ಬೇಬಿ ವಸಂತನ ಸುದ್ದಿಯಲ್ಲದೆ ಇನ್ನಾರ ಸುದ್ದಿಯನ್ನೂ ಬರೆಯಬೇಡ ಎಂದು ಹೇಳಿದ್ದೀಯಾ. ಅವನ ವಿಷಯವನ್ನೇ ಬರೆಯುತ್ತೇನೆ.
ಬೇಬಿ ನಿಲ್ಲುತ್ತಾನೆ; ಬೇಬಿ ಕೂತುಕೊಳ್ಳುತ್ತಾನೆ; ಬೇಬಿ ಮಲಗುತ್ತಾನೆ. ಬೇಬಿ ನಗುತ್ತಾನೆ; ಬೇಬಿ ಅಳುತ್ತಾನೆ ಬೇಬಿ ನಿದ್ರೆ ಮಾಡುತ್ತಾನೆ; ಬೇಬಿ ನಿದ್ರೆ ಮಾಡುವದಿಲ್ಲ. ಬೇಬಿಗೆ ನಾಲ್ಕು ಹಲ್ಲುಗಳಿವೆ; ನಾಲ್ಕೇ ಹಲ್ಲುಗಳಾದರೂ ದಿನಕ್ಕೆ ಆರು ಗ್ಲೆಕ್ಸೋ ಬಿಸ್ಕತ್ತುಗಳನ್ನು ತಿನ್ನುತ್ತಾನೆ; ಅದು ಸಾಲದೆಂತ ಅಳುತ್ತಾನೆ. ಬೇಬಿ ಹಿಡಿಯದೇ ನಿಲ್ಲುತ್ತಾನೆ. ನಾನು ಬರೆಯುತ್ತಾ ಕೂತರೆ ನನ್ನ ಬೆನ್ನ ಮೇಲೆ ಹತ್ತುತ್ತಾನೆ. ನನ್ನ ಕಿವಿಗಳನ್ನು ಕಚ್ಚುತ್ತಾನೆ; ನನ್ನ ಕಿವಿಗಳನ್ನು ಕಚ್ಚಿ ಗಾಯಮಾಡಿದ್ದಾನೆ. ಭಾರತಿಯ ಜಡೆಯನ್ನು ಹಿಡಿದು ಎಳೆಯುತ್ತಾನೆ. ಊಟ ಮಾಡುವಾಗ ಎಲೆಯನ್ನು ಹಿಡಿಯಲು ಬರುತ್ತಾನೆ. ಬೆಂಕಿಯನ್ನು ಎಳೆಯಲು ಪ್ರಯತ್ನ ಮಾಡುತ್ತಾನೆ. ನನ್ನನ್ನು ಕೇಳದೆಯೇ ಅಂಗಳಕ್ಕೆ ಓಡಿ ಹೋಗುತ್ತಾನೆ. ಬಟ್ಟೆಯನ್ನು ಕೊಳೆ ಮಾಡಿಕೊಳ್ಳುತ್ತಾನೆ. ಹೆದರಿಸಿದರೆ ನಗುತ್ತಾ ಮೈಮೇಲೆ ಹತ್ತುತ್ತಾನೆ. ಬಿಳಿ ಬಟ್ಟೆಯವರನ್ನು ಕಂಡರೆ, ನೀನೆಂತ ಅವರ ಹತ್ತಿರ ಓಡುತ್ತಾನೆ. ನಾನೆರಡು ಡೆಹಿಲಿಯಾ ಗಿಡಗಳನ್ನು ಬೆಳೆಸಿಕೊಂಡಿದ್ದೇನೆ; ಅವುಗಳನ್ನು ಹೋಗಿ ಕೀಳುತ್ತಾನೆ.
ಮೇಜಿನ ಮೇಲೆ ಒಂದು ಪಾತ್ರೆಯಲ್ಲಿ ಹೂವಿಟ್ಟಿದ್ದೆ. ಮೇಜಿನ ಬಟ್ಟೆಯನ್ನು ಬೇಬಿ ಎಳೆದ. ಹೂವಿನ ಸಮೇತ ಪಾತ್ರೆ ಕೆಳಗೆ ಬಿತ್ತು. ನೆಲವೆಲ್ಲಾ ಗಾಜಿನ ಚೂರು, ಅವುಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಹೂವು, ಬಿದ್ದ ಹೂಗಳನ್ನು ತೆಗೆದು ತಿನ್ನಲು ಸುರುಮಾಡಿದ. ಆಫೀಸಿಗೆ ಹೋಗಿ ಮೇಜಿನಡಿಯಲ್ಲಿ ಕೂತುಕೊಳ್ಳುತ್ತಾನೆ; ಕೆಳಗೇನಾದರೂ ಇದ್ದರೆ ಅದನ್ನು ಹರಿದುಹಾಕುತ್ತಾನೆ; ಸೇಫಿನ ಬಾಗಿಲನ್ನು ಹಿಡಿದು ತೆಗೆಯಲು ಪ್ರಯತ್ನಿಸುತ್ತಾನೆ. ಸೀತಾ ರಾಮನ ಪಂಚೆಯನ್ನು ಹಿಂದುಗಡೆಯಿಂದ ಹೋಗಿ ಎಳೆಯುತ್ತಾನೆ. ನನಗೆ ಹೇಳದೆಯೆ ಮೀನಾಕ್ಷಿಯ ಜೊತೆಯಲ್ಲಿ ಅವಳ ಮನೆಗೆ ಹೋಗಿಬಿಡುತ್ತಾನೆ.
ಮೀಯಿಸುವಾಗ ಎದ್ದು ಕೂತುಕೊಂಡು ಚೊಂಬನ್ನು ಕಿತ್ತುಕೊಳ್ಳುತ್ತಾನೆ. ಸಾಬೂನನ್ನು ಬಾಯಲ್ಲಿಟ್ಟುಕೊಳ್ಳುತ್ತಾನೆ. ಮೈಯನ್ನು ಉಜ್ಜಲು ಬಿಡುವದಿಲ್ಲ; ಬಲಾತ್ಕಾರದಿಂದ ಉಜ್ಜಿದರೆ ಬಹಳ ಅಳುತ್ತಾನೆ. ವಿಶ್ವನಾಥನು ಓದುತ್ತಿದ್ದರೆ ಅವನ ಪುಸ್ತಕ ಕಿತ್ತುಕೊಂಡು ಹರಿಯುತ್ತಾನೆ. ನಾನು ಪಾತ್ರೆಯಲ್ಲಿ ನೀರಿಟ್ಟುಕೊಂಡಿದ್ದರೆ ಅದನ್ನು ಚೆಲ್ಲುತ್ತಾನೆ.
ಬೇಬಿ ಸುದ್ದಿ ಬರೆಯುವದಾದರೆ ಒಂದು ಪುಸ್ತಕ ತುಂಬಾ ಬರೆದರೂ ಮುಗಿಯುವದಿಲ್ಲ. ಇನ್ನೊಂದು ಸಾರಿ ಬರೆಯುತ್ತೇನೆ.
ನಿನ್ನ
ಗೌರಮ್ಮ
*****