ಬಾಲ್ಬಸ್ವವ್ರು

ಬಾಲ್ಬಸ್ವವ್ರು

ಚಿತ್ರ: ಸುಬ್ರತ್ ಪೌಡ್ಯಾಲ್
ಚಿತ್ರ: ಸುಬ್ರತ್ ಪೌಡ್ಯಾಲ್

ಮುಂಗೋಳಿ ಕೂಗಿದ್ದೇ ತಡಾ… ಸಿವಚಾಮ್ಗಿಳು ದಿಡಿಗನೆದ್ದ್ರು, ಯಿಡೀ ರಾತ್ರೆಲ್ಲ ಕೆಟ್ಕೆಟ್… ಕನಸ್ಗುಳು ಬಿದ್ದು… ಬಿದ್ದೂ… ನಿದ್ದೆ ಕಟ್ಕಾಟ್ಟಾಗಿ, ಮೇಲಿಂದ್ಮೇಲೆ…  ಯಗ್ರಿ… ಯಗ್ರಿ… ಬಿದ್ರು.. ಕೇರಿ ವರ್ಗಿನ ದುರ್ಗಮ್ಮನ ಗುಡ್ಕಿಟ್ಗೆ, ತಲೆ ಕ್ವಟ್ಟು… ಕಣ್ಮುಚ್ಚಿದ್ದೂ… ಕೆಟ್ಕೆಟ್… ಕನಸ್ಗುಳೇ… ಥೂ! ಪಾಪಿ ಯೆಲ್ಲಿ ಮಲ್ಗಿದ್ರೇನು? ದೇವ್ರ ಬಳಿಯಿದ್ದ್ರೂ… ವಂದೇ… ಮಾಯ್ದ ಮಗ್ರ ಬಂದೆಂಗೇ…  ನಿದ್ರೆ ಬರ್ದೆ…  ವಿಲ್ವಿಲಿ, ವದ್ದಾಡ್ವಿದ್ದಾಡಿ… ರಾವು, ಕೇತು, ಸೂರ್ಯ, ಚಂದ್ರ, ವಟ್ಗೇ ವೋಡಾಡ್ಸಿ… ನುಂಗಿ ನೀರ್ ಕುಡ್ದಿಂಗೇ… ನಕ್ಷತ್ರಗಳೆಲ್ಲ ವಗ್ಗೊಡಿ, ಸೂರ್ಯ ಚಂದ್ರ್ನ ಮುತ್ತಿದಂಗೇ… ಥೂ…! ದರಿದ್ರದಾ ಯೇಳು ಕನಸ್ಗುಳೂ… ಮೇಲಿಂದ್ಮೇಲೆ ಅವೇವೇ…! ಮಗ್ಲು ಬದ್ಲಿಸಿ ನೋಡ್ದಾ… ಸಾಕಾತು. ಯಿನ್ನು ಕೋಳಿ ಕೂಗಾದ್ನೇ ಕಾಯತೊಡ್ಗಿದ.

ದಿನ್ವಿಡೀ… ಯೀ… ವಾರ್ದಿಂದಾ… ಯೀ ಸುತ್ಲಿನ ವೂರು ಕೇರ್ನಿ… ಕಣ್ಗಳ್ನ..  ಬಿಡ್ದಂತೆ, ವೂರಾಡಿ… ವೂರಾಡಿ… ಕಾಲ್ಗುಳು ಬಿದ್ದೋಗಿ ಗಗ್ಗೀನ ಬಡ್ದು… ಬಡ್ದು… ಬಿಸಾಕ್ದಿಂಗೇ ಸ್ಥಿತಿಗೇ… ನಿದ್ದೆ ಕಿತ್ಹಕ್ಕಂಡು ಬರ್ಬೇಕಾಗಿತು!! ಅದೂ ಅಲ್ದೇ… ಮಾದ್ಗಿರಾ  ಮಂಡಣ್ಣ್ನ, ಮನಿಂದಾ ಸುಡ್ಸಾಡೋ… ಸಲ್ಕೆರುದ್ರ, ಆಕಳ್ದಾಲು, ಕಾಸ್ದಿನುಸಿ ತುಪ್ಪಾ, ಕೆನ್ಮೆಸ್ರೂ, ಮೆತ್ನೇ ಮುಳ್ಕಕ್ಕಿ ಬಾನಾ… ಮಲ್ಲಮ್ಮಗಡ್ಡೆ ಚಾರು, ವುಣ್ಸೆ ತೊಕ್ಕು, ಅಪ್ಪುಳ,  ಸಂಡ್ಗೆ, ತಪ್ಲುಪಲ್ಲೆ, ವುಳ್ಳಾಗಡ್ಡೆ, ಕೋಸಂಬ್ರಿ. ಮಚ್ಗೆಮೆಣ್ಸ್ನಿಕಾಯಿ, ತಂಬ್ಗೆ ತುಂಬಾ ಗಟ್ಮಾಜ್ಗೆ… ಜತ್ಗೇ ಪರಂಗೆಣ್ಣು, ಅತ್ತೆಣ್ಣು, ಜಿಬ್ಬೆಣ್ಣು, ಜಾಂಬೆಣ್ಣುಗಳಾ ಭರ್ಜರಿ ತಿಂದೂ… ತಿಂದೂ… ವಟ್ಟೆ ಕೆರ್ಕಟ್ಟೆಯಾಗಿದ್ಕೆ, ಯಲ್ಡಿಕೆ ಸುಣ್ಣ ಮೆದ್ಬು… ಕುಂತಲ್ಲೇ ತೂಕಡ್ಕೆ ಬಂದಿದ್ಕೆ… ಕೈ ತೊಳ್ದು, ಅಂಗೈನ ಲುಂಗ್ಬಿಟ್ಗೆ ಸೀಟ್ಗೊಂಡು. ಕರೀ ಕಂಬ್ಳಿಗೆ ತಲೆಕ್ವಟ್ಟಿದ್ದು ಲಾಭವಾಗ್ದೆ, ರಾತ್ರೆಲ್ಲ… ವಂದ್ಸಾಮನೆ ಯಚ್ರವಾಗಿ, ಕಣ್ಕಾಣ್… ಬಿಟ್ಟು. ‘ವುಳ್ಗರ್ಸಿಗೆ’  ಬಿದ್ಲು, ಡೇಗ್ದಿಂಗೆಲ್ಲ ದುರ್ವಾಸ್ನೇ… ಬರತೊಡ್ಗಿತ್ತು.

ಅಷ್ಟ್ರಾಗ, ನಾಲ್ಕೈದು ಮಂದಿ, ಕೇರಿ ಮಣೆಗಾರರು, ಸಿವಚಾಮ್ಗಿಳ್ಗೆ ಮೈ ತೊಳಿಯಾಕೆಂದು, ಗುಡಿ ಮುಂದ್ನಿ, ಗ್ವಾಡೆ ಸಾಟ್ಗೆ, ವಲೆಗುಂಡಿಕ್ಕಿ ಅನ್ವೂದಾ ‘ತಸ್ತ್ನಿ’  ತುಂಬಾ ನೀರಿಟ್ಟು, ‘ಧಗ್ಲು ಬುಗ್ಲು’ ಕತ್ತಾಳೆಪಟ್ಗೆ, ಸಪ್ಪೆದಂಟು, ಕೌಲೆಯಿಂದ ವುರಿಟ್ಟು ಛಳ್ಮಳಾ ನೀರ್ ಕಾಯ್ಸಿಲು, ಕುರಿ ಕ್ವಾಣ ಕಡ್ವೀಗಾ… ಮಾಡ್ದಂಗೆ ‘ಕವ್ಕ್‌ವ್‌…’  ಮಾಡತೊಡ್ಗಿದ್ರು.

೧ಲೇ… ಕರಿಯ, ಮರಿಯ, ವಲೆಯ, ಯಿಷ್ಟು ಅಳ್ವೆತಾರ್ನೇ, ಯೇನ್ ಕವ್ಕ್‌ವ್‌… ಮಾಡ್ತಿರ್ಲೇ?  ಮಾದ್ಗಿಮುಂಡ್ಮೆಕ್ಳೇ… ಯಿದ್ಕೆ ಮಾದ್ಗಿರಾಟೆನ್ವದು! ನಿರ್‍ಮುಳಾಗಿ ಕಣ್ಮುಚ್ಲು ಬಿಡ್ವುಲ್ರೀ! ಯಿಗಾ ಆ ಚಂಬ್ನಿ ತುಂಬಾ ಬಿಸ್ನೀರು ಕೊಡ್ರಾಲೇ… ವರ್ಕಡ್ಗೆ ವೋಗಿ ಬರ್ತೇನ್ರೆಲೇ…’ ಯೆಂದು, ಸಿವಚಾಮ್ಗಿಳು ಕೇರಿ ಮಣೆಗಾರರ್ಗೆ ಕೂಗಿದ್ದೇ ತಡಾ… ತುಟ್ಪಿಟ್ಕೆನ್ದೆ ಕರಿಯ, ಯಸ್ರು ಕಾದಂಗೆ ಕಾದ, ಬಿಸ್ನೀರ್‍ನ ಚಂಬ್ನಿ ತುಂಬಾ, ಅದ್ದಿ… ತಂದು ಚಾಮ್ಗಿಳ ಕೈಗಿಟ್ಟ! ಆಗ ಸಿವಚಾಮ್ಗಿಳು ಯಡ್ಗೈಲಿ ಚಂಬಿಡಿದು, ರಿಜ್ಲುಗಿಡ್ಗಳ ತೋಪಿನಾಗೆ ಕರ್ಗಿದ್ರು.

ಸಂಗ್ನಿ ವತ್ತ್ನಿ ಮೇಲೆ, ಸಿವಚಾಮಿಗ್ಳು ಅಸ್ರ ಬೇರ್ನಿಂದ ಅಲ್ಲುಜ್ಜುತ್ತಾ… ಕಂಕ್ಳುದಾಗೆ, ಯರ್ಡು ಪಕ್ಕೆ ಕಡೆ, ಮತ್ತೇ ಚಂಬ್ನಿ ತುಂಬಾ, ಬೇರುಗ್ಳು… ತಪ್ಲುಗ್ಳು… ಗುಳ್ದಕಾಯ್ಗಿಳೂ… ಗಿಡ ಮೂಲ್ಕೆಗ್ಳ್ನು ಗೊತ್ತಾಗ್ಲರ್ದಾಂಗೇ ತಂದ್ವುಗ್ಳ್ನ… ಮಣೆಗಾರರ್‍ಗೇನು?! ಯಾರ್ಗು ಕಾಣ್ದಂಗೇ ಕಳ್ರಾಂಗೇ… ತಂದು, ಯೇಳು ಪದ್ರ್ನಿ, ಕೆಂಪು ಜೋಳ್ಗೆ ಪಡ್ಪಿನೊಳ್ಗೆ ಬಚ್ಚಿಟ್ರು..! ಬಯ್ಲು ಸ್ನಾನಕ್ಕೆ ಬಡ್ಬಡಾ ಬಂದು, ಗೊಮ್ಮಟ್ನಂತೆ ನಿಂತ್ರು.

ಆಗ್ಲೇ… ನಾಲ್ಕು ಜನ ಮಣೆಗಾರರು, ಕೆಬ್ಣಮಡ್ಕೆ ಬುಡಾಯಿಡೋರು ಮಡ್ದಾಂಗೇ… ನಡ್ಕುಟ್ಟಾಕಿ, ತೆಂಗ್ನಿ ನಾರ್‍ಪಾಸಿ, ಅವೌಡ್ಲೆಣ್ಣೆ ಸವುಳು, ಸಬ್ಲು, ಅರ್ಸಿಣ… ಯಿಡ್ದು  ಗಲ್ಡುಗಂಬ್ದಂಗೇ ನಿಂತಿದ್ರು. ಮೈ, ಕೈ, ತಲೆ, ಬೆನ್ನು, ವಟ್ಟೆ, ಕಾಲ್ಗುಳ್ಗೆಲ್ಲ ಯೆಣ್ಣೆ ಸವ್ರಿ, ಗಸ್ಗಾಸಾ ತಿಕ್ಕಿ ತಿಕ್ಕಿ… ಸುಡ್ಸೂಡೋ.. ನೀರ್‍ನ ಆಕಿದ್ದೇ ತಡಾ, ಯಳ್ಗೇರು ಯಗ್ರಾಡ್ದಂಗೇ ಯಗ್ರಾಡಿ… ‘ರವ್ವಾಟು ತಣ್ಣೀರ್‍ಬೆಸ್ರುಲೇ… ದಗ್ದಿಗಂಡ್ರಾ,.. ಸುಟ್ಟು ಸುರ್ಮಂಡ್ಲಾ ಆದೇನು…’ ಯೆಂದು, ಚಾಮಿಗ್ಳು ಅಲ್ಲಾಲ್ಲು… ಮಸೆದ್ರು. ವಂದ್ತಾಸ್ತು ಕಾಯ್ಸಿದ ನೀರ್‍ನ ಬೆಸ್ರಿ ಬೆಸ್ರಿ… ತಣ್ಗೆ ಮಾಡಿ… ಮೂರು ಸ್ವಾರೇ ಗಡ್ಗೆಗಳು ತುಂಬಿ ತುಳ್ಕಿದ್ವು. ಮೈ, ಕೈ, ಬೆನ್ನು, ತಲ್ಗೆ, ಕಾಲ್ಗುಳ್ಗೆ ಮದ್ಲು ಸವುಳಾಕಿ, ಕರೀ ಯೆಮ್ಮೆಗೆ ವುಜ್ಜುಂಗೆ ತೆಂಗ್ನಿ ಪೀಸಿಂದಾ… ವುಜ್ಜೀ  ವುಜ್ಜೀ… ಮಣೆಗಾರರು ಸುಸ್ತಾದ್ರು. ತಿರ್ಗು ಸಬ್ಬು ತಿಕ್ಕಿ, ಮತ್ತೇ… ಮೀನ್ಗೆ ವುಜ್ದುಂಗೇ ವುಜ್ಜೀ ವುಜ್ಜೀ… ಪರ್ಕೆ ಮೈನ ಪರಂಗಿ ಮೈ ಮಾಡಿ, ಕೆಂಪು ವಲ್ಲಿಯಿಂದ ವಂದ್ಕಡೆಯಿಂದಾ ವರ್‍ಸಿ… ವರ್‍ಸಿ… ವುಬ್ಸಾ, ಆಯಾಸಾ, ಬೀಳ್ತಾ ನಿಂತ್ರು. ಚಾಮ್ಗಿಳು ವಳ್ಳೆ ಯೀದೆಮ್ಮೆಂಗೆ ಬಿಳ್ಚಿಗೊಂಡು, ಗುಮ್ಮೆಯಂಗೆ ಅಸ್ದು ನಿಂತ್ರು.
***

ಚಾಮ್ಗಿಳು ಗುಡಿಯೊಳಕ್ಕೆ ಬಂದ್ರು, ಮಟ್ಸಾಗಿ ‘ಚಕ್ಲುಬಕ್ತು’ ಆಕಿ ಕುಂತ್ರು, ಮೈ, ಕೈ, ತಲೆ, ಕಾಲು, ವಟ್ಟೆ, ಬೆನ್ನು, ಕತ್ಗೆ, ಯೀಗೆ ಮೂವತ್ತೆರಡು ಕಡೆ, ಯಿಬತ್ತಿ ಪಟ್ಟೆ ಯಳ್ದುಕೊಂಡ್ರು. ದಡೇವು ಗಾತ್ರದ ಬೆಳ್ಳಿ ಲಿಂಗ್ನ, ಅಂಗೈಲಿ ಯಿಡ್ದು, ಕಣ್ಮುಚ್ಚಿ ತುಟ್ನಿ ಪಿಟಿ ಪಿಟಿ… ಮಾಡಿದ್ರು, ವೂದ್ಗಡ್ಡಿ ಅಚ್ಚಿ ಬೆಳ್ಗಿ… ಸುಡ್ಸಾಡೋ ಕೆಂಡ್ದ್ಮೇಲೆ ಧೂಪ ಆಕಿ, ದೆವ್ವದಂತಾ ವಗ್ನೇಯೆಬ್ಸಿ, ಲಿಂಗಕ್ಕೆ ಧೂಪ್ದ ಆರ್ತಿಯೆತ್ತಿ, ಯೆಣ್ಣೆ ದೀಪ್ದ, ಕರ್ಪೂರ್ದ ಆರ್ತಿಯೆತ್ತಿದ್ರು. ಸಿವಚಾಮ್ಗಿಳು ಯಿಂದ್ಕಾ ಮುಂದ್ಕು… ‘ಆವು’ ತೊನ್ದೆಂಗೆ ತೊನ್ದ್ರು.

ಕೇರಿಯ ಮಣೆಗಾರ ತಿಮ್ಮಾ, ಕರಿಯ, ಮರಿಯ, ವಲಿಯ್ನ ಮನೀಂದ ಗದ್ಗಾದಾ ನಡ್ಗುಂಗೆ ಸುಸೀಲಾ, ಅತ್ತಿಕಾಯಿ, ಕಲ್ಸನ್ನ, ಅಸಿಟ್ಟು, ಆಲೂ, ತುಪ್ಪಾ, ಚಪಾಟ್ಲು, ವುರ್ಲುಗಡ್ಡೆ, ಚಾರೂ… ಗಟ್ಟಿಂಡಿ… ಯಣ್ಗಾಯಿ… ಯಡಿಯಂಗೆ ಚಾಮ್ಗಿಳ ಮುಂದಿಟ್ಟು, ಕಣ್ಣು, ಬಾಯಿ, ಬಿಟ್ಟು, ವಂಟಿಕಾಲ ಪಕ್ಷಿಯಂತೆ, ನೋಡ್ತಾ… ಮೈಮರೆತ್ರು.

‘ಯೇ… ಯೀಗ ಚಾಮ್ಗಿಳು ಭಿನ್ನ ತೀರ್ಸಾಸ್ತಾರೆ. ರವ್ವಾಟು ಗುಡಿವರ್ಗೆ ನಡ್ರೀ… ನಂತ್ರಾ ಚಾಮ್ಗಿಳ್ನ ‘ತಿಂಮ್ಮಂಗೇ ನೋಡ್ವುಂತ್ರಿ… ನಡ್ರಿ… ನಡ್ರಿ…’ ಯೆಂದು, ಕೇರಿ ಯಜಮಾನ, ಗುಡಿಯಲ್ಲಿದ್ದ ಜಂಗ್ಳು ಜನ್ರ್ನ… ವರಾಕೆ ಕಳ್ಸಿದ.

ಕೇರಿಯ ಯೆಂಗ್ಸುರು, ಗಂಡ್ಸುರು, ಮಕ್ಳು, ಮರಿ… ಸಪ್ಗೆ ಮಕ ಮಾಡ್ಕೊಂಡು ಭಾರ್‍ವಾದ ಕಾಲ್ಗುಳ ಯಳ್ಕೊಂಡು… ವರ್ಗೆ ತೆಬ್ಬರ್‍ಕರಂಗೆ… ನಿಂತ್ರು. ಚಾಮ್ಗಿಳು, ಮಣೆಗಾರ ಕರಿಯ, ಯೀ ಯಿಬ್ರೇ ಗುಡಿವಳ್ಗೆ ಸೇರ್ಕೊಂಡು, ಪರ್ದೇನ ಬಾಗ್ಲಿಗೆ ಅಡ್ಡೀಳಿ ಬಿಟ್ರು, ವಳ್ಗಿಂದಾ ಸಬ್ದ ಮಾತ್ರ ‘ಲಚ್ಕು… ಲಚ್ಕು…’ ಅಂತಾ ಬಾಳ ವತ್ನಿತನ್ಕ ಬರ್ತಾಲೇ ಯಿತ್ತು. ಗಟ್ಗಾಟಾ ನೀರ್ನಿ… ಢರ್ರ್ನೆ ಡೇಗ್ದಿ… ಸಬ್ಬ ಕೇಳ್ಬಂತು. ಬಾಗ್ಲಿಗಿಳ್ಬಿಟ್ಟಿದ್ದಾ ಪರ್ದೇನ ಸರ್ಸಿದ್ದೇ ತಡಾ… ಜನ್ರು ಯೆಜ್ಜೇನಂಗೆ ವಳ್ಕೆ ನುಗ್ಗಿ ಬಂದ್ರು, ಅಂಗೈ ವಡ್ಡಿ, ಕೈ ತುತ್ಗೆ ಮುಸ್ರಿದ್ರು, ‘ಅಡೇಕಮ್ಯಾಕ’ ಪೈಲ್ವಾನ್ರಾದು! ಯಿದು ಚಾಮ್ಗಿಳ್ಗೆ ನೀಗ್ದ ವಗ್ತ್ನವಾಯ್ತು. ಬೀಸಿ ಕ್ವಣ್ಗೆ ಗಂಗ್ಳಾ… ಮುತ್ಲೀನ… ಗುಡಿಯ ಪಾದ್ಗುಟ್ಟೆ ಕಡ್ಗೆ ವಗ್ದ್ರು. ಜನ್ರು ಅದ್ರುಗುಂಟಾ ವಾನ್ರಂಗೆ ಆರಿದ್ರು. ತೆಕ್ಮುರ್‍ಗೆ ಬಿದ್ದು… ನೆಲ್ದ ಮೇಲಿಂದು ಬಾಚಿ, ಪ್ರಸ್ದಾವೆಂದು ಅಂಗೈಲಿ ನೆಕ್ಕಿದ್ರು.

‘ವರ್‍ಸುಕ್ಕೊಮ್ಮೆ, ಯೀ ಚಾಮ್ಗಿಳು ಸುಗ್ಗಿಗೆ, ಯಿಗ್ಗಿಲಿ ತಪ್ದೇ ಯಿಂಗೆ ಬರಾದು. ವಾರ್ಗಟ್ಲೆ ಯಿರಾದು. ಬಂಡ್ಗಿಗಟ್ಲೆ ದವ್ಸ, ಧಾನ್ಯ, ಮೂಕ ಜೀವ್ಗಿಳ್ನ ಪಡ್ವೆದು, ಮುಂದ್ಲೂರ್ಗೆ ನಡ್ವೆರು. ಯಿವ್ರು ಯಿವ್ರಲ್ಲೆ ಯೀ ವೂರುಕೇರ್‍ಗಿಳ್ನ ಆಸ್ತಿಯಂಗೆ ‘ಅಕ್ಕಿ’ನಿಂದ್ಲೆ ಅಂಚ್ಗೊಂಡು ವೂರಾಡುವ್ರು. ಯೀ ಚಾಮ್ಗಿಳ ಪೂರ್ವಿಕ್ರು ಕುದ್ರೆ… ಆನಿ… ವಂಟೆ… ಪಲ್ಲಕ್ಕಿ ಮೇಲೆ ಬರ್‍ದ್ನಾ ನಾನೇ ನೋಡೀನಿ. ಯಿವ್ರ ಯಂಜ್ಲು ತಿಂದ್ರೆ, ರ್‍ವಾಗ… ರುಜ್ನಿಯೆಲ್ಲ ಅನ್ವೂ ಆಪತ್ತೆಲ್ಲ… ಮಂಗಮಾಯವಾಗ್ತೇವಂತಾ…’ ಮಣೆಗಾರ ಕರಿಯಣ್ಣ, ಕುಡ್ದಿ ಯಂಜ್ಲು ನೀರ್‍ನ ತೀರ್ಥದಂಗೆ, ಜನ್ರ ಕೈಯಾಕೆ ಚೆಲ್ಹಾಡಂಗೆ ಆಕ್ತಿದ್ದ. ಜನ್ರು ‘ಗಂಡ್ರುಗತ್ತಿಗ್ಳು’ ಮುತ್ದಿಂಗೇ ಅದ್ಕೂ… ಮುತ್ತಿದ್ರು.

ಚಾಮ್ಗಿಳು… ಅಳೆವಾತಾರ್‍ನೇ ವಳ್ಳೆ ತೂಗಿ, ವಟ್ಟೆ ಸವ್ರಾಡಂಗೇ ಯೆಂದ್ನಿಂತೇ… ತಗಂಡ್ರು. ‘ಯಿನ್ನು ವಾಟು ವಾಲ್ಕೋತನ್ಕ, ಅಂದ್ರೆ ವೂರಾಡೋದು ಮುಗ್ಯಾದು ತನ್ಕ… ಗುಕ್ ನೀರ್ ಮುಟ್ಟಂಗಿಲ್ಲ! ಕಾವಿ ಕಳ್ವಿದ್ಮೇಲೇನೇ… ಸ್ನಾನ ಮಾಡಿ. ವಟ್ಗೇ…’ ಯೆಂದು, ಸಿವಚಾಮ್ಗಿಳು ಅಂದು, ಗುಡಿಯ ಗ್ವಾಡ್ಗೆ ಮೇಟಿಗೂಟ್ದಂಗೆ ಕುಂತ್ರು, ಚಾಮ್ಗಿಳ ಸುತ್ತಾ… ಮಣೆಗಾರ ಮರಿಯಣ್ಣ, ಕರಿಯಣ್ಣ, ತಿಮ್ಮಣ್ಣ, ವಲಿಯಣ್ಣ… ತ್ವಟ್ಗು ಬಿಗುವ್ಲಿ ನಿಂತ್ರು. ಚಾಮ್ಗಿಳ ಪಾದ ತೊಳ್ದ್ರು ಯಿಬತ್ತಿ ಬಳಿದ್ರು, ಮಕ್ದ ತುಂಬಾ ಕೇಸ್ರಿ, ಬಿಳಿ, ಅಸ್ರು ಬಣ್ಣ ಬಳಿದ್ರು. ಕಣ್ಗುಳ್ಗೆ ಕಾಡ್ಗೆ ತೀಡಿ, ತುಟ್ಗಿಳ್ಗೆ ಜೇನುತುಪ್ಪಾ ಸವ್ರಿದ್ರು. ತಲ್ಗೆ ಕಾವಿಪೇಟ, ಕೊರ್‍ಳಿಗೆ ದಡೇವು ಲಿಂಗ, ಆರು ನಮೋನೆಯ ರುದ್ರಾಕ್ಷಿ ಸರ್ಗಳ್ನ ಯಿಳ್ಬಿಟ್ರು. ಮೈತುಂಬಾ ರಂಗುರಂಗ್ನಿ ಕಾವಿ… ಕಪ್ನಿ ತೊಡ್ಸಿ, ಐದು ಬೆರ್ಳುಗಳ್ಗೆ ಪಂಚಪಾಂಡ್ವರೆಂಬಾ ಲೋಹದ ಬಸ್ವನ ವುಂಗ್ರುಗ್ಳು ಯಿಟ್ರು. ಯಡ್ಗೈಗೆ ಜಂಟಿ ಜಂಗ್ನಿ ನಾಗಬೆತ್ತವಿತ್ರು. ಯೆಗ್ಲಿಗೆ ಜರತಾರ್‍ಸಿಲ್ಯಗಳ ಯಿಳ್ಬಿಟ್ರು, ನಡ್ವಿಗೆ ಜರ್ತಾರಿ ಪಟ್ನಿ ಬಲ್ವಾಗಿ ಬಿಗಿದ್ರು. ಕಿವ್ಗಿಳ್ಗೆ ಜೋತು ಬೀಳಂಗೆ ಕರ್ಣ ಕುಂಡ್ಲಗ್ಳ ಆಕಿದ್ರು. ಕಾಲ್ಗಳ್ಗೆ ಚಂದನ್ದ ಆವ್ಗೆಗ್ಳ ತೊಡ್ಸಿದ್ರು. ಕೈಯಲ್ಲಿ ಆದಿದೇವತೆಯ ತಂಬೂರಿಯಿಟ್ರು, ಯಡ್ಗೆಡೆ ಭುಜ್ಕೆ ಐದು ಪದ್ರ್ನಿ ಕಾವಿ ಜೋಳ್ಗೆ ಆಕಿ, ವಳ್ಳೆ ಮದ್ಮಗನಂಗೇ ಸಿದ್ಧ ಮಾಡಿ, ಮಣೆಗಾರರೂ ಯಿರೀಯಿರೀ… ಯಿಗ್ಗಿ, ತೇಟು ‘ಅಣ್ಣ ಬಸ್ವಣ್ಣನೆಂದೂ…’ ಯಿಲ್ಲಾ ‘ನಾರ್ದ ಮಾಮುನ್ಗಿಳೆಂದೂ…’ ಅವ್ರವಲ್ಲೇ ಬಣ್ಸಿತೊಡ್ಗಿದ್ರು.

ಅವ್ದು… ಸಿವಚಾಮ್ಗಿಳೆಂದ್ರೆ.. ಮಣೆಗಾರರಿಗೇನು? ವೂರಾಗ್ನಿ ಗೌಡ್ರಿಗೇ ಢಬ…ಢಬ… ಯಿಡೀ ಸುತ್ತೇಳು ಅಳ್ಳಿಗೇ ಪಂಚಾಂಗ ಸಾಸ್ತ್ರ ಯೇಳ್ವು, ಮದ್ವೆ, ಮುಂಜಿ, ಮಾಡ್ಸಿ, ಅಸುಗೂಸ್ಗುಳ್ಗೆ ಯೆಸ್ರು, ತಾಯ್ತ, ಅಂತ್ರ, ಮಂತ್ರ, ಮದ್ದು, ಮಾಟ, ದಾಟು, ಸಾಂತಿ ಮಾಡಿಸ್ವು, ವುಚ್ಚು ಬಿಡ್ಸುವ, ಗಿಡಮೂಲ್ಕೆ ರಸವಿದ್ಯೆಗಳಲ್ಲಿ ಮಾತ್ರವಲ್ಲ, ಗಗನಗಾಮ್ನಿ ವಿದ್ಯಾಪರಿಣಿತರೆಂದು ಯೆಸ್ರಾದವ್ರು, ಅರಿದೋಗ್ವ ಯೇಳಡೆ ಸರ್ಪನ ಅಲ್ಲೇ ನಿಲ್ಸಿದ ಭೂಪರೆಂಬಾ ಸಿದ್ಧ ಪ್ರಸಿದ್ಧ ವ್ಯಕ್ತಿ, ಶಕ್ತಿಯಾಗಿದ್ದರು. ಯೇಳ್ಡೆ ಯೆತ್ರದ ಆಳ್ಗೆ ವಪ್ಪುವ ಅಗಲ್ವಾದ ಯದೆ, ವುದ್ನೇ ಕೈ, ಕಾಲ್ಗುಳೂ… ದುಂಡ್ನೇ ಕಣ್ಗುಳೂ, ಅಗ್ಲುವಾದ ಮಕ, ಚೂಪು ಮೂಗು, ಬೆಳ್ಳಕ್ಕಿಯಂಗೆ ಅಲ್ಗುಳೂ… ತ್ವಂಡೆ ತುಟಿ, ವುದ್ನೇ ಬೆರ್‍ಳುಗ್ಳು…  ಜನ್ರು ‘ಅಬ್ಸಾ… ಯೇನು ರಾಜಕಳೆ? ಅದೇನು ಠೀವಿ. ಮೈಕಾಂತಿ… ಮಹಾ ಶರಣ್ರು… ನಮ್ಮ ಅಣ್ಣ ಬಸವಣ್ಣನವ್ರು ಬಂದ್ರು… ನಮ್ಮ ತಂಬೂರಿ ನಾರದ ಮಹಾಮುನಿಗಳಿಗೇ… ದಾರಿ ಬಿಡ್ರೀ…’ ಯಂದು, ಜನ್ರು ದಾರಿ ಬಿಟ್ಟು ಮಾರು ದೂರಾ… ಹರ್ದಾರಿ… ವೋಡಿದ್ರು.

ಬಾಳಸಂತ್ರು, ಮೋಡಿಗೊಲ್ರು, ಅಗ್ಲುವೇಸ್ದವ್ರು.. ಯೀ ಚಾಮ್ಗಿಳ ಅಪ್ಣೇ ಪಡ್ದೇ ವೂರಾಡುವರೆಂದೂ… ಜನ್ರು ಗುಸ್ಗುಸು… ನಡ್ಸಿದ್ರು! ಯಿದೇ ಸಮಯ ಸಾಧಿಸಿ ಕರಿಯಣ್ಣ ಜೋರಾಗಿ, ‘ಜಯ… ಜಯ… ಸಿವಚಾಮ್ಗಿಳ್ಗೇ… ಬಾಲ್ಬಸ್ವವ್ರಿಗೇ… ಸುಬ್ವಾಗ್ಲಿ… ಜಯವಾಗ್ಲಿ… ಕೊಡ್ಕೆಲ್ಲು ಮಾರಾಜರಿಗೆ, ಗೋಣಿಬಸ್ವೇಶ್ವರರ್ಗೇ… ಅಣ್ಣ ಬಸ್ವಣ್ಣ, ಕಲಿಯುಗ್ದ ನಾರ್ದಮಾಮುನ್ಗಿಳ್ಗೇ… ಜಯವಾಗ್ಲಿ…’ ಯೆಂದು ಗಂಟ್ಲು ಅರ್ಕೊಂಡ! ಜನ್ರ ಗುಂಪಿನಾಗೆ ಗೋವಿಂದವೆಂದ್ರು, ದಾರಿಯುದ್ದಕ್ಕೂ… ಜನ್ರು ಅಡ್ಡಾಡ್ಡಾ ಬಿದ್ದು ಬಿದ್ದು… ಯದ್ರು…  ಸಿವಚಾಮ್ಗಿಳು ಆ… ಕ್ಷಣ ಕಣ್ಣು ಮುಚ್ಚಿ… ಯೇನೋ… ಗಹ್ನಾವಾಗಿ… ನೆನ್ಪೆಸ್ಗೊಂಡ್ರು..
‘ಬಂದ್ರೋ… ಬಂದ್ರೆನ್ನ್ರೋ…
ಬಾಲ್ಬಸ್ವವ್ರು ಬಂದರೆನ್ನಿರೋ…
ಮುಂದ್ನಿ ದಿನ್ಮಾನ್ಗಳು
ಬಲುಕೆಟ್ಟ ಬರ್ತಾವೆ
ವುಪ್ರಿಗೆ ಮೇಲ್ನಿವ್ರು ತಿಪ್ಗೆ…
ತಿಪ್ಪೆಲ್ರಿವ್ರು ಸಿಂಹ್ಸಾನದಲಿ…
ಗಳ್ಸಿಬೇಡ್ರೀ…
ಹಳ್ಸೀ ವೋಗ್ವುದು…
ಬಳ್ಸಾರು ಬರ್‍ವುರು…
ಬಂದ್ರೋ ಬಂದ್ರೆನ್ನ್ರೋ
ಸಿವಶರಣ್ರು..’

ಯೆಂದು, ತಂಬೂರ್‍ನಿ ಅದ್ಭುತ್ವಾಗಿ ನುಡಿಸ್ತಾ… ಕಮಲ್ದ ‘ವೂವು’ ಅರ್ಳುವಂತೆ, ಮೆಲ್ಲ ಮೆಲ್ಗೇ.. ಚಾಮ್ಗಿಳು ಕಣ್ಣು ಬಿಡ್ವುದಕ್ಕೂ… ಬಾಲ ಸೂರ್ಯ ಮಾಡ್ದ ಮರಿಂದಾ ಕಣ್ಣು ಬಿಡ್ವುದಕ್ಕೂ ಸರಿಯಾಯ್ತು! ಜನ್ರು ಜಯಘೋಷ ಹಾಕಿ, ಪುನೀತರಾದ್ರು…

‘ಯೀ ಚಾಮ್ಗಿಳು ತುಂಬಾ ಅಠಯೋಗಿಗ್ಳು… ಸಿದ್ಧರು, ಪ್ರಸಿದ್ಧರು… ಸತ್ಯವ್ರತಾನಿಷ್ಟರೂ… ಮಡಿ, ಮೈಲ್ಗೆ, ಆಚಾರ, ವಿಚಾರ್ಗಳಲೀ… ನಿಸ್ಸೀಮ್ರು. ಕಠಿಣ ವುಪಾಸ್ಗಿಳು… ಆದಿಶೈವರೆಂದೇ ಖ್ಯಾತ್ರು. ಅಪ್ಪಟ ಸಸ್ಯಹಾರಿಗ್ಳು… ನಡೆದಾಡ್ವು ದೈವ, ವೈದ್ಯ… ಸಿವ್ರಾತ್ರಿ, ನಾಗ್ರಪಂಚ್ಮಿ, ಬಸ್ವಜಯಂತಿ, ನಾಡಬ್ಬ, ವುಗಾದಿ, ಸಂಕ್ರಾಂತಿ, ವುಣ್ಮೀ, ಅಮಾಸ್ಗೆ, ಯಿವ್ರು… ಸಾರ್‍ವು ಕಾಲಜ್ಞಾನ ವೇದ, ಮಂತ್ರ… ಮೈನಡ್ಕು ಭರಿಸುವಂತಿರುತ್ತದೆಂದೂ… ಸನಿಪುರ್‍ಣಾ, ಸಿವ್ಪುರ್‍ಣಾ, ಬಸ್ವಪುರಾಣ, ಗೋಣೀಬಸ್ವಚರಿತೆ, ಅರ್‍ಳಯ್ಯ್ನ ಸಾಂಗತ್ಯ, ಕಲ್ಯಾಣಮ್ನ ಕ್ರಾಂತಿ, ನಳಚರಿತೆ, ಪಂಚಾಂಗ ಪಟಣ… ಅರುಂಧತಿ ಕಲ್ಯಾಣ, ಬಾಲ್ನಾಗಮ್ಮನ ಚರಿತೆ, ಅಬ್ಬಾ! ಯಿವೆಲ್ಲ ಚಾಮ್ಗಿಳ್ಗಿ ಬಾಯಿಪಾಠ. ದಿನ್ವೆಲ್ಲ ಯೇಳಿದ್ರು ರೋಸ್ಗಿಂಬಗಿಲ್ಲ. ಜನ್ರೇ ರೋಸ್ಗಾಬೇಕು…’ ಯೆಂದು, ಜನ್ರು ಅವರವಲ್ಲೇ… ರೆಕ್ಕೆ ಪುಕ್ಕಾ ಹಚ್ಗಿಂಡು… ಮುಸ್ನಿ ವುಬ್ಸಿಗೊಂಡು ಪುಟ್ಟಿತುಂಬಾ ಯೇಳ್ತಾ ನಿಂತ್ರು.

ಸಿವಚಾಮ್ಗಿಳು ವೂರಾಡ್ಲು, ಮಣೆಗಾರ್‍ನ… ಯಿಂದಿಟ್ಕೊಂಡು, ಯೆಂದ್ನಿಂತೆ, ದಾರಿ ಅಳೆಯತೊಡ್ಗಿದ್ರು… ದಾರಿವುದ್ದಕ್ಕೂ ಸಾಲುಗಟ್ಟಿ ದೈನಾವಸ್ಥೆಲಿ… ನಿಂತಿದ್ದ, ಭಕ್ತಗಣ್ಗಳ್ಗೆ… ಬಿಲ್ಪಾತ್ರೆ, ಬನ್ನಿತಪ್ಲು, ಹಣ್ಗುಳೂ… ಆಧಾರ… ಭಂಡಾರ… ಯಿಬತ್ತಿ… ಲೋಭಾನ್ದ ಪುಡೀನ ಕೈಯಾಕೆ ಆಕ್ತಾ ಆಕ್ತಾ… ವೋದ್ರು. ಜನ್ರು ಕುರಿಬಿದ್ದ ಜಾಡ್ನಿಂತೆ, ಅದ್ನ ‘ಗಬಕ್ಕ್ನೇ…’ ಯಿಡ್ಕೊಂಡು ಅಣ್ಗೆ ವತ್ತಿಕ್ಕೊಂಡ್ರು… ಬಾಯಾಕೆ ಆಕ್ಕೊಂಡ್ರು,… ಕುಣಿದು, ಕುಪ್ಳಿಸಿ, ಮತ್ತೆ… ಮತ್ತೆ ಜಯಘೋಷ ಮಾಡಿ, ಪುನೀತರಾದ್ರು.
***

‘ಸರ್ಗಾ’ ಮೂರ್ಗೆಣೆಂಬಂತೆ. ಚಾಮ್ಗಿಳು ಅವ್ರಾ ಯಿಂಬಾಲ್ಕ್ರು… ವೂರ್ಕಡೇ… ರವ್ದೆ ನಡ್ದಂಗೇ ನಡ್ದಿದ್ರು ಯಿದ್ದಕ್ಕಿದ್ದಂತೆ… ಅವ್ವೌರಿ ‘ಆವು’ ತುಳ್ದಿಂಗೆ ಯಗ್ರಿ ಬಿದ್ದು ನಿಂತ್ರು.

‘ಬ್ರಿಟ್ಸಿರು ಕಾಲ್ದಿಂದಾ ನಾ ನೋಡ್ತಾ ಬಂದೀನಿ, ಸುತ್ತೇಳು ಅಳ್ಳ್ಯಾಗೇ ನಮ್ನ ಯದ್ರುಗೊಂಬ್ಲು ತಪ್ಡೆ, ವುರ್‍ಮೆ, ಕುಂಭಾ, ಕಳ್ಸಾ… ಡೊಳ್ಳು, ತಪ್ಡೆ…. ಮೇಳ, ಆರ್‍ತಿ, ಕೊಂಬು, ಕಾಳೆ, ಸಂಕ, ಜಾಗ್ಟೆ, ಭಜ್ನೇ… ತಗಂಡು ಬಂದಿದ್ದ್ನ ಕಂಡೀವ್ನಿ! ಅಂತಾದ್ರಲ್ಲಿ ಯೀ ವೂರು ಕೇರಿಯವ್ರೇನ್ಲೇ… ದಾರ್ಗೆ ಅಡ್ಡಾಗಿ ಜಾಲಿಬೇಲಿ ಯಟ್ಟಾವಟ್ಟಿ, ಅಳೇ ಚಕ್ಕಡಿ ಯೆಳ್ದು ತಂದು ನಿಲ್ಸಿ, ಐದಾರು ಜನ್ರು ಕೈಯಾಗಿ ಅನ್ವೂದ ಬಡ್ಗೆಗಳ್ನ ಕ್ವಟ್ಟು ನಿಲ್ಸಿದ ಗುಂಡುಕಲ್ಯಾರಲೇ… ?!’ ಚಾಮ್ಗಿಳು, ಮಣೆಗಾರ್‍ನ ಪ್ರಶ್ನಿಸ್ತಾ… ದುರ್‍ದೂರೂ ನೋಡ್ತಾ… ಕಕ್ಕಾಬಿಕ್ಕಿಯಾಗಿ ನಿಂತ್ರು.

‘ಯಪ್ಪಾ… ನಮ್ಗು ಅದೇ ತಿಳಿವಲ್ದು. ಮುಂಜಾಲಿಂದ ಯಡ್ಗೆಡೆ ವುಬ್ಬು, ಭುಜಾ… ಆರ್‍ತಿದೆ. ಅಂಗೈ, ಅಂಗಾಲು ತಿಂಡಿಕ್ಕಿದೆ. ಯೇನೋ… ‘ಗ್ರಾಗತಿ’ ಕಾದೈತಿ, ಮುಂದ್ನಿದ್ದು ಅಪ್ಣೇ ಕೊಡ್ರೀ ಚಾಮ್ಗಿಳೇ…’ ಯೆಂದು ತಿಮ್ಮಣ್ಣ. ಚಾಮ್ಗಿಳ್ಗೆ ಅಂಗ್ಲಾಚಿ ಹಂದಿಯಂಗೇ… ನಿಂತ.

‘ನನ್ ಪ್ರತಾಪ, ರುದ್ರಾವತಾರ, ನಮ್ ವಂಸ ಪರಂಪರೆ ಯೇನಂತಾ ತಿಳ್ದಿ ಬುದ್ಧಿಗೇಡಿಗ್ಳ ಕೆಲ್ಸವಿದು! ಕಲ್ಯಾಣ್ದ ಕ್ರಾಂತಿ, ಪುರ್‍ಸುಸಿಮ್ಮಾ ಅಣ್ಣ ಬಸ್ವಣ್ಣನ ದತ್ತು ಪುತ್ರ ಯೀ ಬಾಲ್ಬಸ್ವನೊಂಬ್ದು ತಿಳಿಯದಿವ್ರಿಗೇ…! ರವ್ವಾಟು ಆ ಜನ್ರಿಗೆ ತಿಳ್ಸಿ ಬನ್ರೀ…’ ಯೆಂದು ಚಾಮ್ಗಿಳು, ಮಣೆಗಾರ ಮರಿಯ್ನ ಅವ್ರಲ್ಗೆ ಕಳ್ಸಿಕೊಟ್ರು.

‘ಅಯ್ಯಾ… ಅವ್ರು ಬಾಲ್ಬಸಪ್ಪನವ್ರು… ಕಲಿಯುಗ್ದಣ್ಣ ಬಸವಣ್ಣನವ್ರು… ಕುಲ್ದಪದ್ಧತಿಯಂಗೆ ಯೀವತ್ತು ಯೀ ವೂರಾಡ್ಲು ಪ್ರತಿ ವರ್‍ಸುದಂಗೆ, ಯೀಗ ಬಂದಾರೆ. ದಾರಿ ಮಾಡಿಕೊಡ್ರೀ… ಮಾಚಾಮ್ಗಿಳ ಅಗ್ರವಿದೆ’ ಯೆಂದು ಮರಿಯಣ್ಣ, ಅಡ್ವಿದ್ದವ್ರಿಗೇ ಯೆದ್ರಿಸ್ದಿ.

‘ಯೇ… ಅಂಗೆಂದ್ರೆ ಯಾರು? ಅವ್ರಿಗೆ ಮೂರು ಕೊಡ್ವೀಯೇ?’ ಕಣ್ವೆಯೇ ದಾರ್ಗೆ ನಿಂತಿದ್ದವನೊಬ್ಬ ಗೊತ್ತಿಲ್ದವನಂತೆ ಸೊಕ್ಕಿಲಿ… ಕೇಳ್ದಿ.

ಸಿವಚಾಮ್ಗಿಳು ಕೆಂಡಮಂಡ್ಲವಾದ್ರು. ಅವ್ರೇ ಸೀದಾ ಜನಲ್ಲಿಗೆ ವೋದ್ರು. ‘ಅಯ್ಯಾ… ಬಾಲ್ಬಸ್ವವ್ರು ಅಂದ್ರೆ ನಾವೇ. ಬೇಡೋ ಜಂಗಮ್ರು. ತ್ರಿಕಾಲಜ್ಞಾನ ಸಾರೋ ಕಲಿ ಬಸ್ವರು. ಸಿವಪಾರ್ವತಿಯ ಸಾಕುಮಕ್ಳು. ನಾರ್ದ ಮಹಾಮುನಿಯ ಮಾನ್ಸಪುತ್ರರು. ಆದಿಜಾಂಬವ ಮುನಿಮಗ ಬಾಲಮುನಿಯ ವಂಶಸ್ಥರು. ೧೨ನೇ ಶತಮಾನ್ದ, ಅಣ್ಣ ಬಸ್ವಣ್ಣನತ್ತಿರವಿದ್ದ ವಂದು ಲಕ್ಷ ೯೬ ಗಣಂಗಳಲ್ಲಿ ಬಾಲಬಸವನಿದ್ದ. ಅವ್ನ ಸಂತತಿಯವರು. ಲಿಂಗವಂತ ಮಾದ್ಗಿರು… ಗೋಣಿ ಬಸವೇಶ್ವರರ ವಂಶಜರು… ಬಾಲ್ಸಂತ್ರು… ಯಿನ್ನು ಬೇಕೇ? ಸಾಕೇ? ದಾರಿ ಬಿಡ್ರೀ… ವಟ್ಟೆ ಮೇಲೆ ಬಡಿದು, ರವರವಾ ನರ್‍ಕು ಕಾಣ್ಬೇಡ್ರೀ…’ ಯೆಂದು, ಸಿವಚಾಮ್ಗಿಳು ಅಡ್ಲಿಪಡ್ಸಿದವ್ರಿಗೆ, ಪರಿಪರಿಯಾಗಿ… ಬೇಡಿಕೊಂಡ್ರು.

‘ನಿಮ್ಗೆ ಯೀ ವೂರುಕೇರಿಯೊಳ್ಗೇ ಯೇನು? ಯೀ ಸುತ್ತೇಳು ಅಳ್ಳಿಗಳ್ಗೇ ಪ್ರವೇಸವಿಲ್ಲ. ಯೀವೂರ್ನಿ ದಡ್ ಧಣಿ, ಜಿಲ್ಲಾ ಪಂಚಾಯ್ತಿ ಆಲೀ ಅಧ್ಯಕ್ಷ ಸಿನ್ನಪ್ಪನವ್ರು ನಮ್ನ ಯಿಲ್ಲಿ ನಿಲ್ಸಿ ವೋಗ್ಯಾರೆ… ನಾವು ನಿಮ್ನ ಬಿಡಲ್ಲ…’ ಯೆಂದು, ಗುಂಪಿನಾಗೆ ಗೋವಿಂದು ಅಂದ. ವುಳ್ದಿವ್ರು ಕಾಗೆಯಂಗೆ ವಂದೇ ಸಮ್ನೇ ಅರ್ಚುದ್ರು.

‘ಅವುದಾ? ಯಾಕೆ? ಯೀ ನಮ್ ಚಾಮ್ಗಿಳೇನು ಗಢಾರೆಡೊಂಕು ಮಾಡ್ಯಾವ್ರೇ?? ಯೀಗ ಕಾರುಣ ಯೇಳ್ರೀ?? ಬೆಂಕಿಯಂಥಾವ್ರ್ನ, ಯದ್ರು ಹಾಕಿಕೊಳ್ಳು ಬೇಕಾ?’ ಯೆಂದು ತಿಮ್ಮಣ್ಣ ಮೆಲ್ಗೇ… ಬಟ್ಟೆ ಆವ್ನು ಬಿಟ್ಟ!

‘ಥೂ! ನಿಮ್ ಯೋಗ್ಯತೆಗಿಷ್ಟು ಬೆಂಕಿ ಆಕಾ… ಡಬ್ಬಾ, ಗಿಲೀಟು, ಬಕೀಟು ನನ್ಮಕ್ಳೇ… ಸತ್ತ ದನಾ ತಿನ್ನೋ ಮಾದ್ಗಿ ನನ್ಮಕ್ಳೇ… ಕಾವಿಯಿಂದೆ ಅಡ್ಡಾಡ್ಬಿಟ್ರೇ ನೀವು ಕೋವಿಯಾಗ್ತೀರಾ ಕುಡ್ಕು ನನ್ಮಕ್ಳೇ… ಅವ್ರಾ ಕುಂಡಿ ಬುಡ್ದಲ್ಲಿ ಡೊಗ್ಗಿಕ್ಕೊಂಡು, ಯಂಜ್ಲು ಕಾಸು, ಕಾಳು, ಕಡಿ, ಬಟ್ಟೆ, ಬರ್‍ಗೆ… ಕೂಲಿಗೆ… ಅವ್ರಾ ತಿಕಾಮಕಾ ವುಜ್ಜಿ ಸಾಕ್ರೀ ಮಾಡಿ, ತಲೆಯಿಡಿಯೋಕೆ ನಾಚ್ಕೆಯಾಗಲ್ವೇನ್ರಲೇ?? ಅಳೇ ಕಾಲ್ಮರಿ ವಲ್ದು ಜೀವ್ನ ಮಾಡಿದ್ರೆ. ಆ ಜಾಂಬ್ವುಂತ್ನಾದ್ರು ಮೆಚ್ಚ್ಯಾನು! ಛೀ…ಯೀ ಆದ್ಕೊಂಡು ತಿನ್ನೋ ಕೆಲ್ಸ ಯಿನ್ನೆಷ್ಟು ವರ್ಸುಲೇ?? ಯೀಗ ನಮ್ ಗುರು, ಕಲಿಯುಗ್ದ ಬಲಭೀಮ ಅಂಬೇಡ್ಕರಪ್ಪ ಬರ್ತಾನೇ… ನಿಮ್ಗೆಲ್ಲ ಪೂಜೆ ಮಾಡ್ತಾನೆ! ರವ್ವಾಟು ತಡ್ಕಳ್ರೀ…’ ಯೆಂದು, ತಿಪ್ಪೇಗ್ಳ ವುಳಾಮನ್ಗೆ ಬರಾತನ್ಕ ಗುಂಪಿನಾಗೆ ಗೋವಿಂದ, ಯೀ ಯಿಂಬಾಲ್ಕರ್‍ನ ಬೈದಿಕ್ಕಿದ.

ಸಿವಚಾಮಿಗ್ಳು, ಯಿಂಬಾಲ್ಕ್ರು… ಮಕಾ ಮಕಾ ಸೊಪ್ಪು ಬಾಡ್ಸಿಗೊಂಡಂಗೆ ನಿಂತ್ರು. ಅಲ್ಲಲ್ಲು ಮಸ್ತೇ, ನೆಲಮುಗ್ಲು… ನೋಡ್ತಾ… ಕಬ್ಬಕ್ಕಿಗಳಂಗೆ ನಿಂತ್ರು. ಕಾಡ್ನಿ ಸಿಂಹವಾದ್ರು… ನಾಡ್ಗೆ ಬಂದ್ರೆ… ಯಿದೇ ನಾಯಿಪಾಡು! ಯೇಗೋ… ಆಗೇ… ಯೀಗಿವ್ರ… ಪಾಡಾತು!  ಭರ್ತ ಚಕ್ರವರ್ತಿಯ ಚಕ್ರರತ್ನ ಪುರ ಪ್ರವೇಶಿಸ್ದೆ, ವರ್‍ಗೆ ನಿಂತಾಗ ಆದ ಅವಸ್ಥೆಯಂತೆ, ಯೀಗ ಯೀ ಸಿವಚಾಮ್ಗಿಳ್ಗೇ ಆಯಿತು. ಯಿಂದೆ ಮುಂದೆ ಜನ್ರುಜಂಗ್ಳು ದನ್ಗಳಂಗೆ ಹಂದ್ಗಿಳಂಗೇ… ಗುಂಪು… ಗುಂಪಾಗಿ ನಿಂತಿದ್ರು. ಯರ್‍ಡು ಕಡ್ಗೇ ಕಣ್ಣಾಡ್ಸಿದ್ರು. ಮುಂದೆ ವುಲಿ, ಯಿಂದೆ ಧರೀ… ಅಡ್ಕತ್ರೀಲಿ ಸಿಕ್ಕಿ ವಿಲ ವಿಲ ವದ್ದಾಡಿದ್ರು. ಸಿವಚಾಮ್ಗಿಳ್ಗೆ, ‘ಬಿರ್‍ಗ್ನ’ ಆರ್ನೇ ಇಂದ್ರಿಯ ಕೆಲ್ಸ ಮಾಡ್ತು. ಯಿಂಬಾಲ್ಕರೊಂದ್ಗೆ ಗುಸ್ಗೂಸೂ… ಮಾಡ್ದ್ರು. ಅವ್ರೂ ವುರುಪ್ಲೇ ಕಣ್ಣರಳ್ಸಿ… ತಲೆಯಾಡ್ಸಿ… ಕರಿಯಣ್ಣ, ಮರಿಯಣ್ಣ, ವಲಿಯಣ್ಣ, ಗಿರಿಯಣ್ಣ… ಸೇರಿ, ದಿಕ್ಕು ದೆಸ್ಗೋಬ್ರು ವೋಡಿದ್ರು.
***

ಯಿತ್ಲಾಗ… ಸಿವಚಾಮ್ಗಿಳು, ಆಶೋಕವನ್ದಾಗೆ, ಸೀತೆಯಂಗೇ… ವಬ್ಬೊಂಟ್ಗಿರಾದ್ರು, ನಿಂತು… ನಿಂತು… ಯೇಳು ಅನ್ನೊಂದಾದ್ರು, ಬಿಸ್ಲಿಗೆ ಮಕ ತೂತು ಮಣ್ಬಟ್ಲುವಾದ್ರು. ಬಲು ಯಿಂದ್ಲುದು ಗಕ್ಕ್ನೆ ನೆಪ್ಗೆ ಬಂತು… ಮನ್ತುಂಬಾ ಮಕ್ಳಿದ್ರೂ… ಯೀ ಕುಲ್ಕಸ್ಬು ಮಾಡ್ಲು ವಬ್ರೂ ವಲ್ಲೆ ಅಂದ್ರು. ಯಿದ್ನೆಲ್ಲ ಕೋತಿ ವಿದ್ಯೆಯೆಂದ್ರು. ಪಟ್ಣ ಸೇರಿ, ಭೇಸು ಮಾಡಿದ್ರು. ಯೀಗ್ನಿ ಜನ್ರ ಅತ್ರಾ ಭಯ, ಭಕ್ತಿ, ಧರ್‍ನಾ, ಕರ್ಮಾ, ನೀತಿ, ನಿಜಾತಿ ಬಲು… ಕಡ್ಮೆಯಾಗಿದೆ. ಕಾಲ ಕೆಟ್ಟು ಕೆರ್‍ಡೀದೈತಿ. ಕಲಿಯೆಂದ್ರೆ… ಆಡಾನ್ಬೂ… ಕೆಡ್ಸಾನ್ಬೂ… ಕೇಡು, ವಟ್ಟೇಕಿಚ್ಚು, ಸೇಡು, ವಣ್ಮಾತು. ಮುಂಜಾಲೆದ್ದು ಯಾರ್ಮಕ ಮುಂಡಾಮೋಸ್ದೇ ಯೇನೋ… ಯೆಂದು, ಪೇಸಾಡಿದ್ರು, ಬಳ್ಳಾರಿ ಬಿಸ್ಲಿಗೆ ವಳ್ಳೆ ವಣಮೀನು ಬಾಯಿಬಿಟ್ಟಂಗೆ ಸಿವಚಾಮಿಗ್ಳು ಬಾಯಿಬಿಟ್ರು. ಕುಂತ್ರೆ ಕಾವಿ ಬಟ್ಟೆಗಳು ಮೈಲ್ಗೆ… ನಿಂತ್ರೇ ಕಾಲ್ಗುಳು… ಬಿದ್ದೋಗ್ತಾವೋ… ವಳ್ಳೆ… ತ್ರಿಶಂಕುಸ್ವರ್ಗವಾಯ್ತು…

ಬಾಳಾ ವತ್ತ್ನಿ ಮೇಲೆ, ಪೊಲೀಸ್ ಅಧಿಕಾರ್‍ನಿ, ಬಿಟಿಯಸ್ ಕುಲ್ಕರ್ಣಿ, ಶಾನುಭೋಗ್ರ್ನ, ಗೌಡ್ರ್ನ… ಜತ್ಗೇ ಕರ್ಕೊಂಡು ಬರ್‍ವುಲ್ಲಿ… ಮಣೆಗಾರರ ಮೀಸ್ಗೆಳು ವುಲಿಯಂಗೆ ನಿಮ್ರಿ ನಿಂತಿದ್ದವು.

ಕಣ್ಣಳ್ತೆಯಿಂದ್ಲೆ… ಚಿನ್ನಪ್ತ್ನ ಕಂಡು, ಗೌಡ್ರು… ಬಿಟಿಯಸ್ ಕುಲ್ಕರ್ಣಿಯವ್ರು, ಶಾನುಭೋಗ್ರು ಅಳೇ ಬಂಡಿ ನಡ್ಗಿದಂಗೆ ನಡ್ಗಿ… ‘ಅಯ್ಯಯಪ್ಪಾ… ಯಿದೆಲ್ಲ ಯೀ ಸಿನ್ನಪ್ಪ್ನ ಕಾರುಭಾರೆಂದ್ರೆ… ನಾವಲ್ಗೆ ಕಾಲ್ಡಿಲ್ಲಪ್ಪಾ… ಅವ್ನು ಮದ್ಲೇ ಮುಂಗೋಪಿ, ಕಟ್ಗು… ಅವ್ನು ಯದ್ರು ವಾದ್ಸಿ ಗೆಲ್ಲೋಕಾಗಲ್ಲ. ಗುರ್‍ವಿಗೇ ತಿರ್ಮಂತ್ರ ಕಲ್ಸಿ, ಸೆಂಟ್ರಲ್ ಕಾಲೇಜ್ ನಡ್ಗಿಸಿ, ನಾಕ್ಸಾರಿ… ಜೈಲು ಕಂಡ್ವಾನೇ… ನಾಲ್ಕು ಪದ್ವಿಗಳ್ಸಿ ವುನ್ನತ ಪರೀಕ್ಷೆಗಳ್ನ ಪಾಸು ಮಾಡಿ, ಗುರುವಾಗಿ ಅದ್ನ ವದ್ದು, ಅಳೇ ಕಾಲ್ಮರಿ ವಲ್ಬು, ಮುಂದೆ ಬಂದ್ವನು! ಅವ್ನಿಗೆ ಪಿತ್ತ ನೆತ್ರಿಗೇರ್ಸಿದ್ರೆ ಮದ್ಲು ಕಾಲ್ಮರಿಲೇ ಪಟಿಪಟೀ… ಯಿಕ್ಕಿ… ಯಿಕ್ಕಿ… ತಿರ್‍ಗಿ ಮಾತಾಡ್ತಾನೆ! ಯೀ ಸುತ್ತೇಳು ಅಳ್ಳಿಗೇ ಗುಂಡಾ… ಗಟ್ಗಿ, ಜಗಜಟ್ಟಿಗಾ, ಧನಿಕ, ಡಾನ್, ಕಿಂಗ್, ಲಯನ್, ಕ್ರಿಮಿನಲ್, ತಿರ್ಪುಗಾರ… ಅವ್ನ ತಂಟೆ ನಮಗ್ಯಾಕಪ್ಪಾ…’ ಯೆಂದು, ತ್ರಿಮೂರ್ತಿಗಳು ಯಿಂದೆ ಸರ್‍ದ್ರು. ಅವ್ನ ಯಿಂದೆ ವುಳ್ದಿ ಜನ್ರು ‘ಯಿಮ್ದಂಗೆ’ ಕರ್ಗಿದ್ರು.

ಪೊಲೀಸ್ ಅಧಿಕಾರ್‍ಗಿಳೊಂದ್ಗೆ ಮಣೆಗಾರರೂ… ಪೂಜಾರ್‍ಗಿಳೂ… ವಸಾವಸಾಽ… ಮಕ್ಗಳ್ನ ಕಂಡು, ತಾರಾಡ್ತಾ ನಿಂತಿದ್ದ ಸಿವಚಾಮ್ಗಿಳ್ಗೆ ತ್ವಟ್ಗು ತ್ರಾಣ ಬಂತು. ಆ ಕ್ಷಣ ಮಕ ಭಾರತದ ಭಾವುಟವಾಯಿತು! ಮೈ ತುಂಬ್ದಿವರಂತೆ… ಆವೇಷದಲಿ…

‘ವೋರ್‍ವಾವಾಗ್ವುದು ಕಲಿಯ್ಗುದಳಿನ್ನು…
ಗೆದ್ದವ್ರು ಸೋಲ್ವುರು..
ಬಿದ್ದವ್ರು ಯೇಳ್ವುರು…
ವಳ್ಗಿಂದು ವರ್‍ಗೇ…
ದೂರದ್ದು ಯಿಲ್ಲೇ…
ಯೇನು ಗೆದ್ದರೂ ಸಾವು ಗೆದ್ದವ್ರುಂಟೆ…
ಬೆಳೆಯನ್ನು ಯಿಳೆ ನುಂಗ್ವುಳು…
ಮೇಗ್ದ ಮಳೇನ ‘ಮಾಯತೆ’ ನುಂಗ್ವುಳು..
ವರ್‍ಗೆ ವೋದ್ವರು, ಮನ್ಗೆ ಬರ್‍ವುದು ನೇಮವಿಲ್ಲ…
ಶರಣರ ಯೀ ಮಾತು ತಪ್ದಿರೆ…
ಆಣ್ಣ ಬಸ್ವಣ್ಣನಾಣಿ…’

ಯೆಂದು ಸಿವಚಾಮ್ಗಿಳು ವುಬ್ಬೀಬ್ಬೀ… ಅರ್ಥವಾಗದ, ವಗಟಿನಂತೆ, ತಲ್ಲೀನರಾಗಿ ತಂಬೂರಿ ಮೀಟುತ್ತಾ… ಹಾಡಿದರು.

‘ರೀ… ಸ್ಟಾಮ್ಗಿಳೇ, ಸಾಕು ನಿಲ್ಸಿರೀ! ಯೀ ನಿಮ್ಮ ಢೋಂಗಿ, ಆಷಾಢಭೂತಿತನ! ಯಿಷ್ಟು ವರ್‍ಸು ಜನ್ರುನ ಮರ್‍ಳು ಮಾಡಿ, ನೀವು ವಟ್ಟೆ ಬಟ್ಟೆ, ಜಾತಿ, ಮತ, ಧರ್ಮ ಮೇಲು ಕೀಳು… ಬೆಳ್ಸಿದ್ದು ಸಾಕು. ನಿಮ್ಗೆ ಅಂತಃಸಂಸ್ಕೃತಿಯಿಲ್ಲ. ಸ್ವಾಮ್ಗಿಳೆಂದ್ರೆ… ನಮ್ಮ ಸ್ವಾಮಿ ವಿವೇಕಾನಂದ್ರು… ರಾಮಕೃಷ್ಣಪರಮಹಂಸರು… ಸತ್ಮೇಲು ಸಾವಿರಾರು ವರ್ಷ… ಬದುಕಿದ್ದಾರವ್ರು… ಅಂಗೇ… ಬದುಕಿರ್ಬೇಕು. ಅಂಗೆ ಬಾಳಿ, ಬದುಕಬೇಕು. ಬೇರೆಯವ್ರುನೂ ಬಾಳ್ಸಿ, ಬದುಕ್ಸಿಬೇಕು! ಜೀವ್ನಾಂದ್ರೆ…. ಅಂಗೇ… ನೀವು ಮಾದಿಗ್ರಾಗಿ, ದ್ರಾರ್ಷ್ಟ್ಯದಲಿ, ಠೇಂಕಾರ್ದಲಿ, ಮಾದಿಗ್ರ್ನಾ ನಡ್ಸಿಕೊಳ್ಳದಲ್ದೇ… ಜಾತಿ ಭೇದ ಮಾಡುತ್ತಾ ಸರ್ಕಾರ್ದ ಸವಲತ್ತು ಪಡೆದೂ, ಧರ್ಮಾಂಧರಾಗಿ; ಮತಾಂಧರಾಗಿ… ಅಸ್ಪೃಶ್ಯತಾರ್ಚಣೆ, ಶೋಷಣೆ ಮಾಡೋ, ನೀವ್ಯಾವ ಸೀಮೆ ಶರಣ್ರು…? ಜಂಗ್ವಂತ್ರು? ಬಾಲ್ಬಸ್ವವ್ರು?? ನಾನೂ ಬ್ರಿಟಿಷರ ಕಾಲ್ದಿಂದಾ ನೋಡ್ತಾ ಬಂದೀನಿ. ನೀವು ಮಾದಿಗ್ನ ವರ್ಗೆಯಿಟ್ಟಿರೀ… ಯಿನ್ಮೇಲೆ ನೀವ್ಯಾರು ವೂರಾಡ್ಬಾರಾದು. ಯೀಗ ಯೀ ಮಾದ್ಗಿರಿಂದ್ಲೇ ನಿಮ್ಗೇ ಬಹಿಷ್ಕಾರ, ಧಿಕ್ಕಾರ, ದಿಗ್ಭಂಧನ…’ ಚಿನ್ನಪ, ಚಾಕುವ್ನಿಂದ ಯಿರ್‍ದುಂತೆ ಮಾತು ವಗ್ದೆ. ಜನ್ರು ಬೆಪ್ಪಲ್ರಾಗಿ ನಿಂತ್ರು.

‘ಚಿನ್ನಪ್ಪಾಽ… ನೀ ಯೆಸ್ರಿಗೆ ತಕ್ಕಂತೆ, ಚೊಕ್ಕ ಚಿನ್ನವಾಗಿರು. ಪರೋಪಕಾರವೇ ಪುಣ್ಯ. ಪರಾಪಕಾರವೇ ಪಾಪ! ಸತ್ತ ದನಾ ತಿನ್ನೋ ಮಾದ್ಗಿರಿಗೇ ಸಂಬ್ಳ ದುಡಿಯೋ… ಕೊಳ್ಗೇರಿಲಿರ್‍ವೂ ಮಾದ್ಗಿರಿಗೇ ನಾವು ಯೆಣ್ಣು ಕೊಡ್ತೀವಿ. ಯೆಣ್ಣು ತರ್ತೀವಿ, ನಾವೂ ಮಾದ್ಗಿರೊಟ್ಗೆ ಅಲ್ವೇ ನೆಲೆಸಿರುವುದು! ಯಿದು ವಳಜಾತಿಗಳ ಜಗ್ಳಾ… ಲೆಕ್ಕಾಚಾರ… ಭೇದಭಾವನೆ! ವೊಳೊಳ್ಗೆ ಯಿಂಗ್ಡಿಸಿಕೊಳ್ಳೋನ. ನಮ್ ನಮ್ಮಲ್ಲೇ ಯೀ ಕೋಳಿ ನಾಯಿ… ಬೀದಿ… ಜಗ್ಳ ಬೇಡ. ಆ ಚಂದ್ರನಲ್ಲಿ ಕೂಡಾ ೧೬ ದೋಸ್ಗಳಿವೆ. ಕಲ್ಗೆಳಿವೆ… ಕಾವಿ, ಖಾಕಿ, ಖಾದಿಯಲ್ಲಿ ನೀ ದೋಸ ವುಡ್ಕುಬೇಡ. ಯೀ ಮೂರು ಕಟ್ಟಿರುವೆಗಳಿದ್ದಂಗೇ! ನೀ ಕೈಯಿಕ್ಕಿದ್ರೆ… ಕೆಟ್ಟೇ… ಯೀ ಚಾಮ್ಗಿಳ ವಟ್ಟೆ ಮೇಲೆ ಬಡ್ದಿರೇ ನಿನ್ಗೆ ವಳ್ಳೇದಾಗಲ್ಲ… ದಾರಿ ಬಿಡ್ರೀ…’ ಯೆಂದು, ಸಿವಚಾಮ್ಗಿಳು ಮಕ್ಮಾಕಾ ಸಿಡ್ರಿಸಿಗೊಂಡ್ರು.

‘ಥೂ! ಸ್ವಾಮ್ಗಿಳಾಗಿ, ನೀವು ಯಿಂಥಾ ಮಾತಾಡಬಹುದೇ? ಯೆದೆ ಮುಟ್ಟಿ ಯೇಳೀ… ನೀವು ಮಾದ್ಗಿರ್‍ನ ಮನೆಯೊಳಕ್ಕೆ ಬಿಟ್ಟುಕೊಳ್ತೀರಾ? ಪ್ರೀತಿಸ್ತೀರಾ?! ಅವ್ರೊಂದ್ಗೆ ವೂಟ ಮಾಡ್ತೀರಾ? ಮತ್ತೆ ಮಾದ್ಗಿರ್‍ನ ಯಿಂದಿಟ್ಟುಕೊಂಡೇ ವೋರಾಡ್ತೀರಾ…!! ಯೇಗಿದೆ ನಿಮ್ಮ ಸಂಸ್ಕೃತಿ, ವ್ಯವಹಾರ… ಆಚರಣೆ? ನಿಮ್ ಮಗ್ನ, ಮಾದಿಗ್ರ ಮಣೆಗಾರ ಮಂದಣ್ಣ… ಯೀನೋ ಕುವ್ವಾಡ್ಕೆ ನಕ್ಕು, ಮೈಕೈ ಮುಟ್ಟಿ ಅಂತಾ… ರೊಚ್ಚಿಗೆದ್ದು, ನಿಮ್ ಯೆಂಗ್ಸ್ರು… ಮಕ್ಳು… ಮರೀ, ಅವ್ನು ಬೇವ್ನಿಮರಕ್ಕೆ ಕಟ್ಟಿ, ಅಳೇ ಕಾಲ್ಬರಿ, ಕೊಳ್ಗೆ ಕಟ್ಟಿ, ಬಡ್ದು, ಯಲಡ್ಕೆ ಯಂಜ್ಲು ವುಗ್ಳಿ, ಬಾಯಾಕೆ ‘ಆಟೋಯ್ದು’ ಕತ್ತೆ ಮೇಲೆ… ವೂರು, ಕೇರಿ, ತುಂಬಾ ಮೆರ್‍ವಣ್ಗೆ ಮಾಡಿ, ಯೀಗಾ ವೂರಾಡ್ಲು… ಯಾವ ಮಕವಿಟ್ಟುಕೊಂಡು… ಬಂದೀರಿ?? ಆ ಯೇಲು ತಿನ್ನೋ… ಕೋಳಿ ಯೆಸ್ರು ಯೆತ್ಲು… ನಿಮ್ಗೆಲ್ಲಿದೆ ಆ ಯೋಗ್ಯತೇ?! ಕೋಳಿ… ತನ್ನ ಬಳ್ಗ್ನ ಕರ್ದು, ಕೆದ್ರಿ ಕೆದ್ರಿ… ಬೆವ್ರು ಸುರ್ಸಿ… ತಿಂದು, ತಿನ್ಸುತ್ತೆ… ತನ್ನ ಬಳ್ಗನಾ ಅದ್ದು, ಕಾಗೆ, ರಣಪಾತ್ಗುಳಿಂದ ವೋರಾಡಿ ರಕ್ಷಿಸುತ್ತೆ… ಬೆಳಿಗ್ಗೆ ಬಲುಬೇಗ ಯೇಳ್ತೆ… ಯಿಡೀ ಜನ್ರನ್ನೇ ಯೇಳ್ಸುತ್ತೆ. ಹಳ್ಳಿಗ್ರಾ ಅಲಾರಾಮ್… ನಡೆದಾಡ್ವು ಚಿನ್ನದ್ಮರಿ. ಅದ್ಕೆ ವಿಪ್ರೀತ ಪರೋಪಕಾರ ಬುದ್ಧಿ… ನಿಮ್ಗೆಲ್ಲೈತಿ?’ ಯೆಂದು, ಚಿನ್ನಪ್ಪ… ಸ್ತಾಮ್ಗಿಳ್ನ ಯಳ್ಳು ಕೊಡ್ವಿದಂಗೆ ಕೊಡ್ವಿದ.

ಸ್ನಾಮ್ಗಿಳ ಕಣ್ಣಲ್ಲಿ ಗಂಗೆ, ಕಾವೇರಿ, ತುಂಗಾ, ಭದ್ರೆ ತುಂಬಿ ಅರಿದ್ಲು. ‘ಅವ್ದು… ಕಾವಿಯಿಂದ ನಾವಿನ್ನು ವರಬಂದಿಲ್ಲ. ಜನ್ರ ಆದೀನಾ ಬೇಕೇ ವರ್‍ತು, ಅವ್ರ ಕ್ಷೇಮ ಬೇಕಿಲ್ಲ. ಯಿತಿಹಾಸ ನಮ್ನ ಕ್ಷಮ್ಸಿದು. ನಮ್ಮ ತಪ್ಪು ಯೆತ್ತಿ ತೋರ್‍ಸಿದೆ. ಕಣ್ಣು ತೆರ್‍ಸಿದೆ. ತಪ್ಪಾತು. ಬಾವಿಯೊಳ್ನಿ ಕಪೇನ ವರ್‍ಗೆ ಬಿಟ್ಟು, ವುಪುಕಾರ ಮಾಡಿದೆ. ತಿದ್ದಿ ನಡೆವೆ. ಯಿಗ್ಲಾದ್ರು ವೂರಾಡ್ಲು ದಾರಿ ಬಿಡು ಚಿನ್ನಪ್ಪಽ…’ ಯೆಂದು , ಚಾಮ್ಗಿಳು ಮಾತಲ್ಲೇ ತೇಲಣ್ಣ ಮುಳ್ಗಣ್ಣ ಆದ್ರು. ತಲೆ ತೆಗ್ಸಿ, ಕಣ್ಣೀರು ಸೀಟಿಗೊಂಡ್ರು. ಜಲ ಜಲಾ… ಹರಿದಾ… ಕಣ್ಣೀರ್‍ಗೆ ಬಾಲ್ಬಸ್ವವ್ರ ಬಣ್ಣ ಬಯಲಾಯಿತು.

‘ಅಬ್ಬಾ! ಯೀ ಕೇರ್‍ಗಿರಿಗೆ ಯೆಷ್ಟೊಂದು ಜನ ಮಿಂಡ್ರು?  ಛೀ…ಛೀ… ಜೀತ ಮಾಡೋ, ಕಾಲ್ಮರಿ ಮಾಡಿ, ಜೀವ್ನ ಸಾಗಿಸೋ… ಯೀ ಮಣೆಗಾರರಿಗೆ ಯೀ ಥರಾ ಅವಲಂಬಿಗ್ಳು ಬೇಕೇ?’ ಪೊಲೀಸ್ ಅಧಿಕಾರಿ, ತಲೆ ತಲೆಕೊಡ್ವಿದ.

‘ರೀ…  ಚಿನ್ನಪ್ಪಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೇಕೆ? ಅವ್ರುದೂ ವಟ್ಟೆ ಪಾಡೈತಿ! ಕುಲಕಸ್ಬೈತಿ, ವೋಗ್ಲಿ ದಾರಿ ಬಿಟ್ಟು ಬಿಡ್ರೀ… ನಿಮ್ದು ನೀವೇ ಯೆತ್ತೆತ್ತಿ ಆಡ್ಕೋಳ್ಳಾದೇಕೆ? ಕುಲ್ವಾಂದ್ರೆ ಕುತ್ಗೆಮಟ್ಟ… ಯಿನ್ನಾದ್ರು, ಯೀ ಬಾಲಬಸಪ್ಪನವರು ಸುಧಾರ್ಸಿಯಾರು…’ ಯೆಂದು , ಪೊಲೀಸ್ ಅಧಿಕಾರಿ, ವೂರು ಕೇರಿಯವ್ರು.. ಚಿನ್ನಪನ ಗೋಗರೆದ್ರು.

‘ಯಿವತ್ಗೇ ಯೀ ಶೋಷಣೆ, ಅರಾಜಕತೆ, ಜಾತಿಪದ್ದತಿ, ಭೇದಭಾವ, ಬಡ್ದು ತಿನ್ನೋ ಕುಕೃತ್ಯ, ಪರಾವಲಂಬಿತನ, ನಿಲ್ಬೇಕು. ಯೀ ಸ್ಪಾಮ್ಗಿಳ್ನ ಮುಂದಿಟ್ಟುಕ್ಕೊಂಡು,   ಯೀ ‘ದಗ್ಡುಗಂಡ್ರು’ ಮಣೆಗಾರರು… ಮನ್ಮನ್ಗೇ ವೋಗಿ ಬಟ್ಟೆ ಬರೆ, ಹಣ, ಜಾನುವಾರು, ಕಾಳು, ಕಡಿ, ದವ್ಸ, ಧಾನ್ಯಗಳ ಯಿಸ್ದು, ವತ್ತು ವತ್ತು ಬಂಡ್ಗಿಳ್ಗಟ್ಲೆ ಬೆಳ್ದಾರು ಮನೇಗಿದ್ದಂತೆ, ಯೀ ಸ್ವಾಮ್ಗಿಳ ಮನ್ಗೆ ತಂದು ತಂದು ವಟ್ಟೋ… ಯೀ ವೂಳ್ಗಿಮಾನ್ಯ… ಪಾಳೇಗಾರ್‍ಕೆ, ಪುರೋಹಿತಶಾಹಿ… ಮೌಢ್ಯ ಪರಂಪರೇನ ತಪ್ಸಿ, ವೈಚಾರಿಕ, ಆರೋಗ್ಯಕರ, ದುಡಿದು ತಿನ್ನೋ ವ್ಯವಸ್ಥೆ ತರ್‍ವು ವುದ್ದಶದಿಂದ್ಲೇ ಯೀ ಜಾಗೃತಿ! ಪ್ರತಿಭಟನೆ! ಸಮಾಜಿಕ ಕಳಕಳಿಂದ, ಯೀ ವಾರ್‍ದಿಂದ್ಲೇ, ಯೀ ಕೆಲ್ಸದ್ಮೇಲಿದ್ದೇನೆ!’ ಯೆಂದು ಚಿನ್ನಪ್ಪ ಮಕಗಂಟಿಟ್ಕೊಂಡು, ದಾರ್ಗೆ ಅಡ್ಡಾಗಿ… ಗೊಮ್ಮಟನಂತೆ… ತುಟ್ಪಿಟಿಕ್ ಯೆನ್ದೆ ನಿಂತೇ ಯಿದ್ದ.

ಸಿವಚಾಮ್ಗಿಳು… ಬೋರು ಬೋರಾಡಿ ಅಳ್ತಾ… ತಂಬೂರಿ ಮೀಟ್ತಾ… ‘ಅಸಿವು. ನೀರಡ್ಕೆ, ಸುಸ್ತು, ಸತ್ನೇ… ಅಯ್ಯೋ… ಅಪ್ಪಾ… ನನ್ನ ಕಾಪಾಡ್ರೀ…’ ಯೆಂದು, ಜನ್ರ ಮನ ಕರ್ಗಿಸಲೆತ್ನಿಸಿ, ಸೋತು ಸುಣ್ಣಾದ್ರು.

ವಾಟ್ವಾಲ್ತು. ನಿಂತು ನಿಂತು… ಕಾಲ್ಗುಳು ಬಿದ್ದೋದ್ವು. ಕಣ್ಗುಳು ವುರಿಯೆದ್ವು, ನಾಲ್ಗೆ ವಣ್ಗಿ ಲೊಟ್ಟಿಕಾಯಾಯ್ತು. ತಲೆ ದಿಮ್ಮಿದ್ರಿಗಿತು. ನಿಂತ ನೆಲ ಕೆಂಪ್ಗೇ ಬಾಯಿ ಬಾಯಿ ಬಿಡ್ತು. ಸೂರ್ಯ ಮಾಡ್ದಾಕೆ ಸೇರ್ಕೊಂಡ. ದೇವಿಗುಡಿವಳ್ಗೇ ಮಲ್ಗಿದ್ರೂ ಕೆಟ್… ಕಟ್ ಕನಸು ಬಿದ್ದಿದ್ರ ಫಲ್ವಿದು. ವಾರ್ದಿಂದಾ ಕನಸ್ಗುಳು ಯಚ್ರಿಸ್ತಾಯಿದ್ವು, ಯೀ ಕನಸ್ಗುಳು ವಾಸ್ತವ, ಭವಿಷ್ಯದ ಸಂಗತಿಗ್ಳು… ನನ್ನ ಗೋರ್‍ನಿ ನಾನೇ ತೋಡಿಕೊಂಡೆ. ಯಿನ್ನು ಕಾವಿ ವದ್ದು, ಗಿಣಿಪಾಠ ವಪ್ಸಿ…. ಯೀ ಜೀವ್ನ ಸಾಗದು… ಯೆಂದು, ಸಿವಚಾಮ್ಗಿಳು ವಂದು, ವಚ್ಚ, ವಸಾ… ದೃಢ ನಿರ್ಧಾರಕ್ಕೆ ಬಂದ್ರು…

‘ಥೂ… ಯೀ ಕಾವಿಗಿಷ್ಟು ಬೆಂಕಿ ಆಕಾ! ಯೀ ದರಿದ್ರ ಪದ್ಧತಿ ನೆಗ್ದು ಬಿದ್ದೋಗಾ… ವುಪ್ಸಾದ್ರು ಯೀ ಕುಲ್ಕಸ್ಬು ಬೇಡಾ… ಛೀ… ಯಿವತ್ಗೇ ಕೊನೇ… ಯೆಂದು ಯೆಗ್ಲಿಗೆ ಆಕಿದ್ದ ಸಾಕ್ಷಾತ್ ಆದಿದೇವತೆಯ ತಂಬೂರ್ನಿ ರ್‍ವಾಸ್ದಿಂದ್ಲೆ ತೆಗ್ದು ಅಣ್ಗೆ ವತ್ತಿ ‘ಜೈ ಆದಿಜಾಂಬವಂತಾ… ಜೈ…” ಯೆಂದು, ಮೂರ್ಸಾರಿ ಕೂಗಿ, ನಿಂತ ನೆಲ್ಕೆ ಗಟ್ಸಿ… ಪುಡಿ ಪುಡಿ ಮಾಡಿದ್ರು. ಜಂಟಿ ಜಂಗ್ನಿ ನಾಗ್ಬೆತ್ತ್ನ ಬಲ್ಗಾಲಿಂದ ವದ್ದು ವದ್ದು… ಮುರ್ದು ಯೆಸ್ದೆರು. ಕಾಲಾಗಿದ್ದ ಚಂದನ್ದ ಆವ್ಗೆಗ್ಳನ್ನು ಕಲ್ಲಿಂದ ಜಜ್ಜಿ ಜಜ್ಜಿ… ವಗ್ದೆರು. ಕೊರ್‍ಳಗಿನ ಲಿಂಗಾ, ರುದ್ರಾಕ್ಷಿ ಸರ್‍ಮಾಲ್ಗೆಳ್ನ ಯಿಡ್ದು ಕಿತ್ತು… ಕಿತ್ತು… ಚೂರ್‍ಚೂರೂ ಮಾಡ್ದರು. ಕಿವ್ಯಾಗ್ಳಿನ ಕರ್ಣಕುಂಡ್ಲಗಳ್ನನ ಕಿತ್ತು ದೂರಾ… ಬೀಸಿ ಜಾಲಿಬೇಲಿಯೊಳ್ಕೆ ಯೆಸ್ದರು…

‘ಅರ… ಅರಾಽಽ… ಅರೋ… ಅರೋಽ… ಅರೀ…’ ಯೆಂದು ಅಳುತ್ತಲೇ… ಮೈ ತುಂಬಾ ವದ್ದಿದ್ದ ಕಾವಿ, ಕಪ್ನಿ, ಪೇಟಾ… ಜರ್ತಾರಿ ಪಟ್ಟಿಗ್ಳನ್ನು ಪರ್‍ಪಾರ್‍ನೇ ಅರ್ದು ಅರ್ದು… ಗಾಳ್ಗೆ ತೂರ್‍ದಿರು, ಬೆರ್‍ಳೆಗ್ಳಲ್ಲಿದ್ದ ವುಂಗ್ರಾಗ್ಳನ್ನ ಕಿತ್ತು ಕಿತ್ತು… ವೊಂದಾಂದಾಗಿ ದೂರ ಯೆಸ್ದೆರು… ‘ಯೀ … ಸ್ಥಾವ್ರಕ್ಕಳಿವುಂಟು! ಯೀ ಜಂಗ್ಮಕ್ಕಳಿವಿಲ್ಲ..’ ಯೆಂದು, ತಲಿ ತಲೀ ಕೆದ್ರಿಕೊಂಡು ಆವು ಭುಸ್ಗುಟ್ಟಿದಂಗೆ ಭುಸ್ಗುಡುತ್ತಾ… ಸೀಮೆ ಜಾಲಿಪದೆಯೊಳ್ಕೆ ಚಾಮ್ಗಿಳು ವೋಡಿದ್ರು..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯವಾಗಲಿ ಇಳೆಗೆಲ್ಲ ಜಯ
Next post ಮಿಂಚುಳ್ಳಿ ಬೆಳಕಿಂಡಿ – ೩೫

ಸಣ್ಣ ಕತೆ

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys