ಅಂದು ಶನಿವಾರ, ಸ್ವಲ್ಪ ಬೇಗನೆ ಪಾಠ ಮುಗಿಸಿ ಮನೆಗೆ ಹೋಗಬೇಕೆ೦ದಿದ್ದೆ. ಹೋಗುವಾಗ ಗೌಡರ ಹತ್ತಿರ ನಾಲ್ಕು ಮಾತು ಆಡಿ ಹೋಗುವದು ದಿನದ ರೂಢಿ. ಆದರೆ ಇಂದು ಗೌಡರೇನೋ ತಮ್ಮೊಬ್ಬ ರೈತನಿಗೆ ಬಾಯಿಮಾಡುತ್ತಿದ್ದರು. ಈರ…. ಆ ರೈತನ ಹೆಸರು…. “ಬಾಂವಿಗೆ ನೀರಽ ಇಲ್ಲ. ಎರಡು ಮೂರು ಸಲ ಹೇಳ್ಕೊಂಡೆ. ನೀವ್ ಕಿವೀಗೇ ಹಾಕ್ಕೊಳ್ಲಿಲ್ಲ. ನೋಡ್ದಕ್ಕ ನಾನಽ ತಗಿಸಿದೆ.” ಎಂದು ಏನೇನೋ ನಮ್ರತೆಯಿಂದ ಹೇಳುತ್ತಲಿದ್ದ! ಅವನು ಮೆತ್ತಗೆ ಮಾತಾಡಿದಷ್ಟೂ ಗೌಡರ ದನಿ ಬಿರುಸಾಗುತ್ತಲಿದ್ದಿತು. `ಕೊಳಚೆಯನ್ನು ಕೇಳದೆ ಯಾಕೆ ತಗಿಸಿದೆ?’ ಎಂದರು. ಮನೆಗೆ ಬೇಗನೆ ಹೋಗಬೇಕೆನ್ನುವ ನನಗೆ ಇದೊಂದು ಅನುಕೂಲವಾಗಿಯೆ ಪರಿಣಮಿಸಿತು. ಆದರೆ ತಲೆಯಲ್ಲೊಂದು ವಿಚಾರ ತರಂಗವನ್ನೆಬ್ಬಿಸಿ ಬಿಟ್ಟಿತು ಆ ಪ್ರಸಂ; ಬಾವಿಯ ಕೊಳಚೆಯನ್ನು ಕೇಳದೆ ತೆಗೆಯಿಸಿದರೆ ರೈತನದೇನು ತಪ್ಪು?.. ಅದರಲ್ಲಿ ಗೌಡರದೇನು ಹಾನಿ…? ‘ ಎಂದು ಮೊದಲಾದ ವಿಚಾರಮಾಲಿಕೆಯು ಮುಗಿಯುವುದರಲ್ಲಿ ಮನೆಯನ್ನು ಮುಟ್ಟಿದ್ದೆ ನಾನು.
ಲಲಿತೆ ಅದಾಗಲೇ ಮಲಗಿಕೊಂಡಿದ್ದಳು. ಅದರಿಂದ ನನ್ನ ವಿಚಾರಗಳಿಗೇನೂ ತೊಂದರೆಯೊದಗಲಿಲ್ಲ. ವಿಚಾರಮಾಲಿಕೆಯನ್ನು ಮುಡಿಯುತ್ತ ಮನಸ್ಸು ಮುಂದೆ ಸಾಗಹತ್ತಿತು. ಒಂದೆಡೆಗೆ ಒಪ್ಪೊತ್ತಿನ ಗಂಜಿಗೆ ಗತಿಯಿಲ್ಲದೆ `ಅಯ್ಯೋ ಹೊಟ್ಟೆ! ಅಯ್ಯೋ ಹೊಟ್ಟೆ!’ ಎನ್ನುವ ಎಷ್ಟೋ ಕಂಗಾಲರ ಕೂಗು; ಆದರೆ ಇನ್ನೊಂದೆಡೆಗೆ ಹಣಗಾರರು ಕೊಬ್ಬಿದ ಗೂಳಿಯಂತೆ ಮನಬಂದಂತೆ ತಿಂದುಂಡು ಅಜೀರ್ಣವಾಗಿ ಬಿಡುವ ಕಮರುದೇಗು! ಒಂದೆಡೆಗೆ-ಲಂಗೋಟಿಗೆ ಗತಿಯಿಲ್ಲದೆ ಒಳಹೊಕ್ಕ ಹೊಟ್ಟೆಯಲ್ಲಿ ಕೈ ಕಾಲುಗಳನ್ನು ಅವಚಿಕೊಂಡು `ಚಳಿ! ಚಳಿ!’ ಎನ್ನುತ್ತಿರುವ ಬಡವರ ನಡುಗು! ಮತ್ತೊ೦ದೆಡೆಗೆ-ಕೋಟುಜಾಕೀಟುಗಳನ್ನು ತೊಟ್ಟುಕೊಂಡು, ಬಡವರ ಬಗ್ಗರ ಮೇಲೆ ಅನ್ಯಾಯ ಅತ್ಯಾಚಾರಗಳಿಂದ `ಹುರ್ ಹುರ್, ಎಂದು ಮೆರೆದಾಡುವ ಸಾವುಕಾರರ ಸಿಡುಕು! ದುಡ್ಡುಳ್ಳವರು ದುಂದುಗಾರಿಕೆಯನ್ನು ಬಿಟ್ಟರೆ, ಬಡವರಿಗೆ ಹೊಟ್ಟೆ ತುಂಬ ಅನ್ನ ಮೈ ತುಂಬ ಬಟ್ಟೆ ಯಾದರೂ ಆಗಬಹುದಲ್ಲ!
ಇವೇ ಮೊದಲಾದ ವಿಚಾರಗಳಿಂದ ಇರುಳು ನಿದ್ರೆ ಬೇಗ ಬಂದಿರಲಿಲ್ಲ. ಅಂತೆಯೆ ಬೆಳಗಿನಲ್ಲಿ ಬೇಗನೆ ಎಚ್ಚರಾಗಲಿಲ್ಲ. ಎಚ್ಚರು ಆಗುವುದೊಂದೇ ತಡ, ಮತ್ತೆ ಮುಂದೆ ಬಂದಿತು ಆ ಈರನ ಚಿತ್ರ. ಅದೇಕೊ, ಈರನನ್ನು ನಾನು ಮೊದಲನೆಯ ಸಲ ಕಂಡಾಗ-ನಡತೆಯೊಳಗಿನ ನಯವನ್ನು ನೋಡಿದಾಗ ಒಮ್ಮೆಲೆ ಅವನನ್ನು ಮೆಚ್ಚಿ ಬಿಟ್ಟಿದ್ದೆ. ನಿನ್ನೆಯ ಅವನ ದೈನ್ಯ ಭಾವವನ್ನು ಕಂಡು ಮನಸ್ಸು ಮರುಗಿತ್ತು. ಇಂದು ಅವನ ಸ್ಥಿತಿಗತಿಗಳನ್ನು ಸಂಪೂರ್ಣ ಅರಿತುಕೊಳ್ಳಬೇಕು; ಆವಶ್ಯವಿದ್ದರೆ ನೆರವಾಗಬೇಕು! ಎ೦ದು ಮನಸ್ಸು ಹರಿಯಹತ್ತಿತು. ತೋಟದ ದಾರಿಯು ಗೊತ್ತಿದ್ದಿತು; ಕೂಡಲೆ ತಂಬಿಗೆಯೊಂದನ್ನು ಕೈಯಲ್ಲಿ ತಕ್ಕೊಂಡು ಹೊರಟೇ ಬಿಟ್ಟೆ.
‘ಕಲ್ಲಹಳ್ಳ’ ಎಂಬುದು ಕಟ್ಟಡವಿಯೊಳಗಿನ ಹಳ್ಳ; ಹಳ್ಳಕ್ಕೆ ಹನ್ನೆರಡು ತಿಂಗಳೂ ನೀರು, ನೆರೆಯಲ್ಲಿ ಅಗಿದ ಬಾವಿಗಳಿಗಂತೂ ತುಂಬ ನೀರುಸುತ್ತಲಿನ ಭೂಮಿಯ ಕಸುವಿನದು. ಆದರೆ ಸಾಗುವಳಿ ಮಾಡದ ನೆಲ. ಅಲ್ಲಿರುವುದೆಲ್ಲ ವತನದಾರರ ಜಮೀನುಗಳು. ಅವಕ್ಕೆ ಇರುವ ತೆರಿಗೆ ತುಸು, ಉಳಿದ ಕಡೆಗೆ ಅವರ ಭೂಮಿ ಬಹಳ-ಹೀಗಾಗಿ ಆ ಭೂಮಿಯ ಸಾಗುವಳಿ ಮಾಡುವ ಅಗತ್ಯವೇ ಅವರಿಗಿರಲಿಲ್ಲ. ಅಂತೆಯೆ ಆ ಪ್ರದೇಶವೆಲ್ಲ ಹುಲ್ಲು ಬೆಳೆದು ಬೇಸಾಯಕ್ಕೆ ಬಾರದ ಬೀಳುಭೂಮಿಯಾಗಿತ್ತು. ಅದರ ಉಪಯೋಗವೆಂದರೆ ಊರ ಜನರ ದನಗಳನ್ನು ಅಲ್ಲಿ ಮೇಯಲು ಹೋಗುತ್ತಿದ್ದುದಿಷ್ಟೇ.
ಇಂತಹ ಪ್ರದೇಶದಲ್ಲಿದ್ದುದು ಈರನ ಅಲ್ಲ ಗೌಡರ ತೋಟ, ಊರುಬಿಟ್ಟು ಮೂರು ಮೈಲಿನ ಮೇಲೆ. ಎಂದೋ ಹಿರಿಯರು ತೋಡಿಸಿದ ಭಾವಿ; ಮೊನ್ನೆ ಮೊನ್ನೆಯವರೆಗೂ ಹಾಳು ಬಿದ್ದಿತ್ತು. ಈರ ಗಟ್ಟಿಗ, ಪರಸ್ಥಳದಿಂದ ಹೊಟ್ಟೆ ಹೊರೆಯುವುದಕ್ಕೆಂದು ಗುಳೇಕಟ್ಟಿ ಬಂದವ. ಹೀಗೆ ಬಂದಾಗ ಭೂಮಿಯನ್ನು ಒಮ್ಮೆಲೆ ಯಾರು ಕೊಡಬೇಕು? ಗೌಡರು ಕೊಟ್ಟದ್ದು ಬೀಳುನೆಲವೆ೦ದು, ಅವನೂ ಒಲ್ಲೆನೆನ್ನದೆ ಲಾವಣಿಗೆ ಹಿಡಿದ; ಮೈ ಮುರಿದು ದುಡಿದು ಈಗ ಆ ತೋಟದಲ್ಲಿ ವರ್ಷಾ ನಾಲ್ಕೈದು ನೂರು ರೂಪಾಯಿ ಉತ್ಪನ್ನ ಬರುವಂತೆ ಮಾಡಿದ. ಗೌಡರಾದರೊ ಅವನ ಕುಟುಂಬಕ್ಕೆ ಬೇಕಾಗುವಷ್ಟನ್ನು ಬಡರೈತನ ಹೊಟ್ಟೆ ಬಟ್ಟೆಗೆ ತಕ್ಕಷ್ಟು- ಬಿಟ್ಟು, ಹೆಚ್ಚಿನದನ್ನೆಲ್ಲ ತಮ್ಮ ಮನೆ ತುಂಬಿಕೊಳ್ಳುತ್ತಿದ್ದರು. ಅವನೂ ಅದಕ್ಕೆ ಮರುಮಾತನ್ನಾಡು ತಿರಲಿಲ್ಲ. ಅನ್ನವಿಲ್ಲದೆ ಅಲೆಯುತ್ತಿದ್ದಾಗ ಆಶ್ರಯಕೊಟ್ಟರೆಂದೋ? ಅಲ್ಲ, ಜೀತದಾಳಿನಂತೆ ದುಡಿದರಾಯಿತು. ಎಲ್ಲವೂ ಅವರದೇ ಆದೆ. ನಮ್ಮದೇನು? ಹತ್ತು ವಷ್ಟು ಕೊಡುತ್ತಾರಲ್ಲ. ಹೆಚ್ಚಿನ ಮಾತು ನಮಗೇಕೆ ಬೇಕು?’ ಎಂದು. ಈ ಸಲವೂ ಕಬ್ಬು ಹಚ್ಚಿದ್ದಾನಂತೆ. ಚೆನ್ನಾಗಿ ಬೆಳೆದರೆ, ಬರುವ ಬೇಸಗೆಗೆ ಹಿರಿಯ ಮಗ ನಿಂಗನ ಮದುವೆ ಮಾಡಬೇಕೆಂಬಾಶೆಯಂತೆ ಆವನಿಗೆ. ಗೌಡರ ಮುಂದೆಯೂ ಒಂದೆರಡು ಸಲ ಇದನ್ನು ಹೇಳಿದನಂತೆ. ಕೇಳಿ ಅವರು ಸುಮ್ಮನಾದರಂತೆ! ಈ ಸಂಗತಿಯನ್ನು ಅವನೇ ಮೊನ್ನೆ ಹೇಳುತ್ತಿದ್ದ. ಗೌಡರೂ ಒಂದೆರಡು ಸಲ ಅವನ ಎದುರಿಗೆ ಅವನ ದುಡಿಮೆಯಬಗ್ಗೆ ಹೊಗಳಿದ್ದನ್ನು ಕೇಳಿದ್ದೆ, ಆದರೆ ನಿನ್ನೆ ಹಾಗೇಕೆ ಬಾಯಿಮಾಡುತ್ತಿದ್ದರೋ? ಮನಸ್ಸು ಈರನ ತೋಟ ಪಟ್ಟಿಗಳನ್ನು ನೆನೆಯುತ್ತಿದ್ದಂತೆಯೇ ಕಾಲುಗಳೂ ಅತ್ತ ಕಡೆಗೇ ಹರಿಯುತ್ತಿದ್ದುವು. ತಾಸೆರಡು ತಾಸು ಹೊತ್ತೇರುವಷ್ಟರಲ್ಲಿ ತೋಟಕ್ಕೆ ಬಂದು ತಲುಪಿದೆ. ಕಬ್ಬು ಚೆನ್ನಾಗಿ ಬೆಳೆದಿದೆ; ಆದರೆ ಈಗ ಬಾಡುತ್ತಲಿದೆ. ಬಾಡದೆ ಏನುಮಾಡೀತು? ನಾಲ್ಕಾರು ದಿನ ನೀರೇ ಹಾಯಿಸಿಲ್ಲ. ಹಾಯಿಸುವುದಾದರೂ ಎಲ್ಲಿಂದ? ಬಾವಿಯಲ್ಲಿ ನೀರು ಇದ್ದರಷ್ಟೆ? ಬಾವಿಯ ಮೇಲೆ ಹೋಗಿ ನಿಂತೆ; ಒಳಗೆ ಮೂರು ನಾಲ್ಕು ಹುಡುಗರು ಕೊಳಚೆಯನ್ನು ತುಂಬುತ್ತಲಿದ್ದರು. ಎಲ್ಲರೂ ಎಳೆಯ ಮಕ್ಕಳು, ಒಬ್ಬ ಮಾತ್ರ ಹಿರಿಯ ಹುಡುಗ, ಆತ ಸುಮಾರು ಹನ್ನೆರಡು ವರ್ಷದವನಿರಬಹುದು. ಅವನೇ ಹೆಡಿಗೆ ಹೊತ್ತು ಮೇಲೆ ತರುವವ. ಇದೀಗ ಹೆಡಿಗೆತುಂಬುವುದಾಯಿತೇನೋ! ಒಬ್ಬ ಹುಡುಗ ಹೇಳಿದ: `ಸಾಕಿನ್ನ, ಅಣ್ಣಗ ಒಚ್ಚೆ ಆಗ್ತೈತಿ’ ಎಂದು. ಮತ್ತೊಬ್ಬ ಕಿರಿಯಹುಡುಗ `ಮರತು ಹಾಂಗಽ ತುಂಬಿದ್ನಲ್ಲೊ’ ಎಂದು ಸ್ವಲ್ಪ ಕೊಳಚೆಯನ್ನು ಹೆಡಿಗೆ ಯೊಳಗಿಂದ ತೆಗೆದು ಮತ್ತೊಂದು ಹೆಡಿಗೆಯಲ್ಲಿ ಹಾಕಹತ್ತಿದ, ಹಿರಿಯ ಹುಡುಗ ಇರಲಿ ಬಿಡೋ’ ಎಂದು ಹೆಡಿಗೆಯನ್ನು ಎತ್ತಲು ಹೋದ; ಆದರೆ ಎತ್ತಲಿಕ್ಕಾಗಲಿಲ್ಲ. ಎಲ್ಲರೂ ಕೈ ಹಚ್ಚಿದರು; ಹೆಡಿಗೆ ಎತ್ತ ಹತ್ತಿ ದರು. ಮೈ ಮೇಲೆ ಕೊಳಚೆ ಸುರಿಯುತ್ತಲಿತ್ತು. ಹಾಗೆಯ ಹಿರಿಯ ಹುಡುಗ ಹೆಡಿಗೆ ಹೊತ್ತು ಮೇಲೆ ಬರಹತ್ತಿದ. ಕಾರಿಯ ಕಟ್ಟಿಗೆಯಂತಹ ಕಾಯ; ಲಂಗೋಟಿಯನ್ನುಳಿದು ಮೈ ಮೇಲೆ ಬೇರೆ ಬಟ್ಟೆಗಳಿಲ್ಲ. ಹುಡುಗ ಮೇಲಕ್ಕೆ ಬಂದ. ನನ್ನನ್ನು ಬೆರಗುಗಣ್ಣಿನಿಂದ ನೋಡಿದನಿಷ್ಟೆ; ಮಾತಾಡಿಸುವ ಧೈರ್ಯ ಸಾಲಲಿಲ್ಲವೇನೋ! ಹೆಡಿಗೆಯೊಳಗಿನ ಕೊಳಚೆಯನ್ನು ಚೆಲ್ಲಿ ಬಾವಿಯಲ್ಲಿ ಇಳಿಯತೊಡಗಿದ. ಆಗ ನಾನು ಕೇಳಿದೆ: “ಈರ ಇಲ್ಲೇನು?”
“ಅಂವ ನೆನ್ನಿ ಊರೊಳಗ ಹೋದಾಂವ ಇನ್ನೂ ಬರಲಿಲ್ಲರಿ!” ಧ್ವನಿಯಲ್ಲಿ ವ್ಯಾಕುಲತೆ ಇಡುಗಿತ್ತು. ಅಣ್ಣ ಯಾರೊಡನೆ ಮಾತಾಡಿದನೆಂದು ಮೇಲೆ ನೋಡಿದರು ಆ ಹುಡುಗರು. ಅಪರಿಚಿತನಾದ ನನ್ನನ್ನು ಕಂಡು ಮೇಲೆಯೇ ಬಂದು ಬಿಟ್ಟರು, ಮೈ-ಕೈ ಕೆಸರು, ಬಣ್ಣ ಕಪ್ಪು! ಆದರೂ ಎಷ್ಟು ಮುದ್ದು ಸುರಿಯುವ ಮಕ್ಕಳವರು! ನಿಸರ್ಗದೇವತೆ ನಿರ್ಮಿಸಿ ಬೆಳೆಯಿಸಿದ ನಗ್ನ ಪುತ್ಥಳಿಗಳವು! ಹುಡುಗರು ನನ್ನನ್ನೊಮ್ಮೆ ನೋಡಿ, ಅಣ್ಣನ ಕಡೆಗೆ ಕುತೂಹಲದೃಷ್ಟಿಯಿಂದ ನೋಡತೊಡಗಿದರು. `ಕುಂಡ್ರಿ, ಅಪ್ಪಾ ಈಗ ಬಂದಾನ ನೋಡೋನು’ ಎಂದು ಹಿರಿಯ ಹುಡುಗ ಹೇಳಿದ. ಅಲ್ಲೇ ಕಲ್ಲಿನಮೇಲೆ ಕುಳಿತೆ. ನಸುವೇಳೆಯಲ್ಲಿಯೆ ಈರ ಕಾಣಿಸಿದ, ಮುಖ ಬಾಡಿತ್ತು; ಕಾಲುಗಳನ್ನು ಎಳೆಯುತ್ತ ಕೆಳಗೆ ಮೋರೆಮಾಡಿ ಬರುತ್ತಿದ್ದ. ನನ್ನನ್ನು ಕಂಡಿರಲಿಲ್ಲ. ನಾನೇ ಅವನನ್ನು ಕೂಗಿದೆ.
“ಈರಪ್ಪಾ!”
“ಆ೦…. ಇತ್ತೆಲ್ಲಿ ದ್ಯಾವ್ರೂ?”
“ನಿನ್ನ ಕಡೇನೇ!”
“ನೆನ್ನಿ ಸಂಜೀನಾಗ ಭೇಟಿ ಆಗಿತ್ತಲ್ಲಾ ರಾಯರಽ…!”
“ಹೌದು, ಈ ಹೊತ್ತೂ ಭೇಟಿ ಆಗಬೇಕೂ ಅಂತ ಅನಿಸಿ….”
“ಅದ್ಯಾಕ…. ಬುದ್ಧಿ…”
ಈರ ನನ್ನ ಮುಖವನ್ನು ಕೆಲವು ನಿಮಿಷಗಳ ವರೆಗೆ ಕುತೂಹಲ ದೃಷ್ಟಿಯಿಂದ ನೋಡಿದ. ಕಾಲೊಳಗಿನ ಕೆರವುಗಳನ್ನು ಅಲ್ಲಿಯೇ ದೂರದಲ್ಲಿ ಬಿಟ್ಟು, ಸ್ವಲ್ಪ ಮುಂದೆಬಂದು ಒಂದು ಕಲ್ಲಿನ ಮೇಲೆ ಕುಳಿತು ತನ್ನ ಹಿರಿಯ ಮಗನ ಕಡೆಗೆ ನೋಡಿ ಹೇಳಿದ:
“ನಿಂಗಾ ಆಕಳ್ನಷ್ಟ ಹಿಂಡಕೋ ಲಗೂನಽ ಹಾಲೊಂದಽಟ ತಗೊಳ್ಳಿ ಮಾಸ್ತರಸಾಬರು!”
“ಈರಪ್ಪಾ, ಹಾಲ್ಗೀಲೇನೂ ಈಗ ಬೇಡ-ನಾ ಲಗೂನ ಹೋದ್ವೇಕು.”
“ಹೋಗರೆಂತೇಳ್ರಿ!….! ನೀವ್ಯಾನ ಮಾಲಿಂದಮ್ಯಾಲ ದೊರಕ್ತೀರೆ ಇನ? ಜಗ್ಗಿದ ದನಿಯಲ್ಲಿ ಈರ ನುಡಿದ ಹೋಗುವ ಹುಡುಗನ ಕಡೆಗೆ ಹೊರಳಿ-
ನಿಂಗಾ, ಚರಗೀ ತೊಳ್ದು ಬಿಸಲ್ಗಿಟ್ಟು, ಆ ಮ್ಯಾಗ ಕಾಗರ ಬಿಡು ಆ೦!” ಎಂದು ಹೇಳಿ ನನ್ನ ಕಡೆಗೆ ಮುಖ ತಿರುವಿದಾಗ, ಅವನ ಕಣ್ಣುಗಳು ನಸುಗೆಂಪಾಗಿದ್ದುವು. ಅವುಗಳಲ್ಲಿ ಸ್ವಲ್ಪ ನೀರೂ ಬಂದಂತೆ ತೋರಿತು. ನನ್ನ ಎದೆ ದಡದಡಿಸಿತು “ಏನು ವಿಶೇ” ಎಂದೆ
“ಯಾನ ಇಲ್ಲ ರಾಯರಽ!” ಎ೦ದು ನಗೆಯೊಂದನ್ನು ಬೀರಿ ಹೃದಯದ ನೋವನ್ನು ಅಡಗಿಸಲು ಈರ ಯತ್ನಿಸಿದ. ಸ್ವಲ್ಪ ಹೊತ್ತು ನೀರವ, ನಿಶ್ಯಬ್ದ- “ನೆನ್ನಿ ಗೌಡ್ರ ಹತ್ರ ನಿಮ್ಮನ್ನ ಹ್ಯಾಂಗ ಮಾತಾಡ್ಸೋದಂತ ಬಿಟ್ನಿ ರಾಯರಽ!” ಎಂದು ಮಾತನ್ನು ಪೂರ್ಣ ಮಾಡಲು ಹವಣಿಸಿದ.
“ಹೌದು; ನಾನೂ ಹಾಗೆ ತಿಳಕೊಂಡೆ; ಅದಕ್ಕಽ ಈಗ ಬಂದೆ!”
“ತಾವು ದೇವ್ರಂಗ ಇದ್ದೀರಿ ನೋಡ ನನ್ನೊಡ್ಯಾ!”
“ಅಂದರೆ ಏನೋ?”
“ಸುಮ್ನ ಯಾನ್ರೀ ಇಲ್ತಂಕಾ ಬರಬೇಕಂದ್ರ….. ಮನಿಮುಟ್ಟಿ ಹ್ವಾದ್ರೂ ಮಾತಾಡುದಿಲ್ಲ ದ್ಯಾವ್ರೂ!”
ಅತ್ತ ಕಡೆಗೆ ನಿಂಗ ಕೂಗಿ ಕೇಳಿದ: “ಅಪ್ಪಾ ಅಲ್ಲೇ ತಗೊಂಡು ಬರಲೇನು?” ಎಂದು. ನನಗೆ ಹಾಲು ಬೇಡ ಎಂದೆ. ಅವನು ನೊಂದುಕೊಂಡ; ಬಿಸಿಯುಸಿರೊಂದನ್ನು ಬಿಟ್ಟ. ಆ ಉಸುರಿಗೆ ನನ್ನ ಹೃದಯ ಕರಗಿತೇನೋ! ನನ್ನ ಹೊಟ್ಟೆಯಲ್ಲೂ ಕಲಕುಮಲಕಾಯಿತು. ಕೂಡಲೆ ನಾನಾಗಿಯೇ ಹೇಳಿದೆ- “ಇಲ್ಲ; ಇಲ್ಲೇನೂ ಬೇಡ ಅಂದೆನಿಷ್ಟೇ! ಅಲ್ಲೇ ಹೋಗೋಣ!” ಎ೦ದು ಎದ್ದೆ. ಅವನು ಸ್ವಲ್ಪ ಹಿಂಜರಿದ. ಆದರೂ ಕೆರವನ್ನು ಕಾಲಿಗೆ ಸಿಕ್ಕಿಸಿಕೊಂಡು ನನ್ನ ಮುಂದೆ ನಡೆದ. ಒಂದು ಸಲ ಹಿಂದೆ ಹೊರಳಿ ನೋಡಿದೆ. ಹಳ್ಳದೊಳಗೆ ನೀರು ಜುಳುಜುಳು ಹರಿಯುತ್ತಿದ್ದಿತು. ಮೆಲುಗಾಳಿ ಸುಯ್ಯೆಂದು ಗಿಡಗಳ ಸಂದಿಯೊಳಗಿ೦ದ ಸುಳಿಯಿತು. ಸೂರ್ಯ ಸಾವಕಾಶ ಮೇಲಕ್ಕೇರುತ್ತಲಿದ್ದ, ಬಿಸಿಲಿಗೆ ಬೆದರಿ ಗಿಡಗಳು ತಮ್ಮ ನೆರಳನ್ನು ನೆರೆಯಲ್ಲಿ ಕರೆದು ಕೊಳ್ಳುತ್ತಲಿವೆಯೋ ಎನ್ನುವಂತೆ, ನೆರಳುಗಳು ಗಿಡಗಳನ್ನು ಸಮೀಪಿಸುತ್ತಲಿವೆ. ಹುಲ್ಲುಗಾವಲದೊಳಗಿನ ಕಾಲುದಾರಿ.
“ಈರಪ್ಪಾ,” ಎಂದೆ.
“ಏನ್ದ್ಯಾವ್ರೂ?”
“ನಿನ್ನ ಮನೆ ಎಲ್ಲಿ?”
“ಅಲ್ಲಿ; ದೂರದಲ್ಲಿ ಆ ಮೊರಡೀ ತುದೀಲಿ!”
“ಅಷ್ಟು ದೂರ?”
“ಹೌದು ರಾಯರಽ, ಇಲ್ಲಿ ಹಳ್ಳದ ನೆರೀಲಿ, ರಾತ್ರಿ ಕಾಡಹಂದಿಗಳ ಕಾಟ!”
“ರಾತ್ರಿ ಬಾಗಿಲಾ ಹಾಕಿಕೊಂಡ್ರಾತು!”
“ಅದ್ಯಾನ ಮನೀನಽ ನನ್ನೊಡ್ಯಾ? ಗುಡ್ಲು. ಬೇಕಾದ ಕಡಿಂದನೂ ಒಳಗೆ ಸೇರ್ತಾವ…. ”
“ಮನೆಯಲ್ಲವೊ?”
“ಅಲ್ಲ; ರಾಯರಽ ಗುಡ್ಲು” ಎಂದು ಸ್ವಲ್ಪ ಸ್ತಬ್ಧನಿದ್ದ ಮತ್ತೆ ಹೇಳತೊಡಗಿದ.
“ಹಿಂದ್ಯ, ಮನೀನೂ ಇತ್ತು ಅಲ್ಲೇ ಭಾವೀ ಹತ್ರಾನಽ, ಮನೀ ಅಂದ್ರ ಕೆಸ್ರು ಕಲ್ಸಿ ಕಟ್ಟಿದ್ದಲ್ಲ. ಸುಮ್ನ ಸವಡು ಸಿಕ್ಕಾಗ ನಾಕು ಕಲ್ಲೇರಿಸಿ, ಮ್ಯಾಲೆ ದಂಟು-ಗಳಾ ಹಾಕಿದ್ದಿವಿ; ನಾಕು ದಿನಾ ಹಂದೀ ಕಾಟ ತಪ್ಪಿತ್ತೂ ಅನ್ರಿ. ಆದರ….” ಎಂದು ಸುಮ್ಮನಾದ.
“ಆದರೇನು?”
“ಕೇಳಬ್ಯಾಡ್ರಿ ದ್ಯಾವ್ರೆ…” ಈರನ ದನಿಯಲ್ಲಿ ದುಃಖ ತುಂಬಿತ್ತು. ನಾನು ಯಾಕೆ ಕೇಳಿದೆನೋ ಎಂದೆನ್ನಿಸಿತಾದರೂ ಕುತೂಹಲ ಕೆರಳಿ “ಯಾಕೆ?” ಎಂದು ಮೈ ಮರೆತವನಾಗಿಯೆ ಮತ್ತೆ ಅಂದೆ.
ಈರ ಸ್ವಲ್ಪ ಹೊತ್ತು ಸುಮ್ಮನಿದ್ದ. ಉಗುಳಿದ, ಕಣ್ಣನ್ನೂ ಒರಿಸಿ ಕೊಂಡನೇನೋ! ಕಳವಳ ಬೆರೆತ ಕಂಠದಿಂದ ಹೇಳಹತ್ತಿದ:
“ಅದೊಂದು ಕಾಳರಾತ್ರಿ- ಆಗ…. ನರಿಯ ಕಾಟ… ಭಾಳ. ಕಬ್ಬಿನ ಸುತ್ತ ತಿರುಗಿ ಬರಬೇಕಂತ ಹೋದ್ನಿರಿ! ನಾಲ್ಕು ಮಾರು… ಹೋಗಿದ್ನಿ ಇನ್ನೂ! ಕಲ್ಲುರುಳಿದ ಸಪ್ಪಳಾತು. ಓಡಿ ಬಂದು…. ಬಾಗಿಲ ಈಡು ತೆಗಿತಿದ್ನಿ..! ಒಳಗಿಂದ ಕಾಡಹಂದಿ…. ಬ೦ದು ಹಾಯ್ತು ಅಯ್ಯೋ… ಅಂತ ಅಲ್ಲೇ ನೆಲಕ್ಕೆ ಓರಗ್ದೆ….! ಸೊಲ್ಪ ತಡ್ದು ಒಳ್ಗ ಹೋಗಿ, ದೀಪಾ ಹೊತ್ಸಿದೆ…. ಹೋಗಿದ್ಲು ದ್ಯಾವ್ರೆ!”
“ಏನೋ ಹಾಗಂದ್ರೆ?”
“ಹೋಗಿದ್ಲು… ದ್ಯಾವ್ರೆ… ನೀಲಿ…. ತೀರ್ಕೊಂಡು ಹೋಗಿದ್ಲು….!
“ಏನು ಹಂದಿ ಕೊಂದಿತ್ತೊ?”
“ಇಲ್ಲ ದ್ಯಾವ್ರೂ, ಮೈಮ್ಯಾಲ ಕಲ್ಲುರುಳಿ…”
“ಈರ ಮೌನದಿ೦ದ ನಡೆಯಹತ್ತಿದ. ಅವನ ಕಣ್ಣೆದುರಿಗೆ ಅಂದಿನ ಚಿತ್ರ ಕಟ್ಟಿರಬೇಕು. ನನ್ನ ಮನಸ್ಸೂಕ ಬರಿಯದಾಗಿತ್ತು. ಮಾತಾಡುವುದಾಗಲಿಲ್ಲ. ಹಾಗೆಯೆ ವಿಚಾರವೊಂದು ತಲೆಯಲ್ಲಿ ಸುಳಿಯಿತು: `ಮನುಷ್ಯ ಬಡವನಾಗಿರಬಹುದು, ಉಪವಾಸವೂ ಇರಬಹುದು. ಆದರೆ ಅದನ್ನೆಲ್ಲ ಮರೆಯಿಸುವಂತಹ ಮಡದಿಯ ಮುಖವೊಂದೆದುರಿಗೆ ಇದ್ದರೆ… ಎಲ್ಲ ಉಪದ್ರವಗಳನ್ನೂ ನಗೆಮೊಗದಿಂದ ಎದುರಿಸಬಹುದಲ್ಲ!….
“ಈರಪ್ಪಾ ನನಗ ಇದಾವದೂ ಗೊತ್ತಿಲ್ಲಲ್ಲಾ!
“ನೀವು ಇನ್ನೂ ಈ ಊರಿಗೆ ಬಂದಿದ್ದಿಲ್ಲ ದ್ಯಾವ್ರೂ….! ಮಾತನಾಡುತ್ತಿರುವಂತೆಯೇ ಮುಂದೆ ಒಂದು ಗುಡಿಸಲನ್ನು ಕಂಡೆ. ಹಳೆಯ ಗುಡಿಸಲದು. ಬಿರಿಬಿರಿ ಬಿಸಿಲಲ್ಲಿ ನಿಂತಿದೆ. `ನೀರು ನೆಳಲುಗಳಿದ್ದಲ್ಲಿ ಗುಡಿಸಲನ್ನು ಕಟ್ಟಬೇಕೆಂದರೆ ಅಲ್ಲಿ ಅಡವಿಯ ಪಶುಗಳ ಕಾಟ: ನಿರ್ಧನರಿಗೆ ನಿಸರ್ಗವೂ ಮುನಿಯಬೇಕೇ? ಎಂದು ಮನದಲ್ಲಿ ಮರುಗಿದೆ.
ಈರ ಸ್ವಲ್ಪ ಮುಂದಕ್ಕೆ ಹೋಗಿ ಅಂಗಳ ಕಸಗುಡಿಸಿದ. ನಾನೂ ಹೋದೆ. “ಕೂಡ್ರಿ ರಾಯರಽ ಹೊಲ್ದಾಗ ಭೂಮಿತಾಯೇ ಹಾಸ್ಗಿ” ಎಂದ ಸಂಕೋಚದಿಂದ ಮರುಗಳಿಗೆಯಲ್ಲಿ ಹಾಲು ತಂದುಕೊಟ್ಟ ಕುಡಿಯಲೆಂದು. ಹಾಗೇ ಕೇಳಿದೆ: ‘ಕಬ್ಬು ಒಣಗತಾ ಇದೆಯಲ್ಲಾ?’
“ಅದಽ ರಾಯರಽ! ಬಾಂವಿಗೆ ನೀರಽ ಇಲ್ಲ ಕೊಳಚಿ ತುಂಬಿಕೊಂಡೈತಿ ಎಂದೋ ಹಿರೇರ ಕಾಲ್ಕ ತಗ್ದಾರು ತೆಗ್ಸಿ ಕೊಡ್ರೀ ಅಂದ್ರ ಮುಂದ ಮುಂದಕ್ಕ ಹಾಕ್ತ ಬಂದ್ರು. ನಾನಽ ನೋಡಲಾರದಕ್ಕ ದನಾ ಕಾಯವರ್ನ ಕರ್ದು- ಗೌಡ್ರ ಹತ್ರ ಕೇಳಿ ನಾಕು ಕಾಸ ತರ್ತೇನಿ, ಚುನ ಮರೀ ತಿನ್ನೋಣ ಅಂತ ಹೇಳಿ, ಕೊಳಚೀ ತೆಗೀಲಿಕ್ಕೆ ಕರಕೊಂಡು ಬಂದೆ. ಇನ್ನೊಂದು ದಿನ ತೆಗದ್ರ ತೀರ್ತ್ಯು. ನಿನ್ನಿ ಸಂತಿ; ಊರಾಗ ಹ್ವಾದೆ. ಹಾ೦ಗಽ ಗೌಡನ ಕಡೆ `ಹಾದು, ನಾಲ್ಕು ಹುಡುಗರ ಕರ ಕೊಂಡ ಕೊಳಚೀ ತಗೆದ್ನ್ಯು; ಅವರಿಗೆ ಚುನಮರಿ ತರ್ತೇಮಂತ ಹೆಳ್ದಿನಿ. `ನಾಲ್ಕು ದುಡ್ಡು ಕೊಡ್ತೀರಿ?’ ಅ೦ತಾ ಕೇಳ್ದಿನಿ. `ಕೇಳದ ಯಾಕ ತಗ್ದಿ? ನಡಿ ತ್ವಾಟಾ ಬಿಟ್ಟು, ಅ೦ತಾ ಬಾಯಿಬಿಟ್ಟರು. ಯಾಕೋ ಸಿಟ್ಟಿಗೆ ಬಂದರು:- ಅಂದ್ಕೊಂಡು ಸಂಜೀತಂಕಾ ಕೂತೆ; ಸಂಜೀನಾಗೂ ಹಾ೦ಗಽ ಅ೦ದ್ರು. ಆಗ ನೀವೂ ಬಂದಿದ್ರೆಲಾ.!”
ಈರನ ತೋಟಕ್ಕೆ ಹೋಗಿ ಬಂದಾಗಿನಿಂದಲೂ ಏನು ಮಾಡುವುದಕ್ಕೂ ಬೇಸರು. ಕಾಲಕಳೆಯುವುದೇ ಕಷ್ಟವೆನಿಸಿತು. ಹೇಗೋ ಹೊತ್ತು ಹಾಕುತ್ತಿದ್ದೆ. ಇಂದೇನೋ ಅತ್ತಿತ್ತ ಸ್ವಲ್ಪ ಅಡ್ಡಾಡಿ ದೀಪ ಹೊತ್ತಿಸುವ ಹೊತ್ತಿಗೇನೇ ಗೌಡರ ಮನೆಗೆ ಹೋದೆ. ಅವರ ತಾಯ್ನಾತಿ ಹಳಬ- `ಆ ದಿವ್ಸ ಮುಂಜೇಲಿ ಕರಿಬಸ್ವ, ತೋಟಾ ಮಾಡಿಕೊಂಡ ಇರತೇನಂತ ನಿಮ್ಮ ಹತ್ರ ಹೇಳಿ ಹೋಗಲಿಲ್ಲಽ ಆ೦ದ ಸ೦ಜೀನಾಗಽ ಈರಗ ಹೇಳಿ ಕಳ್ಸಿದೆ ನೀವು ಹೇಳ್ದಾಂಗ. ಇಂದ ಸಂಜೀನಾಗಂದ್ರ ಅತ್ತ ಹೋಗಿದ್ನಿ. ಕಬ್ಬು ಒಣಗಿದ್ದು ನೋಡಿ ಸಿಟ್ಟು ಬೆಂಕೇ ಆದ್ನಿ ಅನ್ರಿ. ಎತ್ತು-ಕೋಣ, ಹಗ್ಗ-ಹಂಗಡ ಅಲ್ಲಲ್ಲೇ ಬಿದ್ದಿದ್ದವು. ಎಲ್ಲಾರೂ ಗುಡ್ಲ ಕಡೇನ ಇದಾರೇನೋ ಸೂಳೆ ಮಕ್ಕಳ೦ತ ಕೂಗಿದೆ. ಯಾರೂ ಬರಲಿಲ್ಲ. ಗುಡ್ಲಿನ ಕಡೇನಽ ಹ್ವಾದೆ; ಮನ್ಯಾರ ಸುಳುವಿರಲಿಲ್ಲ. ಗುಡ್ಲ ಹೊಕ್ಕು ನೋಡ್ದೆ ಗಡಿಗಿ ಮಡಕಿ ಹಾಂಗಽ ಇದ್ದೂ! ಸುತ್ತಲೂ ಸುತ್ತಾಡಿ ನೋಡಿದೆ. ಒಂದು ಪಿಳ್ಳೆನೂ ನೋಡಲಿಕ್ಕೆ ಸಿಗಲಿಲ್ಲ” ಎಂದು ಏನೇನೋ ಹೇಳ್ತಿದ್ದ.
ಕೇಳುತ್ತಿದ್ದಂತೆಯೇ ಕಳವಳವಾಯಿತು ನನಗೆ. ದೇಹದೊಳಗಿನ ಶಕ್ತಿ ಸೇದಿ ಹೋದಂತಾಯ್ತು. ಅಲ್ಲೇ ಇರುವ ಕಂಬಕ್ಕೆ ಆತುಕೊಂಡು ನಿಂತೆ. ಹೊರಗಿನ ಪ್ರಪಂಚವು ಶೂನ್ಯವಾದಂತಿದ್ದೆ. ಹೃದಯಾಂತರಾಳದಲ್ಲಿ `ಈರ ತೋಟ ಬಿಟ್ಟು ಯಾಕೆ ಹೋದ?’ ಎಂಬುದೆಲ್ಲಾ ಗಾಢತರವಾಗಿ ಚಿತ್ರಿತವಾಗಿತ್ತು. ಅವನ ಬಡತನದ ಬವಣಿಯನ್ನು ಅರಿತುಕೊಳ್ಳಲು ಹವಣಿಸಿದೆ. ನಾನು ಅವನಿಗೆ ಸ್ವಲ್ಪವಾದರೂ ಸಹಾಯ ನೀಡಬಹುದೆಂದು ಬಗೆದೆ. ಅವನು ಹೀಗೆ ಒಮ್ಮೆಲೇ ಹೋದಾನೆಂದು ಕನಸಿನಲ್ಲಿಯೂ ಭಾವಿಸಿರಲಿಲ್ಲ ನಾನು. ಮತ್ತೊಮ್ಮೆ ಬರುವೆನೆಂದಿದ್ದನಲ್ಲ! ಯಾತಕ್ಕೆ ಬರುವುದೆಂದೆಣಿಸಿತೇನೋ; ಎನಿಸಿರಲೂ ಬಹುದು! ಗೌಡರ ನೆರೆಯಲ್ಲಿದ್ದವರ ಉಪಕಾರವೂ ಬೇಡವೆಂದೆನಿಸಿತೇನೋ! ಹೌದು; ದುಡ್ಡುಳ್ಳವರ ಉಪಕಾರವೇ ಅಂತಹದು! ಅವನದು ನಂಬುಗೆಯ ಸ್ವಭಾವ, ಅವನ ಬಗೆಗೆ ಗೌಡರು ವ್ಯತಿರಿಕ್ತವಾಗಿ ನಡೆದುಕೊಂಡರು. ಅದರಿಂದ ಹೀಗೆ ಬಿಟ್ಟು ಹೋದ…. ಅದೆಲ್ಲಿ?
ಈ ಸಂಗತಿಯು ಮನವನ್ನು ನೆನೆಯಿಸಲು ನೀರನ್ನು ಹನಿಸುತ್ತಲಿತ್ತು. ಹೆಚ್ಚಾದ ನೀರು ಬಸಿದು ಹೊರಕ್ಕೆ ಬರುವುದೇನೋ ಎನ್ನುವಂತೆ ನಯನಗಳಿಂದ ನೀರು ಒಸರುತ್ತಿದ್ದಿತು. ಮೆಲ್ಲನೆ ಕಣ್ಣನ್ನು ಒರಸಿಕೊಂಡು ನೋಡಿದೆ. ಅದಾವಾಗಲೋ ಮನೆಯ ಮುಂದೆ ಬಂದಿದ್ದೆ. ಬಾಗಿಲಲ್ಲಿ ಲಲಿತೆ ನಗುಮೊಗದಿಂದ ನಿಂತಿದ್ದಳು. ಅವಳಾ ನಗೆ ನನ್ನ ಮನದ ಉದ್ವಿಗ್ನತೆಗೆ ತೆರೆಯಾಗಿ ಪರಿಣಮಿಸಿತು. ಮತ್ತೊಮ್ಮೆ ಈರನ ಬದುಕಿನ ದುರಂತ ನೆನಪಾದಾಗ, ನನ್ನ ಮನುಷ್ಯತ್ವಕ್ಕೆ ನಾನೇ ನಕ್ಕು ಬಿಟ್ಟೆ.
*****