ನಾಗೇಶನ ಮನೆಗೆ ಜೀವಣ್ಣರಾಯ ಬಂದ. ಸಾಯಂಕಾಲ. “ಏನ್ರಿ, ಎಲ್ಲೂ ಆಚೆ ಹೋಗಲಿಲ್ಲವೆ? ಇವತ್ತು ಗುಡ್ ಫ್ರೈಡೇ” ಎನ್ನುತ್ತ ಜೀವಣ್ಣ ಬಂದ.

“ಎಲ್ಲಿಗೆ ಹೋಗೋದು, ಈ ಕೊಂಪೇಲಿ? ನೀವೇಕೆ ಎಲ್ಲೂ ಹೋಗಲಿಲ್ಲ?”

“ಹೀಗೆ ಹೊರಟಿದ್ದೆ, ನಿಮ್ಮ ಮನೆ ಮುಂದೆ ಹಾದು ಹೋಗೋಣ ಅಂತ. ನೀವೂ ಮನೇಲೆ ಇದೀರಿ, ಬನ್ನಿ, ಸುತ್ತಾಡಿಕೊಂಡು ಬರೋಣ ಕೊಂಚ.”

“ಇಲ್ಲ, ಈಗಾಗೋಲ್ಲ. ಮನೆ ಬಿಟ್ಟು ಬರೋಹಾಗಿಲ್ಲ.”

“ಏಕೆ ?”

“ಮನೆಯವರು ಇಲ್ಲಿಗೆ ಕೊಂಚದೂರ ಇರೊ ಕ್ಯಾತನಹಳ್ಳಿಗೆ ಹೋಗಿದ್ದಾರೆ. ಅದ್ಯಾರ ಮನೆಯಲ್ಲೊ ಮುತ್ತೈದೆ ಪೂಜೆಯಂತೆ. ನಾಲ್ಕೈದು ಜನ ಹೆಂಗಸರು ಹೋಗಿದ್ದಾರೆ. ಅದರಲ್ಲಿ ನಮ್ಮ ಮನೆಯವರೂ….”

“ಏನಂದ್ರಿ? ಯಾವುದಕ್ಕೆ?”

“ಮುತ್ತೈದೆ ಪೂಜೆಯಂತೆ.”

“ಮುತ್ತೈದೆ ಪೂಜೆ! ಯಾತಕ್ಕೆ ಕಳಿಸಿದ್ರಿ ಅಲ್ಲಿಗೆ? -ಸರ್‍ವನಾಶ!”

“ಏನೋ ಅದು? ಏನು ವಿಚಾರ ಮುತ್ತೈದೆ ಪೂಜೆ ಅಂದ್ರೆ ನನಗೆ ಗೊತ್ತಿಲ್ಲಪ್ಪ ಅದೆಲ್ಲ, ಸುತ್ತು ಮುತ್ತಲಿನ ಮನೆಯವರೂ ಜೊತೆಗೆ ಹೋಗಿದಾರೆ ಅಂದ್ರೆ.” ಎಂದು ಕೊಂಚ ದುಗುಡ, ಕೊಂಚ ಸಮಾಧಾನ ಇಟ್ಟುಕೊಂಡು ನಾಗೇಶ ಕೇಳಿದ.

“ಅಯ್ಯೋ! ಕಳಿಸಬಾರದಾಗಿತ್ತು. ನೋಡಿ, ನನ್ನ ಹೆಂಡತಿ ಸಾಯುವುದಕ್ಕೆ ಮೊದಲು ಹೀಗೆ ಮುತ್ತೈದೆ ಪೂಜೆಗೆ ಹೋಗಿಬಂದಳು. ಬಂದವಳು ಎರಡು ದಿನದ ಮೇಲೆ ಬದುಕಲಿಲ್ಲ.”

“ಏಕೆ? ಏನಾಗಿತ್ತು?”

“ಏನೂ ಕಾಯಿಲೆ ಇಲ್ಲಾ ಅಂದ್ರೆ!”

“ಮತ್ತೆ ಸತ್ತದ್ದು-ಕಾರಣ?”

“ಅಯ್ಯೋ! ಅದು ದೊಡ್ಡ ಕತೆ. ಇನ್ನೊಂದು ದಿನ ಹೇಳ್ತೇನೆ.”

“ಏನ್ರಿ ಜೀವಣ್ಣ, ನನಗೆ ಬಲು ದಿಗಿಲು ಆಗುತ್ತಪ್ಪ, ನೀವು ಹಾಗೆ ಅರ್ಧ ಅರ್ಧ ಹೇಳಿದರೆ. ಅಯ್ಯೋ! ಈ ಹಾಳು ಹೆಂಗಸರಿಗೇನು ಹೊತ್ತು ಬಂತು?”

ನಾಗೇಶ ಸ್ಕೂಲು ಇನ್ಸ್‌ಪೆಕ್ಟರು. ಜೀವಣ್ಣರಾಯ ಪೋಸ್ಟ್ ಮಾಸ್ಟರು, ಇಬ್ಬರೂ ಈ ಊರಲ್ಲಿ ಸಂಧಿಸಿ, ಪರಿಚಯ ಆದರು. ಚಿಕ್ಕ ಊರುಗಳಲ್ಲಿ ಇನ್ನೇನು? ಕುಳಿತು ಹರಟೆ ಹೊಡೆಯುವುದು, ಸಿಗರೇಟು ಸೇದುವುದು, ಇಸ್ಪೀಟು; ಇಲ್ಲವಾದರೆ ಅಲ್ಲಲ್ಲಿ ಸುತ್ತಾಡಿಕೊಂಡು ಬರುವುದು.

ಸಂಜೆ ಮಬ್ಬು ಕವಿಯಿತು. ಹಳೆಯ ಮನೆ. ಕರೀ ಗೋಡೆಗಳು. ಹೆಂಚಿನ ಸಂದಿನಿಂದ ಹೊಗೆಯ ಬಣ್ಣದ ಇಲ್ಲಣ ಮಾಲೆ ಮಾಲೆಯಾಗಿ, ಹಗ್ಗವಾಗಿ ನೇತಾಡುತ್ತಿದೆ. ಕಣ್ಣ ಕಪಟಗಳು ತಮ್ಮ ತೊಗಲ ರೆಕ್ಕೆ ಬಡಿದು ಕೊಂಡು ಪಟಪಟ ಶಬ್ದ ಮಾಡಿ ಹಾರುವುದಂತೂ ಅತಿ ಅಸಹ್ಯ, ನಿಶ್ಯಬ್ದಚಿಕ್ಕ ಊರುಗಳ ಸಂಜೆಯ ನಿಶ್ಯಬ್ಬ, ಅದು ಮನಸ್ಸಿಗೊಂದು ಭೀತಿಯೆ ಹೊಸಬರಿಗೆ.

ಜೀವಣ್ಣ ಏನೋ ಹೇಳಿದ. ಅದು ಅಸ್ಪಷ್ಟವೇ ಆದರೂ, ಅದಕ್ಕೂ ಇದಕ್ಕೂ ಸಂಬಂಧ ತೋರದಾದರೂ ಭೀತಿ. ತಾನು ಒಬ್ಬಂಟಿಗ, ಚಿಕ್ಕ ವಯಸ್ಸಿನ ಹೆಂಡತಿ. ಯಾರ ಗುಣ ಹೇಗೋ? ಏತಕ್ಕೆ ಅವಳು – ಮುಟ್ಟಾಳ ಹೆಂಗಸು-ಹಾಗೆ ಹೋದಳು ? ಆದರೆ ಎಲ್ಲಿಗೂ ಹೋಗದೆ ಒಬ್ಬಳೆ ಹೇಗೆ ಕುಳಿತಿರುವುದಕ್ಕಾದೀತು ? ಹೆಂಗಸರಿಗೂ ಬೇಜಾರೆನ್ನುವುದು ಇಲ್ಲವೆ ? ಅವರಿಗೂ ಸ್ನೇಹಿತರೂ, ಪರಿಚಯ-ವಿಶ್ವಾಸದವರೂ ಬೇಡವೆ?

ಇಷ್ಟೆಲ್ಲ ಸರಿ; ಆದರೆ ಸಂಜೆ ಹೊತ್ತೆ ಏತಕ್ಕೆ ಹೋದಳು? ಅದು ಏನೋ-ಅದು ಆ ಮುತ್ತೈದೆ ಪೂಜೆ?

ಇವನ ಕುತೂಹಲ ಕಡಿಮೆಯಾಗಲಿಲ್ಲ. ಅದೇನು ವಿಷಯ ಕೇಳಿಯೇ ಬಿಡಬೇಕೆಂದು ನಿರ್ಧರಿಸಿ ಕೇಳಿದ.

“ಏನ್ರಿ ಅದು ಜೀವಣ್ಣ ? ಏನಾಗಿ ಸತ್ತರು ನಿಮ್ಮ ಹೆಂಡತಿ? ಅದಕ್ಕೂ ಈ ಮುತ್ತೈದೆ ಪೂಜೆಗೂ ಸಂಬಂಧವೆ?”

“ಅಯ್ಯೋ, ಈಗ ಬೇಡಿ ಸಂಜೆ ಹೊತ್ತು. ಅದು ಮನಸ್ಸಿಗೆ ಭಯವಾಗೋದೆ!”

“ಏನು ನಾವು ಹುಡುಗರೆ? ಹೆಂಗಸರೆ? ಭಯ ಯಾಕೆ? ಪರವಾಯಿಲ್ಲ ಹೇಳಿ.”

“ನೋಡಿ, ನಾನು ಆಗ ಮಳವಳ್ಳಿಯಲ್ಲಿದ್ದೆ. ನಮ್ಮ ಮದುವೆ ಆಗಿ ಎರಡು ವರ್‍ಷ ಆಗಿತ್ತು. ಅಲ್ಲೂ ಹೀಗೆ ನಾಲ್ಕಾರು ಜನರ ಪರಿಚಯ. ಹೆಚ್ಚಿನ ಸ್ನೇಹ ಯಾರದೂ ಇಲ್ಲ. ಒಂದು ದಿನ ಯಾರೋ ಹೆಂಗಸು ಮತ್ತು ಒಬ್ಬ ಹುಡುಗ ಬಂದು, ನಮ್ಮ ಹೆಂಗಸರನ್ನು- ‘ಮುತ್ತೈದೆ ಪೂಜೆ ನಮ್ಮ ಮನೇಲಿ; ನಾಳೆ ಮಂಗಳವಾರ ತಪ್ಪದೆ ಬರಬೇಕು.’ ಅಂತ ಕರೆದು ಅಕ್ಷತೆ ಕಾಳಿಟ್ಟು ಹೋದರು. ‘ಹುಡುಗ ಬತ್ತಾನೆ ಕರಕೊಂಡು ಹೋಗೋಕೆ; ನೀವು ಸಿದ್ದ ಆಗಿರಬೇಕು,’ ಎಂದು ತಿಳಿಸಿದರಂತೆ-

ಅವರು ಯಾರು, ಯಾರ ಮನೆಗೆ ಹೋಗಬೇಕು, ಮನೆ ಎಲ್ಲಿ ಎನ್ನೋದು ಕೂಡ ತಿಳೀದು. ಈಕೆ ತನ್ನ ಪರಿಚಯದವರ ಹತ್ತಿರ ಇದನ್ನು ಹೇಳಿದಳಂತೆ. ಅವರಲ್ಲಿ ಒಬ್ಬಿಬ್ಬರು, ಅಯ್ಯೋ, ಅದಕ್ಕೇನು! ಹೋಗಿಬರಲೇ ಬೇಕು. ಯಾರಾದರೇನಂತೆ. ಅದು ಬಹಳ ಒಳ್ಳೆ ಕಾರ್ಯ. ಇದಕ್ಕೆ ಗುರುತು ಪರಿಚಯವೇ ಬೇಕಾ?’ ಹೀಗೆ ಏನೇನೋ ಹೇಳಿ, ಅದಕ್ಕೆ ಹೋಗಬೇಕಾದರೆ ಮಾಡಬೇಕಾದ ನಿಯಮ, ನಿಷ್ಠೆ ತಿಳಿಸಿದರಂತೆ. ಗಂಡನ ಸಂಪರ್‍ಕ ಇಲ್ಲದೆ ಇದ್ದು, ಆ ದಿನ ಅಭ್ಯಂಜನ ಸ್ನಾನಮಾಡಿ, ಅದೇ ದಿನ ಉಪವಾಸವಿದ್ದು, ಮಡಿ‌ಉಟ್ಟು ಸಂಜೆ ಅಲ್ಲಿಗೆ ಹೋಗಬೇಕಂತೆ.

ನಮ್ಮ ಮನೆಯವಳು, ‘ನಾನು ಒಬ್ಬಳೆ ಹೇಗೆ ಹೋಗಲಿ?’ ಎಂದುದಕ್ಕೆ ನೆರೆಮನೆಯಾಕೆ, ‘ನನಗೂ ಹೇಳಿದ್ದಾರೆ ನಾನೂ ಬರ್‍ತೇನೆ’ ಎಂದಳಂತೆ.

ಸರಿ, ಮಾರನೇ ದಿನ ಬಂದಿತು. ಆ ಹುಡುಗ ಹೇಳಿದ್ದಂತೆ ಬಂದ. ಬಂದು ಈ ಇಬ್ಬರು ಹೆಂಗಸರನ್ನೂ, ಇನ್ನೂ ಮೂರುಜನ ಹೆಂಗಸರನ್ನೂ ಕೂಡಿ ಕರೆದುಕೊಂಡು ಹೊರಟ.
ಸಂಜೆ ಗೋಧೂಳಿ ಸಮಯ. ಹುಡುಗ ಮುಂದೆ, ಮುಂದೆ-‘ಬನ್ನಿ, ಬನ್ನಿ ಜಾಗ್ರತೆ’ ಎನ್ನುತ್ತ ಹೋಗುತ್ತಿದ್ದಾನೆ. ಹೆಂಗಸರಿಗೆ ತಮ್ಮ ಮಾತಿನಲ್ಲಿ ತಾವೆಲ್ಲಿಗೆ ಹೋಗುತ್ತಿದ್ದೇವೆ, ಯಾವ ಸ್ಥಳಕ್ಕೆ ಎಂಬುದರ ಗಮನವಿಲ್ಲ. ಯಾವುದೋ ಬೀದಿ ಹಾದು, ಎಲ್ಲಿಯೋ ಹೋಗುತ್ತಿದ್ದಾರೆ. ಕತ್ತಲು ಮುಸಕು ಹಾಕುತ್ತ ಬಂದಿತು. ಆದರೂ ದಾರಿ ಸಾಗಿಲ್ಲ. ಎಲ್ಲಿಯೊ, ಎಲ್ಲಿಯೊ ಹೋದರು. ಯಾವುದೊ ತೋಪಿನಲ್ಲಿ ಹಾದು ಹೇಗೆ ತಿರುಗಿದಾಗ ಮನೆ ಸಿಕ್ಕಿತು. ಹುಡುಗ ಒಳಕ್ಕೆ ಹೋಗಿ ಬನ್ನಿ, ಇದೇ ಮನೆ’ ಎಂದನಂತೆ.

ಕಾಲು ತೊಳೆಯಲು ನೀರು ಕೊಟ್ಟ. ಎಲ್ಲರೂ ಹೊರಗೆ ಕಾಲು ತೊಳೆದುಕೊಂಡು ಒಳಕ್ಕೆ ಹೋದರು. ಒಳಗಡೆ ನಡುಮನೆಯಲ್ಲಿ ದೀಪದ ಕಂಭಗಳಲ್ಲಿ ದೀಪ, ಊದುಬತ್ತಿಯ ವಾಸನೆ, ಅದರಾಚೆ ಅಡಿಗೆ ಮನೆಯಿತ್ತೇನೊ. ಒಳಗೆ ಮಾತನಾಡುವ ಶಬ್ದ. ಹೊಗೆ ಮನೆಯೆಲ್ಲಾ ತುಂಬಿತ್ತು. ನಡುಮನೆಯಲ್ಲಿ ಮಣೆ ಹಾಕಿ, ಮಣೆ ಸುತ್ತಲೂ ರಂಗವಲ್ಲಿ ಇಟ್ಟು, ಪೂಜಾ ಸಾಮಗ್ರಿಗಳು, ಗಂಧ ಕುಂಕುಮ ಅರಿಶಿನ, ಹಸುರು ಕಣ, ಬಳೆ, ವೀಳೆಯದೆಲೆ ಅಡಿಕೆ ಇವೆಲ್ಲ ಇಟ್ಟಿದ್ದರಂತೆ. ಬಯಲಿನಲ್ಲಿದ್ದ ಮನೆ. ಹೊರಗಡೆ ಸುರ್! ಸುರ್! ಎಂದು ಗಾಳಿ ಸುರುಗುಟ್ಟುತ್ತಿತ್ತು. ಗಂಡಸರಾರೂ ಮನೆಯಲ್ಲಿ ಕಾಣಿಸರು. ದೀಪದ ಪ್ರಕಾಶ ಬಲು ಮುಂದ ; ಅದರಲ್ಲಿ ಹೊಗೆ ಬೇರೆ ಮನೆ ತುಂಬ ತುಂಬಿದೆ. ಆ ಹೊಗೆಯೊಂದಿಗೆ ಊದುಬತ್ತಿಗಳ ಹೊಗೆ ವಾಸನೆ. ಮನೆ ತುಂಬ ಹೊರಗೂ ಒಳಗೂ ಕಪಟಗಳು ಪಟಪಟ ಬಡಿದುಕೊಂಡು ಹಾರಾಡುತ್ತವೆ. ಹೊರಗೆ ಜೀರ್ ! ಜೀರ್ ! ಎಂಬ ಹುಳು ಶಬ್ದ. ಮೆತ್ತು ಹಾಕಿದ ಮನೆಯಲ್ಲ. ಒಂದೇ ಅಂತಸ್ತಿನ ಎತ್ತರದ ಹೆಂಚಿನ ಮನೆ. ಇಲ್ಲಣ ಮಾಲೆ ಮಾಲೆಯಾಗಿ ಸುತ್ತಿ, ಅಲ್ಲಲ್ಲಿ ಇಳಿಬಿದ್ದು, ಜೋತಾಡುತ್ತ ಹಾರಾಡುವ ಕಪಟಗಳ ರೆಕ್ಕೆ ತಗಲುತ್ತ ನೆಲದಮೇಲೆ ಧೂಳು ಉದುರಿಸಿ ಕೊಂಡು ಬೀಳುತ್ತ ಇತ್ತಂತೆ. ಆ ಮನೆಯ ರೂಪ ನೋಡಿದರೆ ಎಂದೂ ಯಾವ ಕಾಲದಲ್ಲೊ ಕಟ್ಟಿ, ಯಾವ ಕಾಲದಲ್ಲೂ ಜನ ವಾಸ ಮಾಡುವುದನ್ನು ಬಿಟ್ಟು, ಅಂದೆ ಆ ಮನೆಯಲ್ಲಿ ಯಾರೂ ವಾಸಕ್ಕೆ ಬಂದಂತೆ ಇತ್ತು. ಧೂಳು ಹತ್ತಿ, ಹೊಗೆಗೆ ಕಂದಿ ಅಲ್ಲಲ್ಲಿ ಮಳೆಗೆ ಸೋರಿ ಕೆಂದುಪಟ್ಟಿ ಬಳಿದಂತೆ ನೀರು ಇಳಿದಲ್ಲಿ ಆಗಿರುವುದು; ಗೋಡೆಗಳಿಗೆ ಬಳಿದ ಸುಣ್ಣ ಬಣ್ಣಗೆಟ್ಟು ಕೊಂಚ ಕೊಂಚವಾಗಿ ಕಾಣಿಸುವುದು. ಅವೆಲ್ಲ ಆ ಮನೆಗೆ ಅಂದೇ ಅವರು ವಾಸಕ್ಕೆ ಬಂದಿರಬೇಕು ಎಂಬುದನ್ನು ನಿರ್‍ಧರಿಸುವ ಹಾಗಿತ್ತು.

ಹೆಂಗಸರು ಬೆಪ್ಪು ಹಿಡಿದು ಹೆಚ್ಚು ಮಾತನಾಡದೆ ಗಟ್ಟಿಯಾಗಿ ಉಸಿರು ಕೂಡ ಬಿಡದೆ ಇದ್ದರು. ಕೊಂಚ ಹೊತ್ತಿನ ಮೇಲೆ ಒಬ್ಬ ಹೆಂಗಸು ಹಸುರು ಸೀರೆ ಉಟ್ಟು ಹಸುರು ಕಣ ತೊಟ್ಟು, ಮೈ ತುಂಬ ಒಡವೆ ಇಟ್ಟು ತಲೆಯ ಮೇಲೆ ಒಂದು ವಸ್ತ್ರವನ್ನೊ ಏನೊ, ಸುತ್ತಿದವಳಂತೆ ಇದ್ದವಳು ಬಂದಳು. ಅಂದು ಕರೆಯಲು ಬಂದ ಹೆಂಗಸೇ ಇರಬೇಕು ಇವಳು. ಆದರೆ ಅದು ಕೂಡ ಗುರುತಿಸಲು ಆಗುವಂತಿರಲಿಲ್ಲ.

ಬಂದವಳು ಅವರೆಲ್ಲರನ್ನೂ ಒಂದುಬಾರಿ ನೋಡಿದಳು. “ನೀವು ಬಂದದ್ದು ನನಗೆ ಬಹಳ ಸಂತೋಷ; ನೀವು ಬರ್‍ತೀರೋ ಇಲ್ಲವೋ ಎಂತಿದ್ದೆ. ಆದರೆ ಇಂಥ ಒಳ್ಳೆ ಕಾರ್‍ಯಕ್ಕೆ ಕರೆದರೆ, ಯಾರು ಬರೋಲ್ಲ? ಹೀ ! ಹೀ ಹೀ !!’ ಎಂದು ವಿಕಟವಾಗಿ ನಕ್ಕಳು. ಅವರ ಎದೆ ನಡುಗಿತು. ಅದೇಕೆ ಹೀಗೆ ನಗುತ್ತಾಳೆ? ಅವಳ ಮುಖ ಸ್ಪಷ್ಟವಾಗಿ ಕಾಣಿಸಲಿಲ್ಲ. ಅದೇನೋ ಮಸಕು, ಅಲ್ಲದೆ ತಲೆಗೆ ವಸ್ತ್ರ ಸುತ್ತಿದ್ದಾಳೆ. ಕಣ್ಣು ಮಾತ್ರ ಬೆಕ್ಕಿನ ಕಣ್ಣುಗಳು. ಅತಿಶ್ರಮದಿಂದ ಅವರೆಲ್ಲ ಮುಖವೆತ್ತಿ ನೋಡಿದರು. ಆ ಕಣ್ಣ ನೋಟದಲ್ಲಿ ಏನೋ ತೀವ್ರತೆ, ಕ್ರೋಧ, ನೋಡಿ ಭಯವಾಯಿತಂತೆ.

ಯಾವಾಗ ಇಲ್ಲಿಂದ ತಪ್ಪಿಸಿಕೊಂಡು ಹೋದೇವೊ, ಎಂದುಕೊಂಡರು.

ಆ ಹೆಂಗಸು ಅಷ್ಟು ಅವಸರ ಮಾಡಬೇಡಿ. ಕಾರ್‍ಯ ಸಾಂಗವಾಗಿ ನೆರವೇರಬೇಕು, ಇವೆಲ್ಲ ಪುಣ್ಯಕಾರ್ಯಗಳು, ಒಬ್ಬರಿಗೊಬ್ಬರು ಸಹಾಯವಾಗಬೇಕು. ತಮ್ಮ ಮನಸ್ಸಿನಲ್ಲಿದ್ದ ಭೀತಿಯನ್ನು ಆ ಹೆಂಗಸು ಹೇಳುತ್ತಾಳೆ! ಪುಣ್ಯಾತ್ಮಳೆ! ಸಾಕುಮಾಡು ಎಂದು ಮನಸ್ಸಿನಲ್ಲಿ ಅವರೆಲ್ಲ ಅಂದು ಕೊಂಡರು.

ಆ ಮನೆಯ ಇಡೀ ವಾತಾವರಣ, ಸನ್ನಿವೇಶ, ಅವರು ಹೋಗಿದ್ದ ಕಾಲ ಎಲ್ಲ ಹೇಗೊ ಇತ್ತು.

ಆ ಹೆಂಗಸು ಬಂದಳು. ಬಂದು ಒಬ್ಬೊಬ್ಬರನ್ನಾಗಿ ಪೂಜೆಮಾಡಿದಳು. ಕಾಲು ತೊಳೆದಳು, ಬಟ್ಟೆಯಿಂದ ಒರೆಸಿದಳು. ಅರಿಶಿನ ಕುಂಕುಮ ಹಚ್ಚಿ, ಗಂಧ ಬಳಿದು, ಹೂವಿಟ್ಟು, ಧೂಪ ಹಾಕಿ, ಕೈ ಮುಗಿದು ಕಾಲಿಗೆ ಬಿದ್ದಳು. ಆದರೆ ಅವಳಿಂದ ಇಷ್ಟು ಮಾಡಿಸಿಕೊಂಡರೂ ಒಬ್ಬಾಕೆಗೂ ಅವಳ ಕೈ ಸೋಕಿದ ಅರಿವೇ ಆಗಲಿಲ್ಲವಂತೆ. ಕಾಲುಮುಟ್ಟಿ ತೊಳೆದು ಒರಸಿದಾಗ, ಗಂಧ ಪುಷ್ಪ ಅರಸಿನ ಕುಂಕುಮ ಹಚ್ಚಿದಾಗ ಕೈ ಸ್ಪರ್ಶವೇ ತೋರಲಿಲ್ಲವಂತೆ.

ಇಡೀ ದಿನ ಉಪವಾಸವಿದ್ದುದೂ, ಎಣ್ಣೆ ಹಚ್ಚಿ ಸ್ನಾನ ಮಾಡಿದುದೂ, ನಂತರ ನಡೆದುಬಂದ ಶ್ರಮವೂ, ಈ ವಿಲಕ್ಷಣ ಸನ್ನಿವೇಶ, ಈ ಮನೆ, ಈ ಹೆಂಗಸು; ಇದೆಲ್ಲ ಹುಟ್ಟಿಸಿದ ಭಯ-ಏನೋ ಆಗಿಹೋಯಿತು ಹೆಂಗಸರಿಗೆ

ಆದರೆ ಹೆಂಗಸರು ಐದು ಜನರಿದ್ದರು. ಜನಗುಂಪು ಧೈರ್ಯಕೊಡುತ್ತದೆ. ತಮಗೆ ತಾವೆ ಧೈರ್ಯ ಹೇಳಿಕೊಳ್ಳುತ್ತಿದ್ದರು.

ಪ್ರತಿಯೊಬ್ಬರ ಮಣೆ ಹತ್ತಿರವೂ ಒಂದು ಹಸುರು ಕಣ, ಎಲೆ ಅಡಿಕೆ, ತಾಮ್ರದ ನಾಣ್ಯಗಳು ಐದು, ಒಂದು ಕಂಚಿನಪಾತ್ರೆ. ಎಲ್ಲ ಒಂದೇಸಮ, ಒಂದೇ ಆಕಾರ, ಒಂದೇ ಸಂಖ್ಯೆ.

ಹೆಂಗಸು ಊಟಕ್ಕೆ ಬಹಳ ದೊಡ್ಡ ಬಾಳೆ‌ಎಲೆ ಹಾಕಿದಳು. ಈ ಹೆಂಗಸರು, ಬೇಡ, ನಾವು ಮನೆಗೆ ಹೋಗುತ್ತೇವೆ; ಕಳಿಸಿಕೊಡಿ.’ ಎಂದರು.

ಆಕೆ ‘ಊಟಮಾಡದೆ ಹೋದರೆ ಹೇಗೆ? ಊಟಮಾಡಿ ಇದೂ ಮನೆಯೆ’ ಎಂದಳು.

ಊಟಕ್ಕೆ ಅನೇಕ ಬಗೆಯ ಭಕ್ಷಗಳು, ಅನೇಕ ಬಗೆಯ ಪಲ್ಯ, ನಂಚಿಕೆ, ತಿಂಡಿ, ಪಾಯಸ, ಒಂದೆ? ಎರಡೆ? ಎಷ್ಟೋ!

ಆ ಹೆಂಗಸು ಬಹಳ ವಿಶ್ವಾಸದಿಂದ, ಬಹಳ ಒತ್ತಾಯದಿಂದ ಬಡಿಸಿ ಇವರಿಗೆ ತಿನಿಸಿದಳು. ಹೊಟ್ಟೆಗೆ ಅನ್ನ ಬಿತ್ತು, ಹೆಂಗಸರು ಸ್ವಲ್ಪ ಸಮಾಧಾನವಾದರು. ತಾವೆ ಮಾತನಾಡಿಕೊಳ್ಳುವುದು, ನಗುವುದು, ‘ಅರಿಯದ ಸ್ಥಳ-ಹೀಗೇ ಎಲ್ಲರಿಗೂ’ ಎಂದು ಮಾತನಾಡಿಕೊಳ್ಳುವುದೂ ಆರಂಭವಾಯಿತು.

ಇಷ್ಟು ಆದರೂ, ಇಷ್ಟು ಹೊತ್ತು ಕಳೆದರೂ, ಆ ಒಳಗಿದ್ದವರು ಹೊರಗೆ ಬರಲಿಲ್ಲ; ಮನೆಗೆ ಬಂದವರ ಕೂಡ ಮಾತನಾಡಲಿಲ್ಲ.

ಆ ಹೆಂಗಸು ತಂದಿಟ್ಟ ಪಾತ್ರೆಯೊಂದರಲ್ಲಿ ಇವರು ಕೈ ತೊಳೆದುಕೊಂಡರು.

‘ನೀವು ಬಂದದ್ದು ನಮಗೆಷ್ಟೋ ಉಪಕಾರ; ನಿಮಗೆ ಬಹಳ ಶ್ರಮ ಕೊಟ್ಟೆ; ಹೋಗಿ ಬನ್ನಿ’ ಎಂದಳು.

ಇದುವರೆಗೂ ಇವರೊಬ್ಬರೂ ಅವಳೊಂದಿಗೆ ಮಾತನಾಡಿರಲಿಲ್ಲ. ನನ್ನ ಹೆಂಡತಿಗೆ ಏನೊ ಕುತೂಹಲ. ಒಳಗಿರುವವರು ಯಾರು? ಅವರು ಬರಲೇ ಇಲ್ಲವಲ್ಲ?’ ಎಂದು ಕೇಳೇಬಿಟ್ಟಳು.

‘ಯಾರೂ ಇಲ್ಲವಲ್ಲ!’ ಎಂದಳು ಆ ಮನೆಯಾಕೆ

‘ಮಾತನಾಡುವವರು ಯಾರು?’

‘ಯಾರೂ ಇಲ್ಲ.’

ಅಷ್ಟಕ್ಕೆ ಸುಮ್ಮನಾಗಿದ್ದರೆ ತೀರಿಹೋಗಿತ್ತು. ಆದರೆ ಚಿಕ್ಕ ವಯಸ್ಸಿನ ಚಾಪಲ್ಯ, ಕೇಳಿಸುತ್ತಿರುವುದು ಹೆಂಗಸಿನ ಧ್ವನಿ. ಅದು ಯಾರು ನೋಡೋಣ ಎಂದು ಸರಕ್ಕನೆ ಬಾಗಿ ಒಳಕ್ಕೆ ಹೋದಳು.

ಆ ಮನೆ ಹೆಂಗಸು ಕೂಡಲೆ ಬಂದು ಇವಳನ್ನು ನೂಕಿದಳು. ಏನೋ ಎದೆಗೆ ಬಡಿದಂತಾಯಿತು ಆದರೂ ಒಳಕ್ಕೆ ಹೋಗಿ ನೋಡಿದರೆ ಆ ಆಶ್ಚರ್ಯ ಏನು ಹೇಳಬೇಕು?

ಒಳಗೊಬ್ಬ ಮಹಾ ಆಕಾರದ ಹೆಂಗಸು ಒಲೆಯೊಳಕ್ಕೆ ಕಾಲುಚಾಚಿ, ಒಲೆ ಉರಿಸುತ್ತಿದ್ದಾಳೆ. ಇವಳ ಕಾಲ ಉರಿಯಿಂದ ಒಲೆ ಉರಿಯಾಗಿ, ಅಡಿಗೆ ಬೇಯುತ್ತಿದೆ. ಈಕೆಯನ್ನು ಕಂಡ ಅವಳ ಕಣ್ಣಿನಿಂದ ಬೆಂಕಿಯೇ ಹಾರಿದಂತಾಯಿತು. ಅಡಿಗೆಮನೆ ಭಸ್ ಎಂದಂತಾಯಿತು.

ಈಕೆ ನೋಡಿದುದಷ್ಟೆ. ಮಹಾ ಭೀತಿಯಿಂದ ಹೊರಕ್ಕೋಡಿಬಂದಳು. ಆ ಮೊದಲ ಹೆಂಗಸು ಕಾಣಿಸಲಿಲ್ಲ. ಹುಡುಗನೂ ಇಲ್ಲ. ಜೊತೆಯ ಹೆಂಗಸರು ಆಚೆ ನಿಂತಿದ್ದರು. ‘ಏನಾಯಿತು? ಏನಾಯಿತು? ಇದ್ಯಾಕಮ್ಮ ಹೀಗಿದ್ದೀಯ?’ ಎಂದು ಎಷ್ಟು ಕೇಳಿದರೂ ಇವಳು ಹೇಳಳು. ‘ಮನೆಗೆ ಹೊರಡೋಣ; ಇಲ್ಲಿ ಒಂದು ನಿಮಿಷ ನಿಲ್ಲೋದು ಬೇಡ!’ ಎಂದಳಂತೆ.

ಎಲ್ಲರೂ ಕಳವಳದಿಂದ, ಮಹಾಭೀತಿಯಿಂದ ಊರ ದೀಪದ ಬೆಳಕುಗಳ ಗುರುತು ಹಿಡಿದು ಊರಕಡೆ ಬಂದು ಮನೆ ಸೇರಿದರು. ಇವರಿಗೆ ಬರುವಾಗ ಅತ್ತ ಕಡೆ ತಿರುಗಿ ನೋಡುವ ಧೈರ್ಯವಾಗಲಿಲ್ಲ. ನನ್ನ ಹೆಂಡತಿ ದಾರಿಯಲ್ಲಿ ಬರುವಾಗ ಅವರಿಗೆಲ್ಲ ತಾನು ಕಂಡುದನ್ನು ಹೇಳಿದಳಂತೆ.

‘ಮನೆ ಸೇರಿದಾಗ ನನ್ನ ಹೆಂಡತಿಯ ಮೈ ಕಬ್ಬಿಣ ಕಾದಂತೆ ಕಾದಿತ್ತು. ಅಂದು ರಾತ್ರಿಯೆ ಹಾಸಿಗೆ ಹಿಡಿದು ಮಲಗಿದಳು. ರಾತ್ರಿ ಅಸಾಧ್ಯ ಕನವರಿಸಿದಳು. ಏನೇನೋ ಅಸಂಬದ್ಧವಾಗಿ ಮಾತನಾಡಿದಳು. ಏನೇನೋ ಒದರಿದಳು. ದೆವ್ವ! ಭೂತ! ಪಿಶಾಚಿ! ಹೀಗೆಲ್ಲ.

ಡಾಕ್ಟರು ಬಂದರು. ಏನೇನೊ ಮಾಡಿದರು. ಮಂತ್ರದವನನು ಹುಡುಕಿದುದಾಯಿತು. ಆ ಸಮಯಕ್ಕೆ ಯಾರೂ ದೊರೆಯಲಿಲ್ಲ.

ಮಾರನೆ ದಿನ ಆಕೆ ಸತ್ತು ಹೋದಳು.

ಕೆಲವರು ಇದಾದ ಮಾರನೆ ದಿನವೆ ಈ ಸುದ್ದಿ ತಿಳಿದು ಆ ಸ್ಥಳ ಪತ್ತೆ ಹಚ್ಚ ಬೇಕೆಂದು ಹೊರಟು, ಆರೇಳುಮೈಲಿ ಸುತ್ತಲ ಪ್ರದೇಶವನ್ನೆಲ್ಲ ಹುಡುಕಿದರೂ ಆ ಸ್ಥಳವಾಗಲಿ, ಅದರ ಕಿಂಚಿತ್ ಗುರುತಾಗಲಿ ಸಿಕ್ಕಬಾರದೆ?

ಈ ವಿಷಯವೆಲ್ಲ ಇವಳ ತಲೆಯ ಭ್ರಮೆಯಾಗಿರಬಹುದೆ ಎಂದು ಊಹಿಸಿದರೆ ಇವರು ತಂದ ಕಣ, ಎಲೆ ಅಡಿಕೆ, ದಕ್ಷಿಣೆ, ಆ ಕಂಚಿನ ಪಾತ್ರೆ ಇವೆಲ್ಲ ಇದೆಯಲ್ಲ!

ನಂಬುವುದೆ? ಬಿಡುವುದೆ? ಹೆಂಗಸು ಒಲೆಯೊಳಗೆ ಕಾಲಿಟ್ಟು ಒಲೆ ಉರಿಸುವುದೆಂದರೇನು?’

ಜೀವಣ್ಣರಾಯ ಹೇಳುವುದನ್ನು ನಿಲ್ಲಿಸಿ, ನಿಟ್ಟುಸಿರು ಕರೆದ.

ನಾಗೇಶರಾಯ, “ಅಯ್ಯೋ ! ಈ ಹಾಳು ಹೆಂಗಸರಿಗೇನು ಬಂದಿದ್ದೀತು? ಎಲ್ಲಿಗೆ ಹೋದರೊ? ಅಲ್ಲೇನು ಗತಿಯೋ? ಏನು ಮಾಡ್ಲಪ್ಪ ಈಗ?” ಎಂದು ಕಳವಳದಿಂದ ಎದ್ದು ಅಲ್ಲಿ ಇಲ್ಲಿ ಸುತ್ತಾಡಿದ.

ತಾನು ಹೇಳಬಾರದಾಗಿತ್ತು ಎಂದುಕೊಂಡು ಜೀವಣ್ಣ ಎದ್ದು, ಹೊರಡುವಾಗ ಹೇಳಿದ: “ಏನೊ ಒಬ್ಬರಿಗೆ ಹಾಗಾದರೆ ಎಲ್ಲರಿಗೂ ಹಾಗೇ ಆದೀತೆ? ನಿಮಗೆ ಅಂಥಾ ಕಳವಳ ಬೇಡ ; ಬರ್‍ತಾರೆ ಏಳಿ?”

ಜೀವಣ್ಣ ಬಾಗಿಲು ದಾಟಿದಮೇಲೆ ಕೂಗಿ “ನೋಡಿ, ನಿಮ್ಮ ಮನೆಯವರೆ ಬರೋ ಹಾಗಿದೆ” ಎಂದೂ ಹೇಳಿದ.

ನಾಗೇಶ ಓಡಿಬಂದು, ‘ಬಂದೆಯೇನೆ ಹಾಳಾದವಳೆ’ ಎಂದು ಹಾರಾಡ ತೊಡಗಿದ.

“ನೋಡಿ, ಸಾಯಂಕಾಲ, ಅದರಲ್ಲೂ ಶುಕ್ರವಾರ, ಹಾಗೆಲ್ಲ ಬೈ ಬಾರದು”
“ಸರಿಯಾಗಿದ್ದಿಯೇನೆ?”
“ಸರಿಯಾಗಿಲ್ಲದೆ ಏನು?”
“ನಿನಗೇನೂ ಆಗಲಿಲ್ಲವೆ?”
“ಏನಾಗಬೇಕ್ರಿ? ಏನ್ರಿ ನೀವು? ಹೀಗ್ಯಾಕಾಡ್ತೀರಿ ಇವತ್ತು” ನೆಲದ ಮೇಲೆ ಕುಕ್ಕರಿಸಿಕೊಂಡು ಅಳತೊಡಗಿದಳು-ಗಂಡ ಹೇಳಿದ ಅಮಂಗಳ ಮಾತಿಗೆ.

ನಾಗೇಶನಿಗೆ ಆಗ ಬುದ್ದಿ ಕೊಂಚ ತಿಳಿಯಾಯಿತು.
*****