ಅವ್ವ ನಿನ್ನ ಮಮತೆಯ
ತೊಳ್ ತೆಕ್ಕೆಯಲ್ಲಿ ಹುಟ್ಟಿ
ಬೆಳೆದವರು ಬೆಳೆಯುತ್ತಾ
ಎತ್ತರದುತ್ತರಕ್ಕೆ ಬೆಳೆದರು
ನೀ ಉಣಿಸಿದ ಮೊಲೆ ಹಾಲ ಕುಡಿದು
ಮತ್ತೇರಿದವರು.
ಹಸಿರ ಹೊನ್ನ ಹೊತ್ತಿಗೆಯಲ್ಲಿ
ಪವಡಿಸಿ ತಮ್ಮ ಸ್ವಾರ್ಥಕ್ಕಾಗಿ
ಕನಸ ಕಾಣ ತೊಡಗಿದವರು
ಮರೆತರು ನಿನ್ನ ಇರುವಿಕೆಯ
ನಿನ್ನತನದ ಅರಿವೆ ತೊಟ್ಟು
ನೆತ್ತರ ತಿಲಕ ಹಣೆಯಲ್ಲಿರಿಸಿ
ಧರ್ಮ ದಿಕ್ಷೆ ಕುದುರೆಯ ಏರಿದವರು
ದುರ್ಯೋದನಾ ದುಶ್ಯಾಸನಾದಿಗಳ
ಅಂಗಸಂಗ ಋಣಹೊತ್ತು
ಶಕುನಿಯ ಜಾಲಕ್ಕೆ ಸಿಲುಕಿ
ಕುರುಕ್ಷೇತ್ರವ ಕಾಣಗೈದವರು
ಇಲ್ಲಿ ಶ್ರೀ ಕೃಷ್ಣನಿಲ್ಲದ ಧರ್ಮಯುದ್ಧ
ಕೈಯಲ್ಲಿ ಹಿಡಿದ ವಿಜಯಪತಾಕೆ
ಉದಾರ ಮನಸ್ಸು
ಹಸಿವಿಗೆ ಕಾವ ಹೋಯ್ದ ಅಕ್ಷಯ ಪಾತ್ರೆ
ಅಕ್ಕ ತಂಗೀರಗೆಲ್ಲಿಯ ಶ್ರೀರಕ್ಷೆ
ಮತ್ತೆ ಮತ್ತೆ ದ್ಯೂತದ ಸಂಚು
ದಾಳಕ್ಕೆ ದಾಳ ಪಣಕ್ಕೆ ಇಟ್ಟು
ಹರಕೆಯ ಕುರಿಯ ಬಿಟ್ಟಂತವರಿಗೆ
ನಿನ್ನದೆಲ್ಲಿಯ ಚಿಂತೆ ಅವ್ವ
*****



















