ಮೂಲ: ವಿಲಿಯಂ ಬಟ್ಲರ್ ಏಟ್ಸ್
ರಕ್ಷಣೆ ಇದೆಯೆಂತಲೇ ಅಣಕದ ಮಾತಿನಲ್ಲಿ
ಭೂತ ದರ್‍ಶನ ಕುರಿತು ಮಾತನಾಡಿದೆ ನಾನು.
ದಿಟ್ಟವೋ ಸೊಟ್ಟವೋ ಒಟ್ಟು ಜನರುಚಿಯಲ್ಲೇ
ಎಳ್ಳಷ್ಟೂ ವಿಶ್ವಾಸ ಇಲ್ಲವೆಂದೇ ಅದನ್ನು
ಸಾಧಿಸುವ, ಸಂಭಾವ್ಯವೆಂದು ವಾದಿಸುವ
ಗೋಜಿಗೇ ನಾ ಹೋಗಲಿಲ್ಲ. ನಿಜವೆಂದರೆ
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.
ಯೋಜಿಸಿ ಸಾಧಿಸಿದ್ದು ನನ್ನ ಅರೆಏಕಾಂತ,
ಅದರ ಅರ್‍ಧ ಪ್ರಿಯವಾದ್ದೂ ಇಲ್ಲ ಈತನಕ,
ನಟ್ಟಿರುಳವರೆಗೆ ಮಲಗದೆ ಕೂರಬಹುದು.
ತಿಳಿಯದಿದ್ದಾಗಲೂ ನನ್ನ ಮಾತಿನ ಅರ್‍ಥ
ತೋರಗೊಡದಂಥ ಸೂಕ್ಷ್ಮಮತಿ ಜೊತೆಗೆ
ಕೂತು ಏನೇನೆಲ್ಲ ಹರಟಬಹುದಲ್ಲ.
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.
ಮುದುಕನಾಗುತ್ತ ಹೋದಂತೆ ಒಬ್ಬ ಮನುಷ್ಯ
ಆಳವಾಗುತ್ತದೆ ಅವನ ಸಂತೋಷ,
ತುಂಬಿಬಿಡುತ್ತದೆ ಅವನ ಖಾಲಿ ಎದೆ ಕೊನೆಗೆ,
ಇಂಥ ಬಲವೆಲ್ಲದರ ಅಗತ್ಯವಿದೆ ಅವನಿಗೆ,
ಏಕೆಂದರೆ ಇರುಳು ಬೆಳೆಯುತ್ತ ಇರುತ್ತದೆ
ಭಯ ರಹಸ್ಯಗಳನ್ನು ತೆರೆಯುತ್ತ ಇರುತ್ತದೆ.
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.
*****