ ಮಾಡಿಕೊಂಡು ಸುಖವಾಗಿ ಸಭ್ಯನಂತೆ ಸೋಗು ಹಾಕಿ ಬದುಕಲು ಅವನಿಗೆ ಯಾವ ಹಕ್ಕಿದೆ? ಅವನು ಒಂದು ಬಾರಿಯಾದರೂ ಗೀತಾಳನ್ನು ಕೈಹಿಡಿದು ಕರೆದುಕೊಂಡು ಹೋಗಿ ತನ್ನ ಹೆಂಡತೀಂತಾ” ಮನೆಯಲ್ಲಿ ಹೇಳಿದ್ದರೆ ಇವನು ಅತ್ತಿಗೆಂತಾ ಭಾವಿಸುತ್ತಿದ್ದ. ವೇಶೈಯ ಬಳಿಗೆ ಬಂದುಹೋದ ಹಾಗೆ ಬಂದವನನ್ನು ಹೇಗೆ ಗಂಡಾಂತ ಹೇಳ್ತೀಯಾ? ಅಸಹಾಯಕ ಹೆಣ್ಣೆಂದು ತಿಳಿದು, ಸಾಯುತ್ತಿದ್ದವಳನ್ನು ಉಳಿಸಿ, ಸಮಾಜದಲ್ಲಿ ಅವಳಿಗೆ ಒಂದು ಅಮೂಲ್ಯ ಸ್ಥಾನ ಕೊಟ್ಟ ದಿವಾಕರ ಅಪರಾಧೀನಾ?
“ಸರ್…..”
ಅವನು ನೆಲಕ್ಕೆ ಹಾಕಿ ಹೊಸಕಿ ಹೋದುದನ್ನು ಹಗುರವಾಗಿ ಎತ್ತಿ ಹಿಡಿದು ಸಾಮಾಜಿಕ ಭದ್ರತೆ, ಆರ್‍ಥಿಕ ಭದ್ರತೆ, ತಾಯ್ತನ, ಹೆಣ್ತನದ ಸುಖವನ್ನು ಪ್ರೀತಿಯಿಂದ ಇಷ್ಟು ವರ್‍ಷಗಳು ನೀಡುತ್ತಾ ಬಂದಿದ್ದಾನಲ್ಲ ದಿವಾಕರ ನನ್ನ ಮಟ್ಟಿಗೆ ಅವನೇ ಅವಳ ನಿಜವಾದ ಪತಿ….. ನನಗಂತೂ ಪುರುಷರಲ್ಲಿ ಇಂತಹವರೂ ಇದ್ದಾರೇಂತ ನಿನ್ನ ಬಳಿ ಜಾಸ್ತಿ ಹೇಳಿಕೊಂಡರೆ…. ಗೇಲಿ ಮಾಡ್ತೀಯ. ನನಗೂ ನಿಜಕ್ಕೂ ಅವನ ಬಗ್ಗೆ ಹೆಮ್ಮೆ….”
ವಿಜಯಾ ಎಲ್ಲವನ್ನು ಕೇಳುತ್ತಾ ಮೂಕಳಂತೆ ನಿಂತಿದ್ದಳು.
“ನಾವು ಮಾನವರು, ನಾಗರೀಕರು, ಪ್ರಾಣಿಗಿಂತ ಎಷ್ಟೋ ಮೇಲ್ಪಟ್ಟವರಂತ ಪ್ರಾಣಿಗಳಿಗೂ ನಮಗೂ ಇರುವ ಅಂತರ, ಅದೆಂದರೆ ಮನಸ್ಸು ಅದ್ಭುತವಾದದ್ದು….. ಸಾಗರದಂತೆ ನಿಗೂಢವಾದದ್ದು…. ಆಳ ಕಲ್ಪನೆಯ ನೆಲೆಗೆ ನಿಲುಕದ್ದು, ಬಾನಿನಂತೆ ವಿಶಾಲವಾದದ್ದು…. ಹತ್ತಿರ ಹತ್ತಿರ ಹೋದಷ್ಟು ಶೂನ್ಯದಂತೆ ಕಾಣಲು ಎತ್ತರಕ್ಕೆ ಒಮ್ಮೆಲೆ ಒಯ್ದು ಬಿಡುವ ಯಾರು ಎಂದು ಹುಡುಕುವ ಮೊದಲೇ ಅನೇಕ ಚಟುವಟಿಕೆಗಳ ಮೂಲಕ ತನ್ನ ಇರುವನ್ನು ತೋರಿಸುವ ತನ್ನದೇ ಆದ ಭಾವನೆಗಳಿಗೆ ಸ್ಪಂದಿಸುವ ಈ ಮನಸ್ಸು ನಿಜಕ್ಕೂ ಒಂದು ಮಾನಸ ಸರೋವರ.”
ಅನೇಕ ಘೋರ ಸಮಸ್ಯೆಗಳನ್ನು ಧೈರ್‍ಯವಾಗಿ ಎದುರಿಸವವರೇ ಒಮ್ಮೊಮ್ಮೆ ಕ್ಷುಲ್ಲಕ ಕಾರಣಕ್ಕಾಗಿ ಧೃತಿಗೆಟ್ಟವರಂತೆ ಕುಳಿತುಬಿಡುವುದಿಲ್ಲವೆ? ಈ ಸರೋವರದಲ್ಲಿ ಏಳುವ ಅಲೆಗಳು ವಿಭ್ರಮೆಗಳತ್ತ ಒಯ್ಯುವ ಮೆಟ್ಟಿಲುಗಳು.”
“ಸಿಗ್ಮಂಡ್ ಫ್ರಾಯಿಡ್ ಅದಕ್ಕೇ ಅಲ್ಲವೆ ಹೇಳಿರುವುದು “ಮನಸ್ಸು ನೀರಿನಲ್ಲಿ ತೇಲುವ ಹಿಮದ ಗಡ್ಡೆಯಂತೆ” ಎಂದು?
“ಏನು ಯೋಚಿಸ್ತಾ ಇದಿಯಾ ವಿಜಯಾ? ಯಾಕೆ ಇದ್ದಕ್ಕಿದ್ದ ಹಾಗೆ ಮೌನವಾಗಿಬಿಟ್ಟಿ?”
ಒಂದು ನೀಳವಾದ ಉಸಿರು ಬಿಟ್ಟು, “ಎಲ್ಲಾ ನಿಗೂಢ ಅನ್ನಿಸುತ್ತೆ ಸರ್…..” ಎಂದಿನಂತೆ ರಾವ್ ಅವರ ಕುಚೋದ್ಯಕ್ಕೆ ಅವಳ ಮೊಂಡು ಮೂಗಿನ ತುದಿ ಕೆಂಪೇರಲಿಲ್ಲ, ಯಾವುದೋ ನಿಗೂಢ ಲೋಕದಲ್ಲಿ ಮುಳುಗಿದವಳಂತೆ ಕುರ್‍ಚಿಯಲ್ಲಿ ಕುಸಿದು ಕುಳಿತಿದ್ದಳು.
*****