ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು, ಹೂವಿನ ಲಡಿಗಳಿಂದ ಆವೃತವಾದ ‘ಸೆಹರ’ ವನ್ನು ಹಾಕದೆ, ಸಾಧಾರಣವಾಗಿ ಗುಲಾಬಿ ಹಾರವನ್ನು ಹಾಕಿ ಸಲ್ವಾರ್, ಅಚ್ಕನ್, ಟೋಪಿಯಲ್ಲಿ ಚಂದವಾಗಿ ಕಾಣುತ್ತಿದ್ದ. ಇನ್ನೇನು ನಿಕಾಹ್ ಆರಂಭವಾಗಬೇಕು….. ಜುನೇದ್ ಗಡಿಯಾರ ನೋಡಿದ ಹನ್ನೊಂದು ಐದು…. ಮತ್ತೊಮ್ಮೆ ತಲೆ ಎತ್ತಿದ ಗಂಡಿನ ಬಲಗೆನ್ನೆ ಕಂಡಿತು. ಕಪ್ಪನೆಯ ಮೀಸೆ…. ಬಲಿಷ್ಟವಾದ ಭುಜ… ಹೊಳೆಯುತ್ತಿದ್ದ ಕಣ್ಣುಗಳು, ಜುನೇದ್‌ನ ಮನದ ಮೂಲೆಯಲ್ಲೆಲ್ಲೋ ಮೀಟುತ್ತಿದ್ದ ನೋವಿನ ಎಳೆ ಈಗ ಆಳವಾಗಿ ವ್ಯಾಪಿಸಿ…. ಸಹಸ್ರ ಶಕ್ತಿಯಿಂದ ಅಪ್ಪಳಿಸುತ್ತಿದೆ ಅನ್ನಿಸಿತು. ಈಗ ಮೈಕ್ ಸರಿಪಡಿಸುತ್ತಿದ್ದರು. ಅವನು ತಲೆ ಹಿಡಿದುಕೊಂಡ.
ಈಗ ಮೌಲವಿಯವರು ಕೆಮ್ಮಿ ಗಂಟಲು ಸರಿಪಡಿಸಿಕೊಂಡರು.
ಅವನು ಉಸಿರಿಗಾಗಿ ಚಡಪಡಿಸುತ್ತಾ ಒಮ್ಮೆ ತಲೆ ಕೊಡವಿದ. ಆಗಲೇ…. ಅವನಿಗೆ ಗುಲಾಬಿ ಸೀರೆ….. ಮಹಂದಿ ಹಚ್ಚಿದ ಪಾದಗಳು ಕಂಡಿದ್ದು…. ಆ ಮೆಹಂದಿಯ ಡಿಜೈನ್ ಹಿಂದಿನ ರಾತ್ರೆ…… ಆ ಪಾದಗಳ ಮೇಲೆ…. ಆ ಬೆರಳುಗಳ ಮೇಲೆ ಅವನೇ ಬಿಡಿಸಿದ್ದು.
ಹೌದು! ಫರೀದ!
ಅವನ ದೃಷ್ಟಿ ಮೇಲೇರಿತು. ಫರೀದ ಆತಂಕದ ದೃಷ್ಟಿಯಿಂದ ಅವನೆಡೆ ನೋಡುತ್ತ ‘ಬನ್ನಿ ಇಲ್ಲಿ’ ಎಂಬಂತೆ ತಲೆಯ, ಕಣ್ಣಿನ, ಕೈಯ ಸನ್ನೆ ಮಾಡಿದಳು. ಅವನಿದ್ದ ಮಾನಸಿಕ ಸ್ಥಿತಿಯಲ್ಲಿ ಆ ಕರೆ ಅವನಿಗೆ ಬೇಡವಾಗಿತ್ತು. ಹಾಗೆಯೇ…. ಅವನು ನೋಡಿದ ಹಾಗೆ ಅಲ್ಲಿ ನೆರೆದಿದ್ದ ಅನೇಕ ಗಂಡಸರು ಫರೀದಳನ್ನು ನೋಡಿರುವ ಸಾಧ್ಯತೆ ಇತ್ತು. ಅವನು ಕೋಪದಿಂದೆದ್ದು ಅವಳ ಬಳಿ ಸಾರಿದ.
ಮೇರೆ ಮೀರಿದ ಸಿಟ್ಟಿನಿಂದ ಅವನೇನು ಒದರುತ್ತಿದ್ದನೋ…. ಫರೀದಳೇ ಬೇಗ ನುಡಿದಳು.
“ರೀ! ಅನಾಹುತವಾಯಿತು. ನಾವು ಮತ್ತೊಮ್ಮೆ ಉಗಿಸಿಕೊಳ್ಳುವ ಕೆಲಸ ಆಗಿದೆ….. ನಂಗೇನೂ ತೋಚ್ತಿಲ್ಲ…… ನಾನು ಈ ಹಾಲ್‌ನಿಂದ ಹೊರ ಬರ್ತೀನಿ. ನೀವು ಹಾಗಿಂದ ಬನ್ನಿ….. ಆಡಿಗೆ ಮನೆ ಹತ್ತಿರ ತಂಗಿನಮರ ಇದೆಯಲ್ಲಾ ಅಲ್ಲಿಗೆ ಬನ್ನಿ….” ಎಂದು ನುಡಿದವಳೇ ಸರಸರನೆ ಮಾಯವಾಗಿಬಿಟ್ಟಳು.
ಮೌಲವಿಯವರು ತಮ್ಮ ಕೆಲಸ ಆರಂಭಿಸಿದ್ದರು…… ಅವನು ವೇಗವಾಗಿ ಅಲ್ಲಿಂದ ಹೊರಟ, ತೆಂಗಿನಮರದ ಬಳಿ ನಿಂತ ಫರೀದ ಅವನಿಗೆ ವಿಚಿತ್ರವಾಗಿ ಕಂಡಳು. ಬಿಳುಪೇರಿದ್ದ ಅವಳ ಮೋರೆ ನೋಡಿ ಅವನಿಗೂ ಗಾಬರಿಯಾಯಿತು. ಆದರೂ ಮೆಲುವಾಗಿ ಕೇಳಿದ.
“ಏನಾಯ್ತು?……. ಫರೀದ…… ಏನಾದರೂ ಕಳೆದುಹೋಯ್ತ?”
“ಅಯ್ಯೋ! ಇಲ್ಲಾರಿ! ಕಳೆದುಹೋಗಿದ್ರೆ ನಂಗೆ ಇಷ್ಟು ಆತಂಕ ಆಗ್ತಿರ್‍ಲಿಲ್ಲ…. ಸಿಕ್ಕಿದೇರಿ…!”
“ಏನು……..ಏನು ಸಿಕ್ಕಿದೆ?”
“ಒಂದ್….. ಮಗು….”
ಅವನು ನಕ್ಕುಬಿಟ್ಟ. ಸ್ವಲ್ಪ ಹಗುರವೆನಿಸಿತು.
“ನಗಬೇಡಿ…. ಇಲ್ಲಿ ನೋಡ್ರಿ…”
ಅವಳ ಕಾಲುಗಳ ಹಿಂದೆ ಅವಿತಿದ್ದ ಹೆಣ್ಣು ಮಗುವನ್ನು ಎಳೆದು ಅವನ ಮುಂದೆ ತಂದಳು.
ಆ ಮಗು…. ಅದರ ಆ ಮಿಂಚು ಕಣ್ಣುಗಳು…. ಆ ತುಟಿ…. ಆ ಮೂಗು… ಆ ಬಣ್ಣ…. ಅವನ ದ್ರವ ಅರಿತು….
“ಫರೀದ… ಫರೀದ”
“ಹೌದು…ರೀ!”
ಅವನು ಸ್ತಂಭಿತನಾಗಿಬಿಟ್ಟ. ಅವಳಷ್ಟೇ ಬಿಳುಪೇರಿದ. ಅವನಿನ್ನೂ ಚೇತರಿಸಿ ಕೊಂಡಿರಲಿಲ್ಲ. ಅಷ್ಟರಲ್ಲೇ ಆ ಮಗು ಅವನ ಬಳಿ ಸಾರಿತು. ಕೈ ನೀಡಿ “ಮಾಮ… ಮಾಮ… ಉಥಾಲ್ಯೋ” ಎಂದಿತು. ಅವನು ಅವಳ ಆದೇಶಕ್ಕೆ ಕಾಯುತ್ತಿದ್ದನೋ ಎಂಬಂತೆ ಎತ್ತಿಕೊಂಡ. ಅವಳು ತನ್ನ ಪುಟ್ಟ, ಮೃದು ಕೈಗಳಿಂದ ಅವನ ಮುಖವನ್ನೆತ್ತಿ ಕೇಳಿದಳು.
“ಜುನೇದಮಾಮ ಅಲ್ವ…… ನಾನು ನಿಮ್ಮನ್ನು ಚಾಂದ್ ಮಾಮ ಎಂದು ಕರೆಯಬೇಕಂತೆ.”
“ಯಾರು ಹೇಳಿದ್ದು ಹಾಗಂತ?” ಹೆದರುತ್ತಾ ಕೇಳಿದನವ.
“ನನ್ನ ಅಮ್ಮೀ.”
“ಯಾರು ನಿಮ್ಮ ಅಮ್ಮೀ?”
“ಗೊತ್ತಿಲ್ವ…. ನಿಶಾತ್ ನಮ್ಮ ಅಮ್ಮಿ, ನೀನು ನಮ್ಮ ಡ್ಯಾಡಿ….”
“ಸಾಕು ನಿಲ್ಲಿಸು” ಎಂದನಾದರೂ ಆ ಮಗುವನ್ನು ಇನ್ನಷ್ಟು ಬಿಗಿಯಾಗಿ ಅಪ್ಪಿದ. ಕಲವು ಕ್ಷಣಗಳ ನಂತರ ಆ ಮಗುವನ್ನು ಇಳಿಸಿ, ಅದಕ್ಕೆ ಕೇಳಿಸಬೇಕೋ ಬೇಡವೋ ಎಂಬಂತೆ ಫರೀದಳನ್ನು ಕೇಳಿದ.
“ಹ್ಯಾಗೆ ಬಂದಳು ಇವಳಿಲ್ಲಿ?”
“ಮದುವೇಲಿ ನನ್ ಪಕ್ಕ ಒಬ್ಬ ಹೆಂಗಸು ಬಂದು ಕೂತಳು. ಈ ಮಗು ಕೂಡ ಅವಳ ಜೊತೆಯಲ್ಲಿತ್ತು. ನೋಡ್ತಿದೀರಲ್ಲ ಇವಳನ್ನ… ಹೀಗೆ ಮುದ್ದು ಮುದ್ದಾಗಿ ಮಾತಾಡ್ತಿದ್ಲು, ನಾನು ತೊಡೆ ಮೇಲೆ ಕೂರಿಸಿಕೊಂಡೆ. ಅಷ್ಟರಲ್ಲಿ ಆ ಹೆಂಗ್ಸು “ನೀವು ಫರೀದಾನಾ?” ಅಂತ ಕೇಳಿದ್ಲು. ನಾನು ‘ಹೂಂ’ ಎಂದೆ. ಅದಕ್ಕೆ ಅವಳ ಹತ್ತಿರ ಇದ್ದ ಸೂಟ್‌ಕೇಸ್‌ನ ನನ್ನ ಹತ್ತಿರ ಸರಿಸಿ…. ‘ಒಂದ್ ನಿಮಿಷ ನೋಡ್ಕೊಳ್ತಿರಿ…. ಈಗ್ಗೆ… ಬರ್‍ತೀನಿ’ ಅಂತಾ ಎದ್ದೋದ್ಲು. ನಾನು ಯಾರೋ ಮದುವೆಗೆ ಬಂದಿರೋರು ಅಂತ ತಿಳ್ಕೊಂಡೆ. ಆಮೇಲೆ ಎಷ್ಟೊತ್ತಾದ್ರೂ ಬರ್‍ಲೇ ಅಲ್ಲ. ನಾನು… ಇನ್ನು ಈ ಸೂಟ್‌ಕೇಸು ಮತ್ತು ಈ ಮಗೂನ ಎಲ್ಲಿ ನೋಡ್ಕೊಳ್ತಾ ಇರ್‍ಲಿ ಅಂತ “ನಿಮ್ಮಮ್ಮ ಎಲ್ಲಿ ಹೋದ್ರು ಮರಿ” ಅಂದೆ…. ಅದ್ಕೆ ಇವ್ಳು ‘ಅವ್ರು ನಮ್ಮಮ್ಮ ಅಲ್ಲ’ ಅಂದ್ಲು. ‘ಹಾಗಾದ್ರೆ ಯಾರು?’ ಅಂದೆ…
‘ನಮ್ಮಮ್ಮನ ಫ್ರೆಂಡು’ ಅಂದ್ಲು. ‘ಇಷ್ಟೊತ್ತಾದರೂ ಬರ್‍ಲೇ ಇಲ್ಲ’ ಅಂದೆ. ‘ಅವ್ರು ಬರೋದಿಲ್ಲ’ ಅಂದ್ಲು. ‘ಹಾಗಂದ್ರೆ ಏನು?’ ಅಂದೆ. … ….. ‘ಹಂಗಂದ್ರ ….. ನಮ್ಮ ಅಮ್ಮಿ ಹೇಳಿದ್ದು ಹಾಗೆಯ….’ ಫರೀದ ಇರ್‍ತಾಳೆ, ಅವಳ ಹತ್ತಿರ ಮಗೂನ ಕೊಟ್ಟು…. ಸೂಟ್‌ಕೇಸ್‌ನ ಕೊಟ್ಟು ಎದ್ದು ಬಂದ್ಬಿಡು ಅಂದಿದ್ರು’…. ಆಗ ನಂಗೆ ಗಾಬರಿ ಯಾಯ್ತು. ‘ನಿಮ್ಮ ಮನೆ ಎಲ್ಲಿದೆ?’ ಅಂದೆ. ‘ಬಾಂಬೇಲಿ’ ಅಂದ್ಲು, ಯಾವ ರೋಡ್ ಅಂದೆ ‘ಗೊತ್ತಿಲ್ಲ’ ಅಂದ್ಲು. ನಿಮ್ ತಾಯಿ ಹೆಸ್ರೇನು ಅಂದಾಗ ‘ನಿಶಾತ್’ ಅಂಥೇಳಿದ್ಲು… ಆಮೇಲೆ ಆ ಹೆಂಗ್ಸಿನ ಪತ್ತೇನೆ ಇಲ್ಲ.
“ಆಮೇಲೆ ?”
“ಆಮೇಲೆ… ಅವಳ್ನ ಹುಡ್ಕಿ ಹುಡ್ಕಿ ಸಾಕಾಗಿ… ನಿಮ್ಮನ್ನ ಕರ್‍ದೆ”.
ಅವನು ಕೆಲಕಾಲ ದೂರ ಆಕಾಶದ ಶೂನ್ಯವನ್ನು ದಿಟ್ಟಿಸಿದ ನಂತರ ಮಗುವಿನ ಕೈ ಹಿಡಿದು ಕೇಳಿದ.
“ನಿನ್ನ ಹೆಸರು ಹೇಳ್ಲೇ ಇಲ್ಲ ಬೇಟಿ?”
“ನನ್ಹೆಸ್ರು ಸೀಮಾ”
ಅವಳನ್ನೇ ಆಳವಾಗಿ ನೋಡುತ್ತಾ ಫರೀದಳನ್ನುದ್ದೇಶಿಸಿ ಪ್ರಶ್ನಿಸಿದ.
“ಎಷ್ಟು ವಯಸ್ಸಿರಬಹುದು ಇವಳಿಗೆ?”
“ಐದು ವರ್‍ಷ” ಪಟ್ಟೆಂದು ಉತ್ತರಿಸಿದಳು ಸೀಮಾ. ಅವನಿಗೆ ಬಿಗುವಿನಲ್ಲೂ ಕುತೂಹಲವೆನಿಸಿತು.
“ನಿನಗೆ ಹೇಗೆ ಗೊತ್ತು?”
“ಗೊತ್ತು…. ನೆನ್ನೇನೆ ನನ್ನ ಹ್ಯಾಪಿ ಬರ್ತಡ ಆಯ್ತಲ್ಲ… ಐದು ಕ್ಯಾಂಡಲ್ ಇರಿಸಿದ್ದರು.”
“ಏನು ಮಾಡೋಣ?” ಇಬ್ಬರೂ ಒಟ್ಟಿಗೆ ಪ್ರಶ್ನಿಸಿದರು. ಸೀಮಾ ಫ್ರಾಕ್‌ನ ನೆರಿಗೆಗಳನ್ನು ಚಿಮ್ಮುತ್ತಿದ್ದವಳು ಒಮ್ಮೆಲೆ ಅಳಲಾರಂಭಿಸಿದಳು.
“ನಮ್ಮ ಅಮ್ಮೀ ಹತ್ರ ಹೋಗ್ತಿನಿ…. ಕಳ್ಸಿ ಮತ್ತೆ…. ಅಮ್ಮಿ ಹತ್ರ ಕಳ್ಸಿ…”
ಅವನಿಗೆ ಈ ಪೂರ್ತ ಹಗರಣ ಇನ್ನಷ್ಟು ತಲೆನೋವಿಗೆ ಕಾರಣ ಎನಿಸಿತು. ಬೇಸರದಿಂದ ಕೇಳಿದ:
“ನಿಮ್ಮ ಅಮ್ಮೀ ಅಡ್ರಸ್ ಹೇಳು.”
“ಇಷ್ಟು ಮಾತಾಡ್ತಿಯಾ… ಅಡ್ರಸ್ ಗೊತ್ತಿಲ್ವಾ?”
“ಇಲ್ಲಾ…. ಬಾಂಬೇಲಿ ಇದ್ವಿ,… ಅಮ್ಮಿ ಎಲ್ಲಾ ಸಾಮಾನು ಕಟ್ಕೊಂಡು ಅಹಮದಾಬಾದಿಗೆ ಹೋದ್ರು.. ನನ್ನನ್ನ ಇಲ್ಲಿಗೆ ಕಳ್ಸಿದ್ರು…”
ಜುನೇದ್ ವ್ಯಗ್ರನಾದ ಥೂ! ನಿಶಾತ್… ನಮಗೆಲ್ಲಾ ಮೋಸ ಮಾಡಿದ್ದು ಸಾಲದೆ ಮಗಳಿಗೂ ಮೋಸ ಮಾಡಿದೆಯಾ?
ಇನ್ನೇನೂ ದಾರಿ ಕಾಣದ ಫರೀದಳಿಗೆ ಹೇಳಿದ “ಫರೀದ! ನಿನ್ಜೊತೇಲೇ ಇಟ್ಕೊ ಇವಳ್ನ, ಯಾರಾದ್ರೂ ಕೇಳಿದ್ರೆ…. ನಿನ್ನಣ್ಣಂದೋ…. ಅಕ್ಕಂದೋ ಯಾರ್‍ದೋ ಮಗು ಅನ್ನು…”
“ಅವರೆಲ್ಲಾ ಮದುವೆಗೆ ಬಂದಿದಾರಲ್ರಿ!”
“ಹಾಗಾದ್ರೆ …. ನಿನ್ ಫ್ರೆಂಡ್ ದೂ ಅನ್ನು… ಅಂತೂ ಜೊತೇಲಿಟ್ಕೋ. ಈ ಮದುವೆಯೊಂದು ಮುಗಿದು ಊರಿಗೆ ಗಂಡು ಹೆಣ್ಣನ್ನ ಕರ್‍ಕೊಂಡೋದ ಮೇಲೆ ನಾನು ನಿಧಾನಕ್ಕೆ ಅಬ್ಬಾ ಜೊತೆ ಮಾತಾಡ್ತೀನಿ…”
“ರೀ! ಅದೊಂದ್ ಮಾಡ್ಬೇಡಿ.”
“ಮತ್ತೇನ್ಮಾಡ್ಲಿ?”
ಈ ಸಮಸ್ಯೆ ಅವರಿಬ್ಬರನ್ನೂ ಕಾಡಿಸಿತು. ಜುನೇದ್ ಅವರಿಬ್ಬರನ್ನೂ ಬೀಳ್ಕೊಟ್ಟು ಶಾಮಿಯಾನ ಬಳಿ ಬಂದಾಗ ನಿಕಾಹ್ ಮುಗಿದಿತ್ತು. ಎಲ್ಲರೂ ಪರಸ್ಪರ ಆಲಂಗಿಸಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದರು. ಜುನೇದ್‌ಗೆ ಆ ವಾತಾವರಣವೇ ವಿಚಿತ್ರವಾಗಿ ಕಂಡಿತು. ಯಾರು ಏನು ಮಾಡುತ್ತಿದ್ದಾರೆ ಎಂದು ತಿಳಿಯುವುದೆ ಅವನಿಗೆ ಕಷ್ಟವಾಗಿತ್ತು. ಬರೀ ನೋಡುತ್ತಿದ್ದನಷ್ಟೇ. ಅರಿವನ್ನು ಕಳೆದುಕೊಂಡಿದ್ದ. ಅಷ್ಟರಲ್ಲೇ ಗಂಡು ಷಹೀದ್ ಅವನ ಬಳಿ ಸಾರಿದ್ದ.
“ಜುನೇದ್” ಎಂದಾಗ ಅವನ ಗಂಟಲು ಕಟ್ಟಿತ್ತು. ಜುನೇದ್ ಅವನನ್ನು ಬಿಗಿದಪ್ಪಿ ಆತ್ಮೀಯತೆಯಿಂದ ಆಲಂಗಿಸಿದ. “ಮುಬಾರಕ್ ಹೋ” ಎಂದು ಶುಭಾಶಯಗಳನ್ನು ನುಡಿದ. ಆದರೆ ಅಂತರ್ಗತವಾಗಿ ಅದರಲ್ಲಿ ಪ್ರವಹಿಸುತ್ತಿದ್ದ ಸಂದೇಶವೇ ಬೇರೆಯಾಗಿತ್ತು. ‘ಅಹ್! ಷಹೀದ್ ಎಲ್ಲವೂ ಸರಿಯಾಗಿರುತ್ತಿದ್ದರೆ…. ನೀನಿಂದು ನನ್ನ ಭಾವನಾಗುತ್ತಿದ್ದೆ’. ಷಹೀದ್‌ನ ಕಡೆಯಿಂದ “ಜುನೇದ್! ನನಗೆ ಬದುಕಿನಲ್ಲಿ ಎಂಥ ಆಘಾತವಾಯಿತು. ನಿಶಾತ್ ನನಗಿಂತ ದುಃಖ ಹೇಗೆ ಕೊಟ್ಟಳು….. ನನ್ನ ತಪ್ಪೇನಿದೆ?” ಇಬ್ಬರಲ್ಲೂ ದುಃಖದ ಕಟ್ಟೆಯೊಡೆಯಿತು. ಅಷ್ಟರಲ್ಲೇ ಷಹೀದ್‌ನನ್ನು ಇನ್ನೊಬ್ಬರು ಕರೆದುಕೊಂಡರು. ಜುನೇದ್ ಕರವಸ್ತ್ರವನ್ನು ಕಣ್ಣಿಗೆ ಹಚ್ಚಿ ಹಿಂದೆ ಸರಿದ.
ಆದರೆ ಅವನ ನೆಮ್ಮದಿ ಕದಡಿಹೋಗಿತ್ತು. ಆ ಮದುವೆಯ ಸಡಗರ ಅವನಿಗೆ ಅಸಹನೀಯವಾಗಿತ್ತು. ಎಲ್ಲವೂ ಸರಿಯಾಗಿರುತ್ತಿದ್ದರೆ…. ರೆ….. ಅವನಿಂದು ಅತ್ಯಂತ ಸುಖಿಯಾಗಿರುತ್ತಿದ್ದ. ಅವನ ಇಡೀ ಕುಟುಂಬದ ಅತ್ಯಂತ ದೊಡ್ಡ ದುರಂತವನ್ನು ಅವನು ತಪ್ಪಿಸಬಹುದಿತ್ತು. ಶಬ್ದಗಳು…. ದೃಶ್ಯ…. ತಾಕಲಾಟಗಳು ಮತ್ತೆ ಮರುಕಳಿಸಿದವು.
ಸಯ್ಯದ್ ಅಹಮದ್ ಎಂಥ ಹೆಸರು ತನ್ನ ತಂದೆಯದು! ವ್ಯಕ್ತಿತ್ವವೂ ಅಂತಹುದೇ ವಿಶಾಲವಾದ ಅರಳಿಮರದಂತಹುದು. ಆಪ್ತರಲ್ಲದೆ ದೂರದ ಸಂಬಂಧಿಕರಿಗೂ ಆಶ್ರಯ ದಾತರು. ತಲೆಯತ್ತರಕ್ಕೆ ಬೆಳೆದು ನಿಂತಿದ್ದ ಒಂಭತ್ತು ಗಂಡು ಮಕ್ಕಳ ತಂದೆಯಷ್ಟೇ ಅಲ್ಲ…. ಸ್ನೇಹಿತ ಕೂಡ…. ವ್ಯವಹಾರದಲ್ಲಾಗಲೀ ಅಂಥ ದೊಡ್ಡ ಕುಟುಂಬದ ಹೊಣೆಗಾರಿಕೆಯಲ್ಲಾಗಲೀ ಎಂದೂ ಸೋತವರಲ್ಲ. ಆದರೆ ಸೋಲು ಬಂದದ್ದು ಯಾವ ರೂಪದಲ್ಲಿ?
ಒಂಭತ್ತು ಗಂಡು ಮಕ್ಕಳ ನಂತರದ ಕೊನೆಯ ಮುದ್ದಿನ ಮಗಳು ನಿಶಾತ್….
“ಜುನೇದ್… ಯಾಕೆ ಇಲ್ಲಿ ನಿಂತ್ಕೊಂಡಿದೀಯ…. ಆ ಚಿಕ್ಕ ಶಾಮಿಯಾನದ ಕಡೆ ಹೋಗು. ಅಲ್ಲಿ ವಜಿಟೆರಿಯನ್ ಊಟ ಇದೆ…. ನಮ್ ಕಡೆ ಪಟೇಲರನ್ನ ಕರಕೊಂಡೋಗಿ ನೀನು ನಿಂತು ಊಟ ಹಾಕಿಸು….”
ಎಲ್ಲರಿಗಿಂತ ಹಿರಿಯವನಾದ ಇಕ್ಬಾಲ್ ನುಡಿಯುತ್ತಿದ್ದ. ಅವನ ಹಿಂದೆಯೆ ಬಂದ ಅವನ ಮಗ ಶಬೀರ್ …..
“ಚಾಚ… ನಿಮ್ಮನ್ನ ಫರೀದ ಚಾಚಿ ಹುಡುಕ್ತಿದ್ರು” ಜುನೇದ್ ಏನೂ ಮಾತನಾಡಲಿಲ್ಲ. ಆ ಹುಡುಗನ ಬೆನ್ನನ್ನೇ ನೋಡುತ್ತಿದ್ದ. ಏನು ಬೆಳೆದುಬಿಟ್ಟಿದ್ದಾನೆ ಇವ! ಉದ್ದುದ್ದ! …. ಆದರೆ ಸ್ವಲ್ಪ ತೆಳು… ಒಳ್ಳೆ ಹುಡುಗ ಮಾತ್ರ …. ಹೇಗೆ ಹೇಳೋದು! ನಿಶಾತ್‌ಳನ್ನೂ ತಾನು ಹಾಗೆಯೇ ತಿಳಿದಿದ್ದು, ಒಳ್ಳೆ ಹುಡುಗಿ! ಬಾಳ ಒಳ್ಳೇವಳು… ಯಾವ ಅರ್ಥದಲ್ಲಿ?
ಆಲಸ್ಯದಿಂದ ಹೊರಳಾಡುತ್ತಾ ಬೆಳಗಿನ ಸೂರ್ಯನ ಪರಿವೆಯಿಲ್ಲದೆ ಮಲಗಿದ್ದಾಗ ಯಾರಾದರೂ ತನ್ನ ಕಾಲುಗಳ ಮೇಲೆ ಕುಣಿಯುತ್ತಿದ್ದಾರೆಂದರೆ ಅದು ನಿಶಾತ್. ಎಂದು ಅವನಿಗೆ ನೋಡದೆಯೇ ಅರ್ಥವಾಗುತ್ತಿತ್ತು. ಅವನು ಅವಳನ್ನೇ ನೋಡುತ್ತಿದ್ದು ಅವಳ ಹೊರಿಸಿದನೆಂದರೆ ದೊಪ್ಪೆಂದು ಅವನ ಮೇಲೆ ಇನ್ನೂ ಹೇಳಬೇಕೆಂದರೆ ನೆಲದ ಮೇಲೆ ಬಿದ್ದಿರುತ್ತಿದ್ದಳು. ಆಮೇಲೆ ಮುನಿಸು… ನಂತರ ರಾಜಿ… ಕೊನೆಗೆ ಟೀ… ತಿಂಡಿ…. ಊಟ ಪ್ರತಿಯೊಂದು ಜೊತೆ ಜೊತೆಯಲ್ಲಿ.
ಈ ವ್ಯವಸ್ಥೆಗೆ ಕೊನೆಯಾದದ್ದು ಮಾತ್ರ ಷಹೀದ್‌ನ ತಾಯಿ…. ತನ್ನ ಕೊನೆಯ ಸೋದರತ್ತೆ ವಿಧವೆಯಾಗಿ ತಂದೆಯ ಆಶ್ರಯಕ್ಕೆ ಬಂದಾಗ. ಮನೆ ದೊಡ್ಡದಾದರೂ ಅಷ್ಟೇ ಸಂಖ್ಯೆಯ ನೆಂಟರಿಷ್ಟರು ಮನೆಯಲ್ಲಿರುತ್ತಿದ್ದುದರಿಂದ ಷಹೀದ್ ಅವನ ಕೋಣೆಯ ಪಾಲುದಾರನಾದ. ನಿಶಾತ್‌ಳಿಗೂ ಅವನಿಗೂ ತೊಟ್ಟಿಲಿನಿಂದಲೇ ನಿಶ್ಚಿತಾರ್ಥವಾಗಿದ್ದರಿಂದ, ಅವಳು ಅವನೆದುರು ಬರುವಂತಿರಲಿಲ್ಲ. ಹೀಗಾಗಿ… ತನಗೆ ಷಹೀದ್ ಹತ್ತಿರವಾದ. ನಿಶಾತ್ ಸ್ವಲ್ಪ ಸ್ವಲ್ಪ ದೂರ ಸರಿದಳು ಮತ್ತು ನಿಶಾತ್ ಕೂಡ ದೊಡ್ಡವಳಾದಳಲ್ಲ. ಮೊದಲಿನ ಹುಡುಗಾಟವೇ ಈಗ ಹೇಗೆ ಮುಂದುವರಿಯಲು ಸಾಧ್ಯ?
“ಪಪ್ಪ……ಪಪ್ಪ…”
ಮಗ ಅಲುಗಿಸಿದಾಗಲೆ ಅವನು ಇಹಲೋಕಕ್ಕೆ ಬಂದದ್ದು.
“ಪಪ್ಪ… ಸೀಮಾ ಅಳ್ತಿದಾಳೆ..”
ಅವನು ನೋಡಿದ. ಅವಳು… ಕಣ್ಣುಗಳ ಮೇಲೆ ಕೈಯನ್ನು ಹೊಸಕುತ್ತಾ, ಒಳಗಡೆಯೇ ಬಿಕ್ಕುತ್ತಿದ್ದಳು.
“ಚಾಂದ್ ಮಾಮ… ನಾನು ಅಮ್ಮೀ ಹತ್ರ ಹೋಗ್ಬೇಕು…”
ಥೇಟ್ ನಿಶಾತ್‌ಳ ಹಾಗೆಯೇ……. ಅವಳೂ ಕೂಡ ಹೀಗೆಯ ಬಿಕ್ಕುತ್ತಿದ್ದುದು.
ಷಹೀದ್‌ಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿತು. ಅದಕ್ಕೆ ತನ್ನ ಅಬ್ಬ ನಡೆಸಿದ್ದ ಪ್ರಯತ್ನ ಸಾಮಾನ್ಯವಾಗಿರಲಿಲ್ಲ…. ಆದರೂ ತೃಪ್ತಿ ಅವರಿಗಿತ್ತು. ತನ್ನ ಅಳಿಯನಾಗುವವ ಡಾಕ್ಟರಾಗುತ್ತಾನೆ ಎನ್ನುವ ಖುಷಿ ಅವರಿಗಿತ್ತು. ಹಾಗೆ ನೋಡಿದರೆ… ತಂದೆ ತಾಯಿ ಇಲ್ಲದ ಮಕ್ಕಳ ಬಗ್ಗೆ ಅವರಿಗೆ ಅಪಾರ ಕಾಳಜಿ. ಖುರ್ಷಿದ್ ಚಿಕ್ಕಮ್ಮನ ಗಂಡ ಸತ್ತಾಗ ಅವಳಿಗೆ ಸಾಂತ್ವನ ಹೇಳಿ ಮನೆಯಲ್ಲಿ ಆಶ್ರಯ ನೀಡಿದ್ದೇ ಅಲ್ಲದೆ ಅವರ ಇಬ್ಬರು ಹೆಣ್ಣುಮಕ್ಕಳನ್ನು ಸೊಸೆಯಂದಿರನ್ನಾಗಿಯೂ ಮಾಡಿಕೊಂಡಿದ್ದರು. ಸಫಿಯ ಅತ್ತೆಯ ಮೂವರು ಗಂಡುಮಕ್ಕಳನ್ನು ಓದಿಸಿ ವ್ಯವಹಾರಕ್ಕೆ ಹಚ್ಚಿದ್ದು … ಜೈನಬ್ ಆಪಾಗೆ ಕ್ಯಾನ್ಸರ್ ಆದಾಗಲಂತೂ ಹಣ ನೀರಿನಂತೆ ಖರ್ಚುಮಾಡಿದರಲ್ಲ…. ಅವರೇನೂ ತಮ್ಮ ಆಪ್ತ ಸಂಬಂಧಿಗಳಲ್ಲ. ಆದರೆ ಷಹೀದ್‌ನ ಮಾತೇ ಬೇರೆ. ಅವನಿಗೆ ಕೊಡುತ್ತಿರುವುದು ತಮ್ಮ ಕರುಳ ಕುಡಿಯಲ್ಲವೇ….
ಸೀಮಾ ಅಳು ಈಗ ಜೋರಾಗಿತ್ತು. ಅವಳನ್ನ ತೊಡೆಯ ಮೇಲೆ ಕೂರಿಸಿಕೊಂಡು ಕಣ್ಣು ಮೂಗು ಒರೆಸಿದ.
“ಚಾಂದ್ ಮಾಮ ….. ಅಮ್ಮೀ ಹತ್ರ ಕಳಿಸ್ತೀರ?”
“ಹೂಂ ….ಕಳಿಸೋಣ ….. ಆದ್ರೆ ನಾನು ಮಾಮ ಅಂತ ನಿನಗ್ಯಾರು ಹೇಳಿದ್ರು?”
“ಅಮ್ಮಿ ಹೇಳಿದ್ರು. ಅವ್ರ ಹತ್ರ ಆಲ್ಬಮ್ ಇದ್ಯಲ್ಲ, ಅದ ನೋಡಿ ಅಳ್ತಾ ಇರ್‍ತಾರೆ. ಆಮೇಲೆ ನಂಗೆ ಎಲ್ಲರನ್ನ ತೋರ್‍ಸಿ ತೋರ್‍ಸಿ ಏನ್ ಏನ್ ಕರೀ ಬೇಕೂಂತ ಹೇಳಿಕೊಡ್ತಿದ್ರು.”
ಅವನ ಮನಸ್ಸು ಕದಡಿಹೋಯಿತು. ಛೇ! ಈ ಮಗುವಿನ ಹತ್ರ ಮಾತಾಡ್ತಿದ್ರೆ ಜೀವಸಹಿತ ಬೆಂಕೀಲಿ ಬಿದ್ದ ಹಾಗೆ ಆಗುತ್ತೆ…. ಇಷ್ಟ್‍ದಿನದ ಸಂಕಟ ಸಾಕಾಗಿರ್‍ಲಿಲ್ಲ ಅಂತ ಈಗ ಬೇರೆ ಹೊಟ್ಟೆ ಉರಿಸೋಕೆ ಬಂದಿದಾಳೆ. ಅವಳನ್ನೆತ್ತಿಕೊಂಡು ದಾಪುಗಾಲು ಹಾಕುತ್ತಾ, ಹೆಂಗಸರಿದ್ದೆಡೆ ಬಂದ. ಫರೀದ ಕಣ್ಣರಳಿಸಿ ಅವನನ್ನು ನೋಡಿದಳು. ಅವನು ಬಳಿಸಾರಿ ಸೀಮಾಳನ್ನು ಇಳಿಸಿ ಹೆಂಡತಿಯೊಡನೆ ಮೆಲು ದನಿಯಲ್ಲಿ ನುಡಿದ
“ಇವಳ್ನ ಇಟ್ಕೊ ಅಂದ್ರೆ … ಯಾಕೆ ಎಲ್ಲರೆದುರು ಮೆರೆಸ್ತಿದೀಯ….”
“ಅಯ್ಯೋ! ಪಾಪ! ನಮ್ಮ ನವೀದ್ ಜೊತೆಯವಳಲ್ಲವೇ…. ಅವ್ನು ನನ್ನ ಬಿಟ್ಟು ಒಂದ್‌ಗಳಿಗೇನಾದ್ರು ಇದ್ದಾನಾ? ಪಾಪ! ಈ ಹುಡ್ಗಿ ಗ್ರಹಚಾರ…. ತಾಯಿನ ಬಿಟ್ ಬಂದಿದೆ. ಅದಕ್ಯಾಕೆ ಅಷ್ಟ್ ಕೋಪ ಮಾಡ್ಕೊತೀರ….. ಮಾವ ಅಂದ್ರೆ ರಾಕ್ಷಸನ್ಗೂ ಪ್ರೀತಿ ಬರುತ್ತಂತೆ…. ನೀವಂತೂ ನಿಜವಾಗಿಯೂ ಮಾಮ… ಅಂತದ್ರಲ್ಲಿ…. ಎಂದು ನಗೆ ಮಾತಿನಲ್ಲೇ ಅವನಿಗೆ ರಾಕ್ಷಸ ಎಂಬ ಬಿರುದನ್ನೂ ದಯಪಾಲಿಸಿ ಬಿಟ್ಟಳು.”
ಅವನು ಸ್ವಲ್ಪ ಮೆತ್ತಗಾಗಿ, “ಈಗ…. ಹಿಂಗೇ ಅಳ್ತಾ ಇದ್ರೆ… ಇವಳ್ನೇನ್ ಮಾಡೋಕಾಗುತ್ತೆ?” ಎಂದ. “ಏನ್ ಮಾಡೋಕಾಗುತ್ತೆ… ಅವಳ್ನ ಹೆಚ್ಚಿ ಹೋಳು ಮಾಡಿ ಉಪ್ಪಿನ್‌ಕಾಯಂತೂ ಹಾಕೋಕಾಗಲ್ಲ. ಅವಳ ಸ್ವಲ್ಪ ಎಳ್ಕೊಂಡು ತಿರುಗಾಡಿ…. ಐಸ್‌ಕ್ರೀಮ್ ಕೊಡ್ಸಿ….” ಎಂದ ಫರೀದ ಅವನು ‘ಯಾವುದಕ್ಕೂ ನಾಲಾಯಕ್ಕು’ ಎಂಬ ಸರ್ಟಿಫಿಕೇಟ್ ಬರುವಂತೆ ಮಾತನ್ನೂ ಆಡಿದಳು.
ಅವನು ಅವಳನ್ನೆತ್ತಿಕೊಂಡು, ನವೀದ್‌ನ ಕೈ ಹಿಡಿದುಕೊಂಡು ಹೊರ ಬಂದ. ಅಷ್ಟರಲ್ಲೇ ಇಕ್ಬಾಲ್ ಎದುರಿಗೆ ಬಂದ “ಒಂದು ಕೆಲ್ಸ ಹೇಳಿದ್ರೆ ಮಾಡೋಲ್ವಲ್ಲ. ಜುನೇದ್… ನೋಡು… ಪಾಪಣ್ಣನೋರು ಊಟ ಮಾಡದೇನೆ ಹೊರಟಿದ್ದರು. ನಾನು ಕೂರಿಸಿ ಬಂದಿದೀನಿ ನೀನು ಇಲ್ಲಿ ಮಕ್ಕಳ ಆಡಿಸ್ತ ನಿಂತಿದೀಯ…….” ಎನ್ನುತ್ತಿದ್ದಂತೆಯೇ ಸೀಮಾ “ಇಕ್ಬಾಲ್ ಮಾಮ …. ನಾನು ಬನಿ …… ನಿಮ್ಹತ್ರ” ಎಂದು ಎರಡು ಕೈಗಳನ್ನು ಚಾಚಿಬಿಟ್ಟಳು.
“ಓಹೋ! ಚಂದದ ಮಗಳು… ಪರಿಯಂತಿದಾಳ (ಗಂಧರ್ವ ಕನ್ನೆಯಂತೆ) …..ಬಾ…ಬಾ…” ಎಂದು ಇಕ್ಬಾಲ್ ಕೂಡ ಎತ್ಕೊಳ್ಳಲು ಅಣಿಯಾಗಿಯೇ ಬಿಟ್ಟ. ಜುನೇದ್‌ನ ಎದೆ ಬಡಿತ ತೀವ್ರವಾಗಿ ತಿಂದಿದ್ದೆಲ್ಲಾ ಬಾಯಿಗೆ ಬಂದಂತಾಯಿತು.
“ಇಲ್ಲ ದಾದಾಭಾಯಿ…. ಇವಳು ತುಂಬಾ ಅಳ್ತಿದಾಳೆ….. ಇಲ್ಲೇ ಐಸ್‌ಕ್ರೀಮ್ ಕೊಡಿಸ್ತೀನಿ…” ಎಂದು ನವೀದ್‌ನನ್ನೂ ಅಲ್ಲೇ ಬಿಟ್ಟು ಓಡಿದ. ನವೀದ್ ತಂದೆ ಬಿಟ್ಟು ಹೋದನಂದು ‘ಹೋ’ ಎಂದು ಅರಚತೊಡಗಿದ. ಇಕ್ಬಾಲ್ ಅವನನ್ನೆತ್ತಿಕೊಂಡು ಸಮಾಧಾನ ಪಡಿಸುತ್ತ ಒಳಹೋದ.
ಜುನೇದ್, ಐಸ್‌ಕ್ರೀಮ್ ಕೊಡಿಸಿ ಸೀಮಾಳನ್ನು ಫರೀದಳಿಗೊಪ್ಪಿಸುತ್ತಾ ಹೇಳಿದ, “ನೋಡು … ಈವತ್ತು ನೀನು ನವೀದನನ್ನೂ ನೋಡಬೇಡ…. ರೀಹಾನ್‌ನನ್ನೂ ಎತ್ಕೊಬೇಡ. ಅವರಿಬ್ಬರನ್ನು, ನಿನ್ನಕ್ಕ, ನಿಮ್ಮಮ್ಮ ಯಾರ್ ಬಂದಿದಾರೋ …. ಅವರಿಗೆ ಒಪ್ಪಿಸಿಬಿಡು. ಆದ್ರೆ…. ನೀನ್ ಮಾತ್ರ ಇವಳನ್ನು ಒಂದೆ ಒಂದ್ ಗಳಿಗೆ ಬಿಡ್ಬೇಡ. ಯಾರಾದ್ರೂ ಒಂದ್ ಮಾತಾಡಿದ್ರೆ ಸಾಕು…. ಗಿಳಿ ಹಾಗೆ ಇವಳಮ್ಮನ ಬಗ್ಗೆ ಪಾಠ ಒಪ್ಪಿಸಿಬಿಡ್ತಾಳೆ… ಮತ್ತೆ ಆಗೋ ಆನಾಹುತ ನಿಂಗೆ ಗೊತ್ತೇ ಇದೆ…. ಇವಳ ನೋಡ್ಕೋ…. ಊರಿಗೆ ಹೋದ ತಕ್ಷಣ ಏನಾದರೂ ವ್ಯವಸ್ಥೆ ಮಾಡ್ತೀನಿ…”
“ಏನ್ ವ್ಯವಸ್ಥೆ ಮಾಡೋಕಾಗುತ್ತೆ?”
“ಏನಾದ್ರೂ ಒಂದು…ಯಾವ್ದಾದ್ರೂ ಬೋರ್ಡಿಂಗ್…”,
“ರೀ… ನನಗಂತೂ ಇಬ್ರೂ ಗಂಡ್ ಮಕ್ಳೆ….. ಇವ್ಳೇನ್ ಬೇರೆ ಯವಳಲ್ಲ… ಆ ಮನೇಲಿ ದಿನಕ್ಕೆ ನೂರ್ ಜನ ಉಣ್ತಾರೆ… ಇದೊಂದ್ ಮಗು ಭಾರಾನಾ?…. ನನ್ಜೊತೆ ಇರ್‍ಲಿ ಬಿಡಿ…”
“ಆಹಹ… ಬಲೆ ಚೆನ್ನಾಗಿ ಮಾತಾಡ್ತೀಯಾ…. ಮನೆಲಿಟ್ಕೊತಾಳಂತೆ… ಇವ್ಳು ಹೇಳ್ಲಿ ಯಾರ ಮಗಳೂಂತ, ನಿನ್ನನ್ನು…. ನನ್ನನ್ನು ಒಟ್ಟಿಗೆ ಶೂಲಕ್ಕೇರಿಸ್ತಾರೆ… ಗೊತ್ತಾ? ಅದೆಲ್ಲಾ ತಲೆ ಹರಟೆ ಬೇಡ… ಊರಿಗೋಗೋವರ್‍ಗೆ ನೀನ್….. ನೋಡ್ಕೋ….”
ಜುನೇದ್‌ಗೆ ಈಗ ಚಿಕ್ಕಪುಟ್ಟ ಮಾತುಗಳಿಗೆಲ್ಲಾ ಸ್ಮರಣೆ ತಪ್ಪಲಾರಂಭಿಸಿತು. ಹಾಗೆ ನೋಡಿದರೆ ಆ ಮನೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದನವ. ಎಲ್ಲಾ ತರದ, ಎಲ್ಲಾ ವಯಸ್ಸಿನ, ಎಲ್ಲಾ ವೃತ್ತಿಯ ಜನರು ಅವನನ್ನು ಯಾವ ಯಾವುದೋ ವ್ಯವಹಾರಗಳಿಗೆ ಯಾವ ವೇಳೆಗಾದರೂ ಹುಡುಕಿಕೊಂಡು ಬರುತ್ತಿದ್ದರು. ಬಹಳ ತಾಳ್ಮೆ ಯಿಂದ ವರ್ತಿಸುತ್ತಿದ್ದ. ಅವನಿಗಾಗಿ, ಅವನ ಭೇಟಿಗೆ ಬರುವವರಿಗಾಗಿ ಮುಂದಿನ ಕೋಣೆಯನ್ನು ಮೀಸಲಾಗಿಡಲಾಗಿತ್ತು. ಅವನ ಗೆಳೆಯರ ಹಿಂಡೇನೂ ಕಡಿಮೆ ಇರಲಿಲ್ಲ……. ಆದರೆ…. ಅವರೆಂದೂ ಆ ಕೋಣೆಯನ್ನು ಬಿಟ್ಟು ಮನೆಯ ಇತರ ಬಾಗಿಲಿನತ್ತ ದೃಷ್ಟಿಯನ್ನೂ ಹಾಯಿಸಿರಲಿಲ್ಲ. ಒಳಗೆ ಕಾಲಿಟ್ಟವನೇ ಜಯಶೀಲ!
ನವೀದ್ ಬಾದಾಮಿ, ಉತ್ತು, ಕಲ್ಲು ಸಕ್ಕರೆ, ಅಕ್ರೋಟ್‌ನ ಪೊಟ್ಟನವನ್ನು ಹಿಡಿದು ಓಡಿಬಂದ.
“ಅಬ್ಬಾ …. ಬಾದಾಮಿ ಒಡೆದು ಕೊಡಿ….”
ನಿಶಾತ್ ಕೂಡ ಹಾಗೆಯೇ ಚಿಕ್ಕ ಪುಟ್ಟದಕ್ಕೆಲ್ಲ ಓಡಿ ಬರುತ್ತಿದ್ದುದು. ‘ಭಯ್ಯ …. ಸ್ವಲ್ಪ …. ಕಮಿಸ್ಟ್ರಿ ಹೇಳಿಕೊಡಿ…. ಭಯ್ಯ…. ಈ ಲೆಕ್ಕ ಸ್ವಲ್ಪ ನೋಡಿ… ಭಯ್ಯ …. ಈ ಫಿಸಿಕ್ಸ್….” ಕೊನೆಗೆ ಅನಿವಾರ್ಯವಾಗಿ ಅವನು ಹೇಳಿದ “ನಿಶಾತ್ …. ನಿನಗೆ ಟ್ಯೂಷನ್… ಕೂಡಿಸಿದರೆ ಹೇಗೆ?”
ಟ್ಯೂಷನ್ ಕೊಡಿಸಲೇಬೇಕಿತ್ತು. ಏಕೆಂದರೆ ಹೈಸ್ಕೂಲನ್ನು ಕಾಣದ ಅವನ ಮನೆಯ ಹೆಣ್ಣು ಮಕ್ಕಳಲ್ಲಿ ಹಟಮಾಡಿ ನಿಶಾತ್‌ಳನ್ನು ಅವನು ಕಾಲೇಜಿಗೆ ಕಳಿಸಿದ್ದ. “ಡಾಕ್ಟರ ಹೆಂಡತಿಯಾಗುವವಳಲ್ಲವೇ… ಅವಳು ಓದಬೇಕು ಅಬ್ಬಾ …… ನೀವು ಅವಳಿಗೆ ತಡೆಯೊಡ್ಡಬೇಡಿ…. ಪಿಯುಸೀಲಿ … ಒಳ್ಳೆ ಮಾರ್ಕ್ಸ್ ತೆಗೆದರೆ, ಸ್ವಲ್ಪ ಹಣ ಹೋದರೂ ಚಿಂತೆಯಿಲ್ಲ. ಇವಳನ್ನೂ ಮಡಿಕಲ್ ಕಾಲೇಜಿಗೆ ಸೇರಿಸಿಬಿಡೋಣ, ಗಂಡ-ಹೆಂಡತಿ ಇಬ್ಬರೂ ಡಾಕ್ಟರಾಗುತ್ತಾರೆ…” ತನ್ನ ಈ ಒತ್ತಾಯದ ಸಲಹೆಯನ್ನು ಅರಮನಸ್ಸಿನಿಂದ ತಂದೆ ಅಂಗೀಕರಿಸಿದ್ದರು. ಈಗ ಅವಳು ಒಳ್ಳೆ ನಂಬರಿನಲ್ಲಿ ಪಾಸಾಗುವಂತೆ ಮಾಡ ಬೇಕಾದುದು ತನ್ನ ಜವಾಬ್ದಾರಿ….
“ಏನೇ ಆದರೂ ಟ್ಯೂಷನ್‌ಗೇಂತ ಮನ ಮನೆ ಅಲೆಸೋಲ್ಲ” ವೆಂಬುದು ತಂದೆಯ ನಿಲುವು .. ಕೂನಗೆ…. ಆದ ವ್ಯವಸ್ಥೆಯಂದರೆ.. ಜಯಶೀಲನೇ ಮನೆಗೆ ಬಂದು ಓದಿಸುವುದೆಂದು … ಅವನು ಮನೆ ಪಾಠ ಆರಂಭಿಸಿದ. ಮನೆಯಲ್ಲಿ ಗೊಂದಲವುಂಟಾಯಿತು. ತಂದೆ, ತಾಯಿ, ಎಂಟು ಮಂದಿ ಅಣ್ಣಂದಿರು ಒಟ್ಟಿಗೆ ಸೇರಿ ಅವನನ್ನು ಕರೆಸಿದರು.
“ಛೇ! ಇದೆಂಥ ತಲೆನೋವು…. ಇದೇನು ಮನೇನ ಇಲ್ಲ…..?”
“ನಿನಗಂತೂ ತಲೆಕೆಟ್ಟು ಹೋಗಿದೆ; ನಾವಂತೂ ಇದಕ್ಕೊಪ್ಪಲ್ಲ…”
“ಈ ಮನೇಲೇನು ಮೀಸೆ ಹೊತ್ತ ಗಂಡಸರಿದ್ದಾರೆಯೇ?”
“ಅವ್ನು ಬಂದು ಓದಿಸ್ತಾನೋ… ಲಲ್ಲೆ ಹೊಡೀತಾ ಕೂತಿರ್‍ತಾನೋ?”
“ಛೇ! ಛೇ! ನಿನ್ನ ಆತ್ಮ ಯಾಕೆ ಇಷ್ಟು ಸತ್ತು ಹೋಗಿದೆ…. ಈ ಪ್ರಪಂಚದ ಅಧಿಕಾರ, ಅಂತಸ್ತು ನೋಡ್ಕೊಂಡು ‘ಆಖಿರತ್’ನ ಮರೆತು ಬಿಡ್ತೀಯ?”
“ನಾಳೆ ದೇವಿಗೆ ಏನ್ ಮುಖ ತೋರಿಸ್ತಿಯ?” ಎಲ್ಲರಿಗೂ ಸರಿಯಾದ ಉತ್ತರ, ವಿವರಣೆ ಕೊಟ್ಟು ಸಮಾಧಾನಪಡಿಸಿದ್ದ, ಕೊನೆಯಲ್ಲಿ ಕಂಬನಿದುಂಬಿ ಅಮ್ಮಾ ಹೇಳಿದ್ದಳು, “ಜುನೇದ್…. ನೀನ್ ಮಾಡ್ತಿರೋದು ಅರ್ಥ ಆಗುತ್ತೆ ಮಗನೇ …. ಆದ್ರೆ …. ಒಬ್ಬ ಗಂಡಸು ಮತ್ತು ಹೆಣ್ಣು ಏಕಾಂತದಲ್ಲಿದ್ದಾಗ, ಮೂರನೆಯವನಾಗಿ ಅವರ ಮೈ, ಮನಸ್ಸನ್ನು ಕೆಡಿಸಲು ಶೈತಾನ್ ಇರ್‍ತಾನೆ…? ಅದಕ್ಕೆ, ನಮ್ ಮುಖಕ್ಕೆ ನಾಳೆ ಮಸಿಯಾಗ್ಬಾರ್‍ದು…..”
ಶೈತಾನನು ತನ್ನ ಪ್ರಲೋಭನೆಯನ್ನು ಬೀರಿ, ಅವರಿಬ್ಬರೂ ಆಕರ್ಷಿತರಾಗುವ ಸಾಧ್ಯತೆಯೇ ಇಲ್ಲ…. ಅವಳೋ ನಾಕು ಜನ ತಿರುಗಿ – ತಿರುಗಿ ನೋಡುವಂತಹ ರೂಪವತಿ, ಸುಸಂಸ್ಕೃತ ಮನೆತನದ ಹೆಣ್ಣು, ದೇವರು, ನಮಾಜ್, ಉಪವಾಸ್, ಪ್ರಾರ್ಥನೆ – ಇದರಲ್ಲೆಲ್ಲಾ ನಿರತಳಾಗಿರುವವಳು…. ಎಲ್ಲಕ್ಕಿಂತ ಮಿಗಿಲಾಗಿ ತನ್ನ ತಂಗಿ, ಏನು ಜನ ಇವರು ತಮ್ಮ ಬಸಿರು ಕುಡಿಯನ್ನೆ… ಒಡಹುಟ್ಟಿದವಳನ್ನೇ ನಂಬುವುದಿಲ್ಲವಲ್ಲ… ಅಂ… ನಂಬಿಕೆ ಮುಖ್ಯ… ಮನುಷ್ಯರಲ್ಲಿ ನಂಬಿಕೆ ಇಡಬೇಕು……
ಅವನಾದರೋ…. ಇಂಥ ಹಿನ್ನೆಲೆಯ ಯಾವ ಹೆಣ್ಣು ಮಗಳೂ ಮರುಳಾಗುವಂತಹ ಸುಂದರಾಂಗನೇನಲ್ಲ…. ಆ ಗಡ್ಡದಾರಿ ಟ್ರಿಮ್ಮಾಗಿ ಡ್ರೆಸ್ ಮಾಡ್ತಾನೆ ಎನ್ನುವುದನ್ನು ಬಿಟ್ಟರೆ ವಿಶೇಷವಾದುದೆಂದರೆ ಅವನ ಕಣ್ಣುಗಳು ಮಾತ್ರ. ಆದರೂ ಷಹೀದ್‌ನ ಮಟ್ಟ ಅವನಂತೂ ಮುಟ್ಟಲಸಾಧ್ಯ.
ಇಷ್ಟೆಲ್ಲಾ ನಂಬಿಕೆ ಇದ್ದರೂ ಅವನು ಕೆಲವು ವ್ಯವಸ್ಥೆಗಳನ್ನು ಮಾಡಿದ, ಷಹೀದ್‌ನ ದೊಡ್ಡದಾದ ಅತ್ಯಾಕರ್ಷಕ ಭಾವಚಿತ್ರವನ್ನು ಅವಳ ಟೇಬಲ್ ಮೇಲಿರಿಸಿದ. ಜಯಶೀಲ ಪಾಠಕ್ಕೆ ಬಂದಾಗ ನಿಶಾತ್‌ಳ ಜೊತೆಯಲ್ಲಿ ಫರೀದಳೂ ಆ ಕೊಠಡಿಯಲ್ಲಿರಬೇಕೆಂದು ತಾಕೀತು ಮಾಡಿದ. ಹೊಸದಾಗಿ ಮದುವೆಯಾಗಿದ್ದನವ. ಮಧ್ಯಾಹ್ನದ ಸೊಗಸಾದ ನಿದ್ದೆಯ ಮಾಧುರ್ಯವನ್ನು ಹಾಳು ಮಾಡಿಕೊಂಡು ಫರೀದ ಬಿಟ್ಟುಕೊಟ್ಟ….. ಫರೀದಳನ್ನೂ ಮತ್ತು ನಿಶಾತ್ ಹೈಸ್ಕೂಲಿನಲ್ಲಿ ಸಹಪಾಠಿಗಳಾಗಿದ್ದುದೂ ಅನುಕೂಲವಾಗಿತ್ತು.
ಸುಮಾರು ಆರು ತಿಂಗಳ ಕಾಲ ಅವನು ಪಾಠ ಹೇಳಿದ ಅವಳು ಕಲಿತಳು! ಏನೂ ಆಗಲಿಲ್ಲ …. ಯಾವ ಅನಾಹುತವೂ ಆಗಲಿಲ್ಲ….. ಪರೀಕ್ಷೆಯೂ ಮುಗಿಯಿತು … ರಿಜಲ್ಟ್ ಇನ್ನೂ ಬಂದಿರಲಿಲ್ಲ… ಬೇಸಿಗೆ ರಜೆಯಲ್ಲಿ ಮದುವೆ… ಮದುವೆಗೆ ಸಿದ್ದತೆಗಳು… ಭರದಿಂದ ನಡೆಯಲಾರಂಭಿಸಿದವು …… ಷಹೀದ್ ಇನ್ನೂ ಬಂದಿರಲಿಲ್ಲ.
ಮದುವೆಗೆ ಇನ್ನೂ ಒಂದು ತಿಂಗಳಿತ್ತು. ಆ ದಿನ ಬೆಳಿಗ್ಗೆ ಇನ್ನೂ ಜುನೇದ್ ಎದ್ದಿರಲಿಲ್ಲ. ಆದರೆ …. ಮನೆಯ ಮೂಲೆ ಮೂಲೆ ಅತೀವ ಯಾತನೆಯಿಂದ ಮೌನವಾಗಿ ಮುಲುಗುಟ್ಟತೊಡಗಿತು. ಸಿಟ್ಟು, ನೋವು, ಅವಮಾನ, ಹತಾಶ, ಭಯಗಳು ಇಡೀ ಮನೆಯಲ್ಲಿ ತಾಂಡವವಾಗತೊಡಗಿತು. ಇಡೀ ಮನೆಯೆ ಪೂತ್ಕರಿಸುತಿತ್ತು…. ಜುನೇದ್…… ಬೋಳಿ ಮಗನೇ… ನಂಬಿಕೆ… ಮನುಷ್ಯರ ಮೇಲೆ ನಂಬಿಕೆಯೆ… ಹ್ಹ …. ಹ್ಹಾ … ಬಾ ಈಗ ….. ನೋಡು …….ನಿನ್ನ ನಂಬಿಕೆಗಳು ಅಲುಗಾಡದೆ ದೃಢವಾಗಿ ನಿಲ್ಲುವುವೋ ನೋಡು…. ನೋಡು.. ಇಡೀ… ಮನೆಯೆ ಮಸಣವಾಗಿದೆ… ನಿನ್ನ ಮುಖಕ್ಕೆ ಮಸಿ ಹಚ್ಚಿದೆ… ನೀನು ತೊಳೆದುಕೊಳ್ಳಲಾರೆ… ಆ ಮಸಿ ….ನಿನ್ನ ಇಡೀ ಕುಟುಂಬದವರು… ಅಪ್ಪ…. ಅಮ್ಮ…. ಅಣ್ಣಂದಿರು…. ಎಲ್ಲರನ್ನೂ ವ್ಯಾಪಿಸಿವೆ… ನೀನು ಸತ್ತು ನಿನ್ನ ಮಾಂಸವೆಲ್ಲಾ ಕರಗಿ ಹೋದರೂ ನಿನ್ನ ಮೂಳೆಗಳ ಮೇಲೂ ಅದು ಉಳಿಯುತ್ತದೆ…. ಹೋಗು…. ಹೋಗು…. ನೀಚ!….
ಯಾವುದು ಅಸಾಧ್ಯ ಎಂದು ಅವನು ಬಲಯುತವಾಗಿ ನಂಬಿದ್ದನೋ ಆ ನಂಬಿಕೆ ಬುಡಮೇಲಾಗಿತ್ತು… ಅವನು ತನ್ನ ಪರಿವೆಯಿಲ್ಲದೆ ಕಾಲೇಜಿಗೆ ಓಡಿದ.
“ಜಯಶೀಲ ಎಲ್ಲಿ?”
“ಅವನಿಗೆ ಬೇರೆ ಎಲ್ಲೋ ಕೆಲಸ ಸಿಕ್ಕಿದೆಯಂತ….. ನೆನ್ನೆಯೇ ರಿಲೀವ್ ಆದನಲ್ಲ…..?”
“ಎಲ್ಲಿ…. ಎಲ್ಲಿ ಕೆಲಸ ಸಿಕ್ಕಿದೆ?”
“ಓ! ನಮಗೂ ಹೇಳ್ಲಿಲ್ಲ… ಬೇರೆ ಕಡೆ ಸಿಕ್ಕಿದೆ ಅಂತ ಮಾತ್ರ ಹೇಳಿದ್ದ… ಬಹುಶಃ ಬಾಂಬೇಲಿರಬೇಕು…. ನಮಗೂ ಅವನ ಪೋಸ್ಟಿಂಗ್ ಬಗ್ಗೆ ತಿಳಿಸ್ಲಿಲ್ಲ!…”
ಅವನ ಕಣ್ಣೆದುರು ಕಪ್ಪು ತೆರೆಗಳು ಅಪ್ಪಳಿಸತೊಡಗಿದವು. ಅವನು….. ಆ ಇಡೀ ಮನೆ…. ಅದೇಗೆ…. ಯಾವಾಗ….. ಆ ಉಸಿರು ಕಟ್ಟುವ ವಾತಾವರಣದಿಂದ ಚೇತರಿಸಿಕೊಂಡರು, ಅದೊಂದೂ ಅವನಿಗೆ ತಿಳಿಯದು. ಆದರೆ ತಿಳಿದದ್ದೊಂದೇ ….. ಆ ಸುದ್ದಿ ಕೇಳಿದ ಕೂಡಲೇ ಅವನ ತಂದೆ ತಮ್ಮ ಕೋಣೆ ಯೊಳಗೆ ಹೊಕ್ಕು ಬಾಗಿಲು ಹಾಕಿಕೊಂಡದ್ದು……. ಅಮ್ಮ ಕೂಡ ಕಣ್ಣೀರು ಗರೆಯುತ್ತ ಹೊರಗಡೆಯೇ ಉಳಿದಿದ್ದರು.
ಅಬ್ಬಾಗೆ ಆಗಿರುವ ಆಘಾತ….. ಅವನು ಊಹಿಸಬಲ್ಲವನಾಗಿದ್ದ. ಆ ಮುದ್ದಿನ ಮಗಳು ಅವರ ಜೀವವಾಗಿದ್ದವಳು….. ಬೆಳಕಾಗಿದ್ದವಳು…. ಅವಳಂದು ಇಲ್ಲಿಲ್ಲ…. ಬರೇ ‘ಇಲ್ಲ’ವೆಂದೂ ಅಲ್ಲ…. ಎಂದೆಂದಿಗೂ ಇಲ್ಲ ಮತ್ತು ಹೋಗುವಾಗ ಧಿಕ್ಕರಿಸಿ ಹೋಗಿದ್ದಳು. ನಿಮ್ಮ ಪ್ರೀತಿಗಿಂತ ಅದ್ಭುತವಾದ ಪ್ರೀತಿ ನನಗೆ ದೊರಕಿದೆ ಎಂದು ತ್ಯಜಿಸಿ ಹೋದಳು….. ಮತ್ತು ಅದರೊಂದಿಗೆ ಮಾಗದ ಗಾಯವನ್ನು ನೀಡಿದಳು….. ತಲೆಯತ್ತದಂತಹ ಅಪಮಾನವನ್ನು ಬಳುವಳಿ ನೀಡಿದಳು…. ಅಬ್ಬಾ …. ಅಬ್ಬಾ ನಿಮ್ಮ ಹಿರಿಯರ ಅನುಭವದ ನುಡಿಗಳನ್ನು ನಿರ್ಲಕ್ಷಿಸಿದೆ…… ನನ್ನನ್ನು ಕ್ಷಮಿಸಿ… ಕ್ಷಮಿಸಿ.
ಆದರೆ……. ಇತ್ತ ಅವನ ತಪ್ಪೊಪ್ಪಿಗೆ ಕೇಳಲು ಅಲ್ಲಿ ಸಯ್ಯದ್ ಸಾಹೇಬರಿರಲಿಲ್ಲ. ತಮ್ಮ ಕೋಣೆಯ ಅಗುಳಿಯನ್ನು ತೆರೆಯಲಿಲ್ಲ…… ಇತ್ತ ಅಣ್ಣಂದಿರೆಲ್ಲಾ ಸೇರಿ, ಜನರಲ್ಲಿ ಮಾತು ಹರಡುವ ಮುನ್ನ ಅವಳನ್ನು ಎಲ್ಲಿದ್ದರೂ ಹಿಡಿದು ತಂದು, ಏನೂ ಆಗಿಯೇ ಇಲ್ಲವೆನ್ನುವಂತೆ ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕೆಂಬ ಶತ ಪ್ರಯತ್ನದಲ್ಲಿದ್ದರು. ಜುನೇದ್ ಮಾತ್ರ ತಂದೆಯ ಕೋಣೆಯ ಬಳಿ ನೀರವವಾಗಿ ಕಾದು ನಿಂತಿದ್ದ…. ನಿಮಿಷ, ಗಂಟೆಗಳು, ಉರುಳಿದವು. ಕೋಣೆಯಲ್ಲಿ ಕೋಣೆಯ ಬಾಗಿಲು ಒಡೆಯುವುದೆಂಬ ತೀರ್ಮಾನಕ್ಕೆ ಬಂದಾಗ, ತಂದೆಯ ದನಿ ಕೇಳಿ ಬಂದಿತು.
“ನನಗೇನು ಆಗಿಲ್ಲ… ನೀವ್ಯಾರು ಕಾಟ ಕೊಡಬೇಡಿ… ಹೊರಟೋಗಿ… ನಾನೇ ಬೇಕಾದಾಗ ಬಾಗಿಲು ತೆಗೀತೀನಿ….”
ಎಲ್ಲರೂ ಹಿಂದೆ ಸರಿದರು. ಆರು ತಿಂಗಳವರೆಗೆ ಆ ಕೋಣೆಯ ಬಾಗಿಲು ತೆರೆದಿದ್ದನ್ನು ಯಾರೂ ನೋಡಲಿಲ್ಲ; ಆದರೆ ಕೋಣೆಯ ಒಳಗಿನ ನಡಿಗೆಯ ಸದ್ದು, ಕೆಮ್ಮಿನ ಸದ್ದು, ಉಸಿರಾಟದ ಸದ್ದು….. ಅವರ ಜೀವಂತ ಇರುವಿಕೆಯ ಸಾಕ್ಷಗಳಾದವು. ರಾತ್ರೆಯ ಯಾವ ವೇಳೆಯಲ್ಲಿ ಒಂದೆರಡು ತುತ್ತು ಅನ್ನವನ್ನು, ಅವರು ಹೇಗೆ ತೆಗೆದುಕೊಂಡು ತಮ್ಮ ಕೋಣೆ ಸೇರಿದರೋ ನೋಡಿದವರಿಲ್ಲ….. ಗಾಯ ನಿಧಾನವಾಗಿ ಮಾಯತೊಡಗಿತು… ಬೇರೆಯವರೆಲ್ಲರಿಗೂ…. ತನಗೂ ಕೂಡ. ಫರೀದ್ ನವೀದ್‌ನನ್ನು ತನ್ನ ಮಡಲಿಗಿಟ್ಟಳಲ್ಲ….. ಆದರೆ ….. ತಂದೆ ಹೊರಬರಲಿಲ್ಲ……
ಅದೊಂದು ಮುಂಜಾವಿನಲ್ಲಿ….. ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿರುವಂತೆ…. ಕೋಣೆಯ ಬಾಗಿಲು ತೆರೆಯಿತು. ….ಅಬ್ಬಾ ಹೊರ ಬಂದು ….. ಅಲ್ಲ….. ಅಬ್ಬಾ ಅಲ್ಲ …. ಅವರ ಪ್ರೇತವೆನ್ನಬಹುದು…. ಎಲ್ಲೋ ಹೂತು ಹೋದ ಕಣ್ಣುಗಳು …… ಫಕೀರನಂತೆ ಬೆಳೆದಿದ್ದ ದಾಡಿ….. ಮಾಸಿದ ಬಟ್ಟೆಗಳು…. ಅಳುವುದರಲ್ಲಿ….. ಕಣ್ಣೀರು ಹರಿಸುವುದರಲ್ಲಿ ಯಾವುದೇ ಅರ್ಥವಿಲ್ಲ …… ರಕ್ತದ ಬಿಂದುಗಳ ಕಾಲುವೆಯನ್ನೇ ಹರಿಸಿದ್ದರಲ್ಲ…. ಏನಾದರೂ ಪ್ರಯೋಜನವಾಗಿತ್ತೇ?
ಅಬ್ಬಾ ಮೆಲುವಾಗಿ ಹೊರಬಂದರು. ಮೂಟೆಗಟ್ಟಲೆ, ಅಕ್ಕಿ, ಗೋಧಿ, ಉಪ್ಪನ್ನು ತರಿಸಿ ಹೊರ ಜಗುಲಿಯ ಮೇಲಿರಿಸಿ ತಾವೇ ನಿಂತರು. ಅಕ್ಕಿ, ಗೋಧಿ, ಉಪ್ಪು….. ಬೇಡುವವರು ಸಾಲಾಗಿ ನಿಂತರು…. ಕೆಲವರು ಕೇಳಿದರೂ ಕೂಡ.
“ಯಾರು ಸತ್ತಿದ್ದಾರೆ, ಈ ಮನೇಲಿ?”
“ಯಾರ ಜನಾಜ ಎತ್ತುತ್ತಿದ್ದಾರೆ?”
ಸಂಜೆಯವರೆಗೂ ಒಂದು ಹನಿ ನೀರನ್ನೂ ಬಾಯಿಗೆ ಹಾಕದಂತೆ ದಾನ ಮಾಡಿ ಒಳಗೆ ಬಂದು ದಾಡಿ ಬೋಳಿಸಿ ಸ್ನಾನ ಮಾಡಿ ಊಟಕ್ಕೆ ಬಂದರು. ಇಡೀ ಕುಟುಂಬವನ್ನೇ ಮಾತನಾಡಿಸಿದರು ಅವರು. ಆದರೆ…. ಅಮ್ಮನನ್ನು ಮತ್ತು ನನ್ನನ್ನು ಹೊರತು…. “ಒಬ್ಬ ಮಗಳ ರಕ್ಷಣೆ ಮಾಡದಂತಹವಳು ನೀನೆಂಥ ತಾಯಿ?” ತನ್ನ ಬಗ್ಗೆಯಂತೂ ಅದೆಂಥ ಭಾವನೆ ಇದೆಯೋ… ಇಂದಿಗೂ ಅರಿಯಲು ಸಾಧ್ಯವಾಗಿಲ್ಲ…..
ಸರಿಯಾಗಿ ಮೂರನೇ ದಿನಕ್ಕೆ ಕಡ್ಲೆ, ಪುರಿ, ಅವಲಕ್ಕಿ, ಬೆಲ್ಲ ಮತ್ತು ಎಲ್ಲಾ ವಿಧದ ಹಣ್ಣುಗಳು ರಾಶಿಯೇ ನೆರೆಯಿತು. ಮನೆಯ ದೊಡ್ಡದಾದ ಹಜಾರ ದಲ್ಲಿ…. ಜಿಯಾರತ್ ಫಾತಿಹ…. ಸತ್ತ ಮೂರನೇ ದಿನದ ವಿಧಿ…. ಅದೆಲ್ಲವನ್ನೂ ಮನೆ ಮನೆಗೂ ಹಂಚಿದಾಗ ಮೂಡಿದ ಪ್ರಶ್ನೆಯೊಂದೇ …. “ಯಾರ ಜಿಯಾರತ್ ಇದು”
ಆದರೆ… ಗಂಧದ ಬಟ್ಟಲನ್ನು… ಅದರಲ್ಲಿ ಮುಳುಗಿದ್ದ ಬಿಡಿ ಮಲ್ಲಿಗೆ ಹೂಗಳನ್ನು ಹಿಡಿದು ತಂದೆ ಹೊರಟಾಗ ಅನಿವಾರ್ಯವಾಗಿ ತಾವೆಲ್ಲ ಹಿಂದೆ ಹೊರಟೆವು. ಖಬರ್‌ಸ್ತಾನ್ ತಲುಪಿದಾಗ ಹೊಚ್ಚ ಹೊಸ ಗೋರಿ… ತಲೆಯ ಬಳಿ ನಿಲ್ಲಿಸಿದ್ದ ಕೆಂಪು ಗ್ರಾನೈಟ್ ಕಲ್ಲು… ಅದರಲ್ಲಿ ಮೂಡಿಸಿದ್ದ ದುಂಡಗಿನ ಅಕ್ಷರಗಳು.
“ಚಿರನಿದ್ರೆಯಲ್ಲಿರುವ ನಿಶಾತ್ ಫಾತಿಮ”
ಅಣ್ಣಂದಿರಾಗಲೀ, ತಾನಾಗಲೀ ತುಟಿ ಬಿಚ್ಚಲಿಲ್ಲ. ಆದರೆ, ಪ್ರತಿಯೊಬ್ಬರಿಗೂ ತಿಳಿದಿತ್ತು….. ನಿಶಾತ್ ಅಲ್ಲಿ ಭೌತಿಕವಾಗಿ ಮಲಗಿರಲಿಲ್ಲ. ಮಾನಸಿಕವಾಗಿ ಅವಳು….. ಅವಳ ನೆನಪುಗಳು ಎಲ್ಲವೂ ಹುಗಿಯಲ್ಪಟ್ಟಿದ್ದವು. ಅಬ್ಬಾ ಮತ್ತು ನಿಶಾತ್‌ಳ ಸಂಬಂಧ ಕೊನೆಯಾದುದರ ಬಹಿರಂಗ ಘೋಷಣೆ ಅದಾಗಿತ್ತದು. ಅಣ್ಣಂದಿರ ಮರ್ಯಾದೆಯ ಸಂಕೇತವಾಗಿತ್ತು. ವಂಶದ ಮುಂದಿನ ಪೀಳಿಗೆಯ ಪ್ರಶ್ನೆಗಳ ನಿರ್ವಿವಾದ ಉತ್ತರ ಅದಾಗಿತ್ತು.
ಮುಂದಿನ ಹಂತವನ್ನು ತಾನು ಊಹಿಸಬಲ್ಲವನಾಗಿದ್ದೆ. ಅದೆ! ನಲವತ್ತು ದಿನಗಳ ಫಾತಿಹ! ಬಿರಿಯಾನಿಯ ಅದ್ದೂರಿ ಔತಣದಲ್ಲಿ ಅದೂ ನಡೆದು ಹೋಯಿತು. ಜನ …. ಸುಮ್ಮನಿರಲಿಲ್ಲ…… ಸ್ನೇಹಿತರೆನಿಸಿಕೊಂಡವರು ‘ಪಾಪ! ಆ ಮನುಷ್ಯನಿಗೆ ಹೀಗಾಗ ಬಾರದಿತ್ತು’ ಎಂದರು. ಆಗದವರು “ಹೊ….ಹೊ…. ಓಡಿಹೋದವಳ ಹೆಸರಿನ ಫಾತಿಹ …. ಖಾಲಿ ಗೋರಿಯ ಮೇಲೆ ಹೂ-ಗಂಧ” ಎಂದು ಲೇವಡಿ ಮಾಡಿ ನಕ್ಕರು. ಇನ್ನೂ ಕೆಲವರು “ಇದೇನು ಸೋಜಿಗ?…ಏನು ಕಡಿಮೆಯಾಗಿತ್ತು ಅವಳಿಗೆ? ಯಾಕಿಂಥ ಕೆಲಸ ಮಾಡಿದಳು?” ಎಂದು ಗ್ರಹಚಾರವನ್ನು ಹಳಿಯುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡರು.
ಆದರೆ, ಅದೇ ದಿನ ಅಮ್ಮನಿಗೆ ಅಂಥ ಜ್ವರ ಯಾಕೆ ಬರಬೇಕಿತ್ತು? ಎಂಥೆಂಥಾ ಔಷಧಿಗೂ ಪ್ರತಿಕ್ರಿಯೆ ಸೂಚಿಸದ ಆಕೆಗೆ ಮಂಪರು ಕವಿಸುತ್ತಾ ಹೋಯಿತು….. ಅವಳ ಕನವರಿಕೆಯಲ್ಲೆಲ್ಲಾ ನಿಶಾತ್‍ಳೇ ತುಂಬಿದ್ದಳು… ಅಬ್ಬಾ ಮೇಲೆ ಸೇಡು ತೀರಿಸಿ ಕೊಳ್ಳುವಂತೆ ಒಂದು ಮಾತನ್ನೂ ಆಡದೆ ಹೋಗಿಯೇಬಿಟ್ಟಳು. ಇಡೀ ಕುಟುಂಬವನ್ನು ತತ್ತರಿಸುವಂತೆ ಮಾಡುತಿದ್ದ ಘಟನೆಗಳ ಮೇಲೆ ನಮ್ಮ ಯಾರ ನಿಯಂತ್ರಣವೇ ಇರಲಿಲ್ಲ. ಅವುಗಳೇ ಒಂದಕ್ಕೊಂದು ಸರಪಳಿ ಹಾಕಿಕೊಂಡು ನಮ್ಮೆದುರು ಅಟ್ಟಹಾಸಗೈಯುತ್ತಿದ್ದವು….. ನಾವೆಲ್ಲಾ ಆ ಪರಿಸ್ತಿತಿಗಳೆದುರು ದುರ್ಬಲರಾದಷ್ಟು ಆಕ್ರೋಶ ಮೂಡುತ್ತಿದ್ದುದು ನಿಶಾಳ ಮೇಲೆ… ಅದು ಸ್ಫೋಟವಾಗದೆ… ಎಲ್ಲರಲ್ಲೂ ಪ್ರತಿಯೊಬ್ಬರಲ್ಲೂ ಹೆಪ್ಪುಗಟ್ಟಿ ತಣ್ಣಗೆ ಕೊರೆಯುತ್ತಿತ್ತು. ನಿಶಾತ್ ಎದುರಿಗೆ ಸಿಕ್ಕಿದಲ್ಲಿ ಎಲ್ಲರೂ ನೋಡುತಿದ್ದಂತೆಯ ಅವಳ ಗಂಟಲು ಹಿಸುಕಿ, ನಗುನಗುತ್ತಾ ನೇಣುಗಂಬ ಏರಲು ನಾವೆಲ್ಲಾ ಅಣ್ಣ ತಮ್ಮಂದಿರು ಸಿದ್ದರಿದ್ದೆವು.
ಅಂಥಹುದರಲ್ಲಿ….. ಅದೂ… ಷಹೀದ್‌ನ ಮದುವೆಯ ದಿನ …. ನಿಶಾತ್‍ಳ ಪಾಪದ ಕೂಸು.. ತಮ್ಮ ಮಡಿಲೇರಿದೆಯಂದು …. ಜುನೇದ್ ಪರಿಣಾಮವನ್ನು ಊಹಿಸಲೂ ಅಸಮರ್ಥನಿದ್ದ. ಕುಳಿತಲ್ಲಿಂದಲೇ ಅದನ್ನೊಮ್ಮೆ ಅವಲೋಕಿಸಿದ…. ಬಹುತೇಕ ಆಹ್ವಾನಿತರು ಊಟ ಮುಗಿಸಿ ಚದುರಿದ್ದರು. ಕುಟುಂಬದ ಮತ್ತು ಹತ್ತಿರದ ನೆಂಟರು, ಗಂಡಸರು ಮಾತ್ರ ಶಾಮಿಯಾನದಲ್ಲಿ ಉಳಿದಿದ್ದರಿಂದ, ಹೆಣ್ಣು ಮಕ್ಕಳೆಲ್ಲಾ ಎಲ್ಲಾ ಕಡೆಯಲ್ಲೂ ಮುಕ್ತವಾಗಿ ತಿರುಗಾಡುತ್ತಿದ್ದರು. ಅವರ ಬಣ್ಣ ಬಣ್ಣದ ಬಟ್ಟೆ, ಒಡವೆ, ಸೆಂಟು, ನಗು, ಮಾತುಕತೆ, ಯಾವುದರಲ್ಲೂ ಅವನ ದೃಷ್ಟಿ ನಿಲ್ಲಲಿಲ್ಲ.
ಅದಕ್ಕೆ ಬದಲಾಗಿ ಶಾಮಿಯಾನದ ಬಲಬದಿಯಲ್ಲಿ ಕಾಂಪೌಂಡಿಗೆ ತಗುಲಿದಂತೆ, ಜನ ಸಂಚಾರ ಕಡಿಮೆ ಇದ್ದೆಡೆ ಕುಳಿತಿದ್ದ ವ್ಯಕ್ತಿಯತ್ತ ಅವನ ದೃಷ್ಟಿ ಹೊರಳಿತು.
ಬಿಳಿ ಪಾಯಿಜಾಮ, ಬೂದು ಬಣ್ಣದ ಕೋಟು, ಟೋಪಿಯನ್ನು ಕೈಯಲ್ಲಿ ಹಿಡಿದಿದ್ದರಿಂದ ಮಿರಮಿರನೆ ಮಿಂಚುತ್ತಿದ್ದ ನೆತ್ತಿ, ನಮಾಜ್ ಮಾಡುವಾಗ ಹಣೆಯನ್ನು ನೆಲಕ್ಕೆ ತಾಗಿಸುತ್ತಿದ್ದುದರಿಂದ ಹಣೆಯ ಮೇಲೆ ಉಂಟಾಗಿದ್ದ ಕಪ್ಪು ಕಲೆ, ಕಪ್ಪು-ಬಿಳುಪು ಗಡ್ಡ ಮೀಸೆಯಿಂದ ಆವೃತ್ತವಾಗಿದ್ದ ಎಣ್ಣೆಗೆಂಪಿನ ವ್ಯಕ್ತಿ…. ಕುಳಿತಿದ್ದ ಭಂಗಿಯಿಂದಲೇ ಎತ್ತರವಾಗಿದ್ದ ನಿಲುವು ಆಕರ್ಷಿಸುವಂತಿತ್ತು.
ಅಬ್ಬಾ! ಅಧೇಗೆ ನೀವು ನನ್ನನ್ನು ತಪ್ಪಿತಸ್ಥನಾಗಿ ತಿಳಿದಿರಿ. ನನ್ನ ಜವಾಬ್ದಾರಿ ಯರಿತು ನಾನು ಫರೀದಳನ್ನು ಅಲ್ಲಿರುವಂತೆ ಏರ್ಪಡಿಸಿದ್ದನಲ್ಲ….. ಆಹ್! ಆ ಫರೀದ ಕಿಟಕಿಯ ಬಳಿ ಕುರ್ಚಿ ಹಾಕಿಕೊಂಡು ಕೂತು ಕಾದಂಬರಿ ಓದುತ್ತಿದ್ದಳೋ….. ಬರಲಿದ್ದ ಮಗನ ಆಗಮನಕ್ಕಾಗಿ ಕನಸುಗಳೊಂದಿಗೆ ಸ್ವಟರನ್ನು ಹೆಣೆಯುತ್ತಿದ್ದಳೋ….. ಅಂತೂ ನಿಶಾಕ್ ಅವನ ಕಣ್ಣೋಟಕ್ಕೆ ಬಲಿಯಾದಳು… ಅಲ್ಲಿಗೆ ಆ ಕಥೆ ಮುಗಿದು ಹೋಯಿತೆಂದುಕೊಂಡರೆ… ಈಗ…..?
ಅವನು ತಮ್ಮದೇ ಆದ ಆಲೋಚನೆಯಲ್ಲಿ ಮುಳುಗಿದ್ದ. ಆದರೆ… ಅವನಿಗರಿವಿಲ್ಲದಂತೆಯ ದೃಷ್ಟಿ ಮಾತ್ರ ಅಬ್ಬಾ ಕಡೆಗೇ ಇತ್ತು… ಪಕ್ಕದಲ್ಲಿ ಷಹೀದ್ ಬಂದು ಕುಳಿತಿದ್ದು ಅವನಿಗೆ ತಿಳಿಯಲಿಲ್ಲ.
“ಅರೆ! ಜುನೇದ್….. ಇದೇನಿದು ಯಾವ ಲೋಕದಲ್ಲಿದ್ದೀಯ?”
ಅವನು ಬೆನ್ನು ತಟ್ಟಿದಾಗಲೇ ಇಹಲೋಕದ ಪರಿವೆಯಾದದ್ದು.
“ತುಂಬಾ ಚೆನ್ನಾಗಿ ಕಾಣಿಸ್ತಿದ್ದೀಯ ಷಹೀದ್… ಒಂಥರ ಕಳೆ ಬಂದ್ಬಿಟ್ಟಿದೆ ನಿನ್ಮುಖದ ಮೇಲೆ…”
ಷಹೀದ್ ಮಾತಾಡಲಿಲ್ಲ. ನಿನಗೆ ಚಂದ ಕಂಡರೇನು ನಿಶಾತ್‌ಗಂತೂ ಚಂದ ಕಾಣಲಿಲ್ಲವಲ್ಲಾ ಎಂಬ ಭಾವವೊಂದು ಮಿಂಚಿ ಮಾಯವಾಯಿತು.
“ಸಯ್ಯದ್ ಮಾಮ ಒಬ್ಬರೇ ಕೂತ್ಕೊಂಡಿದಾರಲ್ಲ ಜುನೇದ್…..”
“ನಾನೂ ಅದನ್ನೇ ಗಮನಿಸುತ್ತಿದ್ದೇನೆ. ಇವತ್ತು ನಮಗೆ ಇಷ್ಟೊಂದು ತಳಮಳ ಆಗಿರೋವಾಗ ಅವರಿಗೆಂಥ ಶೂನ್ಯ ಆವರಿಸಿರಬಹುದು ಆದ್ರೆ ಹತ್ರ ಹೋಗೋವ್ರು ಯಾರು?”
“ಹಾಗಂತ ಬಿಡೋಕ್ಕಾಗಲ್ವಲ್ಲ, ಜುನೇದ್ …. ನೋಡು… ಆಗ್ಲಿಂದ ನಾನು ಐದು ಸಾರಿ ಕಾಲು ಮುಟ್ಟಿ ನಮಸ್ಕಾರ ಮಾಡಿದೆ. ಅಲ್ಲೇ ನಿಂತೆ, ಆದ್ರೆ ನನ್ನನ್ನು ಆಲಂಗಿಸಲೂ ಇಲ್ಲ, ಶುಭಾಶಯಗಳನ್ನೂ ಹೇಳಿಲ್ಲ…. ನನಗೇನೂ ಬೇಸರ ಆಗ್ಲಿಲ್ಲ….. ಆದ್ರೆ ಅವ್ರ ಬಗ್ಗೆ ಯೋಚನೆ ಆಗ್ತಿದೆ…..”
“ಓಹ್! ನಮ್ಗಂತೂ ಇದ್ದೇ ಇದೆ ಬಿಡು ಷಹೀದ್…. ಹೇಗಿದ್ದಾಳೆ. ನನ್ನ ಭಾಬಿ….. ‘ದರೂದ್’ ಹೇಳಿ ಅವರ ಬಲ ಬೈತಲೆಯನ್ನು ಸವರುವಾಗ ಕದ್ದು ನೋಡಿಲ್ಲ ತಾನೆ?”
ಷಹೀದ್ ಇವರ ಮಾತಿನತ್ತ ಗಮನವೇ ನೀಡಲಿಲ್ಲ. ಅನ್ಯಮನಸ್ಕನಾಗಿ ಎತ್ತಲೋ ನೋಡುತ್ತಿದ್ದವನು ‘ಹ್ಹಾ… ನೋಡಲ್ಲಿ… ಕೊನಗೆ ಫರೀದ ಭಾಬಿಯನ್ನಾದರೂ ಮಾತಾಡಿಸುತ್ತಿದ್ದಾರೆ ಸಯ್ಯದ್ ಮಾಮ, ಬೆಳಗಿನಿಂದಲೇ ಅವರು ಬಾಯಿ ಬಿಟ್ಟಿದ್ದನ್ನೇ ನಾನು ನೋಡಿರ್‍ಲಿಲ್ಲ…..!”
“ಏನು?” ಎಂದು ಕತ್ತು ಚಾಚಿದ ಜುನೇದ್‌ಗೆ ರಕ್ತವೆಲ್ಲಾ ಹೆಪ್ಪುಗಟ್ಟಿದಂತಾಯಿತು. ಒಂದು ಗಳಿಗೆ ನಖಶಿಖಾಂತ ನಡುಗಿ ಬಿಟ್ಟನವ….. ಫರೀದ ತಲೆ ಮೇಲೆ ಸೆರಗು ಹೊದ್ದು ನಿಂತು ಸಯ್ಯದ್ ಸಾಹೇಬರ ಬಳಿ ಮಾತಾಡುತ್ತಿದ್ದಳು. ನೋಡನೋಡುತ್ತಿದ್ದಂತೆಯೇ ಅವಳ ಬಾಲದಂತೆ ಅಂಟಿಕೊಂಡಿದ್ದ ಸೀಮಾ ಅವರ ತೊಡೆಯೇರಿ ಕುಳಿತುಬಿಟ್ಟಿದ್ದಳು. ಮತ್ತೂ ನೋಡುತ್ತಿದ್ದಂತೆ …. ನಗುನಗುತ್ತಾ ಅವರ ಕಿವಿಯನ್ನು ಜಗ್ಗಿ, ಗಡ್ಡದ ಕೂದಲನ್ನು ಕಿತ್ತುಬಿಟ್ಟಳು.
“ಹಾ!” ಎಂದು ಸಯ್ಯದ್ ಸಾಹೇಬರು ಗಡ್ಡ ಬಿಡಿಸಿಕೊಳ್ಳುತ್ತಿದ್ದಂತೆಯೆ…. ಜುನೇದ್ ತಾನು ಕುಳಿತಿದ್ದ ಸ್ಥಳದಿಂದ ಒಂದೇ ನೆಗೆತಕ್ಕೆ ತಂದೆಯ ಬಳಿ ತಲುಪಿದ್ದ. ಅಪ್ರತಿಭನಾದ ಷಹೀದ್ ಕೂಡ ಅವನ ಬೆನ್ನ ಹಿಂದೆಯೇ ಓಡೋಡಿ ಬಂದ.
ಅಷ್ಟರವರೆಗೆ ಶಾಂತವಾಗಿದ್ದ ಫರೀದ ಗಂಡನನ್ನು ನೋಡಿದೊಡನೆಯೇ ಬಿಳಿಚಿ ಕೊಂಡಳು.
“ನೀವು ಹೋಗಿ…” ಎಂದೇನೋ ಅವಳು ಗೊಣಗುಟ್ಟುವಷ್ಟರಲ್ಲಿಯೇ ಜುನೇದ್ ತಂದೆಯ ಮಡಿಲಿನಿಂದ ಸೀಮಾಳನ್ನು ಒರಟಾಗಿ ಕಸಿದುಕೊಂಡು, ಹೆಗಲ ಮೇಲೆ ಎಸೆದು ಓಡತೊಡಗಿದ. ಅದೇಗೋ… ಅಲ್ಲಿಗೆ ಅದೇ ವೇಳೆಗೆ ಬಂದಿದ್ದ ಇಕ್ಬಾಲ್ ಕೂಡ,
“ಜುನೇದ್…. ನಿಲ್ಲು…. ಇದ್ಯಾಕೆ…. ಹೀಗೆ ಬೆಳಗಿನಿಂದಲೂ ನೋಡ್ತಿದೀನಿ… ಆ ಮಗುವಿನ ಜೊತ ಶೈತಾನನ ರೀತೀಲಿ ವರ್ತಿಸ್ತಿದೀಯ…” ಎಂದು ಜೋರು ಮಾಡಿದ.
ಅಷ್ಟರಲ್ಲೇ ಸಯ್ಯದ್ ಸಾಹೇಬರು ಎದ್ದು ನಿಂತರು. ದೂರ ಹೋಗುತ್ತಾ ಸೀಮಾ ಕೈಯ್ಯಾಡಿಸುತ್ತಾ ಕೂಗುತ್ತಿದ್ದುದು ಎಲ್ಲಿರಿಗೂ ಕೇಳಿಸಿತು.
“ನಾನಾ ಅಬ್ಬ…. ನಾನಾ ಅಬ್ಬ….. ನನ್ನನ್ನು ಕರ್‍ಕೊಳ್ಳಿ…. ಚಾಂದ್ ಮಾಮ ಕೆಟ್ಟವ್ರು….”
ಜುನೇದ್ ಹುಚ್ಚನಾದ ಅವಳನ್ನು ಕೆಳಗಿಳಿಸಿ ಎರಡೂ ಕೈಗಳಿಂದಲೂ ಅವಳ ಬಾಯಿಯನ್ನು ಬಿಗಿ ಹಿಡಿದ ಮಗುವಿನ ಗಂಟಲಲ್ಲಿ ಉಸಿರು ಸಿಕ್ಕಿಕೊಂಡು ತೇಲುಗಣ್ಣು ಮೇಲುಗಣ್ಣಾಯಿತು
ಒಮ್ಮೆಲೆ ಊಟ ಮಾಡುತ್ತಿದ್ದ, ನಿಂತಿದ್ದ, ಹರಟೆಹೊಡೆಯುತ್ತಿದ್ದ, ಎಲೆ ಅಡಿಕೆ ಮಲ್ಲುತ್ತಿದ್ದ ಜನರೆಲ್ಲಾ ಸುತ್ತುವರೆದರು. ಸಯ್ಯದ್ ಸಾಹೇಬರು ನಿಧಾನವಾಗಿ, ದೃಢ ಹೆಜ್ಜೆಗಳನ್ನಿಡುತ್ತ ಮುಂದುವರೆಯುತ್ತಿದ್ದವರು ಜುನೇದ್ ಮತ್ತೆ ಮಗುವನ್ನೆತ್ತಿಕೊಂಡು ಓಡಲು ಪ್ರಯತ್ನಿಸುತ್ತಿದ್ದುದನ್ನು ಕಂಡು ಗುಡುಗಿದರು.
“ಜುನೇದ್…… ನಿಲ್ಲು!”
ಅಲ್ಲಿದ್ದ ಪ್ರತಿಯೊಬ್ಬರು ಆಶ್ಚರ್ಯಚಕಿತರಾಗಿ ಘೇರಾಯಿಸತೊಡಗಿದರು.. “ನಾನಾ ಅಬ್ಬ” ಏನಿದರ ಅರ್ಥ… “ಚಾಂದ್ ಮಾಮಾ”….. ಹಾಗೆಂದರೇನು? … ಕೇವಲ ಮಗಳ ಮಗಳು ಮಾತ್ರ ಕರೆಯುವ ಈ ಸಂಬಂಧ…. ನಾನಾಸಾಬ್, ನಾನಾ ಅಬ್ಬ…..
ಈ ಮಗುವಿನ ಬಾಯಲ್ಲಿ ಹೇಗೆ? ಇವನ್ಯಾಕೆ ಮಗುವನ್ನು ಹೊತ್ಕೊಂಡು ಓಡುತ್ತಿದ್ದಾನೆ?
ಜುನೇದ್ ಚಲನೆಯನ್ನೇ ಕಳೆದುಕೊಂಡುಬಿಟ್ಟ. ತೀವ್ರತರದ ಭಯ, ನಾಚಿಕೆ, ಅಪಮಾನ ಮತ್ತು ಕೋಪದಿಂದ ಅವನು ನಡುಗುತ್ತಿದ್ದ. ಸಯ್ಯದ್ ಸಾಹೇಬರು ಹತ್ತಿರ ಬಂದವರೇ ಜುನೇದ್‌ನನ್ನು ನೇರ ನಿಲ್ಲಿಸಿ, ಭೇದಕ ದೃಷ್ಟಿಯಿಂದ ಕೇಳಿದರು.
“ಏನಿದೆಲ್ಲಾ?”
ಅವನು ಬಾಯಿ ಬಿಡಲಿಲ್ಲ.
“ಜುನೇದ್…… ನಿನ್ನನ್ನೇ ಕೇಳ್ತಿರೋದು …..”
“…………”
“ಹೇಳ್ತಿಯೋ ……ಇಲ್ವೋ.”
“ಅಬ್ಬಾ…. ಇಲ್ಲಿ ಬೇಡ… ಮನೇಲಿ” ತೊದಲುತ್ತ ನುಡಿದನವ.
“ಏನೂ ಉಳಿದಿಲ್ಲ…. ಬೊಗಳು ಈಗಲೇ…….” ಸೀಮಾ ಬಿಕ್ಕುತ್ತಿದ್ದವಳು ಜೋರಾಗಿ ಅಳಲಾರಂಭಿಸಿದಳು. ಸಯ್ಯದ್ ಸಾಹೇಬರ ಮುಖದ ಮೇಲೆ ಬಣ್ಣಗಳು ಬಂದು ಹೋಗುತ್ತಿದ್ದವು. ಫರೀದ ಸೆರಗಿನಲ್ಲಿ ಮುಖ ಮುಚ್ಚಿಕೊಂಡು ಅಳುತ್ತಿದ್ದಳು. ಒಬ್ಬರೂ ಬಾಯಿ ಬಿಡಲಿಲ್ಲ. ಜನರೆಲ್ಲಾ ಕಾಯುತ್ತಿದ್ದರು… ಈಗ…. ಈಗ…. ಸಯ್ಯದ್ ಸಾಹೇಬರು ಅವನ ಕಪಾಳಕ್ಕೆ ಬಿಡುತ್ತಾರೆ…. ಈಗಲೇ….!
ಅಷ್ಟರಲ್ಲೇ ಸೀಮಾ ಓಡಿ ಬಂದಳು. ಸಯ್ಯದ್ ಸಾಹೇಬರ ಬಳಿ ಬಂದು, ಮುಖವನ್ನು ಮೇಲಕ್ಕೆತ್ತಿ ಅಳುವಿನ ನಡುವೆ ಹೇಳಿದಳು.
“ನಾನಾ ಅಬ್ಬ….. ನಾನಾ ಅಬ್ಬ…. ನೀವು ಬಯ್ಬೇಡಿ ಮತ್ತೆ…. ಮತ್ತೆ ನಾನೇ ಬಂದಿದ್ದು…… ಚಾಂದ್ ಮಾಮ ಕರ್‍ಕೊಂಡ್ಬಂದ್ದಿದ್ದಲ್ಲ………”
ಇಷ್ಟು ಹತ್ತಿರದಲ್ಲಿ ‘ನಾನಾ ಅಬ್ಬ’ ಕೇಳಿದ ಸಯ್ಯದ್ ಸಾಹೇಬರು ಸ್ಥಬ್ಧರಾಗಿ ಬಿಟ್ಟರು. ಆದರೆ….. ಅವರಿಗೆ ವಿಚಾರ ಇನ್ನೂ ಸ್ಪಷ್ಟವಾಗಲಿಲ್ಲ.
ಮೆಲುವಾಗಿ ಅವಳನ್ನೆತ್ತಿಕೊಂಡು ಕೇಳಿದರು, “ಆದ್ರೆ….. ಜುನೇದ್ ನಿನ್ನನ್ನೆತ್ತಿಕೊಂಡು ಹುಚ್ಚನ ಹಾಗೆ ಯಾಕೆ ಓಡ್ತಿದ್ದ ಮಗೂ?”
“ನಾನು…….. ನಾನು ಹೇಳಿಬಿಡ್ತೀನೀಂತ…”
ಇನ್ನು ಅವಳನ್ನು ನಿಲ್ಲಿಸುವುದು ಜುನೇದ್‌ನಿಂದಾಗಲೀ ಫರೀದಳಿಂದಾಗಲೀ ಅಸಾಧ್ಯವಾದ ಕೆಲಸ.
“ಏನನ್ನ …. ಹೇಳಿಬೀಡ್ತೀಯಾಂತ.”
“ಅದೇ…. ಅದೇ…. ನಾನು ನಿಶಾತ್‌ಳ ಮಗಳೂಂತ…….” ಸಯ್ಯದ್ ಸಾಹೇಬರ ತೋಳುಗಳಿಂದ ಅವಳು ಜಾರಿದಳು, ಷಹೀದ್ ಅವಳು ನೆಲಕ್ಕೆ ಬೀಳುವುದಕ್ಕೆ ಮೊದಲೇ ಹಿಡಿದು ತನ್ನ ಭುಜದ ಮೇಲೊರಗಿಸಿಕೊಂಡ, ಸಯ್ಯದ್ ಸಾಹೇಬರ ಮುಖ ಕರ್ಮೋಡ ಕವಿದಂತೆ ಕಪ್ಪೇರಿತು. ಮುಷ್ಠಿಗಳು ಬಿಗಿಯಾದವು.
ಅವರಿನ್ನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಸೀಮಾ ಅಳುತ್ತಲೇ ತನ್ನ ಫ್ರಾಕನ್ನೆತ್ತಿ ಕೊಂಡಳು. ಒಳಲಂಗದ ಪಿನ್ ಮಾಡಿದ್ದ ಜೇಬನ್ನು ತೋರಿಸುತ್ತಾ ಇನ್ನಷ್ಟು ಬಿಕ್ಕಿದಳು. …. “ಮತ್ತೆ…ಊಂ….ಊಂ….ಮತ್ತೆ ಅಮ್ಮ….ನಮ್ಮ ….ಅಮ್ಮ….ನಿಮಗೇ ಕೊಡ್ಬೇಕೂಂತ…… ಊಂ…… ಊಂ…. ಇಲ್ಲಿ ಚೀಟೀನ ಇಟ್ಟಿದ್ದಾರೆ…. ಊಂ…. ಊಂ….”
ಷಹೀದ್ ಮೃದುವಾಗಿ ಅವಳ ಜೇಬಿನ ಪಿನ್ ತೆಗೆದ. ಮಡಿಸಿಟ್ಟಿದ್ದ ಕಾಗದದ ಹಾಳೆಗಳನ್ನು ಅವಳ ಕೈಗಿತ್ತು ಕೆಳಗೆ ಬಿಟ್ಟ,
ಸಯ್ಯದ್ ಸಾಹೇಬರ ಬಳಿ ನೇರವಾಗಿ ನಡೆದ ಸೀಮಾ ತನ್ನ ಪುಟ್ಟ ಕೈಗಳಲ್ಲಿ ಉದ್ದುದ್ದವಾದ ದೊಡ್ಡ ಪತ್ರವನ್ನು ಹಿಡಿದು ಚಾಚಿದಳು. ಒಂದು ಗಳಿಗೆ … ಎರಡು ಗಳಿಗೆ…ಎಲ್ಲರೂ ಉಸಿರು ಬಿಗಿಹಿಡಿದರು… ಸಯ್ಯದ್ ಸಾಹೇಬರು ಕದಲಲಿಲ್ಲ. ಯಾರೊಬ್ಬರೂ ಮಾತಾಡಲಿಲ್ಲ…. ಅಲ್ಲಿದ್ದ ಕಲ್ಲೆದೆಯವರೂ ಮನದಲ್ಲೇ ಬೇಡಿಕೊಂಡರು… ‘ಪತ್ರ ತಗೊಂಡು ಓದಿ ಸಯ್ಯದ್ ಸಾಹೇಬರೇ’
ಅವರು ಕದಲಲಿಲ್ಲ. ಸೀಮಾಳ ಅಳು, ಮಧ್ಯೆ ಮಧ್ಯೆ ತನ್ನ ಅಮ್ಮಿಯ ಆದೇಶದ ತುಣುಕುಗಳು ಪ್ರವಹಿಸುತ್ತಲೇ ಇದ್ದವು.
“ಷಹೀದ್…..”
ಸಯ್ಯದ್ ಸಾಹೇಬರ ಆ ಕರೆಗೆ ಅವನ ಮೈ ಜುಮ್ಮೆಂದಿತು. ರೋಮ ನಿಮಿರಿದವು
“ಅದನ್ನು ತೆಗೆದುಕೋ.”
ಅವನು ಸೀಮಾಳ ಕೈಯಿಂದ ಬಿಡಿಸಿಕೊಂಡ.
“ಓದು ಅದನ್ನು……”
ಅವನೊಮ್ಮೆ ಸುತ್ತಲೂ ಸೇರಿದ್ದ ಜನರನ್ನು ನೋಡಿದ. ಮನೆಯ ವ್ಯವಹಾರವನ್ನು ಬೀದಿಗ್ಯಾಕೆಳೆಯಬೇಕು ಎಂಬುದು ಅವರ ಅನಿಸಿಕೆ. ಸಯ್ಯದ್ ಸಾಹೇಬರು ಒಮ್ಮೆ ನೋಡಲೋ ಬೇಡವೋ ಎಂದು ನೋಡಿದ. ಅವರ ನಿಲುವಿನಲ್ಲೇನೂ ಬದಲಾವಣೆ ಕಾಣದೆ ಇದ್ದುದರಿಂದ ಮತ್ತು ತನ್ನ ಕುತೂಹಲವನ್ನೂ ಹತ್ತಿಕ್ಕಲಾರದೆ ಆರಂಭಿಸಿದ.
ಪ್ರೀತಿಯ ಅಬ್ಬಾಜಾನ್, ಅಸ್ಸಲಾಮ್-ವ-ಅಲೈಕುಮ್, ನನಗೆ ಗೊತ್ತು. ನಿಮ್ಮನ್ನು ಹೀಗೆ ಕರೆಯುವ ಹಕ್ಕು ಧೈರ್ಯ, ಸ್ಥೈರ್ಯ ಎಲ್ಲವನ್ನೂ ನಾನು ಕಳೆದುಕೊಂಡಿದ್ದೇನೆಂಬುದು ಮತ್ತು ನೀನು ನನ್ನನ್ನು ‘ನಿಮ್ಮ ಕಳೆದುಹೋದ ಕಾಲ’ವೆಂದು ಆಳವಾಗಿ ಹುಗಿದುಬಿಟ್ಟಿರುವ ವಿಚಾರವೂ ನನಗೆ ಗೊತ್ತಿದೆ. ಆದರೆ, ನನಗೆ ಮನೆಯ ಸಮಾಚಾರವೆಲ್ಲವನ್ನೂ ತಿಳಿಯುವ ವ್ಯವಸ್ಥೆ ಇದೆ. ಹಾಗೆಂದ ಕೂಡಲೇ ಜುನೇದ್ ಭಯ್ಯನನ್ನೋ ಫರೀದ ಭಾಬಿಯನ್ನೋ ಅನುಮಾನದಿಂದ ನೋಡಬೇಡಿ ಅವರು ನಿಮ್ಮಷ್ಟೇ ನನ್ನಿಂದ ದೂರವಿದ್ದಾರೆ.
ನಾನು ನಿಮ್ಮಿಂದ ದೂರ ಹೋದೆ, ಹೋದ ಕೆಲ ದಿಗಳಲ್ಲಿಯೇ ನಿಮ್ಮನ್ನು ನಾನು ಮರೆಯಲು ಸಾಧ್ಯವಿಲ್ಲವೆಂಬ ಸತ್ಯ ನನಗೆ ತಿಳಿಯಿತು. ಆದರೆ ಹಿಂತಿರುಗಲು ಎಲ್ಲಾ ಮನಗಳ, ಮನೆಗಳ ಬಾಗಿಲುಗಳೂ ನನಗೆ ಮುಚ್ಚಿರುವುದನ್ನೂ ನಾನು ತಿಳಿದುಕೊಳ್ಳಬಲ್ಲವಳಾಗಿದ್ದೆ. ಹೀಗಾಗಿ, ಬದುಕಿನ ಬಹು ದೊಡ್ಡ ಮತ್ತು ಏಕೈಕ ಆಸೆಯಂದರೆ, ನಿಮ್ಮ ಮಗಳಾಗಿ ಆ ಮನೆಯಲ್ಲಿ ಉಂಡುಟ್ಟು ನಿರಾಳವಾಗಿ ಇರಬೇಕೆನ್ನುವುದೇ ಆಗಿದೆ. ನಿಮ್ಮೆಲ್ಲರ ಪ್ರೀತಿ, ನಾನು ಅದನ್ನು ಕಳೆದುಕೊಂಡ ನಂತರ ಪ್ರತಿ ಗಳಿಗೆಯೂ ನನ್ನನ್ನು ಕಾಡಿಸುತ್ತಿದೆ.
ಅಂದರೆ ….. ಜಯಶೀಲನಿಂದ ನಾನು ಭ್ರಮನಿರಸನ ಹೊಂದಿದ್ದೇನೆಂದು ಭಾವಿಸಬೇಡಿ. ಒಬ್ಬ ಗಂಡನಾಗಿ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆ. ಆದರೆ….. ನನ್ನ ಪ್ರವೃತ್ತಿ ಭಿನ್ನವಾಗಿದೆ. ಗಂಡನ ಎಷ್ಟೇ ಪ್ರೀತಿ ಇದ್ದರೂ ತಂದೆ ತಾಯಿ ಒಡಹುಟ್ಟಿದವರ ಮಡಿಲ ಆಕರ್ಷಣೆಯನ್ನು ತಪ್ಪಿಸಿಕೊಳ್ಳಲಾರದವಳಾಗಿದ್ದೇನೆ. ನಿಮಗೆ ನೆನಪಿರಬಹುದು… ಅಬ್ಬಾಜಾನ್ …. ಗೌರಿಗಣೇಶ .. ಹಬ್ಬ ಬಂದಾಗ ಅಮ್ಮ “ನೋಡು ನಿಶಾತ್ …. ಗೌರಿಗೆ ಆ ಶಿವ ತವರಿಗೇ ಕಳಿಸುವುದಿಲ್ಲವಂತೆ… (ನಿಮ್ಮ ತಂದೆ ಹಾಗೆ) ಆದರೆ ‘ತವರಿನ ಈ ಒಲೆಯ ಬೂದಿಯನ್ನಾದರೂ ತಿಂದು ಬರ್‍ತೇನೆ; ತವರಿನವರು ಬಡವರಾದರೆ ಪ್ರೀತಿಗೇನೂ ಕೊರತೆ ಇಲ್ಲ ಎಂದು ಗಂಡನನ್ನು ಒಪ್ಪಿಸಿ ಎಂದು ಹೋಗುತ್ತಾಳೆ. ಮಾರನೇ ದಿನವೇ ಗಣೇಶ ಕರೆಯಲು ಬರ್‍ತಾನೆ. ಆಗ ಅವಳು ಅತ್ತುಕೊಂಡು ವಾಪಸ್ಸು ಗಂಡನ ಮನೆಗೆ ಹೋಗ್ತಾಳೆ. ನೋಡು….. “ಈ ಮಳೆ ಬರ್‍ತಿದೆಯಲ್ಲ ಅದು ಗೌರಿಯ ಅಳುವಿನದು” ಎಂದು ಹೇಳುತ್ತಾ ನಿಮ್ಮನ್ನು ಅಮ್ಮ ಸುತ್ತು ಬಳಸಿ ದೂರುತ್ತಿದ್ದಳು.
ಈ ಅನುಬಂಧದ ಅನುಭವ ನನಗೀಗ ಆಗುತ್ತಿದೆ. ಪ್ರತಿ ಗಳಿಗೆಯೂ ನಿಮ್ಮ ಮುಖ ನನ್ನ ಕಣ್ಣೆದುರಿಗೆ ಕಟ್ಟಿದೆ. ನಾನು ನಿಮ್ಮನ್ನು ಮರೆಯಲಾರೆ; ಅಮ್ಮನನ್ನೂ, ಅಣ್ಣಂದಿರನ್ನೂ…..ಆ ಮನೆಯನ್ನೂ…
ಆದ ಕಾರಣ ನಾನು ಕಳೆದುಕೊಂಡಿದ್ದನ್ನು ನನ್ನ ಮಗು ಪಡೆದು ಕೊಳ್ಳಲಿ ಎಂಬ ಸ್ವಾರ್ಥದಿಂದ ನಿಮ್ಮ ಬಳಿ ಕಳಿಸಿದ್ದೇನೆ. ನನ್ನ ಮೇಲಿನ ಸಿಟ್ಟನ್ನು ಮಗಳ ಮೇಲೆ ಪ್ರಯೋಗಿಸುವುದಿಲ್ಲವೆಂಬ ನಂಬಿಕೆ ನನಗಿದೆ. ಅಮ್ಮ ಸತ್ತು ಹೋದದ್ದು ನನ್ನಿಂದಲೇ. ಆದರೆ ಅದ್ಯಾವುದನ್ನೂ ಸೀಮಾಳ ಮೇಲೆ ಆರೋಪಿಸಬೇಡಿ.
ನಿಮ್ಮ ಕಳೆದುಹೋದ ಪ್ರತಿಷ್ಠೆ, ಮರ್ಯಾದೆ, ಸುಖ, ಶಾಂತಿ ಯಾವುದನ್ನೂ ಹಿಂತಿರುಗಿಸುವ ಶಕ್ತಿ ನನಗಿಲ್ಲ. ಅಬ್ಬಾಜಾನ್… ನಿಮ್ಮ ಮಗಳನ್ನು ಹಿಂತಿರುಗಿಸುತ್ತಿದ್ದೇನೆ. ಅವಳಿಗೆ ನೀವು ಬಾಳನ್ನು ನೀಡಿದರೆ… ಅವಳಿಗೆ ಆ ಅಂಗಳದಲ್ಲಿ ಬಿದ್ದು ಮಂಡಿಗೆ ತರಚುವ ಗಾಯವಾದರೆ, ಆ ಮನೆಯ ಮಳೆ, ಗಾಳಿ, ಬಿಸಿಲನ್ನು ಅನುಭವಿಸಿದರೆ ನಿಮ್ಮ ತೊಡೆಯ ಮೇಲೆ ಆಡಿದರೆ, ನಿಮ್ಮ ಹೆಗಲೇರಿದರೆ, ನಿಮ್ಮ ಎದೆಯಲ್ಲಿ ಅವಳು ಮುಖ ಮುಚ್ಚಿಕೊಂಡರೆ, ನಿಮ್ಮ ತೋಳುಗಳಲ್ಲಿ ಅವಳು ನಿದ್ರಿಸಿದರೆ…. ಅವಳ ಮಾವಂದಿರ ಪ್ರೀತಿ, ಸಿಟ್ಟು ಸೆಡವುಗಳನ್ನು ಅನುಭವಿಸಿದರೆ ನನ್ನ ಕಣ್ಣೀರಿನ ಹನಿಗಳಲ್ಲಿ ಅವಳ ಪ್ರತಿಬಿಂಬವನ್ನು ಕಂಡು ಸುಖಿಸುತ್ತೇನೆ. ನನಗಿನ್ಯಾರು ಮಕ್ಕಳಿಲ್ಲ. ಇದ್ದೊಬ್ಬ ಮಗಳನ್ನು ನಿಮ್ಮ ಬಳಿ ಕಳಿಸಿದ್ದೇನೆ. ಅವಳ ಭಾರವನ್ನು ನಿಮ್ಮ ಮೇಲೆ ಹೇರಿದ್ದೇನೆ ಎಂದು ತಿಳಿಯಬೇಡಿ. ನಿಮಗೆ ಅವಳಲ್ಲಿರುವುದು ಇಷ್ಟವಾಗದಿದ್ದಲ್ಲಿ, ಅವಳನ್ನು ಫರೀದಳ ತಾಯಿ ಮನೆಗೆ ಕಳಿಸಿಬಿಡಿ. ನಾನು ಅಲ್ಲಿಂದ ಕರೆಸಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ.
ಅಣ್ಣಂದಿರೆಲ್ಲಾ ಸುಖವಾಗಿರಲಿ, ನನ್ನ ತವರು ಬಾಳಲಿ, ಬೆಳೆಯಲಿ.
ಇಂತಿ,
ನಿಮ್ಮವಳಾಗಿದ್ದ
ನಿಶಾತ್
ಪತ್ರ ಓದುವ ವೇಳೆಗೆ ಷಹೀದ್‌ನ ಗಂಟಲು ಕಟ್ಟಿತ್ತು. ಕಣ್ಣುಗಳು ಮಂಜಾಗಿದ್ದವು. ಸೀಮಾ ಜುನೇದ್‌ನ ಹೆಗಲಿನ ಮೇಲೆ ಮಲಗಿದ್ದಳು. ಸಯ್ಯದ್ ಸಾಹೇಬರ ಮುಖ ಕಂಪೇರಿತ್ತು. ‘ಅವರು ನಡುಗುತ್ತಿದ್ದಾರೇನು?’ ಜುನೇದ್ ತನ್ನಲ್ಲಿಯೇ ಪ್ರಶ್ನಿಸಿ ಕೊಂಡ. ನಿಮಿಷಗಳು ಎದೆಯ ಮೇಲಿಟ್ಟ ಕಬ್ಬಿಣದ ಗುಂಡುಗಳಂತೆ ಭಾರವೆನಿಸಿದವು. ಹೆಂಗಸರು ಸೆರಗಿನಿಂದ ಕಣ್ಣೊರೆಸಿಕೊಂಡರು. ಗಂಡಸರು ಕಂಬನಿಯನ್ನು ತೋರ್ಪಡಿಸಿಕೊಳ್ಳದೆ ಗಂಟಲಲ್ಲಿಯೇ ಒತ್ತಿಹಿಡಿದರು. ಸಯ್ಯದ್ ಸಾಹೇಬರಿಂದ ನಿರುತ್ತರ! ಕಲ್ಲಾಗಿ ಬಿಟ್ಟಿದ್ದರವರು.
ಜುನೇದ್ ಕಾದ….. ನಿರೀಕ್ಷೆಯಿಂದ…. ದೂರದ ಆಸೆಯಿಂದ…. ಉತ್ಸುಕತೆಯಿಂದ….. ತಂದೆಯಿಂದ ಒಂದೇ ಒಂದು ಸಂಜ್ಞೆ ಬರಬಹುದೇ…. ಮಾತು ಬೇಡ ಕೈ ಸನ್ನೆಯನ್ನಾದರೂ ಮಾಡಬಹುದೇ ? ತಾವು ನೋಡದೆ ಇದ್ದರೆ ಪರವಾಗಿಲ್ಲ…. ‘ನೀನಿಟ್ಕೊ ಹೋಗು’ ಎಂದೆನ್ನಬಹುದೆ…. ಅವನ ಆಶೆ ನಿಧಾನವಾಗಿ ಕರಗತೊಡಗಿತು. ಹೃದಯ ತುಂಬಿ ಬಂದಿತು ತಂದೆಯೇನು ನಿರ್ಧಾರ ಕೈಗೊಳ್ಳಲಿಲ್ಲ. ತಾನೇ… ಏನಾದರೂ ಒಂದು ನಿರ್ಣಯ ಕೈಗೊಳ್ಳಬೇಕು. ತನ್ನ ಹೆಗಲ ಮೇಲಿನಿಂದ ಸೀಮಾಳನ್ನು ಬೇರ್ಪಡಿಸಿ, ಅತಿ ಹತ್ತಿರದಿಂದ ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ನೋಡಿದ. ಅವನು ತಡೆ ಹಿಡಿದಿದ್ದ ಕಂಬನಿ ಪ್ರವಾಹ ಹರಿಯತೊಡಗಿತು.
ಹಾಗೆಯೇ… ಅವನ ಕಣ್ಣುಗಳು ಫರೀದಳನ್ನರಸಿದವು. ಅವಳಂತೂ ಅತ್ತು ಅತ್ತು ಮೋರೆ ಕೆಂಪೇರಿತ್ತು. ರುದ್ಧ ಕಂಠದಲ್ಲಿ ಅವಳನ್ನು ಕರೆದ. “ಫರೀದ …. ತಗೋ….. ನಿಮ್ಮ ತಾಯಿಯ ಬಳಿ ಈ ಅನಾಥೆಯನ್ನು ಕಳಿಸಿಬಿಡು…..” ಎಂದವನೇ ದುಃಖವನ್ನು ತಡೆಯಲು ತುಟಿಯನ್ನು ಕಚ್ಚಿ ಹಿಡಿದು ಸೀಮಾಳನ್ನು ಮುಂದೆ ಚಾಚಿದ. ಬಂದಾಗಿನಿಂದ ನಡೆಯುತ್ತಿದ್ದ ವಿದ್ಯಮಾನಗಳಿಂದ ಗಾಬರಿಯಾಗಿದ್ದ ಸೀಮಾ ಯಾರು ಆತ್ಮೀಯವಾಗಿ ಅಪ್ಪುತ್ತಿದ್ದರೋ ಅವರನ್ನೇ ಅಂಟಿಬಿಡುತ್ತಿದ್ದಳು. ಜುನೇದ್ ಅವಳಿಗೆ ಸ್ವಲ್ಪ ಪರವಾಗಿಲ್ಲ ಅನ್ನಿಸಿತ್ತು. ಅಂತಹುದರಲ್ಲಿ ಮತ್ತೆ ಅವನಿಂದ ದೂರ ಹೋಗುವುದು ಯಾರ ತೆಕ್ಕೆಗೋ ಹೋಗಿ ಅಪರಿಚಿತರ ಪ್ರೀತಿಯನ್ನರಸುವುದು ಅಸಹನೀಯವಾಗಿತ್ತು. ತನ್ನವರು ಇಲ್ಲಿ ಯಾರೂ ಇಲ್ಲ ಎಂದು ಅರಿವಾಗುತ್ತಿದ್ದಂತೆಯೇ ಕರುಣಾಜನಕವಾಗಿ ಅಳಲಾರಂಭಿಸಿದಳು.
ಸೀಮಾಳನ್ನು ಎತ್ತಿಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಗುಂಪಿನ ಮಧ್ಯೆ ಒಂಟಿ ಮಗು; ಅಂತಃಕರಣ ಕಲಕುವಂತಹ ಅಳು… ಸಯ್ಯದ್ ಸಾಹೇಬರು ತಮ್ಮ ಸ್ಥಳದಿಂದ ಅಲುಗಿದರು. ಒಂದೊಂದೇ ಹೆಜ್ಜೆ ಮುಂದೆ ಬಂದರು. ಇದೇನಿದು! ಎಂದು ಅಚ್ಚರಿಪಡುವಷ್ಟರಲ್ಲಿ ಸೀಮಾಳನ್ನೆತ್ತಿ ತಮ್ಮೆದೆಗೆ ಒರಗಿಸಿಕೊಂಡರು. ಕಣ್ಣೀರು ಹರಿದು ಗಡ್ಡ ದೊಳಗೆ ಮರೆಯಾಗುತ್ತಿದ್ದಂತೆಯೇ ಸೀಮಾಳ ಬೆನ್ನು ಸವರುತ್ತ ಗುಂಪಿನಿಂದ ಕಣ್ಮರೆಯಾಗಿಬಿಟ್ಟರು.
*****
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಬಹಳ ದಿನಗಳ ನಂತರ ಭಾವೋದ್ವೇಗದಿಂದ ಕಣ್ಣಲ್ಲಿ ನೀರು ಬರಿಸಿದ್ದೀರಿ !