ಮಹಿಳೆ ಮತ್ತು ಮಧ್ಯಕಾಲೀನ ಸಾಹಿತ್ಯ

ಮಹಿಳೆ ಮತ್ತು ಮಧ್ಯಕಾಲೀನ ಸಾಹಿತ್ಯ

ಹೆಣ್ಣು ಎಲ್ಲಾ ಕೆಡುಕಿನ ಮೂಲ – ಮಹಾಭಾರತ
ಹೆಣ್ಣು ಪಾಪಿ, ಗುಲಾಮಳು – ಭಗವದ್ಗೀತೆ
ಸಧ್ಯ, ನಾನು ಹೆಣ್ಣಾಗಿ ಹುಟ್ಟಲಿಲ್ಲ – ಪ್ಲೇಟೋ
ಇಂದು ಮನೆಯಲ್ಲಿ ದೀಪ ಹಚ್ಚುವುದು ಬೇಡ, ಹೆಣ್ಣು ಹುಟ್ಟಿದೆ – ಜೂ ಜನಾಂಗ
ಎಲ್ಲಾ ಪ್ರಾರ್ಥನೆಗಳೂ ಗಂಡು ಮಗುವಿಗಾಗಿ – ಋಗ್ವೇದ

ಜಗತ್ತಿನ ಬೇರೆ ಬೇರೆ ಭಾಗಗಳ ಈ ಮೇಲ್ಕಂಡ ಮಾತುಗಳನ್ನು ಗಮನಿಸಿದಾಗ, ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಎಲ್ಲಾ ದೇಶಗಳಲ್ಲೂ ಹೆಣ್ಣು ಎರಡನೇ ದರ್ಜೆಯ ಪ್ರಜೆಯಾಗಿರುವುದರ ಅರ್ಥ ತಿಳಿದೀತು. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಪಾಶ್ಚಾತ್ಯ ಚಿಂತನೆಗಳಿಂದ ಭಾರತಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಆಮದಾದುದು ಎಂದು, ನಾವೆಲ್ಲಾ ತಿಳಿದಿರುವ ಸ್ತ್ರೀವಾದವು ಇಂದು ಕನ್ನಡ ಸಾಹಿತ್ಯದಲ್ಲಿ ನಿಧಾನವಾಗಿ ಆದರೆ ಗಟ್ಟಿಯಾಗಿ ತನ್ನ ಬೇರಿಳಿಸುತ್ತಿದೆ. ಕೇವಲ ಹದಿನೈದು ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿಂತನೆ ಇಂದು ಕನ್ನಡಕ್ಕೆ ಸುಮಾರು ಇಪ್ಪತ್ಮೂರು ಸ್ತ್ರೀವಾದಿ ಚಿಂತನೆಗೆ ಸಂಬಂಧಿಸಿದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು “ಮಹಿಳೆ ಮತ್ತು ಮಧ್ಯಕಾಲೀನ ಸಾಹಿತ್ಯ” ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸುವುದು ನನಗೆ ಸಂತೋಷದ ವಿಷಯ. ಏಕೆಂದರೆ ನಾನೂ ಈ ಚಳವಳಿಯಿಂದ ಬೆಳೆದಿದ್ದೇನೆ, ಬರೆದಿದ್ದೇನೆ, ಕಲಿತಿದ್ದೇನೆ.

ಸ್ತ್ರೀವಾದೀ ಚಿಂತನೆಯ ಬೆಳಕಿನಲ್ಲಿ ನೋಡಿದಾಗ, ಇಡೀ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಮತ್ತೊಮ್ಮೆ ಬೇರೆ ಆಯಾಮದಿಂದ ರಚಿಸಬಹುದು ಎಂಬ ಮಾತೊಂದಿದೆ. ಇಂತಹ ವಿಚಾರ ಸಂಕಿರಣಗಳು ಮತ್ತು ಪ್ರಬಂಧಗಳು ಆ ದಿಕ್ಕಿನತ್ತ ಇಡಲಾಗುತ್ತಿರುವ ಪುಟ್ಟ ಪುಟ್ಟ ಆದರೆ ದಿಟ್ಟವಾದ ಹೆಜ್ಜೆಗಳು ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಮಹಿಳಾ ಸಾಹಿತ್ಯವನ್ನೇ ನಾವು ಇಂದು ಶೋಧಿಸಬೇಕಾಗಿದೆ. “ಶೋಧನೆ” ಎಂದರೆ ಹುಡುಕಾಟ. ತಮಗೆ ಬೇಕಾದ್ದೆಲ್ಲಾ ಇರುವವರು ಏನನ್ನೂ ಹುಡುಕಬೇಕಾಗಿಲ್ಲ. ಆದರೆ ಇಲ್ಲದವರು ಹುಡುಕಬೇಕು, ಕಳೆದುಕೊಂಡವರು ಹುಡುಕಬೇಕು. ಒಂದು ಅರ್ಥದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ, ಸಾಹಿತ್ಯದ ಪ್ರಾಚೀನತೆಯೂ ಒಂದು ಹುಡುಕಾಟವೇ ಆಯಿತು. ಪಾಶ್ಚಾತ್ಯ ವಿದ್ವಾಂಸರು ಮೊದಲು, ಕನ್ನಡ ವಿದ್ವಾಂಸರು ಅನಂತರ, ಈ ಶತಮಾನದ ಪ್ರಾರಂಭ ಕಾಲದಲ್ಲಿ ನಡೆಸಿದ ಸತತ ಪರಿಶ್ರಮ, ಸಂಶೋಧನೆ ಹುಡುಕಾಟಗಳ ಫಲವಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಲಾಯಿತು. ಆರ್.ನರಸಿಂಹಾಚಾರರ “ಕರ್ನಾಟಕ ಕವಿಚರಿತೆ”ಯ ಸಂಪುಟಗಳು, ರಂ.ಶ್ರೀ ಮುಗಳಿಯವರ “ಕನ್ನಡ ಸಾಹಿತ್ಯ ಚರಿತ್ರೆ” ಮತ್ತು “ಕನ್ನಡ ಸಾಹಿತ್ಯದ ಇತಿಹಾಸ”, ಮೈಸೂರು ವಿಶ್ವವಿದ್ಯಾಲಯದ “ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ”ಯ ಸಂಪುಟಗಳು. ಬೆಂಗಳೂರು ವಿಶ್ವವಿದ್ಯಾನಿಲಯದ “ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ”ಯ ಸಂಪುಟಗಳು, ಸೀ. ವೀರಣ್ಣನವರ “ಕನ್ನಡ ಸಾಹಿತ್ಯ ಚರಿತ್ರೆ” ತ.ಸು. ಶಾಮರಾಯರ ಮತ್ತು ಮರಿಯಪ್ಪಭಟ್ಟರ “ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ” ಮತ್ತು “ಸಂಕ್ಷಿಪ್ತ ಸಾಹಿತ್ಯ ಚರಿತ್ರೆ” ಹೀಗೆ ಸಾಹಿತ್ಯ ಚರಿತ್ರೆಯ ಪಟ್ಟಿ ಇಷ್ಟು ದೊಡ್ಡದಾಗಿದ್ದರೂ ಇನ್ನೂ ಕೆಲವು ಕನ್ನಡ ಕಾವ್ಯಗಳು ಸಿಕ್ಕಿಲ್ಲ. ಪೊನ್ನನ “ಭುವನೈಕ ರಾಮಾಭ್ಯುದಯ”, ರಾಘವಾಂಕನ “ಹರಿಹರ ಮಹತ್ವ” ಅಷ್ಟೇ ಏಕೆ “ಕವಿರಾಜಮಾರ್ಗ”ದಲ್ಲಿ ಉಕ್ತರಾಗಿರುವ ಐದು ಜನ ಗದ್ಯಕವಿಗಳು ಏನು ಬರೆದಿದ್ದರೋ ಅದು, ವಿಶೇಷವಾಗಿ ಪಂಪನಿಗೂ ಮೂಲವಿರಬಹುದಾದ ಒಂದನೇ ಗುಣವರ್ಮನ ಕಾವ್ಯಗಳು ಇವುಗಳಿಗಾಗಿ ಯಾವ ಯಾವ ಮಠಗಳಲ್ಲೋ, ದೇವಾಲಯಗಳಲ್ಲೋ, ಯಾರ ಯಾರ ಅಟ್ಟಗಳಲ್ಲೋ ಹುಡುಕಾಟ ನಡೆದೇ ಇದೆ. ಅವು ಒಂದು ದಿನ ಸಿಕ್ಕಬಹುದು ಅಥವಾ ಎಂದೋ ಎಲ್ಲೋ ಹುಳು ತಿಂದೋ ಬೆಂಕಿಗೆ ಬಿದ್ದೋ ಹೋಗಿರಲೂಬಹುದು. ನಮ್ಮ ಪ್ರಾಚೀನ ಕವಿಗಳು ತಮ್ಮ ಕಾಲ, ದೇಶ, ಊರು, ತಂದೆ, ತಾಯಿ – ಇತ್ಯಾದಿ ವಿವರಗಳನ್ನು ನೀಡದೇ ಹೋಗಿರುವ ಪರಿಣಾಮವಾಗಿ ವಿದ್ವಾಂಸರು ಎಷ್ಟೊಂದು ತರ್ಕವಿತರ್ಕಗಳನ್ನು ಮಾಡಬೇಕಾಯಿತು, ಎಷ್ಟೊಂದು ಕಾಲ ವ್ಯರ್ಥ ವಾಯಿತು, ಸಾಹಿತ್ಯ ಚರಿತ್ರೆಯ ಎಷ್ಟೊಂದು ಪುಟಗಳು ವ್ಯರ್ಥವಾದವು, ಎಷ್ಟೊಂದು ಜಗಳಗಳಾದವು! ಅಂದರೆ ಶೋಧನೆಯಿಲ್ಲದೇ ಯಾವ ಕೆಲಸವೂ ನಡೆದಿಲ್ಲ. ನಡೆಯುವಂತಿಲ್ಲ ಎಂದಂತಾಯಿತು.

ಈ ಎಲ್ಲಾ ಹುಡುಕಾಟದ ಮಧ್ಯೆ ಮಹಿಳಾ ಸಾಹಿತ್ಯದ ಶೋಧನೆಯನ್ನು ನಾವು ಮಾಡಹೊರಟರೆ ಮೊದಲು ಎದುರಾಗುವವರು ಜಾನಪದ ಕವಯತ್ರಿಯರು. ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಸಸಿ ನೆಡುವಾಗ, ತೊಟ್ಟಿಲು ತೂಗುವಾಗ, ಇವರು ಹಾಡಿನ ಮೂಲಕ ತಮ್ಮ ನೋವು, ನಲಿವು, ಬಂಜೆತನ, ಬಡತನ – ಮೊದಲಾದವುಗಳಿಗೆ ರೂಪ ಕೊಟ್ಟರು. ಹೆಸರಿಲ್ಲದ, ಹೆಸರೊಲ್ಲದ ಈ ಜನ ಹಾಡಿದ ಸಾಹಿತ್ಯವು ತಲೆಯಿಂದ ತಲೆಗೆ ಇಳಿದು ಬಂದು ತೀರಾ ಇತ್ತೀಚೆಗೆ ಲಿಪಿರೂಪ ತಾಳಿ, ಕ್ಯಾಸೆಟ್ಟುಗಳಲ್ಲಿ ಹುದುಗಿ, ವೈಜ್ಞಾನಿಕ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿತು. ಈ ಜನಪದ ಸಾಹಿತ್ಯವನ್ನೂ ಸ್ತ್ರೀವಾದೀ ಅಧ್ಯಯನದ ಹಿನ್ನೆಲೆಯಲ್ಲಿ ಅಭ್ಯಸಿಸುವ ಪ್ರಮೇಯವು ನಡೆದಿದೆ ಮತ್ತು ಫಲ ಕೊಟ್ಟಿದೆ. ಪುರುಷಪ್ರಧಾನ ಸಮಾಜದ ಮೌಲ್ಯವನ್ನು ಒಪ್ಪಿಕೊಂಡೇ ಬಾಳಿದ ಜಾನಪದ ಕವಯತ್ರಿಯರು ಅಲ್ಲಲ್ಲಿ ತಮ್ಮ ಪ್ರತಿಭಟನೆಯ ಕಿಡಿಯನ್ನು ಹಾರಿಸದೇ ಬಿಟ್ಟಿಲ್ಲ.

ಶಿಷ್ಟ ಸಾಹಿತ್ಯದ ಪರಿಧಿಗೇ ಒಂದರ್ಥದಲ್ಲಿ ಬರುವ ಆದರೆ ಜಾನಪದರಂತೆ ಹೆಸರು ಹೇಳದ ಕವಯತ್ರಿಯರ ಒಂದು ಪರಂಪರೆಯೇ ಇದೆ. ಇವರೂ ಓದಲಾರರು, ಬರೆಯಲಾರರು, ಆದರೆ ನಮ್ಮ ಪುರಾಣಗಳಲ್ಲಿರುವ ಕತೆಗಳನ್ನು ಕುಮಾರವ್ಯಾಸನ, ಲಕ್ಷ್ಮೀಶನ ದಟ್ಟ ಪ್ರಭಾವಕ್ಕೆ ಒಳಗಾಗಿ ಹಾಡಬಲ್ಲರು, ಈ ಹಾಡುಗಳೂ ತಲೆಮಾರಿನಿಂದ ತಲೆಮಾರಿಗೆ ಹರಡಿ `ಸಂಪ್ರದಾಯದ ಹಾಡುಗಳು’ ಎಂದು ಹೆಸರಾಗಿವೆ. ಇವು ಜಾನಪದದಂತೆ ಬೆಳೆದರೂ, ಜಾನಪದ ಕವಯತ್ರಿಯರಿಗಿದ್ದ ತೆರೆದ ಮನಸ್ಸು, ಲೋಕ ಗ್ರಹಿಕೆ, ಪರಿಪಕ್ವತೆ ಮತ್ತು ಧೈರ್ಯ ಈ ಸಂಪ್ರದಾಯದ ಹಾಡಿನ ಹೆಣ್ಣು ಮಕ್ಕಳಿಗೆ ಇಲ್ಲವೆಂದೇ ಹೇಳಬೇಕು.

ಶಿಷ್ಟ ಸಾಹಿತ್ಯಕ್ಕೆ ಬಂದರೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದಲ್ಲಿ ಮೊಟ್ಟಮೊದಲು ಹೆಣ್ಣಿನ ಉಲ್ಲೇಖ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಂಡುಬರುವುದು ಕೇವಲ ಎಂಟು ನೂರು ವರ್ಷಗಳ ಹಿಂದೆ. ಅಂದರೆ ೧೨ನೇ ಶತಮಾನದಲ್ಲಿ. ಇದಕ್ಕೆ ಮೊದಲು ಕೇಳಿ ಬರುವ ಅತ್ತಿಮಬ್ಬೆ, ವಿಜಯಾಂಬಿಕೆ ಮೊದಲಾದವರು ಸಾಹಿತ್ಯ ನಿರ್ಮಿಸಿದವರಲ್ಲವಾದರೂ ಸಾಹಿತಿಗಳನ್ನು ನಿರ್ಮಿಸಿದವರು. ಹೀಗಾಗಿ ಅತ್ತಿಮಬ್ಬೆಯ ಪ್ರಸ್ತಾಪ ಮಾಡದೇ ಪ್ರಾಚೀನ ಕನ್ನಡ ಸಾಹಿತ್ಯವನ್ನು ಪರಿಗಣಿಸುವಂತೆಯೇ ಇಲ್ಲ. ಮಲ್ಲಪನ ಮಗಳಾಗಿ, ದಲ್ಲಪನ ಸೊಸೆಯಾಗಿ, ನಾಗಿಮಯ್ಯನ ಹೆಂಡತಿಯಾಗಿ, ತಂಗಿಯಾಗಿದ್ದ ಗುಂಡಮಬ್ಬೆಯೂ ತನ್ನ ಗಂಡನನ್ನು ಮದುವೆಯಾದಾಗ ಅವಳಿಗೆ ಸವತಿಯಾಗಿ, ಅವಳ ಮಗ ಅಣ್ಣಿಗದೇವನಿಗೆ ತಾಯಿಯಾಗಿ ಬಾಳಿದ ಅತ್ತಿಮಬ್ಬೆ ಒಳ್ಳೆಯ ರಾಜಮನೆತನದಲ್ಲಿ ಹುಟ್ಟಿ ಬೆಳೆದು ರಾಜಮನೆತನವನ್ನೇ ಸೇರಿದವಳು. ಹೀಗಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಜೈನಧರ್ಮಗಳು ಅವಳ ಬಾಳಿಗೆ ಹಾಸು ಹೊಕ್ಕಾಗಿದ್ದವು. ಆದರೆ ಒಂದಾದ ಮೇಲೊಂದರಂತೆ ನಡೆದ ಯುದ್ಧಗಳಲ್ಲಿ ತಂದೆ, ಮಾವ, ಗಂಡನನ್ನು ಕಳೆದುಕೊಂಡಳು. ಗುಂಡಮಬ್ಬೆ, ತನ್ನ ಮಗನ ಹೊಣೆಯನ್ನು ಇವಳ ಮೇಲೆ ಹೊರೆಸಿ ಸತೀ ಹೋದಳು. ಮಗುವಾಗಿದ್ದ ಅಣ್ಣಿಗದೇವನನ್ನು ಯುವಕನಾಗುವವರೆಗೆ ತನ್ನ ಮಗನಂತೆ ಅತ್ತಿಮಬ್ಬೆ ಬೆಳೆಸಿದಳು. ಆಗಿನ ಚಾಲುಕ್ಯ ಚಕ್ರವರ್ತಿ ಇಮ್ಮಡಿ ತೈಲಪನು, ಅಣ್ಣಿಗನ ಪರಾಕ್ರಮಕ್ಕೆ ಮೆಚ್ಚಿ, ಅವನಿಗೆ ನೂರ್ಮಡಿತೈಲಪ ಎಂದು ಬಿರುದಿತ್ತನಂತೆ. ಹೀಗೆ ಸಾಕಿದ ಮಗನೂ ಯುದ್ಧದಲ್ಲಿ ಸತ್ತ ನಂತರ ಅತ್ತಿಮಬ್ಬೆಗೆ ಉಳಿದುದು ದಾರುಣ ವೈಧವ್ಯ. ಆದರೆ ಅವಳು ಧೃತಿಗೆಡಲಿಲ್ಲ. ತನ್ನ ಸಮಕಾಲೀನರಾದ, ಕವಿಗಳೂ ಆದ ಚಾವುಂಡರಾಯ ಮತ್ತು ರನ್ನನಿಗೆ ಆಶ್ರಯ ನೀಡಿದಳು. ಪೊನ್ನನ “ಶಾಂತಿಪುರಾಣ”ದ ಒಂದು ಸಾವಿರದ ಐನೂರು ಪ್ರತಿಗಳನ್ನು ಚಿನ್ನ ಮತ್ತು ರತ್ನಗಳಿಂದ ಮಾಡಿದ ಜಿನಮೂರ್ತಿಗಳೊಂದಿಗೆ ಹಂಚಿದಳು. ಮುದ್ರಣ ಸೌಲಭ್ಯವಿಲ್ಲದಿದ್ದ ಆ ಕಾಲದಲ್ಲಿ ಅತ್ತಿಮಬ್ಬೆ ಮಾಡಿಸಿದ ಕಾವ್ಯದ ಮಹತ್ವವನ್ನು ನಾವು ನೆನೆಯಬೇಕು. ಇವಳ ಈ ವ್ಯಕ್ತಿತ್ವವನ್ನು ಮನಗಂಡೇ ರನ್ನನು ತನ್ನ ‘ಅಜಿತ ಪುರಾಣ’ದಲ್ಲಿ ಮೊದಲನೇ ಅಧ್ಯಾಯದಲ್ಲಿಯೇ ತನಗೆ ಆಶ್ರಯ ನೀಡಿದ ಇಮ್ಮಡಿ ತೈಲಪ, ಅವನ ಮಗ ಸತ್ಯಾಶ್ರಯ ಇರಿವ ಬೆಡಂಗ, ಮಂತ್ರಿ ಚಾವುಂಡರಾಯ ಇವರುಗಳೊಂದಿಗೇ ಅತ್ತಿಮಬ್ಬೆಯನ್ನು ಹೊಗಳುವಾಗ ಇವಳಿಗಾಗಿ ರನ್ನನು ಅರವತ್ತಾರು ಪದ್ಯಗಳನ್ನು ಮೀಸಲಿಟ್ಟಿದ್ದಾನೆ. “ಅಜಿತ ಪುರಾಣ”ದಲ್ಲಿ ಅತ್ತಿಮಬ್ಬೆಯ ಕತೆಯನ್ನು ತಗುಳ್ಳಿ ಅಂದರೆ ಸೇರಿಸಿ ಹೇಳುವುದು ಪುಣ್ಯಕರವಲ್ಲವೇ ಎಂದು ಉದ್ಗಾರ ತೆಗೆದಿದ್ದಾನೆ. ಅವಳನ್ನು ಜಿನಧರ್ಮ ಪತಾಕೆ, ಕವಿವರ ಕಾಮಧೇನು ಎಂದು ಹೊಗಳಿ, ಗಂಗಾಜಲದಂತೆ, ಬಿಳಿಯ ಹತ್ತಿಯಂತ ಜಿನ ಸೇನಮುನಿಪತಿಯ ಗುಣಾವಳಿಯಂತೆ, ಕೊಪಣಾಚಳದಂತೆ ‘ಪವಿತ್ರಮತ್ತಿಮಬ್ಬೆಯ ಚರಿತಂ’ ಎಂದಿದ್ದಾನೆ. ಶ್ರವಣಬೆಳುಗೊಳದ ಗೊಮ್ಮಟನನ್ನು ಕಾಣಲು ಅನ್ನ ನೀರಿಲ್ಲದೇ ಅವಳು ಹತ್ತಿ ಹೋದಾಗ ಅಕಾಲವೃಷ್ಟಿಯಾಯಿತಂತೆ. ಇದೇನು ಮಹಾ! ಪುಷ್ಪವೃಷ್ಟಿಯಾದರೂ ಆಶ್ಚರ್ಯವಿಲ್ಲ ಅಂದಿದ್ದಾನೆ! “ಮೊಲೆವೆತ್ತ ತೈಲ ಜನನಿಯ ಪಕ್ಕದಲ್ಲಿ ಮೀಸೆವೊತ್ತ ಅಣ್ಣಗಳು ಶೋಭಿಸಬಲ್ಲರೆ” ಎಂದು ಕೇಳಿದ್ದಾನೆ. ಇವಳಂತಹ ಹೆಂಗಸನ್ನು ಸೃಷ್ಟಿಸುವ ಮೊದಲು ಆ ಬ್ರಹ್ಮನು ಬುದ್ಧಿಯಿಲ್ಲದೇ ಏಕಾದರೂ ಚಿಂತಾಮಣಿ, ಕಲ್ಪವೃಕ್ಷ, ಕಾಮಧೇನುಗಳನ್ನು ಸೃಷ್ಟಿಸಿದನೋ ಎಂದು ಉದ್ಗಾರ ತೆಗೆಯುತ್ತಾನೆ. ಕೊನೆಗೆ, ಜಿನನ ತಾಯಿಯು ತೀರ್ಥಂಕರನನ್ನು ಗರ್ಭದಲ್ಲಿ ಧರಿಸಿದಳು, ಇವಳು ಅವನನ್ನು ಮನಸ್ಸಿನಲ್ಲಿ ಧರಿಸಿದಳು ಅಷ್ಟೇ. ಇಲ್ಲದಿದ್ದರೆ ತೀರ್ಥಂಕರನ ಜನನಿಗೂ ಇವಳಿಗೂ ಏನಾದರೂ ವ್ಯತ್ಯಾಸವುಂಟೇ ಎಂದುಬಿಡುತ್ತಾನೆ. ಈ ಮಾತುಗಳಲ್ಲಿ ಉತ್ರೇಕ್ಷೆಯಿದ ಎಂಬುದು ಮೇಲುನೋಟಕ್ಕೇ ವಿದಿತ ಆದರೂ ಒಂದು ಸಾವಿರ ವರ್ಷದ ಹಿಂದೆ ನಮ್ಮ ಸಾಂಪ್ರದಾಯಕ ಸಮಾಜ ವ್ಯವಸ್ಥೆಯಲ್ಲಿ ವಿಧವೆಯರಿಗಿದ್ದ ದುಃಸ್ಥಿತಿಯ ಹಿನ್ನಲೆಯಲ್ಲಿ ಅತ್ತಿಮಬ್ಬೆ ಇಷ್ಟು ಮಾಡಿದ್ದೂ ಹೆಚ್ಚು, ರನ್ನನು ಅವಳನ್ನು ಹೊಗಳಿದ್ದೂ ಹೆಚ್ಚು. ಆದ್ದರಿಂದಲೇ ರನ್ನನನ್ನು ಕನ್ನಡದ ಮೊಟ್ಟಮೊದಲ ಸ್ತ್ರೀವಾದಿ ಎಂದು ಕಳೆದ ಹತ್ತು ವರ್ಷದ ಹಿಂದೆಯೇ ಸಿ. ವೀರಣ್ಣ “ಲಂಕೇಶ್ ಪತ್ರಿಕೆ”ಯ ತಮ್ಮ ಲೇಖನದಲ್ಲಿ ಗುರುತಿಸಿದರು.

ಹನ್ನೆರಡನೇ ಶತಮಾನದ ಹೊಯ್ಸಳ ವೀರಬಲ್ಲಾಳನ ಆಸ್ಥಾನದಲ್ಲಿ ನಾಗಚಂದ್ರನಿಗೆ ಸಮಕಾಲೀನಳಾಗಿ ‘ಕಂತಿ’ ಎಂಬ ಕವಯಿತ್ರಿಯಿದ್ದಳು, ಇವಳು ನಾಗಚಂದ್ರನೊಂದಿಗೆ ಸಾಹಿತ್ಯದ ಪದ್ಯಗಳನ್ನು ಒಗಟಿನಂತೆ ರಚಿಸುತ್ತಿದ್ದಳು. ನಾಗಚಂದ್ರನಿಗೆ ಒಮ್ಮೆ ಇವಳಿಂದ ಹೊಗಳಿಸಿಕೊಳ್ಳ ಬೇಕೆಂಬ ಬಯಕೆ ಅತಿಯಾಗಿ ತಾನು ಬಾವಿಗೆ ಬಿದ್ದನೆಂದು ಸುಳ್ಳು ಸುದ್ದಿ ಹಬ್ಬಿಸಿ ಅವಳು ಗೋಳಾಡುತ್ತಾ ತನ್ನನ್ನು ಹೊಗಳುವುದನ್ನು ಕೇಳಿ ಸಂತಸಪಟ್ಟ – ಹೀಗೆಲ್ಲಾ ದಂತಕತೆಯಿದೆ. ಉದಾಹರಣೆಗೆ “ದನಮಂ ಕಡಿಕಡಿದು ಬಸದಿಗೆಸೆಯುತಿರ್ದರ್”….ಎಂಬ ಕಂದ ಪದ್ಯದ ಕೊನೆಯ ಸಾಲನ್ನು ಅವಳು ಹೇಳಿದರೆ “ನಳನಳಿಸಿ ಬೆಳೆದು ತೊಳಗುವ ಸುರುಚಿರ ಸಚ್ಚಂದನಮಂ ಕಡಿ ಕಡಿದು ಬಸದಿಗೆಸೆಯುತಿರ್ದರ್” ಎಂದು ನಾಗಚಂದ್ರನು ಪಾದಪೂರ್ತಿ ಮಾಡುವುದು. ಈ ಕತೆಯೇನೋ ಕೇಳಲು ಚೆನ್ನಾಗಿದೆ. ಆದರೆ ನಾಗಚಂದ್ರನೆಂಬ ಕವಿಗೆ ಸಮಕಾಲೀನಳಾಗಿ ‘ಕಂತಿ’ ಎಂಬುವವಳಿದ್ದಳು ಎಂಬುದಕ್ಕೆ ಸಾಕಷ್ಟು ಆಧಾರಗಳಿಲ್ಲ. ನಾಗಚಂದ್ರನ ನಂತರ ಬರುವ ಎಷ್ಟೋ ಕವಿಗಳು ಅವನ ಹಸರು ಹೇಳುತ್ತಾರೆ, ಕಂತಿಯ ಹೆಸರು ಹೇಳುವುದಿಲ್ಲ. ಸ್ವತಃ ನಾಗಚಂದ್ರನೇ “ಕಂತಿ” ಎಂಬ ಕವಯತ್ರಿಯಿದ್ದಳು ಎಂದು ಹೇಳುವುದಿಲ್ಲ. ಮೇಲಾಗಿ “ಕಂತಿ ಹಂಪನ ಸಮಸ್ಯೆಗಳು” ಎಂಬ ಕಿರುಪುಸ್ತಕದ ಭಾಷೆ ಹನ್ನೆರಡನೇ ಶತಮಾನದ ಹಳಗನ್ನಡ ದಂತಿಲ್ಲ. ಹೀಗಾಗಿ ಕಂತಿ ಒಬ್ಬ ಕಾಲ್ಪನಿಕ ವ್ಯಕ್ತಿಯಿರಬೇಕು ಎಂದು ತೀರ್ಮಾನಿಸಲಾಗಿದೆ. ಆದರೆ ಬಿ.ಎಂ.ಶ್ರೀ.ಯವರು ತಮ್ಮ ಸಮಕಾಲೀನರಾಗಿದ್ದ ನಂಜನಗೂಡು ತಿರುಮಲಾಂಬಾ ಹೆಸರು ಹೇಳಿಲ್ಲ ಅಂದರೆ ತಿರುಮಲಾಂಬಾ ಇದ್ದುದು ಸುಳ್ಳೆ ? ಎಂದು ಹೊಸದಾಗಿ ಪ್ರಶ್ನಿಸಲಾಗುತ್ತಿದೆ. ತಿರುಮಲಾಂಬಾ ಅಸ್ತಿತ್ವಕ್ಕೆ ಬೇರೆ ಸಾಕ್ಷಿಗಳಿದ್ದಂತೆ ಕಂತಿಯ ಅಸ್ತಿತ್ವಕ್ಕೆ ಇಲ್ಲ.

ಧಾರ್ಮಿಕ, ರಾಜಕೀಯ, ಸಾಮಾಜಿಕ ಬದಲಾವಣೆಗಳನ್ನು ಗುರಿಯಾಗಿಟ್ಟುಕೊಂಡ, ತನ್ಮೂಲಕ ಸಾಹಿತ್ಯದ ಬದಲಾವಣೆಯನ್ನೂ ತಂದ ವಚನ ಚಳುವಳಿಯು ಹುಟ್ಟಿ, ಬೆಳೆದು ರಕ್ತ ಕ್ರಾಂತಿಯಲ್ಲಿ ವಿಫಲವಾದ ಹನ್ನೆರಡನೇ ಶತಮಾನದಲ್ಲಿ, ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಸುಮತಿ ಎಂಬ ಪುಣ್ಯ ದಂಪತಿಗಳಿಗೆ ಮಗಳಾಗಿ ಜನಿಸಿ, ಚೆಲುವಿನ ಸಾಕಾರ ಮೂರ್ತಿಯಾಗಿ ಬೆಳೆದ ಅಕ್ಕಮಹಾದೇವಿ ಕನ್ನಡದ ಮೊಟ್ಟಮೊದಲ ಕವಯತ್ರಿ, ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದು ಭಾವಿಸಿ, ಬಲವಂತದಿಂದ ಮದುವೆಯಾದ ಕೌಶಿಕನನ್ನು ಮೂರು ಷರತ್ತುಗಳನ್ನೊಡ್ಡಿ, ಅವುಗಳನ್ನು ಮುರಿಯುತ್ತಲೇ ಅವನನ್ನೂ ಅರಮನೆಯನ್ನೂ ತ್ಯಜಿಸಿ, ದಿಗಂಬರೆಯಾಗಿ, ಕೇಶಾಂಬರೆಯಾಗಿ ಹೊರಟ ಅಕ್ಕ ನಂತರ ಸೇರಿದ್ದು ಕಲ್ಯಾಣವನ್ನು, ಬಸವಾದಿ ಪ್ರಮಥರ ಕಲ್ಯಾಣದಲ್ಲಿ. ಅನುಭವ ಮಂಟಪದಲ್ಲಿ ಶೂನ್ಯ ಸಿಂಹಾಸನಾಧೀಶನಾದ ಅಲ್ಲಮ ಪ್ರಭು ಮತ್ತು ಅವನ ಅನುಚರರ ತೀವ್ರ ಪರೀಕ್ಷೆಗೆ ಗುರಿಯಾಗಿ, ಗೆದ್ದು, ಅಲ್ಲಿ ಕೆಲಕಾಲವಿದ್ದು, ಅನಂತರ ಶ್ರೀಶೈಲಕ್ಕೆ ಹೊರಟು ಕದಳಿಯ ಬನದಲ್ಲಿ ಐಕ್ಯವಾದಳು. ಇದು, ಸ್ಥೂಲವಾಗಿ ಅಕ್ಕನ ಜೀವನ ಚರಿತ್ರೆ, ಹರಿಹರನ ‘ಮಹದೇವಿಯಕ್ಕನ ರಗಳೆ’ಯ ಆಧಾರದಿಂದಲೂ, ಚರಿತ್ರೆಯ ಇತರ ಎಳೆಗಳಿಂದಲೂ, ಅವಳೇ ರಚಿಸಿದ ವಚನಗಳ ಆಧಾರದಿಂದಲೂ ಸ್ಥೂಲವಾಗಿ ರೂಪುಗೊಂಡ ಈ ಜೀವನ ಚರಿತ್ರೆಯಲ್ಲಿ ಅವಳ ವಚನಗಳಿಗೆ ಸಿಂಹಪಾಲು, ಎಂಟುನೂರು ವರ್ಷಗಳಷ್ಟು ಹಿಂದೆಯೇ, ತುಂಬಾ ಮುಂದುವರೆದವರು, ನಾಗರಿಕರು, ವಿದ್ಯಾವಂತರು ಎಂದು ಹೇಳಿಕೊಳ್ಳುವ ಇಂದಿನ ಹೆಣ್ಣು ಮಕ್ಕಳೂ ಮಾಡಲು ಅಂಜುವ ಕಾವ್ಯಗಳನ್ನು ಅವಳು ಮಾಡಿದಳು. ಕಾವ್ಯ ಸಾಧನೆಯ ಸಿದ್ಧಿಯನ್ನೇರಿದ್ದೇವೆಂದು ಭಾವಿಸುವ ಇಂದಿನ ಕವಯತ್ರಿಯರು ಇಂದಿಗೂ ರಚಿಸಲಾಗದಿರುವಂತಹ ಲೈಂಗಿಕ ಪ್ರತಿಮೆಗಳನ್ನು ಅವಳು ಸೃಷ್ಟಿಸಿದಳು. ಅವಳ ವಚನಗಳಲ್ಲಿ ಕಾಣಬರುವುದು ಒಬ್ಬ ಸತತ ವಿರಹಿಣಿಯ ಒಂದು ಚಿತ್ರ, ತಾನು ಒಲಿದ ಚೆನ್ನಮಲ್ಲಿಕಾರ್ಜುನನ್ನು ಒಲಿಸಿಕೊಳ್ಳಲು ಅವಳು ಪಟ್ಟಪಾಡು, ಚಿಲಿಪಿಲಿ ಎಂದೋಡುವ ಗಿಳಿಗಳನ್ನು, ಸರೋವರದೊಳಗಾಡುವ ಹಂಸ ಗಳನ್ನು, ಸ್ವರವೆತ್ತಿ ಪಾಡುವ ಕೋಗಿಲೆಗಳನ್ನು ಕುರಿತು ತನ್ನ ಗಂಡನೆಲ್ಲಿ ಎಂದು ಕೇಳುತ್ತಾಳೆ. ಅದೇ ಗಂಡನನ್ನು ತನ್ನ ಕನಸಿನಲ್ಲಿ ತಾನು ಕಂಡಿದ್ದೆ, ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ, ಅಕ್ಕಿ ಅಡಕೆ ತೆಂಗಿನಕಾಯಿ ಕಂಡೆ ಅನ್ನುತ್ತಾಳೆ, ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆಹಳಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು ಎಂದು ಬದುಕಿನ ಸವಾಲುಗಳೆನ್ನೆದರಿಸುತ್ತಾಳೆ. ಚೆನ್ನಮಲ್ಲಿಕಾರ್ಜುನನಲ್ಲಿ ತಾನು ಐಕ್ಯಳಾಗಿದ್ದೇನೆಂದು ತಿಳಿಸಲು, “ಸಂಗವೆನ್ನೆ ಸಮರಸವೆನ್ನೆ, ಲಿಂಗವೆನ್ನೆ ಲಿಂಗೈಕ್ಯವನ್ಎನ, ಆಗದನ್ನೆ, ಆಯಿತ್ತೆನ್ನೆ, ನಾನೆನ್ನೆ ನೀನೆನ್ನೆ ಚೆನ್ನ ಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವಾದ ಬಳಿಕ ಏನೂ ಎನ್ನೆ” ಎನ್ನುತ್ತಾಳೆ.

“ಎಚ್ಚರೆ ಗರಿದೋರದಂತೆ ನೆಡಬೇಕು.
ಅಪ್ಪಿದರೆ ಆಸ್ತಿಗಳು ನುಗ್ಗು ನುರಿಯಾಗಬೇಕು”

ಎಂದು ತನ್ನ ಇನಿಯನ ಸಮಾಗಮ ಸುಖವನ್ನು ವಿವರಿಸುತ್ತಾಳೆ. ಇಷ್ಟೆಲ್ಲಾ ಲೌಕಿಕಳಾಗಿದ್ದೂ ತಾನು ಅಲೌಕಿಕಳು ಎಂದು ವಿವರಿಸಲು

ಮುಟ್ಟಿದಲ್ಲಿ, ಮುಟ್ಟಿದಲ್ಲಿ
ತೊಟ್ಟುಬಿಟ್ಟ ಹಣ್ಣಿನಂತೆ ಕಟ್ಟಕಡೆಯ
ಬಟ್ಟ ಬಯಲ ಮೆಟ್ಟಿನಿಂದೆನು

(ಅಕ್ಕನ “ಯೋಗಾಂಗ ತ್ರಿವಿಧಿ”ಯಿಂದ ಈ ತ್ರಿಪದಿಯನ್ನು ಆರಿಸಲಾಗಿದೆ) ಎಂದು ಹೇಳುತ್ತಾಳೆ. ಇಂತಹ ಅದ್ಭುತ ಸೃಜನ ಶಕ್ತಿ ಮತ್ತು ಕ್ರಾಂತಿಕಾರೀ ಮನೋಭಾವವಿರುವ ಅಕ್ಕ “ಪತಿಯನ್ನು ನಿರಾಕರಿಸಿ ಅಲೌಕಿಕ ಬದುಕಿಗೆ ಅರ್ಪಿಸಿಕೊಳ್ಳದೇ ಸ್ತ್ರೀಯರ ಸಮಸ್ಯೆಗಳಿಗೆ ಸ್ಪಂದಿಸಿದ್ದ ಪಕ್ಷದಲ್ಲಿ ಕನ್ನಡ ನಾಡಿಗಿರಲಿ, ಜಗತ್ತಿಗೇ ಮೊದಲ ಸ್ತ್ರೀವಾದಿಯಾಗಿರುತ್ತಿದ್ದಳು” ಎಂಬ ಮಾತನ್ನು ಒಪ್ಪಿಕೊಳ್ಳಬಹುದಾದರೂ. ಅವಳು, “ಕಣ್ಣು ಕಟ್ಟಿದ ಕುದುರೆಯಂತೆ ಏಕಮುಖವಾದ ಸಾಧನೆಯಲ್ಲಿ ತೊಡಗಿ ವಾಸ್ತವ ಬದುಕಿನಿಂದ ಪಲಾಯನವಾದಿಯಾದಳು” ಎಂಬ ಮಾತನ್ನು ಒಪ್ಪಲಾಗುವುದಿಲ್ಲ. ಹೀಗೆ ಅವಳು ಬದುಕಿದ್ದ ಕಾಲ ದೇಶಗಳಿಂದ ಅವಳನ್ನು ಸಂಪೂರ್ಣ ಮುಕ್ತಗೊಳಿಸಿ ಅಳೆಯುವುದು ತಪ್ಪಾಗುತ್ತದೆ. ಹಾಗೇ “ಅಕ್ಕ ಮಹಾದೇವಿಯ ಕುಟುಂಬದ ಬಗೆಗಿನ ಸಮಸ್ಯೆ ಬಹಳ ಮೂಲಭೂತವಾದುದು. ಇಲ್ಲಿ ಲೌಕಿಕದ ಗಂಡನೇ ತನ್ನ ಪ್ರಭುತ್ವ ಒತ್ತಾಯಗಳ ಮೂಲಕ ಹೆಣ್ಣಿನೊಡನೆ ಸಹಭಾಗಿತ್ವ ಮಾಡಲು ಅಸಹಾಯಕನಾಗಿದ್ದಾನೆ. ಮೇಲುನೋಟಕ್ಕೆ ಅತ್ಯಂತ ವೈಯಕ್ತಿಕವೆನಿಸುವ ಅಕ್ಕನ ಈ ಅನುಭವವು ಭಾರತದ ಸಾಮಾಜಿಕ ಚರಿತ್ರೆಯಲ್ಲಿ ಕಾಣುವ ಗಂಡು, ಹೆಣ್ಣಿನ ಮೇಲೆ ಮಾಡುತ್ತ ಬಂದಿರುವ ದಬ್ಬಾಳಿಕೆಯನ್ನು ವಿರೋಧಿಸುತ್ತದೆ (೩) ಎಂಬಂತಹ ಗಂಭೀರವಾದ ಚಿಂತನೆಗೆ ಅವಳ ಬದುಕನ್ನಾಗಲೀ, ಬರಹವನ್ನಾಗಲೀ ಒಡ್ಡುವುದು ಸರಿ ಎಂದು ತೋರುವುದಿಲ್ಲ. ಅವಳು ತನ್ನ ಬದುಕಿನ ಒಂದು ಹಂತದಲ್ಲಿ ಲೌಕಿಕ ಪತಿಯನ್ನು ನಿರಾಕರಿಸಿ ಅಲೌಕಿಕ ಪತಿಯನ್ನು ಅಪ್ಪಿಕೊಂಡಳೇ ಹೊರತು ಪುರುಷ ಪ್ರಧಾನ ಸಮಾಜವ್ಯವಸ್ಥೆಯ ಬಗ್ಗೆ ಚಿಂತಿಸುವ, ಪ್ರಶ್ನಿಸುವ ಕಾಳಜಿಗಳು ಅವಳಿಗಿರಲಿಲ್ಲ. ಅದರ ಅಗತ್ಯವೂ ಆಗ ಇರಲಿಲ್ಲ.

ಸಾಮಾಜಿಕ ನ್ಯಾಯವನ್ನು ಪ್ರಬಲವಾಗಿ ಪ್ರತಿಪಾದಿಸಿದ ಬಸವಣ್ಣನವರ ಪ್ರೋತ್ಸಾಹದ ಫಲವಾಗಿ ಅಕ್ಕಮಹಾದೇವಿಯ ಸಮಕಾಲೀನರಾಗಿ ಸಾವಿರಾರು ಮಂದಿ ಶಿವಶರಣೆಯರು, ಅನೇಕ ಸಾಮಾಜಿಕ ಸ್ತರಗಳಿಂದ ಬಂದವರು ವಚನಗಳನ್ನು ರಚಿಸಿದ್ದರೆಂದು ತಿಳಿದುಬರುತ್ತದೆ. ಆದರೆ ಇಂದಿಗೂ ವಚನಗಾರ್ತಿ ಎಂದೊಡನೆ ಎಲ್ಲರೂ ಹೇಳುವುದು ಅಕ್ಕನ ಹೆಸರನ್ನು ಮಾತ್ರ. ಇತರ ಶರಣೆಯರ ಬಗ್ಗೆ ಕೆಲವು ವಚನಕಾರರು ಅಲ್ಲಿ ಇಲ್ಲಿ ಪ್ರಸ್ತಾಪಿಸಿದ್ದರೂ, ವೈಜ್ಞಾನಿಕವಾಗಿ ಅವನ್ನು ಸಂಪಾದಿಸಿದವರು ಡಾ.ಆರ್.ಸಿ. ಹಿರೇಮಠರು. ಅವರ “ಶಿವಶರಣೆಯರ ವಚನಗಳು” ಎಂಬ ಎರಡು ಬೃಹತ್ ಸಂಪುಟಗಳಲ್ಲಿ ಅಡಕವಾದ ಕೆಲವು ಮುಖ್ಯ ವಚನಕಾರ್ತಿಯರನ್ನು ಹೀಗೆ ಪಟ್ಟಿ ಮಾಡಬಹುದು. ಅಕ್ಕಮ್ಮ, ಅಮ್ಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವ, ಮಸಣವ್ವ, ಕದಿರರೆಮ್ಮವ್ವೆ, ರೇಮಮ್ಮ, ರೇಚವ್ವ, ಕಾಮಮ್ಮ, ಲಕ್ಷ್ಮಮ್ಮ, ಸೋಮಮ್ಮ, ಗಂಗಾಂಬಿಕೆ, ಕೇತಲದವಿ, ಗೊಗ್ಗವ್ವೆ, ವೀರಮ್ಮ, ದುಗ್ಗಲೆ, ನಾಗಲಾಂಬಿಕೆ, ನೀಲಮ್ಮ, ಗುಡ್ಡವ್ವ, ಬೊಂತಾದೇವಿ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ರಾಯಮ್ಮ, ರೇಕಮ್ಮ, ಸತ್ಯಕ್ಕ, ಸೂಳೆ ಸಂಕವ್ವ, ಲಿಂಗಮ್ಮ, ಗಂಗಮ್ಮ….. ಆರ್.ಸಿ. ಹಿರೇಮಠರ ಸಂಪಾದಿತ ಗ್ರಂಥವನ್ನು ಓದಿದಾಗ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ. ಅಕ್ಕನಿಗೆ ಸಮಕಾಲೀನರಾಗಿ ಬರೆದರು ಎಂಬ ಒಂದು ಅಂಶವನ್ನು ಬಿಟ್ಟು, ವಚನಕಾರ್ತಿಯರಲ್ಲಿ ಹೇಳಿಕೊಳ್ಳಬಹುದಾದ ಯಾವ ಅಂಶವೂ ಇಲ್ಲ. ಭಾಷೆ, ಭಾವ, ವಸ್ತು, ಸಂವೇದನೆ, ಎಲ್ಲಕ್ಕೂ ಇವರು ಅಕ್ಕನನ್ನೋ ಬಸವಣ್ಣನನ್ನೋ ತಪ್ಪಿದರೆ ಅಲ್ಲಮನನ್ನೋ ಶರಣು ಹೋಗುತ್ತಾರೆ. ಅಂದರೆ ಅಲ್ಪಸ್ವಲ್ಪ ಬದಲಾಯಿಸಿ ಬರೆದಿರುವುದೂ ಉಂಟು. ಇವು ಉತ್ ಸ್ಫೂರ್ತ ರಚನೆಗಳಲ್ಲ. ಇದೇ ಮಾತನ್ನು ಬಸವಣ್ಣ ಅಲ್ಲಮನನ್ನು ಬಿಟ್ಟು ಇತರ ವಚನಕಾರರು ಬರೆದ ವಚನಗಳಿಗೂ ಹೇಳಬಹುದು. ಅಂದರೆ ಈ ಶಿವಶರಣೆಯರಿಗೆ ಸಂವೇದನೆಗಳಾಲಿ, ಅನುಭವಗಳಾಗಲೀ ಇರಲಿಲ್ಲವೆಂದಲ್ಲ. ಅದನ್ನು ಅಕ್ಕನಂತೆ ಪ್ರತಿಮೆಗಳನ್ನಾಗಿ ಕಡೆಯುವ ಭಾವಸಂಪತ್ತಿ, ಶಬ್ದ ಸಂಪತ್ತಿ, ಸ್ಪೋಪಜ್ಞತೆಗಳಿರಲಿಲ್ಲ. ಅಷ್ಟೆ, ಹಾಗಾಗಿ ಇವು ಅಭಿವ್ಯಕ್ತಿಯಲ್ಲಿ ಸೋಲುತ್ತವೆ. ಅಲ್ಲದೇ, ಅಕ್ಕನಿಗೂ ಅವರಿಗೂ ಇನ್ನೂ ಕೆಲವು ವ್ಯತ್ಯಾಸಗಳಿದ್ದವು. ಅವರೆಲ್ಲಾ ಮದುವೆಯಾಗಿ ಗೃಹಿಣಿಯರಾಗಿ ಬಾಳುತ್ತಿದ್ದವರು. ಅಕ್ಕನಂತೆ ಅಲೌಕಿಕ ಗಂಡನನ್ನು ಮೊರೆ ಹೊಕ್ಕವರಲ್ಲ. ಹಾಗೆ ಮದುವೆಯಾಗದಿದ್ದವರು ಉದಾ : ಸೂಳೆ ಸಂಕವ್ವ, ಕಾಯಕದ ಕಟ್ಟುಪಾಡಿಗೆ ಒಳಗಾಗಿದ್ದರು. ಅಕ್ಕನನ್ನು ಸಂಸಾರ ಹೇಗೆ ಕಾಡಲಿಲ್ಲವೋ ಹಾಗೆಯೇ ಕಾಯಕ ನಿಷ್ಠೆಯೂ ಕಾಡಲಿಲ್ಲ. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ಮಾತನ್ನು ಎಲ್ಲ ಶರಣ ಶರಣೆಯರೂ ಕಟ್ಟುನಿಟ್ಟಾಗಿ ಸ್ವೀಕರಿಸಿ ಅದಕ್ಕಾಗಿ ಪಾಡು ಪಟ್ಟಿರುವುದು ಅನೇಕ ವಚನಗಳಲ್ಲಿ ವ್ಯಕ್ತವಾಗಿದೆ. ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮನ ಕತೆ ಇದಕ್ಕೆ ಒಳ್ಳೆಯ ಉದಾಹರಣೆ. ಹೀಗಾಗಿ ಅಲೌಕಿಕ ಗಂಡನನ್ನು ಆಯ್ದುಕೊಂಡ ಅಕ್ಕನ ಬದುಕೂ ಅಲೌಕಿಕವಾಗಿ, ಅವಳ ರಚನೆ ಸುಂದರ ಕಾವ್ಯವಾಯಿತು. ಇತರ ಶರಣೆಯರು ಲೌಕಿಕ ಬದುಕಿಗೆ ಜೋತುಬಿದ್ದುದರಿಂದ ಅವರ ಬದುಕೂ ನಿರ್ಬಂಧಕ್ಕೊಳಗಾಯಿತು. ಅವರ ಬರವಣಿಗೆಯೂ ಕಾವ್ಯವಾಗಿ ಅರಳಲಿಲ್ಲ. ಅರಳುವ ಶಕ್ತಿಯಿರಲಿಲ್ಲ. ಇತ್ತೀಚೆಗೆ ಪಠ್ಯಪುಸ್ತಕಗಳಲ್ಲಿ ಮುಖ್ಯ ವಚನಕಾರರ ವಚನಗಳೊಂದಿಗೆ ಅಮುಖ್ಯ ವಚನಕಾರರ ವಚನಗಳನ್ನೂ ಮುಖ್ಯ ಹರಿದಾಸರ ಕೀರ್ತನೆಗಳೊಂದಿಗೆ ಜನಪ್ರಿಯರಲ್ಲದ ಹರಿದಾಸರ ಕೀರ್ತನೆಗಳನ್ನೂ ಮಕ್ಕಳು ಅಭ್ಯಾಸ ಮಾಡಲೆಂದು ಇಡುತ್ತಿದ್ದಾರೆ. ಮುಖ್ಯರೊಂದಿಗೆ ಮುಖ್ಯರಲ್ಲದವರೂ ಎಲ್ಲರ ಗಮನಕ್ಕೆ ಬರಲಿ ಎಂಬ ಪಠ್ಯ ಪುಸ್ತಕ ಸಮಿತಿಯ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆಯೋ ನನಗೆ ತಿಳಿಯದು. ಆದರೆ ಮುಖ್ಯರಲ್ಲದವರ ರಚನೆಗಳೊಂದಿಗೆ ಈಗಾಗಲೇ ಜನಪ್ರಿಯರಾಗಿರುವವರ ರಚನೆಯನ್ನಿಟ್ಟು ನೋಡುವುದರಿಂದ ಇದುವರೆಗೆ ನಾವು ಯಾರನ್ನು ಹೆಚ್ಚು ಓದುತ್ತಿದ್ದೆವೋ ಉದಾ :- ಬಸವಣ್ಣ, ಅಕ್ಕ, ಅಲ್ಲಮ, ಪುರಂದರದಾಸರು, ಕನಕದಾಸರು…. ಇವರು ಇನ್ನಷ್ಟು ಹೊಳೆದು ತೋರುತ್ತಿದ್ದಾರೆ ಅಷ್ಟೇ.

ಮತ್ತೆ ಹೆಣ್ಣಿನ ಧ್ವನಿ ಕೇಳಬೇಕಾದರೆ ನಾವು ಹದಿನೇಳನೇ ಶತಮಾನಕ್ಕೆ ಬರಬೇಕು, ಸಾಹಿತ್ಯ ಸಂಗೀತ ವಿದ್ವತ್‌, ಸೇವೆಗಳಿಗೆ ಸಮಾನ ಪ್ರಾಶಸ್ತ್ರ ನೀಡಿದ ಮೈಸೂರು ಒಡೆಯರ ಕಾಲದಲ್ಲಿ ಅನೇಕ ಆಸ್ಥಾನ ಕವಿಗಳ, ಕವಯತ್ರಿಯರ ಗುಂಪೇ ಕಾಣಿಸಿಕೊಳ್ಳುತ್ತದೆ. ನಮ್ಮ ದೇಶದ ಇತಿಹಾಸಗಳೆಂದೂ ಮಹಾಕಾವ್ಯಗಳೆಂದೂ ಪರಿಗಣಿತವಾದ ರಾಮಾಯಣ, ಮಹಾಭಾರತ ಗಳನ್ನೂ ಮತ್ತು ಭಾಗವತವನ್ನು ಅಸಂಖ್ಯಾತರು ಆಗಲೇ ಕನ್ನಡಕ್ಕೆ ಅನುವಾದಿಸಿದ್ದರೂ ತಂದೆಯ ಹೆಸರಿನಲ್ಲಿ “ಕೃಷ್ಣರಾಜವಾಣೀ ವಿಲಾಸ ಭಾರತ” ಮತ್ತು “ಭಾಗವತ”ವೆಂದೂ ಮತ್ತು ತಮ್ಮ ಹೆಸರಿನಲ್ಲಿ ‘ಚಾಮರಾಜೋಕ್ತಿ ವಿಲಾಸ’ವೆಂಬ ರಾಮಾಯಣವನ್ನೂ ಅನುವಾದಿಸಿ ಪ್ರಕಟಿಸಿದ ಮೈಸೂರು ಒಡೆಯರ ಸಾಂಪ್ರದಾಯಿಕ ಮನೋಭಾವದಡಿಯಲ್ಲಿ ಕಾವ್ಯರಚಿಸಿದ ಹೊನ್ನಮ್ಮನಾಗಲೀ, ಶೃಂಗಾರಮ್ಮನಾಗಲೀ, ಗಿರಿಯಮ್ಮನಾಗಲೀ ಅಕ್ಕಮಹಾದೇವಿಯಂತೆ ಕ್ರಾಂತಿಕಾರಕವಾದುದೇನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಪುರುಷ ಪ್ರಧಾನ ಸಮಾಜದ ಮೌಲ್ಯಗಳೇ ಒಪ್ಪಿ ಮುನ್ನಡೆಯುವ ಅನಿವಾರ್ಯತೆ ಅವರಿಗಿತ್ತು. ಅದನ್ನೇ ಅವರು ತಮ್ಮ ಕಾವ್ಯಗಳಲ್ಲಿ ಪ್ರತಿಬಿಂಬಿಸಬೇಕಾಯಿತು. ಹೊನ್ನಮ್ಮನ “ಹದಿಬದೆಯ ಧರ್ಮ”ದ ಬಗ್ಗೆ ಪಿಹೆಚ್.ಡಿ. ಪ್ರಬಂಧವೂ ರಚಿತವಾಗಿರುವ ಹಿನ್ನೆಲೆಯಲ್ಲಿ “ಪೆಣ್ಣಲ್ಲವೇ ನಮ್ಮನೆಲ್ಲ ಪಡೆದ ತಾಯಿ” ಎಂಬ ಪ್ರಸಿದ್ಧವಾದ ಸಾಲುಗಳನ್ನು ಹೇಳಿ ಅವಳು ಸ್ತ್ರೀವಾದೀ ಎಂದು ಬಿಂಬಿಸುವುದಕ್ಕಿಂತ “ಹದಿಬದೆಯಧರ್ಮ”ದ ಉಳಿದ ಪದ್ಯಗಳಲ್ಲಿ ಅವಳು ಸ್ತ್ರೀಯರಿಗೆ ವಿಧಿಸಿರುವ ವಿಧಿ ನಿರ್ಬಂಧಗಳನ್ನು ಗಮನಿಸಿ ಅವಳ ಕಾಲಕ್ಕೆ ಅವಳು ಅಷ್ಟು ಹೇಳಿದ್ದೇ ಹೆಚ್ಚು ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಮಧ್ಯಕಾಲೀನ ಕನ್ನಡ ಸಾಹಿತ್ಯದ ಇತರ ಪ್ರಮುಖ ಕವಿಗಳಾದ ಹರಿಹರ, ರಾಘವಾಂಕ, ಚಾಮರಸ, ಲಕ್ಷ್ಮೀಶ, ಕುಮಾರವ್ಯಾಸ, ಮುದ್ದಣರ ಕಾವ್ಯಗಳಲ್ಲಿ ಹೆಣ್ಣನ್ನು ಚಿತ್ರಿಸಲಾಗಿರುವ ರೀತಿಯನ್ನು ವಿವರಿಸುವುದು ಈ ಪ್ರಬಂಧದ ಇನ್ನೊಂದು ಆಯಾಮವಾಗಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ಮೇಲೆ ಹೇಳಿದ ಕವಯತ್ರಿಯರು ಸ್ತ್ರೀವಾದಿಗಳಲ್ಲದಿರುವ ಹಿನ್ನಲೆಯಲ್ಲಿ ಈ ಗಂಡು ಧ್ವನಿಗಳು ಸೃಷ್ಟಿಸಿದ ಕೆಲವು ಹೆಂಗಸರಿಗೆ ಪ್ರತಿಭಟಿಸುವ ಶಕ್ತಿಯಿರುವುದನ್ನು ಕಂಡಾಗ ವಿಸ್ಮಯವಾಗದಿರದು. ಹರಿಹರನ `ಗಿರಿಜಾ ಕಲ್ಯಾಣ’ದ ಗಿರಿಜೆಯದು ಸಾಂಪ್ರದಾಯಿಕ ಪಾತ್ರ, ಅವನ ರಗಳೆಗಳಲ್ಲಿ ಬರುವ ಸ್ತ್ರೀಯರೂ ಐತಿಹಾಸಿಕ ಅಥವಾ ಪೌರಾಣಿಕ ವ್ಯಕ್ತಿಗಳಾಗಿರುವುದರಿಂದ ಅವರೂ ಸಂಪ್ರದಾಯದ ನೆರಳಲ್ಲೇ ನಲುಗಿದವರು. ರಾಘವಾಂಕನ “ಹರಿಶ್ಚಂದ್ರ ಚರಿತೆ”ಯ ಚಂದ್ರಮತಿಯ ದುಃಖವೂ ಕರುಣೆ ಹುಟ್ಟಿಸಿ, ಅನುಕಂಪ ಬೇಡುವಂತಹುದು. ಲಕ್ಷ್ಮೀಶನ ‘ಜೈಮಿನಿ ಭಾರತ’ದ ಸೀತಾ ಪರಿತ್ಯಾಗದ ಸೀತೆಯ ಪಾತ್ರವೂ ಈ ಮಾತಿಗೆ ಹೊರತಲ್ಲ. “ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ, ಹೆಣ್ಣೆನಿಸಿ ಪುಟ್ಟಿದೆನ್ನೆಯ ದೋಷಂ” ಅನ್ನುವ ಸೀತೆಯ ಮಾತಿನಲ್ಲಿ ಯಾವ ಸ್ತ್ರೀವಾದವಿದೆ? “ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು” ಎಂದು ವಿದ್ವಾಂಸರಿಂದ ಹೊಗಳಿಸಿಕೊಂಡ ಮುದ್ದಣ ಮನೋರಮೆಯರ ಸಲ್ಲಾಪದಲ್ಲಿ ಬರುವ ಮನೋರಮೆಯೂ ಗಂಡನ ನೆರಳಿನಲ್ಲಿ ಬಾಳುವವಳೇ. ಆದರೆ ಕುಮಾರವ್ಯಾಸನ ದ್ರೌಪದಿ ಮಾತ್ರ ತುಂಬಿದ ಸಭೆಯಲ್ಲಿ ಎಲ್ಲರೆದುರು “ಪತಿಗಳೈವರು ಮೂರು ಲೋಕದ ಗಂಡರು ಒಬ್ಬಳನಾಳರಾರಿರಿ ಗಂಡರೋ ನೀವ್ ಷಂಡರೋ” ಎಂದು ಕೇಳಬಲ್ಲಳು. “ಪತಿಗಳೆನ್ನುನು ಮಾರಿ ಧರ್ಮಸ್ಥಿತಿಯ ಕೊಂಡರು” ಎಂದೂ “ಪಾಪಿಗಳಲಾ ಹೆಂಡತಿಯ ಕೊಂದಿರಿ” ಎಂದೂ ಹೇಳಬಲ್ಲಳು. ಸಭಾ ಪರ್ವದ ವಸ್ತ್ರಾಪಹರಣ ಮತ್ತು ಅಕ್ಷಯ ವಸ್ತ್ರ, ಅನಂತರ ವಿರಾಟಪರ್ವದ “ಕೀಚಕ ವಧೆ” ಇವು ದ್ರೌಪದಿಯ ಬಂಡಾಯ ಮನೋಧರ್ಮವನ್ನು ಎತ್ತಿ ತೋರಿಸುವ ಸನ್ನಿವೇಶಗಳು. ಆದರೆ ದ್ರೌಪದಿಯ ಈ ಮನೋಧರ್ಮ ಮೂಲ ಮಹಾಭಾರತದ ಕತೆಯಲ್ಲೇ ಇರುವುದರಿಂದ ಇದರಲ್ಲಿ ಕುಮಾರವ್ಯಾಸನ ಸ್ತ್ರೀವಾದಿ ಕೊಡುಗೆಯೇನು ಎಂಬುದು ಸಂದೇಹಾಸ್ಪದ. ಚಾಮರಸನು “ಪ್ರಭುಲಿಂಗಲೀಲೆ”ಯಲ್ಲಿ ಅಲ್ಲಮಪ್ರಭುವಿನ ಮಹಿಮೆಯನ್ನೇ ಸಾರುವುದಕ್ಕಾಗಿ ಬನವಾಸಿಯ ರಾಜಕುಮಾರಿ ಮಾಯೆಯನ್ನು ತಿರಸ್ಕರಿಸುವಾಗ ಅವಳನ್ನು ಕೀಳುಗಳೆಯುತ್ತಾನೆ. ಮಾಯೆಯ ತಿರಸ್ಕಾರ ಎಂದರೆ ರಾಜಕುಮಾರಿಯನ್ನು ಒಲ್ಲದೇ ಹೋದುದಲ್ಲದೇ ಈ ಪ್ರಪಂಚದ ಮಾಯೆಯನ್ನೂ ಒಲ್ಲದೇ ಹೋಗುವುದು ಎಂಬ ಎರಡು ಅರ್ಥಗಳಿರುವುದರಿಂದ ಅಲ್ಲಮನ ನಿಂದೆ ಮತ್ತು ಕವಿಯ ಹೇಳಿಕೆ ಎರಡೂ ಕಟುವಾಗಿವೆ. ಉದಾ. : “ತನ್ನಯ ಹೊನ್ನು ಸಾಲದೆ ತಿರುಗಿ ಬಂದೊಡೆ ದುರುಳತನದಲಿ ಅಕ್ಕಸಾಲೆಯ ಬಯ್ಯಲಹುದೇ” ಎಂದು ಅಲ್ಲಮನು ಕೇಳಿದರೆ ಕವಿಯು “ಮಾಯಾಂಗನೆಯ ಮುಖ ಭಂಗವನ್ನು ಕಂಡು ಮರುಗುತಿರ್ದರು ಕೆಳದಿಯರು” ಅನ್ನುತ್ತಾನೆ. “ನೀರಿಗೆ ಹೆಪ್ಪನೆರೆದಡೆ ಹಾಲಿನಂತಿರೆ ಹೆತ್ತು ಬುಂಜಿಸಿ ಬಾಳಿದವರಾರುಂಟು” “ಕಬ್ಬುನವ ಪರುಷ ಮುಟ್ಟಲು ಕನಕವಹುದು, ವೃಥಾ ಹಳೆ ಹೆಂಚು ಹೊನ್ನಹುದೆ?” ಎಂಬ ಅಲ್ಲಮನ ಪ್ರಶ್ನೆಗೆ ವಿಮಲೆ ಉತ್ತರಿಸುವಾಗ, ಮತ್ತು ಮಾಯೆ ತನ್ನನ್ನು ಹೊಗಳಿಕೊಳ್ಳುತ್ತಾ ಆಡುವ ‘ಹರಿಯನೆದೆಯನು ಮೆಟ್ಟಿದನು, ಶಂಕರನರ್ಧಾ೦ಗದೊಳು ನೆಟ್ಟಗೆ ಹರಿಸುಟಿಗೆಯಾಡಿದನು, ಬ್ರಹ್ಮನ ಬಾಯ ಮುದ್ರಿಸಿದೆ, ಜಿನುಗು ಮತಿಗಳ ಸಿದ್ಧಸಾಧಕ ಮುನಿಗಳೆಂಬವದಿರುಗಳನು ನಾ ಮುನಿದು ಕಚ್ಚಟ, ಕಂಥೆ, ಬತ್ತಲೆ, ಬೋಳು, ಜಡೆ, ಲೋಚು, ಅನಶನ ವ್ರತ ನಾರು ಬೇರೆಂಬನಿತರಲಿ ದಂಡಿಸುವೆನಾ ಕಾನನದ ಮರುಳರನೇನ ಕೇಳುವೆ…”

ಈ ಮಾತುಗಳಲ್ಲಿ ಸ್ಪಷ್ಟವಾದ ಸ್ತ್ರೀಪರ ದೃಷ್ಟಿಕೋನವಿದೆ. ಇದರ ಅರಿವಿದ್ದೋ ಇಲ್ಲದೆಯೋ ಚಾಮರಸನು ಈ ಮಾತುಗಳನ್ನಂತೂ ಆಡಿಸಿದ್ದಾನೆ. ರಾಘವಾಂಕನ ನಿಲುವು ಸಂಪೂರ್ಣವಾಗಿ ಹರಿಶ್ಚಂದ್ರನ ಪರವಾಗಿದ್ದೂ ವೀರಬಾಹುಕನ ಮಾತುಗಳಲ್ಲಿ ತನ್ನ ವರ್ಗ ಪ್ರಜ್ಞೆಯನ್ನೂ ಅವನು ಪ್ರಶ್ನಿಸುವುದು ಇಲ್ಲಿ ನೆನಪಾಗುತ್ತದೆ. ತನ್ನ ಆಶ್ರಯದಾತ ಅರಿಕೇಸರಿಗಾಗಿಯೇ ಕಾವ್ಯ ಬರೆದ ಪಂಪನೂ ಆಗಾಗ ಅರಿಕೇಸರಿಯನ್ನು ಅಂದರೆ ಅರ್ಜುನನ್ನು ಮರೆತು ಕರ್ಣನನ್ನು ಹೊಗಳುವುದೂ ಇಲ್ಲಿ ನೆನಪಾಗುತ್ತದೆ. ಇದು ಮಹಾಕವಿಗಳ ಲಕ್ಷಣ, ಮೈಮರೆತ ಒಂದು ಗಳಿಗೆಯಲ್ಲಾದರೂ ಅವರು ಸತ್ಯವನ್ನೇ ನುಡಿಯುತ್ತಾರೆ. ಚಾಮರಸ ಮತ್ತು ಕುಮಾರವ್ಯಾಸರ ಕೆಲವು ಮಾತುಗಳನ್ನು ಈ ಗುಂಪಿಗೆ ಸೇರಿಸಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ರನ್ನನನ್ನು ಸ್ತ್ರೀವಾದಿ ಎಂದು ಕರೆದಿರುವುದರ ಔಚಿತ್ಯವನ್ನೂ ಪ್ರಶ್ನಿಸಬೇಕಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದೀ ಹೊಳಹುಗಳನ್ನು ದಟ್ಟವಾಗಿ ಕಾಣುವಂತೆ ಪ್ರಾಚೀನ ಸಾಹಿತ್ಯದಲ್ಲಾಗಲೀ ಮಧ್ಯಕಾಲೀನ ಸಾಹಿತ್ಯದಲ್ಲಾಗಲೀ ಕಾಣಲಾಗುವುದಿಲ್ಲ ಎಂದೇ ಹೇಳಬೇಕಾಗಿದೆ.
*****
ಅಡಿಟಿಪ್ಪಣಿಗಳು

೧. ಹಚ್.ಜೆ.ಸರಸ್ವತಿ – ಆಧುನಿಕ ಪೂರ್ವ ಬರಹಗಾರ್ತಿಯರು – ಒಂದು ಸ್ತ್ರೀವಾದಿ ದೃಷ್ಟಿಕೋನ – ಕನ್ನಡ ಸಾಹಿತ್ಯ ಮತ್ತು ಸ್ತ್ರೀವಾದೀ ಚಿಂತನೆ – ಪ್ರ. – ಕರ್ನಾಟಕ ಸಾಹಿತ್ಯ ಅಕಾಡೆಮಿ, ಪುಟ ೨೨,

೨. ಅದೇ ಪುಟ ೨೨.

೩. ಡಾ. ಬಸವರಾಜ ಕಲ್ಲುಡಿ – ಮಧ್ಯಕಾಲೀನ ಭಕ್ತಿ ಹಾಗೂ ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ – ಪ್ರ – ಕನ್ನಡ ಸಾಹಿತ್ಯ ಪರಿಷತ್ತು, ಪುಟ ೨೯೬.

೪.
೧. ಮನೆಯೆ ಧರ್ಮಾಶ್ರಮ, ಮನೆವಾಳ್ತಯೆ ಧರ್ಮ
ವಿನಿಯನೂಳಿಗ ದೇವಪೂಜೆ
ಮನನ ವಿನಿಯನ ನೆನೆವುದ ಸಾಧ್ವಿಯರಿಗೆ
ಮುನಿಸತಿಯರ ಮೋಡಿಯೇನು ||

೨. ಮುಡಿಯೊಳು ಪೊತ್ತು ಮುದ್ದಿಸಿದೊಡೇನಡಿಗಳಿಂ
ಪೊಡವಿಗಡಟ್ಟೊರಸಿದೊಡೇನು
ಒಡೆಯನಿಟ್ಟಂತಿರ್ಪುದೊಡವೆಗುಚಿತಮೆಂದು
ನಡೆವುದು ನಲ್ಗೊಂಡಿರೊಲಿದು ||

*****

೨೮, ೨೯ ಮಾರ್ಚಿ ೯೯ರಂದು ಹರಿಹರದಲ್ಲಿ ನಡೆದ “ಮಹಿಳೆ ಅಭಿವ್ಯಕ್ತಿ ಮತ್ತು ಸ್ತ್ರೀವಾದ” ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಶಾಲೆ
Next post ಮೊಟ್ಮೊದಲು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…