ಬೆಂಗಳೂರು ಬಿಟ್ಟು ಮೈಸೂರಿಗೆ ಬರುವ ಏಳು ಗಂಟೆ ರೈಲಿನಲ್ಲಿ ಕುಳಿತುದಾಯಿತು. ಆದರೆ ರಂಗಯ್ಯ ನನ್ನನ್ನೇಕೆ ಮೈಸೂರಿಗೆ ಬರ ಹೇಳಿದನೆಂಬುದು ಮಾತ್ರ ಸರಿಯಾಗಿ ಗೊತ್ತಾಗಲಿಲ್ಲ. ರಂಗಯ್ಯನ ಕಾಗದವನ್ನು ರೈಲಿನಲ್ಲಿ ತಿರುಗಿಸಿ ತಿರುಗಿಸಿ ನೋಡಿದೆ.
“ಏನು! ಮನೆಯಲ್ಲಿ ಒಂದು ಹೆಣ್ಣು ಮಗುವಿಗೆ ಹುಟ್ಟಿದ ಹಬ್ಬ ಎಂದು ನನಗೆ-ಬೆಂಗಳೂರಿನಲ್ಲಿರುವವನಿಗೆ-ಔತನವೆ? ಇದಕ್ಕೋಸ್ಕರ ನಾನು ಬೆಂಗಳೂರಿನಿಂದ ಮೈಸೂರಿಗೆ ಹೋಗುವುದೆ! ಛೇ! ಛೇ! ಛೇ! ಈ ಯೋಚನೆ ಮೊದಲೇ ತೋರಲಿಲ್ಲವಲ್ಲಾ! ಈಗ ತಾನೆ ಏನು? ಮೈಸೂರಿಗೆ ಹೋಗುವುದಕ್ಕೆ ಬದಲಾಗಿ ಕೆಂಗೇರಿಯಲ್ಲಿ ಇಳಿದು ಬೆಂಗಳೂರಿನಿಂದ ಏಳೇ ಏಳು ಮೈಲಿ-ಬೆಂಗಳೂರಿಗೆ ವಾಪಸ್ಸು ನಡೆದು ಹೋದರಾಯಿತು” ಎಂದು ನಿರ್‍ಧಾರ ಮಾಡಿ ಕೆಂಗೇರಿ ಬಂದೊಡನೆಯೇ ಕೆಳಗಿಳಿದು ಹೊರಟೆ.
ಒತ್ತುವ ಕರಡಿನ ಮೇಲೆ ಗೆರೆಗಳು, ಅಕ್ಷರಗಳು, ಅಂಕಿಗಳು ಒಂದರ ಮೇಲೊಂದು ಬೀಳುವ ಹಾಗೆ, ಆಲೋಚನಾಪರಂಪರೆಯು ಮಿಂಚಿಗೆ ಮಿಗಿಲಾದ ವೇಗದಿಂದ ನನ್ನ ಮನಸ್ಸಿನಲ್ಲಿ ಹರಿಯತೊಡಗಿತು.
“ಅರೆ! ದುಡ್ಡು ಕೊಟ್ಟೂ ಇಲ್ಲಿಂದ ಬೆಂಗಳೂರಿಗೆ ನಡೆದು ಹೋಗುವುದೇ? ಕೊಟ್ಟಿರುವ ರೂಪಾಯಿ ಹನ್ನೆರಡಾಣೆ ಒಂಬತ್ತು ಕಾಸಿಗಾದರೂ ಮೈಸೂರಿಗೆ ಹೋಗಬೇಕು. ಅಲ್ಲದೆ, ರಂಗಯ್ಯನನ್ನು ಕಂಡು ಎರಡು ವರ್‍ಷದ ಮೇಲಾಯಿತು. ಅಂತಹ ಸ್ನೇಹಿತ ಬರಹೇಳಿರುವಾಗ ಹೋಗದಿರುವುದುಂಟೆ! ಅದರಲ್ಲೂ ಟಿಕೀಟು ತೆಗೆದುಕೊಂಡ ಮೇಲೆ! ಇದರ ಮೇಲೆಯೋ ಮೈಸೂರಿಗೆ ಹೋದರೆ ಏನು ನಷ್ಟ? ಪಟ್ಟಾಗಿ ತಿಂಡಿ ಬೀಳುತ್ತೆ. ಸಾಲದುದಕ್ಕೆ ಮೈಸೂರು ದೊಡ್ಡ ಕೆರೆಯ ಕಚಡಾ ನೀರೆಲ್ಲಾ ತೆಗೆಯುತ್ತಿದ್ದಾರಂತೆ, ಕೊನೇಗೂ! ಅದನ್ನು ನೋಡಲೇಬೇಕು. ಅದೇನು ಸಾಮಾನ್ಯವಾದುದೇ! ಭಗೀರಥ ಪ್ರಯತ್ನ…” ಇತ್ಯಾದಿ.
ಪುನಃ ರೈಲಿನಲ್ಲಿ ಬಂದು ಕುಳಿತೆ. ರೈಲು ಸಾಗಿತು.
ಹಿಂದೆ ನಮ್ಮ ಪೂರ್‍ವಿಕರು ಪಂಚಾಗ್ನಿ ಮಧ್ಯದಲ್ಲಿ ಕುಳಿತು ಏಕಾಗ್ರಚಿತ್ತದಿಂದ ಭಗವಂತನನ್ನು ಧ್ಯಾನಿಸುತ್ತಿದ್ದಂತೆ, ನಾನೂ ಸುತ್ತಿನವರ ತಂಬಾಕಿನ ಹೊಗೆಯಿಂದಾವೃತನಾಗಿ, ನನ್ನ ಆಹ್ವಾನಕ್ಕೆ ನಿಜವಾದ ಕಾರಣವನ್ನು ಹುಡುಕಲು ಯತ್ನಿಸುತ್ತಿದ್ದೆ.
ಒಂದು ಹೆಣ್ಣು ಮಗು ಹುಟ್ಟಿತು ಎಂದು ದೂರದೇಶದ ಇಷ್ಟ ಮಿತ್ರರನ್ನು ಔತನಕ್ಕೆ ಕರೆಯುತ್ತಾರೆಯೇ? ಅದರಲ್ಲೂ ೧೯೨೯ನೇ ಇಸ್ವಿಯಲ್ಲಿ? ಈ ನಾಜೋಕಿನ ಕಾಲದಲ್ಲಿ!… ‘ಏನೋ ಹೋಗಲಿ’ ಅನ್ನುವುದಕ್ಕೆ ಏನು ಗಂಡುಮಗುವೇ? ‘ವಂಶೋದ್ಧಾರಕ, ಅಪ್ಪ ಅಮ್ಮಂದಿರಿಗೆ ಅವರೆಂದೂ ಕಾಣದಿರುವ ಗತಿ ತೋರಿಸುತ್ತಾನೆ’ ಎನ್ನುವುದಕ್ಕೆ! ಹೆಣ್ಣು! ಸರ್‍ವ ಸಾಧಾರಣದ ಹೆಣ್ಣು!… ಇರಲಾರದು. ಇನ್ನೇನೋ ಇರಬೇಕು ಕಾರಣ. ಲಕ್ಷ್ಮೀಶ ಹೇಳಿಲ್ಲವೆ : ‘ಕ್ರೂರನಾಕುಲದೊಳಿಡಿದಿರ್‍ದ ಪೆರ್‍ಮಡು ಗಭೀರ ನಿರ್‍ಮಲ ಜಲದೊಳೆಸೆವಂತೆ’… ಏನೋ ಇದೆ ಒಳಗೆ… ಏನದು?…
ನನ್ನ ಮೆದುಳಿನಂಬುಧಿಯ ಮಥನಕ್ಕಾರಂಭವಾಯ್ತು.
ಆ ಮಥನದಲ್ಲಿ ಏನೇನೋ ಉತೃಷ್ಟ ನಿಕೃಷ್ಟ ವಸ್ತುಗಳುಉತ್ಪತ್ತಿ ಯಾಗಿ, ಹೇಗೆ ಹೇಗೋ ಖರ್‍ಚಾಯಿತು. ಕೊನೆಗೆ ಅಮೃತದಂತಹ ವಸ್ತುವೊಂದು ಉದ್ಭವಿಸಿದರೂ, ಆ ಕಾಲಕ್ಕೆ ಮಾತ್ರ ಅದನ್ನು ಹಾಲಾ ಹಲವೆಂದೇ ಎಣಿಸಿದೆ. ಈ ಹಿಂದೆ, ನಾನೂ ರಂಗಯ್ಯನೂ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಅವನನ್ನು ಕೇಳಿದ್ದೆ: “ಲೋ! ನಿಮ್ಮಪ್ಪನಿಗೆ ೧೨೦ ರೂಪಾಯಿ ಸಂಬಳ ಬರುತ್ತೆ. ಇನ್ನೊಂದು ಹತ್ತು ರೂಪಾಯಿ ಹೆಚ್ಚಾಗಿ ತರಸಿಕೊಳ್ಳಬಾರದೇನೊ?” ಎಂದು.
ಅದಕ್ಕೆ ರಂಗಯ್ಯ ಹೇಳಿದ್ದ: “ನಾನೊಬ್ಬನೇ ಆಗಿದ್ದರೆ ಸರಿ ಹೋಗುತ್ತಿತ್ತು. ನನಗೆ ಚಿಕ್ಕವರು ಇನ್ನೂ ಮೂವರು ಇಧಾರೆ. ಎಲ್ಲಾ ಹೆಣ್ಣು ಕಣೋ! ಎಲ್ಲಾ ಹೆಣ್ಣು! ನನ್ನ ಮೊದಲನೇ ತಂಗಿಗೆ ಇನ್ನು ಎರಡು ಮೂರು ವರ್‍ಷ ಕಳೆದರೆ ಕಟ್ಟಿ ಕೊಳ್ಳಬೇಕು-ಕುಂಬಳ ಕಾಯಷ್ಟು ದಪ್ಪ ಥೈಲೀನ! ನಮ್ಮ ಸಮಾಜವೇ ಇಷ್ಟು ಕಣೋ..”
ಅದಕ್ಕೆ “‘ನಮ್ಮ’ ಸಮಾಜ ಅನ್ನು. ಅದು ಬೇರೆ ಒಂದು ಕೇಡು ನಮಗೆ. ಆದರೂ … ಹೌದು. ‘ನಾವು’ ಎಂದಮೇಲೆ, ‘ನಮ್ಮದು’ ಅಂತ ಇಲ್ಲದೆ ಇದ್ದರೆ ಆಗುತ್ತದೆಯೆ! ಹಾಕಿಕೊಳ್ಳುವ ಕೋಟು ಹರಕಲು ತೇಪೆ ಕೋಟಾಗಲಿ, ಒಳ್ಳೆ ‘ನೇವಿಬ್ಲೂ’ ಹೊಸ ಕೋಟಾಗಲಿ, ಅದು ‘ನಮ್ಮ’ ಕೋಟು! ಹೌದು, ‘ನಮ್ಮ’ ಸಮಾಜ! ಇನ್ನೆಲ್ಲಿಯೂ ಇಲ್ಲದಿರುವ ವೈಪರೀತ್ಯಕ್ಕಾದರೂ ‘ನಮ್ಮ ಸಮಾಜ’ ಅನ್ನ ಬೇಕು” ಎಂದು ನಾನು ಹೇಳಿದ್ದುದು ನೆನಪಾಯಿತು.
“ಇದೇಕೆ ಇಷ್ಟು ಅರಚುತ್ತೀಯೊ? ಎಲ್ಲರ ಮನೆಯ ದೋಸೆಯೂ ತೂತೆ!”
“ಆದರೆ ಎಲ್ಲರ ಮನೆಯ ಕಾವಲಿಯೂ ತೂತೇನು?”
“ಲೋ! ದೋಸೆ ಹುಯಿದು ತಿನ್ನಬೇಕು ಅಂತ ಇಷ್ಟವಿದ್ದರೆ ತೂತು ಕಾವಲಿಯಲ್ಲೇ ಸರಿಮಾಡಿಕೊಳ್ಳ ಬೇಕು”…
ಗೊತ್ತಾಯಿತು! ಇದಕ್ಕೆ “ಮೈಸೂರಿಗೆ ಬಾ” ಎಂದದ್ದು! ನಿಜವಾಗಿಯೂ ‘ಕ್ರೂರ ನಕ್ರಾಕುಲ’!… ಈಗ ಕೆಲಸ ಸಿಕ್ಕುವುದೇ ಕಷ್ಟ. ಸಿಕ್ಕಿದರೂ ನಮ್ಮ ಹೊಟ್ಟೆಗೇ ಸಾಲದು. ಅಮ್ಮನಿಗೆ ಧರ್‍ಮಾವರದ ಸೀರೆ ತೆಗೆಯಬೇಕು; ತಮ್ಮನಿಗೆ ಮುಂಜಿಯಾಗಬೇಕು; ಈ ಮಧ್ಯೆ ಅಪ್ಪನಿಗೆ ಷಷ್ಠ ಪೂರ್‍ತಿಶಾಂತಿ ಮಾಡಿಕೊಳ್ಳಲು ಆಸೆ. ಇಷ್ಟೆಲ್ಲ ರಾದ್ಧಾಂತದಲ್ಲಿ ಇದು ಯಾವುದೋ ಅವಾಂತರ ಕಟ್ಟಿಕೊಂಡು, ರೇಶಿಮೆ ಜಾಕೀಟಂತೆ, ಚಿನ್ನದ ಡಾಬಂತೆ, ವಜದೋಲೆಯಂತೆ; ಇದರಲ್ಲಿ ಯಾವುದಿಲ್ಲದಿದ್ದರೂ ಜಗಳ, ಕಪ್ಪು ಮೋರೆ. ಯಾರಿಗೆಬೇಕು ಈ ಒದ್ದಾಟ! ಈ ಮದುವೆ ಇಲ್ಲದಿದ್ದರೆ ಉಳಿದು ಹೋಯಿತು… ಏನೋ ಇಷ್ಟರ ಮೇಲೆ, ಹೊರಟಿದ್ದಂತೂ ಆಯಿತಲ್ಲ, ಹುಡುಗಿ ಸ್ವಲ್ಪ ಲಕ್ಷಣವಾಗಿ ಚೆನ್ನಾಗಿದ್ದು… ‘ಅವಶ್ಯಮನುಭೋಕ್ತವ್ಯಂ’… ಭಗವಂತನ ಲೀಲೆ ಕಂಡವರಾರು…
ಮದ್ದೂರು ಬಂತು. ಕಿಟಕಿಯ ಹತ್ತಿರ ಕಾಫಿಯೂ ಬಂತು. ಬಿಸಿಲಿನಲ್ಲಿ ಒಣಗಿದ ಭೂಮಿ, ಕೊಡದ ಮೇಲೆ ಕೊಡ ನೀರು ಹೀರುತ್ತೆ ಎನ್ನುವುದನ್ನು ಸುಳ್ಳು ಎನ್ನುತ್ತಿದ್ದೆ. ಸತ್ಯಾಸತ್ಯ ಅನುಭವದ ಮೇಲೆ ಗೊತ್ತಾಗಬೇಕು! ಕಾಫಿ ನಿದ್ರೆ ಕಡಿಮೆ ಮಾಡಿದರೂ ಜ್ಞಾಪಕಶಕ್ತಿ ಯೋಚನಾಶಕ್ತಿಗಳನ್ನು ಕಡಿಮೆ ಮಾಡದು.
…‘ಅವಶ್ಯಮನುಭೋಕ್ತವ್ಯಂ’? ಅದೆಲ್ಲಾ ದಾಸರ ಪದದಲ್ಲಿ! ಇದು ೧೯೨೯ನೇ ಇಸ್ವಿ! ನಾವು ಇಂಗ್ಲೀಷ್ ಓದಿದವರು! ನಮ್ಮ ಮುಂದೆ ಇದೆಲ್ಲಾ ನಡೆಯುವಂತಿಲ್ಲ. ಮನುಷ್ಯ ಮನಸ್ಸು ಮಾಡಿದರೆ ಏನು ತಾನೇ ಆಗುವುದಿಲ್ಲ! ನಾನೇನು ಎಳೆಯ ಮಗುವೇ? ಬೀಗದೆಸಳಿನಿಂದ ಹಲ್ಲುಬಿಡಿಸಿ ಔಷಧಿ ಶೀಷೆ ಬಗ್ಗಿಸುವುದಕ್ಕೆ!… ಇರಲಿ ನೋಡೋಣ…. ಹುಡುಗಿ ಚೆನ್ನಾಗಿದ್ದರೆ, ಏನೋ ಆ ಮನೆಯವರ ಕಷ್ಟ ನಿಷ್ಟೂರ ನೋಡಿ, ಪಾಪ! ಯಾರಿಗಾದರೂ ತೊಂದರೆ ಇಲ್ಲದೆ ಇರುತ್ತದೆಯೆ, ಹ್ಞು! ಕಟ್ಟಿ ಕೊಳ್ಳುವುದು… ಮನುಷ್ಯ ಹುಟ್ಟಿರುವುದೇತಕ್ಕೆ-ಇನ್ನೊಬ್ಬರಿಗೆ ಸಹಾಯ ಮಾಡದಿದ್ದ ಮೇಲೆ?… ಛೇ! ಇದೇನಿದು? ಘಳಿಗೆಗೆ ಒಂದೊಂದು ಯೋಚಿಸುವುದಕ್ಕೆ ನಾನೇನು ಹೆಂಗಸು ಕೆಟ್ಟು ಹೋದೆನೆ… ಇಷ್ಟೆಲ್ಲ ಯೋಚಿಸಿದೆ… ಹೆಣ್ಣು ಮಕ್ಕಳಿರೋ ಮಹನೀಯರು ಸುಮ್ಮ ಸುಮ್ಮನೆ ಗಂಡುಹುಡುಗರನ್ನು ಔತಣಕ್ಕೆ ಕರೆಯುತ್ತಾರೆಯೆ? ಇಲ್ಲ? ಮಡುವಿನಲ್ಲಿ ಮೊಸಳೆ ಇಧೆ! ಇರಲಿ! ನೋಡುವುದು. ಗಾಳಿ ಬೀಸಿದೆ ಹಾಗೆ ತೂರಿಕೊಳ್ಳುವುದು… ಆದರೂ ನಮ್ಮ ಪ್ರಯತ್ನ ಮಾಡಿ ನೋಡಿಬಿಡುವುದು…
ಉಯ್ಯಾಲೆ ಇನ್ನೂ ಮೇಲಕ್ಕೂ ಕೆಳಕ್ಕೂ ಆಡುತ್ತಿದ್ದ ಹಾಗೆಯೇ ರೈಲು ಮೈಸೂರಿಗೆ ಬಂತು. ರಂಗಯ್ಯ ಸ್ಟೇಷನ್ನಿಗೆ ಬಂದಿದ್ದ.
ಬೆಸ್ತರವನು ನಳ್ಳಿ ಹಿಡಿದರೆ, ‘ಲಟಲಟ’ ಎಂದು ಅದರ ಕಾಲು ಮುರಿದು ಬುಟ್ಟಿಗೆ ಹಾಕಿಕೊಂಡು ಮನೆಗೆ ಒಯ್ಯುವಂತೆ, ರಂಗಯ್ಯ ನನ್ನನ್ನು ಕಂಡದ್ದೇ ತಡ-ಭುಜದಮೇಲೆ ಹೊಡೆದು, ಬೆನ್ನಿನಮೇಲೆ ಗುದ್ದಿ, ಕೈ ಚೆನ್ನಾಗಿ ಹಿಸುಕಿ, ‘ಬಡಬಡ’ ಎಂದು ಮಾತಾಡಿ, ಷಾಃಪಸಂದಿನಲ್ಲಿ ಕುಳ್ಳಿರಿಸಿಕೊಂಡು ಮನೆಗೆ ಓಟ!
* * *
ಮನೆಗೆ ಬಂದಮೇಲೆ ಯಥಾಕ್ರಮವಾಗಿ ಕಾಫಿ, ಸ್ನಾನ ಎಲ್ಲಾ ಆಯಿತು. ಅಡಿಗೆ ಇನ್ನೂ ಪೂರ್‍ತಿಯಾಗಿರಲಿಲ್ಲವಾದುದರಿಂದ, ಹಜಾರದಲ್ಲಿ ರಂಗಯ್ಯ ನಾನು ಮಾತನಾಡುತ್ತಿದ್ದೆವು. ದೂರದಲ್ಲಿ ಪುಟ್ಟ ಹೆಣ್ಣು ಮಗುವೊಂದು ಅದಕ್ಕೆ ಹುಟ್ಟಿದ ಹಬ್ಬ – ಆಟವಾಡುತ್ತಿತ್ತು. ಮಾತಾಡುವುದಕ್ಕೆ ಇನ್ನೇನೂ ಇರಲಿಲ್ಲವಾದುದರಿಂದ “ಲೋ! ಕಾಫಿ ಎಂದರೆ – ಬೆಂಗಳೂರಿನಲ್ಲಿ…” ಎಂದೆ.
“ಏಕೋ! ನಮ್ಮ ಮನೆ ಕಾಫಿ ಚೆನ್ನಾಗಿರಲಿಲ್ಲವೆ?”
“ಅದು ಕುಡಿದೇ ಮತ್ತೆ ಬೆಂಗಳೂರಿನ ಕಾಫಿ ನೆನಪಾದುದು. ಕಾಫಿ ತಯಾರೀಲಿ ಬಹಳ ಪಳಗಿದ ಕೈ ಅಂತ ಕಾಣುತ್ತೆ. ನಿಮ್ಮ ಮನೆಯಲ್ಲಿ…. ಯಾರು ನಿಮ್ಮ ತಾಯಿ ಮಾಡಿದರೇನೋ?”
“ಅಮ್ಮ ಊರಲ್ಲಿಲ್ಲ; ಅಕ್ಕಯ್ಯನ ಊರಿಗೆ ಹೋಗಿದಾಳೆ, ನನ್ನ ತಂಗಿ ವಿಲಾಸಿ ಮಾಡಿದ್ದು.”
“ಓ! ಹಾಗೇ!”
ಇದ್ದರೆ ಇಂತಹ ಹೆಂಡತಿ ಇರಬೇಕು ಎನ್ನಿಸಿತು. ಸಾಯಂಕಾಲ ಆಫೀಸಿನಿಂದ ಆಯಾಸಪಟ್ಟು ಮನೆಗೆ ಬಂದರೆ, “ಈಸಿಛೇರಿ’ನಲ್ಲಿ ಮಲಗಿ ಕೊಂಡು, ಎಡಗಡೆ ಮಂಡಿಯೂರಿ ಹೆಂಡತಿ ಕಾಫಿ ಬಟ್ಟಲನ್ನು ಬಾಯಹತ್ತಿರ ತಂದರೆ, ಇಂತಹ ಕಾಫಿ ಕುಡಿದು, ಹಾ! … ಆದರೆ ಈ ಹುಡುಗಿಗೆ ಮದುವೆ ಆಗಿದೆಯೊ ಏನೊ! ಇದುವರಿವಿಗೆ ಆ ಪ್ರಸ್ತಾಪ ಎತ್ತಿಲ್ಲ… ಒಂದು ವೇಳೆ ಕೇಳಿದರೆ, ಕಾಫಿ ಚೆನ್ನಾಗಿ ಮಾಡುತ್ತಾಳೆ ಎನ್ನುವುದಕ್ಕೋಸ್ಕರ… ಉಹ್ಞು! ಬೆಂಗಳೂರ ರಾಮಾಚಾರೀನೂ ಚೆನ್ನಾಗಿ ಮಾಡುತ್ತಾನೆ ಕಾಫೀನ… ಇಲ್ಲ! ಮದುವೆ ಆಗಿ ಹೋಗಿರಬೇಕು…
ಅಷ್ಟರಲ್ಲಿ ರಂಗಯ್ಯ, “ಏನು ಬಹಳ ಯೋಚಿಸುತ್ತಿದ್ದೀಯೆ?” ಎಂದ.
ನಾನು ಆವಾಗ ಆದಷ್ಟು ಪೆಚ್ಚು ಇನ್ನು ಯಾವಾಗಲೂ ಆದಹಾಗೆ ಜ್ಞಾಪಕವಿಲ್ಲ. ಆದರೂ, ಆಕಡೆ ಈಕಡೆ ನೋಡಿ, “ನಿಮ್ಮ ತಾಯಿ ಈ ಪುಟ್ಟ ಮಗೂನ ಇಲ್ಲೇ ಬಿಟ್ಟು ಹೋದರಲ್ಲ ಅಂತ ಯೋಚಿಸುತ್ತಿದ್ದೆ” ಎಂದೆ.
ರಂಗಯ್ಯ ನಗುತ್ತಾ “ಆ ಮಗು ನನ್ನ ತಂಗಿ ಅಂತಿದ್ದೀಯಾ?” ಎಂದು ಕೇಳಿದ.
“ಅಲ್ಲವೇನು!”
“ಅಯ್ಯೋ! ಪೆಚ್ಚೆ! ನನ್ನ ಮಗು!”
“ನಿನ್ನ ಮಗು!”
ಆ ಮಗುವಿಗೆ ನನ್ನ ಮಾತು ಗೊತ್ತಾಯಿತೋ ಏನೋ ಕೈ ಚಪ್ಪಾಳೆ ಇಕ್ಕಿ ನಗಲು ಮೊದಲು ಮಾಡಿತು.
ಒಳಗಿನಿಂದ ಯಾರೋ “ಎಲೆ ಹಾಕಿದೆ ಅಣ್ಣಯ್ಯ?” ಎಂದರು. ಆ ಧ್ವನಿ ಕೇಳಿ ಏನೋ ಯೋಚಿಸುತ್ತಿದ್ದು “ರಂಗೂ! ನಿಮ್ಮ ಮನೆಯಲ್ಲಿ… ಗ್ರಾಮಾಫೋನ್ ಇದೆಯೇ?” ಎಂದೆ.
“ಇದೆ! ಆದರೆ ‘ಹೀಸ್ ಮಾಸ್ಟರ್ ವಾಯ್’ ಅಲ್ಲ- ವೀಲಾಸೀಸ್ ವಾಯ್ಸು!”
ಆ! ನನ್ನ ಬೆನ್ನಿಗೊಂದು ಏಟು ಬಿತ್ತು!
* * *
ಊಟಕ್ಕೆ ಕುಳಿತವರು ನಾನು, ರಂಗಯ್ಯ, ಅವನ ತಂದೆ ರಾಮಯ್ಯನವರು, ಹೊರಗಡೆ ಹಜಾರದಲ್ಲಿ ರಂಗಯ್ಯನ ತಂಗಿಯರು. ಬಡಿಸುವುದಕ್ಕೆ ಅದೇ ಆ ಕಾಫಿ ಹುಡುಗಿ, ರಂಗಯ್ಯನ ದೇವಿಯವರಿಗೆ ರಜ. ಒಂದೊಂದು ತುತ್ತಿಗೂ, “ನಮ್ಮ ವಿಲಾಸಿ ಮಾಡಿದ್ದು – ಪಲ್ಲವಿ-ಹಾಡುವುದಕ್ಕೆ ರಂಗಯ್ಯ. “ಉಪ್ಪು ಸಾಕೆ? ಹುಳಿ ಸಾಕೆ? ಸಕ್ಕರೆ ಬೇಕೆ?” -ನುಡಿಗಳು-ಹಾಡುವುದಕ್ಕೆ ರಾಮಯ್ಯನವರು. ಇವರ ಹಾಡಿಗೆ ಸರಿಯಾಗಿ ಸೌಟು ಬಟ್ಟಲು ಹಿಡಿದುಕೊಂಡು ಅಡಿಗೆಯ ಮನೆಯಿಂದ ಅಂಗಳಕ್ಕೆ, ಅಂಗಳದಿಂದ ಅಡಿಗೆಯ ಮನೆಗೆ, ಆ ಕಾಫಿ ಹುಡುಗಿಯ ಹಾರಾಟ. ನೋಡಿದೆ ಇದನ್ನೆಲ್ಲಾ. “ಸರಿ! ನನ್ನ ಊಹೆ ಎಂದಾದರೂ ತಪ್ಪೇ!” ಎಂದುಕೊಂಡೆ.
ಊಟವಾದ ಮೇಲೆ, “ಎರಡು ದಿನ ಹಿಂಚುಮುಂಚು, ಹಾಕಿಕೊಳ್ಳೋ” ಎಂದು ರಂಗಯ್ಯ ವೀಳೆಯದೆಲೆ ಕೊಟ್ಟ. ನಾನು ಹಾಕಿ ಕೊಳ್ಳಲಿಲ್ಲ. ರಂಗಯ್ಯನ ತಂದೆ ಬಂದರು. “ನಾಂದ್ಯಂತೇ ತತಃ ಪ್ರವಿಶತಿ ಸೂತ್ರಧಾರಃ”!
“ನೀನೂ ನಮ್ಮ ರಂಗೂ ಜತೆಗಾರರಂತೆ. ನನಗೆ ಮೊದಲೇ ಗೊತ್ತಾಗಲಿಲ್ಲ ನೋಡು. ನಮಗೇನು ನೀನು ದೂರದವನಲ್ಲಪ್ಪಾ! ನಿಮ್ಮ ಭಾವ-ವೆಂಕಣ್ಣ, ಪುರಾಣದ ಕೂಸಣ್ಣನ ಮಗ-ಅವನ ತಂಗಿ ಮಾವನ ಮನೆಯವರು ನಮಗೆ ತ್ರಿರಾತ್ರಿ ಜ್ಞಾತಿಗಳು. ಏನೋ, ದೈವಸಂಕಲ್ಪ ಇದ್ದರೆ, ನೀನೂ ಸ್ವಲ್ಪ ದೊಡ್ಡ ಮನಸ್ಸು ಮಾಡಿದರೆ, ಸಂಬಂಧ ಇನ್ನೂ ಹತ್ತಿರವಾಗುತ್ತೆ.”
ದೂರದ ಕಪ್ಪು ಮೋಡವನ್ನು ನೋಡಿ “ಮಳೆ ಮೋಡ ಇರಬಹುದೆ ಇದು? ” ಎಂದರೆ ಮೈಮೇಲೆ ಹನಿ ಬಿತ್ತಂತೆ!
ಪ್ರಸ್ತಾವನೆ ಚೆನ್ನಾಗಿ ಹಾಕಿದರು. ನಾನು ಮಾತನಾಡದೆಯೆ ಸುಮ್ಮನೆ ಕುಳಿತುಕೊಂಡೆ.
ಅಷ್ಟರಲ್ಲಿ ರಂಗಯ್ಯ, ಈ ವಿಚಾರ ಇಷ್ಟೆ, ನೋಡು! ನನ್ನ ತಂಗಿ ವಿಲಾಸಿಗೆ-ನಿನ್ನ ಗ್ರಾಮಾಫೋನಿಗೆ-ಮದುವೆ ಆಗಬೇಕು. ನಮ್ಮಪ್ಪ ನಿನಗೆ ಕೊಡಬೇಕೆಂದಿದ್ದಾರೆ. ನಿಮ್ಮಮ್ಮ, ಅಪ್ಪ ಒಪ್ಪಿದಾರೆ. ನೀನು ಒಪ್ಪಬೇಕು, ಏನು ಹೇಳು….” ಎಂದ.
ನನಗೆ ಏನು ಹೇಳಬೇಕೋ ತೋಚಲಿಲ್ಲ. ಪಕ್ಕದಲ್ಲಿದ್ದ ಪುಸ್ತಕ ವೊಂದನ್ನು ತಿರುವಿಹಾಕುತ್ತಿದ್ದೆ. ಅದರಲ್ಲಿ “ಒಂದು ಖಂಡುಗ ದೈವ ಪ್ರಯತ್ನಕ್ಕಿಂತ ಒಂದು ಕೊಳಗ ಪುರುಷ ಪ್ರಯತ್ನವೇ ಮೇಲು” ಎಂದಿತ್ತು. ಅದನ್ನು ನೋಡುತ್ತಾ ಇರಲು ಏನೇನೋ ಯೋಚನೆ ಬಂತು: “ಈ ಹೆಂಗಸರನ್ನು ಬ್ರಹ್ಮ ಸೃಷ್ಟಿಸದಿದ್ದರೆ ಏನು ಮುಳುಗಿಹೋಗುತ್ತಿತ್ತೊ ನಾ ಬೇರೆ ಕಾಣೆ!… ಜಗತೃಷ್ಟಿಗಾಗಿ ಕಷ್ಟ ಪಡುವುದೇನೊ ಪಡುತ್ತಾನಲ್ಲ, ಪ್ರಾಣಿ… ಹೇಗಿದ್ದರೂ ಹುಟ್ಟಿ ದವರು ಸಾಯಲೇ ಬೇಕು… ಈ ಹೆಂಗಸರಿಗೆ ಬದಲು, ಮಂದಿ ಸತ್ತ ಸತ್ತ ಹಾಗೆಲ್ಲಾ ಬರಿಯ ಗಂಡು ಬೊಂಬೆಗಳನ್ನೇ ತಯಾರಿಸಿ ಏಕೆ ಭೂಮಿಗೆ ಕಳುಹಬಾರದು?… ಆ ಬ್ರಹ್ಮ… ಅವನೇನೋ ಪ್ರಾಣಿಗಳನ್ನು ಮಣ್ಣಿನಿಂದಲೇ ಮಾಡುತ್ತಾನಂತೆ. ಅವನ ತಲೆಯಲ್ಲೂ ಮಣ್ಣೆ ತುಂಬಿದೆಯೋ ಹೇಗೋ!… ಈ ದೇವರುಗಳ ವಿಚಾರದಲ್ಲಿ – ಇದು ಹೀಗೆ, ಇದು ಹೀಗಲ್ಲ’ ಎನ್ನುವ ಹಾಗಿಲ್ಲ. ಎಲ್ಲಾ ಸಾಧ್ಯವೇ. ಗಂಡಸಿಗೆ ತಾಪತ್ರಯ ಕೊಡುವುದಕ್ಕೆ ಅವನು ಹೀಗೆ ಮಾಡುತ್ತಿರುವುದು. ಬೆಳಗಾದರೆ ‘ಇದು ಇಲ್ಲ, ಅದು ಇಲ್ಲ’. ಎಷ್ಟು ಬಂದರೂ ಸಾಲದು… ಅದು ಸರಿ! ಈಗ ಇವರಿಗೆ ಏನು ಹೇಳುವುದು? ಹುಡುಗಿಯಲ್ಲಾಗಲಿ, ಮನೆಯವರಲ್ಲಾಗಲಿ ಏನೂ ದೋಷ ಬೆದಕುವಂತಿಲ್ಲ. ಒಳ್ಳೆ ರತ್ನದಂತಹ ಹುಡುಗಿ, ಏನು ಹೇಳುವುದು?…” ಎನ್ನುತ್ತಾ
“ಲೋ! ಈಗಲೇ ಮದುವೆ ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲವೊ” ಎಂದೆ.
“ನಿಮ್ಮಪ್ಪ, ಅಮ್ಮ ಮಾಡಿಕೊ ಎಂದರೆ-ಆಗ?”
“ಇಲ್ಲಿ ಕೇಳೋ! ಮದುವೆಯಲ್ಲಿ ಅನೇಕ ತರಹ… ಗಾಂಧರ್‍ವ, ರಾಕ್ಷಸೀ, ಪೈಶಾಚಿ…”
“ಅಂದರೇನು-ನಿನಗಿಷ್ಟವಿಲ್ಲವೇನೊ?”
“ಸ್ವಲ್ಪ ಕೇಳು. ಮೊದಲು-ರಾಕ್ಷಸೀ ಅನ್ನುವುದು-”
“ಹಾಗಾದರೆ ನಿನ್ನ ಇಷ್ಟಾಪ್ಪ. ಇದರಲ್ಲಿ ಯಾರೂ ಬಲವಂತ ಮಾಡುವಹಾಗಿಲ್ಲ” ಎಂದು ಹೇಳುತ್ತಾ ರಾಮಯ್ಯನವರು ಎದ್ದು ಹೊರಟುಹೋದರು.
ರಂಗಯ್ಯನ ಕಡೆ ತಿರುಗಿದೆ.
“ಲೋ ಕತ್ತೆ! ನೀನು ಹೀಗೆ ಅಂತ ಬರೆದಿದ್ದರೆ ನಾನು ಬರುತ್ತಲೇ ಇರಲಿಲ್ಲ. ನಿನ್ನ ಕೆಲಸ ನೋಡು. ಎಲ್ಲರಿಗೂ ವೃಥಾಶ್ರಮ, ನಿಮಗೂ ಅಸಮಾಧಾನ. ಹೆಚ್ಚು ಮಾತು ಯಾಕೋ, ನಿನಗೆ ಬುದ್ದಿ ಇಲ್ಲ, ಮುಖ್ಯ!”
“ಸರಿ! ಏನು ಪ್ರಮಾದಾಪ್ಪಾ! ಒಲ್ಲೆ ಎಂದರೆ ಬೇಡ! ಅದಕ್ಕೆನಂತೆ, ಹೋಗಲಿ! ಛೆಸ್ಸ್ ಆಡೋಣ ಬಾ”
ನಾನು ಚೆಸ್ಸ್ ಆಡುವುದು, ಕುರಿ ಕತ್ತರಿಸುವವನು ಕೋಸುಂಬರಿಗೆ ಸೌತೇಕಾಯಿ ತರಿದಹಾಗೆ. ಆರು ಗಂಟೆಯಾಯಿತು. ಎಲ್ಲಾ ಆಟವನ್ನೂ ಗೆದ್ದವನು ರಂಗಯ್ಯ, ಆಟದ ಮಧ್ಯೆ ಮಧ್ಯೆ ಹೊಸ ಹೊಸ “ರೂಲ್ಸು” ಮಾಡಿ ಹಾಕುತ್ತಿದ್ದರೆ, ಗೆಲ್ಲದೆ ಇನ್ನೇನು?
ಆಟ ಮುಗಿಸಿಕೊಂಡು ಕುಕ್ಕನ ಹಳ್ಳಿ ಕೆರೆಯ ಕಡೆಗೆ ಗಾಳಿ ವಿಹಾರಕ್ಕೆ ಹೊರಟೆವು.
“ಅಲ್ಲಿ ನೋಡು” ಎಂದ ರಂಗಯ್ಯ.
ಒಂದು ದೊಡ್ಡ ಮರ. ಅದರ ಎಲೆಗಳ ಮೇಲ್ಬಾಗ ಕಪ್ಪಗೂ ಕೆಳ ಭಾಗ ಬೆಳ್ಳಗೂ ಇತ್ತು. ವಾಯುಚಲನೆ ಇಲ್ಲದಾಗ ವೃಕ್ಷವೆಲ್ಲವೂ ಕಪ್ಪಗಿರುವುದು. ಮಂದಮಾರುತಸ್ಪರ್‍ಶದಿಂದ ಎಲೆಗಳು ಮೆಲ್ಲನೆ ಮೇಲಕ್ಕೆದ್ದು ತಮ್ಮ ತಲಭಾಗವನ್ನು ತೋರಲು, ವೃಕ್ಷವು ಅಲ್ಲಲ್ಲಿ ಪೂತಂತೆ ಕಾಣುವುದು. ಮರುಕ್ಷಣದಲ್ಲಿಯೇ ಆ ಆಕಸ್ಮಿಕ ಕುಸುಮಗಳು ಮರೆಯಾಗುವುವು. ಆ ನೋಟ ಬಹಳ ಅಪ್ಯಾಯನವಾಗಿತ್ತು. ಎಲ್ಲವನ್ನೂ ಮರೆತು ಅದನ್ನೇ ನೋಡುತ್ತ ನಿಂತುಕೊಂಡೆ.
“ಅದು ಹೇಗಿದೆಯೋ?” ಎಂದ ರಂಗಯ್ಯ.
“ಹೇಗೆ? ಎಂದರೆ… ಮುಖ ತೋರಲು ನಾಚುವ ರಮಣಿ… ಕಪ್ಪಗೆ ದಟ್ಟವಾದ ಕುರುಳೋಳಿಯ ಕಾಮಿನಿ… ತುರುಬಿನಲ್ಲಿ ಮಲ್ಲಿಗೆಯ ದಂಡೆಯನ್ನು ಕ್ಷಣಕ್ಕೊಂದು ಬಗೆಯಾಗಿ ಮುಡಿವ ತರಳೆ…”
“ಸಾಕು, ಸಾಕು, ಬಾ! ನಿನಗೂ ರಮಣಿಯರಿಗೂ ಬಹಳ ದೂರ. ಈ ಕಲ್ಲಿನ ಮೇಲೆ ಕೂರೋಣ ಬಾ!”
ಕೆರೆಯ ಅಂಚಿನಲ್ಲಿದ್ದ ಶಿಲಾಪೀಠದಲ್ಲಿ ಕುಳಿತವು. ದೂರದಲ್ಲಿ ಯಾರೋ ಹಾಡುತ್ತಿದ್ದರು. ಸ್ತ್ರೀ ಕಂಠದಂತಿತ್ತು. ಆ ಹಾಡಿನ ಧಾಟಿಯನ್ನೂ ಉಗುವ ರಸವನ್ನೂ, ದನಿಯ ಮಾಧುರ್‍ಯವನ್ನೂ ಸವಿದು, “ನಾನು ಮಧ್ಯಾಹ್ನ ಮಾಡಿದುದು ಸರಿಯೇ?” ಎನ್ನಿಸಿತು. ರಂಗಯ್ಯನ ಮುಖವನ್ನು ನೋಡಿದೆ. ಅವನೂ ಆ ಹಾಡಿಗೆ ಮನ ಸೋತಿದ್ದ. ಯಾರೂ ಮಾತನಾಡಲಿಲ್ಲ.
ಸಂಗೀತ ನಿಂತಮೇಲೆ ಇನ್ನೂ ಹಾಡುವರೇನೊ ಎಂದು ಕುಳಿತಿದ್ದೆವು. ಹತ್ತಿರದ ಅಠಾರಾ ಕಛೇರಿಯಲ್ಲಿ ಏಳು ಗಂಟೆ ಹೊಡೆಯಿತು. ಒಂದೊಂದಾಗಿ ಎಣಿಸಿದೆ. ಏಳಾಯಿತು !
“ಏಳಾಯಿತು!” ಎಂದೆ.
“ಏಳಾಯಿತು!” ಎಂದ ರಂಗಯ್ಯ.
ಇಬ್ಬರೂ ಕುಳಿತಿದ್ದೆವು. ಸಂಜೆ ಸರಿದು ಬೆಳುದಿಂಗಳು ಚೆಲ್ಲಿತ್ತು. ಕೆಳಗಡೆ ಕೆರೆಯ ಸಣ್ಣಲೆಗಳು ದಡದ ಕಲ್ಲಿಗೆ ಹೊಡೆದು ಹೊರಪಡಿಸುತಿದ್ದ ಅವ್ಯಕ್ತಮಧುರಗೀತಕ್ಕೆ, ಮರಗಳಲ್ಲಿ ನುಸುಳಿ ಬರುವ ಸುವಾಸನಾ ಪೂರಿತವಾಯುವು ಶ್ರುತಿಹಿಡಿದು ದನಿಗೊಡುತ್ತಿರಲು, ಸುತ್ತ ನೆಲಸಿದ್ದ ಶಾಂತಗಂಭೀರತೆಯಲ್ಲಿ ಆ ಪ್ರಕೃತಿಸಂಗೀತವು ಬಹಳ ಆನಂದದಾಯಕವಾಗಿತ್ತು. ಗಗನದಲ್ಲಿ, ಅವಕುಂಠನ ವಂಚಿತಳಾದ ಮುಗ್ಧೆಯ ಮುಖ ಬಿಂಬದಂತೆ, ಮೋಡಗಳ ಮರೆಯಿಂದ ಜಾರಿದ ನಿರ್‍ಮಲ ಚಂದ್ರಬಿಂಬವು ತೊಳಗುತ್ತಿತ್ತು. ಚಂದ್ರಬಿಂಬದ ಮರುಬಿಂಬವು ಕೆರೆಯ ಕಿರುದೆರೆಗಳಲ್ಲಿ ಲೀನವಾಗಿತ್ತು. ಮತ್ತೆ ನೀಲದೆಡೆ ನೋಡಿದರೆ, ದೀಪಕ್ಕೆ ಎರಗುವ ಹುಳುಬಳಗದಂತೆ ಸಣ್ಣ ಸಣ್ಣ ಮುಗಿಲುಗಳು ಚಂದಿರನನ್ನು ಕಾಡುತಿದ್ದವು. ಪಡುವಲದಿಕ್ಕಿನಲ್ಲಿ ಗೂಢ ಗಾಢಾಂಧಕಾರ, ಪೂರ್‍ವದಲ್ಲಿ ತಾರೆಗಳು ಧರೆಗಿಳಿದಂತೆ ಮಿನುಗುವ ಪುರದ ವಿದ್ಯುದ್ದೀಪಗಳು. ಹಿಂಭಾಗದಲ್ಲಿ ಹಸುರು ಹುಲ್ಲಿನ ನಡುವೆ ಕುಸುಮಗಳನ್ನು ನೇದಿರುವ ಪರಿಮಳದ ಶಯ್ಯೆ; …ಮರದೆಲೆಯ ಛಾಯೆಗಳ ಪಕ್ಕದಲ್ಲಿ ಚಂದ್ರಿಕೆಯನ್ನಿಟ್ಟು ಸಮೆದಿರುವ ಹೊದಿಕೆ. ಆ ನಡುವೆ ಚಾಮರವನ್ನಿಕ್ಕಿದಂತ ಮೆಲು ಮೆಲನೆ ಅಲುಗಾಡಿ ಗಾಳಿ ಬೀಸುವ ಮರಗಳು. ಪಕ್ಕದಲ್ಲಿ ಶಿಲಾ ಪೀಠದ ಚೌಕಟ್ಟಿಗೆ ದಟ್ಟವಾಗಿ ಹೆಣೆದುಕೊಂಡಿದ್ದ ಸುಮಭರಿತ ಬಳ್ಳಿಯು ಪ್ರಕೃತಿಪುರುಷರ ಅನ್ನೋನ್ಯಭಾವವನ್ನು ನೆನಪು ಕೊಡುತ್ತಿತ್ತು. ಅನತಿ ದೂರದಲ್ಲಿ ವಾಯುಮಾರ್‍ಗದಲ್ಲಿ ಸುಳಿವ ಸುರನಾರಿಯ ಸೆರಗೆಂಬಂತೆ ಅಠಾರಕಛೇರಿಯ ಮೇಲ್ಭಾಗದಲ್ಲಿ ಹಾರುವ ಬಾವುಟ.
ಆ ದೃಶ್ಯದಿಂದ ಮನಸ್ಸಿಗೆ ಒಂದು ಬಗೆ ಆನಂದ, ತೃಪ್ತಿ ತೋರಿತು. “ಕೈವಲ್ಯ, ಮೋಕ್ಷ ಪಡೆಯುವುದೆಂದರೆ, ಭೂಮಿಯ ಮೇಲಿರುವುವೆನ್ನುವ ನಾನಾ ಲೋಕಗಳನ್ನು ದಾಟಿ, ನಾವು ಕಾಣದೆ ಕೇಳಿಮಾತ್ರವಿರುವ ಯವುದೋ ನಿತ್ಯತೃಪ್ತಿ ನಿಲಯವೆನ್ನುವ ಪ್ರದೇಶಕ್ಕೆ ಹೋಗವುದೆಂದಲ್ಲ. ಪ್ರಕೃತಿಯೊಡನೆ ನಡೆದು, ಅವಳ ದಿವ್ಯ ಕೃತಿಗಳಲ್ಲಿ ನಮ್ಮನ್ನು ಮರೆಯುವುದೇ ಕೈವಲ್ಯ, ಪರಮ ಪದ” ಎನ್ನಿಸಿತು. ಹಾಗೆಯೇ ಯೋಚಿಸುತ್ತಿರಲು, ಕೃಷ್ಣ ಪಕ್ಷದ ಕಗ್ಗತಲೆಯಲ್ಲಿ ಹಗ್ಗ ವೆಂದರೆ ಹಾವೆನ್ನುವ ಹೇಡಿಗೆ ಜೀವವಿರುವ ಕಾಳಸರ್‍ಪವನ್ನು ಕೊರಳಿಗೆ ಹಾಕಿದಂತಾಯಿತು. ಗುಂಡಿಗೆ ಧಗ್ಗೆಂದಿತು. ಮೈ ತುಂಬ ಬೆವರು. ತುಟಿ ಒಣಗಿತು. ಕಣ್ಣೀರು ತಡೆದರೂ ನಿಲ್ಲದು. ಹೇಳಲಸದಳವಾದ ಸಂಕಟವುಂಟಾಯಿತು. ಕ್ಷಣಕಾಲದ ಹಿಂದೆ ನೋಡಿದ ನೋಟದ ರಮಣೀಯತೆಯು ಮನಸ್ಸಿನಿಂದ ಮರೆಯಾಯಿತು. ಮ್ಲೇಚ್ಛರು ವಿಗ್ರಹಗಳನ್ನೊಡೆದ ಮೇಲೆ ಹಿಂದಿನ ಸೌಂದರ್‍ಯದ ಅವಶೇಷವನ್ನು ಅಲ್ಲಲ್ಲಿ ತೋರುತ್ತಿರುವ ಪಾಳುದೇಗುಲದಲ್ಲಿ ಒಬ್ಬನೇ ಇರುವಂತೆ ಭಾಸ ವಾಯಿತು. ಎಷ್ಟು ಸೌಂದರ್‍ಯವಿದ್ದರೇನು! ಈ ನೋಟಗಳ ಸ್ವಾಭಾವಿಕ ಲಕ್ಷಣಕ್ಕೆ ಜೀವಕಳೆ ಎರೆಯಲು ಮುಖ್ಯ ಮೂರ್‍ತಿಯಿಲ್ಲವಲ್ಲಾ ಎನಿಸಿತು. ಆರಾಧನೆಯ ದೈವವಿಲ್ಲದೆ, ಇಂತಹ ಪಾಳುದೇಗುಲಗಳನ್ನು ಮುಂದೆಂದೂ ನೋಡೆನೆಂದು ಮನಮಾಡಿಕೊಂಡು, ಝಗ್ಗನೆದ್ದು ಮನೆಯ ಕಡೆಗೆ ಹೊರಟೆನು. ರಂಗಯ್ಯ ಏನು ಯೋಚಿಸುತ್ತಿದ್ದನೊ ನಾನರಿಯೆ ; ಕುರಿಯನ್ನು ಹಿಂಬಾಲಿಸುವ ಕುರಿಯಂತೆ ನನ್ನ ಹಿಂದೆ ಬರುತ್ತಿದ್ದ. ದಾರಿಯಲ್ಲಿ ಯಾರೂ ಮಾತಾಡಲಿಲ್ಲ. ನನ್ನ ಆಲೋಚನೆಗಳು ನನ್ನ ಮನಸ್ಸನ್ನು ತುಂಬಿದ್ದುವು. ರಂಗಯ್ಯ ನೀರವ.
ಮನೆಯ ಬಳಿ ಬಂದೆವು.
“ಹೌದು, ವಿಷವೇ ಅಮ್ಮತವಾಗಿ ಪರಿಣಮಿಸುವುದೂ ಉಂಟು” ಎಂದು ಪ್ರಜ್ಞೆಯಿಲ್ಲದೆ ಎಂದು ಬಿಟ್ಟೆ.
“ಏನೊ-ಹಾಗೆಂದರೆ?”
“ಅಲ್ಲಾ, ದೇವತೆಗಳಿಗೆ ಹಾಲಾಹಲವಾದುದು ಪರಶಿವನಿಗೆ ಅಮೃತವಾಯಿತಲ್ಲ ಅದನ್ನು ಯೋಚಿಸುತ್ತಿದ್ದೆ”
ಒಬ್ಬರ ಮುಖವನ್ನೊಬ್ಬರು ನೋಡಿದೆವು. ರಂಗಯ್ಯ ನನ್ನ ಮಾತನ್ನು ನಂಬಿದಂತೆ ತೋರಲಿಲ್ಲ.
ಯಥಾಪ್ರಕಾರ ರಾತ್ರಿಯೂಟ.
ಸಂಜೆಯಿಂದ “ಮಧ್ಯಾಹ್ನ ಮಾಡಿದ್ದು ಪೆಚ್ಚು ಕೆಲಸ!… ಅವರು ಪುನಃ ಆ ಮದುವೆ ಪ್ರಸ್ತಾಪ ಎತ್ತಿದರೆ… ಸಂಜೆ ಬಂದ ಲಾಗಾಯಿತು ಆ ಹುಡುಗಿಯನ್ನು ಕಂಡರೆ ಏನೋ ವಿಧವಾಗಿ ಹೋಗಿದೆ. ಭಕ್ತಿ, ಮರ್‍ಯಾದೆ, ಪ್ರೇಮ ಎಲ್ಲಾ ಚೌಚೌ…” ಎನ್ನಿಸುತ್ತಿತ್ತು.
ಆ ಯೋಚನೆಯಲ್ಲಿರುವಾಗ, “ಸಂಕೋಚ ಬೇಡಪ್ಪ, ಸರಿಯಾಗಿ ಊಟಮಾಡು” ಎಂದರು ರಾಮಯ್ಯನವರು. ಇದು ಮನುಮಾಂಧಾತಾದಿಗಳ ಕಾಲದಿಂದ ಬಂದ ವಾಡಿಕೆ. ಊಟಮಾಡುವಾಗ ಅತಿಥಿಗಳಿಗೆ ಇದನ್ನು ಹೇಳಬೇಕು. ಸ್ನಾನಮಾಡಿ ಊಟಕ್ಕೆ ಹೊರಟಿರುವ ಶಾಸ್ತ್ರಿಗಳನ್ನು ಕಂಡರೆ “ಎದ್ದಿರಾ ಶಾಸ್ತ್ರಿಗಳೇ?” ಅನ್ನುವಹಾಗೆ ನಾನು “ಅಯ್ಯೋ ಸಂಕೋಚ ಏನು ಹೇಳಿ” ಎಂದೆ. ಇದನ್ನು ಹೀಗೆಯೇ ಹೇಳಿಯೇ ತೀರಬೇಕು. ಇಲ್ಲದಿದ್ದರೆ ಗೌರವಕ್ಕೆ ಕಡಿಮೆ.
“ಏನಾದರೂ … ಮಧ್ಯಾಹ್ನ ಎಂದುದಕ್ಕೆ … ಅಸಮಾಧಾನಪಟ್ಟು ಕೊಂಡು…”
ಸ್ವಲ್ಪ ಪಟ್ಟು ಸಿಕ್ಕಿದ ಹಾಗಾಯಿತು.
“ಯಜಮಾನರೆ! ಈ ಅಸಮಾಧಾನ, ಕೋಪ, ತಾಪ, ನೋಡಿ-ವಿಷದ ಹಾಗೆ, ವಿಷಕ್ಕಿಂತ ಕೇಡು… ಕೊಂಚ ಕೊಂಚವಾಗಿ, ಕೊಂಚ ಕೊಂಚವಾಗಿ ಕೊಲ್ಲುತ್ತೆ… ಮೈಯಲ್ಲಿರೊ ಕೆಂಪು ರಕ್ತವೆಲ್ಲಾ ಬೆಳ್ಳಗೆ ಆಗಿ ಹೋಗುತ್ತೆ… ಆಗ…”
“ಯಾವಾಗ ಆಯಿತೋ ಈ ಜ್ಞಾನಾರ್‍ಜನೆ?”
ರಂಗಯ್ಯನಿಗೆ ವೇಳಾವೇಳೆಯ ಜ್ಞಾನವಿಲ್ಲ. ಕೊಂಚವೂ ಇಲ್ಲ.
“ನಿಮ್ಮ ತಂದೆತಾಯಿ ಒಪ್ಪಿದ್ದಕ್ಕೊಸ್ಕರ ನಾನೂ ಪ್ರಸ್ತಾಪ ಎತ್ತಿದೆ. ಇಲ್ಲದೆ ಇದ್ದರೆ…” ಎಂದರು ರಾಮಯ್ಯನವರು.
“ಅದೇನು ಬಿಡಿ, ಯಜಮಾನರೆ. ನೋಡಿ, ನಾವಿರುವುದು ಹಿಂದೂದೇಶ! ಆರ್‍ಯಾವರ್‍ತ ಪುಣ್ಯಭೂಮಿ! ಶ್ರೀ ರಾಮನು ತಂದೆ ಗೋಸ್ಕರ ರಾಜ್ಯ ತೊರೆದು ಕಾಡಿಗೆ ಹೋದ ನಾಡು! ನಮ್ಮ ಭೀಮ ಕೂಡ, ಹಿರಿಯವ ಧರ್‍ಮರಾಯ ಎನುತ, ಎಂತೆಂತಹ ಅಪಮಾನ ಸಹಿಸಿದ! ಅಂತಹವರೆಲ್ಲ ಹುಟ್ಟಿದ ದೇಶದಲ್ಲಿ… ಏನೋ ದುರ್‍ಯೋಧನ ನಂತಹವರು ಒಬ್ಬಿಬ್ಬರು ಇದ್ದರೂ… ಗುರುಹಿರಿಯರು ಎಂದುದಕ್ಕೆ ‘ಅಸ್ತು’ ಎನ್ನುವುದು ನಮ್ಮ ಕೆಲಸ… ಅದರಿಂದ ನಮಗೂ ಶ್ರೇಯಸ್ಸು…”
ಆ ಕಾಫಿಹುಡುಗಿ ಎಲೆಗೆ ಬಡಿಸುವುದಕ್ಕೆ ಬಂದರೆ ಬಡಿಸಬಂದದ್ದೆಲ್ಲಾ ಎಲೆಯ ಹೊರಗೆ ಬೀಳಬೇಕೆ!
* * *
ರಾತ್ರಿ ಮಲಗಿಕೊಳ್ಳುವಾಗ, ಪುರುಷಪ್ರಯತ್ನ ಬಂದು “ಹೇಳು ನಾನು ಹೆಚ್ಚೊ? ದೈವಪ್ರಯತ್ನ ಹೆಚ್ಚೊ?” ಎಂದಿತು.
ದೈವ ಪ್ರಯತ್ನ ಬಂದು “ಅಯ್ಯಾ! ಗುಣಕ್ಕೆ ಮಾತ್ಸರ್‍ಯವೇನು? ಯಾರು ಹೆಚ್ಚೆಂಬುದನ್ನು ನಿಷ್ಪಕ್ಷಪಾತವಾಗಿ ಹೇಳಿಬಿಡು” ಎಂದಿತು.
ಅಷ್ಟರಲ್ಲಿ ಆ ಎರಡು ಪ್ರಯತ್ನಗಳಿಗೂ ವಾಗ್ವಿವಾದ ಮೊದಲಾಯಿತು.
“ನಾನು ಹೆಚ್ಚು!?” ಎಂದು ಪುರುಷಪ್ಪಯತ್ನ.
“ಕುಳಿತುಕೊಳ್ಳೊ ಸುಮ್ಮನೆ! ನಾನು ಹೆಚ್ಚು!” ಎಂದು ದೈವ ಪ್ರಯತ್ನ.
“ಎಲ್ಲಾ ಕಂಡಿದ್ದೇನೆ ಕಣೋ! ನಾನೇ ಹೆಚ್ಚು!”
“ನಾನು ಹೆಚೋ!”
” ನಾನೇ ಹೆಚ್ಚು!”
“ನಾನು…”
“ನಾನು…”
“ಹೆಚ್ಚು”
“ಹೆ…”
ಮುಂದೇನಾಯಿತೋ ತಿಳಿಯಲಿಲ್ಲ. ನಿದ್ರೆ ಬಂತು.
*****