ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

“ದಶರಥನನ್ನು ಪೋಲಿಸರು ಹಿಡಿದುಕೊಂಡು ಹೋದರು.” ಎಂದು ಶಾಲೆಯಿಂದ ಬಂದ ತಮ್ಮ ವರದಿ ಒಪ್ಪಿಸಿದಾಗ ನನಗೆ ಖುಷಿಯಾಯಿತು. ಬಡ್ಡೀ ಮಗನಿಗೆ ನಾಲ್ಕು ಬೀಳಬೇಕು. ನನ್ನ ಮಾತಿಗೆ ಒಮ್ಮೆಯೂ ಬೆಲೆ ಕೊಟ್ಟವನಲ್ಲ. ಪೋಲಿಸರು ಅಂಡಿಗೆ ತುಳಿದಾಗ ತಾನಾಗಿ ಬುದ್ಧಿ ಬರುತ್ತದೆ ಎಂದುಕೊಂಡೆ.

ನಾನು ಡ್ರೆಸ್  ಬದಲಾಯಿಸಿ ಕೈ ಕಾಲು ತೊಳೆದು ಅಮ್ಮ ಕೊಟ್ಟ ಬಿಸಿ ಕಾಫಿಯನ್ನು ಹೀರಿ ಟಿ.ವಿ. ನೋಡತೊಡಗಿದೆ. ಅಷ್ಟು ಹೊತ್ತಿಗೆ ಫೋನು ಟ್ರಿಣ್ ಗುಟ್ಟತೊಡಗಿತು. ಹಾಳಾದ್ದು ರೆಸ್ಟ್ ತೆಗೊಳ್ಳಲೂ ಬಿಡುವುದಿಲ್ಲ ಎಂದು ಗೊಣಗುತ್ತಾ ಫೋನು ಎತ್ತಿಕೊಂಡೆ. ಅತ್ತ ಕಡೆಯಿಂದ ಗಡಸು ದನಿ, “ಯಾರ್ರೀ ಅದು ಜಗದೀಶ?” ನಾನು ಯಾರಾದರೆ ನಿನಗೇನು ಎಂದು ಕೇಳಬೇಕೆಂದೆನಿಸಿತು. ಕೆಲವರು ಹೀಗೆ. ಫೋನು ಮ್ಯಾನರ್ಸೇ ಗೊತ್ತಿರುವುದಿಲ್ಲ. ತಾವು ಯಾರೆಂದು ಹೇಳದೆ ನೀವು ಯಾರೆಂದು ಕೇಳುವ ಅಧಿಕ ಪ್ರಸಂಗಿಗಳೇ ಹೆಚ್ಚು. ಹಾಳಾಗಿ ಹೋಗಲಿ ಸುಮ್ಮನೆ ಫೋನ್ ನಲ್ಲಿ ಜಗಳವಾಡಿ ಮೂಡ್ ಕೆಡಸಿಕೊಳ್ಳುವುದೇಕೆಂದು ತಾಳ್ಮೆಯಿಂದಲೇ ಉತ್ತರಿಸಿದೆ.

“ನಾನೇ ಜಗದೀಶ್ ಮಾತಾಡುತ್ತಿರುವುದು. ತಾವು ಯಾರೋ ಗೊತ್ತಾಗಲಿಲ್ಲ.”

“ಹ್ಞಾಂ ಇದು ಎಸ್ ಐ ಮಾತಾಡುತ್ತಿರುವುದು. ನೀವೊಮ್ಮೆ ಈಗ ಪೋಲಿಸ್ ಸ್ಟೇಷನ್ನಿಗೆ ಬರಬೇಕಿತ್ತು.”

ನನಗೊಮ್ಮೆ ಭೀತಿ ಮೂಡಿತು. ಸಾಕ್ಷಾತ್ ಎಸ್ ಐ ಯೇ ಕರೆಯುತ್ತಿದ್ದಾನೆ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಬಹುದು. ಆದರೆ ಪೋಲಿಸರನ್ನು ಎದುರು ಹಾಕಿಕೊಳ್ಳಬಾರದು ಎಂದು ನನ್ನ ವಿವೇಕ ಎಚ್ಚರಿಸಿತು. ನಾನು ಹೋಗದಿದ್ದರೆ ಪೋಲಿಸ್ ಜೀಪು ಇಲ್ಲಿಯವರೆಗೆ ಬರುತ್ತದೆ. ಪೋಲಿಸರು ನನ್ನನ್ನು ಜೀಪಲ್ಲಿ ಎತ್ತಾಕಿಕೊಂಡು ಹೋಗಿ ಬಿಡುತ್ತಾರೆ. ಅಕ್ಕಪಕ್ಕದವರು ಏನೇನೋ ಮಾತಾಡಿಕೊಳ್ಳುತ್ತಾರೆ. ಅಪ್ಪ ಅಮ್ಮ ಕುಲಗೌರವ ಹಾಳಾಯಿತೆಂದು ಅಳುತ್ತಾರೆ. ಈ ಗೋಜಲೇ ಬೇಡವೆಂದು ನಾನೆಂದೆ. “ಆಗಲಿ ಸರ್ ಬಂದು ಬಿಡುತ್ತೇನೆ.” ಎಸ್ ಐ ಖುಷಿಯಾಗಿ “ಗಾಬರಿ ಬೇಡ ಜಗದೀಶ್. ನಿಮ್ಮ  ಮೇಲೆ ಕೇಸೇನೂ ಇಲ್ಲ. ಇಲ್ಲೊಬ್ಬನನ್ನು ತಂದು ನಾವು ಲಾಕಪ್ಪಿಗೆ ಹಾಕಿದ್ದೇವೆ. ಅವ ನಿಮಗೊಂದು ಫೋನು ಮಾಡಲು ಹೇಳಿದ. ಬಿಡುವಾದಾಗ ಬನ್ನಿ. ಬಾರದಿದ್ದರೂ ತೊಂದರೆ ಏನಿಲ್ಲ. ಈ ಬೋಳೀ ಮಗ ನಾಲ್ಕು ದಿವಸ ಲಾಕಪ್ಪಿನಲ್ಲಿ ಕೊಳೆಯಲಿ.”

ನಾನು ರಿಸೀವರ್ ಕೆಳಗಿಟ್ಟೆ. ನನ್ನ ಮೇಲೆ ಯಾವ ಕೇಸೂ ಇಲ್ಲವೆಂದು ಹಾಯಾಗಿ ಉಸಿರಾಡಿದೆ. ಈಗಿನ ಕಾಲ ತುಂಬಾ ಕೆಟ್ಟದ್ದು. ನಮಗಾಗದವರ ಮೇಲೆ ಜಾತಿ ನಿಂದನೆ ಕೇಸು ಸುಲಭವಾಗಿ ಹಾಕಬಹುದು. ಒಬ್ಬಳು ತಲೆಕೆಟ್ಟ ಹೆಣ್ಣಿನಿಂದ ರೇಪ್ ಕೇಸ್ ಹಾಕಿಸಬಹುದು. ಪುಣ್ಯಕ್ಕೆ ಕೇಸು ಇರುವುದು ದಶರಥನ ಮೇಲೆ. ಅವನಿಗೆ ನಂಬಿಕೆ ಇರುವುದು ನನ್ನ ಮೇಲೆ ಮಾತ್ರ. “ಸರಿ, ಹೋಗಬೇಕು.” ಎಂದುಕೊಂಡು ಸಿದ್ಧನಾದೆ.

ಅವನ ನಿಜವಾದ ಹೆಸರು ಗೋವಿಂದ. ಅವನನ್ನು ಕಂಡಾಗಲೆಲ್ಲ ನನ್ನ ತಮ್ಮ ಗೋವಿಂದಾನಿ ಗೋವಿಂದ ಎಂದು ಅಣಕಿಸುತ್ತಿದ್ದ. ಅವರು ಮೂರು ಮದುವೆಯಾಗಿದ್ದ. ಹಾಗಾಗಿ ನಮ್ಮ ಊರಿನವರು ದಶರಥ ಎಂದೇ ಕರೆಯುತ್ತಿದ್ದರು. ಎರಡನೇ ಮದುವೆಗೆ ಅವನು ಹೊರಟಾಗ ಊರಲ್ಲಿ ದೊಡ್ಡು ಗುಲ್ಲು ಎದ್ದಿತು. ಅವನ ಮೊದಲ ಹೆಂಡತಿ ನಮ್ಮಲ್ಲಿಗೆ ಬಂದು ಅಪ್ಪ ಅಮ್ಮನ ಎದುರು ಗೋಳೋ ಎಂದು ಅತ್ತಿದ್ದಳು. ” ನೋಡಿ ಅಮ್ಮ, ಅವರು ಮದುವೆ ಆಗಲಿಕ್ಕೆ ಹೊರಟಿದ್ದಾರೆ. ನಮಗೆ ಇರುವುದು ನಲವತ್ತು ಸೆಂಟ್ಸ್ ಭೂಮಿ ಮಾತ್ರ. ಯಾವ ಐಶ್ವರ್ಯ ಉಂಟೆಂದು ಇವರು ಮದುವೆ ಯಾಗಬೇಕು? ಅವಳಿಗಾದರೂ ಬುದ್ಧಿ ಬೇಡವೇ? ಇವರ ಸೊಕ್ಕು ನೋಡಿದರೆ ನನಗೆ ವಾಕರಿಕೆ ಬರುತ್ತದೆ. ನೀವು ಬುದ್ಧಿ ಹೇಳಿದರೆ ಎರಡನೇ ಮದುವೆ ನಿಂತು ಬಿಡುತ್ತದೆ. ನಲವತ್ತು ಸೆಂಟ್ಸು ಭೂಮಿ ನನ್ನ ಮಕ್ಕಳಿಗೇ ಸಿಗುತ್ತದೆ. ಒಂದು ಮಾತು ಹೇಳಿಬಿಡಿ.”

ಅಪ್ಪ ಅಮ್ಮ ಒಪ್ಪಿದ್ದರು. ಆದರೆ ದಿನಾ ನಮ್ಮಲ್ಲಿಗೆ ಕೆಲಸಕ್ಕೆ ಬರುವ ಗೋವಿಂದ ಆವತ್ತಿ ನಿಂದ ನಾಪತ್ತೆ. ಯಾರನ್ನು ಎಲ್ಲಿ ಮದುವೆಯಾದನೋ! ಒಂದು ತಿಂಗಳ ಬಳಿಕ ಒಬ್ಬಳು ಹೆಣ್ಣನ್ನು ಕಟ್ಟಿಕೊಂಡು ತನ್ನ ಮನೆಗೆ ಬಂದೇಬಿಟ್ಟ. ಮೊದಲ ಹೆಂಡತಿ ಸುಂದರಿ ಭೂಮ್ಯಾಕಾಶ ಒಂದಾಗುವಂತೆ ರಂಪ ಮಾಡಿ ಬಿಟ್ಟಳು. ಗೋವಿಂದ ದನಕ್ಕೆ ಬಡಿವಂತೆ ಅವಳಿಗೆ ಬಡಿದ. ಪೆಟ್ಟಿಗೆ  ಹೆದರಿ ಅವಳು ಸುಮ್ಮನಾದಳು. ಹೊಸ ಹೆಂಡತಿ ಒಂದೆರಡು ಸಲ ನಮ್ಮಲ್ಲಿಗೆ ಕೆಲಸಕ್ಕೆ ಬಂದಿದ್ದಳು. ಈ ಗೋವಿಂದನ ಮೂತಿಗೆ ಇಂಥ ಹೆಣ್ಣು ಸಿಕ್ಕಿತಲ್ಲಾ ಎಂದು ನನಗೆ ಆಶ್ಚರ್ಯವಾಗಿತ್ತು. ಸುಂದರಿ ವಸ್ತುಸ್ಥಿತಿಗೆ ಹೊಂದಿಕೊಂಡು ಮೌನವಾಗಿದ್ದಳು.

ಆದರೆ ಊರಿನ ಪಡ್ಡೆಗಳು ಸುಮ್ಮನಿರಬೇಕಲ್ಲಾ? ಗೋವಿಂದನ ಮನೆಗೆ ರಾತ್ರೆ ಕಲ್ಲುಗಳು ಬೀಳತೊಡಗಿದವು. ಒಂದು ದಿನ ಅವನ ಎರಡನೇ ಹೆಂಡತಿ ಪುಷ್ಪ ನಮ್ಮಲ್ಲಿಗೆ ಬಂದವಳೇ ಅಮ್ಮನೆದುರು ಸಂಕಟ ತೋಡಿಕೊಂಡಳು. “ಇವರು ನನ್ನ ಕೈ ಹಿಡಿಯುವಾಗ ಮೊದಲು ಮದುವೆಯಾದದ್ದನ್ನು ಹೇಳಲೇ ಇಲ್ಲ, ನನ್ನ ಅಪ್ಪನಿಗೆ ಐದು ಜನ ಹೆಣ್ಣು ಮಕ್ಕಳು. ಹೊರೆ ಖಾಲಿಯಾಗಲಿ ಎಂದು ನನ್ನನ್ನು ಇವರ ಕುತ್ತಿಗೆಗೆ ಕಟ್ಟಿಬಿಟ್ಟರು. ಈಗ ನೋಡಿ ಸುಂದರಿಯಿಂದಾಗಿ ಮನೆಯಲ್ಲಿ ನೆಮ್ಮದಿಯಿಲ್ಲ. ಮನೆಯಿಂದ ಹೊರಗೆ ಬಂದಾಗ ಹುಡುಗರು ಕಣ್ಣು ಹೊಡೆಯುತ್ತಾರೆ. ಒಬ್ಬ ಇವತ್ತು ಕೈ ಹಿಡಿದೆಳೆದು ಬರುತ್ತೀಯಾ ಎಂದು ಕೇಳಿಬಿಟ್ಟ. ಇದನ್ನೆಲ್ಲ ನಾನು ಸಹಿಸಬೇಕಲ್ಲಮ್ಮ? ಇವರಿಗೆ ಹೇಳಿದ್ದಕ್ಕೆ ಇವರು ವಿಚಾರಿಸಲು ಹೋಗಿ ಬಿಡುವುದಾ? ಸ್ವಲ್ಪ ಹಾಕಿದ್ದಕ್ಕೆ ಒಳ್ಳೆ ಸ್ಪಿರಿಟ್ಟು ಬಂದಿತು. ಇವರ ಸ್ವರ ಎತ್ತರಕ್ಕೆ ಹೋಗಿರಬೇಕು. ಆ ಹೊಂತಕಾರಿಗಳು ಬಿಡುತ್ತಾರೆಯೆ? ಮುಖ ಮೂತಿ ನೋಡದೆ ಇವರಿಗೆ ಬಾರಿಸಿದ್ದಾರೆ. ಎರಡು ಹಲ್ಲು ಬಿದ್ದು ಹೋಗಿದೆ. ಅದೂ ಎದುರಿನ ಹಲ್ಲೇ. ಮೊದಲೇ ಆ ಸೊಡ್ಡನ್ನು ನೋಡುವುದು ಕಷ್ಟ. ಈಗ! ದೇವರೇ ನಾನು ಏನು ಮಾಡಬೇಕು.ಇನ್ನು ಆ  ಹೊಂತಕಾರಿಗಳು ನನ್ನನ್ನು ಬಿಡುತ್ತಾರಾ? ನನ್ನ ಅಪ್ಪ ಈ ಊರಿಗೆ ನನ್ನನ್ನು ಕೊಡುವ ಬದಲು ಕೈ ಕಾಲು ಕಟ್ಟಿ ಒಂದು ಹೊಂಡಕ್ಕೆ ಹಾಕಿ ಬಿಡ ಬಹುದಿತ್ತು. ದೇವರೇ! ಯಾವ ಜನ್ಮದಲ್ಲಿ ಏನು ಪಾಪ ಮಾಡಿದೆನೋ ಈ ದರಿದ್ರದ ಕೈ ಹಿಡಿಯಲಿಕ್ಕೆ.”

ಅಪ್ಪ ಅಮ್ಮ ಮುಖ ಮುಖ ನೋಡಿಕೊಂಡರು. ಆ  ಹೊಂತಕಾರಿಗಳು ನನ್ನ ಗುರುತಿನವರು. ಅಪ್ಪ ನನ್ನನ್ನು ಕರೆದರು.” ನೋಡು ಜಗದೀಶಾ ನಿನ್ನ ಸ್ನೇಹಿತರು ಎಷ್ಟು ಕೆಟ್ಟುಹೋಗಿದ್ದಾರೆ!  ಗೋವಿಂದ ಎರಡನೇ ಮದುವೆಯಾದದ್ದು ದೊಡ್ಡ ತಪ್ಪು, ತಪ್ಪು.ಅವನದ್ದು. ಈ ಪುಷ್ಪಳದ್ದಲ್ಲ. ಇವಳು ಏನು ತಪ್ಪು ಮಾಡಿದಳೆಂದು ಈಗ ಶಿಕ್ಷೆ ಅನುಭವಿಸಬೇಕು! ಅಪ್ಪ ಅಮ್ಮನನ್ನು ಬಿಟ್ಟು ಬಂದ ಹೆಣ್ಣು ಮಗಳು, ಇವಳನ್ನು ಊರು ಹೀಗೆ ನಡೆಸಿಕೊಳ್ಳುವುದು ತಪ್ಪಲ್ಲವಾ? ನೀನು ಆ ಪಡ್ಡೆಗಳಿಗೆ ಒಂದು ಮಾತು ಹೇಳು. ಅದಕ್ಕೂ ಬಗ್ಗದಿದ್ದರೆ ನಾನು ಪೋಲಿಸು ಕಂಪ್ಲೈಂಟು ಕೊಡಬೇಕಾಗುತ್ತದೆ. ಹೆದರಿಸುವುದಕ್ಕೆ ಈ ಮಾತು ಹೇಳುವುದಲ್ಲ. ನಾಳೆ ನಿನ್ನ ತಂಗಿಗೆ ಪರ ವೂರಿನಲ್ಲಿ ಹೀಗಾದರೆ ಏನು ಗತಿ?”

ಅಪ್ಪನದು ಧರ್ಮರಾಯನ ಸ್ವಭಾವ. ಲೋಕವಿಡೀ ಹಾಳಾಗಿ ಹೋಗಲಿ. ನಮ್ಮ ಊರ ಧರ್ಮ ಎಂದರೆ ಸಾಕು, ಎಂಥವರನ್ನು ಬೇಕಾದರೂ ಎದುರು ಹಾಕಿಕೊಳ್ಳವ ಎದೆಗಾರಿಕೆಯವರು. ಅವರು ಒಂದು ಮಾತು ಹೇಳಿದರೆ ಅಲ್ಲಿಗೆ ಮುಗಿಯಿತು. ಅದು ಹಾಗೇ ಆಗಲೇಬೇಕು. ನಾನು ಪಡ್ಡೆಗಳಿಗೆ ವಿಷಯ ತಿಳಿಸಿದೆ. ಪುಷ್ಪಳ ಗೋಳು ನಿಂತಿತು.

ಆದರೆ ಈಗ ಪೋಲೀಸರಿಂದ ಗೋಳು ಆರಂಭವಾಗಿದೆ. ನಾನು ಪೋನಿಟ್ಟು ಹೊರಟು ನಿಂತದ್ದನ್ನು ನೋಡಿ ಅಮ್ಮ ಕೇಳಿದಳು. “ಇದೇನೋ ಇದು? ಬಂದು ಐದು ನಿಮಿಷವಾಗಲಿಲ್ಲ, ಆಗಲೇ ಮತ್ತೆ ಹೊರಟುಬಿಟ್ಟೆ?”

“ಅದೇ ಅಮ್ಮಾ ದಶರಥನ ಕೇಸು. ಅವ ಲಾಕಪ್ಪಿನಲ್ಲಿದ್ದಾನೆ. ನನ್ನ ಹೆಸರು ಹೇಳಿದಕ್ಕೆ ಎಸ್ಸೈ ನನಗೆ ಫೋನು ಮಾಡಿದ್ದಾನೆ. ಎಸ್ಸೈ ಹೇಳಿದ ಮೇಲೆ ನಾನು ಹೋಗಲೇ ಬೇಕು.”

ಅಪ್ಪ ನನ್ನ ಮುಖ ನೋಡಿದರು.”ಇದೊಳ್ಳೆ ಗ್ರಹಚಾರವಾಯಿತ್ತಲ್ಲ ಜಗದೀಶ? ಅವತ್ತು ಪುಷ್ಪಳನ್ನು ಯಾರ್ಯಾರೋ ಎಳೆದದ್ದಕ್ಕೆ ಹೇಗೋ ಪರಿಹಾರ ಮಾಡಿದಿ. ಆದರೆ ಈಗ ಆ ದರಿದ್ರದ ಗೋವಿಂದ ಮತ್ತೆ ನಿನಗೇ ತಂದು ಹಾಕಿದ್ದಾನಲ್ಲಾ? ಅವನನ್ನು ಬಿಡಿಸಬೇಕಾದರೆ ನೀವೇ ಒಳಗೆ ಹೋಗಬೇಕಾಗುತ್ತದೋ ಏನೋ?”

ನಾನೆಂದೆ: “ಇಲ್ಲಪ್ಪ, ಎಸ್ಸೈ ಹೇಳಿದ್ದಾನೆ. ನನ್ನ ಮೇಲೆ ಏನೂ ಕೇಸಿಲ್ಲವಂತೆ. ಗೋವಿಂದ ಲಾಕಪ್ಪಿನಿಂದ ಬಿಡಿಸಲು ನನ್ನನ್ನು ಕರೆದಿರಬೇಕು. ಅವನು ಅಲ್ಲೇ ಹಾಳಾಗಲಿ ಎಂದು ಬಿಟ್ಟು ಬಿಡಬಹುದು. ಆದರೆ ಆ ಪುಷ್ಪ ಮತ್ತೆ ಬಂದು ನಿಮ್ಮ ಕಾಲು ಹಿಡಿಯುತ್ತಾಳೆ. ಅದಕ್ಕಿಂತ ಈಗ ನಾನು ಮಾಡುತ್ತಿರುವುದೇ ವಾಸಿ.”

ಅಪ್ಪ ತಲೆದೂಗಿದರು. ನಾನು ಹೊರಟೆ. ಪೋಲಿಸ್ ಸ್ಟೇಷನ್ನಿನಲ್ಲಿ ಎಸ್ಸೈ ಬಿಗುವಾಗಿದ್ದ. “ನೋಡಿ ಜಗದೀಶ್ ನಿಮಗೆ ಯಾಕೆ ಬೇಕು ಇಂಥವರ ಸಹವಾಸ. ಇವ ಮೂರು ಮದುವೆ ಯಾಗಿದ್ದಾನಂತೆ. ಇವನ ಎರಡನೆ ಹೆಂಡತಿ ಪುಷ್ಪ ದೊರುಕೊಟ್ಟಿದ್ದಾಳೆ. ನಿಮ್ಮ ಊರಿನಲ್ಲಿ ಇದನ್ನೆಲ್ಲ ಕೇಳುವದರು ಯಾರೂ ಇಲ್ಲವೇ? ನೀವೆಲ್ಲ ಎಜ್ಯುಕೇಟೆಡ್ ಏನು ಮಣ್ಣು ತಿನ್ನುತ್ತೀರಿ?”

ನನಗೆ ಎಸ್ಸೈ ಭಾಷೆ ಅಸಹ್ಯವಾಯಿತು, ಆದರೆ ಮಾಡುವುದೇನು? ಸ್ಟೇಷನ್ನಿಗೆ ಬಂದಾಗಿದೆ. ಇನ್ನು ಹೇಗಾದರೂ ಸಹಿಸಲೇಬೆಕು. ಮೆತ್ತನೆಯ ಸ್ವರದಲ್ಲಿ ನಾನೆಂದೆ. “ಹೌದು ಸರ್. ಮೂರು ಮದುವೆಯಾದ್ದದ್ದಕ್ಕೇ ದಶರಥ ಎಂದೇ ನಾವು ಕರೆಯುತ್ತೇವೆ. ಎಲ್ಲೋ ಗೊಟ್ಟಾಗಿ ಮದುವೆ ಮಾಡಿಕೊಂಡು ಬಿಟ್ಟ. ಎರಡನೆ ಮದುವೆಯಾದಾಗ ಊರಿನ ಪಡ್ಡೆ ಹೈದಗಳು ಇವನಿಗೆ ಚೆನ್ನಾಗಿ ತದುಕಿದ್ದಾರೆ. ಬುದ್ಧಿ ಬರಲಿಲ್ಲ. ಈಗ ನೀವು ತದುಕಿದ್ದೀರಿ. ಮತ್ತೆ ಇದೆಲ್ಲಾ ಪರ್ಸನಲ್ ಅಲ್ಲವಾ ಸರ್? ನಮ್ಮಂಥವರು ಹೇಗೆ ಇಂಟರ್ ಫಿಯರ್ ಮಾಡಲಿಕ್ಕೆ ಆಗುತ್ತದೆ?”

ಎಸ್ಸೈ ಸೀರಿಯಸ್ ಆದ. “ಏನು ಜಗದೀಶ್ ನೀವು ಹೇಳುವುದು? ನಿಮ್ಮಲ್ಲೊಂದು ಪಂಚಾಯತ್ ಇಲ್ಲವಾ? ಪಂಚಾಯತ್ ನವರು ಸೇರಿ ಇವನನ್ನು ಏನೂ ಮಾಡಲಿಕ್ಕಾಗುವುದಿಲ್ಲವಾ?”

“ಇದೆಲ್ಲಾ ಪಂಚಾಯತಿನವರ ಗಮನಕ್ಕೇ ಬಂದಿಲ್ಲ ಸರ್. ಆ ಗೋವಿಂದ ಅದು ಹೇಗೋ ನಮಗೆ ಗೊತ್ತಿಲ್ಲದೆ ಎರಡನೇ ಮದುವೆ ಮಾಡಿಕೊಂಡ. ಈಗ ಮೂರನೇ ಮದುವೆಯಾಗಿ ನಿಮ್ಮ ಲಾತ ತಿಂದಿದ್ದಾನೆ. ಅವನಿಗೆ ಅದು ಹೇಗೆ ಯಾರು ಹೆಣ್ಣು ಕೊಟ್ಟರಾ ಅವನಲ್ಲೇ ಕೇಳಬೇಕಷ್ಟೆ.”

ಎಸ್ಸೈ ತಲೆದೂಗಿದ. ಪೋಲಿಸನನೊಬ್ಬನನ್ನು ಕರೆದು ಗೋವಿಂದನನ್ನು ಲಾಕಪ್ಪಿ ನಿಂದ ಕರಕೊಂಡು ಬರಲು ಹೇಳಿದ. ಬಂದ ಗೋವಿಂದನನ್ನು ನಾನು ನೋಡಿದೆ. ಈ ಹಿಂದೆ ಪಡ್ಡೆ ಹುಡುಗರಿಂದ ಪೆಟ್ಟು ತಿಂದು ಅವನ ಕೆಳದವಡೆಯ ಮುಂದಿನ ಎರಡು ಹಲ್ಲುಗಳು ಬಿದ್ದು ಹೋಗಿದ್ದವು. ಈಗ ಪೋಲಿಸರಿಂದ ಪೆಟ್ಟು ತಿಂದು ಮೇಲ್ದವಡೆಯ ಮುಂದಿನ ಎರಡು ಹಲ್ಲುಗಳು ಮಾಯವಾಗಿದ್ದವು. ಮೊದಲೇ ಅವನದು ಗೋರಿಲ್ಲಾ ಮುಖ. ಈಗಂತೂ ನೋಡಲಿಕ್ಕೇ ಆಗುತ್ತಿರಲಿಲ್ಲ. ನನ್ನನ್ನು ನೋಡಿದವನೇ ಬಂದು ಕಾಲು ಹಿಡಿದುಕೊಂಡು ಗೋಳೋ ಎಂದು ಅತ್ತ. ಅಳುವಾಗ ಅವನ ತೆರೆದ ಬಾಯಿ ದೊಡ್ಡ ಗವಿಯಂತೆ ಕಾಣುತ್ತಿತ್ತು. ಅವನೇ ಕಾಯಿಸಿ ಕುಡಿದ ಕಂಟ್ರಿ ಸರಾಯಿಯ ಗಮಲು ಅಲ್ಲಿ ಇಡುಗಿತು. “ದಮ್ಮಯ್ಯ ಜಗದೀಶಣ್ಣ. ಒಮ್ಮೆ ಈ ನರಕದಿಂದ ನನ್ನನ್ನು ಬಿಡಿಸಿಕೊಂಡು ಹೋಗಿ.”

ಎಸ್ಸೈ ಅವನ ಮಂಡೆಗೆ ಠಕ್ಕಂದು ಮೊಟಕಿದ. “ನಾಮರ್ದ ನನ ಮಗನೆ. ಅದು ಹೇಗೆ ಈ ಮೂತಿಗೆ ಮೂರು ಹುಡಿಗಿಯರು ಗಂಟು ಬಿದ್ದರು ಹೇಳು?”

ಗೋವಿಂದ ಮತ್ತೊಮ್ಮೆ ಗೋಳೋ ಎಂದು ಅತ್ತ. ನಾನೆಂದೆ. “ಒಮ್ಮೆ ಸುಮ್ಮನಿರು ಮಾರಾಯ ಗೋವಿಂದ. ಮೂರನೆಯ ಮದುವೆಯ ತಪ್ಪು ಮಾಡಿದ್ದು ಬೇರೆ. ಈಗ ಇಲ್ಲಿ ಅಳುವುದು ಬೇರೆ. ಮದುವೆಯಾಗುವಾಗ ಇದ್ದ ಧೈರ್ಯ ಈಗೆಲ್ಲಿ ಹೋಯಿತು?”

ಗೋವಿಂದ ಅಳು ನಿಲ್ಲಿಸಿದ. ಸ್ವಲ್ಪ ಸಾವರಿಸಿಕೊಂಡ. “ನಾನು ಇಷ್ಟ ಇದ್ದು ಮೂರು ಮದುವೆಯಾದದ್ದು ಅಲ್ಲ.” ಎಂದು ಹೇಳಿದ.

ನನಗೆ ಆಶ್ಚರ್ಯವಾಯಿತು. ಎಸ್ಸೈ ನನ್ನ ಮುಖವನ್ನೇ ನೋಡಿದ. ಆ ಮೇಲೆ ಗೋವಿಂದನನ್ನು ನೋಡುತ್ತಾ ಕೇಳಿದ. “ಹಾಗಾದರೆ ಯಾವ ಕರ್ಮಕ್ಕೆ ಮೂರು ಮದುವೆ ಯಾದೆ ಬೊಗಳು.”

ಗೋವಿಂದನೆಂದ:”ಮೊದಲನೆಯದ್ದು ಅಪ್ಪ ಅಮ್ಮನೇ ಮಾಡಿಸಿದ ಮದುವೆ. ಆದರೆ ಅವಳಿಗೆ ಆ ಸುಂದರಿಗೆ ನನ್ನಲ್ಲಿ ಪ್ರೀತಿಯೆಂಬುದೇ ಇರಲಿಲ್ಲ. ಯಾವಾಗಲೂ ನನ್ನ ಮೂತಿಯ ಬಗ್ಗೆಯೇ ಹೇಳುತ್ತಿದ್ದಳು. ಈ ಮೂತಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ತಲೆಕೆಟ್ಟ ನನ್ನ ಅಪ್ಪ ಕೊಟ್ಟ. ನಾನು ಕೆಟ್ಟೆ ಎಂದು ದಿನಾ ಹಂಗಿಸುತ್ತಿದ್ದಳು. ಎಷ್ಟಾದರೂ ನಾನು ಗಂಡಸಲ್ಲವಾ ಸರ್? ಹೇಗೋ ಸ್ವಲ್ಪ ಹಣ ಜಮಾವಣೆ ಮಾಡಿ ಊರು ಬಿಟ್ಟೆ. ಪುಷ್ಪನ ಅಪ್ಪನ ಪರಿಚಯವಾಯಿತು. ಅವ ನನಗಿಂತ ದೊಡ್ಡ ಎಣ್ಣೆ ಗಿರಾಕಿ. ಅವನನ್ನು ಬುಟ್ಟಿಗೆ ಹಾಕಿಕೊಳ್ಳುವುದು ಕಷ್ಟ ಆಗಲಿಲ್ಲ. ಗಡಂಗಿನಲ್ಲಿ ಒಂದಾಗಿ ಕುಡಿದವರು ಅವನ ಮನೆ ಯಲ್ಲಿ ಒಟ್ಟಾಗಿ ಊಟ ಮಾಡಿದೆವು. ಅವನಿಗೆ ಐದು ಹೆಣ್ಣು ಮಕ್ಕಳು, ಒಂದಕ್ಕೂ ಮದುವೆಯಾಗಿರಲಿಲ್ಲ. ಎರಡು ಬಾಟಿಲು ಕೊಟ್ಟಿದ್ದಕ್ಕೆ ಪುಷ್ಪಳನ್ನು ಮದುವೆ ಮಾಡಿಸಿ ಕೊಟ್ಟ. ಅವಳನ್ನು ಕರಕೊಂಡು ಊರಿಗೆ ಬಂದಾಗಲೇ ಈ ಜಗದೀಶಣ್ಣನ ಪೋಲಿ ಸ್ನೇಹಿತರು ರಂಪ ಮಾಡಿ ಹಾಕಿದ್ದು. ಪುಷ್ಪಳೂ ಚೆನ್ನಾಗಿಯೇ ಇದ್ದಳು ಅನ್ನಿ.”

ಗೋವಿಂದ ಮಾತು ನಿಲ್ಲಿಸಿದ. ನಾನೆಂದೆ: “ಅಲ್ಲ ಗೋವಿಂದ. ಅಷ್ಟು ಚೆನ್ನಾಗಿರುವ ಪುಷ್ಪಳಿದ್ದರೂ ನಿನಗೆ ಮತ್ತೊಂದು ಮದುವೆಯಾಗುವ ಮನಸ್ಸು ಹೇಗೆ ಬಂತು ಮಹರಾಯ?”

ಗೋವಿಂದ ಮುಂದುವರೆಸಿದ: “ಆ ಪುಷ್ಪ ಸುಂದರಿಗಿಂತಲೂ ಕೆಟ್ಟವಳು. ದಿನಾ ನನ್ನ ಮೂತಿಯ ಬಗ್ಗೆ ಹಂಗಿಸುತ್ತಿದ್ದಳು. ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗಾಯಿತು ಎಂದು ಅಪಹಾಸ್ಯ ಮಾಡುತ್ತಿದ್ದಳು. ನೀನು ಗಂಡಸೇ ಅಲ್ಲ. ನನ್ನ ಅಪ್ಪನಿಗೆ ಕುಡಿಸಿ ಮಂಗ ಮಾಡಿ ನನ್ನನ್ನು ಹಾರಿಸಿಕೊಂಡು ಬಂದ ಕಳ್ಳ ಎನ್ನುತ್ತಿದ್ದಳು. ಅವಳು ನೀನು ಗಂಡಸೇ ಅಲ್ಲ ಎಂದದ್ದನ್ನು ಕೇಳಿಯೇ ಈ ಜಗದೀಶಣ್ಣನ ಸ್ನೇಹಿತರು ಅವಳನ್ನು ಎಳೆಯಲು ಬಂದದ್ದು. ನನಗೆ ಮನಸ್ಸಿನಲ್ಲಿ ಛಲ ಮೂಡಿತು. ಇವಳಿಗೆ ಬುದ್ಧಿ ಕಲಿಸಬೇಕು ಎಂದುಕೊಂಡು ಮತ್ತೆ ಸ್ವಲ್ಪ ಹಣ ಜಮಾಪಣೆ ಮಾಡಿ ಊರುಬಿಟ್ಟೆ.”

ಆಯಾಸದಿಂದ ಗೋವಿಂದ ಮಾತು ನಿಲ್ಲಿಸಿದ. ಕುಡಿಯಲು ನೀರು ಬೇಕೆಂದು ಎಸ್ಸೈನ್ನು ಕೇಳಿದ. ಪೋಲಿಸ್ ಪೇದೆಯೊಬ್ಬ ಹೂಜಿಯಲ್ಲಿ ತಂದ ನೀರನ್ನು ಗಟಗಟನೆ ಕುಡಿದ. ಎದುರಿನ ನಾಲ್ಕು ಹಲ್ಲು ಹೋಗಿ ಅಸಹ್ಯವಾಗಿ ಕಾಣುತ್ತಿದ್ದ ಅವನು ನೀರು ಕುಡುಯುವುದನ್ನು ನೋಡುವುದೇ ಒಂದು ತಮಾಷಿಯಾಗಿತ್ತು. ಮತ್ತೆ ಅವನು ಮಾತನ್ನು ಮುಂದುವರೆಸಿದ.

“ನಾನು ಮೂರನೇ ಮದುವೆಯಾದ ನಳಿನಿಯ ಅಪ್ಪನಿಗೆ  ಕೋಳಿಕಟ್ಟವೆಂದರೆ ಪ್ರಾಣ. ಅವನು ಭೇಟಿ ಯಾದದ್ದು ಒಂದು ಕೋಳಿಕಟ್ಟದಲ್ಲೇ. ಅಂದು ಅವನು ಕೋಳಿಗೆ ಹಣ ಕಟ್ಟಿ ಎಲ್ಲವನ್ನೂ ಕಳೆದುಕೊಂಡಿದ್ದ. ಹಣವೇ ಇಲ್ಲವಾದಾಗ ಅವನಿಗೆ ಹಣಕೊಟ್ಟೆ. ನಾನು ಹಣ ಕಟ್ಟಿದ ಕೋಳಿಗೆ ಹಣ ಕಟ್ಟುವಂತೆ ಅವನಿಗೆ ಸೂಚಿಸಿದೆ. ಆ ಕೋಳಿ ಗೆದ್ದಿತು. ಸತ್ತ ಕೋಳಿಯನ್ನು ಎತ್ತಿಕೊಂಡು ಅವನೊಡನೆ ಅವನ ಮನೆಗೆ ಹೋದೆ. ಅವನ ಮನೆಯವರು ಎಲ್ಲರೂ ಎಣ್ಣೆ ಪಾರ್ಟೀಗಳೇ,  ಕುಡಿದ ಸಂತೋಷದಲ್ಲಿ ನಳಿನಿ ನನ್ನೊಡನೆ ಬಂದೇ ಬಿಟ್ಟಳು. ಪುಷ್ಪಳಿಗೆ ಬುದ್ಧಿ ಕಲಿಸಬೇಕೆಂದು ಅವಳನ್ನು ಕರಕೊಂಡು ಬಂದೆ. ಆದರೆ ಪುಷ್ಪ ಗಟ್ಟಿಗಿತ್ತಿ. ನಿಮಗೆ ದೂರುಕೊಟ್ಟು ನನ್ನ ಇನ್ನೆರಡು ಹಲ್ಲು ಹೋಗಲು ಕಾರಣಳಾದಳು. ನಿಮ್ಮ ದಮ್ಮಯ್ಯ. ಇನ್ನು ಇಂಥ ಕೆಲಸ ಮಾಡುವುದಿಲ್ಲ ಬಿಟ್ಟುಬಿಡಿ.”

ಎಸ್ಸೈ ಗಹಗಹಿಸಿ ನಕ್ಕ. “ಮುಠ್ಠಾಳ ಗೋವಿಂದ. ಈ ಮೂತಿಗೆ ಇನ್ನೂ ಹೆಣ್ಣು ಸಿಗುತ್ತದೆಂದು ಕಾದಿದ್ದೀಯಾ? ನಿನ್ನನ್ನು ಸ್ಟೇಷನ್ನಲ್ಲಿ ಇಟ್ಟುಕೊಳ್ಳುವುದು ಕೂಳು ದಂಡ. ಅದರೆ ಜಾಮೀನು ಸಿಗದಿದ್ದರೆ ನಿನ್ನನ್ನು ನಾವು ಬಿಡುವ ಹಾಗಿಲ್ಲ.”

ಒಂದು ಸಾವಿರ ರೂಪಾಯಿಯ ಜಾಮೀನು ನೀಡಿ ಗೋವಿಂದನನ್ನು ಬಿಡಿಸಿಕೊಂಡು ಬಂದೆ. ಬರುವಾಗ ಗೋವಿಂದನೆಂದ. “ಇಷ್ಟೆಲ್ಲ ಆದಮೇಲೆ ಈ ಮೂತಿ ಎತ್ತಿಕೊಂಡು ಈ ಊರಿನಲ್ಲಿ ನಾನು ತಿರುಗಾಡುವ ಹಾಗಿಲ್ಲ. ಒಂದು ನೂರು ರೂಪಾಯಿ ಕೈಗೆ ಕೊಟ್ಟು ಬಿಡಿ ಜಗದೀಶಣ್ಣ. ಎಲ್ಲಾದರೂ ಹೊರಗಡೆ ಬದುಕಿಕೊಳುತ್ತೇನೆ.”

ಹಾಗೆ ಹೋದ ಗೋವಿಂದ ಮತ್ತೆ ನಮ್ಮೂರಿನಲ್ಲಿ ಕಾಣಸಿಗಲಿಲ್ಲ. ನಾಲ್ಕನೇ ಮದುವೆಯಾಗಿ ಯಾವ ಹೆಣ್ಣನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾನೋ ನನಗೆ ಗೊತ್ತಿಲ್ಲ.
*****

Latest posts by ವೀಣಾ ಮಡಪ್ಪಾಡಿ (see all)